Tuesday, May 5, 2026
Google search engine
Home Blog Page 144

ಡಿಜಿಟಲ್ ಗ್ರಾಮ ಆಗದ ಹೊರತು ಹಳ್ಳಿಗರಿಗೆ ಉಳಿಗಾಲಇಲ್ಲ

ಡಾ. ಶ್ವೇತಾರಾಣಿ. ಹೆಚ


ಡಿಜಿಟಲ್ ಇಂಡಿಯಾದ‌ ಅಡಿ ಒದಗಿಸಲಾಗುತ್ತಿರುವ ಸೇವೆಗಳಿಂದ ಗ್ರಾಮೀಣ ಜನರು ವಂಚಿತರಾಗುತ್ತಿದ್ದಾರೆ.
ಸರ್ಕಾರ ಲಸಿಕೆ ನೀಡಲು ಪಾರದರ್ಶಕತೆ ಕಾಪಾಡಲು ಆನ್ ಲೈನ್ ಮೂಲಕ

18 ರಿಂದ 44 ವರ್ಷದ ಒಳಗಿನವರು ಲಸಿಕೆ ಪಡೆಯಲು ನೋಂದಾವಣೆಗೆ ಅವಕಾಶ ಮಾಡಿಕೊಟ್ಟಿದೆ. ಆದರೆ ಇದರ ಉಪಯೋಗ ಹೆಚ್ಚು ತಾಂತ್ರಿಕವಾಗಿ ಪರಿಣಿತಿ ಪಡೆದ ವಿದ್ಯಾವಂತ ವರ್ಗದವರ ಪಾಲಾಗುತ್ತಿದೆ.

ಸರ್ಕಾರವೇನೊ ಲಸಿಕೆ ಯನ್ನು ಎಲ್ಲಾ ಪ್ರದೇಶವಾರು ವಿತರಿಸುತ್ತಿದೆ. ಆದರೆ ಹಳ್ಳಿಗಳಲ್ಲಿ ಎಷ್ಟೋ ಮನೆಗಳಲ್ಲಿ ಪೋನ್ ಗಳೇ ಇಲ್ಲದಿರುವಾಗ ಸ್ಮಾರ್ಟ್ ಪೋನ್ ಇಲ್ಲದಿರುವಾಗ ಹಳ್ಳಿಗರು ಕೋವಿಡ್ ಲಸಿಕೆ ಬುಕ್ ಮಾಡುವಲ್ಲಿ ಹಿಂದೆ ಬೀಳುತ್ತಿದ್ದಾರೆ ಅವರಿಗೆ ಗ್ರಾಮಲೆಕ್ಕಿಗಳು ಮತ್ತು ಗ್ರಾಮ ಸೇವಾ ಕೇಂದ್ರಗಳ ಮೂಲಕ ಲಸಿಕೆ ಪಡೆಯಲು ನೋಂದಣಿಗೆ ಅವಕಾಶ ಮಾಡಿಕೊಡದ ಹೊರತು ಗ್ರಾಮೀಣ ಪ್ರದೇಶದವರು ವಂಚಿತರಾಗುತ್ತಾರೆ.

ಬೆಂಗಳೂರು ನಿವಾಸಿಗಳಾದ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಳ್ಳಿಗಳಲ್ಲಿ ಕೂಡ ಲಸಿಕೆ ಪಡೆಯಲು ಸ್ಲಾಟ್ ಬುಕ್ ಮಾಡಿಕೊಳ್ಳವ ಅವಕಾಶವಿದೆ. ರೈಲು ಮತ್ತು ಬಸ್ ಸಂಚಾರ ವ್ಯವಸ್ಥೆ ಇರುವ ಊರುಗಳಾದ ಗುಬ್ಬಿ, ಕುಣಿಗಲ್, ತುರುವೆಕೆರೆ ಮುಂತಾದ ಕಡೆ ಬೆಂಗಳೂರಿಗರು ಬಂದು ಲಸಿಕೆ ಪಡೆಯುತ್ತಿದ್ದಾರೆ. ಇದರಿಂದ ಗ್ರಾಮೀಣ ವಾಸಿಗಳು ಅಕ್ಷರಶಃ ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ.

ಲಸಿಕೆ ಸ್ಲಾಟ್ ಬುಕ್ ಮಾಡಲು ಪ್ರದೇಶಗಳ ನಿರ್ಬಂಧವನ್ನು ಹೇರದ ಕಾರಣ ತಂತ್ರಜ್ಞಾನದಿಂದ ಲಸಿಕೆ ದುರ್ಬಳಕೆ ಯಾಗುತ್ತಿದೆ. ಆದ್ದರಿಂದ ಸರ್ಕಾರ ಇದರತ್ತ ಗಮನವರಿಸಬೇಕು.

“ನಮ್ಮತ್ರ ಕೀ ಪ್ಯಾಡ್ ಮೊಬೈಲ್ ಐತೆ. ಅದರಲ್ಲಿ ನೆಟ್ ಬರಲ್ಲ, ಬೇರೇನು ಬರಲ್ಲ. ಬರಿ ಮಾತಾಡಬಹುದು ಅಷ್ಟೇ. ಊರಲ್ಲಿ ಒಳ್ಳೆ ಫೋನ್ ಇರೋರತ್ರ ಹೋದ್ರು ಅವರು ಮಾಡಕೊಡಲಿಲ್ಲ. ಆಸ್ಪತ್ರೆಗೆ ಹೋದ್ರೆ ಅದೇನ್ ಮೊದ್ಲೆ ಫೋನ್ ನಲ್ಲಿ ಮಾಡಬೇಕು ಅಂತಾರೆ. ನಮಗೆ ವಯಸ್ಸಾದರೂ ಲಸಿಕೆ ಪಡೆಯೋದೆ ಕಷ್ಟ ಆಗ್ತಾ ಇದೆ. ಯಾರ್ನ ಕೇಳ್ಬೆಕೊ ಗೊತ್ತಾಗ್ತ ಇಲ್ಲ. ಸರ್ಕಾರಾನೆ ಏನಾದ್ರು ಮಾಡ್ಬೇಕು.‌ಇಲ್ಲ ಮನೆ ಮನೆಗೆ ಬಂದು ಹಾಕಿದ್ರು ಆಯ್ತು ಎನ್ನುತ್ತಾರೆ”.ಕೊಡಿಗೆನಹಳ್ಳಿಯ ರಾಜಣ್ಣ.

ತುರುವೆಕೆರೆ ತಾಲ್ಲುಕು ಆಸ್ಪತ್ರೆಯಲ್ಲಿ ಬೆಂಗಳೂರಿನಲ್ಲೇ ಕುಳಿತು ಸ್ಲಾಟ್ ಬುಕ್ ಮಾಡಿಕೊಂಡಿರುವವರೇ ಜಾಸ್ತಿ ಎನ್ನುತ್ತಾರೆ ಅಲ್ಲಿನ ಆರೋಗ್ಯಾಧಿಕಾರಿ.

ಕೀ ಪ್ಯಾಡ್ ಮೊಬೈಲ್ ಹೊಂದಿರುವ, ಪೋನ್ ಹೊಂದಿಲ್ಲದ ಬಡ ಗ್ರಾಮೀಣ ವಾಸಿಗಳಿಗೆ ಗ್ರಾಮ ಲೆಕ್ಕಿಗರ ಅನ್ನು ತೊಡಗಿಸಿಕೊಂಡು ಸ್ಲಾಟ್ ಬುಕ್ ಮಾಡುವ, ಇಲ್ಲವೇ ಆರೋಗ್ಯ ಇಲಾಖೆಯ ಮನೆ ಮನೆ ಭೇಟಿಕೊಡುವ ಸಿಬ್ಬಂದಿಗಳ ಮೂಲಕ ಲಸಿಕೆ ಬುಕ್ ಮಾಡುವಂತೆ ವ್ಯವಸ್ಥೆ ಕಲ್ಪಿಸಬೇಕು ಇಲ್ಲವಾದಲ್ಲಿ ಗ್ರಾಮೀಣ ವಾಸಿಗಳು ಲಸಿಕೆ ಪಡೆಯುವಲ್ಲಿ ಹಿಂದೆ ಬೀಳುತ್ತಾರೆ. ಲಸಿಕೆಯಿಂದ ವಂಚಿತರಾಗುತ್ತಾರೆ. ಇಲ್ಲದೇ ಹೋದಲ್ಲಿ digital India digital ಗ್ರಾಮವಾಗದ ಹೊರತು ಹಳ್ಳಿಗರಿಗೆ ಉಳಿಗಾಲವಿಲ್ಲ.

ಕ್ರೀಡಾ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

Publicstory


ತುಮಕೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರತಿಭಾವಂತ ಮಾಧ್ಯಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು(6 ರಿಂದ 10ನೇ ತರಗತಿ)ಗಳಿಗೆ ವಾರ್ಷಿಕ 10 ಸಾವಿರ ರೂ.ಗಳ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಆಸಕ್ತ ವಿದ್ಯಾರ್ಥಿಗಳು ಜಾಲತಾಣ http:/service online.gov.in/Karnataka ಮೂಲಕ ಮೇ 25ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೋಂದಾಯಿತ ಕ್ರೀಡಾ ಸಂಸ್ಥೆಗಳು ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಬೇಕು. ಕ್ರೀಡಾಪಟುಗಳು 2020ರ ಏಪ್ರಿಲ್ 1 ರಿಂದ 2021 ರ ಮಾರ್ಚ್ 31ರವರೆಗೆ ನಡೆದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ ಸಾಧನೆಗಳನ್ನು ಮಾತ್ರ ಪರಿಗಣಿಸಲಾಗುವುದು.
ಅಲ್ಲದೆ ರಾಷ್ಟ್ರೀಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ ಕ್ರೀಡಾಪಟು, ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ ಯೋಜನೆಯಡಿ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದವರು, ರಾಷ್ಟ್ರೀಯ ಶಾಲಾ ಕ್ರೀಡಾಕೂಟಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಮಹಾ ಮಾನವತವಾದಿ ಬಸವಣ್ಣನವರ ಸಮಷ್ಠಿಯಸಾಮಜಿಕ ಪ್ರಜ್ಞೆ ……

0

ಲಕ್ಷ್ಮೀರಂಗಯ್ಯ ಕೆ.ಎನ್


ಸಮ ಸಮಾಜದ ನಿರ್ಮಾತೃವಾಗಿ ಬಸವಣ್ಣನವರ ಇಂದಿನ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ.

ಈ ನೆಲದ ಮೂಲ ಪರಂಪರೆಗೆ ಜ್ಞಾನದ ದೀವಟಿಗೆಯನ್ನು ನೀಡಿ ಸಾಮಾಜೋಧಾರ್ಮಿಕ ಕ್ರಾಂತಿಗೆ ಕಾರಾಣೀಭೂತರಾದವರು.

ಆದ್ಯಾತ್ಮಿಕತೆಗೆ ಮಾನವ ಪ್ರೇಮವನ್ನು ನಿಸರ್ಗದೊಳಗಣ ಒಡನಾಡಿತ್ವದೊಳಗಣ ಬಂದವ್ಯವನ್ನು ಬೆಸೆದು ಮನುಷ್ಯ ಶ್ರೇಷ್ಟತೆಯ ಮಾನವೀಯ ಮೌಲ್ಯಗಳನ್ನು ವೃದ್ದಿಸಿ ಜಾತಿಯ ಜಾಡ್ಯ, ಕರ್ಮಸಿದ್ದಾಂತದ ಮತ್ತು ವರ್ಣ ವ್ಯವಸ್ಥೆಯೊಳಗಿನ ಮಲಿನತೆ ತೊಳೆಯಲು ನವ ಚಿಂತನೆಯನ್ನು ವಚನ ಚಳವಳಿಯನ್ನು ಅನುಭಾವಿಕತೆಯ ಮೂಲಕ ಜನ ಸಮಾನ್ಯರಿಗೆ ಪ್ರೇರಣೆಯಾಗಿಸಿ ಲಿಂಗಭೇದ, ವರ್ಗ, ಜಾತಿ,ತಾರತಮ್ಯ ತೊಲಗಿಸಿ ಸ್ಥಾವರ ದೇವಾಲಯಗಳನ್ನು ನಿರಾಕರಿಸುತ್ತಾ ವೈದಿಕಶಾಹಿ ವ್ಯವಸ್ಥೆ ಕಲ್ಪಿಸಿದ ಮಿಥ್ಯೇ ಕಲ್ಪನೆಗಳನ್ನು ಶಿಥಿಲಗೊಳಿಸಲು ಭಕ್ತಿ ಮಾರ್ಗದ ಮೂಲಕ ಸಮಾನೆತೆಯ ಬಗ್ಗೆ ಅರಿವು ಮೂಡಿಸಿ ಸತ್ಯ ಶುದ್ದ ಕಾಯಕ ಮತ್ತು ದಾಸೋಹಗಳ ಮೂಲಕ ಕಲ್ಯಾಣ ರಾಜ್ಯದ ಅರಸ ಬಿಜ್ಜಳನ ಆಡಳಿತದಲ್ಲಿಯೇ ಕೋಶಾಧಿಕಾರಿಯಾಗಿ, ದಂಡನಾಯಕರಾಗಿ, ಮಹಾ ಮಂತ್ರಿಯಾಗಿ ಕಲ್ಯಾಣ ರಾಜ್ಯವನ್ನು ಸಂಪತ್ ಭರಿತವನ್ನಾಗಿಸಿದವರು.

ಪುರೋಹಿತಶಾಹಿ ವ್ಯವಸ್ಥೆ ದಿಕ್ಕರಿಸಿ ಬಂದವರಿಗೆ ಕಾರ್ಮ ಸಿದ್ದಾಂತಕ್ಕೆ ಬದಲಾಗಿ ಕಾಯಕ ಸಿದ್ದಾಂತ ಪ್ರತಿಪಾದಿಸಿ ಹೊಸ ಚಿಂತನೆಗಳನ್ನೂ ಮುಕ್ತವಾಗಿ ಅಭಿವ್ಯಕ್ತಿಸಿಕೊಳ್ಳಲು ಇಷ್ಟ ಲಿಂಗದಾರಿಗಳನ್ನಾಗಿ ಮಾಡಿ ಮಹಾ ಮನೆಯ ಅನುಭವ ಮಂಟಪದಲ್ಲಿ ಎಲ್ಲಾ ವರ್ಗದ ಎಲ್ಲಾ ವರ್ಣದ ಶರಣರು ಸೇರಿ ತಮ್ಮ ಅನುಭವ ಸಂವೇದಿತಾ ಸಾರಗಳನ್ನು ಹಂಚಿಕೊಳ್ಳಲು ಆವಕಾಶ ಕಲ್ಪಿಸಿದರ ಫಲ ಇಂದು ಕನ್ನಡ ಭಾಷೆ ವಚನ ಪರಂಪರೆಯಿಂದ ಶ್ರೀಮಂತಗೊಂಡಿದೆ ಎಂದರೆ ತಪ್ಪಾಗಲಾರದು.

“ದಯವಿಲ್ಲದ ಧರ್ಮವದೇವುದಯ್ಯಾ, ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿಯು, ದಯವೇ ಧರ್ಮದ ಮೂಲವಯ್ಯ ಕೂಡಲ ಸಂಗಯ್ಯನಂತಲ್ಲದೊನಲ್ಲನಯ್ಯಾ “ ಎಂಬ ವಚನ ಮಾನವೀಯ ಮೌಲ್ಯಗಳನ್ನು ,ಬದುಕುವ ರೀತಿಯನ್ನೂ,ಸರಳವಾಗಿ ತಿಳಿಸುವವಚನ ಸಾರ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು ಕೋಮುವಾದಿತನವನ್ನೂ ಬಂಡವಾಳವಾಗಿಸಿಕೊಂಡು ಪ್ರಭುತ್ವದ ಆಡಳಿತ ಚುಕ್ಕಾಣಿ ಹಿಡಿಯುವ ಪಕ್ಷಗಳಿಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ದಯೆ ಧರ್ಮದ ಉದಾತ್ತಾ ಚಿಂತನೆಗಳನ್ನೂ ಪ್ರಸ್ತುತದವರೆಗೂ ವಿಸ್ತರಿಸಿದ ಮಹಾ ಚೇತನ ಬಸವಣನವರು ಹುಟ್ಟಿದ್ದು ಬಾಗೇವಾಡಿಯಲ್ಲಿ ತಂದೆ ಮಾದರಸ ,ತಾಯಿ ಮಾದಲಾಂಭಿಕೆ.

ಇವರ ಜನನದ ಕಾಲವನ್ನೂ ಕ್ರಿ.ಶ.1135ಎಂದು ಊಹಿಸಿದ್ದಾರೆ. ಇವರಿಗೆ ದೇವರಾಜನೆಂಬ ಸಹೋದರ ಅಕ್ಕನಾಗಮ್ಮನೆಂಬ ಸಹೋದರಿ ಇದ್ದರೆಂಬುದು ತಿಳಿದು ಬಂದಿದೆ.

ವರ್ಣಬೇಧ ,ವರ್ಗಬೇದ, ಲಿಂಗಬೇದಗಳು ಬಾಲ್ಯದಲ್ಲಿ ಬಸವಣ್ಣನವರಿಗೆ ಹೆಚ್ಚು ಆಘಾತಗೊಳಿಸಿದ ವಿಷಯಗಳಗಿದ್ದವು ಆವುಗಳ ಸುಕ್ಷ್ಮತೆ ಅರಿಯಲು ತನ್ನ ಅಕ್ಕನಾಗಮ್ಮನಿಗೆ ಇಲ್ಲದ ದ್ವಿಜ ಸಂಸ್ಕಾರ ತನಗೂ ಬೇಡವೆಂದು ತಿರಸ್ಕರಾದ ಪ್ರತಿರೋದ ವ್ಯಕ್ತಪಡಿಸುವ ವ್ಯಕ್ತಿತ್ವ ಬಸವಣ್ಣನವರದ್ದಾಗಿತ್ತು.

ಜಡ್ಡುಗಟ್ಟಿದ ಸಂಪ್ರಾದಾಯಗಳನ್ನೂ ಬುಡಮೇಲು ಮಾಡುವ ವಿಸ್ತಾರ ರೂಪವಾಗಿ “ದೇಹವೇ ದೇವಾಲಯವಾದ ಬಳಿಕ ಕತ್ತಲು ಕೋಣೆಯಲ್ಲಿ ಬಂದಿತನಾಗಿ ಪೂಜಾರಿಗಳ ಕೈಗೊಂಬೆಯಾಗಿರುವ ದೇವರು ದೇವರಲ್ಲ, ಬ್ರಹಾಂಡವೇ ದೇವರು, ಪ್ರಕೃತಿಯೇ ದೇವರು,ವಿಶ್ವವೇ ಲಿಂಗರೂಪದಲ್ಲಿ ಎನ್ನ ಹಸ್ತಕ್ಕೆ ಬಂದುಚುಳುಕದಿರಯ್ಯಾ “ಎಂಬ ಮಾತು ಕ್ರಿ.ಪೂರ್ವದಲ್ಲಿ ಜಗತ್ತಿನ ಬೆಳಕಾಗಿರುವ ಮಹಾನ್ ದಾರ್ಶನಿಕ ಮಾನವತವಾದಿ ತಥಾಗಥ ಗೌತಮಬುದ್ದರ ಚಿಂತನೆಗಳು ಒಂದೇಯಾಗಿ ಕಾಕತಾಳಿಯವೆಂಬಂತೆ ವಿಸ್ತಾರಗೊಳ್ಳವುದನ್ನೂ ಗಮನಿಸಬಹುದು,

ಬುದ್ಧ ಗುರುವಿನ ತತ್ವ ಚಿಂತನೆಗಳಿಗೂ ಮಹಾ ಮಾನವತವಾದಿ ಬಸವ ಚಿಂತನೆಗಳಿಗೂ ಹೋಲಿಕೆಯಾಗುವ ವಸ್ತುನಿಷ್ಠ ವಿಷಯಗಳೆಂದರೆ ನಿಸರ್ಗ ಮತ್ತು ಮನುಷ್ಯ ಪ್ರೇಮ ,ಅನುಭವ ಮತ್ತು ಅನುಭಾವದ ಅನುಸಂದಾನದೋಳಗಿನ ಆಧ್ಯಾತ್ಮಿಕತೆಯಲ್ಲಿನ ಪರಿಪಕ್ವತೆಯಲ್ಲಿನ ಅಂತಿಮಗುರಿಯೋಂದೇ ಅದು ಮಾನವೀಯ ಅಂತಾರ್ಯದ ಯೋಗ, ದ್ಯಾನ , ವಿಪಸನ ಕ್ರಿಯೆ,ಜೀವನ ಸಾಕ್ಷತ್ಕಾರದ ಅವಿಷ್ಕಾರಗಳ ನೆಲೆಯೋಳಗಿನ ಮನಸ್ಸಿನ ಪ್ರಸನ್ನತೆ ಮತ್ತು ನೈತಿಕ ಜೀವನ ಮೌಲ್ಯಗಳ ಸಂಸ್ಕರಣೆಗಳೋಳಗಿನ ಸಮಾಜೋಧಾರ್ಮಿಕ ಸುಧಾರಣೆಯೇ ಆಗಿದೆ.

ಬಸವಣ್ಣನವರ ವಚನ “ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವಪರಿ” ವಚನದ ಆಶಯವೂ ಬುದ್ದರ ಪಂಚಶೀಲ ತತ್ವಗಳ ಸಾರದ ಆಶಯವೂ ಒಂದೇಯಾಗಿದೆ “ ಆಹಿಂಸೆಯನ್ನೂ ಪಾಲಿಸುವುದು ,ಸತ್ಯನಿಷ್ಠೆಯಾಗಿರುವುದು ಕಳ್ಳತನ ಮಾಡದಿರುವುದು, ಕಾಮ ನಿಷ್ಠೆ ಪಾಲಿಸುವುದು, ಮಾದಕ ಮತ್ತು ಮದ್ಯ ವ್ಯಸನಗಳಿಂದ ಮುಕ್ತವಾಗಿರುವುದು “ ಇವುಗಳ ಆಶಯವೂ ಸಮಾಜ ಸುಧಾರಣೆಗಾಗಿ ವ್ಯಕ್ತಿ ನೈತಿಕತೆ ಸರಿದೂಗಿಸಿಕೊಳ್ಳುವ ವ್ಯಕ್ತಿ ಮತ್ತು ಸಮಾಜ ಸುಧಾರಕರಾಗಿ ಕಾಣುವ ಚಿಂತನೆಗಳು ಕಾಯಕ ಸಿದ್ದಾಂತದೊಳಗಿನ ಅನುಭವಗಳ ಸಾರ ಅಭಿವ್ಯಕ್ತಿ ಗೊಳ್ಳುವ ವಚನಗಳ್ಳಲ್ಲಿ ವ್ಯಕ್ತವಾಗುವ ಅನುಭವದ ವಾಸ್ತವಿಕತೆಯನ್ನೂ ಗೌತಮ ಬುದ್ದರು ಕಾರಣ ಪರಿಣಾಮದ ತತ್ವ ಸಿದ್ದಾಂತವನ್ನು ಮನುಷ್ಯ ಸಹಜ ಭಾವನೆಗಳಲ್ಲಿ ಮಾನಃಶಾಸ್ತ್ರಜ್ಜ್ಞಾರಾಗಿ ಸಮಾಜದ ಒರೆಕೋರೆಗಳನ್ನೂ ತಿದ್ದಿರುವುದು ಬಸವಣ್ಣನವರ ಲೋಕದ ಡೊಂಕ ನೀವೇಕೆ ತಿದ್ದುವಿರಿ… ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ …ಎಂಬುವ ಮಾತು ವ್ಯಕ್ತಿ ಹಾಗೂ ಸಮಾಜದ ಮತ್ತೊಂದು ಆಯಾಮವನ್ನು ಅನವರಣಗೊಳಿಸುತ್ತದೆ.

ಅದು ಮನುಷ್ಯ ಸಂಘ ಜೀವಿಯೆಂದು ಇದಕ್ಕೆ ಶರಣ ಪರಪರೆಯಲ್ಲಿ ವಿಶಿಷ್ಟ ಸ್ಥಾನವಿದ್ದು ಅನುಭವ ಮಂಟಪ ಕಟ್ಟಿಕೊಂಡು “ಗೀತಾ ಬಲ್ಲಾತ ಜಾಣನಲ್ಲ ಮಾತು ಬಲ್ಲಾತ ಜಾಣನಲ್ಲ “ಎಂದುಕೊಂಡೆ ನುಡಿದರೆ ಮುತ್ತಿನಹಾರದಂತಿರಬೇಕು ..ಎಂಬತಂಹ ವಚನಗಳು ಸೃಜಿಸಿರುವುದು ಬಸವಣ್ಣನವರ ಮತ್ತೊಂದು ವೈಶಿಷ್ಟ್ಯ.ಮನಸ್ಸಿನ ಬಗ್ಗೆ “ಅತ್ತಲಿತ್ತ ಹೋಗದಂತೆಹೆಳವನ ಮಾಡಯ್ಯ ತಂದೆ,ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ, ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ, ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಿಸದಂತೆ ಇರಿಸು ಕೂಡಲಸಂಗಮದೇವಾ.” ವಚನ ತಾತ್ಪರ್ಯವನ್ನೂ ಯುವ ಜನತೆ ಆರ್ಥ ಮಾಡಿಕೊಂಡು ಪ್ರಸ್ತುತ ದಿನಗಳಲ್ಲಿ ಮನಸ್ಸನ್ನು ನಿಯಂತ್ರಿಸಿಕೊಂಡು ಶುದ್ದ ಜೀವನ ಮಾಡುವ ಅನಿವಾರ್ಯತೆ ಉಂಟಾಗಿದೆ ಆಧುನಿಕ ಜಗತ್ತು ಇಂದು ಆನೇಕ ಆನಿಯಂತ್ರಿತ ಸಮಸ್ಯೆಗಳನ್ನು ತಂದೊಡ್ಡುತ್ತಿದೆ ನಿರುದ್ಯೋಗ, ಬಡತನ ಮೂಡನಂಬಿಕೆ ಮದ್ಯವ್ಯಸನ ಆತ್ಯಚಾರ ಬ್ರಷ್ಟಚಾರ ಸಮಾಜದೋಳಗೆ ಕೋಮುವಾದ ಜಾತಿಪದ್ದತಿ ಮತ್ತಷ್ಟು ಭದ್ರವಾಗಿ ಬೇರೂರಿದೆ ಇವುಗಳಿಗೆ ಬಸವಣ್ಣ ರವರಾದಿಯಾಗಿ ಆನೇಕ ಜನ ಚಿಂತಕರು ಆದರ್ಶಗಳನ್ನೂ ನೀಡಿದ್ದಾರೆ .

ಅವುಗಳನ್ನು ಪಾಲಿಸುವ ಮತ್ತು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಕಾಲಕಾಲಕ್ಕೆ ಸಾದು ಸಿದ್ದ ಶರಣ ಪರಂಪರೆ ನಮ್ಮನ್ನು ಎಚ್ಚರಿಸುತ್ತಾ ಬಂದಿವೆ. ಅದರಲ್ಲೂ ವೈಚಾರಿಕತೆಯ ಉತ್ತುಂಗದಲ್ಲಿ ಶರಣ ಪರಂಪರೆಯ ಸಾಹಿತ್ಯ ಉತ್ಕೃಷ್ಟವಾಗಿದೆ ಎಂದರೆ ತಪ್ಪಾಗಲಾರದು.

,ಇದಕ್ಕೆ ಬಸವಣ್ಣನವರ ಸಮಷ್ಟಿಯ ಪ್ರಜ್ಞೆಯೋಳಗೆ ಶ್ರಮ ಮತ್ತು ತ್ಯಾಗ ಬಹಳಷ್ಟಿದೆ … ಹಾಗಾಗಿಯೇ ಅಸ್ಪೃಶ್ಯತೆ ಬುಡಸಹಿತ ಕಿತ್ತು ಹಾಕಲು ಸಂಕಲ್ಪ ತೊಟ್ಟು ಹನ್ನೆರಡನೆ ಶತಮಾನದ ಬಿಜ್ಜಳನ ಕಾಲದಲ್ಲಿ ಮಹಾಶರಣ ಹರಳಯ್ಯನವರ ಮಗ ಮತ್ತು ಮದುವರಸನ ಮಗಳಿಗೆ ಅಂತರ್ಜಾತಿ ವಿವಾಹ ಮಾಡಿ ಕಲ್ಯಾಣ ಕ್ರಾಂತಿಯ ಮೂಲಕ ಜಂಗಮರಾದರು.

ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸೆಗೊಂಡೆ ನಾದಡೆ ನಿಮ್ಮಾಣೆ!ನಿಮ್ಮ ಪುರಾತನರಾಣೆ ತಲೆದಂಡ!ತಲೆದಂಡ! ಕೂಡಲಸಂಗಮದೇವಾ.. ಕಾಯಕ ಕೀಳೆಂದು ಪರಿತಪ್ಪಿಸುತ್ತಿದ ಶ್ರಮಿಕವರ್ಗಕ್ಕೆ ಸ್ವಾಂತ್ವನ ಹೇಳಿದ ವಚನ ಆದರ್ಶವಾಗಿ ಇಂದಿನ ಸಮಾಜಿಕ ಆರ್ಥಿಕ ರಾಜಕೀಯ ಆಸಮಾನತೆಯಲ್ಲಿ ಕಾಯಕತ್ವವನ್ನು ಸಂಪೂರ್ಣ ನಿಸ್ವರ್ಥದಲ್ಲಿ ನೆಲೆಗೊಳಿಸಿ ಸಮಾಜದ ಎಲ್ಲಾ ಸಮಸ್ಯೆಗಳಿಗೂ ಕಾಯಕವೇ ಕೈಲಾಸ ಎಂಬ ಪರಿಕಲ್ಲನೆಯಲ್ಲಿಉತ್ತರಗಳನ್ನು ಕಂಡುಕೊಂಡಲ್ಲಿ ಮಾತ್ರವೇ ಬವಣ್ಣನವರಿಗೆ ನಾವೂ ಸಲ್ಲಿಸುವ ಮಹಾನ್ ಗೌರವವಾಗುತ್ತದೆ


ಲಕ್ಷ್ಮೀರಂಗಯ್ಯ ಕೆ.ಎನ್
ಸಂಶೋಧನಾರ್ಥಿ.
ಸಮಾಜಕಾರ್ಯ ಆದ್ಯಯನ ಮತ್ತು ಸಂಶೋಧನಾ ವಿಭಾಗ ತುಮಕೂರುವಿಶ್ವವಿದ್ಯಾಲಯ.ತುಮಕೂರು.

ತುಮಕೂರು: 18- 44 ವರ್ಷದವರಿಗೆ ಕೋವಿಡ್ ಲಸಿಕೆ ಸ್ಥಗಿತ

Publicstory


ತುಮಕೂರು: ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಈಗಾಗಲೇ 18 ರಿಂದ 44 ವರ್ಷ ವಯೋಮಾನದವರಿಗೆನೀಡಲಾಗುತ್ತಿರುವ ಕೋವಿ ಶೀಲ್ಡ್ ಲಸಿಕಾಕರಣವನ್ನು (ಈಗಾಗಲೇ ಲಸಿಕೆಗಾಗಿ ಸಮಯ ನಿಗಧಿಪಡಿಸಿಕೊಂಡವರೂ ಸೇರಿದಂತೆ) ಮೇ14 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಆದರೆ ಮೊದಲನೇ ಡೋಸ್ ಪಡೆದ 18 ರಿಂದ 44 ವರ್ಷದ ವಯೋಮಾನದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು 2ನೇ ಡೋಸ್ ಲಸಿಕೆ ಪಡೆಯಲು ಅರ್ಹರಿದ್ದರೆ ಅಂತಹ ಫಲಾನುಭವಿಗಳು 2ನೇ ಡೋಸ್ ಲಸಿಕೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ‌ ವೈ ಎಸ್ ಪಾಟೀಲ ತಿಳಿಸಿದ್ದಾರೆ.

ಎರಡನೇ ಡೋಸ್ ಲಸಿಕೆ ನೀಡುವ ಸಮಯದಲ್ಲಿ ಕೋವಿಶೀಲ್ಡ್ ಮೊದಲನೇ ಡೋಸ್ ಪಡೆದು 8 ವಾರಗಳನ್ನು ಪೂರ್ಣಗೊಳಿಸಿರುವ ಮತ್ತು ಕೋವ್ಯಾಕ್ಸಿನ್ ಮೊದಲನೇ ಡೋಸ್ ಪಡೆದು 6 ವಾರಗಳನ್ನು ಪೂರ್ಣಗೊಳಿಸಿರುವ ಫಲಾನುಭವಿಗಳಿಗೆ ಮೊದಲು ಲಸಿಕೆ ನೀಡಲಾಗುವುದೆಂದು ಅವರು ತಿಳಿಸಿದ್ದಾರೆ

ವ್ಯಾಕ್ಸಿನ್ ಪಡೆಯಲು ಹಳ್ಳಿಗೆ ಬಂದ ಸಿಟಿ ಜನ! ಹಳ್ಳಿಗರಿಗೆ ಕಂಟಕವಾದ ಆನ್ ಲೈನ್!

Publicstory


ತುಮಕೂರು: ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡು ತುರುವೇಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವರ ಸಂಖ್ಯೆ ಹೆಚ್ಚಾಗಿದ್ದು; ತಾಲ್ಲೂಕಿನ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಪರದಾಡುವಂತಾಗಿದೆ.

ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬೆಳಗ್ಗೆ 9 ರಿಂದ 11 ಗಂಟೆ ನಿಗದಿ ಮಾಡಲಾಗಿದೆ. ಈಗಾಗಲೇ ಬೆಂಗಳೂರಿನಲ್ಲೇ ಕುಳಿತು ಆನ್ ಲೈನ್ ನಲ್ಲಿ ನೋಂದಣಿ ಮಾಡಿದವರು ತಮ್ಮ ಸಮಯ ನಿಗಧಿಯಾಗಿದ್ದರಿಂದ ಬೆಂಗಳೂರಿನಿಂದ ಬಂದ ಯುವಕ, ಯುವತಿಯರು ಹಾಗು ಮಧ್ಯ ವಯಸ್ಕರು ಬೆಳಗ್ಗೆ 7 ಗಂಟೆಯಿಂದಲೇ ಆಸ್ಪತ್ರೆಯ ಮುಂಭಾಗ ಸರತಿ ಸಾಲಿನಲ್ಲಿ ನಿಂತಿದ್ದರು.

ಆಸ್ಪತ್ರೆಯ ಪಕ್ಕದ ರಸ್ತೆಯ ಇಕ್ಕೆಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳು ಜಮಾವಣೆಯಾಗಿದ್ದವು.

‘ಗುರುವಾರ 145 ಮಂದಿಗೆ ವ್ಯಾಕ್ಸಿನ್ ಹಾಕಲಾಗಿತು. ಅದರಲ್ಲಿ 45 ಮಂದಿ ಮೊದಲ ಮತ್ತು ಎರಡನೇ ಡೋಸ್ ಅನ್ನು ಬೆಂಗಳೂರಿಗರು ತೆಗೆದುಕೊಂಡರು’ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಧರ್.

ಲಾಕ್ಡೌನ್ನಿಂದ ಪಟ್ಟಣದಲ್ಲಿ ಕಂಪ್ಯೂಟರ್ ಸೆಂಟರ್ ತೆರೆದಿಲ್ಲ ಮತ್ತು ಮೊಬೈಲ್ನಲ್ಲಿ ನೋಂದಣಿ ಮಾಡಲು ಹಳ್ಳಿಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿದೆ ಹಾಗಾಗಿ ಭಾಗಶಃ ಜನರು ನೋಂದಾವಣಿ ಮಾಡಲು ಸಾದ್ಯವಾಗಿಲ್ಲ. ಮತ್ತೂ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ವ್ಯಾಕ್ಸಿನ್ ತೆಗೆದುಕೊಳ್ಳಲು ಆನ್ಲೈನ್ ನಲ್ಲಿ ನೋಂದಣಿ ಮಾಡಬೇಕೆಂಬ ಮಾಹಿತಿಯ ಕೊರತೆಯಿಂದ ಎಷ್ಟೋ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದು ಬರಿಗೈಯಲ್ಲಿ ಹಿಂತಿರುಗುತ್ತಿದ್ದಾರೆ. ಈ ಬಗ್ಗೆ ತಾಲ್ಲೂಕು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ಹಿರಿಯ ನಾಗರಿಕರು.

ಲಾಕ್ ಡೌನ್ ಸಂದರ್ಭದಲ್ಲಿಯೂ ರೈತ ಸಂಪರ್ಕ ಕೇಂದ್ರ

ತುಮಕೂರು: ಕೋವಿಡ್- 19 ಹರಡುವುದನ್ನು ತಡೆಗಟ್ಟಲು ರಾಜ್ಯದಲ್ಲಿ ಮೇ10ರಿಂದ ಲಾಕ್‌ಡೌನ್ ಜಾರಿಗೊಳಿಸಿರುವ ಕಾರಣ ಜಿಲ್ಲೆಯ ಹೋಬಳಿ ಮಟ್ಟದಲ್ಲಿರುವ ಎಲ್ಲಾ ರೈತ ಸಂಪರ್ಕ ಕೇಂದ್ರಗಳು ಲಾಕ್ ಡೌನ್ ಮುಗಿಯುವವರೆಗೂ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಪ್ರತಿನಿತ್ಯ ತೆರೆದಿರುತ್ತವೆ.

ಕೃಷಿ ಪರಿಕರಗಳನ್ನು ಖರೀದಿ ಮಾಡುವ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವ ರೈತರು ನಿಗಧಿ ಪಡಿಸಿದ ಸಮಯದೊಳಗೆ ಭೇಟಿ ನೀಡಿ, ಸವಲತ್ತುಗಳನ್ನು ಪಡೆಯಬಹುದಾಗಿದೆ ಎಂದು
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಎಂ.ಎನ್. ರಾಜಸುಲೋಚನ ತಿಳಿಸಿದ್ದಾರೆ.

ತುಮಕೂರು; ಕೋವಿಡ್ ಪಾಸಿಟಿವ್ ದರ ಇಳಿಕೆ- ಮಾಧುಸ್ವಾಮಿ

ತುಮಕೂರು: ಜಿಲ್ಲೆಯಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಶೇಕಡಾವಾರು ಪಾಸಿಟಿವ್ ಪ್ರಕರಣಗಳ ಪ್ರಮಾಣ ಇಳಿಕೆಯಾಗುತ್ತಿದೆ. ಆರಂಭದಲ್ಲಿ ಶೇ.45ರಷ್ಟಿದ್ದ ಪಾಸಿಟಿವ್ ಪ್ರಮಾಣ 40ಕ್ಕೆ ತಗ್ಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.‌ಮಾಧುಸ್ವಾಮಿ ಅವರು ತಿಳಿಸಿದರು.

ನಗರದ‌ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,‌ ವ್ಯಾಪಕವಾಗಿ ಹರಡುತ್ತಿದ್ದ ಕೋವಿಡ್-19 ನಿಯಂತ್ರಣ‌ಕ್ಕಾಗಿ ಜಿಲ್ಲಾಡಳಿತದಿಂದ ಹಾಸಿಗೆ, ಆಮ್ಲಜನಕ ಹಾಗೂ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು‌ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಲ್ಲಾ ರೀತಿಯಲ್ಲಿಯೂ ಕ್ರಮ ಕೈಗೊಂಡ ಪರಿಣಾಮ ಕೋವಿಡ್ ನಿಯಂತ್ರಣದಲ್ಲಿ ಸುಧಾರಣೆ ಕಂಡು ಬಂದಿದೆ. ಸೋಂಕಿತರ ಚೇತರಿಕೆ ಪ್ರಮಾಣವೂ ಏರಿಕೆಯಾಗುತ್ತಿದೆ ಎಂದರು.

ಬೆಂಗಳೂರು-ತುಮಕೂರು ಓಡಾಡುವವರ ಸಂಖ್ಯೆ ಹೆಚ್ಚಿದ್ದ ಕಾರಣ ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿತ್ತು. ಆದರೆ,‌ ಸರ್ಕಾರದ ಅನುಮತಿಯಿಲ್ಲದ ಕಾರಣ ಆರಂಭದಲ್ಲಿ ಈ ಸಂಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲಾ ರೀತಿಯಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸೋಂಕಿನ ಪ್ರಮಾಣ ತಗ್ಗಲಿದೆ ಎಂದು ತಿಳಿಸಿದರು.

ಕಳೆದ ಏಪ್ರಿಲ್ ತಿಂಗಳಲ್ಲಿ 18749 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇವರಲ್ಲಿ 8812 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು ಹಾಗು 69 ಸೋಂಕಿತರು ಸಾವನ್ನಪ್ಪಿದರು. ಅದೇ ರೀತಿ ಮೇ 1ರಿಂದ 12ರವರೆಗೆ 26790 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 12650 ಸೋಂಕಿತರು ಬಿಡುಗಡೆಯಾಗಿದ್ದಾರೆ ಹಾಗೂ 162 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

*ಅಕ್ಸಿಜನ್ ಸಮಸ್ಯೆಯಾಗದಂತೆ ಕ್ರಮ:*


ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಆಮ್ಲಜನಕದ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಘಟಕ ಸ್ಥಾಪನೆ ಅಡಿಪಾಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇದಲ್ಲದೆ 110‌ ಆಮ್ಲಜನಕ ಸಾಂದ್ರಕಗಳ ಮೂಲಕವೂ ಸೋಂಕಿತರಿಗೆ ಆಮ್ಲಜನಕ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ‌.

ಕೈಗಾರಿಕೋದ್ಯಮಿಗಳಿಂದ 250 ಆಮ್ಲಜನಕ ಸಾಂದ್ರಕಗಳ ನೆರವು ಸಿಗಲಿದೆ. ಈ ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಿಗೂ ನೀಡಿ ಸೋಂಕಿತರಿಗೆ ಸಮಸ್ಯೆಯಾಗದಂತೆ ಆಮ್ಲಜನಕ ಪೂರೈಕೆ ಮಾಡಲಾಗುವುದು ಎಂದರು.

ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿಯೂ ಉತ್ತಮ ಕಾರ್ಯ ನಡೆಯುತ್ತಿದೆ‌. ಇದರಿಂದ ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ತಗ್ಗಿದೆ. ಜಿಲ್ಲೆಗೆ 23ಕೆಎಲ್ ಆಮ್ಲಜನಕದ ಅಗತ್ಯವಿದ್ದು, ಸದ್ಯ 16ಕೆಎಲ್ ಮಾತ್ರ ಲಭ್ಯವಿದೆ. ಕೊರತೆಯಿರುವ ಆಮ್ಲಜನಕದ ಬೇಡಿಕೆ ಪೂರೈಸುವಂತೆ ಮನವಿ ಮಾಡಿದ್ದರಿಂದ 23ಕೆಎಲ್ ಆಮ್ಲಜನಕ ಹಂಚಿಕೆಯಾಗಿದ್ದು, ಅಗತ್ಯಕ್ಕನುಗುಣವಾಗಿ ಜಿಲ್ಲಾಸ್ಪತ್ರೆ,ತಾಲೂಕು ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡಲಾಗುವುದು
ಎಂದು ತಿಳಿಸಿದರು.

*ಕೋವಿಡ್ ಪರೀಕ್ಷೆ ಸುಸೂತ್ರ*


ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ. ತುಮಕೂರು ಹಾಗೂ ತಿಪಟೂರಿನಲ್ಲಿ ಲ್ಯಾಬ್ ಗಳಿದ್ದು, ತುಮಕೂರಿನ ಲ್ಯಾಬ್ ನಲ್ಲಿ ಸುಮಾರು ಎರಡೂವರೆ ಸಾವಿರ ಮತ್ತು ತಿಪಟೂರು ಲ್ಯಾಬ್ ನಲ್ಲಿ ಒಂದೂವರೆ ಸಾವಿರ ಪರೀಕ್ಷೆ ಮಾಡಲಾಗುತ್ತಿದೆ.

ಇದಲ್ಲದೆ ಶಿರಾದಲ್ಲೂ ಲ್ಯಾಬ್ ತೆರೆಯಲು ಯೋಜನೆ ರೂಪಿಸಲಾಗಿದ್ದು, ಶೀಘ್ರ ಪ್ರಾರಂಭವಾಗಲಿದೆ. ಈ ಲ್ಯಾಬ್ ನಲ್ಲಿಯೂ ಒಂದು ಸಾವಿರ ಕೋವಿಡ್ ಪರೀಕ್ಷೆ ಮಾಡಬಹುದು.‌ ಇದಲ್ಲದೆ, ಲ್ಯಾಬ್ ಆನ್ ರೋಡ್ ವಾಹನದ ಮೂಲಕವೂ ಸ್ಥಳಕ್ಕೆ ಹೋಗಿ ಟೆಸ್ಟಿಂಗ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

*ಕೋವಿಡ್ ಆರೈಕೆ ಕೇಂದ್ರಕ್ಕೆ ಬನ್ನಿ*


ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಸೋಂಕಿತರು ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರನ್ನು ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಸೋಂಕು ಕುಟುಂಬಕ್ಕೆ ಹಬ್ಬುವುದನ್ನು ತಡೆಯಬಹುದು.‌ ಹಾಗಾಗಿ ಸೋಂಕಿತರು ಹೋಂ ಐಸೋಲೇಷನ್ ಬದಲಿಗೆ ಕೋವಿಡ್ ಕೇರ್ ಗೆ ಬಂದು‌ ಚಿಕಿತ್ಸೆ ಪಡೆಯುವಂತೆ ಮನವಿ‌ ಮಾಡಿದರು.

*ಅಗತ್ಯ ವಸ್ತುಗಳ ನೆರವಿಗೆ ಕ್ರಮ*


ಕುಟುಂಬ ಸದಸ್ಯರೆಲ್ಲರಿಗೂ ಸೋಂಕು ತಗುಲಿದ್ದರೆ ಅವರಿಗೆ ಊಟ-ತಿಂಡಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೂ ಜಿಲ್ಲಾಡಳಿತದಿಂದ ಕ್ರ‌ಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸೇವೆಗೆ ಮುಂದಾಗಿರುವ 350 ಎನ್ ಜಿಒಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ದೊರಕಿದೆ ಎಂದು ಹೇಳಿದರು.

*ಮೂರನೇ ಅಲೆ ನಿಗ್ರಹಕ್ಕೆ ಶಕ್ತಿ*


ಆಮ್ಲಜನಕ ಸೇರಿದಂತೆ ಸೋಂಕಿತರ ಆರೈಕೆಗೆ ಕೈಗೊಂಡಿರುವ ಕ್ರಮಗಳು ಕೋವಿಡ್ ಮೂರನೇ ಅಲೆ ನಿಗ್ರಹಕ್ಕೆ ಶಕ್ತಿಯಾಗಲಿದೆ. ಮೂರನೇ ಅಲೆ ನಿಯಂತ್ರಣಕ್ಕೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು‌ ತಿಳಿಸಿದರು.

*ಸಮಸ್ಯೆಗಳು ನಿವಾರಣೆ*


ಆಮ್ಲಜನಕ, ರೆಮ್ಡಿಸಿವರ್ ಸೇರಿದಂತೆ ಬಹುತೇಕ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವರ್ ಕೊರತೆಯಿಲ್ಲ. ಸರ್ಕಾರಿ ಆಸ್ಪತ್ರೆಯಿಂದ ರೆಫರ್ ಮಾಡಲಾದ ಸೋಂಕಿತರಿಗೂ ರೆಮ್ಡಿಸಿವರ್ ಅಭಾವವಿಲ್ಲ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೊಂಚ ಸಮಸ್ಯೆ ಉಂಟಾಗಿದೆ ಎಂಬ ಮಾತುಗಳು‌ ಕೇಳಿಬಂದಿವೆ. ಅದರ ನಿವಾರಣೆಗೂ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದರು.

*ಎಬಿಆರ್ ಕೆ‌ ಸೋಂಕಿತರು ಹಣ ಕಟ್ಟುವಂತಿಲ್ಲ* ಸರ್ಕಾರಿ ಆಸ್ಪತ್ರೆಗಳಿಂದ ರೆಫರ್ ಆಗಿ ದಾಖಲಾದ ಸೋಂಕಿತರನ್ನು ಎಬಿಆರ್ ಕೆ ಅಡಿಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಹಣ ಪಡೆಯುವಂತಿಲ್ಲ.‌ ಚಿಕಿತ್ಸೆ ನೀಡಲು ಹಣ ಪಡೆದ ಬಗ್ಗೆ ದಾಖಲೆ ಸಮೇತ ಮಾಹಿತಿ ಒದಗಿಸಿದರೆ ಕ್ರ‌ಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ. ಡಾ.ಕೆ ವಿದ್ಯಾಕುಮಾರಿ, ಎಸ್ ಪಿ ಡಾ.ಕೆ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಡಿಎಚ್ಒ ಡಾ.ನಾಗೇಂದ್ರಪ್ಪ ಸೇರಿದಂತೆ ಇತರರಿದ್ದರು

ವೆಬ್ ಕಥೆ : ಅಪ್ಪಗೋಳ್ ತಾತಯ್ಯ ಮನದಲ್ಲೇ ನಕ್ಕ.‌

ಅನಾಮಿಕ

ಅವನು ಹಾಗೆ ಯೋಚಿಸಿದಾಗಲೆಲ್ಲ ರಾತ್ರಿ ಹೊತ್ತು ಮೀರಿ ಹೋಗಿರುತ್ತದೆ ಅದೇ ಸಮಯಕ್ಕೆ ಹಲ್ಲಿಗಳು ಲೊಚಗುಡುವುದಕ್ಕೂ ಅವನು ಯಾರಿಗೂ ಕೇಳದಂತೆ ಏನೇನೋ ಲೊಚಗುಟ್ಟುವುದು ಆ ಮನೆಯವರಿಗೆ ಸಾಮಾನ್ಯವಾಗಿ ಹೋಗಿದೆ. ಅವನ ತಲೆಯಲ್ಲಿ ಏನಿದೆಯೋ, ಯಾರ ಬಗ್ಗೆಯೋ, ಯಾವ ಸಾಮಾಜ್ರ್ಯದ ಬಗ್ಗೆಯೂ ಯಾರಿಗೆ ಗೊತ್ತಿಲ್ಲ.

ಹಾಗಂತ ಇಷ್ಟು ವರ್ಷಗಳ ಕಾಲವೂ ಅವ ಯಾಕೆ ಸರೊತ್ತಿನಲ್ಲಿ ಹೀಗೆ ಯೋಚ್ನೆ ಮಾಡ್ತಾ ಕೂರ್ತಾನೆ ಅಂತಾನು ಯಾರ್ಗೂ ಗೊತ್ತೂ ಇಲ್ಲ. ಆದರೆ ಆ ಮನೆಯ ಮಕ್ಕಳಿಗೆ ಮಾತ್ರ ಈ ವ್ಯಕ್ತಿ ವಿಚಿತ್ರ ವ್ಯಕ್ತಿಯಾಗಿ, ಯಾರೋ ಋಷಿ ಇರಬೇಕೆಂದೇನೊ ಅವರೊಳಗೆ ಮಾತನಾಡಿಕೊಂಡು ಏನೇನೊ ಸುದ್ದಿಗಳನ್ನು ಅವರೊಳಗೆ ಹರಡಿಕೊಂಡು ಬಿಟ್ಟಿದ್ದಾರೆ.‌ಈ ಮಕ್ಕಳ ಕಲ್ಪನಗಳೆಲ್ಲ ಶಾಲೆಯ ಹೊಸ್ತಿಲು ದಾಟಿ ಮೇಷ್ಟ್ರು ಕಿವಿಗೂ ಬಿದ್ದಿರುವುದರಿಂದ ಈ ಹುಡ್ಗುರೂಗೆ ಒಂಥರಾ ರಕ್ಷಣೆ.

ಅಂದ ಹಾಗೆ ಎಲ್ಲರ ಬಾಯಲ್ಲೂ ಅಯ್ಯಪ್ಪೋಳ್ ತಾತ ಅನ್ನಿಸಿಕೊಂಡಿರುವ ಈತನಿಗೆ ದಿಕ್ಕು ದೆಸೆ ಯಾರೂ ಇಲ್ಲ. ಮಕದ ತುಂಬಾ ಸಿಡಿಬು ಹತ್ತಿಸಿಕೊಂಡು ಮಕವೆಲ್ಲ ತೂತು ಬಿದ್ದಿರುವ ಕಾರಣದಿಂದಲೂ, ಇಲ್ಲ ಎಲ್ರೂ ಉಡಾಫೆ ಮಾಡಿದ ಕಾರಣದಿಂದಲೂ ಅಪ್ಪಗೋಳ್ ತಾತಪ್ಪ ವಿಚಿತ್ರ. ಖಯಾಲಿಗಳನ್ನು ಬೆಳೆಸಿಕೊಂಡು ಹೆಂಗ್ ಬೇಕೋ ಹಂಗೆ ಆಡ್ತಾ ಅಡ್ತಾ ಈಗ ಅಪ್ಪಗೋಳ್ ತಾತಯ್ಯನೇ ಆಗಿ ಬಿಟ್ಟಿದ್ದಾನೆ.

ಗೌಡರ ಹಟ್ಟಿ ಸೇರಿದ್ದು ಯಾವಾಗ, ಯಾಕೆ ಅನ್ನೋದು ಈಗ ಯಾರ್ಗೂ ನೆನಪಿಗೆ ಉಳಿದಂತೆ ಇಲ್ಲ.‌ ಹದಿನಾಲ್ಕು ಅಂಕಣದ ಈ ಮನೆಯಲ್ಲಿ ಇಂಥ ತಾತಗಳ ಸಂಖ್ಯೆ ಐದಾರು‌ ಮುಟ್ಟಬಹುದು. ಆ ಮನೆಯ ಹೆಂಗಸರಂತು ಬೇಯ್ಸಿ ಹಾಕೋದು ಅಷ್ಟೇ. ಅದರಾಚೆಗೆ ಅವರಿಗೆ ಯೋಚನೆಗಳೆ ಬರವುದುದಿಲ್ಲವೇನೋ ಎನ್ನುವಷ್ಟು ಅವರನ್ನು ನೋಡಿದವರಿಗೆಲ್ಲ ಅನ್ನಿಸಿ ಬಿಡುತ್ತದೆ.

ಅಪ್ಪಗೋಳ್ ತಾತಯ್ಯ ಒಮ್ಮೊಮ್ಮೆ ಮೀಸೆ ಮರೆಯಲ್ಲೇ ನಗಾಡಿಕೊಳ್ಳುತ್ತಾನೆ. ತೋಟ ಮಾಡಿದ ಹೊಸದರಲ್ಲಿ ಬಾಳೆ ಗೊನೆ ಸಂತೆಗೆ ಹಾಕಿ ಅಷ್ಟಕ್ಕೂ ಭಟ್ರಮ್ಮನ ಹೋಟೆಲ್ ನಲ್ಲಿ ಬೊಂಡ ತಿಂದು ಬಂದು ಬಿಡೋಣ. ಯಾಕೋ ಲೆಕ್ಕಚಾರ ಏರುಪೇರು ಹಾಗೋದು ನೋಡಿ ಅಪ್ಪಗೋಳ್ ತಾತಯ್ಯ ತೋಟದ ಹತ್ತಿರ ಸುಳಿಯಂದಂತೆ ಮನೆ ಹಿರಿಕರೆಲ್ಲ ಲಕ್ಷ್ಮಣ ರೇಖೆ ಎಳೆದರು.

ತಾತನ ದೊಡ್ಡಪ್ಪ ಅಂತೆ. ಊರು ಬಿಟ್ಟೋದನ್ನು ಮತ್ತೇ ಯಾವ್ದೊ ಕಾಲದಲ್ಲಿ ಊರ ಸೇರಕೊಂಡಾನೆ.‌ಇವ್ನ ಸಾಕೋದು ನಮ್ಮ ಕರ್ಮ ಅಂದ್ಕೊಂಡು ಮನೆಯವರೆಲ್ಲ ತೆಪ್ಪಗೆ ಬಿದ್ದಿದ್ದರು.

ಒಮ್ಮೊಮ್ಮೆ ಸ್ಮಶಾನದ ಮಾವಿನಗೆದ್ದಲು ಹುಲ್ಲಿಗೆ ಎಮ್ಮೆ ಹೊಡ್ಕೊಂಡು ಹೋಗುತ್ತಿದ್ದ ಈ ತಾತ ಹಾಗೆಲ್ಲ ಗೆಲವಾಗಿರುತ್ತಿದ್ದನು. ಶ್ಮಶಾನದಲ್ಲಿ ಹೊದ ಹೆಣಗಳ ಜತೆ ತಾತಯ್ಯ ಮಾತಾಡ್ತಾನೆ ಅನ್ನೋದೆ ಹಾಗೆಲ್ಲ ದೊಡ್ಡ ಸುದ್ದಿಯಾಗೋದು.‌ಇಂತದೇ ದಿನಗಳಲ್ಲಿ ಸರೊತ್ತಿನಲ್ಲಿ ಮನೆಯ ಜಗಳಿ ಮೇಲೆ ಕುಳಿತು ಏನೇನೋ ಪಿಸುಗುಟ್ಟುವುದಕ್ಕೂ, ಮನೆ ತುಂಬಾ ಹಲ್ಲಿಗಳು ಲೊಚಗುಟ್ಟುವುದಕ್ಕೂ ಆರಂಭಿಸುತ್ತಿದ್ದವು.‌ಇದು ಆ ಮನೆಯವರಿಗೆ ಮತ್ತಷ್ಟು ಭಯ ಶುರುವಾಗಿ ಇತ್ತೀಚೆಗೆ ತಾತಯ್ಯನ್ನು ಕಂಡರೆ ಭಯ ಬೀಳೋಕ್ ಶುರು ಮಾಡಿದ್ದರು.

ಒಂದಿನ ಹೀಗೆ ಮ್ಯಾಗಿನ ಮನೆಯ ರಂಗಮ್ಮ ಬರೋವಾಗ ಹಿಂದಿನಿಂದ ಬಂದ ಅಪ್ಪಗೋಳ್ ತಾತಯ್ಯ ಅವಳ ಸೀರೆ ಎತ್ತಿ ಕುಂಡೆ ಮುಟ್ಟಿದ್ದು ಊರೆಲ್ಲ ಸುದ್ದಿಯಾಗಿ ದೊಡ್ಡಮನೆಯ ಮಾನ ಮರ್ವಾದೆಯೂ ಹಾಳಾಯಿತು.

ಅತ್ತಲಾಗಿ ಹತ್ತು ದಿನಕ್ಕೆ ಸರಿಯಾಗಿ ರಂಗಮ್ಮ ಸೀರೆ ಹುಟ್ಟರೆ ಸಾಕು ಹೆಂಗೆಗೋ ಆಡಕ್ಕೆ ಶುರು ಮಾಡ್ತಿದ್ದಳು. ಆಕೆಗೆ ಮಾಟ ಮಂತ್ರ ಮಾಡಿಸಿಬೇಕು ಎಂಬ ಮಾತು ಊರಲೆಲ್ಲ ಹರಿದಾಡಿತು. ಅವೊತ್ತು ಸರಿ ಹೊತ್ತಲ್ಲೇ ಜಗಳಿಯಿಂದ ಎದ್ದ ಅಪ್ಪಗೋಳ್ ತಾತಯ್ಯ ಸೀದಾ ಹಳ್ಳಿ ಕಟ್ಟೆಗೆ ಜಮಾಯಿಸಿದ.‌ಅರಳಿ ಮರದ ತುಂಬೆಲ್ಲ ಹಲ್ಲಿಗಳು ಲೊಚಗುಟ್ಟಲು ಆರಂಭಿಸಿದ್ದವು. ಆ ಹಳ್ಳಿ ಮರದ ಕೆಳಗ್ಗೆ ಗುಡಿಸಲು ಹಾಕಿಕೊಂಡಿದ್ದ ಕೆಂಪೀರಿಗೆ ಒಂದಾ‌ ಮಾಡಕ್ಕೆ ಅರ್ಜೆಂಟ್ ಆಗಿ ಈಚೆ ಬಂದವಳು ಹಳ್ಳಿ ಮರದ ಕೆಳಗ್ಗೆ ಕುಳಿತಿದ್ದ ತಾತಯ್ಯ ಕಂಡು ಭಯಭೀತಳಾದಳು.‌ ಒಂದ ತಡಕ್ಕೊಂಡು ಒಳಕ್ಕೋಡಿ ಗುಡಿಸಲು ಬಾಗಿಲು ಭದ್ರ ಮಾಡಿಕೊಂಡಳು.

ಕೊರೋನಕ್ಕೆ ಇಂದು ಬಲಿಯಾದ ವಿಶ್ರಾಂತ ಐಪಿಎಸ್ ಅಧಿಕಾರಿ ಕೆವಿಆರ್ ಟ್ಯಾಗೂರ್ ಎಂಬ ಜೀವನೋತ್ಸಾಹಿ ನೆನೆದು

ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಕೆ.ವಿ.ಆರ್. ಟ್ಯಾಗೋರ್ ಅವರು ಕೊರೋನಕ್ಕೆ ತುತ್ತಾಗಿ ಅಕಾಲಿವಾಗಿ ನಿಧನರಾಗಿದ್ದಾರೆ. ಬಹುಮುಖ ವ್ಯಕ್ತಿತ್ವದ ಐಪಿಎಸ್ ಅಧಿಕಾರಿಯಾಗಿದ್ದ ಅವರದ್ದು ಗೃಹ ಇಲಾಖೆ ಮಾತೃ ಇಲಾಖೆಯಾಗಿದ್ದರೂ ವಾರ್ತಾ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ಖ್ಯಾತಿ ಪಡೆದಂತೆ, ತಾವು ಕಾರ್ಯ ನಿರ್ವಹಿಸಿದ ಈ ಎರಡೂ ಇಲಾಖೆಗಳಲ್ಲೂ ಟ್ಯಾಗೋರ್ ಒಳ್ಳೆಯ ಹೆಸರು ಗಳಿಸಿದ್ದ ಜನಾನುರಾಗಿ. ಯಾವ ಪೊಲೀಸ್ ಅಧಿಕಾರಿಯೂ ಇವರಷ್ಟು ಜನಪ್ರಿಯರಾಗಿರಲಿಲ್ಲ ಎಂಬುದು ಗಮನಾರ್ಹ.

ವಿವಿಧ ಮಟ್ಟದ ಯುವಜನ ಮೇಳ ಮತ್ತು ಯುವಜನೋತ್ಸವ ಸಂಘಟಿಸುವಲ್ಲಿ ಇವರ ಕರಾರುವಕ್ಕಾದ ಯೋಜನೆ ಮತ್ತು ಸ್ನೇಹಶೀಲವಾದ ನಡೆವಳಿಕೆ, ಈ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣವಾಗಿದ್ದವು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾಗಿದ್ದ ವೇಳೆ ಅದೆಷ್ಟೋ ಯುವಜನರು ಇವರ ಸಮ್ಮೋಹಕ ವ್ಯಕ್ತಿತ್ವಕ್ಕೆ ಮಾರುಹೋಗಿದ್ದರು. ಜೊತೆಗೆ, ಆರಾಧಿಸಲುತೊಡಗಿದ್ದರು. ಇದನ್ನು ನಾನು ಕಣ್ಣಾರೆ ಕಂಡ ಸತ್ಯ. ಹಲವಾರು ವಿಷಯಗಳ ಬಗ್ಗೆ ಅಪಾರ ಜ್ಞಾನ ಸಂಪತ್ತು ಹೊಂದಿದ್ದ ಟ್ಯಾಗೂರ್ ಅವರು ಸದಾ ಹಸನ್ಮುಖಿ. ಪ್ರಖಂಡ ವಾಗ್ಮಿಗಳೂ ಆಗಿದ್ದ ಅವರು, ಯಾವುದೇ ವಿಷಯವಾದರೂ ಅದ್ಭುತವಾಗಿ ಮಾತನಾಡಿ ಚಿಂತನೆಯ ಬೀಜಗಳ ಬಿತ್ತುತ್ತಿದ್ದರು. ಯಾವುದೇ ಇಲಾಖೆಗೆ ಹೋದರೂ ಎಲ್ಲರೊಡನೆ ಬೆರೆತು ಒಂದಾಗುವ ಗುಣ ಅವರಲ್ಲಿ ಹಾಸುಹೊಕ್ಕಾಗಿತ್ತು. ಉನ್ನತ ಅಧಿಕಾರಿ, ಕೆಳಹಂತದ ಸಿಬ್ಬಂದಿ ಎಂದು ಯಾವತ್ತಿಗೂ ತಾರತಮ್ಯ ಮಾಡುತ್ತಿರಲಿಲ್ಲ. ದಕ್ಷತೆ ಮತ್ತು ಪ್ರಾಮಾಣಿಕತೆ ಅವರ ವೃತಿ ಕಾರ್ಯದ ವಿಶಿಷ್ಟ ಶೈಲಿಯಾಗಿತ್ತು.

ವಾರ್ತಾ ಇಲಾಖೆಯ ಬಗ್ಗೆ ಅಪಾರ ಒಲವಿಟ್ಟುಕೊಂಡಿದ್ದ ಅವರು, ಎರಡು ಬಾರಿ ಇದರ ಆಯುಕ್ತರಾಗಿದ್ದರು. ಆಗ ಹಲವಾರು ರಚನಾತ್ಮಕ ಕಾರ್ಯಗಳ ಮೂಲಕ ಇಲಾಖೆಗೆ ಕಾಯಕಲ್ಪ ನೀಡಿದರು. ಯಾವುದೇ ಕಾರ್ಪೊರೇಟ್ ಕಂಪನಿಯ ಕಚೇರಿಗೆ ಕಡಿಮೆ ಇಲ್ಲದಂತೆ ಆಧುನಿಕವೂ ಸುಸಜ್ಜಿತವೂ ಆದ ವಾರ್ತಾ ಇಲಾಖೆಯ ನೂತನ ಕಟ್ಟಡವನ್ನು ನಿರ್ಮಾಣ‌ ಮಾಡಿದ್ದು ಅವರ ದಕ್ಷ ಮತ್ತು ಕ್ರಿಯಾಶೀಲ ಆಡಳಿತಕ್ಕೆ ಹಿಡಿದ ಕನ್ನಡಿ. ನನ್ನೂರಿನ ವಿಶ್ರಾಂತ ಐಎಎಸ್ ಅಧಿಕಾರಿ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ. ತಿಮ್ಮೇಗೌಡರ ಅನುಗಾಲದ ಜೀವನಾಡಿ ಗೆಳೆಯರಾಗಿದ್ದ ಕೆ.ವಿ.ಆರ್. ಟ್ಯಾಗೂರ್ ಕಲೆ, ಸಾಹಿತ್ಯ, ಜಾನಪದ, ಸಂಗೀತದಂತಹ ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ಅದಮ್ಯ ಆಸಕ್ತಿ ಮತ್ತು ಪ್ರೀತಿಯಿಟ್ಟುಕೊಂಡಿದ್ದರು.

ನಮ್ಮ ಟಿ. ತಿಮ್ಮೇಗೌಡರ ಜೊತೆಗೆ ನಮ್ಮೂರಿಗೆ ಹಲವಾರು ಬಾರಿ ಭೇಟಿ ಕೊಟ್ಟಿದ್ದ ಟ್ಯಾಗೂರ್ ಅವರು, ಆದಿಚುಂಚನಗಿರಿ ಮಠದ ನಿಕಟವರ್ತಿಗಳಾಗಿದ್ದರು. ಕೃಷಿಕ್ ಸರ್ವೋದಯ ಫೌಂಡೇಷನ್ ಮತ್ತು ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಜೊತೆಗೆ ಒಡನಾಟವಿಟ್ಟುಕೊಂಡಿದ್ದರು. ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯ ಹಲವಾರು ಸಾಂಸ್ಕೃತಿಕ ಮತ್ತು ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಪಾಲ್ಗೊಂಡು ನನ್ನ ಅಣ್ಣ ಜೀವನ್ಮುಖಿ ಸುರೇಶ್ ಮತ್ತು ನನ್ನನ್ನು ತುಂಬಾ ಪ್ರೊತ್ಸಾಹಿಸುತ್ತಿದ್ದರು. ವೃತ್ತಿಯಿಂದ ವಿಶ್ರಾಂತರಾದರೂ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕೆ.ಎ.ಎಸ್. ಮತ್ತು ಎ.ಎ.ಎಸ್. ಪರೀಕ್ಷಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಯಾವುದೇ ಹಮ್ಮು ಬಿಮ್ಮು ಇಲ್ಲದ ಸಜ್ಜನಿಕೆಯ ಮನೋಭಾವದ ಜೀವನೋತ್ಸಾಹಿಯಾಗಿದ್ದರು.

ಕೆ.ವಿ.ಆರ್. ಟ್ಯಾಗೂರ್ ಎಂಬ ಹೆಸರಿದ್ದ ಅವರನ್ನು ಉತ್ತರ ಭಾರತದ ಕಡೆಯ ಐಪಿಎಸ್ ಅಧಿಕಾರಿ ಎಂದೇ ನಾನು ಭಾವಿಸಿದ್ದೆ. ಹಾಗೆಯೇ, ತುಂಬಾ ಜನರು ಸಹ ಭಾವಿಸಿದ್ದರು. ಜೊತೆಗೆ, ಅವರ ಹೆಸರಿನ ಬಗ್ಗೆ ಎಲ್ಲರಿಗೂ ಕುತೂಹಲವೂ ಇತ್ತು. ಇವರು ಖ್ಯಾತ ಕವಿ ರವೀಂದ್ರನಾಥ್ ಟಾಗೋರ್ ಅವರ ಕುಟುಂಬದ ಮೂಲದವರಿರಬಹುದೆಂದು. ಆದರೆ, ಅವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಹಳ್ಳಿಯವರು. ಸ್ವಾತಂತ್ರ್ಯ ಹೋರಾಟಗಾರರೂ ಶಾಸಕರೂ ಆಗಿದ್ದ ಅವರ ತಂದೆ ವೀರಣ್ಣಗೌಡರು ರಾಷ್ಟ್ರಕವಿ ರವೀಂದ್ರನಾಥ್ ಟ್ಯಾಗೋರ್ ಅವರ ಮೇಲಿನ ಅಭಿಮಾನದ ದ್ಯೋತಕವಾಗಿ ತಮ್ಮ ಮಗನಿಗೆ ‘ಟ್ಯಾಗೂರ್’ ಎಂಬ ಹೆಸರನ್ನು ಇಟ್ಟಿದ್ದರು. ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಚದುರಿ ಹೋಗಿದ್ದ ಮಲೆನಾಡಿನ ಜನರನ್ನು ಸಂಘಟಿಸಿ, ಆಗಾಗ ಅವರೆಲ್ಲರನ್ನೂ ಒಂದೆಡೆ ಸೇರಿಸಿ ಸಾಂಸ್ಕೃತಿಕ ಹಬ್ಬದ ಮೂಲಕ ಸಂಭ್ರಮಿಸುವ ಕೆಲಸ ಮಾಡುತ್ತಿದ್ದರು. ಯುವಜನರ ಪಾಲಿಗಂತೂ ಸ್ಫೂರ್ತಿಯ ಚಿಲುಮೆಯಾಗಿದ್ದರು. ಇಂತಹ ಕ್ರಿಯಾಶೀಲ ವ್ಯಕ್ತಿ ಕೋವಿಡ್ ಮಾರಿಗೆ ಬಲಿಯಾದದ್ದು ಬಹಳ ನೋವಿನ ಸಂಗತಿ. ಅವರ ಹಸನ್ಮುಖಿ ವ್ಯಕ್ತಿತ್ವ ಮನದ ಸ್ಮೃತಿಪಟಲದಲ್ಲಿ ಹಸಿರಾಗಿದೆ.

*ಹೋಗಿ ಬನ್ನಿ ಸರ್…ಅಂತಿಮ ನಮನಗಳು….*

*ಟಿ. ಸತೀಶ್ ಜವರೇಗೌಡ, ಮಂಡ್ಯ*

ಪೂರ್ವ ಮುಂಗಾರು ಭಿತ್ತನೆಗೆ ಮಳೆ ಕೊರತೆ, ಆತಂಕದಲ್ಲಿ ರೈತರು

ತುರುವೇಕೆರೆ: ತಾಲ್ಲೂಕಿನ ಪೂರ್ವ ಮುಂಗಾರು ಭಿತ್ತನೆಗೆ ಹಾಗು ಈಗಾಗಲೇ ಭಿತ್ತನೆ ಮಾಡಿದ ಬೀಜ, ಸರಿಯಾಗಿ ಮೊಳೆಕೆಯಾಗದೆ ರೈತರು ಮುಗಿಲು ನೋಡುವಂತಾಗಿದೆ.

ತಾಲ್ಲೂಕಿನಾದ್ಯಂತ ಏಪ್ರೀಲ್ ತಿಂಗಳಲ್ಲಿ ವಾಡಿಕೆ ಮಳೆ44 ಆದರೆ ವಾಸ್ತವಿಕ ಮಳೆ 96 ಮಿ.ಮೀಟರ್ ಉತ್ತಮ ಮಳೆಯಾದ್ದರಿಂದ ರೈತರು ತಮ್ಮ ಭೂಮಿ ಹಸನು ಮಾಡಿಕೊಂಡರು.

ಇದಕ್ಕೂ ಮುನ್ನಾ ರೈತರು ಪೂರ್ವ ಮುಂಗಾರು ಭಿತ್ತನೆ ಬೀಜಗಳಾದ ಹೆಸರು, ಅಲಸಂಡೆ, ಉದ್ದು, ತೊಗರಿ ಆಗೆಯೇ ಎಳ್ಳು, ಜೋಳದ ಬೀಜ ಮತ್ತು ರಸ ಗೊಬ್ಬರಗಳನ್ನು ಸಂಗ್ರಹಿಸಿಕೊಂಡಿದ್ದರು.
ಏಪ್ರೀಲ್ ಕೊನೆಯಲ್ಲಿ ಮತ್ತು ಮೇ ತಿಂಗಳ ಆರಂಭದಲ್ಲಿ ತಾಲ್ಲೂಕಿನ ಅಲ್ಲಲ್ಲಿ ಸಾಧಾರಣ ಮಳೆಯಾಗಿತು. ಭೂಮಿ ಹದ ಮಾಡಿಕೊಂಡಿದ್ದ ರೈತರು ಪೂರ್ವ ಮುಂಗಾರು ಭಿತ್ತನೆಗೆ ಮುಂದಾದರು.

ಬಾಣಸಂದ್ರ, ಲೋಕಮ್ಮನಹಳ್ಳಿ, ಮಾದಿಹಳ್ಳಿ, ಅರಳೀಕೆರೆ, ಎ.ಹೊಸಹಳ್ಳಿ, ಗುರುವಿನಮಠ, ಕಡೆಹಳ್ಳಿ, ಅರೆಮಲ್ಲೇನಹಳ್ಳಿ, ತಂಡಗ, ಮಾವಿನ, ಮಾಯಸಂದ್ರ ವ್ಯಾಪ್ತಿಯ ಮುತ್ತಗದಹಳ್ಳಿ, ಭೈತರ ಹೊಸಹಳ್ಳಿ, ಗುಡ್ಡೇನಹಳ್ಳಿ ಸೇರಿದಂತೆ ಶೇ.40 ರಷ್ಟು ಭಿತ್ತನೆಯಾಗಿದೆ.

ದಂಡಿನಶಿವರ ಹೋಬಳಿಯ ಹಡವನಹಳ್ಳಿ, ಅಮ್ಮಸಂದ್ರ, ಕೊಂಡಜ್ಜಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು, ದಬ್ಬೇಘಟ್ಟ, ಕಸಬಾ, ಮಾಯಸಂದ್ರದ ಹೋಬಳಿಯ ಕೆಲವೆಡೆ ಭೂಮಿ ಹದ ಮಾಡಿಕೊಂಡಿದ್ದು ಮಳೆ ಇಲ್ಲದೆ ಭಿತ್ತನೆಯೇ ಆಗಿಲ್ಲ.
ಏಪ್ರೀಲ್ 27 ರಿಂದ ಮೇ.11ರವರೆಗೆ ಭರಣಿ ಮಳೆ ಬೀಳುವುದರಿಂದ ಈ ಅವಧಿಯೊಳಗೆ ಪೂರ್ವ ಮುಂಗಾರು ಭಿತ್ತನೆ ಮಾಡಬೇಕು. ಒಂದು ವೇಳೆ ತಡವಾಗಿ ಭಿತ್ತನೆ ನಡೆಸಿದರೆ ಇಳುವರಿ ಸರಿಯಾಗಿ ಬರುವುದಿಲ್ಲ. ಜೊತೆಗೆ ಮುಂಗಾರು ಭಿತ್ತನೆಗೂ ಅಡಚಣೆಯಾಗುತ್ತದೆ. ಇನ್ನು ಕೆಲವೆಡೆ ಮೊಳಕೆಯೊಡೆದಿರುವ ಹೆಸರು ತಾಕಿಗೆ ವಾರದೊಳಗೆ ಮಳೆ ಬರದಿದ್ದರೆ ಬೆಳೆ ಓಣಗುವ ಆತಂಕದಲ್ಲಿ ತಾಲ್ಲೂಕಿನ ರೈತರಿದ್ದಾರೆ.

ತಾಲ್ಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು 24, ಅಲಸಂಡದೆ16.8, ಮತ್ತು ತೊಗರಿ 8 ಕ್ವಿಂಟಾಲ್ ಭಿತ್ತನೆ ಬೀಜ ದಾಸ್ಥಾನಿದೆ. ಇವುಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.
ಕಸಬಾ ವ್ಯಾಪ್ತಿಯಲ್ಲಿ ಹೆಸರು ತಾಕೀನ ಗುರಿ 370 ಹೆಕ್ಟೇರ್, ಭಿತ್ತನೆಯಾಗಿರುವುದು 45, ಅಲಸಂದೆ ಗುರಿ 450 ಭಿತ್ತನೆ28, ಉದ್ದು 15 ಗುರಿ, 5 ಭಿತ್ತನೆ ಹೆಕ್ಟೇರ್.

ಮಾಯಸಂದ್ರ ಹೆಸರು ತಾಕು 350 ಗುರಿ, ಭಿತ್ತನೆ 40, ಅಲಸಂದೆ ಗುರಿ 450 ಭಿತ್ತನೆ 25, ಉದ್ದು ಗುರಿ15 ಭಿತ್ತನೆ 5 ಹೆಕ್ಟೇರ್ .
ದಂಡಿನಶಿವರ ಹೆಸರು ತಾಕಿನ ಗುರಿ 250 ಭಿತ್ತನೆ100, ಅಲಸಂದೆ ಗುರಿ 150 ಭಿತ್ತನೆ20, ಉದ್ದು ಗುರಿ 15 ಭಿತ್ತನೆ 5 ಹೆಕ್ಟೇರ್.
ದಬ್ಬೇಘಟ್ಟ ಹೆಸರು ತಾಕಿನ ಗುರಿ 280 25 ಹೆಕ್ಟೇರ್ ಭಿತ್ತನೆ, ಅಲಸಂದೆ ಗುರಿ 300 ಭಿತ್ತನೆ 20 ಹೆಕ್ಟೇರ್, ಉದ್ದು ಗುರಿ 15 ಭಿತ್ತನೆಯಾಗಿರುವುದು 5 ಹೆಕ್ಟೇರ್ ಪ್ರದೇಶವಾಗಿದೆಂದು ಇಲಾಖಾ ಮೂಲಗಳು ತಿಳಿಸಿವೆ.

ಪೂಜಾ.ಬಿ, ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕರು

  • ‘ಪೂರ್ವ ಮುಂಗಾರು ಭಿತ್ತನೆಗೆ ಅವಕಾಶ ಇದೆ. ಈ ಸಲ ರೈತ ಸಂಪರ್ಕ ಕೇಂದ್ರಗಳಿಂದ ಭಿತ್ತನೆ ಬೀಜ ಪಡೆದವರಿಗೆ ಮುಂದಿನ ಬಾರಿ ಭೀಜ ವಿತರಣೆ ಮಾಡಲಾಗದು. ಆಗಾಗಿ ರೈತರು ಬೆಳೆದ ಬೀಜವನ್ನೇ ಸಂಗ್ರಹಿಸಿಟ್ಟುಕೊಂಡು ಭಿತ್ತನೆ ಮಾಡಬೇಕು.’

ವೆಂಕಟಯ್ಯ, ರೈತ

  • ‘ಹೆಸರು ಕಾಳು, ಗೊಬ್ಬರ, ಉಳುಮೆಗೆಂದು ಸಾವಿರಾರು ರೂಪಾಯಿಗಳನ್ನು ಖರ್ಜು ಮಾಡಿ ಭಿತ್ತನೆ ಮಾಡಿದ್ದೇನೆ. ಇನ್ನೂ ಬೀಜ ಸರಿಯಾಗಿ ಹುಟ್ಟಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಮಳೆ ಬರದಿದ್ದರೆ ಕಷ್ಟವಾಗುತ್ತದೆ’ .