ದಾವಣಗೆರೆ: ಸೂಳೆಕೆರೆ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ನಡೆದ ಕೊಲೆಗೆ ಸಂಬಂಧಿಸಿದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ತುಂಗಾಳದ್ದು ಪ್ರಮುಖ ಪಾತ್ರ.
ನಾಗರಕಟ್ಟೆ ಗ್ರಾಮದ ಚಂದ್ರಾನಾಯ್ಕ(25) ಎಂಬುವರು ಸೂಳೆಕೆರೆ ಬಳಿಯ ಗುಡ್ಡ ಪ್ರದೇಶದಲ್ಲಿ ಹತ್ಯೆಯಾಗಿದ್ದರು. ಅವರ ದೇಹದ ಮೇಲೆ ಬುಲೆಟ್ ನಿಂದಾದ ಗಾಯಗಳು ಪತ್ತೆಯಾಗಿದ್ದವು.
ಸ್ಥಳ ಪರಿಶೀಲನೆ, ಮಹಜರ್ ನಡೆಸುವ ವೇಳೆ “ತುಂಗ” ಕೊಲೆಯಾದ ವ್ಯಕ್ತಿ ಧರಿಸಿದ್ದ ಹ್ಯಾಟ್ ಅನ್ನು ಮೂಸಿ ವಾಸನೆ ಹಿಡಿದಿದ್ದಳು. ವಾಸನೆಯ ಆಧಾರದಲ್ಲಿ ಕೊಲೆಗಾರನ ಜಾಡು ಹಿಡಿದು ಕೊಲೆ ನಡೆದ ಸ್ಥಳದಿಂದ 11 ಕಿ.ಮೀ ದೂರದ ಕಾಶಿಪುರದಲ್ಲಿದ್ದ ಕೊಲೆಗಾರನ ಬಳಿಗೆ ಪೊಲೀಸರನ್ನು ಕರೆದೊಯ್ದಿದ್ದಳು.
ಆರೋಪಿಯನ್ನು ಚೇತನ್ ನಾಯ್ಕ(27) ಎಂದು ಗುರುತಿಸಲಾಗಿದೆ.ಆರೋಪಿಯಿಂದ ಕೊಲೆಗೆ ಬಳಸಲಾದ ಪಿಸ್ತೂಲ್, 5 ಬುಲೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಹಾಗೂ ಆತನ ಸಹಚರರು ಈಚೆಗೆ ದಾರವಾಡದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನದ ವಿಚಾರ ತಿಳಿದಿದ್ದ ಚಂದ್ರಾನಾಯ್ಕ ತನಗೆ ಹಣ ಕೊಡದಿದ್ದರೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಕೋಪಗೊಂಡಿದ್ದ ಚೇತನ್ ನಾಯ್ಕ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದ ಹಾಗೆ “ತುಂಗಾ” ದಾವಣಗೆರೆ ಪೊಲೀಸ್ ಶ್ವಾನ ಧಳದಲ್ಲಿರುವ 9 ವರ್ಷದ ಹೆಣ್ಣು ಶ್ವಾನ. ಡಾಬರ್ ಮನ್ ತಳಿಯ ಇವಳು ಸುಮಾರು 75 ಕ್ರಮಿನಲ್ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ್ದಾಳೆ.