Tuesday, May 5, 2026
Google search engine
Home Blog Page 132

ಭಾನುವಾರದ ಕವಿತೆ: ಮೌನಿ

ಗಿರಿಜಾ ಕೆ.ಎಸ್


ಸದ್ದಿಲ್ಲದೇ ಜಿನುಗುತ್ತಿದೆ
ಕಂಣಚ್ಚಿನಿಂದ ಕಂಬನಿ
ಯಾರಿಗೂ ಕಾಣದಂತೆ
ಮರೆಮಾಚಿ ಒರೆಸುತ್ತಾ
ಮುಗುಳ್ ನಗೆಯ ಬೀರಿದಳು
ಸದ್ದಿಲ್ಲದೇ

ಕಳೆದು ಹೋದವು ಅದೆಷ್ಟೋ
ದಿನಗಳು ಹೀಗೇ…
ಯಾರ ಅರಿವಿಗೂ ಬರದೆ,…
ಸದ್ದಿಲ್ಲದೇ

ತನ್ನ ಒಡಲಾಳದ ನೋವು
ಹೇಳದಾದಳು ಯಾರೊಂದಿಗೂ
ಕೊನೆಗೆ ಹಾಗೆಯೇ ಮರೆಯಾದಳು
ಸದ್ದಿಲ್ಲದೇ…


ಡಾ. ಗಿರಿಜಾ ಕೆ.ಎಸ್ ಅವರು ತುಮಕೂರು
ವಿಶ್ವವಿದ್ಯಾಲಯದ ಕಲಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿ.

ಭಾನುವಾರದ ಕವಿತೆ: ಬೆಟ್ಟ ಜಾರಿ

  • ಡಾ.‌ರಜನಿ ಅವರ ಈ ಕವನ‌ ಈಚೆಗೆ ನಡೆದ ನೈಸರ್ಗಿಕ ವಿಕೋಪದ ಕುರಿತು ಕವನ ಹೇಳುತ್ತದೆ. ಪ್ರಕೃತಿ ಮುನಿದರೆ ಯಾರೂ ನಿಲ್ಲಲಾರರು. ಪ್ರಕೃತಿ ನೀಡಿರುವ ಸಹಜ ಜೀವನ ಯಾಕೆ ಮುಖ್ಯ ಎಂಬಾರ್ಥವೂ ಇದೆ. ಅಲ್ಲಾಡದು ಎಂದು ಕೊಳ್ಳು ವ ಬೆಟ್ಟಗಳು ಜಾರುತ್ತಿವೆ. ಮೋಡಗಳು ಹನಿಗಳಾಗದೇ ತುಂಡಾಗುತ್ತಿವೆ.ಪ್ರಕೃತಿ ಕೋಪಿಸಿ ಕೊಂಡಿದ್ದಾಳೆ. ಮಾನವ ಮರ ಕಡಿದು ಮನೆ ಮಾಡಿದ್ದಕ್ಕೊ ? ಏಕೋ ಏನೋ ಎಲ್ಲವೂ ಅಲ್ಲೋಲ ಕಲ್ಲೋಲ.ಮನುಷ್ಯ ಮುನಿದ ಪ್ರಕೃತಿ ಎದುರು ತರಗೆಲೆ ಅಲ್ಲವೇ?


ಬೆಟ್ಟ ಜಾರಿ
*********

ಅಲ್ಲೇ ಕೆಳಗೆ ಒಂದು ಮನೆಯಿತ್ತು
ಗೊತ್ತಿಲ್ಲ ಅವನಿಗೆ
ನಾನು ಜಾರಿ ಎಲ್ಲ ಮುಚ್ಚಾಕುವೆ ಎಂದು
ನಿಂತು ನೋಡುತ್ತಿದ್ದ ನಾನು …ಜಾರುವುದನ್ನ

ಗಿಡ ಮರ ಪೊದೆಗಳೆಲ್ಲಾ ಕಳಚಿ
ಬುಡ ಮೇಲಾಗಿ ಕುಸಿದು ಮಣ್ಣು
ಹರಿವ ನದಿಯಾಗಿ ಗೊತ್ತಿಲ್ಲ ಅವನಿಗೆ
ನಾನು …ಎಲ್ಲಿ ನಿಲ್ಲುವೆ ಎಂದು

ಸುರಿದ ಮಳೆ ಸರಿಸಿದೆಯೋ
ಕಿತ್ತಾಕಿದ ಮರ ಜಾರಿಸಿದೆಯೋ
ಉಡುದಾರದ ರಸ್ತೆ ಹರಿದು
ಬೆಳ ಬೆಳಗ್ಗೆ …ಅಲ್ಲಾಡಿ ತಳ

ಮೇಯುತ್ತಿದ್ದ ಕುರಿಗಳ ಮೃದು ತುಪ್ಪಟಗಳ
ಚಿಲಕ ಜಡಿದಿದ್ದ ಬಾಗಿಲುಗಳ
ಹಲಗೆ ಬಡಿದ ತಾರಸಿಗಳ
ತಲಾಂತರದಿದ್ದ ಬೀಡು ಬಿಟ್ಟ …ವಂಶಗಳ

ಸ್ಪರ್ಗವೇ ಇಳಿದು ಬಂದಂತಿದ್ದ
ಚೂಪು ಮರಗಳ ಮಧ್ಯೆ ಹತ್ತಿ ಮಂಜುಗಳ
ಬೆಟ್ಟಕ್ಕಿಂತ ಮೇಲೆ ಏರುತ್ತಿದ್ದ
ಗಮ್ಮನೆ ಕುದಿಯುತ್ತಿದ್ದ… ಚಹಾ

ತಣ್ಣಗೆ ಕೂಡಿಟ್ಟ ಕೋಪ
ತುಸು ತುಸು ಜಾರಿ
ಒಮ್ಮೆಲೆ ಸರಿದು ಕುಸಿದು
ಎಳೆ ಬಿಸಿಲಲ್ಲಿ ಜಾರುಬಂಡೆ

ನೋಡ ಬಂದವರ ನುರಿದು
ಅತಿಥಿ ಎಂಬುದ ಮರೆತು
ಬೇರು ಬಿಟ್ಟವರ ಬೀಳಿಸಿ
ಬೆಟ್ಟ ಜಾರಿ …ನೀರು

ಡಾII ರಜನಿ

ಸಾಲ ಮಾಡಿದ ವ್ಯಕ್ತಿ ನೇಣಿಗೆ ಶರಣು

 

ಕೊರಟಗೆರೆ:
ಕೈ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಸಾಲ ತೀರಿಸಲಾಗದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಲ್ಲೂಕಿನ ಗೌರಗಾನಹಳ್ಳಿ ರಂಗರಾಜು ಎಂಬುವರ ಮಗ ರಾಮಾಂಜಿ(31) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಕುಟುಂಬ ನಿರ್ವಹಣೆಗಾಗಿ ಅಲ್ಲಲ್ಲಿ ಕೈ ಸಾಲ ಮಾಡಿಕೊಂಡು ತೀರಿಸಲಾಗದೆ ನೇಣಿಗೆ ಶರಣಾಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

ರಾಮಾಂಜನೇಯ ಅವರ ಪತ್ನಿ ಮಂಜುಳ ನೀಡಿದ ದೂರಿನ‌ ಮೇರೆಗೆ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸ್ಥಳಕ್ಕೆ ಪಿಎಸ್ಐ ಎಚ್. ಮುತ್ತುರಾಜು, ಎಎಸ್ಐ‌ ಯೋಗೀಶ್ ಭೇಟಿ ನೀಡಿದ್ದರು.

ವೈದ್ಯ ಜಗತ್ತಿಗೆ ಸವಾಲು ಒಡ್ಡಿದ ಮಲೆನಾಡಿನ ರೋಗ

ಇಂಟ್ರೋ: ವೈದ್ಯಕೀಯ ವಿಜ್ಞಾನ ಮತ್ತು ಔಷಧ ವಿಜ್ಞಾನಗಳು ಕೋರೊನಾದ ಮುಂದಷ್ಟೇ ಕೈ ಕಟ್ಟಿ ಕುಳಿತಿಲ್ಲ. ಹಂದಿಗೋಡಿನ ಎದುರೂ ಮಂಡಿಯೂರಿ ಕುಳಿತಿವೆ. ಮಲೆನಾಡಿನ ಕ್ಯಾಸನೂರು ಕಾಡಿನ ಕಾಯಿಲೆ ಕೂಡ ಇದಕ್ಕೆ ಹೊರತಾಗಿಲ್ಲ. ಮಂಗನಿಂದ ಮಾನವ ಎನ್ನುವುದಕ್ಕೆ ವ್ಯತಿರಿಕ್ತ ಎಂಬಂತೆ ಕ್ಯಾಸನೂರು ಕಾಯಿಲೆಯ ಮೂಲ ಮಂಗ. ಇದು ಕೋವಿಡ್‌ಗಿಂತ ಭೀಕರವಾಗಿ ಮಲೆನಾಡಿಗರನ್ನು ಬಾಧಿಸಿದೆ. ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದ ಶಿವಮೊಗ್ಗ ಜಿಲ್ಲೆ ದೇಶದ ಇತಿಹಾಸಕ್ಕೆ ಏನೆಲ್ಲ ಕಾಣಿಕೆಯನ್ನು ನೀಡಿದೆ. ಆ ಕೀರ್ತಿಗೆ ಕ್ಯಾಸನೂರು ಮತ್ತು ಹಂದಿಗೋಡು ಅಪಕೀರ್ತಿ. ಮಲೆನಾಡಿನ ಹಚ್ಚ ಹಸಿರಿನ ಸೆರಗಿನಲ್ಲಿ ಕೆಂಡದುಂಡೆಯಾಗಿ ಸುಡುತ್ತಲೇ ಇವೆ. ನಾಲ್ಕು ದಶಕದಿಂದ ಸಾಮಾಜಿಕವಾಗಿ ಹಿಂದುಳಿದ ಜಾತಿ –ಸಮುದಾಯದವರ ಜೀವವನ್ನು ಹಿಂಡಿ ಹಿಪ್ಪೆ ಮಾಡಿರುವ ಹಂದಿಗೋಡು ರೋಗದ ಭೀಕರತೆಯ ಕರಾಳ ನೋಟವಿದು..
–ತ್ಯಾಗಟೂರು ಸಿದ್ದೇಶ್‌

ಹೋಗುವೆನು ನಾ…….
ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ… ಎಂಬ ಕುವೆಂಪುವರ ಪದ್ಯವನ್ನು ಕೇಳಿದ ತಕ್ಷಣ ಮನಸು ಪುಳಕಿತವಾಗುತ್ತದೆ. ನಿಸರ್ಗ ರಮಣೀಯ ಪರ್ವತ ಶ್ರೇಣಿ ನೋಡಿದ ಕ್ಷಣ ಅದು ನೀಡುವ ಆಹ್ಲಾದದ ಆನಂದ ನಮ್ಮ ಹೃದಯ ಮನಸುಗಳಿಗೆ ತಂಪನ್ನು ಎರೆಯುವಂತೆಯೇ ಕುವೆಂಪು ಕವಿತೆಯೂ. ಮಲೆ ಪರ್ವತಗಳ ಮಳೆ ಕಾಡಿನ ಮಡಿಲು ದೇಶದ ಅನೇಕ ಜನಪರ ಚಳವಳಿಗೆ ಒಡಲು ನೀಡಿದ ಕರ್ಮಭೂಮಿ. ಕಲೆ– ಸಾಹಿತ್ಯದ ಪರಂಪರೆಗೆ ಮುಂಚೂಣಿಯ ಮಿಂಚಿನ ಹೊಳೆಯ ತೂಗು ಉಯ್ಯಾಲೆಯನ್ನು ಹರಿಸಿದ ತುಂಗೆಯೂ ಹೌದು. ಅಂತಹ ಮಣ್ಣಿನಲ್ಲಿಯೇ ಜನರನ್ನು ನಿರಂತರ ಬಾಧಿಸುವ ನಂಜಿನ ಕುಳಿಗಳೂ ಇವೆ. ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದ ಈ ಜಿಲ್ಲೆಯ ಒಡಲಿನಲ್ಲಿ ನಾಲ್ಕು ದಶಕದಿಂದಲೂ ಜನರನ್ನು ಕಾಡುತ್ತಿರುವ ಹಂದಿಗೋಡು ಕಾಯಿಲೆಯ ನೋವಿಗೆ ಕರುಣಾಹೀನ ಕಹಾನಿ ಇದು.

ದೊಡ್ಡ ದೊಡ್ಡ ಸಾಹಿತಿ ಚಿಂತಕರನ್ನೂ ನೀಡಿದ ಪುಣ್ಯಭೂಮಿ, ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆಯ ಕಣ್ಣೀರ ಕಥೆ ಇಲ್ಲಿದೆ. ರಮಣೀಯ ನಿಸರ್ಗದ ಸೆರಗಿನಲ್ಲಿ ಭಯಾನಕ ಹಂದಿಗೋಡಿನ ರೌದ್ರಾವತರವೂ ನೆಲೆಗೊಂಡಿದೆ. ಇದು ಮಲೆನಾಡಿನ ತವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಂದಿಗೋಡು ಎಂಬ ಗ್ರಾಮದಿಂದ ಹಬ್ಬಿರುವ ವಿಷಬಳ್ಳಿಯ ವರ್ತುಲದಲ್ಲಿ ಸಿಲುಕಿ ಯಮಯಾತನೆಯನ್ನು ಅನುಭವಿಸುತ್ತಿರುವವರ ನೋವಿಗೆ ಮಿಡಿಯುವ ಪ್ರಯತ್ನ ನಮ್ಮದಾಗಿದೆ.

ವಿಶ್ವ ಪ್ರಸಿದ್ಧ ಜೋಗ ಜಲಪಾತಕ್ಕೆ ಸಮೀಪದಲ್ಲಿರುವ ಹಂದಿಗೋಡು ಎಂಬ ಗ್ರಾಮದಲ್ಲಿ ಯಾರನ್ನೇ ಸಾವಕಾಶದಿಂದ ಒಂದು ಕ್ಷಣ ನೀವು ಮಾತನಾಡಿಸಿದ್ದೇ ಆದರೆ ಅವರ ಕರುಣಾಜನಕ ಕಥೆ ನಿಮ್ಮ ಕಣ್ಣೆದುರು ತೆರೆದುಕೊಳ್ಳುತ್ತದೆ. ಊರಿನಲ್ಲಿ ಕುಟುಂತ– ತೆವಳುತ್ತಾ ಸಾಗುವವರು ಸಿಗುತ್ತಾರೆ. ಅವರನ್ನು ಕ್ಷಣ ನಿಲ್ಲಿಸಿ ಕೇಳಿದರೆ ದಶಕಗಳ ಕಾಲ ಅವರು ಅನುಭವಿಸುತ್ತಿರುವ ವೇದನೆ ಮನದಟ್ಟಾಗುತ್ತದೆ. ತಮ್ಮ ಆ ಸ್ಥಿತಿಗೆ ತಮ್ಮಷ್ಟಕ್ಕೆ ತಾವೇ ಪಶ್ಚಾತ್ತಾಪದಲ್ಲಿ ಕೊರಗುತ್ತಾರೆ. ಕೆಲವರು ತಮಗೆ ಯಾವ ಜನ್ಮದ ಶಾಪ ತಟ್ಟಿದೆಯೋ ಎಂದು ಕುರುಬುತ್ತಾರೆ. ಈ ಜನರ ನೋವು– ಸಂಕಟ, ಅವಮಾನ– ಅಪಮಾನವನ್ನು ಇಲ್ಲಿ ಹೇಳುವುದಕ್ಕೂ ಸಂಕಟವಾಗುತ್ತಿದೆ.
ಏಕೆಂದರೆ ನಾವಿಲ್ಲಿ ನಿಮಗೆ ಹೇಳುತ್ತಿರುವ ಆ ಸತ್ಯ ಘಟನೆಗಳು ಮಲೆನಾಡಿನ ಈ ಹಂದಿಗೋಡು ಎಂಬ ಗ್ರಾಮದ ಗರ್ಭದಲ್ಲಿ ಹುಟ್ಟಿದ ವಿಚಿತ್ರ ಕಾಯಿಲೆಯಿಂದಲೇ ಬೆಳೆದಿವೆ. ಆ ಕಾರಣಕ್ಕಾಗಿಯೇ ಆ ಕಾಯಿಲೆಗೂ ಆ ಗ್ರಾಮದ ಹೆಸರನ್ನೇ ತಜ್ಞರು ಅಂಟಿಸಿದ್ದಾರೆ. ಅಲ್ಲೊಂದು ಇಲ್ಲೊಂದು ಮನೆ ಇರುವ ಈ ಹಳ್ಳಿಯ ಬಹುತೇಕ ಮನೆಗಳಲ್ಲಿ ಹಂದಿಗೋಡು ಪೀಡಿತರು ಒಬ್ಬರಲ್ಲ ಒಬ್ಬರು ಸಿಗುತ್ತಾರೆ. ಆ ರೋಗ ಹುಟ್ಟಿಸುವ ಕೌತುಕ ಈ ಆಧುನಿಕ ವಿಜ್ಞಾನ ಜಗತ್ತಿಗೆ ಸವಾಲೇ ಸರಿ. ಏಕೆಂದರೆ ಈ ಹಂದಿಗೋಡಿನ ಜಾಡ್ಯ ಸಾಮಾಜಿಕವಾಗಿ ಹಿಂದುಳಿದ ಜಾತಿಗಳ ಕುಟುಂಬಗಳನ್ನಷ್ಟೇ ಜಾಲಾಡಿದೆ. ಇದು ಏಕೆ ಹೀಗಾಗಿದೆ? ಎನ್ನುವುದೂ ಮಲೆನಾಡಿನ ರಮಣೀಯ ವಿಸ್ಮಯದ ಕುತೂಹಲದ ಪ್ರಶ್ನೆಯಷ್ಟೇ ರಹಸ್ಯ.

ವಯಸ್ಸಿನ ತಾರತಮ್ಯ ಇಲ್ಲದೆ ಅನೇಕರು ಇದರ ಬಾಧೆಗೆ ತುತ್ತಾಗಿದ್ದಾರೆ. ಈ ಕಾಯಿಲೆಗೆ ತುತ್ತಾದವರಿಗೆ ಶ್ರಮವಹಿಸಿ ಕೆಲಸ ಮಾಡಲು ಆಗುವುದಿಲ್ಲ. ನಡೆದಾಡಲು ದುಃಸ್ಸಾಹಸ ಪಡಬೇಕು. ಅವರ ದೈಹಿಕ ಬೆಳವಣಿಗೆ ಸ್ಥಗಿತವಾಗಿರುತ್ತದೆ. ಕೈಕಾಲು ಚಿಕ್ಕದಾಗಿ ಕುಬ್ಜರಾಗುತ್ತಾರೆ. ರೋಗ ಕರಾಳತೆ ಹೇಗಿದೆ ಎಂದರೆ ನಿಂತವರು ಕುಳಿತುಕೊಳ್ಳಲು ಆಗದೆ, ನಿಂತವರು ನಡೆದಾಡಲು ಆಗದೆ ಒದ್ದಾಡುತ್ತಾರೆ. ಮಲ ಮೂತ್ರವನ್ನೂ ನಿಂತೇ ಮಾಡಬೇಕಾಗುತ್ತದೆ. ಈತನಕ ಹಂದಿಗೋಡು ರೋಗ ನಿವಾರಣೆಗೆ ಯಾವ ಚಿಕಿತ್ಸೆಯನ್ನು ಕಂಡುಕೊಳ್ಳಲು ಸಾಧ್ಯ ಅಗಿಲ್ಲ. ರೋಗಪೀಡಿತರು ಸಾಯದೇ ಬದುಕಿ ಇರಬೇಕು ಎಂದರೆ ನಿರಂತರವಾಗಿ ಸಮಸ್ಯೆಯ ನಿಯಂತ್ರಣಕ್ಕೆ ಔಷಧೋಪವಚಾರ ಮಾಡಿಕೊಂಡು ರೊಗದ ಜೊತೆ ನರಳುತ್ತಲೇ ಇರಬೇಕು. ಅವರ ಬೆನ್ನ ಹಿಂದೆ ಹೊಂಚು ಹಾಕಿ ಕುಳಿತ ಸಾವಿನ ಹಾದಿ ತಪ್ಪಿಸಿ ಅದಕ್ಕೆ ಒಂದಷ್ಟು ಬಳಸು ಹಾದಿ ಹಿಡಿಸಲು ಅಷ್ಟೇ ಈ ಚಿಕಿತ್ಸೆ ಎಂಬ ಉಪಾಯ.

ಈ ಊರಿನ ಒಂದು ಕೇಸ್‌ ಸ್ಟಡಿ ಒಂದನ್ನು ನೋಡುವುದಾದರೆ, 15 ವರ್ಷದ ಅರುಣಾಕ್ಷಿ (ಹೆಸರು ಬದಲಾಗಿದೆ) ಎಂಬ ಬಾಲಕಿ ಜನ್ಮತಃ ಆರೋಗ್ಯವಾಗಿದ್ದಳು. ಲವಲವಿಕೆಯಿಂದ ಆಡುತ್ತಿದ್ದ ಆಕೆಗೆ ತನ್ನ ಎಂಟನೇ ವಯಸ್ಸಿನಲ್ಲಿ ಮೈ–ಕೈ ನೋವಿನ ಅನುಭವ ಆಗುತ್ತದೆ. ಕೆಲವೇ ದಿನಗಳಲ್ಲಿ ಆಕೆಯ ಕೈ ಕಾಲುಗಳು ಸೆಟೆದುಕೊಳ್ಳುತ್ತವೆ. ನೋಡು ನೋಡುತ್ತಿದ್ದಂತೆ ದೇಹದ ಬೆಳವಣಿಗೆ ಕೂಡ ನಿಂತು ಹೋಗುತ್ತದೆ. ಅರುಣಾಕ್ಷಿಯ ಅಂಗಾಂಗಗಳು ಊನವಾಗುತ್ತವೆ. ಖುಷಿಯಿಂದ ಶಾಲೆಗೆ ಹೋಗಬೇಕಾದ ಬಾಲಕಿಯ ವರ್ಣಮಾಲೆಯ ಕನಸು ಗಗನ ಕುಸುಮವಾಗಿ ಈಗಲೂ ಕಮರುತ್ತಿದೆ. ಆಕೆಯನ್ನು ನೋಡಿದರೆ ಮಾನಸಿಕ ಅಸ್ವಸ್ಥಳಂತೆ ಕಾಣಿತ್ತಾಳೆ ಹಂದಿಗೋಡು ಕಾಯಿಲೆ ಆಕೆಯ ಬಾಳನ್ನು ಸಂಪೂರ್ಣ ಕತ್ತಲೆಗೆ ತಳ್ಳಿದೆ. ಕೂಲಿ ಮಾಡಿ ಬದುಕುತ್ತಿರುವ ಆಕೆಯ ಪೋಷಕರು ಹಾಸಿಗೆ ಹಿಡಿದ ಮಗಳನ್ನು ಸಾಕುವುದರಲ್ಲೇ ತಮ್ಮ ಜೀವವನ್ನು ಸವೆಸುತ್ತಿದ್ದಾರೆ. ಅರುಣಾಕ್ಷಿಯ ಊಟ ವಿಸರ್ಜನೆ ವಿಶ್ರಾಂತಿ ಎಲ್ಲವೂ ಹಾಸಿಗೆಯಲ್ಲೇ ಆಗುತ್ತಿದೆ. ಆಗಾಗ ಮನೆಯ ಒಳಗಿನಿಂದ ಅಂಗಳಕ್ಕೆ ಅವಳನ್ನು ಕರೆತರಬೇಕು ಎಂದರೆ ಯಾರಾದರೂ ಆಕೆಯನ್ನು ಹೊತ್ತು ತರಬೇಕು.
***

ಅಷ್ಟಕ್ಕೂ ಈ ಹಂದಿಗೋಡು ಕಾಯಿಲೆ ಎಂದರೆ ಏನು? ದೇಶದ ಬೇರೆ ಎಲ್ಲೂ ಕಾಣದ ಈ ವಿಸ್ಮಯ ಪಿಡುಗು ಇಲ್ಲಿಗೆ ಬಂದಿದ್ದಾರೂ ಹೇಗೆ? ಎನ್ನುವ ಪ್ರಶ್ನೆ ಜಗತ್ತಿನ ತಜ್ಞರನ್ನು ಕಾಡದೆ ಬಿಟ್ಟಿಲ್ಲ. ಹಂದಿಗೋಡು ಎಂಬ ಪುಟ್ಟ ಊರಿನದು ನಿಜಕ್ಕೂ ದುರಂತ ಕಥೆ. ಈ ಕಾಯಿಲೆ ಕಾಣಿಸಿಕೊಂಡಿದ್ದು 1975ರಲ್ಲಿ ಅದಕ್ಕೂ ಮುನ್ನ ಅಲ್ಲಿನ ಜನ ಎಲ್ಲರಂತೆ ಆರೋಗ್ಯವಂತರೇ ಆಗಿದ್ದರು. ಇದ್ದಕ್ಕಿದ್ದಂತೆ ಕೆಲವರಲ್ಲಿ ಕುಬ್ಜ ಪಿಡುಗು ಬಾಧಿಸತೊಡಗಿತು. ಅದನ್ನು ಕಂಡು ಗಾಬರಿಗೊಂಡ ಅದೇ ಗ್ರಾಮದ ನಿವಾಸಿ ಚಂದ್ರಶೇಖರ್‌ ಭಟ್‌ ಎಚ್ಚೆತ್ತು ಅದನ್ನು ಭೇದಿಸಲು ಬದ್ಧರಾಗುತ್ತಾರೆ. ಪವಾಡಂದತಹ ಈ ಬೆರಗಿನ ಕಾಯಿಲೆಯ ಮೂಲವನ್ನು ಹುಡುಕಲು ಮುಂದಾಗುತ್ತಾರೆ. ಅದರ ತೀವ್ರತೆಯನ್ನು ಅರಿತು ರಾಜ್ಯ ಆರೋಗ್ಯ ಸಚಿವಾಲಯ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರಗಳನ್ನು ಮೇಲಿಂದ ಮೇಲೆ ಬರೆದು ಒತ್ತಡವನ್ನು ಹೇರುತ್ತಾರೆ. ಅವತ್ತಿನ ಸ್ಥಳೀಯ ಶಾಸಕ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾಗಿ ಮನವಿ ಪತ್ರವನ್ನೂ ನೀಡುತ್ತಾರೆ. ಸಮಸ್ಯೆಯನ್ನು ಅರಿತ ಶಾಸಕರು ಆ ಕ್ಷಣ ಜನರ ನೋವಿಗೆ ಮಮ್ಮಲ ಮರಗುತ್ತಾರೆ.

ಶಾಸಕರ ನಿರ್ದೇಶನದಂತೆ ಆರೋಗ್ಯ ಇಲಾಖೆಯ ವೈದ್ಯರ ಒಂದು ತಂಡ ಗ್ರಾಮಕ್ಕೆ ಭೇಟಿ ನೀಡುತ್ತದೆ. ಆ ತಂಡ ಅಲ್ಲಿನ ಜನರ ಇತಿಹಾಸವನ್ನು ಕೆದಕಿ ಕಾಯಿಲೆಯ ಮೂಲದ ಆವಿಷ್ಕಾರಕ್ಕೆ ಕೈ ಹಾಕುತ್ತದೆ. ಆದರೆ ಅವರಿಗೆ ಯಾವ ಸುಳಿವೂ ನಿಖರವಾಗಿ ಸಿಗದೆ, ಸಾಧ್ಯತೆಗಳಿಗಷ್ಟೇ ಸಮಾಧಾನ ಮಾಡಿಕೊಳ್ಳುತ್ತಾರೆ. ಹಾಗೆಂದು ಕೈಕಟ್ಟಿ ಕುಳಿತರೆ ಸಮಸ್ಯೆ ಪರಿಹಾರವಾದೀತೆ? ನಂತರ ರೋಗ ಲಕ್ಷಣಗಳನ್ನು ಗುರುತಿಸಿ ಅದರ ಶಮನಕ್ಕೆ ಔಷಧ ಉಪಚಾರವನ್ನು ಮಾಡಲು ಮುಂದಾಗುತ್ತಾರೆ. ಕಾಯಿಲೆ ಸಂಬಂಧ ಅನೇಕ ಪರೀಕ್ಷೆಗಳನ್ನು ಮಾಡುತ್ತಾರೆ. ಅವತ್ತಿನ ಕಾಲಕ್ಕೆ ಕಾಯಿಲೆಯ ಮೂಲ ಬಿಡಿಸಲಾರದ ಕಗ್ಗಂಟಾಗಿಯೇ ಉಳಿಯುತ್ತದೆ. ಅಕ್ಕಪಕ್ಕದ ಗ್ರಾಮಗಳಲ್ಲೂ ಸಮೀಕ್ಷೆಯನ್ನು ಮಾಡುತ್ತಾರೆ. ಆಗ ಅವರಿಗೆ ಮತ್ತೊಂದು ಸವಾಲು ಗೋಚರಿಸುತ್ತದೆ. ಆ ಕಾಯಿಲೆ ಹಂದಿಗೋಡಿನ ಸರಹದ್ದನ್ನು ಹಾರಿ ಅಕ್ಕ ಪಕ್ಕದ ಹತ್ತಾರು ಗ್ರಾಮಗಳಿಗೆ ಒಕ್ಕರಿಸಿ ತನ್ನ ಕುರುಹುಗಳನ್ನು ಚಿಗುರಿಸಿರುತ್ತದೆ. ಆಗಲೇ ಆ ವೈದ್ಯ ತಂಡ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತದೆ. ಆ ತಂಡದ ಶಿಫಾರಸಿನ ಮೇಲೆ ರಾಜ್ಯ ಸರ್ಕಾರ ಕಾಯಿಲೆಯಿಂದ ಬಳಲುವವರಿಗೆ ಚಿಕಿತ್ಸೆ ನೀಡಲು ಮುಂದಾಗುತ್ತದೆ. ಚಿಕಿತ್ಸೆ ನೀಡಲು ಮುಂದಾದರೂ ರೋಗ ಯಾವುದು? ಇದರ ಮೂಲ ಏನು? ನಿಯಂತ್ರಣಕ್ಕಾಗಲಿ ನಿವಾರಣೆಗಾಗಲಿ ಏನನ್ನು ಮಾಡಬೇಕು ಎಂಬ ಯಾವ ಪರಿಹಾರ ಉಪಾಯಗಳು ವೈದ್ಯರಿಗೆ ಅಂದೂ ಇರಲಿಲ್ಲ ಇಂದೂ ಇಲ್ಲ. ಆದರೆ ಕಾಯಿಲೆ ಮಾತ್ರ ಹಾಗೆಯೇ ಜೀವಂತ ಇದೆ. ಅಂದ ಮೇಲೆ ಸಂಪೂರ್ಣ ರೋಗವನ್ನು ವಾಸಿಮಾಡುವುದಾದರೂ ಹೇಗೆ?

ಇದು ಆರೋಗ್ಯ ಆಂದೋಲನ

1980ರಲ್ಲಿ ಚಂದ್ರಶೇಖರ್‌ ಭಟ್‌ ಅವರನ್ನೂ ಒಳಗೊಂಡಂತೆ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಸಮಸ್ಯೆಯ ಬಗ್ಗೆ ವಿಸ್ತಾರವಾದ ವಿವರಣೆಯ ಪತ್ರವನ್ನು ಬರೆಯುತ್ತಾರೆ. ನಿರಂತರ ಒತ್ತಡಕ್ಕೆ ಮಣಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು 12 ತಂಡಗಳನ್ನು ಸಾಗರಕ್ಕೆ ಭೇಟಿ ನೀಡುತ್ತವೆ. ಕೇಂದ್ರದಿಂದ ಬಂದ ಆ ತಂಡಗಳಿಗೆ ರಾಜ್ಯದ ಒಂಬತ್ತು ತಂಡಗಳು ಕೈ ಜೋಡಿಸಿ ಸಮಸ್ಯೆಯ ಪರಿಹಾರಕ್ಕೆ ಮುಂದಾಗುತ್ತವೆ. ಆ ಕಾಯಿಲೆ ಮೊದಲು ಪತ್ತೆಯಾಗಿದ್ದು ಹಂದಿಗೋಡು ಗ್ರಾಮದಲ್ಲಿ ಆಗಿದ್ದರಿಂದ ಆ ರೋಗಕ್ಕೆ ಅದೇ ಹೆಸರಿನಲ್ಲಿ ನಾಮಕರಣ ಮಾಡುತ್ತಾರೆ.
ವೈದ್ಯರು ಈ ನಿಗೂಢ ಕಾಯಿಲೆಯ ವ್ಯಾಪ್ತಿಯನ್ನು ಜಾಲಾಡಲು ಶುರು ಮಾಡುತ್ತಾರೆ. ಅದು ಕೇವಲ ಶಿವಮೊಗ್ಗದ ಸಾಗರ ತಾಲ್ಲೂಕಿಗೆ ಮಾತ್ರ ಸೀಮಿತವಾಗಿರಲಿಲ್ಲ. ಮಲೆನಾಡ ಹಚ್ಚ ಹಸುರಿನ ಸೆರಗಿನಗುಂಟ ಚಿಕ್ಕಮಗಳೂರು ಜಿಲ್ಲೆಗೂ ವ್ಯಾಪಿಸಿರುತ್ತದೆ. ಉಭಯ ಜಿಲ್ಲೆಯ 66 ಗ್ರಾಮಗಳಲ್ಲಿ ಈ ಕಾಯಿಲೆಯ ರುದ್ರನರ್ತನ ಗೋಚರಿಸುತ್ತದೆ. ಈ ಕಾಯಿಲೆಯಿಂದ ಬಳಲುವ ರೋಗಿಗಳು ಜಗತ್ತಿಗೂ ವಿಸ್ಮಯ ಎನ್ನುವುದನ್ನು ಆ ತಂಡ ಗುರುತಿಸುತ್ತವೆ. ಅದೇ ಸಂದರ್ಭದಲ್ಲಿ ಹೈದರಾಬಾದಿನ ‘‘ರಾಷ್ಟ್ರೀಯ ಆಹಾರ ಪೋಷಕಾಂಶ ಸಂಸ್ಥೆ’’ ಹಾಗೂ ಬೆಂಗಳೂರಿನ ‘‘ನಿಮಾನ್ಸ್‌ ಆರೋಗ್ಯ ಸಂಸ್ಥೆ’’ಗಳು ಜಂಟಿಯಾಗಿ ಸಂಶೋಧನೆಗೆ ಮುಂದಾಗುತ್ತವೆ. ಅದರ ಫಲಶ್ರುತಿಯಾಗಿ ಕೆಲವೊಂದು ಮಹತ್ವದ ಸುಳಿವುಗಳು ಕಾಣಸಿಗುತ್ತವೆ.

ಕಾಯಿಲೆಗೆ ಮೂಲ ಅಂತೆ ಕಂತೆ ಎಂಬ ಸಾದ್ಯತೆಗಳ ಸತ್ತ ಸುತ್ತುತ್ತದೆ. ಸತ್ತ ಏಡಿ ಮತ್ತು ಮೀನು ಸೇವನೆಯೇ ಇದಕ್ಕೆ ಕಾರಣ ಎನ್ನುವ ಅಂಶವನ್ನು ದಾಖಲಿಸಲಾಗುತ್ತದೆ. ಜೊತೆಗೆ ರೋಗ ವಂಶ ಪಾರಂಪರ್ಯವಾಗಿಯೂ ಬಂದಿರಬಹುದು ಎನ್ನುವ ಅನುಮಾನವೂ ಅಧ್ಯಯನ ತಂಡಕ್ಕೆ ಎದುರಾಗುತ್ತದೆ. ಕೊನೆಗೆ ಇದು ಮೂಳೆ ಮತ್ತು ಕೀಲು ಸಂಬಂಧಿ ಕಾಯಿಲೆ ಎಂದು ತೀರ್ಮಾನಿಸುತ್ತಾರೆ. ಸಂಶೋಧನೆಯ ಪ್ರಯೋಗಗಳು ಇಷ್ಟೆಲ್ಲ ಪ್ರಾಯಾಸಪಟ್ಟರೂ ಅದರ ನಿಯಂತ್ರಣಕ್ಕೆ ಯಾವ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಾಗಲೇ ಇಲ್ಲ. ಈ ವಿಷಯದಲ್ಲಿ ನಮ್ಮ ಎಲ್ಲ ಆಧುನಿಕ ವೈದ್ಯಕೀಯ ಮತ್ತು ಔಷಧ ವಿಜ್ಞಾನಗಳು ಕೋರೊನಾದ ಮುಂದಷ್ಟೇ ಕೈ ಕಟ್ಟಿ ಕುಳಿತಿಲ್ಲ ಹಂದಿಗೋಡಿನ ಎದುರೂ ಮಂಡಿಯೂರಿ ಕುಳಿತಿವೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ.

ಕುತೂಹಲದ ಮತ್ತೊಂದು ಸಂಗತಿ ಏನೆಂದರೆ, ಹಂದಿಗೋಡು ಕಾಯಿಲೆ ಎನ್ನುವುದು ಸಾಂಕ್ರಾಮಿಕ ಬೇನೆಯೂ ಅಲ್ಲ. ಅಂಟು ರೋಗವೂ ಅಲ್ಲ. ಆದರೆ ಕೆಲವೇ ಕೆಲವು ಸಮುದಾಯಗಳಲ್ಲಿ ಮಾತ್ರ ಕಂಡುಬಂದಿರುವುದು ವಿಚಿತ್ರ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಕೆಲವು ಹಿಂದುಳಿದ ಜಾತಿಗಳ ಎಲ್ಲೆಯೊಳಗೆ ಈ ಕಾಯಿಲೆ ದಶಕಗಳಿಂದ ಕಾಡುತ್ತಿದೆ. ಸಮಾಜದಲ್ಲಿ ಹಿಂದುಳಿದ ಸಮುದಾಯಗಳಲ್ಲಿಯೇ ಏಕೆ ಈ ಕಾಯಿಲೆಯ ಕಾಡಾಟ ಎನ್ನುವುದೂ ನಿಗೂಢವಾಗಿಯೇ ಉಳಿದಿದೆ. ಏನೇ ಆದರೂ ಇಲ್ಲಿನ ಜನ ಮಾತ್ರ ಛಲ ಬಿಡದೆ ಈ ರೋಗದ ವಿರುದ್ಧ ಹೋರಾಡುತ್ತಲೇ ಇದ್ದಾರೆ. ತಜ್ಞರ ತಂಡ ಹಂದಿಗೋಡು ಪೀಡಿತ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವುದು ಒಂದು ಪರಿಹಾರ ಎಂದು ಸೂಚಿಸಿದೆ.

ಇಂತಹ ಶಿಫಾರಸಿನ ಸೂಚನೆ ಅರ್ಥಹೀನ ಎನ್ನುವುದನ್ನು ಅರಿತ ಜನ ತಮ್ಮ ಜೀವದ ಜೊತೆ ಬೆಸೆದ ಆ ಮಣ್ಣಿನಲ್ಲೆ ನೆಲಸುತ್ತಿದ್ದಾರೆ. ಕಾಯಿಲೆ ಪೀಡಿತರಿಗೆ ಭರವಸೆಯಾಗಿ ಚಂದ್ರಶೇಖರ್‌ ಭಟ್‌ ಮುಂದೆ ನಿಲ್ಲುತ್ತಾರೆ. ಅವರ ಜೊತೆ ಕಾಯಿಲೆ ಪೀಡಿತ ವಿ.ಆರ್‌. ರಾಜೇಂದ್ರ ಸಾತ್‌ ನೀಡುತ್ತಾರೆ. ಕಾಯಿಲೆ ಪೀಡಿತರ ಹಿತ ಕಾಪಾಡಲು ಹೋರಾಟಕ್ಕೆ ಮುಂದಾಗುತ್ತಾರೆ. ಕೆಲವು ವರ್ಷಗಳ ಕಾಲ ನಡೆದ ಹೋರಾಟದ ಫಲವಾಗಿ ಕಾಯಿಲೆ ಪೀಡಿತರಿಗೆ ಒಂದಿಷ್ಟು ಸೌಲಭ್ಯಗಳು ಬರುತ್ತವೆ. ಪರಿಹಾರದ ಫಲಿತಾಂಶ ಮಾತ್ರ ಶೂನ್ಯ. ಈಗಲೂ ಆ ಕಾಯಿಲೆಗೆ ತುತ್ತಾದವರು ಬದುಕಲೇಬೇಕು ಬದುಕುತ್ತೇವೆ ಎನ್ನುವ ವಿಶ್ವಾಸದ ಮಾತನ್ನು ಆಡುತ್ತಾರೆ.

ಹಂದಿಗೋಡು ಚಕ್ರವ್ಯೂಹದಲ್ಲಿ ಅಭಿಮನ್ಯು

ರಾಜ್ಯದಲ್ಲಿ ಕಂಡ ಭಯಾನಕ ಕಾಯಿಲೆಯನ್ನು ಮೊದಲಬಾರಿಗೆ ಪತ್ತೆಹಚ್ಚಿದ್ದು ಚಂದ್ರಶೇಖರ್‌ ಬಟ್‌ ಇಂದು ಈ ಕಾಯಿಲೆಯಿಂದ ಬಳಲುವವರ ಆಶಾಕಿರಣವಾಗಿ ಅವರು ಕಾಣಿಸುತ್ತಿದ್ದಾರೆ. ಬಡಜನರ ನೋವು ಕಂಡು ತಮ್ಮ ಖರ್ಚಿನಲ್ಲಿಯೇ ಚಿಕಿತ್ಸೆ ಕೊಡಿಸಲು ಮುಂದಾಗುತ್ತಾರೆ. ಈ ಕಾಯಿಲೆಗೆ ಶಾಶ್ವತ ಪರಿಹಾರಕ್ಕಾಗಿ ನಿರಂತರ ಹೋರಾಟವನ್ನು ಈ ಕ್ಷಣಕ್ಕೂ ಅವರು ಮಾಡುತ್ತಿದ್ದಾರೆ. ಆ ವ್ಯಕ್ತಿಯಲ್ಲಿ ಇರುವ ಅಚಲ ಛಲ ಮಾತ್ರ ಪ್ರಶಂಸನೀಯ.

ಹಂದಿಗೋಡು ಎಂಬ ಚಕ್ರವ್ಯೂಹ ಭೇದಿಸುವ ಅಭಿಮನ್ಯುವಿನಂತೆ ಚಂದ್ರಶೇಖರ್‌ ಭಟ್‌ ಅಲ್ಲಿನ ಜನರಿಗೆ ಕಾಣಿಸಿದ್ದಾರೆ. ಚಂದ್ರಶೇಖರ್‌ ಮೂಲತಃ ಅದೇ ಗ್ರಾಮದವರು. ತಂದೆ ಮಹಾಬಲ ಭಟ್‌, ತಾಯಿ ಶಾರದಮ್ಮ. ಅವರದು ಕೃಷಿ ಕುಟುಂಬ. ಪರಂಪರಾಗತವಾಗಿ ಬಂದ ಭೂಮಿಯಲ್ಲಿ ಕೃಷಿ ಮಾಡುವ ಚಂದ್ರಶೇಖರ್‌ ಭಟ್‌ ಅವರಿಗೆ ಸಾಮಾಜಿಕ ಕೆಲಸದಲ್ಲಿ ಮೊದಲಿನಿಂದಲೂ ಆಸಕ್ತಿ. ಹಂದಿಗೋಡು ಕಾಯಿಲೆ ಬೆಳಕಿಗೆ ಬರುತ್ತಿದ್ದಂತೆ ಜನರ ನೆರವಿಗೆ ಧಾವಿಸಿ ನಿಲ್ಲುತ್ತಾರೆ. ಓದಿದ್ದು ಎಸ್ಎಸ್ಎಲ್ಸಿ ಆದರೂ ಕಾಯಿಲೆ ಕುರಿತು ಅಧ್ಯಯನಕ್ಕೆ ಮುಂದಾಗುತ್ತಾರೆ. ಸಾವಿರಾರು ಹಳ್ಳಿಗಳನ್ನು ಸುತ್ತಿ ಕಾಯಿಲೆ ಪೀಡಿತರನ್ನು ಗುರುತಿಸುತ್ತಾರೆ. ಆ ಜನರ ನೋವಿಗೆ ಸ್ಪದಿಸುತ್ತಾರೆ. ಅವರ ದುಃಖ ದುಮ್ಮಾನಗಳಿಗೆ ಕಿವಿಯಾಗಿ ಅವರ ಬದುಕಿಗೆ ಊರುಗೋಲಾಗಿ ನಿಲ್ಲುತ್ತಾರೆ. ಸರ್ಕಾರದ ಗಮನ ಸೆಳೆದು ಹಂದಿಗೋಡು ಕಾಯಿಲೆ ಪೀಡಿತರಿಗೆ ಅಂಗವಿಕಲರಿಗೆ ಸಿಗುವ ಸೌಲಭ್ಯ ಸೌಕರ್ಯವನ್ನು ನೀಡುವಂತೆ ಮಾಡುತ್ತಾರೆ. ಅದಕ್ಕಾಗಿ ಅವರು ಹತ್ತಾರು ವರ್ಷ ಹೋರಾಟವನ್ನು ಮಾಡಬೇಕಾಗುತ್ತದೆ. ತಮ್ಮ ಹೋರಾಟಕ್ಕಾಗಿ ಸಾಕಷ್ಟು ಹಣ ಮತ್ತು ಸಮಯವನ್ನು ಖರ್ಚುಮಾಡುತ್ತಾರೆ. ಹೀಗಾಗಿ ಇಲ್ಲಿನ ಜನರಿಗೆ ಚಂದ್ರಶೇಖರ್‌ ಭಟ್‌ ಮೇಲೆ ವಿಶೇಷ ಪ್ರೀತಿ ಮತ್ತು ವಿಶ್ವಾಸದ ಅಭಿಮಾನ.
ಚಂದ್ರಶೇಖರ್‌ ಹೋರಾಟದ ಫಲವಾಗಿ ಹಂದಿಗೋಡು ಪೀಡಿತರಿಗೆ ಚಿಕಿತ್ಸೆ ನೀಡಲೆಂದು ಪ್ರತ್ಯೇಕ ಆಸ್ಪತ್ರೆಯನ್ನು ಆರಂಭವಾಗಿದೆ. ಇದಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಯ ಸೌಲಭ್ಯವನ್ನೇ ಸಂಚರಿಸುವಂತೆ ಮಾಡಲಾಗಿದೆ. ಎಷ್ಟೋ ಬಾರಿ ಚಂದ್ರಶೇಖರ್‌ ಅವರೇ ಕುಗ್ರಾಮಗಳಿಗೆ ವೈದ್ಯರನ್ನು ಕರೆದುಕೊಂಡು ಹೋಗಿ ಚಿಕಿತ್ಸೆಯನ್ನೂ ಚಂದ್ರಶೇಖರ್‌ ಕೊಡಿಸುತ್ತಾ ಬಂದಿದ್ದಾರೆ. ಕಾಯಿಲೆ ಪೀಡಿತರ ಮನೆ ಬಾಗಿಲಿಗೆ ಪಡಿತರ ಬರುವಂತೆ ಆಗಿದೆ. ಸ್ಥಳಿಯವಾಗಿ ಉದ್ಯೋಗ ಕಲ್ಪಿಸಲು ಹ್ಯಾಡ್‌ಲೂಮ್‌ ಚಟುವಟಿಕೆಯನ್ನೂ ವಿಸ್ತರಿಸಲಾಗಿದೆ. ಎಲ್ಲಕ್ಕಿಂತ ಮುಖ್ಯ ಸಂಗತಿ ಎಂದರೆ ಈ ಕಾಯಿಲೆ ಮುಂದಿನ ಪೀಳಿಗೆಯಲ್ಲಿಯೂ ತನ್ನ ಕರಾಳ ಕಣ್ಣನ್ನು ಪಿಳಿ ಪಿಳಿ ಬಿಟ್ಟು ನಿಲ್ಲಬಾರದು ಎನ್ನುವ ಕಾರಣಕ್ಕೆ ಪ್ರತ್ಯೇಕ ಹಾಸ್ಟೆಲ್‌ ಆರಂಭಿಸಿದ್ದಾರೆ. ಅಲ್ಲಿ ಕಾಯಿಲೆ ಪೀಡಿತ ಸಮುದಾಯದ ಮಕ್ಕಳಿಗೆ ಪೋಷ್ಟಿಕ ಆಹಾರ ಹಾಗೂ ಸುಸಜ್ಜಿತ ಶಿಕ್ಷಣ ನೀಡಲಾಗುತ್ತಿದೆ. ಚಂದ್ರಶೇಖರ್‌ ಭಟ್‌ ಅವರ ಅವಿಶ್ರಾಂತ ನಿಸ್ವಾರ್ಥ ಸೇವೆಗೆ ಭಾರತೀಯ ವಿಜ್ಞಾನಿಗಳ ಪರಿಷತ್‌ ‘‘ಸ್ವಾಸ್ತ್ಯ ಸೇವಾ ರತ್ನ ಪ್ರಶಸ್ತಿ’’ ನೀಡಿ ಪುರಸ್ಕರಿಸಿದೆ. ರಾಜ್ಯ ಸರ್ಕಾರ ‘‘ರಾಜ್ಯೋತ್ಸವ’’ ಪ್ರಶಸ್ತಿಯನ್ನು ನೀಡಿದೆ ಇಂತಹ ಹಲವು ಪುರಸ್ಕಾರಗಳು ಅವರ ಸೇವೆಯ ಸೆರಗನ್ನು ತುಂಬಿವೆ. ಈಗ ಅವರಿಗೆ 80ರ ಪ್ರಾಯ. ಇಂತಹ ಸೇವಾ ರತ್ನಕ್ಕೆ ನಮ್ಮದೊಂದು ಸಲಾಂ.

ಬಾಕ್ಸ್‌

ಮತ ರಾಜಕಾರಣಕ್ಕೆ ರೋಗಕ್ಕಿಂತ ಸಂಖ್ಯೆ ಮಾತ್ರ ಮುಖ್ಯ!

ಸರ್ಕಾರ ಅಂಕಿ ಅಂಶಗಳ ಪ್ರಕಾರ ಹಂದಿಗೋಡು ಕಾಯಿಲೆಗೆ ಇದುವರೆಗೆ 160 ಜನ ಮರಣವನ್ನು ಹೊಂದಿದ್ದಾರೆ. ಅಸಲಿ ಸಂಖ್ಯೆ ಜಾಸ್ತಿ ಇದೆ. ಸರ್ಕಾರ 65 ವರ್ಷ ಮೇಲ್ಪಟ್ಟವರಿಗೆ ಸಂಧ್ಯಾ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿದೆ. ನಿಮಗೆ ಗೊತ್ತಿರಲಿ ಈ ಹಂದಿಗೋಡು ಪೀಡಿತ ಯಾವೊಬ್ಬರು 60 ವರ್ಷಕ್ಕಿಂತ ಹೆಚ್ಚು ಕಾಲ ಬದುಕಿಲ್ಲ.
ಯಾವ ಸಂಶೋಧನೆ– ಅಧ್ಯಯನಗಳು ನಿಖರವಾಗಿ ಕಾಯಿಲೆಗೆ ಕಾರಣ ಮತ್ತು ಪರಿಹಾರವನ್ನು ಕಂಡುಕೊಂಡಿಲ್ಲ. ಕಾಡಂಚಿನ ಈ ಸಮುದಾಯಗಳಿಗೆ ಕಾಡಿನ ಮೂಲದಿಂದ ಎಲ್ಲೋ ಬಂದಿರಬಹುದು ಎನ್ನುವ ಊಹೆ ಶಂಕೆಗಳು ಸಂಶೋಧನಾ ಹೂರಣದಲ್ಲೂ ಅಡಗಿದೆ.
ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯ ಹೂಡಿದ ಗ್ರಾಮಗಳಲ್ಲಿ ಹಂದಿಗೋಡು ಕೂಡ ಒಂದು. ಇದರಿಂದ ರಸ್ತೆಯ ಮಾರ್ಗ ಸುಧಾರಿಸಿತೇ ಹೊರತು ಜನರ ವೇದನೆ ಮಾತ್ರ ಸುಧಾರಿಸಲೇ ಇಲ್ಲ. ಅನೇಕ ಬಾರಿ ವಿಧಾನ ಸೌಧದದಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು ತಜ್ಞ ವೈದ್ಯರನ್ನು ಕರೆಸಿ ಕಾಯಿಲೆಗೆ ಕಾರಣವನ್ನು ಕೆದಕಿದರೆ ಹೊರತು ಅದರಿಂದ ಯಾವ ಪ್ರಯೋಜನವನ್ನು ಕಂಡುಕೊಂಡಿಲ್ಲ. ಜಾತಿಯ ಜೊತೆ ಕಾಯಿಲೆ ಕಳಂಕದಿಂದಿದಲೂ ಹಂದಿಗೋಡು ಪೀಡಿತರು ನಿರಂತರ ಯಾತನೆಯಲ್ಲೇ ಬದುಕುವಂತೆ ಆಗಿದೆ. ಎಲ್ಲವನ್ನೂ ವೋಟಿನ ಮೂಲಕವೇ ನೋಡುವ ನಮ್ಮ ರಾಜಕಾರಣಿಗಳು ರೋಗದ ತೀವ್ರತೆಗಿಂತ ರೋಗಿಗಳ ಸಂಖ್ಯೆಯ ಮೇಲೆ ಲೆಕ್ಕ ಹಾಕುವುದರಿಂದ ಇದು ದೊಡ್ಡ ಸಮಸ್ಯೆ ಎಂದು ಅವರಿಗೆ ಅನಿಸಿಯೇ ಇಲ್ಲ ಎಂದು ಅನಿಸುತ್ತದೆ. ಹಂದಿಗೋಡು ಕಾಯಿಲೆ ಪೀಡಿತರಿಗೆ ನೋವು ನಿವಾರಕ ಔಷಧ ಮತ್ತು ಅಂಗವಿಕಲ ಪರಿಹಾರ ಭತ್ಯೆ ನೀಡುವ ಸಂತ್ರಸ್ಥ ಮಕ್ಕಳಿಗೆ ಹಾಸ್ಟೆಲ್‌ ಸೌಲಭ್ಯ ಹೊರತುಪಡಿಸಿ ಇನ್ನೇನೂ ಮಾಡಲು ಸಾಧ್ಯ ಆಗಿಲ್ಲ.

ಬದುಕನೇ ಕತ್ತಲಿಗೆ ತಳ್ಳುವ ಈ ಕಾಯಿಲೆಗೆ ವೈಜ್ಞಾನಿಕ ಕಾರಣ ಮತ್ತು ಪರಿಹಾರವನ್ನು ಮೊದಲು ಕಂಡುಕೊಳ್ಳಬೇಕಿದೆ. ಔಷಧ ಕಂಡುಕೊಂಡರೆ ಮಾತ್ರ ಹಂದಿಗೋಡಿನ ಈ ಶಾಪ ಪರಿಹಾರಿಸಲು ಸಾಧ್ಯ. ನಾಲ್ಕು ದಶಕದಿಂದ ಈ ಕಾಯಿಲೆಯಿಂದ ನಲುಗಿದ ಆ ಪ್ರದೇಶದಲ್ಲಿ ಒಂದಿಷ್ಟು ಸುಧಾರಣಾ ಚಟುವಟಿಕೆಗಳು ನಡೆಯುತ್ತಿವೆ. ಭೂ ರಹಿತ ಅನರಕ್ಷಸ್ಥ ಹಿಂದುಳಿದ ಜಾತಿಯ ಜನರನ್ನು ಈ ಕಾಯಿಲೆ ಕಾಡುತ್ತಿರುವುದು ಮಾತ್ರ ದೊಡ್ಡ ದುರಂತ. ಶಿವಮೊಗ್ಗ ಜಿಲ್ಲೆ ದೇಶದ ಇತಿಹಾಸಕ್ಕೆ ಏನೆಲ್ಲ ಕಾಣಿಕೆಯನ್ನು ನೀಡಿದೆ. ಕೆಎಫ್‌ಡಿ ಎಂದು ಕರೆಯುವ ಕ್ಯಾಸನೂರು ಕಾಡಿನ ಕಾಯಿಲೆ ಮತ್ತು ಹಂದಿಗೋಡು ಕಾಯಿಲೆ ನಿಜಕ್ಕೂ ಮಲೆನಾಡಿನ ಹಚ್ಚ ಹಸಿರಿನ ಸೆರಗಿನಲ್ಲಿ ಕಟ್ಟಿ ಇಟ್ಟ ಕೆಂಡದ ಉಂಡೆಯಂತೆಯೇ ಭಾಸವಾಗುತ್ತದೆ.

ತಾಲೂಕಿನಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿಶೀಟರ್ ಗಳಿಗೆ ಎಚ್ಚರಿಕೆ ನೀಡಿದ ಡಿವೈಎಸ್ಪಿ

ಪಾವಗಡ: ‘ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಜೀವನ ಪರ್ಯಂತ ನ್ಯಾಯಾಲಯ, ಪೊಲೀಸ್ ಠಾಣೆಗೆ ಅಲೆಯಬೇಕಾಗುತ್ತದೆ’ ಎಂದು ರೌಡಿ ಶೀಟರ್ಗಗಳಿಗೆ ಡಿವೈಎಸ್ ಪಿ ಕೆ.ಜಿ.ರಾಮಕೃಷ್ಣ  ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಸೋಮವಾರ ತಾಲ್ಲೂಕಿನ ರೌಡಿಶೀಟರ್ಗಳ ಪರೇಡ್ ನಡೆಸಿದ ಡಿವೈಎಸ್ ಪಿ, ಎಂಒಬಿ, ರೌಡಿ ಶೀಟರ್ಗಳಿಗೆ ಹಲವು ಸೂಚನೆ ನೀಡಿದರು.
‘ತಾಲ್ಲೂಕಿನಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾನೂನು ಬಾಹಿರ ಚಟುವಟಿಕೆ, ಬಡ್ಡಿ ವ್ಯವಹಾರ, ಮಟ್ಕಾ, ಇಸ್ಪೀಟು ಜೂಜಾಟಗಳಲ್ಲಿ ತೊಡಗಿಕೊಳ್ಳಬಾರದು. ಮತ್ತೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಲ್ಲಿ ರೌಡಿ ಶೀಟರ್ ಗಳಾಗಿಯೇ ಮುಂದುವರೆಯುತ್ತೀರಿ. ಕುಟುಂಬ ಸದಸ್ಯರು ನಿಮ್ಮ ತಪ್ಪಿನಿಂದ ಆಸರೆಯಿಲ್ಲದೆ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಾರೆ. ’ ಎಂದು ಕಠಿಣ ಎಚ್ಚರಿಕೆ ನೀಡಿದರು.
ಕಷ್ಟ ಪಟ್ಟು ದುಡಿದು ಒಳ್ಳೆಯ ರೀತಿಯಲ್ಲಿ ಜೀವನ ನಡೆಸಿ. ಕುಟುಂಬ ಸದಸ್ಯರೊಡನೆ ನೆಮ್ಮದಿಯಾಗಿರಿ. ಹಳೆಯ ಛಾಳಿ ಮುಂದುವರೆಸಿದಲ್ಲಿ ಕಾನೂನು  ಸುವ್ಯವಸ್ಥೆಗೆ ಭಂಗ ತಂದಲ್ಲಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಯಾಗುತ್ತೀರಿ ಎಂದು ಎಚ್ಚರಿಸಿದರು.
ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್, ಕಾಂತರೆಡ್ಡಿ, ಸಬ್ ಇನ್ ಸ್ಪೆಕ್ಟರ್ ಗುರುನಾಥ್, ಭಾರತಿ, ರಂಗಪ್ಪ, ರಾಜಣ್ಣ ಉಪಸ್ಥಿತರಿದ್ದರು.

ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ‌ ಇನ್ನಿಲ್ಲ

ತುಮಕೂರು: ಲೇಖಕಿ,ಸಮಾಜ ಸೇವಕರಾದ ಶಅನ್ನಪೂರ್ಣ ವೆಂಕಟನಂಜಪ್ಪ ಅವರು ಹೃದಯಾಘಾತದಿಂದ ಮಂಗಳವಾರ ಬೆಳಗಿನ ಜಾವ 5ಗಂಟೆಗೆ ನಿಧನಹೊಂದಿದರು.

ಅವರಿಗೆ 68ವರ್ಷ ವಯಸ್ಸಾಗಿತ್ತು.

ಹಲವು ಸಾಹಿತ್ಯ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುತ್ತಿದ್ದರು. ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್ ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.

ಸಾಹಿತ್ಯ, ಸಮಾಜಸೇವೆ, ಸಹಕಾರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಅನ್ನಪೂರ್ಣ ಅವರ ನಿಧನಕ್ಕೆ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾಬಸವರಾಜು, ಕಾರ್ಯದರ್ಶಿ ಡಾ. ಅರುಂಧತಿ, ಸಹ ಕಾರ್ಯದರ್ಶಿ ಡಾ.ಶ್ವೇತಾರಾಣಿ ಕಂಬನಿ ಮಿಡಿದಿದ್ದಾರೆ.

ಲೇಖಕಿಯರ ಸಂಘದ ಚಟುವಟಿಕೆ,ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು ಎಂದು ಕೊಂಡಾಡಿದ್ದಾರೆ.

ಕಸಾಪ ನಗರ ಘಟಕದ ಅಧ್ಯಕ್ಷೆ, ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷ್ಯೆಯಾಗಿ ಅವರ ಕೆಲಸ ಗಣನೀಯವಾಗಿದೆ ಎಂದು ಹೇಳಿದ್ದಾರೆ.

ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಸಹಕಾರ ರತ್ನ ಪ್ರಶಸ್ತಿ ಪಡೆದಿದ್ದ ಅವರು ಸ್ನೇಹಜೀವಿಗಳಾಗಿದ್ದರು. ಅವರ ನಿಧನಕ್ಕೆ ಕಸಾಪ ಕಂಬನಿ ಮಿಡಿದಿದೆ ಎಂದು ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದ್ದಾರೆ.

ಹೊಟ್ಟೆಪಾಡಿಗಾಗಿ ಕಾವಿ ಧರಿಸಿರುವ ಸ್ವಾಮೀಜಿಗಳು: ಶಾಸಕ ಶ್ರೀನಿವಾಸ್ ಟೀಕೆ

Public story


ಗುಬ್ಬಿ: ಕೇವಲ ಹೊಟ್ಟೆ ಪಾಡಿಗಾಗಿ ಕಾವಿ ಧರಿಸಿ ಸಮಾಜ ಹಾಳು ಮಾಡಲು ಹೊರಟಿರುವ ಈಗಿನ ಸ್ವಾಮಿಜೀಗಳಿಂದ ನಮ್ಮ ಸಮಾಜ ಯಾವ ಬದಲಾವಣೆಯನ್ನು ಬಯಸಲು ಸಾಧ್ಯವಿಲ್ಲ ಕಾವಿ ಬಿಚ್ಚಿಟ್ಟು ಖಾಧಿ ಧರಿಸಿ ಕೊಂಡು ಸುಮ್ಮನೆ ರಾಜಕೀಯಕ್ಕೆ ಬನ್ನಿ ಎಂದು ಜೆ.ಡಿ.ಎಸ್. ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡಗಳ ನಿರ್ಮಾಣಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಯಕ ಯೋಗಿ ನಡೆದಾಡುವ ದೇವರು ಎಂದು ಇಡೀ ನಾಡಿಗೆ ಪ್ರಸಿದ್ದಿಯಾದ ಮಹಾನ್ ಚೇತನ ಶ್ರೀ ಶಿವಕುಮಾರ ಸ್ವಾಮೀಗಳು ಜನಿಸಿದ ನಾಡಿನಲ್ಲಿ ಕೆಲವು ಮಠಾಧೀಶರು ಕಾಯ ವಾಚ ಮನಸ ಪ್ರತಿಜ್ಞೆ ಮಾಡಿ ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕೆ ನಮ್ಮ ಜೀವನವನ್ನೇ ಪಣಕಿಡುತ್ತಿವೆಂದು ಪಣತೊಟ್ಟು ಈ ರೀತಿ ಒಂದು ಪಕ್ಷಕ್ಕೆ ಒಬ್ಬ ರಾಜಕೀಯ ವ್ಯಕ್ತಿಗೆ ಬೆಂಬಲ ನೀಡಲು ಮಠಗಳ ಸ್ವಾಮಿಗಳು ನಿಲ್ಲುವುದು ನಾಚಿಕೆ ಗೇಡಿನ ಸಂಗತಿ ಎಂದರು.

ಸರ್ವವನ್ನು ಪರಿತ್ಯಾಗ ಮಾಡಿ ನಾವು ಸಮಾಜದ ಉದ್ದಾರಕ್ಕೆ ಶ್ರಮಿಸುತ್ತೇವೆಂದು ಪ್ರತಿಜ್ಞೆ ಮಾಡಿದ ಸ್ವಾಮಿಗಳು ಇಂದು ಯಾವ ಸ್ಥಿತಿಗೆ ಬಂದಿದ್ದಾರೆ ಎಂಬುದು ತಿಳಿಯುತ್ತಿಲ್ಲ ಇಂತಹ ಸ್ವಾಮಿಗಳಿಂದ ಸಮಾಜದ ಜನತೆ ಯಾವ ಒಳ್ಳೆಯ ಸಂದೇಶ ನಿರೀಕ್ಷಿಸುತ್ತದೆ ಮಠ ಮಾನ್ಯಗಳನ್ನು ನಡೆಸಲು ನಿಮಗೆ ಏನು ಯೋಗ್ಯತೆ ಇದೆ ನಿಮ್ಮಂತ ಸ್ವಾಮಿಗಳಿಂದ ಜನತೆ ಏನು ಕಲಿಯಲು ಸಾಧ್ಯವಾಗುತ್ತದೆ ಒಂದು ರಾಜಕೀಯ ಪಕ್ಷದ ಪರ ಒಬ್ಬ ವ್ಯಕ್ತಿಯ ಪರ ನಿಲ್ಲುವ ನಿಮ್ಮಿಂದ ಯಾವ ನಿರೀಕ್ಷೆ ಗಳನ್ನು ಪಡೆಯಲು ಬಯಸುತ್ತದೆ ಸ್ವಾಮೀಜಿಗಳು ಇಗೆಲ್ಲ ಮಾಡುವ ಬದಲು ಸುಮ್ಮನೆ ನಮ್ಮಂತೆ ರಾಜಕೀಯಕ್ಕೆ ಬಂದು ಬಿಡಿ ಆಗಲಾದರು ಮಠ ಮಾನ್ಯಗಳ ಮೇಲಿನ ಜನತೆಯ ನಂಬಿಕೆ ಉಳಿಯುತ್ತದೆ ಪ್ರಸ್ತುತ ಎಲ್ಲಾ ಮಠಾಧೀಶರು ಮಠ ಬಿಟ್ಟು ಊರು ಸೇರಿದಂತಿದೆ ಎಂದು ತಿಳಿಸಿದರು.

ಯಡಿಯೂರಪ್ಪ ನವರ ರಾಜಿನಾಮೆಯ ಹಿನ್ನೆಲೆ ಯಾವ ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ ಚುನಾವಣೆ ಎದುರಿಸಲು ಯಾವ ಪಕ್ಷವೂ ಸದ್ಯದ ಪರಿಸ್ಥಿತಿಯಲ್ಲಿಲ್ಲ ಯಾವ ಮುಖಂಡರಿಗೂ ಚುನಾವಣೆ ಅಗತ್ಯವಿಲ್ಲ ಎಂದ ಅವರು ಜಾತಿಗೊಂದು ನಿಗಮ ರಚನೆ ಸಮಾಜವನ್ನು ಹಾಳು ಮಾಡಿದಂತಾಗುತ್ತದೆ ಎಂದರು.

ಸುಖಾಸುಮ್ಮನೇ ನಿಗಮ ಮಾಡಿದ್ದು ಚುನಾವಣೆ ಗಿಮಿಕ್ ಆಗಿದೆ ಈ ಜತೆಗೆ ಮದಲೂರು ಕೆರೆಗೆ ಹೇಮೆ ಹರಿಸುವ ವಿಚಾರದಲ್ಲೂ ಗಿಮಿಕ್ ನಡೆಸಿದ್ದರು. ಮುಖ್ಯಮಂತ್ರಿಗಳು ಮದಲೂರು ಕೆರೆಗೆ ನೀರು ಹರಿಸುವುದಾಗಿ ಹೇಳಿದರೆ, ಜಿಲ್ಲಾ ಮಂತ್ರಿಗಳು ಅಧಿಕಾರಿಗಳಿಗೆ ಜೈಲು ಶಿಕ್ಷೆಯ ಎಚ್ಚರಿಕೆ ನೀಡಿ ಹೇಮೆ ಹರಿಸದಂತೆ ಎಚ್ಚರಿಕೆ ನೀಡಿದ್ದಾರೆ ಎಂದರು.

ಪ್ರತಿ ಚುನಾವಣೆಗೆ ಒಂದು ವಿಚಾರವನ್ನು ಮುಂದಿಟ್ಟುಕೊಂಡು ವಿಧ ವಿಧವಾಗಿ ಜನರನ್ನು ಮರಳು ಮಾಡುವ ಈ ನಟನೆ ಬಿಜೆಪಿಯವರಿಗೆ ಮಾತ್ರ ಬರುತ್ತದೆ ಎಂದರು.

ಪಟ್ಟಣದ ಅಭಿವೃದ್ದಿಗೆ ಸದ್ಯ ೧೦ ಕೋಟಿ ರೂಗಳ ಕ್ರಿಯಾ ಯೋಜನೆ ಸಿದ್ದಗೊಳ್ಳುತ್ತಿದ್ದು ಮುಂದಿನ ಮೂರು ತಿಂಗಳಲ್ಲಿ ಪಟ್ಟಣದ ಹಳೇಭಾಗದ ಎಲ್ಲಾ ರಸ್ತೆಗಳು ಅಭಿವೃದ್ದಿಗೊಳ್ಳಲಿದೆ. ಡಿಗ್ರಿ ಕಾಲೇಜು ರಸ್ತೆ ಈಚೆಗೆ ಡಾಂಬರೀಕರಣ ಮಾಡಲಾಗಿದೆ. ಹೀಗೆ ಪ್ರಮುಖ ರಸ್ತೆಗಳು ಡಾಂಬಾರ್ ರಸ್ತೆಯಾಗಿ ಮಾರ್ಪಾಡು ಆಗಲಿದೆ ಎಂದರು.

ಈ ಸಂದರ್ಭದಲ್ಲಿ ಪ ಪಂ ಅಧ್ಯಕ್ಷರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷಮ್ಮ ಲೋಕೇಶ್‌ಬಾಬು, ಸದಸ್ಯರಾದ ಸಿ.ಮೋಹನ್, ಕುಮಾರ್, ಶೌಕತ್ ಆಲಿ, ರೇಣುಕಾಪ್ರಸಾದ್, ಜಿ.ಆರ್.ಶಿವಕುಮಾರ್, ಮಂಗಳಮ್ಮ, ಶ್ವೇತಾ, ಬಿಇಓ ಸಿ.ಸೋಮಶೇಖರ್, ಪ್ರಾಚಾರ್ಯ ಮಂಜುನಾಥ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿ.ಆರ್.ಶಂಕರ್‌ಕುಮಾರ್ ಇತರರು ಇದ್ದರು.

ಬಿ.ಎಸ್ ಯಡಿಯೂರಪ್ಪ ಮುಂದಿನ ನಡೆ ನಿಗೂಢ

ಬೆಂಗಳೂರು; ನಿರೀಕ್ಷೆಯಂತೆ ಬಿ.ಎಸ್ ಯಡಿಯೂರಪ್ಪ ಇಂದು ತಮ್ಮ ಮುುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ನಡೆ ನಿಗೂಢವಾಗಿದೆ.

ಸಧ್ಯಕ್ಕೆ ಅವರು ಪಕ್ಷ ಕಟ್ಟುವ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಅವರನ್ನು ರಾಜ್ಯಪಾಲರಾಗಿ ಮಾಡಲಾಗುತ್ತದೆ ಎಂಬ ಊಹಾಪೋಹಗಳಿವೆ. ಆದರೆ ಯಾವುದೇ ಹುದ್ದೆ ಒಪ್ಪಿಕೊಳ್ಳುವುದಿಲ್ಲ ಎಂದು ಅವರೇ ಹೇಳಿದ್ದಾರೆ.

ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆಯನ್ನು ಆಚರಿಸುವ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದಾಗ ಅವರು ಗದ್ಗದಿತರಾದರು. ಇದು ಅವರ ಅಭಿಮಾನಿಗಳಲ್ಲಿ, ಲಿಂಗಾಯತ ಸಮುದಾಯದಲ್ಲಿ ನೋವು ಉಂಟು ಮಾಡಿದೆ.

ಸಮಾವೇಶ ಮುಗಿದ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿದ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ನೀಡಿದರು.
ರಾಜೀನಾಮೆ ಸಲ್ಲಿಸುವುದನ್ನು ಘೋಷಿಸುವಾಗ ಸಿಎಂ ಬಿ.ಎಸ್ ಯಡಿಯೂರಪ್ಪ ಗದ್ಗದಿತರಾಗಿ ತಮಗೆ 75 ವರ್ಷ ಮೀರಿದ ಬಳಿಕವೂ ಎರಡು ವರ್ಷ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ, ಅಮಿತ್ ಷಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ಅವರ ಪುತ್ರ ವಿಜಯೇಂದ್ರ ಅವರಿಗೆ ಕಲ್ಪಿಸುವ ರಾಜಕೀಯ ಸ್ಥಾನಮಾನದ ಮೇಲೆ ಯಡಿಯೂರಪ್ಪ ನಡೆ ನಿಂತಿದೆಯಾ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.

ಕರೋನಾ ಅಟ್ಟಿದ ಗಟ್ಟಿಗರ ಕತೆಗಳು ಕೃತಿ ಬಿಡುಗಡೆ

Publicstory.in


Thuruvekere: ಬೇಂದ್ರೆ ಸಾಹಿತ್ಯ ಸೌಂದರ್ಯ ಮತ್ತು ವರ್ತಮಾನದ ಸಂಗತಿಗಳನ್ನು ತುಲನಾತ್ಮಕವಾಗಿ ವಿಮರ್ಶಿಸುವ ಮೂಲಕ ಅವರ ಸಾಹಿತ್ಯ ಸೌಂದರ್ಯದ ಶುಚಿತ್ವವನ್ನು ಅನಾವರಣಗೊಳಿಸಬಹುದು ಎಂದು ಬೆಂಗಳೂರು ಕ್ರಿಸ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎ.ಕೆ.ರವಿಶಂಕರ್ ಅಭಿಪ್ರಾಯಪಟ್ಟರು.

ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ¬ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಕಾಯಕ ವರ್ಷಾಚರಣೆಯ ಅಂಗವಾಗಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ದ.ರಾ.ಬೇಂದ್ರೆ ಸಾಹಿತ್ಯೋತ್ಸವ ಮತ್ತು ಕವಿ-ಕಾವ್ಯ ಗೋಷ್ಟಿ ಕಾರ್ಯಕ್ರಮದಲ್ಲಿ “ಬೇಂದ್ರೆ ಸಾಹಿತ್ಯದ ಸೌಂದರ್ಯ ಶುಚಿ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಬೇಂದ್ರೆ ಸಾಹಿತ್ಯದಲ್ಲಿ ಚತುರ್ಮುಖ ಸೌಂದರ್ಯವಿದೆ. ಸೌಂದರ್ಯವನ್ನು ಐಂದ್ರಿಕ, ಕಾಲ್ಪನಿಕ, ಬೌದ್ಧಿಕ ಮತ್ತು ಆದರ್ಶ ಸೌಂದರ್ಯ ಎಂದು ವಿಂಗಡಿಸಬಹುದಾಗಿದೆ.ಸಮಾಜ ಕೇವಲ ಐಂದ್ರಿಕ ಹಾಗೂ ಕಾಲ್ಪನಿಕ ಹಂತವನ್ನು ಮಾತ್ರ ಕಾಣಲು ಶಕ್ತವಾಗಿರುತ್ತದೆ. ಅದನ್ನು ಮೀರಿ ಬೌದ್ಧಿಕ ಮತ್ತು ಆದರ್ಶ ಸೌಂದರ್ಯದ ನೆಲೆಯಲ್ಲಿ ನಿಂತು ಅರ್ಥೈಸಿಕೊಂಡಾಗಲೇ ಬೇಂದ್ರೆ ಸಾಹಿತ್ಯದ ಅನೂಹ್ಯ ಸ್ವರೂಪ ಹಾಗೂ ಹೊಳಹುಗಳು ಗೋಚರಿಸುತ್ತವೆ, ಬೇಂದ್ರೆಯವರ ಬದುಕು ಮತ್ತು ಸಾಹಿತ್ಯದ ನೋವು, ತಲ್ಲಣಗಳು ವರ್ತಮಾನದ ನೋವು, ಸಂಕಟಗಳಿಗೆ ಸಾಕ್ಷೀಭೂತವಾಗಿ ನಿಲ್ಲುತ್ತವೆ. ವಸ್ತು ಮತ್ತು ವಿಷಯದಾಚೆ ಭಾವಸಂದರ್ಭದ ಮೂಲಕ ಅವರ ಕಾವ್ಯವನ್ನು ಅರ್ಥೈಸಿಕೊಳ್ಳಬೇಕು. ಬೇಂದ್ರೆಯವರ ಗದ್ಯಸಾಹಿತ್ಯವನ್ನು ಓದಿಕೊಂಡವರಷ್ಟೇ ಅವರ ಕಾವ್ಯ ಅರ್ಥಮಾಡಿಕೊಳ್ಳಲು ಸಾಧ್ಯ ಎಂದರು
ಪ್ರಸ್ತುತ ಶಿಕ್ಷಣ ನೀತಿಯ ಭಾಷೆಯ ಆಯ್ಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳಿಗೆ ಮಾನವಿಕ ವಿಷಯಗಳ ಆಯ್ಕೆಯ ಸ್ವಾತಂತ್ಯ್ರವನ್ನು ಕೊಟ್ಟಿದ್ದು ಭಾಷೆಗಳನ್ನು ಆಯ್ದುಕೊಳ್ಳದಿರುವ ಅಪಾಯವಿದೆ. ಹೀಗಾಗಿ ಎಸ್.ಎಸ್.ಎಲ್.ಸಿ ಮತ್ತು ಪಿಯು ಶಿಕ್ಷಣದ ನಂತರವೂ ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ನೀತಿ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ಸಿ.ರಂಗದಾಮಯ್ಯ ದ.ರಾ.ಬೇಂದ್ರೆಯವರಯವರಂತಹ ಶ್ರೇಷ್ಠ ಕವಿಗಳ ವಿಚಾರಧಾರೆಗಳನ್ನು ನಮ್ಮ ಮಕ್ಕಳಿಗೆ ತಿಳಿಸದೆ ದೂರವಿಟ್ಟಿದ್ದೇವೆ. ಇಂದು ನಮ್ಮ ಮಕ್ಕಳಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಹೇಳಲು ಸಾದ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾಧನೀಯ ಎಂದರು.

ಸಾಹಿತಿ ತುರುವೇಕೆರೆ ಪ್ರಸಾದ್ ಮಾತನಾಡಿ ಕಾವ್ಯ ರಚನೆ ಕೂಡ ಅವಸರದ ಸಾಹಿತ್ಯ ಎನ್ನುವಂತಾಗಿದೆ. ಸಮಕಾಲಿನ, ಸಾಮಾಜಿಕ ಸ್ಥಿತಿಗತಿಗಳನ್ನು ಬಿಂಬಿಸುವುದರಿಂದ ಕಾವ್ಯ ಮಲಿನವಾಗುವುದಿಲ್ಲ. ವಸ್ತುವಿನ ಆಯ್ಕೆ ಮತ್ತು ಭಾಷಾ ಪ್ರೌಢಿಮೆ ಕಾವ್ಯದ ಶ್ರೇಷ್ಠತೆಯನ್ನು ನಿರ್ಧರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ತುರುವೇಕೆರೆ ಪ್ರಸಾದ್ ಅವರ ‘ ಕರೋನಾ ಅಟ್ಟಿದ ಗಟ್ಟಿಗರ ಕತೆಗಳು’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಶ್ರೀನಿವಾಸ್ ಹಾಗೂ ಕನ್ನಡ ಭಾಷಾ ಬೋಧಕರ ಸಂಘದ ಮಾಜಿ ಅಧ್ಯಕ್ಷ ಮಂಜಯ್ಯಗೌಡರನ್ನು ಸನ್ಮಾನಿಸಲಾಯಿತು. ನಂತರ ದ.ರಾ.ಬೇಂದ್ರೆ ಕುರಿತು ಹಲವರು ಕವಿಗಳು ಕವಿತೆ ವಾಚನ ಮಾಡಿದರು. ದ.ರಾ.ಬೇಂದ್ರೆ ವಿರಚಿತ ಗೀತೆಗಳನ್ನು ಶರಿತಾ ದೇವರಮನೆ ಹಾಗೂ ವಾಸವಿ ಸತೀಶ್ ಹಾಡಿದರು.

ಕಾರ್ಯಕ್ರಮದಲ್ಲಿ ಕಸಾಪ ಗೌರವಾದ್ಯಕ್ಷ ಪ್ರೊ.ಪುಟ್ಟರಂಗಪ್ಪ, ಅಧ್ಯಕ್ಷ ನಂ.ರಾಜು, ನಿಕಟಪೂರ್ವ ಅಧ್ಯಕ್ಷ ಸಾ.ಶಿದೇವರಾಜು, ಸ್ವಾಮಿ ವಿವೇಕಾನಂದ ಕಾಲೇಜು ಪ್ರಾಂಶುಪಾಲ ಬಿ.ಶಿವಮೂರ್ತಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ್ ಕೆಂಕೆರೆ, ಪರಮೇಶ್ವರಸ್ವಾಮಿ, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ವೆಂಕಟೇಶ್, ಚಿದಂಬರೇಶ್ವರ ಗ್ರಂಥಾಲಯದ ರಾಮಚಂದ್ರು, ಸತೀಶ್, ದಿನೇಶ್, ಅಮ್ಮಸಂದ್ರ ಶಿವು ಸೇರಿದಂತೆ ಇತರರು ಇದ್ದರು. ಲೈಬ್ರರಿ ರಾಮಚಂದ್ರು ಸ್ವಾಗತಿಸಿದರು. ಡಾ.ಟಿ.ಆರ್.ಚಂದ್ರಯ್ಯ ವಂದಿಸಿದರು. ಹಂಸರೇಖಾ ದಿಲೀಪ್ ನಿರೂಪಿಸಿದರು.

ಸಿಬ್ಬಂದಿ ಗೈರು, ಲಸಿಕೆಗಾಗಿ ಕಾದ ಜನತೆ

ಪಾವಗಡ:  ಆಧಾರ್ ಮಾಹಿತಿ ಅಪ್ ಲೋಡ್ ಮಾಡುವ  ಸಿಬ್ಬಂದಿ ಆಗಮಿಸದ ಕಾರಣ ಭಾನುವಾರ ಪಟ್ಟಣದ ಅಂಬೇಡ್ಕರ್ ಭವನದ ಬಳಿ ಲಸಿಕೆ ಹಾಕಿಸಿಕೊಳ್ಳಲು ಜನತೆ ಗಂಟೆ ಗಟ್ಟಲೆ ಕಾಯಬೇಕಾಯಿತು.   .

ಕೋವಿ ಶೀಲ್ಡ್  ಮೊದಲ ಡೋಸ್,  ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಬೆಳಿಗ್ಗೆ ಅಂಬೇ್ಡ್ಕರ್ ಭವನಕ್ಕೆ ಜನತೆ ಬಂದು ಗಂಟೆಗಳ ಕಾಲ ಸರದಿಯಲ್ಲಿ ನಿಂತರು. ಮಾಹಿತಿ ಅಪ್ ಲೋಡ್ ಮಾಡುವ ನೌಕರ ಬಾರದ ಕಾರಣ  ಮಧ್ಯಾಹ್ನದ ವರೆಗೂ ಸರದಿಯಲ್ಲಿ ನಿಂತ ಸಾರ್ವಜನಿಕರು ಬೇಸತ್ತು ಆಕ್ರೋಶ ವ್ಯಕ್ತಪಡಿಸಿದರು.

ಹಲವೆಡೆಯಿಂದ ಲಸಿಕೆಗಾಗಿ ಬಂದಿದ್ದ  ಕೆಲವರು ಲಸಿಕೆ ಪಡೆಯದೆ ಹಿಂತಿರುಗಿದರು.

ತಾಲ್ಲೂಕು ವೈದ್ಯಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಬೂಬು ಹೇಳಿ ಸುಮ್ಮನಾಗಿದ್ದಾರೆ.

ಮಧ್ಯಾಹ್ನ 12. 20 ಕ್ಕೆ ಸಿಬ್ಬಂದಿಯನ್ನು ಕಳುಹಿಸಿ ಲಸಿಕೆ ಹಾಕಿಸಲು ಆರಂಭಿಸಲಾಯಿತು.

ಅಧಿಕಾರಿಗಳ ಬೇಜವಬ್ಧಾರಿತನದಿಂದ ಲಸಿಕೆಗಾಗಿ ಆಗಮಿಸಿದ ಜನತೆ ಗಂಟೆಗಟ್ಟಲೆ ಕಾಯಬೇಕಿದೆ. ಸಮಸ್ಯೆ ಬಗ್ಗೆ ಹೇಳಿದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಜವಬ್ಧಾರಿ ವರ್ಗಾಯಿಸಿ ನುಣುಚಿಕೊಳ್ಳುತ್ತಾರೆ. ಇನ್ನಾದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಸುಬ್ರಹ್ಮಣಿ, ಅನಿಲ್, ಹನುಮಂತರಾಯ, ರಾಜು, ಕಿರಣ್ ಇತರರು ಒತ್ತಾಯಿಸಿದರು.