Publicstory/prajayoga
ತುಮಕೂರು: ಜಿಲ್ಲೆಯಲ್ಲಿ ಪ್ರತಿ ಮನೆ ಮೇಲೂ ಸಹ ತ್ರಿವರ್ಣ ಧ್ವಜ ಹಾರಿಸುತ್ತಿರುವುದು ದೇಶ ಪ್ರೇಮವನ್ನು ಎತ್ತಿ ತೋರಿಸುತ್ತದೆ. ನಮ್ಮ ರಕ್ತದ ಕಣ ಕಣದಲ್ಲೂ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ, ರಾಷ್ಟ್ರಾಭಿಮಾನ ತುಂಬಿರಬೇಕು ಎಂದು ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ ಕರೆ ನೀಡಿದರು.
ನಗರದಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವವನ್ನು ವಿಶೇಷ ಮತ್ತು ಆರ್ಥಪೂರ್ಣವಾಗಿ ಆಚರಿಸಲು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ವತಿಯಿಂದ ದೇಶಕ್ಕಾಗಿ ನಡಿಗೆ ರಾಷ್ಟ್ರ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ 75ನೇ ಅಮೃತ ಮಹೋತ್ಸವ ವರ್ಷಾಚರಣೆ ಮಾಡುತ್ತಿದ್ದೇವೆ ಹಾಗೂ ಇಂದಿನಿಂದ ಆ. 15ರ ವರೆಗೆ ಹರ್ ಘರ್ ತಿರಂಗಾ ಅಭಿಯಾನ ನಡೆಸುತ್ತಿದ್ದೇವೆ. ಜಿಲ್ಲೆಯಲ್ಲಿ 4.5 ಲಕ್ಷ ಮನೆಗಳ ಮೇಲೆ ಪ್ರತಿಯೊಬ್ಬರೂ ಧ್ವಜಾರೋಹಣ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ದೇಶದ 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ರಾಷ್ಟ್ರ ಜಾಗೃತಿ ಅಭಿಯಾನ ಮಾಡುತ್ತಿರುವುದು ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಸ್ವಾತಂತ್ರ್ಯದ ಕಿಚ್ಚಿನ ವಾತಾವರಣ ಮತ್ತೊಮ್ಮೆ ನಮ್ಮೆಲ್ಲರ ನಡುವೆ ನಿರ್ಮಾಣವಾಗಿದೆ ಎಂದರು.
ತುಮಕೂರು ವಿ.ವಿ. ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ಮಾತನಾಡಿ, ಇಡೀ ರಾಷ್ಟ್ರ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಮೂರು ದಿನಗಳ ಕಾಲ ನಡೆಯುವ ಹರ್ ಘರ್ ತಿರಂಗಾ ಯಾತ್ರೆ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸಿದರು.
ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಆರಂಭವಾದ ದೇಶಕ್ಕಾಗಿ ನಡಿಗೆ (ವಾಕಥಾನ್) ಗೆ ಬಿಗ್‌ಬಾಸ್ ಖ್ಯಾತಿಯ ಹಾಗೂ ಕಿರುತೆರೆ ನಟಿ ಚಂದನ ಅನಂತಕೃಷ್ಣ ಚಾಲನೆ ನೀಡಿದರು. ಈ ವಾಕಥಾನ್‌ನಲ್ಲಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡು ತ್ರಿವರ್ಣ ಧ್ವಜ ಹಿಡಿದು ಸರ್ಕಾರಿ ಕಿರಿಯ ಕಾಲೇಜು, ಟೌನ್‌ಹಾಲ್ ವೃತ್ತ, ಅಶೋಕ ರಸ್ತೆ, ಸ್ವತಂತ್ರ ಚೌಕ ಮಾರ್ಗವಾಗಿ ಗಾಜಿನ ಮನೆವರೆಗೆ ದೇಶಕ್ಕಾಗಿ ನಡಿಗೆ ಜಾಥಾ ನಡೆಸಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪುರವಾಡ್, ಸಂಸದ ಜಿ.ಎಸ್. ಬಸವರಾಜು, ಗೌರವಾಧ್ಯಕ್ಷ ಎಸ್.ಪಿ. ಚಿದಾನಂದ್, ಜಿ.ಕೆ. ಶ್ರೀನಿವಾಸ್, ವಾಸವಿ ಗುಪ್ತ, ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.