Wednesday, May 6, 2026
Google search engine
Home Blog Page 140

“ಅರುಣ್ ಸಿಂಗ್ ಗೋ ಬ್ಯಾಕ್” ಅನ್ನುವವರೇ ಬಿಜೆಪಿ ಪಕ್ಷನಿಷ್ಠರು….

Public story


ಬೆಂಗಳೂರು: ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಶಮನಕ್ಕಾಗಿ ಇದೇ 16ರಂದು ಬೆಂಗಳೂರಿಗೆ ಬರುತ್ತಿರುವ ಪಕ್ಷದ ರಾಜ್ಯ ಉಸ್ತುವಾರಿ “ಅರುಣ್ ಸಿಂಗ್ ಗೋ ಬ್ಯಾಕ್” ಚಳವಳಿ ನಡೆಸಲು ಬಿಜೆಪಿ ಪಕ್ಷನಿಷ್ಠರ ಗುಂಪು ಸಜ್ಜಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದುರಾಡಳಿತದ ವಿರುದ್ಧ ಧ್ವನಿ ಎತ್ತಿರುವ ಈ ಪಕ್ಷ ನಿಷ್ಠರ ಗುಂಪಿನಲ್ಲಿ ಪ್ರಮುಖವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಕಾರ್ಕಳ ಶಾಸಕರೂ ಆದ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್, ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೇರಿದಂತೆ ಇನ್ನೂ ಕೆಲವು ಪ್ರಮುಖರು ಇದ್ದಾರೆ. ಇವರೆಲ್ಲಾ ಅರುಣ್ ಸಿಂಗ್ 16ರಂದು ಬೆಂಗಳೂರಿಗೆ ಬಂದ ನಂತರ ನಡೆಸಲಿರುವ ಮಂತ್ರಿಮಂಡಲ ಸಭೆಯನ್ನು ಬಹಿಷ್ಕರಿಸುವಂತೆ ಕರೆ ನೀಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.

ಅರುಣ್ ಸಿಂಗ್ ಅವರು ಮಂತ್ರಿಮಂಡಲದ ಸಭೆ ನಡೆಸುವುದಕ್ಕೂ ಮೊದಲು ಶಾಸಕರ ಸಭೆ ನಡೆಸಿ ಶಾಸಕರ ಅಭಿಪ್ರಾಯ ಪಡೆದ ನಂತರವೇ ಸಚಿವರ ಸಭೆ ನಡೆಸಬೇಕು ಎಂದು ಪಟ್ಟು ಹಿಡಿಯಲು ಎಲ್ಲ ಪಕ್ಷನಿಷ್ಠರು ತೆರೆಯ ಮರೆಯಲ್ಲಿ ಸಿದ್ಧತೆ ನಡೆಸಿದ್ದು ಕೆಲವರು ಆಜ್ಞಾತ ಸ್ಥಳದಲ್ಲಿ ಗುಟ್ಟಾಗಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

“ಸಚಿವರ ಸಭೆ ನಡೆಸುವುದಕ್ಕೂ ಮೊದಲು ಶಾಸಕರ ಅಭಿಪ್ರಾಯವನ್ನು ಪಡೆಯಬೇಕು. ಯಾಕೆಂದರೆ ಸಚಿವರು ಎಲ್ಲಾ ತೃಪ್ತಿಕರವಾಗಿ ನಡೆಯುತ್ತಿದೆ ಎಂದು ಹೇಳಿಬಿಟ್ಟರೆ ಅರುಣ್ ಸಿಂಗ್,
ಶಾಸಕರ ಜೊತೆ ಚರ್ಚೆಯನ್ನೇ ನಡೆಸದೆ ದೆಹಲಿಗೆ ತೆರಳಿ ಎಲ್ಲಾ ಸರಿ ಇದೆ ಎಂಬ ವರದಿ ಕೊಟ್ಟು ಬಿಡುತ್ತಾರೆ” ಎಂಬ ಆತಂಕವಿದೆ ಎಂದು ಹೆಸರು ಹೇಳಲು ಇಚ್ಛಿಸದ ಶಾಸಕರೊಬ್ಬರು ವಿವರಿಸಿದ್ದಾರೆ.

ಭಿನ್ನ ಶಾಸಕರು ಅರುಣ್ ಸಿಂಗ್ ಅವರಿಗೆ ಏನು ಕೇಳಲಿದ್ದಾರೆ ಮತ್ತು ಹೇಳಲಿದ್ದಾರೆ?

* ನೀವು ಬಂದ ತಕ್ಷಣ ನೇರವಾಗಿ ಮಂತ್ರಿಗಳ ಸಭೆ ಕರೆಯಬಾರದು.

* ಅದಕ್ಕೂ ಮೊದಲು ಎಲ್ಲ ಶಾಸಕರ ಸಭೆ ನಡೆಸಬೇಕು.

* ಶಾಸಕರ ಸಭೆಯಲ್ಲಿ ನೀವು ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಅವು ಯಾವುವೆಂದರೆ:


+ ಯಡಿಯೂರಪ್ಪ ಅವರೇ ಇನ್ನೂ ಎರಡು ವರ್ಷ ಸಿ.ಎಂ ಆಗಿ ಮುಂದುವರೆಯತ್ತಾರೆ ಎಂದು ನೀವು ಇತ್ತೀಚೆಗೆ ದೆಹಲಿಯಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಂತೆ ನಿಮಗೆ ಅಧಿಕಾರ ಕೊಟ್ಟವರು ಯಾರು?

+ ಒಂದು ವೇಳೆ ಯಡಿಯೂರಪ್ಪನವರೇ ಮುಂದುವರೆಯುತ್ತಾರೆ ಎಂದಾದರೆ ಈಗ ನೀವು ಇಲ್ಲಿಗೆ ಯಾಕೆ ಬಂದಿರಿ?

+ ಬಹುತೇಕ ಶಾಸಕರು ಮತ್ತು ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯಡಿಯೂರಪ್ಪ ಅವರನ್ನೇ ಮು‌ಂದುವರೆಸಿದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆಯನ್ನು ನೀವು ಹೊರಲು ಸಿದ್ಧರಿದ್ದೀರಾ?

+ ಯಡಿಯೂರಪ್ಪನವರ ಕುರಿತಾದ್ದು ಎನ್ನಲಾದ ಸಿ.ಡಿಯನ್ನು ನೀವು ಈಗಾಗಲೇ ನೋಡಿದ್ದೀರಿ ಎಂದು ನಮಗೆ ತಿಳಿದು ಬಂದಿದೆ. ಆ ಅಶ್ಲೀಲ ಸಿಡಿಯನ್ನು ವೀಕ್ಷಿಸಿದ ಬಳಿಕವೂ ನೀವು ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯನ್ನು ಈತನಕ ಯಾಕೆ ಪಡೆದಿಲ್ಲ. ಈ ಸಿಡಿ ಪಕ್ಷಕ್ಕೆ ಮುಜುಗರ ತರುವಂತಿಲ್ಲವೇ? ಇದು
ನಿಮ್ಮ ಕರ್ತವ್ಯ ಲೋಪ ಆಗುವುದಿಲ್ಲವೇ?

+ ಅಥವಾ ನೀವು ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರು ಒಡ್ಡಿರುವ ಯಾವುದಾದರೂ ಆಮಿಷಗಳಿಗೆ ಬಲಿಯಾಗಿದ್ದೀರಾ ಎಂಬ ಬಲವಾದ ಅನುಮಾನ ನಮ್ಮನ್ನು ಕಾಡುತ್ತಿದೆ.

+ ನಮ್ಮ ಈ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಸಮಜಾಯಿಷಿ ನೀಡಬೇಕು. ಈ ಸರ್ಕಾರದ ವ್ಯಭಿಚಾರ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, 20 ಪರ್ಸೆಂಟ್ ಕಮಿಷನ್, ಕಾಂಗ್ರೆಸ್ನ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀವು ಪರೋಕ್ಷವಾಗಿ ಮಾಡುತ್ತಿರುವ ನೆರವು, ಸಹಕಾರಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸುತ್ತಿರುವ ಎಲ್ಲ ಶಾಸಕರನ್ನು ಸಮಾಧಾನಪಡಿಸಿದ ಬಳಿಕವೇ ಮುಂದಿನ ಸಭೆ ನಡೆಸಿ ದೆಹಲಿ ವರಿಷ್ಠರಿಗೆ ಪ್ರಾಮಾಣಿಕವಾದ ಮತ್ತು ವಸ್ತುನಿಷ್ಠ ವರದಿ ಸಲ್ಲಿಸಬೇಕು. ಇಲ್ಲವಾದರೆ ನೀವು ವಾಪಸ್ ತೆರಳಿ ಎಂದು “ಗೋ ಬ್ಯಾಕ್ ಚಳವಳಿ” ನಡೆಸುತ್ತೇವೆ ಶಾಸಕರೊಬ್ಬರು ಪಬ್ಲಿಕ್ ಸ್ಟೋರಿಗೆ ತಿಳಿಸಿದರು.

ಸಾಹಿತ್ಯ ಸಂವಾದ: ಕವಿ ಸಿದ್ದಲಿಂಗಯ್ಯ ಬದುಕು, ಸಾಹಿತ್ಯದ ಒಂದು ಅವಲೋಕನ

ತೇಜಾವತಿ ಎಚ್.ಡಿ.


ಮಿಂಚಿ ಹೋಗುವ ಮುನ್ನ…..

ನಾನು ಸತ್ತರೆ ನೀವು ಅಳುವಿರಿ
ನಿಮ್ಮ ಕೂಗು ನನಗೆ ಕೇಳಿಸದು
ನನ್ನ ನೋವಿಗೆ ಈಗಲೇ ಮರುಗಲಾಗದೇ…

ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇ
ಮನೆಯತ್ತ ಧಾವಿಸುವಿರಿ
ಶ್ರದ್ದಾಂಜಲಿ ಹೇಳೋ ಬದಲು
ಈವಾಗಲೇ ಸುಖ ದುಃಖ ಹಂಚಿಕೊಳ್ಳಲಾಗದೇನು…

ಮಿಂಚಿ ಹೋಗುವ ಮುನ್ನ
ಹಂಚಿ ಬಾಳುವ ಬದುಕು ಸಹ್ಯವಲ್ಲವೇನು…
– ಡಾ. ಸಿದ್ದಲಿಂಗಯ್ಯ

ಹೀಗೊಂದು ಭಾವಪೂರ್ಣ ವಿದಾಯದ ಕವಿತೆಯನ್ನು ಬರೆದದ್ದು ಖ್ಯಾತ ದಲಿತ-ಬಂಡಾಯ ಸಾಹಿತಿ ಎಂದೇ ಪ್ರಸಿದ್ಧರಾಗಿದ್ದ ಸಿದ್ಧಲಿಂಗಯ್ಯನವರು. ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಕೊರೋನ ಸೋಂಕಿಗೆ ತುತ್ತಾಗಿ ಚೇತರಿಸಿಕೊಳ್ಳಲಾಗದೆ ಬಹು ಅಂಗಾಂಗ ವೈಫಲ್ಯದಿಂದಾಗಿ ಜೂನ್ 11, 2021 ರಂದು ಕೊನೆಯುಸಿರೆಳೆದು ನಮ್ಮನ್ನಗಲಿದ ದಲಿತ- ಬಂಡಾಯ ಸಾಹಿತ್ಯದ ಧೀಮಂತ ಪ್ರತಿಭೆ ಇವರು.

ಜನನ ಮತ್ತು ವಿದ್ಯಾಭ್ಯಾಸ :-


ಅವರು ಜನಿಸಿದ್ದು 1954 ರ ಫೆಬ್ರವರಿ 3 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ. ತಂದೆ ದೇವಯ್ಯ ತಾಯಿ ವೆಂಕಟಮ್ಮ. ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಇವರಿಗೆ ಮಲ್ಲೇಶ್ವರಂ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುವಾಗಲೇ ಕವಿತೆ ಬರೆಯುವ ಗೀಳು ಹತ್ತಿತ್ತು. ವಿದ್ಯಾರ್ಥಿದೆಸೆಯಲ್ಲೇ ಉತ್ತಮ ಭಾಷಣಕಾರರೂ ಆಗಿ ಗುರುತಿಸಿಕೊಂಡಿದ್ದರು.



ನುಡಿನಮನ: ಶಾಸಕ ಬಿ.ಸಿ.ಗೌರಿಶಂಕರ್ ಅವರಿಂದ

ದಲಿತ ಕವಿ ಎಂದೇ ಪ್ರಸಿದ್ಧರಾಗಿದ್ದ ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ (67) ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ..

ವಿದ್ಯಾರ್ಥಿ ಜೀವನದಿಂದಲೇ ಹೋರಾಟವನ್ನು ಮೈಗೂಡಿಸಿಕೊಂಡಿದ್ದ ಶ್ರೀಯುತರು ಹಲವಾರು ಕನ್ನಡಪರ, ರೈತಪರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಡಾ.ಸಿದ್ದಲಿಂಗಯ್ಯ ನವರು ದಲಿತ ಹೋರಾಟ & ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು.

“ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ” ವೆಂಬ ಬಂಡಾಯ ಕ್ರಾಂತಿ ಗೀತೆ ರಾಷ್ಟ್ರದಲ್ಲೆ ಸಂಚಲನ ಮೂಡಿಸಿದ ಗೀತೆಯಾಗಿತ್ತು.

ಡಾ.ಸಿದ್ದಲಿಂಗಯ್ಯ ನವರು ರಾಜ್ಯದ ಹಾಗೂ ರಾಷ್ಟ್ರದ ಪ್ರತಿಯೊಂದು ವಿಶ್ವವಿದ್ಯಾನಿಲಯದಲ್ಲೂ ತಮ್ಮ ಸ್ನೇಹಿತ & ಶಿಷ್ಯ ವೃಂದವನ್ನೆ ಸ್ಥಾಪಿಸಿದ್ದರು. ಇಂದು ಅವರಿಲ್ಲದಿರುವುದೆಂಬ ನೋವು ನನ್ನನ್ನು ಸೇರಿದಂತೆ ರಾಜ್ಯ & ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಶ್ರೀಯುತರ ಅಗಲಿಕೆಯು ಅಪಾರ ಸ್ನೇಹಿತರು, ಶಿಷ್ಯ ವೃಂದ, & ಕುಟುಂಬದವರನ್ನು ಅನಾಥರನ್ನಾಗಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಾನ್ ಬುದ್ಧರಲ್ಲಿ ಪ್ರಾರ್ಥಿಸುತ್ತೇನೆ.
ಡಿ.ಸಿ ಗೌರಿಶಂಕರ್

ಶಾಸಕರು

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ.



ಮುಂದೆ 1974 ರಲ್ಲಿ ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನಿಂದ ಕನ್ನಡ ಐಚ್ಚಿಕ ವಿಭಾಗದಲ್ಲಿ ಬಿ ಎ ಆನರ್ಸ್ ಪದವಿಯನ್ನು ಪಡೆದರು. 1976 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊ. ಡಿ ಎಲ್ ನರಸಿಂಹಾಚಾರ್ಯ ಸ್ವರ್ಣಪದಕದೊಂದಿಗೆ ಎಂ ಎ ಪದವಿಯನ್ನು ಪಡೆದುಕೊಂಡರು.

ತದನಂತರ 1989 ರಲ್ಲಿ ಪ್ರೊ. ಜಿ ಎಸ್ ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ಗ್ರಾಮದೇವತೆಗಳು ‘ ಎಂಬ ವಿಷಯವನ್ನು ಕುರಿತ ಪ್ರೌಢ ಪ್ರಬಂಧದ ಮೇಲೆ ಪಿ ಎಚ್ ಡಿ ಪದವಿಯನ್ನು ಪಡೆದರು.

ವೃತ್ತಿ ಮತ್ತು ಪ್ರವೃತ್ತಿ :-


ಸಿದ್ಧಲಿಂಗಯ್ಯನವರು ಕೇವಲ ನಾಡಿನ ಹೆಮ್ಮೆಯ ಕವಿಯಷ್ಟೇ ಅಲ್ಲ, ಅಧ್ಯಾಪಕ, ಸಾಹಿತಿ, ಆಡಳಿತಗಾರ, ಚಳುವಳಿಗಾರ, ಶಾಸಕ, ಪ್ರಗತಿಪರ ಚಿಂತನೆ, ವೈಚಾರಿಕತೆ ಮತ್ತು ಹಾಸ್ಯ, ವಿಡಂಬನಾ ಪ್ರಜ್ಞೆಗಳನ್ನೂ ಮೈಗುಡಿಸಿಕೊಂಡಿದ್ದಂತಹ ವಿಶಿಷ್ಟ ವ್ಯಕ್ತಿಯಾಗಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಚಳುವಳಿಗೆ ಧುಮುಕಿದ ಇವರು ಮುಂದೆ ಮೊದಲ ‘ಬಂಡಾಯ ಸಾಹಿತ್ಯ ಸಮ್ಮೇಳನ’ ಸಂಘಟಿಸುವುದರಲ್ಲಿ ಯಶಸ್ವಿಯಾಗುವುದರೊಂದಿಗೆ ಸಂಘಟನೆಗೇ ಬಹುದೊಡ್ಡ ಶಕ್ತಿಯಾದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ನಡೆದ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯದ ಸಮ್ಮೇಳನಾಧ್ಯಕ್ಷರಾಗಿದ್ದರು. ಇವರು ಎರಡು ಬಾರಿ (1988-94 ಮತ್ತು 1995-2000) ವಿಧಾನ ಪರಿಷತ್ ನ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.

“ದಲಿತರು, ರೈತರು, ಕಾರ್ಮಿಕರು ತಮ್ಮ ಮೆರವಣಿಗೆ, ಹೋರಾಟಗಳಲ್ಲಿ ನನ್ನ ಕವಿತೆಗಳನ್ನು ಹಾಡಿ ಕೇಳಿದ ಸಂದರ್ಭಗಳೇ ನನ್ನ ಕಾವ್ಯದ ಸಾರ್ಥಕ ಕ್ಷಣಗಳು” ಎಂದು ಅಭಿಮಾನಪಡುತ್ತ ‘ದಲಿತರ ಆದಿಕವಿ’ ಎಂದೇ ಬಿಂಬಿತರಾಗಿದ್ದವರು ಸಿದ್ಧಲಿಂಗಯ್ಯನವರು. ಇವರು ಗೀಚಿದ ಅಕ್ಷರಗಳೆಲ್ಲಾ ಕ್ರಾಂತಿಯ ಕಹಳೆಯೂದಿ ನೊಂದವರ ನಾಲಗೆಗಳಲ್ಲಿ ನಿತ್ಯದ ಪ್ರಾರ್ಥನಾ ಗೀತೆಗಳಾದವು.

“ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ ”

“ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು
ವದೆಸಿಕೊಂಡು ವರಗಿದೋರು ನನ್ನ ಜನಗಳು

ಹೊಲವ ಉತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು
ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು “(ನನ್ನ ಜನಗಳು )

ಲೇಖನಿಯನ್ನೇ ಅಸ್ತ್ರವಾಗಿಸಿಕೊಂಡು ತುಳಿತಕ್ಕೊಳಗಾದವರ, ಶೋಷಿತರ ಪರ ಗಟ್ಟಿ ದನಿಯೆತ್ತಿ ಜನತೆಯ ಧಮನಿಗಳಲ್ಲಿ ಸ್ವಾಭಿಮಾನದ ಕಿಡಿಯನ್ನು ಹೊತ್ತಿಸಿದ ಇವರು ನಿರಂತರ ಕಾರ್ಯಶೀಲರಾಗಿದ್ದರು. ತಲೆಯೊಳಗಿದ್ದ ಕ್ರಾಂತಿಯ ಕಿಚ್ಚನ್ನು ಹೊರತರಲು ಅವರು ಆರಿಸಿಕೊಂಡ ಮಾರ್ಗವೇ ಈ ‘ಕಾವ್ಯ’.

ಸಾಹಿತ್ಯ ಮತ್ತು ಕೃತಿಗಳು :-


ಸಿದ್ಧಲಿಂಗಯ್ಯನವರು ಕವಿತೆ, ಪ್ರಬಂಧ, ನಾಟಕ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

1974 ರಲ್ಲಿ ಮೈಸೂರಿನಲ್ಲಿ ನಡೆದ ಬರಹಗಾರ ಮತ್ತು ಕಲಾವಿದರ ಒಕ್ಕೂಟದ ಸಮ್ಮೇಳನದ ಪ್ರಭಾವದಿಂದ ಸ್ಫೂರ್ತಿಪಡೆದು ತಮ್ಮ ಚೊಚ್ಚಲ ಕೃತಿಯಾದ ‘ಹೊಲೆಮಾದಿಗರ ಹಾಡು(1975)’ ಪ್ರಕಟಿಸಿದಾಗ ಅವರ ವಯಸ್ಸು 21 ವರ್ಷವಾಗಿತ್ತು. ಇದು ಸಾಹಿತ್ಯ ಕ್ಷೇತ್ರದಲ್ಲೇ ಸಂಚಲನವನ್ನು ಉಂಟುಮಾಡಿದ ಕೃತಿ.

“ಇಕ್ರಲಾ ವದೀರ್ಲಾ
ಈ ನನ್ ಮಕ್ಕಳ ಚರ್ಮ ಎಬ್ರಲಾ “(ಒಂದು ಪದ)

“ಗುಡಿಸಲುಗಳು ಗುಡುಗುತಿವೆ ಬಂಗಲೆಗಳು ನಡುಗುತಿವೆ
ಎಲ್ಲೆಲ್ಲಿಯೂ ಮೊಳಗುತ್ತಿದೆ ನವಕ್ರಾಂತಿಯ ಗಾನ “( ಕ್ರಾಂತಿಪದ)

ಇವರ ಕಾವ್ಯಶೈಲಿಯ ರೂಪಕ, ಪ್ರತಿಮೆ ನುಡಿಗಟ್ಟುಗಳ ಮೂಲಕ ‘ಹೊಲೆಮಾದಿಗರ ಹಾಡು’ ಒಂದು ಹೊಸಮಾರ್ಗದ ಪ್ರಥಮ ಕೃತಿಯಾಗಿ ನೆಲೆಯೂರಿತು. ಇವರ ಕವಿತೆಯ ಸಾಲುಗಳಲ್ಲಿ ಲಯ, ಗೇಯತೆ ಹಾಗೂ ಜಾನಪದದ ಬುನಾದಿಯನ್ನು ಕಾಣಬಹುದಾಗಿದ್ದು ಕುವೆಂಪು, ಬೇಂದ್ರೆಯಂತಹ ಮಹಾನ್ ಕವಿಗಳ ದಟ್ಟ ಪ್ರಭಾವವೂ ಕಂಡುಬರುತ್ತದೆ. “ಉತ್ಪ್ರೇಕ್ಷೆ ಎನ್ನುವುದು ಬಹುಪಾಲು ಎಲ್ಲ ಕ್ರಾಂತಿಕಾರಿ ಕವಿಗಳ ಏಕಮಾತ್ರ ಅಭಿವ್ಯಕ್ತಿ ತಂತ್ರ”ವಾಗಿದೆ.

ಈ ಮಾತಿಗೆ ಸಿದ್ಧಲಿಂಗಯ್ಯನವರೂ ಕೂಡ ಹೊರತಾಗಿಲ್ಲ. ಅಸಾಮಾನ್ಯ ರೂಪಕ ಶಕ್ತಿಯಿಂದ ಪ್ರತಿಮೆಗಳ ನಿರೀಕ್ಷಿತ ಹೊಂದಾಣಿಕೆಯಾಗಿ ಅವರ ಕಾವ್ಯದಲ್ಲಿ ಚಮತ್ಕಾರ ಮೂಡಿಸಿವೆ. ‘ಅಲ್ಲೆ ಕುಂತವರೆ ‘ ಇದು ಖಂಡಕಾವ್ಯವಾಗಿದ್ದು ಕನ್ನಡದ ಅತ್ಯುತ್ತಮ ರಾಜಕೀಯ ಕವಿತೆಯೆನಿಸಿದೆ. ಪ್ರಭುತ್ವದ ಹಿಂಸೆಯ ವಸ್ತುವನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.

ಪ್ರಭಾವ :-


” ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಎಂದಿರುವ ಇವರು ಗಾಂಧೀಜಿ, ಅಂಬೇಡ್ಕರ್, ಕಾರ್ಲ್ ಮಾರ್ಕ್ಸ್, ಲೋಹಿಯಾ, ಶಾಂತವೇರಿ ಗೋಪಾಲಗೌಡ, ವಾಸುದೇವ ಭೂಪಾಲ, ಪೆರಿಯಾರ್ ಮುಂತಾದ ಸಾಮಾಜಿಕ ಹರಿಕಾರರ ಪ್ರಭಾವಕ್ಕೆ ಒಳಗಾಗಿ ಹಲವಾರು ಸಮಾಜಮುಖಿ ಚಳುವಳಿಗಳಲ್ಲಿ ಸ್ಫೂರ್ತಿಯ ಸೆಲೆಯಾಗಿದ್ದರು.

ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಆಯ್ದ ಕವಿತೆಗಳು, ಅಲ್ಲೆ ಕುಂತವರೆ, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು ಇವು ಪ್ರಮುಖ ಕವನ ಸಂಕಲನಗಳಾಗಿದ್ದು ಇವರ ಕವಿತೆಗಳು ಇಂಗ್ಲಿಷ್, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಿಗೂ ಅನುವಾದಗೊಂಡಿವೆ.
‘ಅವತಾರಗಳು’ ಪ್ರಬಂಧ ಕೃತಿಯಾಗಿದ್ದು, ‘ಏಕಲವ್ಯ’, ‘ ಪಂಚಮ’, ‘ ನೆಲಸಮ’ ಇವು ಇವರು ರಚಿಸಿದ ನಾಟಕಗಳು. ‘ಊರುಕೇರಿ’ ಇವರ ಆತ್ಮಕಥನವಾಗಿದ್ದು ಇದು ಇಂಗ್ಲಿಷ್ ಮತ್ತು ತಮಿಳು ಭಾಷೆಗೆ ಅನುವಾದಗೊಂಡಿದೆ. ಇದರ ಇಂಗ್ಲಿಷ್ ಅನುವಾದ ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ. ‘ರಸಘಳಿಗೆಗಳು’, ‘ಎಡಬಲ’, ‘ಹಕ್ಕಿನೋಟ’, ‘ಜನಸಂಸ್ಕೃತಿ’, ‘ಉರಿಕಂಡಾಯ’ ಲೇಖನ ಸಂಗ್ರಹಗಳಾಗಿವೆ. ‘ಸದನದಲ್ಲಿ ಸಿದ್ಧಲಿಂಗಯ್ಯ ಭಾಗ 1ಮತ್ತು 2’ ಇವರ ಇತರೆ ಕೃತಿಗಳು. ‘ಸಮಕಾಲೀನ ಕನ್ನಡ ಕವಿತೆ’ ಇದು ಇವರ ಸಂಪಾದಿತ ಕೃತಿ.

ಸಂದಿರುವ ಗೌರವ ಮತ್ತು ಪ್ರಶಸ್ತಿಗಳು :-


ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವದ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಬಾಬು ಜಗಜೀವನ ರಾವ್ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಸಂದೇಶ್ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ..ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಧರಣಿ ಮಂಡಲ ಮಧ್ಯದೊಳಗೆ’ ಚಲನಚಿತ್ರಕ್ಕೆ ಗೀತರಚನೆ ಮಾಡಿದ್ದಕ್ಕಾಗಿ ರಾಜ್ಯಪ್ರಶಸ್ತಿ(1983-84) ಇನ್ನೂ ಮುಂತಾದ ಗೌರವ ಮತ್ತು ಪ್ರಶಸ್ತಿಗಳು ಇವರ ಸಾಹಿತ್ಯ ಸೇವೆಗೆ ಒಲಿದುಬಂದಿರುತ್ತವೆ.

ಕೆ ಬಿ, ಚೆನ್ನಣ್ಣ ವಾಲಿಕಾರರ ನೆನಪುಗಳು ಮಾಸುವ ಮುನ್ನವೇ ದಲಿತಪರ ದನಿಯೊಂದು ಜೀವನವನ್ನೇ ಹೋರಾಟವಾಗಿಸಿಕೊಂಡು ಬದುಕಿದ ಮೇರು ಕೊಂಡಿಯಾಗಿದ್ದ ಡಾ. ಸಿದ್ದಲಿಂಗಯ್ಯನವರು ಇನ್ನಿಲ್ಲ ಎಂಬುದು ನಾಡಿನಾದ್ಯಂತ ಕನ್ನಡ ಸಾರಸ್ವತ ಲೋಕಕ್ಕೆ ಇಂದು ತುಂಬಲಾರದ ನಷ್ಟವೇ ಸರಿ.


ತೇಜಾವತಿ ಎಚ್ ಡಿ

ಕವಯತ್ರಿ

ಭಾನುವಾರದ ಕವಿತೆ: ಉಸಿರು

ತಮ್ಮ ಕವನಗಳಲ್ಲಿ ಸಾವು, ಪ್ರೀತಿ, ಆಧ್ಯಾತ್ಮ, ಬದುಕನ್ನು ಸಮ್ಮಿಳಿತಗೊಳಿಸುವ ಮೂಲಕ ನಾಡಿನ ಜನರ, ಸಾಹಿತ್ಯಾಸಕ್ತರ ಗಮನ ಸೆಳೆದಿರುವ ಡಾ. ರಜನಿ ಅವರ ಈ ಕವನ ಸಾವಿನಂಚಿಗೆ ಹೋಗುವವರು, ಸಾವಿನ ಭಯದಲ್ಲಿ ನಲುಗುತ್ತಿರುವವರಿಗೆ ಬದುಕಿನ ಸಂಜೀವಿನಿಯಂತೆ ಕಂಡು ಬರುತ್ತದೆ. ಕೊರೊನಾ ಸಾವಿನ ತಲ್ಲಣ, ಭಯಗಳನ್ನು ಹೋಗಲಾಡಿಸಿ ಬದುಕಿನ ಹೊಸ ಆಸೆಯನ್ನು ಚಿಗುರಿಸುವಂತಿದೆ ಕವನ. ನಿರಾಸೆಯ ನಡುವೆಯೇ ಭರವಸೆ ಮೂಡಿಸಿಕೊಳ್ಳಬೇಕು. ಕಪ್ಪು ಮೋಡಕ್ಕೂ ಒಂದು ಬೆಳ್ಳಿ ರೇಖೆ ಮೂಡಿರುವಂತೆ ಎಂಥದೇ ಸಂದರ್ಭದಲ್ಲಿ ಬದುಕಿ ತೋರಿಸಲು ಒಂದು ಭರವಸೆ ಇದ್ದೇ ಇರುತ್ತದೆ ಎಂದು ಕವನ ಹೇಳುತ್ತದೆ


ಚೆಲ್ಲ ಬೇಡ ಉಸಿರು … ಸೋತು ಈ ದಿನ
ಬರುವ ನಾಳೆ…
ಹೊತ್ತು ತರುವುದು ಹೊಸ ಉತ್ಸಾಹ

ಏದುಸಿರು ಸಮ ಮಾಡಿ
ನೂಕು…ಈ ದಿನವನ್ನು ಚರಿತ್ರೆಗೆ
ನಾಳೆಯ ಉತ್ಕಟ ಕ್ಷಣಕ್ಕೆ…

ಮುಸ್ಸಂಜೆಯ ಸೂರ್ಯ
ಮರೆಯಾದನೇ?
ಏಳಲಿಲ್ಲದೇ ಮೇಲೆ ಸಮುದ್ರದಲ್ಲಿ ಸ್ನಾನ ಮಾಡಿ…

ನಿನ್ನ ಕಾಯಲು ಬಿಡಲಿಲ್ಲವೆ?
ಚುಕ್ಕಿ ಚಂದ್ರಮ
ಬೆಳದಿಂಗಳನ್ನ?

ಬಂದೆವೆ? ನಾವು
ಬಿಳಿ ಬಟ್ಟೆ ಹೊದೆಯಲು ?

ನಲ್ಲನ ಬಿಸಿಯುಸಿರು
ಕಂಪು …. ನೆನೆದು
ಹೀರು ಗಾಳಿಯನ್ನು …

ಒದ್ದು ಬಿಳಿ ಹೊದಿಕೆ..
ಅಂಗೈ ಊರಿ
ಎದ್ದು ಇಳಿದು ಬಾ

ನಡೆ ಬೆಳದಿಂಗಳ
ಸವಿಯೂಟಕ್ಕೆ…
ಕೆಂಪು ರಸಗವಳಕ್ಕೆ

ಹುಗಿದ ದೇಹ …
ಭೂಮಿಗೆ ಬಿದ್ದ ಬೀಜ
ಹಸಿರೊಡೆದು ಚಿಗುರಿ…

ಒದರಿ ಹಿಡಿ ಮಣ್ಣು..
ಅರಳಿ ಕೆಂಪು ಗುಲಾಬಿ
ಅದೇ ಕಂಪು ಉಸಿರಿನಲಿ…

ತೆರೆ ಸರಿದು
ಮಂಜು ಹರಿದು
ಎಳೆ ಬಿಸಿಲು..ಹೀರಿ ಇಬ್ಬನಿ

ಬಿಸಿಲು ಮಳೆ…
ತುಂಬಿಕೋ ತಂಗಾಳಿ
ಎದೆಗೂಡ ತುಂಬಾ..

ಗುರಿ ಗೋರಿಯಲ್ಲ..
ಮರುಜೀವನೋತ್ಸಾಹದಲೀ…
ಆತ್ಮ ಮರುಹುಟ್ಟು…

ಶತ ಶತಮಾನದ
ಹಸಿವು
ಮೊಳಕೆಯೊಡೆಯಲು…..

ಎರಡೇ ಎಲೆ
ಆ ದಿಕ್ಕಿಗೊಂದು…
ಈ ದಿಕ್ಕಿಗೊಂದು…

ಕೃಷಿ ಪಂಡಿತ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Publicstory


ತುಮಕೂರು: ಕೃಷಿ ಪಂಡಿತ ಪ್ರಶಸ್ತಿಗಾಗಿ ಕೃಷಿ ವಲಯದಲ್ಲಿ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ವಿಶಿಷ್ಟ ಮತ್ತು ಗಮನಾರ್ಹ ಸಾಧನೆ ಮೂಲಕ ರೈತ ಸಮುದಾಯದ ಶ್ರೇಯೋಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವ ಪರಿಣಿತರಿಂದ ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.

ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಕೃಷಿ ಕ್ಷೇತ್ರದಲ್ಲಿ ವಿನೂತನ/ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವವರಾಗಿರಬೇಕು.

ಅರ್ಜಿದಾರರ ಸಂಶೋಧನೆ/ಸಾಧನೆಗಳು ಮೂಲ ಸ್ವರೂಪದ್ದಾಗಿದ್ದು, ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು. ಅಲ್ಲದೆ ಅವರ ಸಂಶೋಧನೆಗಳು/ ಸಾಧನೆಗಳು ವ್ಯಾಪಕವಾಗಿ ಅಳವಡಿಸಲ್ಪಟ್ಟಿದ್ದು, ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು.

ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸಬಯಸುವ ರೈತರು ತಮ್ಮ ನಾಮ ನಿರ್ದೇಶನಗಳನ್ನು ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜುಲೈ 20ರೊಳಗೆ ಆಯಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಲು ಕೋರಿದೆ. ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಆಯ್ಕೆ ಸಮಿತಿಯ ನಿರ್ಣಯವೆ ಅಂತಿಮ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನಾಗಲಿ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನಾಗಲಿ ಸಂಪರ್ಕಿಸಲು ಕೃಷಿ‌ ಇಲಾಖೆ ಕೋರಿದೆ.

ಬೆಳೆ ವಿಮೆ ಯೋಜನೆಗಾಗಿ ರೈತರಿಂದ ಅರ್ಜಿ ಆಹ್ವಾನ

Publicstory


ತುಮಕೂರು: ತೋಟಗಾರಿಕೆ ಇಲಾಖೆಯು ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಗಾಗಿ ರೈತರಿಂದ ಅರ್ಜಿ ಆಹ್ವಾನಿಸಿದೆ.

ಈ ಯೋಜನೆಯಡಿ ಅಧಿಸೂಚಿಸಿದ ಬೆಳೆಗೆ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾಗುವುದು. ಬೆಳೆ ಸಾಲ ಪಡೆಯದ ರೈತರಿಗೆ ಈ ವಿಮೆ ಐಚ್ಛಿಕವಾಗಿರುತ್ತದೆ.

ಬೆಳೆ ವಿಮೆ ಯೋಜನೆಗೆ ತಾಲೂಕುವಾರು ಬೆಳೆಗಳನ್ನು ಒಳಪಡಿಸಲಾಗಿದ್ದು, ವಿವರ ಇಂತಿದೆ. ತುಮಕೂರು, ಕುಣಿಗಲ್ ಹಾಗೂ ಕೊರಟಗೆರೆ ತಾಲೂಕಿನಲ್ಲಿ ಅಡಿಕೆ ಮತ್ತು ಮಾವು ಬೆಳೆಯನ್ನು ವಿಮೆಗೆ ಒಳಪಡಿಸಲಾಗಿದೆ. ಅದೇ ರೀತಿ ಗುಬ್ಬಿ, ತುರುವೇಕೆರೆ, ಪಾವಗಡ, ಶಿರಾ, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅಡಿಕೆ, ಮಾವು, ಪಪ್ಪಾಯ ಮತ್ತು ದಾಳಿಂಬೆಯನ್ನು ಹಾಗೂ ಮಧುಗಿರಿ ತಾಲೂಕಿನಲ್ಲಿ ಅಡಿಕೆ, ಮಾವು ಮತ್ತು ದಾಳಿಂಬೆ ಬೆಳೆಯನ್ನು ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಒಳಪಡಿಸಿದೆ.

ಆಯಾ ತಾಲ್ಲೂಕಿಗೆ ಸಂಬಂಧಪಟ್ಟ ಬೆಳೆಗಳಿಗೆ ವಿಮೆ ಮಾಡಿಸುವ ರೈತರು ಕೂಡಲೇ ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಭೂಮಿ ಹೊಂದಿರುವ ದಾಖಲೆಗಳಾದ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಆಯಾ ತಾಲ್ಲೂಕಿನ ಯಾವುದಾದರು ರಾಷ್ಟ್ರೀಯ ಅಧಿಕೃತ ಬ್ಯಾಂಕ್‌ಗಳಲ್ಲಿ ನೋಂದಣಿ ಮಾಡಿಸಬಹುದಾಗಿದೆ. ಅಡಿಕೆ, ದಾಳಿಂಬೆ, ಪಪ್ಪಾಯ ಬೆಳೆಗಳ ವಿಮೆ ನೋಂದಣಿಗೆ ಜೂನ್ 30 ಹಾಗೂ ಮಾವು ಬೆಳೆಗೆ ಜುಲೈ 31 ಕಡೆಯ ದಿನವಾಗಿದೆ.

ಈ ಯೋಜನೆಯಡಿ 2021ರ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ ಮತ್ತು ಮೇಘ ಸ್ಪೋಟ ಸಂದರ್ಭದಲ್ಲಿ ಟರ್ಮ್ ಶೀಟ್‌ನಲ್ಲಿ ನಮೂದಿಸಿರುವ ರಿಸ್ಕ್ ಅವಧಿಯೊಳಗೆ ಬೆಳೆ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಛೇರಿಗಳಿಗೆ 72 ಗಂಟೆಯೊಳಗೆ ತಿಳಿಸಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸಬೇಕು.
ಈ ಯೋಜನೆಯಲ್ಲಿ ಒಳಪಡಿಸಲಾಗುವ ಎಲ್ಲಾ ಬೆಳೆಗಳಿಗೆ ಬೆಳೆ ಸಾಲ ಪಡೆಯುವ/ಪಡೆದ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾವುದು ಹಾಗೂ ಬೆಳೆ ಸಾಲ ಪಡೆಯದ ರೈತರಿಗೆ ಐಚ್ಚಿಕವಾಗಿ ಬೆಳೆ ವಿಮೆಗೆ ಒಳಪಡಿಸಲಾಗುವುದು. ಮಾರ್ಗಸೂಚಿ ಅನ್ವಯ ಬ್ಯಾಂಕಿನಲ್ಲಿ ಸಾಲ ಮಂಜೂರಾದ ಎಲ್ಲಾ ರೈತರನ್ನು ಈ ಯೋಜನೆಗೆ ಒಳಪಡಿಸಲಾಗುವುದು. ಸಾಲ ಪಡೆದ ರೈತರು ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ಇಚ್ಚಿಸದೇ ಇದ್ದಲ್ಲಿ ಬೆಳೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಸಂಬಂಧಿಸಿದ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.

ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 128000 ರೂ. ಗಳ ವಿಮಾ ಮೊತ್ತ ನಿಗಧಿಪಡಿಸಲಾಗಿದ್ದು, ರೈತರು 6400 ರೂ.ಗಳ ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು. ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 127000 ರೂ.ಗಳ ವಿಮಾ ಮೊತ್ತ ನಿಗಧಿಯಾಗಿದ್ದು, ರೈತರು 6350 ರೂ.ಗಳ ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು. ಪಪ್ಪಾಯ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 134000 ರೂ.ಗಳ ವಿಮಾ ಮೊತ್ತ ನಿಗಧಿಪಡಿಸಿದ್ದು, ರೈತರು 6700 ರೂ.ಗಳ ವಿಮಾ ಕಂತಿನ ಮೊತ್ತ ಹಾಗೂ ಮಾವು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 80000 ರೂ.ಗಳ ವಿಮಾ ಮೊತ್ತವನ್ನು ನಿಗಧಿಪಡಿಸಲಾಗಿದ್ದು, ರೈತರು 4000 ರೂ.ಗಳ ವಿಮಾ ಕಂತನ್ನು ಪಾವತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ತುಮಕೂರು ತಾಲೂಕಿನ‌ ರೈತರು ಮೊ.ಸಂ. 9844042356, ಗುಬ್ಬಿ(9686056705), ಚಿಕ್ಕನಾಯಕನಹಳ್ಳಿ (9538273964), ಕುಣಿಗಲ್(9448660766), ತಿಪಟೂರು(9964791910), ತುರುವೇಕೆರೆ(9448416334), ಕೊರಟಗೆರೆ (9535781963), ಮಧುಗಿರಿ(9448448970), ಶಿರಾ(9844042356) ಹಾಗೂ ಪಾವಗಡ ತಾಲೂಕಿನ‌ ರೈತರು ಮೊ.ಸಂ. 9482222090ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತುಮುಲ್ ಗೆ ₹19 ಕೋಟಿ‌ ನಷ್ಟ: ಹಾಲು ಖರೀದಿ ದರ ₹2 ಇಳಿಕೆ- ರೈತರಿಗೆ ಬರೆ

Publicstory


ತುಮಕೂರು: ತುಮಕೂರು ಸಹಕಾರಿ ಹಾಲು ಒಕ್ಕೂಟದ ರೈತರಿಂದ ಹಾಲು ಖರೀದಿಸುವ ದರವನ್ನು ₹ 2 ಕಡಿಮೆ ಮಾಡಿದೆ.‌ಒಕ್ಕೂಟ ನಷ್ಟದಲ್ಲಿರುವ ಕಾರಣ‌ ರೈತರಿಂದ ಖರೀದಿಸುವ ಹಾಲಿನ ದರ ಇಳಿಸಲಾಗುತ್ತಿದೆ ಎಂದು ಹೇಳಿದೆ.

ಕೊರೊನಾದಿಂದ‌ ಬಸವಳಿದಿದ್ದ ರೈತರಿಗೆ ಒಕ್ಕೂಟದ ನಿರ್ಧಾರ ಶಾಕ್ ನೀಡಿದೆ. ಸರ್ಕಾರ ನೆರವಿಗೆ ಧಾವಿಸದಿದ್ದಲ್ಲಿ ಹೈನೋದ್ಯಮಿಗಳಿಗೆ ಸಮಸ್ಯೆಯಾಗಲಿದೆ.

ಹಾಲು ದರ ಇಳಿಕೆ ಬಗ್ಗೆ ಒಕ್ಕೂಟದ ಅಧ್ಯಕ್ಷರ ಮಾತುಗಳು ಹೀಗಿವೆ.


ಮೇ-೨೦೨೧ರ ಮಾಹೆಯ ದಿನವಹಿ ಹಾಲು ಶೇಖರಣೆ ಸರಾಸರಿ ೮.೧೯ ಲಕ್ಷ ಲೀಟರ್ ಇದ್ದು, ಪ್ರಸ್ತುತ ಒಕ್ಕೂಟದ ದಿನವಹಿ ಹಾಲು ಶೇಖರಣೆ ೮.೬೫ ಲಕ್ಷ ಕೆ.ಜಿ.ಗಳಷ್ಟಾಗಿರುತ್ತದೆ. ಪ್ರತಿನಿತ್ಯ ೪.೪೬ ಲಕ್ಷ ಕೆ.ಜಿ ಹಾಲನ್ನು ನೇರವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಾಗಿ ಮಾರಾಟ ಮಾಡಲಾಗುತ್ತಿದ್ದು, ಹೆಚ್ಚುವರಿಯಾದ ೪.೧೯ ಲಕ್ಷ ಕೆ.ಜಿ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆಯಾಗಿ ಪರಿವರ್ತಿಸಲಾಗುತ್ತಿದೆ. ಕೋವಿಡ್-೧೯ ಸಾಂಕ್ರಾಮಿಕ ಕಾಯಿಲೆಯ ೨ನೇ ಅಲೆಯ ಹಿನ್ನೆಲೆಯಲ್ಲಿ ದಿನಾಂಕ ೨೪.೦೪.೨೦೨೧ ರಿಂದ ೧೪.೦೬.೨೦೨೧ರವರೆಗೂ ಸರ್ಕಾರವು ಲಾಕ್‌ಡೌನ್ ಘೋಷಿಸಿದ್ದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕುಂಠಿತಗೊಂಡು ಪ್ರಸ್ತುತ ೮೦ ರೂ. ಕೋಟಿ ಮೌಲ್ಯದ ೨೨೦೦ ಮೆಟ್ರಿಕ್ ಟನ್ ಹಾಲಿನಪುಡಿ ಹಾಗೂ ೧೫೦೦ ಮೆಟ್ರಿಕ್ ಟನ್ ಬೆಣ್ಣೆ ಮಾರಾಟವಾಗದೇ ಉಳಿದುಕೊಂಡಿದ್ದು, ಏಪ್ರಿಲ್-೨೦೨೧ ಹಾಗೂ ಮೇ-೨೦೨೧ ರ ಮಾಹೆಯಲ್ಲಿ ಸಂಸ್ಥೆಗೆ‌ ೧೯ ಕೋಟಿ ರೂ. ನಷ್ಠವುಂಟಾಗಿರುವುರಿಂದ ಹೆಚ್ಚುವರಿ ಹಾಲನ್ನು ಪುಡಿಯಾಗಿ ಪರಿವರ್ತಿಸಲು ತಗಲುವ ಸಾಗಾಣಿಕೆ, ಪರಿವರ್ತನಾ ಮತ್ತು ದಾಸ್ತಾನು ವೆಚ್ಚ ಒಕ್ಕೂಟಕ್ಕೆ ಹೊರೆಯಾಗುತ್ತಿರುವುದನ್ನು ಪರಿಗಣಿಸಿ ದಿನಾಂಕ ೦೭.೦೬.೨೦೨೧ ರಂದು ನಡೆದ ಆಡಳಿತ ಮಂಡಲಿ ಸಭೆಯಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸಿ ದಿನಾಂಕ ೦೮.೦೬.೨೦೨೧ ರಿಂದ ಅನ್ವಯವಾಗುವಂತೆ ಹಾಲಿನ ಖರೀದಿ ದರವನ್ನು ಲೀಟರ್ ಒಂದಕ್ಕೆ ೨/- ರೂ. ಕಡಿಮೆ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.
ಆದ್ದರಿಂದ ದಿನಾಂಕ ೦೮.೦೬.೨೦೨೧ ರಿಂದ ಅನ್ವಯಿಸುವಂತೆ ಸಂಘಗಳಿಂದ ಖರೀದಿಸುವ ಶೇ ೩.೫ ಜಿಡ್ಡಿನಾಂಶ ಹಾಗೂ ಶೇ ೮.೫೦ ಎಸ್.ಎನ್.ಎಫ್. ಗುಣಮಟ್ಟದ ಪ್ರತಿ ಕೆ.ಜಿ. ಹಾಲಿಗೆ ರೂ.೨೫.೯೩ ಮತ್ತು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ.೨೫/- ಗಳಂತೆ ನಿಗದಿಪಡಿಸಲಾಗಿದೆ. ಪ್ರಸ್ತುತ ಒಕ್ಕೂಟದಲ್ಲಿ ಶೇಖರಣೆಯಾಗುತ್ತಿರುವ ಶೇ ೮.೫೦ ಎಸ್.ಎನ್.ಎಫ್ ಗುಣಮಟ್ಟ ಇರುವ ಹಾಲಿನ ಪ್ರಮಾಣ ಶೇ ೯೦ ಇದ್ದು ದಿನಾಂಕ ೦೮.೦೬.೨೦೨೧ ರಿಂದ ಸಂಘಗಳಿಂದ ಒಕ್ಕೂಟ ಖರೀದಿಸುವ ಶೇ ೪.೧ ಜಿಡ್ಡಿನ ಪ್ರತಿ ಕೆಜಿ ಹಾಲಿಗೆ ರೂ.೨೭.೨೨ ಹಾಗೂ ಉತ್ಪಾದಕರಿಂದ ಸಂಘಕ್ಕೆ ಖರೀದಿಸುವ ಶೇ ೪.೧ ಜಿಡ್ಡಿನ ಪ್ರತಿ ಲೀಟರ್ ಹಾಲಿಗೆ ರೂ.೨೬.೯೯ ದರ ನಿಗದಿಪಡಿಸಿದೆ.
ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ನಿಂದ ಸಂಘದ ಸದಸ್ಯರು / ಸಿಬ್ಬಂದಿ ಸಹಜ ಮರಣ ಹೊಂದಿದಲ್ಲಿ ೫೦೦೦೦/- ರೂ. ಮರಣ ಪರಿಹಾರ ಧನ ನೀಡುತ್ತಿದ್ದು, ಕೋವಿಡ್-೧೯ ರ ಕಾಯಿಲೆಯಿಂದಾಗಿ ಮರಣ ಹೊಂದಿದ ಸಂಘದ ಸದಸ್ಯರು / ಸಿಬ್ಬಂದಿಗೆ ೧ ಲಕ್ಷ ರೂ. ಮರಣ ಪರಿಹಾರ ಧನ ನೀಡಲು ತೀರ್ಮಾನಿಸಲಾಗಿದೆ.
ಒಕ್ಕೂಟದ 2770 ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮಾಸ್ಕ್, face shields ಹಾಗೂ ಸ್ಯಾನಿಟೈಸರ್ ಗಳನ್ನು ಉಚಿತವಾಗಿ ನೀಡಲಾಗಿದೆ.

ಜಿಲ್ಲೆಯ ಹಾಲು ಉತ್ಪಾದಕರು ಎಂದಿನಂತೆ ಸರ್ಕಾರ ಸೂಚಿಸಿರುವ ಕೋವಿಡ್ ನಿಯಮ / ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸಂಘಗಳಿಗೆ ಹಾಲು ಹಾಕಲು ಒಕ್ಕೂಟದ ಅಧ್ಯಕ್ಷ‌ ಸಿ.ವಿ.ಮಹಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ತುಮಕೂರಿಗೆ ಲಕ್ಷ ಲಕ್ಷ ದೇಣಿಗೆ: ಅಮೇರಿಕ ಕನ್ನಡಿಗರ ಕೊಡುಗೆ

0

ಶಸ್ತ್ರಚಿಕಿತ್ಸಕ ಡಾ. ನರಸಿಂಹಮೂರ್ತಿ, ವೈದ್ಯಾಧಿಕಾರಿ ಡಾ.ಪ್ರಾಣೇಶ್, ಹಿರಿಯ ಪುರುಷ ಆರೋಗ್ಯ ಸಹಾಯಕ ಬೋರೇಗೌಡ, ಡಾ. ಎ.ನಾಗರಾಜ್, ಲಯನ್ಸ್ ಅಧ್ಯಕ್ಷ ರಾಜಣ್ಣ, ವಕೀಲ ಲಯನ್ ಪಿ.ಎಚ್.ಧನಪಾಲ್, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್ (ರಾಜು),ಲಯನ್ ಭಾಸ್ಕರ್, ಪ್ರಸಾದ್ ಚಿತ್ರದಲ್ಲಿ ಇದ್ದಾರೆ. ಎರಡನೇ ಚಿತ್ರ: ಕನ್ನಡತಿ ಡಾ. ರಾಜೇಶ್ವರಿ ಸೊನ್ನಿ!

ತುರುವೇಕೆರೆ ಪ್ರಸಾದ್


ತುಮಕೂರು: ಜನನೀ, ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಅಂತಾರೆ. ಹೆತ್ತತಾಯಿ ಮತ್ತು ಜನ್ಮಭೂಮಿ ಎರಡೂ ಸ್ವರ್ಗಕ್ಕಿಂತ ಶ್ರೇಷ್ಠವಾದವುಗಳು.

ನಾವು ಎಲ್ಲೇ ಇದ್ದರೂ ನಮ್ಮ ಜೀವತಾವಧಿಯಲ್ಲಿ ಈ ಎರಡೂ ಋಣ ತೀರಿಸುವ ಪ್ರಯತ್ನ ಮಾಡಲೇಬೇಕು. ಅಂತಹದೊಂದು ಪ್ರಯತ್ನವನ್ನು ಅಮೇರಿಕಾದ ಫ್ಲೋರಿಡಾದಲ್ಲಿ ನೆಲೆಸಿರುವ ತುರುವೇಕೆರೆಯ ಸಂಪಿಗೆ ಗ್ರಾಮದವರಾದ ಡಾ. ರಾಜೇಶ್ವರಿ ಮಾಡುತ್ತಿದ್ದಾರೆ.

ಸಂಪಿಗೆಯ ಕೃಷಿಕರಾದ ಎಸ್.ಎಂ.ಸೀತಾರಾಮಯ್ಯನವರ ಮಗಳಾದ ರಾಜೇಶ್ವರಿ ಬೆಂಗಳೂರಿನಲ್ಲಿ ವೈದ್ಯಶಾಸ್ತ್ರ ಅಧ್ಯಯನ ಮಾಡಿ 1976ರಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೇರಿಕಾಗೆ ತೆರಳಿ ಅಲ್ಲೇ ವೈದ್ಯವೃತ್ತಿ ಮಾಡುತ್ತಾ ನೆಲೆಸಿದರು. ಅಲ್ಲಿನ ಸಮಾನ ಮನಸ್ಕ ವೈದ್ಯರೆಲ್ಲಾ ಸೇರಿ ಕರ್ನಾಟಕ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸಂಘವನ್ನು ( ಕೆಎಸ್‍ಎಂಡಿ) ಸ್ಥಾಪಿಸಿದರು.

ಕರ್ನಾಟಕ ವೈದ್ಯಕೀಯ ಸೊಸೈಟಿ( ಕೆಎಂಎಸ್)ಗೆ ವೈದ್ಯಕೀಯ ಕಮ್ಮಟಗಳನ್ನು, ವಿಚಾರಸಂಕಿರಣಗಳನ್ನು ಏರ್ಪಡಿಸಲು ವಾರ್ಷಿಕ ನೆರವು ನೀಡುವುದು, ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಇ-ಗ್ರಂಥಾಲಯ ಸ್ಥಾಪನೆ, ಕರ್ನಾಟಕದ ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ನಿಯಮಿತವಾಗಿ ವೈದ್ಯಕೀಯ ಕ್ಷೇತ್ರದ ಹೊಸ ಹೊಸ ಅವಿಷ್ಕಾರಗಳ ಕುರಿತಾದ ಆಡಿಯೋ, ವೀಡಿಯೋಗಳನ್ನು ಕಳಿಸುವುದು, ಕರ್ನಾಟಕದ ಗ್ರಾಮೀಣ ವೈದ್ಯಕೀಯ ಸಂಸ್ಥೆಗಳಿಗೆ ಸಹಾಯ ಮಾಡುವುದು, ಗ್ರಾಮೀಣ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ಕೊಳ್ಳಲು ಧನಸಹಾಯ ನೀಡುವುದು ಮೊದಲಾದ ಹತ್ತು ಹಲವು ಉದ್ದೇಶಗಳೊಂದಿಗೆ ಕೆಎಸ್‍ಎಂಡಿ ಅಸ್ತಿತ್ವಕ್ಕೆ ಬಂದಿತು. ಸುಮಾರು 4 ದಶಕಗಳಿಂದ ನಿರಂತರವಾಗಿ ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಸಂಸ್ಥೆಯಲ್ಲಿ ಈಗ 2000ಕ್ಕೂ ಹೆಚ್ಚು ಸದಸ್ಯರಿದ್ದಾರೆ.

ಸಂಪಿಗೆ ಗ್ರಾಮದ ಡಾ.ರಾಜೇಶ್ವರಿ ಈಗ ಈ ಸಂಸ್ಥೆಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ವರ್ಷ ಕರೋನಾ ವಿಶ್ವದೆಲ್ಲೆಡೆ ವ್ಯಾಪಿಸಿ ಲಕ್ಷಾಂತರ ಜನ ಸಾವು, ನೋವಿಗೆ ಈಡಾದಾಗ ಸಹಜವಾಗಿಯೇ ಡಾ.ರಾಜೇಶ್ವರಿ ಮತ್ತು ಅವರ ಸಂಸ್ಥೆ ಕೆಎಸ್‍ಎಂಡಿ ಕರ್ನಾಟಕದ ಜನರ ಬಗ್ಗೆ ತೀವ್ರ ಆತಂಕ ಪಟ್ಟಿತು, ಕೂಡಲೇ ಕಾರ್ಯೋನ್ಮುಖರಾದ ಸಂಘದ ಸದಸ್ಯರು ತಮ್ಮ ಹುಟ್ಟೂರಿನ ಜನರ ಸೇವೆಗಾಗಿ ಪ್ರತ್ಯೇಕ ಕೋವಿಡ್ ನಿಧಿಯೊಂದನ್ನು ಸ್ಥಾಪಿಸಿದರು.

ಆ ನಿಧಿಯ ಮುಖಾಂತರ ಕರ್ನಾಟಕದ ಮೂಲೆ ಮೂಲೆಗಳಲ್ಲೂ ಕೋವಿಡ್ ಸೋಂಕಿತರ ಉಪಚಾರಕ್ಕಾಗಿ ಟೊಂಕಕಟ್ಟಿ ನಿಂತರು. ಈವರೆಗೆ ಕೆಎಸ್‍ಎಂಡಿ ಸುಮಾರು 75 ಲಕ್ಷಕ್ಕೂ ಹೆಚ್ಚು ಮೌಲ್ಯದ ಉಪಕರಣಗಳನ್ನು ನಾಡಿನಾದ್ಯಂತ ಆಸ್ಪತ್ರೆಗಳಿಗೆ ಕೊಡುಗೆಯಾಗಿ ನೀಡಿದೆ.

ಸುಮಾರು ರೂ. 50 ಲಕ್ಷ ಮೌಲ್ಯದ 100 ಆಕ್ಸಿಜನ್ ಸಾಂದ್ರಕಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿದೆ. ಸುಮಾರು 3 ಲಕ್ಷ ರೂ ಬೆಲೆಯ ಪಲ್ಸ್‍ಆಕ್ಸಿಮೀಟರ್‍ಗಳನ್ನು ಗ್ರಾಮೀಣ ಪ್ರದೇಶದ ವಿವಿಧ ಆಸ್ಪತ್ರೆಗಳಿಗೆ ನೀಡಲಾಗಿದೆ.

ಕೋವಿಡ್‍ನಿಂದ ಸಂಕಷ್ಟದಲ್ಲಿರುವ ಜನರಿಗೆ ಆಹಾರ ತಲುಪಿಸುವ ಸಲುವಾಗಿ ಅಕ್ಷಯಪಾತ್ರೆ ಯೋಜನೆಯೊಂದಕ್ಕೇ ರೂ. 15 ಲಕ್ಷ ದೇಣಿಗೆಯಾಗಿ ನೀಡಲಾಗಿದೆ. ಡಾ.ರಾಜೇಶ್ವರಿ ತುರುವೇಕೆರೆ ತಾಲ್ಲೂಕಿಗೆ 3 ಆಕ್ಸಿಜನ್ ಸಾಂದ್ರಕಗಳನ್ನು ಹಾಗೂ ಹುಟ್ಟೂರಾದ ಸಂಪಿಗೆಗೆ 2 ಆಕ್ಸಿಜನ್ ಸಾಂದ್ರಕಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಕೊಡುಗೆಯಾಗಿ ನೀಡಿದ್ದಾರೆ.

ಜೂನ್ 1ರಂದು ಈ ಆಕ್ಸಿಜನ್ ಸಾಂದ್ರಕಗಳನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಕೆಎಸ್‍ಎಂಡಿ ಪರವಾಗಿ ಸ್ಥಳೀಯ ಲಯನ್ಸ್ ಕ್ಲಬ್ ಪದಾಧಿಕಾರಿಗಳು ತಾಲ್ಲೂಕು ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಿದರು. ಶಸ್ತ್ರಚಿಕಿತ್ಸಕ ಡಾ. ನರಸಿಂಹಮೂರ್ತಿ, ಆಯುರ್ ವೈದ್ಯಾಧಿಕಾರಿ ಡಾ.ಪ್ರಾಣೇಶ್, ಹಿರಿಯ ಪುರುಷ ಆರೋಗ್ಯ ಸಹಾಯಕ ಬೋರೇಗೌಡ, ಡಾ. ಎ.ನಾಗರಾಜ್, ಲಯನ್ಸ್ ಅಧ್ಯಕ್ಷ ರಾಜಣ್ಣ, ವಕೀಲ ಲಯನ್ ಪಿ.ಎಚ್.ಧನಪಾಲ್, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್ (ರಾಜು),ಲಯನ್ ಭಾಸ್ಕರ್, ಪ್ರಸಾದ್ ಮೊದಲಾದವರು ಇದಕ್ಕೆ ಸಾಕ್ಷಿಯಾದರು.

ಪ್ರತಿಯೊಬ್ಬರೂ ತಮ್ಮೂರಿನ ಋಣ ತೀರಿಸಲು ಹೀಗೆ ಮುಂದಾದರೆ ಜನರ ಬವಣೆ ದೂರಾಗಿ ನೆಮ್ಮದಿಯ ನಿಟ್ಟುಸಿರಿಟ್ಟಾರು. ಧನ್ಯವಾದಗಳು ರಾಜೇಶ್ವರಿ ಮೇಡಂ!

ಭಾನುವಾರದ ಕವಿತೆ:ಮುಂಗಾರು ಮಳೆ

ಡಾ// ರಜನಿ ಎಂ

ಗುಡುಗು ಮಿಂಚು.. ಜಿಟಿ ಜಿಟಿ ಸೋನೆ
ಮೆಲ್ಲನೆ ತಂಗಾಳಿ..

ಮಳೆ ಹನಿ ..ಮುಖವ ಮುತ್ತಿಕ್ಕಲು
ಅಡ್ಡ ಬರುವ…. ಮುಖಗವಸು

ಹರಿದು ಮೋರಿಯಲಿ..ಮಳೆ ನೀರು
ಸಣ್ಣ ಸಣ್ಣ ಹೊಂಡ..

ಆಕೆ ರಂಗೋಲಿ ಬಿಡುತ್ತಾ
ನಕ್ಕಳೇ ? ಕಾಣಲಿಲ್ಲ

ಪುಟ್ಟ ಮೊಮ್ಮಗಳಿಗೆ
ಕುಯ್ ಕುಂಯ್ ಶೂಸ್ …ಮಾಸ್ಕ್

ಕೈಹಿಡಿದು ಬರುತ್ತಿದ್ದ ತಾತ?…
ತಾತ ಮಾಯ

ಅಮೆಜಾನ್ ಆರ್ಡರ್
ಹೊಸ್ತಿಲಲ್ಲಿ

ಜೊಮೆಟೋ ಪಾರ್ಸೆಲ್
ಗ್ಲೌಸ್ ಕೈ

ಮೈ ಮೇಲೆ ಮಕ್ಕಳು ಬಿದ್ದು
ಆಡುತ್ತಿದ್ದವೇ?

ಶಾಲೆಗೆ ತಿಂಡಿ
ಬಾಕ್ಸ್? ಕಟ್ಟುತ್ತಿದ್ದೆವೆ?

ಪಕ್ಕದ ಮನೆಯಲ್ಲಿ
ಹರಟೆ ? ಕೊಚ್ಚುತ್ತಿದ್ದೆವೆ?

ಕೈಯ ಮಿದು… ಕಣ್ಣ ಹನಿ
ಎದೆಯ ಬಿಸಿ ಕಾಣೆಯೆ?

ಧೋ ಮಳೆ..
ಮಧುರ ನೆನಪು

ಅಂಗಳದಲ್ಲೇ ಬಿದ್ದಿರುವ ಪೇಪರ್
ಹಾಕದಿರುವ ರಂಗೋಲಿ..

ಮುಂದೂಡಿದ ಮದುವೆ
ಹೋದ ಕೆಲಸ…

ಸ್ಕೂಲ್ ಎಂದರೆ ಏನು?
ಎನ್ನುವ ಟಿಕ್ ಟಾಕ್..

ಫುಡ್ ಕಿಟ್ ಪಡೆದ ಕೈ..
ಕಿತ್ತಾಕಿದ ಕಲ್ಲಂಗಡಿ..

ಮೊಬೈಲಲ್ಲಿ ಬ್ಲಾಕ್ ಫಂಗಸ್
ಫೋಟೋ..ಕಷಾಯದ ರೆಸಿಪಿ

ಗಂಗೆ ತಟದಲ್ಲಿ
ಹೆಣದ ಬಟ್ಟೆ…

ಸಂಗಮದಲ್ಲಿ..
ಸಾಮೂಹಿಕ ಅಸ್ತಿ

ಆಕಾಶದ ಅಳು….

ಮಂಗಾರು ಮಳೆ -21

ಮೈಸೂರು ಜನತೆಗೆ ಯಾರು ಕ್ಷಮೆ ಕೇಳಬೇಕು ??

Public story


ಈ ಹಿಂದೆ ರೋಹಿಣಿ ಸಿಂಧೂರಿ ಅವರು ಚಾಮರಾಜನಗರಕ್ಕೆ ಆಕ್ಸಿಜನ್ ಸರಬರಾಜು ಮಾಡುವ ವಿಷಯದಲ್ಲಿ ತಪ್ಪು ಮಾಡಿಲ್ಲ ಎ೦ದು ತೀರ್ಮಾನ ಬಂದಾಗ ಚಾಮರಾಜನಗರ ಡಿಸಿ ಮೈಸೂರು ಜನತೆಯ ಕ್ಷಮೆ ಕೋರಬೇಕು ಎಂದು ಹೇಳಿಕೆ ನೀಡಿದ್ದರು.

ಚಾಮರಾಜನಗರ ಡಿಸಿ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಯಾರೂ ಇವರ ವರ್ಗಾವಣೆ ಮಾಡಿ ಎಂದು ದಂಗೆ ಏಳಲಿಲ್ಲ, ಈಗ ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡಾಗಲೂ ಯಾರೂ ತಲೆ ಕೆಡಿಸಿಕೊಂಡಿಲ್ಲ.

300 km ಸೈಕಲ್ ಹೊಡೆದರೂ ಯಾರೂ ಧ್ವನಿ ಎತ್ತಿಲ್ಲ.

ಆದರೆ CSR ಫಂಡ್ಸ್ ಬಗ್ಗೆ ಕೂಗು ಎದ್ದಿದೆ. ಈಜು ಕೊಳದ ಬಗ್ಗೆ ಧ್ವನಿ ಎದ್ದಿದೆ.
ಇವರ ಅಧಿಕಾರ ವ್ಯಾಪ್ತಿಯ ವೈಯಕ್ತಿಕ ತಪ್ಪುಗಳಿಗೆ ಮೈಸೂರು ಜನತೆ ಎಂಬ ಪದ ಯಾಕೆ?
ಏಕಾಏಕಿ ರಾತ್ರೋ ರಾತ್ರಿ ಡಿಸಿ ವರ್ಗಾವಣೆ ಮಾಡಲು ಧ್ವನಿ ಜೋರು.

ಇಡೀ ಮಹಾನಗರ ಪಾಲಿಕೆ ಮೊದಲೇ ತಯಾರಾಗಿತ್ತೆ?
‘ಮೈಸೂರು ಬಿಟ್ಟು ತೊಲಗಿ’ ಎನ್ನಲು ಈಕೆ ಇಡೀ ಮೈಸೂರು ಜನತೆಯೆ?

ಅಧೀನ ಸಿಬ್ಬಂದಿಗಳ ಕರ್ತವ್ಯವನ್ನು ಕಟ್ಟುನಿಟ್ಟಾಗಿ
ಕೆಲಸ ಕೇಳಿದರೆ ಈ ರೀತಿ ವ್ಯವಸ್ಥಿತ ಸಂಚು ಮಾಡುವುದು ವಿಪರ್ಯಾಸವೇ ಸರಿ.

ಆದರೆ ಮೈಸೂರಿನ ವಿಶೇಷ ಏನೆಂದರೆ ಇಬ್ಬರೂ IAS ಗಳು ಮೈಸೂರು ಜನತೆಯ ಅಂತಸ್ಸಾಕ್ಷಿ ಥರ ಹೇಳಿಕೆ ಕೊಡುವುದು ತಪ್ಪು.

ಈಜು ಕೊಳವನ್ನು ಮೈಸೂರು ಜನತೆ ಕೇಳಿಲ್ಲ.
CSR FUNDS ನ ಲೆಕ್ಕವನ್ನು ಮೈಸೂರು ಜನತೆಗೆ
ಮಾಧ್ಯಮದ ಮೂಲಕ ನೀಡಲಿ. ಪ್ರತಾಪ ಸೂರ್ಯ ಸಂಸದರ ಲೆಕ್ಕ ಪ್ರಶ್ನೆ ಇದಕ್ಕೆ ಪೂರ್ಣ ಉತ್ತರ ಸಿಕ್ಲಿಲ್ಲ.

ಆಮೇಲೆ ‘ಮೈಸೂರು ಬಿಟ್ಟು ತೊಲಗಿ’ ,,ಮೈಸೂರು ಜನತೆ ಕ್ಷಮೆ ಕೇಳಲಿ ‘ಎಂದು ಹೇಳಲಿ.

ಚಿಕ್ಕ ಅಧಿಕಾರಿಗಳಿಗೆ ಸಣ್ಣ ತಪ್ಪುಗಳಿಗೆ ನೋಟಿಸ್ ನೀಡುವ ಇವರು ನ್ಯಾಯಬದ್ದ ರೀತಿಯಲ್ಲಿ ಕರ್ತವ್ಯ ನಿರ್ವಹಿಸದೆ ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ಒಬ್ಬರ ಮೇಲೆ ಒಬ್ಬರು ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆ ಮುಖ್ಯ ಕಾರ್ಯರ್ಶಿ ಮೇಲೆ ಇದೆ. IAS ಎಂದರೆ ಪ್ರಶ್ನಾತೀತರೆ? ಎಂಬ ಭಾವನೆ ಜನರಲ್ಲಿ ಮಾಡ ಬಾರದು.

ಎಲ್ಲರ ಮುಖ ಮುನಿಸಿಗೆ ಬರೇ ಎಲ್ಲರ ವರ್ತನೆ ಕಾರಣವೋ? ಅಥವಾ ಅನಾಯಾಸ ಕಾಂಚಾಣದ ಮೇಲೆ ಕಿತ್ತಾಟವೊ ?

ಮೈಸೂರು ಜನತೆಯ ದುರಾದೃಷ್ಟವೋ ಎಂದು ಆ ಮೈಸೂರು ಚಾಮುಂಡಿಯೇ ನ್ಯಾಯ ನೀಡಬೇಕು.

ಕೊರೋನಾ ಎಂಬ ಮಾರಿಯಿಂದ ನಲುಗುತ್ತಿರುವ “ಮೈಸೂರಿನ ಅಮಾಯಕ ಜನತೆ “ಯಾವುದೇ ಭ್ರಷ್ಟ ಅಧಿಕಾರಿಯ, ಕರ್ತವ್ಯ ಲೋಪ ಮಾಡುವ, ಬರೇ ಮಹಾನಗರ ಪಾಲಿಕೆಯ, ಅಧಿಕಾರಿಗಳ ಲೆಕ್ಕ ಕಾದಾಟದ ಬಲಿಪಶುಗಳು ಅಲ್ಲ, ಅಂತಃಸ್ಸಾಕ್ಷಿ ಮೊದಲೇ ಅಲ್ಲ ಎಂದು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ತಿಳಿದು ಮಾತಾಡಲಿ.

ಕನ್ನಡಿಗರನ್ನು ಕೆಣಕಿದ ಗೂಗಲ್

0

Ugliest language In India ಎಂದು ಗೂಗಲ್ ನಲ್ಲಿ ಟೈಪ್ ಮಾಡಿದರೆ ಕನ್ನಡವೆಂದು ಉತ್ತರಿಸುತ್ತಿತ್ತು ಗೂಗಲ್

ನಮ್ಮ ಭಾಷೆ ನಮ್ಮ ಅಭಿಮಾನ.
ಭಾಷಾಭಿಮಾನಕ್ಕೆ ಧಕ್ಕೆ ಉಂಟುಮಾಡಿರುವ ಗೂಗಲ್ ತಪ್ಪನ್ನು ಸರಿಪಡಿಸಿಕೊಳ್ಳಲು
ಕನ್ನಡಿಗರ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ.

ನಾವು ಏನು ಮಾಡಬೇಕು ???

Ugliest language in India ಎಂದು ಗೂಗಲ್ ನಲ್ಲಿ search ಮಾಡಿ ಕೆಳಗೆ feedback ಎಂದು ಕಾಣುವಲ್ಲಿ ಕ್ಲಿಕ್ ಮಾಡಿ

ಮೂರನೆ ಆಯ್ಕೆಯನ್ನು ಆಯ್ದುಕೊಂಡು ನಮ್ಮ ಅನಿಸಿಕೆಯನ್ನು ಅಲ್ಲಿ ನಮೂದಿಸಿ. ಹೀಗೆ ಸಾವಿರಾರು feedback ಬಂದರೆ ಗೂಗಲ್ ತನ್ನ ತಪ್ಪನ್ನು ಸರಿ ಪಡಿಸಿಕೊಳ್ಳುತ್ತದೆ.

ಭಾಷೆಯ ಗೌರವ ಉಳಿಸಿಕೊಳ್ಳಲು ನಮ್ಮ ಹೋರಾಟ..ಅಭಿಯಾನ ಪ್ರಾರಂಭ ವಾದ ಕೇಲವೇ ಘಂಟೆಯಲ್ಲಿ. ಗೂಗಲ್ ನ ಉತ್ತರ ಬದಲಾಗಿದೆ. ನೀವೇ ನೋಡಿ… ಆ ಉತ್ತರ ಏನಾಗಿದೆ ಎಂದು