Saturday, May 9, 2026
Google search engine
Home Blog Page 126

ತಂತ್ರಜ್ಞಾನ ಕಲಿಯಿರಿ, ಮಕ್ಕಳಿಗೆ ಕಲಿಸಿರಿ: ಶಿಕ್ಷಕರಿಗೆ ಸಲಹೆ

ತುರುವೇಕೆರೆ: ‘ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಶಿಕ್ಷಕರು ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಹಾಗು ಕಲಿಕೆಯಲ್ಲಿ ನಿರಂತರತೆಯನ್ನು ಉಂಟು ಮಾಡುವ ಗುರುತರವಾದ ಜವಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಜಿಲ್ಲಾ ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಎ.ಟಿ.ರಂಗದಾಸಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಜಿಜೆಸಿ ಕಾಲೇಜು ಆವರಣದಲ್ಲಿ ತುಮಕೂರು ಜಿಲ್ಲಾ ಉಪನಿರ್ದೇಶಕರ ಕಚೇರಿ ಹಾಗು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಮಂಗಳವಾರ ಜರುಗಿದ ತಾಲ್ಲೂಕು ಕನ್ನಡ, ಹಿಂದಿ ಭಾಷಾ ಭೋಧಕರ ಶಿಕ್ಷಕರುಗಳ ಕಾರ್ಯಗಾರದಲ್ಲಿ ಮಾತನಾಡಿದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು, ನೌಕರರು ಹೀಗೆ ಹಲವರ ಸೇವೆಗೆ ಸಂಬಂಧಿಸಿದ ಮಾಹಿತಿಯನ್ನು ತಂತ್ರಜ್ಞಾನದ ಅಡಿಯಲ್ಲಿ ತರುವ ಉದ್ದೇಶದಿಂದ ಇಡಿಎಸ್ನ ಹದಿನಾಲ್ಕು ಅಂಶಗಳ ಆನ್ಲೈನ್ ಸೇವೆಗಳನ್ನು ಚಾಲ್ತಿಗೆ ತರಲಾಗಿದ್ದು ಅದನ್ನು ಶಿಕ್ಷಕರು ಅರಿತುಕೊಳ್ಳಬೇಕು ಎಂದರು.

ಜಿಲ್ಲಾ ಕನ್ನಡ ವಿಷಯ ಪರಿವೀಕ್ಷಕ ಗಿರೀಶ್ ಮಾತನಾಡಿ, ಕೋವಿಡ್ ಪರಿಣಾಮದಿಂದ ಎಲ್ಲ ಮಕ್ಕಳೂ ಕಲಿಕೆಯಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳಲು ಸಾದ್ಯವಾಗಿಲ್ಲ ಮತ್ತು ಕೋವಿಡ್ 3ನೇ ಅಲೆಯಿಂದ ಭೌತಿಕ ತರಗತಿಗಳು ಒಂದು ವೇಳೆ ಸ್ಥಗಿತಗೊಂಡಲ್ಲಿ ಆಗ ಮಕ್ಕಳಲ್ಲಿ ಕಲಿಕಾ ಪ್ರಕ್ರಿಯೆನ್ನು ನಿರಂತವಾಗಿ ಕಾಯ್ದುಕೊಳ್ಳುವ ಸದುದ್ದೇಶದಿಂದ ಗೂಗಲ್, ಜೂಮ್ ಮತ್ತು ಟೀಚ್ಮೆಂಟ್ ಆಫ್ಗಳ ಮೂಲಕ ಪಾಠ ಬೋಧನೆ ಮಾಡಲು ಎಲ್ಲರೂ ಹೇಗೆ ಸಿದ್ದರಾಗ ಬೇಕಿದೆ.
ಮಕ್ಕಳ ಕೃತಿ ಸಂಪುಟದ ನಿರ್ವಹಣೆಯಲ್ಲಿ ಎದುರಾಗುವ ಗೊಂದಲಗಳು ಮತ್ತು ಪರಿಹಾರಗಳ ಕೂಲಕಂಷವಾಗಿ ತಿಳಿಸಿಕೊಟ್ಟರು. ಕಳೆದ ಬಾರಿಯಂತೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪಠ್ಯ ಪುಸ್ತಕದಲ್ಲಿ ಯಾವ ಪಾಠಗಳನ್ನೂ ಕಡಿತ ಮಾಡಲಾಗಿಲ್ಲ ಎಲ್ಲವನ್ನೂ ಬೋಧಿಸಬೇಕು ಎಂದರು.

ಕೋವಿಡ್ ನಿಂದ ಭೌತಿಕ ತರಗತಿಗಳು ನಡೆಯದ ಕಾರಣದ ಮಕ್ಕಳನ್ನು ಮಾನಸಿಕವಾಗಿ ಸಿದ್ದರಾಗುವಂತೆ ಮೊದಲು ಮಾಡಿ ಎಂದು ಶಿಕ್ಷಕರುಗಳಿಗೆ ಸಲಹೆ ನೀಡಿದರು.

ಇದೇ ವೇಳೆ ಹುಲಿಕಲ್ ಸರ್ಕಾರಿ ಪ್ರೌಢ ಶಾಲೆಯ ವಿಷಯ ಸಂಪನ್ಮೂಲ ವ್ಯಕ್ತಿ ಷಣ್ಮುಖಪ್ಪ ವಿವಿಧ ಆಫ್ಗಳ ಮೂಲಕ ಅನ್ಲೈನ್ ತರಗತಿಗಳನ್ನು ನಡೆಸುವ ಬಗ್ಗೆ ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಮಾಧವರೆಡ್ಡಿ, ಜಿಲ್ಲಾ ತೋಟಗಾರಿಕಾ ವಿಷಯ ಪರಿವೀಕ್ಷಕ ವೆಂಕಟೇಶಯ್ಯ, ತಾಲ್ಲೂಕು ಕನ್ನಡ ಭಾಷಾ ಬೋಧಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ತಾಲ್ಲೂಕು ಹಿಂದಿ ಭಾಷಾ ಬೋಧಕರ ಸಂಘದ ಲಕ್ಷ್ಮೀಪ್ರಸಾದ್, ಮುಖ್ಯ ಶಿಕ್ಷಕ ಶಶಿಕುಮಾರ್ ಮತ್ತು ಶಿಕ್ಷಕರುಗಳು ಭಾಗವಹಿಸಿದ್ದರು.

ಏಕಾಏಕಿ ಸುರೇಶಗೌಡರ ರಾಜೀನಾಮೆಗೆ ಕಾರಣ ಏನು?

0

Public story.in


ತುಮಕೂರು: ಕಲ್ಪತರುನಾಡಿನಲ್ಲಿ ಬಿಜೆಪಿಗೆ ಭದ್ರಬುನಾದಿ ಹಾಕಿಕೊಟ್ಟಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡರು ಏಕಾಏಕಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಈ ನಡೆಯ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಬೇಸರವನ್ನು ಹೊರಹಾಕುತ್ತಿದ್ದಾರೆ.

ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಲ್ಲಿ ಸುರೇಶಗೌಡರು ಒಬ್ಬರು. ಸುರೇಶಗೌಡರನ್ನು ರಾಜೀನಾಮೆ ಕೊಡಿಸುವ ತಂತ್ರ ಹೆಣೆಯುವ ಮೂಲಕ ಪಕ್ಷದ ಮೇಲೆ ಬಿ.ಎಸ್.ಯಡಿಯೂರಪ್ಪ ಅವರ ಹಿಡಿತವನ್ನು ಕಳಚುವ ಪ್ರಯತ್ನಕ್ಕೆ ತುಮಕೂರಿನಿಂದಲೇ ಚಾಲನೆ ನೀಡಲಾಗಿದೆಯೇ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ಕೇಳಿಬರತೊಡಗಿವೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಕಷ್ಟ ಬಂದಾಗಲೆಲ್ಲ ಅವರು ಸಿದ್ಧಗಂಗಾ ಮಠಕ್ಕೆ ಬರುತ್ತಿದ್ದರು. ಅಧಿಕಾರ ಸಿಗಲೀ, ಅಧಿಕಾರ ಕಳೆದುಕೊಳ್ಳಲಿ ಏನೇ ಆದರೂ ಮಠಕ್ಕೆ ಬಂದು ಆರ್ಶೀವಾದ ಪಡೆಯುವ ಕೆಲಸವನ್ನು ಯಡಿಯೂರಪ್ಪ ಮಾಡುತ್ತಾ ಬಂದಿದ್ದರು. ಯಡಿಯೂರಪ್ಪ ಅವರ ಧಾರ್ಮಿಕ ಶಕ್ತಿ ಕೇಂದ್ರವಾದ ತುಮಕೂರಿನಿಂದಲೇ ಅವರ ಬೆಂಬಲಿಗರಾದ ಸುರೇಶಗೌಡರ ರಾಜೀನಾಮೆ ಸಹಜವಾಗಿಯೇ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಯಡಿಯೂರಪ್ಪನವರೇ ಖುದ್ದು ಆಸಕ್ತಿವಹಿಸಿ ತುಮಕೂರು ಜಿಲ್ಲಾ ಘಟಕಕ್ಕೆ ಸುರೇಶಗೌಡ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು, ಸಂಸದ ಜಿ.ಎಸ್.ಬಸವರಾಜ್ ಅವರನ್ನು ಕರೆಸಿಕೊಂಡು ಇಬ್ಬರು ಜೊತೆಗೂಡಿ ಪಕ್ಷ ಕಟ್ಟುವಂತೆ ಹೇಳಿದ್ದರು. ಈಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗಾದೆಯಿಂದ ಕೆಳಗೆ ಇಳಿಯುತ್ತಿದ್ದಂತೆ ಸುರೇಶಗೌಡ ಅವರು ಸಹ ಅಧಿಕಾರದಿಂದ ಕೆಳಗೆ ಇಳಿದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಪಕ್ಷದ ಕೆಲಸಗಳ ಕಾರಣ ತಮ್ಮ ಕ್ಷೇತ್ರದ ಜನರೊಂದಿಗೆ ಸದಾ ಕಾಲ ಇರಲು ಸಾಧ್ಯವಾಗುತ್ತಿರಲಿಲ್ಲ. ಕ್ಷೇತ್ರದ ಜನರು ತುಂಬಾ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಸದಾ ಕಾಲ ಇರುವಂತೆ ಮನಸ್ಸು ಹೇಳುತ್ತಿದೆ. ಮನಸಿ‌ನ ಮಾತಿಗೆ ಓಗೊಟ್ಟು ರಾಜೀನಾಮೆ ನೀಡಿರುವುದಾಗಿ ಸುರೇಶಗೌಡರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪಕ್ಷದ ಕೆಲಸಗಳಿಂದ ಬಿಡುವು ಮಾಡಿಕೊಂಡು ಅವರು ಕ್ಷೇತ್ರದಲ್ಲಿ ಮತ್ತಷ್ಟು ಗಟ್ಟಿಯಾಗಲು ಇದರಿಂದ ಅವಕಾಶವೂ ಸಿಕ್ಕಿದಂತಾಗಿದೆ. ಆದರೆ ಸುರೇಶಗೌಡರ ರಾಜೀನಾಮೆ ಪಕ್ಷಕ್ಕೆ ಹಿನ್ನಡೆಯೇ ಆಗಲಿದೆ, ಮುಂದೆ ಬರುವ ವಿಧಾನ ಪರಿಷತ್ ಚುನಾವಣೆ, ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಯ ಮೇಲೆ ಇದರ ಪರಿಣಾಮ ನಿಚ್ಚಳವಾಗಿ ಕಂಡುಬರಲಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಮುಖಂಡರೊಬ್ಬರು ಲೆಕ್ಕಾಚಾರ ಮಂಡಿಸಿದರು.

ಬಿಜೆಪಿ ಜಿಲ್ಲಾ ಘಟಕದಲ್ಲಿ ಎಲ್ಲವೂ ಸರಿ ಇಲ್ಲ. ಮನೆಯೊಂದು ಮೂರು ಬಾಗಿಲು ಎಂಬಂಥ ಪರಿಸ್ಥಿತಿ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ,ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜ್, ಮಾಜಿ ಸಚಿವ ಸೊಗಡು ಶಿವಣ್ಣ ಹೀಗೆ ಗುಂಪು-ಗುಂಪಾಗಿ ಒಡೆದು ಹೋಗಿದೆ. ಇಂಥ ಸ್ಥಿತಿಯಲ್ಲಿ ಪಕ್ಷದ ನೂತನ ಸಾರಥ್ಯ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.

ಮಣ್ಣಿನ ಮಗನಾಗಿ ಭಾರತ್ ಬಂದ್ ಗೆ ಬೆಂಬಲ ನೀಡುವೆ: ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ

0

Public story.in


ತುರುವೇಕೆರೆ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳು ಸೋಮವಾರ ನಡೆಸುತ್ತಿರುವ ಭಾರತ್ ಬಂದ್ ಗೆ ತಾಲ್ಲೂಕು ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ, ಕೃಷಿ ಮಸೂದೆ ವಿರುದ್ಧ ದೇಶದ ಹಲವು ರೈತ ಸಂಘಗಳು ಕಳೆದ ಎಂಟು ತಿಂಗಳುಗಳಿಂದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುತ್ತಿವೆ. ರೈತ ಬೇಡಿಕೆಗಳನ್ನು ಕನಿಷ್ಠವಾದರೂ ಆಲಿಸದೆ ಪ್ರತಿಭಟನಾ ನಿರತ ರೈತರಿಗೆ ಸಾಕಷ್ಟು ತೊಂದರೆ ಕಿರಿಕುಳ ನೀಡುತ್ತಿದ್ದು ರೈತ ವಿರೋದಿ ಸರ್ಕಾರವಾಗಿದೆ ಎಂದರು.

ಅಲ್ಲದೆ ರೈತ ಚಳವಳಿಯಲ್ಲಿ ಸಾವಿರಾರು ರೈತರು ತಮ್ಮ ಪ್ರಾಣ ಕಳೆದುಕೊಂಡು, ಸಂಕಷ್ಟದಲ್ಲಿರುವಾಗ ಪ್ರಧಾನಿ ನರೇಂದ್ರ ಮೋದಿ ವಿದೇಶಿ ಪ್ರವಾಸದಲ್ಲಿದ್ದಾರೆ. ಹೀಗಾದಲ್ಲಿ ದೇಶದ ಬೆನ್ನೆಲುಬಾದ ರೈತರ ಸಮಸ್ಯೆ ಆಲಿಸುವವರಾರು. ಈ ವಿಷಯದಲ್ಲಿ ಪ್ರಧಾನಿಯವರು ಬೇಜವಬ್ದಾರಿ ಧೋರಣೆ ತಾಳಿರುವುದು ಖಂಡನೀಯ ಎಂದರು.

ರೈತರ ಸಮಸ್ಯೆಗೆ ತಾತ್ವಿಕ ಅಂತ್ಯ ನೀಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದಕು ಮೂರಾಬಟ್ಟೆಯಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ಆಡಳಿತ ನಡೆಸುತ್ತಿವೆಂದು ಆರೋಪಿದರು.

ದೇಶದ ತೃತೀಯ ರಂಗದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರೈತರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದೆ. ಎಚ್.ಡಿ.ದೇವೇಗೌಡರು ದೇಶದ ಪ್ರಧಾನಿಯಾಗಿದ್ದ ವೇಳೆ ಕೃಷಿಗೆ ಮತ್ತು ರೈತನಿಗೆ ಸಂಬಂಧಿಸಿದ ಮಹತ್ವದ ಯೋಜನೆಗಳನ್ನು ಜಾರಿಗೆ ತಂದರು.

ರಾಜ್ಯದಲ್ಲಿ ಕುಮಾರ ಸ್ವಾಮಿ ಮುಖ್ಯ ಮಂತ್ರಿ ಆಗಿದ್ದ ಅವಧಿಯಲ್ಲಿ ಕೃಷಿ ಸಾಲ ಮನ್ನಾ ಸೇರಿದಂತೆ ಬಡಬಗ್ಗರಿಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದರು. ನಾನು ಶಾಸಕನಾಗಿದ್ದ ವೇಳೆ ತಾಲ್ಲೂಕಿನ ಎಲ್ಲ ವರ್ಗದ ಬಡವರಿಗೆ ಬಗರ್ ಹುಕುಂ ಜಮೀನು ನೀಡುವುದು ಸೇರಿದಂತೆ ಹಲವು ಸೌಕರ್ಯಗಳನ್ನು ನೀಡಿದ್ದು ಆಮೂಲಕ ನಾನೊಬ್ಬ ರೈತನ ಮಗನಾಗಿ ರೈತ ಹೋರಾಟಕ್ಕೆ ಬಂಬಲ ನೀಡಿ, ಭಾಗವಹಿಸಲಾಗುವುದು ಎಂದರು.

ಬರಕನಹಾಲ್ ಗ್ರಾಮದಲ್ಲಿ ವೈದ್ಯರ ಸಂಜೆಯ ಗ್ರಾಮ ಭೇಟಿ

ಚಿಕ್ಕನಾಯಕನಹಳ್ಳಿ: ಸಾಯಿಗಂಗಾ ಚಾರಿಟೇಬಲ್ ಟ್ರಸ್ಟ್ ಹಾಗೂ ಗೌತಮ ಬುದ್ಧ ಸಾಮಾಜಿಕ ಟ್ರಸ್ಟ್ ಸಹಯೋಗದೊಂದಿಗೆ
“ಶ್ರೀ ಸಾಯಿ ಗ್ರಾಮ ವಿಕಾಸ” ಕಾರ್ಯಕ್ರಮದ ಅಡಿಯಲ್ಲಿ “ವೈದ್ಯರ ಸಂಜೆಯ ಗ್ರಾಮ ಭೇಟಿ, ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಭಿರವನ್ನು ಬರಕನಹಾಲ್ ಗ್ರಾಮದಲ್ಲಿ ನಡೆಸಲಾಯಿತು.

ಚಿಕ್ಕನಾಯಕನಹಳ್ಳಿ ಸಾಯಿ ಗಂಗಾ ವೈದ್ಯರಾದ ಡಾ ವಿಜಯ್ ರಾಘವೇಂದ್ರ ಸರ್,ಶಂಕರ್ ಬರಕನಹಾಲ್, ಗ್ರಾಮ ಪಂಚಾಯತ್ ಸದಸ್ಯರಾದ ಕುಮಾರ್,ಪುಷ್ಪ ಮಂಜುನಾಥ್ ಹಾಗೂ ಗ್ರಾಮದ ಸ್ವಯಂ ಸೇವಕರಾದ ಅಂಗಡಿ ಕುಮಾರಣ್ಣ, ರಾಕೇಶ್,ರಂಗಸ್ವಾಮಿ, ಕಾಂತರಾಜು,ನರಸಿಂಹಮೂರ್ತಿ,ವಿಶ್ವನಾಥ್,ಗ್ರಾಮದಶಿಬಿರಾರ್ಥಿಗಳು ಸಾಮೂಹಿಕವಾಗಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಲಾಹಿತು.

ವೈದ್ಯರಿಗೆ ಗ್ರಾಮದ ಪರವಾಗಿ ಅಭಿನಂದನೆಗಳು ಸಲ್ಲಿಸಿದರು.

ಜಿ.ವಿ.ಆನಂದಮೂರ್ತಿ ಅವರ ಬುದ್ಧನ ಕತೆಗಳು ಕೃತಿ ಬಿಡುಗಡೆ ನಾಳೆ

0

Public story.in


ತುಮಕೂರು: ಹಿರಿಯ ಕಥೆಗಾರರಾದ ಜಿ.ವಿ.ಆನಂದಮೂರ್ತಿ ಅವರ ಬುದ್ಧನ ಕಥೆಗಳು ಕೃತಿ ಬಿಡುಗಡೆ ಸಮಾರಂಭ ಸೆ. 19ರಂದು ಭಾನುವಾರ ತುಮಕೂರಿನಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 11ಗಂಟೆಗೆ ತುಮಕೂರಿನ ಕನ್ನಡ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಚಿಂತಕ, ಲೇಖಕ ಡಾ.ನಟರಾಜ್ ಬೂದಾಳ್ ಕೃತಿ ಬಿಡುಗಡೆ ಗೊಳಿಸುವರು.

ಅಧ್ಯಕ್ಷತೆಯನ್ನು ಹಿರಿಯ ಚಿಂತಕ, ಚಿಕ್ಕಮಗಳೂರಿನವರಾದ ಎಚ್.ಎಂ.ರುದ್ರಸ್ವಾಮಿ ವಹಿಸುವರು.

ಭೋದಿ ಮಂಡಲದ ಡಾ.ಬಸವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಅತಿಥಿಗಳಾಗಿ ಇತಿಹಾಸಕಾರ ದೊಡ್ಡಹುಲ್ಲೂರು ರುಕ್ಕೋಜಿ, ಸಾಮಾಜಿಕ ಚಿಂತಕ ಚೇತನಾ ಬಾಲಕೃಷ್ಣ ಭಾಗವಹಿಸುವರು. ಜಿ.ವಿ.ಆನಂದಮೂರ್ತಿ ಉಪಸ್ಥಿತರಿರುವರು.

ತುಮಕೂರಿನ ಭೋದಿ ಮಂಡಲ ಹಾಗೂ ಬೆಂಗಳೂರಿನ ಪ್ರೀತಿ ಪುಸ್ತಕ ಪ್ರಕಾಶನ ಕಾರ್ಯಕ್ರಮ ಆಯೋಜಿಸಿವೆ.

ತುಮಕೂರಿಗೆ ಮತ್ತೊಂದು ಹೆಮ್ಮೆಯ ಗರಿ: ಕರ್ನಲ್ ಪ್ರೊ. ವೈ.ಎಸ್. ಸಿದ್ದೇಗೌಡರಿಗೆ ಪ್ರತಿಷ್ಠಿತ ಚಾಣಕ್ಯ ಪ್ರಶಸ್ತಿ

0

Publicstory


ತುಮಕೂರು: ವಿಶ್ವವಿದ್ಯಾನಿಲಯದ ಕುಲಪತಿಗಳಾದ ಕರ್ನಲ್ ಪ್ರೊ. ವೈ.ಎಸ್. ಸಿದ್ದೇಗೌಡ ಅವರಿಗೆ ಗೋವಾದ ಪ್ರತಿಷ್ಠಿತ ಪಿಆರ್‌ಸಿಐ ಮೆರಿಟೋರಿಯಸ್ ಸಂಸ್ಥೆಯು ಶ್ರೀಯುತರ ಉತ್ತಮ ಆಡಳಿತ ಸೇವೆಗಾಗಿ ಡಾ.ಬಿ.ಆರ್. ಸುದರ್ಶನ್ ರಾಷ್ಟ್ರೀಯ ಚಾಣಕ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರೊ. ವೈ.ಎಸ್. ಸಿದ್ದೇಗೌಡರು 39 ವರ್ಷಗಳ ಬೋಧನೆ ಮತ್ತು ಆಡಳಿತದಲ್ಲಿ ತೋರಿದ ಉತ್ಕೃಷ್ಟ ಸಾಧನೆಯನ್ನು ಪರಿಗಣಿಸಿ ಪ್ರಸ್ತುತ ಪ್ರಶಸ್ತಿಯನ್ನು ನೀಡಿದೆ. ಇಂದು ಗೋವಾದ ಪಣಜಿಯಲ್ಲಿ ನಡೆದ ಸಮಾರಂಭದಲ್ಲಿ ಗೋವಾದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಶಶಿಧರನ್ ಪಿಳೈ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ.ವೈ.ಎಸ್. ಸಿದ್ದೇಗೌಡರು ಈ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಕಾರ್ಯ ಪ್ರಾಧ್ಯಾಪಕರಾಗಿ ದೇಶದಾದ್ಯಂತ ಹೆಸರು ಮಾಡಿದ್ದಾರೆ.

ಶ್ರೀಯುತರು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯಗಳ ಕುಲಸಚಿವರಾಗಿ ಹೊಸ ದಿಕ್ಕು ದೆಸೆಗಳನ್ನು ನೀಡಿರುತ್ತಾರೆ.

ಪ್ರೊ. ವೈ.ಎಸ್. ಸಿದ್ದೇಗೌಡರು ಭಾರತೀಯ ಸಮಾಜಕಾರ್ಯ ಮತ್ತು ಸಮಾಜಿಕ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಶ್ರೀಯುತರು ವಿವಿಧ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ನೂರಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಾಗೆಯೇ ವಿವಿಧ ಶೈಕ್ಷಣಿಕ ವೇದಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ.

ನೈತಿಕ ಶಿಕ್ಷಣ ಇಂದಿನ ಅಗತ್ಯ; ಯೋಗಿ ದೇವರಾಜ್

ತುರುವೇಕೆರೆ: ಉದ್ಯೋಗಾಧಾರಿತ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು ಮತ್ತು ಪರಂಪರೆಯ ಸತ್ವಗಳನ್ನು ಪ್ರತಿಪಾದಿಸುವ ಶಿಕ್ಷಣದ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದು ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಘಟಕದ ಯೋಗ ಮತ್ತು ಧ್ಯಾನ ವಿಭಾಗದ ಅಧ್ಯಕ್ಷ ಡಾ.ಯೋಗಿ ದೇವರಾಜ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ರೋಟರಿ ಕ್ಲಬ್ ಮತ್ತು ರೋಟರಿ ಬೆಂಗಳೂರು ಯೋಗ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದ ಗಮ್ಯ ಕೇವಲ ಉದ್ಯೋಗ, ಹಣ ಸಂಪಾದನೆ ಮತ್ತು ಐಶರಾಮಿ ಬದುಕಲ್ಲ. ಮನುಷ್ಯನ ವ್ಯಕ್ತಿವನ್ನು ವಿಕಸನಗೊಳ್ಳುವಂತೆ ಮಾಡಿ ಮಾನವೀಯತೆ ಮತ್ತು ಸಮಷ್ಠಿ ಪ್ರಜ್ಞೆಯ ಅರಿವು ಮೂಡಿಸುವುದೇ ಶಿಕ್ಷಣದ ಮೂಲ ಉದ್ದೇಶವಾಗಬೇಕು ಎಂದರು.

ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ಸಿ.ರಂಗಧಾಮಯ್ಯ ‘ ಸಾಂಪ್ರದಾಯಿಕ ಶಿಕ್ಷಣದ ಜೊತೆ ಜೊತೆಗೇ ಮಕ್ಕಳಲ್ಲಿ ಕೌಶಲ ಹಾಗೂ ಬುದ್ದಿಮತ್ತೆಯನ್ನು ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಬದುಕಿನ ಸವಾಲನ್ನು ಎದುರಿಸಲು ಮಕ್ಕಳನ್ನು ಸಜ್ಜುಗೊಳಿಸಬೇಕು ಎಂದ ಅವರು ಸನ್ಮಾನಕ್ಕೆ ಪಾತ್ರರಾದ ಅತ್ಯುತ್ತಮ ಶಿಕ್ಷಕರನ್ನು ಅಭಿನಂದಿಸಿದರು.

ಸಮಾರಂಭದಲ್ಲಿ ಒಬ್ಬ ನಿವೃತ್ತ ಶಿಕ್ಷಕರೂ ಸೇರಿದಂತೆ 11 ಜನ ಅತ್ಯುತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎಂ.ವಸಂತಕುಮಾರ್, ಗ್ಲೋಬಲ್ ಯೋಗದ ಅಧ್ಯಕ್ಷ ಪಿ.ಎಸ್.ರವಿ, ಖಜಾಂಚಿ ಶರತ್, ಕ.ರಾ.ಪ್ರಾ.ಶಾ.ಶಿ. ಸಂಘದ ರಾಜ್ಯ ಉಪಾಧ್ಯಕ್ಷ ಷಣ್ಮುಖಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಭೈರಪ್ಪ ಉಪಸ್ಥಿತರಿದ್ದರು.

ರೋಟರಿ ಟ್ರಸ್ಟ್‌ನ ಅಧ್ಯಕ್ಷ ಟಿ.ಎಸ್.ಪ್ರಕಾಶ್‍ಗುಪ್ತಾ, ರೋಟರಿ ಮಾಜಿ ಅಧ್ಯಕ್ಷ ರಾಜಣ್ಣ, ಅರಳೀಕರೆ ಲೋಕೇಶ್, ಬರಹಗಾರ ತುರುವೇಕೆರೆ ಪ್ರಸಾದ್, ಟಿ.ರಾಮಚಂದ್ರು, ಸಾ.ಶಿ.ದೇವರಾಜ್, ಉಮೇಶ್ ಇತರರು ಭಾಗವಹಿಸಿದ್ದರು. ರೋಟರಿ ಅಧ್ಯಕ್ಷ ಜಿ. ಪ್ರಭುಸ್ವಾಮಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಎಸ್.ಶಿವರಾಜ್ ವಂದಿಸಿದರು. ರೊ. ಆನಂದವಾಡೇಕರ್ ಕಾರ್ಯಕ್ರಮ ನಿರೂಪಿಸಿದರು.

ಭಾನುವಾರದ ಕಥೆ: ಸಾವು

0

ಅವನು ಸಾಯಲು ನಿರ್ಧರಿಸಿಕೊಂಡನಾದರೂ ಅದುವೇ ಅವನಿಗೆ ಪ್ರಶ್ನೆಯಾಗಿ ಫೆಡಂಭೂತವಾಗಿ ಕಾಡತೊಡಗಿತ್ತು. ಅದೇಕೋ ಅವನಿಗೆ ನಿನ್ನೆಯ ಘಟನೆಗೆ ಇತಿಶ್ರೀ ಹಾಕಲೇಬೇಕಿತ್ತು. ಅಂತಹ ಗಡುಸು ಅವನಲ್ಲಿ ಇಲ್ಲದೇ ಹೋದದ್ದು ಇಷ್ಟೊಂದು ದುಬಾರಿಯಾಗಲಿದೆ ಎಂಬುದನ್ನು ಸಣ್ಣವನಿದ್ದಾಗನಿಂದಲೂ ಯಾರೂ ಅವನಿಗೆ ಹೇಳಿಕೊಟ್ಟಿರಲಿಲ್ಲ.

ಪಕ್ಕದ ಮನೆಯ ಹೆಂಗಸರಿಬ್ಬರು ಯಾಕೋ ಪಿಸುಗುಟ್ಟಿದ್ದನ್ನು ಇದೇ ಮೊದಲ ಸಲ ಕೇಳಿಸಿಕೊಂಡವನು ಗಮನಿಸಿಯೂ ಗಮನಿಸಿದಂತೆ ತಲೆ ತಗ್ಗಿಸಿಕೊಂಡು‌ ಹೋಗಿ‌ಬಿಟ್ಟ.

ಮನೆ ಬಿಟ್ಟು ಎಷ್ಟು ದೂರ ನಡೆದಿದ್ದನೋ ಅವನಿಗೇನೆ ಗೊತ್ತಾಗಲಿಲ್ಲ. ಹಾದಿಯಲ್ಲಿ ಎಷ್ಟು ಜನ ಬಂದರೂ, ಹೋದರೂ ಅದನ್ನು ಗಮನಿಸದೇ ಹೋಗುತ್ತಿದ್ದವನಿಗೆ ರಭಸವಾಗಿ ಹಿಂದಿನಿಂದ ಒಬ್ಬರು ಕೈಯಿಂದ ನೂಕಿದಾಗಲೇ ಗೊತ್ತಾಗಿದ್ದು ಸ್ವಲ್ಪದರಲ್ಲೇ ಪ್ರಾಣ ಉಳಿಯತೆಂದು. ಎದೆಯ ಮೇಲೆ ಕೈ ಇಟ್ಟು ಕ್ಷಣ ಸುಧಾರಿಸಿಕೊಂಡವನು ತನಗೇ ತಾನೇ ಬೈದುಕೊಂಡವನು ನಂತರ ಅವನವನೇ ನಗಾಡಿಕೊಂಡನು ಅಯ್ಯೋ, ಸಾಯಲೆಂದೇ ಕಾತರಿಸುವವನಿಗೆ ಜೀವ ಉಳಿಯತ್ತಲ್ಲ ಎಂದು ಯಾಕೆ ಖುಷಿಯಾಯಿತು ಎಂದು ಅಚ್ಚರಿಪಟ್ಟುಕೊಂಡನು.

ಥೂ ನನ್ನ ಜನ್ಮಕ್ಕೆ ಇಷ್ಟು ಬೆಂಕಿ ಹಾಕಾ ಸಾಯ್ತೀನಿ, ಸಾಯ್ತೀನಿ ಅಂದ್ರೂ ಜೀವದ ಬಗ್ಗೆ ಇಷ್ಟೊಂದು ಭಯನಾ ಅಂದುಕೊಂಡವನು ಮತ್ತಷ್ಟು ರಭಸವಾಗಿ ಹೆಜ್ಜೆ ಹಾಕುತ್ತಿದ್ದರೂ ರಸ್ತೆಯ ತುದಿ ಅಂಚಿನಲ್ಲೇ ನಡೆಯುತ್ತಿದ್ದನ್ನೂ ಎಷ್ಟೊ ಹೊತ್ತಿನ ನಂತರ ಗಮನಿಸಿಕೊಂಡ.

ಸಾಯುವ ಕೊನೆ ಗಳಿಗೆಯ ಯೋಚನೆ, ನೆನಪು ಏನಿರುತ್ತದೆ ಎಂಬುದು ಅವನಿಗೆ ಹೈಸ್ಕೂಲಿನಿಂದಲೂ ಕಾಡುತ್ತಿರುವ ಪ್ರಶ್ನೆ. ಇದಕ್ಕೆ, ಕೊನೆಗಾದರೂ ಉತ್ತರ ಸಿಗಬಹುದೇ ಎಂಬುದಕ್ಕೆ ಅವನು ಇನ್ನೇನು ಸಾವಿನ ಸನ್ನಿಹಕ್ಕೆ ಹೋಗಿ ಬಿಡುತ್ತೇನೆಂದರೂ ಸಿಕ್ಕಿರಲಿಲ್ಲ. ನೇಣಿಗೆ ಕೊರಳೊಡ್ಡುವ ಸಮಯದಲ್ಲಿ ಗೊತ್ತಾಗಬಹುದೇ ಎಂಬ ಗೊಂದಲದಲ್ಲೇ ಸಾವನ್ನು ಮುಂದಕ್ಕೆ ಹಾಕಿಕೊಂಡು ಬರುತ್ತಿದ್ದೇನೆಯೇ ಎಂದು ಅವನಿಗೆ ಅನ್ನಿಸಿಬಿಟ್ಟಿತ್ತು. ಸಾಯುವ ಮೂಲಕವೇ ತಾನು ಧೈರ್ಯ ತೋರಿಸಬೇಕೆಂಬ ಹುಚ್ಚುತನ ಬಿಟ್ಟು ಬದುಕುವ ಮೂಲಕ ಸವಾಲು ಗೆಲ್ಲಬೇಕು ಎಂಬ ಮಾತುಗಳನ್ನೇ ಮೂರು ದಿನಗಳಿಂದ ನೂರೆಂಟು ಸಲ ಹೇಳಿಕೊಂಡರೂ ಅದೇನು ಮನಸ್ಸಿನೊಳಗೆ ನಾಟಿದಂತೆ ತೋರುತ್ತಿಲ್ಲ. ಸಾಯಿಸುವುದೇ ಬದುಕುವುದಕ್ಕಿಂತ ಹೆಚ್ಚು ಧೈರ್ಯ ಶಾಲಿ ಕೆಲಸ ಎಂದು ಅವನಿಗೆ ಈಗ ಗೊತ್ತಾಗಿಬಿಟ್ಟಿದೆ. ಇದೇ ಚಿಂತನೆಯಲ್ಲಿ ಮನೆಗೆ ವಾಪಸ್ ಬಂದವನಿಗೆ ಮನೆಯ ಹೊಸ್ತಿಲು ಕಂಡು ತಲೆ ಚಿಟ್ಟಿಡಿದು ಹೋಯಿತು. ಸಾಕಪ್ಪ, ಸಾಕು ಎಂದು ತಲೆ ಅದುಮಿಕೊಂಡನು, ಈಗಲೇ ಭೂಮಿ ಕುಸಿಯಬಾರದೇ ಎಂದೆನಿಸಿತು ಅವನಿಗೆ.

ಸೀದಾ‌ ಬಚ್ಚಲು ಮನೆಗೆ ಹೋದವನು ತಲೆಯ ಮೇಲೆ ನೀರು ಸುರಿದುಕೊಂಡು ಮೈ ಸೀಟಿಕೊಂಡು ಬಚ್ಚಲು ಮನೆಯಿಂದ ಈಚೆಗೆ ಬರುವಾಗ್ಗೆ ಸರಿಯಾಗಿ ಅವನ ತಾತನ ಪೋಟೋ ಕಂಡು ಮುಖ ಸಣ್ಣಗೆ ಮಾಡಿಕೊಂಡ. ಆದರೂ ನಾನು ಆತನ ದಾರಿಯನ್ನೇ ಹಿಡಿಯಬಹುದೆಂದು ಅವನು ಎಂದಿಗೂ ಅಂದೇ ಕೊಂಡಿರಲಿಲ್ಲ.

ಸುಕ್ಕುಗಟ್ಟಿದ, ಜರಡೆಯಂತೆ ತೂತು ತೂತಾಗಿದ್ದ ಮುಖದ ಅವನ ತಾತಾ ಅಂದರೆ ಒಬ್ಬ ನರಪೇತಲ. ಯಾವ್ದೋ ಕಾಲದಲ್ಲಿ ಮನೆ ಬಿಟ್ಟುಬಂದವನು ತನ್ನ ನೆಂಟರಿಷ್ಟರ ಮನೆಯ ನೀರೊಲೆ ಕಾಯಿಸುವ ಕೆಲಸ ಮಾಡಿಕೊಂಡಿದ್ದವ. ಮೊದಲೇ ಗಂಡು ಸಂತಾನ ಇಲ್ಲದ ಆ ಮನೆಯಲ್ಲಿ, ಆ ಮನೆಯ ತೋಟ, ಹೊಲದ ಗೇಮೆಯೂ ಇವನ ಮೇಲೆಯೇ ಬಿತ್ತು. ಊರು ಅನ್ನೋದ್ನ ಮರತೇ ಬಿಟ್ಟ ಈ ತಾತನಿಗೆ ನೆಂಟರ ಮನೆಯ ಹುಡುಗಿಯನ್ನೇ ಕೊಟ್ಟು ಮದುವೆ ಮಾಡಿದರು.

ಸುಂದರವಾಗಿಯೇ ಇದ್ದ ತಾತನಿಗೆ ಮದುವೆ, ಮಕ್ಕಳಾದ ಮೇಲೆ ಸಿಡುಬು ರೋಗಕ್ಕೆ ತುತ್ತಾಗಿ ಮುಖವೆಲ್ಲ ತೂತಾಗಿ ಜರಡಿಯಂತಾಗಿತ್ತು.

ಈ ತಾತಾ ಯಾವಾಗಲೂ ದನ ಮೇಯಿಸಿಕೊಂಡಿದ್ದೇ ಹೆಚ್ಚು. ಅವ‌ನಿಗೂ ನನಗೂ ವಿಶೇಷ ಬಂಧ. ಎಷ್ಟೇ ಆಗಲಿ ಮೊಮ್ಮಗನಲ್ಲವೇ. ತಾತ, ಒಮ್ಮೆ ಇಪ್ಪತ್ತೈದು ಪೈಸೆ ನೀಡಿದ ನೆನಪಾಯಿತು ಅವನಿಗೆ‌.
ಸದಾಕಾಲ ತಲೆಗೆ ಮಾಸಿದ ಟವೆಲ್ ಕಟ್ಟಿಕೊಂಡಿರುತ್ತಿದ್ದ ಅವನಿಗೆ ಬೀಡಿ ಎಂದರೆ ಪಂಚಪ್ರಾಣ ಜತೆಗೆ ಯಾವಾಗಲೂ ಟೀ ಇರಬೇಕು.

ಇಂಥವನು ನಮ್ಮೂರ ಬಾವಿಯಲ್ಲಿ ಹೆಣವಾಗಿ ತೇಲಿದ್ದು ಈಗ ಇತಿಹಾಸ. ತಾತ, ಸತ್ತಿದಾದ್ದಾರೂ ಏಕೆ! ನನ್ನ ಕಾರಣವೇ ಅವನಿಗೂ ಆಗ ಇದ್ದಿರಬಹುದೇ ಎಂದುಕೊಂಡವನು‌ ಮತ್ತೊಮ್ಮೆ ದುಂಖದ ನಗು ನಕ್ಕನು.

ಸಾವು ಒಂದೇ ಆದರೂ ಕಾರಣವೂ ಒಂದೇ ಆಗಿರಬೇಕಿಲ್ಲ ಎಂದರೆ ಸರಿ ಅಲ್ಲ ಎಂದು ಅವನ ಮನಸ್ಸು ಹೇಳಿತು.
ನಿಜಕ್ಕೂ ಅವನಿಗೆ ಕಿರಿಕಿರಿಯಾಗತೊಡಗಿತು.ಸಾಯಲು ಇಷ್ಟೆಲ್ಲ ಚರ್ಚೆ‌ ಬೇಕಾ ಅನಿಸಿತು. ಕಾರಣವೂ ಇಲ್ಲದೇ ಸಾಯಬಹುದಲ್ಲ ಎಂದು ಹೇಳಿಕೊಂಡನು.

ಚಿಂತೆಯಲ್ಲೇ ಮುಳುಗಿದ್ದವನಿಗೆ ಮನೆಯಲ್ಲಿ ತಡಬಡ ಸದ್ದಾಗಿದ್ದು ಗೊತ್ತಾಗಲೇ ಇಲ್ಲ.‌ ಒಳಗಿನಿಂದ ಸೊಸೆಯ ಕಿರುಚಾಟ ಕೇಳುತ್ತಲೇ ಇತ್ತು. ನಿಮ್ಮಪ್ಪ ಮಿಂಡ್ರಿಗುಟ್ಟಿದವನ ಅನ್ನೋದನ್ನೇ ಅವಳು ಒತ್ತಿ ಒತ್ತಿ ಹೇಳುತ್ತಿದ್ದಳು. ಮಗ ಮಾತ್ರ ಮೌನವಾಗಿಯೇ ಕುಳಿತಿದ್ದ, ತುಟಿ ಎರಡು ಮಾಡದಂತೆ ಯಾಕಾಗಿ ಕುಳಿತಿದ್ದನೋ ? ಅವನನ್ನು, ಅವನ ಅವಸ್ಥೆಯನ್ನು ಕಂಡು ಎದೆಯೊಳಗೆ ಸಂಕಟದ ಸಮುದ್ರವೇ ಹಾದು ಹೋದಂತಾಯಿತು. ಪಾಪ! ಧೈರ್ಯ ಸಾಲದವನು. ನಾ‌ನೇಕೆ ಅವನನ್ನು ಧೈರ್ಯವಂತನಾಗಿ ಬೆಳೆಸಲಿಲ್ಲ. ಅವನು ಹೆದರುತ್ತಿರುವುದು ಹೆಂಡತಿಗೂ, ಜಗಳ ಜೋರಾದರೆ ಏನ್ ಗತಿ, ಪಕ್ಕದ ಮನೆಯವರು ಕೇಳಿಸಿಕೊಂಡರೆ ಸಮಾಜದಲ್ಲಿ ಮರ್ವಾದೆ ಹೋಗುತ್ತದೆ ಎಂಬ ಭಯಕ್ಕೂ, ಎಂದು ಅಂದಾಜಿಸಿಕೊಂಡವನು ಸೊಸೆಯ ವಾಕರಿಕೆಯ ಮಾತುಗಳಿಗೆ ಹೃದಯ ಚುಚ್ಚಿಬಂತು.

ವಯಸ್ಸಾದ ಹಸುಗಳನ್ನು ಮಾರುವಂತೆ ಮನುಷ್ಯರನ್ನು ಮಾರುವಂತಿದ್ದರೆ ಅದೇ ಚೆನ್ನಾಗಿರುತಿತ್ತು ಎಂದು ಮನಸ್ಸು ಹೇಳುವಷ್ಟರಲ್ಲಿ ಎರಡು ಹನಿ ಕಣ್ಣೀರು ಸುರಿದುಹೋಯಿತು. ಅಡುಗೆ ಮನೆಯಿಂದ ಈಚೆ ಬಂದ ಮಗ ಸೀದಾ ರೂಮಿನೊಳಗೆ ಹೋಗಿ ಕುಳಿತು. ಸೊಸೆಯ ದನಿ ಇನ್ನೂ ಜೋರಾಯಿತು. ಮನೆಯ ನಾಯಿಗೆ ಊಟ ಹಾಕೊಂಡಿದ್ದೀವಿ ಎಂದು ಸಾಕ್ತಾ ಇದ್ದೀನಿ ಎಂದು ಮತ್ತೆರಡು ಸಲ ಜೋರಾಗಿಯೇ ಹೇಳಿದಳು ಅದು ನನಗೆ ಕೇಳಿಸಲೆಂದೇ ಎಂಬುದನ್ನು ಅವನಿಗೆ ಯಾರು ಹೇಳಬೇಕಿರಲಿಲ್ಲ.

ಪಕ್ಕದ ಮನೆಯ ರಾಚಯ್ಯ ದುಡೀತಿಲ್ವೆ, ಬೆಳಿಗ್ಗೆ ಎದ್ರೆ ಮನೆಯಲ್ಲೇ ಕೂತಿರುತ್ತಾನೆ ಎಂದು ಮಾತುಗಳು ಏಕವಚನಕ್ಕೆ ಇಳಿದವು. ಇಂತ ಬೈಗುಳ ಹೊಸದೇನಲ್ಲ ಅಂದುಕೊಂಡವ ಹರಿದ ಎಕ್ಕಡ ಮೆಟ್ಟಿಕೊಂಡು ನಿಧಾನವಾಗಿ ಆಚೆ ಸರಿದುಕೊಂಡ.

ಸುಮ್ಮನೇ ನಡೆದೇ ಹೋಗುತ್ತಿದ್ದವ‌ನಿಗೇ ಮರದ‌ ನೆರಳು ಕಂಡು ಕೂತ.ಯಾರೇರೋ ಪರಿಚಯದವರು ಸಿಕ್ಕರೆ ಕಷ್ಟ ಎಂದು ಮರೆಗೆ ಸರಿದು ಕೂತಚನ ಕಣ್ಣಲ್ಲಿನೀರು ಹರಿದು ಹೋಯಿತು. ಮತ್ತೇ ಅವನಿಗೆ ತಾಯ ನೆನಪಾದ. ನಾನು, ತಾತನಿಗಿಂತ ಪುಕ್ಕಲೇ ಎಂದುಕೊಂಡ.

ತಾತ, ತಾನೇ ಕಟ್ಟಿಸಿದ ತೋಟದ ಬಾವಿಗೆ ಬಿದ್ದು ಸಾಯುವುದಕ್ಕೆ ಮುನ್ನ ವಾರದ ಕೆಳಗೆ ಎಮ್ಮೆಗಳನ್ನು ಮೇಯಿಸುವಾಗ ಹೇಳಿದ ಮಾತುಗಳು ನೆನಪಿಗೆ ಬಂದವು‌. ನೋಡು, ಯಾರನ್ನೂ ನಂಬಬೇಡ. ಕೊನೆಯಲ್ಲಿ ಯಾರೂ ಆಗುವುದಿಲ್ಲ. ನಿನ್ನ ಬುದ್ದಿ ನಿನ್ನ ಕೈಯಲ್ಲಿ ಇಟ್ಟಿಕೋ. ನಿನಗೆ ಕೊಡಲು ನನ್ನತ್ರ ಈ ಮಾತುಗಳನ್ನು ಬಿಟ್ಟರೆ ಬೇರೇನು ಇಲ್ಲ ಅಂದಿತ್ತು. ಆಗಿನ್ನೂ, ಹೈಸ್ಕೂಲ್ ಓದುತ್ತಿದ್ದ ನನಗೆ ಆತನ ಮಾತಿಗಿಂತಲೂ ಹತ್ತು ಪೈಸೆಯಾದರೂ ಕೊಡು ತಾತಾ ಎಂದು ಅವರ ಎದುರು ಕೈ ಚಾಚಿದ್ದು, ಅವರ ಮುಖ ತಿರುಗಿಸಿ ಅತ್ತಿದ್ದು ಯಾಕೆಂಬುದನ್ನು ಅರ್ಥ ಮಾಡಿಕೊಳ್ಳಲು ಇಷ್ಟು ದಿನ ಬೇಕಾಯಿತೇ ಅನಿಸಿತು.
ಒಂದು ಲೋಟ ಟೀ ಗಾಗಿ ಪರಿತಪಿಸುತ್ತಿದ್ದ ತಾತ, ಬಟ್ಟರ ಅಂಗಡಿಯಲ್ಲಿ ಟೀ ಕುಡಿದು ಮಾಡಿದಸಾಲ ತೀರಿಸಲು ಒಂದು ಸಣ್ಣದಾದ ಬಾಳೆಗೊನೆ ಕಡಿದು ಮಾರಿದ್ದು ಮನೆಯಲ್ಲಿ ರಂಪಾಟ ಆಗಲು ಕಾರಣ ಎಂದು ಸಣ್ಣವನಿದ್ದಾಗ ಗೊತ್ತಿತ್ತು.

ಇದಾದ ಬಳಿಕ ತಾತ, ಯಾಕೋ ಮಂಕಾಗಿ ಬರ ತೊಡಗಿದ. ಅವ, ಬೀಡಿ ಸೇದುವುದನ್ನು ಕಡಿಮೆ ಮಾಡಿದ. ಎಮ್ಮೆ ಮೇಯಿಸಲು ಮಾತ್ರ ಬರುತ್ತಿದ್ದ. ನನ್ನೊಂದಿಗೆ ಮಾತ್ರ ಮಾತನಾಡುತ್ತಿದ್ದ, ಏನೇನ್ ಮಾತನಾಡಿದನೊ, ಏನೇನ್ ಹೇಳಿಕೊಂಡನೋ.

ಒಂದಿ‌ನ‌‌ ಬೆಳ್ಳಂಬೆಳಿಗ್ಗೆ ಕಟ್ಟೆಯ ಏರಿಯ ಕಡೆಯಿಂದ ಯಾರೋ ಕೂಗು ಹಾಕಿದ್ದು ಕೇಳಿಸಿತು‌‌. ಊರೋರು ಎಲ್ಲ ತಡಬಡಿಸಿ ಓಡಿ ನೋಡಿದರೆ ಬಾವಿಯ ಬಂದು ಕಲ್ಲಿನ ಮೇಲೆ ಅಪ್ಪನ ಮಾಸಲು ಟವೆಲ್ ಎಲ್ಲವನ್ನೂ ಹೇಳುತ್ತಿತ್ತು. ಆ ಕೊರೆಯುವ ಚಳಿಯಲ್ಲಿ.

ಬೀಳ್ತಿದಂಗೆ ಪ್ರಾಣ ಹೋಗ್ ಬಿಟೈತೆ. ಮೇಲಿಂದ ಬಿದ್ದಿಲ್ಲ. ಮೆಟ್ಟಿಲ ಇಳಿದು ಕೊನೆ ಮೆಟ್ಟಿಲ ಮೇಲೆ ಟವಲ್ಇಟ್ಟೇ ಬಿದ್ದೋನೆ. ಆದರೂ ಹೆಣ ನೆಲ ಕಚ್ಕೊಂಡಿತ್ತು ಅನ್ನುವ ಮಾತುಗಳು, ಏನೇನೊ ಲೆಕ್ಕಾಚಾರಗಳು ಮಾರ್ದನಿ ಆಡಿತು. ನನ್ನಮ್ಮ, ನನ್ನಪ್ಪನ ಅಳು ಮಾತ್ರ ಮೋಡಮುಟ್ಟಿತು. ಅವನಿಗೇನು ಕಡಿಮೆ ಮಾಡಿದ್ದೋ ಅಂತ ಹಿಂಗ್ ಮಾಡ್ಕಂಡ. ನಮಗೆ ಕೆಟ್ಟ ಹೆಸರು ತಂದ್ಬಿಟ್ಟ. ಗೂರಲು ಇತ್ತು. ಸಂಕಟ ಪಡ್ತಿದ್ದ. ಆದರೆ ಗೂರಲಿಗೆ ಹೆದರಿ ಹಿಂಗ್ ಮಾಡ್ಕಂತನೇ ಅಂತ ಗೊತ್ತಿದ್ದರೆ ಬಾವಿ ಹತ್ತಿರಕ್ಕೇನೆ ಕಳುಸುತ್ತಿರಲಿಲ್ಲ ಎಂಬ ಮಾತುಗಳು ಕಿವಿಯಲ್ಲಿ ಕೇಳಿದಂತಾದವು. ತಾತ ಯಾಕ್ ಅಂಗ ಮಾಡ್ದ. ಬಾವಿಯ ಮೆಟ್ಟಿಲು ಮೇಲೆ ಟವಲ್ ಕಳಚಿ ಇಡುವಾಗ ಅವನು ಯಾರನ್ನು ನೆನದಿರಬಹುದು. ಯಾರಿಗೆ ಶಾಪ ಹಾಕಿರಬಹುದು.ಯಾರಿಗೆ ಒಳ್ಳೆಯದಾಗಲಿ ಎಂದು ಬಯಸಿರಬಹುದು. ನಾನೇ ಅವನಿಗೆ ಹೆಚ್ಚು ಪ್ರೀತಿಯ ಮೊಮ್ಮಗ. ನನ್ನ ಹೆಸರನ್ನು ನೆನದಿರಬಹುದಾ ಎಂಬ ಪ್ರಶ್ನೆಗಳಿಗೆ ಈ ದಿನದವರೆಗೂ ಉತ್ತರ ಹುಡುಕುತ್ತಿರುವ ಮನಸ್ಸಿಗೆ ಅವನು ಏನನ್ನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ತಾತನೇ ಪದೇ ಪದೇ ಕರೆದಂತಾಗಿ, ನೆನಪಿಗೆ ಬಂದಂತಾಗಿ ತಲೆ ಹಿಡಿದುಕೊಂಡು ಚೀರಾಡಿದ.

ಕವನ: ಮೌನಿ ಮಾತನಾಡಿದಾಗ…

0
ಬಾಲ್ಯದ ನೋವುಗಳು ಎಂದೂ ಅಳಿಸಲಾಗದ ಗೆರೆಗಳಾಗಿ ಉಳಿದು ಬಿಡುತ್ತವೆ. ನೆರವಿ‌ನ ಕೈಗಳು ಸಿಗದೇ ತಪ್ಪಿಸಿಕೊಂಡಾಗಿನ ಚಟಪಟಿಕೆ, ಒಳ ರೋಷಾಗ್ನಿಯನ್ನು ಕೆ.ಎಸ್.ಗಿರಿಜಾ ಅವರು ತಮ್ಮ‌ ಕವನದಲ್ಲಿ ಹೇಳಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿಯಾಗಿದ್ದಾರೆ.

ತುಮಕೂರಿನಲ್ಲಿ ಜನಸ್ನೇಹಿ ಪೊಲೀಸ್ ಸಾಧ್ಯನಾ?

0
ವಕೀಲರಾದ ಎಂ.ಎನ್.ಚಿನ್ಮಯ ಅವರು ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಬರೆದಿದ್ದಾರೆ. ತುಮಕೂರಿನ ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಹಾಪುರ ಅವರ ಜನಸ್ನೇಹಿಯ ನಡೆ ಜಿಲ್ಲೆಯಲ್ಲಿ ಮೆಚ್ಚುಗೆಗಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಲೇಖನ ಅರ್ಥಪೂರ್ಣವಾಗಿದೆ.

ಜನಸ್ನೇಹಿ ಪೊಲೀಸ್ ವ್ಯವಸ್ಥೆ.
ಇದೊಂದು ಆಗಾಗ್ಗೆ ಪತ್ರಿಕೆಗಳಲ್ಲಿ , ಪೊಲೀಸ್ ಉನ್ನತ ಅಧಿಕಾರಿಗಳ ಪತ್ರಿಕಾಗೋಷ್ಠಿಗಳಲ್ಲಿ ಕೇಳಿಬರುವ ಹಾಗೂ ಕ್ಷಣ ಕಾಲ ಸಾರ್ವಜನಿಕರು ನಿಟ್ಟುಸಿರು ಬಿಟ್ಟು ಖುಷಿ ಪಡುವ ವಾಕ್ಯ ಅಂದ್ರೆ ಅತಿಶಯೋಕ್ತಿಯಾಗಲಾರದು.

ಹೌದು, ಪೊಲೀಸ್ ವ್ಯವಸ್ಥೆ ಬ್ರಿಟಿಷ್ ಕಾಲದಿಂದಲೂ ಸಹ ಸಮಾಜದಲ್ಲಿ ಶಾಂತಿ ಸುವ್ಯವಸ್ತೆ ಕಾಪಾಡಲು ಹಾಗೂ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ತನ್ನದೇ ಆದ ಕೆಲ ಘೋಷಿತ ಹಾಗೂ ಅಘೋಷಿತ ಕಾನೂನುಗಳನ್ನು ಬಳಸಿಕೊಂಡು ಬಂದಿರುವುದು ಈಗ ಇತಿಹಾಸ.

ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದೊಂದು ಮನೆತನದ ಗೌರವಕ್ಕೆ ದಕ್ಕೆ ತರುವ ಸಂಗತಿ , ಪೊಲೀಸರು ನಮ್ಮನ್ನು ಹುಡುಕಿ ಬರುವುದು ಅವಮಾನದ ಸಂಕೇತ ಅನ್ನುವ ಕಾಲದಿಂದ ಸರಿದು ಜನಸ್ನೇಹಿ ಪೊಲೀಸ್ ಎಂಬ ಬದಲಾವಣೆಯ ಪರ್ವದ ಕಡೆ ಆದ್ಯತೆ ನೀಡುತ್ತಿರುವುದು ಸಮಾಧಾನಕರ ಸಂಗತಿ.

ಆದರೂ ಸಹ ರಾಜ್ಯದ ಬಹುಸಂಖ್ಯಾತ ಪೊಲೀಸ್ ಠಾಣೆಗಳಲ್ಲಿ ಪ್ರಾಮಾಣಿಕ, ನಿಷ್ಠಾವಂತರನ್ನು ಹೊರತುಪಡಿಸಿ ಇಂದಿಗೂ ಸಂವಿಧಾನಬದ್ದ, ಸಂಸದೀಯ ಘೋಷಿತಕಾನೂನುಗಳ ಪಾಲಿಸಿ ಕರ್ತವ್ಯ ನಿರ್ವಹಿಸುವುದಕ್ಕಿಂತ, ಅಘೋಷಿತ ದಾಖಲೆ ರಹಿತ ಕಟ್ಟಳೆಗಳನ್ನು ಅನುಸರಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಕಾಣಬರುತ್ತದೆ.

ನೊಂದು ಬೆಂದು ಸಮಸ್ಯೆ ಹೊತ್ತು ತರುವ ದೂರುದಾರರನ್ನು ಸಮಾಧಾನಚಿತ್ತದಿಂದ ಕುಳ್ಳಿರಿಸಿ ಸಮಸ್ಯೆ ಕೇಳಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಮಗ್ನರಾಗುವ ಪೊಲೀಸ್ ಅಧಿಕಾರಿಗಳು ಕಡಿಮೆಯಾಗುತ್ತಿರುವುದು ಇಲಾಖೆಗೆ ತಲೆನೋವಾಗಿದೆ.

ದೂರು ನೀಡಲು ಹೋದವರನ್ನೇ ಅನುಮಾನಿಸುವ, ಅವಮಾನಿಸುವ, ನೈತಿಕವಾಗಿ ಕುಗ್ಗಿ ಹೋಗುವ ರೀತಿಯಲ್ಲಿ ಪ್ರಶ್ನೆ ಕೇಳುವ…… ನೊಂದು ದೂರು ಕೊಡಲು ಬಂದವ “ಠಾಣೆಗೆ ಬರಬಾರದಿತ್ತು, ಇನ್ಯಾವ್ಯಾವತ್ತೂ ಬರಬಾರದು ” ಅನ್ನುವ ಮನಸ್ಥಿತಿಗೆ ತಂದು ನೂಕುವ ವಾತಾವರಣವನ್ನು ಪೊಲೀಸ್ ಠಾಣೆಯಲ್ಲಿ ಸೃಷ್ಟಿಸುವಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗುತ್ತಿದ್ದಾರೆಯೇ ವಿನಃ ಜನಸಾಮಾನ್ಯರಿಗೆ ರಕ್ಷಣೆ ನೀಡಿ ಜನಸ್ನೇಹಿ ಪೊಲೀಸರಾಗುವಲ್ಲಿ ವಿಫಲ ರಾಗುತ್ತಿದ್ದರೆ.

ಕೆಲ ಮಾಧ್ಯಮಗಳು ಹಾಗೂ ನ್ಯಾಯಾಲಯಗಳಲ್ಲಿನ ಕೆಲ ಪ್ರಕರಣಗಳ ಉಲ್ಲೇಖದಂತೆ ರಾಜ್ಯದ ಕೆಲ ಪೊಲೀಸ್ ಕಚೇರಿ ಗಳು ರಿಯಲ್ ಎಸ್ಟೇಟ್ ಏಜೆಂಟ್ ಗಳ, ತಲೆ ಮಾಸಿದ ಭ್ರಷ್ಟ ರಾಜಕಾರಣಿಗಳ, ಹಣವಂತರ ಖಾಸಗಿ ಕಚೇರಿಗಳಾಗಿ, ಮಾರ್ಪಟ್ಟಿವೆ ಎಂಬ ಸಂಶಯದ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇನ್ನೊಂದೆಡೆ, ಅತಿಯಾದ ರಾಜಕೀಯ ಹಸ್ತಕ್ಷೇಪವೇ ಇದಕ್ಕೆಲ್ಲ ಕಾರಣವಾಗುತ್ತಿದೆ ಎಂದು ಪೊಲೀಸರು ನೊಂದುಕೊಳ್ಳುತ್ತಿದ್ದಾರೆ.

* ಬದಲಾಗಬೇಕಿದೆಪೊಲೀಸ್ ಭಾಷೆ *

ಪೊಲೀಸ್ ಇಲಾಖೆಗೆ ಸಮವಸ್ತ್ರ, ಪೊಲೀಸ್ ಕಾನೂನು ಅಂತಾ ಕೂಡ ಇರುವಂತೆ ಪೊಲೀಸ್ ಭಾಷೆ ಅಂತಾ ಒಂದಿದೆ ಅಂತೆ…!!😄 ಹಾಗಂತ ಜನರಾಗಲಿ, ಮಾಧ್ಯಮದವರಾಗಲಿ ಹೇಳ್ತಾ ಇರೋದಲ್ಲ.. ಅವರೇ ಪೊಲೀಸರೇ ಆಗಾಗ ಹೇಳ್ತಿರ್ತಾರೆ “ನಾವು ಪೊಲೀಸ್ ಭಾಷೆಲಿ ಬಾಯಿಬಿಡುಸ್ತೀವಿ, ನಮ್ಮ ಭಾಷೇಲಿ ಕೇಳುದ್ರೆ ಹೇಳ್ತಾನೆ “ಅಂತಾ ಇರ್ತಾರೆ. ಅದ್ಯಾವುದು ಪೊಲೀಸ್ ಭಾಷೆ ಅಂತಾ ಅರ್ಥ ಆಗಿರುತ್ತೆ ಅನ್ಕೋತೀನಿ…

ಸುಧಾರಣೆ ಯಾವಾಗ…..?
ಅಂದ್ರೆ ಪೊಲೀಸ್ ವ್ಯವಸ್ಥೆಲಿ ಸುಧಾರಣೆನೇ ಆಗಿಲ್ವಾ? ಅಂದ್ರೆ ಖಂಡಿತ ಹಾಗಿದೆ…. ಹಾಗ್ತಾ ಇದೆ….ಇನ್ನೂ ಬಹುಪಾಲು ಆಗಬೇಕಿದೆ….. ನೇಮಕಾತಿಯ ಬದಲಾವಣೆಗಳಿಂದ, ಉನ್ನತ ವ್ಯಾಸಂಗಮಾಡಿದ ಅಭ್ಯರ್ಥಿಗಳ ಆಯ್ಕೆ ಬಹುಪಾಲು ಆಗುತ್ತಿರುವ ಕಾರಣ, ಪ್ರಜ್ಞಾವಂತ ಸಾರ್ವಜನಿಕರ ಸಹಕಾರಗಳಿಂದ, ಒಂದಿಷ್ಟು ಭಾಗ ಸುಧಾರಣೆ ಆಗಿದ್ದರೂ ಸಹ ಕೆಲ ರಾಕ್ಷಸ ಪ್ರವೃತ್ತಿಯ, ಮೃಗೀಯ ವರ್ತನೆಯ, ಸಂಬಳೇತರ ಕಾಸಿಗೆ ಕೈ ಚಾಚುವ ಕೆಲವೇ ಮಂದಿಗಳ ದುರ್ವರ್ತನೆಗಳಿಂದ ಇಡೀ ಪೊಲೀಸ್ ವ್ಯವಸ್ಥೆಗೆ ಕಪ್ಪು ಚುಕ್ಕಿ ಇಟ್ಟಂತೆ ಆಗಿದೆ ಅಂದ್ರೆ ಭ್ರಷ್ಟರನ್ನುಬಿಟ್ಟು ಇನ್ನುಳಿದ ಪೊಲೀಸ್ ವ್ಯವಸ್ಥೆ ಹೌದು ಎಂದು ಒಪ್ಪುತ್ತದೆ.

ಹಾಗಾದರೆ ಪೊಲೀಸ್ ವ್ಯವಸ್ಥೆ ಹಾಗೂ ಪೊಲೀಸ್ ಅಧಿಕಾರಿಗಳು ನೆಮ್ಮದಿಯಿಂದ, ಸಮಾಧಾನ ದಿಂದ, ಸರ್ವಸ್ವತಂತ್ರರಾಗಿ ಕರ್ತವ್ಯ ನಿರ್ವಹಿಸಲು ಸರ್ಕಾರ ಇಲಾಖೆಗೆ ಸೂಕ್ತ ಸೌಲಭ್ಯ ಒದಗಿಸಿದೆಯೇ….? ಇಲ್ಲಾ ಖಂಡಿತ ಇಲ್ಲಾ.

ಯಾವುದೇ ರಜಾದಿನ, ಹಬ್ಬ ಹರಿದಿನ ಎನ್ನದೆ ಪೊಲೀಸ್ ರಿಗೆ ಖಾಸಗಿ ಜೀವನವೇ ಇಲ್ಲವೆಂಬಂತೆ, ತನ್ನ ಕುಟುಂಬ, ನೋವು ಮರೆತು ಸಾರ್ವಜನಿಕರಿಗಾಗಿ ಹಗಲಿರುಳು ದುಡಿಯುವ ಪೊಲೀಸ್ ಇಲಾಖೆ ಗೆ ಒಂದಿಷ್ಟು ಮಾನಸಿಕ ಹಾಗೂ ದೈಹಿಕ ವಾಗಿ ಉತ್ತೇಜಿತ ಮಾಡುವ ಕಾರ್ಯ ಸರ್ಕಾರದಿಂದ ಆಗಬೇಕಿದೆ . ಸರ್ಕಾರ ಒಂದಿಷ್ಟು ಮಾನಸಿಕ ನೆಮ್ಮದಿಯನ್ನೂ ಕೊಡಬೇಕು.ಆಗಿಂದಾಗ್ಗೆ ಬದಲಾಗುವ ಕಾನೂನು ಕುರಿತು ಕಾನೂನಿನ ಅರಿವು ತರಗತಿಗಳ ಆಯೋಜನೆ ಮಾಡಿದ್ದಲ್ಲಿ ಸಾರ್ವಜನಿಕರ, ಕಾನೂನಿನ ಅಪಹಾಸ್ಯಕ್ಕೀಡಾಗುವ ಸಂದರ್ಭಗಳು ಕಡಿಮೆ ಆಗಬಹುದು….
ಈ ಎಲ್ಲಾ ಸಂಗತಿಗಳ ಬಗ್ಗೆ ಪೊಲೀಸ್ ವ್ಯವಸ್ಥೆ, ಹಾಗೂ ಸರ್ಕಾರ, ಕೈ ಜೋಡಿಸಿದಾಗ ಮಾತ್ರ ದಾಖಲೆಗಳಲ್ಲಿ, ಪೊಲೀಸ್ ಆದೇಶಗಳಲ್ಲಿ ಇರುವ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕಾರ್ಯ ರೂಪಕ್ಕೆ ಬಂದು ಜನಮನ್ನಣೆ ಗಳಿಸುತ್ತದೆ. ಏನಂತೀರಿ….?