Publicstory/prajayoga
ನಗರದಲ್ಲಿ 50 ಸ್ವ ಸಹಾಯ ಸಂಘಗಳಿಗೆ ತಲಾ 1 ಲಕ್ಷ ರೂ. ಚೆಕ್ ವಿತರಣೆ
ಶಿರಾ: ಮಹಿಳೆಯರು ಒಂದು ಕುಟುಂಬದ ಸಂಪೂರ್ಣ ನಿರ್ವಹಣೆ ಮಾಡುವಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾರೆ. ಮಹಿಳೆಯರ ಸ್ಥಾನ ಸಮಾಜದಲ್ಲಿ ಪ್ರಮುಖ. ಅವರ ಸಬಲೀಕರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಸದುಪಯೋಗವಾಗಲಿ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ನಗರದ ಎಚ್‌ಎಂಆರ್ ಪ್ಯಾಲೇಸ್‌ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸ್ವಸಹಾಯ ಸಂಘಗಳಿಗೆ ಭೀಜಧನ ಚೆಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸುಮಾರು 50 ಸ್ವಸಹಾಯ ಸಂಘಗಳಿಗೆ ತಲಾ 1 ಲಕ್ಷದ ಚೆಕ್ ವಿತರಿಸಿ ಮಾತನಾಡಿದರು.
ಮಹಿಳೆಯರು ಸಮಾಜದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಮಂಚೂಣಿಗೆ ಬರಬೇಕು ಎಂಬ ಉದ್ದೇಶದಿಂದ ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ತಹಶಿಲ್ದಾರ್ ಮಮತಾ ಅವರು ಮಾತನಾಡಿ, ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪಡೆಯುವ ಸಾಲ ಸೌಲಭ್ಯಗಳನ್ನು ಪುರುಷರು ದುರ್ಬಳಕೆ ಮಾಡಿಕೊಂಡು. ಮಧ್ಯಪಾನ ಸೇರಿದಂತೆ ಇತರೆ ವೆಚ್ಚಗಳಿಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಬರುತ್ತಿದೆ. ಮಹಿಳೆಯರು ಈ ರೀತಿಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಮಾರುತೀಶ್, ತಾವರೆಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವು ಚಂಗಾವರ ಸೇರಿದಂತೆ ಹಲವರು ಹಾಜರಿದ್ದರು.