Sunday, December 8, 2024
Google search engine
Homeಜನಮನಸಂವಿಧಾನ ಎಂದರೇ ಮೀಸಲಾತಿಯೇ.?

ಸಂವಿಧಾನ ಎಂದರೇ ಮೀಸಲಾತಿಯೇ.?

ಸಂವಿಧಾನ ಹೇಗೆ ಹುಟ್ಟಿತು, ಅದನ್ನು ಏಕಾಗಿ ಎಲ್ಲರೂ ಓದಬೇಕು. ಅಂಬೇಡ್ಕರ್ ಅವರು ಸಂವಿಧಾನ ಬರೆಯದಿದ್ದರೆ ದಲಿತರಷ್ಟೇ ಅಲ್ಲದೇ ಇಡೀ ದೇಶದ ಎಲ್ಲ ಜನಸಮುದಾಯಗಳು ಏನನ್ನು ಕಳೆದುಕೊಳ್ಳುತ್ತಿದ್ದವು. ನಮ್ಮ ಮುಂದಿರುವ ಸವಾಲುಗಳು ಏನು ಎಂಬುದನ್ನು ತುಮಕೂರು ವಿ.ವಿ. ಅಕಾಡೆಮಿಕ್ ಕೌನ್ಸಿಲ್ ನ ಮಾಜಿ ಸದಸ್ಯ ಹೆತ್ತೇನಹಳ್ಳಿ ಮಂಜುನಾಥ್ ಸವಿಸ್ತಾರವಾಗಿ ಬರೆದಿದ್ದಾರೆ. ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಈ ಲೇಖನ ಬರೆಯಲಾಗಿದೆ. ಕೊನೆವರೆಗೂ ಓದಿದ ಬಳಿಕ ಒಹ್ ಎಂಬ ಉದ್ಗಾರ ಬರಲಿದೆ ಮಾತ್ರವಲ್ಲ ನಮಗೇ ನಾವೇ ಹೆಮ್ಮೆಪಟ್ಟುಕೊಳ್ಳುವಂತೆ ಈ ವಿಶೇಷ ಲೇಖನ ಮಾಡುತ್ತದೆ.

ಸಂವಿಧಾನ ಸಮರ್ಪಣಾ ದಿನದ ಶುಭಾಶಯಗಳು.
ಭಾರತೀಯರಾದ ನಮಗೆ ಸುಪರಿಚಿತವಾದ ಆಚರಣೆಗಳು ಎಂದರೆ
1) ನಮ್ಮ ಸಾಂಪ್ರದಾಯಿಕ ಹಬ್ಬದ ದಿನಗಳಾದ ಗಣೇಶ, ಗೌರಿ, ಮಹಾನವಮಿಯಂತವು.
2)ರಾಷ್ಟ್ರೀಯ/ನಾಡ ಹಬ್ಬಗಳಾದ ಸ್ವತಂತ್ರ್ಯ ದಿನಾಚರಣೆ ಗಣರಾಜ್ಯೊತ್ಸವ ಕನ್ನಡ ರಾಜ್ಯೊತ್ಸವವೇ ಚಿರಪರಿಚಿತ ಹಬ್ಬದಾಚರಣೆಗಳು.

ಆದರೆ ಇಂದು ಅತ್ಯವಶ್ಯಕ ಹಾಗೂ ಅಖಂಡ ಭಾರತ ಶೋಷಣೆಮುಕ್ತವಾಗಿ, ಎಲ್ಲರಿಗೂ ಸಮಾನತೆ ನೀಡಿ ಸರ್ವರೂ ಸಮಾನರೆಂದು ಸಾರಿದ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನಿಲುವಿನೊಂದಿಗೆ ಸ್ವಾತಂತ್ರ್ಯ, ಸಮಾನತೆ & ಸಹೋದರತ್ವ ಸಾರಿ ಭಾರತೀಯರ ಘನತೆಯ ಜೀವನಕ್ಕೆ ಮುನ್ನುಡಿ ಬರೆದ ದೇಶವೆಂದು ಮರೆಯದ ಹೆಮ್ಮೆಯ ಹಬ್ಬ ಅದುವೇ “ಸಂವಿಧಾನ ಸಮರ್ಪಣಾ ದಿನ”ದ ಹಬ್ಬ.

ಸಂವಿಧಾನ ಸಮರ್ಪಣೆಯಾದ ದಿನ ಇದೊಂದು ಐತಿಹಾಸಿಕ ಮತ್ತು ಭಾರತೀಯರಾದ ನಾವು ಸಾವಿರಾರು ವರ್ಷ ಭಯಭೀತರಾಗಿ, ಗೌರವಿಲ್ಲದ, ಗುಲಾಮಗಿರಿ ಸಂಸ್ಕೃತಿಯೊಂದಿಗೆ, ಅಶಿಕ್ಷಿತರಾಗಿ, ಅಧಿಕಾರವಿಲ್ಲದೆ, ಆರ್ಥಿಕ ಸ್ವಾವಲಂಬನೆ ಇಲ್ಲದಂತಹ “ಮನುಸ್ಮೃತಿ” ಎಂಬ ವಿಕೃತ ಮನಸ್ಥಿತಿಯ ಕಾನೂನು ಕಟ್ಟಳೆ ಮಾಡಿಕೊಂಡು ವಿಕೃತ ಮೆರೆದ ಅದೆಷ್ಟು ಸಂಪ್ರದಾಯವಾದಿಗಳಿಗೆ ಹೊಡೆತ ಕೊಟ್ಟ ದಿನ.

ಸಾವಿರಾರು ವರ್ಷ ಸರ್ವಾಧಿಕಾರ, ಅರಾಜಕತೆ ನಡೆಸಿದ ಸನಾತನಿಗಳ, ಪಟ್ಟಭದ್ರ ಹಿತಾಸಕ್ತಿಗಳ, ಮೂಲಭೂತವಾದಿಗಳ ಹುಟ್ಟಡಗಿಸಿ, ದೇಶದಲ್ಲಿ ಅವರನ್ನು (ಶೋಷಕರು) ಸೇರಿದಂತೆ ಶೋಷಿತವರ್ಗಗಳ ಬಹುಜನರಿಗೆ ನ್ಯಾಯ, ಘನಗೌರವ ಜೀವನ ನಡೆಸಲು ಅವಕಾಶ ಸೃಷ್ಟಿಸಿದ ದಿನ. ಮುಂದೆಂದು ದೇಶ ಮತ್ತೆ “ಮನುವಿನ ಮನುಶಾಸ್ತ್ರ” ದಡಿಗೆ ಹೋಗದಂತೆ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತೆ ದೇಶಕ್ಕೆ ಮಾರ್ಗಸೂಚಿ ನೀಡಿದ ದಿನ.

ಸಂವಿಧಾನ ಎಂದರೇನು.? ಅದರಲ್ಲೇನಿದೆ.? ಅದರ ಕರ್ತೃ ಯಾರು.? ಮತ್ತು ಹೇಗೆ ರಚಿತವಾಯಿತು.? ಸಂವಿಧಾನ ಎಂದರೇ ಮೀಸಲಾತಿಯೇ.? ಸಂವಿಧಾನ ಬದಲು ಮಾಡುವುದೆಂದರೇನು.? ಅದರಿಂದಾಗುವ ಲಾಭ ನಷ್ಟಗಳೇನು.?

ಸಂವಿಧಾನವನ್ನು ಸಾಧ್ಯವಾದಷ್ಟು ಆಡು ಭಾಷೆಯಲ್ಲೇಳಿದರೇ ಒಳಿತೆಂದು ಭಾವಿಸಿ ಚರ್ಚೆ ಪ್ರಾರಂಭ ಮಾಡುತ್ತಿದ್ದೇನೆ.

ಸಂವಿಧಾನ ಎಂದರೆ ಒಂದು ದೇಶ ವ್ಯವಸ್ಥಿತವಾಗಿ ನಡೆಯಲು ದೇಶದ ಎಲ್ಲಾ ಜನಾಂಗಗಳನ್ನು ಒಳಗೊಂಡಂತೆ ಪ್ರಾಣಿ-ಪಕ್ಷಿ,
ಗಿಡ-ಮರ, ನೀರು, ಭೂಮಿ, ಗಡಿ, ಭೌಗೋಳಿಕವಾಗಿ, ಶಿಕ್ಷಣ, ಆರೋಗ್ಯ, ವಸತಿ & ದೇಶದ ಆಡಳಿತ ನಡೆಸಲು ಬೇಕಾದಂತಹ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮಾಂಗ, ಎಲ್ಲವನ್ನೂ ಒಳಗೊಂಡಂತೆ ಕಾನೂನು ಕಟ್ಟಳೆಯಿಂದ ಭ್ರಾತೃತ್ವ ಭಾವನೆಯೊಂದಿಗೆ ಸ್ವಾತಂತ್ರ್ಯವಾಗಿ, ಸಮಾನವಾಗಿ, ನ್ಯಾಯಯುತವಾಗಿ ಎಲ್ಲವನ್ನೂ ಕ್ಷೇಮವಾಗಿರುಸುವ ವ್ಯವಸ್ಥಿತ, ವೈಜ್ಞಾನಿಕ & ವೈಚಾರಿಕವಾದ ಮಾರ್ಗಸೂಚಿಯೇ ಸಂವಿಧಾನ.

ಮಹಾಯುದ್ಧದ ನಂತರ ಇಡೀ ವಿಶ್ವವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಭಾರತ ದೇಶವನ್ನು ತನ್ನ ಆಧೀನದಲ್ಲಿಟ್ಟುಕೊಳ್ಳುವ ಶಕ್ತಿ ಬ್ರಿಟೀಷರಿಗಿಲ್ಲದಂತಾಯಿತು & ದೇಶದೆಲ್ಲೆಡೆ ಸ್ವಾತಂತ್ರ್ಯದ ಚಳುವಳಿಯೂ ಕೂಡಾ ಉಗ್ರರೂಪ ಪಡೆದುಕೊಂಡಿತ್ತು.

ಭಾರತದಲ್ಲಿ ಬ್ರಿಟೀಷ್ ಅಧಿಕಾರಿಗಳು ಕೆಲಸ ನಿರ್ವಹಿಸಲು ಅಸಹನೆ ತೋರುತ್ತಿದ್ದರು ಇಷ್ಟೆಲ್ಲದರ ಪರಿಣಾಮ ಅಂದಿನ ಲೇಬರ್ ಪಕ್ಷದ ಬ್ರಿಟನ್ ಪ್ರಧಾನಿ ಅಟ್ಲೆ ಯವರು ಭಾರತಕ್ಕೆ ಸ್ವಾತಂತ್ರ್ಯ ನೀಡುವುದಾಗಿ ತಮ್ಮ ಸಂಸತ್ ಸಭೆಯಲ್ಲಿ ಘೋಷಿಸಿ ಭಾರತಕ್ಕೆ “ಕ್ಯಾಬಿನೆಟ್ ಮಿಷನ್ ಆಯೋಗ’ ವನ್ನು ಕಳಿಸಿದರು.

ಸದರಿ ಆಯೋಗವು 1946 ಮಾರ್ಚ್ 16 ರಂದು ‘ಭವಿಷ್ಯದ ಭಾರತದ ಸರ್ಕಾರಕ್ಕಾಗಿ ಒಂದು ಸಂವಿಧಾನ ರಚಿಸಲು ಸಂವಿಧಾನ ಸಭೆಯೊಂದನ್ನು ರಚಿಸುವ ಅಗತ್ಯವಿದೆ’ ಎಂದು ಘೋಷಿಸಿತು. ಅಂತೆಯೇ ಆ ಸಭೆ ಪ್ರಜಾಸತ್ತಾತ್ಮಕವಾಗಿರಬೇಕೆಂಬ ನಿಟ್ಟಿನಲ್ಲಿ ಚುನಾವಣೆ ನಡೆಸಲು ತಯ್ಯಾರಿ ದೇಶ ನಡೆಸುತ್ತದೆ.

ದೇಶ ವ್ಯವಸ್ಥಿತ ಆಡಳಿತ ನಡೆಸಲು ಸಂವಿಧಾನದ ಅವಶ್ಯಕತೆ & ಅನಿವಾರ್ಯತೆ ಎದುರಾದಾಗ ಸಂವಿಧಾನದ ಕರಡನ್ನು ರಚಿಸಲು ಇಲ್ಲಿನ ಸಂಪ್ರದಾಯವಾದಿಗಳು ವಿಶ್ವಜ್ಞಾನಿಯಾದ ಬಾಬಾ ಸಾಹೇಬರಿಂದ ಬರೆಸಲು ಜಾತಿಯ ಕಾರಣದಿಂದ ಒಪ್ಪದೇ, ಐರೋಪ್ಯ ರಾಷ್ಟ್ರದ ಸಂವಿಧಾನ ತಜ್ಞ ಐವರ್ ಜೆನ್ನಿಂಗ್ ಬಳಿ ಹೋಗುತ್ತಾರೆ. ಐವರ್ ಜೆನ್ನಿಂಗ್ ರವರ ಉತ್ತರ ಹೀಗಿದೆ. ನನ್ನ ಕೈಯಲ್ಲಿ ಇನ್ನೂ ಹಲವು ರಾಷ್ಟ್ರಗಳಿಗೆ ಸಂವಿಧಾನ ಬರೆದುಕೊಡುವ ಶಕ್ತಿ ಇದೆ. ಆದರೆ ಭಾರತದಂತಹ ವೈವಿಧ್ಯಮಯ ರಾಷ್ಟ್ರಕ್ಕೆ ಸಂವಿಧಾನದ ಕರಡನ್ನು ಬರೆದು ಕೊಡುವಷ್ಟು ಜ್ಞಾನಶಕ್ತಿ ನನ್ನಲ್ಲಿಲ್ಲಾ. ಇಂತಹ ಶಕ್ತಿ ಇರುವುದು ಇಡೀ ವಿಶ್ವದ ಒಬ್ಬರಿಗೆ ಮಾತ್ರ, ಅವರು ನಿಮ್ಮ ದೇಶದಲ್ಲೇ ಇದ್ದಾರೆ. ಅಲ್ಲಿ ಹೋಗಿ ಎಂದು ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ಹೆಸರನ್ನು ಸೂಚಿಸುತ್ತಾರೆ. ಅಲ್ಲಿಂದ ಬಂದಂತಹ ತಂಡ ಸಬರಮತಿಯಲ್ಲಿ ಮಹಾತ್ಮ ಗಾಂಧಿಯವರ ಬೇಟಿ ಮಾಡಿ ಅಲ್ಲಿ ನಡೆದಂತಹ ಘಟನೆ ತಿಳಿಸಿದಾಗ ಗಾಂಧೀಜಿಯವರು ಕೂಡಾ ಬಾಬಾ ಸಾಹೇಬರ ಹೆಸರನ್ನೇ ಸೂಚಿಸುತ್ತಾರೆ.

ಇಷ್ಟಾದ ನಂತರ ಸಂವಿಧಾನ ರಚಿಸಲು ಸಂವಿಧಾನ ಸಭೆಯನ್ನು ಪ್ರಾರಂಭಿಸುವ ಉದ್ದೇಶದಿಂದ 1946 ಜುಲೈನಲ್ಲಿ ಚುನಾವಣೆ ನಡೆಯುತ್ತದೆ. ಚುನಾವಣೆಯಲ್ಲಿ 15 ಮಹಿಳೆಯರನ್ನು ಸೇರಿದಂತೆ 296 ಸದಸ್ಯರು ಆಯ್ಕೆಯಾಗುತ್ತಾರೆ. ಅಂದಹಾಗೆ ಆ ಸಭೆಗೆ ಭಾರತದ ಪಶ್ಚಿಮದ ತುದಿ ಬಾಂಬೆ ಪ್ರಾಂತ್ಯದಿಂದ ಸ್ಪರ್ಧಿಸಿದ್ದ ಅಂಬೇಡ್ಕರರು ಕಾಂಗ್ರೆಸ್ಸಿನ ಅವಿಚ್ಛಿನ್ನ ವಿರೋಧದಿಂದ ಸೋಲಬೇಕಾಗುತ್ತದೆ. ಆದರೂ ಪೂರ್ವದ ದೂರದ ಬಂಗಾಳದಿಂದ ಅಲ್ಲಿಯ ಮುಸ್ಲಿಂ ಲೀಗ್ ನ ಪರಿಶಿಷ್ಟ ಜಾತಿಯ ನಾಯಕ ಜೋಗೇಂದ್ರನಾಥ ಮಂಡಲ್‍ರವರ ರಾಜೀನಾಮೆ & ಬೆಂಬಲದ ಮೂಲಕ ಅವರು ಮತ್ತೆ ಸಂವಿಧಾನ ಸಭೆಗೆ ಆರಿಸಿಬರುವಲ್ಲಿ ಸಫಲರಾಗುತ್ತಾರೆ.

ಈ ಸಂವಿಧಾನ ಸಭೆ ಮೊದಲಿಗೆ 1946 ಡಿಸೆಂಬರ್ 6 ರಲ್ಲಿ ನಡೆಯುತ್ತದೆ. ಮತ್ತು 29 ಆಗಸ್ಟ್ 1947 ರಲ್ಲಿ 7 (ಏಳು) ಜನ ಸದಸ್ಯರನ್ನೊಳಗೊಂಡಂತೆ ಸಂವಿಧಾನ ಕರಡು ಸಮಿತಿಯನ್ನು ರಚಿಸಲಾಗುತ್ತದೆ. ಸಮಿತಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ.

ಕರಡು ಸಮಿತಿಯ 6 ಸದಸ್ಯರೂ ಒಂದಿಲ್ಲೊಂದು ವೈಯಕ್ತಿಕ ಕಾರಣದಿಂದ ಎಲ್ಲರೂ ಸಮಿತಿಯಿಂದ ದೂರ ಉಳಿಯುತ್ತಾರೆ. ಆದರೂ ಬಾಬಾ ಸಾಹೇಬರು ಸಂಪೂರ್ಣ ಜವಾಬ್ದಾರಿ ಹೊತ್ತು 1948 ಜನವರಿ 21 ರಂದು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಿಗೆ ಸಂವಿಧಾನದ ಕರಡನ್ನು ರಚಿಸಿ ಒಪ್ಪಿಸುತ್ತಾರೆ. ಅದೇ ವರ್ಷ ಫೆಬ್ರವರಿ 26 ರಂದು ಸಂವಿಧಾನದ ಕರಡನ್ನು ಜನಾಭಿಪ್ರಾಯಕ್ಕೆ ಇಡಲಾಗುತ್ತದೆ ಅದಾದ ನಂತರ 1948 ನವಂಬರ್ 5 ರಂದು ಸಂವಿಧಾನ ರಚನಾ ಸಭೆಯ ಮುಂದೆ ಕರಡನ್ನು ಮಂಡಿಸಿದರು.

ಸಂವಿಧಾನ ರಚನಾ ಸಭೆಯಲ್ಲಿ 296 ಆಯ್ಕೆಯಾದ ಸದಸ್ಯರಿದ್ದರು. ಮುಸ್ಲಿಂಲೀಗ್ ನ ಕೆಲ ಸದಸ್ಯರು ಸಂವಿಧಾನ ಸಭೆಗೆ ಹಾಜರಾಗಲು ನಿರಾಕರಿಸಿದರು. ಸಂವಿಧಾನದ ಕರಡನ್ನು 11 ಅಧಿವೇಶನದಲ್ಲಿ 165 ದಿನಗಳ ಚರ್ಚಿಸಿ 7635 ತಿದ್ದುಪಡಿಗೆ ಸೂಚಿಸಲಾಗುತ್ತದೆ. ಅಂತಿಮವಾಗಿ 365 ವಿಧಿ, 8 ಅನುಸೂಚಿ 22 ಭಾಗಗಳಲ್ಲಿರಿಸಲಾಯಿತು. 1949 ನವಂಬರ್ 26ರಂದು 284 ಸದಸ್ಯರ ರುಜುವಿನೊಂದಿಗೆ ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನದ ಕರಡನ್ನು ಅಂಗೀಕರಿಸಲಾಗುತ್ತದೆ.

ಬರೋಬ್ಬರಿ 2 ವರ್ಷ 11 ತಿಂಗಳು 17 ದಿನಗಳ ಸುಧೀರ್ಘವಾದ ಕಾರ್ಯದಲ್ಲಿ ಬಾಬಾ ಸಾಹೇಬರು 18 ಗಂಟೆಗಳ ಕಾರ್ಯ ನಿರ್ವಹಿಸಲೇ ಬೇಕಾಗುತ್ತದೆ.

ಇಂತಹ ಬೃಹತ್ ಸಂವಿಧಾನ ತನ್ನ ಮೂಲತತ್ವವನ್ನು ಪ್ರಸ್ತಾವನೆಯಲ್ಲೇ ಅರ್ಥಪೂರ್ಣವಾಗಿ ತಿಳಿಸುತ್ತದೆ.
ಪ್ರಸ್ತಾವನೆ ಪ್ರಾರಂಭವಾಗುವುದೇ “”ಭಾರತೀಯ ಜನತೆಯಾದ ನಾವು ಎಂದು.
ಭಾರತೀಯರೆಲ್ಲರಿಗೂ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ “ನ್ಯಾಯವನ್ನು”,
ವಿಚಾರ ಅಭಿವ್ಯಕ್ತಿ ನಂಬಿಕೆ ಧರ್ಮ ಮತ್ತು ಉಪಾಸನೆಯ “ಸ್ವಾತಂತ್ರ್ಯ”ವನ್ನು,
ದೇಶದ ಏಕತೆ ಮತ್ತು ಸಮಗ್ರತೆಗೆ ಎಲ್ಲರಲ್ಲಿ “ಭ್ರಾತೃತ್ವದ” ಭಾವನೆಯನ್ನು ಮೂಡಿಸುವ ಸಂಕಲ್ಪವನ್ನು ಹೊಂದಿದೆ ಎಂದು ಹೇಳುತ್ತದೆ. ಇದರ ಅರ್ಥ ಭಾರತದ ಪ್ರತಿಯೊಬ್ಬ ನಾಗರಿಕರ ಘನತೆಯ ಜೀವನಕ್ಕಾಗೇ ರೂಪುಗೊಂಡದ್ದು ಸಂವಿಧಾನ.
ಇಂತಹ ವಿಶ್ವದ ಶ್ರೇಷ್ಠ ಸಂವಿಧಾನವು ಇಂದಿಗೆ 71 ವರ್ಷಗಳ ಹಿಂದೆ ಅಂದರೆ 1949 ನವಂಬರ್ 26ರಂದು ನಮಗೆ ನಾವೇ ಶಾಸನಬದ್ಧವಾಗಿ ಅರ್ಪಿಸಿಕೊಂಡಿದ್ದೇವೆ.

ಸಂವಿಧಾನದ ಕರ್ತೃ ಯಾರೆಂದು ಇಂದಿಗೂ ಕೂಡ ಹಲವಾರು ಪಟ್ಟಭದ್ರ ಹಿತಾಸಕ್ತಿಗಳು ಸನಾತನಿಗಳು ದೇಶದಲ್ಲಿ ಗೊಂದಲ ಸೃಷ್ಟಿಸುತ್ತಿವೆ.

ಇದಕ್ಕೆ ಪೂರಕವಾಗುವಂತೆ ಸಂವಿಧಾನ ಸಭೆಯ ಅಂತಿಮ ದಿನದಲ್ಲಿ ಸದಸ್ಯರಾದ ಟಿಟಿ ಕೃಷ್ಣಮಾಚಾರಿ ಯವರ ಹೇಳಿಕೆ ಹೀಗಿದೆ, ನನ್ನನ್ನೂ ಸೇರಿದಂತೆ 7 ಜನ ಸಂವಿಧಾನ ಕರಡು ಸಮಿತಿಯಲ್ಲಿದ್ದೆವು. ಎಲ್ಲರೂ ತಮ್ಮ ವೈಯಕ್ತಿಕ/ ಆರೋಗ್ಯ/ ರಾಜಕಾರಣದ ಕಾರಣಗಳಿಂದ ಸಂವಿಧಾನ ಕರಡು ರಚನೆ ಪ್ರಕ್ರಿಯೆಯಿಂದ ಹೊರಗುಳಿದೆವು. ಸಂವಿಧಾನದ ಕರಡನ್ನು ಸಂಪೂರ್ಣವಾಗಿ ಬಾಬಾಸಾಹೇಬರೇ ನಿರ್ವಹಿಸಿದರು. ಈ ಸಂಪೂರ್ಣ ಯಶಸ್ಸು ಬಾಬಾಸಾಹೇಬರಿಗೆ ಸಲ್ಲಬೇಕು ಎಂದೇಳುತ್ತಾರೆ.

ಮದ್ರಾಸಿನ ಮುನಿಸ್ವಾಮಿ ಪಿಳ್ಳೈ ಎಂಬುವವರು “ಪರಿಶಿಷ್ಟ ಜಾತಿಯು ನಂದನಾರ್, ತಿರುಪಳನಾಳ್ವರ್, ತಿರುವಳ್ಳುವರ್ ಹೀಗೆ ಶ್ರೇಷ್ಠ ಸಂತರನ್ನು, ಜ್ಞಾನಿಗಳನ್ನು ನೀಡಿದೆ. ನಿಸ್ಸಂಶಯವಾಗಿ ಡಾ.ಅಂಬೇಡ್ಕರರು ಅಂತಹವರ ಸಾಲಿಗೆ ಸೇರ್ಪಡೆಯಾಗುತ್ತಾರೆ ಎಂದೇಳುತ್ತಾರೆ.
ಸೇಠ್ ಗೋವಿಂದದಾಸ್ ರವರು “ಡಾ.ಅಂಬೇಡ್ಕರರನ್ನು ‘ವರ್ತಮಾನ ಕಾಲದ ಮನು’ ಎನ್ನಬಹುದು” ಎನ್ನುತ್ತಾರೆ.

ಎಂ.ಅನಂತಶಯನಂ ಅಯ್ಯಂಗಾರ್ ಎನ್ನುವವರಂತೂ “ಯಾವ ವ್ಯಕ್ತಿ ನಮ್ಮನ್ನು ಟೀಕಿಸುವ ಮತ್ತು ಅನುಮಾನದಿಂದ ನೋಡುವ ಉದ್ದೇಶದಿಂದ ಸಭೆಗೆ ಬಂದರೋ, ಕಡೆಗೆ ಅವರೇ ಸಂವಿಧಾನದ ಹೊಣೆಹೊತ್ತುಕೊಂಡರು ಮತ್ತು ಅದನ್ನು ರಚಿಸಿದರು” ಎಂದರು!

ಹಾಗೆ ಪಂಡಿತ್ ಠಾಕೂರ್ ದಾಸ್ ಭಾರ್ಗವ ಎಂಬುವವರು ಮಾತನಾಡುತ್ತಾ “ಡಾ.ಅಂಬೇಡ್ಕರರು ನಮ್ಮ ಹೃದಯಗಳಲ್ಲಿ ಇಂದು ಉನ್ನತ ಸ್ಥಾನ ಅಲಂಕರಿಸಿದ್ದಾರೆ” ಎನ್ನುವ ಮೂಲಕ ತಮ್ಮ ಅಭೂತಪೂರ್ವ ಪ್ರೀತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಡೆಯದಾಗಿ ಶ್ರೀ ಹೆಚ್.ಜೆ.ಖಾಂಡೇಕರ್ ಎಂಬುವವರ ಹೇಳಿಕೆಯನ್ನು ದಾಖಲಿಸುವುದಾದರೆ “ಮಾನ್ಯರೆ, ನಾವು ಅಂಬೇಡ್ಕರರಂತಹ ಪ್ರತಿಭಾಶಾಲಿಯಿಂದ ರೂಪಿತಗೊಂಡ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಇಂದು ಕಾರ್ಯಾಚರಣೆಗಿಳಿಸುತ್ತಿದ್ದೇವೆ. ಹಾಗೆ ಈ ಕಾನೂನನ್ನು ನಾನು “ಮಹಾರ್ ಕಾನೂನು” ಎನ್ನಲಿಚ್ಚಿಸುತ್ತೇನೆ ಯಾಕೆಂದರೆ ಡಾ.ಅಂಬೇಡ್ಕರರು ಮಹಾರ್ ಸಮುದಾಯದವರು ಮತ್ತು ಮುಂದೆ 1950 ಜನವರಿ 26ರಂದು ಈ ಕಾನೂನು ಉದ್ಘಾಟನೆಗೊಂಡಾಗ ನಾವು ಮನುವಿನ ಕಾನೂನಿನ ಬದಲು ಮಹಾರರ ಕಾನೂನನ್ನು ಹೊಂದುತ್ತೇವೆ. ಮನುವಿನ ಕಾನೂನಿನ ಅಡಿಯಲ್ಲಿ ಈ ದೇಶದಲ್ಲಿ ಸುಖ ನೆಮ್ಮದಿಯೇ ಇರಲಿಲ್ಲ, ಆದರೆ ಮಹಾರರ ಕಾನೂನು, ಖಂಡಿತ ಈ ದೇಶವನ್ನು ಸ್ವರ್ಗವನ್ನಾಗಿ ಮಾಡುತ್ತದೆ… ನನಗೆ ಆ ಭರವಸೆ ಇದೆ”. ಎಂದೇಳುತ್ತಾರೆ. ಈಗ ಸಂವಿಧಾನ ರಚಿಸಿದವರ್ಯಾರೆಂದು ತಿಳಿಯುತ್ತದೆ.

ಈ ಎಲ್ಲಾ ಸಂವಿಧಾನ ಸಭೆಯ ನಡಾವಳಿಗಳನ್ನು ಭಾರತ ಸರ್ಕಾರ, ಕರ್ನಾಟಕ ಸರ್ಕಾರ & ಆಯಾ ರಾಜ್ಯ ಸರ್ಕಾರಗಳು ಆಯಾ ಭಾಷೆಗಳಲ್ಲೆ ಸಂಪುಟ ರೂಪದಲ್ಲಿ ಹೊರತಂದಿವೆ.

ಬಾಬಾ ಸಾಹೇಬರು ಸಂವಿಧಾನ ರಚಿಸುವ ಕಾರ್ಯದಲ್ಲಿ ಪಾಲ್ಗೊಳ್ಳದಿದ್ದರೇ ಅವರ ವೈದ್ಯರೇ ಹೇಳುವಂತೆ ಅವರ ಆಯಸ್ಸು ಕನಿಷ್ಠ ಇನ್ನೂ 15 (ಹದಿನೈದು) ವರ್ಷ ಹೆಚ್ಚಾಗುತ್ತಿತ್ತು. ಅಂದರೆ ಬಾಬಾ ಸಾಹೇಬರು ಒಂದು ಕಡೆ ಈ ದೇಶಕ್ಕಾಗಿ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿದರೆ, ಇನ್ನೊಂದು ಕಡೆ
ಈ ದೇಶಕ್ಕಾಗಿ ತಮ್ಮ ಜೀವವನ್ನೇ ಅರ್ಪಿಸಿ ದೇಶಪ್ರೇಮ ಮೆರೆದವರು.

ಸಂವಿಧಾನ ಬದಲು ಮಾಡುತ್ತೇವೆಂಬ ಈಗಿನ ಕೆಲ ಹೇಳಿಕೆಗಳು ಯಾವ ಉದ್ದೇಶಕ್ಕಾಗಿ ಎಂದು ಸ್ವಲ್ಪ ಯೋಚಿಸೋಣಾ..

ಈ ದೇಶದಲ್ಲಿ ಸಂಪ್ರದಾಯವಾದಿಗಳು ಸುಮಾರು 2500 ವರ್ಷ ತಮ್ಮ ಅರಾಜಕತೆ ಮೆರೆದು, ತಾವೇ ಸೃಷ್ಟಿಸಿಕೊಂಡ ಮನುಸ್ಮೃತಿ ಕಾನೂನನ್ನು 97% ರಷ್ಟು ಜನರ ಮೇಲೆ ಏರಿ ವ್ಯವಸ್ಥಿತ ರೀತಿಯಲ್ಲಿ ಶ್ರೇಣಿಕೃತ ಜಾತಿ ವ್ಯವಸ್ಥೆ ಸೃಷ್ಟಿಸಿ, ತನ್ನ ಅಧೀನದಲ್ಲಿ ಈ ದೇಶವನ್ನು ಕಟ್ಟಿಹಾಕಿ, ಅಸಹಾಯಕತೆ ಮರೆಯುವಂತೆ ಮಾಡಿ ಕೇವಲ ಒಂದು ವರ್ಗ ತಾನೇ ಶ್ರೇಷ್ಠ ಎಂಬ ಹುಂಬತನ ಪ್ರದರ್ಶಿಸಿತ್ತು. ಆ ಹುಂಬತನದ ಪ್ರದರ್ಶನ ಮರೆಯಾಗಿ ಇಂದಿಗೆ 71 ವರ್ಷವಾಯಿತು. ಈಗ ಅದೇ ವರ್ಗಕ್ಕೆ ಮತ್ತೆ ತನ್ನಡಿಯಲ್ಲಿ ಗುಲಾಮಗಿರಿ ಸಂಸ್ಕೃತಿ ನಡೆಸುವ ಆಸೆಯಾಗಿದೆ, ಆ ಸಂಸ್ಕೃತಿಯನ್ನು ಮತ್ತೆ ಮತ್ತೆ ಅದೇ ಶೋಷಿತ ಸಮುದಾಯಗಳ ಮೇಲೇರುವ ಆಸೆ. ಇಲ್ಲಸಲ್ಲದ ಆಮಿಷವೊಡ್ಡಿ, ಷಡ್ಯಂತ್ರದಿಂದ ಸಂಚು ರೂಪಿಸುತ್ತಿದೆ.

ಅರೆಜ್ಞಾನಿಗಳಾದ ಶೋಷಿತ ಸಮುದಾಯಗಳು ಮತ್ತೆಮತ್ತೆ ಅವರ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.
ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರನ್ನು ಮೃಗೀಯ ರೀತಿಯಲ್ಲಿ ಬಳಸಿಕೊಂಡು ಬಂದವರು ಯಾರು.? ಎಂಬ ಪ್ರಶ್ನೆ ಒಮ್ಮೆ ನಾವೇ ಹಾಕಿಕೊಂಡರೆ ಮತ್ತೆ ನಾವು ಅವರ ಷಡ್ಯಂತ್ರಕ್ಕೆ ಬಲಿಯಾಗಲು ಸಾಧ್ಯವಿಲ್ಲಾ.

ಇಂದಿನ ಶೋಷಿತ ಸಮುದಾಯಗಳ ಕನಿಷ್ಠ ಗೌರವಯುತ, ಅಧಿಕಾರಯುಕ್ತ, ಆರ್ಥಿಕ ಸಬಲತೆ, ಶೈಕ್ಷಣಿಕ ಬೆಳವಣಿಗೆಗೆ ಕಾರಣವಾದದ್ದು ಇದೇ ಬಾಬಾಸಾಹೇಬರು ಕೊಟ್ಟ ಸಂವಿಧಾನ. ಅದು ಹೇಗೆ ಎಂದು ಕೇಳುವುದಾದರೇ, ಒಮ್ಮೆ ಇದರ ವಿಮರ್ಶೆ ನಡೆಸಿ ಬಿಡೋಣಾ.

ಉದಾಹರಣೆ:- ಸಂವಿಧಾನದ ಪೂರ್ವ ಮತ್ತು ಸಂವಿಧಾನದ ನಂತರ ಶಿಕ್ಷಿತರ ತಳಸಮುದಾಯಗಳ (97%) ಸರಾಸರಿ ಎಷ್ಟು?
ಉದ್ಯೊಗದಲ್ಲಿ ತಳಸಮುದಾಯಗಳ (97%) ಪಾಲೆಷ್ಟು?
ರಾಜ್ಯಾಧಿಕಾರದಲ್ಲಿ ತಳಸಮುದಾಯಗಳ (97%) ಪಾಲೆಷ್ಟು?
ಆರ್ಥಿಕ ಸಬಲೀಕರಣದಲ್ಲಿ ತಳಸಮುದಾಯಗಳ (97%) ಪಾಲೆಷ್ಟು?
ತಳಸಮುದಾಯಗಳಲ್ಲಿ ಭೂ ಒಡೆತನ ಎಷ್ಟು.?
ಸಾಮಾಜಿಕ ಸಮಾನತೆಯಲ್ಲಿ ಬಹುಜನರಲ್ಲಾದ ಬದಲಾವಣೆ ಏನು? ಉತ್ತರವೇನು ಗೊತ್ತೇನು..

ಸಂವಿಧಾನ ಪೂರ್ವದಲ್ಲಿ 2500 ವರ್ಷಗಳಿಂದ ಶೋಷಿತವರ್ಗಗಳ 97% ಜನರಲ್ಲಿ ಎಲ್ಲಾ ಕ್ಷೇತ್ರದಲ್ಲಿ ಶೇಕಡವಾರು ತೆಗೆದುಕೊಂಡರೆ ಪ್ರಾತಿನಿಧ್ಯ 1% ಗಿಂತಲೂ ಕಡಿಮೆ. ಸಂವಿಧಾನ ಜಾರಿಯಾದ ನಂತರ ಕೇವಲ 71 ವರ್ಷದಲ್ಲಿ 97 % ಶೋಷಿತ ಬಹುಜನರ ಪ್ರಾತಿನಿಧ್ಯ ಎಲ್ಲಾ ಕ್ಷೇತ್ರದಲ್ಲೂ ಶೇಕಡ 50 ಕ್ಕೂ ಹೆಚ್ಚು.

ಈ ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಹೇಳುವುದಾದರೆ ಬಾಬಾಸಾಹೇಬರು ಸದಾ ಹೇಳುತ್ತಿದ್ದರು “ಇತಿಹಾಸ ತಿಳಿಯದವರು, ಇತಿಹಾಸ ಸೃಷ್ಟಿಸಲಾರರು” ಎಂದು. ನಮಗೆ ಇತಿಹಾಸ ತಿಳಿಯಲಿಲ್ಲಾ ನಾವು ಇತಿಹಾಸವನ್ನು ಮರೆತೆವು.

ಮತ್ತದೇ ಪುನರಾವರ್ತನೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಪೂರಕವಾಗಿ 2 ಉದಾಹರಣೆ ನೋಡೋಣಾ ಇತಿಹಾಸದೊಂದಿಗೆ ತುಲನೆ ಮಾಡೋಣಾ.

ಉದಾಹರಣೆ1:-ಈ ದೇಶವನ್ನು ಯುರೋಪಿಯನ್ನರು ಎಂದಿಗೂ ಗೆಲ್ಲಲು ಸಾಧ್ಯವಾಗಲಿಲ್ಲಾ ಕಾರಣ ಅವರಲ್ಲಿ ಅಷ್ಟು ಶಕ್ತಿ ಸಾಮರ್ಥ್ಯ ಇರಲಿಲ್ಲಾ. ಆದರೇ ಗೆಲ್ಲಲು ಅವರಲ್ಲಿದ್ದ ಒಂದೇ ಒಂದು ಅಸ್ತ್ರ ಎಂದರೆ ಶಿಸ್ತು. ಆ ಶಿಸ್ತಿಗೆ ಈ ದೇಶದ ತಳ ಸಮುದಾಯಗಳು ಆಕರ್ಷಿತರಾಗಿ ಯುರೋಪಿಯನ್ನರ ಸೈನ್ಯ ಸೇರಿ ಈ ದೇಶವನ್ನು ಈ ದೇಶದ ಜನರಿಂದಲೇ ಸೋಲಿಸಿದ ಕೀರ್ತಿ ಯುರೋಪಿಯನ್ನರಿಗೆ ಸಲ್ಲಿಸಬೇಕಾಗುತ್ತದೆ. (ಬಾ ಬ ಭಾ ಸಂ 12)

ಉದಾಹರಣೆ 2:- ಈ ದೇಶವನ್ನಾಳಿದ್ದು ಭಾರತೀಯರ ಮನಸ್ಸಿನಲ್ಲಿರುವುದು ಬ್ರಿಟಿಷರಿಂದ ಎಂದು. ಆದರೆ ಅದು ಸುಳ್ಳು ಈ ದೇಶವನ್ನು ಸಂಪೂರ್ಣ ಆಳಿದ್ದು “ಈಸ್ಟ್ ಇಂಡಿಯಾ”ಎಂಬ ಒಂದು ಕಂಪನಿ ಅಂದರೆ ಖಾಸಗಿ ಸಂಸ್ಥೆ. ಖಾಸಗಿ ಸಂಸ್ಥೆಯ ಒಡೆತನಕ್ಕೆ ದೇಶ ಸಿಕ್ಕರೆ ಪರಿಸ್ಥಿತಿ ಏನಾಗಬಹುದೆಂದು, ಬಾಬಾಸಾಹೇಬರು ಅಂದೇ ಊಹಿಸಿದ್ದರು. ಈ ಕಾರಣಕ್ಕಾಗಿ ಬಾಬಾಸಾಹೇಬರು ದೇಶದ ಉದ್ಯಮಗಳು ಈ ದೇಶದಲ್ಲಿ ರಾಷ್ಟ್ರೀಕರಣವಾಗಬೇಕೆಂಬ ಎಂಬ ವಾದವನ್ನು ಮಂಡಿಸುತ್ತಿದ್ದರು.

ಈಗ ಯೋಚಿಸಿ ಉದಾಹರಣೆಗಳೊಂದಿಗೆ ಇಂದಿನ ಪರಿಸ್ಥಿತಿಯನ್ನು ತುಲನೆಮಾಡಿ ರಾಜ್ಯಾಧಿಕಾರ ಇದು ಯಾರ ಕೈಲಿದೆ ಮತ್ತು ಅಂತಹ ಅಧಿಕಾರ ಅಂದು ಯಾರ ಕೈಲಿತ್ತು.? ಅವರು ಈ ದೇಶ ಗೆಲ್ಲಲು ಯಾರನ್ನು ಬಳಸಿಕೊಂಡರು ? ಇಂದು ಈ ಅಧಿಕಾರ ಉಳಿಸಿಕೊಳ್ಳಲು ಯಾರನ್ನು ಬಳಸಿಕೊಳ್ಳುತ್ತಿದ್ದಾರೆ.? ಇಷ್ಟರಮಟ್ಟಿಗೆ ಅರಿವಾದರೆ ಬಹುಜನರಿಗೆ ಒಳಿತು.

ಉದಾಹರಣೆ 2 ರೊಂದಿಗೆ ಇಂದಿನ ದೇಶದ ಪರಿಸ್ಥಿತಿ ತುಲನೆ ಮಾಡಿದರೆ, ಅಂದು ಈಸ್ಟ್ ಇಂಡಿಯಾ ಕಂಪನಿಯಾದರೆ, ಇಂದು ಅಂಬಾನಿ, ಅದಾನಿಗಳಂತಹ ಕೈಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ನಲಗುತ್ತಿದೆ. ಆರ್ಥಿಕವಾಗಿ ದುರ್ಬಲಗೊಳಿಸಿದರೇ ಮನುಷ್ಯ ಬದುಕಿದ್ದು ಸತ್ತಂತೆ ಎನ್ನುವ ಪಾಠ ಮನುವಾದಿಗಳು ಅರಿತಿದ್ದಾರೆ. ಈ ಆರ್ಥಿಕ ದುಸ್ಥಿತಿ ಮತ್ತೊಮ್ಮೆ ತಳಸಮುದಾಯಗಳನ್ನು ಶಕ್ತಿಹೀನ ಮಾಡುತ್ತಿದೆ. ನಂತರದ ದಿನದಲ್ಲಿ ಆರ್ಥಿಕತೆಯ ದುರ್ಬಲತೆ ಮಾನವನನ್ನು ಗುಲಾಮಗಿರಿಗೆ ತಳ್ಳುತ್ತದೆ.

ಯಾವ 2500 ವರ್ಷಗಳ ಸನಾತನಿಗಳ ಸರ್ವಾಧಿಕಾರ 70 ವರ್ಷ ಅಡಗಿತ್ತೊ, ಮತ್ತೆ ನಮ್ಮ ಅಜಾಗರೂಕತೆಯಿಂದ ಸಂಪ್ರದಾಯವಾದಿಗಳು ಮೆರೆಯುವ ಕಾಲ ಸನ್ನಿಹಿತವಾಗುತ್ತಿದೆ ಎಂಬ ಭಯವಂತೂ ಕಾಡುತ್ತಿದೆ.

ಅಂದು ಭಾರತ ರಕ್ಷಿಸಲು ಬ್ರಿಟಿಷರ ವಿರುದ್ಧ ಹೋರಾಡಲು ಹೋರಾಟ ರೂಪಿಸಿದ ಹಾಗೆ,
ಇಂದು ಭೀಮಾ ಭಾರತವನ್ನುಳಿಸಲು ಬಾಬಾಸಾಹೇಬರ ಅನುಯಾಯಿಗಳು, ಬಾಬಾಸಾಹೇಬರ ಋಣ ಉಂಡು ಗುಳ್ಳೆ ನರಿಗಳ ಹಾಗೇ ಅಡಗಿರುವ ಶೋಷಿತರು ಮೈಕೊಡವಿ ದೇಶದ ಒಳಗಿರುವ ಈಸ್ಟ್ ಇಂಡಿಯಾ ಸಂತಾನಿಗಳ, ಸಂಪ್ರದಾಯವಾದಿಗಳ, ಮನುವಾದಿಗಳ ವಿರುದ್ಧ ಜನಾಂದೋಲನ ರೂಪಿಸಿ ಸಂವಿಧಾನ ಉಳಿಸಿಕೊಂಡು ಜಾತ್ಯಾತೀತ ರಾಷ್ಟ್ರ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ.

ಈ ದೇಶದ ಸಂವಿಧಾನ ಕೇವಲ ಒಂದು ವರ್ಗಕ್ಕೆ ಅಲ್ಲ ಬರೆದದ್ದು ಅನುಮಾನವಿದ್ದರೆ ಓದಿ ನಂತರ ನಿಮ್ಮ ಅನುಮಾನ ಪರಿಹರಿಸಿಕೊಳ್ಳಿ ಎಂದು ಬಾಬಾಸಾಹೇಬರು ಹೇಳಿದ್ದರು.

ಯಾವ ಸಂವಿಧಾನ ದೇಶವನ್ನು ಸುಭದ್ರವಾಗಿ ಕಟ್ಟಿ, ಬಹುಜನರ ಜೀವನವನ್ನು ರೂಪಿಸಿದ ಸಂವಿಧಾನ ಎನೆಂಬುದನ್ನು ತಿಳಿಯದೆ ಸಂಪ್ರದಾಯವಾದಿಗಳ, ಮನುಸ್ಮೃತಿಯ ಮುಖವಾಡವನ್ನು ಹೊತ್ತ ಗ್ರಂಥಗಳ ದಾಸರಾಗಿ ಸಂವಿಧಾನದ ವಿರುದ್ಧ ಮಾತನಾಡುವ ನವಮೂಲಭೂತವಾದಿಗಳಿಗೆ, ನವಸಂಪ್ರದಾಯವಾದಿಗಳಿಗೆ ಸಾಮಾನ್ಯನೊಬ್ಬ ತಿಳಿಹೇಳುವ ಜರೂರು ಈಗಿದೆ.

ಅದೇನೆಂದರೆ ಬಾಬಾಸಾಹೇಬರು ನೀಡಿದ ಸಂವಿಧಾನ ಆಶಯದಿಂದಲೇ ನೀವು ಈ ದೇಶದ ರಾಜ್ಯಾಧಿಕಾರ ಹಿಡಿದದ್ದು, ನೀವು ಆ ರಾಜ್ಯಾಧಿಕಾರ ಹಿಡಿಯಲು ಅದೇ ಸಂವಿಧಾನ ನಮಗೆಲ್ಲಾ ನಿಮ್ಮನ್ನು ಆಯ್ಕೆಮಾಡುವ ಮತದಾನದ ಹಕ್ಕನ್ನು ನೀಡಿದ್ದು, ಸಂವಿಧಾನದ ಬಗ್ಗೆ ಮಾತನಾಡುವ ಮೊದಲು ಅದರಲ್ಲೇನಿದೆ ಎಂದು ಓದಿ ತಿಳಿಯಿರಿ.

ಇಲ್ಲವಾದರೆ ನೀವು ಆ ಸ್ಥಾನಕ್ಕೆ ಶೋಭೆ ತರುವುದಿಲ್ಲಾ. ಮತ್ತೆ ನಿಮ್ಮ ಮನುವಾದಿ ಮನಸ್ಥಿತಿಗಳು ಸಂವಿಧಾನ ಎಂದರೆ ಮೀಸಲಾತಿ, ದಲಿತರಿಗೆ ಎಂಬ ಕೀಳು ಮನಸ್ಥಿತಿಯ ಅಪಪ್ರಚಾರ ಮಾಡುವುದನ್ನು ಬಿಡಬೇಕು. ಮೀಸಲಾತಿ ಇರುವುದು ಕೇವಲ ಸಂವಿಧಾನದ 1 ವಿಧಿ (16 ನೇ ವಿಧಿ) ಅಷ್ಟೇ, ಅದರಲ್ಲೇನಿದೆ ಎಂಬುದನ್ನು ತಿಳಿದು ನಡೆಯಿರಿ ಎಂದು.

ಈ ದೇಶದ ಬಹುಜನರು ಬಹುಸಂಖ್ಯಾತ ಶೋಷಿತರ ಜೀವನವನ್ನು ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಕಟ್ಟಿಕೊಟ್ಟ ಸಂವಿಧಾನದ ಪ್ರತಿಯನ್ನು ಪ್ರತಿಯೊಬ್ಬ ಭಾರತೀಯ ತಮ್ಮ ಮನೆಗಳಲ್ಲಿಟ್ಟು ತಮ್ಮ ಮನೆಮಂದಿಗೆಲ್ಲ ಸಂವಿಧಾನದ ಪರಿಚಯ ಮಾಡಿಸುವ ಜವಾಬ್ದಾರಿ ಶಿಕ್ಷಿತ ಶೋಷಿತ ಸಮುದಾಯದ ಮೇಲಿದೆ. ಆ ಕೆಲಸ ಮಾಡದಿದ್ದರೆ ಮತ್ತೆ ವಿಕೃತ ಮೆರೆಯುವ ಸಂಪ್ರದಾಯವಾದಿಗಳಿಗೆ ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಬನ್ನಿ ಬಾಬಾಸಾಹೇಬರ ಸಮಸಮಾಜದ ಕಲ್ಪನೆ ಇರುವ ಸಂವಿಧಾನವನ್ನು ಬಹುಜನರು ಜಾಗೃತರಾಗಿ ರಕ್ಷಿಸುವ ಕೆಲಸ ಮಾಡಬೇಕಿದೆ. ಸಂವಿಧಾನವನ್ನು ನಾವು ರಕ್ಷಿಸಿದರೆ, ನಮ್ಮನ್ನು ಸಂವಿಧಾನ ರಕ್ಷಿಸುತ್ತದೆ ಎಂಬ ಪ್ರಾಯೋಗಿಕ ಅಂಶವನ್ನು ಈಗಾಗಲೇ 70 ವರ್ಷದಲ್ಲಿ ಸಂವಿಧಾನ ನಮಗೆ ತಿಳಿಸಿದೆ.

ಸಂವಿಧಾನ ಬದಲಾದರೇ ದಲಿತರಿಗಷ್ಟೆ ಸಂಕಷ್ಟ ಎಂದು, ಸಂವಿಧಾನ ಬದಲಾದರೇ ಹಿಂದುಳಿದ ವರ್ಗಗಳಿಗಷ್ಟೆ ಸಂಕಷ್ಟ ಎಂದು, ಸಂವಿಧಾನ ಬದಲಾದರೇ ಧಾರ್ಮಿಕ ಅಲ್ಪಸಂಖ್ಯಾತರಿಗಷ್ಟೆ ಸಂಕಷ್ಟ ಎನ್ನುವ ಉಡಾಫೆ ಬಿಟ್ಟು ಶೋಷಿತರೆಲ್ಲರೂ ಒಟ್ಟಾಗಿ ಸಂವಿಧಾನದ ಪರ ನಿಲ್ಲುವ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅವಶ್ಯಕವಾಗಿದೆ.

ಜೈ ಭೀಮ್


ಎಚ್. ಎನ್ ಮಂಜುನಾಥ್ ಹೆತ್ತೇನಹಳ್ಳಿ.
ಮಾಜಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು.
ಮೊ: 9916222281

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?