ಉತ್ತಮ ಫಲಿತಾಂಶಕ್ಕಾಗಿ ವಿಶೇಷ ತರಗತಿ
ತುಮಕೂರು:ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಉತ್ತಮಗೊಳಿಸುವ ಸಂಬಂಧ ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಸಂಜೆ ವೇಳೆ ವಿಶೇಷ ತರಗತಿ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಸೂಚಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶುಭ ಕಲ್ಯಾಣ್, ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಹೀಗಾಗಿ ಈಗಿನಿಂದಲೇ ಮಕ್ಕಳಿಗೆ ಪರೀಕ್ಷಾ ಸಿದ್ಧತೆ ನಡೆಸಬೇಕು ಎಂದು ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಕೈಗೆತ್ತಿಕೊಂಡಿರುವ 21 ಸರ್ಕಾರಿ ಶಾಲಾ ಕಟ್ಟಡಗಳ ಮರು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದನ್ನು ಪರಿಶೀಲಿಸಿ ಪೂರ್ಣಗೊಳಿಸಬೇಕು ಎಂದರು.
ತಾಲೂಕಿನಲ್ಲಿ ಉತ್ತಮ ಮಳೆ ಬರುತ್ತಿದ್ದು, ಈಗಾಗಲೇ ತುಂಬಿರುವ ಕೆರೆಗಳಿಗೆ ಮೀನಿನ ಮರಿಗಳನ್ನು ನಿಯಮಾನುಸಾರ ಬಿಡಲು ಅಗತ್ಯ ಕ್ರಮವಹಿಸುವಂತೆ ಮೀನುಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಶೇಕಡ 68ರಷ್ಟು ಪ್ರಗತಿ ಸಾಧಿಸಿದೆ. ಮಾರ್ಚ್ ಅಂತ್ಯದೊಳಗೆ ಶೇಕಡಾ 100ರಷ್ಟು ಭೌತಿಕ ಗುರಿ ಸಾಧಿಸಲು ಕ್ರಮವಹಿಸಬೇಕೆಂದು ಪಿಡಿಓಗಳಿಗೆ ತಿಳಿಸಿದರು.
ಉತ್ತಮ ಫಲಿತಾಂಶಕ್ಕೆ ಹೀಗೆ ಮಾಡಿ
ತುಂಬಿದ್ದ ಕೆರೆ ಹೇಗೆ ಖಾಲಿಯಾಯಿತು.
ಪಾವಗಡ: ತಾಲ್ಲೂಕಿನ ಕೆರೆ, ಗೋಕಟ್ಟೆಗಳನ್ನು ದುರಸ್ಥಿಪಡಿಸದಿದ್ದಲ್ಲಿ ಶೀಘ್ರ ತಹಶೀಲ್ದಾರ್ ಕಚೇರಿ ಮುಂಭಾಗ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ತಿಳಿಸಿದರು.
ಪಾವಗಡ ತಾಲ್ಲೂಕು ಪೆಂಡ್ಲಿಜೀವಿಯಲ್ಲಿ ಮಂಗಳವಾರ ನಡೆದ ರೈತರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

ಹಲ ದಶಕಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗದೆ ಅಂತರ್ಜಲ ಮಟ್ಟ ಕುಸಿದಿತ್ತು. ಜಾನುವಾರುಗಳಿಗೆ ಮೇವು, ಕುಡಿಯಲು ನೀರಿಗೂ ಅಭಾವವಾಗಿತ್ತು. ಆದರೆ ಈಚೆಗೆ ಉತ್ತಮ ಮಳೆಯಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆರೆ ಏರಿ ಒಡೆದು, ಮಂಗೆ ಬಿದ್ದು ಕೆರೆಯ ನೀರು ಹರಿದು ಹೋಗಿದೆ ಎಂದು ಆರೋಪಿಸಿದರು.
ಉತ್ತಮ ಮಳೆಯಾದರೂ ಕೆರೆಗಳಲ್ಲಿ ನೀರು ನಿಲ್ಲದ ಕಾರಣ ಅಂತರ್ಜಲ ಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಸುಧಾರಣೆಯಾಗಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಮತ್ತೆ ನೀರಿನ ಸಮಸ್ಯೆ ತಲೆದೋರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಕೊಂಡನ್ನ, ರೈತರ ದಾಖಲಾತಿ ಸರಿಯಿಲ್ಲ ಎಂಬ ನೆಪ ಹೇಳಿ ಸಾಲ ಮನ್ನಾ ಮಾಡದೆ ಸತಾಯಿಸಲಾಗುತ್ತಿದೆ. ಅಧಿಕಾರಿಗಳು ಕೂಡಲೇ ತಾಂತ್ರಿಕ ದೋಶ ಸರಿಪಡಿಸಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಹನುಮಂತರೆಡ್ಡಿ, ಕೊಂಡಪ್ಪ, ವೇಣುಗೋಪಾಲ್, ಓಬಳೇಶಪ್ಪ, ನಾರಾಯಣಪ್ಪ, ಅಂಜಪ್ಪ, ಮುತ್ಯಾಲಪ್ಪ ಉಪಸ್ಥಿತರಿದ್ದರು.
ನಟ ಹನುಮಂತೇಗೌಡರಿಗೆ ಕೊನೆಗೂ ಸಂಜೆ ಕಂಡ ಮಹಿಳೆ!
ಅದು ತುಮಕೂರು ಹೊರವಲಯದ ರಿಂಗ್ ರಸ್ತೆ. ಸ್ನೇಹಿತರನ್ನು ನೋಡಲು ಹೋಗಿದ್ದ ನಟ ಹನುಮಂತೇಗೌಡರು ರಸ್ತೆಯ ಪಕ್ಕದಲ್ಲೇ ನಿಂತಿದ್ದರು. ಬೈಕ್ ಬೇರೆ ತಕ್ಕೊಂಡು ಹೋಗಿರಲಿಲ್ಲ. ಜೊತೆ ಇದ್ದ ಸ್ನೇಹಿತರೂ ಇರಲಿಲ್ಲ. ಆಟೋಗಳ ಓಡಾಟವೂ ಆ ಭಾಗದಲ್ಲಿ ಇರುವುದಿಲ್ಲ.ಹಾಗಾಗಿ ಸಿಟಿ ಬಸ್ ಬರಬಹುದೆಂದು ಕಾಯುತ್ತಿದ್ದರು. ಆಗಲೇ ಏಳು ಗಂಟೆ, ಒಬ್ಬರೇ ನಿಲ್ಲುವುದೆಂದರೆ ಕಷ್ಟದ ಸಂಗತಿ. ಜೊತೆಯಲ್ಲಿ ಯಾರಾದರೂ ಇದ್ದರೆ ಮಾತುಕತೆ ಆಡಬಹುದಿತ್ತು.ಆದರೆ ಅಂಥ ಅವಕಾಶಕ್ಕೆ ಎಡೆ ಇರಲಿಲ್ಲ.

ಏನು ಮಾಡುವುದೆಂದು ಅಲೋಚಿಸುತ್ತಿರುವಾಗಲೇ ವಾಹನವೊಂದು ಇವರತ್ತ ಬಂದಿದೆ. ಅದು ಬರಬೇಕಾಗಿದ್ದುದು ಅದೇ ಮಾರ್ಗದಲ್ಲಿ ರಾತ್ರಿ 7 ಗಂಟೆ ನಿತ್ಯವೂ ಸಂಚರಿಸುವ ವಾಹನ. ಅಂಥ ವಾಹನ ಬಂದುದನ್ನು ಹನುಮಂತೇಗೌಡರು ನೋಡಿದರು. ಬಸಲ್ಲಿ ಹೆಣ್ಣು ಮಕ್ಕಳೇ ತುಂಬಿದ್ದರು. ಯಾವುದೋ ವಾಹನವಿರಬಹುದು ಎಂದು ಸುಮ್ಮನಿದ್ದರು. ಆ ಬಸಲ್ಲಿದ್ದ ಮಹಿಳೆಯರು ಇವರನ್ನು ನೋಡಿದರು. ಆ ವಾಹನವೂ ನಿಂತಿತು. ಅಣ್ಣ ನಿಮ್ಮನ್ನು ನೋಡಿದ್ದೇವೆ. ನಿಮ್ಮ ಪರಿಚಯ ನಮಗೆ ಇದೆ. ನೀವು ಸೀರಿಯಲ್ ಮತ್ತು ಸಿನಿಮಾದಲ್ಲಿ ಆಕ್ಟ್ ಮಾಡುತ್ತೀರ ಅಲ್ಲವೇ? ಬನ್ನಿ ಅಣ್ಣ ಬಸ್ ಹತ್ತಿ, ನಾವು ಸಿಟಿಗೆ ಹೋಗುತ್ತಿದ್ದೇವೆ. ನಿಮ್ಮನ್ನು ಅಲ್ಲಿವರೆಗೂ ಬಿಡುತ್ತೇವೆ ಅಂದರು.
ಸರಿ, ಇವರಿಗೂ ಹೋಗಲು ಬೇರೆ ಮಾರ್ಗವಿಲ್ಲ. ಬಸ್ ಹತ್ತಿದರು. ಅವರ ನಟನೆ ಬಗ್ಗೆ ಚರ್ಚೆಯೂ ನಡೆಯಿತು. ಹನುಮಂತೇಗೌಡರಿಗೆ ಇವರೆಲ್ಲ ಗಾರ್ಮೆಂಟ್ಸ್ ಫ್ಯಾಕ್ಟರಿಯ ಹೆಣ್ಣು ಮಕ್ಕಳೆಂಬುದ ಖಚಿತವಾಯಿತು. ಕೂಡಲೇ ಗೌಡರು ಕೇಳಿದರು. ‘’ಹೇಗಿದೆ ಕೆಲಸ? ಸಂಬಳ ಸರಿಯಾಗಿ ಕೊಡ್ತಾರ?’ ಎಂದರು.
ಮಹಿಳೆಯರು ಒಬ್ಬೊಬ್ಬರೇ ಹೇಳುತ್ತಾ ಹೋದರು. ಅಣ್ಣಾ ಬೆಳಗ್ಗೆ ಹೋಗಿ ಸಂಜೆ ಬರುತ್ತೇವೆ. ದಿನಾನು ಇಷ್ಟೊತ್ತು ಆಗುತ್ತೆ ಬೆಳೆಗ್ಗೆ ಕೆಲಸಕ್ಕೆ ಹೋದೋರು ಮತ್ತೆ ಕೆಲಸಕ್ಕೆ ಹೋಗ್ತೀವೋ ಇಲ್ಲವೋ ಅನ್ನೋ ಸ್ಥಿತಿ ಐತೆ. ಇವರು ಕೊಡೋ ಏಳೆಂಟು ಸಾವಿರದಲ್ಲಿ ಜೀವನ ಸಾಗಿಸ್ಬೇಕು. ಮಕ್ಕಳನ್ನು ಓದಿಸ್ಬೇಕು. ಕಷ್ಟ ಐತೆ ಕಣಣ್ಣಾ, ನಮ್ ಕೆಲ್ಸ ಗ್ಯಾರೆಂಟಿನೇ ಇಲ್ಲ. ಯಾವಾಗ ಬೇಕಾದ್ರೂ ತಗೀಬೌದು. ನಮ್ ಕಷ್ಟ ಯಾರಿಗೆ ಹೇಳನಾ?
ಇಲ್ಲಿ ಕೆಲ್ಸ ಬಿಟ್ಟು ಊರಿಗೆ ಹೋಗಿ ಬದ್ಕೋದುಂಟಾ ಅಣ್ಣಾ. ಆಲ್ಲಿ ಏನ್ ಕೆಲ್ಸ ಐತೆ. ಅಲ್ಲೋದ್ರೆ ಆಡ್ಕಳ್ಳಲ್ವಾ? ಊರಿಗೆ ಹೋದ್ರ ಮಕ್ಕಳನ್ನು ಓದ್ಸೋದು ಹೆಂಗೆ, ಕಷ್ಟಾನೋ ಸುಖಾನೋ ಇಲ್ಲೇ ಇರ್ತೀವಣ್ಣ. ಹೆಂಗೋ ಬದ್ಕು ಸಾಗಿಸ್ತೇವೆ ಎಂದು ಗೋಳು ತೋಡಿಕೊಂಡರು.
ಕೊರಟಗೆರೆ : ಬೀದಿಗೆ ಏಕೆ ಬಂದರು ಹಾಲು ಉತ್ಪಾದಕರು
ವಿದೇಶದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರ ನಿರ್ಧಾರವನ್ನು ಖಂಡಿಸಿ ಕೊರಟಗೆರೆ ಹಾಲು ಉತ್ಪಾದಕರು ಬೃಹತ್ ಪ್ರತಿಭಟನೆ ನಡೆಸಿದರು. ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ಸ್ಥಳೀಯ ಹಾಲು ಉತ್ಪಾದಕರು ಬೀದಿಪಾಲಾಗಲಿದ್ದಾರೆ ಎಂದು ಆರೋಪಿಸಿದರು.
ನ್ಯೂಜಿಲ್ಯಾಂಡ್ ತನ್ನ ಉತ್ಪಾದನೆಯ ಶೇಕಡ 93ರಷ್ಟು ಹಾಲನ್ನು ರಫ್ತು ಮಾಡುತ್ತದೆ. ಈ ಹಾಲು ನಮ್ಮ ದೇಶದೊಳಗೆ ಬಂದರೆ ರೈತರು ಮತ್ತು ಕೃಷಿಕೂಲಿಕಾರರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದಕ್ಕೆ ಸಹಿ ಹಾಕುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ವಿದೇಶೀ ಹಾಲನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದ ನಮ್ಮ ರೈತರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬೇರೆ ದೇಶಗಳೂ ಕೂಡ ನಮ್ಮ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ದತೆ ನಡೆಸಿವೆ. ಇಂತಹ ಸನ್ನಿವೇಶದಲ್ಲಿ ಭಾರತ ಸರ್ಕಾರ ರೈತರ ವಿರೋಧಿ ನೀತಿ ಅನುಸರಿಸಲು ಮುಂದಾಗಿದೆ. ವಿದೇಶೀ ಹಾಲು ನಮ್ಮ ಮಾರುಕಟ್ಟೆ ಪ್ರವೇಶಿಸಿದರೆ ಲಕ್ಷಾಂತರ ಮಂದಿ ಹಾಲು ಉತ್ಪಾಧಕರು ಕೆಲಸ ನಿರುದ್ಯೋಗಿಗಳಾಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಲ್ಲದೆ ವಿದೇಶ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಮಾರುಕಟ್ಟೆಯ ಮೇಲೆ ಸವಾರಿ ಮಾಡಲಿವೆ ಎಂದು ಎಚ್ಚರಿಸಿದರು.

ಈಗಾಗಲೇ ಹಾಲು ಉತ್ಪಾದನೆ ರೈತರಿಗೆ ನಷ್ಟವನ್ನು ಉಂಟು ಮಾಡುತ್ತಿದೆ. ಆದರೂ ಅನಿವಾರ್ಯವಾಗಿ ಹೈನುಗಾರಿಕೆಯಲ್ಲಿ ರೈತರು ತೊಡಗಿದ್ದಾರೆ. ಅದರ ಫಲವಾಗಿ ರಾಜ್ಯದ ಪ್ರತಿನಿತ್ಯದ 80-85 ಲಕ್ಷ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಜಿಲ್ಲೆಯ ಸುಮಾರು 70 ಸಾವಿರ ಕುಟುಂಬಗಳು ಹಾಲು ಉತ್ಪಾದನೆಯಲ್ಲಿ ತೊಡಗಿವೆ. ಕೇಂದ್ರ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ ಇಷ್ಟು ಕುಟುಂಬಗಳು ಬೀದಿಗೆ ಬರಲಿವೆ. ದೇಶೀಯ ಹಾಲು ಉತ್ಪಾದಕರು ವಿದೇಶಿ ಹಾಲಿನೊಂದಿಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಕೆಬಿಗೆ ರಾಜ್ಯಮಟ್ಟದ ನುಡಿನಮನ
ತುಮಕೂರು:ಸಾಹಿತಿ ಕೆ.ಬಿ.ಸಿದ್ದಯ್ಯ ನಿಧನದ ಹಿನ್ನೆಲೆಯಲ್ಲಿ ಮುಂದಿನ ಕಾರ್ಯಯೋಜನೆಗಳನ್ನು ಕೈಗೊಳ್ಳುವ ಸಂಬಂಧ ತುಮಕೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಾತ್ಯತೀತ ಯುವ ವೇದಿಕೆಯಿಂದ ಆಯೋಜಿಸಿದ್ದ ಸಭೆಯಲ್ಲಿ ತುಮಕೂರಿನಲ್ಲಿ ರಾಜ್ಯಮಟ್ಟದ ನುಡಿನಮನ ಕಾರ್ಯಕ್ರಮ ನಡೆಸುವುದು ಮತ್ತು ಕೆ.ಬಿ.ಸಿದಯ್ಯ ಪ್ರತಿಷ್ಠಾನ ಸ್ಥಾಪಿಸುವ ಕುರಿತು ಚರ್ಚಿಸಲಾಯಿತು.
ಒಂದು ತಿಂಗಳೊಳಗೆ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಯಿತು. ನುಡಿನಮನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವನೂರು ಮಹಾದೇವ, ಎಚ್.ಗೋವಿಂದಯ್ಯ, ಮಲ್ಲಿಕಾ ಘಂಟಿ, ಸಾಹಿತಿ ಸಿದ್ದಲಿಂಗಯ್ಯ ಮತ್ತು ರವಿವರ್ಮ ಕುಮಾರ್ ಸೇರಿದಂತೆ ಹಲವರನ್ನು ಕರೆಸುವ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಹಿರಿಯರಾದ ಕೆ.ದೊರೈರಾಜ್, ಕುಂದೂರು ತಿಮ್ಮಯ್ಯ, ಡಾ.ಬಸವರಾಜ್, ಜಿ.ಟಿ.ವೆಂಕಟೇಶ್, ವಿರೂಪಾಕ್ಷ ಡ್ಯಾಗೇರಹಳ್ಳಿ, ಕೊಟ್ಟಶಂಕರ್, ವಕೀಲ ಮಾರುತಿ ಪ್ರಸಾದ್ ಮೊದಲಾದವರು ಭಾಗವಹಿಸಿ ಅಭಿಪ್ರಾಯಗಳನ್ನು ಹಂಚಿಕೊಂಡರು.
ನಿದ್ದೆಗೆಡಿಸುವ ಆತಂಕಕಾರಿ ದಿನಗಳನ್ನು ಒದ್ದೋಡಿಸಬೇಕು – ಚಿಂತಕ ಕೆ.ದೊರೈರಾಜ್
ಪ್ರಸಕ್ತ ದೇಶದ ಸ್ಥಿತಿಯಲ್ಲಿ ಜನಸಾಮಾನ್ಯರ ನಿದ್ದೆಗೆಡಿಸುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದ್ದು ಇದನ್ನು ಒದ್ದೋಡಿಸಲು ಜನಪರ, ಜೀವಪರ ಚಳವಳಿಗಳು ಒಂದುಗೂಡಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ತಿಳಿಸಿದರು.
ತುಮಕೂರಿನ ಗಾಂಧೀನಗರಲದಲಿರುವ ಜನಚಳವಳಿ ಕೇಂದ್ರದಲ್ಲಿ ಅಕ್ಟೋಬರ್ 20ರಂದು ಹಮ್ಮಿಕೊಂಡಿದ್ದ ಸಿಐಟಿಯುನ 14ನೇ ರಾಜ್ಯ ಸಮ್ಮೇಳನದ ಸಿದ್ಧತೆ ಭಾಗವಾಗಿ ಸ್ವಾಗತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಚಳವಳಿಗಳು ಜನಸಾಮಾನ್ಯರ ನಡುವೆ ತಾತ್ವಿಕ ಹಾಗೂ ಬೌದ್ಧಿಕ ವಿಚಾರಗಳನ್ನು ವ್ಯಾಪಕವಾಗಿ ಕೊಂಡು ಹೋಗುವ ಮೂಲಕ ಬಲಿಷ್ಟ ಚಳವಳಿಗಳನ್ನು ಕಟ್ಟಬೇಕಾದ ಅಗತ್ಯವಿದೆ ಎಂದರು.
ಇತ್ತೀಚೆಗೆ ಬಂಟಿಂಗ್ ತೆರವುಗೊಳಿಸಲು ಸಂದರ್ಭದಲ್ಲಿ ಸಾವನ್ನಪ್ಪಿದ ವಿಚಾರವನ್ನು ಪ್ರಸ್ತಾಪಿಸಿದ ಅವರು, ವ್ಯವಸ್ಥೆಯಿಂದಾದ ಸಾವಿಗೆ ಸತ್ತ ಪೌರಕಾರ್ಮಿಕನನ್ನೇ ಹೊಣೆಯಾಗಿಸುವ ಅಮಾನವೀಯ ವ್ಯವಸ್ಥೆ ಖಂಡನಾರ್ಹ ಎಂದು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಉಮೇಶ್ ವಿಷಯ ಮಂಡಿಸಿದರು. ಸಿಐಟಿಯು ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ದುಡಿಯುವ ಜನರ ರಕ್ಷಣೆಗಾಗಿ ನಿರಂತರವಾಗಿ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಸಿಐಟಿಯು ರಾಜ್ಯ ಸಮ್ಮೇಳನದಕ್ಕೆ ಜನರು ಬೆಂಬಲಿಸಿ, ಸಹಾಯ, ಸಹಕಾರ ನೀಡುವಂತೆ ಕೋರಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕಮಲ, ಜಿಲ್ಲಾ ಖಜಾಂಚಿ ಎ.ಲೋಕೇಶ್, ಸ್ವಾಗತ ಸಮಿತಿಯ ಖಜಾಂಚಿ ಷಣ್ಮುಗಪ್ಪ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾಂiÀರ್iದರ್ಶಿ ಗುಲ್ಜಾರ್ ಬಾನು, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ್, ಬೀಡಿ ಕಾರ್ಮಿಕರ ಸಂಘದ ನಿಸಾರ್ ಅಹಮದ್ ಶಿರಾ, ಕಟ್ಟಡ ಕಾರ್ಮಿಕರ ಸಂಘಟನೆಯ ಟಿ.ಎಂ.ಗೋವಿಂದರಾಜು, ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿದರು.
ಇದೇ ವೇಳೆ ಇತ್ತೀಚೆಗೆ ನಿಧನರಾದ ಸಿಐಟಿಯು ಹಿರಿಯ ಮುಖಂಡ ಕೋದಂಡರಾಮ್ ಹಾಗೂ ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ಅವರಿಗೆ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಮಗನ ಗಾಳಿಪಟದ ಆಸೆಗಾಗಿ ಸುಟ್ಟು ಕರಕಲಾದ ತಂದೆ
ತುಮಕೂರು:ತಂತಿಗೆ ಸಿಲುಕಿದ್ದ ಗಾಳಿಪಟವನ್ನು ತೆಗೆಯಲು ಹೋದ ವ್ಯಕ್ತಿಯೊಬ್ಬರು ಹೈಟೆಂನ್ಷನ್ ವೈರ್ ತಗುಲಿ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಸದಾಶಿವನಗರದಲ್ಲಿ ಅಬ್ಸಲ್ ಮಗ ಮನೆಯ ಮುಂದೆ ನಿಂತು ಗಾಳಿಪಟ ಹಾರಿಸುತ್ತಿದ್ದು. ಗಾಳಿ ಜೋರಾಗಿ ಬೀಸಿದ್ದರಿಂದ ಆ ಗಾಳಿಪಟ ವಿದ್ಯುತ್ ತಂತಿಗೆ ಸಿಲುಕಿಕೊಂಡಿದೆ. ಆಗ ಅಬ್ಸಲ್ ಬಂದು ಗಾಳಿಪಟ ತೆಗೆದುಕೊಡಲು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಗಾಳಿಪಟ ತೆಗೆಯುವಾಗ ಹೈಟೆಂನ್ಷನ್ ವೈಯರ್ ಅಬ್ಸಲ್ ಗೆ ತಗುಲಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಪೌರಕಾರ್ಮಿಕ ನರಸಿಂಹಮೂರ್ತಿ ಕೇಸರಿ ಬಾವುಟ ತೆರವುಗೊಳಿಸಲು ಹೋಗಿ ಮೃತಪಟ್ಟ ವಾರದಲ್ಲೇ 50 ವರ್ಷದ ಅಬ್ಸಲ್ ಕೂಡ ಅದೇ ರೀತಿ ಮೃತಪಟ್ಟಿದ್ದಾರೆ.
ಮೊದಲನೆಯದು ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಡೆದಿದ್ದರೆ, ಮತ್ತೊಂದು ಗಾಳಿಪಟ ತೆಗೆದುಕೊಡುವಾಗ ಸಂಭವಿಸಿದೆ.
ತುಮಕೂರು ಜಿಲ್ಲೆಗೆ ಬಯಲು ರಂಗಾಯಣ: ರಂಗಭೂಮಿ ಕಲಾವಿದರ ಒಕ್ಕೂಟಕ್ಕೆ ಪ್ರಗತಿಪರ ಸಂಘಟನೆಗಳ ಬೆಂಬಲ
ತುಮಕೂರು: ಜಿಲ್ಲೆಗೆ ಬಯಲು ರಂಗಾಯಣ ಬೇಕೆಂಬ ಬೇಡಿಕೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಂಗಭೂಮಿ ಕಲಾವಿದರ ಒಕ್ಕೂಟ ಹಲವು ಸುತ್ತಿನ ಸಭೆ ಸಂಘಟಿಸಿ ಚರ್ಚಿಸಿದ್ದು ಸಾಹಿತಿಗಳು, ಕಲಾವಿದರು, ಬರಹಗಾರರು, ಪತ್ರಕರ್ತರು, ಹೋರಾಟಗಾರರು ಕೂಡ ಒಕ್ಕೂಟದ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 20ರಂದು ತುಮಕೂರು ನಗರದ ಅಮಾನಿಕೆರೆ ಎದುರಿನ ಕನ್ನಡ ಭವನದಲ್ಲಿ ಒಕ್ಕೂಟದ ಸಂಚಾಲಕ ಹೊನ್ನವಳ್ಳಿ ನಟರಾಜ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಐದು ವಿಷಯಗಳು ಚರ್ಚೆಗೆ ಬಂದವು.
ರಾಜ್ಯ ಮತ್ತು ರಾಷ್ಟ್ರಮಟ್ಟದ ರಂಗ ಪ್ರಯೋಗಗಳನ್ನು ನಡೆಸಲು ಒಂದು ವೇದಿಕೆ ಅಗತ್ಯವಿದೆ. ಡಾ.ಗುಬ್ಬಿ ವೀರಣ್ಣ ಕ್ಯಾಂಪಸ್ ಮಾಡಬೇಕು. ಸಂಶೋಧನ ಕೇಂದ್ರ ಆಗಬೇಕು. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಉಸ್ತುವಾರಿಯಲ್ಲಿ ಸಮಿತಿ ರಚನೆಯಾಗಬೇಕು. ಹತ್ತು ತಾಲೂಕುಗಳಿಗೂ ಒಂದೊಂದು ಪುಟ್ಟ ರಂಗಮಂದಿರ ಆಗಬೇಕು. ಪ್ರತಿ ವರ್ಷ ಬಯಲುಸೀಮೆ ನಾಟಕೋತ್ಸವ ಆಚರಿಸಬೇಕು ಎಂಬ ವಿಷಯಗಳನ್ನು ಚರ್ಚಿಸಲಾಯಿತು.
ಬಯಲುಸೀಮೆ ರಂಗಾಯಣದ ಅಗತ್ಯತೆ ಏನು? ಯಾವ ಕಾರಣಕ್ಕೆ ಜಿಲ್ಲೆಯಲ್ಲಿ ರಂಗಾಯಣ ಸ್ಥಾಪನೆ ಮಾಡಬೇಕು ಎಂಬ ಬಗ್ಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸಲ್ಲಿಸಲಾಗಿದೆ. ಈ ಸಭೆಯಲ್ಲೂ ಕೂಡ ಮುಂದುವರೆದ ಚರ್ಚೆಗಳು ನಡೆದು ಭಾಗವಹಿಸಿದವರೆಲ್ಲರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ತುಮಕೂರು ಜಿಲ್ಲಾ ರಂಗಭೂಮಿ ಒಕ್ಕೂಟದ ನಿಯೋಗ ಇನ್ನು ಒಂದು ವಾರದಲ್ಲಿ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲೆಯ ಮೂವರು ಸಂದರನ್ನೂ ಹಾಗೂ ಹತ್ತೂ ತಾಲ್ಲೂಕುಗಳ ಶಾಸಕರುಗಳಿಗೆ ೫ ಬೇಡಿಕೆಗಳ ವಿಸೃತವಾದ ವರದಿಯನ್ನು ಸಲ್ಲಿಸಿತು ತೀರ್ಮಾನಿಸಲಾಯಿತು.
ಸಭೆಯಲ್ಲಿ ವಿಮರ್ಶಕ ಡಾ.ನಟರಾಜ್ ಬೂದಾಳ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪತ್ರಕರ್ತ ಉಗಮಶ್ರೀನಿವಾಸ್, ಗೋಮಾರ್ದನಹಳ್ಳಿ ಪಿ.ಮಂಜುನಾಥ್, ನಾಟಕಮನೆ ಮಹಲಿಂಗು, ಅನಿಲ್ ಚಿಕ್ಕದಾಳವಟ್ಟ, ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ನಾಗಲಮಡಿಕೆಯಲ್ಲಿ ಪ್ರತ್ಯಕ್ಷ ಸರ್ಪ ದರ್ಶನ
ಅಂತ್ಯ ಸುಬ್ರಹ್ಮಣ್ಯ ಎಂದೇ ಜನಪ್ರಿಯವಾಗಿರುವ ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ಬರುತ್ತಾರೆ. ಚರ್ಮವ್ಯಾದಿ, ಕಣ್ಣು, ಮೂಗು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ಸುಬ್ರಹ್ಮಣ್ಯನ ಅನುಗ್ರಹವೇ ಪರಿಹಾರ ಎಂಬ ನಂಬಿಕೆ ಅವರದು. ಉತ್ತರ ಪಿನಾಕಿನಿ ನದಿ ತಟದಲ್ಲಿರುವ ಈ ದೇಗುಲಕ್ಕೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ಇತರೆ ರಾಜ್ಯಗಳ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ.

ನಾಗದೋಷ ನಿವಾರಣೆಗಾಗಿ ಇಲ್ಲಿಗೆ ಬರುವವರೇ ಹೆಚ್ಚು. ಈ ದೇಗುಲಕ್ಕೆ 5 ನೂರು ವರ್ಷಗಳ ಇತಿಹಾಸವಿದೆ ಎಂದು ಹಿರಿಯರು ಹೇಳುತ್ತಾರೆ. ಶತಮಾನಗಳ ಹಿಂದೆ ನೊಳಂಬ ಪಲ್ಲವರ ಕಾಲದಲ್ಲಿ ನಾಗಲಮಡಿಕೆ ಗ್ರಾಮ ಪುಟ್ಟ ಅಗ್ರಹಾರವಾಗಿತ್ತು. ಅನ್ನಂಭಟ್ಟ ಎಂಬ ಭಕ್ತ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಅನುಯಾಯಿಯಾಗಿದ್ದರು. ಪ್ರತಿ ವರ್ಷ ಕುಕ್ಕೆಯಲ್ಲಿ ನಡೆಯುವ ರಥೋತ್ಸವಕ್ಕೆ ಅನ್ನಂಭಟ್ಟರು ಅನ್ನಾಹಾರ ಸೇವಿಸದೆ ಕಾಲ್ನಡಿಗೆ ಮೂಲಕ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ವಯಸ್ಸು ಹೆಚ್ಚಿದಂತೆ ಭಟ್ಟರ ಶಕ್ತಿ ಕುಂದತೊಡಗಿತು. ರಥೋತ್ಸವದ ವೇಳೆಗೆ ಕುಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಅನ್ನಂಭಟ್ಟರು ರಥೋತ್ಸವಕ್ಕೆ ಬರುವುದಿಲ್ಲ ಎಂದು ನಿರ್ಧರಿಸಿ, ಅಲ್ಲಿನ ಭಕ್ತರು ರಥವನ್ನು ಎಳೆಯಲು ಮುಂದಾದರು. ಆದರೆ ಒಂದಿಂಚೂ ಕದಲಿಸಲು ಸಾಧ್ಯವಾಗಿಲ್ಲ. ಸುಬ್ರಹ್ಮಣ್ಯ ಸ್ವಾಮಿ ಭಕ್ತನೋರ್ವನ ಮೈಮೇಲೆ ಆವಾಹನೆಯಾಗಿ, ನನ್ನ ಭಕ್ತ ದೂರದಲ್ಲಿ ಬರುತ್ತಿದ್ದಾನೆ. ಆತ ಬರುವವರೆಗೆ ಕಾಯಬೇಕು ಎಂದು ಸೂಚಿಸಿದ್ದಾರೆ. ಭಟ್ಟರು ಬಂದು ಪೂಜೆ ನೆರವೇರಿಸಿದ ನಂತರ ರಥ ಕದಲಿದೆ. ಆ ನಂತರ ಅನ್ನಂಭಟ್ಟರಿಗೆ ವಯಸ್ಸಾದ ಕಾರಣ ನಾಗಲಮಡಿಕೆಯಲ್ಲಿಯೇ ಪುಜಾ ಕೈಂಕರ್ಯ ಮುಂದೆವರೆಸಿಕೊಂಡು ಹೋಗುವಂತೆ ಆವಾಹನೆಗೊಂಡ ಭಕ್ತನ ಮೂಲಕ ಸೂಚಿಸಲಾಗಿದೆ. ಜೊತೆಗೆ ಕುಕ್ಕೆ ದೇಗುಲದಲ್ಲಿದ್ದ ಒಂದು ಪಂಚ ಲೋಹದ ವಿಗ್ರಹವನ್ನು ಅನ್ನಂಭಟ್ಟರಿಗೆ ಕೊಡಲಾಗಿದೆ. ಇಂದಿಗೂ ಪಂಚ ಲೋಹದ ವಿಗ್ರಹವನ್ನು ಉತ್ಸವ ಮೂರ್ತಿಯಾಗಿ ನಾಗಲಮಡಿಕೆ ದೇಗುಲದಲ್ಲಿ ಆರಾಧಿಸಲಾಗುತ್ತಿದೆ. ಸ್ವಪ್ನದಲ್ಲಿ ಸುಬ್ರಹ್ಮಣ್ಯ ಕೆಲ ದಿನಗಳ ನಂತರ ಅನ್ನಂಭಟ್ಟರ ಕನಸಿನಲ್ಲಿ ಸುಬ್ರಹ್ಮಣ್ಯಸ್ವಾಮಿ ಕಾಣಿಸಿಕೊಂಡು, ಉತ್ತರ ಪಿನಾಕಿನಿ ನದಿಯಲ್ಲಿ ತಾನಿರುವುದಾಗಿ, ತನ್ನನ್ನು ಹುಡುಕಿ ಪ್ರತಿಷ್ಠಾಪನೆ ನಡೆಸಬೇಕು ಎಂದು ತಿಳಿಸಿದ್ದಾರೆ. ಸ್ವಪ್ನ ವೃತ್ತಾಂತವನ್ನು ಗ್ರಾಮಸ್ಥರಿಗೆ ತಿಳಿಸಿದ ಭಟ್ಟರು ಎತ್ತಿನ ಮಡಿಕೆಗಳ ಮೂಲಕ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ನದಿಯ ನಿಗದಿತ ಸ್ಥಳದಲ್ಲಿ ಎತ್ತುಗಳು ಮುಂದೆ ಹೋಗಲು ಸಾಧ್ಯವಾಗದೆ ನಿಂತಿವೆ. ಮಡಿಕೆ ಇದ್ದ ಸ್ಥಳವನ್ನು ಅಗೆದು ನೋಡಿದಾಗ ಏಳು ಹೆಡೆ ಸರ್ಪ, ಸುತ್ತಿಕೊಂಡಿರುವ ನಾಗರ ವಿಗ್ರಹ ಸಿಕ್ಕಿದೆ. ನದಿ ತಟದಲ್ಲಿ ವಿಗ್ರಹ ಸ್ವಪ್ನದಲ್ಲಿ ದೇವರು ನಿರ್ದೇಶನ ನೀಡಿದಂತೆ ನದಿ ತಟದಲ್ಲಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಮಡಿಕೆಗೆ ನಾಗರ ವಿಗ್ರಹ ಸಿಕ್ಕಿದ್ದರಿಂದ ನಾಗಲಮಡಿಕೆ ಎಂಬ ಹೆಸರಿನಿಂದ ಗ್ರಾಮವನ್ನು ಕರೆಯಲಾಗುತ್ತದೆ.

ಆಂಧ್ರದ ರೊದ್ದಂ ವ್ಯಾಪಾರಿ ಬಾಲ ಸುಬ್ಬಯ್ಯ ಎಂಬುವರು ದೈವ ಪ್ರೇರಣೆಯಂತೆ ದೇಗುಲ ನಿರ್ಮಿಸಿದ್ದಾರೆ. ಅವರ ವಂಶಸ್ಥರು ಇಂದಿಗೂ ಜಾತ್ರೆಯ ದಿನಗಳಂದು ಪೂಜೆ, ಅನ್ನದಾಸೋಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕುಕ್ಕೆಯನ್ನು ಆದಿ ಸುಬ್ರಹ್ಮಣ್ಯ ಎಂತಲೂ, ಘಾಟಿಯನ್ನು ಮಧ್ಯ ಸುಬ್ರಹ್ಮಣ್ಯ ಎಂದು, ನಾಗಲಮಡಿಕೆಯನ್ನು ಅಂತ್ಯ ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನಾಗಲಮಡಿಕೆ ದೇಗುಲದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಹೋಮ, ಹವನ ಇತ್ಯಾದಿ ವಿಶೇಷ ಪೂಜೆ ನಡೆಸಲಾಗುತ್ತದೆ. ಕಿವಿಯಲ್ಲಿ ಕೀವು ಸೋರುವುದು, ಕಣ್ಣಿನ ಸಮಸ್ಯೆ, ಉಸಿರಾಟ, ಚರ್ಮ ಸಮಸ್ಯೆ, ವಿವಾಹ, ಸಂತಾನ ಭಾಗ್ಯ, ಕೋರ್ಟ್, ಕಚೇರಿ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕಾಗಿ ಭಕ್ತರು ದೇವಸ್ಥಾನಕ್ಕೆ ಬರುವುದು ಸಾಮಾನ್ಯ. ಇಲ್ಲಿಗೆ ಬಂದು ಸಮಸ್ಯೆ ಪರಿಹರಿಸಿಕೊಂಡಿರುವುದಾಗಿ ಭಕ್ತರು ತಿಳಿಸುತ್ತಾರೆ.
ತೀಟೆ ನಾಗಪ್ಪ ನಾಗಲಮಡಿಕೆಯಿಂದ ಪೆಂಡ್ಲಿಜೀವಿಗೆ ಹೋಗುವ ಮಾರ್ಗದಲ್ಲಿ ತೀಟೆ ನಾಗಪ್ಪ ದೇಗುಲವಿದೆ. ಉದ್ಭವ ಮೂರ್ತಿ ತೀಟೆ ನಾಗಪ್ಪನಿಗೆ ಪೂಜೆ ಸಲ್ಲಿಸುವುದರಿಂದ ಚರ್ಮ ವ್ಯಾಧಿ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಭಕ್ತರು ವಿಗ್ರಹವನ್ನು ಮಾಡಿ, ಪೂಜೆ ಸಲ್ಲಿಸಲು ಇಲ್ಲಿ ಅವಕಾಶವಿದೆ. ಬ್ರಹ್ಮ ರಥೋತ್ಸವ ವಿಶೇಷ ಪುಷ್ಯ ಮಾಸದ ಷಷ್ಠಿಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ. ಸಹಸ್ರಾರು ಭಕ್ತರು ದೇವರ ದರ್ಶನ ಪಡೆದು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ದೂರದೂರುಗಳಿಂದ ಎತ್ತಿನ ಬಂಡಿಯಲ್ಲಿ ಬಂದು ನದಿ ತಟದಲ್ಲಿ ಅಡುಗೆ ತಯಾರಿಸಿ ಪೂಜೆ ನಂತರ ಒಂದು ಹೊತ್ತು ಬಿಡುವ ಪದ್ಧತಿ ಈ ಭಾಗದ ಜನರಲ್ಲಿದೆ. ಮಾರ್ಗಶಿರ, ಪುಷ್ಯ, ಮಾಘ ಮಾಸಗಳ ಷಷ್ಠಿಯಂದು ಆರಾಧನೆ, ವಿಶೇಷ ಪೂಜಾ ಮಹೋತ್ಸವ ನಡೆಸಲಾಗುತ್ತದೆ.
ಪಾವಗಡ:ಸಂಕಾಪುರ ಸುವರ್ಚಲಾ ಆಂಜನೇಯ
ಆಂಜನೇಯಸ್ವಾಮಿ ಬ್ರಹ್ಮಚಾರಿ ಅಲ್ಲವೇ? ಆದರೆ ತುಮಕೂರು ಜಿಲ್ಲೆ ಪಾವಗಡ ತಾಲೂಕು ನಲಿಗಾನಹಳ್ಳಿ ಬಳಿಯ ಸಂಕಾಪುರದ ಸುವರ್ಚಲಾ ಆಂಜನೇಯ ಸ್ವಾಮಿ ದೇಗುಲದಲ್ಲಿ ಪ್ರತಿ ಜ್ಯೇಷ್ಠ ಮಾಸದಲ್ಲಿ ಆಂಜನೇಯ ಸ್ವಾಮಿಗೆ ಕಲ್ಯಾಣೋತ್ಸವ ನಡೆಯುತ್ತದೆ.
500 ವರ್ಷಕ್ಕೂ ಮೀರಿದ ಇತಿಹಾಸವಿರುವ ದೇಗುಲದ ವಿಗ್ರಹವನ್ನು ವ್ಯಾಸ ಮಹರ್ಷಿಗಳು ಪ್ರತಿಷ್ಠಾಪಿಸಿದ್ದಾರೆ ಎಂಬುದು ನಂಬಿಕೆ. ಇಲ್ಲಿನ ಗುಂಡ್ಲಹಳ್ಳಿ ದೊಡ್ಡ ಕೆರೆಗೆ ಸಂಬಂಧಿಸಿದ ಶಾಸನವೂ ಕೆಲ ಐತಿಹಾಸಿಕ ಕುರುಹುಗಳನ್ನು ನೀಡುತ್ತದೆ.
ಕೇರಳ, ತಮಿಳುನಾಡು ಸೇರಿದಂತೆ ಹಲ ಪ್ರದೇಶಗಳಿಂದ ದೇಗುಲಕ್ಕೆ ಭಕ್ತರು ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಸಾಕಷ್ಟು ಪ್ರಚಾರ ಪಡೆಯದಿದ್ದರೂ ದೇಗುಲದ ಬಗ್ಗೆ ತಿಳಿದಿರುವ ಭಕ್ತಾದಿಗಳು ಮಂಗಳವಾರ, ಶನಿವಾರ, ಹುಣ್ಣಿಮೆ, ಅಮಾವಾಸ್ಯೆ ಹಾಗೂ ವಿಶೇಷ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಕ್ಕೆ ಬರುತ್ತಾರೆ.

ಇಲ್ಲಿನ ಆಂಜನೇಯ ಸ್ವಾಮಿ ಹೆಸರೇ ಸುವರ್ಚಲಾ ಆಂಜನೇಯಸ್ವಾಮಿ. ಸುವರ್ಚಲಾ ದೇವಿ ಸೂರ್ಯ ಪುತ್ರಿ. ವಾಯು ಪುತ್ರ ಆಂಜನೇಯಸ್ವಾಮಿ. ಪರಾಶರ ಸಂಹಿತೆಯಲ್ಲಿ ಲೋಕ ಕಲ್ಯಾಣಕ್ಕಾಗಿ ಸುವರ್ಚಲಾ ದೇವಿ, ಆಂಜನೇಯಸ್ವಾಮಿ ಕಲ್ಯಾಣ ನಡೆಯುತ್ತದೆ. ವಿವಾಹವಾದರೂ ಆಂಜನೇಯಸ್ವಾಮಿ ಬ್ರಹ್ಮಚಾರಿಯಾಗಿಯೇ ಉಳಿಯುತ್ತಾರೆ. ಪುರಾಣಗಳು, ಪರಾಶರ ಸಂಹಿತೆಯಲ್ಲಿನ ಉಲ್ಲೇಖದ ಪ್ರಕಾರ ಜ್ಯೇಷ್ಠ ಮಾಸದ ನವಮಿಯಂದು ಸುವರ್ಚಲಾ ದೇವಿ ಹಾಗೂ ಆಂಜನೇಯಸ್ವಾಮಿ ಕಲ್ಯಾಣೋತ್ಸವ ಭಕ್ತಿ– ಶ್ರದ್ಧೆಯಿಂದ ನಡೆಸಲಾಗುತ್ತದೆ.
ಸುವರ್ಚಲಾ– ಆಂಜನೇಯಸ್ವಾಮಿ ರಥೋತ್ಸವ ವೈಶಾಖ ಮಾಸದ ದಶಮಿಯಂದು ಪರಿವಾರ ರಾಮ, ಸುವರ್ಚಲಾ– ಆಂಜನೇಯಸ್ವಾಮಿ ರಥೋತ್ಸವ ನಡೆಯುತ್ತದೆ. ಉಳಿದಂತೆ ವಿಶೇಷ ದಿನಗಳಲ್ಲಿ ಪವಮಾನ, ಮನ್ಯುಸೂಕ್ತ ಹೋಮ, ಮೂಲ ಮಂತ್ರ ಇತ್ಯಾದಿ ಹೋಮ, ಹವನ, ವಿಶೇಷ ಪೂಜೆಗಳು ನಡೆಯುತ್ತವೆ. ಬೃಹತ್ ಗಾತ್ರದ ಮರ, ಗಿಡಗಳನ್ನೊಳಗೊಂಡ ಪ್ರಾಕೃತಿಕ ಸಂಪತ್ತು ದೇಗುಲದ ಸೊಬಗನ್ನು ಇಮ್ಮಡಿಗೊಳಿಸಿದೆ. ದೇಗುಲ ಪ್ರಾಂಗಣದಲ್ಲಿ ಸತ್ಯನಾರಾಯಣಸ್ವಾಮಿ, ಪರಿವಾರ ರಾಮ ದೇವರು, ಮಹಾಬಲೇಶ್ವರ, ಗಣಪತಿ, ದತ್ತಾತ್ರೇಯ, ಸುಬ್ರಹ್ಮಣ್ಯ, ನವಗ್ರಹ, ಶಾರಾದಾಂಬೆ, ಶಂಕರಾಚಾರ್ಯರು, ದೇವಿ ದೇಗುಲಗಳಿವೆ. ದೇಗುಲಕ್ಕೆ ಕಾಲಿಟ್ಟ ಕೂಡಲೇ ಹೊರ ಜಗತ್ತಿನ ಸುಃಖ– ದುಃಖಗಳ ನೆನಪು ಅಳಿಸಿ, ಭಕ್ತಿ ಭಾವ ಮೂಡುತ್ತದೆ. ಪ್ರದೇಶದಲ್ಲಿ ಸಿಗುವ ತಣ್ಣನೆಯ ಶುದ್ಧ ಗಾಳಿ, ಮರ–ಗಿಡಗಳನ್ನು ಹೊದ್ದಿರುವ ಹಸಿರು ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.
ಧರ್ಮಯ್ಯ ಅವರಿಗೆ ದೈವ ಪ್ರೇರಣೆ ದಶಕಗಳ ಹಿಂದೆ ದೇಗುಲವಿದ್ದ ಪ್ರದೇಶವು ಸೀಮೆ ಜಾಲಿಯಿಂದ ಆವೃತಗೊಂಡಿತ್ತು. ದೇಗುಲದ ಧರ್ಮಕರ್ತರಾದ ಧರ್ಮಯ್ಯ ಅವರಿಗೆ ಸೀಮೆ ಜಾಲಿಗಳ ನಡುವಲ್ಲಿ ಆಂಜನೇಯಸ್ವಾಮಿ ವಿಗ್ರಹ ಇರುವ ವಿಚಾರ ದೈವ ಪ್ರೇರಣೆಯಿಂದಲೇ ತಿಳಿಯಿತಂತೆ. ಆ ನಂತರ ಆಂಜನೇಯ ಸ್ವಾಮಿ ವಿಗ್ರಹವನ್ನು ಮಳೆ, ಬಿಸಿಲಿನಿಂದ ರಕ್ಷಿಸಲು ಗರಿಯ ಚಪ್ಪರ ಹಾಕಿಸಿ, ಮೂಲ ವಿಗ್ರಹಕ್ಕೆ ಮಂಟಪ ಕಟ್ಟಿಸಿ ಪೂಜೆ ಆರಂಭಿಸಲಾಯಿತು. ದೇಗುಲದ ಸಮೀಪದಲ್ಲಿಯೇ ಬಾವಿ ತೋಡಿಸಿ, ದೇವರಿಗೆ ಜಲಾಭಿಷೇಕಕ್ಕೆ ಏರ್ಪಾಡು ಮಾಡಲಾಯಿತು. ಕಾಲಾ ನಂತರ ದೇಗುಲ ಸಾಕಷ್ಟು ಅಭಿವೃದ್ಧಿಯಾಗಿದೆ.
ಮಾನಸಿಕ ಸಮಸ್ಯೆ ಇರುವವರಿಂದ ಭೇಟಿ ನೂರಾರು ವರ್ಷಗಳ ಈ ಆಂಜನೇಯ ವಿಗ್ರಹಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲು ಧರ್ಮಯ್ಯ ಕುಟುಂಬದವರು ಕಟಿಬದ್ಧರಾಗಿದ್ದಾರೆ. ಧರ್ಮಯ್ಯ ಅವರು ತೀರಿಕೊಂಡ ನಂತರ ಅವರ ಮಗ ಎಂ.ಡಿ. ಅನಿಲ್ ಕಮಾರ್, ಸಹೋದರ, ಸಹೋದರಿಯರು ದೇವಸ್ಥಾನದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ದೇಗುಲದ ಬಳಿ ಹಸುಗಳನ್ನು ಸಾಕಿದ್ದು, ಪುಟ್ಟ ಗೋಶಾಲೆಯನ್ನು ನಿರ್ವಹಿಸಲಾಗುತ್ತಿದೆ. ಈ ದೇಗುಲಕ್ಕೆ ಕೇರಳ, ತಮಿಳುನಾಡು, ಬೆಂಗಳೂರು, ತುಮಕೂರಿನಿಂದ ಮಾನಸಿಕ ಸಮಸ್ಯೆ ಇರುವವರು ಭೇಟಿ ನೀಡುತ್ತಾರೆ. ಅವರ ನಂಬಿಕೆ ಪ್ರಕಾರ ಈ ದೇಗುಲಕ್ಕೆ ಭೇಟಿ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ.
ಮಧ್ಯರಾತ್ರಿ ವೇಳೆ ಗಂಟೆ– ಜಾಗಟೆ ಸದ್ದು ಕೇಳುತ್ತದಂತೆ ಇನ್ನು ಗ್ರಹ ಚೇಷ್ಟೆಯಿಂದ ಬಳಲುತ್ತಿರುವವರು ಗ್ರಹ ಚೇಷ್ಟೆ ಬಿಡುಗಡೆ ವೇಳೆಯಲ್ಲಿ ದೇಗುಲ ಮುಂಭಾಗದ ವೃಕ್ಷಕ್ಕೆ ಕೈ, ತಲೆಯಿಂದ ಮೊಳೆ ಹೊಡೆಯುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು. ಮಧ್ಯ ರಾತ್ರಿಯ ವೇಳೆ ದೇಗುಲದಲ್ಲಿ ಗಂಟೆ– ಜಾಗಟೆ ಸದ್ದು ಕೇಳಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಈಗಲೂ ಋಷಿಮುನಿ ಸಂಚಾರ ಈ ಪ್ರದೇಶದಲ್ಲಿ ಇದೆ ಎಂದು ಹೇಳಲಾಗುತ್ತದೆ. ಇವೆಲ್ಲ ಅವರವರ ಅನುಭವ ಆದರೂ ಬ್ರಹ್ಮಚಾರಿ ಆಂಜನೇಯನಿಗೆ ಕಲ್ಯಾಣೋತ್ಸವ ಎಂಬುದು ಅಚ್ಚರಿಯ ಸಂಗತಿ.
