ಹಲವಾರು ವರ್ಷಗಳಿಂದ ನಿಗೂಢವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ಪಡುತ್ತಿದ್ದದ್ದು ಕೊನೆಗೊಂಡಿದೆ. ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಪುಷ್ಪ ಹನುಮಂತರಾಜು, ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲರ ಮೆಚ್ಚುಗೆ ಹಾಗೂ ವಿಶ್ವಾಸವಾದ ಜೆಡಿಎಸ್ ಪಕ್ಷದ ರೇಣುಕಮ್ಮ ಗುರುಮೂರ್ತಿ, ಬಿಜೆಪಿ ಬೆಂಬಲದಿಂದ ಕಾಂಗ್ರೆಸ್ನ ಉಮಾ ಪರಮೇಶ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಪಕ್ಷಕ್ಕೆ 2, ಪಕ್ಷೇತರ 2 ಹಾಗೂ ಜೆ. ಸಿ. ಮಾಧುಸ್ವಾಮಿ ಹಾಗೂ ಸಂಸದ ಜಿ.ಎಸ್. ಬಸವರಾಜು ಮತಗಳೊಂದಿಗೆ 11 ಮತ ಚಲಾಯಿಸಲಾಯಿತು. ಆದರೆ ಜೆಡಿಎಸ್ ಪಕ್ಷಕ್ಕೆ 14 ಮತಗಳ ಬೆಂಬಲ ಸಿಕ್ಕಿ ಜೆಡಿಎಸ್ ಸ್ಪಷ್ಟ ಬಹುಮತಗಳೊಂದಿಗೆ ಪುರಸಭೆ ಜೆಡಿಎಸ್ ಪಾಲಾಗಿ ಅಧಿಕಾರ ಸ್ವೀಕಾರ ಮಾಡಿತು.
[11/4, 08:41] Bharath C N Halli: *ವಿಶೇಷವೇನೆಂದರೆ*
ಸಂಸದರಾದ ಜಿ.ಎಸ್.ಬಸವರಾಜು ರವರು ಕಳೆದ ಲೋಕಸಭಾ ಚುನಾವಣೆಗೆ ಮತಯಾಚನೆಗೆ ಬಂದಿದ್ದು ಈಗ ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮಾತ್ರ ಬಂದ ಸಂಸದರು ಯಾವ ಕಾರ್ಯಕ್ರಮಗಳಿಗಾಗಲಿ, ಅಭಿವೃದ್ಧಿ ಕೆಲಸಗಳ ಚಾಲನೆಗಳಿಗಾಗಲಿ ಪಟ್ಟಣದ ಕಡೆ ತಿರುಗಿನೋಡದ ಸಂಸದರು ಈಗ ಬಂದಿರುವುದನ್ನು ನೋಡಿ ಜನರು ಗೊಣಗಾಡಿದರು.
C.N.ಹಳ್ಳಿ ಪದವಿ ಕಾಲೇಜಿಗೆ ಸಲಾಂ ಎಂದ ಜನರು! ಏಕೆ ಗೊತ್ತಾ?
ಭರತ್ ಚಿಕ್ಕನಾಯಕನಹಳ್ಳಿ
chikkanayakanahalli: ಸರ್ಕಾರಿ ಕಾಲೇಜುಗಳೆಂದರೆ ಮೂಗು ಮುರಿಯುವುದೇ ಹೆಚ್ಚು. ಆದರೆ ಚಿಕ್ಕನಾಯಕನಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಕೆಲಸಕ್ಕೆ ಇಡೀ ನಾಡಿನ ಜನರು ಸಲಾಂ ಎಂದಿದ್ದಾರೆ.
ಯಾರೂ ಮಾಡದ ಕೆಲಸ ಮಾಡಿರುವ ಕಾಲೇಜು, ಇದೇ ಮೊದಲ ಅಲ ವೆಬ್ನಾರ್ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹಾಗೂ ಇಂಗ್ಲೀಷ್ ಸಾಹಿತ್ಯದ ರಸದೌತಣ ಬಡಿಸಿದೆ.ಇದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಕಾರ್ಯಕ್ರಮದ ಪ್ರಾಯೋಜಕರಾದ ಸಹಾಯಕ ಪ್ರಾಧ್ಯಾಪಕಿ ಜಿ.ಪದ್ಮಶ್ರೀ ಅವರ ಕೆಲಸ ಜಿಲ್ಲೆಗೂ ಹೆಸರು ತಂದುಕೊಟ್ಟಿದೆ.ಆಂಗ್ಲಭಾಷಾ ವಿಭಾಗದಿಂದ ವಿಶ್ವ ಶಿಕ್ಷಕರ ದಿನಾಚರಣೆಯ ಪ್ರಯುಕ್ತ, 2 ಅಕ್ಟೋಬರ್ ರಿಂದ 29 ಅಕ್ಟೋಬರ್ 2020 ವರೆಗೆ ಒಂದು ತಿಂಗಳ ರಾಷ್ಟ್ರೀಯ ವೆಬ್ ನಾರ್ ” Revisiting the Contours of Romanticism and Literary Criticism ” ವಿಷಯದ ಕುರಿತು ಆಯೋಜಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಹೆಚ್. ಬಿ ಕುಮಾರಸ್ವಾಮಿ ಮಾತನಾಡಿ ಈ ವೆಬಿನರ್ ನ ಮುಖ್ಯ ಉದ್ದೇಶ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷೆ ಹಾಗೂ ಸಾಹಿತ್ಯದ ಬಗೆಗಿನ ಒಲವನ್ನು ಮೂಡಿಸುವುದೇ ಆಗಿತ್ತು. ಈ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಪಾಲ್ಗೊಂಡ ವಿದ್ಯಾರ್ಥಿಗಳಿಗೂ ವಂದನೆಯನ್ನು ಅರ್ಪಿಸಿದ್ದರು.
ಕಾರ್ಯಕ್ರಮದ ಆಯೋಜಕರಾದ ಪದ್ಮಶ್ರೀ ಜಿ ಅವರು ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿಯೇ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ರಾಷ್ಟ್ರದ ವಿವಿಧ ರಾಜ್ಯ ಮತ್ತು ಕರ್ನಾಟಕದ ಹಲವು ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಸದುಪಯೋಗ ಪಡೆದುಕೊಂಡಿದ್ದಾರೆ.
ಇಂತಹ ಒಂದು ತಿಂಗಳ ನಿರಂತರ ರಾಷ್ಟ್ರೀಯ ವೇಬಿನರ್ ಅನ್ನು ಇಡೀ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ನಡೆಸಿರುವುದು ನಮ್ಮ ಕಾಲೇಜು ಎನ್ನುವುದು ಚಿಕ್ಕನಾಯಕನಹಳ್ಳಿಗೆ ಹೆಮ್ಮೆಯ ವಿಚಾರ ಎಂದರು.
ಈ ಒಂದು ತಿಂಗಳ ವೆಬಿನರ್ ನಲ್ಲಿ ನುರಿತ 15 ಸಂಪನ್ಮೂಲ ವ್ಯಕ್ತಿಗಳು ರೋಮ್ಯಾಂಟಿಕ್ ಏಜ್, ಮಾಡ್ರನ್ ಏಜ್ ನಾ ಹಲವು ಕವಿತೆಗಳು, ಕಾದಂಬರಿಗಳು, ಜೊತೆಯಲ್ಲಿ ಸಾಹಿತ್ಯ ವಿಮರ್ಶೆಯ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ವಿಚಾರಗಳನ್ನು ಮಂಡಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವನ್ನು ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾರು ಏನ್ ಹೇಳಿದ್ರು

ಈ ವೇಬಿನರ್ ನ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಒಲವನ್ನು ಮೂಡಿಸುವುದಾಗಿತ್ತು ಹಾಗೂ ಈ ಕಾರ್ಯಕ್ರಮಕ್ಕೆ ಯಶಸ್ವಿಯಾಗಿ ಕಾರಣರಾದ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ ಧನ್ಯವಾದಗಳು.- Padmashree G
ನಮ್ಮ ಹೆಮ್ಮೆ…

ವೆಬಿನಾರ್ನ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಒಲವನ್ನು ಮೂಡಿಸುವುದು ಹಾಗೂ ಈ ಕಾರ್ಯಕ್ರಮಕ್ಕೆ ಕಾರಣರಾದ ನಮ್ಮ ಕಾಲೇಜಿನ ಪ್ರಾಧ್ಯಾಪಕಿ ಪದ್ಮ ಶ್ರೀ ಅವರಿಗೆ ಧನ್ಯವಾದಗಳು ಮತ್ತು ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ವಂದಿಸುತ್ತೇನೆ.
Kumaraswamy
ಅನುಕೂಲ ಆಯಿತು

ನಮ್ಮಂತಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗಿದೆ ಮತ್ತು ಆನ್ಲೈನ್ ಉಪನ್ಯಾಸದಲ್ಲಿ ಕಲಿಯುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಅಭ್ಯಾಸ ಮಾಡಿದ್ದೇನೆ.
Amaresh
GFGC. Koppala
ಕಾಲೇಜಿಗೆ ವಂದಿಸುವೆ
ಇದರ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ವಿಷಯ ಸುಲಭವಾದ ವಿಷಯ ಮತ್ತು ಆನ್ಲೈನ್ ಕ್ಲಾಸ್ ಬದಲು ವೆಬ್ನರ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳು ಹೆಚ್ಚು ಕಲಿಯುತ್ತಾರೆ. ಈ ಎಲ್ಲಾ ತರಗತಿಗಳನ್ನು ಬೋಧನೆಮಾಡಲು ಅವಕಾಶ ಕೊಟ್ಟ ಚಿಕ್ಕನಾಯಕನಹಳ್ಳಿ ಪ್ರಥಮ ದರ್ಜೆ ಕಾಲೇಜಿಗೆ ವಂದಿಸುತೇನೆ .
Ragavendra k b
GFGC, Pavagada
ವೂಡೇ ಪಿ.ಕೃಷ್ಣ ಅವರಿಗೆ ನಾಡೋಜ ಪ್ರಶಸ್ತಿ ಗರಿ
Publicstory. in
ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ನಾಡಿನಾದ್ಯಂತ ಹೆಸರುಗಳಿಸಿರುವ ವೂಡೇ ಪಿ.ಕೃಷ್ಣ ಅವರಿಗೆ ಹಂಪಿ ವಿಶ್ವವಿದ್ಯಾಲಯದ ನಾಡೋಜಾ ಪ್ರಶಸ್ತಿ ಒಲಿದಿದೆ.
ಇದೇ ನವೆಂಬರ್ 10ರಂದು ಹಂಪಿಯಲ್ಲಿ ನಡೆಯಲಿರುವ ವಿ.ವಿ.ಯ ನುಡಿ ಹಬ್ಬದ ಘಟಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಶೇಷಾದ್ರಿಪುರಂ ದತ್ತಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಆಗಿರುವ ವೂಡೇ ಪಿ.ಕೃಷ್ಣ ಅವರು ಸಾಹಿತ್ಯ, ಶಿಕ್ಷಣ, ಅದ್ಯಾತ್ಮ, ಸಮಾಜಸೇವೆಯಲ್ಲಿ ಅವಿಸ್ಮರಣೀಯ ಕೆಲಸ ಮಾಡಿದ್ದಾರೆ.
ರಾಯದುರ್ಗ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಎಂಜಿನಿಯರಿಂಗ್ ಮತ್ತು ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಇವರಿಗೆ ಬೆಂಗಳೂರು ವಿ.ವಿಯು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾಗಿ ಸಲ್ಲಿಸಿದ ಗಮನಾರ್ಹ ಸೇವೆಯನ್ನು ಪರಿಗಣಿಸಿ ರಾಷ್ಟ್ರ ಪತಿ ಪದಕದ ಗೌರವ ಕೂಡ ಇವರಿಗೆ ಸಂದಿದೆ.
ಹೆಸರಾಂತ ವೂಡೇ ಕುಟುಂಬದವರಾದ ಇವರು ನೂರಾರು ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಬಡಮಕ್ಕಳ ಶಿಕ್ಷಣಕ್ಕೆ ವೂಡೇ ಪ್ರತಿಷ್ಠಾನದ ಮೂಲಕ ನೆರವು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.
ಸರಳತೆ,ಸಜ್ಜನಿಕೆಯ ಕೃಷ್ಣ ಅವರು ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧೀಜಿ ಆದರ್ಶಗಳ ಹಾದಿಯಲ್ಲಿ ನಡೆಯುತ್ತಿರುವುದಲ್ಲದೇ ಯುವಕರಿಗೆ ಈ ಮಾರ್ಗಗಳ ಮುನ್ಸೂಚಕರು ಆಗಿದ್ದಾರೆ.
ಭಾಷೆ ಆಯುಧವಲ್ಲ: ತುರುವೇಕೆರೆ ಪ್ರಸಾದ್
ಸಮಾರಂಭದಲ್ಲಿ ಬರಹಗಾರ ತುರುವೇಕೆರೆ ಪ್ರಸಾದ್ ಅವರ ಕರೋನಾ ಚುಟುಕು ಸಂಕಲನ ‘ಮಾಸ್ಕೊಡಗಾಮ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು
Publicstory. in
ತುರುವೇಕೆರೆ: ಭಾಷೆ ಒಂದು ಆಯುಧವಲ್ಲ, ಅದು ಬಹು ಆಮಾಮದ ಒಂದು ಸಾಂಸ್ಕøತಿಕ ಪರಿಭಾಷೆ. ಭಾಷೆ ನಮ್ಮ ಸಂಸ್ಕೃತಿ, ಪರಂಪರೆ, ಜೀವನಕ್ರಮದೊಂದಿಗೆ ಹಾಸು ಹೊಕ್ಕಾಗಿದೆ.ನಮ್ಮ ಸಂಸ್ಕತಿ, ಪರಂಪರೆಯನ್ನು ಹೊರತು ಪಡಿಸಿದ ಭಾಷೆ ಕೇವಲ ಒಂದು ಅಸ್ಥಿಪಂಜರವಿದ್ದಂತೆ! ಹಾಗಾಗಿ ಕನ್ನಡ ಭಾಷೆಯ ಅಭಿವೃದ್ಧಿ ಸಮಗ್ರ ಕನ್ನಡಿಗರ ಬದುಕಿನ ಅಭಿವೃದ್ಧಿ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು.

ಪಟ್ಟಣದ ಕನ್ನಡ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಿಗರ ವೇದನೆ, ಸಂವೇದನೆ, ನಿವೇದನೆಗೆ ಮಾದ್ಯಮವಾಗಬೇಕಾದ ಭಾಷೆ ರಾಜಕೀಯ ಶಕ್ತಿ, ವ್ಯಕ್ತಿಗಳ ಷಡ್ಯಂತ್ರಗಳಿಗೆ ಸಿಲುಕಿದೆ. ಸಮರ್ಪಕವಾದ ಕನ್ನಡಪರ ನೀತಿ-ನಿರೂಪಣೆಗಳಿಲ್ಲದೆ ಕನ್ನಡಿಗರು ರಾಷ್ಟ್ರಮಟ್ಟದಲ್ಲಿ ಅವಕಾಶಗಳಿಂದ ವಂಚಿತರಾಗುವಂತಾಗಿದೆ ಎಂದರು.
ಸಮಸ್ತ ಕನ್ನಡಿಗರಿಗೆ ಸಮಾನಾವಕಾಶ ನೀಡಬೇಕು, ಇಲ್ಲವೇ ಭಾಷೆ ಕುರಿತ ಸಂಕುಚಿತ ಮನೋಭಾವ, ತಾರತಮ್ಯ ಶಿಕ್ಷಣ ನೀತಿ, ದುರಭಿಮಾನದ ದಂದ್ವ ನೀತಿಗಳನ್ನು ಬಿಟ್ಟು ಅವರಿಗೆ ಭಾಷೆಯ ಆಯ್ಕೆಯ ಬಗ್ಗೆ ಸ್ವಾತಂತ್ರ್ಯ ನೀಡಿ ಕನ್ನಡಿಗರ ಸ್ವಾಭಿಮಾನವನ್ನು ಗೌರವಿಸಬೇಕು. ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಒಟ್ಟಾಗಿ ಹೋರಾಟ ನಡೆಸಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಂ.ರಾಜು ಮಾತನಾಡಿ ಕನ್ನಡ ಸಮೃದ್ಧ ಭಾಷೆ. ಆದರೆ ಇಂಗ್ಲೀಷ್ ಪಾರಮ್ಯದಿಂದಾಗಿ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಗುತ್ತಿಲ್ಲ ಎಂದರು.
ಒಂದು ಭಾಷೆ ಅನ್ನದ ಭಾಷೆ ಆಗಬೇಕಾದರೆ ಸರ್ಕಾರ ಹಾಗೂ ಕನ್ನಡ ಪರ ಸಂಘಟನೆಗಳು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ನಮ್ಮಲ್ಲಿ ಹೆಚ್ಚು ಕೈಗಾರಿಕೆಗಳ ಹಾಗೂ ವ್ಯವಹಾರಗಳ ಅಭಿವೃದ್ಧಿಯಾದಾಗ ಈ ಆತ್ಮನಿರ್ಭರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಸಾ.ಶಿ.ದೇವರಾಜ್ ಮಾತನಾಡಿ ಕವಿತೆಗಳು ಧ್ಯಾನದಲ್ಲಿ ಹುಟ್ಟುವಂತೆ ವ್ಯವಸ್ಥೆಯ ಅಧ್ವಾನಗಳಲ್ಲೂ ಮೈದಾಳಬೇಕು. ಕವಿಗಳು ಭಾವನಾತ್ಮಕ ಕವಿತೆಗಳಿಗೆ ನೀಡುವಷ್ಟೇ ಆದ್ಯತೆಯನ್ನು ಕ್ರಾಂತಿಕಾರಿಕ ಕವಿತೆಗಳಿಗೂ ನೀಡಬೇಕು. ಸಂಭ್ರಮದಂತೆಯೇ ಸಂಕಟಗಳೂ ಕವಿತೆಯ ಒಳಧ್ವನಿಯಾಗಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಬರಹಗಾರ ತುರುವೇಕೆರೆ ಪ್ರಸಾದ್ ಅವರ ಕರೋನಾ ಕಾಲದ ಚುಟುಕುಗಳ ಸಂಕಲನ “ಮಾಸ್ಕೊಡಗಾಮ”ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.
ವೇದಿಕೆಯ ರಾಜ್ಯ ಸಂಚಾಲಕ ಹೊಸ್ಮನೆ ಗಿರೀಶ್‍ಬಾಬು ಹಾಗೂ ಚಲನಚಿತ್ರ ನಟ ಲಕ್ಷ್ಮೀಕಾಂತ್ ಅವರನ್ನು ಸನ್ಮಾನಿಸಲಾಯಿತು.
ಟಿ.ಸುಷ್ಮಾ ಪ್ರಾರ್ಥಿಸಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಎಂ.ಕೆ. ಲತಾಮಣಿ ಸ್ವಾಗತಿಸಿದರು.
ಗೌರವಾಧ್ಯಕ್ಷ ಎಂ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ದರ್ಶನ್ ಮಾವಿನಹಳ್ಳಿ ಉಪಸ್ಥಿರಿದ್ದರು.
ಕವಿಗೋಷ್ಠಿಯಲ್ಲಿ ರಾಕೇಶ್ ಕುಣಪಿ, ದರ್ಶನ್ ನರಿಗೇನಹಳ್ಳಿ, ಲೀಲಾ.ಎಸ್, ಕೀರ್ತನ್, ಇಬ್ರಾಹಿಂ ಪಾಷಾ, ನಾಗೇಶ್, ಶ್ರೀಕಾಂತ್, ಗುರುಪ್ರಸಾದ್, ಇತರರು ಕವನ ವಾಚಿಸಿದರು. ಬಿ.ಎನ್.ಚೇತನ್ ಮತ್ತು ಕೆ.ಆರ್. ರಮೇಶ್ ಕಾರ್ಯಕ್ರಮ ನಿರೂಪಿಸಿದರು.
ತಿಪಟೂರು ಎತ್ತಿನಹೊಳೆ ನೀರಿಗೆ ಕಾಲ್ನಡಿಗೆ ಜಾಥಾ: ರಸ್ತೆಯಲ್ಲೇ ಸಭೆ ನಡೆಸಿದ ತಹಶೀಲ್ದಾರ್
ವರದಿ: ಕರೀಕೆರೆ ಪ್ರಶಾಂತ್
ತಿಪಟೂರು : ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಎತ್ತಿನಹೊಳೆ ನೀರು ತುಂಬಿಸಬೇಕು ಹಾಗೂ ಭೂ ಸಂತ್ರಸ್ತರಿಗೆ ನ್ಯಾಯಯುತ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ನಾಗತೀಹಳ್ಳಿ ಗೇಟ್‌ನಿಂದ ಬಿದಿರೆಗುಡಿ ಮಾರ್ಗವಾಗಿ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಎತ್ತಿನಹೊಳೆ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಲ್ನೆಡಿಗೆ ಜಾಥ ಹಮ್ಮಿಕೊಳ್ಳಲಾಗಿತ್ತು.

ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಿಮ್ಲಾಪುರ ದೇವರಾಜು ಮಾತನಾಡಿ, ಯೋಜನೆ ಪ್ರಾರಂಭದಿಂದಲೂ ರೈತರಿಗೆ ಹಸಿ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದಾರೆ. ಜನಪ್ರತಿನಿಧಿಗಳು ಗುತ್ತಿಗೆದಾರರ ಪರವಾಗಿದ್ದಾರೆ ಹೊರತು ರೈತರ ಪರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಸಾವಿರಾರು ಎಕರೆಯಷ್ಟು ಭೂಮಿಯನ್ನು ಕಳೆದುಕೊಂಡು ರೈತರು ಅತಂತ್ರ ಸ್ಥಿತಿಗೆ ತಲುಪಲಿದ್ದು ನೀರಿನ ಹಂಚಿಕೆ ಆಗದಿದ್ದರೆ ರೈತರು ಆತ್ಮಹತ್ಯೆಯ ಹಾದಿಯನ್ನು ಹಿಡಿಯಬೇಕಾಗುತ್ತದೆ. ಭೂಮಿಯನ್ನು ವಶಪಡಿಸಿಕೊಳ್ಳುವ ಮುಂಚಿತವಾಗಿ ರೈತರಿಗೆ ಬರಬೇಕಾದಂತಹ ಪರಿಹಾರದ ಮೊತ್ತವನ್ನು ನೀಡಿದರೆ ಅನುಕೂಲವಾಗುತ್ತದೆ ಎಂದರು.

ಯೋಜನೆಯ ಕಾಮಗಾರಿ ಮುಗಿದ ನಂತರದಲ್ಲಿ ರೈತರು ಪರಿಹಾರಕ್ಕಾಗಿ ಅಲೆದಾಡುವುದು, ಬೀದಿಗಿಳಿಯುವ ಸ್ಥಿತಿ ನಿರ್ಮಾಣವಾಗದೇ ಸುವ್ಯವಸ್ಥಿತವಾಗಿ ಕಾರ್ಯವಾಗಬೇಕಿದೆ. ಇದಕ್ಕೆ ಅಧಿಕಾರಿಗಳು ಚಿಂತನೆ ನಡೆಸಿ ರೈತರ ಭೂಮಿಗೆ ಪರಿಹಾರ ಹಾಗೂ ತಾಲ್ಲೂಕಿನ ಕೆರೆಗಳಿಗೆ ನೀರಿನ ಮಂಜೂರಾತಿಯನ್ನು ನೀಡಬೇಕೆಂದು ಒತ್ತಾಯಿಸಿದರು.

ರೈತ ಕೃಷಿ ಕಾರ್ಮಿಕ ಸಂಘಟನೆ ರಾಜ್ಯಸಮಿತಿ ಸದಸ್ಯ ಎಸ್.ಎನ್.ಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಎತ್ತಿನಹೊಳೆ ಯೋಜನೆಗಾಗಿ ಅತಿ ಹೆಚ್ಚು ಭೂಮಿಯನ್ನ ಕಳೆದು ಕೊಳ್ಳುತ್ತಿದ್ದೆ. ಸರಿಸುಮಾರು ೧೨೦೦ ಹೆಕ್ಟೇರ್ ಭೂಮಿ ಎತ್ತಿನಹೊಳೆ ಯೋಜನೆಯಿಂದ ಸಂತ್ರಸ್ತರಾಗುತ್ತಿದ್ದಾರೆ. ಆದರೆ ಹನಿ ನೀರು ತಾಲ್ಲೂಕಿಗೆ ಹಂಚಿಕೆಯಾಗಿಲ್ಲ ಎಂದು ಕಿಡಿಕಾಡಿದರು.
ರಾಜಕಾರಣಿಗಳು ಮಾತ್ರ ತಾಲ್ಲೂಕಿಗೆ ೨ಟಿ.ಎಂ.ಸಿ ಅಡಿ ನೀರು ಹಂಚಿಕೆ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ರೈತರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತಾಲ್ಲೂಕಿಗೆ ನೀರು ಹಂಚಿಕೆ ಆಗಿರುವ ಬಗ್ಗೆ ಲಿಖತವಾಗಿ ಮಂಜೂರಾತಿ ಮಾಡಿಸಬೇಕು. ಜೊತೆಗೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂಪಿಸಬೇಕು. ರೈತರಿಗೆ ಸಮರ್ಪಕವಾಗಿ ಪರಿಹಾರವನ್ನು ದೊರಕಿಸಿಕೊಟ್ಟು ನಂತರ ಕಾಮಗಾರಿಯನ್ನು ಮಾಡಬೇಕೆಂದು ಒತ್ತಾಯಿಸಿದರು.
ಕಾಲ್ನಡಿಗೆ ಜಾಥಾದ ಮಧ್ಯದಲ್ಲಿಯೇ ಬಿದರೆಗುಡಿಯ ಬಳಿಗೆ ತಹಶೀಲ್ದಾರ್ ಚಂದ್ರಶೇಖರ್ ಆಗಮಿಸಿ ರೈತರ ಮನವೊಲಿಕೆಗೆ ಯತ್ನಿಸಿ ಯಶಸ್ವಿಯಾದರು.
ಜೊತೆಗೆ ನ.3ರ ಮಂಗಳವಾರದಂದು ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಎತ್ತಿನಹೊಳೆ ಯೋಜನೆಯ ಅಧಿಕಾರಿಗಳೊಂದಿಗೆ ರೈತ ಮುಖಂಡರುಗಳನ್ನು ಒಳಗೊಂಡಂತೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ್ ಭರವಸೆಯ ಮೇರೆಗೆ ರೈತರು ತಮ್ಮ ಕಾಲ್ನಡಿಗೆ ಜಾಥಾ, ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜಿ.ನಾರಾಯಣ್, ರೈತ ಸಂಘದ ಮುಖಂಡ ಯೋಗಣ್ಣ, ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್, ಕುಂದೂರು ತಿಮ್ಮಯ್ಯ, ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿಜಯ ಕುಮಾರ್, ಮನೋಹರ್ ಪಾಟೀಲ್, ಶ್ರೀಕಾಂತ್ ಕೆಳಹಟ್ಟಿ, ರೈತ ಮುಖಂಡ ಚಂದ್ರೇಗೌಡ, ಡಿಎಸ್‌ಎಸ್ ಕೃಷ್ಣಮೂರ್ತಿ, ತಿಪಟೂರು ಲೈಫ್‌ನ ರೇಣುಕಾರಾಧ್ಯ, ಬಿ.ಬಿ.ಸಿದ್ದಲಿಂಗಮೂರ್ತಿ ಸೇರಿದಂತೆ ನೂರಾರು ರೈತರು ಆಗಮಿಸಿದ್ದರು.
ಮದಲಿಂಗನ ಕಣಿವೆಯಲ್ಲಿ ಕಂಡ ವಿಷಕನ್ಯೆ ಹೂವು
– ಸಂಜಯ್ ಹೊಯ್ಸಳ
ನಾವು ಕೆಲವು ಪುರಾಣ ಹಾಗೂ ಐತಿಹಾಸಿಕ ಕತೆಗಳಲ್ಲಿ ವಿಷ ಕನ್ಯೆಯ ಬಗ್ಗೆ ಉಲ್ಲೇಖ ಇರುವುದನ್ನು ಕೇಳಿದ್ದೇವೆ. ಎದುರಾಳಿ ರಾಜರನ್ನು ಬಗ್ಗುಬಡಿಯಲು ಕೆಲವು ರಾಜರು ಈ ವಿಷಕನ್ಯೆಯರನ್ನು ಬಳಸುತ್ತಿದ್ದರಂತೆ.

ಎದುರಾಳಿ ರಾಜರು ವಿಷಕನ್ಯೆಯರ ರೂಪ, ಲಾವಣ್ಯ, ಮೈಮಾಟಕ್ಕೆ ಮರುಳಾದರೇ ಅವರ ಕತೆ ಮುಗಿದಂತೆ. ಈ ವಿಷಕನ್ಯೆಯರ ವಿಷಯ ಕೇಳಿದರೇ ನಾವು ಯಾವುದೇ ಸುಂದರ ವಸ್ತುವಿಗೆ ಅದರ ಪೂರ್ವಾಪರ ತಿಳಿದುಕೊಳ್ಳದೆ ಮರುಳಾಗಬಾರದೆಂಬ ವಿಷಯ ಮನದಟ್ಟಾಗುತ್ತದೆ.
ಸೌಂದರ್ಯದ ಗಣಿಯಾಗಿದ್ದ ವಿಷಕನ್ಯೆಯಂತೆಯೇ ಕಾಡಿನಲ್ಲಿ ತನ್ನ ಸೌಂದರ್ಯದಿಂದ ಒಂದು ಹೂ ಎಲ್ಲರನ್ನು ಸೆಳೆಯುತ್ತದೆ. ಆದರೇ ಈ ಹೂ ಕೂಡ ವಿಷಕನ್ಯೆಯಂತಯೇ ತನ್ನ ಒಡಲ ತುಂಬ ವಿಷ ತುಂಬಿಕೊಂಡಿರುತ್ತದೆ. ಆದ್ದರಿಂದ ಈ ವಿಷಪುಷ್ಪವನ್ನು ನೋಡಿ ಮನತಣಿಸಿಕೊಳ್ಳಬೇಕಷ್ಟೆ.

ಈ ಪೀಠಿಕೆಯಿಂದ ಪರಿಚಯಿಸಿದ ಹೂವಿನ ನಾಮದೇಯ ಗೌರಿ ಹೂವು. ನೋಡಲು ಮನಮೋಹಕ ವಾಗಿರುವ ಈ ಹೂವನ್ನು ಕಾಡಿನ ಹೂ ಅಂತಲೇ ಹೇಳಬೇಕು. ಏಕೆಂದರೆ ಇದು ಕಾಡು ಬಿಟ್ಟರೇ ಬೇರೆಡೆ ಅಷ್ಟಾಗಿ ಕಾಣಸಿಗುವುದಿಲ್ಲ.
ಇದರ ವೈಜ್ಞಾನಿಕ ಹೆಸರು : Gloriousa superba ಇಂಗ್ಲೀಷ್ ಹೆಸರು- Glory lily. ಕುಟುಂಬ – Liliaceae. ಕನ್ನಡದಲ್ಲಿ ಗೌರಿ ಹೂ, ಅಗ್ನಿಶಿಖೆ. ಕಡುಕೆಂಪು, ಹಳದಿ ಬಣ್ಣದಿಂದ ಕೂಡಿದ ಇದರ ಹೂಗಳು ಬಹಳ ಆಕರ್ಷಕ. ನಮ್ಮ ರಾಜ್ಯದ ಪಶ್ಚಿಮಘಟ್ಟದ ಮಳೆಕಾಡುಗಳು, ಬಂಡೀಪುರ, ಬಿ.ಆರ್.ಟಿ ಅರಣ್ಯಗಳಲ್ಲಿ ಮುಖ್ಯವಾಗಿ ಕಂಡುಬರುವ ಈ ಬಳ್ಳಿಯ ಸಸ್ಯ, ಆಗಷ್ಟ್ – ಅಕ್ಟೋಬರ್ ಮಾಸದಲ್ಲಿ ಹೂ ಬಿಡುತ್ತದೆ.

ಕೆಲವೇ ಕಾಡುಗಳಲ್ಲಿ ಕಂಡುಬರುವ ಈ ಹೂವು, ಹಿಂದೆ ವಿಷಕನ್ಯೆಯರು ಹೇಗೆ ಬೇರೆಯವರ ಲಾಭಕ್ಕೆ ದಾಳವಾಗುತ್ತಿದ್ದರೋ ಅದೇ ರೀತಿ ಈ ಹೂವಿನಲ್ಲಿರುವ ಕೆಲವು ಔಷಧೀಯ ಗುಣಗಳಿಂದಾಗಿ ಮನುಷ್ಯನ ದುರಾಸೆಗೆ ಇವು ಬಲಿಯಾಗಿ ಈ ಸಸ್ಯದ ತಳಿ ಅಪಾಯದ ಅಂಚನ್ನು ಮುಟ್ಟಿದೆ.
ಇದರ ಔಷಧೀಯ ಗುಣಗಳ ಬಗ್ಗೆ ತಿಳಿಯುವುದಾದರೇ, ಇದನ್ನು ಮುಖ್ಯವಾಗಿ ಹಾವು ಕಡಿತದಲ್ಲಿ ಆ್ಯಂಟಿ ವೆನಮ್ ಆಗಿ ಉಪಯೋಗಿಸುತ್ತಾರೆ. ಇದಲ್ಲದೆ ಅಲ್ಸರ್, ಆರ್ಥರೈಟಿಸ್, ಕಾಲರಾ, ಕುಷ್ಠ, ಕಿಡ್ನಿ, ಕ್ಯಾನ್ಸರ್, ಹೆರಿಗೆ ನೋವು ಇನ್ನೂ ಹಲವು ಗಂಭೀರ ಕಾಯಿಲೆಗಳ ನಿವಾರಣೆಯಲ್ಲಿಯೂ ಇದನ್ನು ಬಳಸಲಾಗುತ್ತದೆ.
ವಿವಿಧ ದೇಶಗಳ ಸಾಂಸ್ಕೃತಿಕ ಆಯಾಮದಲ್ಲೂ ಇದರ ಬಣ್ಣನೆ ಇದೆ. ಜಿಂಬಾಬ್ವೆ ದೇಶದ ರಾಷ್ಟ್ರ ಪುಷ್ವವಾದ ಈ ಹೂವಿನ ವಿನ್ಯಾಸಕ್ಕೆ ಮರುಳಾಗಿ ಇಂಗ್ಲೆಂಡಿನ ರಾಜಕುಮಾರಿ ತನ್ನ ಕಿರೀಟದ ವಿನ್ಯಾಸವನ್ನು ಈ ಹೂವಿನ ಶೈಲಿಗೆ ಬದಲಾಯಿಸಿದಳಂತೆ. ಭಾರತದ ಅಂಚೆ ಇಲಾಖೆಯೂ ಕೂಡ ಈ ಹೂವಿನ ಚಿತ್ರವಿರುವ ಸ್ಟಾಂಪ್ ಒಂದನ್ನು ಬಿಡುಗಡೆಗೊಳಿಸಿದೆ.
ತಮಿಳುನಾಡು ತನ್ನ ರಾಜ್ಯ ಲತೆಯಾಗಿ ಇದನ್ನು ಉಳಿಸಿಕೊಂಡಿದೆ.
ಇಂತಹ ಅದ್ಭುತ ಹಿನ್ನಲೆಯ, ಅಸಾಧಾರಣ ಮಹತ್ವವುಳ್ಳ ಸಾವಿರಾರು ಗಿಡ, ಮರ, ಬಳ್ಳಿ, ಹೂ, ಹಣ್ಣುಗಳ ತವರು, ಏಕೈಕ ಆವಾಸಸ್ಥಾನ ನಮ್ಮ ಕಾಡುಗಳು. ಈ ಕಾಡುಗಳನ್ನು ರಕ್ಷಿಸುವುದರಿಂದ ಮಾತ್ರ ಇಂತಹ ಅಪರೂಪದ ಸಸ್ಯಸಂಕುಲಗಳನ್ನು ರಕ್ಷಿಸಲು ಸಾದ್ಯ. ಆದ್ದರಿಂದ ಕಾಡನ್ನು ರಕ್ಷಿಸೋಣ. ಆ ಮೂಲಕ ಎಲ್ಲಾ ರೀತಿಯ ಜೀವವೈವಿಧ್ಯತೆಯನ್ನು ಸಂರಕ್ಷಿಸೋಣ. ಆ ಮೂಲಕ ನಮ್ಮ ಮುಂದೆ ನಮ್ಮ ಭವಿಷ್ಯಕ್ಕೆ ಎದುರಾಗಬಹುದಾದ ಅಪಾಯದಿಂದ ಪಾರಾಗೋಣ.
BSY ಬದಲಾವಣೆ: ಕುತೂಹಲ ಮೂಡಿಸಿದ ಹೊಸ ನಾಯಕನಿಗಾಗಿ ಲಿಂಗಾಯತರ ಸಭೆ
Publicstory. in
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹೊಸ ನಾಯಕನಿಗಾಗಿ ಲಿಂಗಾಯತ-ವೀರಶೈವ ಸಮನ್ವಯ ವೇದಿಕೆ ಬೆಂಗಳೂರಿನಲ್ಲಿ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಅಶೋಕ ಬಿ.ಹಿಂಚಿಗೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಕೇಳಿ ಬಂದ ಮಾತುಗಳು
* ಲಿಂಗಾಯತ-ವೀರಶೈವ ರಾಜಕಾರಣಿಗಳು ವಂಶಪಾರಂರ್ಯ, ವ್ಯಭಿಚಾರ, ಭ್ರಷ್ಟಾಚಾರ ಹಾಗೂ ಕಳಂಕಿತರಾಗಿದ್ದರೆ ಅಂತಹವರನ್ನು ಸಮುದಾಯದವರು ಗಟ್ಟಿಯಾಗಿ ವಿರೋಧಿಸಬೇಕು.
* ಡಿಸೆಂಬರ್ ನಲ್ಲಿ ಬಿಜೆಪಿಯಲ್ಲಿ ಭಾರಿ ಬದಲಾವಣೆ ಆಗಲಿವೆ ಎಂಬ ಸುದ್ದಿ ಇದೆ.
* ಒಂದು ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಆ ಸ್ಥಾನಕ್ಕೆ ಸಮುದಾಯದ ಮತ್ತೊಬ್ಬ ಗಟ್ಟಿ ನಾಯಕರನ್ನೇ ಹೈಕಮಾಂಡ್ ಪರಿಗಣಿಸಬೇಕು.
* ಬಸವಣ್ಣನವರ ತತ್ವಕ್ಕೆ ಅಪಚಾರಚಾಗಲು ಬಿಡಬಾರದು.
* ವೀರಶೈವ-ಲಿಂಗಾಯತ ಬಣಗಳಿದ್ದರೆ ಮೂರನೆಯವರು ದುರ್ಲಾಭ ಪಡೆಯುತ್ತಾರೆ.
* ಜೆಡಿಎಸ್ ದ್ರೋಹದ ಕಾರಣ ಅನುಕಂಪದ ಆಧಾರದಲ್ಲಿ ಯಡಿಯೂರಪ್ಪ ಅವರನ್ನು ಸಮುದಾಯ ನಾಯಕ ಎಂದು ಒಪ್ಪಿಕೊಂಡಿತು. ಆದರೆ ಇಂದು ಅವರ ನಾಯಕತ್ವ ಕೊನೆಯಾಗುವ ಲಕ್ಷಣಗಳು ಕಾಣುತ್ತಿವೆ.
* ಮುಂದಿನ ನಾಯಕರು ನಮ್ಮ ಸಮುದಾಯದ ಉತ್ತಮ ನಾಯಕನೇ ಅಗಬೇಕು.
* ಈ ಸಂಗತಿಯನ್ನು ಬಿಜೆಪಿ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲಾಗುವುದು.
* ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿಗಳಾಗುವವರಲ್ಲಿ ಬಸನಗೌಡ ಪಾಟೀಲ ಯತ್ನಾಳ, ಜಗದೀಶ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಇದ್ದಾರೆ.
ಕಾಂಗ್ರೆಸ್ ನಲ್ಲಿ ಎಂ.ಬಿ.ಪಾಟೀಲ ನಿರ್ವಿವಾದವಾಗಿ ಸಮುದಾಯದ ನಾಯಕ.
* ಕಾಂಗ್ರೆಸ್ ಮೂಲತಃ ಲಿಂಗಾಯತರ ಪಕ್ಷ. ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ಜೆ.ಎಚ್.ಪಟೇಲ್, ಎಸ್.ಆರ್.ಬೊಮ್ಮಾಯಿ ಅಂತಹವರು ಮುಖ್ಯಮಂತ್ರಿಗಳಾಗಿ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ.
* ಇವತ್ತು ನಮ್ಮ ನಾಯಕರಲ್ಲಿ ಮೌಲ್ಯಗಳು ಕುಸಿದಿವೆ. ಹೀಗಾಗಲು ನಾವು ಬಿಡಬಾರದು.
* ಲಿಂಗಾಯತ-ವೀರಶೈವ ಬಣಗಳ ಕಚ್ಚಾಟವನ್ನು ನಿಲ್ಲಿಸಿ ಒಂದಾಗಿ ಸಮುದಾಯದ ಏಳ್ಗೆಗೆ ಶ್ರಮಿಸಬೇಕು.
* ಈ ಸಭೆ ಯಾರದೇ ಪ್ರಾಯೋಜಿತ ಸಭೆ ಅಲ್ಲ. ಇವತ್ತು ಎಲ್ಲರೂ ಮೀಸಲಾತಿ ಬೇಕು ಎಂದು ರಸ್ತೆಗೆ ಇಳಿದಿದ್ದಾರೆ. ಹೀಗಿರುವಾಗ ಸಮುದಾಯ ಕೈಕಟ್ಟಿ ಕೂರಲು ಸಾಧ್ಯವಿಲ್ಲ.
* ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸಮುದಾಯವನ್ನು ಒಡೆದು ಎಂ.ಬಿ ಪಾಟೀಲರನ್ನು ಹರಕೆಯ ಕುರಿ ಮಾಡಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
* ಲಿಂಗಾಯತ-ವೀರಶೈವ ಬಣಗಳು ಒಟ್ಟಾಗಿ ಸಂಘಟನೆಯಾದರೆ ಮಾತ್ರ ನಮ್ಮ ನಾಯಕ ಬೆಳೆಯಬಲ್ಲ.
* ಈ ದಿಸೆಯಲ್ಲಿ ಶೀಘ್ರವೇ ಲಿಂಗಾಯತ-ವೀರಶೈವ ಸಮನ್ವಯ ವೇದಿಕೆ ವತಿಯಿಂದ ಬೆಂಗಳೂರಿನಲ್ಲಿ ಗುರು-ವಿರಕ್ತ ಸ್ವಾಮೀಜಿಗಳ ಮತ್ತು ಪ್ರಮುಖರ ಸಭೆ ಹಮ್ಮಿಕೊಳ್ಳಲಾಗಿದೆ.
* ಸಭೆಯಲ್ಲಿ ಇದ್ದವರು- ಹೈಕೋರ್ಟಿನ ಹಿರಿಯ ವಕೀಲ ಗಂಗಾಧರ ಗುರುಮಠ, ಎಚ್.ಎಸ್.ಚಂದ್ರಮೌಳಿ, ಲೆಕ್ಕ ಪರಿಶೋಧಕ ಡಾ.ಗಿರೀಶ್ ಕೆ.ನಾಶಿ, ಸಾಹಿತಿ-ಆರ್ಥಿಕ ತಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಹಾಲನೂರು ಲೇಪಾಕ್ಷಿ, ಜಿ.ಪಂ.ಸದಸ್ಯ ತೇಜಸ್ವಿ ವಿ.ಪಟೇಲ್, ರೈತ ಸಂಘದ ಮಲ್ಲೇಶ, ಎಂ.ಟಿ.ಸುಭಾಶ್ಚಂದ್ರ.
ಯಾರು ಏನು ಹೇಳಿದರು:
* ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು ಹೇಳಿದ್ದು-
ಲಿಂಗಾಯತ-ವೀರಶೈವ ಸಮುದಾಯಕ್ಕೆ ಸೇರಿದವರೇ
“ಕೇಶವ ಕೃಪಾ”ದ ಮುಖ್ಯಸ್ಥರು ಆಗಬೇಕು.
* ಡಾ.ಗಿರೀಶ್ ಕೆ.ನಾಶಿ- ಯತ್ನಾಳ್ ಅವರ ನೇರ ನಿಷ್ಠುರ ಹೇಳಿಕೆಗಳು ಹೇಗೆ ವಿವಾದ ಆಗಲು ಸಾಧ್ಯ?, ವಿವಾದಗಳಿಲ್ಲದೆ ನಾಯಕನಾಗುವುದಾದರೂ ಹೇಗೆ?
* ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ- ಲಿಂಗಾಯತ-ವೀರಶೈವ ಎಂಬ ವೈದಿಕ-ಅವೈದಿಕವಾದ ಎರಡು ಎತ್ತುಗಳ ಬಂಡಿಯನ್ನು ಮುನ್ನಡೆಸುವ ಭವಿಷ್ಯದ ನಾಯಕ ಸಂಸ್ಕೃತಿ ಉಳ್ಳ ನಿಸ್ವಾರ್ಥಿ ಆಗಿರಬೇಕು.
ಏಕಾಏಕಿ ಸಾಯುತ್ತಿವೆ ಹಸು, ಕುರಿಗಳು: ಹೆಚ್ಚಿದ ಆತಂಕ
Publicstory. in
ಗುಬ್ಬಿ: ತಾಲೂಕಿನ ಕಸಬಾ ಹೋಬಳಿ ರಂಗನಾಥಪುರ ಗ್ರಾಮದ ದಲಿತ ಕಾಲೊನಿಯಲ್ಲಿ ಇಂದು ಬೆಳಿಗ್ಗೆ 7 ರ ಸಮಯದಲ್ಲಿ ಒಂದು ಹಸು, ಒಂದು ಎಮ್ಮೆ ಇದ್ದಕ್ಕಿದ್ದ ಹಾಗೆ ನೆಲಕ್ಕೆ ಬಿದ್ದು ಹೊದ್ದಾಡಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ಹಸು ಹಾಗೂ ಎಮ್ಮೆಯ ಬಾಯಲ್ಲಿ ನೊರೆ, ಮೇವಿನ ರಸ ಬಂದಿದ್ದು, ಕಾಯಿಲೆಯ ಲಕ್ಷಣ ಕಂಡು ಬಂದಿಲ್ಲ.
ಕಳೆದ ಹತ್ತು ದಿನಗಳ ಹಿಂದೆ ಲಕ್ಕಯ್ಯ ಎಂಬುವವರಿಗೆ ಸೇರಿದ ಒಂದು ಹಸು, ಒಂದು ಕರು, ಹಾಗೂ ಐದು ಮೇಕೆಗಳು ಇದೆ ರೀತಿ ಸಾವನ್ನಪ್ಪಿದ್ದವು.

ವಿಡಿಯೊಗೆ ಇಲ್ಲಿ ಕ್ಲಿಕ್ ಮಾಡಿ: https://youtu.be/IzPwoHpFNC0
ಕೂಡಲೇ ಪಶು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಕಾರಣ ಇಂದು ನೀಲಮ್ಮ ಅವರಿಗೆ ಸೇರಿದ ಹಸು, ಹಾಗೂ ಕಾಳಮ್ಮ ಅವರಿಗೆ ಸೇರಿದ ಎಮ್ಮೆ ಇಂದು ಬೆಳಿಗ್ಗೆ ಸಾವನ್ನಪ್ಪಿವೆ.
ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು ಊರಿನಲ್ಲಿರುವ ಜಾನುವಾರುಗಳಿಗೆ ಸಾವಿನ ಭೀತಿ ಎದುರಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯತೆ ಈ ಘಟನೆಗೆ ಕಾರಣವಾಗಿದೆ: ಮೊದಲು ನಡೆದ ಘಟನೆಯಿಂದ ಹೆಚ್ಚೆತ್ತುಕೊಳ್ಳದ ಅಧಿಕಾರಿಗಳು ಆ ಗ್ರಾಮದಲ್ಲಿನ ಉಳಿದ ಜಾನುವಾರುಗಳಿಗೆ ಇಲ್ಲಿಯ ವರೆಗೂ ಯಾವುದೇ ರೀತಿಯ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಡ ದಲಿತ ಕುಟುಂಬಗಳಾಗಿದ್ದು, ಈ ಘಟನೆಯಿಂದಾಗಿ ಅರ್ಥಿಕವಾಗಿ ಸಂಕಷ್ಟಕಿಡಾಗಿದ್ದು, ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಿರ್ಲಕ್ಷ್ಯ ವಹಿಸಿದ ಅಧಿಕಾರಿಗೆ ಸೂಕ್ತ ಕ್ರಮ ಕೈಗೊಳ್ಳುವತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕರೊನ ಹಿನ್ನೆಲೆಯಲ್ಲಿ ಬಿಡುಗಡೆಯಾದ ಅನುದಾನವನ್ನು ರಾಜ್ಯ ಸರ್ಕಾರ ವಾಪಸ್ ತೆಗೆದುಕೊಂಡಿದ್ದು ಯಾವುದೇ ಅನುದಾನ ಇಲ್ಲ ಎಂದು ಪಶುಅಧಿಕಾರಿ ಡಾ. ದಿವಾಕರ್ ಹೇಳಿದಾಗ ಊರಿನ ಗ್ರಾಮಸ್ಥರು ಅಧಿಕಾರಿಗಳಿಗೆ ಘೇರಾವ್ ಹಾಕಿದರು.
ಶಿರಾ ಉಪಚುನಾವಣೆ: ಹೊರಗಿನ ನಾಯಕರ ಭರ್ಜರಿ ಪ್ರಚಾರ
ಶಿರಾ: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣದಲ್ಲಿ ಕಣದಲ್ಲಿ ಸ್ಥಳೀಯ ನಾಯಕರಿಗಿಂತ ಹೊರಗಿನ ನಾಯಕರೇ ಕ್ಷೇತ್ರದಲ್ಲಿ ಹೆಚ್ಚಾಗಿ ಮಿಂಚುತ್ತಿದ್ದಾರೆ.
ಇದರಲ್ಲಿ ಮೂರೂ ಪಕ್ಷಗಳೂ ಕಮ್ಮಿ ಇಲ್ಲ. ತಮ್ಮ ಅಭ್ಯರ್ಥಿಯ ಪರ ತನ್ನದೇ ಆದ ಮಾತುಗಳಲ್ಲಿ, ಅವರ ಸಾಧನೆಗಳನ್ನು ಜನತೆಗೆ ತಿಳಿಸುತ್ತಾ ಮತ ಯಾಚಿಸುತ್ತಿರುವುದು ಕ್ಷೇತ್ರದಲ್ಲಿ ಸಾಮಾನ್ಯವಾಗಿತ್ತು.

ಬೇರೆ ಕ್ಷೇತ್ರದ ಶಾಸಕರು, ಜಿಲ್ಲಾ
ಮತ್ತು ತಾಲ್ಲೂಕು ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರ ದಂಡೇ ಸಿರಾ ಕ್ಷೇತ್ರಕ್ಕೆ ಪ್ರತಿದಿನವೂ ಬರುತ್ತಿದ್ದು, ಭರ್ಜರಿ ರೋಡ್ ಶೋ, ಮನೆಮನೆ ಪ್ರಚಾರ ಮಾಡುತ್ತ ಮತದಾರರ ಮನವೊಲಿಸಿದ್ದಾರೆ.
ಶುಕ್ರವಾರ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಆಗಮಿಸಿ,
ಹುಣಸೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರವರಹಳ್ಳಿ ಕುಂಟನಹಟ್ಟಿ ಗ್ರಾಮಗಳು ಸೇರಿದಂತೆ ಹಲವು ಕಡೆಗಳಲ್ಲಿ ಪ್ರಚಾರ ನಡೆಸಿ, ಮತ ಯಾಚಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದ್ದು, ಬಡವರಿಗೆ ಉಚಿತವಾಗಿ ಅಕ್ಕಿಯನ್ನು ನೀಡಿದ್ದು, ಮಕ್ಕಳಿಗಾಗಿ ಕ್ಷೀರಭಾಗ್ಯ, ಕೃಷಿ ಭಾಗ್ಯದಂತಹ ಹಲವು ಜನಪರ ಕಾರ್ಯಕ್ರಮಗಳನ್ನು ನೀಡಿ ಎಲ್ಲಾ ವರ್ಗದ ಜನರಿಗೆ ಅನುಕೂಲ ಮಾಡಿರುತ್ತಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ರಹಿತ ಆಡಳಿತವನ್ನು ಜನತೆ ಮರೆಯಬಾರದೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಡಿ ಕೆ ಶಿವಮೂರ್ತಿ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಹಿಂದೆ ಸಚಿವರಾದಾಗ, ಶಿರಾ ಕ್ಷೇತ್ರಕ್ಕೆ ಸುಮಾರು ಎರಡೂವರೆ ಸಾವಿರ ಕೋಟಿಯಷ್ಟು ಅನುದಾನವನ್ನು ತಂದು ಬ್ರಿಜ್ ಕಂ ಬ್ಯಾರೇಜ್, ಮೊರಾರ್ಜಿ ಶಾಲೆ, ಶಾಲೆ ಮಿನಿ ವಿಧಾನಸೌಧ, ಪರಿಶಿಷ್ಟ ಜಾತಿ ಪಂಗಡಗಳ ಕಾಲೊನಿಯಲ್ಲಿ ಸಿಸಿ ರಸ್ತೆ, ಸರ್ಕಾರಿ ಪಾಲಿಟೆಕ್ನಿಕ್ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಮಾಡಿದ್ದು ಮತದಾರರು ಜಯಚಂದ್ರರವರನ್ನು ಕೈಬಿಡಬಾರದೆಂದು ಮನವಿ ಮಾಡಿದರು.
ಪ್ರಚಾರದಲ್ಲಿ ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಗ್ರಾಮದ ಮುಖಂಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಶಿಧರ್, ಲಿಂಗೇಶ್, ಉಮೇಶ್, ಸಿದ್ರಾಮಣ್ಣ, ರಂಗನಾಥ್, ಕಾಂತರಾಜು, ಜಗನ್ನಾಥ ಮುಖಂಡರೊಂದಿಗೆ ಸಭೆ ನಡೆಸಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಟಿ.ಬಿ. ಜಯಚಂದ್ರ ರವರಿಗೆ ತಮ್ಮ ಅಮೂಲ್ಯವಾದ ಮತ ನೀಡುವಂತೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಲಾಯಿತು.
ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಣೆ
ಚಿಕ್ಕನಾಯಕನಹಳ್ಳಿ; ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕೋರೋನ ವೈರಸ್ ಹರಡಿರುವ ಹಿನ್ನೆಲೆಯಲ್ಲಿ ಈ ಬಾರಿ ಅತಿ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದೇವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಕುಮಾರಸ್ವಾಮಿ ಅವರು ತಿಳಿಸಿದರು.
ಈ ಸಮಯದಲ್ಲಿ ಕಾಲೇಜಿನ ಎಲ್ಲ ಬೋಧಕ ಮತ್ತು ಆಡಳಿತ ವರ್ಗದವರು ಹಾಜರಿದ್ದರು.
