ತುಮಕೂರು: ಜಿಲ್ಲೆಗೆ ಬಯಲು ರಂಗಾಯಣ ಬೇಕೆಂಬ ಬೇಡಿಕೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಂಗಭೂಮಿ ಕಲಾವಿದರ ಒಕ್ಕೂಟ ಹಲವು ಸುತ್ತಿನ ಸಭೆ ಸಂಘಟಿಸಿ ಚರ್ಚಿಸಿದ್ದು ಸಾಹಿತಿಗಳು, ಕಲಾವಿದರು, ಬರಹಗಾರರು, ಪತ್ರಕರ್ತರು, ಹೋರಾಟಗಾರರು ಕೂಡ ಒಕ್ಕೂಟದ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 20ರಂದು ತುಮಕೂರು ನಗರದ ಅಮಾನಿಕೆರೆ ಎದುರಿನ ಕನ್ನಡ ಭವನದಲ್ಲಿ ಒಕ್ಕೂಟದ ಸಂಚಾಲಕ ಹೊನ್ನವಳ್ಳಿ ನಟರಾಜ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಐದು ವಿಷಯಗಳು ಚರ್ಚೆಗೆ ಬಂದವು.
ರಾಜ್ಯ ಮತ್ತು ರಾಷ್ಟ್ರಮಟ್ಟದ ರಂಗ ಪ್ರಯೋಗಗಳನ್ನು ನಡೆಸಲು ಒಂದು ವೇದಿಕೆ ಅಗತ್ಯವಿದೆ. ಡಾ.ಗುಬ್ಬಿ ವೀರಣ್ಣ ಕ್ಯಾಂಪಸ್ ಮಾಡಬೇಕು. ಸಂಶೋಧನ ಕೇಂದ್ರ ಆಗಬೇಕು. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಉಸ್ತುವಾರಿಯಲ್ಲಿ ಸಮಿತಿ ರಚನೆಯಾಗಬೇಕು. ಹತ್ತು ತಾಲೂಕುಗಳಿಗೂ ಒಂದೊಂದು ಪುಟ್ಟ ರಂಗಮಂದಿರ ಆಗಬೇಕು. ಪ್ರತಿ ವರ್ಷ ಬಯಲುಸೀಮೆ ನಾಟಕೋತ್ಸವ ಆಚರಿಸಬೇಕು ಎಂಬ ವಿಷಯಗಳನ್ನು ಚರ್ಚಿಸಲಾಯಿತು.
ಬಯಲುಸೀಮೆ ರಂಗಾಯಣದ ಅಗತ್ಯತೆ ಏನು? ಯಾವ ಕಾರಣಕ್ಕೆ ಜಿಲ್ಲೆಯಲ್ಲಿ ರಂಗಾಯಣ ಸ್ಥಾಪನೆ ಮಾಡಬೇಕು ಎಂಬ ಬಗ್ಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸಲ್ಲಿಸಲಾಗಿದೆ. ಈ ಸಭೆಯಲ್ಲೂ ಕೂಡ ಮುಂದುವರೆದ ಚರ್ಚೆಗಳು ನಡೆದು ಭಾಗವಹಿಸಿದವರೆಲ್ಲರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ತುಮಕೂರು ಜಿಲ್ಲಾ ರಂಗಭೂಮಿ ಒಕ್ಕೂಟದ ನಿಯೋಗ ಇನ್ನು ಒಂದು ವಾರದಲ್ಲಿ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲೆಯ ಮೂವರು ಸಂದರನ್ನೂ ಹಾಗೂ ಹತ್ತೂ ತಾಲ್ಲೂಕುಗಳ ಶಾಸಕರುಗಳಿಗೆ ೫ ಬೇಡಿಕೆಗಳ ವಿಸೃತವಾದ ವರದಿಯನ್ನು ಸಲ್ಲಿಸಿತು ತೀರ್ಮಾನಿಸಲಾಯಿತು.
ಸಭೆಯಲ್ಲಿ ವಿಮರ್ಶಕ ಡಾ.ನಟರಾಜ್ ಬೂದಾಳ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪತ್ರಕರ್ತ ಉಗಮಶ್ರೀನಿವಾಸ್, ಗೋಮಾರ್ದನಹಳ್ಳಿ ಪಿ.ಮಂಜುನಾಥ್, ನಾಟಕಮನೆ ಮಹಲಿಂಗು, ಅನಿಲ್ ಚಿಕ್ಕದಾಳವಟ್ಟ, ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.