ತುರುವೇಕೆರೆ: ಮಕ್ಕಳ ಭವಿಷ್ಯ ನಾಲ್ಕು ತರಗತಿ ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತಿದ್ದು ಶಿಕ್ಷಕರ ಪಾತ್ರ ಶ್ಲಾಘನೀಯವಾದದು ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಪ್ರಿಯಾ ಪ್ರೌಢ ಶಾಲೆಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚು ಒತ್ತಡವನ್ನು ಹೇರದೆ ಮಕ್ಕಳ ಆಸಕ್ತಿ ಮತ್ತು ಅವರ ಸಾಮರ್ಥಯ್ಯವನ್ನು ಆಧರಿಸಿದ ಶಿಕ್ಷಣ ಕೊಡಿಸುವುದು ಸೂಕ್ತ. ಬಹಳ ಮುಖ್ಯವಾಗಿ ಶಿಕ್ಷಣದ ಜೊತೆಗೆ ಕೌಟುಂಬಿಕ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳಂತ ಸಂಸ್ಕಾರಗಳನ್ನು ಕಲಿಸುವುದು ಪೋಷಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ.

ಶಿಕ್ಷಕರು ಮಕ್ಕಳಿಗೆ ಪಠ್ಯ ವಿಷಯದ ಜೊತೆಗೆ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆಗಳಂತಹ ಪಠ್ಯೇತರ ಚಟುವಟಿಕೆಗಳ ಕಲಿಕೆಗಳ ಬಗ್ಗೆಯೂ ಮಕ್ಕಳಲ್ಲಿ ಅಭಿರುಚಿ ಬೆಳೆಸಿದಾಗ ಅವರಲ್ಲಿ ಸಮಗ್ರ ಕಲಿಕೆಯಾಗುತ್ತದೆ. ಇದುವೇ ಶಿಕ್ಷಣದ ಮೂಲಭೂತ ಆಶಯವೂ ಕೂಡ ಆಗಿದೆ. ನಾವು ಕಲಿತ ವಿದ್ಯೆ ನಮ್ಮ ಹೊಟ್ಟೆಯನ್ನಷ್ಟೇ ತುಂಬಿಸಿದರೆ ಸಾಲದು ಅಸಹಾಯಕರ, ನೊಂದವರ, ಬಡವರ ಕಷ್ಟಕ್ಕೂ ಮಿಡಿಯುವ ಹೃದಯವನ್ನು ಬೆಳೆಸಿಕೊಳ್ಳಿ ಆಗ ಮಾತ್ರ ತಾವು ಕಲಿತ ವಿದ್ಯೆಗೆ ಸಾರ್ಥಕತೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದೇ ವೇಳೆ ಸಾಧಕರಾದ ಬೆಂಗಳೂರಿನ ಇಂಡಿಯಾ ನಾಲೆಡ್ಜ್ ಡೆವಲೆಫ್ ಮೆಂಟ್ ಟ್ರಸ್ಟ್ ನ ಛೇರ್ಮನ್ ಡಾ.ತಲಕಾಡು ಚಿಕ್ಕರಂಗೇಗೌಡ ಹಾಗು ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಉತ್ತಮ ಶಿಕ್ಷಕರನ್ನು ಅಭಿನಂಧಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರಾದ ಎಂ.ಎನ್.ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿ ಬಿ.ಎನ್.ಪುಷ್ಪಲತಾ, ಸಹಕಾರ್ಯದರ್ಶಿ ಚೇತನ್ ಸಿ.ಗೌಡ, ಮಿಮಿಕ್ರೀಂ ನಟ ತುರುವೇಕೆರೆ ಸಾಗರ್, ಕಲಾವಿದ ರಾಘವೇದ್ರ, ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.