Wednesday, May 6, 2026
Google search engine
Home Blog Page 151

ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ಕೊರೊನಾ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.‌ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಅವರಿಗೆ ಕೊರೊನಾ ಸೋಂಕು ತಗುಲಿದೆ.

ದೇವೇಗೌಡ ಅವರಿಗೆ ಕೆಲವು ದಿನಗಳಿಂದ ಶೀತದ ಲಕ್ಷಣವಿತ್ತು. ದೇವೇಗೌಡ ಹಾಗೂ ಚೆನ್ನಮ್ಮ ಅವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.

‘ಬುಧವಾರ ಬೆಳಿಗ್ಗೆ ಪರೀಕ್ಷಾ ವರದಿಗಳು ಬಂದಿದ್ದು, ಇಬ್ಬರಿಗೂ ಕೋವಿಡ್ ದೃಢಪಟ್ಟಿದೆ.

ದೇವೇಗೌಡರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿದ್ದಾರೆ. ಚೆನ್ನಮ್ಮ ಅವರನ್ನು ಮನೆಯಲ್ಲೇ ಇದ್ದಾರೆ ಎಂದು ದೇವೇಗೌಡರ ಕುಟುಂಬದವರು ತಿಳಿಸಿದ್ದಾರೆ.

ಪ್ರಾಣಿ, ಪಕ್ಷಿ ನಮ್ಮಂತೆ ಅಲ್ವಾ ಅಪ್ಪಾಜಿ…!

ತುಳಸೀತನಯ

ಈಚೆಗೆ ಒಂದ್ಸಾರಿ ಹೀಗೆ ಶಯನಾ ಕೋಣೆಯಲ್ಲಿ‌ ನಾನು ನನ್ನ ಮಗ ಹಿತವ್ ಆರ್ಯನ್ ಮಲಗಿದ್ದಾಗ ಇದ್ದಕ್ಕಿದ್ಹಾಗೆ ಅಪ್ಪಾಜಿ ಒಂದು ಪ್ರಶ್ನೆ ಕೇಳ್ತೀನಿ ಉತ್ತರ ಹೇಳ್ರಿ ಅಂದಾ.. ಆಯ್ತು ಹೇಳು ಕಂದಾ ಅಂತಾ ನಾನು ಅಂದೆ. ಅದಕ್ಕವನು ಅಪ್ಪಾಜಿ ಪ್ರಾಣಿ, ಪಕ್ಷಿಗಳು ಊಟ, ನೀರು ಎಲ್ಲಾ ಎಲ್ಲಿ ತಿಂತಾವೆ, ಕುಡಿತಾವೆ ಅಂದೆ. ಅದಕ್ಕೆ ನಾನು ಸಿಕ್ರೆ ತಿಂತಾವೆ, ಕುಡಿತವೆ ಇಲ್ವಾ ಅಂಗೇ ಸತ್ತೋಗ್ತವೇ ಅಂದೆ. ಆಗಂದಾಕ್ಷಣ ಅಯ್ಯೋ ಛೇ ಅಂದಾ. ಹೀಗ್ಯಾಕೆ ಇದೆಲ್ಲಾ ಕೇಳ್ತಿಯ ಮಗನೇ ಅಂದಿದಕ್ಕೆ ಸುಮ್ಮನೆ ಕೇಳ್ದೆ ಅಪ್ಪಾಜಿ ಎಂದವನು ಕ್ಷಣಾರ್ಧದಲ್ಲಿ ನಿದ್ದೆಗೆ ಜಾರಿದ್ದ.

ಆದಾದ ಎರಡ್ಮೂರು ದಿನದಲ್ಲಿ ಅಪ್ಪಾಜಿ ನನಗೆ ಸಣ್ಣ ಬಾಕ್ಸ್ ತ‌ಂದು ಕೊಡಿ ಎಂದ. ನಾನು ಏನುಕಪ್ಪಾ ಅಂತ ಅಂದೆ. ಅಪ್ಪಾಜಿ ನೀವು ಮೊನ್ನೆ ಹೇಳುದ್ರಲ್ಲ ಪ್ರಾಣಿ ಪಕ್ಷಿಗೆ ನೀರು ಸಿಗೋಲ್ಲ ಅಂತ ಅದ್ಕೆ ಮನೆ ಅಕ್ಕ, ಪಕ್ಕ, ಮೇಲೆ ದಿನಾ ನೀರು ತುಂಬಿ ಇಡ್ತೀನಿ ಅವು ಬಂದು ಕುಡಿದುಕೊಂಡು ಹೋಗ್ತಾವೆ ಅಂದ. ಈ ಮಾತಿಗೆ ಅರೆಕ್ಷಣ ನನಗೆ ಮಾತೆ ಬರಲಿಲ್ಲ. ಆಯ್ತು ಅಂತ ಮರುದಿನ ಎರಡು ಮಡಿಕೆಗಳನ್ನ ತಂದು ಕೊಟ್ಟೆ.

ಸಣ್ಣದೊಂದು ನಾಯಿ ಮರಿ, ಕೋತಿ, ಬೆಕ್ಕು, ಕೋಳಿ ಕಂಡ್ರೆ ಸಾಕು ಮನೆಯೊಳಕ್ಕೆ ಓಡಿ ಹೋಗಿ ಬಾಗಿಲು ಹಾಕಿಕೊಳ್ಳುವ ನಮ್ಮ ಹಿತವ್ ಆರ್ಯನ್ ಗೆ ಅದೇ ಪ್ರಾಣಿಗಳ ಬಗ್ಗೆ ಇಷ್ಟೋಂದು ಕನಿಕರ ಇದೆ ಅನ್ನೋದು ನನಗೆ ಗೊತ್ತಾಗಿದ್ದು ಇವಾಗ್ಲೆ.

ಇದಕ್ಕೂ ಮುಂಚೆ ನಮ್ಮ ಮನೆ ಅತ್ರ ಒಂದು ಕಾಲಿಲ್ಲದ ಮೂರು ಕಾಲಿನ ನಾಯಿ ಬರ್ತಾ ಇತ್ತು. ಅದು ಬಂದು ಮನೆ ಗೇಟ್ ಅತ್ರ ನಿಂತ್ರೆ ಸಾಕು, ಕಾಂಪೌಂಡ್ ನಲ್ಲಿ ಆಟ ಆಡುತ್ತಿದ್ದವ ಕಿರುಚಿಕೊಂಡು‌ ಮನೆ ಒಳಗೆ ಬಂದು ಬಾಗಿಲು ಹಾಕೊಂಡು ಅಪ್ಪಾಜಿ ನಾಯಿ ಬಂದಿದೆ ಅಂತ ಅವಿತುಕೊಳ್ಳೋನು. ಒಂದಿನ ನಾನು, ನಾಯಿ ಏನು ಮಾಡೋಲ್ಲ ಪಾಪ ಅದಕ್ಕೆ ಹೊಟ್ಟೆ ಹಸಿದಿರಬೇಕು ಅದ್ಕೆ ಮನೆ ಅತ್ರ ಬಂದಿದೆ ಎಂದು ಅವನ ಕಣ್ಣೆದುರೇ ನಾಯಿಗೆ ಅನ್ನ ಹಾಕಿದೆ.

ಅದಾದ ಒಂದಷ್ಟು ದಿನ ನಾಯಿ ಮನೆ ಕಡೆ ಎಡೆತಾಕಲಿಲ್ಲ. ಆಮೇಲೆ ಒಂದಿನ ತಡ ರಾತ್ರಿ ಮತ್ತೆ ಗೇಟ್ ಬಳಿ ಇದ್ದಕ್ಕಿದ್ದಾಗೆ ಕಾಣಿಸಿತು. ಆಗ ಮಗ ಅಂದ ಅಪ್ಪಾಜಿ ನಾಯಿ ಬಂದಿದೆ ಊಟ ಹಾಕೋಣ ಅಂದಾ..‌
ಸರಿ‌ ಊಟ ಹಾಕೋಕೆ ತಡರಾತ್ರಿ ಆಗಿದ್ರಿಂದ ಅನ್ನ ಎಲ್ಲಾ ಕಾಲಿಯಾಗಿತ್ತು.‌ ಮನೆಯಲ್ಲಿದ್ದ ಬಿಸ್ಕೇಟ್ ನ್ನ ತಗೊಂಡು ಹೋಗಿ ಹಾಗ್ದೆ‌. ಆ ಮೇಲೆ ಒಂದು ಸಣ್ಣ ಪ್ಲಾಸ್ಟಿಕ್ ಡಬ್ಬದಲ್ಲಿ ಕುಡಿಯೋಕೆ ನೀರು ಕೂಡ ಇಟ್ಟೆ. ಇದನ್ನೆಲ್ಲಾ ನನ್ನ ಜೊತೆಗಿದ್ದ ಇವ್ನು ಗಮನಸಿಲ್ಲ‌ ಅಂತ ಅಂದುಕೊಂಡು ಸುಮ್ಮನಾಗಿ ಬಂದು ಮಲ್ಕೊಂಡ್ವಿ.

ಆಮೇಲೆ ನಾಯಿ ಮರು ದಿನ ಮನೆ ಹತ್ರ ಬಂದ ತಕ್ಷಣ ಅಪ್ಪಾಜಿ ನಾಯಿಗೆ ಊಟ ಹಾಕ್ತಿನಿ ಅಂತ ಅಡಿಗೆ ಮನೆಗೆ ಹೋದ. ಹೋದವ್ನು ಅಪ್ಪಾಜಿ ಅಮ್ಮಾ ಇನ್ನೂ ಅಡುಗೆ ಮಾಡ್ತಿದೆ ಅದ್ಕೆ ನನಗೆ ತಂದಿರೋ ಬಿಸ್ಕೇಟ್ ನೇ ಹಾಕ್ತೀನಿ ಅಂತ ತಂದು ಹಾಕಿದ. ಸರಿ ಅಂತ ನಾನೂ ಸುಮ್ಮನಾದೆ.

ಅದಾದ ಮೂರ್ನಾಲ್ಕು ದಿನದ ಮೇಲೆ ಅಪ್ಪಾಜಿ ಬಿಸ್ಕೇಟ್ ನ ಇನ್ಮೇಲೆ ಜಾಸ್ತಿ ತಗೊಂಡು ಬಾ ಎಂದ. ನಾನು ಆಯ್ತು ಅಂತ ಸುಮ್ಮನಾದೆ.‌
ಅವ್ನು ಹೇಳುದ್ನಲ್ಲ ಅಂತ ಮರುದಿವಸ ಮಕ್ಳು ತಿಂದುಕೊಳ್ಳಲಿ ಅಂತಾ ಒಂದಷ್ಟು ವೆರೈಟಿ ಬಿಸ್ಕೇಟ್ ಗಳನ್ನ ತಗೊಂಡು ಬಂದು ಕೊಟ್ಟೆ.. ಮಗನಿಗೆ ಅವನ್ನೆಲ್ಲಾ ನೋಡಿ ಇನ್ನಿಲ್ಲದ ಖುಷಿ.

ಸರಿ ನಾನು ಸುಮ್ಮನಾದೆ. ಅದಾಗಿ ಎರಡು ದಿನ ಕಳೆದ ಮೇಲೆ ನಾನು ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರಿ ಸುಮಾರು 8 ಗಂಟೆ ಇರ್ಬೋದು. ನಾನು ದಿನಾ ಬಂದ ತಕ್ಷಣ ಮಗ ನನ್ನ ಅಪ್ಪಿಕೊಂಡು “ನಮ್ಮ ಅಪ್ಪಾಜಿ, ನಮ್ಮ ಅಪ್ಪಾಜಿ” ಎಂದು ಅವನದ್ದೆ ಆದ ಶೈಲಿಯಲ್ಲಿ ತಬ್ಬಿ‌ಮುದ್ದಾಡ್ತಾನೆ. ಅದು ದಿನ ರೂಢಿ ಕೂಡ ಮಾಡ್ಕಂಡವ್ನೆ. ಸರಿ ನಾನು ಮಾಮೂಲಾಗಿ ಬಿಡು ಮಗ್ನೆ ಸಾಕಾಗಿದೆ ಇವತ್ತು ಅಂತ ಅಪ್ಪಿದ್ದ ಕೈಗಳನ್ನ ಬಿಡಿಸಿಕೊಂಡು ಸೋಫಾ ಮೇಲೆ ಕುಳಿತೆ. ಆಮೇಲೆ ನನ್ನ ತೊಡೆ ಹೇರಿ ಕುಳಿತ ಅವನು ಅಪ್ಪಾಜಿ ಬಿಸ್ಕೇಟ್ ಖಾಲಿಯಾದ್ವು ತರಲಿಲ್ಲವಾ ಅಂದಾ… ನಾನು ಬೇಸರದಲ್ಲೆ ಮೊನ್ನೆ ಅಷ್ಟೋಂದು ತಂದುಕೊಟ್ನಲ್ಲಮ್ಮ ಅಷ್ಟು ಬೇಗ ಖಾಲಿ ಮಾಡಿದ್ಯಾ ಅಂದೆ. ಅದ್ಕೆ ಅವನು ಹೂ ಅಪ್ಪಾಜಿ ನಾನು ಸ್ವಲ್ಪ ತಿಂದೆ. ಇನ್ನು ಸ್ವಲ್ಪ ಅಮ್ಮನಿಗೆ ಗೊತ್ತಾಗದ ಹಾಗೆ ರಾಮನಿಗೆ ಕೊಟ್ಟೆ ಅಂದ. ಅರೇ ಇವ್ನ ಅದ್ಯಾರೋ ಇಷ್ಟು ದಿ‌‌ನ ಇಲ್ದೆ ಇರೋ ರಾಮ ಅಂತ ನಾನು ಆಶ್ಚರ್ಯವಾಗೆ ಕೇಳ್ದೆ. ಅದೆ ಅಪ್ಪಾಜಿ ನಮ್ಮ‌ಮನೆ ಗೇಟ್ ಹತ್ರ ಬರುತ್ತಲ್ಲ ಒಂದು ಕಾಲಿಲ್ಲದ ನಾಯಿ ಅದುಕ್ಕೆ ನಾನು ರಾಮ ಅಂತ ಹೆಸರಿಟ್ಟಿದ್ದೀನಿ. ಅದು ಬಂದಾಗೆಲ್ಲ ಬಿಸ್ಕೇಟ್ ಹಾಕ್ದೆ ಅಂದಾ… ಈ ಮಾತಿಗೆ ನಾನು ಏನ್ ಹೇಳ್ಳಿ.‌…! ಸರಿ ಬಿಡು ಅಂತ ಸುಮ್ಮನಾದೆ.

ಆ ಮೇಲೆ ಕೆಲ ದಿನಗಳ ನಂತರ ಹೀಗೆ ಶಯನ ಕೊಠಡಿಯಲ್ಲಿ ಮಲಗಿದ್ದಾಗ ಮುಂಜಾನೆ ಸುಮಾರು 6 ಗಂಟೆ ಸಮಯದಲ್ಲಿ ಒಂದು ಬೆಕ್ಕಿನ ಮರಿ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಮಲಗಿದ್ದ ನನ್ನ ಎಬ್ಬಿಸಿ ಅಪ್ಪಾಜಿ ಯಾವ್ದೋ ಬೆಕ್ಕು ಬಂದಿದೆ. ಬಡಿದುಕೊಳ್ತಿದೆ ಎದ್ದೇಳು ಅಪ್ಪಾಜಿ ಎಂದ. ಹೋಗುತ್ತೆ ಬಿಡು ಕಂದಾ ಅಂದ್ರು ಕೇಳ್ದೆ ಬಾರಪ್ಪಾಜಿ ಅದನ್ನ ನೋಡಣ ಅಂತ ಹಠ ಹಿಡಿದು ಬಾಗಿಲು‌ತೆರೆಸಿದ. ಆ ಬೆಕ್ಕು ಮನೆ ಗೇಟಿನ ಮುಂದಿಯೇ ಕುಳಿತು ‘ಮಿಯಾವ್’ ಎಂದು ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಹೋಗುತ್ತೆ ಬಾ ಎಂದು ಅವ್ನ ಒಳ‌ ಕರ್ದೆ. ಅದಕ್ಕವನು ಅಪ್ಪಾಜಿ ಅದಕ್ಕೆ ಹೊಟ್ಟೆ ಹಸಿದಿರಬೇಕು ಏನಾರ ಹಾಕ್ಲಾ ಅಂತ ಕೇಳ್ದ. ನಾನು ಅದಕ್ಕೆ ಸಮ್ಮತಿಸಿದೆ. ದಿಢೀರ್ ಅಂತ ಮನೆಯೊಳಗೆ ಓಡಿ ಹೋಗಿ ಬಿಸ್ಕೇಟ್ ತಂದು ದೂರನೇ ನಿಂತು ಅದು ತಿನ್ನೋ ಅಷ್ಟು ಹಾಕಿದ. ಅದು ತಿಂದ ಮೇಲೆ ಬಡಿದುಕೊಳ್ಳೋದು ನಿಲ್ಲಿಸಿ ಎಲ್ಲೋ ಹೋಯ್ತು.
ಹೀಗೆ ಆ ಬೆಕ್ಕು ಹಸಿದಾಗೆಲ್ಲ ಇವ್ನ ಹುಡಿಕೊಂಡು ಬಂದು ಇವ್ನು ಹಾಕೋ ಬಿಸ್ಕೇಟ್, ಹಾಲು ಅನ್ನ ತಿಂದು ಹೋಗ್ತಾಯಿತ್ತು. ಇದ್ದಕ್ಕಿದ್ಹಾಗೆ ಅದೂ ಒಂದಿನ ಮಾಯ ಆಯ್ತು ಬರಲೇ ಇಲ್ಲ.

ನನಗೆ ಆಶ್ಚರ್ಯ ಆಗ್ತಿರೋದು ಏನು ಅಂದ್ರೆ ಈಗ್ಲೂ ನಾಯಿ, ಬೆಕ್ಕು ಇತರೇ ಸಾಕು ಪ್ರಾಣಿ ಕಂಡ್ರೆ ಮಾರುದ್ದ ದೂರ ಓಡಿ ಹೋಗಿ ನಿಲ್ತಾನೆ. ಅವು ಕಂಡ್ರೆ ಸಾಕು ಅಧೈರ್ಯ ಪಟ್ಕೋತಾನೆ. ಆದ್ರೆ ಅವನಲ್ಲಿರೋ ಪ್ರಾಣಿ, ಪಕ್ಷಿ ಪ್ರೀತಿ ಮಾತ್ರ ಅಧಮ್ಯ.

ಬೇಸಿಗೆ ಪ್ರಾರಂಭ ಆಗಿದೆ ಅಂತ ಈಗ ಮನೆಯ ಚಾವಣಿ ಯಲ್ಲಿ ದಿನ ಪ್ರಾಣಿ, ಪಕ್ಷಿಗೆ ಅಂತಾ ಅವನೇ ಸ್ವತಃ ನೀರು ತುಂಬಿಡ್ತಿದಾನೆ.

ಈಚೆಗೆ ಪಕ್ಕದ ಮನೆಯವರ ಕಾಂಪೌಂಡ್ ನಲ್ಲಿ ಬಗೆಬಗೆಯ ಗಿಡ ಹಾಕಿದ್ದನ್ನ ನೋಡಿ ಕೊಂಡು ಬಂದವ್ನೆ. ಅವಾಗಿಂದ ಅಪ್ಪಾಜಿ ಶಾರ್ವರಿ ಅಕ್ಕ(ಇವ್ನಿಗಿಂತ 3 ವರ್ಷ ದೊಡ್ಡವಳು) ಅವ್ರ ಮನೆ ಕಾಂಪೌಂಡ್ ನಲ್ಲಿ ಎಷ್ಟೋಂದು ಗಿಡ ಬೆಳೆಸಿದೆ ನಂಗೂ ಪಾಟ್ ತಂದು ಕೊಡು ನಾನು ಒಂದಷ್ಟು ಗಿಡ ಬೆಳುಸ್ತೀನಿ ಅಂತಾ ಕೂತವನೆ. ಅದಕ್ಕೆ ಅವ್ರಮ್ಮ ಮಳೆಗಾಲ ಬರಲಿ ತಂದು ಕೊಡ್ತೀವಿ ಅಂತ ಅಂದಮೇಲೆ ಸಮಾಧಾನ ಆಗಿರೋ ಅವನು‌ ನೀರಿನ ಬಾಟಲಿಗಳನ್ನ ಕುಯ್ದು ಅದ್ರಲ್ಲಿ ಗಿಡ ನೆಡ್ತೀನಿ ಅಂತ ಅಣಿ ಮಾಡ್ಕೊತಿದಾನೆ.

ಇದನ್ನ ಓದಿದ ಮೇಲೆ ಇದೇನಪ್ಪ ಇವ್ನು ಮಗನ ಬಗ್ಗೆ‌ ಇಷ್ಟೊಂದು ಹೊಗಳಿದ್ದಾನೆ. ತೋರ್ಪಡಿಕೆಗೆ ಬರೆದಿದ್ದಾನೆ ಅಂತ ಅನಿಸ್ತಿರಬೋದು ನಿಮ್ಗೆ. ದಯವಿಟ್ಟು ಕ್ಷಮಿಸಿ. ನಾನು ಆ ಉದ್ದೇಶದಿಂದ ಬರೆದದ್ದಲ್ಲ. ಕೇವಲ ಆರೂವರೆ ವರ್ಷದ ಮಗು ಹಿತವ್ ಆರ್ಯನ್ ಮನಸ್ಸಲ್ಲಿ ಇಷ್ಟೆಲ್ಲಾ ಆಲೋಚನೆಗಳಿವೆಯಲ್ಲ. ಅರೇ ನನಗೇನಾಗಿದೆ..? ಇಂತಾ ಆಲೋಚನೆ ನನಗ್ಯಾಕೆ ಬರಲಿಲ್ಲವಲ್ಲಾ ಅಂತ ನನ್ನ ಬಗ್ಗೆ ನಂಗೇ ಸ್ವಲ್ಪ ನಾಚಿಕೆ ಅನಿಸ್ತು.
ಹಾಗೆ ಈ ಪುಕ್ಕಲು ಸ್ವಭಾವದನಾದ ಅವ್ನು ಏನೆಲ್ಲಾ ಮನಸ್ಸಿನಲ್ಲಿ ಯೋಚಿಸ್ತಾನೆ ಅಂತ ಒಳಗೊಳಗೆ ನನಗೂ ಖುಷಿ, ಹೆಮ್ಮೆ ಒತ್ತಟ್ಟಿಗಾಯ್ತು.

ಆಮೇಲೆ ನನಗಸ್ಸಿದ್ದು ಒಬ್ಬ ತಾಯಿಯಾದವಳು ಮಕ್ಕಳನ್ನ ಹೇಗೆ ಬೇಕಾದರೂ ತಿದ್ದಬಹುದು ಎಂದು. ಸಮಾಜಕ್ಕೆ ಮಕ್ಕಳ ಮುಖೇನ ಒಳ್ಳೆ ಪ್ರಜೆಯನ್ನ ಕೊಡುಗೆ ನೀಡಬಹುದು. ಇವ್ನು ಈ ಚಿಕ್ಕ ವಯಸ್ಸಿನಲ್ಲಿ ಅಷ್ಟು ದೊಡ್ಡ ಆಲೋಚನೆ ಬರಲು ಅವನ ಅಮ್ಮ ಅಂದ್ರೆ ನನ್ನ ಮಡದಿ ಕಾರಣ ಅಂತ ಅನಿಸ್ತು.

ದಿನ ಒಂದಲ್ಲಾ ಒಂದು ಒತ್ತಡದ ಕೆಲಸದಲ್ಲಿರೋ ನಾನು ಇವೆಲ್ಲಾ ಎಲ್ಲಿ ಹೇಳಿಕೊಡ್ಲಿ. ಅವನಮ್ಮ ಹೀಗೆ ಮಕ್ಕಳನ್ನ ತಿದ್ದಿ ತೀಡ್ತಿದಾಳೆ ಅಂತ ನಂಗೂ ಈಗೀಗಾ ಅನಿಸ್ತಿದೆ. ನನ್ನ ಜೀವನಕ್ಕೆ ಅವಳ ಕೊಡುಗೆ ಅಪಾರ ಅನ್ನೋದು ನಾನು ಹೇಳೋ ಹಾಗೆ ಇಲ್ಲ.

ಇದೆಲ್ಲ ಹೊಗಳಿಕೆ ಮಾತಲ್ಲ. ಒಂದೊಳ್ಳೆ‌ ಆಲೋಚನಾ ಬರವಣಿಗೆ. ಹಂಚಿಕೊಳ್ಳಬೇಕು ಅನ್ಸತು ಬರೆದೆ. ತಪ್ಪೆನಿಸಿದರೆ ಕ್ಷಮೆ ಇರಲಿ.

— ಚಿದು…✍️✍️

ಹೋಳಿ

0

ಎಲ್ಲೆಲ್ಲೂ ಬಣ್ಣದ ಓಕುಳಿ

ಹಸಿರು ಹಾಸಿನೊಳಗಿಂದ
ಕೆಂಪು ,ಹಳದಿ…. ಬಣ್ಣ ಬಣ್ಣದ
ಹೂಗಳು

ಸುತ್ತ ನೋಡೆ…
ನೀಲಿ ಚಾದರದಡೀ
ಬಣ್ಣಗಳ ಮೆರವಣಿಗೆ

ಆ ದೇವನಿಗೆ ಎಲ್ಲಿತ್ತೋ
ಮನುಜನಿಗೆ ನಿಲುಕದ…
ಇಂಥ ಬಣ್ಣಗಳ ಕಲ್ಪನೆ

ಹೂ ಹುಟ್ಟಿ ಉದುರಿ
ಬಣ್ಣ ಕಳಚಿ…ಎಲ್ಲ..ಖಾಲಿ….

ನಲ್ಲೆಯ ಕದಪಿನ ಕೆಂಪು
ಕಣ್ಣ ಬೆಳ್ಳಿ ಬೆಳಕು
ಗುಲಾಬಿ ಹಿಮ್ಮಡಿ

ಮುಂಗುರುಳ ಕಡು ಕಪ್ಪು
ಕೆನ್ನೆ ಹರಿಶಿನ

ಹುಸಿಮುನಿಸಿನ …ಕಣ್ಣ ಹಸಿರು

ಕಳೆದು ಬಸಿರು
ಬಿಳೀ ನೈದಿಲೇ….

ತಾನೇ ತಾನಾಗಿ
ಕಾಮ ಕಳಚಿ…
ಬಣ್ಣ ಬರಿದಾಗಿ

ರಾಚುವ ಬಣ್ಣಗಳು
ತಂದರೂ ನೆನಪಿನ ಭರಾಟೆ

ದೇವನ ಚಿತ್ರಪಟಕ್ಕೆ
ಸೋತು….

ಕಾದು ಬಣ್ಣ ಬರಿದಾಗಲು…

ಕೆನ್ನೆ ಒದ್ದ… ಮೊಮ್ಮಗಳ
ಅಂಗಾಲು ನಸು ಕೆಂಪು..
ತುಟಿ ಚಿಗುರು…ಹಾಲು ಇಬ್ಬನಿ.

ಡಾ// ರಜನಿ ಎಂ

ಬಂದ ವಸಂತ

0

ಡಾ. ರಜನಿ


ಚಳಿ ಅಳಿದು
ರಣ ಬಿಸಿಲು

ಹುಲ್ಲು ಚಿಗುರಿ
ಹಸಿರು ಹರಡಿ

ಕೂಗಿ ಕೋಗಿಲೆ
ಮರ ಮರದಲಿ ದುಂಬಿ,ಜೇನು

ಉದುರಿ ಹೂವು ..
ಹಾದಿಯೆಲ್ಲಾ….
ನವಿರು ಮೆತ್ತೆ

ಅನೂಹ್ಯ ಬಣ್ಣಗಳ
ಭೂರಮೆಯ ಚಿತ್ರ ಪಟ

ಯಾವಾವುದೋ ಪುಷ್ಪಗಳ
ಸುವಾಸನೆ
ಅಡರಿ ನಾಸಿಕಕ್ಕೆ

ಹೃದಯದಲಿ ನೆನಪುಗಳ
ಲಗ್ಗೆ…

ನೀ ಅರಳೀ
ನಾ ಮುದುಡಿ….
ಕಾಮನ ಸುಡಲೀ ಹೇಗೆ?

ಹೂಮರಗಳ ಅಡಿಯಲೀ
ಕೈ ಕೈ ಜೋಡಿಸಿ

ಸಂಜೆಗೆಂಪಲೀ
ಹೂಚಾಮರದಡಿಯಲೀ

ಕಲ್ಲು ಬೆಂಚ ಮೇಲೆ
ಕಣ್ಣು ಮುಚ್ಚಿ
ಕದ್ದು ತುಟಿ ಕೆಂಪು ….

ಮತ್ತೆ ನಡೆದು…
ಹಿಡಿದು ನಡು

ನೋಡುವವರಿಲ್ಲ ನಮ್ಮನು..
ವಸಂತನ ಮತ್ತು..

ಭೂರಮೆಯೇ
ತೆಗೆದುಕೊ

ಕಾಮನಬ್ಬಕ್ಕೆ
ಬೇರೇಯದೇ

ಮಾಸ


ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ.ರಜನಿ ಅವರ ಕವನ ಪರಿಸರದ ನೇಯ್ಗೆಯಾಗಿದೆ. ಅವರದು ಗಾಢ, ನಿಗೂಢಗಳನ್ನು ಒಳಗೊಳ್ಳುವ. ಎರಡು ವಿಭಿನ್ನ ನೆಲೆಗಳನ್ನು, ನೋವು,‌ನಲಿವುಗಳನ್ನು ತುಲನಾತ್ಮಕವಾಗಿ ಒರೆಗೆ ಹಚ್ಚುವ ಅವರ ಕವನಗಳ ಸಶಕ್ತತೆಯಿಂದ ಕೂಡಿರುತ್ತವೆ.


ಶ್ಯಾಮಲಾ ಮಾಧವ ಆತ್ಮಕಥನ ಬಿಡುಗಡೆ: ಸಾಮರಸ್ಯದ ಮಹತ್ವ ತಿಳಿಸುವ ಕೃತಿ: ವಿವೇಕ ರೈ

Publicstory


Bengalooru: ಮತಾಂತರವನ್ನು ದ್ವೇಷಿಸುವ ಈ ಕಾಲದಲ್ಲಿ ಶ್ಯಾಮಲಾ ಮಾಧವ ಅವರು ಕಟ್ಟಿಕೊಟ್ಟಿರುವ ಬದುಕು ಸಾಮರಸ್ಯದ ಮಹತ್ವವನ್ನು ಸಾರುತ್ತದೆ. ಸಾಮರಸ್ಯ ಜೀವನದ ಭಾಗವಾಗಿರುವುದನ್ನು ಎತ್ತಿ ತೋರಿಸುತ್ತದೆ ಎಂದು ಖ್ಯಾತ ವಿದ್ವಾಂಸ ಪ್ರೊ ಬಿ ಎ ವಿವೇಕ ರೈ ಅವರು ಅಭಿಪ್ರಾಯಪಟ್ಟರು.

‘ಅವಧಿ’ ಅಂತರ್ಜಾಲ ಪತ್ರಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಸಾಹಿತಿ ಶ್ಯಾಮಲಾ ಮಾಧವ ಅವರ ಅನುಭವ ಕಥನ ‘ನಾಳೆ ಇನ್ನೂ ಕಾದಿದೆ’ ಬಿಡುಗಡೆ ಮಾಡಿ ಮಾತನಾಡಿದರು.

ಆತ್ಮಕಥನ, ಆತ್ಮ ಚರಿತ್ರೆ, ಅನುಭವ ಕಥನ ಇಂದು ಹೊಸ ದಿಕ್ಕನ್ನು ಕಂಡುಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಲೇಖಕಿಯರು ಆತ್ಮ ಕಥನ ರಚಿಸಿದ್ದಾರೆ. ಪುರುಷ ಸಾಹಿತಿಗಳು ಬರೆದ ಕಥನಕ್ಕೂ ಲೇಖಕಿಯರು ಬರೆದ ಕಥನಕ್ಕೂ ಇರುವ ವ್ಯತ್ಯಾಸವನ್ನು ಅಧ್ಯಯನ ಮಾಡುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

ಶ್ಯಾಮಲಾ ಅವರ ಅನುಭವ ಕಥನ ವಿವರಗಳ ಮಧ್ಯೆ ಸಿಕ್ಕಿದ್ದರೂ ಸಹಾ ಅವರು ಕಟ್ಟಿಕೊಡುವ ಚಿಕ್ಕ ಚಿಕ್ಕ ಸಂಗತಿಗಳು ಒಂದು ಕಾಲದ ಸಮುದಾಯ ಬದುಕಿದ ಬಗೆ, ನಗರಗಳು ಸ್ಥಿತ್ಯಂತರಗೊಂಡ ಕಥೆ, ಮಂಗಳೂರು ಹಾಗೂ ಮುಂಬೈನ ಹೊಳಹನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ ಎಂದರು.

ಖ್ಯಾತ ಕಲಾವಿದೆ ‘ಈ ಹೊತ್ತಿಗೆ’ಯ ಜಯಲಕ್ಷ್ಮಿ ಪಾಟೀಲ್ ಅವರು ಮಾತನಾಡಿ ಇದು ಅಪ್ಪಟ ಹೆಣ್ಣಿನ ಕೃತಿ ಎಂದು ಬಣ್ಣಿಸಿದರು. ಶ್ಯಾಮಲಾ ಮಾಧವ ಅವರು ಬದುಕನ್ನು ಕಟ್ಟಿಕೊಂಡ ಬಗೆ ಮಾದರಿಯಾಗಿದೆ. ಎಲ್ಲಾ ಹೆಣ್ಣುಮಕ್ಕಳ ಪ್ರಯಾಣದಂತಿದೆ ಎಂದು ಬಣ್ಣಿಸಿದರು.

ಖ್ಯಾತ ಅನುವಾದಕ, ರಂಗಕರ್ಮಿ ನಾ. ದಾಮೋದರ ಶೆಟ್ಟಿ ಅವರು ಮಾತನಾಡಿ ಶ್ಯಾಮಲಾ ಮಾಧವ ಅವರ ಕೃತಿಯ ಹೆಸರೇ ಆಶಾಭಾವ, ಆತಂಕ ಎರಡನ್ನೂ ಬಿಂಬಿಸುವಂತಿದೆ. ಬದುಕು ಈ ಎರಡರ ನಡುವೆಯೇ ತುಯ್ಯುತ್ತದೆ. ಹಾಗೆ ಅವರ ಕೃತಿಯೂ ಸಹಾ ಬದುಕಿನ ಆಶಾವಾದ ಹಾಗೂ ಆತಂಕದತ್ತ ಬೊಟ್ಟು ಮಾಡಿ ತೋರಿಸುತ್ತದೆ ಎಂದರು

ಅವಧಿಯ ಪ್ರಧಾನ ಸಂಪಾದಕ ಜಿ ಎಂ ಮೋಹನ್ ಅವರು ಕಾರ್ಯಕ್ರಮ ನಿರ್ವಹಿಸಿದರು.

ಈ ಕೃತಿಯನ್ನು ಕೊಳ್ಳಲು bahuroopi.in ಅಥವಾ ವಾಟ್ಸ್ ಸಂಖ್ಯೆ 7019182729 ಸಂಪರ್ಕಿಸಿ

‘ಬಹುರೂಪಿ’ಯ ಮುಖಪುಟಕ್ಕೆ ಪ್ರತಿಷ್ಠಿತ ರಾಷ್ಟ್ರ ಮಟ್ಟದ ‘ಪಬ್ಲಿಶಿಂಗ್ ನೆಕ್ಸ್ಟ್’ ಪ್ರಶಸ್ತಿ

0

Publicstory


ಬೆಂಗಳೂರು: ಪ್ರಕಾಶನ ರಂಗದ ಹಲವು ವಿಭಾಗಗಳ ಶ್ರೇಷ್ಠ ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ ಆರಂಭಿಸಿರುವ ‘ಪಬ್ಲಿಶಿಂಗ್ ನೆಕ್ಸ್ಟ್’ ಇಂಡಸ್ಟ್ರಿ ಅವಾರ್ಡ್ಸ್ ೨೦೨೦ ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ.

ಬಹುರೂಪಿ ಪ್ರಕಾಶನದ ‘ದುಪ್ಪಟ್ಟು’ ಕೃತಿಯ ಮುಖಪುಟ ವಿನ್ಯಾಸಕ್ಕಾಗಿ ಎಂ ಎಸ್ ಸಾಗರ್ ಅವರು ರನ್ನರ್ ಅಪ್ ಸ್ಥಾನ ಪಡೆದರು.

ಕಳೆದ ೭ ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಈ ಸಾಲಿನಲ್ಲಿ ‘ಬಹುರೂಪಿ’ಯ ಎರಡು ಕೃತಿಗಳು ಅಂತಿಮ ೫ ರಲ್ಲಿ ಸ್ಥಾನ ಪಡೆದಿತ್ತು. ಮುಖಪುಟ ವಿಭಾಗದಲ್ಲಿ ಎಂ ಎಸ್ ಸಾಗರ್ ಅವರ ವಿನ್ಯಾಸದ ‘ದುಪ್ಪಟ್ಟು’ ಹಾಗೂ ಕಿರಣ್ ಮಾಡಾಳು ವಿನ್ಯಾಸದ ‘ರಂಗ ಕೈರಳಿ’ ಇತ್ತು.

ಇಡೀ ಪುಸ್ತಕದ ವಿನ್ಯಾಸಕ್ಕಾಗಿ ನೀಡುವ ಪ್ರಶಸ್ತಿಗೆ ‘ದುಪ್ಪಟ್ಟು’ ನಾಮ ನಿರ್ದೇಶನಗೊಂಡಿತ್ತು.

ದೇಶ, ವಿದೇಶದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಬಹುರೂಪಿ’ಯ ಮುಖಪುಟಕ್ಕೆ ಪ್ರತಿಷ್ಠಿತ ರಾಷ್ಟ್ರ ಮಟ್ಟದ ‘ಪಬ್ಲಿಶಿಂಗ್ ನೆಕ್ಸ್ಟ್’ ಪ್ರಶಸ್ತಿ

ಪ್ರಕಾಶನ ರಂಗದ ಹಲವು ವಿಭಾಗಗಳ ಶ್ರೇಷ್ಠ ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ ಆರಂಭಿಸಿರುವ ‘ಪಬ್ಲಿಶಿಂಗ್ ನೆಕ್ಸ್ಟ್’ ಇಂಡಸ್ಟ್ರಿ ಅವಾರ್ಡ್ಸ್ ೨೦೨೦ ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ.

ಬಹುರೂಪಿ ಪ್ರಕಾಶನದ ‘ದುಪ್ಪಟ್ಟು’ ಕೃತಿಯ ಮುಖಪುಟ ವಿನ್ಯಾಸಕ್ಕಾಗಿ ಎಂ ಎಸ್ ಸಾಗರ್ ಅವರು ರನ್ನರ್ ಅಪ್ ಸ್ಥಾನ ಪಡೆದರು.

ಕಳೆದ ೭ ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಎಂ ಎಸ್ ಸಾಗರ್

ಈ ಸಾಲಿನಲ್ಲಿ ‘ಬಹುರೂಪಿ’ಯ ಎರಡು ಕೃತಿಗಳು ಅಂತಿಮ ೫ ರಲ್ಲಿ ಸ್ಥಾನ ಪಡೆದಿತ್ತು. ಮುಖಪುಟ ವಿಭಾಗದಲ್ಲಿ ಎಂ ಎಸ್ ಸಾಗರ್ ಅವರ ವಿನ್ಯಾಸದ ‘ದುಪ್ಪಟ್ಟು’ ಹಾಗೂ ಕಿರಣ್ ಮಾಡಾಳು ವಿನ್ಯಾಸದ ‘ರಂಗ ಕೈರಳಿ’ ಇತ್ತು.

ಇಡೀ ಪುಸ್ತಕದ ವಿನ್ಯಾಸಕ್ಕಾಗಿ ನೀಡುವ ಪ್ರಶಸ್ತಿಗೆ ‘ದುಪ್ಪಟ್ಟು’ ನಾಮ ನಿರ್ದೇಶನಗೊಂಡಿತ್ತು.

ದೇಶ, ವಿದೇಶದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಕೃಪೆ : ಅವಧಿ

ಚೆಕ್ ಬೌನ್ಸ್ : ಆರೋಪಿಗೆ ಆರು ತಿಂಗಳು ಸಜೆ

Publicstory


ತುಮಕೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ತುಮಕೂರಿನ ಎರಡನೇ ಅಧಿಕ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣದಲ್ಲಿ ಗುಬ್ಬಿ ತಾಲ್ಲೂಕಿನ ಲಕ್ಕೇನ ಹಳ್ಳಿಯ ಕೆ‌.ಜೆ.ತಿಮಯ್ಯ ಎಂಬುವವರು ತಮ್ಮ ಸಂಬಂಧಿ ತುಮಕೂರಿನ ಶುಭಾ ಎಂಬುವವರಿಂದ ಸಾಲ ಪಡೆದಿದ್ದರು. ಸಾಲ ಹಿಂದಿರಿಗಿಸಲು ಚೆಕ್ ನೀಡಿದ್ದರು.

ಆದರೆ ಚೆಕ್ ಅಮಾನ್ಯವಾದ ಕಾರಣ ಶೋಭಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಶೋಭಾ ಪರವಾಗಿ ತುಮಕೂರಿನ ಹಿರಿಯ ವಕೀಲರಾದ ಸುಧೀಂದ್ರ ಕುಮಾರ್ ವಾದ ಮಂಡಿಸಿದ್ದರು.

ವಾದ- ವಿವಾದ ಆಲಿಸಿದ ನ್ಯಾಯಾಲಯವು ಆರೋಪಿಗೆ ಆರು ತಿಂಗಳು ಸಾದಾ ಜೈಲು ಶಿಕ್ಷೆ ಹಾಗೂ 4.32 ಲಕ್ಷ ಪಾವತಿಸುವಂತೆ ಆದೇಶಿಸಿದೆ.

ಗಮಕ ಸಾಹಿತಿ ತುಮಕೂರು ಸುನಂದಮ್ಮ ಇನ್ನಿಲ್ಲ…

ತುಮಕೂರು ಜಿಲ್ಲೆಯಲ್ಲಿ ಗಮಕ ಕಲೆಯನ್ನು ಜೀವಂತವಾಗಿ ಇಟ್ಟಿದ್ದ ಗಮಕ ಸಾಹಿತಿ ತುಮಕೂರು ಸುನಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ವಿಧಿವಶರಾದರು.

ಲೇಖಕಿಯರ ಸಂಘದ ಹಿರಿಯ ಸದಸ್ಯರೂ ,ಗಮಕಿ ,ವೀಣಾ ವಾದಕಿ ,ಇತಿಹಾಸ ಉಪನ್ಯಾಸಕಿ, ಲೇಖಕಿ ಆದ ತುಮಕೂರು ಸುನಂದ ರವರು‌ ತಾವು ಕಲಿತ ವಿದ್ಯೆಯನ್ನು ವಿದ್ಯಾಪ್ರಸಾರಕ್ಕೆ ಮಾತ್ರ ಬಳಸಿ ವ್ಯವಹಾರಿಕವಾಗಿ ಮಾಡದೆ ಇದ್ದುದು ಅವರ ವೈಶಿಷ್ಟ್ಯ.

“ಶಿಷ್ಯಾದಿಚ್ಛೇತ್ ಪರಾಜಯಂ”

ಎಂಬ ಮಾತಿನಂತೆ ಶಿಷ್ಯರ ಪ್ರಗತಿಯಲ್ಲಿ ತಮ್ಮ ಪ್ರಗತಿಯನ್ನು ಕಂಡವರು. ಅಪಾರ ಶಿಷ್ಯ ವೃಂದ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಅವರ ಸ್ವಗೃಹದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಗುಬ್ಬಿ

0

ಡಾ.ರಜನಿ ಎಂ


ಗುಬ್ಬಿ

ಕಡ್ಡಿ ಪಡ್ಡಿ
ಹೆಕ್ಕಿ
ನೇದ ಗೂಡು

ಗುಬ್ಬಿ ಗೂಡು
ಕಟ್ಟಿದರೆ …ಮುಂಗಾರು
ನೋಡೂ

ಗಂಡು ಹೆಕ್ಕಿದ ಕಡ್ಡಿ
ಹೆಣ್ಣು ಹೆಣೆದ
ಗುಬ್ಬಿ ಗೂಡು

ತೊಲೆಗಳಲ್ಲಿ
ರೆ೦ಬೆಗಳಲ್ಲಿ
ನೇತಾಡಿ

ಅಂಗಳದಲ್ಲಿ
ಎದೆಯುಬ್ಬಿಸಿ
ಗಂಡು ನಲಿದು
ಒಲಿಸಿ ಕೊಂಡು ಹೆಣ್ಣು

ಕತ್ತು ಒನೆದು
ಆ ಕಡೆ ಈ ಕಡೆ
ನೋಡಿ
ಗುಬ್ಬಿ ಸ್ನಾನ

ಪುಟ್ಟ ಪುಟ್ಟ
ಹೆಜ್ಜೆ ಇಕ್ಕಿ
ಕಾಳು ಹೆಕ್ಕಿ
ಹಾರಿ ಪುರ್ರನೆ

ಹುಳ ಹಿಡಿದು ತಂದು
ತುರುಕಿ ಪುಟ್ಟ ಬಾಯಲ್ಲಿ

ಎಬ್ಬಿಸಿ ಒಕ್ಕಲು
ಕಾಣದಾಗಿದೆ ಗುಬ್ಬಿ
ಬರೇ ಕಥೆಯ ಗುಬ್ಬಿ
ಉಳಿದು

ಕಾಗಕ್ಕ ಗುಬ್ಬಕ್ಕ
ಬನ್ರೇ
ಕಣಕ್ಕೆ
ಕಾಳು
ಹೆಕ್ಕಲಿಕ್ಕೆಇದೆಯಲ್ಲ ಕಾಲರ್
ಟ್ಯೂನ್
ಚಿಂವ್ ಚಿಂವ್


ವಿಶ್ವ ಗುಬ್ಬಿ ದಿನದ ಅಂಗವಾಗಿ ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ.ರಜನಿ ಅವರ ಕವನ ಮತ್ತೊಮ್ಮೆ ಹಳ್ಳಿಗರನ್ನು ತಮ್ಮ ಬಾಲ್ಯದ ಕಡೆಗೆ ಕರೆದೊಯ್ಯುತ್ತದೆ. ಗುಬ್ಬಿಯನ್ನು ಹಿಡಿದು ಆಡಿಸಿ, ಅದನ್ನು ಸುಸ್ತು ಮಾಡಿ ಬಿಡುತ್ತಿದ್ದ ದಿನಗಳು ನೆನಪಿಗೆ ಬರುತ್ತವೆ. ಮಾತೇ ಬಾರದಂತೆ ತಡವರಿಸುವ ಮಕ್ಕಳು ಗುಬ್ಬಿಯಿಂದಾಗಿ ಚೀಂವ್ ಗುಟ್ಟಿದ್ದು ಹೀಗೆ ಇನ್ನು ಅನೇಕ ನೆನಪುಗಳ ಗುಬ್ಬಿಗಾಗಿ ಈ ಕವನ.