ತೇಜಾವತಿ ಎಚ್.ಡಿ.
ಮಿಂಚಿ ಹೋಗುವ ಮುನ್ನ…..
ನಾನು ಸತ್ತರೆ ನೀವು ಅಳುವಿರಿ
ನಿಮ್ಮ ಕೂಗು ನನಗೆ ಕೇಳಿಸದು
ನನ್ನ ನೋವಿಗೆ ಈಗಲೇ ಮರುಗಲಾಗದೇ…
ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇ
ಮನೆಯತ್ತ ಧಾವಿಸುವಿರಿ
ಶ್ರದ್ದಾಂಜಲಿ ಹೇಳೋ ಬದಲು
ಈವಾಗಲೇ ಸುಖ ದುಃಖ ಹಂಚಿಕೊಳ್ಳಲಾಗದೇನು…
ಮಿಂಚಿ ಹೋಗುವ ಮುನ್ನ
ಹಂಚಿ ಬಾಳುವ ಬದುಕು ಸಹ್ಯವಲ್ಲವೇನು…
– ಡಾ. ಸಿದ್ದಲಿಂಗಯ್ಯ
ಹೀಗೊಂದು ಭಾವಪೂರ್ಣ ವಿದಾಯದ ಕವಿತೆಯನ್ನು ಬರೆದದ್ದು ಖ್ಯಾತ ದಲಿತ-ಬಂಡಾಯ ಸಾಹಿತಿ ಎಂದೇ ಪ್ರಸಿದ್ಧರಾಗಿದ್ದ ಸಿದ್ಧಲಿಂಗಯ್ಯನವರು. ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಕೊರೋನ ಸೋಂಕಿಗೆ ತುತ್ತಾಗಿ ಚೇತರಿಸಿಕೊಳ್ಳಲಾಗದೆ ಬಹು ಅಂಗಾಂಗ ವೈಫಲ್ಯದಿಂದಾಗಿ ಜೂನ್ 11, 2021 ರಂದು ಕೊನೆಯುಸಿರೆಳೆದು ನಮ್ಮನ್ನಗಲಿದ ದಲಿತ- ಬಂಡಾಯ ಸಾಹಿತ್ಯದ ಧೀಮಂತ ಪ್ರತಿಭೆ ಇವರು.
ಜನನ ಮತ್ತು ವಿದ್ಯಾಭ್ಯಾಸ :-
ಅವರು ಜನಿಸಿದ್ದು 1954 ರ ಫೆಬ್ರವರಿ 3 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ. ತಂದೆ ದೇವಯ್ಯ ತಾಯಿ ವೆಂಕಟಮ್ಮ. ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಇವರಿಗೆ ಮಲ್ಲೇಶ್ವರಂ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುವಾಗಲೇ ಕವಿತೆ ಬರೆಯುವ ಗೀಳು ಹತ್ತಿತ್ತು. ವಿದ್ಯಾರ್ಥಿದೆಸೆಯಲ್ಲೇ ಉತ್ತಮ ಭಾಷಣಕಾರರೂ ಆಗಿ ಗುರುತಿಸಿಕೊಂಡಿದ್ದರು.
ನುಡಿನಮನ: ಶಾಸಕ ಬಿ.ಸಿ.ಗೌರಿಶಂಕರ್ ಅವರಿಂದ
ದಲಿತ ಕವಿ ಎಂದೇ ಪ್ರಸಿದ್ಧರಾಗಿದ್ದ ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ (67) ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ..
ವಿದ್ಯಾರ್ಥಿ ಜೀವನದಿಂದಲೇ ಹೋರಾಟವನ್ನು ಮೈಗೂಡಿಸಿಕೊಂಡಿದ್ದ ಶ್ರೀಯುತರು ಹಲವಾರು ಕನ್ನಡಪರ, ರೈತಪರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಡಾ.ಸಿದ್ದಲಿಂಗಯ್ಯ ನವರು ದಲಿತ ಹೋರಾಟ & ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು.
“ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ” ವೆಂಬ ಬಂಡಾಯ ಕ್ರಾಂತಿ ಗೀತೆ ರಾಷ್ಟ್ರದಲ್ಲೆ ಸಂಚಲನ ಮೂಡಿಸಿದ ಗೀತೆಯಾಗಿತ್ತು.
ಡಾ.ಸಿದ್ದಲಿಂಗಯ್ಯ ನವರು ರಾಜ್ಯದ ಹಾಗೂ ರಾಷ್ಟ್ರದ ಪ್ರತಿಯೊಂದು ವಿಶ್ವವಿದ್ಯಾನಿಲಯದಲ್ಲೂ ತಮ್ಮ ಸ್ನೇಹಿತ & ಶಿಷ್ಯ ವೃಂದವನ್ನೆ ಸ್ಥಾಪಿಸಿದ್ದರು. ಇಂದು ಅವರಿಲ್ಲದಿರುವುದೆಂಬ ನೋವು ನನ್ನನ್ನು ಸೇರಿದಂತೆ ರಾಜ್ಯ & ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಶ್ರೀಯುತರ ಅಗಲಿಕೆಯು ಅಪಾರ ಸ್ನೇಹಿತರು, ಶಿಷ್ಯ ವೃಂದ, & ಕುಟುಂಬದವರನ್ನು ಅನಾಥರನ್ನಾಗಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಾನ್ ಬುದ್ಧರಲ್ಲಿ ಪ್ರಾರ್ಥಿಸುತ್ತೇನೆ.
ಡಿ.ಸಿ ಗೌರಿಶಂಕರ್
ಶಾಸಕರು
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ.
ಮುಂದೆ 1974 ರಲ್ಲಿ ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನಿಂದ ಕನ್ನಡ ಐಚ್ಚಿಕ ವಿಭಾಗದಲ್ಲಿ ಬಿ ಎ ಆನರ್ಸ್ ಪದವಿಯನ್ನು ಪಡೆದರು. 1976 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊ. ಡಿ ಎಲ್ ನರಸಿಂಹಾಚಾರ್ಯ ಸ್ವರ್ಣಪದಕದೊಂದಿಗೆ ಎಂ ಎ ಪದವಿಯನ್ನು ಪಡೆದುಕೊಂಡರು.
ತದನಂತರ 1989 ರಲ್ಲಿ ಪ್ರೊ. ಜಿ ಎಸ್ ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ಗ್ರಾಮದೇವತೆಗಳು ‘ ಎಂಬ ವಿಷಯವನ್ನು ಕುರಿತ ಪ್ರೌಢ ಪ್ರಬಂಧದ ಮೇಲೆ ಪಿ ಎಚ್ ಡಿ ಪದವಿಯನ್ನು ಪಡೆದರು.
ವೃತ್ತಿ ಮತ್ತು ಪ್ರವೃತ್ತಿ :-
ಸಿದ್ಧಲಿಂಗಯ್ಯನವರು ಕೇವಲ ನಾಡಿನ ಹೆಮ್ಮೆಯ ಕವಿಯಷ್ಟೇ ಅಲ್ಲ, ಅಧ್ಯಾಪಕ, ಸಾಹಿತಿ, ಆಡಳಿತಗಾರ, ಚಳುವಳಿಗಾರ, ಶಾಸಕ, ಪ್ರಗತಿಪರ ಚಿಂತನೆ, ವೈಚಾರಿಕತೆ ಮತ್ತು ಹಾಸ್ಯ, ವಿಡಂಬನಾ ಪ್ರಜ್ಞೆಗಳನ್ನೂ ಮೈಗುಡಿಸಿಕೊಂಡಿದ್ದಂತಹ ವಿಶಿಷ್ಟ ವ್ಯಕ್ತಿಯಾಗಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಚಳುವಳಿಗೆ ಧುಮುಕಿದ ಇವರು ಮುಂದೆ ಮೊದಲ ‘ಬಂಡಾಯ ಸಾಹಿತ್ಯ ಸಮ್ಮೇಳನ’ ಸಂಘಟಿಸುವುದರಲ್ಲಿ ಯಶಸ್ವಿಯಾಗುವುದರೊಂದಿಗೆ ಸಂಘಟನೆಗೇ ಬಹುದೊಡ್ಡ ಶಕ್ತಿಯಾದರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ನಡೆದ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯದ ಸಮ್ಮೇಳನಾಧ್ಯಕ್ಷರಾಗಿದ್ದರು. ಇವರು ಎರಡು ಬಾರಿ (1988-94 ಮತ್ತು 1995-2000) ವಿಧಾನ ಪರಿಷತ್ ನ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.
“ದಲಿತರು, ರೈತರು, ಕಾರ್ಮಿಕರು ತಮ್ಮ ಮೆರವಣಿಗೆ, ಹೋರಾಟಗಳಲ್ಲಿ ನನ್ನ ಕವಿತೆಗಳನ್ನು ಹಾಡಿ ಕೇಳಿದ ಸಂದರ್ಭಗಳೇ ನನ್ನ ಕಾವ್ಯದ ಸಾರ್ಥಕ ಕ್ಷಣಗಳು” ಎಂದು ಅಭಿಮಾನಪಡುತ್ತ ‘ದಲಿತರ ಆದಿಕವಿ’ ಎಂದೇ ಬಿಂಬಿತರಾಗಿದ್ದವರು ಸಿದ್ಧಲಿಂಗಯ್ಯನವರು. ಇವರು ಗೀಚಿದ ಅಕ್ಷರಗಳೆಲ್ಲಾ ಕ್ರಾಂತಿಯ ಕಹಳೆಯೂದಿ ನೊಂದವರ ನಾಲಗೆಗಳಲ್ಲಿ ನಿತ್ಯದ ಪ್ರಾರ್ಥನಾ ಗೀತೆಗಳಾದವು.
“ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ ”
“ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು
ವದೆಸಿಕೊಂಡು ವರಗಿದೋರು ನನ್ನ ಜನಗಳು
ಹೊಲವ ಉತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು
ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು “(ನನ್ನ ಜನಗಳು )
ಲೇಖನಿಯನ್ನೇ ಅಸ್ತ್ರವಾಗಿಸಿಕೊಂಡು ತುಳಿತಕ್ಕೊಳಗಾದವರ, ಶೋಷಿತರ ಪರ ಗಟ್ಟಿ ದನಿಯೆತ್ತಿ ಜನತೆಯ ಧಮನಿಗಳಲ್ಲಿ ಸ್ವಾಭಿಮಾನದ ಕಿಡಿಯನ್ನು ಹೊತ್ತಿಸಿದ ಇವರು ನಿರಂತರ ಕಾರ್ಯಶೀಲರಾಗಿದ್ದರು. ತಲೆಯೊಳಗಿದ್ದ ಕ್ರಾಂತಿಯ ಕಿಚ್ಚನ್ನು ಹೊರತರಲು ಅವರು ಆರಿಸಿಕೊಂಡ ಮಾರ್ಗವೇ ಈ ‘ಕಾವ್ಯ’.
ಸಾಹಿತ್ಯ ಮತ್ತು ಕೃತಿಗಳು :-
ಸಿದ್ಧಲಿಂಗಯ್ಯನವರು ಕವಿತೆ, ಪ್ರಬಂಧ, ನಾಟಕ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
1974 ರಲ್ಲಿ ಮೈಸೂರಿನಲ್ಲಿ ನಡೆದ ಬರಹಗಾರ ಮತ್ತು ಕಲಾವಿದರ ಒಕ್ಕೂಟದ ಸಮ್ಮೇಳನದ ಪ್ರಭಾವದಿಂದ ಸ್ಫೂರ್ತಿಪಡೆದು ತಮ್ಮ ಚೊಚ್ಚಲ ಕೃತಿಯಾದ ‘ಹೊಲೆಮಾದಿಗರ ಹಾಡು(1975)’ ಪ್ರಕಟಿಸಿದಾಗ ಅವರ ವಯಸ್ಸು 21 ವರ್ಷವಾಗಿತ್ತು. ಇದು ಸಾಹಿತ್ಯ ಕ್ಷೇತ್ರದಲ್ಲೇ ಸಂಚಲನವನ್ನು ಉಂಟುಮಾಡಿದ ಕೃತಿ.
“ಇಕ್ರಲಾ ವದೀರ್ಲಾ
ಈ ನನ್ ಮಕ್ಕಳ ಚರ್ಮ ಎಬ್ರಲಾ “(ಒಂದು ಪದ)
“ಗುಡಿಸಲುಗಳು ಗುಡುಗುತಿವೆ ಬಂಗಲೆಗಳು ನಡುಗುತಿವೆ
ಎಲ್ಲೆಲ್ಲಿಯೂ ಮೊಳಗುತ್ತಿದೆ ನವಕ್ರಾಂತಿಯ ಗಾನ “( ಕ್ರಾಂತಿಪದ)
ಇವರ ಕಾವ್ಯಶೈಲಿಯ ರೂಪಕ, ಪ್ರತಿಮೆ ನುಡಿಗಟ್ಟುಗಳ ಮೂಲಕ ‘ಹೊಲೆಮಾದಿಗರ ಹಾಡು’ ಒಂದು ಹೊಸಮಾರ್ಗದ ಪ್ರಥಮ ಕೃತಿಯಾಗಿ ನೆಲೆಯೂರಿತು. ಇವರ ಕವಿತೆಯ ಸಾಲುಗಳಲ್ಲಿ ಲಯ, ಗೇಯತೆ ಹಾಗೂ ಜಾನಪದದ ಬುನಾದಿಯನ್ನು ಕಾಣಬಹುದಾಗಿದ್ದು ಕುವೆಂಪು, ಬೇಂದ್ರೆಯಂತಹ ಮಹಾನ್ ಕವಿಗಳ ದಟ್ಟ ಪ್ರಭಾವವೂ ಕಂಡುಬರುತ್ತದೆ. “ಉತ್ಪ್ರೇಕ್ಷೆ ಎನ್ನುವುದು ಬಹುಪಾಲು ಎಲ್ಲ ಕ್ರಾಂತಿಕಾರಿ ಕವಿಗಳ ಏಕಮಾತ್ರ ಅಭಿವ್ಯಕ್ತಿ ತಂತ್ರ”ವಾಗಿದೆ.
ಈ ಮಾತಿಗೆ ಸಿದ್ಧಲಿಂಗಯ್ಯನವರೂ ಕೂಡ ಹೊರತಾಗಿಲ್ಲ. ಅಸಾಮಾನ್ಯ ರೂಪಕ ಶಕ್ತಿಯಿಂದ ಪ್ರತಿಮೆಗಳ ನಿರೀಕ್ಷಿತ ಹೊಂದಾಣಿಕೆಯಾಗಿ ಅವರ ಕಾವ್ಯದಲ್ಲಿ ಚಮತ್ಕಾರ ಮೂಡಿಸಿವೆ. ‘ಅಲ್ಲೆ ಕುಂತವರೆ ‘ ಇದು ಖಂಡಕಾವ್ಯವಾಗಿದ್ದು ಕನ್ನಡದ ಅತ್ಯುತ್ತಮ ರಾಜಕೀಯ ಕವಿತೆಯೆನಿಸಿದೆ. ಪ್ರಭುತ್ವದ ಹಿಂಸೆಯ ವಸ್ತುವನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.
ಪ್ರಭಾವ :-
” ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಎಂದಿರುವ ಇವರು ಗಾಂಧೀಜಿ, ಅಂಬೇಡ್ಕರ್, ಕಾರ್ಲ್ ಮಾರ್ಕ್ಸ್, ಲೋಹಿಯಾ, ಶಾಂತವೇರಿ ಗೋಪಾಲಗೌಡ, ವಾಸುದೇವ ಭೂಪಾಲ, ಪೆರಿಯಾರ್ ಮುಂತಾದ ಸಾಮಾಜಿಕ ಹರಿಕಾರರ ಪ್ರಭಾವಕ್ಕೆ ಒಳಗಾಗಿ ಹಲವಾರು ಸಮಾಜಮುಖಿ ಚಳುವಳಿಗಳಲ್ಲಿ ಸ್ಫೂರ್ತಿಯ ಸೆಲೆಯಾಗಿದ್ದರು.
ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಆಯ್ದ ಕವಿತೆಗಳು, ಅಲ್ಲೆ ಕುಂತವರೆ, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು ಇವು ಪ್ರಮುಖ ಕವನ ಸಂಕಲನಗಳಾಗಿದ್ದು ಇವರ ಕವಿತೆಗಳು ಇಂಗ್ಲಿಷ್, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಿಗೂ ಅನುವಾದಗೊಂಡಿವೆ.
‘ಅವತಾರಗಳು’ ಪ್ರಬಂಧ ಕೃತಿಯಾಗಿದ್ದು, ‘ಏಕಲವ್ಯ’, ‘ ಪಂಚಮ’, ‘ ನೆಲಸಮ’ ಇವು ಇವರು ರಚಿಸಿದ ನಾಟಕಗಳು. ‘ಊರುಕೇರಿ’ ಇವರ ಆತ್ಮಕಥನವಾಗಿದ್ದು ಇದು ಇಂಗ್ಲಿಷ್ ಮತ್ತು ತಮಿಳು ಭಾಷೆಗೆ ಅನುವಾದಗೊಂಡಿದೆ. ಇದರ ಇಂಗ್ಲಿಷ್ ಅನುವಾದ ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ. ‘ರಸಘಳಿಗೆಗಳು’, ‘ಎಡಬಲ’, ‘ಹಕ್ಕಿನೋಟ’, ‘ಜನಸಂಸ್ಕೃತಿ’, ‘ಉರಿಕಂಡಾಯ’ ಲೇಖನ ಸಂಗ್ರಹಗಳಾಗಿವೆ. ‘ಸದನದಲ್ಲಿ ಸಿದ್ಧಲಿಂಗಯ್ಯ ಭಾಗ 1ಮತ್ತು 2’ ಇವರ ಇತರೆ ಕೃತಿಗಳು. ‘ಸಮಕಾಲೀನ ಕನ್ನಡ ಕವಿತೆ’ ಇದು ಇವರ ಸಂಪಾದಿತ ಕೃತಿ.
ಸಂದಿರುವ ಗೌರವ ಮತ್ತು ಪ್ರಶಸ್ತಿಗಳು :-
ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವದ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಬಾಬು ಜಗಜೀವನ ರಾವ್ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಸಂದೇಶ್ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ..ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಧರಣಿ ಮಂಡಲ ಮಧ್ಯದೊಳಗೆ’ ಚಲನಚಿತ್ರಕ್ಕೆ ಗೀತರಚನೆ ಮಾಡಿದ್ದಕ್ಕಾಗಿ ರಾಜ್ಯಪ್ರಶಸ್ತಿ(1983-84) ಇನ್ನೂ ಮುಂತಾದ ಗೌರವ ಮತ್ತು ಪ್ರಶಸ್ತಿಗಳು ಇವರ ಸಾಹಿತ್ಯ ಸೇವೆಗೆ ಒಲಿದುಬಂದಿರುತ್ತವೆ.
ಕೆ ಬಿ, ಚೆನ್ನಣ್ಣ ವಾಲಿಕಾರರ ನೆನಪುಗಳು ಮಾಸುವ ಮುನ್ನವೇ ದಲಿತಪರ ದನಿಯೊಂದು ಜೀವನವನ್ನೇ ಹೋರಾಟವಾಗಿಸಿಕೊಂಡು ಬದುಕಿದ ಮೇರು ಕೊಂಡಿಯಾಗಿದ್ದ ಡಾ. ಸಿದ್ದಲಿಂಗಯ್ಯನವರು ಇನ್ನಿಲ್ಲ ಎಂಬುದು ನಾಡಿನಾದ್ಯಂತ ಕನ್ನಡ ಸಾರಸ್ವತ ಲೋಕಕ್ಕೆ ಇಂದು ತುಂಬಲಾರದ ನಷ್ಟವೇ ಸರಿ.
ತೇಜಾವತಿ ಎಚ್ ಡಿ
ಕವಯತ್ರಿ