Tuesday, May 5, 2026
Google search engine
Home Blog Page 188

ದಿನಕ್ಕೊಂದು ’ನಿಟ್ಟುಸಿರ’ ಕಥೆ

ಜಿ ಎನ್ ಮೋಹನ್


ನನ್ನ ಇನ್ ಬಾಕ್ಸ್ ಗೆ ಒಂದು ನಿಟ್ಟುಸಿರು ಬಂದು ಬಿತ್ತು.

ಅದೊಂದು ಗಾಢ ನಿಟ್ಟುಸಿರು. ತನ್ನ ಒಡಲೊಳಗಿನ ನೋವನ್ನೆಲ್ಲಾ ನನ್ನೆದುರು ಸುರಿದ ನಿಟ್ಟುಸಿರು.

ನನಗೆ ಆ ನೋವಿನ ಗುಂಗಿನಿಂದ ಇನ್ನೂ ಹೊರಗೆ ಬರಲು ಆಗಿರಲೇ ಇಲ್ಲ ಆಗಲೇ ಇನ್ನೊಂದು ನಿಟ್ಟುಸಿರು ನನ್ನ ಇನ್ ಬಾಕ್ಸ್ ಗೆ ಬಂದು ಬಿತ್ತು.

ಅದೇನೆಂದು ನೋಡುವ ವೇಳೆಗೆ ಮತ್ತೊಂದು, ಅದನ್ನು ತಿರುವಿ ಹಾಕುವುದರೊಳಗೆ ಮಗದೊಂದು..

‘ನಾನು ಈಗ ಶಾಲೆಯಲ್ಲಿ ಟೆಸ್ಟ್ ಬರೆಯಬೇಕು. ಟೆಸ್ಟ್ ಬರೆಯಲು ಅವಕಾಶ ನೀಡಬೇಕೆಂದರೆ ಸ್ಟೀಲ್ ತಟ್ಟೆ ತಂದುಕೊಡಬೇಕು ಎಂದು ಮೇಷ್ಟ್ರು ತಾಕೀತು ಮಾಡಿದ್ದಾರೆ. ನಾನು ಆ ತಟ್ಟೆ ಎಲ್ಲಿಂದ ತಂದುಕೊಡಲಿ?’ ಎಂದು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕೇಳುತ್ತಿದ್ದಾಳೆ.

‘ನನಗೆ ಎಲ್ಲರಂತೆ ಮರಕೋತಿ, ಚಿನ್ನಿ ದಾಂಡು, ಲಗೋರಿ, ಕಬಡ್ಡಿ ಆಡಬೇಕು ಎನ್ನುವ ಆಸೆ. ನನ್ನ ಕಂಡೊಡನೆ ಎಲ್ಲರೂ ಓಡಿ ಹೋಗುತ್ತಾರೆ. ನಾನು ಯಾರೊಂದಿಗೆ ಆಡಲಿ?’ ಎಂದು ಪ್ರಶ್ನಿಸುವ ದಲಿತ ಹುಡುಗ ತನ್ನನ್ನು ಮುಟ್ಟಿಸಿಕೊಳ್ಳದವರ ಕಥೆಯನ್ನು ಹೇಳುತ್ತಾನೆ.

‘ನನಗೆ ಪಿಂಚಣಿ ಬರಬೇಕು. ಆದರೆ ಅಂಚೆಯವ ನನಗೆ ಇನ್ನು ಮುಂದೆ ಪಿಂಚಣಿ ಇಲ್ಲ ಎಂದು ಹೇಳುತ್ತಿದ್ದಾನೆ. ಇದು ಯಾಕೆ?’ ಎನ್ನುವುದು ವಿಧವಾ ವೇತನದಲ್ಲಿಯೇ ಬದುಕು ನಡೆಸುತ್ತಿದ್ದ ಆ ಅಸಹಾಯಕ ವದ್ಧೆಯ ಪ್ರಶ್ನೆ.

‘ನನ್ನ ಊರಿನಲ್ಲಿ ಜುಳು ಜುಳು ಹರಿಯುತ್ತಿದ್ದ ನದಿಯನ್ನು ಕಲುಷಿತ ಮಾಡಿದವರು ಯಾರು?’ ‘ಗಣಿ ಧೂಳು ಬೆರಸಿ ನೀರನ್ನು ಕುಡಿಯಲಾಗದಂತೆ ಕಪ್ಪಾಗಿಸಿದವರು ಯಾರು?’ ಎನ್ನುವುದು ಜಾರ್ಖಂಡ್‌ನ ಎಲ್ಲರ ಪ್ರಶ್ನೆ.

ಹೀಗೆ ನಿಟ್ಟುಸಿರ ಗಾಥೆಗೆ ಕೊನೆಯೇ ಇಲ್ಲ.

ನನಗೆ ಅದುವರೆಗೆ ಗೊತ್ತಿದ್ದದ್ದು ‘ದಿನಕ್ಕೊಂದು ಕಥೆ’ ಮಾತ್ರ. ಸೊಂಪಾಗಿ ಮಲಗಲೆಂದು ಅಮ್ಮ ಮಾಯಾ, ಕಿನ್ನರ, ರಾಜಕುವರಿಯರ ಲೋಕಕ್ಕೆ ಕರೆದೊಯ್ಯುತ್ತಿದ್ದ ಕಥೆಗಳು.

ಆದರೆ ಇಲ್ಲಿಯೂ ದಿನಕ್ಕೊಂದು ಕಥೆ ಇದೆ. ಆದರೆ ಇದು ನಿದ್ದೆಯಲ್ಲಿದ್ದವರನ್ನು ಎಬ್ಬಿಸುವ, ಸುಖದ ನಡುವೆ ಇದ್ದವರನ್ನು ನಿಡುಸುಯ್ಯುವಂತೆ ಮಾಡುವ, ನಮ್ಮೊಳಗನ್ನು ಪ್ರಶ್ನಿಸುವಂತೆ ಮಾಡುವ ಕಥೆಗಳು.

ಪ್ರತೀ ದಿನ ಹೀಗೆ ಒಂದೊಂದು ನಿಟ್ಟುಸಿರ ಕಥೆಯನ್ನು ನಮ್ಮ ಇ- ಮೇಲ್ ಗೆ ದೂಡುತ್ತಿರುವವರು ‘ವಿಡಿಯೊ ವಾಲಂಟಿಯರ್ಸ್’.

ಸಿ ಎನ್ ಎನ್, ಫಾಕ್ಸ್, ಕೋರ್ಟ್ ಟಿವಿ. ಹಲವು ವರ್ಷಗಳ ಕಾಲ ಟಿವಿ ಚಾನಲ್‌ಗಳಲ್ಲಿ ಕೆಲಸ ಮಾಡಿದ ಜೆಸ್ಸಿಕಾ ಮೇಬೆರ‌್ರಿಗೆ ಒಂದು ದಿನ ತನ್ನ ಕೆಲಸದ ಅರ್ಥ ಏನು ಎನ್ನುವ ಪ್ರಶ್ನೆ ಎದ್ದು ನಿಂತಿತು.

ಅತಿರೇಕದ ವರದಿ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ ಎನಿಸಿ ದಾಕ್ಷಣ ರಾಜೀನಾಮೆ ನೀಡಿ ಹೊರಬಂದು ನೇರ ಇಳಿದದ್ದು ಅಹಮದಾಬಾದ್‌ನಲ್ಲಿ.

ಅಲ್ಲಿನ ಮಹಿಳೆಯರಿಗೆ ಕ್ಯಾಮೆರಾ ಹಿಡಿಯುವ, ಅದನ್ನು ತಮ್ಮ ಒಳಿತಿಗೆ ಬಳಸಿಕೊಳ್ಳುವುದನ್ನು ಹೇಳಿಕೊಡಲು ನಿಂತರು. ಅಮೆರಿಕನ್ ಇಂಡಿಯಾ ಫೌಂಡೇಷನ್ ಇವರ ಬೆನ್ನಿಗಿತ್ತು. ಸತತ ಒಂದು ವರ್ಷ ಭಾರತದ ಮೂಲೆ ಮೂಲೆ ಅಲೆದು, ಮಹಿಳೆಯರ ಪಿಸು ಮಾತು ಆಲಿಸುತ್ತಾ, ಹೇಳಿಕೊಳ್ಳಲಾಗದ ಕಥೆಗಳನ್ನು ಕೇಳುತ್ತಾ ಹೋದ ಇವರಿಗೆ ತಮ್ಮ ಎದುರು ಇನ್ನೂ ದೊಡ್ಡ ಸವಾಲಿದೆ ಅನಿಸಿತು.

ಮಹಿಳೆಯರು ಮಾತ್ರವಲ್ಲ, ಅಭಿವೃದ್ಧಿ ಎನ್ನುವುದು ತಾಕಿಯೇ ಇಲ್ಲದ, ಸದಾ ನಿಟ್ಟುಸಿರಿನಲ್ಲಿ ಕೈ ತೊಳೆಯುತ್ತಿದ್ದವರ ಕಥೆಗೆ ದನಿಯಾಗಬೇಕು ಅನಿಸಿತು. ಆ ವೇಳೆ ಕ್ಯಾಮೆರಾ ಕಣ್ಣಿನ ಮೂಲಕ ಮಾತನಾಡುತ್ತಿದ್ದ ಕೆ ಸ್ಟಾಲಿನ್ ಜೊತೆಯಾದರು.

‘ವಿಡಿಯೋ ವಾಲಂಟಿಯರ್ಸ್’ ಸಂಸ್ಥೆ ತಲೆ ಎತ್ತಿತು.

ದೇಶದ ಮೂಲೆ ಮೂಲೆಗಳಲ್ಲಿ ಕ್ಯಾಮೆರಾ ಓಡಾಡಬೇಕು. ಯಾರೂ ಮುಟ್ಟದ ಪರ್ವತದ ತುದಿ, ಕೊರೆವ ಹಿಮರಾಶಿ, ಕಾಲಿಡಲಾಗದ ಘಟ್ಟಗಳು, ಓಡಾಡಲು ರಸ್ತೆ ಇರದ ತಾವುಗಳು ಎಲ್ಲೆಲ್ಲೂ ಕ್ಯಾಮೆರಾಗಳು ಅಲೆಯಬೇಕು. ಅದುವರೆಗೂ ಭಾರತ ಕೇಳಿಲ್ಲದ ನಿಟ್ಟುಸಿರ ಕಥೆಗಳನ್ನು ಹೇಳಬೇಕು ಎಂದು ಹಂಬಲಿಸಿದರು.

ಇಂದು ಭಾರತದ ಮೂಲೆ ಮೂಲೆಗಳಲ್ಲಿ ‘ವಿಡಿಯೊ ವಾಲಂಟಿಯರ್ಸ್’ ನ ಕಾರ್ಯಕರ್ತರಿದ್ದಾರೆ.

ಒಬ್ಬ ಆಟೋ ಚಾಲಕ, ಒಬ್ಬ ಕೂಲಿಯಾಳು, ಶಾಲೆ ಬಿಟ್ಟು ದಿಕ್ಕುಪಾಲಾಗಿದ್ದ ಹುಡುಗ, ಮದ್ಯವ್ಯಸನದ ವಿರುದ್ಧ ಹೋರಾಡಿದ ಮಹಿಳೆಯರು, ಸ್ಮಶಾನದಲ್ಲಿ ಮಣ್ಣು ಹೊರುತ್ತಿದ್ದ ಆಳು ಎಲ್ಲರೂ ಇಂದು ಈ ‘ವಿಡಿಯೋ ವಾಲಂಟೀರ್ಸ್’ನ ವರದಿಗಾರರು.

‘ಇವತ್ತು ಕುಗ್ರಾಮಗಳಲ್ಲಿ ವರದಿಗಾರರೆಲ್ಲಿದ್ದಾರೆ? ಅಲ್ಲಿನ ದನಿ ಯಾವ ಮಾಧ್ಯಮದಲ್ಲಿ ಬರುತ್ತಿದೆ ಹೇಳಿ? ಇವತ್ತು ಮಾಧ್ಯಮಗಳು ವರದಿಗಳನ್ನು ಹೊರತೆಗೆಯುವ ಮಾತನಾಡುತ್ತಿವೆ. ಆದರೆ ನಾವು ವರದಿಗಳನ್ನು ಹೊರಗೆ ಕಳಿಸುವ ಬಗ್ಗೆ ಚಿಂತಿಸುತ್ತಿದ್ದೇವೆ’ ಎನ್ನುತ್ತಾರೆ ಜೆಸ್ಸಿಕಾ ಮೇಬೆರ‌್ರಿ.

‘ಒಂದಲ್ಲಾ ಒಂದು ದಿನ, ಇಂದಲ್ಲಾ ನಾಳೆ ನಾವು ಈ ವಿಡಿಯೊ ಸಾಹಸವನ್ನು ಗ್ರಾಮೀಣ ಭಾರತದ ರಾಯ್ಟರ್ಸ್’ ಆಗಿ ಮಾಡುತ್ತೇವೆ. ಭಾರತದ ಎಲ್ಲ 625 ಜಿಲ್ಲೆಗಳಲ್ಲಿ ನಮ್ಮ ಕ್ಯಾಮೆರಾಗಳು ಓಡಾಡಬೇಕು’ ಎನ್ನುತ್ತಾರೆ.

‘ಅದು ಸಾಧ್ಯವಿಲ್ಲ’ ಎಂದು ಹೇಳುವ ಅವಕಾಶವನ್ನು ಈಗಾಗಲೇ ಊರೂರು ಅಲೆಯುತ್ತಿರುವ ಅವರ ಪ್ರತಿನಿಧಿಗಳು ತಪ್ಪಿಸಿಬಿಟ್ಟಿದ್ದಾರೆ.

ಮೇಲ್ಜಾತಿಯವರ ಮನೆಗಳ ಮುಂದೆ ಹಾದುಹೋಗಬೇಕಾದಾಗ ಚಪ್ಪಲಿ ಕಳಚಿ ಕೈನಲ್ಲಿ ಹಿಡಿದು ಹೋಗಬೇಕಾದ ಕಥೆ ರಾಜಸ್ಥಾನದ ಕುಗ್ರಾಮವೊಂದರಿಂದ ಹೊರಬೀಳುತ್ತದೆ.

ಮದ್ಯಪಾನ ಮಾಡಿ ಹಾಳಾದವರಿಗೆ ಪಾಠ ಕಲಿಸಲು ಮುಂದಾದ ಚಿಂಗಾರಿ ಮಹಿಳಾ ಸಮಿತಿಯ ಸಾಹಸ ಜಾರ್ಖಂಡ್ ನ ರಾಯಪುರದಿಂದ ಹೊರಬೀಳುತ್ತದೆ.

ಛತ್ತೀಸ್‌ಗಢದ ಎದೆಯಲ್ಲಿ ಹಾದು ಹೋಗುವ ರಸ್ತೆ ನಿರ್ಮಿಸಿದ 22 ಕೂಲಿಕಾರರಿಗೆ ಮೂರು ವರ್ಷವಾದರೂ ವೇತನ ನೀಡದ ಸರ್ಕಾರದ ಕಥೆ ಇನ್ನೊಂದು ಕುಗ್ರಾಮದಿಂದ ಎದ್ದು ನಿಲ್ಲುತ್ತದೆ.

ಜಾರ್ಖಂಡ್‌ನ ಕುಂಟಿ ಗ್ರಾಮದಲ್ಲಿ ರಾತ್ರೋರಾತ್ರಿ ಮರಳು ಕಳುವು ಮಾಡುತ್ತಿದ್ದವರ ಕಥೆ ಬಯಲಾಗುತ್ತದೆ. ಗಿರಣಿ ಧೂಳು ಕಾಡುತ್ತಿದ್ದಾಗ ಕ್ಯಾಮೆರಾ ಕಣ್ಣು ಅದರ ಸುತ್ತಾ ಹರಿದಾಡುತ್ತದೆ.

‘ವಿಡಿಯೊ ವಾಲಂಟಿಯರ್ಸ್’ಗಳು ಕ್ಯಾಮೆರಾ ಹಿಡಿದದ್ದೇ ಅವರ ಸುತ್ತಮುತ್ತಲಿನವರ ಬದುಕು ಹಸನಾಗಿದೆ. ಜತೆಗೆ ಆ ಕ್ಯಾಮೆರಾ ಹಿಡಿದವರ ಬದುಕೇ ಬದಲಾಗಿ ಹೋಗಿದೆ. ಅದುವರೆಗೂ ಅಸ್ಪಶ್ಯತೆಯ ಕಾರಣಕ್ಕೆ ದೇವಸ್ಥಾನದ ಒಳಗೆ ಹೋಗಲಾಗದ ಯುವಕನಿಗೆ ಕ್ಯಾಮೆರಾ ಹಿಡಿದಾಕ್ಷಣ ಸಲೀಸಾಗಿ ಪ್ರವೇಶ ದಕ್ಕುತ್ತದೆ.

ಎಷ್ಟೋ ಜನ ತಾವು ಬಾಲ್ಯದಲ್ಲಿ ಅನುಭವಿಸಿದ ನೋವು ಅಪಮಾನಗಳನ್ನು ಕ್ಯಾಮೆರಾ ಹಿಡಿದಾಕ್ಷಣ ನೆನಪು ಮಾಡಿಕೊಂಡಿದ್ದಾರೆ. ಅಂತಹ ವರದಿಗಳ ಬೆನ್ನು ಹತ್ತಿ ಹೋಗಿದ್ದಾರೆ.

ಶಾಲೆಗೆ ದಿನಗಟ್ಟಲೆ ಬಾರದ ಶಿಕ್ಷಕ ಮರಳಿ ಬರುವಂತೆ ಮಾಡುತ್ತದೆ. ಅತ್ಯಾಚಾರಕ್ಕೆ ಒಳಗಾದವರ ಕಥೆ ಸರ್ಕಾರದ ಕಣ್ಣಿಗೆ ರಾಚಿ ಕ್ರಮಕ್ಕೆ ಆಗ್ರಹಿಸುತ್ತದೆ. ನಿರಾಶ್ರಿತರಿಗೆ ಮನೆ ಕಟ್ಟುವಂತೆ ಮಾಡಿದೆ. ಆಸ್ಪತ್ರೆಗಳಿಗೆ ಶುಚಿತ್ವ, ಔಷಧ ಎರಡೂ ಬರುವಂತೆ ಮಾಡಿದೆ. ಮರಗಳ್ಳರು ಜೈಲು ಸೇರುವಂತೆ ಮಾಡಿದೆ.

ಈ ಕಥೆಗಳನ್ನು ಚಿತ್ರಿಸಿ ಡಬ್ಬಿಯಲ್ಲಿಟ್ಟರೆ ಯಾರ ಬದುಕು ಬದಲಾಗಲು ಸಾಧ್ಯ?

ಅದಕ್ಕಾಗಿ ಸಮುದಾಯ ವಿಡಿಯೊ ಕೇಂದ್ರಗಳನ್ನು ಸಷ್ಟಿಸಿದೆ. ಇವರು ತಯಾರಿಸುವ ಬಡತನತ ಕಥನಗಳನ್ನು ಈ ಕೇಂದ್ರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಪ್ರದರ್ಶಿಸುತ್ತದೆ.

ತನ್ನ ಸುತ್ತಲಿನ ಹಳ್ಳಿಗಳ ಕಥೆಗಳನ್ನು ಕೇಂದ್ರೀಕರಿಸಿದ ವಿಡಿಯೊ ಮ್ಯಾಗಜಿನ್ ತಯಾರಿಸಿ ಪ್ರದರ್ಶಿಸುತ್ತದೆ. ವೆಬ್ ಸೈಟ್ ನಲ್ಲಿ ಪ್ರದರ್ಶಿಸುತ್ತದೆ. ತನ್ನ ಸಂಪರ್ಕಕ್ಕೆ ಬಂದವರಿಗೆ ದಿನಕ್ಕೊಂದು ವಿಡಿಯೋ ಮೇಲ್ ಮಾಡುತ್ತದೆ.

‘ಶ್ರೀಮಂತಿಕೆ ಹಾಗೂ ಬಡತನದ ನಡುವಣ ಕಂದರವನ್ನು ತಂತ್ರಜ್ಞಾನ ಇನ್ನಷ್ಟು ಹೆಚ್ಚಿಸುತ್ತಿದೆ. ಅದನ್ನು ತೊಡೆದು ಹಾಕುವುದೇ ನಮ್ಮ ಉದ್ದೇಶ’ ಎನ್ನುವ ಜೆಸ್ಸಿಕಾ ಕನಸು ನನಸಾಗುತ್ತಲೇ ಹೋಗುತ್ತಿದೆ.

ನಿಟ್ಟುಸಿರ ಕಥೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

VV Human Rights Organisation – Home

3 ತಿಂಗಳ ಮಗುವಿಗೆ ಕೊರೋನಾ ಸೋಂಕು; 3 ಮಂದಿ ಸಾವು

ತುಮಕೂರು: ಜಿಲ್ಲೆಯಲ್ಲಿ ಭಾನುವಾರ  46 ಮಂದಿಗೆ ಕೋವಿಡ್ 19 ದೃಢಪಟ್ಟಿದೆ.

ಪಾವಗಡ ತಾಲ್ಲೂಕಿನ ಹೊಸಹಳ್ಳಿ ತಾಂಡದ 62 ವರ್ಷದ ವೃದ್ಧ, ತುಮಕೂರು ತಾಲ್ಲೂಕು ಭೀಮಸಂದ್ರ ಗ್ರಾಮದ 62 ವರ್ಷ, ಚಿಕ್ಕನಾಯಕನಹಳ್ಳಿ ಹುಳಿಯಾರು ಗ್ರಾಮದ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.  71 ಮಂದಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತುಮಕೂರು 25, ಚಿಕ್ಕನಾಯಕನಹಳ್ಳಿ 4, ಪಾವಗಡ 4, ಮಧುಗಿರಿ 3, ಶಿರಾ 3, ಕುಣಿಗಲ್  3, ಕೊರಟಗೆರೆ 2, ತುರುವೇಕೆರೆ 1,  ಗುಬ್ಬಿ 1 ಪ್ರಕರಣ ದೃಢಪಟ್ಟಿದೆ.

45 ಮಂದಿಯಲ್ಲಿ 3 ತಿಂಗಳ ಮಗು, ತುಮಕೂರು, ಚಿಕ್ಕ ನಾಯಕನಹಳ್ಳಿಯ ಇಬ್ಬರು  ಪೊಲೀಸ್ ಸಿಬ್ಬಂದಿ, 60 ವರ್ಷ ಮೇಲ್ಪಟ್ಟ 7 ಮಂದಿ ವೃದ್ಧರಿಗೆ ಕೋವಿಡ್ 19 ಸೊಂಕು ತಗುಲಿದೆ.

ಪಾವಗಡ ತಾಲ್ಲೂಕಿನ ಹೊಸಹಳ್ಳಿ ತಾಂಡದ ಒಂದೇ ಕುಟುಂಬದ 4 ಮಂದಿಗೆ ಸೋಂಕು ದೃಢಪಟ್ಟಿದೆ. ಇದೇ ಕುಟುಂಬಕ್ಕೆ ಸೇರಿದ ವೃದ್ದ ಜುಲೈ-16 ರಂದು ಮೃತಪಟ್ಟಿದ್ದರು. ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು,  ಅನಂತಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 699 ಕ್ಕೆ ತಲುಪಿದೆ.  ಒಟ್ಟು 358 ಮಂದಿ ಬಿಡುಗಡೆಯಾಗಿದ್ದಾರೆ.  318 ಸಕ್ರಿಯ ಪ್ರಕರಣಗಳಿವೆ.  ಈವರೆಗೆ  23 ಮಂದಿ ಮೃತಪಟ್ಟಿದ್ದಾರೆ.

ಮಗ್ಗದವರ ಬದುಕು ಮುಗ್ಗಲಾಯಿತಲ್ಲೋ ಶಿವನೇ!

0

ತುರುವೇಕೆರೆ ಪ್ರಸಾದ್
ತುರುವೇಕೆರೆ: ಜಾಗತೀಕರಣ ಹಾಗೂ ಯಂತ್ರಗಳ ದಾಂಗುಡಿಯಿಂದಾಗಿ ಅತಂತ್ರ ಸ್ಥಿತಿಯಲ್ಲಿದ್ದ ಕೈಮಗ್ಗಗಳ ಪುನಶ್ಚೇತನಕ್ಕೆ ಹೊಸದೊಂದು ಸಂಚಲನ ಮೂಡಬೇಕಿದ್ದ ಸಂದರ್ಭದಲ್ಲೇ ತಾಲ್ಲೂಕಿನ ಮುನಿಯೂರಿನ ಕೈ ಮಗ್ಗ ನೇಕಾರರು ಕೊರಾನಾದಿಂದಾಗಿ ತಮ್ಮ ವೃತ್ತಿಯನ್ನೇ ಬಿಟ್ಟು ಕೂಲಿ ನಾಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಶೋಚನೀಯ ಸ್ಥಿತಿ ತಲುಪಿದ್ದಾರೆ.

ಮುನಿಯೂರು ತುಮಕೂರು ಜಿಲ್ಲೆಯಲ್ಲೇ ನೇಕಾರಿಕೆಗೆ ಹೆಸರುವಾಸಿಯಾದ ಗ್ರಾಮ. ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ನೇಕಾರಿಕೆಯನ್ನೇ ನೆಚ್ಚಿವೆ. ಬಹುತೇಕ ಹಿಂದುಳಿದ ವರ್ಗಕ್ಕೆ ಸೇರಿದ ದೇವಾಂಗ ಕುಟುಂಬಗಳಲ್ಲಿ 300ಕ್ಕೂ ಹೆಚ್ಚು ಮಗ್ಗಗಳು ಪ್ರತಿದಿನ ಅಹರ್ನಿಶಿ ಸಾವಿರಾರು ಸೀರೆಗಳನ್ನು ನೇಯುತ್ತವೆ. ಆದರೆ ಕೈ ಮಗ್ಗದಿಂದ ಜೀವನೋಪಾಯ ಮಾಡಲಾಗದೆ ಶೇ.70ರಷ್ಟು ಕುಟುಂಬಗಳು ಕೈ ಮಗ್ಗವನ್ನು ಬಿಟ್ಟು ವಿದ್ಯುತ್ ಮಗ್ಗವನ್ನು ಅಳವಡಿಸಿಕೊಂಡಿವೆ.

ಇಡೀ ಗ್ರಾಮದಲ್ಲಿ ಕೇವಲ 20 ಕೈ ಮಗ್ಗಗಳು ಮಾತ್ರ ಉಳಿದಿವೆ. ಇಳಿವಯಸ್ಸಿನಲ್ಲಿ ಬದುಕಿನ ಮುಸ್ಸಂಜೆಯಲ್ಲಿರುವವರು ಮಾತ್ರ ಕೈ ಮಗ್ಗಕ್ಕೆ ಅಂಟಿಕೊಂಡಿದ್ದಾರೆ. ಮಿಕ್ಕವರು ಒಂದೋ ಕಸುಬನ್ನೇ ಬಿಟ್ಟಿದ್ದಾರೆ ಇಲ್ಲ ವಿದ್ಯುತ್ ಮಗ್ಗಕ್ಕೆ ಬದಲಾವಣೆ ಹೊಂದಿದ್ದಾರೆ.

ಕರೋನಾ ಹೊಡೆತದಿಂದಾಗಿ ವಿದ್ಯುತ್ ಮಗ್ಗ ಮತ್ತು ಕೈ ಮಗ್ಗ ಎರಡನ್ನೂ ಅವಲಂಭಿಸಿದ್ದವರ ಜೀವನ ದಿಕ್ಕಾಪಾಲಾಗಿ ಬೀದಿಗೆ ಬಿದ್ದಿದೆ. ಗ್ರಾಮದಲ್ಲಿ ಈಗ 200 ಮಗ್ಗಗಳ ಪೈಕಿ ಐದಾರು ಮಗ್ಗಗಳು ಮಾತ್ರ ಕೆಲಸ ಮಾಡುತ್ತಿವೆ, ಮಿಕ್ಕ ಮಗ್ಗಗಳು ಸಂಪೂರ್ಣವಾಗಿ ಸ್ಥಗಿತವಾಗಿವೆ.

ಚೈನ್ ಡ್ರಾಬಿ ಹಾಗೂ ಗಣಕೀಕೃತ ಡ್ರಾಬಿಯಿಂದ ನಾಜೂಕು ಕೆಲಸ ಮಾಡುವ ತಂತ್ರಜ್ಞಾನವನ್ನು ಹಲವು ವಿದ್ಯುತ್ ಮಗ್ಗಗಳಲ್ಲಿ ಅಳವಡಿಸಲಾಗಿದೆ. ಈ ಮಗ್ಗಗಳಲ್ಲಿ ವಿಶೇಷವಾಗಿ ಅರ್ಟ್ ರೇಷ್ಮೆ ಸೀರೆಗಳನ್ನು ನೇಯಲಾಗುತ್ತದೆ. ಈ ಸೀರೆಗಳಿಗೆ ಸ್ಥಳಿಯವಾಗಿ ಮಾರುಕಟ್ಟೆ ಇಲ್ಲ.

ಇಲ್ಲೇನಿದ್ದರೂ ಶುಭ ಸಮಾರಂಭ,ಮದುವೆಗಳಲ್ಲಿ ಶುದ್ಧ ರೇಷ್ಮೆ ಮತ್ತು ಹತ್ತಿ ಬಟ್ಟೆಗಳಿಗೇ ಬೇಡಿಕೆ. ಈ ಆರ್ಟ್ ಸೀರೆಗಳಿಗೆ ವಿಶೇಷ ಬೇಡಿಕೆ ಇರುವುದು ಹೊರರಾಜ್ಯಗಳಲ್ಲಿ ಅದೂ ಬಹುತೇಕ ಪಕ್ಕದ ರಾಜ್ಯ ಮಹಾರಾಷ್ಟ್ರ ಹಾಗೂ ದೂರದ ಕೊಲ್ಕತ್ತದಲ್ಲಿ. ಹೀಗಾಗಿ ಬೆಂಗಳೂರು ವರ್ತಕರ ಮೂಲಕ ಈ ಸೀರೆಗಳು ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಉತ್ತಮ ಮಾರುಕಟ್ಟೆ ಹೊಂದಿದ್ದವು.

ಮಾಲು ಪಡೆದ ಬೆಂಗಳೂರು ವರ್ತಕರು ಒಂದು ತಿಂಗಳ ಅಡ್ವಾನ್ಸ್ ಚೆಕ್ಕನ್ನು ಮಗ್ಗದವರಿಗೆ ನೀಡುತ್ತಿದ್ದರು, ಮಗ್ಗದವರು ಅದನ್ನು ಕಚ್ಚಾವಸ್ತು ಮಾರಾಟಗಾರರಲ್ಲಿ ಮುರಿಸಿ ನೇಯ್ಗೆಗೆ ಬೇಕಾದ ಕಚ್ಛಾವಸ್ತುಗಳನ್ನು ಪಡೆಯುತ್ತಿದ್ದರು. ಇಂತಹದೊಂದು ಸರಪಣಿ ನೇಕಾರರು, ಕಚ್ಚಾವಸ್ತು ಸರಬರಾಜುದಾರರು ಮತ್ತು ಮಾರಾಟಗಾರರ ನಡುವೆ ಇದ್ದು ಹೇಗೋ ಅವತ್ತಿನ ಹೊಟ್ಟೆಪಾಡು ನಡೆದುಹೋಗುತ್ತಿತ್ತು.

ಈಗ ಕೊರೋನಾದಿಂದಾಗಿ ಈ ಸರಪಣಿ ಕಡಿದು ಬಿದ್ದಿದೆ. ಕಚ್ಚಾವಸ್ತು ಕೊಳ್ಳಲು ಹಣವಿಲ್ಲದೆ, ನೇಯ್ದ ಸೀರೆಗಳಿಗೆ ಬೇಡಿಕೆ ಇಲ್ಲದೆ ನೇಕಾರರು ಮಗ್ಗ ಮುಚ್ಚಿ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಳ್ಳುವಂತಾಗಿದೆ.
ಕರೋನಾ ದಾಂಗುಡಿ ಇಟ್ಟ ನಂತರ ಈ ನೇಕಾರರ ಬದುಕು ಅಕ್ಷರಶಃ ಬೀದಿಪಾಲಾಗಿ ಹೋಯಿತು. ದೂರದ ಕೊಲ್ಕತ್ತದಿಂದ ಯಾವುದೇ ಬೇಡಿಕೆ ಬರಲಿಲ್ಲ, ಪಕ್ಕದ ಮಹಾರಾಷ್ಟ್ರದಲ್ಲಿ ಕೊರೊನಾ ತಾಂಡವ ನೃತ್ಯ ಮಾಡಿದ ಕಾರಣ ಅಲ್ಲಿನ ಮಾರುಕಟ್ಟೆಯೂ ಕುಸಿದು ಬಿತ್ತು. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಸುಧಾರಿಸಿತು ಎನ್ನುವಷ್ಟರಲ್ಲಿ ಬೆಂಗಳೂರಿನ ಚಿಕ್ಕಪೇಟೆ, ಕಬ್ಬನ್ ಪೇಟೆಗಳು ಪದೇ ಪದೇ ಲಾಕ್‍ಡೌನ್ ಸೀಲ್‍ಡೌನ್ ಸುಳಿಗೆ ಸಿಕ್ಕಿವೆ. ಹೀಗಾಗಿ ಇಡೀ ಗ್ರಾಮದಲ್ಲಿ ನೇಕಾರಿಕೆಯನ್ನೇ ನಂಬಿದ್ದ 200ಕ್ಕೂ ಹೆಚ್ಚು ಕುಟುಂಬಗಳು ಜೀವನೋಪಾಯಕ್ಕೆ ಪರದಾಡುವ ಸ್ಥಿತಿ ತಲುಪಿದ್ದಾರೆ.

ಮಗ್ಗಗಳು ಧೂಳು ಹಿಡಿಯುತ್ತಿವೆ. ಮಗ್ಗವನ್ನು ನಂಬಿದವರ ಬದುಕು ಅಗ್ಗವಾಗಿ ಮುಗ್ಗುಲಾಗಿ ಹೋಗಿದೆ. ನೇಕಾರರು ಕೂಲಿ, ಗಾರೆ ಕೆಲಸ, ಮಣ್ಣು ಎತ್ತುವುದು, ವೈಡಿಂಗ್ ವರ್ಕ್, ಎಂದು ತಮಗೆ ಕುಶಲತೆ ಇಲ್ಲದ ಕೆಲಸಗಳಲ್ಲಿ ದುಡಿಯುತ್ತಾ ಹೊಟ್ಟೆಪಾಡಿಗೆ ಪರದಾಡುತ್ತಿದ್ದಾರೆ. ಹೆಚ್ಚು ಕಡಿಮೆ ಇದೇ ಸ್ಥಿತಿ ಗುಬ್ಬಿ ತಾಲ್ಲೂಕಿನ ಕಲ್ಲೂರಿನಲ್ಲೂ ಇದೆ.
ಇದು ವಿದ್ಯುತ್ ಮಗ್ಗಗಳ ಕತೆಯಾದರೆ ಕೈ ಮಗ್ಗಗಳ ಸ್ಥಿತಿ ಇನ್ನೂ ಕರುಣಾಜನಕವೆನಿಸಿದೆ.

ಗ್ರಾಮದ ಹಿರಿಯ ನೇಕಾರರು ದೇಸಿ ಕಸುಬನ್ನು ಬಿಡದೆ ಅದರಲ್ಲೇ ಛಲದಿಂದ ಬದುಕು ನಡೆಸಿದ್ದಾರೆ. ಅವರ ಪ್ರಕಾರ ಇಂದಿನ ದುಬಾರಿ ದಿನಗಳಲ್ಲಿ ಕೈಮಗ್ಗ ನೆಚ್ಚಿ ಬದುಕುವುದೇ ಕಷ್ಟ. ವಿದ್ಯುತ್ ಮಗ್ಗದಿಂದ ಕನಿಷ್ಟ ದಿನಕ್ಕೆ 3-4 ಸೀರೆಗಳನ್ನು ತಯಾರಿಸಬಹುದು, ಆದರೆ ಕೈಮಗ್ಗದಲ್ಲಿ ವಾರಕ್ಕೆ 2-3 ಸೀರೆ ತಯಾರಿಸಿದರೆ ಹೆಚ್ಚು. ವಿದ್ಯುತ್ ಮಗ್ಗದಲ್ಲಿ ನೇಯ್ದ ಪಾಲಿಕಾಟ್, ಆರ್ಟ್‍ಸಿಲ್ಕ್ ಸೀರೆಗಳು ಕನಿಷ್ಠ ರೂ.300ರಿಂದ ರೂ.500 ಬೆಲೆಯಲ್ಲಿ ಸಿಗುತ್ತವೆ.

ಇಲ್ಲಿ ಶುದ್ಧ ರೇಷ್ಮೆ ನೂಲು ಬಳಸುವುದರಿಂದ ಸೀರೆ ಬೆಲೆಯೂ ಹೆಚ್ಚಿರುತ್ತದೆ. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ಸೀರೆ ಮಾರಲಾಗದೆ, ಮಧ್ಯವರ್ತಿಗಳ ಹಾವಳಿಯಿಂದ ಬೆಲೆಯಲ್ಲಿ ರಾಜಿ ಮಾಡಿಕೊಂಡು ನಷ್ಟ ಅನುಭವಿಸುತ್ತಿದ್ದವರು ಕರೋನಾ ದೆಸೆಯಿಂದ ಈಗ ಕೈಗೆ ಕೆಲಸವಿಲ್ಲದೆ ಬದುಕಿನ ಮುಸ್ಸಂಜೆಯಲ್ಲಿ ಹತಾಶರಾಗಿ ಕುಳಿತಿದ್ದಾರೆ. ಮೊದಲೇ ಅವರ ದುಡಿಮೆ ‘ಅಜ್ಜಿ ನೂತಿದ್ದು ಅಜ್ಜನ ಉಡಿದಾರಕ್ಕೆ’ ಎಂಬಂತಾಗಿತ್ತು, ಈಗ ಉಡಿದಾರವೂ ಕಿತ್ತುಹೋಗಿ ಬದುಕು ಮೂರಾಬಟ್ಟೆಯಾಗಿದೆ.

ಇನ್ನು ಸರ್ಕಾರ ಘೋಷಿಸಿರುವ ಪ್ಯಾಕೇಜ್ ವಿಷಯಕ್ಕೆ ಬಂದರೆ ಅದು ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಸರ್ಕಾರ ಪ್ರತಿ ನೇಕಾರರಿಗೆ ರೂ.2 ಸಾವಿರ ಸಹಾಯಧನ ಘೋಷಿಸಿದೆ. ಇತರೆ ವೃತ್ತಿಯವರಿಗೆ ರೂ. 5 ಸಾವಿರ ಸಹಾಯ ಧನ ಘೋಷಿಸಿ ನೇಕಾರರಿಗೇಕೆ ಯಾಕೆ 2 ಸಾವಿರ ? ಇದರಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾ? ಸರ್ಕಾರ ಯಾಕೆ ಈ ತಾರತಮ್ಯ ನೀತಿ ಅನುಸರಿಸಬೇಕು? ಎಂದು ನೇಕಾರರು ಪ್ರಶ್ನಿಸುತ್ತಾರೆ.ಆ 2 ಸಾವಿರ ಸಹಾಯಧನವೂ ಎಲ್ಲಾ ನೇಕಾರರ ಕೈ ಸೇರಿಲ್ಲ, ಈಗಷ್ಟೇ ಅದು ವಿತರಣೆಯಾಗುವ ಹಂತದಲ್ಲಿದೆ. ಹೇಳುವಂತೆ ನೇಕಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದಾರೆ.

ಇಂತ ಸಂದರ್ಭದಲ್ಲಿ ಸರ್ಕಾರ ಕೆ.ಎಸ್.ಡಿ.ಸಿ ಮತ್ತು ಕೆ.ಎಸ್.ಐ. ಟಿ.ಡಿ.ಸಿ ಮೂಲಕ ನೇಕಾರರಿಗೆ ಸಹಾಯ ಧನ ನೀಡಬೇಕು. ಅವರು ಕಚ್ಚಾವಸ್ತುಗಳನ್ನು ಕೊಳ್ಳಲು ಸಹಾಯ ಮಾಡಬೇಕು ಎನ್ನುತ್ತಾರೆ. ಬೆಳಗಾವಿಯಲ್ಲಿ ಸಂಕಷ್ಟಕ್ಕೊಳಗಾದ ನೇಕಾರರು ಒಂದಾಗಿ ಕಲ್ಯಾಣ ಮಂಟಪವೊಂದರಲ್ಲಿ ತಮ್ಮ ಸರಕುಗಳು ಪ್ರದರ್ಶನ ಮತ್ತು ಮಾರಾಟ ಆರಂಭಿಸಿದ್ದಾರೆ.

ಹಾಗೆಯೇ ಆನ್‍ಲೈನ್ ಮಾರಾಟವನ್ನೂ ವ್ಯವಸ್ಥೆಗೊಳಿಸಿದ್ದಾರೆ. ಅದೇ ಮಾದರಿಯಲ್ಲಿ ಮುನಿಮೂರು ಮತ್ತು ಕಲ್ಲೂರು ನೇಕಾರರ ಒಂದು ಕ್ಲಸ್ಟರ್ ಮಾಡಿ ನೇಕಾರರ ಉತ್ಪನನ್ನಗಳ ಪ್ರದರ್ಶನ ಮತ್ತು ಆನ್‍ಲೈನ್ ಮಾರಾಟಕ್ಕೆ ಸರ್ಕಾರ ವ್ಯವಸ್ಥೆ ಮಾಡಿಕೊಡಬೇಕು ಎಂದು ದಾಸಿಮಯ್ಯ ವಿದ್ಯುತ್ ಮಗ್ಗ ನೇಕಾರರ ಸಹಕಾರ ಸಂಘದ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?

ಜಿ ಎನ್ ಮೋಹನ್

ಮೊನ್ನೆ ಮೊಬೈಲ್ ನಲ್ಲಿ ಹರಟೆ ಕೊಚ್ಚುತ್ತಾ ದಾರಿ ಸವೆಸುತ್ತಿದ್ದ ನಾನು ಒಂದು ಕ್ಷಣ ಗಕ್ಕನೆ ನಿಂತೆ.

ಮಾತನಾಡುವುದು ಮರತೇ ಹೋಯಿತು. ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡುತ್ತಿದ್ದೆ.

ಮಾಧ್ಯಮದ ಇತಿಹಾಸದಲ್ಲಿಯೇ ಕಂಡರಿಯದ ಸಂಗತಿಯೊಂದು ನನ್ನನ್ನು ಹಿಡಿದು ನಿಲ್ಲಿಸಿತ್ತು.

ಸಿನೆಮಾ ರಂಗದ ‘ಚಮಕ್, ಚಮಕ್’ ಜಾಹಿರಾತುಗಳನ್ನೂ ಮೀರಿಸುವಂತೆ ಆ ಹೋರ್ಡಿಂಗ್ ತಲೆ ಎತ್ತಿ ನಿಂತಿತ್ತು.

‘ದಿ ವೀಕ್’ ತನ್ನ ಇಬ್ಬರು ವರದಿಗಾರರಿಗೆ ಥ್ಯಾಂಕ್ಸ್ ಹೇಳಿದ ಪರಿ ಇದು.

ಬಿದಷಾ ಘೋಶಾಲ್ ಹಾಗೂ ಕವಿತಾ ಮುರಳೀಧರನ್ ಬರೆದ ಲೇಖನಗಳು ಮೂರು ಪ್ರತಿಷ್ಠಿತ ಪ್ರಶಸ್ತಿಯನ್ನು ಬಾಚಿಕೊಂಡಿದ್ದವು.

ಹೀಗೆ ಪ್ರಶಸ್ತಿ ತಂದು ಕೊಟ್ಟವರನ್ನು ‘ವೀಕ್’ ಮರೆಯಲಿಲ್ಲ. ದೇಶದ ಬೀದಿ ಬೀದಿಗಳಲ್ಲಿ ಸಿನೆಮಾ ಹೋರ್ಡಿಂಗ್ ಗಳನ್ನೂ ನಾಚಿಸುವ ರೀತಿಯಲ್ಲಿ ಪ್ರಚಾರ ಫಲಕ ನಿಲ್ಲಿಸಿ ಥ್ಯಾಂಕ್ಸ್ ಹೇಳಿತು.

ಫೋನಿನ ಇನ್ನೊಂದು ತುದಿಯಲ್ಲಿದ್ದ ಗೆಳೆಯನಿಗೆ ಗಾಬರಿಯಾಗಿರಬೇಕು ‘ಯಾಕೋ ಸೈಲೆಂಟ್ ಆದೆ’ ಅಂದ.

ಮಾಧ್ಯಮ ಲೋಕದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು ಸ್ಪಷ್ಟವಾಗಿ ಹೋಗಿತ್ತು. ಎಷ್ಟೋ ಮಾಧ್ಯಮ ಕಚೇರಿಗಳಲ್ಲಿ, ಇಷ್ಟು ವರ್ಷಗಳ ಕಾಲ, ಎಣಿಸಲಾರದಷ್ಟು ಜನರನ್ನು ‘ಸೈಲೆಂಟ್’ ಆಗಿಸಿಬಿಟ್ಟಿದ್ದರು.

ಪತ್ರಿಕೋದ್ಯಮ ಮೈಕೊಡವಿ ನಿಂತಿದೆ ಎಂಬುದಕ್ಕೆ ಬೆಂಗಳೂರಿನ ಬೀದಿಗಳೂ, ಬೀದಿಯಲ್ಲಿನ ಈ ಹೋರ್ಡಿಂಗ್ ಗಳೂ ಸಾಕ್ಷಿ ಹೇಳುತ್ತಿದ್ದವು. ಮೊನ್ನೆ ರೇಡಿಯೋ ಕಿವಿ ಹಿಂಡಿದೆ. ಕವಿತೆಯೊಂದು ಜಿಗಿದು ಬಂತು.

‘ಇದು ಹಸಿರಿಲ್ಲದ, ಹೆಸರಿಲ್ಲದ, ಉಸಿರಿಲ್ಲದ ನರಕ..’ ಅಂತ.

ಯಾಕೋ ಬೇಡಬೇಡವೆಂದರೂ ಇದು ಬರೆದಿರುವುದು ನಮ್ಮ ಮಾಧ್ಯಮಗಳ ಬಗ್ಗೆಯೇ ಅನಿಸೋದಿಕ್ಕೆ ಶುರುವಾಯ್ತು.

ಮಹಾರಾಷ್ಟ್ರದಲ್ಲಿ ಬರ ಬಿತ್ತು. ರೈತರು ಸಾಲು ಸಾಲಾಗಿ ಸಾವಿಗೆ ಶರಣಾದರು. ಆ ಮನೆಗಳ ಕಥೆ ಏನಾಗಿದೆ ನೋಡೋಣ ಅಂತ ಬಿದಿಷಾ ಹೋದಾಗ ಆಕೆಗೆ ಶಾಕ್ ಕಾದಿತ್ತು. ವಿಧವೆ ಹೆಂಗಸರು ಲೈಂಗಿಕ ಶೋಷಣೆಗೆ ಗುರಿಯಾಗಿದ್ದರು.

ಕವಿತಾ ಕೈಹಾಕಿದ್ದು ಶ್ರೀಲಂಕಾ ಸೈನ್ಯಕ್ಕೆ. ಸೈನ್ಯದ ಕೈಗೆ ಸಿಕ್ಕು ಕಾಣೆಯಾಗಿ ಹೋದವರ ಬಗ್ಗೆ ವರದಿ ರೆಡಿ ಮಾಡಿದಳು.

ಇಂಟರ್ ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್, ದಿ ಸ್ಟೇಟ್ಸ್ ಮನ್ ಅವಾರ್ಡ್ ಗಳು ಇಬ್ಬರನ್ನೂ ಹುಡುಕಿಕೊಂಡು ಬಂತು.

ಇಬ್ಬರು ವರದಿಗಾರರೂ ತಮಗೆ ಮಾತ್ರ ಅಲ್ಲ ತಮ್ಮ ಪತ್ರಿಕೆಗೂ, ತಮ್ಮ ಪತ್ರಿಕೆಗೆ ಅಷ್ಟೇ ಅಲ್ಲ, ದೇಶದ ಪತ್ರಿಕೋದ್ಯಮಕ್ಕೂ ಗೌರವ ತಂದುಕೊಟ್ಟರು.

ಇದು ಹೇಗೆ ಸಾಧ್ಯ ಆಯ್ತು? ಅಂತ ಯೋಚಿಸ್ತಾ ಇದ್ದೆ.

ಬೆನ್ನು ತಟ್ಟುವ ಒಂದು ಕೈ ದೊಡ್ಡ ಚಮತ್ಕಾರವನ್ನೇ ಮಾಡಿಬಿಡಬಹುದು. ‘ವೆರಿ ಗುಡ್’ ಅನ್ನುವ ಎರಡು ಪದ ಬದಕಿನ ಕೊನೆಯವರೆಗೂ ನಡೆದುಕೊಂಡು ಬರಬಹುದು.

ಹೊತ್ತು ತಂದ ವರದಿಯೊಂದು ಸರಿಯಾಗಿ ಪೇಪರ್ ನ ಪುಟದಲ್ಲೋ, ಚಾನಲ್ ನ ಸುದ್ದಿಯಲ್ಲೋ ಜಾಗ ಗಿಟ್ಟಿಸಿಕೊಂಡರೆ ಇನ್ನೂ ಇಂತಹ ಹತ್ತು ಮ್ಯಾಜಿಕ್ ಗಳು ಸಾಧ್ಯವಾಗಬಹುದು.

ಐಶ್ವರ್ಯ ರೈ ಸಲ್ಮಾನ್ ಖಾನ್ ಜೊತೆ ಮದುವೆ ಆಗ್ತಾಳೆ ಅಂತಾನೇ ಜಗತ್ತು ಅಂದುಕೊಂಡಿದ್ದಾಗ ನವೀನ್ ಅಮ್ಮೆಂಬಳ ಅಭಿಷೇಕ್ ಬಚ್ಚನ್ ಜೊತೆ ಮದುವೆ ನಿಕ್ಕಿ ಅನ್ನೋ ಸುದ್ದಿ ಸ್ಫೋಟಿಸಿದ. ಇಡೀ ಜಗತ್ತು ಅದನ್ನ ರಸಕವಳದಂತೆ ಜಗೀತು. ಆಮೇಲೆ ಮರೀತು.

ಆದರೆ ಅವರೊಬ್ಬರಿದ್ದರು- ರಾಮೋಜಿರಾವ್.

ಅವರು ಮರೀಲಿಲ್ಲ. ‘ಕಂಗ್ರಾಟ್ಸ್, ನೀವು ನಮ್ಮ ಹೆಮ್ಮೆ’ ಅಂತ ಪತ್ರ ಬರೆದರು.

ನವೀನ್ ಅಮ್ಮೆಂಬಳನನ್ನು ಕೇಳಿ, ಅವನು ಮಾಡಿದ ಡಿಗ್ರಿ, ಅವನಿಗೆ ಸಿಕ್ಕ ಮೊದಲ ಸಂಬಳ ಇವೆಲ್ಲವನ್ನೂ ಮೀರಿ ಆ ಪತ್ರ ನಿಂತಿದೆ.

ಡಾ ರಾಜಕುಮಾರ್ ಕಾಣೆಯಾಗಿದ್ದಾರೆ ಅಂತ ಬೆಂಗಳೂರಿಗೆ ಬೆಂಗಳೂರೇ ಹೊತ್ತಿ ನಿಂತಿತ್ತು. ಕಲ್ಲುಗಳು ಬಸ್ಸುಗಳನ್ನೂ ಟಾಕೀಸ್ ಗಳನ್ನೂ ನುಜ್ಜು ಗುಜ್ಜು ಮಾಡೋದಿಕ್ಕೆ ಶುರು ಮಾಡಿತ್ತು.

‘ಅಣ್ಣಾವ್ರಿಗೆ ಬೇಸರವಾಗಿದೆಯಂತೆ, ಮನೆಯಲ್ಲಿ ಜಗಳವಂತೆ, ಗಾಜನೂರಿಗೆ ಹೋಗಿದಾರಂತೆ.. ಅಂತೆ ಕಂತೆ..’ ಸುದ್ದಿ ಬೆಂಗಳೂರನ್ನ ದಾಟಿ ರಾಜ್ಯವಿಡೀ ಹರಡೋದಕ್ಕೆ ಶುರು ಆಗಿತ್ತು.

ಅದೇ ದಿನ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರೂ ನಿಧನ ಹೊಂದಿದರು. ನಾನು ವರದಿ ಮಾಡೋದಿಕ್ಕೆ ಅವರ ಮನೆಗೆ ಕಾಲಿಟ್ಟೆ.

ಯಾಕೋ ನನ್ನ ‘ಸುದ್ದಿ ನಾಸಿಕ’ ಇವತ್ತು ಇನ್ನೂ ಒಂದು ಮಹತ್ವದ ಸುದ್ದಿ ನನ್ನ ಕೈಗೆಟುಕುತ್ತೆ ಅಂತ ವಾಸನೆ ಹಿಡೀತು.

ಮೊದಲ ಎಡಿಶನ್ ಟೈಂ ಮುಗೀತು. ಆದರೂ ನಾನು ಕಾಯ್ತಾ ಇದ್ದೆ. ಆಗ ಭರ್ರನೆ ಬಂದ ಕಾರಿನಿಂದ ಇಳಿದದ್ದು ಅದೇ ಡಾ ರಾಜ್ ಕುಮಾರ್.

ಗೊರೂರರ ಪಾರ್ಥಿವ ಶರೀರಕ್ಕೆ ಕೈ ಮುಗಿದರು. ನಾನು ಡಾ ರಾಜ್ ಅವರನ್ನ ಪಕ್ಕದ ಕೋಣೆಗೆ ಕರೆದುಕೊಂಡು ಹೋದೆ. ‘ಯಾಕೆ ಹೋದ್ರಿ, ಎಲ್ಲಿಗೆ ಹೋದ್ರಿ’ ಅಂದೆ.

ಮನೆಗೆ ತಲುಪಿಕೊಂಡಿದ್ದ ಸುದ್ದಿ ಸಂಪಾದಕ ನಾಗಭೂಷಣಂ ಥ್ರಿಲ್ ಆದರು. ‘ಕಬ್ ರಿಪೋರ್ಟರ್’ ಅನ್ನೋದನ್ನೂ ಲೆಕ್ಕಿಸದೆ ಎಡಿಶನ್ ಗಳನ್ನ ನಿಲ್ಲಿಸಿ ಬೈಲೈನ್ ಸಮೇತ ಸುದ್ದಿ ರಾರಾಜಿಸಿದರು.

ಮಾರನೆಯ ದಿನ ಕೈನಲ್ಲಿ ಪೇಪರ್ ಹಿಡಿದುಕೊಂಡಾಗ ‘ಧನ್ಯೋಸ್ಮಿ’ ಅನಿಸಿತು.

ಡಿ ವಿ ರಾಜಶೇಖರ್ ನನ್ನ ಶಿಫ್ಟ್ ಮುಖ್ಯಸ್ಥರು. 25 ವರ್ಷಗಳ ಕಾಲ ಸರಳುಗಳ ಹಿಂದೆ ಬದುಕಿದ ನೆಲ್ಸನ್ ಮಂಡೇಲಾ ಹೊರಗೆ ಬರುವ ಹೊತ್ತು. ಇಡೀ ಜಗತ್ತು ಆ ಸುದ್ದಿ ಬರೆಯಲು ಕಾಯುತ್ತಾ ಕುಳಿತಿತ್ತು.

ಒಬ್ಬ ಮುಖ್ಯ ಉಪ ಸಂಪಾದಕ ಮಾಡಬೇಕಾಗಿದ್ದ ಕೆಲಸ ಅದು. ನಾನು ಪ್ರಜಾವಾಣಿ ಸೇರಿ ಅಷ್ಟೇನೂ ಕಾಲವಾಗಿರಲಿಲ್ಲ. ಆದರೆ ರಾಜಶೇಖರ್ ನನ್ನ ಹೆಗಲ ಮೇಲೆ ಕೈಯಿಟ್ಟು ‘ನಿಮ್ಮ ಆಸಕ್ತಿ ಗೊತ್ತು. ನೀವೇ ಬರೆಯಿರಿ’ ಎಂದರು.

ಕನ್ನಡದ ಮಟ್ಟಿಗಂತೂ ನೆಲ್ಸನ್ ಮಂಡೇಲಾ ಬಿಡುಗಡೆ ಆದದ್ದು ನಾನು ಬರೆದ ನಂತರವೇ ಎಂಬ ಖುಷಿ ಇಂದಿಗೂ ಹಸಿರು.

ಎಡಿಶನ್ ನಿಲ್ಲಿಸಿದ ಆ ಮನಸ್ಸು, ಬರೆಯಿರಿ ಎಂದು ಬೆನ್ನು ತಟ್ಟಿದ ಆ ಕೈ ಎಂದೆಂದಿಗೂ ನನ್ನವೇ.. .

‘ಸ್ಟಾಫ್ ಹೆಸರು ಹಾಕಬೇಡಿ, ಸತ್ರೂ ಹಾಕಬೇಡಿ, ಸ್ಟಾಫ್ ಕವನ, ಕಥೆಗೆ ನೋ ಎಂಟ್ರಿ, ಅವರು ಇದ್ದ ಪ್ರೋಗ್ರಾಂ ವರದಿ ಬೇಡವೇ ಬೇಡ, ಫೋಟೋದಲ್ಲಿ ಅವರನ್ನ ಕ್ರಾಪ್ ಮಾಡ್ಬಿಡಿ’ ಅನ್ನೋದನ್ನೇ ವರ್ಷಾನುಗಟ್ಟಲೆ ಕೇಳಿದ್ದ ಕಿವಿಗೆ ಇದು ಎಂಟನೆಯ ಅದ್ಭುತ!!

ಎಂಡೋಸಲ್ಫಾನ್ ಎಂಬ ಸಾವಿನ ಆಟದ ಕುರಿತ ನನ್ನ ಸುದ್ದಿ ಪ್ರಸಾರವಾದಾಗ ನೋಡುಗರೂ, ಮಾಧ್ಯಮ ಕಚೇರಿಗಳೂ ಬೆಚ್ಚಿ ಕೂತಿದ್ದವು.

ಆದರೆ ಕಾಸರಗೋಡಿನ ಪಾತಾಳದಲ್ಲಿದ್ದ ಹಳ್ಳಿಗೆ ನುಗ್ಗಿ ದೇಶದ ನೀತಿಯನ್ನೇ ಪ್ರಶ್ನಿಸುವ ವರದಿಯೊಂದಕ್ಕೆ ಬೇಕಾಗಿದ್ದ ಬೈಲೈನೇ ನಾಪತ್ತೆಯಾಗಿತ್ತು.

ಅಷ್ಟು ಹೊತ್ತೂ ಕಾಡು, ಕಣಿವೆಗಳಲ್ಲಿ ಗಂಟೆಗಟ್ಟಲೆ ಸುತ್ತಿದರೂ ಆಗಿರದಿದ್ದ ಆಯಾಸ ಏಕಾಏಕಿ ಆವರಿಸಿಕೊಂಡಿತು.

ಬೆಂಗಳೂರಿನಲ್ಲಿದ್ದ ಮುಖ್ಯಸ್ಥರಿಗೆ ಫೋನ್ ತಿರುಗಿಸಿದೆ.

ವರದಿಗೆ ವಾಯ್ಸ್ ಕೊಟ್ಟದ್ದು ಫಿಮೇಲ್ ಆರ್ಟಿಸ್ಟ್ ಅಲ್ವಾ ಅಂದ್ರು. ಗಂಡಸರ ವರದಿಗೆ ಗಂಡಸರೂ, ಹೆಂಗಸರ ವರದಿಗೆ ಹೆಂಗಸರೂ ದನಿ ನೀಡಬೇಕು ಎನ್ನುವ ಓಬೀರಾಯನ ಕಾಲಕ್ಕೆ ಅವರು ನಮ್ಮನ್ನೆಲ್ಲಾ ತುಂಬು ಶ್ರದ್ಧೆಯಿಂದ ಕೈ ಹಿಡಿದು ನಡೆಸುತ್ತಿದ್ದರು.

ಆದರೆ ಅದೇ ಟಿ ವಿಯಲ್ಲಿ ಪವಾಡಗಳಾಗಿದ್ದವು.

12 ವರ್ಷ ಕಾಲ ಬರೆಯುವುದು ಅಪರಾಧ ಎನ್ನುವಂತೆ ಕಂಡಿದ್ದ, ಬರೆಯುವವರನ್ನ ‘ಕ್ರಿಮಿನಲ್ ಟ್ರೈಬ್’ ಎಂಬಂತೆ ನೋಡುತ್ತಿದ್ದ ಮನಸ್ಥಿತಿಯ ಸಂಸ್ಥೆಯಿಂದ ಹೊಸದಕ್ಕೆ ಹೆಜ್ಜೆ ಹಾಕಿದ್ದೆ.

ನನ್ನ ಪ್ರವಾಸ ಕಥನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ಬಂತು. ಮಂಗಳೂರಿನಲ್ಲಿದ್ದ ನನಗೆ ದೂರವಾಣಿ ಕರೆಗಳ ಸುರಿಮಳೆ. ಹೇಗೆ ಗೊತ್ತಾಯ್ತು ಅಂತ ಕೇಳಿದರೆ ನಿಮ್ಮ ಟಿವಿಯಲ್ಲೇ ಬಂತು ಅಂದರು.

ಹಾರ್ಟ್ ಅಟ್ಯಾಕ್ ಆಗುವುದೊಂದೇ ಬಾಕಿ. ನಾನು ಎಂಟು ವರ್ಷ ದೃಶ್ಯ ಮಾಧ್ಯಮದ ನಿಜ ಭಂಟನಂತೆ ದುಡಿಯುವುದಕ್ಕೆ ಆ ದಿನ ನನ್ನ ಬೆನ್ನು ನೇವರಿಸಿದ ಆ ಕೈಗಳೂ ಕಾರಣ.

ಸದ್ದಿಲ್ಲದ ಕ್ರಾಂತಿ, ಸೈಲೆಂಟ್ ರೆವಲ್ಯೂಶನ್ ಅನ್ನುತ್ತೇವಲ್ಲ ಅದು ಇದೇ ಇರಬೇಕು.

ಒಂದು ದಿನ ಬುಲೆಟಿನ್ ಪ್ರಸಾರಕ್ಕೆ ಕೊನೆ ನಿಮಿಷದ ಚೆಕ್ ಆಪ್ ನಡೆಸುತ್ತಿದ್ದೆ.

ಸುದ್ದಿಯಲ್ಲಿ ಕಾಣುತ್ತಿದ್ದ ಒಂದು ಮುಖ ತೀರಾ ತೀರಾ ಪರಿಚಿತ ಅನಿಸಿತು. ಟೇಪ್ ಹಿಂದಕ್ಕೆ ತಿರುಗಿಸಿ ನೋಡಿದರೆ ಅದು ನಮ್ಮ ಕಚೇರಿಯ ಹುಡುಗಿ ಆಶಾ.

ಕುವೆಂಪು ವಿವಿವ ಪತ್ರಿಕೋದ್ಯಮದಲ್ಲಿ ಚಿನ್ನದ ಪದಕಗಳನ್ನು ಪಡೆದಾಕೆ. ಸಂಕೋಚದ ಆಕೆ ಅದನ್ನು ಯಾರಿಗೂ ಹೇಳದೆ ಘಟಿಕೋತ್ಸವದಲ್ಲಿ ಪದಕ ಸ್ವೀಕರಿಸಿದ್ದಾಳೆ.

ತಕ್ಷಣ ನಮ್ಮ ಸುದ್ದಿಯ ಹೆಡ್ ಲೈನ್ ಬದಲಾಯಿತು. ‘ಈಟಿವಿಯ ಆಶಾ ಸೇರಿ 54 ಮಂದಿಗೆ ಪದಕ ಪ್ರದಾನ’ ಅಂತ.

ನರೇಂದ್ರ ಮಡಿಕೇರಿ ಮೈಸೂರು ವಿವಿಯಲ್ಲಿ ಬಂಗಾರ ಬಾಚಿದಾಗ, ಮಂಡ್ಯದ ವರದಿಗಾರ, ಹಿರಿಯ ಇಳೆಕಾನ್ ಶ್ರೀಕಂಠ ಅವರು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದಾಗ ಹೆಡ್ ಲೈನ್ ಗಳು ಬದಲಾಗುತ್ತಲೇ ಹೋಯಿತು.

ಅದಾದ ಎಷ್ಟೋ ಕಾಲದ ನಂತರ ಮೈಸೂರಿಗೆ ಹೋಗುವ ದಾರಿಯಲ್ಲಿ ಒಂದು ಕಾಫಿ ಕುಡಿಯೋಣ ಅಂತ ಮಂಡ್ಯದ ಹೋಟೆಲ್ ಗೆ ದಾಳಿ ಇಟ್ಟೆವು.

55 ದಾಟಿದ ಇಳೆಕಾನ್ ಶ್ರೀಕಂಠ ಅವರ ಮುಖದಲ್ಲಿನ ಸಂಭ್ರಮ ಇನ್ನೂ ಬಾಡಿರಲಿಲ್ಲ. ‘ಟಿವಿಯಲ್ಲಿ ನನ್ನನ್ನು ನಾನೇ ನೋಡ್ತೀನಿ’ ಅಂದುಕೊಂಡಿರಲಿಲ್ಲ ಎಂದು ಮುಜುಗರದಿಂದ ಹೇಳಿದರು.

ಹೌದಲ್ಲಾ, ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?’ ಅಂದುಕೊಂಡೆ.

ಕೆರೆ ಕಾಮೇಗೌಡರ ವಿರುದ್ಧ ಗ್ರಾಮಸ್ಥರ ದೂರು

0

ದಾಸನದೊಡ್ಡಿ(ಮಳವಳ್ಳಿ): ಕಾಮೇಗೌಡರ ಕಾಟ ಹೆಚ್ಚಾಗಿದೆ. ಕಾಮಗಾರಿ ನಡೆಸಲು ಬಿಡುತ್ತಿಲ್ಲ. ಮಾತೆತ್ತಿದರೆ ಪೊಲೀಸರಿಗೆ ದೂರು ನೀಡುತ್ತಾರೆ…

-ಇದು ಕಾಮೇಗೌಡರ ಬಗ್ಗೆ ಗ್ರಾಮಸ್ಥರಲ್ಲಿದ್ದ ಅಸಮಾಧಾನ ನಿವಾರಿಸಲು  ಶುಕ್ರವಾರ ಗ್ರಾಮದಲ್ಲಿ ನಡೆದ ಶಾಂತಿ ಸಭೆಯಲ್ಲಿ ಗ್ರಾಮಸ್ಥರು ಕಾಮೇಗೌಡರ ವಿರುದ್ಧ ದೂರುಗಳ ಸರಮಾಲೆಯನ್ನು ಬಿಚ್ಚಿಟ್ಟ ಪರಿ.

ಕಾಮೇಗೌಡರಿಂದ ಗ್ರಾಮದಲ್ಲಿ ನೆಮ್ಮದಿ ಇಲ್ಲದಾಗಿದೆ. ಪೊಲೀಸ್ ಠಾಣೆಗೆ ಪದೇ-ಪದೇ ದೂರು ಕೊಡುತ್ತಾರೆ. ಕಟ್ಟೆಗಳಲ್ಲಿ ದನ ಕರು ಮೇಯಿಸಲು, ನೀರು ಕುಡಿಸಲು ಬಿಡುತ್ತಿಲ್ಲ. ಅಧಿಕಾರಿಗಳಿಗೆ ಪ್ರಭಾವ ಬೀರಿ ಮನ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಮೇಗೌಡರು 2013-14 ನೇ ಸಾಲಿನಲ್ಲಿ ಮರಳು ದಂಧೆ ನಡೆಸಿದ್ದಾರೆ.  ಅವರ ವಿರುದ್ಧ ದೂರು ದಾಖಲಾಗಿದೆ. ಈಗ ನಮ್ಮ ಮೇಲೆ ಅನಗತ್ಯವಾಗಿ ಕ್ರಿಮಿನಲ್ ದೂರು ನೀಡಿ ಪೊಲೀಸ್ ಠಾಣೆಗೆ ಅಲೆಯುವಂತೆ ಮಾಡಿದ್ದಾರೆ. ನಮಗೆ ನ್ಯಾಯ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಗ್ರಾಮದ ಕೆಲವರು ಆರೋಪಿಸಿದರು.

ಅವರಿಗೆ ಬಂದಿರುವ ಬಿರುದು ಪ್ರಶಸ್ತಿಗಳ ಮೇಲೆ ನಮಗೆ ಯಾವುದೇ ತಕರಾರಿಲ್ಲ. ಅವರಿಂದ  ಗ್ರಾಮಕ್ಕೆ ಒಳ್ಳೆಯ ಹೆಸರು ಬಂದಿದೆ.  ಕೆಲವರು ಇಡೀ  ಗ್ರಾಮವೇ ಅವರ ವಿರುದ್ಧವಿದೆ ಎಂಬಂತೆ ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ ಎಂದರು.

ಕಾಮೇಗೌಡರು ತುಂಬಾ ಒರಟು ಮನುಷ್ಯ.  ಅವರಿಗೆ ಕೋಪ ಹೆಚ್ಚು, ಅವರ ವರ್ತನೆಯಿಂದ ಜನರಿಗೆ ತೊಂದರೆಯಾಗಿರಬಹುದು ಎಂದು ಕಾಮೇಗೌಡ ಅವರ ಸಂಬಂಧಿ ತಿಮ್ಮೇಗೌಡ ಸಭೆಗೆ ಹೇಳಿದರು.

ತಹಶೀಲ್ದಾರ್ ಕೆ.ಚಂದ್ರಮೌಳಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಸತೀಶ್, ಸಿಪಿಐ ಧನರಾಜ್, ಎಸ್ಐ ಉಮಾವತಿ ಇದ್ದರು.

 

ಬಿಬಿಎಎಂಪಿ ಆಯುಕ್ತ ಅನಿಲ್ ಕುಮಾರ್ ವರ್ಗಾವಣೆ

ಬೆಂಗಳೂರು:  ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಶನಿವಾರ ವರ್ಗಾವಣೆ ಮಾಡಿದೆ.

ರಾಜ್ಯ ಸರ್ಕಾರ  ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಅವರಿಗೆ ಬಿಬಿಎಎಂಪಿ ಆಯುಕ್ತ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಿದೆ.

ಅನಿಲ್‌ ಕುಮಾರ್ ಅವರನ್ನು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಈ ಹುದ್ದೆಯನ್ನು ವಹಿಸಿಕೊಂಡಿದ್ದ ವಿ. ರಶ್ಮಿ ಮಹೇಶ್‌ ಅವರನ್ನು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

ಕೊರೊನಾ ಸೋಂಕಿಗೆ ಹಿರಿಯ ನಟ ಬಲಿ

ತುಮಕೂರು

ಮಹಾಮಾರಿ ಕೊರೊನಾ ಸೋಂಕಿನಿಂದ ಇದೀಗ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕನ್ನಡ ಚಿತ್ರರಂಗದ ಹಿರಿಯ ನಟ ಹುಲಿವಾನ್ ಗಂಗಾಧರಯ್ಯ (70) ಮೃತಪಟ್ಟಿದ್ದಾರೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಹುಲಿವಾನ್ ಗಂಗಾಧರಯ್ಯ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಅನೇಕ ಧಾರವಾಹಿ ಹಾಗು ಕನ್ನಡ ಸಿನಿಮಾಗಳಲ್ಲಿ ಪೋಷಕ ನಟನಾಗಿ ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು. 2016 ರಲ್ಲಿ ತೆರೆಕಂಡ ‘ಕರ್ವ’ ಅವರ ಕೊನೆಯ ಸಿನಿಮಾವಾಗಿತ್ತು.

ಗಂಗಾಧರಯ್ಯ ನಿಧನದಿಂದ ಜಿಲ್ಲೆ ಒಬ್ಬ ಹಿರಿಯ ನಟನನ್ನು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ಸ್ಯಾಂಡಲ್‌ವುಡ್‌ನ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮನದಾಳದಿ ಇಳಿದು, ಕನಸುಗಳ ಕೆದಕಿದವಳೆ…

ಜಿ.ಎನ್.ಮೋಹನ್


ಒಂದು ಗುಲಾಬಿ ಕುಳಿತಿದ್ದ ಪ್ರೇಕ್ಷಕರ ಸಾಲಿನಿಂದ ತೂರಿ ಬಂತು.

ಇದಕ್ಕೇ ಕಾದಿದ್ದರೇನೋ ಎಂಬಂತೆ ಜನ ಎದ್ದು ನಿಂತು ಗುಲಾಬಿಯನ್ನು ಅಂಗಳದೊಳಕ್ಕೆ ಎಸೆಯಲಾರಂಭಿಸಿದರು. ನೋಡ ನೋಡುತ್ತಿದ್ದಂತೆಯೇ ಅಲ್ಲಿ ಒಂದು ಗುಲಾಬಿ ಹೂಗಳ ಗುಡ್ಡವೇ ಸೃಷ್ಟಿಯಾಗಿ ಹೋಗಿತ್ತು.

ಆ ಹುಡುಗಿ ಗುಲಾಬಿ ಹೂಗಳ ರಾಶಿಯ ನಡುವೆ ಪುಟ್ಟ ಹಕ್ಕಿ ಮರಿಯಂತಾಗಿ ಹೋಗಿದ್ದಳು.

ಜನ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಲು ಶುರು ಮಾಡುತ್ತಿದ್ದಂತೆಯೇ ಮೊದಲ ಬಾರಿಗೆ ಆಕೆ ಕ್ರೀಡಾಂಗಣದಲ್ಲಿ ಕುಸಿದು ಕುಳಿತಳು. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.

ಆಕೆ ನದಿಯಾ ಕಮಾನ್ಸೆ.

ಆಕೆಯ ಹೆಸರಿನ ಸರಿಯಾದ ಉಚ್ಛಾರ ಏನು ಎಂಬುದನ್ನು ನಾನು ಇದುವರೆಗೂ ತಲೆ ಕೆಡಿಸಿಕೊಂಡಿಲ್ಲ. ಏಕೆಂದರೆ ನನಗೆ ಅವಳು ನದಿಯಂತೆಯೇ ಕಂಡಿದ್ದಾಳೆ.

’ಹರಿವ ನದಿಗೆ ಮೈಯೆಲ್ಲಾ ಕಾಲು’ ಎನ್ನುವಂತೆ ಆಕೆ ಕ್ರೀಡಾಂಗಣಕ್ಕಿಳಿದರೆ ಸಾಕ್ಷಾತ್ ನದಿಯೇ ಆಗಿ ಬದಲಾಗಿ ಹೋಗುತ್ತಾಳೆ. ಒಂದು ಜುಳು ಜುಳು ಹರಿವ ತೊರೆಯಂತೆ, ಧುಮ್ಮಿಕ್ಕಿ ಓಡುವ ಝರಿಯಂತೆ, ಪ್ರಶಾಂತ ನದಿಯಂತೆ…

ನದಿಯಾ ಕಮಾನ್ಸೆ

ಮನದಾಳದಿ ಇಳಿದು ಕನಸುಗಳ ಕೆದಕಿದವಳೆ

ಕಂಬಿ ಒಳಗೆ ಆತುಕೊಂಡು ಅತ್ತ ಇತ್ತ ತೂಗಿದವಳೆ

ನೆಲಕೆ ಕಾಲು ಸೋಕಿದಾಗ ಬಿಕ್ಕಿ ಬಿಕ್ಕಿ ಅತ್ತವಳೆ …

ಕವಿತೆಯು ಯಾರ ಹಂಗೂ ಇಲ್ಲದೆ ಹರಿಯತೊಡಗಿತ್ತು.

ನಾನು ಆಗ ಕವಿತೆಯ ಕೈ ಹಿಡಿದಿದ್ದೆ. ಏಕೋ ಏನೋ ಗೊತ್ತಿಲ್ಲ, ಎಲ್ಲೋ ದೂರದಿ ನಾನು ಕಂಡು ಕೇಳರಿಯದ ನೆಲದಲ್ಲಿ ಜರುಗುತ್ತಿದ್ದ ಘಟನೆಗಳು ನನ್ನನ್ನು ಕಾಡಿಬಿಡುತ್ತಿದ್ದವು.

ಲೆಬನಾನಿನಲ್ಲಿ ಯುದ್ಧ, ವಿಯಟ್ನಾಂ ನಲ್ಲಿ ಯುದ್ಧರಂಗಕ್ಕಿಳಿದ ಕೋವಿ ಹೊತ್ತ ಮಹಿಳೆಯರು, ಸೋವಿಯತ್ ದೇಶ ಹಾಗು ಭಾರತದ ನಡುವೆ ಆಗುತ್ತಿದ್ದ ಒಪ್ಪಂದ, ಕ್ಯೂಬಾ ಹಲ್ಲು ಕಚ್ಚಿ ಸೆಟೆದು ನಿಂತ ರೀತಿ, ಬಾಂಬು ಸಿಡಿಸಲು ಸಿದ್ಧವಾಗಿ ನಿಂತ ಯುದ್ಧಪಿಪಾಸು ರೇಗನ್, ದಕ್ಷಿಣ ಆಫ್ರಿಕಾದಲ್ಲಿನ ಸರ್ವಾಧಿಕಾರಿ ಬೋಥಾ ಪಡೆ, ಹೀಗೆ…

ಹೀಗಿರುವಾಗಲೇ ಪತ್ರಿಕೆಯ ಪುಟದಲ್ಲಿ ಪ್ರಕಟವಾಗಿದ್ದ ಆ ಚಿತ್ರ ಕಣ್ಣಿಗೆ ಬಿತ್ತು. ಗುಲಾಬಿ ಹೂಗಳ ರಾಶಿಯ ಮಧ್ಯೆ ಒಬ್ಬ ಹುಡುಗಿ… ಏನೆಂದು ಪುಟ ತಿರುಗಿಸುತ್ತಿದ್ದಂತೆಯೇ ರೊಮೇನಿಯಾದ ನದಿಯಾ ಕಮಾನ್ಸೆ ನನ್ನ ಮನದಾಳದಲ್ಲಿ ಎದ್ದು ನಿಲ್ಲತೊಡಗಿದಳು.

6 ವರ್ಷದ ಪುಟ್ಟ ಹುಡುಗಿಯೊಬ್ಬಳು ’ಹೋ’ ಎನ್ನುತ್ತಾ ಜಿಗಿದು, ಹಾರಿ, ಶಾಲೆಯ ಕೊಠಡಿಯೊಳಗೆ ತೂರಿ ಹೋದ ರೀತಿ ಅಲ್ಲಿಗೆ ಬಂದಿದ್ದ ಕೋಚ್ ಬೇಲಾ ಕರೋಲ್ಯಿ ಕಣ್ಣಿಗೆ ಬಿತ್ತು.

ಕಾಲಲ್ಲಿ ಪಾದರಸ, ಮೈಯಲ್ಲಿನ ಬಳುಕು ಇಷ್ಟು ಸಾಕಾಯ್ತು. ಆರು ವರ್ಷದ ಪುಟ್ಟ ಹುಡುಗಿ ಮರುದಿನದಿಂದ ಸತತ ಎಂಟು ಗಂಟೆ ಮೈಯನ್ನು ಬಿಲ್ಲಾಗಿಸಿಕೊಳ್ಳತೊಡಗಿದಳು. ಕಾಲಿಗೆ ಬೆಕ್ಕನ್ನು ನಾಚಿಸುವ ನಡಿಗೆಯನ್ನು ಕೋಚ್ ಬೇಲಾ ಬೆಸುಗೆ ಹಾಕುತ್ತಿದ್ದರು.

ಇನ್ನೆರಡು ವರ್ಷದಲ್ಲಿ ಆಕೆ ತನ್ನ ದೇಶದ ರಾಷ್ಟ್ರೀಯ ಪಂದ್ಯದಲ್ಲಿ ತಾನೂ ಒಬ್ಬ ಸ್ಪರ್ಧಿ ಎಂದು ಸಾರಿ ನಿಂತಳು. ಬಾರ್ ಗಳ ಮೇಲೆ ಜಿಗಿದು, ಕುಣಿದ ಆಕೆಗೆ ಸಿಕ್ಕಿದ್ದು 13ನೆಯ ಸ್ಥಾನ.

8 ವರ್ಷದ ಪುಟ್ಟ ಹುಡುಗಿ ಮನೆಗೆ ಹೋಗುವಾಗ ಕೋಚ್ ಬೇಲಾ ಒಂದು ಪುಟ್ಟ ಟೆಡ್ಡಿಬೇರ್ ಆಕೆಯ ಕೈಯಲ್ಲಿಟ್ಟರು. ’13 ಬೇಡ ಮಗಳೆ, ಆ ಮೂರು ತೆಗೆದು ಹಾಕು, ಉಳಿಯುವುದು ಒಂದು. ನಂಬರ್ 1’ ಎಂದರು.

ಅಲ್ಲಿಂದ ಶುರುವಾಯ್ತು ಆ ಪುಟ್ಟ ಹುಡುಗಿಯ ಪಯಣ. ರೊಮೇನಿಯಾ ದಾಟಿ, ಅಂತರ ರಾಷ್ಟ್ರೀಯ ಕೂಟಕ್ಕೆ ನೆಗೆದು, ನದಿಯಾ ಚಿನ್ನ ಬಾಚತೊಡಗಿದಳು. 13ರಲ್ಲಿ 3 ಉದುರಿಹೋಗಿತ್ತು.

1976, ಜಗತ್ತು ಮಾಂಟ್ರಿಯಲ್ ಒಲಂಪಿಕ್ಸ್ ಗೆ ಸಜ್ಜಾಗುತ್ತಿತ್ತು.

ಸ್ಕೋರ್ ಬೋರ್ಡ್ ಉತ್ಪಾದನೆ ಮಾಡುವ ಒಮೆಗಾ ಕಂಪನಿ ಬೋರ್ಡಿನಲ್ಲಿ ನಾಲ್ಕು ಅಂಕೆ ಇರಬೇಕಾ ಎಂದು ಕೇಳಿತು. ಒಲಂಪಿಕ್ಸ್ ಸಮಿತಿ ಗಹಗಹಿಸಿ ನಕ್ಕುಬಿಟ್ಟಿತು. ನಾಲ್ಕು ಅಂಕೆ ಅಂದರೆ ಹತ್ತು ಅಂಕ, 10.೦೦ ಒಲಂಪಿಕ್ಸ್ ಎನ್ನುವುದೇನು ಗಲ್ಲಿ ಹುಡುಗರ ಕ್ರೀಡಾಕೂಟವಾ ಅಂತ.

ಸರಿ ಎಂದು ಒಮೆಗಾ ಕಂಪನಿ ಮೂರು ಅಂಕಿಯ ಸ್ಕೋರ್ ಬೋರ್ಡ್ ತಯಾರಿಸಿ ಕಳಿಸಿತು.

ರೊಮೇನಿಯಾದ ಪುಟ್ಟ ಹುಡುಗಿ 14 ವರ್ಷದ ನದಿಯಾ ಕಮಾನ್ಸೆ ಬೆರಗುಗಣ್ಣು ಹೊತ್ತು ಮೊದಲ ಬಾರಿ ಒಲಂಪಿಕ್ಸ್ ಅಂಗಳಕ್ಕೆ ಹೆಜ್ಜೆ ಇಟ್ಟಳು.

ಹೆಜ್ಜೆ ಇಟ್ಟಿದ್ದು ಒಳಗೆ ಬರುವಾಗ ಮಾತ್ರ. ನಂತರ ಆಕೆ ಗಾಳಿಯಲ್ಲಿ ತೇಲಿದಳು, ಹಕ್ಕಿಯಂತೆ ರೆಕ್ಕೆಯನ್ನು ಪಟಪಟಿಸುತ್ತಾ… ಹಿಂದಕ್ಕೆ ಮುಂದಕ್ಕೆ ಜೋಲಿ ಹೊಡೆಯುತ್ತಾ…

ಒಮೆಗಾ ಕಂಪನಿಯ ಮೆಶಿನ್ ಗರಗರನೆ ಅಂಕ ದಾಖಲಿಸುತ್ತಾ ಹೋಯಿತು… 1,2,3… ನದಿಯಾ ಕಮಾನ್ಸೆ ಹಾಗೆ ಗಾಳಿಯಲ್ಲಿ ಹಾರಿ, ಜಿಗಿದು, ಕುಪ್ಪಳಿಸಿ ಪ್ರೇಕ್ಷಕರಿಗೆ ಬಾಗಿ ನಮಸ್ಕರಿಸಿದಾಗ ಪ್ರೇಕ್ಷಕರು ಗಾಬರಿಯಾಗಿದ್ದರು.

ಏಕೆಂದರೆ ಸ್ಕೋರ್ ಬೋರ್ಡ್ ತೋರಿಸುತ್ತಿದ್ದ ಅಂಕ 1, ಕೇವಲ1.

ಕೋಚ್ ಗಳು ಬೆಚ್ಚಿಬಿದ್ದಿದ್ದರು, ಇಡೀ ರೊಮೇನಿಯಾ ಬೆಚ್ಚಿ ಬಿದ್ದಿತ್ತು.

ಆಗ ಮೈಕ್ ನಲ್ಲಿ ದನಿ ಕೇಳಿಬಂತು. ’ಕ್ಷಮಿಸಿ, ನಮ್ಮ ಮೆಶೀನ್ ಗೆ ಸ್ಕೋರನ್ನು ದಾಖಲಿಸಿಕೊಳ್ಳಲಾಗಿಲ್ಲ. ಆಕೆ ಪಡೆದ ಅಂಕ 10. Perfect ten!’

ಜನ ’ಹೋ’ ಎನ್ನುತ್ತಾ ದೀರ್ಘ ಕರತಾಡನ ಮಾಡಿದರು. ನಾಲ್ಕು ಅಂಕೆ ಅಂದರೆ 10.೦೦ ತೋರಿಸುವ ಮೆಶೀನ್ ಬೇಕಾ ಎಂದು ಕೇಳಿದಾಗ ನಕ್ಕಿದ್ದ ಒಲಂಪಿಕ್ಸ್ ಸಮಿತಿಯನ್ನು ನೋಡಿ ಈಗ ನಗುವ ಸರದಿ ಒಮೆಗಾ ಕಂಪನಿಯದಾಗಿತ್ತು.

ಅದೆಲ್ಲಾ ಮುಗಿದು ಐದು ವರ್ಷಗಳಾಗಿತ್ತು. ನಾನು ಡಿಗ್ರಿ ಮೊದಲ ವರ್ಷಕ್ಕೆ ಕಾಲಿಟ್ಟಿದ್ದೆ. ಅಲ್ಲಿ ನದಿಯಾ ’ನಾನೇರಿದೆತ್ತರಕ್ಕೆ ನೀನೇರಬಲ್ಲೆಯಾ..’ ಎನ್ನುವಂತೆ ಒಲಂಪಿಕ್ಸ್ ನಲ್ಲಿ, ಎಲ್ಲೆಡೆಯೂ ಚಿನ್ನವನ್ನು ಬಾಚುತ್ತಾ, ಬಾಚುತ್ತಾ ಮುನ್ನಡೆದಿದ್ದಳು.

ಸಾಕು ಅನ್ನಿಸಿಬಿಟ್ಟಿತ್ತೇನೋ, ಜಿಮ್ನಾಸ್ಟಿಕ್ ಗೆ ವಿದಾಯ ಹೇಳಲು ಸಜ್ಜಾದಳು.

ಪರ್ಫೆಕ್ಟ್ 10 ಹುಡುಗಿ ನೀಡುತ್ತಿದ್ದ ಕೊನೆಯ ಪ್ರದರ್ಶನವನ್ನು ಇಡೀ ಜಗತ್ತು ಉಸಿರು ಬಿಗಿಹಿಡಿದು ನೋಡಿತು. ಮರುದಿನ ಎಲ್ಲಾ ಮಾಧ್ಯಮದಲ್ಲೂ ಆಕೆಯೇ ಸುದ್ದಿ. ಹೂವಿನ ರಾಶಿಯ ಮಧ್ಯೆ ನದಿಯಾ ಕಮಾನ್ಸೆ.

ಇಲ್ಲಿ ನಾನು ಕವಿತೆ ಮುಂದುವರೆಸಿದೆ ….

’ಎದೆಯಲ್ಲಿ ಕಾವಾಗಿ

ಚಿಗುರೊಡೆದು ಮೊಗ್ಗಾಗಿ

ಒಮ್ಮೆ ನೋಡುವ ಮುನ್ನ ಮರೆಯಾಗಿ ಹೋದವಳೆ

ಎದೆಯ ಕಂಬಿಯ ಮೇಲೆ ವಾಲುತ್ತಾ ನಡೆಯುತ್ತಾ

ಎಷ್ಟೊಂದು ಕನಸುಗಳ ಅಳಿಸಿ ಮರೆಯಾದವಳೆ

ಎದೆಯಾಳ ಗೋರಿಯಲಿ ಕಮಾನ್ಸೆ ಅನುರಣನ

ಕನಸುಗಳು ಕುಡಿಯೊಡೆದು ನಿಶ್ಯಬ್ಧ ನಿರ್ಗಮನ…

ಈ ಬಾರಿ ನಾನು ನಿಂತಿದ್ದು ಎಚ್ ಎಸ್ ಶಿವಪ್ರಕಾಶರ ಎದುರು.

‘ಮಿಲರೇಪ’ದಿಂದ ಸುದ್ದಿ ಮಾಡುತ್ತಾ ಅವರು ಆಗತಾನೆ ’ಮಳೆ ಬಿದ್ದ ನೆಲದಲ್ಲಿ’ ಸಂಕಲನ ಹೊರತಂದಿದ್ದರು.

ನಾನೂ ಅವರು ಬಿಟಿಎಸ್ ಬಸ್ಸಿನ ಸಹ ಪ್ರಯಾಣಿಕರು. ಇಂಗ್ಲಿಷ್ ಬೋಧಿಸುತ್ತಿದ್ದ ಅವರ ಬೆನ್ನು ಬಿದ್ದೆ. ನದಿಯಾ ಕಮಾನ್ಸೆ ಬಗ್ಗೆ ಬರೆದಿರುವ ನನ್ನ ಕವನವನ್ನು ಇಂಗ್ಲಿಷಿಗೆ ಅನುವಾದ ಮಾಡಿಕೊಡಿ ಅಂತ.

ನಾನು ಆ ವೇಳೆಗೆ ಅವರ ಕವಿತೆಗಳ ಮೊದಲ ಕಿವಿಗಳಲ್ಲಿ ಒಬ್ಬ. ಹಾಗಾಗಿ ಇಲ್ಲ ಎನ್ನಲಾಗದೆ ಅವರು ಅನುವಾದ ಮಾಡಿಕೊಟ್ಟೇಬಿಟ್ಟರು.

ನಿಜವಾದ ಸಮಸ್ಯೆ ಶುರುವಾಗಿದ್ದು ಆಗ. ಕವನ ಬರೆದಿದ್ದಾಯ್ತು, ಬೆನ್ನು ಬಿದ್ದು ಅನುವಾದ ಮಾಡಿಸಿಕೊಂಡಿದ್ದಾಗಿತ್ತು, ಕಳಿಸುವುದು ಎಲ್ಲಿಗೆ??

ನನಗೋ ನದಿಯಾ ಕಮಾನ್ಸೆ ನನ್ನ ನೆರೆಯವಳೇನೋ ಎನ್ನುವ ಭಾವ. ಕವನ ಕಳಿಸುವುದರ ಬಗ್ಗೆ ನನಗೇನೂ ಗೊಂದಲವಿರಲಿಲ್ಲ. ಎಲ್ಲಿಗೆ ಕಳಿಸುವುದು ಎಂಬುದೇ ಪ್ರಶ್ನೆಯಾಗಿತ್ತು.

ಏಕೆಂದರೆ ಆ ವೇಳೆಗೆ ನದಿಯಾ ರೊಮೇನಿಯಾ ತೊರೆದುಬಿಟ್ಟಿದ್ದಳು. ಜಗತ್ತು ‘ರೊಮೇನಿಯಾದ ಕಮ್ಯುನಿಸ್ಟ್ ಸರ್ಕಾರ ಆಕೆಯನ್ನು ಬಾಳಲು ಬಿಡಲಿಲ್ಲ. ಹದ್ದಿನ ಕಣ್ಣಿಟ್ಟಿತು’ ಎಂದು ಸಾರಿ ಹೇಳಿಬಿಟ್ಟಿತ್ತು. ನಾಲ್ಕು ಕೋಳಿ ಒಂದೇ ಬಾರಿಗೆ ಕೂಗಿದಾಗ ಅದು ರಾತ್ರಿಯಾದರೂ ಬೆಳಗು ಎಂದು ನಂಬಲೇಬೇಕಾಗುತ್ತದೆ.

ಆದರೆ ಆ ವೇಳೆಗೆ ಕ್ಯೂಬಾದ ಹಿಂದೆ ಬಿದ್ದಿದ್ದ ನನಗೆ, ಪ್ರತೀ ಒಲಂಪಿಕ್ಸ್ ನಡೆದಾಗಲೂ ಹೇಗೆ ಅಮೇರಿಕಾ ಹಣದ ಥೈಲಿ ಹಿಡಿದು ಕ್ಯೂಬಾದ ಕ್ರೀಡಾಪಟುಗಳ ಹಿಂದೆ ಬೀಳುತ್ತಾರೆ ಎಂದು ಗೊತ್ತಾಗಿತ್ತು.

ಕ್ಯೂಬಾದ ಕ್ರೀಡಾಧಿಕಾರಿಗಳು ಒಲಂಪಿಕ್ಸ್ ನಲ್ಲಿ ಅಮೇರಿಕಾದ ಕ್ರೀಡಾಪಟುಗಳ ಮೇಲಲ್ಲ, ಡಾಲರ್ ಥೈಲಿಗಳನ್ನು ತಿರಸ್ಕರಿಸಿ, ಅವುಗಳ ಮೇಲೆ ಗೆದ್ದು ಬರಬೇಕಾದ ಪರಿಸ್ಥಿತಿ ಇತ್ತು.

ಆದರೆ ನದಿಯಾಗೆ ಗೆಲ್ಲಲಾಗಲಿಲ್ಲ. ನದಿಯಾಳ ಕೋಚ್ ಗಳು ಸಾಕಷ್ಟು ಮುಂಚೆಯೇ ಅಮೇರಿಕಾ ಪಾಲಾಗಿದ್ದರು. ನದಿಯಾ ರಾತ್ರೋರಾತ್ರಿ ಹಿಮಗುಡ್ಡಗಳಲ್ಲಿ ನಡೆದು ಆಸ್ಟ್ರಿಯಾ ಸೇರಿಕೊಂಡು ಅಲ್ಲಿಂದ ಅಮೇರಿಕಾದ ತೆಕ್ಕೆಗೆ ಬಿದ್ದಳು.

ಡಾಲರ್ ಥೈಲಿ ನದಿಯಾಳನ್ನು ಗೆದ್ದುಕೊಂಡಿತೋ … ಇಲ್ಲ ರೊಮೇನಿಯಾವೇ ನರಕ ಸೃಷ್ಟಿಸಿತೋ.. ’ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರೆ ಕಾಮಾಕ್ಷಿಯೇ’ ಎನ್ನುವಂತಾಗಿತ್ತು.

ನಾನು ಇರಲಿ ಎಂದು ಕವನದ ಒಂದು ಪ್ರತಿಯನ್ನು ‘ನದಿಯಾ ಕಮಾನ್ಸೆ, ರೋಮೇನಿಯಾ’ ಎಂದು ಇನ್ನೊಂದನ್ನು ‘ನದಿಯಾ ಕಮಾನ್ಸೆ, ಅಮೇರಿಕಾ’ ಎಂದೂ ಬರೆದು ಪೋಸ್ಟ್ ಮಾಡಿಯೇಬಿಟ್ಟೆ.

ಆ ನಂತರ ನನ್ನ ಕೆಲಸ ಪೋಸ್ಟ್ ಮನ್ ಬರುವುದನ್ನು ಕಾಯುತ್ತಾ ಕೂರುವುದೇ ಆಗಿಹೋಯ್ತು.

ಮೊನ್ನೆ ಮತ್ತೆ ಪತ್ರಿಕೆ ತ್ರಿರುವಿ ಹಾಕುತ್ತಿದ್ದೆ. ಸಿಕ್ಕಿಹಾಕಿಕೊಂಡೇಬಿಟ್ಟಳು! ಅದೇ ನದಿಯಾ, ಜಾಕಿ ಒಳ ಉಡುಪುಗಳ ಜಾಹಿರಾತಿನಲ್ಲಿ.

ನನ್ನ ಮನಸ್ಸು ಏಕೋ ವಿಲಿಗುಟ್ಟಿತು.

ನೇಮಿಚಂದ್ರ ವ್ಯಾನ್ ಗೋ ನ ಬದುಕಿನ ಎಳೆ ಹಿಡಿದು ’ನೋವಿಗದ್ದಿದ ಕುಂಚ’ ಎನ್ನುವ ಬಯೋಪಿಕ್ ಕಾದಂಬರಿ ಬರೆದಿದ್ದಾರೆ.

ನಾನೂ ಸಜ್ಜಾಗಿದ್ದೇನೆ.. ‘ನದಿಯಾ’ ಕಾದಂಬರಿ ಅರಳಬಹುದೇನೋ……?

‘ಕೊಲೆಗಾರನ ಪತ್ತೆಗಾಗಿ 11 ಕಿ.ಮೀ ನಡೆದ ತುಂಗ’

ದಾವಣಗೆರೆ: ಸೂಳೆಕೆರೆ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ನಡೆದ ಕೊಲೆಗೆ ಸಂಬಂಧಿಸಿದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ತುಂಗಾಳದ್ದು ಪ್ರಮುಖ ಪಾತ್ರ.

ನಾಗರಕಟ್ಟೆ ಗ್ರಾಮದ ಚಂದ್ರಾನಾಯ್ಕ(25) ಎಂಬುವರು ಸೂಳೆಕೆರೆ  ಬಳಿಯ ಗುಡ್ಡ ಪ್ರದೇಶದಲ್ಲಿ ಹತ್ಯೆಯಾಗಿದ್ದರು. ಅವರ ದೇಹದ ಮೇಲೆ ಬುಲೆಟ್ ನಿಂದಾದ ಗಾಯಗಳು ಪತ್ತೆಯಾಗಿದ್ದವು.

ಸ್ಥಳ ಪರಿಶೀಲನೆ, ಮಹಜರ್ ನಡೆಸುವ ವೇಳೆ “ತುಂಗ” ಕೊಲೆಯಾದ ವ್ಯಕ್ತಿ ಧರಿಸಿದ್ದ ಹ್ಯಾಟ್ ಅನ್ನು ಮೂಸಿ ವಾಸನೆ ಹಿಡಿದಿದ್ದಳು. ವಾಸನೆಯ ಆಧಾರದಲ್ಲಿ ಕೊಲೆಗಾರನ ಜಾಡು ಹಿಡಿದು ಕೊಲೆ ನಡೆದ ಸ್ಥಳದಿಂದ 11 ಕಿ.ಮೀ ದೂರದ ಕಾಶಿಪುರದಲ್ಲಿದ್ದ ಕೊಲೆಗಾರನ ಬಳಿಗೆ ಪೊಲೀಸರನ್ನು ಕರೆದೊಯ್ದಿದ್ದಳು.

ಆರೋಪಿಯನ್ನು ಚೇತನ್ ನಾಯ್ಕ(27) ಎಂದು ಗುರುತಿಸಲಾಗಿದೆ.ಆರೋಪಿಯಿಂದ ಕೊಲೆಗೆ ಬಳಸಲಾದ ಪಿಸ್ತೂಲ್, 5 ಬುಲೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಹಾಗೂ ಆತನ ಸಹಚರರು ಈಚೆಗೆ ದಾರವಾಡದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನದ ವಿಚಾರ ತಿಳಿದಿದ್ದ ಚಂದ್ರಾನಾಯ್ಕ ತನಗೆ ಹಣ ಕೊಡದಿದ್ದರೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಬೆದರಿಕೆ  ಹಾಕಿದ್ದ. ಇದರಿಂದ ಕೋಪಗೊಂಡಿದ್ದ ಚೇತನ್ ನಾಯ್ಕ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಂದ ಹಾಗೆ  “ತುಂಗಾ” ದಾವಣಗೆರೆ ಪೊಲೀಸ್ ಶ್ವಾನ ಧಳದಲ್ಲಿರುವ 9 ವರ್ಷದ  ಹೆಣ್ಣು ಶ್ವಾನ. ಡಾಬರ್ ಮನ್ ತಳಿಯ  ಇವಳು ಸುಮಾರು 75 ಕ್ರಮಿನಲ್ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ್ದಾಳೆ.

ಡ್ರೋನ್ ಪ್ರತಾಪನ ಅಸಲಿ ಡ್ರಾಮ

ತುಮಕೂರು

ಒಂದು ಕಾಲಕ್ಕೆ ಅತ್ಯಂತ ಕಿರಿವಯಸ್ಸಿನ ಸಾಧಕ ಎಂದು ಇಡೀ ದೇಶ ಹೆಮ್ಮೆ ಪಡುತ್ತಿತ್ತು. ಆದರೀಗ ಅದೇ ಯುವಕನ ಬಗ್ಗೆ ದಿನ ಬೆಳಗಾದರೆ ಸಾಕಷ್ಟು ಆತನೊಬ್ಬ ಸುಳ್ಳುಗಾರ ಎಂಬ ಸುದ್ದಿ ಅಷ್ಟೇ ವೇಗವಾಗಿ ಹರಿದಾಡತೊಡಗಿದೆ.

ಅವಾರ್ಡ್‌ ಫೇಕ್‌, ಮೆಡಲ್‌ ಫೇಕ್‌, ಕೊಟ್ಟಿರುವ ಮಾಹಿತಿ ಫೇಕ್‌… ಎಲ್ಲವೂ ಸುಳ್ಳೇ ಸುಳ್ಳು ಎಂಬ ಬಗ್ಗೆ ಪ್ರತಾಪ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ ಆಗುತ್ತಿದ್ದಾನೆ.

ಈತನ ಸಾಧನೆ ಮೆಚ್ಚಿ ಎಷ್ಟೋ ಪಾಲಕರು ತಮ್ಮ ಮಕ್ಕಳಿಗೆ ಬಯ್ದದ್ದೂ ಇದೆ. ಈ ಕುರಿತು ಸ್ವತಃ ಚಿತ್ರ ನಟ ಜಗ್ಗೇಶ್‌ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಾಪ್‌ನ ಸಾಧನೆ ನೋಡಿ ನನ್ನ ಮಕ್ಕಳಿಗೆ ಬಯ್ದಿದ್ದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಲ್ಲಿ ಡ್ರೋನ್‌ ಪ್ರತಾ‍ಪ್‌ ಇದೀಗ ‘ಹೀರೊ’. ತಾನು ಭಾಷಣ ಮಾಡುವಾಗ ಮಾತಿನ ಭರದಲ್ಲಿ ಕೆಲವೊಂದು ತಪ್ಪು ಮಾಹಿತಿ ಕೊಟ್ಟಿರುವುದು ಬಿಟ್ಟರೆ ನಾನು ಜಪಾನ್, ಜರ್ಮನಿಗಳಲ್ಲಿ ಗೋಲ್ಡ್‌ ಮೆಡಲ್‌ ಪಡೆದಿರುವುದು ಮಾತ್ರ ನೂರಕ್ಕೆ ನೂರು ಸತ್ಯ ಎಂದು ಪ್ರಶ್ನಿಸಿದವರನ್ನೇ ಬೆರಗುಗೊಳಿಸುವಷ್ಟು ಮಾತಿನ ಮೋಡಿಗೆ ಮಾಡಿಬಿಟ್ಟಿದ್ದಾನೆ.

ಆದರೆ ಇದನ್ನು ಒಪ್ಪಬೇಕಲ್ಲ..? ಕೆಲವರು ಡ್ರೋನ್‌ನ ಹಿನ್ನೆಲೆ, ಮುನ್ನೆಲೆ, ಆತ ಹೋದದ್ದು, ಬಂದದ್ದು ಎಲ್ಲದರ ಜಾಡು ಹಿಡಿದು ಹೋಗಿದ್ದಾರೆ.

ಸಾನಿಯಾ ಮಿಶ್ರಾ ಎಂಬುವವರು ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಡ್ರೋನ್‌ ಪ್ರತಾಪ್‌ನ ಗೋಲ್ಡ್‌ ಮೆಡಲ್‌ ಮೂಲಕ್ಕೇ ಕೈಹಾಕುವ ಸಾಹಸ ಮಾಡಿದ್ದಾರೆ!.

2018ರಲ್ಲಿ ಜರ್ಮನಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಂಶೋಧನಾ ಪದಕ (ಸಿಇಬಿಐಟಿ-ಅವಾರ್ಡ್‌) , ಆಲ್ಬರ್ಟ್ ಐನ್ಸ್ಟೀನ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಗೋಲ್ಡ್ ಮೆಡಲ್, ಐರೆಕ್ಸ್‌ನಿಂದ ಮೆಡಲ್‌ ಬಂದಿದೆ ಎಂದೇನು ಪ್ರತಾಪ್‌ ಹೇಳುತ್ತಿದ್ದಾನೆಯೋ ನೇರಾನೇರ ಆ ಸಂಸ್ಥೆಗಳಿಗೆ ಇ-ಮೇಲ್‌ ಮೂಲಕ ಮಾಹಿತಿ ಕೋರಿದ್ದಾರೆ.

ಅದರಲ್ಲಿ ಭಾರತದ ಕರ್ನಾಟಕ ಮೂಲದ ಯುವಕನೊಬ್ಬ ಈ ರೀತಿ ಅವಾರ್ಡ್‌ ಗಳಿಸಿದ್ದಾನೆ ಎಂದು ಹೇಳುತ್ತಿದ್ದು, ಅದರ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಮಾಹಿತಿ ನೀಡಿ ಎಂದು ಕೇಳಿದ್ದಾರೆ. ಜತೆಗೆ ಆತ ಪ್ರದರ್ಶಿಸಿದ್ದ ಸರ್ಟಿಫಿಕೇಟ್‌, ಗೋಲ್ಡ್‌ ಮೆಡಲ್‌ಗಳ‌ ಫೋಟೋ ಎಲ್ಲವನ್ನೂ ಸಾನಿಯಾ ಕಳುಹಿಸಿದ್ದಾರೆ.

ಇದಕ್ಕೆ ಐರೆಕ್ಸ್‌ ಮತ್ತು ಬಿಇಬಿಐಟಿಗಳಿಂದ ಇ-ಮೇಲ್ ಮೂಲಕ ರಿಪ್ಲೈ ಕೂಡ ಬಂದಿದೆ.

ರಿಪ್ಲೈನಲ್ಲಿ ಎರಡೂ ಸಂಸ್ಥೆಗಳು ತಾವು ಪ್ರತಾಪ್‌ ಎಂಬ ಯುವಕನಿಗೆ ಯಾವುದೇ ಅವಾರ್ಡ್‌ ಕೊಟ್ಟಿಲ್ಲ. ಈ ಚಿತ್ರದಲ್ಲಿ ಇರುವುದು ಫೇಕ್‌ ಸರ್ಟಿಫಿಕೇಟ್‌. ನಮ್ಮ ಲೋಗೋ ಈ ರೀತಿ ಇಲ್ಲ, ಐರೆಕ್ಸ್‌ ಸಂಸ್ಥೆ ಹೆಸರಿನಲ್ಲಿ ಈ ಯುವಕನ ಕುತ್ತಿಗೆಯಲ್ಲಿ ಇರುವ ನೆಕ್‌ಬೆಲ್ಟ್‌ನಲ್ಲಿ ತೋರಿಸಿರುವ ಲೋಗೋ ನಮ್ಮದಲ್ಲ ಎಂದಿದ್ದಾರೆ!

2018ರಲ್ಲಿ ನಾವು ಸಿಇಬಿಐಟಿನಲ್ಲಿ ಅವಾರ್ಡ್‌ ಆಯೋಜಿಸಿಯೇ ಇಲ್ಲ. ಅಷ್ಟೇ ಅಲ್ಲದೇ, ಈ ಸರ್ಟಿಫಿಕೇಟ್‌ನಲ್ಲಿ ಕೆಳಗಡೆ ಸಹಿ ಇರುವ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ.ವಲ್‌ಫ್ರ್ಯಾಮ್‌ ವನ್‌ ಅವರ ಅವಧಿ 2017ರಲ್ಲಿಯೇ ಮುಗಿದಿದೆ. ಹೀಗಿರುವಾಗ 2018ರಲ್ಲಿ ಅವರ ಸಹಿ ಹೇಗೆ ಬರಲು ಸಾಧ್ಯ? ಇದು ಫೇಕ್‌ ಸರ್ಟಿಫಿಕೇಟ್‌ ಎಂದು ನಮೂದಿಸಿದ್ದಾರೆ.

ಈ ಸರ್ಟಿಫಿಕೇಟ್‌ನ ಪಿಡಿಎಫ್‌ ಟೆಂಪ್ಲೇಟ್‌ಗಳು ಇಂಟರ್‌ನೆಟ‌ನಲ್ಲಿ ಸುಲಭದಲ್ಲಿ ಸಿಗುತ್ತದೆ. ಅದನ್ನು ಯಾರು ಬೇಕಾದರೂ ಪ್ರಿಂಟ್‌ ಮಾಡಿಕೊಂಡು ತಮಗೆ ಬೇಕಾದಂತೆ ತಿರುಚಿಕೊಳ್ಳಬಹುದು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಟ್ರೋಲ್‌ ಆಗಿರುವುದು ಚರ್ಚೆಯಾಗುತ್ತಿದೆ.

ಮಾಧ್ಯಮಗಳಲ್ಲಿ ಸಂದರ್ಶನ ಮಾಡುವ ಸಮಯದಲ್ಲಿ ತನಗೆ ಉತ್ತರ ಹೇಳಲು ತೋಚದಾಗ ‘ಇವೆಲ್ಲಾ ತುಂಬಾ ಸೀಕ್ರೇಟ್‌. ನನ್ನ ಮೇಲ್‌ಗೆ ಎಲ್ಲ ಸಂಸ್ಥೆಗಳು ಸಂದೇಶ ಕಳುಹಿಸಿದ್ದು, ಅದನ್ನು ತಾನು ಬಹಿರಂಗವಾಗಿ ಹೇಳುವಂತಿಲ್ಲ, ಇವು ತುಂಬಾ ಕಾನ್ಫಿಡೆನ್ಷಿಯಲ್‌, ನಾನು ಕಂಪನಿ ಜತೆ ಒಪ್ಪಂದ ಮಾಡಿಕೊಂಡಿರುವ ಕಾರಣ, ಹೀಗೆಲ್ಲಾ ಹೇಳುವಂತಿಲ್ಲ’ ಎಂದು ನುಣುಚಿಕೊಳ್ಳುವ ಪ್ರತಾಪ್‌ ಈ ಸಂಸ್ಥೆಗಳ ಇ-ಮೇಲ್‌ ನೋಡಿದರೆ ಇನ್ನೇನು ಹೇಳುತ್ತಾನೋ ಎಂಬುದನ್ನ ಕಾದು ನೋಡಬೇಕು.