Monday, December 2, 2024
Google search engine
Home Blog Page 4

ಭರವಸೆಯ ಕ್ರೀಡಾಪಟು ; ಪ್ರಜ್ವಲ್ ಹೆಚ್

0

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಬೆಳಗುಲಿಯ ರಂಗನಾಥ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಜ್ವಲ್ ಎಚ್ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆತ ಮತ್ತು ಚಕ್ರ ಎಸೆತದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಈ ವಿದ್ಯಾರ್ಥಿಗೆ ಶಾಲೆಯ ಸಹಪಾಠಿಗಳು, ಶಾಲೆಯ ಶಿಕ್ಷಕ ವೃಂದ ಹಾಗೂ ಬೆಳಗುಲಿ ಗ್ರಾಮಸ್ಥರು ಅಭಿನಂದಿಸಿದರು.

_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ರಾಸುಗಳ ಆಧುನಿಕ ಲಾಲನೆ-ಪಾಲನೆಯಿಂದ ಲಾಭದಾಯಕ ಹೈನುಗಾರಿಕೆ ;             ಡಾ. ರೆ ಮಾ ನಾಗಭೂಷಣ್

0

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕುಪ್ಪೂರು, ಮಲ್ಲೇನಹಳ್ಳಿ, ಬೇವಿನಹಳ್ಳಿ ಹಾಗೂ ಬೇವಿನಹಳ್ಳಿ-ಗೊಲ್ಲರಹಟ್ಟಿ ಗ್ರಾಮಗಳಲ್ಲಿ ‘ಕರುಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕರುಣಾ’ ಅಭಿಯಾನವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೂ ಮೊದಲೇ ಈಯೆಲ್ಲ ಗ್ರಾಮಗಳಲ್ಲಿ ಇಲಾಖೆಯ ಕರುಣಾ- ಅಭಿಯಾನದ ಬಗ್ಗೆ ವ್ಯಾಪಕವಾದ ಪ್ರಚಾರ ನಡೆಸಲಾಗಿತ್ತು. ಇದರಿಂದ, ಸಮಯಕ್ಕೆ ಸರಿಯಾಗಿ ನೂರಾರು ಮಂದಿ ಪಶುಪಾಲಕ-ರೈತರು ತಮ್ಮ ರಾಸುಗಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು.

ಕರುಣಾ ಅಭಿಯಾನದ ಅಂಗವಾಗಿ ಈಯೆಲ್ಲ ಗ್ರಾಮಗಳ 75 ಕರುಗಳಿಗೆ ಸಮಗ್ರ ಚಿಕಿತ್ಸೆಯನ್ನು ನೀಡಲಾಯಿತು. ಎಲ್ಲ ಜಾತಿ-ಪ್ರಬೇಧದ ಕರುಗಳ ಸಮಗ್ರವಾದ ಪರೀಕ್ಷೆ ನಡೆಸಿ, ಅಗತ್ಯ ಚಿಕಿತ್ಸೆ ನೀಡಲಾಯಿತು. ಕರುಗಳಿಗೆ ಜಂತುನಾಶಕ ಔಷಧಿಗಳನ್ನು ಕುಡಿಸಿ, ಅವುಗಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾದ ಚುಚ್ಚುಮದ್ದುಗಳನ್ನು ನೀಡಿ, ರೋಗನಿರೋಧಕ ಲಸಿಕೆಗಳನ್ನೂ ನೀಡಲಾಯಿತು. ಅವುಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ಮಾತ್ರೆ ಮತ್ತು ಟಾನಿಕ್ಕುಗಳನ್ನು ಪಾಲಕರಿಗೆ ವಿತರಿಸಿ, ಅವನ್ನು ಕರುಗಳಿಗೆ ನೀಡಬೇಕಾದ ವಿಧಾನಗಳನ್ನು ತಿಳಿಸಿಕೊಡಲಾಯಿತು.

ಈ ಸಂದರ್ಭದಲ್ಲಿ, ಪಶು ಸಹಾಯಕ ನಿರ್ದೇಶಕ ಡಾ. ರೆ ಮಾ ನಾಗಭೂಷಣ್, ಆಧುನಿಕ ಮತ್ತು ಲಾಭದಾಯಕ ವಿಧಾನಗಳ ಮೂಲಕ ಕರುಸಾಕಣೆ ಮತ್ತು ಪಶುಪಾಲನೆಗೆ ಕೈಗೊಳ್ಳಬೇಕಾದ ಅಗತ್ಯಗಳ ಕುರಿತಾಗಿ ಮಾಹಿತಿ ನೀಡಿ, ರೈತರೊಂದಿಗೆ ಮಾತುಕತೆ ನಡೆಸಿದರು. ಕರುಗಳ ಲಾಲನೆ-ಪಾಲನೆ , ಒಂದು ವರ್ಷದೊಳಗೆ ಕರು ಬೆದೆಗೆ ಬರುವಂತೆ ಮಾಡಲು ಅನುಸರಿಸಬೇಕಾದ ಅಂಶಗಳು, ಕೃತಕ ಗರ್ಭಧಾರಣೆಯ ಸಾಧಕ-ಬಾಧಕಗಳು, ಗರ್ಭ ಧರಿಸಿದ ರಾಸುಗಳ ಪಾಲನೆ-ಪೋಷಣೆ, ಒಣಮೇವು ಪೌಷ್ಠೀಕರಣ, ರಸಮೇವು ತಯಾರಿಕೆ, ಮೇವಿನ ಬೆಳೆಗಳ ಪ್ರಾಮುಖ್ಯತೆ, ಲಸಿಕೆಗಳ ಮಹತ್ವ, ಆಧುನಿಕ ಮತ್ತು ಲಾಭದಾಯಕ ಹೈನುಗಾರಿಕೆಯ ಪ್ರಮುಖ ತತ್ವಗಳು, ರೋಗಗಳ ನಿಯಂತ್ರಣ, ಕಂದು ರೋಗದ ಲಸಿಕೆ, ಚರ್ಮ ಗಂಟಿಕ್ಕುವ ರೋಗದ ಲಸಿಕೆ, ಕಾಲುಬಾಯಿ ಜ್ವರದ ಲಸಿಕೆಗಳನ್ನು ಸಕಾಲದಲ್ಲಿ ರಾಸುಗಳಿಗೆ ಹಾಕಿಸುವುದರ ಮಹತ್ವಗಳ ಬಗ್ಗೆ ರೈತರಿಗೆ ಅವರು ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಕುಪ್ಪೂರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶು ಪರೀಕ್ಷಕರಾದ ಬಸವರಾಜು, ಕಿರಿಯ ಪಶು ಪರೀಕ್ಷಕ ಮನೋಜ್, ಸಹಸಿಬ್ಬಂದಿ ಅತಾಉಲ್ಲಾ, ದಯಾನಂದ್ ಮತ್ತು ಕುಪ್ಪೂರು ಗ್ರಾಮ ಪಂಚಾಯತಿಯ ಪಶು ಸಖಿ ಆಶಾ ಹಾಜರಿದ್ದರು.

___ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಕುಲಾಂತರಿ ತಳಿ: ತಿಪಟೂರಿನಲ್ಲಿ ಬಿಸಿಬಿಸಿ ಚರ್ಚೆ

0

ತಿಪಟೂರು:  ಬೇಸಾಯ ಕ್ಷೇತ್ರಕ್ಕೆ ಕೇವಲ ಹುಸಿ ಭರವಸೆಯನ್ನು ಅಷ್ಟೇ ಕೊಡುತ್ತಿರುವುದು. ಇಡೀ ಕೃಷಿ ವ್ಯವಸ್ಥೆಯನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಸಂಚನ್ನು ಈ ತಂತ್ರಜ್ಞಾನ ಮತ್ತು ಅದನ್ನು ಹೊಂದಿರುವವರ ಉದ್ದೇಶ ಎಂದು ರಮೇಶ್ ದೇವನಹಳ್ಳಿ ತಿಳಿಸಿದರು.


ತಿಪಟೂರಿನ ರೋಟರಿ ಭವನದಲ್ಲಿ ಸೆಪ್ಟಂಬರ್ ೨೧ರಂದು ಕುಲಾಂತರಿ ಬೆಳೆಗಳು ಮತ್ತು ಆಹಾರ ಕುರಿತು ನಡೆದ ಒಂದು ದಿನದ ಸಮಾಲೋಚನೆಯು ವಿವಿಧ ಸಂಗತಿಗಳ ಕುರಿತು ಚರ್ಚೆ ನಡೆಸಿದ್ದು ,ನಮ್ಮ ಆಹಾರ ಹಾಗೂ ಕೃಷಿ ವ್ಯವಸ್ಥೆಯಲ್ಲಿ ಜೀನ್ ವರ್ಗಾವಣೆ ತಂತ್ರಜ್ಞಾನ ಪರಿಣಾಮದ ಮುನ್ನೆಚ್ಚರಿಕೆ ನೀಡುವ ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ನ್ಯಾಯಪೀಠದ ತೀರ್ಪು ಹಾಗೂ ಆದೇಶಗಳನ್ನು ನಾವು ಗಮನಕ್ಕೆ ತೆಗೆದುಕೊಂಡಿದ್ದೇವೆ ಎಂದರು.


ನಾವು, ತುಮುಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ರೈತ ಹಕ್ಕುಗಳ ಕಾರ್ಯಕರ್ತರು, ವಿವಿಧ ರೀತಿಯ ಬೇಸಾಯ ಪದ್ದತಿ ಮತ್ತು ಅಭ್ಯಾಸಗಳನ್ನು ಅನುಸರಿಸುತ್ತಿರುವ ರೈತರನ್ನು ಪ್ರತಿನಿಧಿಸುತ್ತಿದ್ದೆವೆ. ಕೃಷಿ ಕಾರ್ಮಿಕರು, ಜಾನುವಾರು ಪಾಲಕರು, ಹಿಡುವಳಿದಾರರು, ಮೀನು ಸಾಕಣಿಕೆದಾರರು, ಮಹಿಳಾ ರೈತರು, ಆಹಾರ ಉತ್ಪಾದಕರು, ಗ್ರಾಹಕರು, ಗಿಡಮೂಲಿಕೆ ಪಂಡಿತರು ಮತ್ತು ಜೇನುಸಾಕಣೆದಾರರನ್ನು ನಾವು ಭೇಟಿಯಾಗಿದ್ದೇವೆ ಎಂದರು.


ಕುಲಾಂತರಿ ಬೆಳೆಗಳ ಕುರಿತು ರಾಷ್ಟ್ರೀಯ ನೀತಿಯನ್ನು ರೂಪಿಸಲು ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನ್ಯಾಯಾಲಯವು ಸೂಚಿಸಿದೆ. ರೈತ ಪ್ರತಿನಿಧಿಗಳೂ ಒಳಗೊಂಡಂತೆ ವಿವಿಧ ಭಾಗೀದಾರರನ್ನು ಆಹ್ವಾನಿಸಿ, ನಾರ್ವಜನಿಕ ಸಮಾಲೋಚನೆಯನ್ನು ನಾಲ್ಕು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಅದೇಶ ನೀಡಿದೆ ಎಂದರು.

ನ್ಯಾಯಾಲಯದ ಆದೇಶವನ್ನು ನಾವು ಜಾಗರೂಕತೆಯಿಂದ ಸ್ವಾಗತಿಸುತ್ತೇವೆ.
ಲಂಗುಲಗಾಮು ಇಲ್ಲದೇ ರೂಪಿಸಲಾದ ಹಾಗೂ ಅನಿಯಂತ್ರಿತ ‘ಜೀನ್ ಎಡಿಟಿಂಗ್’ ತಂತ್ರಗಳ ಮೂಲಕ ಜಾರಿಗೆ ತಂದAತಹಕುಲಾಂತರಿ ತಂತ್ರಜ್ಞಾನವು ಭಾರತದಲ್ಲಿ ಇಗಾಗಲೇ ಅಡ್ಡ ಪರಿಣಾಮಗಳನ್ನು ಉಂಟು ಮಾಡಿವೆ ಎಂದು ವೈಜ್ಞಾನಿಕ ಸಂಶೋಧನಾ ಅಧ್ಯಯನ ಪ್ರಬಂಧಗಳು ತೋರಿಸಿವೆ.

ಭಾರತದಲ್ಲಿ ಸರ್ಕಾರಿ ಸಂಶೋಧನಾ ಸಂಸ್ಥೆಗಳು ಹಾಗೂ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಕುಲಾಂತರಿ ತಳಿಗಳು ಸುರಕ್ಷಿತವೆಂದು ಹೇಳಲಿಕ್ಕೆ ಯಾವುದೇ ಗ್ಯಾರಂಟಿಯತು ಇಲ್ಲವೇ ಇಲ್ಲ.
ಒಂದು ವೇಳೆ ಬೃಹತ ಕಾರ್ಪರೇಟ್ ಕಂಪನಿಗಳ ಏಕಸ್ವಾಮ್ಯದಲ್ಲಿರುವ ಭೌತಿಕ ಹಕ್ಕು (ಐಪಿಆರ್)-ಆಧಾರಿತ ಕುಲಾಂತರಿ ಬೆಳೆ ತಂತ್ರಜ್ಞಾನಗಳನ್ನು ಅವಲಂಬಿಸಿದರೆ, ವಿಶಾಲವಾದ ಕೃಷಿ ವ್ಯವಹಾರ ಮೌಲ್ಯಗಳ ಬದಲಾಗಿ ಕಾರ್ಪೊರೇಟ್ ವ್ಯಕ್ತಿಗಳ ಪರವಾಗಿರುವ ಸಂಕೀರ್ಣ ಕಾನೂನುಗಳಿಗೆ ಭಾರತದ ರೈತರು ಬಲವಂತವಾಗಿ ಒಡ್ಡಿಕೊಳ್ಳಬೇಕಾಗುತ್ತದೆ ಎಂಬ ಸಂಶಯ ಉಂಟಾಗುತ್ತಿದೆ. ೮. ಭಾರತದಲ್ಲಿ ಬಿಟಿ ಹತ್ತಿ ಬೆಳೆಯ ವೈಫಲ್ಯದ ಕಥೆಯು ಈ ವಿನಾಶಕಾರಿ ತಂತ್ರಜ್ಞಾನದ ಒಂದು ಶ್ರೇಷ್ಟ ನಿರ್ದೆಶನವಾಗಿದೆ ದೇಶದಲ್ಲಿ ಆಗುತ್ತಿರುವ ರೈತರ ಆತ್ಮಹತ್ಯೆಗಳಲ್ಲಿ ಹೆಚ್ಚಿನದಾಗಿ ಬಿ.ಟಿ ಹತ್ತಿ ಬೆಳೆಯುವ ರೈತರುಗಳಾಗಿದ್ದು ಎಂದು ಕೂಡಾ ಭಾರತ ಸರ್ಕಾರವು ಸ್ವತಃ ನ್ಯಾಯಾಲದಲ್ಲಿ ಅಫಿಡವಿಟ್ ನಲ್ಲಿ ತಿಳಿಸಿರುವುದು ಈ ಕುಲಾಂತರಿ ಬೆಳೆಯ ಅವಾಂತರಗಳನ್ನು ತಿಳಿಸುತ್ತದೆ.


ಅಚ್ಚರಿಯ ವಿಷಯವೆಂದರೆ, ಭಾರತ ಒಕ್ಕೂಟ ಸರ್ಕಾರವು ಒಂದೆಡೆ ನೈಸರ್ಗಿಕ ಅಥವಾ ಸಾವಯವ ಕೃಷಿಯನ್ನು ಉತ್ತೇಜಿಸುವ ಬಗ್ಗೆ ಘಂಟಾಘೋಷದಿಂದ ಮಾತಾಡುತ್ತಿದ್ದರೆ, ಇನ್ನೊಂದೆಡೆ ಕುಲಾಂತರಿ ತಳಿಗಳ ಬಗ್ಗೆ ಕದ್ದು ಮುಚ್ಚಿ ಒಲವು ತೋರುತ್ತಿದೆ. ಇದು ನೀತಿ ನಿರೂಪಣೆಯಲ್ಲಿನ ವೈರುಧ್ಯ!
ಕರ್ನಾಟಕ ರಾಜ್ಯ ರೈತ ಸಂಘದ ಅದ್ಯಕ್ಷ ಮಂಡಳಿಯ ಸದಸ್ಯರಾದ ಕೆ.ಟಿ ಗಂಗಾಧರ್ ಮಾತನಾಡಿ ನಾವು ಧೃಡ ನಿಶ್ಚಯದಿಂದ ತಿಳಿಸುವುದೇನೆಂದರೆ ಸದರಿ ರಾಷ್ಟ್ರೀಯ ನೀತಿ-ಕಾನೂನು ರೂಪಿಸುವ ಮೊದಲು ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ದೇಶದಲ್ಲಿ ವ್ಯಾಪಕವಾದ ಮತ್ತು ನಂಬಿಕಾರ್ಹ ವಿಧಾನದ ಮೂಲಕ ಪ್ರಜಾತಾಂತ್ರಿಕವಾದ ಸಮಾಲೋಚನೆ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ;ಈ ಸಮಾಲೋಚನೆಗಳಲ್ಲಿ ರಾಜ್ಯ ಸರ್ಕಾರಗಳು ಯಾವುದೇ ರೀತಿಯ ಒತ್ತಡಕ್ಕೆ ಮಣಿದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ;


ಭಾರತ ಸರಕಾರವು ಇಗಾಗಲೇ ದೇಶದ ರೈತರ ಮೇಲೆ ಹೇರಿರುವ ತೀವ್ರ ಕೃಷಿ/ಕೈಗಾರಿಕೆ ಕೃಷಿ ಮಾದರಿಯ ನಕಾರತ್ಮಕ ಪರಿಣಾಮಗಳು ಮತ್ತು ಅದರ ಬಿಕ್ಕಟ್ಟುಗಳ ಬಗ್ಗೆ ಮೊದಲು ಪರಿಹರಿಸುವಂತೆ ಮಾಡುತ್ತೇವೆ.ಸ್ವಾಯತ್ತ ಕೃಷಿ-ಜೀವಾವರಣದ ಅರಿವಿನ ಮೂಲಕ ಹೊಸ ಮಾರ್ಗವನ್ನು ರೂಪಿಸುತ್ತೇವೆ, ನಮ್ಮ ಕೃಷಿ ಕಸುಬಿಗೆ ಹೆಚ್ಚಿನ ಅಪಾಯಕಾರಿ ತಂತ್ರಜ್ಞಾನಗಳನ್ನು ಸೇರಿಸದಂತೆ ನೋಡಿಕೊಳ್ಳುತ್ತೇವೆ. ಹಾಗೂ ದೇಶಿ ಬೀಜಗಳು ಮತ್ತು ಅನುವಂಶಿಕ ತತ್ವಾಂಶಗಳ ಮೇಲೆ ಕಾರ್ಪೊರೇಟ್ ನಿಯಂತ್ರಣವು ಬೌದ್ಧಿಕ ಸೊತ್ತಿನ ಹಕ್ಕುಗಳ ಮೂಲಕ ನೆಡೆಯದಂತೆ ನೋಡಿಕೊಳ್ಳುತ್ತೇವೆ.


ಇದೇ ಸಂದರ್ಭದಲ್ಲಿ ಕ.ರಾ.ರೈ.ಸ, ಹಸಿರು ಸೇನೆ, ಸಾವಯವ ಕೃಷಿ ಪರಿಹಾರ, ಜೇನುಸಾಕಣಿಕೆದಾರ ಸಂಘ, ಸೌಹಾರ್ದ ತಿಪಟೂರು, ಕನ್ನಡ ರಕ್ಷಣಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಗ್ರಾಹಕ ಹಕ್ಕುಗಳ ಸಮಿತಿ, ನಿವೃತ್ತ ನೌಕರರ ಸಂಘ ಮತ್ತಿತರ ರಾಜ್ಯ ಮತ್ತು ತಾಲೂಕಿನ ಸಂಘಟನೆಯ ಸದಸ್ಯರುಗಳು ಭಾಗವಹಿಸಿದ್ದರು.

ಪವತಿ ಖಾತೆ ಆಂದೋಲನ

0

ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಇದೇ 21.09.2024 ರಿಂದ 20.10.2024 ವರೆಗೆ ಪವತಿ ಖಾತೆ ಆಂದೋಲನ ನಡೆಯುತ್ತಿದೆ. ಜಿಲ್ಲಾಧಿಕಾರಿಗಳ ಆದೇಶಪತ್ರದ ಉಲೇಖ ರೀತ್ಯಾ ತಾಲ್ಲೂಕು ಆಡಳಿತ ಈ ಪವತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ.

ತಾಲ್ಲೂಕಿನ ಎಲ್ಲ ಗ್ರಾಮಗಳ ರೈತರು, ಅಗತ್ಯ ದಾಖಲೆಗಳೊಂದಿಗೆ ತಮ್ಮ ವೃತ್ತ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ, ಈ ಪವತಿ ಖಾತೆ ಆಂದೋಲನದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಹಸೀಲ್ದಾರ್’ರವರ ಕಾರ್ಯಾಲಯ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.

ಜಾಮಿಯಾ ಆರೋಗ್ಯ ತಪಾಸಣಾ ಶಿಬಿರ

0

ಚಿಕ್ಕನಾಯಕನಹಳ್ಳಿ : ಪಟ್ಟಣದ ಜಾಮಿಯಾ ಮಸ್ಜಿದ್ ಕಮಿಟಿ ವತಿಯಿಂದ ನವಾಜ಼್ ಆಪ್ಟಿಕಲ್ಸ್ ಹಾಗೂ ಸಾಯಿಗಂಗಾ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಬೆಳಗ್ಗೆ 10.30’ರಿಂದ ಸಂಜೆ 5.00 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.

ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಎದುರಿನ ಜಾಮಿಯಾ ಮಸೀದೆಯಲ್ಲಿ ನಡೆದ ಉಚಿತ ತಪಾಸಣಾ ಶಿಬಿರದಲ್ಲಿ, ನೇತ್ರ ತಪಾಸಣೆ ಹಾಗೂ ರಕ್ತದೊತ್ತಡ ಮತ್ತು ಸಕ್ಕರೆ ಸಂಬಂಧಿತ ರೋಗಿಗಳಿಗೆ ಉಚಿತ ತಪಾಸಣೆ ನಡೆಸಿದ ನುರಿತ ವೈದ್ಯರು, ರೋಗಿಗಳ ಜೊತೆ ಸಂವಾದ ನಡೆಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಪಟ್ಟಣ ಮತ್ತು ಸುತ್ತಮುತ್ತಲಿನ ಸುಮಾರು ಐನೂರಕ್ಕೂ ಹೆಚ್ಚು ಮಂದಿ ಜಾಮಿಯಾ ಮಸೀದೆಯ ಈ ಉಚಿತ ತಪಾಸಣಾ ಶಿಬಿರಕ್ಕೆ ಭೇಟಿಕೊಟ್ಟು ಸೂಕ್ತ ಪರಿಹಾರೋಪಾಯಗಳನ್ನು ಪಡೆದುಕೊಂಡರು.

ನೇತ್ರ ತಜ್ಞ ಡಾ.ನವಾಜ಼್ ಖಾನ್, ಸಾಯಿಗಂಗಾ ಆಸ್ಪತ್ರೆ ಆಡಳಿತಾಧಿಕಾರಿ ಶ್ರೀಮತಿ ರಾಧಾ, ಅಲ್ಪಸಂಖ್ಯಾತ ಮಾಹಿತಿ ಕೇಂದ್ರದ ಇಮ್ರಾನ್, ಚಿಕ್ಕನಾಯಕನಹಳ್ಳಿ ಜಾಮಿಯಾ ಮಸ್ಜಿದ್ ಕಮಿಟಿಯ ಮಹಬೂಬ್ ಆಲಂ, ತನ್ವೀರ್ ಅಹ್ಮದ್, ನಾಸಿರ್ ಪಾಷಾ, ಜಲೀಲ್, ಫಯಾಜ಼್, ಸ್ಟೇಷನರಿ ಬಾಬು, ರಫಿ ಆಲಂ ಸೇರಿದಂತೆ ಹಲವು ಸದಸ್ಯರು ಹಾಗೂ ಸಾಯಿಗಂಗಾ ಆಸ್ಪತ್ರೆಯ ವೈದ್ಯರು ಮತ್ತು ತುರುವೇಕೆರೆಯ ನವಾಜ಼್ ಆಪ್ಟಿಕಲ್ಸ್’ನ ನೇತ್ರ ತಜ್ಞರು ಉಪಸ್ಥಿತರಿದ್ದರು.

ರಂಗನಹಟ್ಟಿ ಗಣಪತಿ ವಿಸರ್ಜನೆ ವೇಳೆ ದುರ್ಘಟನೆ, ಮೃತರ ಕುಟುಂಬಕ್ಕೆ ಮುರಳೀಧರ ಹಾಲಪ್ಪ ನೆರವು

0

ತುರುವೇಕೆರೆ: ಗಣೇಶ ವಿಸರ್ಜನೆ ವೇಳೆ ಇಂತಹ ದುರ್ಘಟನೆಗಳು ನಡೆಯದಂತೆ ಗ್ರಾಮೀಣ ಭಾಗದಲ್ಲಿನ ಜನರು ಬಹಳ ಎಚ್ಚರಿಕೆ ವಹಿಸಬೇಕು ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮನವಿ ಮಾಡಿದರು.
ತಾಲ್ಲೂಕಿನ ಮಾರಸಂದ್ರ ರಂಗನಹಟ್ಟಿ ಗ್ರಾಮದಲ್ಲಿ ಈಚೆಗೆ ಗಣೇಶ ವಿಸರ್ಜನೆಗೆ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಮನೆಗೆ ದಾಬಸ್ ಪೇಟೆ ಒಳಕಲ್ ಮಠದ ಬಸವರಮಾನಂದ ಸ್ವಾಮೀಜಿ ಜೊತೆ ಬೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಂತಾನ್ವ, ಧೈರ್ಯ ತುಂಬಿ ಮಾತನಾಡಿದ ಅವರು
ಜಿಲ್ಲಾ ಹಾಗು ತಾಲ್ಲೂಕು ಆಡಳಿತ ಬಹಳ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದರೂ ಸಹ. ಗ್ರಾಮೀಣ ಪ್ರದೇಶದಲ್ಲಿ ಅರಿವಿನ ಕೊರತೆ ಕಾಣುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಕಾರ್ಯ ಕ್ರಮ ಸ್ಥಳೀಯ ಮಟ್ಟದ ಅಧಿಕಾರಿಗಳು ಮಾಡಬೇಕು ಎಂದರು.
ಮೃತರ ಎರಡು ಕುಟುಂಬದ ಸದಸ್ಯರ ಜೊತೆ ಮಾತನಾಡಿದ್ದು ಜಿಲ್ಲಾ ಸಚಿವರ ಆದೇಶದಂತೆ ಸರ್ಕಾರದಿಂದ ಸಿಗುವ ಸವಲತ್ತು ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಾಗುವುದು. ಮೃತ ರೇವಣ್ಣನ ಇನ್ನೊಬ್ಬ ಮಗ ಐಟಿಐ ಮಾಡಿದ್ದು ಕೌಶಲ್ಯ ಅಭಿವೃದ್ಧಿ ಯಲ್ಲಿ ತರಬೇತಿ ನೀಡಿ ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದು ಮತ್ತು ದಯಾನಂದ್ ಪತ್ನಿಗೆ ಪದವೀಧರೆಯಾಗಿದ್ದು ಸರ್ಕಾರದಿಂದ ಸಿಗುವಂತಹ ಉದ್ಯೋಗ ದೊರಕಿಸಿಕೊಡುವ ಬಗ್ಗೆ ಭರವಸೆ ನೀಡಿದರು.
ದಾಬಸ್ ಪೇಟೆ ಒಳಕಲ್ ಮಠದ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಈ ದುರ್ಘಟನೆ ಅತ್ಯಂತ ನೋವಿನ ಸಂಗತಿ. ಎರಡು ಕುಟುಂಬಕ್ಕೆ ಸಂತಾನ್ವ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದ್ದು. ಕಾಂಗ್ರೆಸ್ ಮುಖಂಡ ಮುರಳಿಧರಹಾಲಪ್ಪ ಜಿಲ್ಲಾ ಸಚಿವರ ಮಾರ್ಗದರ್ಶನದಂತೆ ಸರ್ಕಾರದಿಂದ ಸಿಗುವಂತಹ ಪರಿಹಾರ ಕೊಡಿಸಲು ಗ್ರಾಮಕ್ಕೆ ಆಗಮಿಸಿ ನೊಂದ ಕುಟುಂಬಕ್ಕೆ ಸಿಗುವ ಸವಲತ್ತು ಪರಿಹಾರ ಕೊಡಿಸಲು ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎರಡೂ ಕುಟುಂಬಕ್ಕೆ ಧನ ಸಹಾಯ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಗ್ರಾಮ ಪಂಚಾಯತಿ ಸದಸ್ಯ ಯೋಗೀಶ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರಾದ ತ್ರೈಲೋಕಿನಾಥ್, ಜಯಣ್ಣ, ಮಂಜುನಾಥ್ ಹಲವು ಮುಖಡರು ಇದ್ದರು.

ಮಿಂಚಿದ ಪ್ರೌಢಶಾಲಾ ಕ್ರೀಡಾಕೂಟ

0

ತಾಲ್ಲೂಕು ಕ್ರೀಡಾಂಗಣದ ಕೇರ್ ಟೇಕರ್ ಹಾಗೂ ಮಾರ್ಕರ್‌ ರಮೇಶ್‘ರವರನ್ನು ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ,
ಪುರ-ಪ್ರಥಮ ಸಿ ಹೆಚ್ ದಯಾನಂದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ
ಆರ್ ಪರಶಿವಮೂರ್ತಿ ಮತ್ತು ಜನಪ್ರಿಯ ಕ್ಷೇತ್ರ-ಶಿಕ್ಷಣಾಧಿಕಾರಿ
ಸಿ ಎಸ್ ಕಾಂತರಾಜು ಹಾಗೂ ದೈಹಿಕ ಶಿಕ್ಷಕ-ಶಿಕ್ಷಕಿಯರ ವೃಂದದ ವತಿಯಿಂದ ಸನ್ಮಾನಿಸಿದ ಸಂದರ್ಭ.

ಚಿಕ್ಕನಾಯಕನಹಳ್ಳಿ : ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಪುರಸಭಾ ಅಧ್ಯಕ್ಷ ಸಿ ಹೆಚ್ ದಯಾನಂದ್ ಉದ್ಘಾಟಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ದೈಹಿಕ ಶಿಕ್ಷಕರ ಸಂಘದ ಸಹಭಾಗಿತ್ವದೊಂದಿಗೆ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟವನ್ನು ಮಂಗಳವಾರ ಮತ್ತು ಬುಧವಾರದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್ ಕಾಂತರಾಜು, ವಿದ್ಯಾಭ್ಯಾಸದ ಜೊತೆ ಸಾಂಸ್ಕೃತಿಕ ಕಲಾ ಪ್ರಕಾರಗಳ ಅಭ್ಯಾಸ ಮತ್ತು ಕ್ರೀಡಾಸ್ಪರ್ಧೆಯ ಅಭ್ಯಾಸವೂ ಬಹಳ ಮುಖ್ಯವಾದುದು. ಉತ್ತಮವಾದ ಓದು ಮತ್ತು ಶಾಲಾ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತರುತ್ತಿರುವ ಸಾಕಷ್ಟು ಮಕ್ಕಳು ಕ್ರೀಡೆಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ಗಮನಕ್ಕೆ ಬಂದಿದೆ.

ಹಾಗಾಗಿ, ಅಂತಹ ಎಲ್ಲ ಮಕ್ಕಳ ಅನುಕೂಲಕ್ಕಾಗಿ ಈ ಬಾರಿಯ ಹೋಬಳಿ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಇಲಾಖೆ ಬೇಗನೇ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಬರಲಿರುವ ಪರೀಕ್ಷೆಗಳಿಗೆ ಮಕ್ಕಳು ಸಾಕಷ್ಟು ತಯಾರಿ ನಡೆಸಬೇಕಾಗಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಈ ತೀರ್ಮಾನಕ್ಕೆ ತಲುಪಿತ್ತು. ಒಟ್ಟಾರೆಯಾಗಿ ಮಕ್ಕಳ ಬೌದ್ಧಿಕ ವಿಕಾಸ ಹಾಗೂ ಮನೋದೈಹಿಕ ವಿಕಾಸದ ಹಿತದೃಷ್ಟಿಯಿಂದ ಏನೆಲ್ಲ ಮುನ್ನೆಚ್ಚರಿಕೆ ಅಥವಾ ಕಟ್ಟೆಚ್ಚರಿಕೆಗಳನ್ನು ವಹಿಸಬೇಕೋ ಅದನ್ನೆಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವಹಿಸುತ್ತಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಆರ್ ಪರಶಿವಮೂರ್ತಿಯವರು ಮಾತನಾಡಿ, ಶಾಲಾ-ಪ್ರಾರಂಭೋತ್ಸವ ಸಮಯದಿಂದಲೇ, ಶಾಲಾ ಕ್ರೀಡಾಕೂಟ ಹಾಗೂ ಶಾಲಾ ಪರೀಕ್ಷೆಗಳಿಗೆ ತೊಡಕಾಗದಂತೆ ಮಕ್ಕಳ ಎಲ್ಲ ಕಾರ್ಯಕ್ರಮಗಳನ್ನು ಮಯತುವರ್ಜಿ ವಹಿಸಿ ಯೋಜಿಸಲಾಗಿದೆ.

ಈ ಬಗೆಯ ಎಲ್ಲ ವ್ಯವಸ್ಥಿತ ಕಾರ್ಯಕೆಲಸಗಳು ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಸ್ತುವಾರಿಯಲ್ಲಿ ಶಿಸ್ತುಬದ್ಧವಾಗಿ ನಡೆಯುತ್ತಿವೆ. ಅದೇರೀತಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡಾಕೂಟಗಳು ಸಹಕಾರಿ ಎಂದು ಹೇಳಿ, ಹೋಬಳಿ ಮಟ್ಟ ದಾಟಿ ತಾಲ್ಲೂಕು ಮಟ್ಟದವರೆಗೆ ತಲುಪಿರುವ ಎಲ್ಲ ಮಕ್ಕಳಿಗೂ ಶುಭಾಶಯಗಳನ್ನು ಕೋರಿದರು.

ಕ್ರೀಡಾ ಜ್ಯೋತಿಯನ್ನು ಎತ್ತಿಹಿಡಿದು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಹಲವು ಕ್ರೂಡೆಗಳಲ್ಲಿ ಸೆಣಸಾಡಲಿದ್ದ ಮಕ್ಕಳಿಗೆ ಕ್ರೀಡಾ-ಪ್ರತಿಜ್ಞೆಯನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ದೈಹಿಕ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ, ದೈಹಿಕ ಶಿಕ್ಷಕರ ಸಂಘದ ಸುರೇಶ್, ಅಂಜಿನಪ್ಪ, ಗವಿರಂಗಯ್ಯ, ಶಿವಕುಮಾರ್, ಗಂಗಾಧರ್, ಜಗದಾಂಬಾ ಹಾಗೂ ಹತ್ತಾರು ಶಾಲೆಗಳ ನೂರಾರು ಮಕ್ಕಳು, ಶಿಕ್ಷಕ-ಶಿಕ್ಷಕಿಯರು ಮತ್ತಿತರರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ನಾಯಕರ ಜಯಂತಿ: ಕೆ ಪುರಂದರ್ ಸಲಹೆ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಕಚೇರಿಯಲ್ಲಿ ವಿಶ್ವಕರ್ಮ ಚಿತ್ರಪಟಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ತಹಸೀಲ್ದಾರ್ ಕೆ ಪುರಂದರ್’ರವರು ವಿಶ್ವಕರ್ಮ ಜಯಂತಿಯನ್ನು ಆಚರಿಸಿದರು.

ತಾಲ್ಲೂಕು ಆಡಳಿತದ ಅಧಿಕಾರಿಗಳು, ವಿಶ್ವಕರ್ಮ ಸಮಾಜದವರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಆಸಕ್ತ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಮಾಜದ ಎಲ್ಲರಿಗೂ ಶುಭಾಶಯಗಳನ್ನು ಕೋರಿ ಮಾತನಾಡಿದ ತಹಸೀಲ್ದಾರ್ ಕೆ ಪುರಂದರ್, ಆಯಾಯಾ ಸಮಾಜದ ಸಾಂಸ್ಕೃತಿಕ ನಾಯಕರುಗಳ ಜಯಂತಿ ಆಚರಣೆಯಲ್ಲಿ ಕೇವಲ ಆಯಾಯಾ ಸಮುದಾಯದವರು ಮಾತ್ರವೇ ಭಾಗವಹಿಸುವುದು ಶೋಭೆಯಲ್ಲ . ಎಲ್ಲ ಸಮಾಜ, ಸಮುದಾಯದ ಜನರೂ ಇಂತಹ ಸಾಂಸ್ಕೃತಿಕ ನಾಯಕರುಗಳ ಜಯಂತಿಗಳಲ್ಲಿ ಭಾಗವಹಿಸುವಂತಾಗಬೇಕು. ಆಗ ಮಾತ್ರ ನಾವು ನಮ್ಮ ರಾಷ್ಟ್ರಕವಿಗಳ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಪರಿಕಲ್ಪನೆಯನ್ನು ಪಾಲಿಸಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಜಾತಿ-ಮತದ ಹಂಗು ತೊರೆದು ಎಲ್ಲ ಸಮಾಜದವರು ಇಂತಹ ಸಾಂಸ್ಕೃತಿಕ ನಾಯಕರ ಜಯಂತಿಗಳಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಬಯಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡ, ದೇವರಾಜು ವಿಶ್ವಕರ್ಮ ಇಡೀ ಜಗತ್ತಿನ ಸೃಷ್ಟಿಕರ್ತ. ವಿಶ್ವಕರ್ಮನಿಗೆ ಐದು ಬಗೆಯ ವಿವಿಧ ವೃತ್ತಿಗಳಲ್ಲಿ ಪಾರಂಗತರಾದ ಐವರು ಮಕ್ಕಳಿದ್ದರು. ಅದರಲ್ಲಿ ಕಬ್ಬಿಣದ ಕುಲುಮೆ ಕೆಲಸ ಬಲ್ಲ ಒಬ್ಬ ಮಗ, ಮರಗೆಲಸ ಅಥವಾ ಬಡಗಿ ಕಸುಬುದಾರಿಕೆ ಬಲ್ಲ ಒಬ್ಬ ಮಗ, ತಾಮ್ರ ಮತ್ತು ಹಿತ್ತಾಳೆ ಕೆಲಸವನ್ನು ಬಲ್ಲ ಒಬ್ಬ ಮಗ, ಚಿನ್ನ-ಬೆಳ್ಳಿ ಕೆಲಸ ಬಲ್ಲಂಥ ಒಬ್ಬ ಮಗ, ಮಣ್ಣಿನ ಕೆಲಸ ಅಥವಾ ಕುಂಬಾರಿಕೆ ಕೆಲಸ ಬಲ್ಲಂಥ ಐದನೆಯ ಮಗನೂ ವಿಶ್ವಕರ್ಮನಿಗಿದ್ದರು.

ಹೀಗೆ, ಒಂದು ಸಮಾಜ ನಿರ್ಮಾಣಕ್ಕೆ ಪೂರಕವಾದ ಕಸುಬುದಾರಿಕೆಗಳನ್ನು ಬಲ್ಲ ಐವರು ಮಕ್ಕಳನ್ನು ಹೊಂದಿದ್ದ ವಿಶ್ವಕರ್ಮ ಇಡೀ ವಿಶ್ವಸಂಸಾರದ ಸೃಷ್ಟಿಕರ್ತ ಎಂದು ನಾವು ಗೌರವದಿಂದ ಕಾಣುತ್ತೇವೆ ಎಂದರು.

ಸಮಾಜದ ಮುಖಂಡ ಹಾಗೂ ನಿವೃತ್ತ ಶಿಕ್ಷಕ ಶ್ರೀಕಂಠಾಚಾರ್ ಮಾತನಾಡಿ, ಈ ಜಗತ್ತು ಪಂಚಭೂತಗಳಿಂದ ಕೂಡಿದೆ. ಅದೇರೀತಿ ಪಂಚ-ಪುತ್ರರತ್ನರನ್ನು ಹೊಂದಿದ್ದ ವಿಶ್ವಕರ್ಮ, ಪಂಚಲೋಹಗಳನ್ನು ಜನಕಲ್ಯಾಣಕ್ಕಾಗಿ ಬಾಗಿಸುವ ಕಸುಬುದಾರಿಕೆಗಳನ್ನು ತನ್ನ ಪುತ್ರರಿಗೆ ದಯಪಾಲಿಸಿ ಹರಸುವುದರ ಮೂಲಕ ವಿಶ್ವಸಂಸಾರದ ಸೃಷ್ಟಿಗೆ ಕಾರಣರಾದರು ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಸದಸ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಸಾಲಭಾದೆ ತಾಳದೆ ವಿಧವೆಮಹಿಳೆ ಆತ್ಮಹತ್ಯೆ

0

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಗ್ರಾಮದ ವಿಧವೆ ಮಂಜುಳಾ ಎಚ್.ಡಿ(50) ಸಾಲಬಾಧೆ ತಾಳಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

ಮೃತ ವಿಧವೆ ಮಂಜುಳಾ ಎಚ್.ಡಿಯವರು ಮಗಳ ಮದುವೆಗೆಂದು ಕಳೆದು ಮೂರು ತಿಂಗಳ ಹಿಂದೆ ವಿವಿಧ ಸ್ವ ಸಹಾಯ ಸಂಘಗಳು ಹಾಗು ಫೈನಾನ್ಸ್ ಗಳಿಂದ ಸುಮಾರು ‌ಮೂರ್ನಾಲ್ಕು ಲಕ್ಷ ರೂಪಾಯಿಗಳನ್ನು ಬಡ್ಡಿಗೆ ಸಾಲವನ್ನು ಪಡೆದು ಇದ್ದ ಒಬ್ಬಳೇ ಮಗಳ ಮದುವೆ ಮಾಡಿದ್ದಳು.

ದಿನ ಕಳೆದಂತೆ ಸಾಲ ಪಡೆದವರು ಬಡ್ಡಿ ಅಥವಾ ಅಸಲು ಕಟ್ಟುವಂತೆ ಪದೇಪದೇ ಪೀಡಿಸುತ್ತಿದ್ದರಿಂದ ಸಾಲ ತೀರಿಸಲು ಆಕೆಯ ಬಳಿ ಯಾವುದೇ ಆದಾಯವಿಲ್ಲದ ಕಾರಣ ಮನನೊಂದು ಮನೆಯ ಜಂತಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿಪಿಐ ಲೋಹಿತ್, ದಂಡಿನಶಿವರ ಪಿಎಸ್ಐ ಚಿತ್ತರಂಜ ಅವರುಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತದ ಭೂಪಟದ ಜತೆ ಮಕ್ಕಳ ಈದ್-ಮಿಲಾದ್

ಚಿತ್ರ ಶೀರ್ಷಿಕೆ: ಇಸ್ಲಾಮಿಕ್ ಪವಿತ್ರ ಇಮಾರತ್ತುಗಳ ಪುಟ್ಟಪುಟ್ಟ ಪ್ರತಿಕೃತಿಗಳನ್ನು ಮಾಡಿಟ್ಟುಕೊಂಡು ಈದ್-ಮಿಲಾದ್ ಆಚರಿಸುತ್ತಿರುವ ಚಿಕ್ಕನಾಯಕನಹಳ್ಳಿ ಪಟ್ಟಣದ ನಾಲಬಂದ್ ವಾಡಿಯ ಮಕ್ಕಳು

(ಸದ್ದಿಲ್ಲದೆ ಎಲ್ಲೆಡೆ ಆಚರಣೆಯಾದ ಈದ್-ಮಿಲಾದ್)

ಚಿಕ್ಕನಾಯಕನಹಳ್ಳಿ : ಪಟ್ಟಣದಲ್ಲಿ ಸೋಮವಾರದಂದು ಮುಸ್ಲಿಮ್ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು. ಗಣೇಶೋತ್ಸವಗಳು ಇರುವುದರಿಂದ ಯಾವುದೇ ಬಗೆಯ ಮೆರವಣಿಗೆ, ಸದ್ದು-ಗದ್ದಲ ಇಲ್ಲದೆ ಶಾಂತಿಯುತವಾಗಿ ‘ಮಿಲಾದ್-ಉನ್-ನಬಿ’ ಆಚರಿಸಲಾಗಿದೆ.

ಗಣೇಶೋತ್ಸವಗಳ ಮೆರವಣಿಗೆ, ಗಣೇಶ ಆರ್ಕೆಸ್ಟ್ರಾ, ಗಣೇಶ ರಸಸಂಜೆ ಇತ್ಯಾದಿ ಎಲ್ಲವೂ ಮುಗಿದ ನಂತರದ ದಿನಗಳಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಅವಕಾಶ ನೀಡುವಂತೆ ಪಟ್ಟಣದ ಮಸೀದಿ ಜಮಾತ್ ಕಮಿಟಿಯವರು ಅರ್ಜಿ ಕೊಟ್ಟಿದ್ದಾರೆ. ಹಾಗಾಗಿ, ನಂತರದ ದಿನಗಳಲ್ಲಿ ಮಿಲಾದ್-ಮೆರವಣಿಗೆಗೆ ಅನುಕೂಲ ಕಲ್ಪಿಸಿರುವುದಾಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಯತೀಶ್ ಹೇಳುತ್ತಾರೆ.

ಸಾಂದರ್ಬಿಕ ಚಿತ್ರ

ಈದ್ ಮಿಲಾದ್ ಸಾಮರಸ್ಯ-ಸೌಹಾರ್ದತೆಯ ಮಹತ್ವದ ಹಬ್ಬವಾಗಿರುವುದರಿಂದ ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ತಾಲ್ಲೂಕಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಡಚಣೆಯಿಲ್ಲದೆ ಎಲ್ಲರ ಹಬ್ಬಗಳು ಆಚರಣೆಗೊಳ್ಳಬೇಕು ಎಂದು ಆರಕ್ಷಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್ ತಿಳಿಸಿದರು.

ಮಿಲಾದ್ ಮಹತ್ವ,

ಈದ್ ಮಿಲಾದ್ ಹಬ್ಬವನ್ನು ಸುನ್ನಿ ಮುಸ್ಲಿಮರು ಇಸ್ಲಾಮ್ ಧಾರ್ಮಿಕ ಪಂಚಾಂಗದ 12 ನೇ ದಿನದಂದು ಆಚರಿಸಿದರೆ, ಶಿಯಾ ಮುಸ್ಲಿಮರು ‘ರಬಿ ಉಲ್ ಅವ್ವಲ್’ನ 17’ನೇ ದಿನದಂದು ಆಚರಿಸಿಕೊಳ್ಳುತ್ತಾರೆ. ಶಾಂತಿ, ನೆಮ್ಮದಿ, ಸೌಹಾರ್ದತೆ, ಸಾಮರಸ್ಯ ಹಾಗೂ ಸಹಬಾಳ್ಮೆಯಂತಹ ಪ್ರವಾದಿಯವರು ನೀಡಿರುವ ವಿಶ್ವ-ಮಾನವೀಯ ಮಹತ್ವದ ಸಂದೇಶಗಳನ್ನು ಪಾಲಿಸುವುದರ ದ್ಯೋತಕವಾಗಿ ಈದ್ ಮಿಲಾದ್’ನ್ನು ಆಚರಿಸಲಾಗುತ್ತದೆ.

ಪ್ರವಾದಿ-ಪೈಗಂಬರ್ ಮೊಹಮ್ಮದರ ಜನ್ಮದಿನವನ್ನು ಈದ್-ಎ-ಮಿಲಾದ್ ಹೆಸರಿನಲ್ಲಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ನಬಿದ್, ಮಿಲಿದ್ ಮತ್ತು ಮಿಲಾದ್-ಅನ್-ನಬಿ ಎಂದೂ ಹೆಸರಿಸಲಾಗಿದೆ. ಒಂದೇ ಅರ್ಥವನ್ನೇ ಕೇಂದ್ರೀಕರಿಸಿ ಎಲ್ಲ ಹೆಸರುಗಳನ್ನು ಸೂಚಿಸಲಾಗಿದೆ. ಮಧ್ಯಪ್ರಾಚ್ಯದ ಅರೇಬಿಕ್ ರಾಷ್ಟ್ರಗಳು ಹಾಗೂ ಹಲವು ಯುರೋಪಿಯನ್ ದೇಶಗಳಲ್ಲಿ ಈ ದಿನ ರಾಷ್ಟ್ರೀಯ ಸಾರ್ವಜನಿಕ ರಜೆ ಆಗಿರುತ್ತದೆ.

ಇಸ್ಲಾಮಿಕ್ ಕ್ಯಾಲೆಂಡರಿನ 3 ನೇ ತಿಂಗಳ 12 ನೇ ತಾರೀಕಿನ ದಿನ ಪ್ರವಾದಿ ಮಹಮದ್ ಪೈಗಂಬರ್ ಜನಿಸಿದರು ಎಂದು ನಂಬಲಾಗಿದೆ. ಈ ನಂಬಿಕೆಯ ಪ್ರಕಾರ ಕ್ರಿಸ್ತಶಕ 517 ರಲ್ಲಿ ಪ್ರವಾದಿ ಮೊಹಮ್ಮದ್ ಜನಿಸಿದರು. ಪ್ರವಾದಿಯವರ ಈ ಜನ್ಮದಿನವನ್ನು ಮೊದಲಿಗೆ ಈಜಿಫ್ತಿನಲ್ಲಿ ಆಚರಿಸಲಾಗಿತ್ತಂತೆ. ನಂತರದ 11 ನೇ ಶತಮಾನದ ಶುರುವಾತಿನಿಂದ ಇದು ವಿಶ್ವದಾದ್ಯಂತ ಹಬ್ಬಿದೆ. ಪ್ರವಾದಿ ಮೊಹಮ್ಮದ್ ಪೈಗಂಬರರು ಸೌದಿ ಅರೇಬಿಯಾದ ಮಕ್ಕಾದಲ್ಲಿ ಜನಿಸಿದ್ದರು. ಕ್ರಿಸ್ತಶಕ 540 ರಲ್ಲಿ ಮಕ್ಕಾದ ಹಿರಾ ಗುಹೆಯಲ್ಲಿ ಅವರು ಜ್ಞಾನೋದಯವನ್ನು ಪಡೆದರು. ನಂತರದ ತಮ್ಮ ಜೀವಿತಾವಧಿಯ ಅಷ್ಟೂ ಕಾಲವನ್ನು ಅವರು ಇಸ್ಲಾಮ್ ಧರ್ಮದ ಸ್ಥಾಪನೆ ಮತ್ತು ಅದರ ವಿಸ್ತರಣೆಗಾಗಿ ಮೀಸಲಿಟ್ಟರು. ಇದರ ಪರಿಣಾಮ ಇಡೀ ಸೌದಿ ಅರೇಬಿಯಾ ದೇವರ ಆರಾಧನೆಗೆಂದೇ ಮೀಸಲಾದ ರಾಜ್ಯವಾಯಿತು. ಕ್ರಿಸ್ತಶಕ 632 ರಲ್ಲಿ ಮೊಹಮ್ಮದ್ ಪೈಗಂಬರರು ಇಹಲೋಕ ತ್ಯಜಿಸಿ ದೇವರ ರಾಜ್ಯ ಸೇರಿಕೊಂಡರು. ಅದಾದ ಬಳಿಕ ಅವರ ಜೀವನ ಮತ್ತು ಬೋಧನೆಗಳನ್ನು ಅನುಸರಿಸಿ ಅವರ ಅನುಯಾಯಿಗಳು ಅನೇಕ ಹಬ್ಬಗಳನ್ನು ಧಾರ್ಮಿಕ ಪದ್ಧತಿಯ ಅಂಗದಂತೆ ಆಚರಿಸಲು ತೊಡಗಿಕೊಂಡರು.

ಈದ್ ಮಿಲಾದ್’ನಂದು ಪ್ರವಾದಿ ಮೊಹಮ್ಮದರ ಜೀವನ ಮತ್ತು ಬೋಧನೆಗಳ ಕುರಿತಾಗಿ ವಿಶೇಷ ಉಪನ್ಯಾಸಗಳು, ಚರ್ಚೆ-ಪರಾಮರ್ಶೆಗಳು ನಡೆಯುತ್ತವೆ. ಮುಸ್ಲಿಮ್ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಧರ್ಮ ಮತ್ತು ಜೀವನ ಎರಡರ ಆತ್ಮಾವಲೋಕನ ಹಾಗೂ ಆತ್ಮಸಾಕ್ಷಾತ್ಕಾರದ ರೂಪಕದಂತೆಯೂ ಈದ್ ಮಿಲಾದ್ ಆಚರಣೆ ಗೋಚರಿಸುತ್ತದೆ. ಇನ್ನು ಶಿಯಾ ಮುಸ್ಲಿಮರು ಈ ದಿನದಂದು ಪ್ರವಾದಿ ಮೊಹಮ್ಮದರು ಹಜ಼ರತ್ ಅಲಿ’ಯವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ ದಿನ ಎಂದು ನಂಬಿ ಆಚರಿಸುತ್ತಾರೆ. ಒಂದೆಡೆ ಸಾವಿನ ಸೂತಕ ಮತ್ತು ದುಃಖವಿದ್ದರೆ, ಇನ್ನೊಂದೆಡೆ ಉತ್ತರಾಧಿಕಾರತ್ವದ ಹಕ್ಕುದಾರಿಕೆಯನ್ನು ಮಂಡಿಸಲಾಗುತ್ತದೆ. ಸುನ್ನಿ ಮತ್ತು ಶಿಯಾ ಪಂಗಡಗಳು ತಂತಮ್ಮ ನಂಬಿಕೆಯನುಸಾರ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತವೆ.

ಈ ದಿನದಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಪವಿತ್ರ ಖುರಾನ್ ಪಠಣ, ವಿಶೇಷ ಉಪನ್ಯಾಸ, ಪ್ರವಾದಿಯವರ ಜೀವನ ದರ್ಶನ ಮತ್ತು ಮೌಲ್ಯಯುತ ಆದರ್ಶಗಳ ಕುರಿತು ಗೋಷ್ಠಿಗಳನ್ನು ನಡೆಸಲಾಗುತ್ತದೆ. ಮೆರವಣಿಗೆ, ಜುಲೂಸ್, ಮುಶಾಯೆರಾ, ಘಜ಼ಲ್ ಸಂಗೀತ್ ಕಾರ್ಯಕ್ರಮಗಳೂ ಕೆಲವೆಡೆ ಜರುಗುತ್ತವೆ. ಎಲ್ಲ ಎಲ್ಲದರಲ್ಲೂ ಪ್ರವಾದಿಯವರ ಮೇಲಿನ ಗೌರವ ಮತ್ತು ಪ್ರೇಮ ಕಂಡುಬರುತ್ತದೆ.

__ಸಂಚಲನ
ಚಿಕ್ಕನಾಯಕನ ಸೀಮೆಯಿಂದ