Saturday, September 21, 2024
Google search engine
Homegovernanceಮಳೆಯಿಂದ ಮನೆ ಹಾನಿ: ಶೀಘ್ರ ಪರಿಹಾರ ನೀಡಲು ಜಿಲ್ಲಾಧಿಕಾರಿ ಸೂಚನೆ

ಮಳೆಯಿಂದ ಮನೆ ಹಾನಿ: ಶೀಘ್ರ ಪರಿಹಾರ ನೀಡಲು ಜಿಲ್ಲಾಧಿಕಾರಿ ಸೂಚನೆ

Publicstory/prajayoga

ತುಮಕೂರು: ಜಿಲ್ಲೆಯಲ್ಲಿ ಕಳೆದ ಜುಲೈ ಮಾಹೆಯ ಅಂತ್ಯ ಹಾಗೂ ಆಗಸ್ಟ್ ಮಾಹೆಯ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದ ಭಾಗಶಃ ಮತ್ತು ಪೂರ್ಣ ಪ್ರಮಾಣದಲ್ಲಿ ಹಾನಿಯಾದ ಮನೆಗಳಿಗೆ ಸಂಬಂಧಪಟ್ಟಂತೆ ಪರಿಹಾರವನ್ನು ಶೀಘ್ರ ನೀಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಎಲ್ಲಾ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಎಲ್ಲಾ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಮಳೆ ನಷ್ಟ ಪರಿಹಾರ ನೀಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಮಳೆಯಿಂದ ಮೃತಪಟ್ಟ 8 ಪ್ರಕರಣಗಳ ವಾರಸುದಾರರಿಗೆ ಈಗಾಗಲೇ ಪರಿಹಾರ ನೀಡಲಾಗಿದ್ದು, ಹಾನಿಗೊಳಗಾದ ಮನೆ ಮಾಲೀಕರಿಗೆ ಪರಿಹಾರ ನೀಡುವ ಕೆಲವೇ ಪ್ರಕರಣಗಳು ಬಾಕಿ ಇದ್ದು, ಕೂಡಲೇ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸಬೇಕೆಂದು ಅವರು ನಿರ್ದೇಶನ ನೀಡಿದರು.

ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿಂದ ಮೃತಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿರುವ ಸ್ವೀಕೃತ ಎಲ್ಲಾ ಅರ್ಜಿಗಳನ್ನು ಅನುಮೋದಿಸಿ ಈಗಾಗಲೇ ಪರಿಹಾರ ನೀಡಲಾಗಿದೆ.  ಕೋವಿಡ್ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ಸಂಬಂಧ ಯಾವುದೇ ಅರ್ಜಿಯನ್ನು ವಿಲೇವಾರಿ ಮಾಡದೆ ಬಾಕಿ ಇಟ್ಟುಕೊಂಡು ವಿಳಂಬ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಕೋವಿಡ್ ಪರಿಹಾರದ ಯಾವುದೇ ಅರ್ಜಿಯನ್ನು ಬಾಕಿ ಇಟ್ಟುಕೊಳ್ಳದೆ ಒಂದು ವಾರದೊಳಗಾಗಿ ವಿಲೇವಾರಿ ಮಾಡಬೇಕು.  ತಪ್ಪಿದಲ್ಲಿ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಮನೆ ಇಲ್ಲದ ಗ್ರಾಮೀಣ ಪ್ರದೇಶದವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಬಾಕಿ ಇರುವ ಮನೆ ನಿರ್ಮಾಣ ಕಾಮಗಾರಿಯನ್ನು ಅಕ್ಟೋಬರ್ ಮಾಹೆಯೊಳಗೆ ಪೂರ್ಣಗೊಳಿಸತಕ್ಕದ್ದು ಎಂದು ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಯಡಿ 2010 ರಿಂದ 2021ರವರೆಗೆ 21166 ಮನೆಗಳ ನಿರ್ಮಾಣ ಮಾಡಬೇಕಾಗಿದ್ದು, ಈ ಪೈಕಿ ೫೫೫೪ 5554 ಮನೆಗಳು ಗೋಡೆ ಮತ್ತು ಛಾವಣಿ ಹಂತದಲ್ಲಿವೆ.  ಬುನಾದಿ ಹಂತದಲ್ಲಿರುವ  8115 ಮನೆಗಳ ನಿರ್ಮಾಣ ಕಾಮಗಾರಿಯನ್ನೂ ಸಹ ಅಕ್ಟೋಬರ್ ಮಾಹೆಯೊಳಗೆ ಪೂರ್ಣಗೊಳಿಸಬೇಕು. ಈವರೆಗೂ ನಿರ್ಮಾಣ ಕಾರ್ಯ ಪ್ರಾರಂಭಿಸದೇ ಇರುವ 7497 ಮನೆ ನಿರ್ಮಾಣ ಕಾರ್ಯವನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. ಪ್ರಸಕ್ತ ವರ್ಷದಲ್ಲಿ ಸುಮಾರು 12210 ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಫಲಾನುಭವಿಗಳನ್ನು ಆಯ್ಕೆ ಮಾಡಿ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರದಿಂದ ಈಗಾಗಲೇ ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ 9,000 ಹಕ್ಕುಪತ್ರಗಳು ಬಂದಿದ್ದು, ಹಕ್ಕುದಾರರಿಗೆ ಶೀಘ್ರವೇ ಪತ್ರಗಳನ್ನು ನೀಡಲಾಗುವುದು.  ಹಕ್ಕುಪತ್ರ ಪಡೆದವರು ಕೂಡಲೇ ಮನೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕೆಂದು ಸೂಚನೆ ನೀಡಲಾಗಿದೆ. ತಹಶೀಲ್ದಾರರು ತಮ್ಮ ತಾಲೂಕುಗಳಲ್ಲಿ ವಸತಿ ಯೋಜನೆಗಾಗಿ ಮಂಜೂರು ಮಾಡಿರುವ ಜಮೀನನ್ನು ಹದ್ದುಬಸ್ತು ಮಾಡಿ ನಿವೇಶನವಾಗಿ ಪರಿವರ್ತಿಸಿ ಸೆಪ್ಟೆಂಬರ್ ಮಾಹೆಯೊಳಗೆ ಹಂಚಿಕೆ ಮಾಡುವಲ್ಲಿ ಕ್ರಮವಹಿಸಬೇಕೆಂದು ಸೂಚನೆ ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜನಪ್ಪ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಹಾಗೂ ವಾಜಪೇಯಿ ವಸತಿ ಯೋಜನೆಯಡಿ 2021-22ನೇ ಸಾಲಿನಲ್ಲಿ 1000 ಮನೆಗಳನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಗುರಿ ನಿಗಧಿಪಡಿಸಲಾಗಿದೆ.  ಇದರಲ್ಲಿ 441ಫಲಾನುಭವಿಗಳನ್ನು ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯಲಾಗಿದ್ದು, 126 ಫಲಾನುಭವಿಗಳ ಪಟ್ಟಿಯನ್ನು ಅನುಮೋದನೆಗಾಗಿ ಸಲ್ಲಿಸಬೇಕಾಗಿದೆ.  ಉಳಿದಂತೆ 433 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ವಸತಿ ಯೋಜನೆಯಡಿ ಫಲಾನುಭವಿ ಆಯ್ಕೆಯಲ್ಲಿ ಲೋಪವಾಗಬಾರದು. ಒಮ್ಮೆ ಆಯ್ಕೆ ಮಾಡಿದ ಫಲಾನುಭವಿಯನ್ನು ಮತ್ತೊಮ್ಮೆ ಆಯ್ಕೆ ಮಾಡಬಾರದು.  “ಸರ್ವರಿಗೂ ಸೂರು” ನೀಡಬೇಕೆಂಬ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಪ್ರಗತಿ ಸಾಧಿಸಬೇಕು.  ಈ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.

ಈ ವಸತಿ ಯೋಜನೆಗಳಡಿ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣಪಂಚಾಯ್ತಿ ವ್ಯಾಪ್ತಿಯ ನಿವೇಶನ ಹೊಂದಿರುವ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಸಾಮಾನ್ಯ ವರ್ಗದವರಿಗೆ 1.20 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 2ಲಕ್ಷ ರೂ.ಗಳ ನೆರವು ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ವಿ. ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ತಹಶೀಲ್ದಾರ್ ಮೋಹನ್ ಕುಮಾರ್, ಭೂದಾಖಲೆಗಳ ಉಪನಿರ್ದೇಶಕ ಸುಜಯ್, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?