Sunday, December 28, 2025
Google search engine
Home Blog Page 315

ಕಾಂಗ್ರೆಸ್‌- ಜೆಡಿಎಸ್ ಮೈತ್ರಿ ಇನ್ನೂ ತೀರ್ಮಾನ ಇಲ್ಲ

ತುಮಕೂರು: ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಮೊದಲು ಗುರಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಅನರ್ಹ ಶಾಸಕರು ಪ್ರಜಾತಂತ್ರದ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಿಜೆಪಿ ಅವರಿಗೆ ಬೆಂಬಲ ನೀಡಿ ಟಿಕೆಟ್ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೋಲಿಸುವುದು ನಮ್ಮ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಉಪಚುನಾವಣೆಯ ಫಲಿತಾಂಶ ಬಂದ ನಂತರ ಅವೆಲ್ಲ. ಈಗಲೇ ನಾವು ಏನನ್ನೂ ಹೇಳುವುದಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವೂ ಮಾಡಿಲ್ಲ. ಆ ಕಡೆಯಿಂದಲೂ ಬಂದಿಲ್ಲ. ರಾಜಕಾರಣದಲ್ಲಿ ಸಂದರ್ಭ, ಸನ್ನಿವೇಶಗಳು ಬದಲಾದಂತೆ ತೀರ್ಮಾನಗಳು ನಡೆಯುತ್ತವೆ. ಆದರೂ ಮೈತ್ರಿ ವಿಚಾರ ಪ್ರಸ್ತಾಪವಾಗಿಲ್ಲ ಎಂದು ಹೇಳಿದರು.

ಸಂವಿಧಾನದ ನಿಯಮಗಳನ್ನು ಧಿಕ್ಕರಿಸಿ ಜನರಿಗೆ ಮೋದ ಮಾಡಿರುವ ಅನರ್ಹ ಶಾಸಕರು ಜನರೇ ಓಡಿಸಿಕೊಂಡು ಹೋಗಿ ಹೊಡೆಯುತ್ತಾರೆ. ಅವರು ಏನೆಲ್ಲಾ ಮಾಡಿದ್ದಾರೆ. ಮುಂಬೈಗೆ ಹೋಗಿದ್ದು, ನಾಟಕ ಮಾಡಿದ್ದನ್ನು ಜನರು ನೋಡಿದ್ದಾರೆ. 15 ಜನರಲ್ಲಿ ಕೆಲವರು ಮತ್ತೆ ಪಕ್ಷಕ್ಕೆ ಮರಳಿ ಬರಲು ಸಿದ್ದವಿದ್ದರು ನಾವೇ ಬೇಡವೆಂದು ಹೇಳಿದೆವು ಎಂದರು.

ಬೈರತಿ ಬಸವರಾಜು, ಎಚ್.ಟಿ. ಸೋಮಶೇಖರ್ ಮತ್ತು ಮುನಿರತ್ನ ಕೆಲವು ನಾಯಕರನ್ನು ಭೇಟಿ ಮಾಡಿ ಮತ್ತೆ ಪಕ್ಷಕ್ಕೆ ಬರುತ್ತೇವೆ ಎಂದು ಹೇಳಿ ಕಳಿಸಿದರು. ಪಕ್ಷಕ್ಕೆ, ಜನರಿಗೆ ಮೋಸ ಮಾಡಿದವರನ್ನು, ಬೆನ್ನಿಗೆ ಚೂರಿ ಹಾಕಿದವರನ್ನು ಹೇಗೆ ಹತ್ತಿರ ಸೇರಿಸಿಕೊಳ್ಳುವುದು ಅಂತಲೇ ಬರುವುದು ಬೇಡ ಎಂದೆವು.

ಇಂತಹ ಅನರ್ಹ ಶಾಸಕರನ್ನು ಬಿಜೆಪಿ ಸೇರಿಸಿಕೊಂಡು ಸ್ಪರ್ಧೆಗೆ ಇಳಿಯುವಂತೆ ಮಾಡಿದೆ. ಅನರ್ಹರ ಸೋಲು ಖಚಿತ. ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಡಿಸೆಂಬರ್ 9ರ ನಂತರ ರಾಜ್ಯದಲ್ಲಿ ಬದಲಾವಣೆ ಸಂಭವಿಸಲಿದೆ ಎಂದು ತಿಳಿಸಿದರು.

ವಿಶ್ವ ಅಂಗವಿಕಲರ ದಿನಾಚರಣೆ; ಜಿಲ್ಲಾಧಿಕಾರಿ ಹೇಳಿದ್ದೇನು?

ವಿಕಲಚೇತನರು ತಮ್ಮ ಸಾಮರ್ಥ್ಯ ದಲ್ಲಿ ಸಾಮಾನ್ಯರಿಗಿಂತ ಏನು ಕಡಿಮೆಯಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ನುಡಿದರು.

ಜಿಲ್ಲಾ ಬಾಲಭವನದಲ್ಲಿಂದು ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ದಿವ್ಯಾಂಗ ಚೈತನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದ ಜನಸಂಖ್ಯೆಯಲ್ಲಿ ಶೇ.3ರಷ್ಟು ಅಂಗವಿಕಲರಿದ್ದು, ಎಲ್ಲರನ್ನೊಳಗೊಂಡಂತೆ ಅಭಿವೃದ್ಧಿಪಡಿಸುವುದು ಸರ್ಕಾರದ ಆಶಯವಾಗಿದೆ ಎಂದರು.

ಈ ನಿಟ್ಟಿನಲ್ಲಿ ಸರ್ಕಾರವು ವಿಕಲಚೇತನರ ನ್ಯೂನ್ಯತೆಗಳನ್ನು ಹಂತಹಂತವಾಗಿ ಸರಿಪಡಿಸುತ್ತಾ ಬಂದಿದೆ. ವಿಕಲಚೇತನರಿಗೆಂದು ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಸ್ಥಳೀಯ ಸಂಸ್ಥೆಗಳಲ್ಲಿ ಪರಿಣಾಮಕಾರಿಯಾಗಿ ಅರ್ಹರಿಗೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಅಂಗವಿಕಲರು ಪ್ರತಿನಿತ್ಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಂಗವಿಕಲರಿಗೆ ತಮ್ಮದೇ ಆದ ಸಾಮಥ್ರ್ಯವಿದ್ದು, ಅವರಿಗೆ ಸಾಮಥ್ರ್ಯ ಪ್ರದರ್ಶಿಸಲು ಅವಕಾಶ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆಯ ಅಧ್ಯಕ್ಷ ಗಂಗರಾಜು ಮಾತನಾಡಿ, ಜಿಲ್ಲೆಯಲ್ಲಿ 65 ಸಾವಿರ ಅಂಕವಿಕಲರಿದ್ದಾರೆ. ಅಂಗವಿಕಲರಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ ಗ್ರಾಮೀಣ ಪ್ರದೇಶದ ಅಂಗವಿಕಲರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇವರಿಗೆ ಯೋಜನೆಯ ಸೌಲಭ್ಯ ದೊರಕುವಂತಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿರುವ ವಿವಿಧ ವಿಕಲಚೇತನ ಶಾಲೆಯ ಪ್ರತಿಭಾವಂತ ಮಕ್ಕಳು ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವವರಿಗೆ ಸನ್ಮಾನ ಮಾಡಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್. ಚಂದ್ರಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್. ನಟರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ರುದ್ರಪ್ಪ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎಂ. ರಮೇಶ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹುಚ್ಚಯ್ಯ, ಚಂದ್ರಶೇಖರ್, ಗಾಯತ್ರಿ, ಜಿಲ್ಲೆಯಲ್ಲಿರುವ ವಿವಿಧ ಅಂಗವಿಕಲ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರೈತರ ಕೈ ಹಿಡಿಯುತ್ತಾ ತುಮಕೂರು ಸ್ಮಾರ್ಟ್ ಸಿಟಿ?

publicstory.in team

ತುಮಕೂರು: ನಗರ ಜನರಿಗಷ್ಟೇ ಅಲ್ಲದೇ ರಾಜ್ಯದ ಅದರಲ್ಲೂ ಜಿಲ್ಲೆಯ ರೈತರಿಗೆ ಬೆನ್ನೆಲುಬಾಗಿ ನಿಲ್ಲುವತ್ತ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಹೆಜ್ಜೆ ಇಟ್ಟಿರುವುದು ಇಡೀ ದೇಶವೇ ಇತ್ತ ತಿರುಗಿ ನೋಡುವಂತಾಗಿದೆ. ಇದಕ್ಕಾಗಿ ಗಾಂಧಿಯನ್ ಆರ್ಥಿಕತೆ ಮಾರ್ಗ ಆಯ್ದುಕೊಂಡು ಎಲ್ಲರೂ ಹುಬ್ಬೇರುವಂತೆ ಮಾಡಿದೆ.

ಸ್ಮಾರ್ಟ್ ಸಿಟಿ ತುಮಕೂರು ನಗರ ವ್ಯಾಪ್ತಿಗಷ್ಟೇ ಅನುಷ್ಠಾನ ಆಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಆದರೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಈ ಹಿಂದೆ ಜಿ.ಎಸ್.ಲೋಕಸಭಾ ಸದಸ್ಯರಾಗಿದ್ದಾಗ ಚಿಗುರೊಡೆದಿದ್ದ ಆರ್ಟಿಜನ್ ಹಬ್ ಕಲ್ಪನೆಗೆ ಇದೀಗ ಸ್ಕಿಲ್ ಪಾರ್ಕ್ ಹೆಸರಿನಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದೆ.

ಈ ಸಂಬಂಧ ಡಿಸೆಂಬರ್ 5ರಂದು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಪ್ರಾಥಮಿಕ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಈ ಸಭೆ ಆಯೋಜಿಸಿರುವುದು ಗಮನಕ್ಕೆ ಬರುತ್ತಿದ್ದಂತೆ ಈ ಸಭೆಗೆ ತಾವು ಬರುವುದಾಗಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷರೂ ಆಗಿರುವ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದು, ಸಭೆಗೆ ಮತ್ತಷ್ಟು ಬಲಬಂದಂತಾಗಿದೆ. ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಸೇರಿದಂತೆ ಸ್ಮಾರ್ಟ್ ಸಿಟಿಯ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

ಜಾಗತೀಕರಣ, ಉದಾರೀಕರಣ, ಮುಕ್ತ ವ್ಯಾಪಾರದ ಪೈಪೋಟಿಗೆ ಸಿಲುಕಿ ಭಾರತೀಯ ರೈತರು ಬಸವಳಿದಿದ್ದಾರೆ. ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಪ್ರಧಾನಿ ನರೇಂದ್ರಮೋದಿ ಕನಸಿಗೆ ಕೈಜೋಡಿಸುವ ಸಲುವಾಗಿ ಅದನ್ನು ಮಾದರಿಯಾಗಿ ಅನುಷ್ಠಾನಕ್ಕೆ ತುರುವ ನಿಟ್ಟಿನಲ್ಲಿ ಗಾಂಧಿಯನ್ ಮಾರ್ಗದತ್ತ ತುಮಕೂರು ಸ್ಮಾರ್ಟ್ ಸಿಟಿ ಹೆಜ್ಜೆ ಇಟ್ಟಿರುವುದು ಅಚ್ಚರಿಯಾಗಿದೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಸ್ಕಿಲ್ ಪಾರ್ಕ್ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸಭೆಗಳನ್ನು ಸಂಸದ ಜಿ.ಎಸ್.,ಬಸವರಾಜ್ ನಡೆಸಿದ್ದಾರೆ. ದಿಶಾ ಸಮಿತಿಯಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ತುಮಕೂರು ನಗರ ಸುತ್ತಮುತ್ತಲಿನ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಗುರುತಿಸುವ ಕೆಲಸವೂ ನಡೆದಿದೆ.

ಸಂಸದರ ಕನಸಿಗೆ ಕೈ ಜೋಡಿಸಿದ ನಗರ ಶಾಸಕರು



ಸಂಸದ ಜಿ.ಎಸ್.ಬಸವರಾಜ್ ಕನಸಿಗೆ ತುಮಕೂರು ನಗರ ಕ್ಷೇತ್ರದ ಶಾಸಕರಾದ ಜ್ಯೋತಿಗಣೇಶ್ ಸಹ ಕೈ ಜೋಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ನೀಡಿರುವ ಹಣದ ಜತೆಗೆ ಹೆಚ್ಚುವರಿಯಾಗಿ ವಿಶೇಷ ಅನುದಾನ ನೀಡುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರದ ಕಾರ್ಯದರ್ಶಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈಗಾಗಲೇ ಸ್ಕಿಲ್ ಸಿಟಿಗೆ ಪೂರಕವಾಗಿ ಕೆ-ಟೆಕ್ ಯೋಜನೆಯಡಿ 7 ಕೋಟಿ ರೂಪಾಯಿ ಅನುದಾನ ನಗರಕ್ಕೆ ಮಂಜೂರಾಗಿದೆ. ಈ ಅನುದಾನದಲ್ಲಿ ಹರಿಯಾಣದಲ್ಲಿರುವ ನೆಫ್ಟೆಂ ವಿಶ್ವವಿದ್ಯಾಲಯದ ಮಾದರಿಯಲ್ಲಿ ತುಮಕೂರು ನಗರದಲ್ಲೂ ಅಗ್ರೋ ಬೇಸ್ಡ್ ವಿಶ್ವವಿದ್ಯಾಲಯ ಸ್ಥಾಪನೆಗೆ ಆಸಕ್ತಿವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಸ್ಕಿಲ್ ಪಾರ್ಕ್: ಸ್ಮಾರ್ಟ್ ಸಿಟಿ ಇರುವುದು ತುಮಕೂರು ನಗರಕ್ಕೆ. ಇವರಿಗೂ ರೈತರಿಗೆ ಏನ್ನಪ್ಪ ಸಂಬಂಧ ಎಂದು ಹುಬ್ಬೇರಿಸುವಂತಿಲ್ಲ. ರೈತರಿಗಾಗಿ ಸ್ಮಾರ್ಟ್ ಸಿಟಿ ಲಿಮಿಟೆಡ್ 20 ಕೋಟಿ ರೂಪಾಯಿಯನ್ನು ತೆಗೆದಿರಿಸಿದೆ. ಈ ಹಣದಲ್ಲಿ ಸ್ಕಿಲ್ ಸಿಟಿ ನಿರ್ಮಾಣ ಮಾಡುತ್ತಿದೆ. ಈ ಸ್ಕಿಲ್ ಸಿಟಿಯಲ್ಲಿ ಕೃಷಿ, ಹೈನೋದ್ಯಮ, ಗುಡಿ ಕೈಗಾರಿಕೆಗೆ ಸಂಬಂಧಿಸಿದಂತೆ 340 ಇನ್ನೋವೇಷನ್ (ಸಂಶೋಧನಾ ಕೇಂದ್ರಗಳನ್ನು) ಹಬ್ ಗಳನ್ನು ಸ್ಥಾಪಿಸಲಿದೆ.

ಇದಕ್ಕಾಗಿ ಈಗಾಗಲೇ ರಾಜ್ಯದ ವಿವಿಧ ಕಡೆಗಳಿಂದ ಕೃಷಿ ತಜ್ಞರಿಂದ, ಸಾಮಾಜಿಕ ಕಾಳಜ ಉಳ್ಳವರಿಂದ, ವ್ಯಾಪಾರಿಗಳಿಂದ, ಉದ್ಯಮಿಗಳಿಂದ ಪಟ್ಟಿಯನ್ನು ತರಿಸಿಕೊಳ್ಳಲಾಗಿದೆ. ನೂರಾರು ವಿಧಧ ಕೃಷಿಗೆ ಸಂಬಂಧಿಸಿದ ಬೆಳೆಗಳ ಪಟ್ಟಿ ಇದ್ದಿದ್ದು, ಅಂತಿಮವಾಗಿ 342 ಆಹಾರ ಧಾನ್ಯ, ಹೈನೋದ್ಯಮ, ತೋಟಗಾರಿಕೆ ಉತ್ಪನ್ನಗಳ ಪಟ್ಟಿ ತಯಾರಿಸಿ ಈ ಎಲ್ಲವುಗಳಿಗೆ ಪ್ರತ್ಯೇಕವಾಗಿ ಒಂದೊಂದು ಸಂಶೋಧನಾ ಕೇಂದ್ರಗಳನ್ನು ಸ್ಕಿಲ್ ಸಿಟಿಯಲ್ಲಿ ಸ್ಥಾಪಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಪಬ್ಲಿಕ್ ಸ್ಟೋರಿ.ಇನ್ ಗೆ ತಿಳಿಸಿದರು.

ಈ 342 ಉತ್ಪನ್ನಗಳನ್ನು ಆಧರಿಸಿ ಸ್ಥಾಪನೆಯಾಗುವ ಸಂಶೋಧನಾ ಕೇಂದ್ರಗಳು ಈ ಉತ್ಪನ್ನಗಳ ಬೆಳೆ, ವೈಜ್ಞಾನಿಕ ಮಾಹಿತಿ, ಮಾರುಕಟ್ಟೆ, ರಫ್ತೋದ್ಯಮ, ಮೌಲ್ಯವರ್ಧನೆ ಮಾಡುವ ಬಗ್ಗೆ ಸಂಶೋಧನೆ ಮಾಡುತ್ತವೆ. ಪ್ರತಿ ಕೇಂದ್ರಗಳನ್ನು ಆಸಕ್ತ ರೈತರ ಗುಂಪುಗಳನ್ನು ರಚಿಸಿಕೊಂಡು ಆಯಾ ಉತ್ಪನ್ನಗಳನ್ನು ಬೆಳೆಸಿ ಅವುಗಳನ್ನೇ ಮೌಲ್ಯವರ್ಧನೆ ಮಾಡಿ ದೇಶಿ ಹಾಗೂ ವಿದೇಶಿ ಮಾರುಕಟ್ಟೆಯನ್ನು ಹಿಡಿಯಲು ರೈತರಿಗೆ ನೇರವಾಗಿ ನೆರವಾಗಲಿವೆ. ಈ ಕಲ್ಪನೆಯಲ್ಲಿ ಪ್ರತಿ ರೈತನು ಉದ್ಯಮಿಯೂ ಆಗಿರುತ್ತಾನೆ. ರೈತರ ಆದಾಯ ದುಪ್ಪಟ್ಟಿಗಿಂತಲೂ ಹೆಚ್ಚಾಗಲಿದೆ ಎಂದು ಅವರು ವಿವರಿಸಿದರು.

ದೇಶದಲ್ಲೇ ಮೊದಲ ಕಲ್ಪನೆ: ಸ್ಮಾರ್ಟ್ ಸಿಟಿಯ ಹಣವನ್ನು ಬಳಸಿಕೊಂಡು ರೈತರ ಆದಾಯ ದುಪ್ಪಟ್ಟು ಮಾಡುವ ಯೋಜನೆ ದೇಶದಲ್ಲೇ ಇದೇ ಮೊದಲಾಗಿದ್ದು, ಇದೇ ದೇಶವೇ ಇತ್ತ ತಿರುಗಿನೋಡಲಿದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಯೋಜನೆ ಜಾರಿಯಾದ್ದಲ್ಲಿ ತುಮಕೂರು ನಗರದ ಹಾಗೂ ನಗರ ಸುತ್ತಮುತ್ತಲ ರೈತರಿಗೆ ಹೆಚ್ಚು ಅನುಕೂಲ ಸಿಗಲಿದೆ., ರಫ್ತೋದ್ಯಮದಿಂದ ಹಿಂದೆ ಬಿದ್ದಿರುವ ಜಿಲ್ಲೆ ಕೃಷಿ ಉತ್ಪನ್ನಗಳ ರಫ್ತೋದ್ಯಮದಲ್ಲಿ ಹೊಸ ಮೈಲುಗಲ್ಲು ಸಹ ಸಾಧಿಸಲಿದೆ. ಇದರಿಂದಾಗಿ ಇಡೀ ಜಿಲ್ಲೆಯ ಚಿತ್ರಣವೇ ಬದಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅತೀವ ಆಸಕ್ತಿ ತಳೆದ ಶಾಲಿನಿ ರಜನೀಶ್



ಸ್ಮಾರ್ಟ್ ಸಿಟಿ ಯೋಜನೆಯ ಮೂಲಕವೇ ತುಮಕೂರು ಜಿಲ್ಲೆಯನ್ನು ದೇಶದ ನಂ-1 ಕೃಷಿ ರಫ್ತೋಧ್ಯಮ ಜಿಲ್ಲೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷರಾಗಿ ಶಾಲಿನಿ ರಜನೀಶ್ ತುಂಬಾ ಉತ್ಸುಕತೆ ತೋರಿದ್ದಾರೆ, ಇದಕ್ಕಾಗಿ ಅವರು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಇದು ಸಂಸದ ಜಿ.ಎಸ್.ಬಸವರಾಜ್ ಅವರ ಕನಸು ಸಹ ಆಗಿದೆ ಎಂದು ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಪಬ್ಲಿಕ್ ಸ್ಟೊರಿ.ಇನ್ ಗೆ ತಿಳಿಸಿದರು.
ಈ ನಿಟ್ಟಿನಲ್ಲಿ ಅಧಿಕಾರಿಗಳ ಹಂತದ ಪ್ರಾಥಮಿಕ ಮಟ್ಟದ ಸಭೆಯನ್ನು ಡಿಸೆಂಬರ್ 5ರಂದು ಕರೆಯಲಾಗಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ತಾವೂ ಬರುವುದಾಗಿ ಶಾಲಿನಿ ರಜನೀಶ್ ತಿಳಿಸಿದ್ದಾರೆ. ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿರುವುದೇ ಇದಕ್ಕೆ ಕಾರಣ ಎಂದು ರಮೇಶ್ ತಿಳಿಸಿದರು.

ತುಮಕೂರು ದಿಗಂಬರ ಜೈನ ಸಂಘ ಚುನಾವಣೆ: ಮುಂದುವರೆದ ತಡೆಯಾಜ್ಞೆ

ತುಮಕೂರು: ತುಮಕೂರು ಶ್ರೀ ದಿಗಂಬರ ಜೈನ ಶ್ರೀ ಪಾಶ್ವನಾಥ ಜಿನಮಂದಿರ ಸಂಘದ ಚುನಾವಣೆ ಫಲಿತಾಂಶ ಪ್ರಕಟಿಸಿದಂತೆ ನೀಡಿರುವ ತಾತ್ಕಾಲಿಕ ತಡೆಯಾಜ್ಞೆಯನ್ನು ಮುಂದುವರೆಸಿ ತುಮಕೂರು ಎರಡನೇ ಅಧಿಕ ಸಿವಿಲ್ ನ್ಯಾಯಾಲಯ ಸೋಮವಾರ ಆದೇಶಿಸಿತು.

ಸಂಘಕ್ಕೆ ನಡೆದಿದ್ದ ಚುನಾವಣೆಯು ಕಾನೂನುಬಾಹಿರವಾಗಿದ್ದು, ಎಲ್ಲ ಸದದ್ಯರಿಗೆ ಮತದಾನದ ಹಕ್ಕು ನೀಡಿಲ್ಲ. ಸಂಘದ ಬೈಲಾದಂತೆ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾದಿಕಾರಿ ಮಾಡಿಲ್ಲ. ಚುನಾವಣೆ ಅಧಿಸೂಚನೆಯನ್ನು ಸಂಘದ ಬೈಲಾದ ನಿಯಮ ಉಲ್ಲಂಘಿಸಿ ಮಾಡಲಾಗಿದೆ. ಹೀಗಾಗಿ ಚುನಾವಣೆಗೆ ತಡೆ ನೀಡುವಂತೆ ಪಚ್ಚೇಶ್ ಜೈನ್ ಸೇರಿ 32 ಮಂದಿ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಮೊದಲು ಒಂದನೇ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅಲ್ಲಿಯೂ ಫಲಿತಾಂಶ ಪ್ರಕಟಿಸದಂತೆ ತಡೆಯಾಜ್ಞೆ ನೀಡಲಾಗಿತ್ತು. ಪ್ರಕರಣವು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಗಳು ವಾದ ಒಪ್ಪಿದ ನ್ಯಾಯಾಲಯವು ಕೆಳ ನ್ಯಾಯಾಲಯಕ್ಕೆ ವಾದಪತ್ರವನ್ನು ವಾಪಸ್ ಕಳುಹಿಸಿತ್ತು. ವಿಚಾರಣೆ ನಡೆಸಿದ ಕೆಳ ನ್ಯಾಯಾಲಯವೂ ಸಹ ಮೇಲಿನ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಮುಂದುವರೆಸಿದೆ.

ಪಚ್ಚೇನ್ ಜೈನ್ ಪರವಾಗಿ ವಕೀಲರಾದ ಎಸ್,ರಮೇಶ್, ಮಹಾವೀರ ಜೈನ್, ಸಿ.ಕೆ.ಮಹೇಂದ್ರ ವಕಾಲತ್ತು ವಹಿಸಿದ್ದಾರೆ.
ಸಂಘದ ಈ ಹಿಂದಿನ ಆಡಳಿತ ಮಂಡಳಿಯ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂಬ ಕಾರಣದಿಂದ ಸಂಘವನ್ನು ರಾಜ್ಯ ಸರ್ಕಾರವು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ನೋಂದಾಣಿಕಾರಿ ಅವರನ್ನು ನೇಮಕ ಮಾಡಿದೆ.

Publicstory.in

ಸ್ಕಂದ ಷಷ್ಠಿ; ನಾಗಲಮಡಿಕೆಯಲ್ಲಿ ವಿಶೇಷ ಪೂಜೆ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಸ್ಕಂದ ಷಷ್ಠಿ ಪ್ರಯುಕ್ತ ಸೋಮವಾರ ಅಲಂಕಾರಾದಿ ವಿಶೇಷ ಪೂಜೆ ಸಾಂಗೋಪಾಂಗವಾಗಿ ನಡೆಯಿತು.

ಪಟ್ಟಣದ ಸಂತಾನ ವೇಣುಗೋಪಾಲಸ್ವಾಮಿ ದೇಗುಲದ ಆವರಣದಲ್ಲಿರುವ ಸುಬ್ರಹ್ಮಣ್ಯಸ್ವಾಮಿ ದೇಗುಲ, ತಾಲ್ಲೂಕಿನ ಕಣಿವೇನಹಳ್ಳಿ ಗೇಟ್ ಬಳಿಯ ಅಭಯ ಸುಬ್ರಹ್ಮಣ್ಯೇಶ್ವರ  ಸ್ವಾಮಿ ದೇಗುಲದಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸಿ ದರ್ಶನ ಪಡೆದರು.

ಅಂತ್ಯ ಸುಬ್ರಹ್ಮಣ್ಯ ಎಂದು ಪ್ರಸಿದ್ಧಿಯಾಗಿರುವ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ  ಬೆಳಗಿನ ಜಾವದಿಂದ ಏಕಾದಶ ರುಧ್ರಾಭಿಷೇಕ, ಸಹಸ್ರನಾಮಾರ್ಚನೆ, ಪ್ರಾಕಾರ ಉತ್ಸವಾದಿಗಳನ್ನು ನಡೆಸಲಾಯಿತು.

ಅನ್ನದ ರಾಶಿಯ ಮೇಲೆ ಉತ್ಸವ ಮೂರ್ತಿಯನ್ನು ಇರಿಸಿ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ದೇಗುಲ ಪ್ರಾಂಗಣ, ಅರಳೀ ಮರದ ಕೆಳಗೆ ಪ್ರತಿಷ್ಠಾಪಿಸಿರುವ ನಾಗರ ವಿಗ್ರಹಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು.

 

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆ ಮತ್ತೊಂದು ಆಘಾತ

ಮುಂಬೈ: ಬಿಜೆಪಿ ಪಕ್ಷದ ಪ್ರಮುಖ ನಾಯಕಿ ಗೋಪಿನಾಥ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ ಅವರು ಬಿಜೆಪಿ ತೊರೆಯುವ ಮುನ್ಸೂಚನೆ ನೀಡಿರುವುದು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮತ್ತೊಂದು ಪೆಟ್ಟು ಬಿದ್ದಿದೆ.

ಬಿಜೆಪಿ–ಶಿವಸೇನಾ ಸರ್ಕಾರದಲ್ಲಿ ಅವರು  ಮಂತ್ರಿಯಾಗಿದ್ದರು. ಪರ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ‘ನನ್ನ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಕಾಲ ಬಂದಿದೆ,’ ಎಂದು ಭಾನುವಾರವಷ್ಟೇ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದರು.  ಟ್ವಿಟರ್‌ ಖಾತೆ ಪ್ರೊಫೈಲ್‌ ಅಪ್ಡೇಟ್‌ ಮಾಡಿರುವ ಅವರು ಬಿಜೆಪಿಯ ಉಲ್ಲೇಖವನ್ನೇ ತೆಗೆದು ಹಾಕಿದ್ದಾರೆ.   ನೂತನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಅಭಿನಂದಿಸಿದ್ದಾರೆ.

‘ಮಹಾರಾಷ್ಟ್ರದಲ್ಲಿನ ರಾಜಕೀಯ ಸ್ಥಿತ್ಯಂತರಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ದಾರಿಯ ಕುರಿತು ನಿರ್ಧಾರಗಳನ್ನು ಕೈಗೊಳ್ಳುವ ಸಮಯ ಬಂದಿದೆ. ನನ್ನ ನಿರ್ಧಾರಗಳ ಬಗ್ಗೆ ಮಾತನಾಡಲು ನನಗೆ 8 ರಿಂದ10 ದಿನಗಳ ಸಮಯಾವಕಾಶ ಬೇಕು.  ಮುಂದೆ ಏನು ಮಾಡಬೇಕು, ಯಾವ ದಾರಿ ಆಯ್ಕೆ ಮಾಡಿಕೊಳ್ಳಬೇಕು, ಜನರಿಗೆ ನಾವೇನು ಕೊಡಬಹುದು, ನಮ್ಮ ಬಲವೇನು, ಜನರ ನಿರೀಕ್ಷೆಗಳೇನು ಎಂಬುದರ ಬಗ್ಗೆ ಗಂಭೀರವಾಗಿ ಯೋಚಿಸಿ ಡಿ.12ರಂದು ನಿಮ್ಮ ಮುಂದೆ ಬರಲಿದ್ದೇನೆ,’ ಎಂದು ಅವರು ಭಾನುವಾರ ಬರೆದಿದ್ದರು.

ಡಿ.12 ಮಾಜಿ ಸಚಿವ ಗೋಪಿನಾಥ್‌ ಮುಂಡೆ ಜನ್ಮದಿನಾಚರಣೆಯಾಗಿದ್ದು, ಅಂದು ಬೀದ್‌ ಜಿಲ್ಲೆಯಯಲ್ಲಿರುವ ಗೋಪಿನಾಥ್‌ ಮುಂಡೆ ಅವರ ಸ್ಮಾರಕ ಗೋಪಿನಾಥಗಢದಲ್ಲಿ ಪಂಕಜಾ ಬೆಂಬಲಿಗರ ಸಭೆ ಕರೆದಿದ್ದಾರೆ. ಬಹುತೇಕ ಅಲ್ಲಿ ಅವರು ತಮ್ಮ ಮುಂದಿನ ನಡೆಯ ಕುರಿತು ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹೀಗಾಗಿ ಪಂಕಜಾ ಮುಂಡೆ ಅವರ ನಿರ್ಧಾರದ ಬಗ್ಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮನೆ ಮಾಡಿದ್ದು, ಅದೇ ಹೊತ್ತಲ್ಲೇ ಬಿಜೆಪಿಗೆ ಆತಂಕವನ್ನೂ ಉಂಟು ಮಾಡಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಪಕ್ಷದ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌, ‘ಪಂಕಜಾ ಮುಂಡೆ ಅವರು ಪಕ್ಷ ಬಿಡುವ ಕುರಿತ ವರದಿಗಳು ಆಧಾರ ರಹಿತ,’ ಎಂದು ಹೇಳಿದ್ದಾರೆ.

 

ನಮಿತಾ ಮತ್ತೆ ಪಕ್ಷ ಬದಲಿಸಿದರಾ?

0

ಚೆನ್ನೈದಕ್ಷಿಣ ಭಾರತದಪ್ರಮುಖ ಸಿನಿಮಾ ನಟಿ ನಮಿತಾ ಬಿಜೆಪಿಯ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.

ಸೇರಿದ ನಮಿತಾ ಕಳೆದೊಂದು ವರ್ಷದಿಂದ ಎಐಎಡಿಎಂಕೆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಆ ಪಕ್ಷವನ್ನು ಬಿಟ್ಟು ಬಿಜೆಪಿ ಸೇರುವ ಮೂಲಕ ಸಕ್ರಿಯವಾಗಿ ರಾಜಕೀಯದಲ್ಲಿರುವುದಾಗಿ ನಮಿತಾ ಹೇಳಿಕೊಂಡಿದ್ದಾರೆ.

ನಮಿತಾ ತೆಲುಗು, ತಮಿಳು, ಕನ್ನಡ ಮತ್ತು ಮಲೆಯಾಳಂ ಚಿತ್ರಗಳಲ್ಲಿ ಮಿಂಚಿದ್ದರು.  ಕನ್ನಡದಲ್ಲಿ ‘ನೀಲಕಂಠ’, ‘ಹೂ’, ‘ನಮಿತಾ ಐ ಲವ್ ಯು’ ಚಿತ್ರಗಳ ಮೂಲಕ ಯುವಕರ ನಿದ್ದೆಕೆಡಿಸಿದ್ದರು.

ಕೆಲ ವರ್ಷಗಳ ಕಾಲ ಚಲನಚಿತ್ರ ರಂಗದಿಂದ ದೂರವಿದ್ದ ಅವರು 2016ರಲ್ಲಿ   ‘ಪುಲಿಮುರುಗನ್’ ಚಿತ್ರದ ಮೂಲಕ ಮತ್ತೆ ಮಿಂಚು ಹರಿಸಿದ್ದರು.

ತಮಿಳುನಾಡಿನ ಕೊಯಮತ್ತೂರು ಸಮೀಪ ಅಭಿಮಾನಿಗಳು ನಮಿತಾ ಅವರಿಗೆ ದೇಗುಲವನ್ನೇ ಕಟ್ಟಿಸಿದ್ದಾರೆ.

ಬ್ಯಾಲದಲ್ಲಿ ಕನ್ನಡ ಕಲರವ

Public story.in

ಮಧುಗಿರಿ : ಕನ್ನಡದ ಬಗೆಗಿನ ಅಭಿಮಾನ ಮತ್ತು ಉತ್ಸಾಹವು ಕೇವಲ ಬಾಯಿ ಮಾತಿನದ್ದಾಗಿರಬಾರದು ದಿನನಿತ್ಯದ ನಡೆನುಡಿಯಲ್ಲಿ ನೈಜ ಕನ್ನಡತನ ಹೊರಹೊಮ್ಮಬೇಕು ಎಂದು ಹಿರಿಯ ಲೇಖಕಿ ಸಿ.ಎ.ಇಂದಿರಾ ತಿಳಿಸಿದರು.

ತಾಲೂಕಿನ ಬ್ಯಾಲ್ಯ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಧುಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮೀನಾಕ್ಷಮ್ಮ ಭೀಮಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಭಾಷೆ ಕನ್ನಡತನದ ಜೊತೆಗೆ ಕನ್ನಡದ ಗುಣಗಳನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಕನ್ನಡವನ್ನು ಉಳಿಸಿಕೊಳ್ಳುವ ಬಹುದೊಡ್ಡ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಮ.ಲ.ಮೂರ್ತಿ ಅವರು ಮಾತನಾಡಿ ಕನ್ನಡದ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಈ ಇತಿಹಾಸಕ್ಕೆ ದಕ್ಕೆ ಬಾರದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ಇತಿಹಾಸವನ್ನು ಕೇವಲ ನೆನಪು ಮಾಡಿಕೊಂಡು ಸಂಭ್ರಮಿಸಿದರೆ ಸಾಲದು ಕನ್ನಡಕ್ಕಾಗಿ ಎಲ್ಲ ರೀತಿಯಿಂದಲೂ ಎಲ್ಲರೂ ಶ್ರಮಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷೆ ಬ.ಹ.ರಮಾಕುಮಾರಿ ಮಾತನಾಡಿ ಕನ್ನಡ ಕೇವಲ ಭಾಷೆಯಲ್ಲ ಅದು ಉಸಿರಾಗಬೇಕು. ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ದಕ್ಕೆ ಉಂಟಾದಾಗ ಎಂಥಹ ತ್ಯಾಗಕ್ಕೂ ಸಿದ್ದರಾಗಿಬೇಕು ಎಂದರು
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿ ಕನ್ನಡ ಭಾಷೆ ಸಾಹಿತ್ಯಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ಸರೋಜಿನನಿಮಹಿಷಿ ಅವರು ಕನ್ನಡದ ಅಭಿವೃದ್ದಿಗೆ ನೀಡಿದ ವರದಿಯನ್ನು ಸರ್ಕಾರ ಯಥಾವತ್ತಾಗಿ ಜಾರಿಗೆ ತರಲಿ ಎಂದರು.

ಸಮಾರಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಹೆಚ್.ಡಿ.ನರಸೇಗೌಡ ಉಪಪ್ರಾಂಶುಪಾಲ ಬಿ.ಟಿ.ಆಶ್ವತ್ಥಯ್ಯ, ದತ್ತಿದಾನಿ ಬಿ.ಸನತ್‍ಕುಮಾರ್‍ಗುಪ್ತ, ಮುಖಂಡ ವರದರಾಜು ಮಾತನಾಡಿದರು. ದಾನಿಗಳಾದ ಬಿ.ರಾಧಾಕೃಷ್ಣಶೆಟ್ಟಿ, ಬಿ.ಆರ್.ರಾಜಜಶೇಖರ್, ದೇವರಾಜು, ಕಾಮರಾಜ್, ಶಿಕ್ಷಕ ದೊಡ್ಡನಾಗಪ್ಪ, ವಿನುತಾ ಮತ್ತು ಹರ್ಶಿತಾ ಮುಂತಾದವರು ಉಪಸ್ಥಿತರಿದರು.

ಪುರವರದಲ್ಲಿ ಬಲಿಜ‌ ಸಂಘ ಅಸ್ತಿತ್ವಕ್ಕೆ

  • Publicstory.in
  • ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದಲ್ಲಿ ಶ್ರೀಯೋಗಿನಾರಾಯಣ ಯತೀಂದ್ರರ ಜಯಂತೋತ್ಸವದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು

ಮಧುಗಿರಿ ;- ಹಿಂದುಳಿದ ವರ್ಗಗಳ ಸಣ್ಣ ಸಮುದಾಯಗಳು ಒಗ್ಗೂಡಿದರೆ ನಿರ್ಣಾಯಕವಾದ ಪಲಿತಾಂಶ ಹೊರತರಬಹುದು ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಅಂಜಿನಪ್ಪ ತಿಳಿಸಿದರು.

ತಾಲ್ಲೂಕಿನ ಬ್ಯಾಲ್ಯ ಗ್ರಾಮದಲ್ಲಿ ಪುರವರ ಹೋಬಳಿ ಯೋಗಿ ನಾರಾಯಣ ಬಲಿಜ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಯೋಗಿನಾರಾಯಣ ಯತೀಂದ್ರರ ಜಯಂತೋತ್ಸವ ಮತ್ತು ಪುರವರ ಹೋಬಳಿ ಬಲಿಜ ಸಂಘದ ಉದ್ಘಾಟನೆಯನ್ನು ನೆರವೇರಸಿ ಮಾತನಾಡಿದ ಅವರು, ಸಣ್ಣ ಸಮುದಾಯಗಳು ಒಗ್ಗಟ್ಟಾದಾಗ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುನ್ನಡೆ ಸಾಧಿಸಬಹುದು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು ಎಂದರು.

ಉಳಿತಾಯ ಮಾಡುವ ಮೂಲಕ ಸಹಕಾರ ಸಂಘಗಳನ್ನು ರಚಿಸಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸಿ ಎಂದ ಅವರು ಹೇಳಿದರು.

ಸಮುದಾಯದ ನಾಯಕರುಗಳಾದ ಎಂ.ಆರ್.ಸೀತಾರಾಂ ಹಾಗೂ ಎಂ.ಆರ್.ಜಯರಾಂ ತಮ್ಮ ಸ್ಥಾನಮಾನಗಳನ್ನು ಮರೆತು ಹಳ್ಳಿಗಳಿಗೆ ಸಾಮಾನ್ಯರಂತೆ ಭೇಟಿ ನೀಡಿ ತಾತಯ್ಯನವರ ತತ್ವ ಆದರ್ಶಗಳ ಪ್ರಚಾರ ಮಾಡುತ್ತಿದ್ದಾರೆ.

ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ ಮಾತನಾಡಿ, ತಾಲ್ಲೂಕಿನಲ್ಲಿ ನಮ್ಮ ಸಮಾಜವನ್ನು ಒಗ್ಗೂಡಿಸಲು ಹಾಗೂ ಸಂಘಟಿಸಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜದ ಮುಖಂಡರುಗಳು ಒಗ್ಗಟ್ಟಾಗಿ ಜನಾಂಗದ ಏಳಿಗೆಗೆ ಶ್ರಮಿಸಬೇಕು ಎಂದರು.

ಜಿಲ್ಲಾ ಬಲಿಜ ಸಂಘದ ಕಾರ್ಯದರ್ಶಿ ಟಿ.ಆರ್.ಹೆಚ್.ಪ್ರಕಾಶ್ ಮಾತನಾಡಿ, ಪ್ರತಿಯೊಬ್ಬ ಬಲಿಜನು ಕೈವಾರ ಕ್ಷೇತ್ರ ಯಾತ್ರೆ ಕೈಗೊಂಡು ತಾತಯ್ಯನವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್, ತೆಂಗು ನಾರು ಅಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ವೆಂಕಟಾಚಲಯ್ಯ, ಸಾಹಿತಿಗಳಾದ ಎಂ.ಡಿ.ಶ್ರೀನಿವಾಸ್, ಕೇಶವರೆಡ್ಡಿ ಹಂದ್ರಾಳು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತುಮಕೂರಿನಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕಟ್ಟಲಾಗುವುದು.

ಆಂಜಿನಪ್ಪ, ಅಧ್ಯಕ್ಷರು

ಕೊರಟಗೆರೆ ಬಲಿಜ ಸಂಘದ ಅಧ್ಯಕ್ಷ ಎನ್.ಪದ್ಮನಾಭ, ಕಾರ್ಯದರ್ಶಿ ಮಯೂರ ಗೋವಿಂದರಾಜು, ಸಮುದಾಯದ ಮುಖಂಡರುಗಳಾದ ಆರ್.ಎಲ್.ಎಸ್.ರಮೇಶ್, ಹೆಚ್.ಎಂ.ಟಿ.ಜಯರಾಂ, ಎಸ್.ಬಿ.ಟಿ.ರಾಮು, ಶಿವಕುಮಾರ್, ಟಿ.ಎನ್.ಶ್ರೀರಾಮಯ್ಯ, ಆಡಿಟರ್ ಗುರುಲಿಂಗಯ್ಯ, ಡಾ.ಎ.ರವಿ, ಆಶ್ವಥನಾರಾಯಣ್, ಹೆಬ್ಬೂರು ರಂಗಯ್ಯ, ಬಿ.ಎನ್.ಮೂರ್ತಿ, ನರಸಿಂಹಮೂರ್ತಿ , ಕೋಟೆ ಕೂಗು ಬಾಬು ಇದ್ದರು.

  • Publicstory.in

ಆಂಜನೇಯ ಜನಿಸಿದ ಈ ಸ್ಥಳದಲ್ಲಿ ಈಗಲೂ ಹನುಮಂತ ಕಾಣಿಸಿಕೊಳ್ಳುತ್ತಾನೆ

0

ಸುಮಿತ್ರಾ ‌ವಿನಯ್

ಇತಿಹಾಸ ಪ್ರಸಿದ್ಧ ಹಂಪಿ ನೋಡಿದವರು ಅಲ್ಲೇ ಸಮೀಪವಿರುವ ಆನೆಗೊಂದಿಗೂ ಹೋಗುವುದುಂಟು. ಕಾರಣ ಅಂಜನಾದ್ರಿ ಬೆಟ್ಟ.

ಇದು ಹನುಮಂತನ ಜನ್ಮಸ್ಥಳ ಎನ್ನುವ ನಂಬಿಕೆ ಇದೆ. ಅಂಜನಾ ದೇವಿ ಇಲ್ಲಿ ವಾಸವಾಗಿದ್ದಳು. ವಾಯುವಿನ ಸಂಗ ಬೆಳೆಸಿ, ಆಕೆಗೆ ಜನಿಸಿದವನೇ ಹನುಮಂತ. ಇದರ ಪ್ರತೀಕವಾಗಿ ಬಾಲ ಹನುಮ, ಅಂಜನಾದೇವಿಯ ಶಿಲ್ಪ ಇರುವ ದೇವಸ್ಥಾನ ಅಂಜನಾದ್ರಿ ಬೆಟ್ಟದ ಮೇಲಿದೆ.

ಆನೆಗೊಂದಿಯಿಂದ ಮುನಿರಾಬಾದ್‌ಗೆ ತೆರಳುವ ರಸ್ತೆಯಲ್ಲಿ ಸಾಗುವಾಗ ಬಲಬದಿಯಲ್ಲಿ ಈ ಅದ್ಭುತವಾದ ಬೆಟ್ಟವಿದ್ದು ಹನುಮನ ದರ್ಶನಕ್ಕಾಗಿ ದೇಶ ವಿದೇಶಗಳ ಭಕ್ತರು ಈಗಲು ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ.

ಮತ್ತೊಂದು ಹತ್ತಿರದ ಆಕರ್ಷಣೆ ಕಿಷ್ಕಿಂದಾ ರೆಸಾರ್ಟ್. ಗಂಗಾವತಿ ಮೂಲಕ ಕಿಷ್ಕಿಂದಾ ರೆಸಾರ್ಟ್ ಮಾರ್ಗದಲ್ಲಿ ಅಂಜನಾದ್ರಿ ಪರ್ವತವಿದೆ. ಇಲ್ಲಿ ಬರುವವರ ಸಂಖ್ಯೆ ವಿರಳ. ಬೆಟ್ಟದ ಮೇಲೆ ದೇವಾಲಯ ಕಾಣುತ್ತದೆ. ಮೆಟ್ಟಿಲುಗಳನ್ನೇರಿದರೆ ಮಾತ್ರ ಅಂಜನಾ ಪರ್ವತ ನೋಡಲು ಸಾಧ್ಯ.

ಅಂಜನಾದ್ರಿ ಪರ್ವತದ ಮೇಲೆ ಬರಲು ಕಡಿದಾದ ಬೆಟ್ಟದ ಮಧ್ಯದಲ್ಲಿ 575 ಮೆಟ್ಟಿಲುಗಳಿವೆ. ಈ ಮೆಟ್ಟಿಲುಗಳನ್ನೇರುವುದು ಒಂದು ಸಾಹಸವೇ ಸರಿ. ಕೆಲವೆಡೆ ಚಿಕ್ಕಪುಟ್ಟ ಮೆಟ್ಟಿಲುಗಳಿದ್ದರೆ ಇನ್ನು ಕೆಲವೆಡೆ ವಿಸ್ತಾರವಾದ ಮೆಟ್ಟಿಲುಗಳಿವೆ.

ಮತ್ತೊಂದೆಡೆ ಬಂಡೆಗಲ್ಲುಗಳ ನಡುವೆ ಬಾಗುತ್ತ ಮೆಟ್ಟಿಲು ಏರುತ್ತ ಸಂದುಗಳಲ್ಲಿ ತೂರಿ ಮೇಲೆ ಬರುವಂತೆ ಮೆಟ್ಟಿಲುಗಳು ಅಲ್ಲಲ್ಲಿ ಬೆಟ್ಟದಲ್ಲಿ ಜಿನುಗುವ ನೀರಿನ ಝರಿಗಳು ಸುತ್ತಲೂ ಹಸಿರುಟ್ಟ ನಿಸರ್ಗ ಇವುಗಳನ್ನೆಲ್ಲ ನೋಡುತ್ತ ಸಾಗಿ ಬೆಟ್ಟ ಏರಿದರೆ ಪೂರ್ಣ ಮೇಲ್ತುದಿಗೆ ಬಂದರೆ ಸಾಕು ಮೆಟ್ಟಿಲು ಏರಿರುವ ಆಯಾಸವೆಲ್ಲ ಪ್ರಕೃತಿ ಮಡಿಲಲ್ಲಿ ಮರೆತು ಹೋಗುತ್ತದೆ.

ಈ ಬೆಟ್ಟದಲ್ಲಿ ಸುಂದರ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಬಹುದು. ಹಂಪಿಗೆ ಭೇಟಿ ನೀಡುವಿರಾದರೆ ಕಿಷ್ಕಿಂದಾ, ಅಂಜನಾದ್ರಿ, ವಿರುಪಾಪುರಗಡ್ಡೆ, ನವಬೃಂದಾವನ, ಆನೆಗೊಂದಿ ಇವೇ ಮೊದಲಾದ ಐತಿಹಾಸಿಕ ಸ್ಥಳಗಳನ್ನು 30ಕಿಮೀ ಅಂತರದಲ್ಲಿ ನೋಡಿ ಬರಬಹುದು.

ಜೀವನದಲ್ಲಿ ಥ್ರಿಲ್ ಬಯಸುವ ಚಾರಣಿಗರು, ಸಾಹಸಿಗರು ದಿಲ್ ಖುಷ್ ಆಗಬೇಕೆಂದಿದ್ದರೆ ಒಮ್ಮೆಯಾದರೂ ಅಂಜನಾದ್ರಿ ಪರ್ವತಕ್ಕೆ ಬರಬೇಕು. ಈ ಪರ್ವತ ಕೇವಲ ಚಾರಣಕ್ಕಷ್ಟೇ ಸೀಮಿತವಾಗದೇ ಪುರಾಣದ ಐತಿಹ್ಯ ಹೊಂದಿದ್ದು, ರಾಮಾಯಣ ಕಾಲದ ಘಟನೆಗಳಿಗೆ ಸಾಕ್ಷಿಯಂತಿದೆ.

ರಾಮಾಯಣ ಕಾಲಕ್ಕೆ ವಾನರ ಸಹನುಮ ತಾಣವಾಗಿದ್ದ ಕಿಷ್ಕಿಂದಾ,ಅಂಜನಾದ್ರಿ ವಿರುಪಾಪುರದಡ್ಡಿ, ಹನುಮಾಪುರ, ಸನಾಪುರ, ತಿರುಮಲಾಪುರ ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡ ಅಂಜನಾದ್ರಿ ಪರ್ವತ ತಾಣವು ಆಂಜನೇಯನ ಜನ್ಮಸ್ಥಳವಾಗಿ ಪ್ರಸಿದ್ದ. ಇಲ್ಲಿ ಉದ್ಭವ ಆಂಜನೇಯ ವಿಗ್ರಹ ಪೂಜಿಸಲ್ಪಡುತ್ತಾನೆ.

ರಾಮಾಯಣದಲ್ಲಿ ಬರುವ ವಾನರರಾಜ ಕೇಸರಿ ಮತ್ತು ಅವನ ಪತ್ನಿ ಅಂಜನಾದೇವಿಯರ ಪುತ್ರ ಆಂಜನೇಯನ ಜನ್ಮಸ್ಥಳ ಈ ಅಂಜನಾದ್ರಿ ಬೆಟ್ಟ ಎಂದು ನಂಬಲಾಗಿದೆ.

ಬಹಳಷ್ಟು ಜನರು ಕಣ್ಣಿಗೆ ಕಂಡಂತೆ ಇಲ್ಲಿ ಹನುಮ ಈಗಲೂ ಇದ್ದಾನೆ ಎಂಬ ನಂಬಿಕೆಯಿದೆ, ಅಂಜನಾದ್ರಿ ಪರ್ವತದಲ್ಲಿ ಈಗಲೂ ಬೃಹದಾಕಾರದ ಒಂದು ಅತಿ ದೊಡ್ಡ ಕೋತಿ ವಾಸಿಸುತ್ತಿದ್ದು ಆಗಾಗ ಅಲ್ಲಿನ ಸ್ಥಳೀಯರ ಕಣ್ಣಿಗೆ ಹಾಗೂ ಪ್ರವಾಸಿಗರ ಕಣ್ಣಿಗೆ ಈ ಕೋತಿ ಕಾಣಿಸಿಕೊಳ್ಳುತ್ತದೆ.

ಸಾಕ್ಷಾತ್ ಈ ಆಂಜನೇಯಸ್ವಾಮಿಯೇ ಆ ಕೋತಿ ಎಂಬುದು ಹಲವರ ಅಭಿಪ್ರಾಯ ಆಗಿದೆ.

ಸೂರ್ಯಾಸ್ತದ ಸಮಯದಲ್ಲಿ ಮುಂಜಾನೆಯ ಸಮಯದಲ್ಲಿ ಬೆಟ್ಟದ ಮೇಲೆ ಹನುಮನ ರೀತಿಯಲ್ಲಿ ಆ ಕೋತಿ ನಿಂತಿರುತ್ತದೆ ಎಂಬುದು ಆ ದೃಶ್ಯಗಳನ್ನು ನೋಡಿದವರ ಮಾತಾಗಿದ್ದು ಹನುಮ ಜನಿಸಿದ ಈ ಸ್ಥಳ ಹಲವು ಪವಾಡಗಳ ಮತ್ತು ಭಕ್ತಿಯ ನೆಲೆಬೀಡಾಗಿದೆ.