Tuesday, May 5, 2026
Google search engine
Home Blog Page 138

ಎರಡು ತಲೆ ಹಸುವಿನ ಕರು ಜನನ

Public story


ಪಾವಗಡ: ತಾಲ್ಲೂಕು ವೆಂಕಟಾಪುರ ಗ್ರಾಮದದಲ್ಲಿ ಎರಡು ತಲೆಯ ಕರುವಿಗೆ ಹಸು ಜನ್ಮ ನೀಡಿದ್ದು ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಕರುವಿನ ತಲೆಗಳು ದೊಡ್ಡದಾಗಿಯೇ ಇವೆ.

ಅಶ್ವತಪ್ಪ ಅವರು ಸಾಕಿದ್ದ ಹಸುವು ಕರುವಿಗೆ ಜನ್ಮ ನೀಡಿದ್ದು ಎರಡು ತಲೆ ಹೊಂದಿದೆ.

ನಾಲ್ಕು ಕಣ್ಣು. ನಾಲ್ಕು ಕಿವಿ, ನಾಲ್ಕು ಕಾಲುಗಳಿವೆ. ಈ ವಿಚಿತ್ರ ಕರುವನ್ನು ನೋಡಿ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಎರಡನೇ ಡೋಸ್ ಕೋವಿಡ್ ಲಸಿಕೆ: ಜಿಲ್ಲಾಧಿಕಾರಿ ಹೇಳಿದ್ದೇನು?

Public story


ತುಮಕೂರು: ಕೋವಿಡ್ ಮೊದಲನೇ ಲಸಿಕೆ ಪಡೆದು 84 ದಿನ ಪೂರೈಸಿ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿರುವ ಸಾರ್ವಜನಿಕರು ಸೇರಿದಂತೆ 21592 , ಫ್ರಂಟ್‌ಲೈನ್ ಹಾಗೂ ಹೆಲ್ತ್ ಕೇರ್ ವರ್ಕರ್ಸ್ ಗಳಿಗರ ಆದ್ಯತೆ ಮೇರೆಗೆ ಶನಿವಾರ ಮತ್ತು ಭಾನುವಾರದಂದು ಹತ್ತಿರದ ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ತಹಸೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜರುಗಿದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರದಿಂದ ಲಸಿಕೆ ಪೂರೈಕೆಯಾಗಲಿದ್ದು, ಶನಿವಾರದಿಂದ ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲಾ ಲಸಿಕಾ ಕೇಂದ್ರಗಳಲ್ಲಿಯೂ ಸಮರ್ಪಕವಾಗಿ ಲಸಿಕೆ ಲಭ್ಯವಾಗಲಿದೆ. ಹಾಗಾಗಿ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಈಗಾಗಲೇ 574781 ಮೊದಲ ಡೋಸ್, 123577 ಎರಡನೇ ಡೋಸ್ ಸೇರಿ ಸುಮಾರು 7 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಇದರಲ್ಲಿ ಹೆಲ್ತ್‌ಕೇರ್ ವರ್ಕರ್ಸ್‌ಗಳಿಗೆ 22222 ಮೊದಲ ಡೋಸ್, 17000 ಎರಡನೇ ಡೋಸ್; ಫ್ರಂಟ್ ಲೈನ್ ವರ್ಕರ್ಸ್‌ಗೆ 19431 ಮೊದಲನೇ ಡೋಸ್, 8560 ಎರಡನೇ ಡೋಸ್; 18 ರಿಂದ 44 ವರ್ಷದೊಳಗಿನವರಿಗೆ 84032 ಮೊದಲನೇ ಡೋಸ್ ನೀಡಲಾಗಿದ್ದು, ಎರಡನೇ ಡೋಸ್ ಇನ್ನೂ ಯಾರಿಗೂ ನೀಡಿಲ್ಲ. ಉಳಿದಂತೆ 45 ವರ್ಷದಿಂದ 60 ವರ್ಷದೊಳಗಿನವರಿಗೆ 251318 ಮೊದಲ ಡೋಸ್, 38472 ಎರಡನೇ ಡೋಸ್ ಹಾಗೂ 60 ವರ್ಷ ಮೇಲ್ಪಟ್ಟವರಿಗೆ 198778 ಮೊದಲನೇ ಡೋಸ್, 59545 ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಮೊದಲ ಮತ್ತು ಎರಡನೇ ಡೋಸ್ ಎರಡೂ ಸೇರಿ ಚಿಕ್ಕನಾಯನಕಹಳ್ಳಿಯಲ್ಲಿ 53732, ಗುಬ್ಬಿ-65824, ಕೊರಟಗೆರೆ-41745, ಕುಣಿಗಲ್-54730, ಮಧುಗಿರಿ-60296, ಪಾವಗಡ-48636, ಶಿರಾ-69541, ತಿಪಟೂರು-64269, ತುಮಕೂರು189364, ತುರುವೇರೆಕೆರೆಯಲ್ಲಿ 50222 ಡೋಸ್ ಲಸಿಕೆ ವಿತರಿಸಲಾಗಿದ್ದು, 45 ವರ್ಷ ಮೇಲ್ಪಟ್ಟವರಿಗೆ ಶೇ.57ರಷ್ಟು ಹಾಗೂ 18 ವರ್ಷ ಮೇಲ್ಪಟ್ಟ ಆದ್ಯತಾ ಗುಂಪುಗಳಿಗೆ ಶೇ.7ರಷ್ಟು ಲಸಿಕಾಕರಣ ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನಗರಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚು ಲಸಿಕಾಕರಣ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಭಾಗದ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಗ್ರಾಮೀಣ ಜನರಿಗೆ ಅನುಕೂಲವಾಗುವ ರೀತಿಯಲ್ಲಿಯೇ ಲಸಿಕೆ ಪಡೆಯಲು ಹತ್ತಿರದ ಪಿಎಚ್‌ಸಿಗಳಲ್ಲಿ ವ್ಯವಸ್ಥೆ ಮಾಡಿರುವುದರಿಂದ ಹೆಚ್ಚಾಗಿ ಲಸಿಕಾಕರಣ ಕಾರ್ಯ ಗ್ರಾಮೀಣ ಭಾಗದಲ್ಲಿಯೂ ನಡೆಯುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ಪಡೆಯಲು ಚಿಕ್ಕನಾಯಕನಹಳ್ಳಿಯಲ್ಲಿ1384, ಗುಬ್ಬಿ-2668, ಕೊರಟಗೆರೆ-1440, ಕುಣಿಗಲ್-1684, ಮಧುಗಿರಿ-1950, ಪಾವಗಡ-1561, ಶಿರಾ- 2346, ತಿಪಟೂರು-2009, ತುಮಕೂರು-5263 ಹಾಗೂ ತುರುವೇಕೆರೆಯಲ್ಲಿ 1323 ಸೇರಿ ಒಟ್ಟು 21592 ಮಂದಿ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿದ್ದಾರೆ. ಇವರೆಲ್ಲರಿಗೂ ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯ ಸಾಧಿಸಿ ಲಸಿಕೆ ನೀಡಬೇಕು ಎಂದು ನಿರ್ದೇಶಿಸಿದರು.

ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದಿರುವ ಫಲಾನುಭವಿಗಳ ಗ್ರಾಮವಾರು ಪಟ್ಟಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಬೇಕು ಮತ್ತು ಸಾಕಾಗುವಷ್ಟು ಸರ್ಕಾರದಿಂದ ಸರಬರಾಗಲಿರುವ ಲಸಿಕೆಯನ್ನು ಒದಗಿಸಬೇಕು. ತಾಲೂಕು ಮಟ್ಟದಲ್ಲಿ ತಂಡ ರಚಿಸಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಅರಿವು ಮೂಡಿಸಿ ಲಸಿಕೆ ತೆಗೆದುಕೊಳ್ಳಲು ಮನವೊಲಿಸಬೇಕು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಫಲಾನುಭವಿಗಳನ್ನು ಲಸಿಕಾಕರಣಕ್ಕೆ ಸಜ್ಜುಗೊಳಿಸಬೇಕು. ಎರಡನೇ ಡೋಸ್ ಪಡೆಯಬೇಕಿರುವ ಎಲ್ಲಾ ಅರ್ಹರಿಗೆ ಜಿಲ್ಲಾ ಮಟ್ಟದಿಂದ ಮಾಹಿತಿ ಸಂದೇಶ ಹಾಗೂ ದೂರವಾಣಿ ಮೂಲಕ ಮಾಹಿತಿ ನೀಡಿ ಲಸಿಕಾಕರಣ ಯಶಸ್ವಿ ಗೊಳಿಸಬೇಕು. ಹೆಚ್ಚುವರಿಯಾಗಿ ಆಪ್ತಮಿತ್ರ ಸಿಬ್ಬಂದಿಗಳನ್ನು ಬಳಸಿಕೊಳ್ಳಬಹುದು. ಆಪ್ತಮಿತ್ರ ಸಿಬ್ಬಂದಿಗಳು ಆರ್‌ಸಿಹೆಚ್ ಅಧಿಕಾರಿಗಳಿಂದ ಯಾವ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಯಾವ ಲಸಿಕೆಯ ಎಷ್ಟು ಡೋಸ್‌ಗಳು ಲಭ್ಯವಿದೆ ಎಂಬ ಮಾಹಿತಿ ಪಡೆದು ಫಲಾನುಭವಿಗಳಿಗೆ ಲಸಿಕೆ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಹೆಚ್ಚಿನ ರೈತರು ಬೆಳೆ ಯೋಜನೆ ಲಾಭ ಪಡೆದುಕೊಳ್ಳಬೇಕು. ಬೀಜ ಮತ್ತು ಗೊಬ್ಬರವನ್ನು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬಂದಿಲ್ಲ. ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮವಹಿಸಲಾಗುವುದು. ರೈತರು ಸೌಲಭ್ಯ ಪಡೆಯುವ ವೇಳೆ ಕೋವಿಡ್ ನಿಯಮಾವಳಿ ಮರೆಯಬಾರದು. ಬಿತ್ತನ ಬೀಜ ವಿತರಣೆಯಲ್ಲಿ ಕಳಪೆ ಗುಣಮಟ್ಟದ ಬೀಜವೆಂದು ಸಂಶಯ ಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ದೂರು ದಾಖಲಿಸಬಹುದಾಗಿದೆ ಎಂದು ತಿಳಿಸಿದರು.
ಪರವಾನಗಿ ಇಲ್ಲದೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವಂತಿಲ್ಲ. ಇದಲ್ಲದೆ, ಲೂಸ್(ಪ್ಯಾಕೇಟ್ ಓಪನ್ ಮಾಡಿ ಮಾರಾಟ ಮಾಡುವುದು) ಬಿತ್ತನೆ ಬೀಜ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದ್ದು, ಅದಕ್ಕೆ ಕಡಿವಾಣ ಹಾಕುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಮಾತನಾಡಿ, ಮುಂಗಾರು ಹಂಗಾಮು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರೈತಸಂಪರ್ಕ ಕೇಂದ್ರ, ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ಬಿತ್ತನೆ ಬೀಜ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ರೈತರು ಈ ವೇಳೆ ಕೋವಿಡ್ ನಿಯಮಾವಳಿಗಳಾದ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆಯಿಲ್ಲ. ಪೂರ್ವ ಮುಂಗಾರು ಕಾರ್ಯಕ್ಕೆ ಬೆಳೆ ಸಮೀಕ್ಷೆ ಕಾರ್ಯ ಪ್ರಾರಂಭವಾಗುತ್ತಿದೆ. ಬೆಳೆ ಸಮೀಕ್ಷೆ ಆಪ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಕೆಕಿಸಾನ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳದಿದ್ದರೆ ನೋಂದಣಿ ಮಾಡಿಸಿಕೊಂಡು ಫ್ರೂಟ್ ಐಡಿ ಪಡೆಯಬೇಕು. ಇದರಿಂದ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಪಡೆಯಲು ಅನುವಾಗಲಿದೆ ಎಂದು ತಿಳಿಸಿದರು.

ವೀಕೆಂಡ್ ಕರ್ಪ್ಯೂ: ಓಡಾಟಕ್ಕೆ ಯಾರಿಗೆಲ್ಲ ಅವಕಾಶ?

Public story


ತುಮಕೂರು: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚನೆ ನೀಡಿದ್ದಾರೆ.

ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ವಾರಾಂತ್ಯದ ಕರ್ಫೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ, ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆ, ಪಾಲಿಕೆ, ನಿಗಮಗಳು ಸೇರಿದಂತೆ ತುರ್ತು/ಅಗತ್ಯ ಸೇವೆಗಳನ್ನು ಒದಗಿಸುವ ಇಲಾಖೆ/ಕಚೇರಿಗಳು ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ.

ಕೋವಿಡ್ ಗೆ ಸಂಬಂಧಿಸಿದ ಅಗತ್ಯ ಸೇವೆ ಮತ್ತು ನ ಕರ್ತವ್ಯಗಳನ್ನು ನಿರ್ವಹಿಸುವ ಅಧಿಕಾರಿಗಳು / ಸಿಬ್ಬಂದಿಗಳ ಓಡಾಟಕ್ಕೆ ನಿರ್ಬಂಧ ಇರುವುದಿಲ್ಲ. ತುರ್ತು ಮತ್ತು ಅಗತ್ಯ ಸೇವೆಗಾಗಿ 24/7 ಕಾರ್ಯಾಚರಣೆ ಮಾಡುವ ಎಲ್ಲಾ ಕೈಗಾರಿಕೆಗಳು / ಕಂಪನಿಗಳು / ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು.ಇಂತಹ ಸಂಸ್ಥೆಗಳಿಂದ ನೀಡಲಾದ ಗುರುತಿನ ಚೀಟಿ ಹೊಂದಿರುವ ನೌಕರರ ಚಲನೆಗೆ ಅನುಮತಿಸಲಾಗುವುದು. ಆದರೂ ಸಂಬಂಧಿಸಿದ ಕೈಗಾರಿಕೆ/ಸಂಸ್ಥೆಗಳು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು.

ಅಧಿಕೃತ ಗುರುತಿನ‌ ಚೀಟಿ ಹೊಂದಿರುವ ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರ ನೌಕರರು ಮತ್ತು ವಾಹನಗಳ‌ ಓಡಾಟಕ್ಕೂ ಅನುಮತಿ ನೀಡಲಾಗುವುದು.

ಐಟಿ ಮತ್ತು ಐಟಿಇಎಸ್ ಕಂಪನಿಗಳು / ಸಂಸ್ಥೆಗಳ ಅಗತ್ಯವಿರುವ ಸಿಬ್ಬಂದಿ ಹಾಗೂ ನೌಕರರು ಮಾತ್ರ ಕಚೇರಿಯಿಂದ ಕೆಲಸ ಮಾಡತಕ್ಕದ್ದು. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ.

ಕನಿಷ್ಠ ಪುರಾವೆಗಳನ್ನು ಹೊಂದಿರುವ ರೋಗಿಗಳು ಮತ್ತು ಅವರ ಪರಿಚಾರಕರು / ತುರ್ತು ಅಗತ್ಯವಿರುವ ವ್ಯಕ್ತಿಗಳು, ವ್ಯಾಕ್ಸಿನೇಷನ್ ತೆಗೆದುಕೊಳ್ಳುವವರಿಗೆ ಅನುಮತಿಸಲಾಗುವುದು.
ಆಹಾರ, ದಿನಸಿ, ಹಣ್ಣು, ತರಕಾರಿ, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್‌, ಪ್ರಾಣಿಗಳ ಮೇವು ಮಾರಾಟ ಮಾಡುವ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.
ರಸ್ತೆ ಬದಿ ಮಾರಾಟಗಾರರು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿ, ಸ್ವತಂತ್ರ ಮದ್ಯದಂಗಡಿ ಮತ್ತು ಮಳಿಗೆಗಳನ್ನು ತೆರೆದು ಮಾರಾಟ ಮಾಡಲು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶವಿದೆ.
ಮನೆಯ ಹೊರಗಿನ ವ್ಯಕ್ತಿಗಳ ಚಲನೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಎಲ್ಲಾ ವಸ್ತುಗಳ ಮನೆ ವಿತರಣೆ(home delivery)ಯನ್ನು 24×7 ಪ್ರೋತ್ಸಾಹಿಸಲಾಗುತ್ತದೆ.

ರೆಸ್ಟೋರೆಂಟ್ ಮತ್ತು ಹೋಟೆಲ್ ಗಳಿಂದ ತಿನಿಸುಗಳನ್ನು ತೆಗೆದುಕೊಂಡು ಹೋಗಲು ಮತ್ತು ಮನೆಗೆ ತಲುಪಿಸಲು ಮಾತ್ರ ಅನುಮತಿಸಲಾಗುತ್ತದೆ.

ಪ್ರಯಾಣಿಕರ ಪ್ರಯಾಣಕ್ಕೆ ಅನುವಾಗುವಂತೆ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ‌ ಮತ್ತು ಬಸ್ ಟರ್ಮಿನಲ್ / ನಿಲ್ದಾಣಗಳಿಗೆ ಹೋಗಲು/ಬರಲು ಸಾರಿಗೆ/ಖಾಸಗಿ ವಾಹನ/ ಟ್ಯಾಕ್ಸಿಗಳಿಗೆ ಅನುಮತಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ದಾಖಲೆ / ಟಿಕೆಟ್ ಅನ್ನು ಕಟ್ಟುನಿಟ್ಟಾಗಿ ಹಾಜರುಪಡಿಸಬೇಕು.

ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ರಾಜ್ಯ ಸರ್ಕಾರ ಹೊರಡಿಸಿದ ಕೋವಿಡ್ 19 ಸೂಕ್ತ ನಡವಳಿಕೆ ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಮನೆಯಲ್ಲಿಯೇ 40 ಜನರವರೆಗಿನ ನಿಕಟ ಕುಟುಂಬ ಸಂಬಂಧಿಗಳು ಮಾತ್ರ ಒಳಗೊಂಡಂತೆ ನೆರವೇರಿಸಬೇಕು. ಶವಸಂಸ್ಕಾರ / ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರೊಂದಿಗೆ ಮಾತ್ರ ನೆರವೇರಿಸಲು ಅನುಮತಿಸಲಾಗುವುದು ಎಂದು ಅವರು ನಿರ್ದೇಶನ ನೀಡಿದ್ದಾರೆ.
ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.

ಕೋವಿಡ್-19 ಲಾಕ್‌ಡೌನ್ ಪರಿಹಾರ ಹಣ ಪಡೆಯಲು ಅರ್ಜಿ ಆಹ್ವಾನ

Public story


ತುಮಕೂರು: ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಕೋವಿಡ್-19 ಲಾಕ್ ಡೌನ್ ಪರಿಹಾರ ಹಣ ನೀಡಲು ಅರ್ಹ ಚರ್ಮಕುಶಲ ಕರ್ಮಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಪಾದರಕ್ಷೆ ತಯಾರಿಕೆ, ದುರಸ್ತಿ ಹಾಗೂ ಚರ್ಮ ಹದ ಮಾಡುವ ಕಾರ್ಯದಲ್ಲಿ ತೊಡಗಿರುವ ಚಮ್ಮಾರರು, ಚರ್ಮಕುಶಲ ಕರ್ಮಿಗಳಿಗೆ 2000 ರೂ.ಗಳ ಪರಿಹಾರ ನೀಡಲಾಗುವುದು. ಆಸಕ್ತ ಚರ್ಮಕುಶಲ ಕರ್ಮಿಗಳು ಜೂನ್ 30ರೊಳಗಾಗಿ ಸೇವಾಸಿಂಧು sevasindhu.karnataka.gov.in ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪರಿಹಾರದ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9480886278ನ್ನು ಸಂಪರ್ಕಿಸಬೇಕೆಂದು ನಿಗಮದ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.

ಕಾನೂನು ಪದವೀಧರರಿಗೆ ವೃತ್ತಿ ತರಬೇತಿ: ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

Public story


ತುಮಕೂರು: ಸಮಾಜ ಕಲ್ಯಾಣ ಇಲಾಖೆಯು 2021-22ನೇ ಸಾಲಿಗಾಗಿ ಕಾನೂನು ಪದವೀಧರರು ಹಿರಿಯ ವಕೀಲರ ಬಳಿ ಪಡೆಯುವ ವೃತ್ತಿ ತರಬೇತಿ ಅವಧಿಯಲ್ಲಿ ಶಿಷ್ಯವೇತನ ಸೌಲಭ್ಯಕ್ಕಾಗಿ ಆಯ್ಕೆ ಮಾಡಲು ಅರ್ಹ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಅರ್ಜಿ ಸಲ್ಲಿಸಲು ಜೂನ್ 30 ಕಡೆಯ ದಿನವೆಂದು ನಿಗಧಿಪಡಿಸಿತ್ತು.

ಆದರೆ ಕೋವಿಡ್-19ರ ಸಾಂಕ್ರಾಮಿಕ ರೋಗದಿಂದ ಲಾಕ್‌ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮತ್ತು ತಾಂತ್ರಿಕ ತೊಂದರೆಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲು ತಂತ್ರಾಂಶ ತೆರೆಯದೇ ಇದ್ದುದರಿಂದ ಅರ್ಜಿ ಸಲ್ಲಿಸಲು ಜುಲೈ 1 ರಿಂದ ಆಗಸ್ಟ್ 14ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಆಸಕ್ತ ಪರಿಶಿಷ್ಟ ಜಾತಿಯ ಕಾನೂನು ಪದವೀಧರರು ತಮ್ಮ ಅರ್ಜಿಯನ್ನು ಇಲಾಖೆಯ ಜಾಲತಾಣ www.sw.kar.nic.inನಲ್ಲಿ ಸಲ್ಲಿಸಬಹುದು.

ತರಬೇತಿಯು 2 ವರ್ಷಗಳ ಅವಧಿಯದಾಗಿದ್ದು, ಒಮ್ಮೆ ತರಬೇತಿಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಮಧ್ಯೆ ತರಬೇತಿ ಬಿಡಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಆಯ್ಕೆಯಾದಲ್ಲಿ ತರಬೇತಿ ಬಿಡಲು ನಿಯಮಾನುಸಾರ ಅವಕಾಶವಿರುತ್ತದೆ. ತರಬೇತಿ ಅವಧಿಯಲ್ಲಿ ಮಾಹೆಯಾನ 10000 ರೂ.ಗಳ ಶಿಷ್ಯವೇತನವನ್ನು ಹಾಜರಾತಿ ಮತ್ತು ದಿನಚರಿ ಆಧಾರದ ಮೇಲೆ ಪಾವತಿಸಲಾಗುವುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಾನೂನು ಪದವಿ ಪಡೆದು ಎರಡು ವರ್ಷದೊಳಗಿರಬೇಕು.

ಕಡ್ಡಾಯವಾಗಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿರಬೇಕು(ದೃಢೀಕೃತ ಪತ್ರ ಲಗತ್ತಿಸಿರಬೇಕು). ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆ ದಿನಾಂಕದೊಳಗೆ 40 ವರ್ಷ ವಯೋಮಿತಿಯನ್ನು ದಾಟಿರಬಾರದು. ಕುಟುಂಬದ ವಾರ್ಷಿಕ ಆದಾಯ 2.50ಲಕ್ಷ ರೂ.ಗಳನ್ನು ಮೀರಿರಬಾರದು. ಅಭ್ಯರ್ಥಿಯು ಯಾವುದೇ ಕಾರಣಕ್ಕೂ ತರಬೇತಿಯನ್ನು ತೊರೆದಲ್ಲಿ ಅಲ್ಲಿಯವರೆಗೆ ಪಾವತಿಸಲಾದ ಶಿಷ್ಯವೇತನವನ್ನು ಸರ್ಕಾರಕ್ಕೆ ವಾಪಸು ಜಮಾ ಮಾಡಬೇಕಾಗುತ್ತದೆ. ತಪ್ಪಿದ್ದಲ್ಲಿ ಈ ಹಣಕ್ಕೆ ಶೇ.10%ರಷ್ಟು ಬಡ್ಡಿ ವಿಧಿಸಿ, ಕಂದಾಯ ರೂಪದಲ್ಲಿ ವಸೂಲಾತಿ ಮಾಡಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳಿಗೆ 2 ವರ್ಷಗಳ ತರಬೇತಿಗಾಗಿ ಸರ್ಕಾರಿ ಅಭಿಯೋಜಕರು/ಸರ್ಕಾರಿ ವಕೀಲರು ಹಾಗೂ 15 ವರ್ಷಗಳಿಗಿಂತ ಹೆಚ್ಚಿನ ಅವಧಿ ನ್ಯಾಯಾಲಯಗಳಲ್ಲಿ ವಾದ ಮಂಡಿಸಿದ ಖಾಸಗಿ ಕ್ರಿಮಿನಲ್/ಸಿವಿಲ್ ವಕೀಲರುಗಳ ಬಳಿಯಲ್ಲಿ ತರಬೇತಿಗಾಗಿ ನಿಯೋಜಿಸಲಾಗುವುದು. ಅಭ್ಯರ್ಥಿಯನ್ನು ಆಯ್ಕೆ ಸಮಿತಿಯು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕಿ ಪ್ರೇಮ ತಿಳಿಸಿದ್ದಾರೆ.

ಮಾಜಿ ಶಾಸಕ ಸುರೇಶಗೌಡರ ಮೆಚ್ಚುಗೆಗೆ ಪಾತ್ರವಾದ ಜನ್ಮ ದಿನ ಆಚರಣೆ

Public story


ತುಮಕೂರು-: ತಾಲ್ಲೂಕು ಅರಕೆರೆ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ರವೀಶ್ ಉಚಿತ ಆಹಾರದ ಕಿಟ್ ವಿತರಿಸುವ ಮೂಲಕ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.

ಆಶಾ,ಅಂಗನವಾಡಿ,ಸವಿತಾಸಮಾಜ,ಅರ್ಚಕರು,ಮಂಗಳ ವಾದ್ಯ ವಾದಕರು,ಮುಸ್ಲಿಂ ಸಮುದಾಯ,ಗ್ರಾಮಪಂಚಯ್ತಿ ಸಿಬ್ಬಂದಿ,ಬಡವರು,ನಿರ್ಗತಿಕರು,ಅಸಹಾಯಕರು ಎಲ್ಲಾ ಸ್ತರ ವರ್ಗದ ಜನರನ್ನು ಒಂದೇ ವೇದಿಕೆಯಡಿ ಉಚಿತ ಆಹಾರದ ಕಿಟ್ ವಿತರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ‘ ಜನ್ಮದಿನ ಅದ್ದೂರಿ ಅಚರಣೆಗಳಾಗಿರುವ ಇಂದಿನ ದಿನಗಳಲ್ಲಿ ಯುವಮೋರ್ಚಾ ಅಧ್ಯಕ್ಷ ರವೀಶ್ ಜನರಿಗೆ ಉಚಿತ ಆಹಾರದ ಕಿಟ್ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ. ಎಲ್ಲರನ್ನೂ ಪ್ರೀತಿ,ವಿಶ್ವಾಸದಿಂದ ಕಾಣುವ ರವೀಶ್ ಗೆ ಉತ್ತಮ ನಾಯಕತ್ವದ ಗುಣಗಳಿವೆ,ಭವಿಷ್ಯದಲ್ಲಿ ಉತ್ತಮ ನೇತಾರನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪುಷ್ಪವೃಷ್ಟಿ ಮಾಡಿ ಅಭಿನಂದಿಸಲಾಯಿತು.
ಮಾಜಿ ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ,ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶಸ್,ಬಿಜೆಪಿ ಮುಖಂಡರಾದ ರಮೇಶ್, ಅರಕೆರೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಹೊನ್ನಮ್ಮ, ಸದಸ್ಯರಾದಆರಿಪ್,ಕುಮಾರ್,ಅನಿಲ್ ,ಬಿಜೆಪಿ ಮುಖಂಡರಾದ ರಮೇಶ್,ಬೆಳಧರಮೋಹನ್,
ತಾಲ್ಲೂಕು ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ಉಪಸ್ತಿತರಿದ್ದರು,

ತುಮಕೂರಿನಲ್ಲಿ ಮುಂದಿನ ವಾರ ಲಾಕ್ ಡೌನ್ ತೆರವು?

Public story


ತುಮಕೂರು: ಮುಂದಿನ ಒಂದು ವಾರದಲ್ಲಿ ನಿರೀಕ್ಷೆಯಂತೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದರೆ ಲಾಕ್‌ಡೌನ್ ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯ ಇನ್ನೂ ಕೆಲವು ಪ್ರದೇಶಗಳಲ್ಲಿ ಜಿಲ್ಲಾಡಳಿತದ ನಿರೀಕ್ಷೆಯಂತೆ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಈಗಲೂ ಇರುವ ಕೆಂಪು ವಲಯ ಮತ್ತು ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ತೆರವಿಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಕೊರೋನಾ ಸೋಂಕಿತರ ಸಂಖ್ಯೆಯ ಹೆಚ್ಚಳದಿಂದಾಗಿ ಶಿರಾ ತಾಲೂಕು ಸೇರಿದಂತೆ ಉಳಿದ ತಾಲೂಕುಗಳ ಭಾಗಗಳು ಕೆಂಪುವಲಯ ಹಾಗೂ ಹಾಟ್‌ಸ್ಪಾಟ್ ಪ್ರದೇಶಗಳನ್ನಾಗಿ ಗುರತಿಸಲಾಗಿದೆ. ಈ ಪ್ರದೇಶಗಳಲ್ಲಿ ಸೋಂಕನ್ನು ನಿಯಂತ್ರಣಕ್ಕೆ ತಂದು ಆ ಪ್ರದೇಶಗಳನ್ನು ಕೆಂಪುವಲಯ ಹಾಗೂ ಹಾಟ್‌ಸ್ಪಾಟ್‌ಗಳಿಂದ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ
ಸೋಂಕಿತರ ಸಂಪರ್ಕಿತರ ಬಗ್ಗೆ ನಿಗಾವಹಿಸಬೇಕು. ರೋಗಲಕ್ಷಣಗಳುಳ್ಳ ಸೋಂಕಿತರ ಸಂಪರ್ಕಿತರು ಹಾಗೂ ಸೋಂಕಿತರ ಕುಟುಂಬಸ್ಥರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರನ್ನು ಬಳಸಿಕೊಂಡು ಕೋವಿಡ್ ಸೋಂಕಿತರ ಆರೋಗ್ಯದ ಬಗ್ಗೆ ಸದಾ ಗಮನಹರಿಸುವಂತೆ ನಿರ್ದೇಶಿಸಿದರು.

ಆರ್‌ಸಿಎಚ್ ಅಧಿಕಾರಿ ಡಾ. ಕೇಶವರಾಜ್ ಮಾತನಾಡಿ, ಜಿಲ್ಲೆಗೆ ಪೂರೈಕೆಯಾಗುತ್ತಿರುವ ಲಸಿಕೆಯನ್ನು ತಾಲೂಕುವಾರು ಜನಸಂಖ್ಯೆಗನುಗುಣವಾಗಿ ಲಸಿಕಾಕರಣ ಕಾರ್ಯ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆಯಾಗದಂತೆ ಲಸಿಕಾ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಲಸಿಕೆ ಪೂರೈಕೆಯಾಗುವ ಸಾಧ್ಯತೆಯಿದೆ. ಹೆಚ್ಚು ಲಸಿಕೆ ಬಂದ ತಕ್ಷಣ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ವರ್ಗದವರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರಿಗೆ ಮಾಹಿತಿ ಒದಗಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಬಾಬು ಮಾತನಾಡಿ, ಜಿಲ್ಲೆಯಲ್ಲಿ ಪತ್ತೆಯಾಗಿರುವ ಬ್ಲಾಕ್ ಫಂಗಸ್ ರೋಗಿಗಳಿಗೆ ಸೂಕ್ತವಾಗಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕವಿದ್ದಲ್ಲಿ ಮಾತ್ರ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ ಎಂದ ಅವರು ಜಿಲ್ಲೆಗೆ ಹೆಚ್ಚಿನ ಔಷಧಗಳ ಲಭ್ಯತೆಯ ಅವಶ್ಯಕವಿದೆ ಎಂದು ವಿವರಣೆ ನೀಡಿದರು.

*ಮೂರನೇ ಅಲೆ ಎದುರಿಸಲು ಸಿದ್ಧತೆಗೆ ಕ್ರಮ*:


ತಜ್ಞರ ವರದಿ ಪ್ರಕಾರ ಕೋವಿಡ್ 3ನೇ ಅಲೆ ಬರುವ ಸಾಧ್ಯತೆಯಿದ್ದು, ಮೂರನೇ ಅಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಮೂರನೇ ಅಲೆ ಮಕ್ಕಳಿಗೆ ಹೆಚ್ಚಾಗಿ ತಗುಲುವ ನಿರೀಕ್ಷೆಯಿದೆ. ಹಾಗಾಗಿ ಎಲ್ಲಾ ಅಧಿಕಾರಿಗಳೂ ಸಮನ್ವಯ ಸಾಧಿಸಿ ಚಿಕಿತ್ಸೆಗೆ ಕೊರತೆಯುಂಟಾಗದಂತೆ ಎಚ್ಚರಿಕೆ ವಹಿಸಬೇಕು. ಈಗಿನಿಂದಲೇ ಹೆಚ್ಚು ನಿಗಾವಹಿಸಿ ಅಪೌಷ್ಟಿಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಅಂಗನವಾಡಿ ಮಟ್ಟದಲ್ಲಿಯೇ ಅಪೌಷ್ಟಿಕ ಮಕ್ಕಳಿಗೆ ಸೂಕ್ಷ್ಮ ಪೋಷಕಾಂಶವುಳ್ಳ ಆಹಾರ ವಿತರಣೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ನಿರ್ದೇಶಿಸಿದರು.

ಕೋವಿಡ್ ಮೂರನೆ ಅಲೆಯಿಂದ ಮಕ್ಕಳು ಬಾಧಿತರಾಗಬಾರದು. ಈ ನಿಟ್ಟಿನಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸಿಕೊಳ್ಳಬೇಕು. ಜಿಲ್ಲೆಯಲ್ಲಿನ ಹಾಲು ಉತ್ಪಾದಕ ಸೊಸೈಟಿಗಳಿಂದ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕ ಹಾಲು ಮತ್ತು ಉತ್ಪನ್ನಗಳನ್ನು ಒದಗಿಸುವ ಸಂಬಂಧ ಸಭೆ ಕರೆದು ಚರ್ಚಿಸಬೇಕು. ಒಟ್ಟಾರೆ ಮೂರಲೇ ಕೋವಿಡ್ ಅಲೆಯಿಂದಾಗಿ ಜಿಲ್ಲೆ ನಲುಗದಂತೆ ಕ್ರಮವಹಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಶಿಶು ತಜ್ಞ ವೈದ್ಯರೊಂದಿಗೆ ಸಭೆ ನಡೆಸಿ ಮೂರನೇ ಅಲೆ ನಿಯಂತ್ರಣಕ್ಕೆ ಬೇಕಾದ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಸೇರಿದಂತೆ ವಿವಿಧ ಅಧಿಕಾರಿಗಳಿದ್ದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ಒಟ್ಟು 7579 ಮಕ್ಕಳಲ್ಲಿ ಕೊರೋನಾ ಸೋಂಕು ಕಂಡು ಬಂದಿತ್ತು. ಆದರೆ, ಈ ಅವಧಿಯಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಒಂದು ಮಗು ಮಾತ್ರ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಕೋವಿಡ್‌ನಿಂದ ಸಾವನ್ನಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಾದ್ಯಂತ 8672 ಅಪೌಷ್ಟಿಕವುಳ್ಳ ಹಾಗೂ ವಿವಿಧ ಗಂಭಿರ ಖಾಯಿಲೆಗಳಿಂದ ಬಳಲುತ್ತಿರುವ 2200 ಮಕ್ಕಳನ್ನು ಗುರುತಿಸಲಾಗಿದ್ದು, ಈ ಮಕ್ಕಳ ಆರೋಗ್ಯದ ಕಡೆ ನಿಗಾ ವಹಿಸಬೇಕೆಂದು ಸೂಚನೆ ನೀಡಲಾಗಿದೆ. ಅಪೌಷ್ಠಿಕ ಮಕ್ಕಳಿಗೆ ಡೈರಿಯಿಂದ ನಿತ್ಯ 200 ಎಂ.ಎಲ್. ಹಾಲು ಹಾಗೂ ಇನ್ನಿತರ ದಾನಿಗಳ ನೆರವಿನಿಂದ ಪೌಷ್ಠಿಕ ಆಹಾರ ವಿತರಣೆಗೆ ಚಿಂತನೆ ನಡೆಸಲಾಗುತ್ತಿದೆ. ಗುರುತಿಸಲಾಗಿರುವ ಈ ಮಕ್ಕಳನ್ನು ಉತ್ತಮ ಆರೋಗ್ಯ ಸ್ಥಿತಿಗೆ ಮರಳಿದುವುದು ಮುಖ್ಯ ಉದ್ದೇಶವಾಗಿದೆ. ಈಗಾಗಲೇ ವಿವಿಧ ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಜ್ವರ, ತಲೆನೋವಿನಂತಹ ಲಕ್ಷಣಗಳು ಬರುವುದಿಲ್ಲ. ಕೊರೋನಾ ವೈರಸ್ ಬೇರೆ ರೀತಿಯಲ್ಲಿ ರೂಪಾಂತರ ಹೊಂದಬಹುದೆನ್ನುವ ಬಗ್ಗೆ ಚರ್ಚೆಯಾಗುತ್ತಿದೆ.
ಕೆಲವು ಮಾಹಿತಿಯ ಪ್ರಕಾರ ಶೇ.90ರಷ್ಡು ಕಣ್ಣು ಕೆಂಪಗಾಗಿ ಕಣ್ಣಿನ ಬಳಿ ಗುಳ್ಳೆಗಳಾಗುವ ಸಾಧ್ಯತೆ ಇದೆ. ವಾಂತಿ ಅಥವಾ ಬೇಧಿಯಾಗುತ್ತದೆ. ವಾಂತಿ ಅಥವಾ ಬೇಧಿಯಾಗುವ ಮಕ್ಕಳನ್ನು ಕೋವಿಡ್ ಎಂದು ಚಿಕಿತ್ಸೆ ಮಾಡಲಾಗುತ್ತದೆ.

ಕಣ್ಣು ಕೆಂಪಗಾಗಿ ಕಣ್ಣಿನ ಬಳಿ ಗುಳ್ಳೆಗಳಾಗಬಹುದೆಂಬ ಲಕ್ಷಣದ ಬಗ್ಗೆ ಇನ್ನೂ ಶೇ.100ರಷ್ಟು ಖಚಿತವಾಗಿಲ್ಲ. ಸಾಮಾನ್ಯ ರೋಗ ಲಕ್ಷಣಗಳು ಕಂಡುಬಂದಲ್ಲಿ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ. ರೋಗ ಲಕ್ಷಣ ಕಂಡು ಬಂದ ಮಕ್ಕಳ ಆರೈಕೆಗಾಗಿ ಈಗಾಗಲೇ 600 ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸರ್ಕಾರದ 18 ಸೇರಿದಂತೆ ಒಟ್ಟು 70 ಮಕ್ಕಳ ವೈದ್ಯರಿದ್ದು ಅವರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಬೆಂಗಳೂರಿನಿಂದ ಓರ್ವ ತಜ್ಞರನ್ನು ಕರೆಸಿ ಎಲ್ಲ ವೈದ್ಯರೊಂದಿಗೆ ಸಭೆ ನಡೆಸಲಾಗುವುದು.

ಖಾಸಗಿ 85 ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ 74 ಐಸಿಯು ವೆಂಟಿಲೇಟರ್‌ಗಳಿದ್ದು, ಅಗತ್ಯಕ್ಕೆ ಅನುಗುಣವಾಗಿ ಮಕ್ಕಳ ವೆಂಟಿಲೇಟರ್‌ಗಳನ್ನಾಗಿ ಮಾರ್ಪಾಡು ಮಾಡಲಾಗುವುದು. ಮಕ್ಕಳಿಗೆ ಸರಿ ಹೊಂದುವ ಮಾಸ್ಕ್ ವಿತರಣೆಗೂ ತಯಾರಿ ನಡೆಸಲಾಗಿದೆ ಎಂದು ಹೇಳಿದರು.

ಅಂಗನವಾಡಿಯಿಂದ ಸ್ವಿರುಲಿನಾ ಚಿಕ್ಕಿ ವಿತರಣೆ ಮಾಡುತ್ತಿದ್ದು, ಇದರ ಜೊತೆಗೆ ಪೌಷ್ಠಿಕಯುಕ್ತ ಆಹಾರ ಪದಾರ್ಥ ವಿತರಿಸಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಮಜರುಗಿಸಲಾಗುವುದು. ಮೂರನೇ ಅಲೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಅಂಗನವಾಡಿಯಲ್ಲಿ ,145811 ಶಾಲೆಯಲ್ಲಿ 2.44 ಲಕ್ಷ ಸೇರಿ ಒಟ್ಟು 3.81ಲಕ್ಷ ಮಕ್ಕಳಿದ್ದಾರೆ. ಈ ಪೈಕಿ 8672 ಅಪೌಷ್ಟಿಕ, 127 ತೀವ್ರ ಅಪೌಷ್ಟಿಕ ಮಕ್ಕಳಿದ್ದಾರೆ. ಸರ್ಕಾರದಿಂದ ಸಿಗುವ ಎಲ್ಲಾ ಪೌಷ್ಟಿಕಾಂಶಗಳನ್ನು ಸೂಕ್ತ ರೀತಿಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಕೃಷಿ ಪಂಡಿತ’ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ

0

Public story


ತುರುವೇಕೆರೆ: 2021-22ನೇ ಸಾಲಿನ ‘ಕೃಷಿ ಪಂಡಿತ’ ಪ್ರಶಸ್ತಿಗೆ ತಾಲ್ಲೂಕಿನ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಪೂಜಾ.ಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2021-22 ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೆ ರೈತರು ಸಮಗ್ರ ಕೃಷಿ ಪದ್ಧತಿಗಳು, ಬೆಳೆ ಪದ್ಧತಿಗಳು, ಬೆಳೆ ವೈವಿಧ್ಯತೆಗಳು ಹಾಗು ನೀರಿನ ಸಮರ್ಥ ಬಳಕೆಯ ಸಮಗ್ರ ಕೃಷಿ ಪದ್ಧತಿ ಇನ್ನಿತರ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹಿಂದೆ ಕೃಷಿ ಪಂಡಿತ್ ಪ್ರಶಸ್ತಿ ಪಡೆದವರು ಮರ್ತೆ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿದಾರರ ಹೆಸರಿನಲ್ಲಿ ಪಹಣಿ ಇರತಕ್ಕದ್ದು. ಅರ್ಜಿಯನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ತುರುವೇಕೆರೆಗೆ ಜುಲೈ 20 ರೊಳಗೆ ಸಲ್ಲಿಸಲುಕೊನೆಯ ದಿನಾಂಕವಾಗಿರುತ್ತದೆಂದು ತಿಳಿಸಿದ್ದಾರೆ.

ಕೋವಿಡ್ ಲಸಿಕೆ ಅಪಪ್ರಚಾರಿಗಳ ವಿರುದ್ಧ ಕ್ರಮ: ಕಡಕೋಳ

ಪಾವಗಡ: ಕೋವಿಡ್ ಲಸಿಕೆ ಬಗ್ಗೆ ಸುಳ್ಳು ಸುದ್ಧಿ ಹರಡಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಎಚ್ಚರಿಸಿದರು.

ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಬುಧವಾರ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಪಟ್ಟಣದ ಬಡಾವಣೆಯೊಂದರಲ್ಲಿ ಲಸಿಕೆ ಹಾಕಿಸಿಕೊಂಡು ವೃದ್ಧೆಯೋರ್ವರು ಮೃತಪಟ್ಟಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿದೆ. ಕೆಲವರು ಯಾವುದೊ ರಾಜ್ಯದಲ್ಲಿನ ಸುಳ್ಳು ಸುಳ್ಳು ಸಂದೇಶಗಳನ್ನು ವಾಟ್ಸ್ ಆಪ್, ಫೇಸ್ ಬುಕ್ ಜಾಲತಾಣಗಳಲ್ಲಿ ಹಂಚಿಕೊಂಡು ಇಲ್ಲ ಸಲ್ಲದ ಗೊಂದಲ ಸೃಷ್ಟಿಸುತ್ತಿರುವ ದೂರುಗಳು ಬರುತ್ತಿವೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ನಿತ್ಯ ಸಾವಿರ ಮಂದಿಗೆ ಲಸಿಕೆ ಹಾಕಿಸಲಾಗುತ್ತಿದೆ. ಪುರಸಭೆ ವ್ಯಾಪ್ತಿಯ ಜನಪ್ರತಿನಿದಿಗಳು, ಗ್ರಾಮ ಪಂಚಾಯಿತಿ ಜನಪ್ರತಿನಿದಿಗಳು ಲಸಿಕೆ ಹಾಕಿಸಲು ಅಧಿಕಾರಿಗಳಿಗೆ ಸಹಕರಿಸಬೇಕು. ಜನರಲ್ಲಿರುವ ಗೊಂದಲ ನಿವಾರಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಬೇಕು ಎಂದರು.

ಡಿವೈಎಸ್ ಪಿ ರಾಮಕೃಷ್ಣ, ತಹಶೀಲ್ದಾರ್ ಕಲ್ಯಾಣಿ ವೆಂಕಟೇಶ್ ಕಾಮ್ಳೆ, ಪುರಸಭೆ ಮುಖ್ಯಾಧಿಕಾರಿ ಅರ್ಚನಾ, ಸದಸ್ಯ ಸುದೇಶ್ ಬಾಬು, ಕಂದಾಯ ಅಧಿಕಾರಿ ನಾಗಬೂಷಣ್, ಗ್ರಾಮ ಲೆಕ್ಕಿಗ ಗಿರೀಶ್ ಉಪಸ್ಥಿತರಿದ್ದರು.

ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ: ತಿಮ್ಮರಾಯಪ್ಪ

ಪಾವಗಡ: ಪ್ರತಿಯೊಬ್ಬರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ತಿಮ್ಮರಾಯಪ್ಪ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲ್ಲ ಸಲ್ಲದ ತಪ್ಪು ಮಾತಗಳನ್ನು ಕೇಳಿ ಲಸಿಕೆ ಹಾಕಿಸಿಕೊಳ್ಳದೆ ಇರಬಾರದು. ಲಸಿಕೆ ಹಾಕಿಸಿಕೊಂಡಲ್ಲಿ ಕೋವಿಡ್ 19 ನಿಯಂತ್ರಿಸಲು ಸಹಾಯವಾಗುತ್ತದೆ. ಗ್ರಾಮಗಳಿಗೆ ಬಂದಾಗ ಜನತೆ ಅಧಿಕಾರಿಗಳಿಗೆ ಸಹಕಾರ ನೀಡಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.

ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಮುಂದುವರೆಸಬೇಕು. ಕೋವಿಡ್ 19 3 ನೇ ಅಲೆ ಬರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿರುವುದು ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಹೀಗಾಗಿ ಈಗಿನಿಂದಲೆ ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ದತೆ ನಡೆಸಬೇಕು. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಲ್ಲಿ 2 ನೇ ಅಲೆಯಲ್ಲಿ ಆದಂತಹ ಅನಾಹುತತಡೆಯಬಹುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾದುಸ್ವಾಮಿ ಅವರು ಅಧಿಕಾರಿಗಳ ಸಭೆ ನಡೆಸಿ ಅಗಯ್ಯ ಸಲಹೆ ಸೂಚನೆ ನೀಡಿ ತಾಲ್ಲೂಕಿನಲ್ಲಿ ಕೋವಿಡ್ 19 ನಿಯಂತ್ರಿಸಲು ಶ್ರಮಿಸಿದ್ದಾರೆ. ಅವರಿಗೆ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಾರವಾಟಪುರ ಗೋವಿಂದಬಾಬು, ಅಲ್ಪ ಸಂಖ್ಯಾತ ಮುಖಂಡ ಯೂನುಸ್, ನಾಗೇಂದ್ರ ಉಪಸ್ಥಿತರಿದ್ದರು.