Saturday, March 14, 2026
Google search engine
Home Blog Page 72

ಕರ್ತವ್ಯ ನಿಷ್ಠೆ ಮೆರೆದ ಮಹಿಳಾ ಪೊಲೀಸ್!

0

Publicstory/prajayoga

ತುಮಕೂರು : ಪೊಲೀಸರೆಂದರೆ ಮೈಗಳ್ಳರು, ಲಂಚ ಪಡೆಯುತ್ತಾರೆ, ಸಂಭಾವನೆಗೆ ತಕ್ಕನಾಗಿ‌ ಜವಬ್ದಾರಿ ನಿರ್ವಹಿಸುವುದಿಲ್ಲ ಎಂಬೆಲ್ಲ ತಪ್ಪು ಕಲ್ಪನೆಗಳು ಸಮಾಜದಲ್ಲಿದೆ. ಆದರೆ, ಇಂಥಾ ಆರೋಪಗಳ‌ ನಡುವೆಯೂ ಕರ್ತವ್ಯ ನಿಷ್ಠೆ ಮೆರೆಯುವ ಪೊಲೀಸರಿದ್ದಾರೆ ಎಂಬುದು ಆಗಾಗ ಸಾಬೀತಾಗುತ್ತಲೇ‌ ಇರುತ್ತದೆ. ಅದಕ್ಕೆ ಪುರಾವೆ ಎಂಬಂತೆ..

ಇಂದು ನಗರದ ಚರ್ಚ್ ಸರ್ಕಲ್ ಬಳಿ ಗಣೇಶ ಚತುರ್ಥಿ ಪ್ರಯುಕ್ತ ಟ್ರಾಫಿಕ್ ದಟ್ಟಣೆ ಅಧಿಕವಾಗಿತ್ತು. ಈ ವೇಳೆ ‘ಮೇರಿ ಟಿ ಎಸ್’ ಎನ್ನುವ  ಮಹಿಳಾ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ದಿನಪೂರ್ತಿ ಕರ್ತವ್ಯದಲ್ಲಿ ನಿರತರಾಗಿದ್ದು ಕಂಡು ಬಂತು. ಅವರು, ಧೂಳು ಮತ್ತು ಹೊಗೆಯ ನಡುವೆಯೂ ಬೆಳಿಗ್ಗೆಯಿಂದ ಸಂಜೆಯವರೆಗೆ ಅಡ್ಡಾದಿಡ್ಡಿ ಚಲಿಸುತ್ತಿದ್ದ ವಾಹನಗಳಿಗೆ ನಿಯಂತ್ರಣ ಹಾಕಿ ಕರ್ತವ್ಯ ನಿಷ್ಠೆ ಮೆರೆದರು.

ಮಳೆಯ ಅಬ್ಬರಕ್ಕೆ ಕಂಗಾಲಾದ ಜನ, ಸ್ಥಳಕ್ಕೆ ಬಾರದ ಪಿಡಿಒ ; ಭುಗಿಲೆದ್ದ ಜನಾಕ್ರೋಶ

0

Publicstory/prajayoga

ವರದಿ, ಎ.ಶ್ರೀನಿವಾಸಲು

ಪಾವಗಡ: ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಪಳವಳ್ಳಿ, ಹುಸೇನ್ ಪುರ, ಸಿ.ಕೆ ಪುರ, ದೊಡ್ಡ ಹಳ್ಳಿ, ವೆಂಕಟಾಪುರ ದ ಮಣಿ ಮುಕ್ತಾವತಿ ಕೆರೆಗಳು ತುಂಬಿ ಹರಿಯುತ್ತಿದೆ. ಭಾರಿ ಮಳೆಯಿಂದಾಗಿ 40 ವರ್ಷಗಳ ನಂತರ ಪಳವಳ್ಳಿಯ ಪಲ್ಲವರಾಯನ ಕೆರೆ ಕೊಡಿಬಿದ್ದು, ಹರಿಯುತ್ತಿರುವುದರಿಂದ ರೈತರು ಹರ್ಷ ವ್ಯಕ್ತ ಪಡಿಸಿರುವುದು ಒಂದೆಡೆ.

ಇನ್ನೊಂದೆಡೆ ಪಳವಳ್ಳಿ ಗ್ರಾಮ ಪಂಚಾಯತಿಯ ಹೊಸಹಳ್ಳಿ ತಾಂಡಾದಲ್ಲಿ ಗಮಲಿ ಬಾಯಿ ಹಾಗೂ ಸಾಕಮ್ಮ ಎಂಬುವವರ ಮನೆಗಳು ಭಾರಿ ಮಳೆಯಿಂದಾಗಿ ಬಿದ್ದು ಹೋಗಿದ್ದು, ಇವರು ಮೊದಲನೇ ಬಾರಿಗೆ ಮಳೆ ಬಂದಾಗ ಗ್ರಾಮ ಪಂಚಾಯತಿಯಿಂದ ಮನೆ ನಿರ್ಮಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಸ್ಥಳೀಯ ಪಿಡಿಒ ಶ್ರೀ ರಾಮನಾಯ್ಕರ ನಿರ್ಲಕ್ಷದಿಂದಾಗಿ ಈ ದಿನ ಎರಡು ಮನೆಗಳು ಕುಸಿದು ಬಿದ್ದಿವೆ ಎಂದು ಹೊಸಳ್ಳಿ ತಾಂಡಾದ ಗೋವಿಂದ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದರು.   

ಹುಸೇನ್ ಪುರ ಗ್ರಾಮಕ್ಕೆ ನುಗ್ಗಿದ ಮಳೆಯ ನೀರು  

ಭಾರಿ ಮಳೆಯಿಂದಾಗಿ ಹುಸೇನ್ ಪುರದ ಕೆರೆ ಉಕ್ಕಿ ಹರಿದು ಕೆರೆ ಪಕ್ಕದಲ್ಲಿರುವ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದರಿಂದ ಮನೆಯಲ್ಲಿರುವ ಅಗತ್ಯ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣವಾಗಿ ಹಾಳಾಗಿದೆ ಎಂದು ಜನರು ತಮ್ಮ ಅಳಲನ್ನು ತೋಡಿಕೊಂಡರು.

ಸ್ಥಳಕ್ಕೆ ತಹಶೀಲ್ದಾರ್ ವರದರಾಜು ಭೇಟಿ ನೀಡಿ, ಮಳೆಯಿಂದ ಬಿದ್ದು ಹೋದ ಮನೆಗಳ ಹಾಗೂ ಮನೆಗಳಿಗೆ ನೀರು ತುಂಬಿದ, ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು. ಅಧಿಕಾರಿಗಳಿಗೆ ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.         

ಮಳೆಯ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಆಲಿಸಬೇಕಿದ್ದ ರಾಪ್ಟೆ ಪಂಚಾಯಿತಿಯ ಪಿಡಿಒ ಹನುಮಂತರಾಜು ಗೈರು ಹಾಜರಿದ್ದು ಗ್ರಾಮಸ್ಥರು ಇಂತಹ ಪಿಡಿಒ ತಮ್ಮ ಪಂಚಾಯಿತಿಗೆ ಬೇಡವೆಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆ ಬಿದ್ದು ಹೋಗಿರುವ ಹಾಗೂ ನೀರಿನಿಂದ ಆವೃತಗೊಂಡ ಮನೆಗಳ ಸದಸ್ಯರಿಗೆ ಹುಸೇನ್ ಪುರದ ವೆಂಕಾವಧೂತ ದೇವಸ್ಥಾನ ದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, ಸ್ಥಳದಲ್ಲಿ ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ತಹಶೀಲ್ದಾರ್ ವರದರಾಜು ಅಧಿಕಾರಿಗಳಿಗೆ ತಿಳಿಸಿದರು.       

ಸ್ಥಳದಲ್ಲಿ ತಾಲೂಕು ಪಂಚಾಯಿತಿಯ ಪ್ರಥಮ ದರ್ಜೆ ಸಹಾಯಕರಾದ ಗಂಗಾಧರ, ಆರ್ ಐ ರವಿಕುಮಾರ್, ಬಿಲ್ ಕಲೆಕ್ಟರ್ ರಾಮ್, ಗ್ರಾಮ ಪಂಚಾಯತಿ ಸದಸ್ಯ ನಾಗರಾಜು ಇದ್ದರು.

ಚೌಕಟ್ಟು ಮೀರಿದರೆ ನಿಜ ಕವಿತೆ ಹುಟ್ಟುತ್ತದೆ: ರಂಗಮ್ಮ ಹೊದೇಕಲ್ಲು

Publicstory/prajayoga

ಈ ವೇಳೆ ಯುವ ಕವಿ ಯೋಗೇಶ್ ಮಲ್ಲೂರು ಅವರಿಗೆ ಸನ್ಮಾನ ಮಾಡಲಾಯಿತು

ತುಮಕೂರು: ಹೊಟ್ಟೆಗೆ ಹಸಿದವರಿಗಿಂತ ಪ್ರೀತಿಗೆ ಹಸಿದವರ ಸಂಖ್ಯೆ ಜಾಸ್ತಿ. ಯಾವುದೇ ಪರಂಪರೆಯನ್ನು ಮೀರಿ ಕಟ್ಟಿದರೆ ಅದು ನಿಜವಾದ ಕವಿತೆ ಎನಿಸಿಕೊಳ್ಳುತ್ತದೆ ಎಂದು ಕವಯಿತ್ರಿ ರಂಗಮ್ಮ ಹೊದೇಕಲ್ಲು ಅಭಿಪ್ರಾಯಪಟ್ಟರು.

ನಗರದ ನಿವೃತ್ತ ನೌಕರರ ಮಹಾಮನೆ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾಂಪಸ್ ಕಹಾನಿ  ಪುಸ್ತಕ ಕುರಿತ ಮಾತು ಹಾಗೂ ಯುವ ಬರಹಗಾರರು : ಓದು ಮತ್ತು ಬರಹ ವಿಶೇಷ ಉಪನ್ಯಾಸ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು‌ ಮಾತಡಿದರು.

ಕವಿತೆಗೆ ಸಿದ್ಧ ಮಾದರಿಗಳಿಲ್ಲ. ಅನಿಸಿದ್ದನ್ನು ದಾಖಲಿಸುವ ಪ್ರಯತ್ನ ಮಾಡಬೇಕಾಗುತ್ತದೆ. ಗೆಲ್ಲುವ ಕವಿತೆಗಾಗಿ ನಿರಂತರವಾಗಿ ನೋಯಬೇಕು. ಸಂಘರ್ಷಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು. ಪ್ರೀತಿಯಿದ್ದರೆ ಎಲ್ಲವೂ ಜೊತೆ ಬರುತ್ತದೆ ಮತ್ತು ಇದರ ಮೂಲಕ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸಿದರು.

ಕೆಲವರು ಮಾತ್ರ ಮೆದುಳಿನ ಜೊತೆಗೆ ಹೃದಯವನ್ನು ಜೋಡಿಸಿಕೊಂಡಿರುತ್ತಾರೆ ಅದರಲ್ಲಿ ಯೋಗೇಶ್ ಮಲ್ಲೂರು ಅವರು ಕೂಡ. ಪ್ರೀತಿಯೆಂದರೆ ಸಂಕುಚಿತವಲ್ಲ, ಅದೊಂದು ಹದಿಹರೆಯದ ಹಕ್ಕಿ. ಈ ಕಾಲಘಟ್ಟದಲ್ಲಿ ಪ್ರೀತಿ ನಾನಾ ಅರ್ಥಗಳನ್ನು ಕಟ್ಟಿಕೊಂಡು, ಎಮೋಜಿಗಳಲ್ಲಿ ಮೆರೆಯುತ್ತಿದೆ. ಇಂಥಾ ಸಂದರ್ಭದಲ್ಲೂ ಪತ್ರ ನೀಡಿ ಪ್ರೇಮಿಸಿದ್ದಾರೆ.  ಪುಸ್ತಕದ ಬರಹಗಳೂ ಪತ್ರರೂಪದಲ್ಲಿಯೇ  ಇವೆ ಎಂದು ತಿಳಿಸಿದರು.

ಕವಿತೆಗಳು ತಮ್ಮನ್ನೋ ಅಥವಾ ಗೆತಿಯನ್ನೋ ಸಮಾಧಾನ‌ಮಾಡುವಂತಿದೆ. ಒಲವಿನ ಮಹಾಪೂರ ಹರಿದಿದೆ‌. ಬಹಶಃ ಅದನ್ನು ದಕ್ಕಿಸಿಕೊಂಡವರು ಪುಣ್ಯವಂತರು. ಪ್ರೇಮ ಅನ್ನೋದು ಬರಿ ಹುಡುಗ ಹುಡುಗಿಯ ಮಧ್ಯೆ ಉದಯಿಸುವುದಲ್ಲ. ಅದರಾಚೆಗಿನ ಅಂತಃಕರಣ. ನಾವೇನು ಇತಿಹಾಸ ಸೃಷ್ಟಿಸಸಬೇಕಿಲ್ಲ. ಸಾಮಾನ್ಯವಾಗಿ ಸಂಕಟ, ನೋವು, ವಿಷಾದಗಳಲ್ಲೇ ಪ್ರೀತಿ ಹುಟ್ಟುವುದು. ಪ್ರತಿಭೆ ಮತ್ತು ವಿಶೇಷತೆ ಅನ್ನುವುದು ಅನುಸರಣೆಯಿಂದ ಬರುವುದು. ಅಧ್ಯಯನವಿಲ್ಲದೆ ಏನನ್ನೂ ಬರೆಯಲು ಸಾಧ್ಯವಿಲ್ಲ.  ಸಂವೇದನಾ ಶೀಲ ಕವಿ ಹೂವನ್ನು ಪ್ರೀತಿಗೆ ಹೋಲೈಸಬಲ್ಲ. ಬರಹಗಾರರಿಗೆ ಸೂಕ್ಷ್ಮ ಪ್ರಜ್ಞೆ ಇರುತ್ತದೆ. ಮನಸ್ಸು ಬುದ್ಧಿ ಪೂರ್ವಕವಾಗಿ ಮತ್ತು ಭಾವಪೂರ್ವಕವಾಗಿ ವ್ಯವಹರಿಸುತ್ತದೆ. ಭಾವಪೂರ್ವಕವಾಗಿ ನೋಡುವುದು ಕವಿತ್ವ. ಇದು ಒಬ್ಬ ಬರಹಗಾರನಿಗಿರಬೇಕಾದ ವೈಶಿಷ್ಟ್ಯ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಬಾ.ಹ.ರಮಾಕುಮಾರಿ ಮಾತನಾಡಿ, ಇಂದಿನ ಆಧುನಿಕ ಸಮಾಜಕ್ಕೆ ಅಂತಃಸ್ಪರ್ಶಿಯಾಗಿದೆ ಕ್ಯಾಂಪಸ್ ಕಹಾನಿ. ಶಿಕ್ಷಕರು ಮನಸ್ಸು ಮಾಡಿದರೆ ಸಮಾಜವನ್ನು ಬದಲಾವಣೆ ಮಾಡಬಹುದು. ಪ್ರಾಥಮಿಕ ಶಾಲೆಯಿಂದಲೇ ಮಕ್ಕಳನ್ನು ಪ್ರೊತ್ಸಾಹಿಸಿದರೆ ಕವಿ ಹೃದಯ ಹುಟ್ಟಲು ಸಾಧ್ಯ. ಪುಸ್ತಕ ಬಿಡುಗಡೆಯು ನಾಮಕರಣ ಮಹೋತ್ಸವ ಇದ್ದಹಾಗೆ. ಅದು ಲೇಖಕರಿಗೆ ಆತ್ಮವಿಶ್ವಾಸವನ್ನೂ ತಂದುಕೊಡುತ್ತದೆ ಎಂದು ಹೇಳಿದರು.

ಪುಸ್ತಕದ ಸಂದೇಶವನ್ನು ಗ್ರಹಿಸಿ ಓದಬೇಕಾಗುತ್ತದೆ. ಅದರಿಂದ ಇಂದಿನ ಯುವಜನರ ಮನಸ್ಸು ಹಾಗೂ ಬರಹಗಾರನ ಸೂಕ್ಷ್ಮತೆಗಳು ತಿಳಿಯುತ್ತದೆ‌. ಪ್ರೀತಿ ಪ್ರೇಮ ಯಶಸ್ಸು ಕಾಣುವುದು ಕ್ಯಾಂಪಸ್ ಅವಧಿಯ ನಂತರ. ಬದುಕು ಸ್ವಾವಲಂಬನೆಯಾದ ಪ್ರೀತಿ ಪ್ರೇಮಗಳಿಗೆ ಪುಷ್ಠಿಸಿಗುತ್ತದೆ ಎಂದರು.

ವಿಶ್ವವಿದ್ಯಾಲಯಗಳಲ್ಲಿ ಜಾತಿಗೊಂದೊಂದು ಅಧ್ಯಯನ ಪೀಠ ರಚನೆಯಾಗುತ್ತಿವೆ. ಈಗ ತುಮಕೂರು ವಿವಿಯಲ್ಲಿ ಸಾರ್ವರ್ಕರ್ ಅಧ್ಯಯನ ಪೀಠಕ್ಕೆ ಸಿಂಡಿಕೇಟ್ ಸಭೆ ಒಪ್ಪಿಗೆ ಸೂಚಿಸಿದೆ. ಇಂತಹ ಅಧ್ಯಯನ ಪೀಠಗಳಿಂದ ಯಾವುದೇ ಪ್ರಯೋಜನವಿಲ್ಲ. ನಾವೆಲ್ಲರೂ ಜಾಗರೂಕರಗಬೇಕಿದೆ. ಯುವಪೀಳಿಗೆ ಸೇರಿಕೊಂಡು ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳಬೇಕಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಐದು ವರ್ಷಕ್ಕೊಮ್ಮೆ ಹಾಳಾಗುವ ರಸ್ತೆಗಳನ್ನು ನಿರ್ಮಿಸುತ್ತಾರೆ. ಆದರೆ, ಶಾಶ್ವತವಾಗಿ ಉಳಿಯುವ ಶೈಕ್ಷಣಿಕ ಕೆಲಸಗಳನ್ನು ಮಾಡುವ ಅಗತ್ಯವಿದೆ ಹಾಗೂ ಪ್ರಸ್ತುತ ಮಹಿಳಾ ಕಾಲೇಜುಗಳನ್ನು ಕಡೆಗಣಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಉಪನ್ಯಾಸಕ ಗಿರೀಶ್ ಸಿಂಗ್ರಿಹಳ್ಳಿ, ಮೈತ್ರಿ ಬಳಗದ ಚಿಕ್ಕರಂಗಯ್ಯ, ಗೋಮಿನಿ ಪ್ರಕಾಶಕ ಗುಬ್ಬಚ್ಚಿ ಸತೀಶ್, ಯುವ ಕವಿ ದಾದಾಪೀರ್, ತಿಲಕ್, ಆಶಾ, ಮಹೇಶ್ ಲಕ್ಷ್ಮೀ ಎಸ್.ಆರ್ ಮತ್ತಿತರರು ಹಾಜರಿದ್ದರು.

ಗಣಪನ ಚತುರ್ಥಿ ; ಪರಿಸರದೊಂದಿಗೆ ಆಚರಿಸುವ ಸಂಕಲ್ಪ‌ ಮಾಡೋಣ

0

Publicstory/prajayoga

ಲೇಖನ : ಮಂಜುನಾಥ್ ಅಮಲಗೊಂದಿ

ಭಾರತದ ಕೆಲವು ಆಚರಣೆಗಳಲ್ಲಿ ಗಣಪತಿ ಚತುರ್ಥಿಯು ಅತೀ ಮುಖ್ಯವಾದ ಆಚರಣೆಯಾಗಿದೆ. ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಸಂಭ್ರಮದಿಂದ, ಸಂತೋಷದಿಂದ ಆಚರಿಸುವುದಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಗಣೇಶ ಚತುರ್ಥಿಯ ಆರಂಭವು ಮರಾಠರು ತಮ್ಮ ಆಳ್ವಿಕೆಯ ಉತ್ತುಂಗದಲ್ಲಿದ್ದಾಗ ಪ್ರಚಾರಕ್ಕೆ ತಂದರು.

ಅದರಲ್ಲೂ ಮರಾಠರ ರಾಜ ಛತ್ರಪತಿ ಶಿವಾಜಿಯು ಈ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದನೆಂದು ಇತಿಹಾಸ ಸಾರುತ್ತದೆ. ಗಣೇಶನ ಹಬ್ಬ ಆರಂಭಗೊಳ್ಳಲು ಹಲವಾರು ಕಥೆಗಳ ಹಿನ್ನೆಲೆಯಿದೆ. ಗಣೇಶನ ಹುಟ್ಟಿನ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಈ ಗಣಪತಿ ಹಬ್ಬವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು.

         ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬವು ಕೇವಲ ಮನೆ ಮನೆಗಳಲ್ಲಿ ಕುಟುಂಬದ ಆಚರಣೆಯಾಗಿತ್ತು. ಭಕ್ತಿ ಮತ್ತು ಭಾವೈಕ್ಯತೆಯ ಹಿನ್ನೆಲೆಯಲ್ಲಿ 1892 ರಲ್ಲಿ ಮಹಾರಾಷ್ಟ್ರದ ಬಾವ್ ಸಾಹೇಬ್ ಲಕ್ಷ್ಮಣ್ ಜವೇಲ್ ರವರು ಪ್ರಥಮವಾಗಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಣೆ ಮಾಡಿದರು. ಆದರೆ  1893ರಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರವನ್ನು ತುಂಬಲು, ಅವರ ನಡುವೆ ಕೆಳಹಂತದಲ್ಲಿ ಐಕ್ಯತೆಯನ್ನು ಮೂಡಿಸುವುದಕ್ಕೆ, ಸ್ವಾತಂತ್ರ ಸಂಗ್ರಾಮಕ್ಕಾಗಿ ಸಂಘಟನೆ ಮಾಡುವುದಕ್ಕೆ ಅದರ ಸ್ವರೂಪವನ್ನು ಬದಲಾಯಿಸಲಾಯಿತು.

          ಹೀಗೆ ನಡೆದು ಬಂದ ಗಣಪತಿ ಹಬ್ಬವು ಇಂದು ಅನೇಕ ಪರಿಸರಾತ್ಮಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಸವಾಲುಗಳ ನಡುವೆ ಆಚರಣೆ ಮಾಡಲಾಗುತ್ತಿದೆ. ಮೊದಮೊದಲು ಗಣಪತಿ ಮೂರ್ತಿಯನ್ನು ಪರಿಸರಕ್ಕೆ ಪೂರಕವಾಗಿ ಯಾವುದೇ ರಾಸಾಯನಿಕಗಳಿಲ್ಲದ, ಮಾಲಿನ್ಯಕಾರಕವಲ್ಲದ ಮಾದರಿಯಲ್ಲಿ ತಯಾರಿಸಿ ಪೂಜಿಸುತ್ತಿದ್ದರು. ಇಂದು ಸಂಶೋಧನೆಗಳ, ರಾಸಾಯನಿಕ ಸೃಜನಶೀಲತೆಯ ಪರಿಣಾಮಗಳಿಂದಾಗಿ ವೈವಿಧ್ಯಮಯ ಬಣ್ಣಗಳಿಂದ, ಕಣ್ಣಿಗೆರಾಚುವ ಸೌಂದರ್ಯಗಳಿಂದ ನಿರ್ಮಿಸಿದ ಗಣಪತಿಯನ್ನು ಕೂರಿಸುವ ಮೂಲಕ ಹಬ್ಬದ ಸಂಭ್ರಮದಲ್ಲಿ ಬೀಗುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಇದರ ತೀವ್ರತೆಯನ್ನು ಹೆಚ್ಚಾಗಿ ನಾವು ಕಾಣಬಹುದಾಗಿದೆ. ನಗರಗಳಲ್ಲಿ ಬೀದಿ ಬೀದಿಗೆ ಒಂದೊಂದು, ಪಕ್ಷ ಪಕ್ಷಗದುದೊಂದು, ಜಾತಿ ಜಾತಿಗೆ ಒಂದೊಂದು ಗಣಪತಿಯನ್ನು ಇಟ್ಟು ಸಂಭ್ರಮಿಸುತ್ತಿದ್ದೇವೆ. ಇದರ ಜೊತೆಗೆ ಕಿವಿ ನಿಂತುಹೋಗುವಂತೆ ಭಾಸವಾಗುವ  ಧ್ವನಿವರ್ಧಕಗಳ ಮತ್ತು ಪಟಾಕಿಗಳ ಅಬ್ಬರ, ವಿಸರ್ಜನಾ ಮಹೋತ್ಸವವನ್ನು ಮಾಡಲು ನೀರಿನ ನೆಲೆಗಳಿಗಾಗಿ ಪರದಾಟಗಳೇ ಗಣೇಶೋತ್ಸವದ ಪ್ರಕ್ರಿಯೆಗಳಾಗಿವೆ.

         ಗಣಪತಿ ಹಬ್ಬದ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಹೇರಳವಾಗಿ ಬಾಣಬಿರುಸುಗಳನ್ನು ಮತ್ತು ಪಟಾಕಿಗಳನ್ನು ಉಪಯೋಗಿಸುತ್ತಾರೆ. ಇದು ವಾಯು ಮಾಲಿನ್ಯಕ್ಕೆ ನೇರ ಕಾರಣವಾಗಿದ್ದು, ವಾತಾವರಣಕ್ಕೆ ಬೇರಿಯಂ, ಕ್ಯಾಡ್ಮಿಯಂ, ಸೋಡಿಯಂ, ಪಾದರಸ ನೈಟ್ರೇಟ್ ಮತ್ತು ವಿಷಾನಿಲಗಳು ಸೇರುತ್ತವೆ.  ಈ ಸಮಯದಲ್ಲಿ  ಬಾಣಬಿರುಸುಗಳನ್ನು ಉಪಯೋಗಿಸುವುದರಿಂದ ವಾತಾವರಣಕ್ಕೆ ಸೇರಲ್ಪಡುವ ಚಿಕ್ಕ ಕಣಗಳ ಸಂಖ್ಯೆ ಹೆಚ್ಚಿ, ಉಸಿರಾಟಕ್ಕೆ ತೊಂದರೆಯಾಗುವ ವಿಷಾಂಶಗಳನ್ನೊಳಗೊಂಡ ಕಣಗಳ ಮಟ್ಟವು ಅಧಿಕಗೊಳ್ಳುತ್ತದೆ. ಪರಿಸರ ಸ್ನೇಹಿ ಅಲ್ಲದ ಗಣೇಶ ಹಬ್ಬದಿಂದ ವಾತಾವರಣದಲ್ಲಿ ಹಾನಿಕಾರಕ ಅನಿಲಗಳಾದ ಗಂಧಕದ ಡೈಆಕ್ಸೈಡ್, ಕಾರ್ಬನ್ ಮೋನೋಆಕ್ಸಡ್, ಇತ್ಯಾದಿಗಳ ಮಟ್ಟವನ್ನು ಹೆಚ್ಚಿಸುತ್ತದೆ.

        ಗಣೇಶ ಮೂರ್ತಿ ಮಾಡಲು ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ವಿಷಕಾರಿ ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ. ಆದರೂ ಇದಕ್ಕೆ ವಿರುದ್ಧವಾಗಿ  ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ನಲ್ಲಿ ತಯಾರಿಸಿ, ಹೊಳೆಯುವ ಬಟ್ಟೆ, ಕೃತಕ ಆಭರಣ ಮತ್ತು ಹಾನಿಕಾರಕ ರಾಸಾಯನಿಕ ಬಣ್ಣ ಬಳಿದು ಸಿಂಗರಿಸಲಾಗುತ್ತಿದೆ. ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹೈಡ್ರೇಟ್ನಿಂದ ಮಾಡಲ್ಪಟ್ಟ ಪ್ಲಾಸ್ಟರ್ ಆಫ್ ಪ್ಯಾರಿಸ್  ಗಣೇಶ ಮೂರ್ತಿಗಳನ್ನು  ಕೆರೆಗಳಲ್ಲಿ, ನದಿಗಳಲ್ಲಿ ಮತ್ತು ಸಮುದ್ರದಲ್ಲಿ ವಿಸರ್ಜಿಸುವುದರಿಂದ ಜಲಚರಗಳಾದ ಮೀನುಗಳ ಸಂತತಿಗೆ ಮಾರಕವಾಗುತ್ತಿದೆ ಹಾಗೂ ಇದರಿಂದ ಉಂಟಾಗುತ್ತಿರುವ ಜಲಮಾಲಿನ್ಯವು ಹೆಚ್ಚಿನ ಆತಂಕಕಾರಿಯಾಗಿದೆ. ಏಕೆಂದರೆ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಯಿಂದ ಮಾಡಲ್ಪಟ್ಟ ಗಣೇಶ ಮೂರ್ತಿಗಳು ನೀರಿನಲ್ಲಿ ಸಂಪೂರ್ಣವಾಗಿ ಕರಗಲು ಅನೇಕ ತಿಂಗಳುಗಳನ್ನೆ ತೆಗೆದುಕೊಳ್ಳುತ್ತದೆ. ಇದು ನೀರಿನಲ್ಲಿರುವ ಆಮ್ಲಜನಕದ ಪ್ರಮಾಣವನ್ನು ತಗ್ಗಿಸಿ ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಇದಲ್ಲದೆ ಗಣಪತಿ ಮೂರ್ತಿಯ ಅಲಂಕಾರಕ್ಕಾಗಿ ಉಪಯೋಗಿಸಿದ ಬಣ್ಣಗಳು ಹಾನಿಕಾರಕ ರಾಸಾಯನಿಕಗಳಾದ ಪಾದರಸ, ಲೆಡ್ಗಳನ್ನು ನೀರಿಗೆ ಸೇರಿಸುತ್ತವೆ. ಇದು ನೀರಿನಲ್ಲಿನ ಆಮ್ಲಿಯತೆ, ಕರಗಬಹುದಾದ ಘನ ವಸ್ತುಗಳು ಮತ್ತು ಭಾರವಾದ ಲೋಹಗಳನ್ನು ಹೆಚ್ಚಿಸುತ್ತದೆ. ಇದು ಜಲಚರ ಸಸ್ಯಗಳು ಮತ್ತು ಸಾಗರದ ಜೀವರಾಶಿಯನ್ನು ಕೊಂದು ನೀರಿನಲ್ಲಿನ ಜೈವಿಕ ವ್ಯವಸ್ಥೆಯನ್ನ ಹಾಳು ಮಾಡುತ್ತದೆ. ಗಣೇಶ ಮೂರ್ತಿಗಳ ಜೊತೆ ಜನರು ಥರ್ಮಕೊಲ್, ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ಎಸೆಯುವುದು ಜಲಮಾಲಿನ್ಯದ ಮಟ್ಟವನ್ನು ಹೆಚ್ಚಿಸುತ್ತದೆ. ಈ ಬಣ್ಣಗಳಲ್ಲಿರುವ ವಿಷಾಂಶಗಳು ನೀರಿನ ಅಡಿಯಲ್ಲಿ ಸೇರಿಕೊಂಡು, ಭೂಮಿಯ ಅಂತರ್ಜಲ ದೊಂದಿಗೆ ಬೆರೆಯುತ್ತದೆ. ಇದರಿಂದ ಕೆರೆಯ ಸುತ್ತಮುತ್ತಲಿನ ಅಂತರ್ಜಲವು  ವಿಷಯುಕ್ತವಾಗಿ, ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ.

          ಗಣೇಶ ಹಬ್ಬದ ಸಂದರ್ಭದಲ್ಲಿ ಭಕ್ತಾದಿಗಳು ದೊಡ್ಡ ಧ್ವನಿವರ್ಧಕಗಳ ಮೂಲಕ ಭಜನೆಗಳು, ಕೀರ್ತನೆಗಳು ಮತ್ತು ಹಾಡುಗಳು ಕೇಳುವುದನ್ನು ಹಾಗೂ ಆಕ್ರೇಸ್ಟ್ರಾಗಳನ್ನು ಮಾಡಿಸುವುದು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಮುಖ್ಯವಾಗಿ ಗಣೇಶ ಹಬ್ಬದ ಕೊನೆಯ ದಿನವಾದ ಅನಂತ ಚತುರ್ಧಶಿಯಂದು ನಾವು ರಸ್ತೆಗಳ ಮೇಲೆ ಸಾಲುಗಟ್ಟಿದ ವಾಹನ ದಟ್ಟಣೆಯನ್ನು ಕಾಣಬಹುದು ಮತ್ತು ಇದು ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯವನ್ನು ಹೆಚ್ಚಿಸುತ್ತದೆ. ಈ ಎಲ್ಲವೂ ಮಾಲಿನ್ಯ ನಿಯಂತ್ರಣ ಮಂಡಳಿಯು ಹೇಳಿರುವಂತೆ, ಜೀವಿಗಳ ಆರೋಗ್ಯಕರ ಶಬ್ದ ಪರಿಮಾಣ ಮಟ್ಟದ ಪ್ರಮಾಣ ಬೆಳಗಿನ ಸಮಯದಲ್ಲಿ 55 ಡಿಸೀಬಲ್ ಮತ್ತು ರಾತ್ರಿ ಸಮಯದಲ್ಲಿ 45 ಡಿಸೀಬಲ್ ಇರಬೇಕಾಗಿರುತ್ತದೆ. ಆದರೆ ಹಬ್ಬದ ಸಂದರ್ಭದಲ್ಲಿ ಸರಾಸರಿ ಮಟ್ಟಕ್ಕಿಂತ ಅನೇಕ ಪಟ್ಟು ಕೆಲವು ಬಾರಿ 110  ಡಿಸೀಬಲ್ ಗಳವರೆಗೆ ಹೆಚ್ಚಿಸಿ ವಯೋವೃದ್ದರು ಹಾಗೂ ಮಕ್ಕಳ ಮೇಲೆ ನೇರ ಪರಿಣಾಮವನ್ನು ಉಂಟುಮಾಡುತ್ತಿದೆ.

           ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ಬದಲು ನೀರಿನಲ್ಲಿ ನೈಸರ್ಗಿಕವಾಗಿ ಕರಗುವ ಜೇಡಿಮಣ್ಣು ಮತ್ತು ಬಣ್ಣಗಳನ್ನು ಮಾತ್ರ ಉಪಯೋಗಿಸಿ ತಯಾರಿಸಬೇಕೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ, ವಿಷಕಾರಿ ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ, ಹುಲ್ಲು ಮತ್ತು ಬಿದಿರುಕಡ್ಡಿಗಳಲ್ಲಿ ಗಣೇಶ ಮೂರ್ತಿಗಳನ್ನು ಮಾಡುವಂತಿಲ್ಲ. ಆದರೆ ವಾಸ್ತವದಲ್ಲಿ ಈ ಷರತ್ತುಗಳು ಸಂಪೂರ್ಣ ಪಾಲನೆಯಾಗದಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶಗಳ ನಿಷೇಧವಿದ್ದರೂ ಹಲವಾರು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶಗಳನ್ನು ಬೇರೆ ಊರುಗಳಿಂದ ತಂದು ಇಲ್ಲಿ ಕೂರಿಸಿ ಕೆರೆ-ಕುಂಟೆ, ಹಳ್ಳ-ಕೊಳ್ಳಗಳಲ್ಲಿ ವಿಸರ್ಜಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಹುಲ್ಲು ಮತ್ತು ಬಿದಿರುಕಡ್ಡಿಗಳಲ್ಲಿ ಗಣೇಶ ಮೂರ್ತಿಗಳನ್ನು ಮಾಡುವಂತಿಲ್ಲ ಎಂದು ಸರ್ಕಾರ ಸೂಚಿಸಿದ್ದರೂ ಪ್ರತಿವರ್ಷ ವಿಸರ್ಜಿಸುವ ಗಣೇಶ ಮೂರ್ತಿಗಳಲ್ಲಿ ಅವುಗಳದೇ ಸಿಂಹಪಾಲು ಇರುತ್ತವೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಸೂಚನೆ:-

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974ರ ಪ್ರಕಾರ ಕಲಂ 33(ಅ)ನಲ್ಲಿ ತಿಳಿಸಿರುವ ಪ್ರದತ್ತ ಅಧಿಕಾರವನ್ನು ಚಲಾಯಿಸಿ ರಾಜ್ಯದ ಕೆರೆಗಳಲ್ಲಿ ಹಾಗೂ ಇತರೆ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ/ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ಇನ್ನು ಮುಂದೆ ರಾಜ್ಯದ ಯಾವುದೇ ಜಲಗಳಲ್ಲಿ, ನದಿ, ಕಾಲುವೆ/ ಬಾವಿಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ1974ರ ಕಲಂ 45-1ಅನ್ವಯ ದಂಡವನ್ನು (ರೂ. 10,000/- ವರೆಗೆ) ಮತ್ತು ಜೈಲುವಾಸವನ್ನು ವಿಧಿಸುವ ಅವಕಾಶವಿರುತ್ತದೆ. ಅಲ್ಲದೆ ಪ್ರಸ್ತುತ ವರ್ಷಗಳಲ್ಲಿ ಕಡ್ಡಾಯವಾಗಿ ಗಣೇಶ ಮೂರ್ತಿಗಳು 5 ಅಡಿ ಎತ್ತರವನ್ನು ಮೀರಬಾರದೆಂದು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ ವಿಧಿಸಿದೆ.

         ಮಾಲಿನ್ಯ ನಿಯಂತ್ರಣ ಕಠಿಣ ಕಾನೂನು ಜಾರಿಯಲ್ಲಿದ್ದರೂ, ಅವುಗಳ ಉಲ್ಲಂಘನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ವೈಫಲ್ಯತೆ ಆಗಾಗ ಕಾಣುತ್ತದೆ. ಎಲ್ಲೆಂದರಲ್ಲಿ ದೊಡ್ಡದೊಡ್ಡ ಗಣೇಶಗಳನ್ನು ಕೂಡಿಸುವುದು, ಪ್ಲಾಸ್ಟಿಕ್ ಬ್ಯಾನರ್ಗಳನ್ನು ವಿಪರೀತವಾಗಿ ಬಳಸುವುದು, ಕಿವಿಗಡಚಿಕ್ಕುವ ಧ್ವನಿವರ್ಧಕಗಳ ಬಳಕೆ, ಪಟಾಕಿಗಳ ಬಳಕೆ, ವಿಷಕಾರಿ ಬಣ್ಣಗಳನ್ನು ಬಳಸಿ ಮಾಡಿದ ಗಣೇಶ, ಬಿದಿರು ಹುಲ್ಲಿನ ಗಣೇಶ ಹಾಗೂ ಪಿಒಪಿ ಗಣೇಶಗಳ ಮಾರಾಟ ನಡೆಯುತ್ತಲೇ ಇರುತ್ತದೆ. ಆದರೂ ಗಣೇಶ ಹಬ್ಬವನ್ನು ಆಚರಿಸುವಾಗ, ಪ್ರಕೃತಿ ಮತ್ತು ಪರಿಸರದ ಸೌಹಾರ್ಧತೆಯನ್ನು ಕಾಪಾಡಲು ಪ್ರತಿಯೊಬ್ಬರು ನೈತಿಕವಾಗಿ, ಪರಿಸರ ಸಂರಕ್ಷಣೆಯ ವೈಯಕ್ತಿಕ-ಸಾಮುದಾಯಿಕ ಜವಬ್ದಾರಿಯಿಂದ ಕೆಳಗಿನ ಕೆಲವು ಜವಬ್ದಾರಿಗಳನ್ನು ಪಾಲಿಸಬೇಕಾಗಿದೆ. 

         ಗಣೇಶ ಮೂರ್ತಿಗಳನ್ನು ನೀರಿನಲ್ಲಿ ಕರಗುವ ಜೇಡಿಮಣ್ಣು ಮತ್ತು ನೈಸರ್ಗಿಕವಾಗಿ ನೀರಿನಲ್ಲಿ ಕರಗುವ ಬಣ್ಣಗಳನ್ನು ಮಾತ್ರ ಉಪಯೋಗಿಸಿ ತಯಾರಿಸಬೇಕಾಗಿದೆ. ರಾಸಾಯನಿಕ ಬಣ್ಣ ಬಳಿದ ಗಣೇಶ ವಿಗ್ರಹವನ್ನು ಬಳಸದಿರುವುದು, ಬೇರೆಯವರು ಬಳಸದಂತೆ ಅವರ ಮನಸ್ಸುಗಳನ್ನು ಬದಲಾಯಿಸಬಹುದಾಗಿದೆ. ಪ್ರತಿಯೊಬ್ಬರೂ ಗಣೇಶ ವಿಗ್ರಹವನ್ನು ತಮ್ಮ ಮನೆಯಲ್ಲೇ ಇಡುವುದಾದರೆ ಇತ್ತೀಚೆಗೆ ಪರಿಚಿತವಾದ ಬೀಜದುಂಡೆಯನ್ನೊಳಗೊಂಡ ಗಣೇಶನನ್ನು ಇಟ್ಟು ಬಕೇಟ್ನಂತಹ ವಸ್ತುಗಳಲ್ಲಿ ನೀರನ್ನು ತುಂಬಿ ಅದರಲ್ಲಿ ವಿಸರ್ಜಿಸಬಹುದಾಗಿದೆ.  ಬಣ್ಣ ಬಳಿದ ದೊಡ್ಡ ಗಣೇಶ ವಿಗ್ರಹವನ್ನು ಕೆರೆಗಳಲ್ಲಿ ವಿಸರ್ಜಿಸುವುದನ್ನು ನಿಯಂತ್ರಿಸಬೇಕು. ಕೆರೆಯಲ್ಲೇ ವಿಗ್ರಹವನ್ನು ವಿಸರ್ಜಿಸುವುದು  ಅನಿವಾರ್ಯವಾದಾಗ, ವಿಗ್ರಹದ ಅಲಂಕಾರಿಕ ವಸ್ತುಗಳು ಮತ್ತು ಹೂವು ಇತ್ಯಾದಿಗಳನ್ನು ತೆಗೆದು, ಕೆರೆಯ ದಡಗಳಲ್ಲಿ ಹಾಕಿಬೇಕಾಗಿದೆ. ಇಲ್ಲದಿದ್ದರೆ ಈ ವಸ್ತುಗಳು ಕೆರೆಯನ್ನು ಮಾಲಿನ್ಯಗೊಳಿಸುವುದಲ್ಲದೇ, ನೀರಿನಲ್ಲಿ ತೇಲುವ ಮೂಲಕ ಕೆರೆಯ ಸೌಂದರ್ಯವನ್ನು ಹಾಳು ಮಾಡುತ್ತವೆ  ಹಾಗೂ ಜಲಚರಗಳ ಪ್ರಾಣಕ್ಕೆ ಸಂಚಕಾರವನ್ನುಂಟು ಮಾಡಿದಂತಾಗುತ್ತದೆ. ಗಣೇಶೋತ್ಸವದಲ್ಲಿ ಧ್ವನಿ ವರ್ಧಕಗಳ ಬಳಕೆಯನ್ನು ಕಡಿಮೆ ಮಾಡಬಹುದು ಅಥವಾ ಬೇರಿಯವರಿಗೆ ತೊಂದರೆಯಾಗದಂತೆ ನಿಯಮಿತವಾಗಿ ನಿರ್ವಹಣೆ ಮಾಡಬಹುದು. ದೊಡ್ಡ ಗಣೇಶ ವಿಗ್ರಹವನ್ನು ಹಾಗೇ ಉಳಿಸಿಕೊಂಡು ಸಣ್ಣ ವಿಗ್ರಹವನ್ನು ಅದರ ಪ್ರತಿನಿಧಿಯಾಗಿ ವಿಸರ್ಜಿಸಬಹುದು. ಇದರಿಂದ ದೊಡ್ಡ ವಿಗ್ರಹವನ್ನು ಹಲವು ವರ್ಷಗಳ ಕಾಲ ಬಳಸಬಹುದು. ಪರಿಸರಕ್ಕೆ ಪೂರಕವಾಗಿರುವಂತೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಮಾಡಲು ಮೇಲಿನ ಸಲಹೆಗಳನ್ನು ಪಾಲಿಸಬಹುದು ಮತ್ತು ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನು ರಕ್ಷಿಸಲು ನಿಮ್ಮ ಕೊಡುಗೆಯನ್ನು ನೀಡಬಹುದಾಗಿದೆ. ನೈಸರ್ಗಿಕ ಸಂಪನ್ಮೂಲಗಳು ದೇವರು ನಮಗೆ ನೀಡಿರುವ ಕೊಡುಗೆ. ಅದನ್ನು ಮುಂದಿನ ಜನಾಂಗಕ್ಕೆ ಉಳಿಸುವುದು ನಮ್ಮ ನಿಮ್ಮೆಲ್ಲರ ಜವಬ್ದಾರಿಯಾಗಿದೆ. ಆದ್ದರಿಂದ ಪರಿಸರ ಸ್ನೇಹಿ ಗಣಪತಿ ಹಬ್ಬವನ್ನು ಮಾಡೋಣ, ಸಂಭ್ರಮಿಸೋಣ, ಒಮ್ಮೆ ನೀವೇ ಆಲೋಚಿಸಿ.

ಮೈತ್ರಿ ಸರ್ಕಾರದ‌ ದಂಧೆಯಲ್ಲಿ ಕಾಂಗ್ರೆಸ್‌ ಸಚಿವರು ಭಾಗಿಯಾಗಿಲ್ಲ : ಪರಂ

Publicstory/prajayoga

ತುಮಕೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಮೀಷನ್ ದಂಧೆ ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್ ಸಚಿವರ್ಯಾರೂ ಕಮೀಷನ್ ದಂಧೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ ದಿ. ಸೂಲಗಿತ್ತಿ ನರಸಮ್ಮನವರ 102 ನೇ ಜಯಂತ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಪರ್ಸಂಟೆಜ್ ದಂಧೆ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಬಗ್ಗೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಈಗ ಹೇಳಿದ್ದರೆ ಯಾವ ಸಚಿವಾಲಯದಲ್ಲಿ, ಯಾವ ಸಚಿವರು ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕಿದೆ. ಏಕೆಂದರೆ  ಮುಖ್ಯಮಂತ್ರಿಯಾಗಿದ್ದವರು ಅವರು. ಹಾಗಾಗಿ ಜವಾಬ್ದಾರಿಯಿಂದ ಈ ಹೇಳಿಕೆ ನೀಡಿದ್ದಾರೆ ಎಂದೆನಿಸುತ್ತದೆ. ಆದರೆ, ನಮ್ಮ ಕಾಂಗ್ರೆಸ್ನ ಸಚಿವರು ಯಾರೂ ಸಹ ಈ ಪರ್ಸಂಟೆಜ್ ದಂಧೆಯಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ಮಾಡಲು ಸರ್ಕಾರದ ಸೂಚನೆ ಇರಬಹುದು

ತುಮಕೂರು: ವಿವಿಯಲ್ಲಿ ರಾಜಕೀಯ ಒತ್ತಡದಿಂದ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ಮಾಡಲು ಸಿಂಡಿಕೇಟ್ ಸಭೆ ಮುಂದಾಗಿರಬಹುದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿಪರಮೇಶ್ವರ್ ತಿಳಿಸಿದರು.

ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ ದಿ. ಸೂಲಗಿತ್ತಿ ನರಸಮ್ಮನವರ 102 ನೇ ಜಯಂತ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಏಕಾಏಕಿ ಕುಲಪತಿಗಳು, ಕುಲಸಚಿವರು, ವಿವಿ ಸಿಂಡಿಕೇಟ್ ಸದಸ್ಯರುಗಳು  ಈ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ವಿವಿಯಲ್ಲಿ ವೀರ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ಮಾಡಲು ವಿವಿ ಸಿಂಡಿಕೇಟ್ ಸಭೆ ಒಪ್ಪಿಗೆ ಸೂಚಿಸಿದೆ. ಆದರೆ, ತುಮಕೂರು ವಿವಿಯನ್ನು ಇದುವರೆಗೆ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ ಎಂದು ಹೇಳಿದರು.

ನನ್ನ ಪ್ರಯತ್ನದಿಂದ ವಿಶ್ವವಿದ್ಯಾನಿಲಯವನ್ನು ಸ್ಥಾಪನೆಯಾಯಿತು. ಆದರೆ ಇದುವರೆಗೂ ಹೊಸ ಕ್ಯಾಂಪಸ್ಗೆ ಹೋಗಲು ಸಾಧ್ಯವಾಗಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ಅನುದಾನ ಬಿಡುಗಡೆ ಮಾಡಿ ಆದಷ್ಟು ಬೇಗ ಹೊಸ ಕ್ಯಾಂಪಸ್ಗೆ ತುಮಕೂರು ವಿವಿ ಸ್ಥಳಾಂತರವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಡಿಜೆಗೆ ಆಸ್ಪದವಿಲ್ಲ- ಕಾನೂನು ಪರಿಪಾಲನೆಯೇ ಮುಖ್ಯ : ಎಸ್ಪಿ

0

Publicstory/prajayoga

ತುಮಕೂರು: ಗಣಪತಿ ಪೆಂಡಾಲ್ ನಲ್ಲಿ ಯಾವುದೇ ರೀತಿಯ ಡಿಜೆ ಬಳಸುವಂತಿಲ್ಲ ಹಾಗೂ ಫ್ಲೆಕ್ಸ್ ಬಳಸುವಂತಿದ್ದರೆ ಕಾರ್ಪೊರೇಶನ್ ಅವರ ಅನುಮತಿ‌ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರವಾಡ್ ತಿಳಿಸಿದರು.

ನಗರದ ಚಿಲುಮೆ ಪೊಲೀಸ್ ಸಮುದಾಯದ ಭವನದಲ್ಲಿ ಏರ್ಪಡಿಸಿದ್ದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ ಹಾಗೂ ಪೆಂಡಾಲ್ ಆಯೋಜಕರು, ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾನೂನು ಪರಿಪಾಲನೆಯೇ ಮುಖ್ಯ. ಫ್ಲೆಕ್ಸ್ ಹಾಕಿದವರು ಜವಾಬ್ದಾರಿ ಹೊರಬೇಕು. ಯಾಕೆಂದರೆ ಎರಡು ಗುಂಪುಗಳ ನಡುವೆ ಜಗಳಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹಬ್ಬ ಶಾಂತಿಯುತವಾಗಿ ನೆರವೇರಬೇಕು. ಈ ಎಲ್ಲಾ ನಿಬಂಧನೆಗಳಿಗೆ ಸಂವಾದದಲ್ಲಿ ಸಾರ್ವಜನಿಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯ ಅಡಚಣೆ ಇರುವುದಿಲ್ಲ‌. ಗಣೇಶ ಮೂರ್ತಿಯನ್ನು  ಪ್ರತಿಷ್ಟಾಪನೆ ಮಾಡುವ ಮುಖಂಡರವರನ್ನ  ಕರೆಸಿ , ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಡೆಸಿದ ಶಾಂತಿ ಸಭೆ ಯಶಸ್ವಿಯಾಯಿತು. ಗಣಪತಿ ಕೂರಿಸಲು  ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದ್ದೇವೆ ಎಂದರು.

ಈ ಸಭೆಯಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಎಸ್ಪಿ ಉದೇಶ್ ಟಿಜೆ, ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಬೆಸ್ಕಾಂ ಅಧಿಕಾರಿಗಳು, ಅಗ್ನಿಶಾಮಕ ಠಾಣೆಯ ಮುಖ್ಯಸ್ಥರು, ನಗರ ಡಿಎಸ್ಪಿ ಶ್ರೀನಿವಾಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು : ಶಾಸಕ ಡಾ.ರಂಗನಾಥ್ 

Publicstory/prajayoga

-ವರದಿ, ರಂಗನಾಥ್ ಕೆ.ಆರ್. ಕುಣಿಗಲ್

ಕುಣಿಗಲ್ : ಯುವ ವಿದ್ಯಾರ್ಥಿಗಳ ಉತ್ತಮ ಆರೋಗ್ಯ, ದೈಹಿಕ ಬೆಳವಣಿಗೆಗೆ, ಕ್ರೀಡೆ ಅತ್ಯ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ, ಖುಷಿಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು.

ಶನಿವಾರ ಅಮೃತೂರು, ಹೊಸಕೆರೆ ಟಿ.ಮಠ ಸರ್ಕಾರಿ ಪದವಿ ಪೂರ್ವ ಕಾಲೇಜು, ಜ್ಞಾನಭಾರತಿ, ಎಡಿಯೂರು ಸಿದ್ದಲಿಂಗೇಶ್ವರ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಜ್ಞಾನ ಭಾರತಿ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಿದ್ದ 20222-23 ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಉಪನ್ಯಾಸಕರು ಹಾಗೂ ಪೋಷಕರು ಉತ್ತೇಜನ ನೀಡಬೇಕು. ಮಕ್ಕಳಿಗೆ ಆಸಕ್ತಿ ಇರುವ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಹೇಳಿದರು.

ಈ ಹಿಂದೆ ವಾಹನಗಳ ಸೌಲಭ್ಯವಿಲ್ಲದೆ ಗ್ರಾಮೀಣ ಪ್ರದೇಶದ ಮಕ್ಕಳು ಹತ್ತಾರು ಕಿ.ಮೀ ದೂರ ನಡೆದು ವಿದ್ಯಾಭ್ಯಾಸ ಮಾಡಬೇಕಾಗಿತ್ತು. ಆದರೆ ಈ ಪರಿಸ್ಥಿತಿ ಈಗ ಇಲ್ಲ. ಎಲ್ಲಾ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಓದುವುದರ ಜತೆಗೆ ಕ್ರೀಡೆಯನ್ನು ಮೈಗೂಡಿಸಿಕೊಂಡು, ಉತ್ತಮ ತರಬೇತಿ ಪಡೆದು ಉತ್ತಮ ಕ್ರೀಡಾ ಪಟುಗಳು ಆಗುವ ಜತೆಗೆ ಶಿಸ್ತು, ಸಂಯಮ ಪರಿಪಾಲನೆಗೆ ಹೆಚ್ಚು ಒತ್ತು ನೀಡಬೇಕು. ಕಷ್ಟ ಏನೆಂಬುದನ್ನು ಅರಿತುಕೊಳ್ಳಬೇಕು. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ತಂದೆ, ತಾಯಂದಿರಿಗೆ ಮೋಸ ಮಾಡಬಾರದು. ಅವರ ಕನಸ್ಸನ್ನು ನನಸ್ಸಾಗಿ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಶಾಸಕರು ಸಲಹೆ ನೀಡಿದರು.

ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಪಟುಗಳು ತನ್ನದೆಯಾದ ಸಾಧನೆ ಮಾಡಿದ್ದಾರೆ, ಕ್ರಿಕೆಟ್, ಹಾಕಿ, ಅಥ್ಲೆಟೆಕ್ಸ್, ಬಾಕ್ಸಿಂಗ್, ಕಬ್ಬಡಿ ಸೇರಿದಂತೆ ಇನ್ನೂ ಹಲವಾರು  ಕ್ರೀಡೆಯಲ್ಲಿ ಸಾಧನೆ ಮಾಡಿರುವ ಕ್ರೀಡಾ ಪಟುಗಳ ಸಾಧನೆಯನ್ನು ವಿದ್ಯಾರ್ಥಿಗಳು ಅನುಸಿರಿಸಿ ಅವರಂತೆ ಉತ್ತಮ ಕ್ರೀಡಾಪಟುಗಳಾಗಿ ರಾಜ್ಯಕ್ಕೆ ಒಳ್ಳೆಯ ಹೆಸರು ತರಬೇಕೆಂದು ತಿಳಿಸಿದರು.

ತಹಶೀಲ್ದಾರ್ ಮಹಬಲೇಶ್ವರ ಮಾತನಾಡಿ, ಇತ್ತೀಚಿಗೆ ಸರ್ಕಾರ ಆದೇಶ ಒಂದನ್ನು ಹೊರಡಿಸಿ ಉದ್ಯೋಗದಲ್ಲಿ ಕ್ರೀಡಾ ಪಟುಗಳಿಗೆ ಶೇ 2ರಷ್ಟು ಮೀಸಲಿಟ್ಟಿದೆ. ಹಾಗಾಗಿ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಪಟುಗಳಾಗಿ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪದಕ ಪಡೆದು ತಾಲೂಕಿಗೆ ಕೀರ್ತಿ ತರಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಜಿ.ಆರ್.ರಮೇಶ್, ಪುರಸಭಾ ಅಧ್ಯಕ್ಷ  ರಂಗಸ್ವಾಮಿ, ಗ್ರಾ.ಪಂ ಅಧ್ಯಕ್ಷ  ಎಡಿಯೂರು ದೀಪು, ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ರಾಜಣ್ಣ(ನಂಜುಡಯ್ಯ), ಕಾರ್ಯದರ್ಶಿ ಹುಚ್ಚೇಗೌಡ, ಕಾಲೇಜು ಪ್ರಾಚಾರ್ಯರಾದ ಡಾ.ಕಪನಿಪಾಳ್ಯರಮೇಶ್, ಗೋವಿಂದೇಗೌಡ, ಗೋಪಾಲ್ಮರಕಾಲ್, ಕೆ.ಆರ್.ಗೋವಿಂದರಾಜು, ಕೆ.ಪ್ರಭಾಕರ್ರೆಡ್ಡಿ, ಸಿ.ಸಿ.ಶಿವಣ್ಣ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗೋಪಾಲಕೃಷ್ಣ  ಮತ್ತಿತರರು ಭಾಗವಹಿಸಿದರು.

ಸಿದ್ದರಾಮೇಶ್ವರ ಸಹಕಾರ ಬ್ಯಾಂಕ್ ಕಚೇರಿ ಉದ್ಘಾಟನೆ

Publicstory/prajayoga

ಗುಬ್ಬಿ: ತಾಲೂಕಿನ ನಿಟ್ಟೂರು ಗ್ರಾಮದ ಮೈಸೂರು ರಸ್ತೆಯಲ್ಲಿ ನವೀಕರಣಗೊಂಡ ಶ್ರೀ ಸಿದ್ದರಾಮೇಶ್ವರ ಸಹಕಾರ ಬ್ಯಾಂಕ್ ಕಚೇರಿಯನ್ನು ಬ್ಯಾಂಕ್ ಅಧ್ಯಕ್ಷ ಜಿ.ಎಸ್.ರವಿಶಂಕರ್ ಉದ್ಘಾಟಿಸಿದರು.

ಗ್ರಾಮೀಣ ಭಾಗದಲ್ಲಿ ರೈತರ ನೆರವಿಗೆ ನಿಂತ ಈ ಸಿದ್ದರಾಮೇಶ್ವರ ಬ್ಯಾಂಕ್ ಹಲವು ವರ್ಷದಿಂದ ವಹಿವಾಟು ನಡೆಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಈ ಬ್ಯಾಂಕ್ ಗುರುತಿಸಿಕೊಂಡು ಬೆಳೆದಿದೆ ಎಂದು ಅಧ್ಯಕ್ಷ ಜಿ.ಎಸ್.ರವಿಶಂಕರ್ ಹೇಳಿದರು.

ವ್ಯಾಪಾರಿ ಕೇಂದ್ರವಾದ ನಿಟ್ಟೂರು ಹೋಬಳಿಯಲ್ಲದೇ ತಾಲೂಕಿನ ಪ್ರಮುಖ ಸಹಕಾರ ಬ್ಯಾಂಕ್ ಎನಿಸಿಕೊಂಡು ಶಾಖೆಗೆ ನವೀಕರಿಸಿದ ಕಚೇರಿ ಸಿದ್ಧಪಡಿಸಿ ಗ್ರಾಹಕರ ಬಳಕೆಗೆ ಲೋಕಾರ್ಪಣೆ ಮಾಡಲಾಗಿದೆ. ರೈತರ ಸಹಕಾರಕ್ಕೆ ಬೆನ್ನಲುಬಾಗಿ ಗ್ರಾಹಕರ ಅನುಕೂಲಕ್ಕೆ ತಕ್ಕನಾದ ಸಾಲ ಸೌಲಭ್ಯ ಸಹ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಜೆ.ಎಂ.ಸುರೇಶ್ ಹಾಗೂ ಕಾರ್ಯಕಾರಿಣಿ ಮಂಡಳಿ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು.

ಹಣ ಲಪಟಾಯಿಸಿದ್ದ ಖದೀಮರು ಅಂದರ್ : ಪ್ರಶಂಸೆಗೆ ಪಾತ್ರವಾದ ಗುಬ್ಬಿ ಪೊಲೀಸರು

0

Publicstory/prajayoga

ವರದಿ, ದೇವರಾಜು.ಎಂ.ಎಸ್

ಗುಬ್ಬಿ: ನೂರು ರೂ ಮುಖಬೆಲೆಯ ಹಳೇ ನೋಟುಗಳನ್ನು ಎರಡು ಪಟ್ಟು ನೀಡುವ ಆಸೆ ತೋರಿಸಿ ಮಹಿಳೆಗೆ ವಂಚಿಸಿ 9.60 ಲಕ್ಷ  ರೂಗಳನ್ನು ಲಪಟಾಯಿಸಿದ್ದ ಐದು ಜನರ ಖದೀಮರ ತಂಡವನ್ನು  ಬಂಧಿಸಿದ ರೋಚಕ ಘಟನೆ ಗುಬ್ಬಿ  ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ತುರುವೇಕೆರೆ ತಾಲೂಕು ಸಂಪಿಗೆ ಹೊಸಹಳ್ಳಿ ವಾಸಿ ಮುತ್ತುರಾಜ್, ಬಾಣಸಂದ್ರ ಮೂಲದ ಪುನೀತ್, ತಿಪಟೂರು ನಿವಾಸಿ ವಸಂತಕುಮಾರ್, ಬಾಣಾವರದ ಮಹೇಶ್ ಹಾಗೂ ತುಮಕೂರು ಯಲ್ಲಾಪುರ ಗಂಗಾಧರ್ ಬಂಧಿತ ಆರೋಪಿಗಳು. ಬೆಂಗಳೂರು ನಿವಾಸಿ ವಿಜಯಲಕ್ಷ್ಮೀ ವಂಚನೆಗೆ ಒಳಗಾದ ಮಹಿಳೆ.

ಹಣದಾಸೆಗೆ ಬಲಿಯಾಗಿ 9.60 ಲಕ್ಷ ರೂಗಳನ್ನು ಖದೀಮರ ನೀಡಿದ್ದ  ವಿಜಯಲಕ್ಷ್ಮೀ ಅವರಿಗೆ ಹಳೇ ನೂರು ರೂಗಳ ನೋಟುಗಳು ನಮ್ಮ ಬಳಿ ಇವೆ. ಡಬ್ಬಲಿಂಗ್ ಮಾಡಿ ಲಕ್ಷಕ್ಕೆ ಎರಡು ಲಕ್ಷ ನೀಡುವ ಆಸೆ ಹುಟ್ಟಿಸಿದ್ದರು. ಆಶ್ರಮದಲ್ಲಿ ಹುಂಡಿ ಹಣವಿದೆ. ಎಲ್ಲವೂ ಹಳೇ ನೂರು ರೂಗಳ ನೋಟುಗಳು. ಅವುಗಳನ್ನು 50 ರಷ್ಟು ರಿಯಾಯಿತಿಯಲ್ಲಿ ನೀಡುವುದಾಗಿ ನಂಬಿಸಿದ್ದ ಖದೀಮರು 1800 ರೂಗಳು ಆರಂಭದಲ್ಲಿ ನೀಡಿ ಆಸೆಗೆ ನೀರೆರೆದು ನಂಬಿಕೆ ಬಲ ಪಡಿಸಿಕೊಂಡರು. ಜಾಣ್ಮೆ  ತೋರಿದ್ದ ವಂಚಕರ ತಂಡ ಕಡಬ ನಿಟ್ಟೂರು ರಸ್ತೆಯಲ್ಲಿ ಬಂದು ಹಣ ಪಡೆಯಲು ಹೇಳಿದ್ದರು.

ಕಡಬ ನಿಟ್ಟೂರು ಮಧ್ಯೆ ನಲ್ಲಿಗೆರೆ ಶಿರಾ ರಾಜ್ಯ ಹೆದ್ದಾರಿಯಲ್ಲೇ ವ್ಯವಹಾರ ಕುದಿರಿಸುವ ಎಂದು ಮಹಿಳೆಯನ್ನು ಕರೆದಿದ್ದರು. ತನ್ನ ಚಿನ್ನಾಭರಣವನ್ನು ಅಡವಿಟ್ಟು 9.60 ಲಕ್ಷ ರೂಗಳನ್ನು ಹೊಂದಿಸಿಕೊಂಡು ಸ್ಥಳಕ್ಕೆ ಬಂದ ಮಹಿಳೆಯ ಬೀಗ ಹಾಕಿದ್ದ ಕಪ್ಪು ಬಣ್ಣದ ಬ್ಯಾಗ್ ನೀಡಿ  ರಸ್ತೆಯಲ್ಲಿ ಹಣ ಎಣಿಕೆಬೇಡ, ಮನೆಗೆ ತೆರಳಿ ನೋಡಲು ಹೇಳಿ  ಸ್ಥಳದಿಂದ ಕಾಲ್ಕಿತ್ತರು. ಕುತೂಹಲ ತಾಳದೆ ಕೀ ಇಲ್ಲದ ಬೀಗ ಹಾಕಿದ್ದ ಬ್ಯಾಗ್ ಹರಿದು ನೋಡಿದ ಮಹಿಳೆಗೆ ಬಿಳಿ ಬಣ್ಣದ ಕಾಗದದ ಕಂತೆ ಕಂಡಿತ್ತು. ಶಾಕ್ ಗೆ ಒಳಗಾದ ಮಹಿಳೆ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದರು.

ವಂಚನೆಯ ಪ್ರಕರಣ ಬೆನ್ನತ್ತಿದ್ದ ಗುಬ್ಬಿ ಪಿಎಸೈ ಮುತ್ತುರಾಜ್ ನೇತೃತ್ವದ ತಂಡ ಸಿಪಿಐ ನದಾಫ್ ಮಾರ್ಗದರ್ಶನದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ 5.58 ಲಕ್ಷ ರೂಗಳನ್ನು ಮಹಿಳೆಗೆ ಹಿಂದಿರುಗಿಸಿದರು. ಪ್ರಕರಣ ಭೇದಿಸಿದ ತಂಡದಲ್ಲಿ ಸಿಬ್ಬಂದಿಗಳಾದ ಪಾತರಾಜ್, ಮಧು, ನವೀನ್ ಗೌಡ, ಮಧುಸೂದನ್, ರಂಗನಾಥ್, ದೇವರಾಜ್ ಇದ್ದರು.

ಕಲೋತ್ಸವದಲ್ಲಿ ಮಿಂದೆದ್ದ ಮಕ್ಕಳು

Publicstory


ತುರುವೇಕೆರೆ: ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗು ಬಸವೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ ಹುಲ್ಲೇಕೆರೆ ಇವುಗಳ ವತಿಯಿಂದ 2022-23ನೇ ಸಾಲಿನ ದಂಡಿನಶಿವರ ಹೋಬಳಿ ಮಟ್ಟದ ಪ್ರತಿಭಾಕಾರಂಜಿ-ಕಲೋತ್ಸವ ಕಾರ್ಯಕ್ರಮವು ಶುಕ್ರವಾರ ಜರುಗಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಬ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಕಲೋತ್ಸವ ಉತ್ತಮ ವೇದಿಕೆಯಾಗಿದೆ.

ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸಿ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳ ಬೇಕು. ಇದಕ್ಕೆ ಪ್ರತಿಭಾ ಕಾರಂಜಿ ಪೂರಕವಾಗಿ ಕೆಲಸ ಮಾಡಬೇಕು. ಕಲೋತ್ಸವದಲ್ಲಿ ಸ್ಪಧರ್ಿಸುವ ಮಕ್ಕಳಲ್ಲಿ ಪ್ರತಿಭಾವಂತ ಮತ್ತು ಸೃಜನಶೀಲ ಮಕ್ಕಳನ್ನು ಹುಡುಕಾಟ ನಡೆಸುವ ಕೆಲಸವಾಗ ಬೇಕೆ ವಿನಹ ಪಕ್ಷಪಾತ ಸಲ್ಲದು ಎಂದರು.

ಇಸಿಒ ಸಿದ್ದಪ್ಪ ಮಾತನಾಡಿ, ತಾಲ್ಲೂಕು ಮಟ್ಟಕ್ಕೆ ಕ್ರಿಯಾಶೀಲ ಮಕ್ಕಳನ್ನು ಆಯ್ಕೆ ಮಾಡಿ ಕಳುಹಿಸಿ ಇಲ್ಲಿ ಗೆದ್ದ ಮಕ್ಕಳ ಖಾತೆಗೆ ಹಣವನ್ನು ಬಹುಮಾನವಾಗಿ ಮಕ್ಕಳ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಹಿಸಲಾಗುವುದು ಹಾಗಾಗಿ ಶಿಕ್ಷಕರು ಮಕ್ಕಳ ಬ್ಯಾಂಕ್ ಖಾತೆ, ಆಧಾರ್ ನಂಬರ್ ಅನ್ನು ಕಡ್ಡಾಯವಾಗಿ ತರಬೇಕು ಎಂದರು.

ಛದ್ಮ ವೇಷ, ವೀರಗಾಸೆ ಕುಣಿತ, ಧ್ವಜಕುಣಿತ, ಸೋಮನ ಕುಣಿತ ಹಾಗು ಜಾನಪದ ನೃತ್ಯಗಳು ಪ್ರೇಕ್ಷಕರ ಗಮನ ಸೆಳೆಯಿತು. ತಮ್ಮ ಪಾತ್ರಗಳಿಗೆ ಮಕ್ಕಳೇ ಬಣ್ಣ ಹಚ್ಚಿ, ವೇಷ ಭೂಷಣ, ಆಭರಣ ತೊಟ್ಟು, ಖತ್ತಿ, ಗದೆ, ತ್ರಿಷೂಲ, ಬಿಲ್ಲು, ಬಾಣ ತಯಾರಿಸಿ ವೃತ್ತಿಪರ ಕಲಾವಿದರನ್ನೂ, ನೋಡುಗರನ್ನು ಹುಬ್ಬೇರುವಂತೆ ಮಾಡಿ ಜಾನಪದ ಉತ್ಸವದಂತೆ ಕಂಡು ಬಂದಿತು.
ಹೋಬಳಿ ಮಟ್ಟದಲ್ಲಿ ಆಯ್ಕೆಯಾದ ಮಕ್ಕಳನ್ನು ತಾಲ್ಲೂಕು ಮಟ್ಟಕ್ಕೆ ಕಳುಹಿಸಿಕೊಡಲಾಯಿತು.

ದಂಡಿನಶಿವರ ಹೋಬಳಿಯ 12 ಶಾಲೆಗಳ ಮಕ್ಕಳು, ಗ್ರಾಮಸ್ಥರು, ಪೋಷಕರು, ಕಲೋತ್ಸವದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ, ಹಾಲು ಸಿಹಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಎಸ್.ಎನ್.ಬಸವಯ್ಯ, ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಎನ್.ಮಹದೇವಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ ಸ್ವಾಮಿ ಎಚ್.ಬಿ, ಸದಸ್ಯ ಗಂಗಾಧರ ಸ್ವಾಮಿ, ಇಂಡಿಯನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷೆ ಗಂಗಾಮಣಿ ಮಹದೇವಯ್ಯ, ಸಹ ಕಾರ್ಯದರ್ಶಿ ಪ್ರಸನ್ನ ಕುಮಾರ್, ಮುಖಂಡ ಗಂಗಾಧರಯ್ಯ ಎಚ್.ಬಿ, ಬೋರೇಗೌಡ, ಸಿದ್ದು ಪಾಟೀಲ್, ಶಿಕ್ಷಕರುಗಳಾದ ಹಾ.ಪಂ.ಸೋಮಶೇಖರ್, ಬಿ.ಎಸ್.ಶಾಂತರಾಜು, ಜಿ.ಟಿ.ರಘು, ಗಂಗಣ್ಣ, ಪ್ರಕಾಶ್ ಮೂರ್ತಿ, ಬಸವರಾಜು, ಡಿ.ಬಿ.ಜಯಣ್ಣ ಸಿಬ್ಬಂದಿ ಭಾಗವಹಿಸಿದ್ದರು.