Wednesday, May 6, 2026
Google search engine
Home Blog Page 150

ಭಾನುವಾರದ ಕವಿತೆ ‘ಯುಗಾದಿ’

0

ಡಾ//ರಜನಿ. ಎಂ

ಅಪ್ಪ ಎಡಗಾಲ ನೀಚಿ
ಮಾವಿನ ತೋರಣ ಕಟ್ಟಲು ಕುಳಿತರೆ
ಅಂಚಿಕಡ್ಡಿ… ಸುತ್ತಲಿ ದಾರ ಹಿಡಿದು ನಿಲ್ಲಬೇಕು

ಮನೆ ಬಾಗಿಲಲಿ ನಿಲ್ಲಿಸಿ ಹರಳೆಣ್ಣೆ
ತಿಕ್ಕಿ ಮೈಗೆ ..
ಕಲ್ಲಲ್ಲಿ ಉಜ್ಜಿ ಗಸಗಸ

ಬೆಲ್ಲ, ಬೇವಿನ ಚಿಗುರು ಹೂವು
ಹುಣಿಸೆ ಚಿಗುರು, ಮಾವಿನ ಮಿಡಿ

ತೋತಾಪುರಿ ಮಾವಿನ…. ವಾಟೆ ವಾಟೆ
ಯಾರು?

ಬೇಳೆ ಒಬ್ಬಟ್ಟಿನ ಹೂರಣ
ಬಾಗಿಲಲಿ ಕುಳಿತು ತಿಂದು…

ಹದವಾದ ಬಳಪ ಕಲ್ಲ ಮೇಲೆ ಬೆಂದ
ಒಬ್ಬಟ್ಟು…ಕಾದ ತುಪ್ಪ

ಕಡ್ಲೆ ಗೊಜ್ಜು
ಕೋಸಂಬರಿ

ಹಬೇ ನೀರಿನ ಸ್ನಾನ
ನಮ್ಮ ಬಣ್ಣ ಕಾಗೆ ತಗೊಂಡು
ಕಾಗೆ ಮಿಂಚು ನಾವು ತಗೊಂಡು

ಹೊಸ ಬಟ್ಟೆ ಸದ್ದು..
ಮೇಲೆ ಮಣಿ ಸರ

ಹೊಂಗೆ ಮರದ ಹೂ ಉದುರಿ
ಜಿಂವ್…..ಜಿಂವ್
ಮಕರಂದ ಹೀರಿ

ಅಪ್ಪ ಕೊಟ್ಟ ಬೆಲ್ಲ ಹೆಚ್ಚು
ಒಂದೇ ಎಲೆ ಬೇವು

ಅಮ್ಮನ ಫುಲ್ ವಾಯಲ್
ಹೊಸ ಸೀರೆ

ಆಡಿ ಮನೆಗೆ ಬಂದರೆ
ಅಪ್ಪನ ಕೈಗೆ ಎಲೆ ಮಡಚಿ ಕೊಡುತ್ತಿರುವ
ಅಮ್ಮ..

ಸಂಜೆ 7 ಮನೆ ಚೌಕಾಬಾರ
ಅಪ್ಪ ಕವಡೆ ಹಿಡಿದು ಹಾಕಿ…
ತಿನ್ನುವ ಗುದ್ದು

ತಗಾದಿ ಆಗದೆ
ಮುಗಿಯದ ಯುಗಾದಿ
ಅಪರೂಪ

ನಾಳೆಗೆ
ಕಾದಿದೆ ಒಳ್ಳೇ ಹೊಸ ತಡಕು

ತುಮಕೂರು ಕಸಾಪ ಹೊಸ ಮೈಲುಗಲ್ಲು: ಕಿರುಚಿತ್ರಗಳ ಪ್ರದರ್ಶನಕ್ಕೆ ಹೊಸ ನಾಂದಿ

Publicstory


ತುಮಕೂರು: ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಡುತ್ತಾ ಬಂದಿದೆ. ಸಾಂಸ್ಕೃತಿಕತೆ ಸಾಹಿತ್ಯದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಜಿಲ್ಲಾ ಕಸಾಪ ದಿಂದ ಸಾಕ್ಷ್ಯಚಿತ್ರ ಪ್ರದರ್ಶನಗಳ ಹೊಸ ಹೆಜ್ಜೆ ಇಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು.

ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಚಿತ್ರ/ಶಿಲ್ಪಕಲೆಗಳು ಈ ಪರಂಪರೆಯ ಮುಖ್ಯವಾಹಿನಿಗಳಾಗಿವೆ. ಈಗ ಅದರೊಂದಿಗೆ ಇ-ಮಾಧ್ಯಮವೂ ಸೇರ್ಪಡೆಯಾಗಿದೆ. ಸಾಮಾಜಿಕ ಜಾಲತಾಣ, ವಾಟ್ಸಾಪ್, ಯೂಟೂಬ್, ಫೇಸ್‌ಬುಕ್ ಮುಂತಾದ ಮಾರ್ಗಗಳಲ್ಲಿ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳು ಕೂಡ ಹರಿದುಬಂದು ಜನಮನವನ್ನು ತಲುಪುತ್ತಿವೆ. ಹಾಗೂ ಹೆಚ್ಚು ಜನರನ್ನು ತಲುಪುವ ಬಗೆಯೂ ಇದಾಗಿದೆ ಎಂದರೆ ತಪ್ಪಲ್ಲ‌ ಎಂದರು.

ಸಾಹಿತ್ಯದಂತೆಯೇ ಕಿರುಚಿತ್ರದ ಮೂಲಕವೂ ಅಭಿವ್ಯಕ್ತಿಸುವ ಕ್ರಮ ಇತ್ತೀಚೆಗೆ ರೂಢಿಯಾಗಿದೆ. ಕಥೆ, ಕವನ, ಲೇಖನ, ಚುಟುಕು, ಹಾಸ್ಯ ಮುಂತಾದವುಗಳ ಮೂಲಕ ಏನನ್ನು ಹೇಳಲು ಹೊರಟಿದ್ದಾರೋ ಅದನ್ನು ಕಿರುಚಿತ್ರಗಳ ಮೂಲಕ, ದೃಶ್ಯ ಮಾಧ್ಯಮದ ಮೂಲಕ ಹೇಳುವುದು ಜನಪ್ರಿಯವಾಗಿದೆ ಎಂದು ತಿಳಿಸಿದರು.

ಹಾಗು ಸುಲಭವಾಗಿ ನೇರವಾಗಿ ಜನರನ್ನು ತಲುಪಲು, ಅರ್ಥಪೂರ್ಣವಾಗಿ ಸಂವಹಿಸಲು ಸಾಧ್ಯವಾಗುತ್ತಿದೆ. ಆದ್ದರಿಂದ ಇದೂ ಕೂಡ ಸಾಹಿತ್ಯದ ಒಂದು ವಿಧವೇ ಆಗಿದೆ.

ಕಿರುಚಿತ್ರ ಸ್ಪರ್ಧೆ ಮಾಡುವ ಮೂಲಕ ಪರಿಷತ್ತು ಸಾಹಿತ್ಯಕ್ಕೆ ಒಂದು ಹೊಸ ಆಯಾಮ ನೀಡುವ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ. ಸದಭಿರುಚಿಯ ಸಿನಿಮಾ ನೋಡುವುದು, ಗ್ರಹಿಕೆಯ ಕ್ರಮ, ಸಾಹಿತ್ಯವನ್ನು ದೃಶ್ಯದಲ್ಲಿ ತಲುಪುವಾಗ ಪ್ರೇಕ್ಷಕನ ಸ್ಪಂದನೆ ಇತ್ಯಾದಿಗಳನ್ನು ಅರ್ಥ ಮಾಡಿಸುವುದೂ ಕೂಡ ಬಹುಮುಖ್ಯ ಎಂದೆನಿಸಿ ಪರಿಷತ್ತಿನಲ್ಲಿ “ಕನ್ನಡ ಸಾಹಿತ್ಯ ಪರಿಷತ್ತಿನ ಫಿಲ್ಮ್ ಸೊಸೈಟಿ” ಎಂಬ ವಿಭಾಗವನ್ನು ಪ್ರಾರಂಭಿಸಿ ಅದರ ಮೂಲಕ ಮಕ್ಕಳಿಗಾಗಿ ೧) ಕಾಡಹಾದಿಯ ಹೂವುಗಳು ೨) ನವಿಲು ಕಿನ್ನರಿ ೩) ಕ್ವಿಟ್ ಇಂಡಿಯಾ ಚಳವಳಿ ಮುಂತಾದ ಚಿತ್ರಗಳನ್ನು ಸಾರ್ವಜನಿಕವಾಗಿ ದೇವರ ನಾಡಲ್ಲಿ ಎಂಬ ಚಿತ್ರವನ್ನೂ ಪ್ರದರ್ಶಿಸಲಾಗಿದೆ. ಹಾಗೂ ಆ ಬಗ್ಗೆ ಚರ್ಚೆ ಸಂವಾದವನ್ನು ಪರಿಣ ತರು ನಡೆಸಿಕೊಟ್ಟಿದ್ದಾರೆ ಎಂದು ವಿವರಿಸಿದರು.

ಕಿರುಚಿತ್ರಗಳು ಕೂಡ ಅದೇ ಮಟ್ಟದ ಸಂದೇಶವನ್ನು, ಅರಿವನ್ನು ನೀಡುವುದರಿಂದ ಅವುಗಳನ್ನು ನೋಡಲು ಉತ್ತೇಜಿಸುವುದು, ಅದನ್ನು ನಿರ್ಮಾಣ ಮಾಡುವ, ಅಭಿನಯಿಸುವ, ನಿರ್ದೇಶಿಸುವ ಮೂಲಕ ಜನರನ್ನು ಎಚ್ಚರಗೊಳಿಸಲಿ ಎಂಬ ಆಶಯದಿಂದ ಇದನ್ನು ವ್ಯವಸ್ಥೆಗೊಳಿಸಿದೆ ಎಂದರು.

ರಾಜ್ಯಮಟ್ಟದ ಈ ಸ್ಪರ್ಧೆ ಕಳೆದ ವರ್ಷ ನಡೆಯಬೇಕಾಗಿದ್ದು, ಲಾಕ್‌ಡೌನ್‌ನಿಂದಾಗಿ ನಿಂತಿತ್ತು. ಈಗ ಅದಕ್ಕೆ ಮರುಚೈತನ್ಯ ತುಂಬಿದ ರೀತಿಯಲ್ಲಿ ೧೦-೪-೨೦೨೧ ರಂದು ಬೆಳಗ್ಗೆ ೯ ರಿಂದ ಚಿತ್ರಗಳು ಪ್ರದರ್ಶನವಾಗುತ್ತದೆ. ಸಂಜೆ ಗಂಟೆಗೆ ಬಹುಮಾನ ವಿತರಣೆ ಮಾಡಲಾಗುವುದು.

ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಕೆ.ಎನ್. ರಾಜಣ್ಣ, ಮೇಯರ್‌ ಬಿ.ಜಿ. ಕೃಷ್ಣಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಹೆಚ್. ಮಲ್ಲಿಕಾರ್ಜುನಯ್ಯ, ಖ್ಯಾತ ಚಲನಚಿತ್ರ ಚಿತ್ರ ನಿರ್ದೇಶಕರಾದ ನರೇಶ್‌ಕುಮಾರ್ ಹೆಚ್.ಎನ್. ಮತ್ತು ಕಿರುಚಿತ್ರ, ಸಾಕ್ಷ್ಯಚಿತ್ರ ನಿರ್ದೇಶಕಿಯಾದ ಸುರಭಿ ರೇಣುಕಾಂಬಿಕೆ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಹೆಚ್. ಗೋವಿಂದಯ್ಯ, ಇದರ ಸಂಚಾಲಕರಾದ ಸದಾಶಿವ್ ಹಾಗೂ ರಾಣ ಚಂದ್ರಶೇಖರ್ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

ತಂಡಗ ಶಾಲಿವಾಹನ ಪ್ರೌಢಶಾಲೆಯಲ್ಲಿ, ಏ.8ಕ್ಕೆ ಕನ್ನಡ ಭಾಷಾ ಶಿಕ್ಷಕರುಗಳಿಗೆ ಕಾರ್ಯಾಗಾರ

0

Publicstory


ತುರುವೇಕೆರೆ: ತಾಲ್ಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಹಾಗು ತಾಲ್ಲೂಕು ಕನ್ನಡ ಭಾಷಾ ಬೋಧಕರ ಸಂಘದ ವತಿಯಿಂದ ಕನ್ನಡ ಭಾಷಾ ಶಿಕ್ಷಕರಿಗೆ ಕಾರ್ಯಗಾರವನ್ನು ತಾಲ್ಲೂಕಿನ ತಂಡಗ ಶಾಲಿವಾಹನ ಪ್ರೌಢಶಾಲೆಯಲ್ಲಿ ಏ.8ರಂದು ನಡೆಸಲಾಗುವುದೆಂದು ಸಂಘದ ಅಧ್ಯಕ್ಷ ಎಲ್.ಮಂಜೇಗೌಡ ತಿಳಿಸಿದ್ದಾರೆ.

ಶಾಲಿವಾಹನ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಬೆಳಗ್ಗೆ 10:30ಕ್ಕೆ 2ನೇ ಕಾರ್ಯಗಾರ ಆರಂಭವಾಗಲಿದ್ದು ಉದ್ಘಾಟನೆಯನ್ನು ಜಿಲ್ಲಾ ಕನ್ನಡ ವಿಷಯ ಪರಿವೀಕ್ಷಕ ಗಿರೀಶ್ ಅವರು ನೆರವೇರಿಸಲಿದ್ದು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ವಿ.ಟಿ.ಸೋಮಶೇಖರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಇಒ.ಸಿ.ರಂಗಧಾಮಯ್ಯ, ಬಿಆರ್ಸಿ. ವಸಂತ್ಕುಮಾರ್. ಸಂಪನ್ಮೂಲ ವ್ಯಕ್ತಿಗಳಾಗಿ ಮಂಜೇಗೌಡ, ಆಲ್ಬೂರು ನಾಗರಾಜು ಭಾಗವಹಿಸಲಿದ್ದಾರೆ.

ಶಾಸಕರ ಕುಮ್ಮಕ್ಕಿನಿಂದ ಜೆಡಿಎಸ್ ಕಾರ್ಯಕರ್ತನಿಗೆ ಬಾಕುವಿನಿಂದ ಇರಿತ; ಮಾಜಿ ಶಾಸಕರ ಆರೋಪ

Publicstory


ತುರುವೇಕರೆ: ಶಾಸಕ ಮಸಾಲಜಯರಾಂ, ಜಿಲ್ಲಾ ಪಂಚಾಯಿತಿ ಸದಸ್ಯೆ ಪತಿ ನಾಗರಾಜು ಅವರುಗಳ ಕುಮ್ಮಕ್ಕಿನಿಂದ ತಾಲ್ಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿ.ಎಸ್.ಪುರ ಹೋಬಳಿ ಇಡಗೂರಿನ ಜೆಡಿಎಸ್ ಕಾರ್ಯಕರ್ತ ಆನಂದನನ್ನು ಬಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಗಂಭೀರ ಆರೋಪ ಮಾಡಿದರು.

ಇಡಗೂರಿನಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಕೆಂಪಮ್ಮದೇವಿ ಜಾತ್ರೆ ನಡೆದಿತ್ತು. ಆ ಜಾತ್ರೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಇಡಗೂರಿನ ರವಿ ಮತ್ತು ಆತ ಸ್ನೇಹಿತರು ಸೇರಿಕೊಂಡು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ವೃತ್ತಿಪರ ಕೊಲೆಗಡುಕರು ಬಳಸುವ ಬಾಕುವಿನಿಂದ ಇರಿದು ಮಾರಣಾಂತಿಕ ಕೊಲೆ ಪ್ರಯತ್ನ ನಡೆದಿರುವುದು ಪೊಲೀಸರ ನಿರ್ಲಕ್ಷ್ಯತನವನ್ನು ಎತ್ತಿಹಿಡಿದಿದೆ ಎಂದರು.

ಇಂತಹ ಅಹಿತಕರ ಘಟನೆಯು ಈ ತಾಲ್ಲೂಕಿನಲ್ಲಿ ಅದರಲ್ಲೂ ಸಿ.ಎಸ್.ಪುರ ಹೋಬಳಿಯಲ್ಲಿ ನಡೆದೇ ಇರಲಿಲ್ಲ. ಆದರೆ ಮಸಾಲಜಯರಾಂ ಶಾಸಕನಾದ ಮೇಲೆ ಇದು 3 ನೇ ಪ್ರಕರಣವಾಗಿದೆ. ಶಾಂತವಾಗಿದ್ದ ಸಿಎಸ್.ಪುರಕ್ಕೆ ಇವರು ಕಾಲಿಟ್ಟ ಮೇಲೆ ಅಲ್ಲಿ ಅಶಾಂತಿ ಮೂಡಿ ಜನರಲ್ಲಿ ಆತಂಕ ಹೆಚ್ಚಿಸಿದೆ.

ಇದರ ಹೊಣೆಯನ್ನು ಶಾಸಕರೆ ಹೊರಬೇಕು. ಶಾಸಕ ಮಸಾಲಜಯರಾಂ ಮತ್ತು ಆತನ ಬೆಂಬಲಿಗರ ಗುಂಡಾವರ್ತನೆಯನ್ನು ಕೂಡಲೇ ನಿಯಂತ್ರಿಸಬೇಕೆಂದು ಜಿಲ್ಲಾಧಿಕಾರಿ ಹಾಗು ಎಸ್ಪಿವರನ್ನು ಒತ್ತಾಯಿಸಿದರು.

ಆರೋಪಿ ಇಡಗೂರು ರವಿ ಮತ್ತು ಆತನ ಸಹಚರರ ಮೇಲೆ ಸಿಎಸ್.ಪುರ ಠಾಣೆಯಲ್ಲಿ ಸೆಕ್ಷಷನ್ 307 ಪ್ರಕರಣ ದಾಖಲಾಗಿದ್ದು ಪೊಲೀಸರು ನಿರ್ಲಕ್ಷ್ಯ ವಹಿಸದೆ ಹಾಗು ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳನ್ನು ಬಂಧಿಸ ಬೇಕು. ಇಲ್ಲವಾದಲ್ಲಿ ಇನ್ನು ಮೂರುದಿನದೊಳಗಾಗಿ ನನ್ನ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಠಾಣೆಯ ಎದುರು ಕೋವಿಡ್ ಮಾರ್ಗಸೂಚಿಯಂತೆ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಸುದ್ದಿ ಗೋಷ್ಠಿಯಲ್ಲಿ ಜೆಡಿಎಸ್ ಯುವ ರಾಜ್ಯ ಘಟಕದ ಪ್ರಧಾನ ಕಾರ್ಯದಶರ್ಿ ದೊಡ್ಡಾಘಟ್ಟ ಚಂದ್ರೇಶ್, ಪಟ್ಟಣ ಪಂಚಾಯಿತಿ ಸದಸ್ಯ ವಿಜಯೇಂದ್ರ, ಕೊಳಾಲ ಗಂಗಾಧರ್, ಧರೀಶ್, ಆನೆಮೊಳೆ ಲಕ್ಕಣ್ಣ ಇದ್ದರು.

ಶಾರದಾ ವಿದ್ಯಾಪೀಠ; ರಾಜ್ಯ ಮಟ್ಟಕ್ಕೆ ಆಯ್ಕೆ

ಪಾವಗಡ ಶಾರದಾ ವಿದ್ಯಾಪೀಠದಲ್ಲಿ ಇತ್ತೀಚೆಗೆ ವಿಜ್ಞಾನ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿಜ್ಞಾನ ವಿಷಯದ ಮಾದರಿ ತಯಾರಿಕೆ, ಚಿತ್ರಗಳ ಪ್ರದರ್ಶನದಲ್ಲಿ 5 ನೇ ತರಗತಿ ವಿದ್ಯಾರ್ಥಿನಿ ಬರೀರಾ ಪರೋಸ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಬರೋರಾ ಪರೋಸ್  ಜಲ ಚಕ್ರ ಮಾಧರಿಗೆ ಪ್ರಥಮ  ಬಹುಮಾನ ನೀಡಲಾಗಿದೆ.

ತುಮಕೂರಿನಲ್ಲಿ ನಡೆದ 28ನೇ ಅಖಿಲ ಭಾರತವಿಜ್ಞಾನ ಸಮಾವೇಷದಲ್ಲಿ ಮೋನಿಕಾ, ಸುಬಾಷ್, ಕಲ್ಯಾಣಿ,ಅಕ್ಷಯ್ ಮಂಡಿಸಿದ ‘ ರಾಸಾಯಿನಿಕ ಕೃಷಿಗೆ ಹೋಲಿಸಿದಾಗ  ಸಾವಯವ ಕೃಷಿಯ ಉಪಯೋಗ’  ಯೋಜನೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಹೇಮಾವತಿ, ಹರ್ಷಿತ  ಮಂಡಿಸಿದ ಬೇಸಾಯದಲ್ಲಿ ಜೇಡರ ಹುಳುವಿನ ಪಾತ್ರ ಯೋಜನೆಯೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಶಿಕ್ಷಕ ಎಂ. ಗಂಗಾಧರಪ್ಪ, ಜಿ.ಕೆ.ಮನೋಹರ್ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಆಡಳಿತ ಮಂಡಲಿ, ಮುಖ್ಯ ಶಿಕ್ಷಕರು, ಶಿಕ್ಷಕರು ಅಭಿನಂದಿಸಿದ್ದಾರೆ.

ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್ ಗೆ ಅಭಿನಂದನೆ

ಪಾವಗಡ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್ ಅವರನ್ನು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದರು.

ಲಕ್ಷ್ಮಿಕಾಂತ್ ಈ ಹಿಂದೆ ತಾಲ್ಲೂಕಿನ ಅರಸೀಕೆರೆಯಲ್ಲಿ ಸಬ್ ಇನ್ ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಪಟ್ಟಣ ಠಾಣೆ ಸಬ್ ಇನ್ ಸ್ಪೆಕ್ಟರ್ ಠಾಣೆಯಿಂದ ಪೊಲೀಸ್ ಇನ್ ಸ್ಪೆಕ್ಟರ್ ಠಾಣೆಯಾಗಿ ಮೇಲ್ದರ್ಜೆಗೆ ಏರಿತ್ತು.

ಈ ಹಿಂದೆ ಇದ್ದ  ಇನ್ ಸ್ಪೆಕ್ಟರ್ ನಾಗರಾಜು ಅವರ ಸ್ಥಾನಕ್ಕೆ ಇವರು ವರ್ಗಾವಣೆಯಾಗಿ ಆಗಮಿಸಿದ್ದಾರೆ.

ಭಾನುವಾರ ಮುಸ್ಲಿಂ ಸಮುದಾಯದ ಯುವಕರು, ಮುಖಂಡರು ಠಾಣೆಗೆ ನೂತನವಾಗಿ ಆಗಮಿಸಿರುವ ಲಕ್ಷ್ಮಿ ಕಾಂತ್ ಅವರನ್ನು ಅಭಿನಂದಿಸಿ ಸ್ವಾಗತ ಕೋರಿದರು.

ಸ್ಪೀಡ್ ಮೋಟರ್ಸ್ ಮಾಲೀಕ ಹಾಗೂ  ಅಲ್ಪ ಸಂಖ್ಯಾತ ಮುಖಂಡ ಯೂನಸ್, ಇದಾಯತ್, ಶಾಕೀರ್, ಷಕೀಲ್, ಖಲೀಂ, ಬಾಬಾ, ಆಕೀಬ್, ಸದ್ದಾಂ, ಚಾಂದು, ಖಲೀಲ್, ನಿಸಾರ್ ಸಾಬ್ ಉಪಸ್ಥಿತರಿದ್ದರು.

ಭಾನುವಾರದ‌ ಕವಿತೆ: ಪಾರಿಜಾತ

0
ಮಾನವ ಜನಾಂಗದ ನಿಷ್ಕಲಂಶ ಕಾಮ, ಪ್ರೀತಿ, ಬದುಕು ಹಾಗೂ ತಿರಸ್ಕಾರಗಳನ್ನು ಪ್ರಕೃತಿಯೊಂದಿಗೆ ಸಮೀಕರಿಸಿ ಕವನ ಬರೆಯುವಲ್ಲಿ ಸಿದ್ಧ ಹಸ್ತರಾಗಿರುವ ಡಾ. ರಜನಿ ಅವರ ಕವನ ಈ ಭಾನುವಾರದ ಓದಿಗಾಗಿ.


ಕನಕಾಂಬರಿ ತೂಟ್ಟು
ಹಿಮದಳ

ಕೀಳುವವರು
ಇಲ್ಲ

ಬಿದ್ದಿದ್ದ
ಆಯ್ದು

ನೋಡಿಲ್ಲ ಯಾರೂ
ಅರಳಿದ ಗಳಿಗೆ

ಒಡೆಯನಿಗಿಂತ
ಕಂಡವರ ಪಾಲು

ಸೂರ್ಯನ ಪ್ರೀತಿಗೆ ಅರಳಿ…
ನಾಚಿ.. ನೋಡುವ ಮೊದಲೇ
ನೀರಾಗಿ

ಕೃಷ್ಣ ಭಾಮೆಗಾಗಿ ಕದ್ದನೆ?
ಇರಬಹುದು … ಸುದರ್ಶನ
ಚಕ್ರದಂತೆ ತಿರುಗಿಸಿ ನಿನ್ನ

ಅದೆಂಥ ಪರಿಮಳ
ದೇವ ದೇವತೆಯರ
ಪ್ರೀತಿ ಗಂಧ ..

ಮುಡಿಯಲಾಗದು
ಹಾಗೇ ಅರ್ಪಿಸಿ

ಅರೆ ಕ್ಷಣದಲಿ ಕರಗಿ
ಹೃದಯ

ಕಾದು
ಬೆಳಗಿನ ಜಾವದ ಮಿಲನಕ್ಕೆ

ಬರೀ ನಿನ್ನದೇ
ವಾಸನೆ

ಅರ್ಪಣೆ
ಒಲವಿಗೆ . .
ಒಲವಿನ ಕೃಷ್ಣನಿಗೆ…

ಡಿ.ಕಲ್ಕೆರೆಯಲ್ಲಿ ಮಹಾನಾಯಕ ಫ್ಲೆಕ್ಸ್ ಹರಿದ ಕಿಡಿಗೇಡಿಗಳು, ಕ್ರಮಕ್ಕೆ ದಸಂಸ ಒತ್ತಾಯ

Publicstory


ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಕಲ್ಕೆರೆ ಗ್ರಾಮದಲ್ಲಿ ಅಳವಡಿಸಲಾಗಿದ್ದ ಮಹಾನಾಯಕ ಫ್ಲೆಕ್ಸ್ ಅನ್ನು ಹರಿದುಹಾಕಿರುವ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದ.ಸಂ.ಸ ಕೋಶಾಧಿಕಾರಿ ಡಾ.ಕೆ.ಟಿ.ಶ್ರೀನಿವಾಸ್ ಪೊಲೀಸರನ್ನು ಒತ್ತಾಯಿಸಿದರು.

ದಂಡಿನಶಿವರ ಪೊಲೀಸ್ ಠಾಣೆಯ ಎದುರು ಸುದ್ದಿಗಾರರೊಂದಿಗೆ ಮಾತನಾಡಿ, ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜೀವನ ಚರಿತ್ರೆ ಕುರಿತಾದ ಮಹಾನಾಯಕ ಧಾರಾವಾಹಿಗೆ ಶುಭಾಶಯ ಕೋರಿ ಗ್ರಾಮದಲ್ಲಿ ಫ್ಲೆಕ್ಸ್ ಅಳವಡಿಸಲಾಗಿತ್ತು.

ಸೋಮವಾರ ರಾತ್ರಿ ಯಾರೋ ಕಿಡಿಗೇಡಿಗಳು ಮಹಾನಾಯಕ ಫ್ಲೆಕ್ಸ್ ಹರಿದು ವಿರೂಪಗೊಳಿಸುವ ಮೂಲಕ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ರವರಿಗೆ ಅವಮಾನ ಮಾಡಿರುತ್ತಾರೆ.

ಈ ಘಟನೆಯಿಂದಾಗಿ ಸ್ಥಳಿಯ ನಿವಾಸಿಗಳ ನಮ್ಮ ಭಾವನೆಗೆ ಧಕ್ಕೆಯುಂಟಾಗಿರುತ್ತದೆ. ದಲಿತರ ಸ್ವಾಭಿಮಾನವನ್ನು ಕೆಣಕಿರುವ ಕಿಡಿಗೇಡಿಗಳಿಗೆ ತಕ್ಕ ಉತ್ತರ ನೀಡಲು ದ.ಸಂ.ಸ ಸಿದ್ದವಿದೆ ಎಂದು ಎಚ್ಚರಿಸಿದರು.
ತಾಲ್ಲೂಕು ದ.ಸಂ.ಸ ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ದಲಿತರ ಭಾವನೆಗಳನ್ನು ಕೆಣಕುವ ಕೃತ್ಯಗಳು ತೆರೆಮರೆಯಲ್ಲಿ ನಡೆಯುತ್ತಿದೆ.

ಇಂತಹ ಕಿಡಿಗೇಡಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕಾದ ಅಗತ್ಯವಿದೆ. ತಾಂತ್ರಿಕತೆಯಲ್ಲಿ ಪ್ರಗತಿ ಸಾಧಿಸಿರುವ ಈ ದಿನಗಳಲ್ಲಿ ಪೊಲೀಸರು ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಮೂಲಕ ಕಾರ್ಯದಕ್ಷತೆಯನ್ನು ಪ್ರದರ್ಶಿಸಬೇಕು.

ಪೊಲೀಸರು ಯಾವುದೋ ರಾಜಕೀಯ ಒತ್ತಡಕ್ಕೆ ಒಳಗಾಗಿ ಈ ಪ್ರಕರಣವನ್ನು ಮೂಲೆಗುಂಪು ಮಾಡಬಾರದು ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ದಲಿತ ಮುಖಂಡರುಗಳಾದ ನಂಜಪ್ಪ, ಸುನಿಲ್, ಸುದೀಪ, ಭದ್ರಯ್ಯ, ರವೀಶ ಸೇರಿದಂತೆ ಅನೇಕರು ಇದ್ದರು.

ಮಗಳೆಂದರೆ Tension ಅಲ್ಲ Ten sons ಗೆ ಸಮ…

0

ಧನಂಜಯ ಕುಚ್ಚಂಗಿಪಾಳ್ಯ


ಮಗಳೆಂದರೆ ಅಪ್ಪನಿಗೆ ಜೀವ, ಅಪ್ಪ ಅಂದರೆ ಮಗಳಿಗೆ ಪ್ರಪಂಚ. ಮಗಳು ಅಂದರೆ ಸಂತೋಷ,ದೇವತೆ, ಉಸಿರು, ಹಸಿರು, ಅನುರಾಗ ಭಾವನೆಗಳ ಮೊತ್ತ. ಸಮೃದ್ಧಿಯ ಸಂಕೇತ,ವಾತ್ಸಲ್ಯದ ಪ್ರತಿರೂಪ,ಮಮತೆಯ ದನಿ,ಮರ್ಯಾದೆಯ ಪರಮಾವಧಿ.

ಸಾಂತ್ವನದ ಗಣಿ, ಐಶ್ವರ್ಯದ ಧ್ಯೋತಕ, ಸೌಂದರ್ಯಕ್ಕೆ ಪರ್ಯಾಯ ಪದ,ಸೃಷ್ಟಿಯ ಚಿಹ್ನೆ,ಸಂಸ್ಕಾರದ ಪ್ರತೀಕ, ಬದುಕಿನ ನೆಮ್ಮದಿ. ಮಗಳು ಅಂದರೆ ಯಾಕೆ ವಿಶೇಷ ಗೊತ್ತಾ? ಮಗಳು ಎಂಬ ಪದದಲ್ಲಿ ಮಗನೂ ಇದ್ದಾನೆ. ಅದಕ್ಕೆ ಮಗಳನ್ನ ಸಂಭೋದಿಸುವಾಗ ಮಗನೇ ಅಂತಲೂ ಕರೆಯುತ್ತೇವೆ. ಆದರೆ ಮಗ ಪದದಲ್ಲಿ ಮಗಳು ಇಲ್ಲ!

ಮನೆಯಲ್ಲಿ ಮಗಳ ಮಾತು ಗಿಳಿಯಂತೆ, ಗೆಜ್ಜೆ ಹಾಕಿದ ಕಾಲುಗಳು ಓಡಾಡಿದರೆ ನವಿಲಿನ ನರ್ತನದಂತೆ. ಮಗಳು ಎಂಬ ಈ ಪದದಲ್ಲಿ ಎಂತಹ ಸುಖ, ಅದ್ಭುತವಾದ ಜೀವನ ರಹಸ್ಯವಿದೆಯೆಂದರೆ, ದೇವರು ತನ್ನ ಭಕ್ತನ ಬಗ್ಗೆ ಸಂತೃಪ್ತಗೊಂಡಾಗ, ಅತೀ ಸಂತೋಷಗೊಂಡಾಗ, ತನ್ನ ಭಕ್ತನಿಗೆ ಮಗಳನ್ನು ಪಡೆಯುವ ಸಂತಾನ ಭಾಗ್ಯದ ವರವ ಕರುಣಿಸುತ್ತಾನಂತೆ!

ಹೆಣ್ಣು ಮಗುವಿನ ತಂದೆ-ತಾಯಿಯೆನಿಸಿಕೊಳ್ಳುವುದೇ ಒಂದು ಹೆಮ್ಮೆ. ಅದು ಹೇಗೆ ಅಂತೀರ? 90 ರ ದಶಕದ ಪ್ರಾರಂಭಿಕ ವರ್ಷ.ಆಗ ನಮ್ಮ ಮನೆಯಲ್ಲಿ ಹೆಣ್ಣೆಂದರೆ ಅಮ್ಮ ಒಬ್ಬಳೇ, ಇಲ್ಲಿಯವರೆಗೂ ನಮ್ಮನ್ನೆಲ್ಲ ಎತ್ತಿ ಆಡಿಸಿದ್ದ ಅಕ್ಕಂದಿರಿಗೆ ಮದುವೆಯಾಗಿತ್ತು, ಉಳಿದ ನಾವೆಲ್ಲರೂ ಅಪ್ಪನೂ ಸೇರಿದಂತೆ ಐದು ಜನರು ಗಂಡು ಮಕ್ಕಳೇ. ಇಲ್ಲದ್ದಕ್ಕೆ ಕಂಡುಬಂದ ಕೊರತೆಯ ಕಾರಣವೋ,ನನ್ನ ಮನದೊಳಗಿದ್ದಂತೆ ನನ್ನ ಸ್ನೇಹಿತರಿಗೆಲ್ಲಾ ಇದ್ದಂತೆ ನನಗೂ ಆಡಿ ನಲಿಯುವುದಕ್ಕೆ ನನಗಿಂತ ಚಿಕ್ಕವಳು, ನಾನು ಹೇಳಿದಂತೆ ಕನಿಷ್ಠ ಮಟ್ಟದಲ್ಲಾದರೂ ಕೇಳುವ ಮನಸ್ಸುಳ್ಳ ಹೆಣ್ಣು ಮಗಳೊಬ್ಬಳು ಇರಬೇಕಿತ್ತು,

ನಾನು ಎತ್ತಿ ಆಡಿಸಿ ಮುದ್ದಿಸಬೇಕೆಂಬ ಆಸೆಗೋ, ನನ್ನ ಅಣ್ಣನ ಮಗಳು ಹುಟ್ಟುವವರೆಗೂ ಕೊರಗು ಕಾಡುತ್ತಲೇ ಇತ್ತು.ಅವಳು ಹುಟ್ಟಿದ ದಿನ ಆಕಾಶವೇ ನನ್ನ ಕೈಗೆ ಸಿಕ್ಕಷ್ಟು ಸಂತೋಷ. ಆದರೆ ಅವಳನ್ನು ಎತ್ತಿ ಆಡಿಸುವ, ಮುದ್ದಿಸುವ ವಯಸ್ಸು ಮುಗಿಯುವ ಹೊತ್ತಿಗೆ, ನಂತರ ನನ್ನ ಅಣ್ಣ ಮತ್ತು ತಮ್ಮನಿಂದ ಜನ್ಮ ಪಡೆದ ಮಕ್ಕಳೆಲ್ಲರೂ ಗಂಡು ಸಂತಾನವೇ.!

ಮತ್ತದೇ ಕೊರಗು ತಿರುಗಿ ಬಂತು.ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದ ನನಗೆ ಮತ್ತೇಲ್ಲಿ ಗಂಡು ಮಗುವೇ ಆಗಬಹುದೆಂಬ ಆತಂಕದಲ್ಲಿದ್ದಾಗ ಇರುವ ಒಬ್ಬನೇ
ಸಾಕೆಂದು ಸುಮ್ಮನಾಗಿ ಕುಟುಂಬ ಯೋಜನೆಗೆ ಮುಂದಾದ ನನಗೆ, ನನ್ನ ಮನದಾಸೆ ಅರಿತ ನನ್ನಾಕೆ ಖಂಡಿತವಾಗಿಯೂ ಈ ಭಾರಿ ಹೆಣ್ಣು ಮಗುವೇ ಆಗುವುದು, ನನ್ನ ಮಗನ ಜೊತೆ ಕೂಡಿ ಆಡಿ ನಲಿಯುವುದಕ್ಕೆ ಇನ್ನೊಂದು ಮಗುವಿನ ಅವಶ್ಯಕತೆಯ ಅರಿವು ಮೂಡಿಸಿ ಕನಸು ಕಮರಿ ಹೋಗದಂತ ಭರವಸೆ ತುಂಬಿದಳು.

ಅವಳು ತುಂಬಿದ ಭರವಸೆ, ದೇವರಲ್ಲಿ ನಾನಿಟ್ಟ ನಿರಂತರ ಪ್ರಾಮಾಣಿಕ ಮೊರೆಯ ಫಲವಾಗಿ,ಈಗ ನನ್ನ ಮನೆಯ, ಮನದ ಕಣ್ಣಾಗಿರುವ ಮುದ್ದಿನ ಮಗಳು ಲಕ್ಷ್ಮಿ ಸುವಿಧ ಹುಟ್ಟಿ ಇಂದಿಗೆ 6 ವರ್ಷಗಳು. ಹೆಣ್ಣು ಮಗುವೇ ಹುಟ್ಟುವುದೆಂಬ ಭರವಸೆ ಎಷ್ಟರಮಟ್ಟಿಗೆ ನನ್ನಳೊಗಿತ್ತೆಂದರೆ, “One beautiful colour added to our life ಅದನ್ನ ಕನ್ನಡಕ್ಕೆ ತರ್ಜುಮೆಗೊಳಿಸಿ ನಮಗೆ ಮಹಾಲಕ್ಷ್ಮಿಯಂಥ ಹೆಣ್ಣು ಮಗು ಜನಿಸಿದ್ದಾಳೆ” ಅಂತ ಹುಟ್ಟುವ ಮೊದಲೇ ಸಂದೇಶ ಸಿದ್ದಪಡಿಸಿಕೊಂಡು ಸ್ನೇಹಿತರಿಗೆ ಕಳುಹಿಸಲು ಸಿದ್ದನಾಗಿದ್ದೆ!!

ಅವಳಿಗೊಂದು ಅರ್ಥಪೂರ್ಣವಾದ ಹೆಸರಿಡುವುದರಲ್ಲೂ ವಿಶೇಷತೆ ಮೆರೆದಿದ್ದೆ. ‘ಲಕ್ಷೀಸುವಿಧ’ ಎಂಬ ಹೆಸರನ್ನಿಡಲು ತೀರ್ಮಾನಿಸಿದೆ.ಕಾರಣ ನನ್ನ ತಾಯಿಯ ಹೆಸರು ಲಕ್ಷ್ಮಮ್ಮ, ಅವರಜ್ಜಿಯ ಔದಾರ್ಯ ಗುಣಗಳು ಬರಲೆಂದು ಮತ್ತು ನಮ್ಮ ಮನೆತನದ ಹೆಣ್ಣು ದೇವರ ಹೆಸರು ಲಕ್ಷೀಯೇ ಆದ್ದರಿಂದ ಅವಳ ಕೃಪೆ ಸದಾ ಇರಲೆಂದು ಲಕ್ಷ್ಮೀ ಎಂದು ಪ್ರಾರಂಭಿಸಿ, ಮುಂದೆ ‘ಸು’ ಅವರಮ್ಮನ ಹೆಸರು ಸುಚಿತ್ರ.

ಯಾವತ್ತೂ ಹೆತ್ತಮ್ಮನಿಗೆ ಮಗಳ ಕೈರುಚಿ, ತನ್ನಮ್ಮನ ಕೈತುತ್ತು ನೆನಪಿಸಿದಂದು ಮಗಳ ಜನ್ಮ ಸಾರ್ಥಕವಂತೆ. ನಂತರ ‘ವಿ’ ನನ್ನ ತಂದೆಯ ಹೆಸರಿನ ಮೊದಲ ಅಕ್ಷರ, ಅವರು ಧೈರ್ಯ ಮತ್ತು ಸಾಹಸದ ಪ್ರತೀಕ, ಅವಳ ತಾತನ ಈ ಗುಣಗಳು ಇವಳಲ್ಲಿರಲೆಂದು , ತದನಂತರದ್ದೆ ‘ಧ’ ನನ್ನ ಹೆಸರಿನ ಪ್ರಾರಂಭಿಕ ಅಕ್ಷರ. ಅಲ್ಲದೇ ಯಾವಾಗ ಒಬ್ಬ ತಂದೆ,ತನ್ನ ಮಗಳಲ್ಲಿ ತನ್ನ ತಾಯಿಯನ್ನು ಕಾಣುತ್ತಾನೋ ಅಂದಿಗೆ ಆ ಮಗಳ ಜನ್ಮ ಸಾರ್ಥಕವಂತೆ. ಹೀಗೆ ಇವೆಲ್ಲ ಗುಣಗಳು ಅಲ್ಪಸ್ವಲ್ಪವಾದರೂ ಅವಳಲ್ಲಿ ಮೈಗೂಡಲೆಂದು ಪರಿಪರಿಯಾಗಿ ಆಲೋಚಿಸಿ ಹೆಸರಿಟ್ಟದ್ದಾಯಿತು.

ಅವಳು ಮಾತು ಕಲಿತಾಗಿಂದ ಅವಳ ಕೆಲವು ಪ್ರಶ್ನೆಗಳಿಗೆ ಉತ್ತರವಿಲ್ಲ.ಅವಳು ತಿರುಗಿ ಕೇಳುವ ಪ್ರಶ್ನೆಗಳು ನಮ್ಮನ್ನೇ ಯೋಚನೆಗೀಡು ಮಾಡಿ ಬಿಡುತ್ತವೆ.ಇಲ್ಲಿಗೆ ಸರಿಯಾಗಿ ನಾಲ್ಕು ವರ್ಷದ ಹಿಂದೆ, ಆಗ ಅವಳಿಗಿನ್ನು ಎರಡು ವರ್ಷ.

ಶ್ರೀ ರಾಮ ನವಮಿಯ ದಿನ ಸಂಪ್ರದಾಯದಂತೆ ನನ್ನಪ್ಪನ ಸಮಾಧಿಗೆ ಪೂಜೆ ಸಲ್ಲಿಸಲು ತೋಟಕ್ಕೆ ಕರೆದುಕೊಂಡು ಹೋಗಿದ್ದೆವು. ಇದು ತಾತನ ಗುಂಡಿಯಮ್ಮ ತಾತನಿಗೆ ಕೈ ಮುಗಿಯೆಂದಾಗ ಅಲ್ಲಿ ನಿಂತಿದ್ದ ಅವಳು ಅವಳಮ್ಮನಿಗೆ ಒಂದು ಕುತೂಹಲಕಾರಿ ಪ್ರಶ್ನೆಯಿತ್ತಳು.

ಅಮ್ಮ ತಾತ ಎಲ್ಲಯ್ತೇ? ಕಾಣುಸ್ತಿಲ್ಲ ಅಂದಳು, ತಾತ ಗುಂಡಿ ಒಳಗಡೆ ಇದೆ ಎಂದಳು ಅವರಮ್ಮ. ಮತ್ತೆ ಕರೀ ಮಾತಾಡಸ್ತೀನಿ ತಾತನ್ನ ಎಂದಳು ಮಗಳು.ಅಮ್ಮ ಪೂಜೆಯಲ್ಲಿ ಬ್ಯೂಸಿಯಾದಾಗ, ನನ್ನಪ್ಪ ಜೀವಂತವಿರುವಾಗ ಪಕ್ಕದ ತೋಟದ ಅಪ್ಪನ ಒಡನಾಡಿಯಾಗಿದ್ದ ವ್ಯಕ್ತಿಯೊಬ್ಬರು ಪೂಜಾ ಕಾರ್ಯಕ್ರಮ ಪಾಲ್ಗೊಂಡು,ನನ್ನ ಮಗಳನ್ನು ಹತ್ತಿರ ಕರೆದು ನಿಮ್ಮ ತಾತ ಕರೆದರೆ ಬರೋದಿಲ್ಲ ಅಂದರು.

ಏಕೆ ಬರೋದಿಲ್ಲಾ? ಎಂಬುದು ನನ್ನ ಮಗಳ ಪ್ರಶ್ನೆ. ನಿಮ್ಮ ತಾತ ಸತ್ತು ಹೋಗಿದೆ ಅದಕ್ಕೆ ಬರುವುದಿಲ್ಲವೆಂಬುದು ಅವಜ್ಜನ ಉತ್ತರ. ಇವಳು ಮುಂದುವರೆದು ಏಕೆ ಸತ್ತೋಯ್ತು? ಅದಕ್ಕವಜ್ಜ ವಯಸ್ಸಾಗಿತ್ತು ಅದಕ್ಕೆ ಸತ್ತೋಯ್ತು ಎಂದಾಗ.

ಈ ನನ್ನ ಪುಟಾಣಿ ಮಗಳು ಸೊಂಟದ ಮೇಲೆ ಎರಡೂ ಕೈಗಳನ್ನು ಇಟ್ಟುಕೊಂಡು, ಅವಜ್ಜನನ್ನೇ ದೃಷ್ಟಿಸಿ ನೋಡುತ್ತಾ ಮತ್ತೇ ನಿಂಗೆ ಬಿಳಿಕೂದ್ಲಾಗಿ ನಿಂಗೂ ವಯಸ್ಸಾಗಿದೆ ನೀನು ಸತ್ತೇ ಹೋಗಿಲ್ಲ ಅಂದು ಬಿಟ್ಟಳು. ವಯಸ್ಸಿಗೆ ಮೀರಿದ ಪ್ರಶ್ನೆ ಕೇಳಿ, ನೆರೆದಿದ್ದವರನ್ನೆಲ್ಲಾ ನಿಬ್ಬೆರಗಾಗಿಸಿ, ಈ ಪ್ರಶ್ನೆ ಈ ವಯಸ್ಸಿಗೆ ಹೇಗೆ ಮೂಡಲು ಸಾಧ್ಯವೆಂದು? ಚಿಂತಿಸುವಷ್ಟು ನಮ್ಮನ್ನು ತಬ್ಬಿಬ್ಬುಗೊಳಿಸಿದ್ದಳು .

ಆವಜ್ಜ ನಮ್ಮಮ್ಮನ ಕಡೆ ತಿರುಗಿ ನೋಡ್ಡೋ ನಿನ್ ಮೊಮ್ಮಗಳನ್ನ?! ಅಂದವನೇ ಮೌನಕ್ಕೆ ಜಾರಿದ. ಅವಳ ತೊದಲು ಭಾಷೆಯಲ್ಲಿ ಅಪ್ಪಾ.. ವಿ(ಈ)ಜಾಡೋಕೆ ಕರ್ಕೊಂಡು ಹೋಗಪ್ಪ ಅಂತ ಕೇಳ್ತಿದ್ದವಳನ್ನ, ಒಂದೊಮ್ಮೆ ಸ್ನೇಹಿತರ ಕುಟುಂಬದ ಜೊತೆ ಬೀಚ್ ನ ನೀರಿನಲ್ಲಿ ಆಟವಾಡಿಸಲು ಕರೆದುಕೊಂಡು ಹೋಗಿದ್ದೆ.

ನೀರಿಗಿಳಿದ ಇವಳು ಸಮುದ್ರದ ಸ್ವಾಭಾವಿಕ ನೀರಿನ ಗುಣ ಉಪ್ಪಿನಾಂಶದಿಂದ ಕೂಡಿರುತ್ತದೆಂದು ಇನ್ನೂ ಅರಿಯದ ವಯಸ್ಸಲ್ಲಿ, ಸಮುದ್ರದ ಅಲೆಯಿಂದ ಸಹಜವಾಗಿ ಚೆಲ್ಲುವಿಕೆಯಿಂದ, ನೀರು ಕಣ್ಣಿಗೆ ರಾಚಿ ಕಣ್ಣಿನ ಉರಿಯೊಂದಿಗೆ ಬಾಯೆಲ್ಲಾ ಉಪ್ಪುಪ್ಪು ಎನಿಸಿದ ತಕ್ಷಣ ಅವಳು ಕೇಳಿದ ಮುಗ್ಧ ಪ್ರಶ್ನೆ” ಯಾರಪ್ಪಾ ಈ ನೀರಿಗೆ ಇಷ್ಟೊಂದು ಉಪ್ಪು ಹಾಕ್ಕ್ದೋರು ಅಂತ”?

ಹೀಗೆ ಅವಳಾಗೇ ಕೇಳುವ ಈ ತರಹದ ಪ್ರಶ್ನೆ ಒಂದೆಡೆಯಾದರೆ, ನಾವೇ ಕೇಳುವ ಪ್ರಶ್ನೆಗೆ ಆಶ್ಚರ್ಯಚಕಿತಗೊಳಿಸುವ ಸಿದ್ಧ ಉತ್ತರ ಅವಳ ಮನಸ್ಸಲ್ಲಿ ಆ ತಕ್ಷಣಕ್ಕೆ ಹೊಳೆಯುವುದನ್ನು ಗಮನಿಸಿರುವ ಮನೆ ಮಂದಿಗೆಲ್ಲ ಅವಳನ್ನು ಮಾತಿಗೆಳೆದು ಮಜ ತೆಗೆದುಕೊಳ್ಳವುದು ನಿತ್ಯದ ಸಂಭ್ರಮ.

ಮಗಳು ಜಾನಕಿ ಸೀರಿಯಲ್ ನ ಟೈಟಲ್ ಬಂದಾಕ್ಷಣ ನಾನು ಹಾಡಿನ ಪಲ್ಲವಿಯನ್ನ ಗುನುಗುತ್ತಿದ್ದರೆ, ಅಪ್ಪಾ ಮಗಳು ಜಾನಕಿ ಅನ್ಬೇಡಾ… ಮಗಳು ಸುವಿಧ ಅನ್ನು ನಂಗಿಷ್ಟ ಅಂದು ಅಪ್ಪ- ಮಗಳ ಸಂಬಂಧವನ್ನ ಇನ್ನಷ್ಟು ಗಟ್ಟಿಗೊಳಿಸಿದವಳು.

ಇನ್ನೊಂದು ದಿನ ಅವಳ ದೊಡ್ಡಪ್ಪ ಯಾಕಮ್ಮಾ ನನ್ನ ಹಬ್ಬಕ್ಕೆ ಊಟಕ್ಕೆ ನಿಮ್ಮನೆಗೆ ನೀನ್ ಕರಿಲಿಲ್ಲ ಅಂತ ತಮಾಷೆಗೆ ಕೇಳುದ್ರೇ ಇವಳು ಸೀರಿಯಸ್ ಆಗಿ ನಮ್ಮಪ್ಪ ಆವತ್ತು ಹೇಳ್ಲಿಲ್ವಾ ಹಬ್ಬಕ್ಕೆ ಬಾ ಅಂತ ನಿಂಗೆ ಕಿವಿ ಕೇಳ್ಸಲಿಲ್ವಾ ? ಎರಡು ಸಾರಿ ಹೇಳ್ಬೇಕಾ? ಮತ್ತೆ ನಾನ್ ಬೇರೆ ಕರಿಬೇಕಂತೆ, ಅಂತ ಅನವಶ್ಯಕ ಕರೆ ಸಾಧುವಲ್ಲವೆಂದು ಮುಗ್ಧ ಮಾತುಗಳಲ್ಲೇ ಹೊರ ಹಾಕಿದವಳು.

ತಾನೇ ಮುದ್ದಾಗಿ ಬರೆದು ಹೋಂವರ್ಕ ಮುಗಿಸಿದ್ದಾಗ, ಅವರ ಮಿಸ್ ಹೇ.. ಸುವಿಧ ಈ ಹೋಂವರ್ಕ ಯಾರೇ ಬರೆದುಕೊಟ್ಟಿದ್ದು ಅಂತ ಕೇಳಿದ್ದಕ್ಕೆ , ನಾನೇ ಬರೆದಿದ್ರು ಆ ಮಿಸ್ ನೀನ್ ಬರ್ಕೋಟ್ಟಿದ್ದೀಯಾ ಅಂತಾರೆ ಹೋಗಪ್ಪೋ ಅಂದವಳು, ಅವತ್ತಿಂದ ಇವತ್ತಿನನವರೆಗೂ ನಾವೇ ಬರೆದುಕೊಡಲು ಮುಂದಾದರೆ ‘ಬೇಡ ಸುಮ್ಕಿರಪ್ಪ ಆ ಮಿಸ್ ಯಾರೋ ಬರ್ಕೋಟ್ಟವರೇ ಅಂತಾರೆ ನಾನೇ ಬರಿತೀನಿ ಅನ್ನೊ ಸ್ವಾಭಿಮಾನ.

ಯಾರ್ಗೋ ಅವರ ಮಿಸ್ ಬೈದದಕ್ಕೆ ಉಳಿದವರೆಲ್ಲ ಅಳ್ತಿದ್ದಾಗ, ನಿಂಗ್ ಅಳು ಬರ್ತೀಲ್ವೇನೆ ಸುವಿಧ ಅಂದರೆ ಸುಮ್ ಸುಮ್ಕೇ ಯಾಕ್ ಅಳ್ಬೇಕು ಅಂದಿದ್ದಳಂತೆ ಅದಕ್ಕವರು ಅವರಮ್ಮಂಗೆ ನಿಮ್ಮ ಮಗಳಿಗೆ ಏನ್ ಧೈರ್ಯ ಅಂತ ಮೆಚ್ಚುಗೆ ವ್ಯಕ್ತಪಡಿಸಿರಂತೆ.

ಇರುವುದನ್ನ ಮುಕ್ತವಾಗಿ ಹೇಳಿಬಿಡುವ ಸ್ವಾಭಾವಿಕ ನೆಡೆಯವಳು. ಏನಾದ್ರೂ ಬೇಕಾದ್ರೇ, ಎಲ್ಲಿಗಾದ್ರೂ ಕರ್ಕೊಂಡು ಅಂತ ಪುಸಲಾಯಿಸೋಕೆ ಅಪ್ಪನ ಬಗ್ಗೆ ಇರೋ ಹಾಡುಗಳನ್ನ ಅಪ್ಪ ಐ ಲವ್ ಯು ಪ್ಪಾ.. ಪರಪಂಚ ನೀನೆ ಪರಪಂಚ ನೀನೆ.. ಅಂತಾ ನನ್ನನ್ನೇ ನೋಡ್ತಾ ಗುನುಗುತ್ತಾ ಅಪ್ಪನ್ನ ಒಲಿಸಿಕೊಂಡು ಮನಸ್ಸ್ ಸಂತೋಷ ಪಡಿಸುವ ಚಾಲಾಕಿ.

ರಾತ್ರಿ ಮಲುಗುವಾಗ ಬೇಗ ಮಲಗು ಇಲ್ಲ ಅಂದ್ರೇ ಆಚೆಗೆ ಗೊಗ್ಗಯ್ಯ ಬಂದವನೇ, ಒಳಗಡೆ ಬಂದು ನಿನ್ನ ಹಿಡ್ಕೋಂಡು ಹೋಗ್ತಾನೇ ಅಂದ್ರೇ, ಅಪ್ಪಾ ನೀನು ಭಲೇ ಭಲೇ ಆಡ್ತೀಯಲ್ಲಾ (ದುರ್ಯೋಧನನ ಪಾತ್ರ ಮಾಡುವಾಗ) ಆವಾಗ ಕೈಯಲ್ಲಿ ಏನೋ ಹಿಡ್ಕೋಂಡಿರ್ತಿಯಲ್ಲ ಅದು ಏನು ಹೇಳು ಅಂದ್ಲು, ‘ಗದೆ’ ಕಣಮ್ಮ ಅದು ಅಂದ್ರೆ.

ಅದನ್ನ ತೋರ್ಸಪ್ಪಾ ಗೊಗ್ಗಯ್ಯ ಒಡೊಗ್ತಾನೇ! ಅಂದು,ನೀವು ಸುಳ್ಳು ಸುಳ್ಳು ಹೇಳುದ್ರೇ ನಾ ನಂಬೋಳಲ್ಲ ಅನ್ನೋದನ್ನ ಪರೋಕ್ಷವಾಗಿ ಸಾಬೀತುಪಡಿಸಿದ್ದಳು. ಹೀಗೆ ಮುಗ್ಧ ಉತ್ತರಗಳೊಂದಿಗೆ ಮನೆ ಮಂದಿಯನ್ನೆಲ್ಲ ತನಗರಿವಿಲ್ಲದೇ ನಗೆಗಡಲಲ್ಲಿ ತೇಲಿಸುತ್ತಾ, ಮನೆ ತುಂಬಾ ಮುಗ್ಧ ಮಾತುಗಳಿಂದ ಸದಾ ಆನಂದ ತುಂಬುತ್ತಿರುವುದು ಮಾತ್ರ ಇಂದಿಗೂ ಈ ನನ್ನ ಮುದ್ದಿನ ಮಗಳೆ.

ಅದಕ್ಕೆ ಹೇಳೋದು…. ಮಗಳೆಂದರೆ ವರ್ತಮಾನ,ಮಗಳೆಂದರೆ ಭವಿಷ್ಯ, ಮಗಳೆಂದರೆ ಬೆಲೆ ಕಟ್ಟಲಾಗದ ದೇವರ ಸೃಷ್ಟಿ. ಮಗಳೆಂದರೆ ಇಷ್ಟೆಲ್ಲಾ ಇದ್ದರೂ ಏಕೆ ಈಗಿನವರಿಗೆಲ್ಲಾ ಭಾರ ಎನಿಸುತ್ತಿದ್ದಾಳೆ? ಹೆಣ್ಣು ಭ್ರೂಣ ಹತ್ಯೆಯನ್ನು ಈಗಲೂ ಕಾಣುತ್ತಿದ್ದೇವೆ? ವಂಶಾಭಿವೃದ್ದಿಗೆ ಗಂಡು ಬೇಕು ನಿಜ, ಆದರೆ ಅದು ಹೆಣ್ಣಿಲ್ಲದೇ ಹೇಗೆ ಸಹಜ ವಂಶಾಭಿವೃದ್ದಿ ಸಾಧ್ಯ? ಅದೇನೇ ಇರಲಿ ತಂದೆಯ ನಿಜವಾದ ಅಪತ್ಬಾಂಧವಳು ಮಗಳು.

ಅದಕ್ಕೆ ಮಗಳು ಭಾರ ಅಲ್ಲ; Tension ಅಲ್ಲವೇ ಅಲ್ಲ; Ten sons ಗೆ ಸಮ. ಮಗಳು ಮನೆಯ ಲಕ್ಷ್ಮೀ, ಸಮೃದ್ಧಿ, ಕಾರುಣ್ಯ.ಮಗಳಿಗೆ ಗೌರವ ಕೊಡಿ,ಮುದ್ದಿಸಿ,ಮಮತೆಯಿಂದ ಪ್ರೀತಿಸಿ. ಒಬ್ಬ ಮಗಳು ಸಾವಿರ ನಕ್ಷತ್ರಕ್ಕೆ ಸಮ. ನನ್ನ ಮುದ್ದಿನ ಮಗಳಿಗೆ 6 ವರ್ಷ ತುಂಬಿದ ಈ ದಿನದಂದು ಕರೋನಾದ ಭೀಕರತೆ ಇನ್ನೂ ಕಡಿಮೆಯಾಗದಿರುವ ನೋವಿದೆ.

ನಮಗೂ ಸಂಕಟ ತಂದಿಟ್ಟಿದೆ.ಕಾರಣ ಕಳೆದ ವರ್ಷ ಈ ಸಮಯದಲ್ಲಿ ಅವಳೇ ಹೇಳಿದ್ದಳು ಕರೋನಾ ಮುಗಿದ ಮೇಲೆ ಕೇಕ್ ಕಟ್ ಮಾಡ್ಸಪ್ಪಾ ಅಂತ.ಆದರೆ ಈ ವರ್ಷವೂ ಕೂಡ ಭಯದ ವಾತಾವರಣದಲ್ಲೆ ಅವಳ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಬೇಕಿದೆ. ನನ್ನ ಮುದ್ದಿನ ಮಗಳ ಭವಿಷ್ಯ ನನ್ನಿಷ್ಟ- ಅವಳಿಷ್ಟಗಳು ಮೇಳೈಸಿಕೊಂಡು ಬೆಳೆಯುವಂತ ವ್ಯಕ್ತಿತ್ವ, ಅವಳ ಬಗ್ಗೆ ಕಂಡ ಕನಸುಗಳು ನನಸಾಗುವಂತ ಸಕಲ ಸೌಭಾಗ್ಯವ ಆ ಭಗವಂತ ಕರುಣಿಸಲಿ.. ಹ್ಯಾಪಿ ಬರ್ತಡೇ ಮಗಳೇ, ಪ್ರೀತಿಯ ಅಮ್ಮು……

ಧಾರ್ಮಿಕ ಕಾರ್ಯಕ್ರಮದ ಮೆರವಣಿಗೆ:  9 ಮಂದಿಯ ಮೇಲೆ ಪ್ರಕರಣ ದಾಖಲು

0

Publicstory


ತುರುವೇಕೆರೆ: ಕೋವಿಡ್-19ರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಯನ್ನು ದಿಕ್ಕರಿಸಿ ಸಾರ್ವಜನಿಕರನ್ನು ಗುಂಪು ಹಾಕಿಕೊಂಡು ಕಾರ್ಯಕ್ರಮ ಮಾಡಿದ ಆರೋಪದಡಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸೇರಿದಂತೆ 9 ಮಂದಿಯ ಮೇಲೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಹೊರಪೇಟೆಯ ಯಜಮಾನ್ ಮಹೇಶ್, ದೇವೇಗೌಡ ಬಡಾವಣೆಯ ಮಲ್ಲಿಕಾರ್ಜುನ್, ಚಂದ್ರಶೇಖರ್, ಸ್ವರ್ಣಾಂಬ ಪ್ರಾವಿಜನ್ ಸ್ಟೋರ್ನ ರಾಜೇಶ್, ಹೊರಪೇಟೆಯ ಚಿದಾನಂದ, ಎಂ.ಬೇವಿನಹಳ್ಳಿಯ ಮಹಾಲಿಂಗಯ್ಯ, ಯೋಗೇಶ್ ಟ್ರೇಡ್ ಮಾಲೀಕ ಯೋಗೇಶ, ವಿನಾಯಕ ಕುಂಕುಮ ಅಂಗಡಿಯ ಜಗದೀಶ್, ಬಸವೇಶ್ವರ ನಗರದ ಕಲ್ಯಾಣ ಸ್ವಾಮಿಯನ್ನು ಪ್ರಕರಣದ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.ಘಟನೆ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಯಾವುದೇ ಮೆರವಣಿಗೆ ಹಾಗು ಇನ್ನಿತರ ಜನರು ಸೇರುವ ಕಾರ್ಯ ಕ್ರಮಗಳನ್ನು ಮಾಡಬಾರದೆಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಸಹ ಮಾ.29ರ ರಾತ್ರಿ 8 ಗಂಟೆಯ ಸಮಯದಲ್ಲಿ ಮೇಲಿನ 9 ಆರೋಪಿಗಳು ಇಲ್ಲಿನ ಕೋಡಿಬಸವೇಶ್ವರ ಸ್ವಾಮಿಯ ಧಾರ್ಮಿಕ ಕಾರ್ಯಕ್ರಮದ ಮೆರವಣಿಗೆಯನ್ನು ಮಾಡಿದ್ದರಿಂದ ರಾಷ್ಟ್ರೀಯ ವಿಪತ್ತು ಕಾಯ್ದೆ 2005 ಮತ್ತು ಕಲಂ60ರ ಅಡಿಯಲ್ಲಿ ಮಾ.30ರಂದು ಪಿಎಸ್.ಐ.ಪ್ರೀತ್ ಅವರು ಸರ್ಕಾರದ ನಿರ್ದೇಶನದ ಮೇರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಒಂಬತ್ತು ಮಂದಿಯ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆಂದು ತಿಳಿಸಿದ್ದಾರೆ.