Tuesday, July 1, 2025
Google search engine
Home Blog Page 326

ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ರೌಡಿಶೀಟರ್ ಚೊಟ್ಠಕುಮಾರ್ ಹತ್ಯೆ ಮಾಡಿದ ಆರೋಪಿ ಪಂಟರ್ ರಾಜನ ಮೇಲೆ ಪೋಲೀಸರು ಗುಂಡು ಹಾರಿಸಿದ್ದಾರೆ.

ತುಮಕೂರು ಸಮೀಪದ ವಡ್ಡರಹಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುತ್ತಿದ್ದಾಗ  ಕ್ಯಾತ್ಸಂದ್ರ ಪೋಲಿಸ್ ಇನ್ಸ್ಪೆಕ್ಟರ್ ಶ್ರೀಧರ್‌   ಗುಂಡು ಹಾರಿಸಿದ್ದಾರೆ. ಕಾಲಿಗೆ ಎರಡು ಬಾರಿ ಫೈರಿಂಗ್ ಮಾಡಲಾಗಿದೆ. ಫೈರಿಂಗ್ ಮಾಡುವ ಮುನ್ನ ಶರಣಾಗುವಂತೆ ಪೊಲಿಸರು ಸೂಚಿಸಿದ್ದಾರೆ. ಆದರೆ ಪೊಲೀಸರ ಮಾತು ಕೇಳದೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಫೈರಿಂಗ್ ಮಾಡಲಾಗಿದೆ. ಸಿಪಿಐ ಶ್ರೀದರ್‌, ಸಿಬ್ಬಂದಿ ರಮೇಶ್‌ ಗೆ ಗಾಯವಾಗಿದೆ.

ಜಾನುವಾರುಗಳ ಹಬ್ಬ; ಹೀಗೆ ಮಾಡಿದರೆ ರೋಗ ಬರುವುದಿಲ್ಲವಂತೆ

0

ಲೇಖಕರು

ಸ್ಫೂರ್ತಿ ಹೊಸಕೋಟೆ, ವೈ.ಎನ್.ಹೊಸಕೋಟೆ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಯಲ್ಲಪ್ಪನಾಯಕನ ಹೊಸಕೋಟೆ[ವೈ.ಎನ್.ಹೊಸಕೋಟೆ] ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ರೈತಾಪಿವರ್ಗ ದೀಪಾವಳಿ ಹಬ್ಬದ ಸಮಯದಲ್ಲಿ ಗೋವಿನ ಹಬ್ಬ ಆಚರಿಸುವುದು ಈ ಪ್ರದೇಶದ ಸಂಪ್ರದಾಯವಾಗಿದೆ. ಉತ್ತಮ ಫಸಲು ಬಂದು ಹೊಲಗದ್ದೆಗಳು ಹಸಿರಿನಿಂದ ಕಂಗೊಳಿಸುವ ಸಮಯದಲ್ಲಿ ಕೃಷಿಗೆ ಸಹಕರಿಸಿದ ಗೋವು, ಬಸವ, ಕುರಿ, ಮೇಕೆಗಳನ್ನು ಪೂಜಿಸುವ ವಿಧಿಯೇ ಗೋವುಗಳ ಹಬ್ಬವಾಗಿದೆ.

ಅದರಂತೆ ಈ  ವರ್ಷ ವೈ.ಎನ್.ಹೊಸಕೋಟೆ  ರೈತರು ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಕಳು ಹಬ್ಬ ಆಚರಿಸಿದರು. ಹಬ್ಬದ ಆಚರಣೆಗಾಗಿ ಊರ ಹೊರವಲಯದಲ್ಲಿ ಆಕಳು ಗೂಡು ಕಟ್ಟಲಾಗಿತ್ತು. ಗ್ರಾಮದೇವತೆ ಗೌರಸಮುದ್ರ ಮಾರಮ್ಮ ಸೇರಿದಂತೆ  ತುಮ್ಮಲಮಾರಮ್ಮ, ನಿಡಗಲ್ ಮಾರಮ್ಮ ಮತ್ತು ಕೊಲ್ಲಾಪುರದಮ್ಮ ವಿಗ್ರಹಗಳು ದೇವಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು.

ರಾಜ ಮನೆತನದ ಸಿಂಗರಿಸಿದ ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯವಿಟ್ಟು ಗೂಡಿನಲ್ಲಿ ಕೂತ್ತಿದ್ದ ದೇವರ ಸುತ್ತಲೂ ಪ್ರದಕ್ಷಿಣೆ ಮಾಡಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ತದನಂತರ ಸಂಸ್ಥಾನದ ಪ್ರಮುಖರ ಗೋವುಗಳನ್ನು ಸುತ್ತಿಸಲಾಯಿತು. ನಂತರ ಗ್ರಾಮಸ್ಥರು  ರಾಸುಗಳನ್ನು ದೇವರ ಸುತ್ತ ಪ್ರದಕ್ಷಿಣೆ ಹಾಕಿಸಿದರು. ಕುರಿ ಮತ್ತು ಮೇಕೆಗಳು ತಂಡೋಪತಂಡವಾಗಿ ಸುತ್ತು ತಿರುಗುತ್ತಿದ್ದ ವೇಳೆ ನೆರೆದಿದ್ದ ಜನತೆ ಕೇಕೆ ಹಾಕುತ್ತಾ ಅವುಗಳೊಂದಿಗೆ ತಾವು ಸುತ್ತುತ್ತಾ ಸಂಭ್ರಮಿಸಿದರು.

ರಾಸುಗಳನ್ನು ದೇವರ ಸುತ್ತ ಸುತ್ತಿಸುವುದರಿಂದ ದನಕರುಗಳಿಗೆ ಯಾವುದೇ ರೋಗ ರುಜಿನೆ ಬರುವುದಿಲ್ಲ. ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂಬುದು ಜನತೆಯ ನಂಬಿಕೆ. ಇದಕ್ಕೆಪೂರಕವಾಗಿ 60 ಗಾವುದ ದೂರ ಹೋಗಿ ಆಕಳು ಹಬ್ಬ ನೋಡಬೇಕು 90 ಗಾವುದ ದೂರ ಹೋಗಿ ತೊಗಲುಗೊಂಬೆ ಪ್ರದರ್ಶನ ನೋಡಬೇಕು ಎಂಬ ನಾಲ್ನುಡಿಯೂ ಚಾಲ್ತಿಯಲಿದೆ.

ಜಾನುವಾರುಗಳ ಪ್ರದಕ್ಷಿಣೆ ಮುಗಿದ ನಂತರ ಕಂಬಳಿ ಎಡೆ ಹಾಕಿ ಕುರುಬಗೌಡರ ಮನೆಯಿಂದ ಬಂದಿದ್ದ ಸಿರಿಧಾನ್ಯ ಸಜ್ಜೆಯ ಮುದ್ದೆ ಮತ್ತು ಬದನೆಕಾಯಿ ಚಟ್ನಿಯ ಪ್ರಸಾದವನ್ನು ಸವಿದ ಜನತೆ ದೇವರ ದರ್ಶನ ಪಡೆದು ಊರ ಕಡೆ ಹೆಜ್ಜೆ ಹಾಕಿದರು. ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಬಂದ ಉತ್ಸವ ಮೂರ್ತಿಗಳಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಉರುಮೆ ವಾದ್ಯಗಳ ತಾಳಕ್ಕೆ ತಕ್ಕಂತೆ ಕುಣಿದು ಯುವಜನತೆ ಸಂಭ್ರಮಿಸಿದರು.

 

ತುಮಕೂರು ರೈಲುಗಳ ಹಿಂದೆ ಓಡಿದ ‘ಯುವಕನಿಗೆ ರಾಜ್ಯೋತ್ಸವ’ ಗರಿ

0

ಸಿ.ಕೆ.ಮಹೇಂದ್ರ ಕೃಷ್ಣಮೂರ್ತಿ

ಇವರು ಬಹುತೇಕ ಜನರಿಗೆ ಗೊತ್ತಿಲ್ಲ. ಮೊನ್ನೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಾಗ  ಯಾರಿವರು ಎಂದವರೇ ಹೆಚ್ಚು ಜನರು. ಮುಖವಂತೂ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ ಬಿಡಿ. ಇವರನ್ನು ತುಮಕೂರು ರೈಲುಗಳ ಹಿಂದೆ ಓಡಿದ ಯುವಕ ಎಂದು ಕರೆದರೆ ತಪ್ಪಿಲ್ಲ.

ಸರ್ಕಾರಿ ಕೆಲಸದಿಂದ ನಿವೃತ್ತಿಯಾದ ಬಳಿಕ ಇವರು ಆಯ್ಕೆ ಮಾಡಿಕೊಂಡಿದ್ದು ತುಮಕೂರು ರೈಲು ಸಂಚಾರ ಸುಧಾರಣೆಯ ಕೆಲಸವನ್ನು. ಇದಕ್ಕೆ ಇವರು ಯಾರನ್ನೂ ಕಾಯಲಿಲ್ಲ. ಅಭಿವೃದ್ಧಿ ರೆವಲ್ಯೂಷನ್ ಫೋರಂನ ಕುಂದರನಹಳ್ಳಿ ರಮೇಶ್ ಸ್ನೇಹಿತರಾದ ಬಳಿಕ ಈ ಇಬ್ಬರರೂ ಒಂದೇ ಧ್ಯಾನ. ತುಮಕೂರು ರೈಲು ಸಂಪರ್ಕದ ಸುಧಾರಣೆ ಹೇಗೆ?

ಅಂದ ಹಾಗೆ ಇವರ ಹೆಸರು ರಘೋತ್ತಮ ರಾವ್. ಸಾದ ಸೀದಾ ಸರಳ ಮನುಷ್ಯ, ರಾತ್ರಿ ಹನ್ನೆರಡು- ಒಂದು ಗಂಟೆಯಾದರೂ ರೈಲ್ವೆ ಇಲಾಖೆಯ ಹೊಸ ಹೊಸ ಯೋಜನೆಗಳ ಬಗ್ಗೆ ಕಣ್ಣಾಡಿಸುತ್ತಲೇ ಇರುತ್ತಾರೆ. ಈ ಯೋಜನೆಗಳಲ್ಲಿ ಯಾವವು ತುಮಕೂರು ಮೇಲೆ ಹಾದು ಹೋಗರೆ ಎಲ್ಲಿಗೆ ಸಂಪರ್ಕ ಕಲ್ಪಿಸಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ.

ಹದಿನೈದು-ಇಪ್ಪತ್ತು ವರ್ಷಗಳ ಮಾತು.  ಈ ರಘೋತ್ತಮ ರಾವ್ ಯಾವಾಗಲೂ ಸಂಸದ ಜಿ.ಎಸ್.ಬಸವರಾಜ್ ಕಚೇರಿಗೂ ಸುತ್ತಾಡುತ್ತಿದ್ದರು. ಮಾತೆತ್ತಿದ್ದರೆ ಸಾಕು ರೈಲು,  ಸಂಸದರಿಗೂ ಬೇಜಾರು. ಇವನ್ಯಾರಪ್ಪ ದಿನಾ ಆಫೀಸಿಗೆ ಅಲೆಯುತ್ತಾನೆ ಎಂದು ಕುಂದರನಹಳ್ಳಿ ರಮೇಶ್ ಬಳಿ ಹಂಚಿಕೊಂಡರು., ನಂತರದು ಇತಿಹಾಸ,

ತುಮಕೂರಿನ ಅನೇಕ ರೈಲು ಗಾಡಿಗಳ ಸಂಪರ್ಕ, ಹೊಸ ಯೋಜನೆಗಳ ಜಾರಿ ಈ ಇಬ್ಬರ ಪರಿಶ್ರಮ ಇದೆ. ಈ ಇಬ್ಬರೂ ಸಂಸದ ಬಸವರಾಜ್ ಅವರನ್ನು ಕಾಡಿಬೇಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮಾಡಿ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಿದ್ದಾರೆ. ಇದಕ್ಕಾಗಿ ದೆಹಲಿಗೂ ಹೋಗಿ ಬಂದಿದ್ದಾರೆ.

ಇವರ ಪರಿಶ್ರಮ, ಆಸಕ್ತಿ ಗಮನಿಸಿ ರೈಲ್ವೆ ಇಲಾಖೆಯ ನಾಗರಿಕರ ಸಮಿತಿಗೆ ರಘೋತ್ತಮರಾವ್ ಅವರನ್ನು ಸದಸ್ಯರನ್ನಾಗಿ ಸಹ ಕೇಂದ್ರ ಸರ್ಕಾರ ನೇಮಕ ಮಾಡಿತ್ತು.  ಬೆಂಗಳೂರಿನಿಂದ ತುಮಕೂರಿಗೆ ಡೆಮು ರೈಲು ಬರಬೇಕೆಂದು ಕನಸು ಕಂಡ ಮೊದಲಿಗ ಈ ರಘೋತ್ತಮ ರಾವ್.

ಈಗ ಡೆಮು ರೈಲು ಬಂದಿದೆ, ಅದು ಬರುಬರುತ್ತಲೇ ರಘೋತ್ತಮ ರಾವ್ ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಹೊತ್ತು ತಂದಿದೆ. ಪ್ರಶಸ್ತಿಯ ಮೌಲ್ಯವೂ ಹೆಚ್ಚಿದೆ. ಸಮಾಜ ಸೇವೆಯನ್ನು ಗುರುತಿಸುವ ಪರಿಗೂ ಹೊಸ ಕಣ್ಣೋಟ ಸಿಕ್ಕಿದೆ ಎನ್ನಬಹುದೇನೋ?

 

ಸ್ಮಾರ್ಟ್ ಸಿಟಿ ಎಫೆಕ್ಟ್ : ತುಮಕೂರು ಬಸ್ ನಿಲ್ದಾಣ ಸ್ಥಳಾಂತರ

ತುಮಕೂರು: ಸ್ಮಾರ್ಟ್ಸ್ ಸಿಟಿ ಯೋಜನೆಯಡಿ ನಗರದ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದ ನಿರ್ಮಾಣ ಕಾಮಗಾರಿಯು ಆರಂಭವಾಗುತ್ತಿದೆ. ಈ ಹಿನ್ನಲೆಯಲ್ಲಿ ನವೆಂಬರ್ ೧೮ ರಿಂದ ಜೆಸಿ ರಸ್ತೆಯಲ್ಲಿರುವ ಕೆಸ್ಸಾರ್ಟಿಸಿ ಘಟಕ ೧ರ ಸ್ಥಳಕ್ಕೆ ತಾತ್ಕಾಲಿಕವಾಗಿ ಬಸ್ಸು ನಿಲ್ದಾಣ  ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಸ್ಸಾರ್ಟಿಸಿ, ಸ್ಮಾರ್ಟ್ಸಿಟಿ ಮಹಾನಗರ ಪಾಲಿಕೆ ಹಾಗೂ ಪೋಲಿಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ತುಮಕೂರು ನಗರದಲ್ಲಿರುವ  ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣ ಹೈಟೆಕ್ ಆಗಿ ನಿರ್ಮಾಣ ಮಾಡಲು ಸ್ಮಾಟ್ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಯು ಪೂರ್ಣ ಗೊಳ್ಳುವರೆಗೂ ಈಗಿರುವ ಬಸ್ಸು ನಿಲ್ದಾಣದ ಹತ್ತಿರದಲ್ಲಿರುವ ಜೆಸಿರಸ್ತೆಯ ಕೆಸ್ಸಾರ್ಟಿಸಿ ಬಸ್ಸು ಡಿಪೋ ಸ್ಥಳಕ್ಕೆ ನಿಲ್ದಾಣ ಸ್ಥಳಾಂತರಿಸಿ ಅಲ್ಲಿಂದ ಬಸ್ಸುಗಳನ್ನು ಓಡಿಸಿದರೆ ಸಾರ್ವಜನಿಕರಿಗೆ ಅನೂಕೂಲವಾಗಲಿದೆ ಎಂದರು.

ಬಸ್ಸುಗಳು ಹೊಸ ಸ್ಥಳದಿಂದ ಕಾರ್ಯಾಚರಣೆ ಆರಂಭಿಸುವ ಮೊದಲು ಅಶೋಕ ರಸ್ತೆ, ಜೆಸಿ ರಸ್ತೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆ ಸೇರಿದಂತೆ ನಿಲ್ದಾಣವನ್ನು ಸಂದಿಒಸುವ ರಸ್ತೆಗಳು ಸ್ವಚ್ಛವಾಗಿರಬೇಕು.ಬಸ್ಸುಗಳ ಸಂಚಾರಕ್ಕೆ ಸಮರ್ಪಕವಾಗಿರುವಂತೆ ನವೆಂಬರ್ ೧೫ರೊಳಗೆ ಈಗಾಗಲೇ ಕೈಗೊಂಡಿರುವ ಕಾಮಗಾರಿ ಪೊರ್ಣಗೋಳಿಸಬೇಕು ಎಂದು ಸೂಚನೆ ನೀಡಿದರು.

ಜೆಸಿ ರಸ್ತೆ, ಪ್ರಶಾಂತ ಚಿತ್ರಮಂದಿರ ರಸ್ತೆ, ಕೆನರಾಬ್ಯಾಂಕ್ ರಸ್ತೆ ಹಾಗೂ ಆಶೋಕ ರಸ್ತೆಗಳಲ್ಲಿ ವಾಹನ ನಿಲುಗಡೆ ಮುಕ್ತ ರಸ್ತೆಯನ್ನಾಗಿ ಘೋಷಿಸಬೇಕಾಗಿದೆ. ಗುಬ್ಬಿವೀರಣ್ಣ ಕಲಾ ಕ್ಷೇತ್ರದ ರಸ್ತೆಯಲ್ಲಿ ಕ್ಯಾಂಟರ್ಗಳು ಗೂಡ್ಸ್ ವಾಹನಗಳ ನಿಲ್ದಾಣವಿದ್ದು ಬೇರೆಡೆಗೆ ಸ್ಥಳಾಂತರಿಸಬೇಕಿದೆ. ಈ ವಾಹನಗಳು ಟ್ರಕ್ ಟರ್ಮಿನಲ್ಲಿ ನಿಲುಗಡೆ ಮಾಡಿಕೊಳ್ಳಲ್ಲಿ ನಗರದ ಒಳಗಡೆ ದೊಡ್ಡ ವಾಹನಗಳ ಪಾರ್ಕಿಂಗ್ಗೆ ಅವಕಾಶವಿಲ್ಲ

ಮಂಡಿಪೇಟೆ ಸೇರಿದಂತೆ ನಗರದ ವಹಿವಾಟು ಪ್ರದೇಶಗಳಿಗೆ ಸರಕು ಗಳನ್ನು ತರುವ ದೊಡ್ಡ ವಾಹನಗಳಿಗೆ ರಾತ್ರಿ ೯ ಗಂಟೆಯಿಂದ ಬೆಳಿಗ್ಗೆ  ೮ ಗಂಟೆಯವರೆಗೆ ಒಳ ಪ್ರವೇಶಿಸಲು ಅವಕಾಶ ನೀಡಿದರೆ ಸೂಕ್ತ. ಇದರಿಂದ ನಗರದ ಸಂಚಾರ ದಟ್ಟಣೆ ತಡೆಗಟ್ಟಬಹುದು. ಈ ಕುರಿತು ಅಧಿಸೂಚನೆ ಹೊರಡಿಸಲು ಸೂಕ್ತ ಪ್ರಸ್ತಾವನೆ ಇನ್ನೆರಡು ದಿನಗಳಲ್ಲಿ ಸಲ್ಲಿಸುವಂತೆ ತುಮಕೂರು ಡಿವೈಎಸ್ಪಿ ತಿಪ್ಪೇಸ್ವಾಮಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಬಸ್ಸು ನಿಲ್ದಾಣದ ಬದಲಾವಣೆ ಹಾಗೂ ರಸ್ತೆ ಮಾರ್ಗದ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ನೀಡಬೇಕು. ರೂಟ್ಮ್ಯಾಪ್ನ ಬಗ್ಗೆ ೩೦ ಸೆಕೆಂಡಿನ ವಿಡೀಯೋ ಸಿದ್ದಪಡಿಸಿ ವಾಟ್ಸಾಪ್ ಗ್ರೂಫ್ಗಳಲ್ಲಿ ಶೇರ್ ಮಾಡಬೇಕು. ತಾತ್ಕಾಲಿಕ ಬಸ್ಸು ನಿಲ್ದಾಣಕ್ಕೆ ಹೊಂದಿಕೊಂಡಂತೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮುಂಭಾಗದಲ್ಲಿ ಆಟೋಗಳಿಗೆ ನಿಲ್ದಾಣ  ಕಲ್ಪಿಸಲಾಗುವುದು ಎಂದರು.

ನಿರ್ಮಾಣ ಕಾಮಗಾರಿ ಕೈಗೊಂಡಿರುವ ಎಂ.ಜಿ ಕ್ರೀಡಾಂಗಣ ಹಾಗೂ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಕಾಂಕ್ರೀಟ್, ಜಲ್ಲಿ ಸೇರಿದಂತೆ ಅವಶ್ಯಕತೆಯಿರದ ತ್ಯಾಜ್ಯ ವಸ್ತುಗಳನ್ನು ತುಮಕೂರು ನಗರದ ಹೊರವಲಯದ ಅಮಲಾಪುರದಲ್ಲಿ ಗುರ್ತಿಸಿರುವ ಪ್ರದೇಶದಲ್ಲಿ ಸುರಿಯುವಂತೆ ಇಂಜಿನಿಯರ್ಗಳಿಗೆ ಸೂಚಿಸಿದ ಅವರು ತ್ಯಾಜ್ಯ ವಸ್ತುಗಳನ್ನು ಪುನರ್ ಬಳಕೆ ಮಾಡಲು ಚಿಂತಿಸಲಾಗಿದೆ ಎಂದು ಹೇಳಿದರು.ಳ್ಳಿ ಪಂಚಾಯತಿ ಸೇರ್ಪಡೆ ಮಾಡಿದರೆ ಅನುಕೂಲವಾಗುತ್ತದೆ.

ಕೊಳೆತು ನಾರುತಿದೆ ಖಾಸಗಿ  ಬಸ್ ನಿಲ್ದಾಣ

ಸ್ಮಾರ್ಟ್ ಸಿಟಿ ಏನೋ ಸರಿ. ಆದರೆ ಖಾಸಗಿ  ಬಸ್ ನಿಲ್ದಾಣದ ಪರಿಸ್ಥಿತಿಯನ್ನು ಸರಿಮಾಡುವುದರತ್ತಲೂ ಗಮನ ಹರಿಸಬೇಕು, ಈ ನಿಲ್ದಾಣ ಕೊಳೆತು ನಾರುತ್ತಿದೆ. ಕೊಳೆಯನ್ನು ಮೊದಲು ತೆಗೆಯಿರಿ. ನಂತರ ಕೋಟ್ಯಂತರ ರೂಪಾಯಿ ಕಾಮಗಾರಿ ಮಾಡಿ. ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಒಮ್ಮೆ ಭೇಟಿ ಕೊಟ್ಟರೆ ಸಿಟಿಯ ನಿಜ ದರ್ಶನ ಆಗಲಿದೆ.

ಕರಿಬಸವಯ್ಯ. ವಕೀಲರು

ಚೇಳೂರು ನೂತನ ತಾಲ್ಲೂಕು: ಅಧ್ಯಯನಕ್ಕಾಗಿ ಸಮಿತಿ ಏಕಿಲ್ಲ?

ವಿಶೇಷ ವರದಿ:ಲಕ್ಷ್ಮಿಕಾಂತ ರಾಜ್  

ಗುಬ್ಬಿ ತಾಲ್ಲೂಕಿನ ಚೇಳೂರು, ಶಿರಾ  ತಾಲ್ಲೂಕಿನ ಕಳ್ಳಂಬೆಳ್ಳ ಈ ಎರಡು ಕೇಂದ್ರಗಳಲ್ಲಿ ಯಾವುದನ್ನು ತಾಲ್ಲೂಕು ಕೇಂದ್ರವಾಗಿ ಮಾಡಬೇಕೆಂಬ ಬಗ್ಗೆ ಅಧ್ಯಯನಕ್ಕಾಗಿ 2009ರಲ್ಲೇ ಅಂದಿನ ರಾಜ್ಯ ಸರ್ಕಾರ ನಿವೃತ್ತ ಅಧಿಕಾರಿ ಎಂ.,ಬಿ.ಪ್ರಕಾಶ್ ಸಮಿತಿ ನೇಮಕ ಮಾಡಿತ್ತು. ಈ ಸಮಿತಿ ನೀಡಿದ ಶಿಫಾರಸು ಏಕ ಪಕ್ಷೀಯವಾಗಿತ್ತು. ಹೊಸ ಸಮಿತಿ ನೇಮಕ ಮಾಡುವ ಮೂಲಕ ಚೇಳೂರು ತಾಲ್ಲೂಕು ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂಬುದು ಈ ಭಾಗದ ಜನರ ಹಕ್ಕೊತ್ತಾಯವಾಗಿದೆ.

ಪ್ರಕಾಶ್ ಸಲಹಾ ಸಮಿತಿಯು ಪಕ್ಕದ ಕಳ್ಳಬೆಳ್ಳ ತಾಲ್ಲೂಕು ಕೇಂದ್ರವನ್ನಾಗಿಸಿ ಗುಬ್ಬಿಯ ಚೇಳೂರು ಹೋಬಳಿಯ ನಲ್ಲೂರು ಮತ್ತು ಅಂಕಸಂದ್ರ ಪಂಚಾಯಿತಿ ಹಾಗೂ ಹಾಗಲವಾಡಿ ಹೋಬಳಿಯನ್ನ ಕಳ್ಳಂಬೆಳ್ಳ ಉದ್ದೇಶಿತ ತಾಲ್ಲೂಕು ಕೇಂದ್ರವನ್ನಾಗಿಸಲು ಗುಬ್ಬಿ ತಾಲ್ಲೂಕಿನ ಈ ಮೇಲ್ಕಾಣಿಸಿದ ಭಾಗಗಳನ್ನ ಸೇರಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.

ಆ ಸಮಯದಲ್ಲಿ ಚೇಳೂರು ಹಾಗೂ ಹಾಗಲವಾಡಿ ಭಾಗದಲ್ಲಿ ವ್ಯಾಪಕ ವಿರೋಧ ಉಂಟಾದ ಹಿನ್ನೆಲೆಯಲ್ಲಿ ಪ್ರಕಾಶ್ ಸಮಿತಿಯು ಶಿಫಾರಸ್ಸು ಮಾಡಿದ್ದ ಕಳ್ಳಂಬೆಳ್ಳ ತಾಲ್ಲೂಕನ್ನ ಸರ್ಕಾರ ವರದಿಯಿಂದ ಕೈಬಿಡಲಾಯಿತು. ಇದಾದ ಬಳಿಕ ಚೇಳೂರು ತಾಲ್ಲೂಕು ಕೇಂದ್ರದ ಹೋರಾಟಕ್ಕೆ ಮಂಕು ಬಡಿಯಿತು ಎಂದು ನೆನಪಿಸಿಕೊಳ್ಳುತ್ತಾರೆ ಇಲ್ಲಿನ ಹಿರಿಯರು.

ಸಲಹಾ ಸಮಿತಿಯು ಶಿಫಾರಸ್ಸು ಮಾಡಿದ್ದ ಕಳ್ಳಂಬೆಳ್ಳವು ಶಿರಾ ತಾಲ್ಲೂಕು ಕೇಂದ್ರದಿಂದ ಕೇವಲ ಹತ್ತು ಕಿಮೀ‌ ಅಂತರ ಇದ್ದು ಇದೊಂದು ಉದ್ದೇಶಿತ ಪೂರಿತ ಶಿಫಾರಸು ಆಗಿತ್ತು. ನಿಜ ಅರ್ಥದಲ್ಲಿ ಚೇಳೂರನ್ನು ತಾಲ್ಲೂಕು ಮಾಡುವುದೇ ಸರಿಯಾಗಿದೆ. ಇದು ವೈಜ್ಞಾನಿಕವೂ ಆಗಿದೆ ಎಂದು ಇಲ್ಲಿನ ಹಿರಿಯರೊಬ್ಬರು ತಿಳಿಸಿದರು.

ಹಾಗೆ ನೋಡಿದರೆ ಕಳ್ಳಂಬೆಳ್ಳ ಗ್ರಾಮಕ್ಕಿಂತ ಚೇಳೂರು ತಾಲ್ಲೂಕು ಕೇಂದ್ರವಾಗಲು ಹೆಚ್ಚು ಅರ್ಹತೆ ಹೊಂದಿದೆ.  ಚೇಳೂರಿನಲ್ಲಿ ಶಿಕ್ಷಣ ಕ್ಷೇತ್ರವೂ ಮುಂದುವರೆದಿದೆ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ,ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಸರ್ಕಾರಿ ಮತ್ತು ಖಾಸಗಿ ಪಿಯು ಕಾಲೇಜುಗಳು ಮತ್ತು ಖಾಸಗಿ ಐಟಿಐ ಹಾಗೂ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗಳ ಜೊತೆಗೆ ತಾಲ್ಲೂಕು ಮಟ್ಟದಂತೆ ಪ್ರತಿಷ್ಟಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿವೆ. ಆದ್ದರಿಂದ ಎಲ್ಲ ರೀತಿಯಿಂದಲೂ‌ ಚೇಳೂರು ತಾಲ್ಲೂಕು ಕೇಂದ್ರವಾಗಿಸಲು ಅರ್ಹತೆ ಎನ್ನುತ್ತಾರೆ ಚೇಳೂರು ಭಾಗದ ಮುಖಂಡರುಗಳು.

ಹಾಗಲವಾಡಿಯಿಂದ ಗುಬ್ಬಿಯು ನಲವತ್ತೈದು ಕಿಮೀ ಅಂತರವಿದ್ದು ತಾಲ್ಲೂಕು ಕಚೇರಿಗಳಿಗೆ ಹೋಗಿಬರಲು ಒಂದು ದಿನವೇ ಬೇಕಾಗಿದ್ದು ನಮ್ಮ ಸಮೀಪದ ಚೇಳೂರು ತಾಲ್ಲೂಕು ಕೇಂದ್ರವಾದರೆ ನಮಗೆ ಎಲ್ಲ ರೀತಿಯಿಂದಲೂ ಅನುಕೂಲವಾಗುತ್ತದೆ.

ಶಿವರಾಜು,ಹಾಗಲವಾಡಿ

ಚೇಳೂರು ತಾಲ್ಲೂಕು ಆಗುವದಾದರೆ ನೆರೆಯ ಶಿರಾ ತಾಲ್ಲೂಕಿನ ಗೋಪಾಲದೇವರಹಳ್ಳಿ ಪಂಚಾಯತಿಯು ಶಿರಾಕ್ಕೆ ದೂರವಿದ್ದು ಈ ಪಂಚಾಯತಿಯನ್ನ ಚೇಳೂರು ತಾಲ್ಲೂಕಿಗೆ ಸೇರ್ಪಡೆಯಾಗಲು ವೈಜ್ಞಾನಿಕವಾಗಿದ್ದು ಅಲ್ಲಿನ ಜನರು ಈ ಕುರಿತು ಆಸಕ್ತಿದಾಯಕವಾಗಿದ್ದಾರೆ

ಕಿರಣ್ ಕುಮಾರ್,ಬಿಜ್ಜನಬೆಳ್ಳ ಶಿರಾ ತಾಲ್ಲೂಕು

ಸುಳ್ಳು ಆರೋಪ ನಿಲ್ಲಲಿ: ದೊರೈರಾಜ್

0

ತುಮಕೂರು:ದೊಡ್ಡಪಾಳ್ಯ ನರಸಿಂಹಮೂರ್ತಿ ಪತ್ರಕರ್ತರಾಗಿ ಹೋರಾಟಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಂಥವರ ಮೇಲೆ ಸುಳ್ಳು ಆರೋಪ ಹೊರಿಸ ಬಂದಿಸಿರುವುದು ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಪಿಯುಸಿಎಲ್ ಜಿಲ್ಲಾಧ್ಯಕ್ಷ ಕೆ.ದೊರೈರಾಜ್ ಹೇಳಿದರು.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೊಡ್ಡಿಪಾಳ್ಯ ನರಸಿಂಹಮೂರ್ತಿ ದೇಶದ್ರೋಹಿ, ತಲೆಮರೆಸಿಕೊಂಡ ವ್ಯಕ್ತಿ ಎಂದು ಬಿಂಬಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಜನವಿರೋಧಿ ನೀತಿ ವಿರೋಧಿಸುವ ಮತ್ತು ಹೋರಾಟ ,ಮಾಡುವವರ ದನಿಗಳನ್ನು ಅಡಗಿಸುವ ಕೆಲಸ ಮಾಡುತ್ತಿದೆ. ಇದು ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದ್ದು ಇದನ್ನು ಬಿಡಬೇಕು ಎಂದು ಒತ್ತಾಯಿಸಿದರು.

ಸ್ವರಾಜ್ ಇಂಡಿಯಾದ ಮುಖಂಡ ಸಿ.ಯತಿರಾಜು ಮಾತನಾಡಿ, ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಬಂಧಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯ ಸ್ವಾತಂತ್ರ್ಯ ಮತ್ತು ವಿರೋಧಿ ಅಭಿಪ್ರಾಯ ವ್ಯಕ್ತಪಡಿಸುವವರ ದನಿಯನ್ನು ಬಗ್ಗು ಬಡಿಯುವ ಕೆಲಸ ಮಾಡುತ್ತಿದೆ. ಇದನ್ನು ಜನಪರ ಸಂಘಟನೆಗಳು ಬಲವಾಗಿ ಖಂಡಿಸುತ್ತವೆ ಎಂದರು.

ಜನಸಂಗ್ರಾಮ ಪರಿಷತ್ ಮುಖಂಡ ಪಂಡಿತ್ ಜವಹಾರ್ ಮಾತನಾಡಿ ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿ ಪತ್ರಕರ್ತರು ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಸರ್ಕಾರ ಕೆಲಸ ಮಾಡಲು ಸಾಕಷ್ಟು ಕೆಲಸ ಇದೆ. ಹಲವು ಮಂದಿ ರೈತ, ಕಾರ್ಮಿಕ, ಆರ್ ಎಸ್ಎಸ್ ನಲ್ಲಿ ಗುರುತಿಸಿಕೊಂಡವರು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸಮಾಜ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಜನಪರ ಮತ್ತು ಪ್ರಗತಿಪರ ದನಿಗಳನ್ನು ಅಡಗಿಸುವ ಹುನ್ನಾರ ನಿರಂತರವಾಗಿ ನಡೆಯುತ್ತಿದ್ದು ಇದನ್ನು ಬಿಡಬೇಕು ಎಂದರು. ಜನಪರ ಸಂಘಟನೆಗಳ ಒಕ್ಕೂಟ, ಜನಸಂಗ್ರಾಮ ಪರಿಷತ್, ಪಿಯುಸಿಎಲ್, ಸ್ವರಾಜ್ ಇಂಡಿಯಾ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ನಾದೂರು ಕೆಂಚಪ್ಪ, ಹಂದ್ರಾಳ್ ನಾಗಭೂಷಣ, ಮೋಹನ್ ಉಪಸ್ಥಿತರಿದ್ದರು.

ಮಾಜಿ ಸಚಿವ, ಹೋರಾಟಗಾರ ವೈಜನಾಥ ಪಾಟೀಲ್ ಇನ್ನಿಲ್ಲ

ಕಲಬುರಗಿ: ಮಾಜಿ ಸಚಿವ, 371ಜೆ ವಿಧಿ ತಿದ್ದುಪಡಿ ಜಾರಿ ಹೋರಾಟಗಾರ ವೈಜನಾಥ ಪಾಟೀಲ್ ಇನ್ನಿಲ್ಲ.ಅವರಿಗೆ 82 ವರ್ಷ ವಯಸ್ಸಾಗಿತ್ತು.

ಅನಾರೋಗ್ಯ ದಿಂದ ಬಳಲುತ್ತಿದ್ದ ಪಾಟೀಲ್ ಅವರು ಇಂದು ಬೆಳಿಗ್ಗೆ ೬ ಗಂಟೆ ಸುಮಾರಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು.

ರಾಮಕೃಷ್ಣ ಹೆಗಡೆ ಸಂಪುಟದಲ್ಲಿ 1984ರಲ್ಲಿ ತೋಟಗಾರಿಕೆ ಹಾಗೂ ಎಚ್. ಡಿ. ದೇವೆಗೌಡ ಸಂಪುಟದಲ್ಲಿ 1994ರಲ್ಲಿ ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಗೆ ಪಾಟೀಲ್ ರ ಮನಸ್ಸು ಸದಾ ಮಿಡಿಯುತ್ತಿತ್ತು. ಈ ಭಾಗದ ಅಭಿವೃದ್ಧಿ ಗಾಗಿ ವಿಶೇಷ ಸ್ಥಾನಮಾನ ಕಲ್ಪಿಸುವ 371 ಜೆ ವಿಧಿ ಜಾರಿಗೆ ಆಗ್ರಹಿಸಿ ಎರಡು ದಶಕಗಳ ಹಿಂದೆ ಧ್ವನಿ ಎತ್ತಿ ಹೋರಾಟ ರೂಪಿಸಿದವರೇ ವೈಜನಾಥ ಪಾಟೀಲ್.
371 ಜೆ ವಿಧಿ ಜಾರಿಯಲ್ಲದೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನಾದರೂ ಅನ್ಯಾಯವಾದರೆ ತಕ್ಷಣ ವೇ ಸರಕಾರ ದ ಗಮನ ಸೆಳೆಯುತ್ತಿದ್ದ ವೈಜನಾಥ ಪಾಟೀಲ್ ಅವರು ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದವರಾಗಿದ್ದಾರೆ.

ಹೋರಾಟಕ್ಕೆ ಇನ್ನೊಂದು ಹೆಸರು ವೈಜನಾಥ ಪಾಟೀಲ್ ಎಂದೇ ಹೆಸರು ಪಡೆದ ಪಾಟೀಲ್ ರನ್ನು ಕಳೆದುಕೊಂಡ ಕಲ್ಯಾಣ ಕರ್ನಾಟಕವಿಂದು ಬಡವಾಗಿದೆ.

ಎಂಎಸ್ಐಎಲ್ ಮಾಜಿ ಅಧ್ಯಕ್ಷ ಡಾ. ವಿಕ್ರಮ್ ಪಾಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ಗೌತಮ ಪಾಟೀಲ್ ಸೇರಿ ಮೂವರು ಪುತ್ರರು, ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ನಾಳೆ ರವಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಳೆದ ಸೆಪ್ಟೆಂಬರ್ 22 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೀವನ ಪರಿಚಯ ಹಾಗೂ ಹೋರಾಟದ ಇತಿಹಾಸ ಹೇಳಿದ್ದರು. ಆದರೆ ಜೀವನ ಇತಿಹಾಸದಿಂದ ಇಷ್ಟು ಬೇಗ ಮರೆಯಾಗುತ್ತಾರೆಂದು ಯಾರೂ ಊಹಿಸಿರಲಿಲ್ಲ

ಮಹಿಳೆಯ ಕೊಲೆ

ಹೊಲದಿಂದ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ತುಮಕೂರು ಸಮೀಪದ ದೊಡ್ಡಸಿದ್ದಯ್ಯನಪಾಳ್ಯದಲ್ಲಿ ನಡೆದಿದೆ.

ಹತ್ಯೆಯಾದ ಮಹಿಳೆಯನ್ನು 35 ವರ್ಷದ ಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಶುಕ್ರವಾರ ಸುಮಾರು 3.30ರ ಸಮಯದಲ್ಲಿ ಹೊಲದಿಂದ ಮನೆಗೆ ವಾಪಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಎದುರಾದ ವ್ಯಕ್ತಿ ಆಕೆ ಮಾಂಗಲ್ಯ ಸರಕ್ಕೆ ಕೈಹಾಕಿದ್ದಾನೆ.

ಚಾಕುವಿಂದ ಮಾಂಗಲ್ಯ ಸರ ಕತ್ತರಿಸಲು ಮುಂದಾದಾಗ ಆಕೆ ಜಗ್ಗಿದ್ದು ಆ ಸಂದರ್ಭದಲ್ಲಿ ಚಾಕು ಆಕೆಯ ಕುತ್ತಿಗೆಯನ್ನು ಸೀಳಿದೆ. ತೀವ್ರ ರಕ್ತಸ್ರಾವವಾಗಿ ಹಳ್ಳದಲ್ಲಿ ಇಳಿದು ಹತ್ತುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಇಸ್ಪೀಟು ಆಟದಲ್ಲಿ ಸೋತಿದ್ದ. ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡಿದ್ದ. ಮತ್ತೆ ಆಟ ಆಡಲು ಹಣ ಬೇಕಾಗಿದ್ದರಿಂದ ಮಾಂಗಲ್ಯ ಸರ ಕದಿಯಲು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿ ಶೀಟರ್ ಭೀಕರ ಕೊಲೆ

ತುಮಕೂರು ಹೊರವಲಯದ ಬೆಳಗುಂಬದಲ್ಲಿ ರೌಡಿಶೀಟರ್ ವೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಸ್ನೇಹಿತನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಕೊಲೆಯಾದ ವ್ಯಕ್ತಿಯನ್ನು ರೌಡಿಶೀಟರ್ ಮೋಹನ್ ಕುಮಾರ್ ಅಲಿಯಾಸ್ ಚಟ್ಟ ಕುಮಾರ್ ಎಂದು ಗುರುತಿಸಲಾಗಿದೆ.

ತಲೆ ಮೇಲೆ ಕಲ್ಲು ಎತ್ತಿಹಾಕಿರುವುದರಿಂದ ತಲೆ ನಜ್ಜುಗುಜ್ಜಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ

ಚಿ,ನಾ.ಹಳ್ಳಿ ಕೆರೆಗಳಿಗೆ ನೀರು: ಸ್ವಾಗತ

0

ಚಿ.ನಾ,ಹಳ್ಳಿ: ತಾಲ್ಲೂಕಿನ 28 ಕೆರೆಗಳಿಗೆ ಹೇಮಾವತಿ ನೀರು ಹರಿಸಲು ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರವನ್ನು ನೀರಾವರಿ ಹೋರಾಟಗಾರರಾದ ವಕೀಲ ಬಿ.ಜೆ.ಮಹಾವೀರ್ ಸ್ವಾಗತಿಸಿದ್ದಾರೆ.
ಒಂದು ಕಾಲದಲ್ಲಿ ತೆಂಗಿಗೆ ನಾಡಿನೆಲ್ಲಡೆ ಹೆಸರಾಗಿದ್ದ ತಾಲ್ಲೂಕು ಎರಡು ದಶಕಗಳಿಂದ ಭೀಕರ ಬರಗಾಲಕ್ಕೆ ಸಿಲುಕಿ ನಲುಗಿದೆ. ವ್ಯಾಪಕವಾಗಿ ತೋಟ-ತುಡಿಕೆಗಳು ಒಣಗಿ ಹೋಗಿವೆ. ಕೃಷಿಕರು ಊರು ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕುಡಿಯಲು ಹಾಗೂ ಅಂತರ್ಜಲ ಅಭಿವೃದ್ಧಿಗಾಗಿ 28 ಕೆರೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸಲು ರಾಜ್ಯ ಸರ್ಕಾರದ ನಿರ್ಧಾರ ಶಾಘ್ಲನೀಯವಾಗಿದೆ ಎಂದು ಹೇಳಿದ್ದಾರೆ.
ತಾಲ್ಲೂಕಿಗೆ ಹೇಮಾವತಿ ನೀರಿಗಾಗಿ ಹಲವು ಹೋರಾಟಗಳು ನಡೆದಿವೆ. ಪಕ್ಷಾತೀತವಾಗಿ ಎಲ್ಲ ಪಕ್ಷಗಳ ಕಾರ್ಯಕರ್ತರು, ಸಂಘಟನೆಗಳು, ನೀರಾವರಿ ಹೋರಾಟಗಾರರ ಫಲ ಇದಾಗಿದೆ. ಸಚಿವ ಸಂಪುಟದ ನಿರ್ಧಾರದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರ ಶ್ರಮ ಇರುವುದು ಎದ್ದು ಕಾಣುವಂತಿದೆ. ಜನರ ಭಾವನೆಗಳಿಗೆ ಅವರು ಬೆಲೆ ನೀಡಿದ್ದಾರೆ. ತಾಲ್ಲೂಕಿಗೆ ಕೊನೆಗೂ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.
ಮರಳು ಗಣಿಗಾರಿಕೆಗೆ ಅವಕಾಶ ಬೇಡ: ಕೆರೆ, ತೋಡುಗಳಲ್ಲಿ,ಹಳ್ಳಗಳಲ್ಲಿ ಮರಳು ತೆಗೆಯಲು ಬಿಡಬೇಕು ಎಂದು ಸಚಿವರು ಹೇಳಿರುವುದು ಸಲ್ಲದು. ಅಕ್ರಮ ಮರಳುಗಣಿಗಾರಿಕೆಗೆ ಸಿಲುಕಿ ತಾಲ್ಲೂಕಿನ ಅಂತರ್ಜಲ ಕುಸಿದು ಹೋಗಿದೆ, ಮರಳು ಬೋರ್ ಗಳಲ್ಲಿ ಹಿಂದೆಲ್ಲ ನೀರು ಬರುತ್ತಿತ್ತು. ಅಂಥ ಪರಿಸ್ಥಿತಿ ಇಲ್ಲದಂತಾಗಲು ಯತ್ಥೇಚ್ಛವಾಗಿ ತೆಗೆದ ಮರಳು ಕಾರಣ. ಇದನ್ನು ಅರಿಯದಷ್ಟು ಸಚಿವ ಮಾಧುಸ್ವಾಮಿ ದಡ್ಡರಲ್ಲ. ಮರಳು ತೆಗೆಯಲು ಅವಕಾಶ ನೀಡುವಂತೆ ಅವರು ಮಾತನಾಡಿರುವ ಹಿಂದೆ ಪ್ರಬಲ ಶಕ್ತಿಗಳು ಕೆಲಸ ಮಾಡಿರಬಹುದು. ಇಂಥ ಶಕ್ತಿಗಳಿಗೆ ಸಚಿವರು ಮನ್ನಣೆ ನೀಡಬಾರದು. ಬೇರೆ ಕಡೆಯಿಂದ ನೀರು ತರುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದು ಆಗಿದೆ ಎಂದು ಮಹಾವೀರ್ “ಪಬ್ಲಿಕ್ ಸ್ಟೋರಿ’ಗೆ ತಿಳಿಸಿದ್ದಾರೆ.