Friday, May 31, 2024
Google search engine
Homeಜನಮನತುಮಕೂರಿಗೆ ಲಕ್ಷ ಲಕ್ಷ ದೇಣಿಗೆ: ಅಮೇರಿಕ ಕನ್ನಡಿಗರ ಕೊಡುಗೆ

ತುಮಕೂರಿಗೆ ಲಕ್ಷ ಲಕ್ಷ ದೇಣಿಗೆ: ಅಮೇರಿಕ ಕನ್ನಡಿಗರ ಕೊಡುಗೆ

ಶಸ್ತ್ರಚಿಕಿತ್ಸಕ ಡಾ. ನರಸಿಂಹಮೂರ್ತಿ, ವೈದ್ಯಾಧಿಕಾರಿ ಡಾ.ಪ್ರಾಣೇಶ್, ಹಿರಿಯ ಪುರುಷ ಆರೋಗ್ಯ ಸಹಾಯಕ ಬೋರೇಗೌಡ, ಡಾ. ಎ.ನಾಗರಾಜ್, ಲಯನ್ಸ್ ಅಧ್ಯಕ್ಷ ರಾಜಣ್ಣ, ವಕೀಲ ಲಯನ್ ಪಿ.ಎಚ್.ಧನಪಾಲ್, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್ (ರಾಜು),ಲಯನ್ ಭಾಸ್ಕರ್, ಪ್ರಸಾದ್ ಚಿತ್ರದಲ್ಲಿ ಇದ್ದಾರೆ. ಎರಡನೇ ಚಿತ್ರ: ಕನ್ನಡತಿ ಡಾ. ರಾಜೇಶ್ವರಿ ಸೊನ್ನಿ!

ತುರುವೇಕೆರೆ ಪ್ರಸಾದ್


ತುಮಕೂರು: ಜನನೀ, ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಅಂತಾರೆ. ಹೆತ್ತತಾಯಿ ಮತ್ತು ಜನ್ಮಭೂಮಿ ಎರಡೂ ಸ್ವರ್ಗಕ್ಕಿಂತ ಶ್ರೇಷ್ಠವಾದವುಗಳು.

ನಾವು ಎಲ್ಲೇ ಇದ್ದರೂ ನಮ್ಮ ಜೀವತಾವಧಿಯಲ್ಲಿ ಈ ಎರಡೂ ಋಣ ತೀರಿಸುವ ಪ್ರಯತ್ನ ಮಾಡಲೇಬೇಕು. ಅಂತಹದೊಂದು ಪ್ರಯತ್ನವನ್ನು ಅಮೇರಿಕಾದ ಫ್ಲೋರಿಡಾದಲ್ಲಿ ನೆಲೆಸಿರುವ ತುರುವೇಕೆರೆಯ ಸಂಪಿಗೆ ಗ್ರಾಮದವರಾದ ಡಾ. ರಾಜೇಶ್ವರಿ ಮಾಡುತ್ತಿದ್ದಾರೆ.

ಸಂಪಿಗೆಯ ಕೃಷಿಕರಾದ ಎಸ್.ಎಂ.ಸೀತಾರಾಮಯ್ಯನವರ ಮಗಳಾದ ರಾಜೇಶ್ವರಿ ಬೆಂಗಳೂರಿನಲ್ಲಿ ವೈದ್ಯಶಾಸ್ತ್ರ ಅಧ್ಯಯನ ಮಾಡಿ 1976ರಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೇರಿಕಾಗೆ ತೆರಳಿ ಅಲ್ಲೇ ವೈದ್ಯವೃತ್ತಿ ಮಾಡುತ್ತಾ ನೆಲೆಸಿದರು. ಅಲ್ಲಿನ ಸಮಾನ ಮನಸ್ಕ ವೈದ್ಯರೆಲ್ಲಾ ಸೇರಿ ಕರ್ನಾಟಕ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸಂಘವನ್ನು ( ಕೆಎಸ್‍ಎಂಡಿ) ಸ್ಥಾಪಿಸಿದರು.

ಕರ್ನಾಟಕ ವೈದ್ಯಕೀಯ ಸೊಸೈಟಿ( ಕೆಎಂಎಸ್)ಗೆ ವೈದ್ಯಕೀಯ ಕಮ್ಮಟಗಳನ್ನು, ವಿಚಾರಸಂಕಿರಣಗಳನ್ನು ಏರ್ಪಡಿಸಲು ವಾರ್ಷಿಕ ನೆರವು ನೀಡುವುದು, ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಇ-ಗ್ರಂಥಾಲಯ ಸ್ಥಾಪನೆ, ಕರ್ನಾಟಕದ ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ನಿಯಮಿತವಾಗಿ ವೈದ್ಯಕೀಯ ಕ್ಷೇತ್ರದ ಹೊಸ ಹೊಸ ಅವಿಷ್ಕಾರಗಳ ಕುರಿತಾದ ಆಡಿಯೋ, ವೀಡಿಯೋಗಳನ್ನು ಕಳಿಸುವುದು, ಕರ್ನಾಟಕದ ಗ್ರಾಮೀಣ ವೈದ್ಯಕೀಯ ಸಂಸ್ಥೆಗಳಿಗೆ ಸಹಾಯ ಮಾಡುವುದು, ಗ್ರಾಮೀಣ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ಕೊಳ್ಳಲು ಧನಸಹಾಯ ನೀಡುವುದು ಮೊದಲಾದ ಹತ್ತು ಹಲವು ಉದ್ದೇಶಗಳೊಂದಿಗೆ ಕೆಎಸ್‍ಎಂಡಿ ಅಸ್ತಿತ್ವಕ್ಕೆ ಬಂದಿತು. ಸುಮಾರು 4 ದಶಕಗಳಿಂದ ನಿರಂತರವಾಗಿ ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಸಂಸ್ಥೆಯಲ್ಲಿ ಈಗ 2000ಕ್ಕೂ ಹೆಚ್ಚು ಸದಸ್ಯರಿದ್ದಾರೆ.

ಸಂಪಿಗೆ ಗ್ರಾಮದ ಡಾ.ರಾಜೇಶ್ವರಿ ಈಗ ಈ ಸಂಸ್ಥೆಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ವರ್ಷ ಕರೋನಾ ವಿಶ್ವದೆಲ್ಲೆಡೆ ವ್ಯಾಪಿಸಿ ಲಕ್ಷಾಂತರ ಜನ ಸಾವು, ನೋವಿಗೆ ಈಡಾದಾಗ ಸಹಜವಾಗಿಯೇ ಡಾ.ರಾಜೇಶ್ವರಿ ಮತ್ತು ಅವರ ಸಂಸ್ಥೆ ಕೆಎಸ್‍ಎಂಡಿ ಕರ್ನಾಟಕದ ಜನರ ಬಗ್ಗೆ ತೀವ್ರ ಆತಂಕ ಪಟ್ಟಿತು, ಕೂಡಲೇ ಕಾರ್ಯೋನ್ಮುಖರಾದ ಸಂಘದ ಸದಸ್ಯರು ತಮ್ಮ ಹುಟ್ಟೂರಿನ ಜನರ ಸೇವೆಗಾಗಿ ಪ್ರತ್ಯೇಕ ಕೋವಿಡ್ ನಿಧಿಯೊಂದನ್ನು ಸ್ಥಾಪಿಸಿದರು.

ಆ ನಿಧಿಯ ಮುಖಾಂತರ ಕರ್ನಾಟಕದ ಮೂಲೆ ಮೂಲೆಗಳಲ್ಲೂ ಕೋವಿಡ್ ಸೋಂಕಿತರ ಉಪಚಾರಕ್ಕಾಗಿ ಟೊಂಕಕಟ್ಟಿ ನಿಂತರು. ಈವರೆಗೆ ಕೆಎಸ್‍ಎಂಡಿ ಸುಮಾರು 75 ಲಕ್ಷಕ್ಕೂ ಹೆಚ್ಚು ಮೌಲ್ಯದ ಉಪಕರಣಗಳನ್ನು ನಾಡಿನಾದ್ಯಂತ ಆಸ್ಪತ್ರೆಗಳಿಗೆ ಕೊಡುಗೆಯಾಗಿ ನೀಡಿದೆ.

ಸುಮಾರು ರೂ. 50 ಲಕ್ಷ ಮೌಲ್ಯದ 100 ಆಕ್ಸಿಜನ್ ಸಾಂದ್ರಕಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿದೆ. ಸುಮಾರು 3 ಲಕ್ಷ ರೂ ಬೆಲೆಯ ಪಲ್ಸ್‍ಆಕ್ಸಿಮೀಟರ್‍ಗಳನ್ನು ಗ್ರಾಮೀಣ ಪ್ರದೇಶದ ವಿವಿಧ ಆಸ್ಪತ್ರೆಗಳಿಗೆ ನೀಡಲಾಗಿದೆ.

ಕೋವಿಡ್‍ನಿಂದ ಸಂಕಷ್ಟದಲ್ಲಿರುವ ಜನರಿಗೆ ಆಹಾರ ತಲುಪಿಸುವ ಸಲುವಾಗಿ ಅಕ್ಷಯಪಾತ್ರೆ ಯೋಜನೆಯೊಂದಕ್ಕೇ ರೂ. 15 ಲಕ್ಷ ದೇಣಿಗೆಯಾಗಿ ನೀಡಲಾಗಿದೆ. ಡಾ.ರಾಜೇಶ್ವರಿ ತುರುವೇಕೆರೆ ತಾಲ್ಲೂಕಿಗೆ 3 ಆಕ್ಸಿಜನ್ ಸಾಂದ್ರಕಗಳನ್ನು ಹಾಗೂ ಹುಟ್ಟೂರಾದ ಸಂಪಿಗೆಗೆ 2 ಆಕ್ಸಿಜನ್ ಸಾಂದ್ರಕಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಕೊಡುಗೆಯಾಗಿ ನೀಡಿದ್ದಾರೆ.

ಜೂನ್ 1ರಂದು ಈ ಆಕ್ಸಿಜನ್ ಸಾಂದ್ರಕಗಳನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಕೆಎಸ್‍ಎಂಡಿ ಪರವಾಗಿ ಸ್ಥಳೀಯ ಲಯನ್ಸ್ ಕ್ಲಬ್ ಪದಾಧಿಕಾರಿಗಳು ತಾಲ್ಲೂಕು ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಿದರು. ಶಸ್ತ್ರಚಿಕಿತ್ಸಕ ಡಾ. ನರಸಿಂಹಮೂರ್ತಿ, ಆಯುರ್ ವೈದ್ಯಾಧಿಕಾರಿ ಡಾ.ಪ್ರಾಣೇಶ್, ಹಿರಿಯ ಪುರುಷ ಆರೋಗ್ಯ ಸಹಾಯಕ ಬೋರೇಗೌಡ, ಡಾ. ಎ.ನಾಗರಾಜ್, ಲಯನ್ಸ್ ಅಧ್ಯಕ್ಷ ರಾಜಣ್ಣ, ವಕೀಲ ಲಯನ್ ಪಿ.ಎಚ್.ಧನಪಾಲ್, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್ (ರಾಜು),ಲಯನ್ ಭಾಸ್ಕರ್, ಪ್ರಸಾದ್ ಮೊದಲಾದವರು ಇದಕ್ಕೆ ಸಾಕ್ಷಿಯಾದರು.

ಪ್ರತಿಯೊಬ್ಬರೂ ತಮ್ಮೂರಿನ ಋಣ ತೀರಿಸಲು ಹೀಗೆ ಮುಂದಾದರೆ ಜನರ ಬವಣೆ ದೂರಾಗಿ ನೆಮ್ಮದಿಯ ನಿಟ್ಟುಸಿರಿಟ್ಟಾರು. ಧನ್ಯವಾದಗಳು ರಾಜೇಶ್ವರಿ ಮೇಡಂ!

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?