Monday, May 11, 2026
Google search engine
Home Blog Page 162

ಜೆಡಿಎಸ್ ಸೇರುವುದಾಗಿ ಕುಮಾರಸ್ವಾಮಿ ಬಳಿ ಹೇಳಿದ್ದ ಮಸಾಲಜಯರಾಂ: ಎಂ.ಟಿ.ಕೃಷ್ಣಪ್ಪ ಹೇಳಿಕೆ

ಸಂಗ್ರಹ ಚಿತ್ರ

Publicstory. in


ತುರುವೇಕೆರೆ : ಶಾಸಕ ಮಸಾಲಜಯರಾಂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಜೆಡಿಎಸ್ ಪಕ್ಷ ಸೇರುವುದಾಗಿ ಹೇಳಿಕೊಂಡು ಆರ್.ಡಿ.ಪಿ.ಆರ್ ನಿಂದ 12 ಕೋಟಿ ರೂಪಾಯಿಗಳ ಅನುದಾನ ತಂದಿದ್ದನ್ನು ಮರೆತುಬಿಟ್ಟರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಬಹಿರಂಗಪಡಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಆ ಅನುದಾನದ ಹಣದಿಂದ ಸಿ.ಎಸ್. ಪುರ ಹೋಬಳಿ ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರ ಪತಿ ಸೇರಿಕೊಂಡು ಹಲವು ಕಾಮಗಾರಿ ಮಾಡಿದ್ದರೂ ಕೂಡ ಅವು ಸಂಪೂರ್ಣ ಕಳಪೆಯಾಗಿವೆಯೆಂದು ಆರೋಪಿಸಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಲ್ಲೂಕಿಗೆ ಮಂಜೂರಾಗಿದ್ದ ಸುಮಾರು. 55 ಕೋಟಿ ರೂಪಾಯಿಗಳ ಕಾಮಗಾರಿಯನ್ನು ಹಾಲಿ ಶಾಸಕ ಮಸಾಲಜಯರಾಮ್ ಇಂದು ತನ್ನದೆಂದು ಎದೆಯುಬ್ಬಿಸಿಕೊಂಡು ಹೇಳುತ್ತಿದ್ದಾರೆ. ಏಕೆಂದರೆ ಯಾವುದೇ ಕಾಮಗಾರಿ ಅನುಮೋದನೆಗೊಂಡು ಶೇ.33 ರಷ್ಟು ಹಣ ಬಿಡುಗಡೆಯಾದ ನಂತರವೇ ಟೆಂಡರ್ ಕರೆಯಲು ಸಾಧ್ಯ ಎಂಬುದರ ಕಾನೂನು ಅರಿವು ಶಾಸಕರಿಗಿಲ್ಲ ಎಂದು ಗೇಲಿ ಮಾಡಿದರು.

ಗುಬ್ಬಿ ಶಾಸಕ ಶ್ರೀನಿವಾಸ್ ಮಸಾಲಜಯರಾಂ ಶಾಸಕನಾಗಲು ನಾನು ಸಹಕಾರ ನೀಡಿಲ್ಲ ಎಂಬುದಾಗಿ ಹೇಳಿದ್ದಾರೆ. ಅದನ್ನು ದೇವರೆ ಬಲ್ಲ. ಆದರೆ ಶಾಸಕನಾಗಲು ಗುಬ್ಬಿ ಶ್ರೀನಿವಾಸ್ ಅವರ ಸಹಕಾರ ನೀಡಿದ್ದರು ಎಂದು ಮಸಾಲಜಯರಾಂ ಎಚ್.ಡಿ.ಕುಮಾರಸ್ವಾಮಿ ಬಳಿ ಹೇಳಿದ್ದಾರೆ. ಇದನ್ನು ಶಾಸಕರು ಮರೆತುಬಿಟ್ಟರೆ ಎಂದು ಪ್ರಶ್ನಿಸಿದರು.

ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಸಂಕೀರ್ಣ ಮಳಿಗೆಗೆ ವಾಜಪೇಯಿ ಹೆಸರಿಡಲು ಶಾಸಕ ಮಸಾಲಜಯರಾಂ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವವಿದೆ ಆದರೇ ಈ ಕಟ್ಟಡಕ್ಕೆ ಬುನಾದಿ ಹಾಕಲು ಎಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅನುದಾನ ಮಂಜೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ ಕನ್ನಡಿಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಿಡುವಂತೆ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದರು.

ತಾಲ್ಲೂಕಿನ ಗ್ರಾ.ಪಂ. ಚುನಾವಣೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯತ ಮತದಾನ ಮಾಡಿಸಲು ಶ್ರಮಿಸಿದ ತಾಲ್ಲೂಕು ಆಡಳಿ, ಪೊಲೀಸ್ ಹಾಗು ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ಮಧುಸೂಧನ್, ಸದಸ್ಯ ವಿಜಯಕುಮಾರ್, ಜೆ.ಡಿ.ಎಸ್ ಯುವ ಮುಖಂಡ ವೆಂಕಟಾಪುರ ಯೋಗೀಶ್ ಇದ್ದರು.

ತುರುವೇಕೆರೆಯಲ್ಲಿ ಮನೆ ಮಾತಾದ ಈ ಒಬ್ಬ ಮತದಾರ!

Publicstory. in


ತುರುವೇಕೆರೆ: ತಾಲ್ಲೂಕಿನ 2 ನೇ ಹಂತದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಯು ಭಾನುವಾರ ಶಾಂತಿಯುತವಾಗಿ ನಡೆದು ಶೇ.90.30ರಷ್ಟು ದಾಖಲೆಯ ಮತದಾನವಾಗಿದೆ.

ಮತಗಟ್ಟೆಯೊಂದರಲ್ಲಿ ಕೋವಿಡ್ ಸೋಂಕಿತ ಮತದಾರರೊಬ್ಬರು ಪಿಪಿಇ ಕಿಟ್ ಧರಿಸಿಕೊಂಡು ಬಂದು ಮತ ಚಲಾಯಿಸಿದ್ದು ಗಮನ ಸೆಳೆಯಿತು.

ಸೋಂಕಿತನ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಯಿತು. ಮತಗಟ್ಟೆ ಸಿಬ್ಬಂದಿ ಯಾವುದೇ ಭಯ ತೋರದೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಬೆಳಗ್ಗೆ 7 ಗಂಟೆ ಮತದಾನ ಆರಂಭವಾದರೂ 9 ಗಂಟೆಯ ತನಕ ತೀರ ನಿಧಾನಗತಿಯಲ್ಲಿ ಸಾಗಿತು. ಗ್ರಾಮೀಣ ಪ್ರದೇಶಗಳಲ್ಲಿನ ಜನರು ಕೃಷಿ ಕಾರ್ಯಚಟುವಟಿಕೆ ಹಾಗು ದನಕರುಗಳ ಮೇಯಿಸಲು ಒಂದೇ ಸಮನೆ ಬಂದಿದ್ದರಿಂದ ಬಿರುಸಿನ ಮತದಾನ ನಡೆಯಿತು.

ವಯಸ್ಸಾದವರು, ವೃದ್ದರು, ಗರ್ಭಿಣಿಯರು, ಅಂಗವಿಕಲು ಮತ್ತು ರೋಗಿಗಳನ್ನು ಬೈಕ್ ಆಟೋಗಳಲ್ಲಿ ಕರೆ ತಂದು ಮತದಾನ ಮಾಡಿಸಲಾಗುತ್ತಿತ್ತು.

ಕೆಲ ಗ್ರಾಮಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಮತ ಚಲಾಯಿಸಲು ಬರುವವರಿಗೆ ಮಾಸ್ಕ್, ತಂಪು ಪಾನೀಯಗ ಹಾಗು ತಿಂಡಿ, ಊಟದ ವ್ಯವಸ್ಥೆ ಕಲ್ಪಿಸಿದ್ದರು.

ತಾಲ್ಲೂಕಿನ ವಡಕೇಘಟ್ಟ ಮತಗಟ್ಟೆ ಕೇಂದ್ರದಲ್ಲಿ ಎರಡು ಗುಂಪುಗಳ ನಡುವೆ ಕೆಲ ನಿಮಿಷ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ತಾಲ್ಲೂಕಿನಾದ್ಯಂತ ಮಹಿಳೆಯರು. ಯುವತಿಯ, ಬಹಳ ಉರುಪಿನಿಂದ ಬಂದು ಮತದಾನ ಮಾಡುತ್ತಿದ್ದದು ಕಂಡು ಬಂದಿತು.

ಮಾಜಿ ಶಾಸಕ ಎಚ್.ಬಿ.ನಂಜೇಗೌಡ ವಡಕೇಘಟ್ಟದಲ್ಲಿನ ಮತಗಟ್ಟೆ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದರು.

ತಾಲ್ಲೂಕಿನಲ್ಲಿ ಒಟ್ಟು 128236 ಮತದಾರರಿದ್ದು ಆ ಪೈಕಿ115735 ಮತಗಳು ಚಲಾವಣೆಯಾಗಿವೆ.
ತಾಲ್ಲೂಕಿನ 14 ಕೋವಿಡ್ ಸೋಂಕಿತರಲ್ಲಿ ಕೋಳಾಲ1, ಮೇಲಿನವಳಗೇರಹಳ್ಳಿ2, ಮಂಗಿಕುಪ್ಪೆ1, ಹುಲಿಕೆರೆ2, ಒಟ್ಟು 6 ಸೋಂಕಿತ ವ್ಯಕ್ತಿಗಳು ತಮಗೆ ನಿಗಧಿಪಡಿಸಿದ ಸಮಯದಲ್ಲಿ ಮತಚಲಾಯಿಸಿದರು.

ತಹಶೀಲ್ದಾರ್ ಆರ್.ನಯಿಂಉನ್ನೀಸಾ ಅವರು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಎಲ್ಲಿಯೂ ಅಹಿತಕರ ಘಟನೆಯು ನಡೆಯದಂತೆ ಪಿಎಸ್ಐ ಪ್ರೀತಂ ಬಂದೋಬಸ್ತ್ ವಹಿಸಿದ್ದರು.

ಇಂದು ಹನಮಂತ ವ್ರತ; ಆರಾಧನೆ ಹೇಗೆ

0

ಭಕ್ತರಿಗೆ ಪ್ರಿಯವಾದ ವ್ರತಗಳಲ್ಲಿ ಹನುಮದ್ ವ್ರತವೂ ಒಂದು. ಮಾರ್ಗಶಿರ ಮಾಸದ ತ್ರಯೋದಶಿಯಂದು ಆಚರಿಸಬೇಕಾದ ವ್ರತ ಇದಾಗಿದೆ.

ಭಾದ್ರಪದ ಶುದ್ಧ ಚತುರ್ದಶಿಯಂದು ಅನಂತವ್ರತ ಇದ್ದಂತೆ ಮಾರ್ಗಶಿರ ಶುಕ್ಲ ತ್ರಯೋದಶಿಯಂದು ಈ ಹನುಮದ್ ವ್ರತ.

ಅದು ಅನಂತಪದ್ಮನಾಭನಾದ ಶ್ರೀಹರಿಯ ವ್ರತವಾದರೆ, ಇದು ಭಾವೀ ಪದ್ಮಾಸನರಾದ ಹನುಮದ್ರೂಪಿ ಶ್ರೀವಾಯುದೇವರ ವ್ರತ. ಅದು ಸರ್ವೋತ್ತಮ ವ್ರತವಾದರೆ, ಇದು ಜೀವೋತ್ತಮನ ವ್ರತ.

ಅನಂತವ್ರತದಂತೆ ಇಲ್ಲಿಯೂ ಸಹ ದೋರಕ (ದಾರ) ವನ್ನು ಸಮರ್ಪಿಸಿ ಕಟ್ಟಿಕೊಳ್ಳಬೇಕು. ಅನಂತವ್ರತಕ್ಕೆ ಹದಿನಾಲ್ಕು ಗಂಟುಗಳ ದಾರ ವಿಹಿತವಾಗಿರುವಂತೆ, ಇದಕ್ಕೆ ಹದಿಮೂರು ಗಂಟುಗಳ ದಾರ ವಿಹಿತ.

ಅನೇಕರು ತಪ್ಪಾಗಿ ಇದನ್ನು ಹನುಮಜ್ಜಯಂತಿ ಎಂಬುದಾಗಿ ಆಚರಿಸುವುದುಂಟು ವಾಸ್ತವಾಗಿ ಹನುಜ್ಜಯಂತಿ ಚೈತ್ರ ಶುಕ್ಲ ಪೂರ್ಣಿಮೆಯಂದು ಎಂಬುದು ಪುರಾಣಗಳಲ್ಲಿ ಉಕ್ತವಾಗಿದೆ.

ಇದು ಹನುಮದ್ ವ್ರತ, ಅದು ಹನುಮಜ್ಜಯಂತಿ.‌
ಶ್ರೀವಾಯುದೇವರ ಅವತಾರತ್ರಯಗಳಲ್ಲಿ ಹನುಮದ್ರೂಪ ಮೊದಲನೆಯದು, ಭೀಮಸೇನ ಹಾಗೂ ಮಧ್ವರೂಪಗಳು ಸಹ ವಾಯುರೂಪಗಳೇ ಆಗಿವೆ.

ಹನುಮದ್ರೂಪ ಚಿರಂಜೀವಿ ಎಂಬ ಕಾರಣದಿಂದ ಆ ರೂಪಕ್ಕೆ ವಿಶೇಷ ಆರಾಧನೆ ಎಂಬುದು ಮೇಲ್ನೋಟಕ್ಕೆ ಕಾಣುವುದು.
ಮುಖ್ಯವಾಗಿ ಶ್ರೀವಾಯುದೇವರ ಅವತಾರ ರೂಪಗಳು ಸಹ ಮೂಲ ರೂಪದಂತೆ ಶಕ್ತಿ ಸಂಪನ್ನವಾದವು.

ಅದರಂತೆ ಆ ಮೂರು ರೂಪಗಳಲ್ಲೂ ಜೀವಭೇದ ಮೊದಲಾದ ಕಾರಣಗಳಿಂದ ಇತರ ದೇವತೆಗಳಲ್ಲಿ ಕಾಣುವ ಶಕ್ತಿಹ್ರಾಸ ಮೊದಲಾದ ದೋಷಗಳು ಕಂಡು ಬರುವುದಿಲ್ಲ.
ಅಧಿಕ ಮಾಸದಲ್ಲಿ ಹನುಮನ ದರ್ಶನ ಏಕೆ?

ಇವೆಲ್ಲವುದರ ಸೂಚಕವಾಗಿ ವಾಯುದೇವರ ಅವತಾರ ರೂಪಕ್ಕೆ ಮುಖ್ಯವಾಗಿ ಪೂಜೆ ಸಲ್ಲುವುದು ಎಂಬುದನ್ನು ಗಮನಿಸಬೇಕು. ಇದರಂತೆ ರುದ್ರಾದಿ ಇತರ ದೇವತೆಗಳಿಗೆ ಅವತಾರ ರೂಪಗಳಿಗೆ ವಿಶೇಷ ಪೂಜೆ ಇಲ್ಲದೆ ಕೇವಲ ಮೂಲರೂಪಗಳಿಗೆ ಮುಖ್ಯ ಪೂಜೆ ಎಂಬುದು ವಿಶೇಷ.

ಶ್ರೀಹರಿವಾಯುಗಳಿಗೆ ಮಾತ್ರ ಅವತಾರ ರೂಪಗಳಿಗೂ ಮೂಲ ರೂಪದಲ್ಲಷ್ಟೆ ವೈಭವ ಪೂಜೆ ಆಗುತ್ತದೆ. ಏಕೆಂದರೆ ಅವರ ಅವತಾರ ರೂಪಗಳು ಸಹ ಮೂಲ ರೂಪದಂತೆ ಸಕಲ ಶಕ್ತಿಸಂಪನ್ನವಾದವು ಎಂಬುದು ಮುಖ್ಯ ಕಾರಣ. ಅದರಲ್ಲೂ ಶ್ರೀಲಕ್ಷ್ಮೀನಾರಾಯಣರ ರೂಪಗಳು ಶ್ರೀವಾಯುದೇವರ ಅವತಾರ ರೂಪಗಳಿಗಿಂತಲೂ ವಿಶಿಷ್ಟವಾದವು.


ಮಾಹಿತಿ, ಚಿತ್ರ ಕೃಪೆ: ವಾಟ್ಸಾಪ್ ನಲ್ಲಿ ಬಂದದ್ದು

ಆಡುಗಳ ಮೇಲೆ ದಾಳಿ ಮಾಡಿದ ಚಿರತೆ

Publicstory. in


ತುರುವೇಕೆರೆ: ಮಾಯಸಂದ್ರ ಹೋಬಳಿ ವಡವನಗಟ್ಟ ಸಮೀಪ ಕಪ್ಪೂರು ಗ್ರಾಮದ ಹೊರವಲಯದಲ್ಲಿ ಚಿರತೆಯೊಂದು ಇಂದು ಮಧ್ಯಾಹ್ನ ಮೇಯುತ್ತಿದ್ದ ಆಡುಗಳ ಮೇಲೆ ದಾಳಿ ಮಾಡಿದ ಪರಿಣಾಮ ಒಂದು ಆಡು ಸ್ಥಳದಲ್ಲೇ ಮೃತಪಟ್ಟಿದೆ.

ಗ್ರಾಮದ ಭೈರಪ್ಪ ತಮ್ಮ ಆಡುಗಳನ್ನು ಮೇಯಲೆಂದು ಗ್ರಾಮದ ಹೊರವಲಯದ ತಮ್ಮ ಹೊಲದಲ್ಲಿ ಬಿಟ್ಟಿದ್ದರು. ಸಂಜೆ 5 ಗಂಟೆ ವೇಳೆಯಲ್ಲಿ ಚಿರತೆಯೊಂದು ಮೇಯುತ್ತಿದ್ದ ಆಡಿನ ಮೇಲೆ ದಾಳಿ ಮಾಡಿ ಅದರ ಕುತ್ತಿಗೆ ಕಚ್ಚಿ ಸಾಯಿಸಿದೆ.

ಈ ಹಠಾತ್ ಆಕ್ರಮಣದಿಂದ ವಿಹ್ವಲಗೊಂಡ ಇತರೆ ಆಡುಗಳು ಕೂಗಿದ ಶಬ್ಧ ಕೇಳಿ ಗಾಬರಿಯಿಂದ ಈಚೆ ಬಂದ ಭೈರಪ್ಪನವರ ಹೆಂಡತಿ ಚಿರತೆ ಆಡಿನ ಕುತ್ತಿಗೆ ಹಿಡಿದು ಎಳೆದಾಡುತ್ತಿರುವುದನ್ನು ನೋಡಿ ಜೋರಾಗಿ ಕೂಗಿದ್ದಾರೆ. ತಕ್ಷಣ ಚಿರತೆ ಆಡನ್ನು ಹಾಗೇ ಬಿಟ್ಟು ಓಡಿಹೋಗಿದೆ. ಈ ದುರ್ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಭೈರಪ್ಪನವರ ಮನೆಯ ಹಿಂಭಾಗದಲ್ಲಿ ಕೆಂಪವ್ವನ ಕಟ್ಟೆ ಎಂಬ ತಗ್ಗು ಪ್ರದೇಶವಿದೆ. ಸದ್ಯ ಅದರಲ್ಲಿ ನೀರಿಲ್ಲದೆ ಗಿಡಗೆಂಟೆಗಳಿಂದ ಆವೃತವಾಗಿದ್ದು ಕಾಡು ಪ್ರಾಣಿಗಳ ತಂಗುದಾಣವೆನಿಸಿದೆ. ಹಲವು ಗ್ರಾಮಸ್ಥರು ಚಿರತೆ ಆ ಪ್ರದೇಶದಲ್ಲಿ ಅಡ್ಡಾಡುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಕೂಡಲೇ ಚಿರತೆ ಹಿಡಿದು ಗ್ರಾಮಸ್ಥರಿಗೆ ರಕ್ಷಣೆ ಕೊಡಬೇಕೆಂದು ಸಾಮಾಜಿಕ ಕಾರ್ಯಕತ‍್ ರಘುಯಾದವ್ ಒತ್ತಾಯಿಸಿದ್ದಾರೆ.

ತುರುವೇಕೆರೆ:  ಮತಗಟ್ಟೆಗೆ ತೆರಳಿದ ಸಿಬ್ಬಂದಿ

Publicstory. in


ತುರುವೇಕೆರೆ: ತಾಲ್ಲೂಕಿನ 2ನೇ ಹಂತದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಯು ಭಾನುವಾರ ನಡೆಯುವ ಹಿನ್ನೆಲೆಯಲ್ಲಿ ಚುನಾವಣೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗಳು ಇಲ್ಲಿನ ಜಿಜೆಪಿ ಕಾಲೇಜಿನ ಮಸ್ಟರಿಂಗ್ ಕೇಂದ್ರದಿಂದ ಚುನಾವಣಾ ಸಾಮಗ್ರಿಗಳೊಂದಿಗೆ ತಮ್ಮ ಮತಗಟ್ಟೆ ಕೇಂದ್ರಗಳಿಗೆ ಶನಿವಾರ ತೆರಳಿದರು.

ತಾಲ್ಲೂಕಿನ 27 ಗ್ರಾಮ ಪಂಚಾಯಿತಿಯ 401 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 178 ಮೂಲ ಮತಗಟ್ಟೆಯ ಜೊತೆಗೆ 22 ಹೆಚ್ಚುವರಿ ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ತಾಲ್ಲೂಕಿನಲ್ಲಿ 84 ಸೂಕ್ಷ್ಮ, 49 ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳೆಂದು ಗುರತಿಸಲಾಗಿದ್ದು ಅಲ್ಲಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಒಂದು ಮತಗಟ್ಟೆಗೆ 4 ಸಿಬ್ಬಂದಿಗಳಂತೆ ಒಟ್ಟು 200 ಮತಗಟ್ಟೆ ಕೇಂದ್ರಗಳಿಗೆ ಪಿಆರ್ಒ 200. ಎಪಿಆರ್ಒ 200, 3ನೇ ಮತಗಟ್ಟೆಯಧಿಕಾರಿ ಮತ್ತು ಪಿಒ ತಲಾ200 ಸಿಬ್ಬಂದಿಗಳು ಹಾಗು 200 ಕಾಯ್ದಿರಿಸಿದ ಸೇರಿದಂತೆ ಒಟ್ಟು 1000 ಸಿಬ್ಬಂದಿಗಳು ಇದರ ಜೊತೆಗೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಕೂಡ ಚುನಾವಣಾ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ.

23 ಕೆಎಸ್ಆರ್ಟಿಸಿ ಬಸ್, 13 ಖಾಸಗಿ ವಾಹನಗಳು, 1 ಡಿಎಸ್ಪಿ, 3 ಸಿಪಿಐ, ಪಿಎಸ್ಐ4, ಎಸ್ಐ18, ಗೃಹರಕ್ಷಕ 100 ಹಾಗು ಇನ್ನಿತರೆ 193 ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 4ರಿಂದ 5 ಗಂಟೆಯ ವರೆಗೆ ಕೋವಿಡ್ ಸೋಕಿತ ವ್ಯಕ್ತಿಗಳು ಅಗತ್ಯ ಕ್ರಮಗಳೊಂದಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಕೋವಿಡ್ ಮಾರ್ಗ ಸೂಚಿಯಂತೆ ಚುನಾವಣೆಯು ನಡೆಯಲಿದ್ದು ಮತದಾರರು ಮತಗಟ್ಟೆ ಕೇಂದ್ರಗಳಿಗೆ ಮೊಬೈಲ್ ಸೇರಿದಂತೆ ಇನ್ನಿತರ ನಿರ್ಭಂದಿತ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಎಲ್ಲ ಕಡೆ ಕ್ಯಾಮರ ಕಣ್ಗಾವಲಿದ್ದು ಎಲ್ಲರಿಗೂ ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆಂದು ತಹಶೀಲ್ದಾರ್ ಆರ್.ನಯಿಂಉನ್ನೀಸಾ ತಿಳಿಸಿದರು.

ಸಿಬ್ಬಂದಿಗಳಿಗೆ ಊಟ ಮತ್ತು ತಿಂಡಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರೋಗ್ಯ ಇಲಾಖೆಯ ಚಂದ್ರಶೇಖರ್ ಹಾಗು ಸಿಬ್ಬಂದಿಗಳು ಚುನಾವಣಾ ಸಿಬ್ಬಂದಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ಮತ್ತು ಸ್ಯಾನಿಟೈಸರ್ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್, ಆರ್.ನಯಿಂಉನ್ನೀಸಾ, ಚುನಾವಣಾ ಸಿಬ್ಬಂದಿ ಪಿ.ಕಾಂತರಾಜು, ಹಾಗು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಡುವಳಲು: ವೈಕುಂಠದ ವೈಭವ

Publicstory. in


ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿಯ ನಿಡುವಳಲು ಗ್ರಾಮದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯವರಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಭಜನೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ಅನ್ನಸಂತರ್ಪಣೆ ಮಾಡಲಾಯಿತು. ಈ ಸಮಯದಲ್ಲಿ ಸಮಾಜ ಸೇವಕ ನವೀನ್ ಮತ್ತಿತರರು. ಇದ್ದರು

ಕೇಂದ್ರ ಸರ್ಕಾರ ಕೃಷಿ ಮಸೂದೆ ಕೈಬಿಡಬೇಕು: ನ್ಯಾ. ಹೆಚ್ ಎನ್ ನಾಗಮೋಹನ್ ದಾಸ್

Bengalooru: ಕೇಂದ್ರ ಸರ್ಕಾರ ಈ ಕೂಡಲೇ ಕೃಷಿ ಮಸೂದೆ ಜಾರಿ ಮಾಡುವ ಕ್ರಮದಿಂದ ಹಿಂದೆ ಸರಿಯಬೇಕು ಎಂದು ರಾಜ್ಯ ಹೈಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ ದಾಸ್ ಅಭಿಪ್ರಾಯಪಟ್ಟರು.

‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮೃದ್ಧಿಯ ಭಾಗವಾಗಿದ್ದ ರೈತರಿಗೆ ರಾಸಾಯನಿಕ ಬಳಸುವುದನ್ನು ಕಲಿಸಿದ, ಕಳಪೆ ಬೀಜಗಳನ್ನು ವಿತರಿಸಿದ ನಾವೇ ಅವರು ಆತ್ಮಹತ್ಯೆಗೆ ಇಳಿಯುವಂತೆ ಮಾಡಿದ್ದೇವೆ. ಈ ಪರಿಸ್ಥಿತಿಯನ್ನು ಅರಿತು ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ತಾನು ತರಲು ಉದ್ಧೇಶಿಸಿರುವ ಕೃಷಿ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಎಂದರು.

ಈ ಹಿಂದಿನ ಎಷ್ಟೋ ಸರ್ಕಾರಗಳು ಜನಾಭಿಪ್ರಾಯಕ್ಕೆ ಮಣಿದು ತಾವು ತರಲು ಮುಂದಾದ ಮಸೂದೆಗಳನ್ನು, ಯೋಜನೆಗಳನ್ನು ಕೈಬಿಟ್ಟಿವೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹಿಂದೆ ಇಡೀ ಭಾರತದ ನೊಂದ ರೈತರಿದ್ದಾರೆ. ಇದನ್ನು ಸರ್ಕಾರ ಅರಿಯಬೇಕು.

ಇಂದು ಭೂಸುಧಾರಣೆ, ಅದಕ್ಕೆ ತರುತ್ತಿರುವ ತಿದ್ದುಪಡಿ, ಎ ಪಿ ಎಂ ಸಿ ಕಾಯಿದೆ ತಿದ್ದುಪಡಿ, ಬೀಜ ಕಾಯಿದೆ ತಿದ್ದುಪಡಿ, ಎಲ್ಲವೂ ರೈತರನ್ನು ಗುಲಾಮಗಿರಿಯತ್ತ ತಳ್ಳುತ್ತಿದೆ ಎಂದು ವಿಷಾದಿಸಿದರು.

ನ್ಯಾಯಾಂಗದ ತೀರ್ಪುಗಳ ಬಗ್ಗೆ ಮಾತನಾಡಿದ ನ್ಯಾಯಮೂರ್ತಿಗಳು ನ್ಯಾಯಾಲಯದ ತೀರ್ಪುಗಳನ್ನು ವಿಮರ್ಶೆ ಮಾಡುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಪ್ರಜಾಪ್ರಭುತ್ವದ ಮಹತ್ವದ ಆಧಾರವಾದ ನ್ಯಾಯಾಂಗವನ್ನು ಮುನ್ನಡೆಸುವ, ಅದರ ಮಹತ್ವವನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಇರುವ ವಿಮರ್ಶೆ ಸದಾ ಸ್ವಾಗತಾರ್ಹ. ತೀರ್ಪಿನ ವಿಮರ್ಶೆ ಮಾಡುವಾಗ ಅದು ರಚನಾತ್ಮಕವಾಗಿರಲಿ ಎಂದರು.

ಇತ್ತೀಚೆಗೆ ನ್ಯಾಯಾಂಗ ನಿಂದನೆಯ ಕಾನೂನು ಜನರ ದನಿ ಹತ್ತಿಕ್ಕುವ ರೀತಿಯಲ್ಲಿಯೇ ಬಳಕೆಯಾಗುತ್ತಿದೆ. ಮೊದಲು ಕಾನೂನಿನ ಪುಸ್ತಕದಿಂದ ದೇಶದ್ರೋಹ, ಕ್ರಿಮಿನಲ್ ಕಂಟೆಂಪ್ಟ್ ಹಾಗೂ ನ್ಯಾಯಾಂಗ ನಿಂದನೆಯನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಸಂವಾದ ನಡೆಸಿದರು.

ನಮ್ಗೂ ಭತ್ಯೆ ನೀಡಿ: ಆರೋಗ್ಯ ಸಿಬ್ಬಂದಿ ಹೊಸ ಬೇಡಿಕೆ

Publicstory. in


Gubbi: ಆರೋಗ್ಯ ಇಲಾಖೆಯ ಹಿರಿಯ ಮತ್ತು ಕಿರಿಯ ನೌಕರರಿಗೆ ವಿಶೇಷ ಭತ್ಯೆಯನ್ನು ನೀಡಲು ಒತ್ತಾಯ ಮಾಡಬೇಕು ಎಂದು ಅಧ್ಯಕ್ಷರಾದ ನಾರಾಯಣ್ ಅವರಿಗೆ ನೌಕರರ ಸಂಘದ ನಿರ್ದೇಶಕ ಗಂಗಾಧರ್ ಗಟ್ಟಿ ಮನವಿ ಸಲ್ಲಿಸಿದರು.

ಗುಬ್ಬಿ ಪಟ್ಟಣದ ನೌಕರರ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ,
ಗ್ರಾಮೀಣ ಭಾಗದ ವೈದ್ಯರಿಗೆ ಮಾತ್ರ ಆರೋಗ್ಯ ಇಲಾಖೆ ವಿಶೇಷ ಭತ್ಯೆ ನೀಡಿ ಆದೇಶ ಹೊರಡಿಸಿದೆ. ಆದರೆ ಕೋವಿಡ್ ಸಂದರ್ಭದಲ್ಲಿ ಹೆಚ್ಚು ಕಾರ್ಯನಿರ್ವಹಿಸಿದರುವುದು ಲ್ಯಾಬ್ ಟೆಕ್ನಿಸೆನ್, ಡಿ.ಗ್ರೂಪ್ ನೌಕರರು, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು ಹಗಲು ಇರಳು ಕೆಲಸ ಮಾಡಿದ್ದಾರೆ ಎಂದರು.

ಸರಕಾರ ವೈದ್ಯರಿಗೆ ವಿಶೇಷ ಭತ್ಯೆ ಹೆಚ್ಚಿಸಿದಂತೆ ಆರೋಗ್ಯ ಇಲಾಖೆಯ ಉಳಿದ ನೌಕರರಿಗೆ ವಿಶೇಷ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕ ಸಂಘದ ಅಧ್ಯಕ್ಷ ಶಿವಣ್ಣ, ಗೌರವಾಧ್ಯಕ್ಷ ಜಯಣ್ಣ, ಕಾರ್ಯದರ್ಶಿ ಲಕ್ಷ್ಮಿ, ಆರ್ ಐ ರಮೇಶ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ಹೆಬ್ಬೂರು ರೈತ ಉತ್ಪಾದಕರ ಕಂಪನಿ ಸಭೆ

Publicstory. in


ತುಮಕೂರು : ರೈತರು ತಮ್ಮ ಕೃಷಿ ಆದಾಯವನ್ನು ದ್ವಿಗುಣಗೊಳಿಸಲು ವಿವಿಧ ಬೆಳೆ ಹಾಗೂ ಇತರೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಅಧಿಕ ಇಳುವರಿ ಪಡೆದುಕೊಂಡು ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಹೆಚ್ಚು ಲಾಭಗಳಿಸಬೇಕು ಎಂದು ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಬಸವರಾಜು ತಿಳಿಸಿದರು.

ತಾಲ್ಲೂಕಿನ ಗೂಳೂರು ಹ್ಯಾಂಡ್ ಪೋಸ್ಟ್ ಹತ್ತಿರದ ಶ್ರೀ ಶೂಲದ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಕೊಲ್ಲಾಪುರದಮ್ಮ ಹೆಬ್ಬೂರು ರೈತ ಉತ್ಪಾದಕರ ಕಂಪನಿ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ರೈತರು ರಾಸಾಯನಿಕ ವಸ್ತುಗಳನ್ನು ಬಳಸದೆ ಕೃಷಿ ಮಾಡಿ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯನ್ನು ಪಡೆಯುವಲ್ಲಿ ಸಾವಯವ ಕೃಷಿಕರು ಸಂಘಟಿತರಾಗಬೇಕು. ತಾವು ಬೆಳೆದ ಬೆಳೆಗಳನ್ನು ರೈತ ಉತ್ಪಾದಕ ಕಂಪನಿಯು ಖರೀದಿಸಿ ರೈತರಿಗೆ ಉತ್ತಮ ಬೆಲೆಯನ್ನು ಕೊಡುತ್ತದೆ ಎಂದು ತಿಳಿಸಿದರು.

ಐಡಿಎಫ್ ಸಂಸ್ಥೆಯ ಯೋಜನಾಧಿಕಾರಿ ಮು.ಲ.ಕೆಂಪೇಗೌಡ ಮಾತನಾಡಿ, ರೈತರು ಸುಸ್ಥಿರ ಕೃಷಿ ಮಾಡಿಕೊಂಡು ವ್ಯವಸಾಯದಲ್ಲಿ ಖರ್ಚನ್ನು ಕಡಿಮೆ ಮಾಡಿದಾಗ ಮಾತ್ರ ತಮ್ಮ ಆದಾಯವನ್ನು ವೃದ್ದಿಸಿಕೊಳ್ಳಲು ಪೂರಕ. ರೈತರು ಸ್ಥಳೀಯ ಮಟ್ಟದಲ್ಲಿ ದೊರೆಯುವ ಪದಾರ್ಥಗಳಿಂದ ಕಷಾಯ ಮತ್ತು ಗೊಬ್ಬರಗಳನ್ನು ತಯಾರಿಸಿಕೊಂಡು ಬೆಳೆಗಳಿಗೆ ಬರುವ ರೋಗ ಮತ್ತು ಕೀಟಗಳ ನಿವಾರಣೆಗೆ ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಸಿ.ಜಿ.ನಾರಾಯಣಸ್ವಾಮಿ ಇವರಿಗೆ ಸುಸ್ಥಿರ ಕುಟುಂಬ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಸಭೆಯಲ್ಲಿ ನಿರ್ದೇಶಕರಾದ ಕೆ.ಎಸ್.ಮಲ್ಲೇಶ್, ಆರ್.ಸಿ.ಬಸವರಾಜು, ನರಸಿಂಹಮೂರ್ತಿ, ನರುಗನಹಳ್ಳಿ ರಮೇಶ್, ದಿನೇಶ್, ತುರಚನಕಟ್ಟೆ ನರಸಿಂಹಮೂರ್ತಿ, ನಾಗವೇಣಿ, ನಾಬ್ ಕಿಸಾನ್‍ ಪದ್ಮಪ್ರೀಯಾ, ಐಡಿಎಫ್ ಸಂಸ್ಥೆಯ ಗೋವಿಂದರಾಜನ್, ಗುರುದತ್.ಕೆ.ಎನ್, ಕರುಣಾಕರ್.ಎಸ್.ಹೆಚ್, ಸುರೇಶ್.ಕೆ.ಎನ್, ಮುದ್ದಗಂಗಯ್ಯ, ಕಂಪನಿಯ ಸಿಇಒ ಲೋಕೇಶ್.ಡಿ, ಬಿ.ಟಿ.ಗಿರೀಶ್‍ಕುಮಾರ್, ಜೀವನೋಪಾಯ ಉತ್ತೇಜನಾಧಿಕಾರಿ ಕಿರಣ್, ಕ್ಷೇತ್ರಾಧಿಕಾರಿಗಳಾದ ರಾಮಯ್ಯ, ಕೆ.ಮಧುಸೂಧನ್, ಮಹೇಶ್, ಚಿದಾನಂದ್ , ಅಂಜಲಿ, ಕಲಾವತಿ, ಸಿಆರ್ಪಿ, ಬಿಸಿಎ ಹಾಗೂ ರೈತ ಸಂಘದವರು ಹಾಜರಿದ್ದರು.

ಆತ್ಮನಿರೀಕ್ಷೆಯೇ ಇಲ್ಲದ ಕಾಲ ಇದು: ಬರಗೂರು ರಾಮಚಂದ್ರಪ್ಪ ವಿಷಾದ 

ಕೃಪೆ ಅವಧಿ

ಒಂದು ಪ್ರಜಾಸತ್ತೆ ಉಳಿಯಲು ಆತ್ಮನಿರೀಕ್ಷೆ ಮುಖ್ಯ. ಆದರೆ ನಾವು ಇಂದು ಆತ್ಮನಿರೀಕ್ಷೆಯ ಅಭಾವದಲ್ಲಿ ನರಳುತ್ತಿದ್ದೇವೆ ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ವಿಷಾದಿಸಿದರು.

‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಬರಗೂರು ರಾಮಚಂದ್ರಪ್ಪನವರ ‘ಕಸ್ತೂರ್ ಬಾ vs ಗಾಂಧಿ’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಒಂದು ಪ್ರಜಾಪ್ರಭುತ್ವದ ಉಳಿವಿಗೆ ಬೇಕಿರುವುದು ಕಣ್ಣು ಮತ್ತು ಕಿವಿ. ಇವೆರಡೂ ಸರಿಯಾಗಿದ್ದರೆ ಪ್ರಜಾಸತ್ತಾತ್ಮಕ ಮೌಲ್ಯಗಳು ಹೆಚ್ಚು ಗಟ್ಟಿಯಾಗುತ್ತವೆ. ಆತ್ಮ ನಿರೀಕ್ಷೆ ಬರುತ್ತದೆ. ಈ ಆತ್ಮನಿರೀಕ್ಷೆಯ ಅಭಾವ ಪ್ರಜಾಪ್ರಭುತ್ವಕ್ಕೆ ಕೊಡಲಿಯೇಟು ನೀಡುತ್ತದೆ. ಇವತ್ತು ಕಣ್ಣು ಕಿವಿಗಳ ಬದಲು ಹರಿತ ನಾಲಿಗೆಗಳೇ ಕಾಣುತ್ತಿವೆ ಎಂದು ಟೀಕಿಸಿದರು.

ಗಾಂಧಿ ಮತ್ತು ಕಸ್ತೂರ್ ಬಾ ಇಬ್ಬರಲ್ಲೂ ಈ ಆತ್ಮ ನಿರೀಕ್ಷೆ ಇತ್ತು ಎನ್ನುವ ಕಾರಣಕ್ಕೆ ಅವರು ನನಗೆ ಮುಖ್ಯವಾದರು . ಇದು ಅವರಿಬ್ಬರ ಆತ್ಮ ನಿರೀಕ್ಷೆ ಮಾತ್ರವಲ್ಲ, ಸಮಾಜದ, ಪ್ರಜಾಪ್ರಭುತ್ವದ ಆತ್ಮ ನಿರೀಕ್ಷೆಯಾಗಿತ್ತು ಎಂದರು.

ಕೃತಿ ಬಿಡುಗಡೆ ಮಾಡಿದ ನಾಡೋಜ ಕಮಲಾ ಹಂಪನಾ ಅವರು ಇದು ಕಸ್ತೂರ್ ಬಾ ಅವರ ಒಳಗಣ್ಣಿನಿಂದ ಗಾಂಧಿಯನ್ನು ನೋಡುವ ಕೃತಿ. ಕಸ್ತೂರ್ ಬಾ ಅವರ ಮೂಲಕ ಗಾಂಧಿಯನ್ನು ನೋಡಿದಾಗ ಗಾಂಧಿಯವರ ನಿಜ ಅಂತರಂಗ, ಭಾವ, ಚಿಂತನೆ ನೋಡಲು ಸಾಧ್ಯವಾಗುತ್ತದೆ ಎಂದರು.

ಬರಗೂರು ಅವರ ಈ ಕೃತಿ ಚಂಪೂ ಕಾವ್ಯದಂತೆ. ಇದು ಗದ್ಯ ಹಾಗೂ ಪದ್ಯ ಎರಡೂ ಹೌದು. ಗ್ರೀಕ್ ನಾಟಕಗಳಂತೆ ಹೊಸ ರೀತಿಯ ತಂತ್ರವನ್ನು ಅಳವಡಿಸಿರುವ ಕೃತಿ ಇದು ಎಂದು ಕಮಲಾ ಹಂಪನಾ ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿ ಕುರಿತು ಮಾತನಾಡಿದ ಹಿರಿಯ ವಿಮರ್ಶಕರಾದ ಪ್ರೊ ಬಸವರಾಜ ಕಲ್ಗುಡಿ ಅವರು ಒಂದು ನೆರಳಿನಲ್ಲಿದ್ದು ಅದರಿಂದ ಆಚೆ ಬಂದು ತಮ್ಮದೇ ಪರಿಪೂರ್ಣ ವ್ಯಕ್ತಿತ್ವ ಕಟ್ಟಿಕೊಂಡ ಕಸ್ತೂರ್ ಬಾ ಕುರಿತ ಅಪರೂಪದ ಕಾದಂಬರಿ ಇದು. ಕನ್ನಡದಲ್ಲಿ ಇಂತಹ ಬರವಣಿಗೆ ಕಡಿಮೆ. ಸಂಬಂಧದ ಸೂಕ್ಷ್ಮ, ಹೋರಾಟದ ವಿನ್ಯಾಸ ಎರಡನ್ನೂ ಸಮರ್ಪಕವಾಗಿ ಈ ಕೃತಿ ಕಟ್ಟಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ಬರಹಗಾರ ರಂಗಾರೆಡ್ಡಿ ಕೋಡಿರಾಂಪುರ ಹಾಗೂ ಪ್ರಕಾಶಕ ಅಭಿರುಚಿ ಗಣೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.