ತುಮಕೂರು: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಕುರುಬರಹಳ್ಳಿ ಗ್ರಾಮದಲ್ಲಿ ಆಗಸ್ಟ್ 20ರ ಶನಿವಾರ ಜರುಗಲಿರುವ ‘ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ’ ಅಭಿಯಾನದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಭಾಗವಹಿಸಲಿದ್ದಾರೆ ಎಂದು ತಹಶಿಲ್ದಾರ್ ಮಮತಾ ಎಂ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮತ್ತು ಶಿರಾ ತಾಲೂಕು ತಹಶಿಲ್ದಾರ್ ಅವರು ಕುರುಬರಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
ಮುಂದುವರೆದು ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿ ಚಿಕ್ಕಸೀಬಿ ಗ್ರಾಮ, ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಕಂದಾಯ ಗ್ರಾಮ, ಮಾದೇನಹಳ್ಳಿ ಮಜರೆ, ಗಿಡ್ಡಚಿಕ್ಕನಹಳ್ಳಿ ಗ್ರಾಮ, ಗುಬ್ಬಿ ತಾಲೂಕು ಚೇಳೂರು ಹೋಬಳಿ ಚಿಂದಿಗೆರೆ ಗ್ರಾಮ, ಕುಣಿಗಲ್ ತಾಲೂಕು ಅಮೃತೂರು ಹೋಬಳಿ ಮಾರ್ಕೋನಹಳ್ಳಿ ಗ್ರಾಮ, ತಿಪಟೂರು ತಾಲೂಕು ಕಸಬಾ ಹೋಬಳಿ ರಾಮಶೆಟ್ಟಿಹಳ್ಳಿ ಗ್ರಾಮ, ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟ ಹೋಬಳಿ ದಬ್ಬೇಘಟ್ಟ ಗ್ರಾಮ, ಚಿ.ನಾ.ಹಳ್ಳಿ ತಾಲೂಕು ಕಂದಿಕೆರೆ ಹೋಬಳಿ ಬಡಕೆಗುಡ್ಲು ಗ್ರಾಮ, ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿ ಮುದ್ದೇನಹಳ್ಳಿ ಗ್ರಾಮ, ಪಾವಗಡ ತಾಲೂಕು ವೈ.ಎನ್.ಹೊಸಕೋಟೆ ಹೋಬಳಿ ಆರ್.ಡಿ.ರೊಪ್ಪ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಅಭಿಯಾನದಲ್ಲಿ ಆಯಾ ತಾಲೂಕು ತಹಶಿಲ್ದಾರ್‌ಗಳು ಭಾಗವಹಿಸಿ ಗ್ರಾಮ ವಾಸ್ತವ್ಯ ಮಾಡಿ, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತುರುವೇಕೆರೆ: ತಾಲೂಕಿನ ಮಾದಿಹಳ್ಳಿ ಗ್ರಾಪಂ ಪಿಡಿಓ ಲಿಂಗರಾಜೇಗೌಡ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಗೈರಾಗುವ ಮೂಲಕ ಕರ್ತವ್ಯ ಲೋಪವೆಸಗಿದ್ದರು.
ಪಿಡಿಒ ನಿರ್ಲಕ್ಷ್ಯ ಖಂಡಿಸಿ ಸಾರ್ವಜನಿಕರು ಹಾಗೂ ಗ್ರಾಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳು ಶಿಸ್ತು ಕ್ರಮ ಕೈಗೊಳ್ಳುವಂತೆ ಸಿಇಒ ಅವರನ್ನು ಒತ್ತಾಯಿಸಿದ್ದರು. ಸಾರ್ವಜನಿಕ ದೂರು ಹಾಗೂ ಇಒ ಸತೀಶ್ ಕುಮಾರ್ ಅವರ ವರದಿಯ ಮೇಲೆ ಪಿಡಿಒ ಲಿಂಗರಾಜೇಗೌಡ ರನ್ನು ತಕ್ಷಣ ಜಾರಿಗೆ ಬರುವಂತೆ ಸಿಇಒ ವಿದ್ಯಾಕುಮಾರಿ ಅಮಾನತ್ತು ಆದೇಶ ಹೊರಡಿಸಿದ್ದಾರೆ.
ತಿಪಟೂರು : ಗಣೇಶೋತ್ಸವ ಭಾರತೀಯ ಹಬ್ಬ. ಅದನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸಲು ಯಾವುದೇ ಅನುಮತಿ ನೀಡಿಲ್ಲ. ಆದರೆ ವಿದ್ಯಾಧಿಪತಿ ಗಣಪತಿಯನ್ನು ಎಲ್ಲಡೆಯೂ ಪೂಜಿಸಲಾಗುತ್ತದೆ. ಇದು ನಮ್ಮ ಸಂಸ್ಕೃತಿಯಲ್ಲೇ ಬಂದಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಪ್ರಜಾಯೋಗ ದಿನ ಪತ್ರಿಕೆ ಹಾಗೂ ಪಬ್ಲಿಕ್ ಸ್ಟೋರಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಗಣಪತಿ ಉತ್ಸವಗಳು ಮನೆಗಳಲ್ಲಿ ನಡೆಯುತ್ತಿದ್ದವು. ಆದರೆ ಬಾಲಗಂಗಾಧರ ತಿಲಕ್ ಭಾರತೀಯರನ್ನು ಒಗ್ಗೂಡಿಸಿಕೊಳ್ಳಲು ಈ ಗಣಪತಿ ಉತ್ಸವವಗಳನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಟದ ಅಸ್ತ್ರವಾಗಿ ರೂಪಿಸಿದ್ದರು. ಈ ಮೂಲಕ ಜನರನ್ನು ಸ್ವಾತಂತ್ರ್ಯ ಪಡೆಯಲು ಉತ್ತೇಜಿಸಿದ್ದರು. ಈ ಸಂಪ್ರದಾಯ ಶಾಲಾ ಕಾಲೇಜು, ಹಾಸೆಲ್‌ಗಳಲ್ಲಿ ನಡೆದುಕೊಂಡು ಬಂದಿದೆ ಎಂದರು.
ಈ ಹಬ್ಬಕ್ಕೆ ಇದಕ್ಕೆ ಯಾವುದೇ ಆದೇಶವಿಲ್ಲ. ಯಾವ ಸಂಪ್ರದಾಯ ಈ ನೆಲದಲ್ಲಿ ಬೆಳೆದು ಬಂದಿತ್ತೋ ಅವೆಲ್ಲವೂ ಪದ್ಧತಿ ಪ್ರಕಾರ ನಡೆಯುತ್ತದೆ. ನಮ್ಮ ಸರ್ಕಾರ ಬರುವುದಕ್ಕೂ ಮೊದಲಿನಿಂದಲು ಇದು ಹಾಸುಹೊಕ್ಕಾಗಿದೆ ಎಂದು ಹೇಳಿದರು.
ಪ್ರಸುತ್ತ ಜಗವೇ ಸುಳ್ಳಿನ ಸಂತೆಯಲ್ಲಿ ವಹಿವಾಟು ವ್ಯಾಪಾರ ಜೋರಾಗಿ ಮಾರಾಟವಾಗುತ್ತಿದೆ. ಸತ್ಯವನ್ನು ಜಗತ್ತಿನಲ್ಲಿ ಕೊಳ್ಳುವರೇ ಇಲ್ಲವಾಗಿದ್ದಾರೆ. ಅದರ ಬೆಲೆ, ಬೇಡಿಕೆ ದಿನೇ ದಿನೇ ಗಣನೀಯವಾಗಿ ಈ ಸುಳ್ಳಿನ ಸಂತೆಯಲ್ಲಿ ನಾಟಕದ ಜೀವನದಲ್ಲಿ ಪಾತಾಳಕ್ಕೆ ಇಳಿದಿದೆ. ಬದುಕು ಸತ್ಯದ ಹಾದಿಯಲ್ಲಿ ಇರಬೇಕೆ ಹೊರತು ಸುಳ್ಳಿನ ಸರಮಾಲೆಗಳ ಹೆದ್ದಾರಿಯಾಗಬಾರದು.
ಜಗತ್ತು ಒಂದು ಮಾಯಾ ಲೋಕ, ಜನತೆ ಮಾಯಗಾರ, ಮಾತುಗಾರ ಪ್ರೀತಿ, ವಿಶ್ವಾಸ, ನಂಬಿಕೆ, ಸ್ನೇಹಕ್ಕೆ ಮನದ ಇಂಗಿತ ಏಟಿಗೆ ಜೀವನ ದಿಕ್ಕು ಬದಲಾವಣೆಗೆ ಸೂತ್ರದಾರ. ಆಪ್ತ ಜೀವಿಯೊಂದು ಯಾರೊಬ್ಬರ ಮನದಿಂದ ದೂರ ಉಳಿದರೇ ಆ ಜೀವಿಯ ಮೇಲೆ ಇನ್ನೂ ನಂಬಿಕೆ ವಿಶ್ವಾಸ ವ್ಯಕ್ತಿಯನ್ನು ಕಾಡುವ ಪರಿ ಅಷ್ಟು ಇಷ್ಟು ಅಲ್ಲ. ಏಕೆಂದರೆ ಮನಸು ಎನ್ನುವಂತದ್ದು ಒಂದು ರೀತಿಯ ನ್ಯಾಯಾಲಯ. ಒಮ್ಮೆ ಒಪ್ಪಿ ತೀರ್ಪು ಕೊಟ್ಟರೆ ಆ ತೀರ್ಪು ಸುಳ್ಳು ಎಂದು ಸಾಬೀತು ಪಡಿಸಲು ಸಾಧ್ಯವಿಲ್ಲ. ಮನಃ ಸಾಕ್ಷಿಯೂ ಒಪ್ಪುವುದಿಲ್ಲ. ಹಾಗಾಗಿ ಒಪ್ಪಿ ಕೊಟ್ಟ ತೀರ್ಪು ಮತ್ತೆ ಸರಿಯಲ್ಲವೆಂದು ಅಲ್ಲೆಗೆಳೆಯುವಂತಿಲ್ಲ. ಪ್ರೀತಿ ವಿಶ್ವಾಸ ನಂಬಿಕೆ ಎನ್ನುವಂತಹದ್ದು ಮನುಷ್ಯನ ಜೀವನವನ್ನೇ ಬದಲಾಯಿಸುವ ದೊಡ್ಡ ಮಂತ್ರಗಳು. ಹಾಗೂ ಸುಂದರ ಜೀವನವನ್ನು ಕೆಲವೇ ಕ್ಷಣಗಳಲ್ಲಿ ಹಾಳು ಮಾಡುವ ದೊಡ್ಡ ನರಭಕ್ಷಗಳೆಂದರು ತಪ್ಪಿಲ್ಲ.
ಗೆಳೆಯನೊಬ್ಬ ಒಂದು ದಿನ ಮೆಸೆಜ್ ಹಾಕಿದ. ಅಣ್ಣ ಹೇಗಿದ್ದೀಯಾ ಎಂದು. ಚನ್ನಾಗಿ ಇದ್ದೇನೆ ತಮ್ಮ. ನೀನು ಹೇಗಿದ್ದೀಯಾ ಎನ್ನುತ್ತಾ ಕ್ಷೇಮ ಸಮಾಚಾರಗಳು ಸಂವಹನ ಮುಂದುವರೆಯುತ್ತಾ ಹೋಯಿತು. ಕೊನೆಗೆ ಕೇಳಿದ. ಅಣ್ಣ ಒಂದು ಆಪ್ತ ಜೀವವೊಂದು ತನ್ನೊಡನೆ ಮಾತು ಬಿಟ್ಟಿದೆ ಸ್ನೇಹ ಪ್ರೀತಿ ವಿಶ್ವಾಸಕ್ಕೆ ಮತ್ತೊಂದು ಹೆಸರೇ ಆ ಜೀವ ಎಂದು ಆತನಿಗೆ ಆದ ಬಾಧೆ ನನ್ನ ಬಳಿ ಹೇಳಿಕೊಂಡ. ಅಣ್ಣ ಅದರ ಸಂಕಟ ನೋವು ಬಾದೆ ಅಷ್ಟು ಇಷ್ಟಲ್ಲ. ತುಂಬಾ ಕಾಡುತ್ತಿದೆ. ಇಂತ ಪರಿಸ್ಥಿತಿ ಮತ್ಯಾರಿಗೂ ಬರವುದು ಬೇಡ ಎಂದ ತಮ್ಮ. ಸಮಾಧಾನ ಮಾಡಿಕೋ ಈ ಜಗತ್ತಿನಲ್ಲಿ ಮೋಸ ಮಾಡಿದವರಿಗಿಂತ ಮೋಸ ಹೋದವರೇ ಹೆಚ್ಚು. ಅವಕಾಶವಾದಿಗಳೇ ಹೆಚ್ಚು ಎಂದೆ. ಆದರೂ ಅವನಿಗೆ ಸಮಾಧಾನವಾಗದ ಕಾರಣ ಆ ಜೀವ ಜೀವನ ಪೂರ್ತಿ ನನ್ನ ಜೊತೆಯಿರಬೇಕು ಎಂದೆಲ್ಲ ತನ್ನ ನೋವು ಹೊರ ಹಾಕಿದ. ಆಗ ನಾನು ಇದೆ ನೀನು ಮಾಡಿದ ದೊಡ್ಡ ತಪ್ಪು. ಅತಿಯಾದ ನಂಬಿ,ಕೆ ಪ್ರೀತಿ, ವಿಶ್ವಾಸ ಒಳ್ಳೆಯದಲ್ಲ. ತನ್ನ ನೆರಳೇ ಸದಾ ಕಾಲಿನೊಂದಿದೆ ಇರುವುದಿಲ್ಲ. ಸಮಯಕ್ಕೆ ತಕ್ಕನಾಗಿ ದೂರ ಸರಿಯುತ್ತಾ ಹೋಗುತ್ತದೆ. ಹಾಗಿದ್ದಾಗ ಇನ್ನೂ ಮನುಷ್ಯ ಬದಲಾಗಲಾರನೆ ಯೋಚಿಸು ಎಂದು ತಿಳಿ ಹೇಳಿದೆ.
ಸಾಹಿತಿ ಯುವರಾಜ್ ಹಾಡನ್ನೊಂದು ಕಟ್ಟಿದ್ದಾರೆ. ಅದನ್ನು ಇಲ್ಲಿ ಎಳೆತರುತ್ತೇನೆ.
ಅಣ್ಣ ತಮ್ಮ ಅಕ್ಕ ತಮ್ಮ ಎಲ್ಲಿ ತನಕಾ | ಬದುಕಿ ಬೆಳೆಯೋತನಕ ಸತ್ತಾಗ ಬರುವರು ತಮ್ಮ ಗುಣಿತನಕಾ ಮಣ್ಣು ಮುಚ್ಚೋತನಕ||
ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀತನಕಾ, ನಿನ್ನಾ ಕೊರಳಿಗೆ ಕುಣಿಕೆ ಬೀಳೋತನಕ ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ ಕಳಚಯ್ಯ ಮಾಯದ ಪೊರೆಯ ಮುಕ್ತೀ ಹೊಂದಾಕ ||
ಮನುಷ್ಯ ಯಾಕೆ ಸಾವಲಂಬಿಯಾಗಿ ಬದುಕುಬೇಕು ಯಾರು ನಮ್ಮ ಜೊತೆಗೆ ಏತಕ್ಕಾಗಿ ಇರುತ್ತಾರೆ ಎಂದು ಅತ್ಯಂತ ಸರಳವಾಗಿ ಮನಮುಟ್ಟುವಂತೆ ಸಾಹಿತ್ಯದಲ್ಲಿ ಹೇಳಿದ್ದಾರೆ.
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲರೂ ಕೂಡ ಜೀವನ ಪೂರ್ತಿ ಜೊತೆಗೆ ಇರಲಾರರು. ಕೇವಲ ಬದುಕಿ ಬಳೋತನಕವಷ್ಟೇ ಜೊತೆಗೆ ಇರುತ್ತಾರೆ. ಸತ್ತಾಗ ಬರುತ್ತಾರೆ ಎಲ್ಲಿವರೆಗೂ ಕಣ್ಣು ಮುಚ್ಚೋತನಕ, ಮಣ್ಣು ಮುಚ್ಚುತನಕ ಅಷ್ಟೇ. ಯಾರೂ ಇರುವುದಿಲ್ಲ, ಯಾರು ಬರುವುದಿಲ್ಲ. ಹಾಗಾಗಿ ಓ ಮನುಜ ಕಲಿನೀನು ಒಂಟಿಯಾಗಿ ಸ್ವಾವಲಂಬನೆ ಬದುಕನ್ನಾ ಎಂದು ಇಲ್ಲಿ ಕವಿ ಹೇಳಿದ್ದಾರೆ.
ಎರಡನೇ ಪ್ಯಾರದಲ್ಲಿ ಮತ್ತೆ ಕವಿ ಹೆಣ್ಣು ಹೊನ್ನು ನಿನ್ನದು ಎಲ್ಲಿತನಕ ಜೊತೆಗೆ ಇರುತ್ತದೆ. ನಿನ್ನ ಕೊರಳಿಗೆ ಕುಣಿಕೆ ಬೀಳೋತನಕ. ನಿನ್ನಾಸೆ ಪ್ರಾಣ ನಿಲ್ಲೋತನ ಅಷ್ಟೇ. ಮತ್ಯಾರು ಜೊತೆಗೆ ಇರಲ್ಲ ಕಳಚಯ್ಯ ಮಾಯದ ಪೊರೆ. ಮುಕ್ತಿ ಹೊಂದೊತನಕ ಅಷ್ಟೇ. ನಂತರ ಯಾರಿಗೆ ಯಾರಿಲ್ಲ ಎಂದು ಕವಿ ತುಂಬಾ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಈಗೀಗ ಮನಸ್ಸುಗಳ ನಡುವೆ ಸ್ನೇಹ, ಪ್ರೀತಿ ನಂಬಿಕೆ ಬಿರುಕು ಬಿಟ್ಟಾಗ ಅಥವಾ ಆಂತರಿಕ ಒತ್ತಡ ಎದುರಾದಾಗ ಆಗತ್ಯವಾಗಿ ಸಂವಹನ ತಟಸ್ಥವಾಗುತ್ತದೆ. ಮನಸ್ಸುಗಳು ಕೆಲವೊಂದು ದಿನಗಳ ಮಟ್ಟಿಗೆ ಒಂಟಿತನದ ಸಂಕಟ ಆತ್ಮೀಯತೆಯನ್ನು ಕಳೆದುಕೊಂಡ ನೋವು ಮನಸ್ಸನ್ನು ಕಾಡಿ ಪೀಡಿಸಿ ಒಂದು ನಿರ್ಧಾರಕ್ಕೆ ತಂದು ಬದುಕು ಅತಂತ್ರ ಸ್ಥಿತಿಗೆ ನೂಕುತ್ತದೆ. ಪ್ರೀತಿಯೆಂದು ಹೋದರೆ ನಂಬಿಕೆಯ ಕೊಲೆ, ಸ್ನೇಹವೆಂದು ಹೋದರೆ ವ್ಯಕ್ತಿತ್ವದ ಕೊಲೆ, ಸಂಬಂಧ ವೆಂದು ಹೋದರೆ ಭಾವನೆಗಳ ಕೊನೆ. ಹೀಗಿದ್ದಾಗ ಯಾರನ್ನಾ ನಂಬುವುದು ? ನಮ್ಮವರು ಯಾರು? ಎಂದು ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಬೇಕು. ತನ್ನವರು ನನ್ನವರು ತನಗಾಗಿ ತಮ್ಮವರಿಗಾಗಿ ಎನ್ನುವುದು ಕೇವಲ ಭ್ರಮೆ.
ನೀವು ಕಣ್ಣಾರೆ ಕಂಡಿರಬಹುದು. ನೀವು ಒಂದು ದೇವಾಲಯಕ್ಕೆ ಅಥವಾ ಜಗಲಿಕಟ್ಟೆ ಅರಳಿ ಮರದಂತ ಪೂಜಾಸ್ಥಳಗಳನ್ನು ನೋಡಿರಬಹುದು. ಅಲ್ಲಿ ದೇವರ ಪೋಟೋಗಳನ್ನು ಎಸೆದು ಹೋಗಿರುತ್ತಾರೆ. ಅದನ್ನಾ ಒಮ್ಮೆ ಗಮನಿಸಿರುವಿರೋ!? ಆ ಪೋಟೋಗಳನ್ನು ದೇವಾಯಲಗಳಿಗೆ ಕೊಟ್ಟ ಉದ್ದೇಶವಂತೂ ಅಲ್ಲ. ಮನೆಗಳಲ್ಲಿ ಪೂಜೆ ಮಾಡಿ ಬಳಸಿ ಬೇಕಿಲ್ಲವೆಂದು ತಂದು ದೇವಾಲಯ ಅಥವಾ ಪೂಜಾ ಸ್ಥಳಗಳಲ್ಲಿ ಹಾಕಿ ಹೋಗಿರುತ್ತಾರೆ. ಈಗ ಒಮ್ಮೆ ಯೋಚಿಸಿ ದೇವರನ್ನೆ ಬಳಸಿ ಬಿಸಾಡುವಾಗ ಇನ್ನೂ ಮನುಷ್ಯರನ್ನಾ ಬಳಸಿ ಬಿಸಾಡುವರು ಇಲ್ಲವೇ? ಒಮ್ಮೆ ಅವಲೋಕಿಸಿ ಈ ಪ್ರಪಂಚವೇ ಬಳಸಿ ಬಿಸಾಡುವ ಜಗತ್ತು ನಾವು ತಿಳಿಯಬೇಕಷ್ಟೇ.
ಯುವ ಜನತೆ ಗಂಭೀರವಾಗಿ ಯೋಚಿಸ ಬೇಕಿದೆ. ಈ ಪ್ರಪಂಚ ಮೋಸದ ಪ್ರಪಂಚ. ಪ್ರೀತಿ ವಿಶ್ವಾಸ ನಂಬಿಕೆ ಅಧಿಕಾರ ಹಣ ಅಂತಸ್ತು ಕ್ಷಣಿಕ ಸಂತೋಷಗಳೇ ಹೊರತು ಸದಾ ಸಂತೋಷ ಕೊಡುವ ಬುಟ್ಟಿ ತೊಟ್ಟಿ ಬುತ್ತಿಗಳಲ್ಲ…! ಅರಿತು ಬಾಳಿದರೆ ಬಾಳು ಬೆಳಗುವುದು ಇಲ್ಲವಾದಲ್ಲಿ ನಿಮ್ಮ ಬಾಳಿನ ಬೆಳಕು ನೀನೆ ಆರಿಸಿಕೊಂಡತೆ, ಪ್ರಪಂಚ ಬದಲಾದಂತೆ ಬದಲಾಗು ನಿನ್ನ ಬಾಳು ಬೆಳಕಾಗುವುದು ನಿನ್ನ ಬಿಟ್ಟವರ ಬಿಟ್ಟು ಬಿಡು. ನಿನ್ನ ಜೀವನಕ್ಕೆ ಅಂಟಿದ ದರಿದ್ರ ಬಿಟ್ಟಂತೆ..
ಪ್ರೀತಿ,ವಿಶ್ವಾಸ,ನಂಬಿಕೆ ಉಳಿಸಿ ಬೆಳೆಸಿಕೊಂಡು ಜೀವನದಲ್ಲಿ ಬದುಕು ಕಟ್ಟಿಕೊಂಡವರಿಗಿಂತ ಎಲ್ಲವನ್ನೂ ಕಳೆದುಕೊಂಡು ಬದುಕು ಕೆಡಿಸಿಕೊಂಡವರೇ ಹೆಚ್ಚು. ಆಕೆ/ತನೋ ಅವರ ಬದುಕಿನಿಂದ ನಿರ್ಗಮಿಸಿದ ಸಲುವಾಗಿ ಬಂಗಾರದ ಜೀವನ ಹಾಳು ಮಾಡಿಕೊಂಡು ಮದ್ಯಪಾನ, ಧೂಮಪಾನ ಅನೈತಿಕ ಚಟುವಟಿಕೆಗಳನ್ನು ಕಲಿಯುವುದರ ಮುಖಾಂತರ ಬದುಕ ದಿಕ್ಕನ್ನೆ ಬೇರೆ ಕಡೆಗೆ ತಿರುಗಿಸಿ ಸಾವಿಗೂ ಶರಣಾಗಿ ಹೆತ್ತವರ ಕರುಳ ಕುಡಿಯನ್ನು ಚಿವುಟಿದ ಈ ಪ್ರೀತಿ ಪ್ರೇಮ ವಿಶ್ವಾಸದ ಕಣ್ಣೀರ ಕಥೆಗಳು ನಮ್ಮ ಎದುರೆ ನಿತ್ಯ ನಡೆಯುತ್ತವೆ. ಅತಿಯಾದ ಪ್ರೀತಿ ವಿಶ್ವಾಸ ನಂಬಿಕೆಯನ್ನೇ ಬದುಕಿನಲ್ಲಿ ಮುಖ್ಯವಾಗಿ ಪರಿಗಣಿಸುವುದು ಯುವಜನತೆಯ ದೊಡ್ಡ ತಪ್ಪು. ಹೆತ್ತವರ ಕರುಳ ಕುಡಿಯ ನೋವಿಗೆ ಮತ್ಯಾವ ನೋವು ಸಾಟಿಯಲ್ಲ. ಇದಕ್ಕಿಂತ ನೋವು ಸಂಕಟ ಮತ್ತೊಂದಿಲ್ಲ ಹಾಗಾಗಿ ಪ್ರೀತಿಸಿ ನಂಬಿ ವಿಶ್ವಾಸವಿಡಿ ಆದರೆ ನಿರೀಕ್ಷೆ ಮೀರಿ ಬೇಡ. ಬಿಟ್ಟು ಬಿಡಿ ಬಿಟ್ಟವರ ಚಿಂತೆ ಇದ್ದು ಬಿಡಿ ನೀವು ಇದ್ದಂತೆ.
ಪಾವಗಡ: ಪಟ್ಟಣದ ತುಮಕೂರು ರಸ್ತೆಯ ಎಸ್‌ಎಸ್‌ಕೆ ಕಾಲೇಜಿನ ಹಿಂಭಾಗದ ಬೆಟ್ಟದ ತಳದಲ್ಲಿ ಚಿರತೆ ನೀರು ಕುಡಿಯುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಚಿರತೆಯ ಚಲನವಲನದ ದೃಶ್ಯ ಸೆರೆಯಾಗಿದ್ದು, ಇದರಿಂದಾಗಿ ಅಕ್ಕ ಪಕ್ಕದ ರೈತರು ನಮ್ಮ ಜಮೀನಿಗೆ ಒಬ್ಬರೇ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಸ್ಎಸ್‌ಕೆ ಕಾಲೇಜಿನ ಪ್ರಾಂಶುಪಾಲರು ವಲಯ ಅರಣ್ಯ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
ಮಧುಗಿರಿ: ತಾಲೂಕಿನ ದಂಡಿನಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಗಾಂಧಿ ಪೋಟೋಕ್ಕಿಂತ ಮೇಲ್ಭಾಗದಲ್ಲಿ ನಾಥೂರಾಮ್ ಗೋಡ್ಸೆ ಪೋಟೋ ಹಾಕಿ ಕಿಡಿಗೇಡಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.
75 ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಧುಗಿರಿಯ ಡಿ.ಎಂ ಬಡಾವಣೆಯ ಭಗತ್ ಸಿಂಗ್ ಯೂಥ್ ಅಸೋಸಿಯೇಷನ್ ನಿಂದ ಹಾಕಲಾಗಿರುವ ಫ್ಲೆಕ್ಸ್ ನಲ್ಲಿ ನಾಥೂರಾಮ್ ಗೂಡ್ಸೆ ಭಾವಚಿತ್ರ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಭಗತ್ ಸಿಂಗ್, ಸರದಾರ್ ವಲ್ಲಭಾಯ್ ಪಟೇಲ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರಬೋಸ್, ಮಹಾತ್ಮಗಾಂಧೀಜಿ, ಲಾಲ್ ಬಹುದ್ದಾರ್ ಶಾಸ್ತ್ರಿ, ಕಿತ್ತೂರು ರಾಣಿ ಚೆನ್ನಮ್ಮ ಅವರುಗಳ ಜೊತೆಗೆ ಗೋಡ್ಸೆ ಪೋಟೋ ಹಾಕಲಾಗಿದೆ. ಮಧುಗಿರಿ ಪುರಸಭೆಯಿಂದಲ್ಲೂ ಯಾವುದೇ ಅನುಮತಿ ಪಡೆಯದೆ ಪ್ಲೆಕ್ಸ್ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಅರಿತ ಪುರಸಭೆ ಅಧಿಕಾರಿಗಳು ಒಂದು ದಿನದ ನಂತರ ಪ್ಲೆಕ್ಸ್ ತೆರುವುಗೊಳಿಸಿದ್ದಾರೆ.
ತುಮಕೂರು : ಸತ್ಯಹರಿಶ್ಚಂದ್ರನ ಮಗನಂತೆ ಮಾತನಾಡಿದ್ರೆ ಅದೆಲ್ಲ ಸರಿ ಹೋಗಲ್ಲ. ಕಾನೂನು ಮಂತ್ರಿ ಆಗಿದ್ದಾರೆ. ಅಂತಹ ತಪ್ಪುಗಳು ಏನಾದ್ರೂ ಆಗಿದ್ರೆ ಕ್ರಮ ಕೈಗೊಳ್ಳಲಿ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಸಚಿವ ಮಾಧುಸ್ವಾಮಿಗೆ ಟಾಂಗ್ ನೀಡಿದರು.
ತುಮಕೂರಿನಲ್ಲಿ ಬುಧವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಕೆ.ಎನ್ ರಾಜಣ್ಣ, ಮಾಧುಸ್ವಾಮಿ ಅವರು ನಿರ್ದಾಕ್ಷಿಣ್ಯವಾಗಿ ಹೇಳೋ ಅಂತಾ ಮನುಷ್ಯ ಅಂದುಕೊಂಡಿದ್ದೇನೆ. ಪೋನ್‌ನಲ್ಲಿ ಮಾತನಾಡುತ್ತಾ, ನಾನು ಕೂಡ ಬಡ್ಡಿ ಕಟ್ಟಿದ್ದೀನಿ ಅಂತಾರೆ. ಯಾವುದನ್ನ ಕಟ್ಟಿದ್ದಾರೆ ಸ್ವಲ್ಪ ನನಗೆ ಕಳುಹಿಸಿಕೊಡಲಿ. ಮಾಧುಸ್ವಾಮಿ ಕೂಡ ರಾಜ್ಯದ ಮಂತ್ರಿ ಆಗಿದ್ದಾರೆ. ಕಾನೂನು ಸಚಿವರು ಕೂಡ ಆಗಿದ್ದಾರೆ. ಕಾನೂನಿನಲ್ಲಿ ಇಲ್ಲದ್ದಕ್ಕೆ ದುಡ್ಡು ಕಟ್ಟಿ ಏಕೆ ರಸೀದಿ ತಗೊಂಡ್ರು. ಒಂದು ವೇಳೆ ಕಾನೂನು ಬಾಹಿರವಾಗಿ ಬಡ್ಡಿ ಕಟ್ಟಿಸಿಕೊಂಡಿದ್ರೆ ಇವರೇ ಕಾನೂನು ಮಂತ್ರಿ ಆಗಿದ್ದಾರೆ. ಕ್ರಮ ಕೈಗೊಳ್ಳಲಿ. ಸುಮ್ಮನೆ ಉಡಾಫೆ ಮಾತುಗಳನ್ನ ಆಡಬಾರದು ಎಂದು ಕಿಡಿಕಾರಿದರು.
ಮಾಧುಸ್ವಾಮಿ ಕೂಡ ಒಂದು ಸಹಕಾರ ಆಂದೋಲನದಲ್ಲಿ ಇದ್ದವರೇ. ನಾವು ಕೂಡ ಕೆಲಸ ಮಾಡುತ್ತಿರುವವರೇ. ಆದ್ರೆ, ಸತ್ಯಹರಿಶ್ಚಂದ್ರನ ಮಗನಂತೆ ಮಾತನಾಡಬಾರದ್ದಿತ್ತು. ಯಾವುದೋ ಒಂದು ಕಡೆ ಲೋಪ ಆದ್ರೆ ಎಲ್ಲಾ ಕಡೆನೂ ಕೂಡ ಇದೇ ಭಾವನೆಯನ್ನು ಇಟ್ಟುಕೊಂಡು ನೋಡಬಾರದು ಎಂದು ಪ್ರತಿಕ್ರಿಯೆ ನೀಡಿದರು.
ತುರುವೇಕೆರೆ: ಆ. 26 ಬೆಳಿಗ್ಗೆ 10ಗಂಟೆಗೆ ತುಮಕೂರಿನ ಗಾಜಿನ ಮನೆಯಲ್ಲಿ ರಾಜ್ಯ ಮಟ್ಟದ ತಿಗಳ ಕ್ಷತ್ರಿಯರ ರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ.ಟಿ.ಎಸ್.ವಿ. ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ನೆ.ಲ.ನರೇಂದ್ರಬಾಬು ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದ್ಗುರು ಮಹಾಲಕ್ಷ್ಮಿಪೀಠದ ಶ್ರೀ ಜ್ಞಾನಾನಂದಪುರಿ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಗುರುವಂದನೆ ಸಲ್ಲಿಸಲಾಗುವುದು, ನಮ್ಮ ಹಕ್ಕುಗಳ ಬಗ್ಗೆ , ತಿಗಳ ಸಮುದಾಯವನ್ನು ಪ್ರವರ್ಗ- 1 ಕ್ಕೆ ಸೇರಿಸುವಂತೆ ಒತ್ತಡ ತರುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುವುದು. ತಿಗಳ ಸಮುದಾಯವನ್ನು ಔದ್ಯೋಗಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಜಾಗೃತಿ ಮೂಡಿಸುವ ಸಮಾವೇಶವಾಗಿ ಮಹತ್ವ ಪಡೆದುಕೊಳ್ಳಲಿದೆ ಎಂದರು.
ಸಮಾವೇಶಕ್ಕೆ ಪಾಂಡಿಚೆರಿಯ ಮುಖ್ಯಮಂತ್ರಿ ಪಿ.ಆರ್. ರಂಗಸ್ವಾಮಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಪಾಂಡಿಚೆರಿ ಸಭಾಪತಿ ಆರ್. ಸೆಲ್ವಂ, ಸಂಸದ ಬಸವರಾಜುರವರು, ಮಂತ್ರಿಗಳಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್ ಶಾಸಕ ಜ್ಯೋತಿ ಗಣೇಶ್, ಮಸಾಲಜಯರಾಮ್, ಸೇರಿದಂತೆ ಸಚಿವ ಸಂಪುಟದ ಮಂತ್ರಿ ಮಹೋದಯರು, ವಿರೋಧ ಪಕ್ಷದ ನಾಯಕರುಗಳು ಎಲ್ಲಾ ರಾಜಕೀಯ ಮುಖಂಡರುಗಳು, ಸಮುದಾಯದ ಹಿತ ಬಯಸುವ ಗಣ್ಯರು ಪಾಲ್ಗೊಳ್ಳಲಿದ್ದಾರೆ. ತಿಗಳ ಸಮುದಾಯದ ಅಭಿವೃದ್ಧಿಗೆ ಪೂರಕವಾದ ಪತ್ಯೇಕ ನಿಗಮ ಸ್ಥಾಪಿಸುವಂತೆ ಒತ್ತಾಯ ಮಾಡುವ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು. ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಿರುವ ಸಮುದಾಯದ ಮುಂದಿನ ನಡೆ ಬಗ್ಗೆ ಬಹುಮುಖ್ಯವಾಗಿ ಚರ್ಚೆಯಾಗಲಿದೆ. ಸುಮಾರು 10 ಸಾವಿರ ಮಂದಿ ಸಮುದಾಯ ಬಂದುಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ವಿಶ್ವ ತಿಗಳ ಸಮಾಜದ ಅಧ್ಯಕ್ಷ ಸೂರ್ಯಪ್ರಕಾಶ್, ಗ್ರಾ.ಪಂ. ಸದಸ್ಯ ಪಾಂಡುರಂಗಯ್ಯ, ವಿಎಸ್ಎಸ್ಎನ್ ಮಾಜಿ ಅದ್ಯಕ್ಷ ಕೋಳಿವೆಂಕಟೇಶ್, ಜಿಪಂ. ಮಾಜಿ ಸದಸ್ಯ ಅರ್ಜುನ್, ಮುಖಂಡರಾದ ರುದ್ರೇಗೌಡರು, ರೇವಣಸಿದ್ದಯ್ಯ, ಶಿವಣ್ಣ, ಹುಚ್ಚೇಗೌಡ, ಸೇರಿದಂತೆ ಅನೇಕರಿದ್ದರು.
ತುಮಕೂರು: ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿ ಗಲಭೆಗೆ ಕಾರಣರಾದ ಬಜರಂಗದಳದ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ಇಂತಹ ಘಟನೆಗಳು ಹೆಚ್ಚುತ್ತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಗುರುಮೂರ್ತಿಯವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಎಂಜಿ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಠಿ ಬುಧವಾರ ನಡೆಸಿ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಖಂಡಿಸಿ ಮಾತನಾಡಿದರು.
ಬಜರಂಗದಳದ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಮುಸ್ಲಿಂ ಪ್ರಾಬಲ್ಯವಿರುವ ಸ್ಥಳಗಳಲ್ಲಿ ಅಂದರೆ, ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಸಿದ್ದಾರೆ. ಇದರಿಂದ ದುಷ್ಕರ್ಮಿಗಳು ಚೂರಿ ಹಾಕಿದ್ದಾರೆ. ಈ ಹಿಂದೆ ಶಿವಮೊಗ್ಗದಲ್ಲಿ ಹರ್ಷನ ಕೊಲೆ ನಡೆದು ರಾಜ್ಯದ್ಯಂತ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿ ಘಟನೆ ಮಾಸುವ ಮುನ್ನವೇ ಮಂಗಳೂರಿನಲ್ಲಿ ಮೂರು ಸರಣಿ ಹತ್ಯೆಗಳು ನಡೆದು ರಾಜ್ಯಾದ್ಯಂತ ಅಶಾಂತ ವಾತಾವರಣ ಸೃಷ್ಟಿಯಾಗಿತ್ತು. ಈಗ ಮತ್ತೆ ಉದ್ದೇಶಪೂರ್ವಕವಾಗಿ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಸಂಚಿನ ಭಾಗವಾಗಿ ಶಿವಮೊಗ್ಗದಲ್ಲಿ ವಿವಾದ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುವ ಬದಲು ವಿವಾದಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗುವ ಮುನ್ನ ಹುನ್ನಾರ ನಡೆಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪಿಎಸ್ಐ ನೇಮಕಾತಿ ಹಗರಣ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣ 40 ಪರ್ಸೆಂಟ್ ಕಮಿಷನ್ ಆರೋಪ ಹಾಗೂ ಸ್ವತಃ ಬಿಜೆಪಿ ಸರ್ಕಾರದ ಕಾನೂನು ಮಂತ್ರಿ ಮಾಧುಸ್ವಾಮಿ ಹೇಳಿದಂತೆ ಸರ್ಕಾರ ನಿಷ್ಕ್ರಿಯವಾಗಿದ್ದು, ವಿವಾದಗಳಿಂದ ತತ್ತರಿಸುವ ಬಿಜೆಪಿಯು ರಾಜ್ಯದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಿ ಜನರನ್ನು ದಿಕ್ಕುತಪ್ಪಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ತಂತ್ರ ನಡೆಸುತ್ತಿದೆ ಎಂದು ಅವರು ತಿಳಿಸಿದರು.
ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ರಾಜಸಿಂಹ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುತ್ತಿದೆ. ಅಭಿವೃದ್ಧಿಯ ಕಡೆಗೆ ಗಮನ ಹರಿಸದೆ ದೇಶದಲ್ಲೆಡೆ ದಲಿತರು ಮತ್ತು ದಮನಿತರು ಮೇಲೆ ಶೋಷಣೆಗಳನ್ನು ಹೆಚ್ಚಿಸುವ ವಾತಾವರಣ ನಿರ್ಮಾಣ ಮಾಡಿದೆ. ಇದಕ್ಕೆ ಪೂರಕವಾಗಿ ರಾಜಸ್ಥಾನದಲ್ಲಿ ಕುಡಿಯುವ ನೀರಿನ ಮಡಿಕೆ ಮುಟ್ಟಿದ ಕಾರಣಕ್ಕೆ ಮುಖ್ಯ ಶಿಕ್ಷಕನಿಂದ ಹಲ್ಲೆಗೊಳಗಾದ ದಲಿತ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿರುವ ಘಟನೆ ಸಾಕ್ಷಿಯಾದೆ. ಹಿಂದೂ ಕಾರ್ಯಕರ್ತರ ಹಾಗೂ ಬಜರಂಗದಳದ ಕಾರ್ಯಕರ್ತರ ಕೊಲೆಗಳು ನಡೆದಾಗ ತಕ್ಷಣವೇ ಪ್ರತಿಕ್ರಿಯಿಸಿರುವ ಬಿಜೆಪಿ ಪಕ್ಷದ ಮುಖಂಡರುಗಳು ದಲಿತರ ಮೇಲೆ ನಿಷ್ಕಾಳಜಿ ವಹಿಸಿದ್ದಾರೆ. ದಲಿತರನ್ನು ತುಳಿಯುತ್ತಿರುವುದು ಖಂಡನೀಯವಾಗಿದೆ. ಇಂಥ ದಲಿತ ವಿರೋಧಿ ನೀತಿಯನ್ನು ಬಹುಜನ ಸಮಾಜ ಪಕ್ಷ ಖಂಡಿಸುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ರಾಜ್ಯ ಕಾರ್ಯದರ್ಶಿ ಸುರಯ್ಯ ಜಿಲ್ಲಾ ಸಂಯೋಜಕರಾದ ರುದ್ರಯ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ ವೀರಯ್ಯ ಹನುಮಂತರಾಯಪ್ಪ ಸೇರಿದಂತೆ ಬಿಎಸ್ಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ತುಮಕೂರು: ಜಿಲ್ಲೆಯಲ್ಲಿ ಕಳೆದ ಜುಲೈ ಮಾಹೆಯ ಅಂತ್ಯ ಹಾಗೂ ಆಗಸ್ಟ್ ಮಾಹೆಯ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದ ಭಾಗಶಃ ಮತ್ತು ಪೂರ್ಣ ಪ್ರಮಾಣದಲ್ಲಿ ಹಾನಿಯಾದ ಮನೆಗಳಿಗೆ ಸಂಬಂಧಪಟ್ಟಂತೆ ಪರಿಹಾರವನ್ನು ಶೀಘ್ರ ನೀಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಎಲ್ಲಾ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಎಲ್ಲಾ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಮಳೆ ನಷ್ಟ ಪರಿಹಾರ ನೀಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಮಳೆಯಿಂದ ಮೃತಪಟ್ಟ 8 ಪ್ರಕರಣಗಳ ವಾರಸುದಾರರಿಗೆ ಈಗಾಗಲೇ ಪರಿಹಾರ ನೀಡಲಾಗಿದ್ದು, ಹಾನಿಗೊಳಗಾದ ಮನೆ ಮಾಲೀಕರಿಗೆ ಪರಿಹಾರ ನೀಡುವ ಕೆಲವೇ ಪ್ರಕರಣಗಳು ಬಾಕಿ ಇದ್ದು, ಕೂಡಲೇ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸಬೇಕೆಂದು ಅವರು ನಿರ್ದೇಶನ ನೀಡಿದರು.
ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿಂದ ಮೃತಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿರುವ ಸ್ವೀಕೃತ ಎಲ್ಲಾ ಅರ್ಜಿಗಳನ್ನು ಅನುಮೋದಿಸಿ ಈಗಾಗಲೇ ಪರಿಹಾರ ನೀಡಲಾಗಿದೆ. ಕೋವಿಡ್ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ಸಂಬಂಧ ಯಾವುದೇ ಅರ್ಜಿಯನ್ನು ವಿಲೇವಾರಿ ಮಾಡದೆ ಬಾಕಿ ಇಟ್ಟುಕೊಂಡು ವಿಳಂಬ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಕೋವಿಡ್ ಪರಿಹಾರದ ಯಾವುದೇ ಅರ್ಜಿಯನ್ನು ಬಾಕಿ ಇಟ್ಟುಕೊಳ್ಳದೆ ಒಂದು ವಾರದೊಳಗಾಗಿ ವಿಲೇವಾರಿ ಮಾಡಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಮನೆ ಇಲ್ಲದ ಗ್ರಾಮೀಣ ಪ್ರದೇಶದವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಬಾಕಿ ಇರುವ ಮನೆ ನಿರ್ಮಾಣ ಕಾಮಗಾರಿಯನ್ನು ಅಕ್ಟೋಬರ್ ಮಾಹೆಯೊಳಗೆ ಪೂರ್ಣಗೊಳಿಸತಕ್ಕದ್ದು ಎಂದು ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಯಡಿ 2010 ರಿಂದ 2021ರವರೆಗೆ 21166 ಮನೆಗಳ ನಿರ್ಮಾಣ ಮಾಡಬೇಕಾಗಿದ್ದು, ಈ ಪೈಕಿ ೫೫೫೪ 5554 ಮನೆಗಳು ಗೋಡೆ ಮತ್ತು ಛಾವಣಿ ಹಂತದಲ್ಲಿವೆ. ಬುನಾದಿ ಹಂತದಲ್ಲಿರುವ 8115 ಮನೆಗಳ ನಿರ್ಮಾಣ ಕಾಮಗಾರಿಯನ್ನೂ ಸಹ ಅಕ್ಟೋಬರ್ ಮಾಹೆಯೊಳಗೆ ಪೂರ್ಣಗೊಳಿಸಬೇಕು. ಈವರೆಗೂ ನಿರ್ಮಾಣ ಕಾರ್ಯ ಪ್ರಾರಂಭಿಸದೇ ಇರುವ 7497 ಮನೆ ನಿರ್ಮಾಣ ಕಾರ್ಯವನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. ಪ್ರಸಕ್ತ ವರ್ಷದಲ್ಲಿ ಸುಮಾರು 12210 ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಫಲಾನುಭವಿಗಳನ್ನು ಆಯ್ಕೆ ಮಾಡಿ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ ಈಗಾಗಲೇ ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ 9,000 ಹಕ್ಕುಪತ್ರಗಳು ಬಂದಿದ್ದು, ಹಕ್ಕುದಾರರಿಗೆ ಶೀಘ್ರವೇ ಪತ್ರಗಳನ್ನು ನೀಡಲಾಗುವುದು. ಹಕ್ಕುಪತ್ರ ಪಡೆದವರು ಕೂಡಲೇ ಮನೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕೆಂದು ಸೂಚನೆ ನೀಡಲಾಗಿದೆ. ತಹಶೀಲ್ದಾರರು ತಮ್ಮ ತಾಲೂಕುಗಳಲ್ಲಿ ವಸತಿ ಯೋಜನೆಗಾಗಿ ಮಂಜೂರು ಮಾಡಿರುವ ಜಮೀನನ್ನು ಹದ್ದುಬಸ್ತು ಮಾಡಿ ನಿವೇಶನವಾಗಿ ಪರಿವರ್ತಿಸಿ ಸೆಪ್ಟೆಂಬರ್ ಮಾಹೆಯೊಳಗೆ ಹಂಚಿಕೆ ಮಾಡುವಲ್ಲಿ ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜನಪ್ಪ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಹಾಗೂ ವಾಜಪೇಯಿ ವಸತಿ ಯೋಜನೆಯಡಿ 2021-22ನೇ ಸಾಲಿನಲ್ಲಿ 1000 ಮನೆಗಳನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಗುರಿ ನಿಗಧಿಪಡಿಸಲಾಗಿದೆ. ಇದರಲ್ಲಿ 441ಫಲಾನುಭವಿಗಳನ್ನು ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯಲಾಗಿದ್ದು, 126 ಫಲಾನುಭವಿಗಳ ಪಟ್ಟಿಯನ್ನು ಅನುಮೋದನೆಗಾಗಿ ಸಲ್ಲಿಸಬೇಕಾಗಿದೆ. ಉಳಿದಂತೆ 433 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ವಸತಿ ಯೋಜನೆಯಡಿ ಫಲಾನುಭವಿ ಆಯ್ಕೆಯಲ್ಲಿ ಲೋಪವಾಗಬಾರದು. ಒಮ್ಮೆ ಆಯ್ಕೆ ಮಾಡಿದ ಫಲಾನುಭವಿಯನ್ನು ಮತ್ತೊಮ್ಮೆ ಆಯ್ಕೆ ಮಾಡಬಾರದು. “ಸರ್ವರಿಗೂ ಸೂರು” ನೀಡಬೇಕೆಂಬ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಪ್ರಗತಿ ಸಾಧಿಸಬೇಕು. ಈ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.
ಈ ವಸತಿ ಯೋಜನೆಗಳಡಿ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣಪಂಚಾಯ್ತಿ ವ್ಯಾಪ್ತಿಯ ನಿವೇಶನ ಹೊಂದಿರುವ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಸಾಮಾನ್ಯ ವರ್ಗದವರಿಗೆ 1.20 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 2ಲಕ್ಷ ರೂ.ಗಳ ನೆರವು ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವಿ. ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ತಹಶೀಲ್ದಾರ್ ಮೋಹನ್ ಕುಮಾರ್, ಭೂದಾಖಲೆಗಳ ಉಪನಿರ್ದೇಶಕ ಸುಜಯ್, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.