Tuesday, May 5, 2026
Google search engine
Home Blog Page 139

ಬಿ.ಐ.ಇ.ಆರ್.ಟಿ ಹುದ್ದೆಗಳ ಭರ್ತಿಗೆ ಅರ್ಜಿ

Public story


ತುಮಕೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಡಿ ಸಮನ್ವಯ ಶಿಕ್ಷಣ ಚಟುವಟಿಕೆಯ ತುಮಕೂರು(ದ) ಜಿಲ್ಲಾ ವ್ಯಾಪ್ತಿಯ 6 ತಾಲ್ಲೂಕುಗಳಲ್ಲಿ ಖಾಲಿ ಇರುವ 4 ಬಿ.ಐ.ಇ.ಆರ್‌.ಟಿ (ಪ್ರಾಥಮಿಕ) ಹಾಗೂ 12 ಬಿ.ಐ.ಇ.ಆರ್‌.ಟಿ (ಪ್ರೌಢ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಆರ್.ಸಿ.ಐ ನಿಯಮದಂತೆ ವಿಶೇಷ ಡಿ.ಇಡಿ. & ವಿಶೇಷ ಬಿ.ಇಡಿ ಪದವಿಯ ವಿದ್ಯಾರ್ಹತೆ ಹೊಂದಿರುವವರನ್ನು 2021-22ನೇ ಸಾಲಿಗಾಗಿ “ನೇರ ಗುತ್ತಿಗೆ ಮೂಲಕ ತಾತ್ಕಾಲಿಕ” ವಾಗಿ ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುವುದು.

ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಎಲ್ಲಾ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು ಮತ್ತು ಆರ್.ಸಿ.ಐ ನೋಂದಣಿ (2021-22ನೇ ಸಾಲಿಗೆ) ಪ್ರಮಾಣ ಪತ್ರದೊಂದಿಗೆ ಸ್ವವಿವರವುಳ್ಳ ಮಾಹಿತಿಯನ್ನು ಜೂನ್ 21ರ ಸಂಜೆ 5 ಗಂಟೆಯೊಳಗಾಗಿ ಉಪನಿರ್ದೇಶಕರು ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಮಗ್ರ ಶಿಕ್ಷಣ ಕರ್ನಾಟಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಡಾ|| ರಾಧಾಕೃಷ್ಣನ್ ರಸ್ತೆ, ಎಸ್.ಎಸ್.ಪುರಂ, ತುಮಕೂರು-572102ಇವರಿಗೆ ಅಂಚೆ ಮೂಲಕ ಅಥವಾ ಮುದ್ದಾಂ ತಲುಪಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448999407ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತುಮಕೂರಿನಲ್ಲಿ ಸಂಭಾವ್ಯ ಕೋವಿಡ್ ಮೂರನೇ ಅಲೆಗೆ ಸಜ್ಜು: ಸಭೆ

public story


Tumkuru: ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಹಬ್ಬುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ‌ ಮುಂಜಾಗ್ರತಾ ಕ್ರಮವಾಗಿ‌ ಜಿಲ್ಲೆಗಳಲ್ಲಿ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಸಭೆ ನಡೆಸಲಾಗಿದೆ‌ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ‌ಹಿರಿಯ‌ ನಾಗರಿಕರ ಸಬಲೀಕರಣ ಇಲಾಖಾ ಸಚಿವರಾ ಶಶಿಕಲಾ ಜೊಲ್ಲೆ ತಿಳಿಸಿದರು.

ಜಿಲ್ಲಾ ಪಂಚಾಯತ್ ನಲ್ಲಿ‌ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾದಿಂದ
ರಾಜ್ಯದಲ್ಲಿ ಸುಮಾರು 43 ಮಕ್ಕಳು ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯಡಿ ಇಂತಹ ಮಕ್ಕಳಿಗೆ ಪ್ರತಿ ತಿಂಗಳು 3500 ಸಾವಿರ ರೂ. ಗಳನ್ನು ನೀಡಲಾಗುವುದು. ಅಲ್ಲದೇ ಅನಾಥ ಹೆಣ್ಣುಮಕ್ಕಳ ಭವಿಷ್ಯದ ದೃಷ್ಠಿಯಿಂದ 23 ವರ್ಷ ತುಂಬಿದ ಬಳಿಕ 1 ಲಕ್ಷ ರೂ.‌ನೀಡಲಾಗುವುದು ಎಂದು ಹೇಳಿದರು.

ಸರ್ಕಾರ ರೂಪಿಸಿರುವ ಈ ಯೋಜನಾ ಸೌಲಭ್ಯಗಳನ್ನು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತಲುಪಿಸಿ ಅವರಿಗೆ ನೆರವಾಗಬೇಕು ಎಂದು ಹೇಳಿದರು.

ಜಿಲ್ಲಾಡಳಿತದಿಂದ ಸಕಲ ರೀತಿಯಲ್ಲಿಯೂ ಮೂರನೇ ಅಲೆ ಎದುರಿಸಲು ಸಜ್ಜು‌ ಮಾಡಿಕೊಳ್ಳಲಾಗಿದೆ. ಅಪೌಷ್ಟಿಕತೆಯುಳ್ಳ ಮುಕ್ಕಳಿಗೆ ಸೂಕ್ಷ್ಮ ಪೋಷಕಾಂಶವುಳ್ಳ ವಿಶೇಷ ಆಹಾರ ಕಿಟ್ ನೀಡುವ ಕಾರ್ಯಕ್ಕೆ ಮುಂದಾಗಿರುವ ಕ್ರಮ ಶ್ಲಾಘನೀಯವಾಗಿದೆ. ಅದೇ ರೀತಿ ಪೋಷಕರಿಗೆ ಹೆಚ್ಚು ಅರಿವು ಮೂಡಿಸಲು ಕ್ರಮ ವಹಿಸಲಾಗಿದೆ. ಮಕ್ಕಳನ್ನು ಮತ್ತು ತಾಯಿಯ ಜೊತೆಗೆ ಆರೈಕೆ ಮಾಡಲು ಜಿಲ್ಲಾಡಳಿತ ಕೋವಿಡ್ ಕೇರ್‌ ಸೆಂಟರ್ ಗಳನ್ನು ಗುರುತಿಸಿ ಸಜ್ಜುಗೊಳಿಸಿದೆ‌ ಎಂದು ಮಾಹಿತಿ‌ ನೀಡಿದರು.

*ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ

Public story


ತುಮಕೂರು: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2020-21ನೇ ಸಾಲಿನಲ್ಲಿ 20ಸಾವಿರ ಮಾನವ ದಿನಗಳಿಗಿಂತ ಹೆಚ್ಚಿನ ಉದ್ಯೋಗ ಸೃಜನೆ ಮಾಡಿದ ಗ್ರಾಮ ಪಂಚಾಯತಿಗಳಲ್ಲಿ ಗೌರವಧನದ ಆಧಾರದ ಮೇಲೆ ಗ್ರಾಮ ಕಾಯಕ ಮಿತ್ರರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಕೆಲವು ಗ್ರಾಮ ಪಂಚಾಯಿತಿಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುವುದಿಲ್ಲ ಹಾಗೂ ಇನ್ನು ಕೆಲವು ಗ್ರಾಮ ಪಂಚಾಯಿತಿಗಳಿಗೆ ಅರ್ಜಿಗಳೇ ಸಲ್ಲಿಕೆಯಾಗಿರುವುದಿಲ್ಲ. ಸದರಿ ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಜೂನ್ 21 ರವರೆಗೂ ಕಾಲಾವಕಾಶ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಪಂಚಾಯಿತಿ / ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬಹುದಾಗಿದೆ.

ಗ್ರಾಮ ಕಾಯಕ ಮಿತ್ರ ಹುದ್ದೆಗಳಿಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು ಹಾಗೂ ದಿನಾಂಕ 1-1-2021ಕ್ಕೆ ಅನ್ವಯಿಸುವಂತೆ ತಾನು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಕ್ರಿಯಾ ಶೀಲ ಜಾಬ್ ಕಾರ್ಡ್ (ಉದ್ಯೋಗ ಚೀಟಿ) ಹೊಂದಿರಬೇಕು.
ಕಳೆದ 3 ವರ್ಷ (2018-19, 2019-20 ಹಾಗೂ 2020-21)ಗಳಲ್ಲಿ ಕನಿಷ್ಠ 2 ವರ್ಷ ನರೇಗಾ ಯೋಜನೆಯಡಿ ಅಕುಶಲ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸಿರಬೇಕು ಹಾಗೂ ಅಭ್ಯರ್ಥಿಯ
ವಯೋಮಿತಿ ದಿನಾಂಕ 1-1-2021ಕ್ಕೆ ಅನ್ವಯಿಸುವಂತೆ 45 ವರ್ಷ ಮೀರಿರಬಾರದು.
ಅರ್ಜಿದಾರರಿಗೆ ಓದು ಬರಹ ಚೆನ್ನಾಗಿ ತಿಳಿದಿರಬೇಕು.

ಆಯಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಗಳನ್ನು ಹೊಂದಿರಬೇಕು.
ಈ ಹುದ್ದೆಗೆ ಆಯ್ಕೆಯಾದವರು ಸಮುದಾಯ ಕಾರ್ಯನಿರ್ವಹಣೆ ಮಾಡಲು ನಿರ್ದಿಷ್ಟ ಸಮಯವನ್ನು ನೀಡಬೇಕಾಗುವುದರಿಂದ ತಮ್ಮ ಕುಟುಂಬ ಮತ್ತು ಸಮಾಜದ ಬೆಂಬಲವಿರಬೇಕು.
ಹಿಂದಿನ ವರ್ಷಗಳಲ್ಲಿ ಕಾಯಕ ಬಂಧು ಆಗಿ ಕರ್ತವ್ಯ ನಿರ್ವಹಿಸಿದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು, ವಿಧವೆ ಅಥವಾ ಸಿಂಗಲ್ ಪೇರೆಂಟ್, ವಿಕಲಚೇತನರಿಗೆ ಆಯ್ಕೆಯ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಅಂಕಗಳನ್ನು ನೀಡಲಾಗುವುದು.

ಗ್ರಾಮ ಕಾಯಕ ಮಿತ್ರರನ್ನು 1 ವರ್ಷದ ಅವಧಿಗೆ ಆಯ್ಕೆ ಮಾಡಲಾಗುವುದು.

ಆಸಕ್ತರು ಭರ್ತಿ ಮಾಡಿದ ತಮ್ಮ ಅರ್ಜಿಯೊಂದಿಗೆ
ವಯಸ್ಸಿನ ದೃಢೀಕರಣ ಪತ್ರ, 10ನೇ ತರಗತಿ ಅಂಕಪಟ್ಟಿ, ನಮೂನೆ-೧ ರಲ್ಲಿ ಕಾಯಕಬಂಧು ದೃಢೀಕರಣ ಪತ್ರ, ವಿಕಲಚೇತನರ ವೈದ್ಯಕೀಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಉದ್ಯೋಗ ಚೀಟಿ, ಆಧಾರ್ ಕಾರ್ಡ್, ಭಾವಚಿತ್ರ, ಮತ್ತಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.

ಅರ್ಜಿ ನಮೂನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಗ್ರಾಮ ಪಂಚಾಯತಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ || ವಿದ್ಯಾಕುಮಾರಿ ತಿಳಿಸಿದ್ದಾರೆ.

*ಗ್ರಾಮ ಕಾಯಕ ಮಿತ್ರ ಆಯ್ಕೆಗೆ ಬಾಕಿ ಇರುವ ಗ್ರಾಮ ಪಂಚಾಯಿತಿಗಳ ವಿವರ*
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತಿಮ್ಮನಹಳ್ಳಿ, ಮುದ್ದೇನಹಳ್ಳಿ, ಹಂದನ ಕೆರೆ, ಮಲ್ಲಿಗೆರೆ, ಬರಗೂರು,
ದುಗುಡಿಹಳ್ಳಿ, ಜೆ.ಸಿ.ಪುರ, ದೊಡ್ಡಬಿದರೆ ಸೇರಿದಂತೆ 8; ಗುಬ್ಬಿ ತಾಲೂಕಿನಲ್ಲಿ
ಪೆದ್ದನಹಳ್ಳಿ, ಕೊಪ್ಪ,, ಶಿವಪುರ, ಹಾಗಲವಾಡಿ, ಸಿ.ಎಸ್.ಪುರ, ಬ್ಯಾಡಗೆರೆ, ಅಂಕಸಂದ್ರ ಸೇರಿ ಒಟ್ಟು 7; ಕೊರಟಗೆರೆ ತಾಲೂಕಿನಲ್ಲಿ
ಬುಕ್ಕಾಪಟ್ಟಣ ಗ್ರಾಮ ಪಂಚಾಯತಿ; ಕುಣಿಗಲ್ ತಾಲೂಕಿನಲ್ಲಿ ಉಜ್ಜನಿ,
ಹುತ್ರಿದುರ್ಗ, ಚೌಡನಕುಪ್ಪೆ,
ಡಿ.ಹೊಸಹಳ್ಳಿ, ಭಕ್ತರಹಳ್ಳಿ, ಬಾಗೇನಹಳ್ಳಿ,
ಕೆಂಪನಹಳ್ಳಿ,
ಸಂತೇಮಾವತ್ತೂರು,
ಇಪ್ಪಾಡಿ, ಮಡಿಕೇಹಳ್ಳಿ,
ಕೊಡವತ್ತಿ, ಜೋಡಿಹೊಸಹಳ್ಳಿ, ತೆರೆದಕುಪ್ಪೆ ಸೇರಿ 13 ಗ್ರಾಮ ಪಂಚಾಯತಿ;
ಮಧುಗಿರಿ ತಾಲೂಕಿನಲ್ಲಿ
ಬೇಡತ್ತೂರು, ಬ್ರಹ್ಮಸಮುದ್ರ,
ಬಡವನಹಳ್ಳಿ,
ಕವಣದಾಳ್,
ಸಿದ್ದಾಪುರ,
ಗಂಜಲಗುಂಟೆ,
ದೊಡ್ಡಮಾಲೂರು,
ಬಿಜವರ, ಚಿನಕವಜ್ರ ಸೇರಿ 9 ಗ್ರಾ.ಪಂ.; ಪಾವಗಡ ತಾಲ್ಲೂಕಿನಲ್ಲಿ
ಅರಸೀಕೆರೆ, ಪೋತಗಾನಹಳ್ಳಿ, ಸಾಸಲುಕುಂಟೆ,
ಸಿ.ಕೆ.ಪುರ, ಸಿದ್ದಾಪುರ,
ಕೋಟಗುಡ್ಡ, ತಿರುಮಣಿ,
ಪಾವಗಡ ರೂರಲ್ (ರೊಪ್ಪ),
ಕನ್ನಮೇಡಿ, ನಲಿಗಾನಹಳ್ಳಿ ಸೇರಿದಂತೆ 10‌ ಗ್ರಾಮ ಪಂಚಾಯತಿ; ಶಿರಾ ತಾಲ್ಲೂಕಿನಲ್ಲಿ ಹುಯಿಲ್‌ದೊರೆ,
ಮದಲೂರು,
ಬರಗೂರು,
ಹುಣಸೇಹಳ್ಳಿ, ಚಂಗಾವರ,
ಲಕ್ಷ್ಮೀಸಾಗರ, ರತ್ನಸಂದ್ರ ಸೇರಿ 7 ಗ್ರಾಮ ಪಂಚಾಯತಿ; ತಿಪಟೂರು ತಾಲೂಕಿನಲ್ಲಿ
ತಡಸೂರು, ಮತ್ತೀಹಳ್ಳಿ,
ಹುಣಸೇಘಟ್ಟ,
ಹಾಲ್ಕುರಿಕೆ ಸೇರಿದಂತೆ 4 ಗ್ರಾಮ ಪಂಚಾಯತಿ;
ತುರುವೇಕೆರೆ ತಾಲೂಕಿನಲ್ಲಿ ತಾಳೇಕೆರೆ, ಲೋಕಮ್ಮನಹಳ್ಳಿ,
ಮಣಿಚೆಂಡೂರು, ಕಣತ್ತೂರು, ಆನೆಕೆರೆ, ಅರೆಮಲ್ಲೇನಹಳ್ಳಿ,
ವಡವನಘಟ್ಟ,
ಬಾಣಸಂದ್ರ,
ಶೆಟ್ಟಿಗೊಂಡನಹಳ್ಳಿ,
ಮಾವಿನಕೆರೆ, ದಂಡಿನಶಿವರ,
ಸಂಪಿಗೆ ಹೊಸಹಳ್ಳಿ, ಕೊಂಡಜ್ಜಿ, ಅಮ್ಮಸಂದ್ರ
ಸೇರಿದಂತೆ 14 ಗ್ರಾಮ ಪಂಚಾಯತಿಗಳಿಗೆ ಅರ್ಹ ಅಭ್ಯರ್ಥಿಗಳು ಗ್ರಾಮ ಕಾಯಕ ಮಿತ್ರ ಹುದ್ದೆಗಾಗಿ ಜೂನ್ 21 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಸ್ನೇಹಿತನ ಕಣ್ಣಲ್ಲಿ ಸಂಚಾರಿ ವಿಜಯ್

0

ಸಂಚಾರಿ ವಿಜಯ್ ಜತೆ ವೆಂಕಟಾಚಲ ಹೆಚ್.ವಿ.

  • ನಟ ಸಂಚಾರಿ ವಿಜಯ್ ಹಾಗೂ ಮೈತ್ರಿ ನ್ಯೂಸ್ ಸಂಪಾದಕರಾದ -ವೆಂಕಟಾಚಲ.ಹೆಚ್.ವಿ ಒಂದೇ ಊರಿನವರು. ವಿಜಯ್ ಅವರನ್ನು ಎತ್ತಿ ಆಡಿ ಬೆಳೆಸಿದ ವೆಂಕಾಟಚಲ ಅವರ ಬರಹ ಕಣ್ಣಲ್ಲಿ ನೀರಾಡಿಸುತ್ತದೆ.

ತರಲೆ ತುಂಟಾಟ ಎಂದರೆ ತುಂಬಾ ಪ್ರಿಯವಾದದ್ದು, ಆತನಿಗೆ ಸಂಚಾರ ಮಾಡುವುದೆಂದರೆ ಬಹಳ ಇಷ್ಟ, ಆತ ಹಲವಾರು ಸಲ ಈ ತರಲೆಯಿಂದಲೆ ತುಂಟ ಎಂಬ ಬಿರುದನ್ನು ಪಡೆದುಕೊಂಡವನು, ಈ ತುಂಟ ಹುಡುಗನೇ ನಾನು ಅವನಲ್ಲ ಅವಳು ಚಲನ ಚಿತ್ರದ ನಟನೆಗೆ ಅತ್ಯುತಮ ನಟನ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡವನೇ ಸಂಚಾರಿ ವಿಜಯ್.

ಸಂಚಾರಿ ವಿಜಯನದು ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿಯ ರಂಗಾಪುರ, ವಿಜಯ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಂಚನಹಳ್ಳಿಯಲ್ಲಿ ಮುಗಿಸಿದವನು, ಈತನ ತಂದೆ ಬಸವರಾಜಪ್ಪನವರು ಕಂದಾಯ ಇಲಾಖೆಯ ನೌಕರರಾದರೆ, ತಾಯಿ ಗೌರಮ್ಮ ಪಂಚನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಸರ್್ ಆಗಿದ್ದರು. ತಂದೆ ಬಸವರಾಜಪ್ಪನವರು ತಬಲ ನುಡಿಸುತ್ತಿದ್ದರು, ತಾಯಿ ಗೌರಮ್ಮನವರು ಒಳ್ಳೆಯ ಜಾನಪದ ಗಾಯಕರಾಗಿದ್ದರು, ಭದ್ರಾವತಿಯ ಆಕಾಶವಾಣಿಯಲ್ಲಿ ಹಾಡುತ್ತಿದ್ದರು.

ಗೆಳೆಯ, ಪ್ರಜಾವಾಣಿ ಹಿರಿಯ ಪತ್ರಕರ್ತರಾದ ಡಿ.ಎಂ.ಕುರ್ಕೆ ಅವರ ಜತೆ ಸಂಚಾರಿ ವಿಜಯ್

ಸಂಚಾರಿ ವಿಜಯ್ ಕೂಡ ನಾನು ಓದುತ್ತಿದ್ದ ಪಂಚನಹಳ್ಳಿಯ ಶಾಲೆಯಲ್ಲಿಯೆ ಓದಿದ ಹುಡುಗ, ಆತ ನಮಗಿಂತ ಸುಮಾರು ಹನ್ನೆರಡು ವರ್ಷ ಚಿಕ್ಕವನು, ಪ್ರಾಥಮಿಕ ಶಾಲಾ ಹಂತದಲ್ಲೇ ಆತ ತುಂಬ ಚೂಟಿಯಾದ ಹುಡುಗಾನಾಗಿದ್ದಲ್ಲದೆ, ಆತನ ತಾಯಿ ಗೌರಮ್ಮ ಹಲವಾರು ಕಾರ್ಯಕ್ರಮಗಳಲ್ಲಿ ಹಾಡಲು ಬಂದಾಗ, ಅಮ್ಮನ ಜೊತೆ ಬರುತ್ತಿದ್ದ ವಿಜಯ್ ನಮ್ಮನ್ನು ಕಂಡ ಕೂಡಲೇ ಓಡಿ ಬರುತ್ತಿದ್ದ, ಆತ ಬಂದವನು ಸುಮ್ಮನಿರುತ್ತಿರಲಿಲ್ಲ ತರಲೆ ಜೊತೆಗೆ ಅಲ್ಲಿದವರನ್ನೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಕೀಟಲೆ ಮಾಡುವ ಹುಡುಗನಾಗಿದ್ದ.

ಅವರ ಮನೆಯು ಪಂಚನಹಳ್ಳಿಯ ಆಸ್ಪತ್ರೆಯ ಆವರಣದಲ್ಲಿ ಇದ್ದರೂ ವಿಜಯ್ ಮಾತ್ರ ಯಾವಾಗಲೂ ಆ ಕಾಂಪೌಂಡ್ನಿಂದ ಆಚೆ ತಮ್ಮ ಗೆಳೆಯರ ಜೊತೆ ಚಿನ್ನಿದಾಂಡು, ಕ್ರಿಕೆಟ್, ರಜಾ ದಿನಗಳಲ್ಲಿ ತಮ್ಮ ಗೆಳೆಯರ ಜೊತೆ ಪಂಚನಹಳ್ಳಿಯ ತೋಟಗಳಿಗೆ ಹೋಗಿ ಬರುವುದು ವಿಜಯ್ಗೆ ತುಂಬಾ ಖುಷಿ ಕೊಡುತ್ತಿತ್ತು, ಚಿತ್ರಕಲೆಯಲ್ಲಿ ಮತ್ತು ರಂಗಭೂಮಿಯಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ ಹೊಂದಿದ್ದ ವಿಜಯ್ ಇಂಜಿನಿಯರ್ ಮುಗಿಸಿದ ನಂತರ ಕೆಲ ಕಾಲ ಅರೆಕಾಲಿಕ ಉಪನ್ಯಾಸಕರಾಗಿದ್ದರೂ, ರಂಗಭೂಮಿ ಆಸಕ್ತಿ ಇದ್ದದರಿಂದ ಸಂಚಾರಿ ಥಿಯೇಟರ್ ರಂಗತಂಡದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ನಾನು ಅವನಲ್ಲ ಅವಳು ಚಿತ್ರದ ತೃತೀಯ ಲಿಂಗ ಪಾತ್ರಕ್ಕೆ ಸಂಚಾರಿ ವಿಜಯ್ಗೆ ಅತ್ಯುತಮ ನಟ ರಾಷ್ಟ್ರ ಪ್ರಶಸ್ತಿ ಲಭಿಸಿದ ಮೇಲೆ ಚಿತ್ರರಂಗದಲ್ಲಿ ಬಹುಮುಖ್ಯ ನಟನಾಗಿ ಗುರುತಿಸಿಕೊಂಡಿದ್ದ ವಿಜಯ್ ತಾನು ಓದಿ-ಬೆಳೆದ ಪಂಚನಹಳ್ಳಿ ಮತ್ತು ಪಂಚನಹಳ್ಳಿಯ ಬಾಲ್ಯದ ಗೆಳೆಯರು ಅಂದರೆ ತುಂಬಾ ಹಚ್ಚಿಕೊಂಡಿದ್ದರು, ಪಂಚನಹಳ್ಳಿಯಲ್ಲಿ ನಾನು ಕನ್ನಡ ಮಾಧ್ಯಮದಲ್ಲಿ ಓದಿದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ವಿಜಯ್.

ಪಂಚನಹಳ್ಳಿಯ ಜನರು ಮತ್ತು ಗೆಳೆಯರು ನಮ್ಮ ಊರಿನವರೊಬ್ಬರು ಫಿಲ್ಮ್ ಆಕ್ಟರ್ ಇದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು, ಸಮಯ ಸಿಕ್ಕಾಗಲೆಲ್ಲಾ ಪಂಚನಹಳ್ಳಿಗೆ ಬರುತ್ತಿದ್ದ ವಿಜಯ್ ತಮ್ಮ ಶಾಲಾ ಗೆಳೆಯರ ಜೊತೆ ನಾನೊಬ್ಬ ನಟ ಅನ್ನುವುದನ್ನು ಮರೆತು ಸಾಮಾನ್ಯರಂತೆ ಇದ್ದು ಬಿಡುತ್ತಿದ್ದರು.

ಚಿತ್ರರಂಗಕ್ಕೆ ತುಂಬಾ ಶ್ರಮ ಮತ್ತು ಪ್ರತಿಭೆಯ ಮೂಲಕ ಬಂದ ವಿಜಯ್ ಯಾವುದೇ ವಿವಾದಗಳಿಲ್ಲದೆ ತಮ್ಮ ವೃತ್ತಿ ಬದುಕನ್ನು ಮತ್ತಷ್ಟು ವಿಸ್ತರಿಸುವ ಕನಸನ್ನು ಕಟ್ಟಿಕೊಂಡವರು, ಇದರ ಜೊತೆಗೆ ಅವರು ಹಗಲು ರಾತ್ರಿ ಓದುವ ಹವ್ಯಾಸವನ್ನು ಇಟ್ಟುಕೊಂಡಿದ್ದರು, ಸ್ವಪ್ನ ಹೌಸ್ಗೆ ಯಾವುದೇ ಹೊಸ ಪುಸ್ತಕ ಬಂದರೂ ಸ್ವತಃ ಅವರೆ ಹೋಗಿ ತರುತ್ತಿದ್ದರು.

ತುಂಬಾ ಒಳ್ಳೆಯತನದ ಜೊತೆಗೆ ಹೃದಯವಂತಿಕೆ ಇಟ್ಟುಕೊಂಡಿದಂತಹ ವಿಜಯ್ ಕೋವಿಡ್-19ರ ಸಂದರ್ಭದಲ್ಲಿ ತಮ್ಮ ನಿರೀಕ್ಷೆಗೂ ಮೀರಿ ಸಹಾಯ ಹಸ್ತ ನೀಡಿದರು, ಇವರ ತಂದೆ ತಾಯಿ ಇಬ್ಬರೂ ಸಕರ್ಾರಿ ನೌಕರರಾಗಿದ್ದರೂ ಇವರು ಇನ್ನೂ ಓದುತ್ತಿರುವಾಗಲೆ ಅಕಾಲಿಕ ಮರಣ ಹೊಂದಿದ್ದರಿಂದ ವಿಜಯ್ ತುಂಬಾ ಸಂಕಷ್ಟಗಳನ್ನು ಎದುರಿಸಬೇಕಾಯಿತು.

ಇಂತಹ ಸುಂದರ ಹುಡುಗ ಕನ್ನಡ ಚಲನ ಚಿತ್ರರಂಗದಲ್ಲಿ ಇನ್ನೂ ಬಹು ದೂರ ಸಾಗ ಬೇಕಾಗಿತ್ತು, ಆದರೆ ಸಾವು ವಿಜಯ್ ಅವರಿಗೆ ಅಪಘಾತದ ನೆಪದಲ್ಲಿ ಬಂದದ್ದು ಒಳ್ಳೆಯತನ ಬದುಕಲು ಬಿಡುವುದಿಲ್ಲ ಅನ್ನಿಸುತ್ತದೆ, ಇಂತಹ ಪ್ರತಿಭೆಯನ್ನು ಕಳೆದುಕೊಂಡ ಚಿತ್ರರಂಗವೊಂದು ಕಡೆ ಬಡವಾದರೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಪಂಚನಹಳ್ಳಿ ಈಗ ತನ್ನ ನೆಲದಲ್ಲಿ ರೂಪಿಸಿದ್ದ ಕಲಾವಿದನೊಬ್ಬನನ್ನು ಕಳೆದುಕೊಂಡಿದೆ, ಸಂಚಾರಿ ವಿಜಯ್ ಕಡೂರು ತಾಲ್ಲೂಕಿನಂತೆಯೆ ಅರಸೀಕೆರೆ, ತಿಪಟೂರು ತಾಲ್ಲೂಕುಗಳಲ್ಲೂ ತಮ್ಮ ಊರಿನ ಕಡೆಯ ನಟ ಎಂಬ ಖ್ಯಾತಿಯನ್ನು ಗಳಿಸಿಕೊಂಡಿದ್ದರು.

ನಾನು, ನನ್ನ ಗೆಳೆಯರಾದ ರವಿ, ಅಪ್ಪಾಜಿ, ಚಂದ್ರಶೇಖರ್, ರಮೇಶ್ ಮುಂತಾದವರೆಲ್ಲಾ ಎತ್ತಿ ಆಡಿಸಿದ್ದಲ್ಲದೆ ಆತನ ತರಲೆಗಳಿಗೆ ನಾವೆಲ್ಲಾ ಸಾತು ಕೊಟ್ಟು ತಮಾಷೆ ನೋಡುತ್ತಿದ್ದವರು, ಸಂಚಾರಿ ವಿಜಯ್ಗೆ ಕೆಂಚಮಾರಯ್ಯ ಮಾಸ್ಟರ್ ಎಂದರೆ ಬಹಳ ಪ್ರೀತಿ, ವಿಜಯ್ಗೆ ರಾಷ್ಟ್ರ ಪ್ರಶಸ್ತಿ ಬಂದಾಗ ಕೆಂಚಮಾರಯ್ಯನವರ ಮನೆಯಲ್ಲಿಯೆ ಸನ್ಮಾನವನ್ನು ಮಾಡಲಾಯಿತು.

ಆಗಾಗ್ಗೆ ಕೆಂಚಮಾರಯ್ಯನವರನ್ನು ಕಾಣಬೇಕು ಅನ್ನುತ್ತಿದ್ದ ವಿಜಯ್, ಕೆಂಚಮಾರಯ್ಯನವರಿಗೆ 2021 ಫೆಬ್ರವರಿಯಲ್ಲಿ 75 ವರ್ಷ ತುಂಬಿದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭಕ್ಕೆ ಬರಬೇಕೆಂಬ ಒತ್ತಾಸೆಯಿದ್ದರೂ ಶೂಟಿಂಗ್ ಇದ್ದ ಕಾರಣ ಬರಲಿಲ್ಲ, ಆ ನಂತರ ಕೊರೊನಾದ ಎರಡನೇ ಅಲೆ ಪ್ರಾರಂಭವಾದ ಕಾರಣ ವಿಜಯ್ ಎಲ್ಲಿಯೂ ಹೋಗಲಾಗಲಿಲ್ಲ, ಆದರೆ ಜೂನ್ 12ರ ರಾತ್ರಿ 11 ಗಂಟೆಯಲ್ಲಿ ಅಪಘಾತಕ್ಕೊಳಗಾಗಿ ಸಂಚಾರ ಮುಗಿಸಿದ್ದಾರೆ. ಈಗ ಸಂಚಾರಿ ವಿಜಯ್ ನೆನಪು ಮಾತ್ರ.

ಶುಭ ಸುದ್ದಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಶೇ.4.5 ರಷ್ಟಕ್ಕೆ ಇಳಿಕೆ

Public story


ತುಮಕೂರು: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ಗಣನೀಯವಾಗಿ ತಗ್ಗಿದೆ. ಕೊರೋನಾ ಎರಡನೇ ಅಲೆ ಆರಂಭದಲ್ಲಿ ಶೇ.40ಕ್ಕಿಂತ ಹೆಚ್ಚಿದ್ದ ಪಾಸಿಟಿವಿಟಿ ಪ್ರಮಾಣ ಪ್ರಸ್ತುತ ಶೇ. 4.5 ರಷ್ಟಕ್ಕೆ ಇಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮಾಹಿತಿ‌ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪೂರ್ಣ ನಿಯಂತ್ರಣಕ್ಕೆ ಜಿಲ್ಲಾಡಳಿತ ಶ್ರಮಿಸುತ್ತಿದೆ. ಪ್ರತಿನಿತ್ಯ 6,500‌ ಯಿಂದ 7000 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸರ್ಕಾರದ ನಿರ್ದೇಶನದಂತೆ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗಿದ್ದು, ಮುಂದಿನ 15 ದಿನಗಳ ಕಾಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಸತತವಾಗಿ ನಡೆಸಲು ನಿರ್ಧರಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ವ್ಯಕ್ತಿ ಚಿಕಿತ್ಸೆಗೆ ಬಂದರೆ ಅವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲು‌ ಸೂಚಿಸಲಾಗಿದೆ ಎಂದರು.

ಆರೋಗ್ಯ ಇಲಾಖೆಯೊಂದಿಗೆ ನಡೆದ ಸಭೆಯಲ್ಲಿ ಮಾರುಕಟ್ಟೆ, ಬ್ಯಾಂಕ್ ಸೇರಿದಂತೆ ಅತೀ ಹೆಚ್ಚು ಜನಸಂದಣಿ ಸೇರಲು ನಿರೀಕ್ಷಿಸಲಾಗಿರುವ ಪ್ರದೇಶಗಳಾದ ಗಾರ್ಮೆಂಟ್ಸ್, ಆಹಾರ ತಯಾರಿಕಾ ಕೈಗಾರಿಕೆ ಹಾಗೂ ಇತರೆ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬ್ಯಾಂಕ್, ಪೆಟ್ರೋಲ್ ಬಂಕ್ , ಕೋ ಆಪರೇಟಿವ್ ಸೊಸೈಟಿ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೋಂಕಿನ ಲಕ್ಷಣಗಳುಳ್ಳ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಗಾಗಲು ಸೂಚಿಸಲಾಗಿದೆ ಎಂದರು.

*ಅನಗತ್ಯ ಸಂಚಾರ ಬೇಡ* ಲಾಕ್ ಡೌನ್ ಸಡಿಲಿಕೆಯಾಗಿದೆ ಎಂಬ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ತಿರುಗಾಡಬಾರದು. ಅವಶ್ಯವಿದ್ದರಷ್ಟೇ ಮನೆಯಿಂದ ಹೊರಬರಬೇಕು. ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೊರೋನಾ ಲಕ್ಷಣಗಳು‌ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ‌ ಆರೋಗ್ಯ ಕೇಂದ್ರದಲ್ಲಿ‌ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅತಿಥಿ ಶಿಕ್ಷಕರ‌ ನೋವಿಗೆ ಕರಗಿದ ಜಪಾನಂದ ಶ್ರೀ: ಶಿಕ್ಷಕರಿಗೆ ಸರ್ಕಾರ ನೆರವಾಗಲಿ…

Public story


ಪಾವಗಡ: ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸುವತ್ತ ಸರ್ಕಾರ ಒತ್ತು ನೀಡಬೇಕು ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜಿ ತಿಳಿಸಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಸೋಮವಾರ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರಿಗೆ ಪಡಿತರ ಕಿಟ್ ವಿತರಿಸಿ ಅವರು ಮಾತನಾಡಿದರು.
ಅತಿಥಿ ಶಿಕ್ಷಕರ ಸೇವೆ “ಹೈರ್ ಅಂಡ್ ಫೈರ್” ಎಂಬಂತಾಗಿದೆ. ಅಗತ್ಯವಿರುವಾಗ ಅವರ ಸೇವೆ ಬಳಸಿಕೊಂಡು ನಂತರ ಕೈಬಿಟ್ಟರೆ ಜೀವನ ನಡೆಸುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ಎಲ್ಲ ಶಿಕ್ಷಕರಿಗೂ ಸೂಕ್ತ ಸ್ಥಾನಮಾನ ದೊರಕಬೇಕು. ಶೀಘ್ರದಲ್ಲಿಯೇ ಸೇವಾ ಭದ್ರತೆ ನೀಡಬೇಕು. ಈ ನಿಟ್ಟಿನಲ್ಲಿ ಸಚಿವರು,, ಅಧಿಕಾರಿಗಳಲ್ಲಿ ವಿಚಾರ ವಿಮರ್ಶೆ ಮಾಡಲಾಗುವುದು ಎಂದರು.

ಪುರಸಭೆ ಸದಸ್ಯ ಜಿ.ಎಸ್. ಸುದೇಶ್ ಬಾಬು, ಶಿಕ್ಷಕರು ಖಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಮೂರನೆ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ತಿಳಿಸುತ್ತಿದ್ದಾರೆ. ಹೀಗಾಗಿ ಪೋಷಕರು, ಶಿಕ್ಷಕರು ಲಸಿಕೆ ಪಡೆದಲ್ಲಿ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ನಾವುಗಳೆ ಮಕ್ಕಳ ಜೀವಕ್ಕ ಅಪಾಯವಾಗಬೇಕಾಗುತ್ತದೆ ಎಂದರು.

ಅನುದಾನ ರಹಿತ ಶಾಲೆಗಳ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸನ್ನ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಪವನ್ ಕುಮಾರ್ ರೆಡ್ಡಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜು, ಶಿವಕುಮಾರ್, ಸಾದಿಕ್, ವಿವೇಕ ಬ್ರಿಗೇಡಿನ ಲೋಕೇಶ್ ದೇವರಾಜ್, ವೇಣುಗೋಪಾಲರೆಡ್ಡಿ ಉಪಸ್ಥಿತರಿದ್ದರು.

ಶಿರಾದಲ್ಲಿ ಕವಿ ಸಿದ್ದಲಿಂಗಯ್ಯ ನೆನಪು: ಶಂಕರಯ್ಯ ಅವರ ಕಣ್ಣಲ್ಲಿ ಕ್ರಾಂತಿ ಕವಿಯ ಚಿತ್ರಣ…

Public story


ಸಿರಾ: ವಿದ್ಯಾರ್ಥಿ ದಿಶೆಯಿಂದಲೇ ಅನೇಕ ಚಳುವಳಿಗಳಲ್ಲಿ ಭಾಗವಹಿಸುವುದರೊಂದಿಗೆ ತಮ್ಮ ಸಾಹಿತ್ಯ ಕೃಷಿಯ ಮೂಲಕ ತಮ್ಮ ಅನುಭವಲೋಕವನ್ನು ವಿಸ್ತರಿಸಿಕೊಂಡಿದ್ದ ಡಾ.ಸಿದ್ದಲಿಂಗಯ್ಯನವರು ಜಗತ್ತು ಇರುವವರೆಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಉಳಿಯುವವರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಸೋಮವಾರ ಬಿಆರ್‌ಸಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗಯ್ಯನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಿದ್ದಲಿಂಗಯ್ಯನವರು ತುಳಿತಕ್ಕೊಳಗಾದವರ, ದೀನದಲಿತರ ಸಿಟ್ಟು-ಸೆಡರು ಆಕ್ರಂದನಗಳನ್ನು ತನ್ನ ಸಾಹಿತ್ಯದ ಮೂಲಕ ನವ್ಯದ ಅಂತರ್ಮುಖಿ ನೆಲೆಗಳಿಗೆ ತಮ್ಮ ಬಹಿರ್ಮುಖಿ ಕವಿತೆಗಳ ಮೂಲಕ ಸಮರ್ಥವಾಗಿ ತಿಳಿಸಿದ್ದರು. ಅವರ ಆತ್ಮಕಥೆ ಊರುಕೇರಿ ಎರಡು ಭಾಗದಲ್ಲಿ ಪ್ರಕಟಗೊಂಡು, ಇಂಗ್ಲೀಷ್‌ ಮತ್ತು ತಮಿಳು ಭಾಷೆಗೆ ಅನುವಾದಗೊಂಡಿದ್ದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಸ್ಮಶಾನದ ಕಲ್ಲುಗಳ ಮೇಲೆ ರಚಿತವಾದ ಅವರ ಪದ್ಯ ಮತ್ತು ಹಾಡುಗಳು ರಾಜ್ಯದ ಬಹುತೇಕ ಜನರ ಆತ್ಮಗೀತೆಗಳೇ ಆಗಿವೆ ಎಂದು ಅವರ ಸಾಹಿತ್ಯ ರಚನೆಯ ಕುರಿತು ವಿವರಿಸಿದರು.

ದಲಿತ ಮುಖಂಡ ಹಾಗೂ ಹೋರಾಟಗಾರ ಜೆ.ಎನ್.ರಾಜಸಿಂಹ ಮಾತನಾಡಿ, ದೀನದಲಿತರ ನಾಡಿಮಿಡಿತ ಅರಿತಿದ್ದ ಡಾ.ಸಿದ್ದಲಿಂಗಯ್ಯನವರು ಸಾಹಿತ್ಯದ ಮೂಲಕ ಎತ್ತರಕ್ಕೆ ಬೆಳೆದು, ಸಮಾಜವನ್ನೂ ಬೆಳೆಯುವಂತೆ ಮಾಡಿದರು.ಅವರ ಸಾಹಿತ್ಯವು ಮೆರವಣಿಗೆ, ಹೋರಾಟ, ಚಳುವಳಿ, ಬೀದಿ ನಾಟಕಗಳಿಗೆ ಜೀವಂತಿಕೆ ತಂದುಕೊಟ್ಟಿದೆ ಅಲ್ಲದೇ ಸಮುದಾಯದ ಜಾಥಾಗಳ ಮೂಲಕ ಮನೆಮಾತಾಗಿ, ದಲಿತರಿಗೆ ಸಂಬಂಧಿಸಿದ ವಿಷಯಗಳು ಬರವಣಿಗೆ ರೂಪದಲ್ಲಿ ಹೊರಬರುವಂತೆ ನೋಡಿಕೊಂಡರು. ಜನರ ಆಕ್ರೋಶ, ದುಗುಡ ಕನಸುಗಳನ್ನು ತನ್ನದೇ ಆದ ಬರಹಗಳ ಮೂಲಕ ಜನರಿಗೆ ತಿಳಿಸುವ ಮೂಲಕ ಎಂದೆಂದಿಗೂ ಅಜರಾಮರ ಎಂದು ಬಣ್ಣಿಸಿದರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎನ್.ಕುಮಾರ್‌ ಮಾತನಾಡಿ, ದಲಿತ-ಬಂಡಾಯ ಸಾಹಿತ್ಯ ಮತ್ತು ದಲಿತ ಚಳುವಳಿಗಳ ಚರಿತ್ರೆಯನ್ನು ಬರೆದವರಲ್ಲಿ ಡಾ.ಸಿದ್ದಲಿಂಗಯ್ಯನವರು ಪ್ರಮುಖ ಪಾತ್ರ ವಹಿಸಿದ್ದರು. ದಲಿತ ಸಾಹಿತ್ಯದ ಆದಿಕವಿ ಎಂದೇ ಕರೆಯಿಸಿಕೊಳ್ಳುವ ದಿವಂಗತರು ಸರಳ ಪದಗಳಲ್ಲಿ ಧ್ವನಿಪೂರ್ಣ ರೂಪಕಗಳಲ್ಲಿ ಹಾಡುಕಟ್ಟುವ ಪ್ರತಿಭೆ ಕರಗತವಾಗಿತ್ತು. ಇವರನ್ನು ಕೇವಲ ದಲಿತ ಕವಿ ಎಂದು ಸೀಮಿತಗೊಳಿಸಿದರೆ ಅವರಿಗೆ ಅಪಮಾನ ಮಾಡಿದಂತಾಗುತ್ತದೆ. ಇಡೀ ಸಮಾಜಕ್ಕೆ ಸಂದೇಶ ನೀಡುವಂತಹ ನಾಟಕ, ಕಾವ್ಯ ಹಾಗೂ ಆತ್ಮಕಥನಗಳನ್ನು ಅಧ್ಯಯನ ಮಾಡಿದಾಗ, ಹಸಿದವರ, ಶೋಷಿತರ ಪರವಾದ ನಿಲುವು ಎದ್ದಕಾಣುತ್ತದೆ. ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ ಅವರು ಹುಟ್ಟುಹಾಕಿದ ಚಳುವಳಿಗಳು, ಸಂದೇಶಗಳು ಎಂದೆಂದಿಗೂ ಜೀವಂತವಾಗಿವೆ ಎಂದರು.

ಯುವ ಮುಖಂಡ ರೂಪೇಶ್‌ ಎಸ್.ಎನ್.ಕೃಷ್ಣಯ್ಯ ಮಾತನಾಡಿ, ವಿಧಾನ ಪರಿಷತ್‌ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರ, ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿರುವ ಕೆಲಸಗಳು ಇಂದಿಗೂ ಜೀವಂತವಾಗಿವೆ. ಇವರು ಸಾಹಿತ್ಯ ಕೃಷಿ ಇನ್ನೂ ಅವಶ್ಯಕತೆ ಇತ್ತು. ವಿಧಿಯಾಟ ಅವರ ಬದುಕನ್ನು ಇಲ್ಲಿಗೇ ಕೊನೆಗೊಳಿಸಿದೆ. ನೋವನ್ನುಂಡು, ದನಿ ಇಲ್ಲದ ಸಣ್ಣಪುಟ್ಟ ಸಮುದಾಯಗಳಿಗೂ ಗಟ್ಟಿ ದನಿಯಾಗಿ, ಹೋರಾಟದ ಕಹಳೆಯೂದಿದ ಅವರು ಕನ್ನಡ ಬರಹ ಮತ್ತು ಅಭಿವ್ಯಕ್ತಿಯ ಹೊಸ ಛಾಪನ್ನೇ ಮಾಡಿಸಿದ್ದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ದ್ವಾರನಕುಂಟೆ ಲಕ್ಷ್ಮಣ್‌ ಮಾತನಾಡಿ, ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ್ದ ಭಾಷಣ ಸರ್ಕಾರದಲ್ಲಿ ಹೊಸ ಛಾಪನ್ನೇ ಮೂಡಿಸಿತ್ತು ಎಂದು ನೆನಪಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಚಿದಾನಂದ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಸಿದ್ದಲಿಂಗಯ್ಯನವರು ಕವಿ, ಲೇಖಕ, ಅಧ್ಯಾಪಕ, ಉತ್ತಮ ಆಡಳಿತಗಾರ, ವಿಮರ್ಶಕ, ಶಾಸಕ ಹಾಗೂ ನಾಟಕಕಾರರಾಗಿ ಸಲ್ಲಿಸಿರುವ ಸಾಹಿತ್ಯ ಸೇವೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮೂಲಕ ಅವರ ಹೆಸರನ್ನು ಉಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ಶಿಕ್ಷಣ ಸಂಯೋಜಕ ಬಿ.ವಿ.ಕೆಂಚಪ್ಪ, ಸಿ.ಆರ್.ಪಿ. ಆರ್‌.ತಿಪ್ಪೇಸ್ವಾಮಿ, ರೇವಣಸಿದ್ದಯ್ಯ, ಜಿ.ಟಿ.ಕುಮಾರ್‌, ಶಿಕ್ಷಕ ಮಹಾದೇವಪ್ಪ ಇತರರು ಹಾಜರಿದ್ದರು.

ಬಡವರ ಕೈ ಹಿಡಿದ ಶಾಸಕ ವೆಂಕಟರವಣಪ್ಪ

Public story


ಪಾವಗಡ: ಲಾಕ್ ಡೌನ್ ಸಡಿಲಿಕೆಯಾಗಿದೆ ಎಂದು ಜನತೆ ಮೈ ಮರೆಯಬಾರದು ಎಂದು ಶಾಸಕ ವೆಂಕಟರವಣಪ್ಪ ಎಚ್ಚರಿಸಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಗೃಹ ರಕ್ಷಕ ಧಳದ ಸಿಬ್ಬಂದಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್ 19 ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿಲ್ಲ. ಸಂಪೂರ್ಣವಾಗಿ ಇಳಿಕೆಯಾಗುವವರೆಗೆ ಜನತೆ ಅನಗತ್ಯವಾಗಿ ಓಡಾಡದೆ ಎಚ್ಚರಿಕೆ ವಹಿಸಬೇಕು. ಲಾಕ್ ಡೌನ್ ಸಡಿಲಿಕೆಯಾಗಿದೆ ಎಂದು ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜಾಗ್ರತೆಯಿಂದ ಇರಬೇಕು ಎಂದರು.

ಕೋವಿಡ್ 19 ನಿಂದ ತೊಂದರೆಯಲ್ಲಿರುವವರಿಗೆ ಸಹಾಯ ಮಾಡುವ ಮುಖಾಂತರ ಸಾಕಷ್ಡು ಮಂದಿ ಮಾನವೀಯತೆ ಮೆರೆಯುತ್ತಿದ್ದಾರೆ. ದೇಶದೆಲ್ಲೆಡೆ ದಾನಿಗಳ ಸಂಖ್ಯೆ ಹೆಚ್ಚಿದೆ. ಆಹಾರ, ಪಡಿತರ, ತರಕಾರಿ, ಔಷಧಿ, ವೈದ್ಯಕೀಯ ಸಲಕರಣೆಗಳನ್ನು ಕೊಡುವ ಮೂಲಕ ನೆರೆ ಹೊರೆಯವರಿಗೆ ಸಹಾಯ ಹಸ್ತ ಚಾಚಲಾಗುತ್ತಿದೆ. ತಾಲ್ಲೂಕಿನಲ್ಲಿಯೂ ಇಂತಹ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಗೃಹರಕ್ಷಕ ದಳದ ಜಿಲ್ಲಾ ಅಧಿಕಾರಿ ಆರ್.ಪಾತಣ್ಣ, ಜಿಲ್ಲೆಯಾದ್ಯಂತ 450 ಮಂದಿ ಕೋವಿಡ್ ನಿಯಂತ್ರಿಸಲು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಶೇ85 ರಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಉಳಿದವರೂ ಶೀಘ್ರ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೊರೊನಾ ವಾರಿಯರ್ಸ್ ಗಳಾದ ಗೃಹರಕ್ಷಕ ಧಳದ ಸಿಬ್ಬಂದಿಗೆ ಸಿದ್ದಾರ್ಥ ಕನ್ ಸ್ಟ್ರಕ್ಷನ್ಸ್ ವತಿಯಿಂದ ಪಡಿತರ ಕೊಡಿಸಿರುವ ಶಾಸಕ ವೆಂಕಟರವಣಪ್ಪ ಅವರ ಕಾರ್ಯ ಶ್ಲಾಘನೀಯ ಎಂದರು.

ವೆಂಕಟಮ್ಮನಹಳ್ಳಿ ನಾನಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಜಿ.ಎಸ್.ಸುದೇಶ್ ಬಾಬು, ತಕ್ಕಲಪಾಟಿ ಬೊಮ್ಮಯ್ಯ, ಪುರಸಭೆ ಸದಸ್ಯ ರಾಜೇಶ್, ರವಿ, ಚನ್ನಕೇಶವ, ಪೊಲೀಸ್ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್, ಎಸ್.ಐ ಗುರುನಾಥ್, ಶೇಷಗಿರಿ, ಸ್ಟುಡಿಯೊ ಅಮರ್ ಉಪಸ್ಥಿತರಿದ್ದರು.

ತುಮಕೂರು ಬೆಳಗುಂಬದಲ್ಲಿ ಭಾವುಕರಾದ ಶಾಸಕ ಗೌರಿಶಂಕರ್

ಶಾಸಕ ಗೌರಿಶಂಕರ್ ಬಗ್ಗೆ ಮಹಿಳೆಯ ಮನ ಮಿಡಿಯುವ ಮಾತಿಗೆ ವಿಡಿಯೊ ನೋಡಿ. ಚಾನಲ್ ಸಬ್ ಸ್ಕ್ರೈಬ್ ಮಾಡಿ.

ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಫುಡ್ ಕಿಟ್ ವಿತರಣಾ & ಕೊರೋನಾ ಜನ ಜಾಗೃತಿ ಕಾರ್ಯಕ್ರಮಕ್ಕೆ ಶಾಸಕ ಗೌರಿಶಂಕರ್ ಚಾಲನೆ ನೀಡಿದರು.

ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಯ, ನೂರಾರು ಮನೆಗಳಿಗೆ ಭೇಟಿ ನೀಡಿ, 10 kg ಯ 2000 ಕ್ಕೂ ಹೆಚ್ಚು ಫುಡ್ ಕಿಟ್, ಕಲ್ಲಂಗಡಿ ಹಣ್ಣು, ಪೈನಾಪಲ್ ಹಣ್ಣು & N-95 ಮಾಸ್ಕ್ ವಿತರಣೆ ಮಾಡಿ ಸರ್ಕಾರದ ಸೂಚನೆ ಪಾಲಿಸಿ ಕ್ಷೇಮವಾಗಿರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಒಂದು ಹೆಣ್ಣು ಮಗಳು ಕೊರೋನಾ ಲಾಕ್ ಡೌನ್ ನಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದು ತನ್ನ ಅಸಹಾಯಕತೆ ತೋರಿ ಕಣ್ಣೀರಾಕಿದರು. ಸ್ಥಳದಲ್ಲೆ ಶಾಸಕರು ತಮ್ಮ ಕೈಲಾದ ವೈಯಕ್ತಿಕ 25,000 ರೂಪಾಯಿ ಹಣ ನೀಡಿ ಆಕೆಯನ್ನು ಸಂತೈಸಿದರು. ಅವರ ಕುಟುಂಬದ ಮಕ್ಕಳ ಸಂಪೂರ್ಣ ವಿಧ್ಯಾಭ್ಯಾಸದ ಜವಬ್ದಾರಿ ವಹಿಸಿಕೊಂಡರು.

“ಶಾಸಕರು & ಸಭಿಕರ ಕಣ್ಣಾಲಿಗಳು ತೇವವಾದ ಘಳಿಗೆ”

ಇದೇ ವೇದಿಕೆಯಲ್ಲಿ ಕೊರೋನಾ ಸೋಂಕಿನಿಂದ ಗುಣಮುಖಳಾದ ಹೆಣ್ಣು ಮಗಳು & ಆಕೆಯ ಮಗ ಸೋಂಕಿಗೊಳಗಾದ ದಿನ ಮಧ್ಯರಾತ್ರಿ 2 ಗಂಟೆಗೆ ಶಾಸಕರಿಗೆ ಕರೆ ಮಾಡಿದಾಗ, ಶಾಸಕರು ತಮ್ಮ ಆಪ್ತ ಸಹಾಯಕರನ್ನು ಕಳುಹಿಸಿ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಿ ನಮ್ಮ ಮನೆಯನ್ನು ಕಾಪಾಡಿದ್ದಾರೆ ಎಂದು ಹೇಳಿ, ನಮ್ಮ ಕುಟುಂಬ ಉಳಿಸಿದ ಶಾಸಕರನ್ನು ದೇವರೆಂದರು. ಶಾಸಕರ ಸೇವೆ ನೆನೆದು ಭಾವುಕಾಳಾಗಿ ಶಾಸಕರನ್ನು ಕೈ ಮುಗಿದು ಅವರ ಕುಟುಂಬ ನೂರ್ಕಾಲ ಬಾಳುವಂತೆ ಹರಸಿದರು. ಈ ಕ್ಷಣದಲ್ಲಿ ಶಾಸಕರು ಸೇರಿದಂತೆ ಅಲ್ಲಿ ನೆರೆದಿದ್ದ ನೂರಾರು ಸಭಿಕರ & ಹೆಣ್ಣು ಮಕ್ಕಳ ಕಣ್ಣಾಲಿಗಳು ತೇವವಾದವು.

ಇದಾದ ನಂತರ ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಫುಡ್ ಕಿಟ್ ವಿತರಣಾ & ಕೊರೋನಾ ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾರ್ವಜನಿಕರನ್ನು ಸೇರಿದಂತೆ ಕೊರೋನಾ ಸೋಂಕಿತರ ಕುಟುಂಬಕ್ಕೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸುಮಾರು 1000 ಕ್ಕೂ ಹೆಚ್ಚು ಫುಡ್ ಕಿಟ್, ಕಲ್ಲಂಗಡಿ ಹಣ್ಣು, ಪೈನಾಪಲ್ ಹಣ್ಣು & N-95 ಮಾಸ್ಕ್ ವಿತರಣೆ ಮಾಡಿ ವಿತರಣೆ ಮಾಡಿದರು.

ಜನರ ಮಾತುಗಳನ್ನು ಕೇಳಿದ ಬಳಿಕ ಶಾಸಕರು “ನನ್ನ ಸೇವೆ ಮತ್ತೊಬ್ಬರ ಜೀವ & ಜೀವನ ಉಳಿಸುವ ಕೆಲಸ ಮಾಡುತ್ತದೆ ಎಂದಾದರೇ, ಇದಕ್ಕಿಂತ ಬೇರೊಂದು ನನಗಿನ್ನೇನು ಬೇಕು”. ಎಂದು ಭಾವುಕರಾದರು..

ಬಟ್ಟೆ/ಜ್ಯೂಯಲರಿ ಅಂಗಡಿ ತೆರೆಯಲು ಅವಕಾಶವಿಲ್ಲ ಡೀಸಿ

Public story


ತುಮಕೂರು: ರಾಜ್ಯ ಸರ್ಕಾರವು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನೀಡಿರುವ ಸ್ಪಷ್ಟೀಕರಣದನ್ವಯ ಜಿಲ್ಲೆಯಲ್ಲಿ ಜೂನ್ 14 ರಿಂದ ಮುಂದಿನ ಆದೇಶದವರೆಗೆ ಯಾವುದೇ ಬಟ್ಟೆ ಅಂಗಡಿ ಹಾಗೂ ಜ್ಯೂಯಲರಿ ಅಂಗಡಿಗಳನ್ನು ತೆರೆದು ಮಾರಾಟ ಮಾಡಲು ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರೊಂದಿಗೆ ಚರ್ಚಿಸಿ ಮೇಲ್ಕಂಡಂತೆ ಸೂಚನೆ ನೀಡಿದ್ದಾರೆ.

ಉಳಿದಂತೆ ಎಲ್ಲಾ ಉತ್ಪಾದನಾ ಘಟಕ/ಕೈಗಾರಿಕೆಗಳಲ್ಲಿ 50% ಸಿಬ್ಬಂದಿ ಸಾಮರ್ಥ್ಯದೊಂದಿಗೆ ಕೆಲಸ ನಿರ್ವಹಿಸಲು ಅನುಮತಿಸಲಾಗಿದೆ. ಅದೇ ರೀತಿ ಉಡುಪು ತಯಾರಿಕೆ(ಗಾರ್ಮೆಂಟ್ಸ್)ಯಲ್ಲಿ ತೊಡಗಿರುವ ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮರ್ಥ್ಯದ 30% ನಷ್ಟು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 2 ಗಂಟೆವರೆಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕೋವಿಡ್ ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.