Saturday, March 14, 2026
Google search engine
Home Blog Page 73

ವಿಷಪೂರಿತ ಎಲೆ ತಿಂದು 11ಕುರಿಗಳ ಸಾವು ; 15 ಕುರಿಗಳು ಚಿಂತಾಜನಕ

Publicstory/prajayoga

ಬ್ರೇಕಿಂಗ್ ನ್ಯೂಸ್

ತುರುವೇಕೆರೆ: ವಿಷಪೂರಿತ ಸಸ್ಯದ ಎಲೆ ತಿಂದು ಸ್ಥಳದಲ್ಲೇ 11 ಕುರಿಗಳು ಮೃತಪಟ್ಟಿರುವ ಘಟನೆ ಪಟ್ಟಣದ ದೇವೇಗೌಡ ಬಡಾವಣೆಯಲ್ಲಿ ನಡೆದಿದೆ.

ಶಿರಾ ಮೂಲದ ಲೋಕೇಶ್ ಎಂಬುವರು ಪಟ್ಟಣದಲ್ಲಿ ಕುರಿ ಮಂದೆಯೊಂದಿಗೆ ಬೀಡು ಬಿಟ್ಟಿದ್ದರು. ಇಂದು ಬೆಳೆಗ್ಗೆ ಕುರಿಗಳನ್ನು ಮೇಯಿಸಲು ತೆರಳಿದ್ದರು. ಸಂಜೆ ಮಂದೆಯ ಕಡೆ ವಾಪಸ್ಸಾಗುವ ವೇಳೆ ಬೇಲಿಯಲ್ಲಿದ್ದ ಕಾಡು ಉರುಳಿ ಗಿಡದ ಎಲೆಗಳನ್ನು ಕುರಿಗಳು ತಿಂದಿವೆ. ತಕ್ಷಣದಲ್ಲೇ 11ಕುರಿಗಳು ನೆಲಕ್ಕುರುಳಿ ಸಾವನ್ನಪ್ಪಿದ್ದು,15 ಕ್ಕೂ ಹೆಚ್ಚು  ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಈ ಕುರಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪಶುವೈದ್ಯಾಧಿಕಾರಿ ಪುಟ್ಟರಾಜ ಹಾಗೂ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.

ಈ ವೇಳೆ ಮೃತಪಟ್ಟ ಕುರಿಗಳ ಮಾಲೀಕರಿಗೆ ಪರಿಹಾರ ನೀಡುವಂತೆ ಸಾರ್ವಜನಿಕರು ಅಗ್ರಹಿಸಿದರು.

ತುಮಕೂರು ವಿವಿಯಲ್ಲಿ ತಿಗಳ ಸಂಶೋಧನಾ ಕೇಂದ್ರ : ಸಿಎಂ ಭರವಸೆ

Publicstory/prajayoga

ತುಮಕೂರು: ತಿಗಳರ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹೆಚ್ಚಿನ ಅಧ್ಯಯನ ಕೈಗೊಳ್ಳಲು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಕೇಂದ್ರ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಶುಕ್ರವಾರ ನಡೆದ ‘ತಿಗಳ ಕ್ಷತ್ರಿಯರ ಜಾಗೃತಿ ಸಮಾವೇಶ ಮತ್ತು ಗುರುವಂದನಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಆರಾಧ್ಯದೈವ ಅಗ್ನಿಬನ್ನಿರಾಯ ಸ್ವಾಮಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತಿಗಳ ಸಮಾಜದ ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರಗಳಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ 4.45 ಕೋಟಿ ಅನುದಾನವನ್ನು ನೀಡಿ ಅವರ ಶೈಕ್ಷಣಿಕ ಸಾಧನೆಗೆ ಸಹಕರಿಸಲು ಸರ್ಕಾರ ಬದ್ಧವಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ  ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ  ಶಿಕ್ಷಣ, ಉದ್ಯೋಗ, ಸಬಲೀಕರಣಕ್ಕಾಗಿ ವಿಶೇಷ ಅನುದಾನವನ್ನು ನೀಡಿ ಅವರ ಅಭ್ಯುದಯಕ್ಕೆ ಸರ್ಕಾರ ಶ್ರಮಿಸುತ್ತಿದೆ.  ಕೃಷಿಯಾಧರಿತ ಕಸುಬುದಾರರಿಗೆ ವಿಶೇಷ ಘಟಕ ಯೋಜನೆಯಡಿ ಅನುದಾನವನ್ನು ನೀಡಲಾಗುತ್ತಿದ್ದು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಜತ ಕತ್ತಿಯನ್ನು ನೀಡಿ ಗೌರವಿಸಲಾಯಿತು. ತಿಗಳ ಸಮಾಜದ ಜ್ಞಾನನಂದಪುರಿ ಸ್ವಾಮಿಗಳಿಗೆ ಗುರುವಂದನೆಯನ್ನು ಸಲ್ಲಿಸಲಾಯಿತು. ಜತೆಗೆ ಲೇಖಕ ಸೂರ್ಯಪ್ರಕಾಶ್ ಬರೆದಿರುವ ಅಗ್ನಿಬನ್ನಿರಾಯ ಸ್ವಾಮಿಯ ಕುರಿತ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠಾಧೀಶರಾದ ಡಾ. ಸಿದ್ಧಲಿಂಗ ಮಹಾಸ್ವಾಮಿ, ವಿವಿಶ ಮಠಾಧೀಶರು ಹಾಗೂ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಸಂಸದ ಜಿ.ಎಸ್. ಬಸವರಾಜು, ವಿಧಾನ ಪರಿಷತ್ತು ಸದಸ್ಯರಾದ  ಸಿ.ಪಿ ಯೋಗೀಶ್ವರ್, ಪಿ.ಆರ್ ರಮೇಶ್, ಶಾಸಕರಾದ ಜ್ಯೋತಿಗಣೇಶ್, ಡಾ.ಸಿ ಎಂ ರಾಜೇಶ್ ಗೌಡ, ಮಸಾಲ ಜಯರಾಂ, ಮುರುಳಿಧರ್ ಹಾಲಪ್ಪ ಮುಂತಾದವರು ಹಾಜರಿದ್ದರು.

ನೋವಿಗೆ ಮಿಡಿಯುವ ಪೊಲೀಸ್ ವರಿಷ್ಠಾಧಿಕಾರಿ : ಫೋಟೋ ವೈರಲ್

0

Publicstory/prajayoga

ತುಮಕೂರು: ಶಿರಾ ರಸ್ತೆಯಲ್ಲಿ ಗುರುವಾರ ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವೀವ್ರವಾಗಿ ಗಾಯಗೊಂಡವರನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮುಂದಾಳತ್ವದಲ್ಲಿ ಸಾರ್ವಜನಿಕ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್‌ ಶಹಪುರವಾಡ್ ಗಾಯಗೊಂಡ ಮಗುವನ್ನು ಎತ್ತಿಕೊಂಡು ದುಃಖ ಪಡುತ್ತಿರುವ ದೃಶ್ಯ ಕಂಡು ಬಂತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುವ ಮೂಲಕ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ: ಡಾ.ಸಿ.ಎಂ.ರಾಜೇಶ್ ಗೌಡ

Publicstory/prajayoga

ನಗರದಲ್ಲಿ 50 ಸ್ವ ಸಹಾಯ ಸಂಘಗಳಿಗೆ ತಲಾ 1 ಲಕ್ಷ ರೂ. ಚೆಕ್ ವಿತರಣೆ

ಶಿರಾ: ಮಹಿಳೆಯರು ಒಂದು ಕುಟುಂಬದ ಸಂಪೂರ್ಣ ನಿರ್ವಹಣೆ ಮಾಡುವಲ್ಲಿ  ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾರೆ. ಮಹಿಳೆಯರ ಸ್ಥಾನ ಸಮಾಜದಲ್ಲಿ ಪ್ರಮುಖ. ಅವರ ಸಬಲೀಕರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಸದುಪಯೋಗವಾಗಲಿ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ನಗರದ ಎಚ್‌ಎಂಆರ್ ಪ್ಯಾಲೇಸ್‌ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸ್ವಸಹಾಯ ಸಂಘಗಳಿಗೆ ಭೀಜಧನ ಚೆಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸುಮಾರು 50 ಸ್ವಸಹಾಯ ಸಂಘಗಳಿಗೆ ತಲಾ 1 ಲಕ್ಷದ ಚೆಕ್ ವಿತರಿಸಿ ಮಾತನಾಡಿದರು.

ಮಹಿಳೆಯರು ಸಮಾಜದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಮಂಚೂಣಿಗೆ ಬರಬೇಕು ಎಂಬ ಉದ್ದೇಶದಿಂದ ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ತಹಶಿಲ್ದಾರ್ ಮಮತಾ ಅವರು ಮಾತನಾಡಿ, ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪಡೆಯುವ ಸಾಲ ಸೌಲಭ್ಯಗಳನ್ನು ಪುರುಷರು ದುರ್ಬಳಕೆ ಮಾಡಿಕೊಂಡು. ಮಧ್ಯಪಾನ ಸೇರಿದಂತೆ ಇತರೆ ವೆಚ್ಚಗಳಿಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಬರುತ್ತಿದೆ. ಮಹಿಳೆಯರು ಈ ರೀತಿಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಮಾರುತೀಶ್, ತಾವರೆಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವು ಚಂಗಾವರ ಸೇರಿದಂತೆ ಹಲವರು ಹಾಜರಿದ್ದರು.

ಅಲ್ಪಸಂಖ್ಯಾತ ಮತಗಳು ಛಿದ್ರವಾಗದಂತೆ ಎಚ್ಚರಿಕೆ ವಹಿಸಬೇಕು: ಮುತಬೀರ್ ಅಹಮದ್

Publicstory/prajayoga

ತುಮಕೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಮುಂಬರುವ ವಿಧಾನಸಭೆ, ಸ್ಥಳೀಯ ಸಂಸ್ಥೆ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ನೇತೃತ್ವದಲ್ಲಿ ಬ್ಲಾಕ್ ಅಧ್ಯಕ್ಷರು, ತಾಲೂಕು ಅಧ್ಯಕ್ಷರುಗಳ ಸಭೆ ನಡೆಯಿತು.

ಈ ವೇಳೆ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಮುತಬೀರ್ ಅಹಮದ್ ಖಾನ್ ಮಾತನಾಡಿ, ಇಂದಿನ ವಿದ್ಯಮಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಮತಗಳು ಎಷ್ಟು ಮುಖ್ಯವೋ, ಅದೇ ರೀತಿ ನೆಮ್ಮದಿ ಮತ್ತು ಶಾಂತಿ ಜೀವನಕ್ಕೆ ಮುಖ್ಯ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇದೆ. ಹಾಗಾಗಿ ಈ ಹಿಂದಿನ ಚುನಾವಣೆಗಳಲ್ಲಿ ಆದಂತೆ ಅಲಸಂಖ್ಯಾತರ ಮತಗಳು ಛಿದ್ರವಾಗದಂತೆ ಎಚ್ಚರಿಕೆ ವಹಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬಹುದು. ಆ ಮೂಲಕ ಅಲ್ಪಸಂಖ್ಯಾತರು ಸಹ ರಾಜಕೀಯ ಸ್ಥಾನ ಮಾನಗಳನ್ನು ಪಡೆಯುಬಹುದಾಗಿದೆ ಎಂದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 3000 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಿದ್ದರು. ಇದರ ಫಲವಾಗಿ ಹಲವಾರು ಹೊಸ ಯೋಜನೆಗಳ ಮೂಲಕ ಶೈಕ್ಷಣಿಕ, ಅರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಯಿತು. ಆದರೆ ಬಿಜೆಪಿ ಸರ್ಕಾರದಲ್ಲಿ ಅನುದಾನವನ್ನು 800 ಕೋಟಿ ರೂಗಳಿಗೆ ಕಡಿತ ಮಾಡಿದಲ್ಲದೆ, ಅದನ್ನು ಸಹ ಸರಿಯಾಗಿ ನೀಡದೆ, ಹಲವಾರು ಯೋಜನೆಗಳು ಸ್ಥಗೀತಗೊಂಡವು. ಇದರ ಫಲವಾಗಿ ಶೈಕ್ಷಣಿಕ ಸಾಲ ಸೌಲಭ್ಯ ಕೆ.ಎಂ.ಡಿ.ಸಿ.ಯಿಂದಾಗಲಿ, ಕೇಂದ್ರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ದೊರೆಯದೆ ಹಲವಾರು ವಿದ್ಯಾರ್ಥಿಗಳು ಶುಲ್ಕ ಕಟ್ಟಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು. ಹಾಗಾಗಿ ನಮ್ಮ ಏಳಿಗೆಗೆ ಶ್ರಮಿಸುವ, ನಮ್ಮ ಬಗ್ಗೆ ಕಾಳಜಿ ಇರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಎಲ್ಲಾ ಅಲ್ಪಸಂಖ್ಯಾತ ಬಂಧುಗಳನ್ನು ಮನವೊಲಿಸುವ ಕೆಲಸ ಮಾಡಬೇಕಾಗಿದೆ ಎಂದು ಮುತಬೀರ್ ಅಹಮದ್ ಖಾನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನಕಾರ್ಯದರ್ಶಿ ಇರ್ಷಾದ್ ಅಹಮದ್, ರಾಜ್ಯ ಕಾರ್ಯದರ್ಶಿಗಳಾದ  ಸಜ್ಜಾದ್ ಅಹಮದ್,ಸಾಧಿಕ್ ಅಹಮದ್, ಉಪಾಧ್ಯಕ್ಷರಾದ ರಫಿವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.  

“ಹೊಸದುರ್ಗ ಪ್ರದೇಶದ ಪಾಳೆಯಗಾರರು” ಕೃತಿ ಲೋಕಾರ್ಪಣೆ

Publicstory/prajayoga

ತುಮಕೂರು : ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅರುಣೋದಯ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮತ್ತು ಗುರುಸಿದ್ಧರಾಮೇಶ್ವರ ಸಾಹಿತ್ಯ ಸಂಪದ ಸಹಯೋಗದೊಂದಿಗೆ ಆಗಸ್ಟ್ 27ನೇ ಶನಿವಾರ ಬೆಳಿಗ್ಗೆ 10.30ಕ್ಕೆ ಅಮಾನಿಕೆರೆ ಮುಂಭಾಗದ ಕನ್ನಡ ಭವನದಲ್ಲಿ ಡಾ.ದಿನೇಶ್ ಕುಮಾರ್.ಪಿ.ಎನ್. ಅವರ “ಹೊಸದುರ್ಗ ಪ್ರದೇಶದ ಪಾಳೇಯಗಾರರು” ಕೃತಿ ಲೋಕಾರ್ಪಣೆಗೊಳ್ಳಲಿದೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮವನ್ನು ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯನವರು ಉದ್ಘಾಟಿಸಲಿದ್ದು, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎಂ.ವೆಂಕಟೇಶ್ವರಲು ಉಪಸ್ಥಿತಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ರಾಎಸ್.ಸಿದ್ಧಲಿಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಕೃತಿ ಲೋಕಾರ್ಪಣೆಯನ್ನು ತುಮಕೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ನಿರ್ಮಲ್ರಾಜ್ ಮಾಡಲಿದ್ದು, ಕೃತಿ ಕುರಿತು ಸಿದ್ಧಗಂಗಾ ಪದವಿ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ ಮತ್ತು    ತುಮಕೂರು ವಿ.ವಿ.ಯ ಇತಿಹಾಸ ವಿಭಾಗದ ಪ್ರೊ.ಎಲ್.ಪಿ.ರಾಜು ಮಾತನಾಡಲಿದ್ದಾರೆ.

ಈ ಸಂದರ್ಭದಲ್ಲಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಿಯಾ ಠಾಕೂರ್ ಅವರನ್ನು ಸನ್ಮಾನಿಸಲಿದ್ದು, ಲೇಖಕರಾದ ಡಾ.ದಿನೇಶ್ಕುಮಾರ್ ಉಪಸ್ಥಿತಿಯಿರುವರು.
ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ್, ಎಸ್.ಹೊಸಮನಿ, ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯ ಸಹಾಯಕ ಅಭಿಯೋಗ ನಿರ್ದೇಶಕರ ಜಿ.ಬಸವರಾಜು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರ ದೊಡ್ಡಮನೆ ಗೋಪಾಲಗೌಡರು, ಪ್ರಾಧ್ಯಾಪಕರಾದ ಡಾ.ಓ.ನಾಗರಾಜು, ಡಾ.ಶಿವನಂಜಯ್ಯ, ಆಯುರ್ವೇದ ವೈದ್ಯರಾದ ಡಾ.ಬಿ.ನಂಜುಂಡಸ್ವಾಮಿ ಸೇರಿದಂತೆ ಹಲವರು ಇರಲಿದ್ದಾರೆ.

ಆ.28ರಂದು ಬೃಹತ್ ಉದ್ಯೋಗ ಮೇಳ : ಮಲ್ಲಿಕಾರ್ಜುನಯ್ಯ

Publicstory/prajayoga

ತುಮಕೂರು: ಜೋತಿಗಣೇಶ್ ಅಭಿಮಾನಿ ಬಳಗ, ತುಮಕೂರು, ಡಾ. ರೆಡ್ಡಿಸ್ ಫೌಂಡೇಶನ್ ಹೈದ್ರಾಬಾದ್ ಹಾಗೂ ಟೀಮ್ ಲೀಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಆ. 28 ರಂದು ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಸದಸ್ಯ ಹಾಗೂ ಜಿ.ಬಿ. ಜೋತಿಗಣೇಶ್ ಅಭಿಮಾನಿ ಬಳಗದ ಎಚ್. ಮಲ್ಲಿಕಾರ್ಜುನಯ್ಯ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರ ಹಾಗೂ ಜಿಲ್ಲೆಯ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.

ಆ.  28 ರ ಭಾನುವಾರ ನಡೆಯುವ ಉಚಿತ ಉದ್ಯೋಗ ಮೇಳದಲ್ಲಿ ಟೊಯೋಟಾ, ಮಹೀಂದ್ರ, ಕಾರ್ಗಿಲ್ ಸೇರಿದಂತೆ 25 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, 2000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಹತ್ತನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್, ಬಿ ಫಾರ್ಮ, ಡಿ ಫಾರ್ಮ ಕಲಿತಿರುವ ನಿರುದ್ಯೋಗಿ ಯುವಕ, ಯುವತಿಯರು, ಅಂಗವಿಕಲರು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದಾಗಿದೆ ಎಂದರು.

ಟೀಮ್ ಲೀಸ್ ಬೆಂಗಳೂರು ಸಂಸ್ಥೆಯ ಅರುಣ್ ಕುಮಾರ್ ಮಾತನಾಡಿ, ಕಳೆದ 15 ವರ್ಷಗಳಿಂದ ಯುವಜನರಿಗೆ ಉದ್ಯೋಗ ವಿನಿಮಯದಲ್ಲಿ ತೊಡಗಿರುವ ಸಂಸ್ಥೆ ನಮ್ಮದು. ಇದುವರೆಗೆ 7ಲಕ್ಷ ಜನರಿಗೆ ವಿವಿಧ ರೀತಿಯ ಉದ್ಯೋಗ ದೊರಕಿಸುತ್ತಾ ಬಂದಿದೆ. ಪ್ರಸ್ತುತ ಆಗಸ್ಟ್ 28ರಂದು ನಡೆಯುವ ಉದ್ಯೋಗ ಮೇಳದಲ್ಲಿ 25 ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುತ್ತಿವೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕೆಂಬ ಉದ್ದೇಶ ಹೊಂದಿದೆ. ಎರಡನೇ ಹಂತದ ನಗರವಾಗಿರುವ ತುಮಕೂರಿನ ನಿರುದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೇಳ ಆಯೋಜಿಸಲಾಗಿದೆ. ಯುವಜನರು ಈ ಉದ್ಯೋಗ ಮೇಳವನ್ನು ಸದ್ಬಬಳಕೆ ಮಾಡಿಕೊಳ್ಳಬೇಕೆಂದರು.

ಹೈದರಾಬಾದ್ ಡಾ.ರೆಡ್ಡಿಸ್ ಫೌಂಡೇಷನ್ನ ಪ್ರದೀಪ್ ಕೆ.ಎನ್. ಮಾತನಾಡಿ, ರ 2001 ಲ್ಲಿ ಆರಂಭವಾದ ನಮ್ಮ ಫೌಂಡೇಷನ್ ೮೦ ರಾಷ್ಟ್ರಗಳಲ್ಲಿ ತನ್ನ ಶಾಖೆ ಹೊಂದಿದ್ದು, ಭಾರತದಲ್ಲಿ 102 ಶಾಖೆಗಳನ್ನು ಹೊಂದಿದೆ. ತನ್ನ ಸಿ.ಎಸ್.ಆರ್ ನಿಧಿಯನ್ನು ಬಳಸಿಕೊಂಡು ಯುವಜನರಿಗೆ ಅವರ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿ ತರಬೇತಿ ನೀಡಿ ಉದ್ಯೋಗ ದೊರಕಿಸುವ ಕೆಲಸ ಮಾಡುತ್ತಾ ಬಂದಿದೆ ಎಂದರು.

ತುಮಕೂರು ಶಾಖೆಯಲ್ಲಿ ತಿಂಗಳಿಗೆ ಮೂವತ್ತು ಜನರಂತೆ ತರಬೇತಿ ನೀಡಿ ಉದ್ಯೋಗ ದೊರಕಿಸಲಾಗಿದೆ. ಆಗಸ್ಟ್  ನಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಸಂಸ್ಥೆ ಸಕ್ರಿಯವಾಗಿ ಪಾಲ್ಗೊಂಡು ಯುವಜನರ ಪರವಾಗಿ ಕೆಲಸ ಮಾಡಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿ.ಬಿ.ಜೋತಿಗಣೇಶ್ ಅಭಿಮಾನಿ ಬಳಗದ ಶಂಕರ್, ಸತ್ಯಮಂಗಲ ಜಗದೀಶ್, ಜೆ.ಜಗದೀಶ್, ವೇದಮೂರ್ತಿ, ಇಂದ್ರಕುಮಾರ್, ಪ್ರೀತಂ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಡೈರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದ್ದೇನೆ : ಕೊಂಡವಾಡಿ ಚಂದ್ರಶೇಖರ್

ಕೊಡಿಗೇನಹಳ್ಳಿ: ಗ್ರಾಪಂ ಮುಖ್ಯ ಕೇಂದ್ರದಲ್ಲಿ ಡೈರಿ ಇಲ್ಲದೆ ನಿತ್ಯ ನಾಲ್ಕೈದು ಕಿ.ಮೀ ಸಂಚರಿಸಿ ಹಾಲು ಹಾಕುತಿದ್ದ ಬಗ್ಗೆ ಸಂಘದ ಸದಸ್ಯರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಇಂದು ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

ಹೋಬಳಿಯ ದೊಡ್ಡಮಾಲೂರು ಗ್ರಾಮದ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ನಿತ್ಯ ಹೆಣ್ಣು ಮಕ್ಕಳು ಹಾಗೂ ವಿದ್ಯಾರ್ಥಿಗಳು ಕಾಲ್ನಿಡಿಗೆಯಲ್ಲಿ ತೆರಳಿ ಹಾಲು ಹಾಕಬೇಕಾಗಿತ್ತು. ಇದೀಗ ನೂತನ ಡೇರಿ ತೆರೆದು ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದರು.

ತುಮುಲ್ ಒಕ್ಕೂಟವನ್ನು ಇಡಿ ರಾಜ್ಯ ನೋಡುವಂತೆ ಅಭಿವೃದ್ಧಿಮಾಡಿದ್ದೇನೆ. ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಪ್ರತಿ ದಿನ ಒಂದಲ್ಲಾ ಒಂದು ಪರಿಹಾರದ ಚೆಕ್ ವಿತರಣೆ ಮಾಡಲಾಗುತ್ತಿದೆ. ವಿದ್ಯಾಭ್ಯಾಸ, ಪರಿಹಾರ ಜಾನುವಾರುಗಳು ಮೃತಪಟ್ಟರೆ ಪರಿಹಾರ ವಿತರಿಸುವ ಯೋಜನೆಗಳನ್ನು ಜಾರಿಗೆ ತಂದಿರುವುದು ಈ ಬಗ್ಗೆ ನಿಮಗೆಲ್ಲ ತಿಳಿದಿದೆ. ಮನುಷ್ಯನಿಗೆ ಉಪಕಾರ ಸ್ಮರಣೆ ಅವಶ್ಯಕ. ಮುಂದಿನ ದಿನಗಳಲ್ಲಿ ನನಗೆ ಹೆಚ್ಚಿನ ಜವಾಬ್ದಾರಿ ನೀಡಿದರೆ ಇನ್ನಷ್ಟು ಕೆಲಸ ಮಾಡುತ್ತೇನೆ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.,

ಸಂಘದ ಕಟ್ಟಡಕ್ಕೆ ಜಾಗ ನೀಡಿದ ದಾನಿಗಳ ಕುಟುಂಬಸ್ಥರಿಗೆ ಹಾಗು ಸಂಘದ ನಿದೇರ್ಶಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಟಲೇ ಚಂದ್ರಶೇಖರ್ ಗೌಡ, ಗ್ರಾಪಂ ಸದಸ್ಯರಾದ ಹನುಮಂತರಾಯ, ಲಿಂಗೇಗೌಡ, ರಾಜಪ್ಪ,  ಸಿದ್ಧಪ್ಪ, ಲಕ್ಮö್ಮಮಮ್ಮ ಲಿಂಗಪ್ಪ, ಸಂಘದ ಉಪಾಧ್ಯಕ್ಷ ವೆಂಕಟಪ್ಪ, ನಿದೇರ್ಶಕರಾದ ಗೋಪಾಲರೆಡ್ಡಿ, ರಮೇಶ್, ಕೃಷ್ಣಯ್ಯ, ಮಹಾದೇವಪ್ಪ, ಬೋಜರಾಜ, ಗಂಗಮ್ಮ, ಮಂಜಮ್ಮ, ಸಿದ್ದಪ್ಪ, ಶ್ರೀನಿವಾಸ್, ನರಸಿಂಹಮೂರ್ತಿ, ಲಿಂಗಪ್ಪ, ಕಾರ್ಯದರ್ಶಿ ನಿರ್ಮಲ, ಹಾಲು ಪರೀವೀಕ್ಷಕ ರಾಮಕೃಷ್ಣಯ್ಯ ಹಾಜರಿದ್ದರು.

ಮಾಯಸಂದ್ರದಲ್ಲಿ ಕೃಷಿ ಕಾಲೇಜು ಸ್ಥಾಪಿಸುವ ಭರವಸೆ: ನಿರ್ಮಲಾನಂದನಾಥ ಸ್ವಾಮೀಜಿ

Publicstory/prajayoga

ತುರುವೇಕೆರೆ : ದೇಶದ  ಬೆನ್ನೆಲುಬಾದ ರೈತರು ಆರ್ಥಿಕವಾಗಿ ಸದೃಡನಾಗಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶ್ರೀ ಮಠದ ವತಿಯಿಂದ  ಚುಂಚಾದ್ರಿ ರೈತ ಸಂತೆ ಆರಂಭಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್‌ನಲ್ಲಿ ಚುಂಚಾದ್ರಿ ರೈತ ಸಂತೆ ಚಾಲನೆ, ಮಾಜಿ ಶಾಸಕ ಬಿ.ಭೈರಪ್ಪಾಜಿಯವರ  ಪುತ್ಥಳಿ ಅನಾವರಣ  ಹಾಗೂ  ಆದಿಚುಂಚನಗಿರಿ ಸಮುದಾಯ ಭವನ  ಶಂಕುಸ್ಥಾಪನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

ರೈತ ತಾನು ಬೆಳದ ಉತ್ಪನ್ನವನ್ನು ಮೌಲ್ಯವರ್ಧನೆ ಮಾಡುವ ಕಲೆಯನ್ನು ಕಲಿಯಬೇಕಿದೆ.  30 ಕ್ಕೂ ಹೆಚ್ಚು ಕೆರೆಕಟ್ಟೆಗಳನ್ನು, ಶಾಲೆಗಳನ್ನು ಕಟ್ಟಿ, ಸಹಕಾರಿ ಕ್ಷೇತ್ರ ಹಾಗೂ ಮಹಿಳಾ ಸಬಲೀಕರಣಕ್ಕೆ ವಿಶೆಷ ಕೊಡುಗೆ ನೀಡಿದ  ಮಾಜಿ ಶಾಸಕ ಬಿ.ಭೈರಪ್ಪಾಜಿಯವರರು ನಮಗೆ ಆದರ್ಶಪ್ರಾಯರಾಗಿದ್ದಾರೆ. ಆದಿಚುಂಚನಗಿರಿ ಮಠದ ವತಿಯಿಂದ ತಾಲೂಕಿನ ಮಾಯಸಂದ್ರದಲ್ಲಿ ಶೀಘ್ರದಲ್ಲೇ  ಕೃಷಿ ಕಾಲೇಜು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರೈತ ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿಪಡಿಸುವಂತಾದಾಗ ಮಾತ್ರ ರೈತರ ಕಲ್ಯಾಣ ಸಾಧ್ಯ. ಈ ನಿಟ್ಟಿನಲ್ಲಿ  ರೈತರ ಆರ್ಥಿಕ ಸಬಲೀಕರಣಕ್ಕಾಗಿ ಚುಂಚಾದ್ರಿ ರೈತ ಸಂತೆಗೆ ಚಾಲನೆ ದೊರಕಿಸಿ ಶ್ರೀ ಆದಿಚುಂಚನಗಿರಿ ಮಠ ದಾಪುಗಾಲಿರಿಸಿದೆ. ನನ್ನ ತಂದೆ ಕೆ.ಎಚ್.ಪಾಟೀಲ್ ಅವರ ಆಪ್ತರಾಗಿದ್ದ ಮಾಜಿ ಶಾಸಕ ಬಿ. ಭೈರಪ್ಪಾಜಿಯವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅತ್ಯಂತ ಸಂತಸ ತಂದಿದೆ ಎಂದರು.

ಶಾಸಕ ಮಸಾಲಜಯರಾಮ್ ಮಾತನಾಡಿ,  ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರೀ ಮಠದ ವತಿಯಿಂದ ಚುಂಚಾದ್ರಿ ರೈತ ಸಂತೆ ಹಾಗೂ ಸಮುದಾಯಭವನ ಶಂಕುಸ್ಥಾಪನೆ ನೆರವೇರಿಸಿರುವುದಕ್ಕಾಗಿ ಕ್ಷೇತ್ರದ ಜನತೆಯ ಪರವಾಗಿ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.  ಆದಿ ಚುಂಚನಗಿರಿ ಸಮುದಾಯ ಭವನಕ್ಕೆ 25 ಲಕ್ಷ ರೂ ದೇಣಿಗೆ ನೀಡುವುದಾಗಿ ಘೋಷಿಸಿದರು.
ತಾಲೂಕಿನ ಮಾಯಸಂದ್ರ ಟಿ.ಬಿ. ಕ್ರಾಸ್‌ನಲ್ಲಿ ಮಾಜಿ ಶಾಸಕ ಬಿ. ಬೈರಪ್ಪಾಜಿಯವರ  ಪುತ್ಥಳಿಯನ್ನು ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿ  ಅನಾವರಣಗೊಳಿಸಿದರು.

ಪ್ರೋ. ಪುಟ್ಟರಂಗಪ್ಪ  ರಚಿಸಿರುವ ರೈತಬಂದು ಬಿ. ಬೈರಪ್ಪಾಜಿ ಕೃತಿಯನ್ನು ಡಾ.ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಈ ವೇಳೆ ರಾಜ್ಯ ರೈತ ಸಂಘದ ವರಿಷ್ಟ  ಕೆ.ಟಿ.ಗಂಗಾಧರ್, ಸಚಿವ ಮುನಿರತ್ನ ಹಾಗೂ ಗೋಪಾಲಯ್ಯ, ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಶಾಸಕರಾದ ಸುರೇಶ್‌ಗೌಡ,  ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ, ಬೈರಪ್ಪಾಜಿಯವರ ಪುತ್ರ ಬೆಟ್ಟಸ್ವಾಮಿ, ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಕೊಂಡಜ್ಜಿವಿಶ್ವನಾಥ್, ತೋಟಗಾರಿಕೆ ಇಲಾಖೆಯ ಡಿ.ಡಿ. ರಘು, ತಹಶಿಲ್ದಾರ್ ರೇಣುಕುಮಾರ್ ಮತ್ತಿತರಿದ್ದರು.

ಸಂತ್ರಸ್ತ ಕುಟುಂಬಗಳಿಗೆ ನಿವೇಶನ ಒದಗಿಸುವಂತೆ ತಹಶಿಲ್ದಾರ್ ಗೆ ಮನವಿ

Publicstory/prajayoga

ಗುಬ್ಬಿ: ಹೇಮಾವತಿ ಮುಖ್ಯ ನಾಲೆಯ ಸಮೀಪದಲ್ಲೇ ಇರುವ ಸಾಗರನಹಳ್ಳಿ ಗ್ರಾಮವು ಸಂಪೂರ್ಣ ಜಲಾವೃತ ಆಗುವ ದುಸ್ಥಿತಿಯಲ್ಲಿದೆ. ಈಗಾಗಲೇ ಎಲ್ಲಾ ಮನೆಗಳು ತೇವಾಂಶದಿಂದ ಕೂಡಿದೆ. ಈ ಕೂಡಲೇ ಗ್ರಾಮದಲ್ಲಿರುವ ಗೋಮಾಳ ಜಮೀನು ಸಂತ್ರಸ್ತ ಕುಟುಂಬಗಳಿಗೆ ಮನೆ ನೀಡುವಂತೆ ಆಗ್ರಹಿಸಿ ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂದೆ ಜಮಾಯಿಸಿದ ನೂರಾರು ಸಾಗರನಹಳ್ಳಿ ಗ್ರಾಮಸ್ಥರು ಇಡೀ ಗ್ರಾಮಕ್ಕಾಗುತ್ತಿರುವ ಅನಾಹುತ ಬಗ್ಗೆ ವಿವರಿಸಿ ಅಧಿಕಾರಿಗಳಿಗೆ ಮನದಟ್ಟು ಮಾಡಿದರು. ಗ್ರಾಮದಿಂದ ಕೇವಲ 300 ಮೀಟರ್ ದೂರದ ಹೇಮಾವತಿ ನಾಲೆಯಲ್ಲಿ ನೀರು ನಿರಂತರವಾಗಿ ಮೂರು ತಿಂಗಳಿಂದ ಹರಿದಿದೆ. ಈ ಹಿನ್ನಲೆ ಇಡೀ ಗ್ರಾಮವೇ ಜೋಪಿನ ಪ್ರದೇಶವಾಗಿದೆ ಎಂದು ಸ್ಥಳೀಯ ಮುಖಂಡ ವಿಜಯ್ ಕುಮಾರ್ ತಿಳಿಸಿದರು.

ಕಳೆದ ಮೂರು ವರ್ಷದಿಂದ ಚೆನ್ನಾಗಿ ಸುರಿದ ಮಳೆ ಜೊತೆಗೆ ನಿರಂತರ ನಾಲೆಯಲ್ಲಿ ಹರಿಯುವ ಹೇಮೆಯ ನೀರು ಪಕ್ಕದ ಗ್ರಾಮಕ್ಕೆ ಆವರಿಸಿದೆ. ಮನೆಗಳ ಗೋಡೆಗಳು ತೇವದಿಂದ ಕೂಡಿದೆ. ಯಾವುದೇ ಕ್ಷಣದಲ್ಲಾದರೂ ಮನೆಗಳು ಧರೆಗುರುಳಬಹುದು. ಮನೆಯ ಬಚ್ಚಲು ನೀರು ಸಹ ಇಂಗುವ ಸ್ಥಿತಿಯಲ್ಲಿಲ್ಲ. ಹೆಜ್ಜೆ ಇಟ್ಟಲ್ಲಿ ತೇವದ ಮಣ್ಣು ಇದೆ. ಎಷ್ಟೋ ಮನೆಗಳ ಪಿಟ್ ನೀರಿನಿಂದ ತುಂಬಿವೆ. ದನಕರುಗಳನ್ನು ಮನೆಯಿಂದ ಹೊರಗಡೆ ಕಟ್ಟಲು ಅಸಾಧ್ಯವಾಗಿದೆ. ಹೀಗೆ ಅನೇಕ ಸಮಸ್ಯೆಗಳಿವೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇದೇ ಗ್ರಾಮದಲ್ಲಿನ ಸರ್ವೇ ನಂಬರ್ 57, 58 ಮತ್ತು 60 ರಲ್ಲಿರುವ ಗೋಮಾಳ ಜಮೀನಿನಲ್ಲಿ ನಿವೇಶನ ವಿಂಗಡಿಸಿ ಮನೆ ಕಟ್ಟಿಕೊಡಬೇಕು ಎಂದು ಸ್ಥಳೀಯ ಮುಖಂಡ ವಿಜಯಕುಮಾರ್ ಆಗ್ರಹಿಸಿದರು.

ಕಳೆದ ಮೂರು ತಿಂಗಳಿಂದ ವಿಪರೀತ ಸಮಸ್ಯೆ ಕಂಡ ಗ್ರಾಮದಲ್ಲಿ ಜೀರ್ಣೋದ್ದಾರಗೊಂಡು ಉದ್ಘಾಟನೆಗೆ ಸಿದ್ಧಗೊಂಡ ದೇವಾಲಯದ ಹೆಸರು ಒಂದು ಸಮಸ್ಯೆಗೆ ಕಾರಣವಾಗಿದೆ. ಶರಣ ಕಲ್ಯಾಣದಪ್ಪ ಎಂದೇ ಹೆಸರಿನ ಗ್ರಾಮದ ದೇವಸ್ಥಾನಕ್ಕೆ 1974 ರಲ್ಲಿ ಚಂದ್ರಮೌಳೇಶ್ವರ ಎಂದು ಹೇಳಿ ಮುಜರಾಯಿ ಇಲಾಖೆಯಲ್ಲಿ ನಮೂದಿಸಿದ್ದು, ಯಾವುದೇ ಅಭಿವೃದ್ದಿ ಕೆಲಸಕ್ಕೆ ಹೆಸರೇ ಅಡ್ಡಿಯಾಗುತ್ತಿದೆ. ಇಡೀ ಗ್ರಾಮವು ತಿಳಿಸಿದಂತೆ ಶರಣ ಕಲ್ಯಾಣದಪ್ಪ ಎಂದು ಬದಲಿಸಿಕೊಡಬೇಕು ಎಂದು ಗ್ರಾಮಸ್ಥರೊಂದಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನಂಜೇಗೌಡ, ಯುವರಾಜ್, ರವೀಶ್, ಶಿವನಂಜಯ್ಯ, ಚಂದ್ರಶೇಖರ, ಸಿದ್ದರಾಮಯ್ಯ, ಮಲ್ಲಿಕಾರ್ಜುನಯ್ಯ, ಜಗದೀಶ್, ರಾಜಣ್ಣ, ಸಿದ್ದಲಿಂಗಯ್ಯ, ಗಂಗಾಧರಯ್ಯ, ಗೌರಿಶಂಕರ ಇತರರು ಇದ್ದರು.