Tuesday, January 20, 2026
Google search engine
Home Blog Page 4

ಕಾರ್ಮಿಕರಿಗೆ ಅಂಬೇಡ್ಕರ್ ಮಾಡಿದ್ದೇನು?: ಇವು ಎಲ್ಲ ಕಾರ್ಮಿಕರಿಗೂ ತಿಳಿದಿರಬೇಕಾದ ವಿಷಯ…

0

ಲೇಖನ: ಹೆತ್ತೇನಹಳ್ಳಿ ಮಂಜುನಾಥ್

ಅಂಬೇಡ್ಕರ್

ಮೇ 1 ರಂದು ವಿಶ್ವದೆಲ್ಲೆಡೆ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜಗತ್ತಿನ ಕಾರ್ಮಿಕರೆಲ್ಲ ಒಂದಾಗಿರಿ ಎಂಬುದು ಈ ದಿನದ ಘೋಷ ವಾಕ್ಯ. ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಕಾರ್ಮಿಕರ ಪಾತ್ರವು ಮಹತ್ತರವಾದದ್ದು. ಸಾವಿರಾರು ವರ್ಷಗಳ ಕಾರ್ಮಿಕ ವರ್ಗವು ಜಗತ್ತಿನ ಕಲ್ಯಾಣಕ್ಕಾಗಿ ತ್ಯಾಗ ಮಾಡಿದೆ ಮಾಡುತ್ತಲೆ ಬಂದಿದೆ ಆದರೆ ಆ ವರ್ಗದ ಹಿತ ಕಾಯುವಲ್ಲಿ ಬಹುತೇಕ ರಾಷ್ಟ್ರಗಳು ಸೋತಿವೆ & ಹಿಂದಿವೆ.

ಭಾರತದಂತಹ ಬಹುತ್ವದ ರಾಷ್ಟ್ರದಲ್ಲಿ ಕಾರ್ಮಿಕರ ಹಿತಾಸಕ್ತಿಯನ್ನು ಎತ್ತಿ ಹಿಡಿದು ಕಾರ್ಮಿಕರ ಸುಭದ್ರತೆಗೆ ಭದ್ರ ಬುನಾದಿಯಾಕಿ ಸಂರಕ್ಷಿಸಿದ್ದು ಬಾಬಾ ಸಾಹೇಬರೆನ್ನುವುದನ್ನು ಈ ದೇಶ ಎಂದು ಮರೆಯುವಂತಿಲ್ಲಾ.

ಶೋಷಿತರ ಜೀವನವನ್ನು ಗುಲಾಮಗಿರಿಗೆ ತಳ್ಳಿದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಹೋರಾಡುವುದರೊಂದಿಗೆ ದೇಶದ ಬಹುದೊಡ್ಡ ಭಾಗವಾದ ಮಹಿಳೆಯರು, ಮಾನವ ಹಕ್ಕುಗಳು & ಕಾರ್ಮಿಕರ ಕಲ್ಯಾಣಕ್ಕೂ ಹೋರಾಡಿದ್ದು ಅವರಲ್ಲಿದ್ದ ಬದ್ಧತೆ & ದೇಶಪ್ರೇಮ ನಮ್ಮನ್ನು ಮತ್ತೆ ಮತ್ತೆ ಬಾಬಾ ಸಾಹೇಬರನ್ನ ಚಿಂತನೆಗಳತ್ತ ಕೊಂಡೊಯ್ಯಲು ಪ್ರೇರಿಪಿಸುತ್ತದೆ.

ಅನೇಕ ಕಾರ್ಮಿಕ ಹೋರಾಟಗಳು ಅನೇಕ ನಾಯಕರುಗಳ ನೇತೃತ್ವದಲ್ಲಿ ಇತಿಹಾಸದುದ್ದಕ್ಕೂ ನಡೆದಿವೆ, ಭಾರತದ ಕಾರ್ಮಿಕರ ವಿಚಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಿರ್ವಹಿಸಿದ ಕಾರ್ಯ ಮಾತ್ರ ಅವಿಸ್ಮರಣೀಯವಾದದ್ದು. ದುಂಡು ಮೇಜಿನ ಸಮ್ಮೇಳನದಲ್ಲಿ ಶೋಷಿತ ವರ್ಗಗಳ ಪ್ರತಿನಿಧಿಯಾಗಿದ್ದ ಬಾಬಾ ಸಾಹೇಬರು ಕಾರ್ಮಿಕರ ಜೀವನ, ವೇತನ, ಕೆಲಸದ ಪರಿಸ್ಥಿತಿಗಳು & ಕ್ರೂರ ಭೂ-ಮಾಲೀಕರ ಹಿಡಿತದಿಂದ ರೈತರ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದರು.

ಬಾಬಾ ಸಾಹೇಬರು ಭೂರಹಿತ ಬಡ ಗೇಣಿದಾರರು, ಕೃಷಿಕರು, ಕಾರ್ಮಿಕರ ಅಗತ್ಯತೆಗಳು & ಕುಂದುಕೊರತೆಗಳನ್ನು ಪೂರೈಸುವ ಸಮಗ್ರ ಪ್ರಣಾಳಿಕೆಯೊಂದಿಗೆ/ಕಾರ್ಯಸೂಚಿಯೊಂದಿಗೆ 1936 ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಸ್ವತಂತ್ರ ಕಾರ್ಮಿಕ ಪಕ್ಷವನ್ನು) ಸ್ಥಾಪಿಸಿದರು. ಕಾರ್ಮಿಕರ ಹಿತಕ್ಕಾಗಿ & ರಾಜಕೀಯ ಅಧಿಕಾರಕ್ಕಾಗಿ ಸ್ಥಾಪಿಸಲ್ಪಟ್ಟ ಮೊದಲ ಮತ್ತು ಏಕೈಕ ರಾಜಕೀಯ ಪಕ್ಷ ಇದಾಗಿದೆ.
1937 ರಲ್ಲಿ ನಡೆದ ಚುನಾವಣೆಯಲ್ಲಿ ಈ ಪಕ್ಷವು ಬಾಂಬೆ ವಿಧಾನಸಭೆಗೆ ಸ್ಪರ್ಧಿಸಿದ್ದ 17 ಸ್ಥಾನಗಳಲ್ಲಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ಯಶಸ್ಸನ್ನು ಗಳಿಸಿತು. ಜಾತಿ ಧರ್ಮಾದಾರಿತ ಚುನಾವಣೆಗಳ ಮಧ್ಯೆ ಶ್ರಮಿಕ ಆಧಾರಿತ ಪಕ್ಷವನ್ನು ಕಟ್ಟಿ ಯಶಸ್ಸನ್ನು ಕಂಡವರು ಬಾಬಾ ಸಾಹೇಬರು..

ಬಾಬಾಸಾಹೇಬರು 1937 ರಲ್ಲಿ ಬಾಂಬೆ ಅಸೆಂಬ್ಲಿಯಲ್ಲಿ ಜಮೀನುದಾರಿ ಪದ್ಧತಿಯ ರದ್ದತಿ ಮಸೂದೆಯನ್ನು ಮಂಡಿಸಿದರು. ಕಾರ್ಮಿಕರ ಮುಷ್ಕರ ಹಕ್ಕನ್ನು ನಿರಾಕರಿಸುವ ಕೈಗಾರಿಕಾ ವಿವಾದಗಳ ಮಸೂದೆಯನ್ನು ಅವರು ವಿರೋಧಿಸಿದರು. 1942 ರಿಂದ 1946 ರವರೆಗೆ ವೈಸ್ರಾಯ್ ರವರ ಕಾರ್ಯನಿರ್ವಾಹಕ ಮಂಡಳಿಯ ಕಾರ್ಮಿಕ ಸದಸ್ಯರಾಗಿದ್ದ ಅವಧಿಯಲ್ಲಿ ಕಾರ್ಮಿಕ ವಿಷಯಗಳ ಬಗ್ಗೆ ಬಾಬಾ ಸಾಹೇಬರ ಅವರು ಹೊಂದಿದ್ದ ಆಳವಾದ ಜ್ಞಾನವನ್ನು ಒಮ್ಮತವಾಗಿ ಅಂಗೀಕರಿಸಲಾಯಿತು. ಸರ್ಕಾರದ ಕಾರ್ಮಿಕ ನೀತಿಯ ಮೂಲ ರಚನೆಗೆ ಅಡಿಪಾಯ ಹಾಕುವ ಮೂಲಕ ಕಾರ್ಮಿಕ ಕಲ್ಯಾಣಕ್ಕಾಗಿ ಹತ್ತು ಹಲವಾರು ಶಾಸನ ರೂಪಿಸಿದರು..

8 ನವೆಂಬರ್ 1943 ರಂದು ಅಂಬೇಡ್ಕರ್ ಮಂಡಿಸಿದ ಭಾರತೀಯ ಟ್ರೇಡ್ ಯೂನಿಯನ್ ತಿದ್ದುಪಡಿ ಮಸೂದೆ, ಕಾರ್ಮಿಕ ಸಂಘಗಳನ್ನು ಅಂಗೀಕರಿಸುವಂತೆ ಒತ್ತಾಯಿಸಿತು. 8 ಫೆಬ್ರವರಿ 1944 ರಂದು ಕಲ್ಲಿದ್ದಲು ಗಣಿಗಳಲ್ಲಿ ಮಹಿಳೆಯರ ಉದ್ಯೋಗದ ಮೇಲಿನ ನಿಷೇಧವನ್ನು ತೆಗೆದು ಹಾಕುವ ಚರ್ಚೆಯ ಸಂದರ್ಭದಲ್ಲಿ ಶಾಸಕಾಂಗ ಸಭೆಯಲ್ಲಿ ಅಂಬೇಡ್ಕರ್ ರವರು “ಲಿಂಗತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು” ಎಂದು ವಾದಿಸಿದರು.
ಇದು ಒಂದು ಐತಿಹಾಸಿಕ ಕ್ಷಣ. ಗಣಿ ಹೆರಿಗೆ ಪ್ರಯೋಜನ ಮಸೂದೆ ಮಂಡಿಸುವ ಮೂಲಕ ಅವರು ಮಹಿಳಾ ಕಾರ್ಮಿಕರಿಗೆ ಗೌರವ ಮಾತೃತ್ವ ಸೌಲಭ್ಯಗಳೊಂದಿಗೆ ಭದ್ರತೆ ನೀಡಿದರು.

26 ನವೆಂಬರ್ 1945 ರಂದು ನವದೆಹಲಿಯಲ್ಲಿ ನಡೆದ ಭಾರತೀಯ ಕಾರ್ಮಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅಂಬೇಡ್ಕರ್, ಪ್ರಗತಿಪರ ಕಾರ್ಮಿಕ ಕಲ್ಯಾಣ ಶಾಸನವನ್ನು ತರುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು: “ಸರಿಯಾದ ಕಾರ್ಮಿಕ ಶಾಸನ ಸಂಹಿತೆಯನ್ನು ಹೊಂದಲು ಬ್ರಿಟಿಷರು 100 ವರ್ಷಗಳನ್ನು ತೆಗೆದುಕೊಂಡರು ಎಂದು ಹೇಳಬಹುದು. ನಾವು ಭಾರತದಲ್ಲಿಯೂ 100 ವರ್ಷಗಳನ್ನು ತೆಗೆದುಕೊಳ್ಳಬೇಕು ಎಂಬ ವಾದವಿಲ್ಲ. ಇತಿಹಾಸ ಯಾವಾಗಲೂ ಒಂದು ಉದಾಹರಣೆಯಲ್ಲ. ಹೆಚ್ಚಾಗಿ ಇದು ಒಂದು ಎಚ್ಚರಿಕೆ” ಎಂದು ಹೇಳಿದರು. ಖಾಸಗಿ ಆಸ್ತಿಯನ್ನು ರದ್ದುಪಡಿಸುವುದರಿಂದ ಬಡತನ ಮತ್ತು ಸಂಕಟಗಳು ಅಂತ್ಯವಾಗಲಿದೆ ಎಂಬ ಮಾರ್ಕ್ಸ್ ನಿಲುವನ್ನು ಡಾ. ಅಂಬೇಡ್ಕರ್ ಒಪ್ಪಲಿಲ್ಲ. ಭಗವಾನ್ ಬುದ್ಧರ ಆರ್ಥಿಕ ನೀತಿಯನ್ನು ಎತ್ತಿ ಹಿಡಿದು ಬಹುತ್ವದ ಭಾರತದಲ್ಲಿ ಬುದ್ಧನ ಚಿಂತನೆಗಳೆ ಅಂತಿಮವೆಂದು ಪ್ರತಿಪಾದಿಸಿದರು.

  1. 1942 ರಲ್ಲಿ ವೈಸ್ ರಾಯ್ ಕೌನ್ಸಿಲ್ ನಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಕೆಲಸದ ಸಮಯವನ್ನು 12 ಗಂಟೆಗಳಿಂದ 8 ಗಂಟೆಗಳ ವರೆಗೆ ಇಳಿಸಲು ಹೋರಾಡಿ ಯಶಸ್ಸು ಕಂಡರು.
  2. ಆರೋಗ್ಯ ವಿಮೆ ಯೋಜನೆ, ಕಾರ್ಮಿಕರ ರಾಜ್ಯ ವಿಮಾ, ತುಟ್ಟಿಭತ್ಯೆ, ಭವಿಷ್ಯ ನಿಧಿ, ಕನಿಷ್ಠ ವೇತನ ಸೌಲಭ್ಯ. ಕಾರ್ಮಿಕರಿಗೆ ವೈದ್ಯಕೀಯ ಆರೈಕೆ & ವೈದ್ಯಕೀಯ ರಜೆ ಸೌಲಭ್ಯ.
  3. ಮಹಿಳಾ ಮತ್ತು ಮಕ್ಕಳ ಕಾರ್ಮಿಕ ರಕ್ಷಣೆ ಕಾಯ್ದೆ ಮತ್ತು ಭಾರತೀಯ ಕಾರ್ಖಾನೆ ಕಾಯಿದೆ ಜಾರಿ ತಂದರು.
  4. ಗಣಿ ಹೆರಿಗೆ ಪ್ರಯೋಜನ ಕಾಯ್ದೆ, ಮಹಿಳಾ ಕಾರ್ಮಿಕ ಕಲ್ಯಾಣ ನಿಧಿ, ಮಹಿಳೆಯರು ಮತ್ತು ಮಕ್ಕಳ ಕಾರ್ಮಿಕ ಸಂರಕ್ಷಣಾ ಕಾಯ್ದೆ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ
  5. ಬ್ರಿಟಿಷ್ ಸರ್ಕಾರದಲ್ಲಿ ಕಾರ್ಮಿಕ ಸದಸ್ಯರಾಗಿದ್ದಾಗ ಭಾರತದಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳ ಸ್ಥಾಪನೆಯಲ್ಲಿ ಬಾಬಾಸಾಹೇಬರು ಪ್ರಮುಖ ಪಾತ್ರವಹಿಸಿದರು.
  6. 1942 ರಲ್ಲಿ ಭಾರತೀಯ ಕಾರ್ಮಿಕರ ಅಂಕಿ-ಅಂಶಗಳ ಕಾನೂನು ಜಾರಿಗೆ ತಂದರು.
  7. 31 ಜನವರಿ 1944 ರಲ್ಲಿ “ಕಲ್ಲಿದ್ದಲು ಗಣಿಗಾರಿಕೆ ಸುರಕ್ಷತೆ ತಿದ್ದುಪಡಿ ಬಿಲ್” ಜಾರಿಗೆ ತಂದರು.
  8. ಕೆಲಸದ ಸಮಯದಲ್ಲಿ ದೈಹಿಕವಾಗಿ ಅಂಗವಿಕಲರಾದರೆ ಅದಕ್ಕೆ ಪರಿಹಾರವಾಗಿ ವಿವಿಧ ಸೌಲಭ್ಯಗಳನ್ನು ಒದಗಿಸುವ ಕಾರ್ಮಿಕ ಕಲ್ಯಾಣ ನಿಧಿ ಸ್ಥಾಪನೆ. ಕಾರ್ಮಿಕ ಕಲ್ಯಾಣದ ವಿಷಯಗಳ ಬಗ್ಗೆ ಸಲಹೆ ನೀಡಲು ಸಲಹಾ ಸಮಿತಿಯ ರಚನೆಗೆ ಒತ್ತು ನೀಡಿದರು.
  9. 8 ಏಪ್ರಿಲ್ 1946 ರಂದು ಅಭ್ರಕ ಗಣಿ ಕಾರ್ಮಿಕ ಕಲ್ಯಾಣ ನಿಧಿಯನ್ನು ತಂದರು ಇದರಿಂದ ಕಾರ್ಮಿಕರಿಗೆ ವಸತಿ, ನೀರು ಸರಬರಾಜು, ಶಿಕ್ಷಣ, ಸಹಕಾರಿ ವ್ಯವಸ್ಥೆಗಳು ದೊರೆಯಿತು.
  10. 8 ನವೆಂಬರ್ 1943 ರಂದು ನೋಂದಣಿಯಾದ ಕಾರ್ಮಿಕ ಸಂಘಟನೆಗಳನ್ನು ಕಡ್ಡಾಯ ಗುರುತಿಸುವಿಕೆಗಾಗಿ ಭಾರತೀಯ ಟ್ರೇಡ್ ಯೂನಿಯನ್ಸ್ (ತಿದ್ದುಪಡಿ) ಜಾರಿಗೆ ತಂದರು.
  11. ಮಾರ್ಚ್ 1944 ರಲ್ಲಿ ಭಾರತದ ಅಭಿವೃದ್ಧಿಗೆ ಪ್ರಬಲ ತಾಂತ್ರಿಕ ಸಂಸ್ಥೆಯಾದ “ಸೆಂಟ್ರಲ್ ವಾಟರ್ ವೇ ಅಂಡ್ ಇರ್ರೀಗೇಷನ್ ಕಮಿಷನ್” ಅನುವೋದಿಸಿದರು. ಇಂದು ಕೃಷಿ ಪ್ರಧಾನವಾದ ನಮ್ಮ ರೈತ ಕುಟುಂಬದಲ್ಲಿ ಸಂತೋಷವಿರಲು ಮತ್ತು ನಮ್ಮ ಜಮೀನುಗಳು ಹಸಿರಿನಿಂದ ಕೂಡಿದ್ದರೆ ಅದಕ್ಕೆಲ್ಲ ಕಾರಣ ನೀರಾವರಿ, ವಿದ್ಯುತ್ ಯೋಜನೆಯಲ್ಲಿ ಬಾಬಾ ಸಾಹೇಬರು ತಗೆದುಕೊಂಡ ನಿರ್ಧಾರಗಳು..
  12. ಬಾಬಾ ಸಾಹೇಬರ ನೀರು ನಿರ್ವಹಣೆ ಪರಿಕಲ್ಪನೆ ಅತ್ಯದ್ಭುತವಾದದ್ದು. ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಸಮಥ೯ವಾಗಿ & ಸಮವಾಗಿ ಬಳಸಿಕೊಳ್ಳುವುದರಿಂದಷ್ಟೆ ದೇಶದ ಪ್ರಗತಿ ಸಾಧ್ಯವೆಂಬ ಪ್ರತಿಪಾದನೆ ಬಾಬಾ ಸಾಹೇಬರದ್ದಾಗಿತ್ತು.

ಬಂಡವಾಳಶಾಹಿ ಹಿಡಿತದಲ್ಲಿ ಸಿಲುಕಿ ನಲುಗುತ್ತಿರುವ ಭಾರತಕ್ಕೆ ಬಾಬಾ ಸಾಹೇಬರ ಕಾರ್ಮಿಕ ವರ್ಗಗಳ ಚಿಂತನೆಗಳ ಮುಲಾಮಿನ ಮೂಲಕ ಮತ್ತೆ ಬೆವರಿನ ಭಾರತದ ಮರು ನಿರ್ಮಾಣ ಮಾಡಬೇಕಾಗಿರುವುದು ಇಂದಿನ ಸವಾಲಾಗಿದೆ… ರಾಷ್ಟ್ರ ನಿರ್ಮಾಣದಲ್ಲಿ ಅಸಂಖ್ಯಾತ ಅಸಂಘಟಿತ ಕಾರ್ಮಿಕರಿಗೆ, ಸಂಘಟಿತ ರೂಪದಲ್ಲಿ ಹಲವಾರು ಕೊಡುಗೆಯನ್ನು ನೀಡಿದ ಭಾರತದ ಕಾರ್ಮಿಕ ನಾಯಕರು, ಕಾರ್ಮಿಕ ಕಲ್ಯಾಣದ ಚಿಂತಕರು, ಕಾರ್ಮಿಕ ವರ್ಗದ ವಿಮೋಚಕರಾದ ಬಾಬಾ ಸಾಹೇಬರ ಚಿಂತನೆಗಳನ್ನು ಮರೆಮಾಚುತ್ತ ಇಂದು ಕಾರ್ಮಿಕರಿಗೆ ತಮ್ಮ ಹಕ್ಕುಗಳಿವೆಯೆಂಬ ಕನಿಷ್ಟ ಅರಿವಿಲ್ಲದಂತೆ ಸತ್ಯವನ್ನು ಮುಚ್ಚಿಟ್ಟು ಇರುವ ಕಾನೂನು & ಹಕ್ಕುಗಳನ್ನು ಮುಗಿಸಲೊರಟ ಸರ್ಕಾರಗಳಿಗೆ ಹೋರಾಟದ ಬಿಸಿ ಮುಟ್ಟಿಸುವುದಿರಲಿ, ಸರ್ಕಾರಗಳಿಗೆ ಕನಿಷ್ಟ ಪ್ರಶ್ನೆ ಮಾಡದೇ ಇರೋ ಪರಿಸ್ಥಿತಿಗೆ ಕಾರ್ಮಿಕರ ತಲೆದಂಡ ಮಾಡಲೊರಟಿರುವ ಬಂಡವಾಳಶಾಹಿವಾದಿಗಳ, ಯಥಾಸ್ಥಿತಿವಾದಿಗಳ ಮತ್ತು ಜಾತಿಗ್ರಸ್ಥ ಮನಸ್ಥಿತಿಗಳು ಭಾರತಕ್ಕೆ ವಿಶ್ವ ಜ್ಞಾನದ ಕಿರೀಟ ತೊಡಿಸಿದ ಬಾಬಾ ಸಾಹೇಬರನ್ನು ಜಾತಿ ಕನ್ನಡಕದಲ್ಲಿ ನೊಡುವಂತೆ ಮಾಡುವಲ್ಲಿ ಯಶಸ್ಸನ್ನ ಕಂಡು ವಿಕೃತಿ ಮೆರೆದು ಭವ್ಯ ಭಾರತವಾಗಬೇಕಿದ್ದ ದೇಶವನ್ನು ವಿನಾಶದತ್ತ ಕೊಂಡೊಯ್ಯುತಿವೆ.

ಕಾರ್ಮಿಕ ಕಾನೂನುಗಳು ಸಡಿಲಗೊಳ್ಳುವ ಇಂದಿನ ಕಾಲಘಟ್ಟದಲ್ಲಿ ಮತ್ತೊಮ್ಮೆ ಬೆವರಿನ ಭಾರತ ಕಟ್ಟಲು ಶಾಲಾ-ಕಾಲೇಜುಗಳಲ್ಲಿ, ಯುವ ಜನರಲ್ಲಿ, ಕಾರ್ಮಿಕ ಸಂಘಟನೆಗಳಲ್ಲಿ ಬಾಬಾ ಸಾಹೇಬರು ಕಾರ್ಮಿಕರಿಗೆ & ಕಾರ್ಮಿಕ ಇಲಾಖೆಗೆ ನೀಡಿದ ಅನನ್ಯ ಕೊಡುಗೆಗಳ ಬಗ್ಗೆ ತಿಳಿಸಿ ಮತ್ತಷ್ಟು ಕಾರ್ಮಿಕ ಕಾನೂನುಗಳು ಗಟ್ಟಿಗೊಳ್ಳಲು ಹೋರಾಟಕ್ಕೆ ಪ್ರೇರೇಪಿಸಬೇಕಾಗಿರುವುದು ಕೂಡಾ ನಾಗರೀಕ ಸಮಾಜದ ಜವಬ್ದಾರಿಯೆಂದರಿತು ಈ ಲೇಖನವನ್ನು ತಮಗರ್ಪಿಸುತ್ತಿದ್ದೇನೆ.

ಜೈ ಭೀಮ್.. ನಮೋ ಬುದ್ಧಾಯಃ..

ಹೆತ್ತೇನಹಳ್ಳಿ ಮಂಜುನಾಥ್

ಜನ ಮೆಚ್ಚಿದ‌ ಶಿಕ್ಷಕ ಹುಚ್ಚ ಪ್ಪ ಇನ್ನಿಲ್ಲ

ತುಮಕೂರು: ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದ, ನಿವೃತ್ತ ಶಿಕ್ಷಕ ಕೆ.ಹುಚ್ಚಪ್ಪ ಅವರು ಬುಧವಾರ ಬೆಳಿಗ್ಗೆ 10ಕ್ಕೆ ಹೆಬ್ಬೂರು ಹೋಬಳಿ, ಕಂಬಾಳಪುರದ ಅವರ ಸ್ವಗ್ರಾಮದಲ್ಲಿ ನಿಧನರಾದರು.

ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಮಧ್ಯಾಹ್ನ 3ಕ್ಕೆ ನಡೆಯಲಿದೆ ಎಂದು ಅವರ ಪುತ್ರ ಶಿವಕುಮಾರ್ ತಿಳಿಸಿದ್ದಾರೆ.

ಹುಚ್ಚಪ್ಪ ಅವರು 1948ರಲ್ಲಿ ರೈಪಾಪಿ ಕುಟುಂಬದಲ್ಲಿ ಹುಟ್ಟಿ ಹೆಬ್ಬೂರಿನಲ್ಲಿ ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣ ಪಡೆದು ಶಿಕ್ಷಕರಾಗಿ ಸೇವೆ ಆರಂಭಿಸಿದ್ದರು. ಕುಣಿಗಲ್, ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ದೇವಲಾಪುರ, ಚಿಕ್ಕತೊಟ್ಲುಕೆರೆ, ದಾಸರಹಳ್ಳಿ ಶಿಕ್ಷಕರಾಗಿದ್ದರು. ನಿಡವಳಲು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ಅವರು ಶಾಲೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ಇದರಿಂದಾಗಿ ಅವರು ಜನಮೆಚ್ಚಿದ ಶಿಕ್ಷಣ ಪಶಸ್ತಿ ನೀಡಿ ಗೌರವಿಸಲಾಗಿತ್ತು.

ಮಾರುತಿ ಕೃಪಾ ಪೋಷಕ ನಾಟಕ ಮಂಡಳಿ ನೀಡುವ ಸನ್ಮಾನಕ್ಕೂ ಪಾತ್ರರಾಗಿದ್ದರು.
ಅವರ ಧರ್ಮಪತ್ನಿ ಲಿಂಗಮ್ಮ ಅವರ ಸಹಕಾರವನ್ನು ಯಾವಾಗಲೂ ನೆನೆಯುತ್ತಿದ್ದರು. ಲಿಂಗಮ್ಮ ಅವರ ಕಳೆದ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು.
ಶಿಕ್ಷಕ ವೃತ್ತಿಯಿಂದ ನಿವೃತ್ತಿ ಬಳಿಕ ತುಮಕೂರಿನ ಸದಾಶಿವನಗರದಲ್ಲಿ ತಮ್ಮ ಪುತ್ರ ಶಿವಕುಮಾರ್ ಅವರೊಂದಿಗೆ ವಾಸವಿದ್ದರು.
ಎರಡನೇ ಪುತ್ರ ಕರುಣಾಕರ್, ರಾಜ್ಯ ಸರ್ಕಾರದ ಅಧಿಕಾರಿಯೂ ಆಗಿರುವ ಪುತ್ರಿ ನೇತ್ರಾವತಿ ಅವರನ್ನು ಮೃತರು ಅಗಲಿದ್ದಾರೆ.
ಸಂತಾಪ: ಮೃತರ ನಿಧನಕ್ಕೆ ಬೈರವೇಶ್ವರ ಬ್ಯಾಂಕ್ ಅಧ್ಯಕ್ಷರಾದ ಚಿಕ್ಕರಂಗೇಗೌಡ, ವಕೀಲರ ಸಂಘದ ಉಪಾಧ್ಯಕ್ಷ ರವಿಗೌಡ, ವಕೀಲರಾದ ಸಿ.ಕೆ.ಮಹೇಂದ್ರ, ಬೆಳ್ಳಿ ಬ್ಲಡ್ ಬ್ಯಾಂಕ್ ನ ಬೆಳ್ಳಿ ಲೋಕೇಶ್ ಸಂತಾಪ‌ಸೂಚಿಸಿದ್ದಾರೆ.

ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಿದ ಕೆ ಎಸ್‌ ಆರ್‌ ಟಿ ಸಿ ನಿಗಮದ ಅಧ್ಯಕ್ಷರು & ಶಾಸಕರಾದ ಎಸ್.ಆರ್ ಶ್ರೀನಿವಾಸ್

ತುಮಕೂರು
ಮನವಿಗೆ ಸ್ಪಂದಿಸಿದ ಶಾಸಕರು ತುಮಕೂರು- ಕುಣಿಗಲ್‌- ಎಡೆಯೂರು ಮಾರ್ಗವಾಗಿ ಬಿ ಜಿ ನಗರಕ್ಕೆ ಬಸ್‌ ಓಡಾಡಲು ಹಸಿರು ನಿಶಾನೆ ತೋರಿದರು.

ಹತ್ತಾರು ವರ್ಷಗಳ ವಿದ್ಯಾರ್ಥಿಗಳ, ಭಕ್ತರ & ರೋಗಿಗಳ ಬೇಡಿಕೆಯಾಗಿದ್ದ ತುಮಕೂರು-ಹೆಬ್ಬೂರು-ಕುಣಿಗಲ್ ಮಾರ್ಗವಾಗಿ ಶ್ರೀಕ್ಷೆೇತ್ರ ಆದಿಚುಂಚನಗಿರಿ ಹೋಗಲು ಅನುಕೂಲವಾಗುವಂತೆ ಆದಿಚುಂಚನಗಿರಿ ವಿಶ್ವವಿದ್ಯಾನಿಲಯಕ್ಕೆ ಕೆ ಎಸ್‌ ಆರ್‌ ಟಿ ಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆ ಎಸ್‌ ಆರ್‌ ಟಿ ಸಿ ನಿಗಮದ ಅಧ್ಯಕ್ಷರು & ಶಾಸಕರಾದ ಎಸ್.ಆರ್ ಶ್ರೀನಿವಾಸ್ ರವರಿಗೆ ಬೈರವೇಶ್ವರ ಬ್ಯಾಂಕ್ ಅಧ್ನಕ್ಷ ಚಿಕ್ಕರಂಗೇಗೌಡ, ತುಮಕೂರು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ರವಿ ಗೌಡ, ಕಾಂಗ್ರೆಸ್ ಮುಖಂಡರಾದ ಹೆತ್ತೆನಹಳ್ಳಿ ಮಂಜುನಾಥ್, ವಕೀಲ ಸಿ. ಕೆ. ಮಹೇಂದ್ರ ನಿಯೋಗ ಅವರನ್ನೊಳಗೊಂಡ ಶುಕ್ರವಾರ ತುಮಕೂರಿನ ಅವರ ನಿವಾಸದಲ್ಲಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿತು.
ಶ್ರೀ ಆದಿಚುಂಚನಗಿರಿ ಧಾರ್ಮಿಕ ಕ್ಷೇತ್ರವು ಜಿಲ್ಲೆಯಲ್ಲಿ ಅಸಂಖ್ಯಾತ ಭಕ್ತವೃಂದವನ್ನು ಹೊಂದಿದ್ದು ಜೊತೆಗೆ ವಿದ್ಯಾರ್ಜನೆಯಲ್ಲಿ ಇಂದು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ಉತ್ತಮ ಶಿಕ್ಷಣ ಕಲ್ಪಿಸುತ್ತಿದೆ. ಬಿ ಜಿ ನಗರದ ವಿಶ್ವವಿದ್ಯಾಲಯದ ಆವರಣದಲ್ಲಿ 9 ಶಾಲಾ ಕಾಲೇಜುಗಳು ಭಿನ್ನ ಭಿನ್ನ ಕೋರ್ಸ್‌ ಗಳನ್ನು ಆಭ್ಯಸಿಸಲು ಅವಕಾಶವಿದೆ. ಇಲ್ಲಿನ ವಿವಿಧ ಕೋರ್ಸ್‌ ಗಳನ್ನು ಅಭ್ಯಾಸ ಮಾಡಲು ತುಮಕೂರು, ಕುಣಿಗಲ್‌ ಮಾರ್ಗದಿಂದ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನ ನಿತ್ಯ ಓಡಾಡುತ್ತಾರೆ.

ಅಲ್ಲದೇ ಆದಿಚುಂಚನಗಿರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಜಧಾನಿಯ ಯಾವ ಹೈ ಟೆಕ್ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದೆ. ನರರೋಗ ವಿಭಾಗವು ಅತ್ಯಂತ ಸುಧಾರಿತ ವೈಶಿಷ್ಟ್ಯಗಳನ್ನೊಳಗೊಂಡಿದೆ. ಈ ಕಾರಣಕ್ಕೂ ದಿನಂಪ್ರತಿ ಕನಿಷ್ಟ 50-100 ಜನ ರೈತರು, ಬಡವರು ಚಿಕಿತ್ಸೆಗಾಗಿ ಹೋಗುತ್ತಿದ್ದಾರೆ. ಗೂಳೂರು, ನಾಗವಲ್ಲಿ, ಹೆಬ್ಬುರು ಕಡೆಯಿಂದ ವಿದ್ಯಾರ್ಥಿಗಳು, ರೋಗಿಗಳು, ಭಕ್ತರು ಪ್ರತಿದಿನ ಬಿ. ಜಿ. ನಗರದ ಆಸ್ಪತ್ರೆ ಗೆ ತೆರಳಲು ಪರದಾಡುತ್ತಾರೆ.
ಬಸ್ ಕಲ್ಪಿಸಿಕೊಡುವುದರಿಂದ ಬಡ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತಲುಪಲು ಅನುಕೂಲ ಆಗಲಿದೆ. ವಿಶ್ವವಿದ್ಯಾಲಯದ ಆವರಣದಲ್ಲಿರುವ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದ ಚಿಕಿತ್ಸೆ ಪಡೆಯಲು ಬಡವರಿಗೆ ಅನುಕೂಲವಾಗಲಿದೆ ಎಂದು ಭೈರವೇಶ್ವರ ಬ್ಯಾಂಕಿನ ಅಧ್ಯಕ್ಷರಾದ ಚಿಕ್ಕ ರಂಗಣ್ಣ ಅವರು ಶಾಸಕರಿಗೆ ವಿದ್ಯಾರ್ಥಿಗಳ ಕಷ್ಟವನ್ನು ಮನವರಿಕೆ ಮಾಡಿಕೊಟ್ಟರು.
ವಿದ್ಯಾರ್ಥಿಗಳು ದಿನನಿತ್ಯ ಈ ಮಾರ್ಗವಾಗಿ ಪ್ರಯಾಣ ಬೆಳೆಸುತ್ತಿದ್ದು ಬಸ್ ನಲ್ಲಿ ಒಂದು ಗಂಟೆ ತೆಗೆದುಕೊಳ್ಳುವ ಪ್ರಯಾಣ ಎರಡು ಮೂರು ಬಸ್‌ ಹತ್ತಿ ಇಳಿದು ಅಲ್ಲಿಗೆ 3 ಗಂಟೆಯಾಗುತ್ತಿದೆ. ತುಮಕೂರಿನಿಂದ ನೇರವಾಗಿ ಆದಿಚುಂಚನಗಿರಿ ವಿಶ್ವವಿದ್ಯಾನಿಲಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ, ಭಕ್ತರಿಗೆ, ರೋಗಿಗಳಿಗೆ, ಅನುಕೂಲವಾಗುತ್ತದೆಂಬ ನಿಯೋಗದ ಮನವಿಗೆ ಸ್ಪಂದಿಸಿದ ಶಾಸಕ ಎಸ್.ಆರ್ ಶ್ರೀನಿವಾಸ್ ರವರು ಒಂದು ವಾರದೊಳಗೆ ಶಾಲಾ ಕಾಲೇಜಿನ ಸಮಯಕ್ಕೆ ಅನುಕೂಲ ವಾಗುವಂತೆ ಬಸ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತುಮಕೂರಿನಿಂದ ಬೆಳಗ್ಗೆ 7.10 ಕ್ಕೆ ಹೊರಡುವ ಈ ಬಸ್‌ ಕುಣಿಗಲ್‌ ಹಾಗೂ ಎಡೆಯೂರು ಮಾರ್ಗವಾಗಿ 8.50ಕ್ಕೆ ಬಿ ಜಿ ನಗರದ ವಿಶ್ವವಿದ್ಯಾನಿಲಯದ ಆವರಣ ತಲುಪಲಿದೆ. ಸಂಜೆ 4.10ಕ್ಕೆ ಅಲ್ಲಿಂದ ಹೊರಡಲಿದೆ. ರೋಗಿಗಳು, ವಿದ್ಯಾರ್ಥಿಗಳು ಮತ್ತು ಎಡೆಯೂರು ಹಾಗೂ ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಭಕ್ತಾಧಿಗಳಿಗೂ ಅನುಕೂಲವಾಗಲಿದೆ.

ಇದು ‘ಪೊಲೀಸರ ಕುರುಕ್ಷೇತ್ರ’: ತುಮಕೂರಿನಲ್ಲೊಂದು ಹೊಸ ಪ್ರಯೋಗ ಇಂದು

ದುರ್ಯೋದನನ ಪಾತ್ರದಲ್ಲಿ ಡಿವೈಎಸ್ಪಿ ಚಂದ್ರಶೇಖರ್

ಬಹುಶಃ ಈ ವ್ಯಕ್ತಿತ್ವವೇ ಹಾಗೆ. ಎಲ್ಲರನ್ನು ಒಗ್ಗೂಡಿಸುವ ಮನಸ್ಸು, ಎಲ್ಲರೊಳಗೊಂದಾಗುವ ಮನುಷ್ಯ. ಕಠಿಣ ಶಿಸ್ತಿನ ಇಲಾಖೆಯ ಕಟ್ಟುನಿಟ್ಟಿನ‌ ಅಧಿಕಾರಿಯಾದರೂ ಮಾತೃ ಹೃದಯ ಶ್ರೀಮಂತಿಕೆ.

ಹೆಸರು ಚಂದ್ರಶೇಖರ. ಬಹುಶಃ ಅದಕ್ಕೆ ಇರಬೇಕು ಚಂದ್ರನಂತ ಆಕರ್ಷಣೆ ಉಳ್ಳ ಸಹೃದಯತೆಯಿಂದ ಎಂತವರನ್ನು ಸೆಳೆಯುವ ವ್ಯಕ್ತಿತ್ವ.

ತಾನೆಲ್ಲೇ ಕೆಲಸ ನಿರ್ವಹಿಸಿದರೂ, ಅಲ್ಲೊಂದು ನೆನಪಿನ ಬುತ್ತಿ ತುಂಬಿಡುವ, ತನ್ನದೇ ಆದ ಅಸ್ತಿತ್ವದ ಕುರುಹು ಉಳಿಸಿ ಬರುವ ಸಾಂಘಿಕ.

ಅವಮಾನಿಸಿದವರ ಎದುರು ಅವಿರತವಾಗಿ ಸಾಧಿಸಿ, ನಿಬ್ಬೆರಗಿನಿಂದ ಒಮ್ಮೆ ತನ್ನತ್ತ ತಿರುಗಿ ನೋಡುವಂತೆ ನಡೆವ ಛಲದಂಕ.

ಪ್ರಾಯಶಃ ಇದೇ ಅಸ್ಮಿತೆಯಿಂದಲೇ ಇರಬಹುದು ತನ್ನ ನೇತೃತ್ವದಲ್ಲಿ ಕಲೆಗೊಂದು ಬೆಲೆ ಕಟ್ಟುವ ನಿಟ್ಟಿನಲ್ಲಿ ಪೌರಾಣಿಕ ನಾಟಕ ಆಯೋಜಿಸಿ, ತನ್ನವರೊಂದಿಗೆ ಕಲೆಗೊಂದಿಷ್ಟು ಬೆಳಕು ಚೆಲ್ಲುವ ಹೊಸ ಅಡಿಗೆ ಮುನ್ನುಡಿಯಾಗಿದ್ದಾರೆ.

ಪ್ರಸ್ತುತ ತುಮಕೂರು ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಕೆ.ಆರ್. ಚಂದ್ರಶೇಖರ ಮೂಲತಃ ಗಂಡು ಮೆಟ್ಟಿದ ನಾಡು ಮಂಡ್ಯ ಜಿಲ್ಲೆಯ ಕೋಣಸಾಲೆ‌ಯ ಮಗ. ಆದರೂ ತುಮಕೂರು ಜಿಲ್ಲೆಯಲ್ಲಿ ತನ್ನದೇ ಆದ ವ್ಯಕ್ತಿ, ವ್ಯಕ್ತಿತ್ವ ರೂಪಿಸಿಕೊಂಡು, ತನ್ನ ಅಪ್ಪಿ ಬರುವವರಿಗೆ ಸಹೋದರ, ಸ್ನೇಹಿತ, ಪ್ರೀತಿ ಪಾತ್ರನಾಗಿ, ಧ್ವೇಷಿಸಿ ದೂರ ತಳ್ಳುವವರಿಗೆ ತೊಡೆ ತಟ್ಟಿ ನಿಲ್ಲುವ ಅಂತರ್ಮುಖಿ.
ಅವರ ಸಾರಥ್ಯದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನವನ್ನು ಅವರ ಸಹೋದ್ಯೋಗಿ ಮಿತ್ರರೊಂದಿಗೆ ಏರ್ಪಡಿಸಲಾಗಿದೆ.

ಪೊಲೀಸ್ ಎಂದಾಕ್ಷಣ ಜನರ ಮಸ್ತಕದಲ್ಲಿ ನಾನಾ ಬಗೆಯ ಆಲೋಚನೆಗಳು ಎದುರಾಗುವುದುಂಟು. ಅದಕ್ಕೆ ಕಾರಣಗಳು ನೂರೆಂಟಿರಬಹುದು. ಆದರೆ ಯಾರೋ ಒಂದಿಬ್ಬರ ವಿಕೃತತೆಗೆ ಎಲ್ಲರನ್ನೂ ಹಾಗೆ ಎಂದು ಸಂಭಾವಿಸುವಂತಿಲ್ಲ. ಶಿಸ್ತಿನ ಇಲಾಖೆಯಲ್ಲಿ ಕೆಲವೊಮ್ಮೆ ಕಠಿಣ ನಿರ್ಧಾಗಳು‌ ಅನಿವಾರ್ಯ. ಆಗೆಂದ ಮಾತ್ರಕ್ಕೆ ಪೊಲೀಸರಿಗೆ ಮನುಷ್ಯತ್ವ, ಮಾನವೀಯ ಮೌಲ್ಯಗಳಿಲ್ಲ ಎಂಬಂತಿಲ್ಲ. ಅಂತಃಕರಣದ ಹೃದಯ ಇಲಾಖೆಯ ಎಲ್ಲರಲ್ಲೂ ಇರದ್ದಿದ್ದರೆ ಇಂದು ಇಷ್ಟು ಅಭಿರಾಮವಾಗಿ ನಾವು ಉಳಿಯುತ್ತಿರಲಿಲ್ಲ ಎಂದೆನಿಸುತ್ತದೆ.

ಚಂದ್ರಶೇಖರ ಅವರಂತ ಹೃದಯ ಶ್ರೀಮಂತಿಕೆ ವ್ಯಕ್ತಿಗಳು ಪೊಲೀಸ್ ಇಲಾಖೆಯಲ್ಲಿ ಇನ್ನೂ ಉಳಿದಿರುವ ಕಾರಣದಿಂದಾಗಿಯೇ ಮಾನವೀಯ ಮೌಲ್ಯಗಳು ಇನ್ನೂ ಜೀವಂತಿಕೆ ಪಡೆದಿವೆ. ಇಲಾಖೆಯ ಗೌರವವು ಶಿಖರ ಮುಖವಾಗಿದೆ.

ಇಂತಹ ಮೇರು ವ್ಯಕ್ತಿಯ ಸಾರಥ್ಯದಲ್ಲಿ ಇಲಾಖೆಯ ಸಮಾನ ಚಿತ್ತದ ಸಿಬ್ಬಂದಿ ಒಟ್ಟುಗೂಡಿ ಜಂಜಾಟದ ಬದುಕಿಗೊಂದಿಷ್ಟು ವಿರಾಮ ನೀಡಿ, ವೀರಾಜಮಾನವಾಗಿ ತಮ್ಮ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡಲು ಮುಂದಾಗಿದ್ದಾರೆ.

ನಮ್ಮ ಕಲೆಗೆ ಒಂದಿಷ್ಟು ಬೆಲೆ ತರುವ, ನಾಡಿನ ಭಾಷೆಗೆ ಹೊಸ ಭಾಷ್ಯ ಬರೆಯುವ, ನಮಗೂ ಅವಕಾಶ ಸಿಕ್ಕರೆ ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನ ತೋರ್ಪಡಿಸುವ ನಿಟ್ಟಿನಲ್ಲಿ “ಕುರುಕ್ಷೇತ್ರ” ಎಂಬ ಪೌರಾಣಿಕ ನಾಟಕ ಅಭಿನಯಕ್ಕೆ ಕ್ಷಣ ಗಣನೆ ಎಣಿಸುತ್ತಿದ್ದಾರೆ.

ಇದೇ ಮಾರ್ಚ್ 11 ರಂದು ಸಂಜೆ 4 ಗಂಟೆಗೆ
ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಮೀಪದ ಮೈಧಾನದಲ್ಲಿ ಖಾಕಿ ಧಾರಣಿಗಳು ತಮ್ಮ ದೈನಂದಿನ ಸಮವಸ್ತ್ರವನ್ನು ಬದಿಗಿರಿಸಿ ಕುರುಕ್ಷೇತ್ರ ನಾಟಕದ ಭೀಮಾರ್ಜುನ, ಧರ್ಮರಾಯ ನಕುಲ-ಸಹದೇವರಾದಿಯಾಗಿ, ದುರ್ಯೋಧನ, ದುಶ್ಯಾಸನಾಧಿಗಳ ವೇಷದಲ್ಲಿ ತಮ್ಮ ಪಾತ್ರಗಳನ್ನ ಅಭಿವ್ಯಕ್ತಿ ಪಡಿಸುವ‌ ಮೂಲಕ ಪ್ರತಿಭೆಯನ್ನ ಅನಾವರಣ ಮಾಡಲಿದ್ದಾರೆ.

ಸದಾ ಕಾಲ ಸಾರ್ವಜನಿಕ ಸೇವೆಗಾಗಿ ಪಿಸ್ತೂಲ್, ಲಾಟಿ ಹಿಡಿದು ರಕ್ಷಣೆಗಾಗಿ ನಿಲ್ಲುತ್ತಿದ್ದ ಕೈಗಳು ಈಗ ಗದೆ, ಕತ್ತಿ ಹಿಡಿದು ನಮ್ಮ ಸಾಂಸ್ಕೃತಿಕ ಪ್ರತೀಕವೆನಿಸಿದ ಕುರುಕ್ಷೇತ್ರ ಪೌರಾಣಿಕ ನಾಟಕ ಅಭಿನಯಿಸುವ ಮೂಲಕ ಕಲೆಗೆ ಹೊತ್ತು ನೀಡಿ ಒಂದಿಷ್ಟು ಮನೋಲ್ಲಾಸ ಪಡಿಸಲು ಸಿದ್ದರಾಗಿದ್ದಾರೆ. ಜನರ ಹಿತಕ್ಕಾಗಿ ಸ್ವಹಿತ ಲೆಕ್ಕಿಸದೆ ಒಂದಲ್ಲಾ ಒಂದು ಜಂಜಾಟದ ಬದುಕಿನಲ್ಲಿ ತೊಡಗುವ ಆರಕ್ಷಕ ಜೀವಗಳ ಈ ಕೌತುಕ ಅಭಿನಯವನ್ನು ಕಣ್ತುಂಬಿಕೊಂಡು ನಾವೂ ಆನಂದಿಸಿ, ಬೆನ್ನುತಟ್ಟಿ ಅವರನ್ನೂ ಪ್ರೋತ್ಸಾಹಿಸುವ ಮುಖೇನ ನಮಗಾಗಿ ತುಡಿವ ಮನಸುಗಳಿಗೊಂದಿಷ್ಟು ಮುದ ನೀಡುವ ಬನ್ನಿ…

✍️

ಲೇಖನ: ತುಳಸೀತನಯ ಚಿದು

ಮಹಿಳಾ ದಿನದ ವಿಶೇಷ ಓದಲೇಬೇಕಾದ ಕವನ

ಆಯಿತಲ್ಲ ನಿನ್ನ
ದಿನ
ಇನ್ನು ಮುನ್ನೂರು ಅರವತ್ತು ನಾಲ್ಕು ದಿನ ನನ್ನದು

ಎಲ್ಲ ಸ್ವತಂತ್ರ
ಬಂದಿತು ..
ಮೆಟ್ರೊ , ಜೆಟ್ ಓಡಿಸಿ ಆಯಿತು
ಚಂದ್ರ ನಿಗೆ , ಮಂಗಳ ಕ್ಕೆ ಜಿಗಿದು ಆಯಿತು..
ಮುಂದೆ???
Fridge ಅಲ್ಲಿ ಪೀಸ್ ಪೀಸ್.

ಕಣ್ಣ ರೆಪ್ಪೇ
ನಕಲಿ
ಕಣ್ಣ ಲೆನ್ಸ್
ನಕಲಿ
ಕಣ್ಣೀರು ಮಾತ್ರ ಅಸಲಿ

ಬಿಟ್ಟ
ಚೂಪಾದ ಉಗುರು
ಅಪಾಯದಲ್ಲಿನ
ಅಸ್ತ್ರವೇ.

ಅಕೌಂಟ್
ಜಂಟಿ ..

ಸಾಲ ಸೋಲ
ಎಲ್ಲ ಜಂಟಿ

ಮನೆಯ
ಒಳಾಂಗಣ
ದೌರ್ಜನ್ಯಕ್ಕೆ
ಆಂತರಿಕ ದೂರು ಸಮಿತಿ?

ಮನೆಯ
ಒಳಾಂಗಣ
ದೌರ್ಜನ್ಯಕ್ಕೆ
ಆಂತರಿಕ ದೂರು ಸಮಿತಿ?

ಕುಡಿಯುವ
ಸ್ವಾತಂತ್ರ್ಯ ..
ಕುಡಿದು ಹೊಡೆಯುವ
ಸ್ವಾತಂತ್ರ್ಯಕ್ಕೆ
ಸಮವೇ?

ದುಡಿಯುವ
ಸ್ವತಂತ್ರ
ದುಡ್ಡಿನ ಮೇಲಿನ
ಸ್ವತಂತ್ರ ಅಲ್ಲ

ದುಡಿದು
ಅನ್ನಿಸಿ
ಕೊಳ್ಳುವ ದಕ್ಕಿಂತ
ದುಡಿಯದೇ…ಅನ್ನಿಸಿಕೊಂಡಿರುವುದು ಮೇಲು

ಡಾ ರಜನಿ ಎಂ

ಕನ್ನಡದ ಭವಿಷ್ಯವನ್ನು ರಕ್ಷಿಸಬೇಕಾಗಿದೆ : ಬಿಳಿಮಲೆ

ಬೆಂಗಳೂರು

ಮಾತೃ ಭಾಷೆ ಹಾಗೂ ಕೆಂಪು ಪುಸ್ತಕ ದಿನಾಚರಣೆ

ಕನ್ನಡದ ಭವಿಷ್ಯ ಕರಾಳವಾಗಿದೆ. ಕನ್ನಡ ಶಾಲೆಗಳು ನಶಿಸಿಹೋಗುವ ಹಂತದಲ್ಲಿವೆ. ಈಗಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕನ್ನಡವೇ ಕ್ರಮೇಣ ಮರೆಯಾಗುವ ಸಾಧ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.

ಕ್ರಿಯಾ ಮಾಧ್ಯಮ ಹಮ್ಮಿಕೊಂಡಿದ್ದ ಮಾತೃ ಭಾಷೆ ಹಾಗೂ ಕೆಂಪು ಪುಸ್ತಕ ದಿನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಹಾಗೂ ಅಸ್ಮಿತೆಯ ಮುಂದೆ ಹಲವು ಸವಾಲುಗಳಿವೆ. ಅದರಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ತುರ್ತು ಮುಖ್ಯವಾದದ್ದು. ಇದಲ್ಲದೆ ಕನ್ನಡ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳದೆ ಹೋದಲ್ಲಿ ಭಾಷೆ ಸಂಸ್ಕೃತಿ ನಶಿಸಿಹೋಗುತ್ತದೆ ಎಂದರು.

ಓದುವ ಹಿಗ್ಗು ಉತ್ಸವದ ಅಂಗವಾಗಿ ಹೊರತಂದ ‘ಓದುವ ಖುಷಿ ‘ ಕೃತಿಯನ್ನು ಬಿಡುಗಡೆ ಮಾಡಿದ ಸಾಹಿತಿ, ಪತ್ರಕರ್ತ ಜಿ ಎನ್ ಮೋಹನ್ ಅವರು ಪುಸ್ತಕ ಎನ್ನುವುದು ಬದಲಾವಣೆಯನ್ನು ತರುವ ಪ್ರಮುಖ ಅಸ್ತ್ರ. ಇದು ಸಮಾಜವನ್ನು ಜಡವಾಗಿ ಇರಲು ಬಿಡದ ಬದಲಾವಣೆಯ ವೇಗವರ್ಧಕ. ಪುಸ್ತಕ ಪ್ರೀತಿಯನ್ನು ಎಲ್ಲೆಡೆ ಬಲಪಡಿಸುವ, ಹಂಚುವ ಕೆಲಸವಾಗಬೇಕು ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಮುಖ್ಯಸ್ಥರಾದ ಬಸವರಾಜ ಕಲ್ಗುಡಿ ಅವರು ಮಾತನಾಡಿ ಓದುವ ಸಂಸ್ಕೃತಿ ನಶಿಸಿ ಹೋಗುವ ಹಂತದಲ್ಲಿದೆ. ಆಧುನಿಕ ಸಾಧನ ಹಾಗೂ ತಂತ್ರಜ್ಞಾನದಿಂದಾಗಿ ಯುವಪೀಳಿಗೆ ಓದಿನಿಂದ ಸಂಪೂರ್ಣ ವಿಮುಖರಾಗಿದ್ದಾರೆ. ಓದಿನತ್ತ ಮತ್ತೆ ಅವರನ್ನು ಸೆಳೆಯುವುದು ಸವಾಲಿನ ಕೆಲಸ ಎಂದರು.

ಕ್ರಿಯಾ ಮಾಧ್ಯಮದ ಎನ್ ಕೆ ವಸಂತರಾಜ್, ಕೆ ಎಸ್ ವಿಮಲಾ, ಕೃತಿಯ ಅನುವಾದಕರಾದ ತಡಗಳಲೆ ಸುರೇಂದ್ರ ರಾವ್ ಉಪಸ್ಥಿತರಿದ್ದರು.

ಎಚ್ ಜಿ ಜಯಲಕ್ಷ್ಮಿ ಹಾಗೂ ದೇವಿಕಾ ರಾಮು ಅವರು ನಿರಂಜನರ ಕೃತಿಗಳ ಆಯ್ದ ಭಾಗವನ್ನು ವಾಚಿಸಿದರು.

ಕ್ರಿಯಾ ಮಾಧ್ಯಮ ಬೆಂಗಳೂರಿನಲ್ಲಿ ಕೆಂಪು ಪುಸ್ತಕ ಹಾಗೂ ಮಾತೃಭಾಷಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಓದುವ ಖುಷಿ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಪತ್ರಕರ್ತ ಜಿ ಎನ್ ಮೋಹನ್ ಹಾಗೂ ಕೇಂದ್ರ ಸಾಹಿತ್ಯ ಆಕಾಡೆಮಿಯ ಬಸವರಾಜ ಕಲ್ಗುಡಿ, ಕ್ರಿಯಾ ಮಾಧ್ಯಮದ ಎನ್ ಕೆ ವಸಂತರಾಜ್ ಅವರು ಉಪಸ್ಥಿತರಿದ್ದರು

ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡುವುದು ಅನಿವಾರ್ಯ : ಎನ್.ಸೋಮಶೇಖರ್

0

ತುರುವೇಕೆರೆ: ಮಕ್ಕಳ ಭವಿಷ್ಯ ನಾಲ್ಕು ತರಗತಿ ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತಿದ್ದು ಶಿಕ್ಷಕರ ಪಾತ್ರ ಶ್ಲಾಘನೀಯವಾದದು ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಅಭಿಪ್ರಾಯಪಟ್ಟರು.

ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಪ್ರಿಯಾ ಪ್ರೌಢ ಶಾಲೆಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು

ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚು ಒತ್ತಡವನ್ನು ಹೇರದೆ ಮಕ್ಕಳ ಆಸಕ್ತಿ ಮತ್ತು ಅವರ ಸಾಮರ್ಥಯ್ಯವನ್ನು ಆಧರಿಸಿದ ಶಿಕ್ಷಣ ಕೊಡಿಸುವುದು ಸೂಕ್ತ. ಬಹಳ ಮುಖ್ಯವಾಗಿ ಶಿಕ್ಷಣದ ಜೊತೆಗೆ ಕೌಟುಂಬಿಕ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳಂತ ಸಂಸ್ಕಾರಗಳನ್ನು ಕಲಿಸುವುದು ಪೋಷಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ.

ಶಿಕ್ಷಕರು ಮಕ್ಕಳಿಗೆ ಪಠ್ಯ ವಿಷಯದ ಜೊತೆಗೆ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆಗಳಂತಹ ಪಠ್ಯೇತರ ಚಟುವಟಿಕೆಗಳ ಕಲಿಕೆಗಳ ಬಗ್ಗೆಯೂ ಮಕ್ಕಳಲ್ಲಿ ಅಭಿರುಚಿ ಬೆಳೆಸಿದಾಗ ಅವರಲ್ಲಿ ಸಮಗ್ರ ಕಲಿಕೆಯಾಗುತ್ತದೆ. ಇದುವೇ ಶಿಕ್ಷಣದ ಮೂಲಭೂತ ಆಶಯವೂ ಕೂಡ ಆಗಿದೆ. ನಾವು ಕಲಿತ ವಿದ್ಯೆ ನಮ್ಮ ಹೊಟ್ಟೆಯನ್ನಷ್ಟೇ ತುಂಬಿಸಿದರೆ ಸಾಲದು ಅಸಹಾಯಕರ, ನೊಂದವರ, ಬಡವರ ಕಷ್ಟಕ್ಕೂ ಮಿಡಿಯುವ ಹೃದಯವನ್ನು ಬೆಳೆಸಿಕೊಳ್ಳಿ ಆಗ ಮಾತ್ರ ತಾವು ಕಲಿತ ವಿದ್ಯೆಗೆ ಸಾರ್ಥಕತೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇದೇ ವೇಳೆ ಸಾಧಕರಾದ ಬೆಂಗಳೂರಿನ ಇಂಡಿಯಾ ನಾಲೆಡ್ಜ್ ಡೆವಲೆಫ್ ಮೆಂಟ್ ಟ್ರಸ್ಟ್ ನ ಛೇರ್ಮನ್ ಡಾ.ತಲಕಾಡು ಚಿಕ್ಕರಂಗೇಗೌಡ ಹಾಗು ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಉತ್ತಮ ಶಿಕ್ಷಕರನ್ನು ಅಭಿನಂಧಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರಾದ ಎಂ.ಎನ್.ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿ ಬಿ.ಎನ್.ಪುಷ್ಪಲತಾ, ಸಹಕಾರ್ಯದರ್ಶಿ ಚೇತನ್ ಸಿ.ಗೌಡ, ಮಿಮಿಕ್ರೀಂ ನಟ ತುರುವೇಕೆರೆ ಸಾಗರ್, ಕಲಾವಿದ ರಾಘವೇದ್ರ, ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.

ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿ ಆಗುವುದನ್ನು ತಪ್ಪಿಸಲು ಕಾಂಗ್ರೆಸ್ ನಲ್ಲಿ ಪಿತೂರಿ

ತುರುವೇಕೆರೆ: ಡಿ.ಕೆ.ಶಿವಕುಮಾರ್ ಅವರು ಮುಖ್ಯ ಮಂತ್ರಿ ಆಗುವುದನ್ನು ತಪ್ಪಿಸಲು ಕಾಂಗ್ರೆಸ್ ನ ಕೆಲ ಸಚಿವರು ಹಠಕ್ಕೆ ಬಿದ್ದಿರುವುದು ಒಕ್ಕಲಿಗ ಸಮುದಾಯದ ನಾಯಕರನ್ನು ಮೂಲೆ ಗುಂಪು ಮಾಡುವ ಹುನ್ನಾರವಾಗಿದ್ದು; ಇದು ಕೆ್ಟ್ಟ ರಾಜಕೀಯಕ್ಕೆ ಮುನ್ನುಡಿಯಾಗಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವಿಷಾಧ ವ್ಯಕ್ತಪಡಿಸಿದರು.

ಪಟ್ಟಣದ ಎಸ್.ಎ.ಸಿ ಮಯೂರ ವಿದ್ಯಾಲಯದ ಶಾಲಾ ಆವರಣಲ್ಲಿ ನೇಗಿಲ ಯೋಗಿ ತಾಲ್ಲೂಕು ಘಟಕ ಶಾಖೆ ಉದ್ಘಾಟನೆ ಹಾಗು ಸಾಧಕರಿಗೆ ಅಭಿನಂಧನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.

ಈ ಕ್ಷೇತ್ರದ ಒಕ್ಕಲಿಗ ಸಮುದಾಯದವರು ಸ್ವಾಭಿಮಾನಿಗಳು ಹಾಗಾಗಿ ನನ್ನನ್ನು ನಾಲ್ಕು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆ ಸದಾ ಬೆಂಬಲವಾಗಿರುವೆ. ಒಂದೊಮ್ಮೆ ನಮ್ಮ ಸಮುದಾಯಕ್ಕೆ ಅನ್ಯಾಯವಾದಲ್ಲಿ ಎಲ್ಲ ನಾಯಕರೂ ಪಕ್ಷಬೇಧ ಮರೆತು ಸಂಘಟಿತರಾಗಿ ಹೋರಾಟ ಮಾಡೋಣ ಎಂದು ಕರೆಕೊಟ್ಟರು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಸರ್ಕಾರಿ ಉದ್ಯೋಗ ಸಿಗಲಿಲ್ಲವೆಂದರೆ ಬದುಕೇ ಇಲ್ಲ ಎನ್ನುವ ಮಟ್ಟಿಗೆ ಸಮಾಜ ಬಂದು ನಿಂತಿದೆ. ಸಮುದಾಯ ಯುವಕರು ಉದ್ಯಮಶೀಲರಾಗಿ ನೂರಾರು ಜನರಿಗೆ ಉದ್ಯೋಗ ಕೊಡುವಂತೆ ಬೆಳೆಯ ಬೇಕು.

ಸಮುದಾಯದ ರೈತರು ತಮ್ಮ ಮಕ್ಕಳಿಗೆ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಿ ಸಾಂಪ್ರದಾಯಿಕ ಕೃಷಿಗಿಂತ ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಂಡು ಉತ್ಪಾದನಾ ಕ್ಷೇತ್ರವನ್ನು ಹೆಚ್ಚಿಸಿಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗಿ. ಶಿಕ್ಷಣ ವಲಯದಲ್ಲಿ ಪೈಪೋಟಿ ಇರುವುದರಿಂದ ತಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿ. ಒಕ್ಕಲಿಗದ ಸಮುದಾಯದ ಸಂಘ ಸಂಸ್ಥೆಗಳ ಸೇವೆ ಒಂದೇ ಜಾತಿಗೆ ಸೀಮಿತಗೊಳ್ಳದೆ ಎಲ್ಲ ಸಮುದಾಯಗಳ ಏಳಿಗೆಗೂ ಶ್ರಮಿಸುವ ಮೂಲಕ ಈ ಸಮುದಾಯದ ಜಾತ್ಯಾತೀತತೆಯ ಮನೋಭಾವನೆಯನ್ನು ಮೆರೆಯೋಣ ಎಂದರು.

ದೊಡ್ಡಬಳ್ಳಾಪುರದ ಹಿರಿಯ ಸಾಹಿತಿ ಎಂ.ಬಿ.ಚಂದ್ರಶೇಖರಯ್ಯ ಮಾತನಾಡಿ , ದೈಹಿಕ ಮತ್ತು ಬೌದ್ಧಿಕ ಶ್ರಮ ಸಂಸ್ಕೃತಿಯ ಪ್ರತೀಕವಾಗಿರುವ ನೇಗಿಲ ಯೋಗಿಯು ಇಂದು ಕೌಟುಂಬಿಕ, ಔದ್ಯೋಗಿಕ ಸೇರಿದಂತೆ ಹಲವು ಬಿಕ್ಕಟ್ಟಿಗಳನ್ನು ಎದುರಿಸುತ್ತಿದ್ದಾನೆ. ಎಲ್ಲ ವರ್ಗದ ದುಡಿಮೆಗಾರರ ಸ್ಥಿತಿ ಇಂದು ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಸಿಕ್ಕಿ ನರಳುತ್ತಿದೆ. ರೈತ ತನ್ನ ವೃತ್ತಿ ಆಯಾಮಗಳಲ್ಲಿ ಪರಿವರ್ತನೆಗಳನ್ನು ಕಂಡುಕೊಳ್ಳದಿದ್ದರೆ ಗ್ರಾಮೀಣ ಕೃಷಿ ಸಂಸ್ಕೃತಿಯ ಅಸ್ಮಿತೆ ಕಣ್ಮರೆಯಾಗಲಿದೆ. ಒಕ್ಕಲಿಗ ಸಮುದಾಯದವರು ಕೃಷಿಯ ಜೊತೆ ಜೊತೆಯಲ್ಲೇ ಸಣ್ಣ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿ ತಮ್ಮ ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಪ್ರೊ.ಪುಟ್ಟರಂಗಪ್ಪ, ವಿಜಯಲಕ್ಷ್ಮಿ ವಿಶ್ವೇಶ್ವರಯ್ಯ, ಸೇರಿದಂತೆ ಹಲವು ಸಾಧಕರನ್ನು ಅಭಿನಂಧಿಸಿಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ನೇಗಿಲ ಯೋಗಿ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಆರ್.ರಂಗನಾಥ್, ರೇಷ್ಮೆ ಇಲಾಖೆಯ ಆಯುಕ್ತರಾದ ಎಂ.ಬಿ.ರಾಜೇಶ್ ಗೌಡ, ಮೈಸೂರು ನೇಗಿಲ ಯೋಗಿ ಸೇವಾ ಸಮಾಜ ಅಧ್ಯಕ್ಷ ಡಿ.ರವಿಕುಮಾರ್, ರಾಜೇಂದ್ರ ಪ್ರಸಾದ್, ಸಂಘದ ಗೌರವಾಧ್ಯಕ್ಷ ಡಾ.ನವೀನ್, ಗೌರವ ಸಲಹೆಗಾರ ಪ್ರೊ.ಪುಟ್ಟರಂಗಪ್ಪ, ಸಂಚಾಲಕರಾದ ಡಾ.ಬಿ.ಚೌದ್ರಿನಾಗೇಶ್, ಪ್ರಧಾನ ಕಾರ್ಯದರ್ಶಿ ಎಚ್.ಆರ್.ತುಕಾರಾಮ್, ಖಜಾಂಚಿ ವೇಣುಗೋಪಾಲ್ ಮತ್ತಿತರರು ಇದ್ದರು.

ರಾಜಕೀಯ ಬಲೆಗೆ ಅಶ್ಲೀಲ ವಿಡಿಯೋ ಕಾಲ್?

0

ತುಮಕೂರು: ರಾಜಕೀಯವಾಗಿ ಬೆಳೆಯುವ ಮುಖಂಡರನ್ನು, ವಿರೋಧಿ ಬಣದಲ್ಲಿರುವರನ್ನು ಹಣೆಯಲು ಅಶ್ಲೀಲ ವಿಡಿಯೋ ಕಾಲ್ ಬಳಕೆ ಮಾಡಿಕೊಳ್ಳಲಾಗುತ್ತಿದೆಯೇ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.
ಸಾಮಾಜಿಕ ಜಾಲತಾಣಗಳ ಈ ಕಾಲಘಟ್ಟದಲ್ಲಿ ಸ್ವಲ್ಪ ಯಾಮಾರಿದರೂ ಸಾಕು ಇಂಥ ಬಲೆಗಳಿಗೆ ಸಿಕ್ಕಿಸುವುದು ಸುಲಭವಾಗಿದೆ. ಇದನ್ನು ರಾಜಕೀಯಕ್ಕೂ ಬಳಕೆ ಮಾಡಿಕೊಂಡರೆ ಅದರಂಥ ಹೀನಾಯ ಸ್ಥಿತಿ ಮತ್ತೊಂದು ಇರಲಾರದು.
ಹನಿ ಟ್ರ್ಯಾಪ್ ಹಳೆಯ ವಿಷಯ. ಅಶ್ಲೀಲ, ನಗ್ನ ವಿಡಿಯೋ ಕಾಲ್ ಮಾಡಿದಾದ ಅದನ್ನು ಒಂದೆರಡು ಸೆಕೆಂಡ್ ಗಳ ಕಾಲ ರೆಕಾಡ್ರ್ ಮಾಡಿಕೊಂಡರೂ ಸಾಕು, ಸಿಕ್ಕವನನ್ನು ಹೇಗೆ ಬೇಕಾದರೂ ಸಾಮಾಜಿಕವಾಗಿ ಮರ್ಯಾದೆ ಕಳೆದು ಆತನನ್ನು ಮುಖ್ಯವಾಹಿನಿಯಿಂದ ಹಿಂದೆ ಸರಿಸಲು.
ತುಮಕೂರಿನ ಭೈರವೇಶ್ವರ ಕೋ ಆಫರೇಟಿವ್ ಬ್ಯಾಂಕ್ ನ ಚುನಾವಣೆ ಹಿನ್ನೆಲೆಯಲ್ಲಿ ಇಂಥದೊಂದು ಚರ್ಚೆ ಜೋರಾಗಿ ವಾಟ್ಸಾಪ್ ಗ್ರೂಪ್ ಗಳಲ್ಲಿ ನಡೆದಿದೆ. ಆದರೆ ಇಂಥ ಬೆಳವಣಿಗೆಗಳು ಯಾವುದೇ ಸಮುದಾಯಕ್ಕೂ ಶೋಭೆ ತರುವಂಥವಲ್ಲ.
ಒಕ್ಕಲಿಗ ಸಮುದಾಯವರ ಹಿಡಿತದಲ್ಲಿರುವ ಈ ಬ್ಯಾಂಕ್ ನ ಚುನಾವಣೆಗಳು ಇತ್ತೀಚಿನವರೆಗೂ ಅಂಥ ಪ್ರಾಮುಖ್ಯತೆ ಗಳಿಸಿರಲಿಲ್ಲ. ಬ್ಯಾಂಕ್ ಬೆಳೆದಂತೆ ಈ ಚುನಾವಣೆ ರಂಗು ಪಡೆದುಕೊಂಡಿದೆ. ಜೋರಾಗಿ ನಡೆಯುತ್ತಿದೆ. ಒಕ್ಕಲಿಗರಲ್ಲೇ ಮೂರು-ನಾಲ್ಕು ಬಣಗಳು, ಒಳಸುಳಿಗಳು, ರಾಜಕೀಯ ಕೆಸೆರೆರಚಾಟ, ಪಾಟರ್ಿಗಳು ಇಂಥವೆಲ್ಲ ಈ ಚುನಾವಣೆಗೂ ಕಾಲಿಟ್ಟಿದೆ.

ಹೀಗಾಗಿಯೇ ವಿರೋಧಿ ಬಣದವರನ್ನು ಹಣೆಯಲು ಅಶ್ಲೀಲ ವಿಡಿಯೋ ಚಾಟ್ ನ ಬಳಕೆಗೆ ಯತ್ನಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಲು ಕಾರಣವಾಗಿದೆ.
ಬಿಜೆಪಿ ಸಕ್ರಿಯ ಮುಖಂಡರೂ ಆಗಿರುವ, ಹಿರಿಯ ವಕೀಲರಾದ ರವಿ ಗೌಡ ಅವರಿಗೆ ಎರಡು-ಮೂರು ಸಲ ವಿಡಿಯೋ ಕರೆ ಮೂಲಕ ಬಲೆಗೆ ಕೆಡವಿಕೊಳ್ಳುವ ಪ್ರಯತ್ನಕ್ಕೆ ಈ ಆರೋಪಗಳು ಇಂಬು ನೀಡಿದಂತಿವೆ.
‘ನಾನು ಚುನಾವಣೆಯಲ್ಲಿ ಸಕ್ರಿಯವಾಗಿರುವ ಕಾರಣದಿಂದಲೇ ಅಶ್ಲೀಲ ವಿಡಿಯೊ ಕರೆ ಮೂಲಕ ನನ್ನನ್ನು ಹಣೆಯಲು ಯತ್ನಿಸಿದ್ದಾರೆ. ಆದರೆ ಅದೃಷ್ಟ. ಆ ಸಂದರ್ಭ ನನ್ನ ಮೊಬೈಲ್ ಬೇರೆಯವರು ಬಳಕೆ ಮಾಡಿದ್ದರು. ಇಲ್ಲದಿದ್ದರೆ ನನ್ನನ್ನು ಸಾಮಾಜಿಕವಾಗಿ ತೇಜೋವಧೆ ಮಾಡಿಬಿಡುತ್ತಿದ್ದರು’ ಎಂದು ರವಿಗೌಡ ಅವರು ಪಬ್ಲಿಕ್ ಸ್ಟೋರಿಯೊಂದಿಗೆ ಮಾತನಾಡಿ ನೇರ ಆರೋಪ ಮಾಡಿದರು.
‘ಈ ಥರದ್ದು ಯಾರೇ ಮಾಡಿದರೂ ತಪ್ಪು, ರಾಜಕೀಯವಾಗಿ ಇದನ್ನು ಬಳಸಲೇಬಾರದು. ಆದರೆ ಈ ಥರದ್ದು ಸೈಬರ್ ಕ್ರೈಂ, ಹಣ ಕೀಳಲು ಸಹ ಮಾಡುತ್ತಿದ್ದಾರೆ. ರಾಜಕೀಯವಾಗಿ ಇದೆಯೋ, ಇಲ್ಲವೋ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಒಟ್ಟಾರೆ ಇದೊಂದು ದುರುಪಯೋಗ. ಒಟ್ಟಾರೆ ಇದೊಂದು ಜಾಲ ಇದೆ. ಸಾಮಾನ್ಯ ಜನ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಇದನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜಕೀಯ ಕಾರಣದಿಂದಲೂ ಮಾಡಿರಬಹುದೇನೋ? ಒಟ್ಟಾರೆ ತನಿಖೆ ಆಗಬೇಕು’ ಎಂದು ಬೈರವೇಶ್ವರ ಬ್ಯಾಂಕ್ ಚುನಾವಣೆಯಲ್ಲಿ ವೆಂಕಟೇಶ್ ಬಾಬು ಅವರ ಬಣದಲ್ಲಿ ಗುರುತಿಸಿಕೊಂಡಿರುವ ಬೆಳ್ಳಿ ಲೋಕೇಶ್ ಅವರು ತಿಳಿಸಿದರು.
ಯಾರೇ ಆಗಲಿ, ರಾಜಕೀಯವಾಗಿ ನೇರವಾಗಿ ಎದುರಿಸಬೇಕೇ ಹೊರತು ಇಂಥ ಅಡ್ಡ ಮಾರ್ಗ ಹಿಡಿಯಬಾರದು. ಈ ಸಂಬಂಧ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ ಎಂದು ವಿವರ ಬಿಚ್ಚಿಟ್ಟರು.
ಜಿಲ್ಲಾ ಒಕ್ಕಲಿಗರ ಸಂಘ ಹಾದಿತಪ್ಪಿದಂತಿದೆ. ಅದಕ್ಕೆ ಚುನಾವಣೆ ನಡೆಸಲು, ಸರಿದಾರಿಗೆ ತರಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇಂಥ ಬಿಕ್ಕಟ್ಟಿನಲ್ಲಿ ಬೈರವೇಶ್ವರ ಬ್ಯಾಂಕ್, ಒಕ್ಕಲಿಗರ ಮುಖಂಡರ ಪ್ರಾಬಲ್ಯ ಮೆರೆಯಲು ವೇದಿಕೆಯಂಥಾಗುತ್ತಿದೆ.ಇದೇ ಕಾರಣಕ್ಕಾಗಿ ಈ ಬ್ಯಾಂಕ್ ನ ಚುನಾವಣೆ ಈ ಸಮುದಾಯದಲ್ಲಿ ಪ್ರಾಮುಖ್ಯತೆ ಗಳಿಸತೊಡಗಿದೆ.
ವೆಂಕಟೇಶ್ ಬಾಬು ಅವರ ಬಣದಲ್ಲಿ ರಾಧಾ ದೇವರಾಜ್, ಆನಂದ್, ಸುಜಾತಾ ನಂಜೇಗೌಡ ಗುರುತಿಸಿಕೊಂಡಿದ್ದಾರೆ.
ಹಿರಿಯ ವಕೀಲರಾದ ಚಿಕ್ಕರಂಗಣ್ಣ ಅವರ ಬಣದಲ್ಲಿ ಕೈದಾಳ ಸತ್ಯ, ಸ್ವಾಮಿ, ರಂಗಾಮಣಿ ಇತರರು ಗುರುತಿಸಿಕೊಂಡಿದ್ದಾರೆ.

ಶಾಸಕ ಶ್ರೀನಿವಾಸ್ ಅವರಿಂದ ರಾಜೀ?

ಶಾಸಕರೂ ಆಗಿರುವ ರಾಜ್ಯ ಸಾರಿಗೆ ನಿಗಮಗಳ ಅಧ್ಯಕ್ಷರಾದ ಎಸ್.ಆರ್.ಶ್ರೀನಿವಾಸ್ ಅವರು ಎರಡೂ ಬಣಗಳ ನಡುವೆ ರಾಜೀಸೂತ್ರ ಮಾಡಿ, ಚುನಾವಣೆ ನಡೆಯದಂತೆ ತಡೆಯಲು ಸೋಮವಾರ (ಇಂದು) ಸಭೆ ಕರೆದಿದ್ದಾರೆ.
ಚುನಾವಣೆ ನಡೆದರೆ ಸಮುದಾಯದ ನಡುವೆ ಬಿರುಕು ಮೂಡಲಿದೆ. ಎಲ್ಲರೂ ಸೇರಿ ಒಂದಾಗಿ ಬ್ಯಾಂಕ್ ಅನ್ನು ಇನ್ನೂ ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಎರಡು ಬಣದವರ ಸಭೆ ಕರೆದಿದ್ದಾರೆ. ಶಾಸಕ ಶ್ರೀನಿವಾಸ್ ಅವರ ಮಾತಿಗೆ ಒಪ್ಪಿಗೆ ಸೂಚಿಸಿದರೆ ಚುನಾವಣೆ ನಡೆಯುವುದಿಲ್ಲ.

ಜನರ ಪ್ರಶ್ನೆಗಳಿಗೆ ಉತ್ತರ ನೀಡುವ ಪಿಟ್ಕಾಯಣ

ಅಯ್ಯೋ ಅವನಿಗಿನ್ನೂ ಚಿಕ್ಕ ವಯಸ್ಸು, ರಾತ್ರಿ ಮಲಗಿದ್ದಲ್ಲೇ ಸತ್ತೋದಗಿದ್ನಂತೆ!, ಅಯ್ಯೋ, ಪ್ರೈವೆಟ್ ನನಗೇನು ಲಾಭ ಅಲ್ವಾ? ನಮ್ಮ ಕೊಳವೆಬಾವಿ ಮೋಟರ್ ಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಹಾಕಲಿಕ್ಕೂ, ಅದಾನಿಗೋ, ಅಂಬಾನಿಗೂ, ಟಾಟಾಗೋ ಯಾರೊ ಕಂಪನಿಯನವರಿಗೇನು ಲಾಭ? ಅಯ್ಯೋ, ಇದೇನು ಈ ಮಾತ್ರೆ ಕೆಲ್ಸನೇ ಮಾಡಲ್ಲ?, ಬಿಡ್ಲೇ ಕೊಟ್ಟವರು ಕೋಡಂಗಿ, ಈಸ್ಕೋಂಡೋನು ಈರಭದ್ರ!
ಹಳ್ಳಿಕಟ್ಟೆಯ ಮೇಲೆ ಅಥವಾ ಸಿಟಿಯೊಳಗಿನ ಉಸಿರುಕಟ್ಟಿಸುವ ಮನೆಯೊಳಗೆ ಹೀಗೇ ಮಾತನಾಡಿಕೊಳ್ಳುವ, ಅಯ್ಯೋ ನಮ್ಮ ದೇಶ ಶ್ರೀಮಂತ ದೇಶ ಆಗೋದ್ಯಾವಾಗಾ? ದಿಲ್ಲಿಯಲ್ಲಿ ಬಿಸಿಲು ಹೆಚ್ಚಾದರೆ ನಮ್ಮೂರಲ್ಲಿ ಏಕೆ ಸೆಖೆ? ಇಂಥ ಪ್ರಶ್ನೆಗಳಿಗೆ ಸರಳ ಉತ್ತರ ಹೇಳಬೇಕೆನಿಸಿದರೆ ಅವರ ಕೈಗೆ ಪಿಟ್ಕಾಯಣ ಪುಸ್ತಕ ಕೊಟ್ಟರೆ ಸಾಕು.

ದೇಶಗಳನ್ನು ಸುಭದ್ರವಾಗಿ ಕಟ್ಟಬೇಕು. ನಮ್ಮ ಮುಂದಿನ ಮಕ್ಕಳು, ಮರಿಮಕ್ಕಳಾದರೂ ಸುಖವಾಗಿ (ಒಳ್ಳೆಯ ಭದ್ರತೆಯ ಉದ್ಯೋಗ, ಉತ್ತಮ ಮನೆ, ಖಚರ್ೆ ಇಲ್ಲದ ಉತ್ತಮ ಸಕರ್ಾರಿ ಆಸ್ಪತ್ರೆ, ಶಿಕ್ಷಣ, ಒಳ್ಳೆಯ ಪರಿಸರ) ಬದುಕಬೇಕೆಂದರೆ ಇಂಥ ಪಿಟ್ಕಾಯಣ ಪುಸ್ತಕಗಳು ಮನ, ಮನೆ ತಲುಪಬೇಕು. ಈ ಮೂಲಕ ಜನಸಾಮಾನ್ಯರಿಗೆ ನಮ್ಮ ಆಡಳಿತದ ನೀತಿಗಳು ಹೇಗೆ ನಮ್ಮನ್ನು ಕತ್ತು ಸೀಳುತ್ತಿವೆ, ರಾಜಕಾರಣಿಗಳು, ಮಧ್ಯವರ್ತಿಗಳು, ಕೆಲವೇ ಮಾಧ್ಯಮ ಸಂಸ್ಥೆಗಳು, ಕೆಲವೇ ಕಾರ್ಪೋರೇಟ್ ಕಂಪನಿಗಳು, ವಿದೇಶಿ ಸಖ್ಯದ ಕಂಪೆನಿಗಳು ಎಷ್ಟೆಷ್ಟು ಬೇಗ ಶ್ರೀಮಂತವಾಗುತ್ತವೆ ಎಂಬುದರ ರಹಸ್ಯ ತಿಳಿಸಲು ಯತ್ನಿಸುತ್ತವೆ ಇಲ್ಲಿನ ಲೇಖನಗಳು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಡಳಿತದ ನೀತಿಗಳನ್ನು ಪ್ರಶ್ನೆ ಮಾಡುವುದು ಎಷ್ಟು ಮುಖ್ಯ ಎಂಬುದು ಅರಿವಾಗಲಿದೆ. ಪಿಟ್ಕಾಯಣ ಪುಸ್ತಕ ಓದುತ್ತಿದಂತೆ ಇಂಥ ಪುಸ್ತಕಗಳ್ಯಾಕೆ ವಿಶ್ವವಿದ್ಯಾನಿಲಯ, ಕಾಲೇಜುಗಳಿಗೆ ಪಠ್ಯವಾಗಬಾರದು ಎನಿಸಿದರೆ ಅದೇನು ಭಾವುಕ ಎನಿಸಲಾರದು.
ಹಲವು ಮಿತಿಗಳ ನಡುವೆ, ವಾರ್ತಾಭಾರತಿ ಪತ್ರಿಕೆಗೆ ಬರೆದಿರುವ ಅಂಕಣ ಬರಹಗಳ ಒಟ್ಟು ಸಂಕಲನವೇ ಈ ಪಿಟ್ಕಾಯಣ ಪುಸ್ತಕ. ಇಲ್ಲಿರುವ ಎಲ್ಲ ಅಂಕಣಗಳು ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನೆ ಮಾಡುತ್ತವೆ. ಕೆಲವು ಬರಹಗಳು ಅಂಕಿ ಅಂಶಗಳನ್ನು ಮುಂದಿಡುತ್ತವೆ. ಕೆಲವು ಬರಹಗಳು ಅಚನಾಕಾಗಿ ಕೊನೆಗೊಂಡಂತಿವೆ. ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆಯಾದ ಬಹುರೂಪಿ ಈ ಪುಸ್ತಕವನ್ನು ಪ್ರಕಟಿಸಿದೆ.
ಮೊದಲೆಲ್ಲ ಸ್ವಾತಂತ್ರ್ಯ, ಸ್ವಾತಂತ್ರ್ಯ, ಯಾರಿಗೆ ಬಂತು ಸ್ವಾತಂತ್ರ್ಯ, ಟಾಟಾ, ಬಿರ್ಲಾರ ಜೇಬಿಗೆ ಬಂತು ಸ್ವಾತಂತ್ರ್ಯ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆಯ ವೇಳೆ ಕೂಗುತ್ತಿದ್ದರು. ಈಗ ಇದು ಹೇಗೆ ಬದಲಾಗಿದೆ, ಟಾಟಾ, ಬಿರ್ಲಾರ ಬದಲಿಗೆ ಯಾರ ಹೆಸರುಗಳು ಮುನ್ನೆಲೆಗೆ ಬಂದಿವೆ ಎಂಬುದನ್ನು ಹೇಳಬೇಕಾಗಿಲ್ಲ.
ಪಕ್ಷ ರಾಜಕೀಯವನ್ನು ಬದಿಗಿಟ್ಟು ಎಲ್ಲರೂ ಓದುವಂಥ, ಪ್ರಶ್ನೆ ಮಾಡುವಂಥ ಪುಸ್ತಕ ಇದಾಗಿದೆ. ಕಥೆ, ಕಾದಂಬರಿಯಂತೆ ಕುತೂಹಲಕಾರಿಯಾಗಿ ಎಲ್ಲೂ ನಿಲ್ಲಿಸದಂತೆ ಓದಿಸಿಕೊಂಡು ಹೋಗುತ್ತವೆ ಇಲ್ಲಿನ ಬರಹಗಳು.
ಈ ಬರಹಗಳನ್ನು ಬರೆಯಲು ಲೇಖಕರು ಯಾವ, ಯಾವ ಮೂಲಗಳಿಂದ ಮಾಹಿತಿಗಳನ್ನು ತೆಗೆದಿದ್ದಾರೆ, ಸಂಗ್ರಹಿಸಿದ್ದಾರೆ ಎಂಬುದನ್ನು ಅವರ ಮಾತುಗಳಲ್ಲೇ ಓದಿಕೊಳ್ಳಬಹುದಾಗಿದೆ.
ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಈ ಪುಸ್ತಕದ ಲೇಖಕರು. ಪಿಟ್ಕಾಯಣ ಹೆಸರು ಹೇಗೆ ಬಂತು ಎಂಬುದು ಪುಸ್ತಕದ ಆರಂಭದಲ್ಲೇ ರಾಮಾಯಣ ಕಾಲಕ್ಕೆ ಸಂಬಂಧಿಸಿದಂತೆ ರಾಜ್ಯದ ಕರಾವಳಿ ಭಾಗದಲ್ಲಿ ಚಾಲ್ತಿಯಲ್ಲಿದ್ದ ಕಥೆಯೊಂದರ ಹಿನ್ನೆಲೆಯಲ್ಲಿ ಈ ಪದದ ಅರ್ಥವನ್ನು ಲೇಖಕರೇ ವಿವರಿಸಿದ್ದಾರೆ. ಹೀಗಾಗಿ ಪುಸ್ತಕ ಕೊಂಡು ಓದಿದಾಗಲೇ ಅದು ನಿಮಗೆ ಗೊತ್ತಾದರೆ ಚೆನ್ನ.
ಸಂವಾದಕ್ಕೆ ಎಳೆಯುವ ಶಕ್ತಿಯೂ ಈ ಪುಸ್ತಕಕ್ಕೆ ಇದೆ. ಅದನ್ನು ಯಾರೂ ಬೇಕಾದರೂ ಮಾಡಬಹುದು. ಸಂವಾದಗಳೇ ಪ್ರಜಾಪ್ರಭುತ್ವದ ಶಕ್ತಿ. ಪುಸ್ತಕ ಎಲ್ಲರ ಮನೆ ತಲುಪಲಿ. ಎಲ್ಲ ದಿಕ್ಕುಗಳಿಂದಲೂ ಈ ಪುಸ್ತಕಕ್ಕೆ ಪ್ರಶ್ನೆಗಳು, ಉತ್ತರಗಳು ಬಂದ್ದಲ್ಲಿ ನಾಡುಕಟ್ಟುವ ಪ್ರಕ್ರಿಯೆಗೆ ಒಂದಿಷ್ಟು ಶಕ್ತಿ ತುಂಬಿದಂತಾಗುತ್ತದೆ.
ಬಹುರೂಪಿಯ ಆನ್ ಲೈನ್ ಜಾಲತಾಣದ ಮೂಲಕವು ಪುಸ್ತಕವನ್ನು ತರಿಸಿಕೊಳ್ಳಬಹುದಾಗಿದೆ. ಪುಸ್ತಕದ ಬೆಲೆ ರೂ.300.