Sunday, March 15, 2026
Google search engine
Home Blog Page 85

ಕೆನರಾ ಬ್ಯಾಂಕ್ ನಿಂದ ಅಸಂಘಟಿತ ಕಾರ್ಮಿಕರಿಗೆ ವಿವಿಧ ಸೌಲಭ್ಯ

Publicstory/prajayoga

ತುಮಕೂರು: ದೇಶದ ಪ್ರತಿಯೊಬ್ಬರಿಗೂ ಸರ್ಕಾರದ ಸವಲತ್ತು ಸಿಕ್ಕಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ನಗರ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ನಗರದ ಬಿಜಿಎಸ್ ಟೌನ್ ಹಾಲ್ ವೃತ್ತದಲ್ಲಿ ಕಾರ್ಪೊರೇಷನ್ ಪರಿಮಿತಿಯಲ್ಲಿ ಭಾನುವಾರ ಕೆನರಾ ಬ್ಯಾಂಕ್ ವತಿಯಿಂದ ನಡೆದ ವಸ್ತುಪ್ರದರ್ಶನ ಹಾಗೂ ಜೀರೋ ಬ್ಯಾಲೆನ್ಸ್ ಖಾತೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಸ್ವಾತಂತ್ರ್ಯದ ಅರ್ಥ ತಿಳಿಯಬೇಕಾದರೆ ಸರ್ಕಾರ ಮತ್ತು ನಮ್ಮ ದೇಶ ಶ್ರಮಿಕರಿಗೆ, ಜನರಿಗೆ ಸೌಕರ್ಯ ಕೊಟ್ಟಾಗ ಮಾತ್ರ ಸ್ವಾತಂತ್ರ್ಯದ ಬಗ್ಗೆ ಅರಿವು ಬರುತ್ತದೆ ಎಂದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಸಾಕಷ್ಟು ಜನಪರ ಯೋಜನೆಗಳು ಜಾರಿಗೆ ತಂದಿದ್ದು, ಆ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ತಲುಪುತ್ತಿವೆ. ಅದಕ್ಕೆ ನಾವು ಹೆಮ್ಮೆ ಪಡಬೇಕಾಗುತ್ತದೆ. ಇಂದು ಜನ್ ಧನ್ ಯೋಜನೆ, ಸಾಮಾಜಿಕ ಭದ್ರತೆ ಯೋಜನೆ, ಅಟಲ್ ಪಿಂಚಣಿ ಯೋಜನೆ, ಉಜ್ವಲ ಯೋಜನೆ, ಬೀದಿ ವ್ಯಾಪಾರ ಮಾಡುವವರಿಗೆ ಸ್ವನಿಧಿ ಯೋಜನೆ ಮುಂತಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಉದ್ಧೇಶ ಪ್ರಧಾನಿಯವರದ್ದಾಗಿದೆ ಎಂದು ಹೇಳಿದರು.

ಟೀ ಮಾರುತ್ತಿದ್ದಂತಹ ವ್ಯಕ್ತಿ ಇಂದು ದೇಶದ ಚುಕ್ಕಾಣಿ ಹಿಡಿದಿದ್ದಾರೆ ಎಂದರೆ ದೇಶದ ಪ್ರತಿಯೊಬ್ಬ ಶ್ರಮಿಕರ ಬಡವರ ಕಷ್ಟವನ್ನು ಅರಿತಿದ್ದಾರೆ. ಜನರ ಕಷ್ಟಗಳನ್ನು ಅರಿತ ಅವರು ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

ಪ್ರತಿಯೊಬ್ಬರೂ ಸ್ವಾವಲಂಬಿ ಜೀವನ ನಡೆಸಲು ವಾತಾವರಣ ಸೃಷ್ಠಿಮಾಡುತ್ತಿದ್ದಾರೆ. ಇಂದು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ.

ದೇಶಕ್ಕಾಗಿ ಅನೇಕರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ, ಅದರಲ್ಲಿ ಸುಭಾಷ್ ಚಂದ್ರಬೋಸ್, ಮಹಾತ್ಮಗಾಂಧಿ, ಭಗತ್‌ಸಿಂಗ್, ಚಂದ್ರಶೇಖರ್ ಆಜಾದ್ ಮುಂತಾದವರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇಂದು ನಾವು 75 ವರ್ಷ ಮುಗಿಸಿ 76ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

ಕೆನರಾ ಬ್ಯಾಂಕ್ ವ್ಯವಸ್ಥಾಪಕ ದೀಪಕ್ ಮಾತನಾಡಿ, ಇಂದು ಕೆನರಾ ಬ್ಯಾಂಕ್ ವತಿಯಿಂದ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ ಸಿಕ್ಕಿದಾಗಿನಿಂದ ನಡೆದಿರುವ ಘಟನೆಗಳ ಬಗ್ಗೆ ಚಿತ್ರಗಳ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಅಸಂಘಟಿತ ಕಾರ್ಮಿಕ ವರ್ಗಕ್ಕೆ ಜೀರೋ ಬ್ಯಾಲೆನ್ಸ್ ಖಾತೆಯನ್ನು ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಆಟೋ ಚಾಲಕರು, ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಿಗಳಿಗೆ ಕ್ಯೂ ಆರ್ ಕೋಡ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಮೊಬೈಲ್ ಮೂಲಕ ತಮ್ಮ ಅಕೌಂಟನ್ನು ಚಲಾಯಿಸಬಹುದು. ಇಂದು ಸರ್ಕಾರದ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲುಪುತ್ತಿದೆ ಎಂದರೆ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಪಡೆಯಬೇಕೆಂಬ ಉದ್ಧೇಶ ಎಂದರು.

ಮಧ್ಯವತಿಗಳಿಗೆ ಅವಕಾಶವಿಲ್ಲ. ಉಚಿತವಾಗಿ ಅಕೌಂಟ್ ಓಪೆನ್ ಮಾಡಿಕೊಡಲಾಗುತ್ತದೆ. ಜೊತೆಗೆ ಕ್ಯೂ ಆರ್ ಕೋಡ್‌ಗಳನ್ನೂ ಸಹ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ನಗರದ ನಾಗರೀಕರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಯೋಧ ನಂಜುಂಡಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ರೇಣುಕ, ಕೊಪ್ಪಳ್ ನಾಗರಾಜ್, ಆಟೋ ಯಡಿಯೂರಪ್ಪ, ಟಿ.ಆರ್. ಸದಾಶಿವಯ್ಯ, ಶಬ್ಬೀರ್ ಅಹಮದ್, ಕೋಮಲ, ಗೋಪಿ, ಕೆ.ವಿ.ಪ್ರಕಾಶ್, ರಿಯಾಜ್ ಮುಂತಾದವರು ಭಾಗವಹಿಸಿದ್ದರು.

ಭಾನುವಾರದ ಕವನ : ಕಣ್ಣೀರು

ಡಾ. ರಜನಿ

ಕಣ್ಣೀರು


ಹುಡುಕಿದ
ಕೆಣಕಿದ…
ಆಹ್ವಾನ ನೀಡಿದ
ಕಣ್ಗಳಲ್ಲಿ …
ನೀರು ಹರಿಸಲು ನಿನಗೆ
ಮನಸ್ಸಾದರೂ ಹೇಗೆ ಬಂತು?

ಸುರಿಸಬೇಡ
ಎಂದು ಮೊರೆ
ಇಡುತ್ತಿದೆ ಕಣ್ಣೀರ ಬಿಂದು…
ರೆಪ್ಪೆಗಳ ಒಡ್ಡು ಹಾಕಿರುವೆ..
ಸುರಿಸಿದರೆ ಗೊತ್ತು….
ಜನ ಸುರಿಸುವುದನ್ನೆ ಕಾಯುತ್ತಿದ್ದಾರೆ ಎಂದು.

ನನ್ನ ರಗ್ಗೊಳಗೆ ಸುರಿಸಿದ
ಕಣ್ಣೀರು
ಪ್ರವಾಹವನ್ನೆ
ಸೃಷ್ಟಿಸಬಹುದಿತ್ತು.

ನೀನು ಅರ್ಥ
ಮಾಡಿಕೂಳ್ಳದ
ಭಾವನೆಗಳೇ
ನನ್ನ ಕಣ್ಣೀರು
ಎಂಬುದು ನಿನಗೆ
ಗೊತ್ತಾ?

ತುಳುಕಲಿ ಬಿಡು


ತುಂಬದೆ ತುಳುಕದು
ತುಂಬಿಕೊಂಡದ್ದಾದರೂ
ಏತಕ್ಕೆ?

ಕರೆದ ಕಣ್ಣುಗಳನ್ನೇ
ಕೊಳ ಮಾಡಿದವನ
ನೆನೆದು ?

ಹೃದಯದ ಭಾಷೆ
ಅರಿತವನಿಗೆ
ಕಣ್ಣು ಕೆರೆಯಾದದ್ದು ಕಾಣದೆ ?

ರೆಪ್ಪೆ
ಮುತ್ತಿಕ್ಕಿದವನಿಗೆ
ಕಣ್ಣೀರು ಕುಡಿಯಲಾಗದೆ ?

ಕಣ್ಣು
ಮೋಸ ಹೋಯಿತೆ?
ಹೃದಯ ಕಣ್ಣಿಗೆ
ಸನ್ನೆ ನೀಡಲಿಲ್ಲವೆ?

ತುಳುಕಿದರೆ
ತುಳಿಯುವರೆ?

ಅಲ್ಲೇ ಹಿಂಗಿಸಿ
ಸುಳ್ಳು ನಗು
ನಗುವೆಯಾ?

ಹೀರಿ
ಹಿಂಗಿದರೂ …
ಕೆಂಪಾಗಿ ಕಾಣದೆ ?

ಕೆನ್ನೆ ಕೆಂಪಾಗಿ
ಕಣ್ಣು ಅರಳಿದ್ದಕ್ಕೆ
ಈ ಶಿಕ್ಷೆಯೆ?

ನುಂಗು ನುಂಗು …
ಕಣ್ಣೀರ ಕೊಳಕ್ಕೂ
ಧುಮಕಿ ನಗಿಸುವ

ಚೋರ ಅವನು …

ಬಸ್ ಡಿಕ್ಕಿ : 3 ಕೋಣಗಳು ಸಾವು ; ಬೈಕ್ ಸವಾರನಿಗೆ ತೀವ್ರ ಗಾಯ

Publicstory/prajayoga

ತುರುವೇಕೆರೆ: ಕೆಎಸ್ಆರ್ಟಿಸಿ ಸಾರಿಗೆ ಬಸ್ ಡಿಕ್ಕಿ ಹೊಡೆದು ಮೂರು ಕೋಣಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರನಿಗೆ ತೀವ್ರ ಗಾಯವಾಗಿರುವ ಘಟನೆ  ತಾಲೂಕಿನ ಬಾಣಸಂದ್ರದಲ್ಲಿ ಇಂದು ರಾತ್ರಿ ನಡೆದಿದೆ.

ಬೈಕ್ ಸವಾರ ಶಿವಕುಮಾರ್ ಗಾಯಗೊಂಡ ವ್ಯಕ್ತಿ.
ಕೆ.ಬಿ.ಕ್ರಾಸ್ ಕಡೆಯಿಂದ ತುರುವೇಕೆರೆಗೆ ಬಸ್ ಸಾಗಿ ಬರುತ್ತಿತ್ತು. ತೋಟಕ್ಕೆ ಮೇಯಲು ಹೋಗಿದ್ದ 6 ಕೋಣಗಳು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಸ್ಥಳದಲ್ಲೇ ಮೂರು ಮೃತಪಟ್ಟಿವೆ. ಚಾಲಕನ ನಿಯಂತ್ರಣ ತಪ್ಪಿದ ಬಸ್, ಕೋಣಗಳಿಗೆ ಡಿಕ್ಕಿಹೊಡೆದ ನಂತರ ಬೈಕ್ ಸವಾರನಿಗೆ ಗುದ್ದಿದೆ. ತೀವ್ರತರ ಗಾಯಗೊಂಡ ಶಿವಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಣಸಂದ್ರ ರಸ್ತೆಯಲ್ಲಿ ಹಂಪ್ಸ್‌ಗಳು ಇಲ್ಲದಿರುವುದು ಅಪಘಾತಗಳಿಗೆ ಕಾರಣವಾಗಿದೆ. ಶೀಘ್ರವಾಗಿ ರಸ್ತೆ ಉಬ್ಬುಗಳ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದರು.

ತುಮಕೂರು ತಹಶಿಲ್ದಾರ್ ವಜಾಕ್ಕೆ ಡಿಎಸ್‌ಎಸ್ ರಾಮಯ್ಯ ಆಗ್ರಹ

Publicstory/prajayoga

ತುಮಕೂರು: ಕುಳುವಾಡಿಕೆ ಜಮೀನಿನ ಹಂಚಿಕೆ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ, ತುಮಕೂರು ತಹಶಿಲ್ದಾರ್, ಸರ್ವೆ ನಂ 91-92 ಹಾಗು 08 ರ ಜಮೀನನಲ್ಲಿ ಕೆಲವೇ ಜನರ ಹೆಸರುಗಳನ್ನು ಪಹಣಿ ಕಲಂನಲ್ಲಿ ನಮೂದು ಮಾಡಿ ಅನ್ಯಾಯ ಮಾಡಿದ್ದಾರೆ. ಕೋಟ್ಯಂತರ ರೂ. ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸಿರುವ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಆಗ್ರಹಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ತಾಲೂಕು ಕಸಬಾ ಹೋಬಳಿ ಸರ್ವೆ ನಂಬರ್ 08 ರ ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಭಾಗ ಸುಮಾರು 4.18 ಗುಂಟೆ ಹಾಗೂ ಸರ್ವೆ ನಂ 91-92ರಲ್ಲಿ 30 ಗುಂಟೆ ಜಮೀನು ಕಳೆದ 50 ವರ್ಷಗಳಿಂದಲೂ ವಿವಾದದಲ್ಲಿದೆ. ಮೂಲತಃ ಈ ಭೂಮಿ ದಲಿತರಾದ ರಾಮ, ಲಕ್ಕ ಮತ್ತು ಪಠಾಣ್ ಎಂಬುವವರಿಗೆ ಮಂಜೂರಾಗಿದ್ದು, ಸುಮಾರು 50 ರಿಂದ 60 ಜನರು ಈ ಕುಟುಂಬದಲ್ಲಿದ್ದಾರೆ. ಆದರೆ ಕೇವಲ ಮೂರು ಜನರ ಹೆಸರಿಗೆ ಪಹಣಿ ಕೂರಿಸಿ ಉಳಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ತಹಶಿಲ್ದಾರ್ ವಿರುದ್ಧ ಆಗಸ್ಟ್ 16ರಿಂದ ನಿರಂತರ ಹೋರಾಟ ನಡೆಸಲಾಗುವುದು ಎಂದರು.

ಸದರಿ ಆಸ್ತಿಗೆ ಸಂಬಂಧಸಿದಂತೆ ಕುಟುಂಬದವರ ನಡುವೆಯೇ ಆಸ್ತಿಯ ಸಮಾನ ಹಂಚಿಕೆಗಾಗಿ ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಇದೆ. ಸದರಿ ವಿಚಾರವನ್ನು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿ ಕಾರಿಗಳು ಮತ್ತು ತಹಶಿಲ್ದಾರ್ ಗಳಿಗೆ ಲಿಖಿತವಾಗಿ ದೂರು ನೀಡಲಾಗಿದೆ. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯಲ್ಲಿಯೂ ಸಹ ಚರ್ಚೆ ನಡೆಸಲಾಗಿದೆ. ಇಷ್ಟಿದ್ದರೂ ತುಮಕೂರು ತಾಲೂಕು ತಹಶೀಲ್ದಾರರು ಏಕಾಏಕಿ ಕುಟುಂಬದ ಸದಸ್ಯರಲ್ಲಿ ಹಲವರನ್ನು ಕೈಬಿಟ್ಟು, ಕೆಲವರ ಹೆಸರನ್ನು ಮಾತ್ರ ಪಹಣಿ ಕಲಂ ನಲ್ಲಿ ಕೂರಿಸಿ, ದಲಿತರ ಜಮೀನಿಗೆ ಸಂಚಕಾರ ತರಲು ಹೊರಟಿದ್ದಾರೆ ಎಂದರು.

ಕಾನೂನು ಉಲ್ಲಂಘನೆ ಮಾಡಿ, ಕೆಲವರನ್ನು ಮಾತ್ರ ಪಹಣಿ ಕಲಂನಲ್ಲಿ ಕೂರಿಸಿರುವ ತಹಶಿಲ್ದಾರ್ ಮೋಹನ್ ಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.  ಈ ನಿಟ್ಟಿನಲ್ಲಿ ಆಗಸ್ಟ್ 16 ರಿಂದ ನಿರಂತರವಾಗಿ ಹೋರಾಟ ನಡೆಸುವುದಲ್ಲದೆ, ಸದರಿ ವಿಚಾರವನ್ನು ಲೋಕಾಯುಕ್ತ, ಕಂದಾಯ ಮಂತ್ರಿಗಳು, ಅಧಿಕಾರಿಗಳ ಗಮನಕ್ಕೆ ತಂದು ಅನ್ಯಾಯದ ವಿರುದ್ಧ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ತುಮಕೂರು ತಾಲೂಕು ಕಸಬಾ ಸರ್ವೆ ನಂ 08 ಮತ್ತು 91-91ರ ಜಮೀನಿಗೆ ಸಂಬಂಧಿಸಂತೆ ಈ ಹಿಂದೆ ಇದ್ದ ತಹಶಿಲ್ದಾರ್ ಗೋಪಾಲಯ್ಯ ಮತ್ತು ಯೋಗಾನಂದ ಕುಮಾರ್ ಅವರು ಮಾಡಿರುವ ಏಕಪಕ್ಷೀಯ ಆದೇಶವನ್ನು ಪ್ರಶ್ನಿಸಿ, 2020ರಲ್ಲಿಯೇ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಅದು ವಿಚಾರಣೆಯಲ್ಲಿದೆ. ಕುಳುವಡಿಕೆ ಜಮೀನು ಮಂಜೂರಾದ ರಾಮ, ಲಕ್ಕ ಮತ್ತು ಪಠಾಣ್ ಈ ಎಲ್ಲಾ ಸದಸ್ಯರನ್ನು ಜಮೀನಿನ ವಾರುಸುದಾರರಾಗಿ ಪರಿಗಣಿಸಬೇಕು. ಮೂಲ ವಂಶವೃಕ್ಷದಲ್ಲಿ ಬರುವ ಎಲ್ಲರಿಗೂ ಆಸ್ತಿಯಲ್ಲಿ ಪಾಲು ಬರಬೇಕೆಂಬ ವ್ಯಾಜ್ಯವಿದೆ. ಹಾಗಿದ್ದರೂ ಕೇವಲ ಮೂವರ ಹೆಸರಿಗೆ ಪಹಣಿ ಮಾಡಿ, ಕೋಟ್ಯಾಂತರ ರೂ ಭೂಮಿಯನ್ನು ಒಡೆಯಲು ತಹಶಿಲ್ದಾರ್ ಹುನ್ನಾರ ನಡೆಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬುದು ನಮ್ಮ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎ.ನಾಗೇಶ್, ಲಕ್ಷ್ಮೀನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದ್ವಂದ್ವ ನಿಲುವಿನ ಬಿಜೆಪಿಗೆ ಧ್ವಜ ಹಾರಿಸುವ ನೈತಿಕತೆಯಿಲ್ಲ : ಇಲಾಹಿ ಸಿಖಂದರ್

Publicstory/prajayoga

ತುಮಕೂರು: ಮನೆ ಮೆನೆಯ ಮೇಲೆ ತಿರಂಗ ಧ್ವಜವನ್ನು ಹಾರಿಸುತ್ತೇವೆ ಎಂದು ಹೇಳುವ ಬಿಜೆಪಿಗೆ ಧ್ವಜ ಹಾರಿಸುವ ನೈತಿಕತೆ ಇಲ್ಲ ಎಂದು ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಇಲಾಹಿ ಸಿಖಂದರ್ ಆರೋಪಿಸಿದರು.

ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ನೇತೃತ್ವದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಅಹೋರಾತ್ರಿ ಪ್ರತಿಭಟನೆಯನ್ನು ಉದ್ದೇಶಿಸಿ ಶುಕ್ರವಾರ ಅವರು ಮಾತನಾಡಿದರು.

ಕೇಸರಿ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಮಾಡುತ್ತೇವೆ ಎಂದು ಹೇಳುವ ಬಿಜೆಪಿ ಮುಖಂಡರು ಮನೆಮನೆಯ ಮೇಲೆ ತಿರಂಗ ಧ್ವಜವನ್ನು ಹಾರಿಸುತ್ತೇವೆ ಎಂದು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ರಾಷ್ಟ್ರಧ್ವಜವನ್ನು ಹಾರಿಸುವ ನೈತಿಕತೆ ಅವರಿಗೆ ಇಲ್ಲ. ಇದು ಕೇವಲ ನಾಟಕವಾಗಿದ್ದು, ಜನರು ಇದನ್ನು ಪ್ರಶ್ನಿಸಬೇಕಾಗಿದೆ ಎಂದು ಟೀಕಿಸಿದರು.

ದೇಶದಲ್ಲಿ ಜನಸಾಮಾನ್ಯರು ನಿರುದ್ಯೋಗ, ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅಮೃತ ಮಹೋತ್ಸವವನ್ನು ಆಚರಿಸುವ ಸ್ಥಿತಿಯಲ್ಲಿ ನಾವು ಇದ್ದೇವೆಯೇ ಎಂದು ಆಲೋಚಿಸಬೇಕಾದ ಪರಿಸ್ಥಿತಿ ಇದೆ ಎಂದು ಸಿಖಂದರ್ ಹೇಳಿದರು.

ಇಂತಹ ಸಂಕಷ್ಟದ ಸಮಯದಲ್ಲಿ ನಮಗೆ ನಿರುದ್ಯೋಗದಿಂದ ಮುಕ್ತಿ ಬೇಕಾಗಿದೆ. ಬೆಲೆ ಏರಿಕೆಯಿಂದ ಸ್ವಾತಂತ್ರ್ಯ ಬೇಕಾಗಿದೆ. ಅನಗತ್ಯ ಮತ್ತು ಗೊಂದಲದ ಗೂಡಾಗಿರುವ ಜಿಎಸ್.ಟಿ.ಯಿಂದ ನಮಗೆ ಸ್ವಾತಂತ್ರ್ಯ ಬೇಕಾಗಿದೆ ಎಂದು ಅವರು ತಿಳಿಸಿದರು.

ನಿತ್ಯವೂ ಜನರು ಸಂಕಟದಿಂದ ನರಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಬದಲಿಗೆ ಕೋಮುವಾದಕ್ಕೆ ಪ್ರಚೋದನೆ ನೀಡುತ್ತ ಯುವಪೀಳಿಗೆಯನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆಪಾದಿಸಿದರು.

ರಕ್ತದ ಕಣ ಕಣದಲ್ಲೂ ರಾಷ್ಟ್ರಾಭಿಮಾನ ತುಂಬಿರಬೇಕು : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

Publicstory/prajayoga

ತುಮಕೂರು:  ಜಿಲ್ಲೆಯಲ್ಲಿ ಪ್ರತಿ ಮನೆ ಮೇಲೂ ಸಹ ತ್ರಿವರ್ಣ ಧ್ವಜ ಹಾರಿಸುತ್ತಿರುವುದು ದೇಶ ಪ್ರೇಮವನ್ನು ಎತ್ತಿ ತೋರಿಸುತ್ತದೆ. ನಮ್ಮ ರಕ್ತದ ಕಣ ಕಣದಲ್ಲೂ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ, ರಾಷ್ಟ್ರಾಭಿಮಾನ  ತುಂಬಿರಬೇಕು ಎಂದು ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ ಕರೆ ನೀಡಿದರು.

ನಗರದಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವವನ್ನು ವಿಶೇಷ ಮತ್ತು ಆರ್ಥಪೂರ್ಣವಾಗಿ ಆಚರಿಸಲು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ವತಿಯಿಂದ ದೇಶಕ್ಕಾಗಿ ನಡಿಗೆ ರಾಷ್ಟ್ರ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ 75ನೇ ಅಮೃತ ಮಹೋತ್ಸವ ವರ್ಷಾಚರಣೆ ಮಾಡುತ್ತಿದ್ದೇವೆ ಹಾಗೂ  ಇಂದಿನಿಂದ ಆ. 15ರ ವರೆಗೆ ಹರ್ ಘರ್ ತಿರಂಗಾ ಅಭಿಯಾನ ನಡೆಸುತ್ತಿದ್ದೇವೆ. ಜಿಲ್ಲೆಯಲ್ಲಿ 4.5 ಲಕ್ಷ ಮನೆಗಳ ಮೇಲೆ ಪ್ರತಿಯೊಬ್ಬರೂ ಧ್ವಜಾರೋಹಣ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ದೇಶದ 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ರಾಷ್ಟ್ರ ಜಾಗೃತಿ ಅಭಿಯಾನ ಮಾಡುತ್ತಿರುವುದು ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಸ್ವಾತಂತ್ರ್ಯದ ಕಿಚ್ಚಿನ ವಾತಾವರಣ ಮತ್ತೊಮ್ಮೆ ನಮ್ಮೆಲ್ಲರ ನಡುವೆ ನಿರ್ಮಾಣವಾಗಿದೆ ಎಂದರು.

ತುಮಕೂರು ವಿ.ವಿ. ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ಮಾತನಾಡಿ, ಇಡೀ ರಾಷ್ಟ್ರ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಮೂರು ದಿನಗಳ ಕಾಲ ನಡೆಯುವ ಹರ್ ಘರ್ ತಿರಂಗಾ ಯಾತ್ರೆ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸಿದರು.

ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಆರಂಭವಾದ ದೇಶಕ್ಕಾಗಿ ನಡಿಗೆ (ವಾಕಥಾನ್) ಗೆ ಬಿಗ್‌ಬಾಸ್ ಖ್ಯಾತಿಯ ಹಾಗೂ ಕಿರುತೆರೆ ನಟಿ  ಚಂದನ ಅನಂತಕೃಷ್ಣ ಚಾಲನೆ ನೀಡಿದರು. ಈ ವಾಕಥಾನ್‌ನಲ್ಲಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡು ತ್ರಿವರ್ಣ ಧ್ವಜ ಹಿಡಿದು ಸರ್ಕಾರಿ ಕಿರಿಯ ಕಾಲೇಜು, ಟೌನ್‌ಹಾಲ್ ವೃತ್ತ, ಅಶೋಕ ರಸ್ತೆ, ಸ್ವತಂತ್ರ ಚೌಕ ಮಾರ್ಗವಾಗಿ ಗಾಜಿನ ಮನೆವರೆಗೆ ದೇಶಕ್ಕಾಗಿ ನಡಿಗೆ ಜಾಥಾ ನಡೆಸಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪುರವಾಡ್, ಸಂಸದ ಜಿ.ಎಸ್. ಬಸವರಾಜು, ಗೌರವಾಧ್ಯಕ್ಷ ಎಸ್.ಪಿ. ಚಿದಾನಂದ್,  ಜಿ.ಕೆ. ಶ್ರೀನಿವಾಸ್, ವಾಸವಿ ಗುಪ್ತ, ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.

ಆಜಾದಿ ಕಾ ಅಮೃತ ಮಹೋತ್ಸವ ಅಭಿವೃದ್ಧಿಯ ಸಂಕೇತ : ಗೆಹ್ಲೋಟ್

Publicstory/prajayoga

ತುಮಕೂರು: ಆಜಾದಿ ಕಾ ಅಮೃತ ಮಹೋತ್ಸವ ಭಾರತದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿದೆ ಎಂದು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಪ್ರತಿಪಾದಿಸಿದರು.

ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರ ಜಾಗೃತಿ ಅಭಿಯಾನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಬಂದಿದೆ. ನಾವೆಲ್ಲರೂ ಸ್ವಾತಂತ್ರ್ಯ ತಂದುಕೊಟ್ಚ ಮಹನೀಯರುಗಳಿಗೆ ಚಿರಋಣಿಗಳು ಎಂದರು.

ದೇಶದ ಪ್ರತಿಯೊಬ್ಬರೂ ಭಾರತದ ಸಂವಿಧಾನದ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ದೇಶಸೇವೆಯಲ್ಲಿ ತೊಡಗಬೇಕು. ಹೀಗಾದಾಗ ಮಾತ್ರ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಆತ್ಮನಿರ್ಭರ್ ಭಾರತ್ ಆಶಯ ಪ್ರತಿಯೊಬ್ಬರಿಗೂ ಒಳಿತು ಬಯಸುವುದೇ ಆಗಿದೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭವನ್ನು ಕಣ್ತುಂಬಿಕೊಳ್ಳವ ಕ್ಷಣದಲ್ಲಿ ನಾವೆಲ್ಲರೂ ಇದ್ದೇವೆ. ಪ್ರತಿಯೊಬ್ಬರೂ ಹರ್ ಘರ್ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸಿ ದೇಶ ಪ್ರೇಮ ಮೆರೆಯಬೇಕು ಎಂದು ಅವರು ಕರೆ ನೀಡಿದರು.
ದೇಶದ ಪ್ರತಿಯೊಬ್ಬ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಿವೆ ಎಂದು ಅವರು ಹೇಳಿದರು.

ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಒಟ್ಟುಗೂಡಿ ಶ್ರಮಿಸಬೇಕು. ಆಗ ಮಾತ್ರ ಸ್ವಚ್ಛ ಪರಿಸರ ಹೊಂದಲು ಸಾಧ್ಯ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರುವ ಹಿರಿಯರನ್ನು ಗೌರವಿಸುವ ಮೂಲಕ ದೇಶಭಕ್ತಿ ಮೆರೆಯೋಣ ಎಂದು ಅವರು ತಿಳಿಸಿದರು.

ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಮಾತನಾಡಿ, 1947 ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಸಹ ಇನ್ನು ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಮಾತ್ರ ಕರೆಯಲಾಗುತ್ತಿದೆ. ಹಾಗಾಗಿ ನಮ್ಮ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ನಾವೆಲ್ಲರೂ ಮೂಲಭೂತ ಹಕ್ಕು, ಕರ್ತವ್ಯಗಳನ್ನು ಮರೆತಿದ್ದೇವೆ. ನಮ್ಮ ಮೂಲಭೂತ ಕರ್ತವ್ಯಗಳನ್ನು ಪಾಲನೆ ಮಾಡಿದಾಗ ಮಾತ್ರ ದೇಶದ ಏಳ್ಗೆ ಸಾಧ್ಯ ಎಂದರು.
ವಿದ್ಯಾರ್ಥಿಗಳು ಪ್ರಾಮಾಣಿಕತೆ, ಆತ್ಮವಿಶ್ವಾಸ ಹೊಂದಿದ್ದರೆ ಮಾತ್ರ ಜಗತ್ತಿನಲ್ಲಿ ಎಷ್ಟು ಎತ್ತರದ ಸ್ಥಾನಕ್ಕೆ ಬೇಕಾದರೂ ಹೋಗಬಹುದು. ಅಪ್ರಾಮಾಣಿಕತೆ ಮನುಷ್ಯನನ್ನು ಉತ್ತುಂಗಕ್ಕೆ ಕೊಂಡೊಯ್ಯುವುದಿಲ್ಲ ಎಂದು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ರಾಷ್ಟ್ರ, ನಾಡು, ಗಡಿ, ನುಡಿ, ನೀರಿನ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸಬೇಕು. ಅವರನ್ನು ರಾಷ್ಟ್ರಪ್ರೇಮಿಗಳನ್ನಾಗಿ ರೂಪಿಸಬೇಕು. ನಾವು ಯಾವುದೇ ಕೆಲಸ ಮಾಡುತ್ತಿದ್ದರೂ ಅದರಲ್ಲಿ ನಿಷ್ಠೆ ಇರಬೇಕು. ಆಗ ಮಾತ್ರ ರಾಷ್ಟ್ರಸೇವೆ, ರಾಷ್ಟ್ರಭಕ್ತಿಗೆ ಬೆಲೆ ಬರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯಪಾಲರು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹೊರ ತಂದಿರುವ ಸ್ಮರಣಿಕೆ ಬಿಡುಗಡೆ ಮಾಡಿ ಅಮೃತ್ ಭಾರತ್ ವೆಬ್‌ಸೈಟ್‌ನ್ನು ಲೋಕಾರ್ಪಣೆಗೊಳಿಸಿದರು.  ಜೊತೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಪ್ರಶಂಸನಾ ಪತ್ರ ಹಾಗೂ ಬಹುಮಾನ ವಿತರಿಸಿದರು.

ಸಮಾರಂಭದಲ್ಲಿ ಕ್ಯಾಪ್ಟನ್ ನವೀನ್ ನಾಗಪ್ಪ, ಸಂಸ್ಥೆಯ ಗೌರವ ಅಧ್ಯಕ್ಷ ಎಸ್.ಪಿ.ಚಿದಾನಂದ್, ಸಂಸದ ಜಿ.ಎಸ್.ಬಸವರಾಜು ಉಪಸ್ಥಿತರಿದ್ದರು.

ಮೂರು ಬಣ್ಣಗಳು ಸರ್ವಧರ್ಮ ಸಮನ್ವಯತೆಯ ಸಂಕೇತ : ಗಿರಿಜಾ ಧನಿಯಾಕುಮಾರ್

Publicstory/prajayoga

ತುಮಕೂರು: ಧೈರ್ಯ,ಶಾಂತಿ, ಸಮೃದ್ದಿ ಹಾಗೂ ಸರ್ವಧರ್ಮ ಸ್ವಮನ್ವಯತೆಯ ಸಂಕೇತವಾಗಿರುವ ಭಾರತದ ತ್ರಿವರ್ಣ ದ್ವಜವನ್ನು ದೇಶದ ನಾಗರಿಕರೆಲ್ಲರೂ ಸ್ವಾತಂತ್ರದಿನದ ಅಮೃತ ಮಹೋತ್ಸವದ ದಿನದಂದು ತಮ್ಮ ಮನೆಗಳ ಮೇಲೆ ಹಾರಿಸುವ ಮೂಲಕ ಪ್ರಧಾನಿ ಮೋದಿ ಅವರ ಆಶಯವನ್ನು ಈಡೇರಿಸುವಂತೆ ಮಹಾನಗರಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್ ಮನವಿ ಮಾಡಿದ್ದಾರೆ.

ನಗರದ ವಿಧ್ಯಾನೀಕೇತನ ಶಾಲೆಯ ಮಕ್ಕಳು, ಶಿಕ್ಷಕ ವೃಂದದವರಿಗೆ ಹರ್‌ಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಬಾವುಟ ನೀಡಿ ಮಾತನಾಡಿದ ಅವರು, ಕೇಸರಿ ಧೈರ್ಯ, ಬಳಿ ಶಾಂತಿ, ಹಸಿರು ಸಮೃದ್ಧಿ ಮತ್ತು ಬಾವುಟದ ಮದ್ಯದಲ್ಲಿರುವ ಅಶೋಕ ಚಕ್ರ ಸೌಹಾರ್ಧತೆಯ ಸಂಕೇತವಾಗಿದೆ. ಇದನ್ನು ಪ್ರತಿಯೊಬ್ಬ ಭಾರತೀಯರು ಆರ್ಥ ಮಾಡಿಕೊಂಡು ಸಹೋದರರಂತೆ ಬದುಕಬೇಕಾಗಿದೆ. ಪ್ರತಿ ದಿನ, ಪ್ರತಿ ಕ್ಷಣ ನಮ್ಮ ರಾಷ್ಟ್ರ ದ್ವಜದ ಬಗ್ಗೆ ಗೌರವ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಪ್ಲಾಸ್ಟಿಕ್ ಧ್ವಜಗಳ ಬಳಕೆಯಿಂದ ದೂರ ಉಳಿದು, ಪರಿಸರದ ಜೊತೆಗೆ, ದೇಶದ ಗೌರವವನ್ನು ಕಾಪಾಡಬೇಕಿದೆ ಎಂದರು.

ದೇಶಕ್ಕೆ ಸ್ವಾತಂತ್ರ ಬಂದ 75ನೇ ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಹರ್‌ಘರ್ ಮೇ ತಿರಂಗ್ ಕಾರ್ಯಕ್ರಮ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ ಹೋರಾಟದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ನಮ್ಮಗೆ ಸಿಕ್ಕಿರುವ ಸ್ವಾತಂತ್ರವನ್ನು ಹೇಗೆ ರಕ್ಷಿಸಿಕೊಂಡು ಹೋಗಬೇಕು ಎಂಬುದನ್ನು ಮನವರಿಕೆ ಮಾಡಿಕೊಡುವುದೇ ಆಗಿದೆ. ಹಲವರ ತ್ಯಾಗ, ಬಲಿದಾನದಿಂದ ಬಂದಿರುವ ಈ ಸ್ವಾತಂತ್ರವನ್ನು ಉಳಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸನ ಗೌರ್ನರ್ ಸುಭಾಷಿಣಿ, ನಿವೃತ ಇಂಜಿನಿಯರ್ ರವೀಶ್, ಶಾಲಾ ಆಡಳಿತ ಮಂಡಳಿಯ ಸುರೇಂದ್ರ ಷಾ, ಚೇತನಕುಮಾರ್ ಹಾಗೂ ಶಾಲೆಯ ಶಿಕ್ಷಕವೃಂದದವರು  ಪಾಲ್ಗೊಂಡಿದ್ದರು.

ಕೊಡಿಗೇನಹಳ್ಳಿ ದೊಡ್ಡಕೆರೆ ಅಭಿವೃದ್ಧಿಗೆ ಎಲ್.ಸಿ .ನಾಗರಾಜು ಕೊಡುಗೆ ಅಪಾರ

Publicstory/prajayoga

ಮಧುಗಿರಿ: ಸುಮಾರು 25 ವರ್ಷಗಳಿಂದ ಹಾಳಾಗಿದ್ದ ದೊಡ್ಡಕೆರೆ ಕಾಲುವೆಯನ್ನು ಸ್ವಚ್ಛತೆ ಮಾಡಿಸಲು ಎಲ್.ಸಿ ನಾಗರಾಜು ಮುಂದಾಗಿದ್ದು ರೈತರ ಹಾಗೂ ಕೊಡಿಗೇನಹಳ್ಳಿ ಗ್ರಾಮಸ್ಥರ ಪರವಾಗಿ ಅವರನ್ನು ಅಭಿನಂಧಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತರ ರಾಜಗೋಪಾಲ ರೆಡ್ಡಿ ತಿಳಿಸಿದರು.

ತಾಲೂಕಿನ ಚಿಕ್ಕಮಾಲೂರು ಸಿ ವೀರಾಪುರದ ಬಳಿ ವರದಿಗಾರರೊಂದಿಗೆ ಮಾತನಾಡಿದ ಅವರು, ಕೊಡಿಗೇನಹಳ್ಳಿಯ ದೊಡ್ಡಕೆರೆ ಅಭಿವೃದ್ಧಿಯ ಬಗ್ಗೆ ಗ್ರಾಪಂ ಆಗಲಿ ಅಥವಾ ಸರಕಾರದ ಯಾವುದೇ ಇಲಾಖೆಯಾಗಲಿ ಅನುದಾನ ನೀಡಿಲ್ಲ. ಈ ಬಗ್ಗೆ ಜನಮುಖಿ ಸಂಸ್ಥೆಯ ಎಲ್.ಸಿ ನಾಗರಾಜು ಅವರ ಗಮನಕ್ಕೆ ತಂದಾಗ ತಕ್ಷಣ ಇಟಾಚಿ ವಾಹನ ಕಳುಹಿಸಿ ನೀರಿನ ಕಾಲುವೆ ದುರಸ್ತಿ ಹಾಗೂ ಅಚ್ಚುಕಟ್ಟು ಮಾಡಿಸುತಿದ್ದಾರೆ.

ಕೆರೆ ಅಚ್ಚುಕಟ್ಟು ಮಾಡಿಸುವಂತೆ ಗ್ರಾಪಂ ಹಾಗೂ ಶಾಸಕರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಿಲಿಲ್ಲ. ಪ್ರತಿವರ್ಷ ಸೀಮೆಜಾಲಿ ಗಿಡಗಳಿಂದ ಆದಾಯ ಪಡೆಯುತಿದ್ದ ಗ್ರಾಪಂ ಕಿಂಚಿತ್ತು ಹಣವನ್ನು ಕೆರೆ ವಿಚಾರದಲ್ಲಿ ಖರ್ಚು ಮಾಡಿರಲಿಲ್ಲ. ಇನ್ನೂ ಭೋಗಸ್ ನರೇಗಾ ಬೋರ್ಡ್ಗಳು ಈ ಭಾಗದಲ್ಲಿ ನೇತಾಡತಿದ್ದವು. ಉತ್ತಮ ಮಳೆಯಾದರೂ ಕೆರೆ ತುಂಬಿರಲಿಲ್ಲ, ಈ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಯಾವುದೆ ಪ್ರತಿಕ್ರಿಯೆ ಸಿಕ್ಕಿರಲಿಲ್ಲ, ಇಲ್ಲಿನ ಸಮಸ್ಯೆ ಬಗ್ಗೆ ಎಲ್.ಸಿ ನಾಗರಾಜು ಅವರ ಬಳಿ ಹೇಳಿದಾಗ ತಕ್ಷನ ಅದೆಷ್ಟು ಹಣ ಖರ್ಚಾದರೂ ಪರವಾಗಿಲ್ಲ ಹೋಬಳಿಯ ಜನತೆಗೆ ಅನುಕೂಲವಾಗಲಿ ಎಂದು ತಕ್ಷಣ ಜೆಸಿಬಿ ಮತ್ತು ಇಟಾಚಿ ವಾಹನ ಕಳುಹಿಸಿಕೊಟ್ಟಿದ್ದು ಇದೀಗಾ ಸಲಿಸಾಲಿ ಕೊಡಿಗೇನಹಳ್ಳಿಯ ದೊಡ್ಡಕೆರೆಗೆ ನೀರು ಶೇಖರಣೆಯಾಗುತ್ತಿದೆ.

ಎಂ ರಮೇಶ್ ಮಾತನಾಡಿ, ಜನಪರ ಹಾಗೂ ರೈತಪರ ಕೆಲಸಕ್ಕೆ ಜನಮುಖಿ ಸಂಸ್ಥೆ ಕೈಹಾಕಿದ್ದು ಕೊಡಿಗೇನಹಳ್ಳಿಯ ದೊಡ್ಡಕೆರೆ ತುಂಬಿದ ನಂತರ ಮೈದನಹಳ್ಳಿ ಕೆರೆ ತುಂಬಿಸಲಾಗುವುದು. ನಂತರ ದೊಡ್ಡಮಾಲೂರು ಕಾಲುವೆ ದುರಸ್ತಿ ಹಾಗೂ ಅಚ್ಚುಕಟ್ಟು ಮಾಡಿಸಲಾಗುವುದು ಇದರ ಸಂಪೂರ್ಣ ಖರ್ಚು ವೆಚ್ಚವನ್ನು ಎಲ್.ಸಿ ನಾಗರಾಜು ವಹಿಸಿದ್ದು ಅವರಿಗೆ ಈ ಭಾಗದ ಜನತೆ ಅಭಾರಿಯಾಗಿದ್ದೇವೆ ಎಂದರು.

ನಾಳೆ ಕೆನಾರಾ ಬ್ಯಾಂಕ್ ನಿಂದ ಉಚಿತ ಬ್ಯಾಂಕ್ ಖಾತೆ ಮತ್ತು   QR ಕೋಡ್ ವಿತರಣೆ

Publicstory/prajayoga

ತುಮಕೂರು: ಟೌನ್‌ಹಾಲ್ ಬಳಿಯ ಕಾರ್ಪೋರೇಷನ್ ಕಚೇರಿಯಲ್ಲಿ 75ನೇ ಸ್ವತಂತ್ರೋತ್ಸವದ ಅಂಗವಾಗಿ ಕೆನರಾ ಬ್ಯಾಂಕ್,  ಪ್ರಾಂತೀಯ ಕಚೇರಿ, ತುಮಕೂರು ಇವರು ವತಿಯಿಂದ  ವಸ್ತು ಪ್ರದರ್ಶನ ಹಾಗೂ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಉಚಿತ ಬ್ಯಾಂಕ್ ಖಾತೆ, QR ಕೋಡ್ ವಿತರಣೆ ಮಾಡಲಾಗುವುದು.

ಕಾರ್ಯಕ್ರಮ ನಾಳೆ (ಆ.14) ಬೆಳಿಗ್ಗೆ 10 ರಿಂದ 3 ಗಂಟೆಯವರೆಗೆ ನಡೆಯಲಿದೆ‌. ನಿವೃತ್ತ ಯೋಧ ನಂಜುಂಡಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದು, ನಗರ ಶಾಸಕ ಜಿ.ಬಿ ಜ್ಯೋತಿ ಗಣೇಶ್ ಘನ ಉಪಸ್ಥಿತಿ ಇರಲಿದ್ದಾರೆ ಎಂದು ತುಮಕೂರು ಕೆನರಾ ಬ್ಯಾಂಕ್ ಎಜಿಎಂ ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.