Saturday, May 9, 2026
Google search engine
Home Blog Page 149

ಹಿರಿಯ ಪತ್ರಕರ್ತ ಟಿ.ಎನ್.ಸೂರ್ಯನಾರಾಯಣ ರಾವ್ ಇನ್ನಿಲ್ಲ

ತುರುವೇಕೆರೆ: ಪಟ್ಟಣದ ಹಿರಿಯ ಪತ್ರಕರ್ತ ಟಿ.ಎನ್.ಸೂರ್ಯನಾರಾಯಣರಾವ್ ಅಲ್ಪಕಾಲದ ಅಸ್ವಸ್ಥತೆಯಿಂದ ಶುಕ್ರವಾರ ಮಧ್ಯಾಹ್ನ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಚಿಕ್ಕಂದಿನಿಂದಲೇ ಪತ್ರಿಕಾ ವಿತರಕರಾಗಿ ವೃತ್ತಿ ಆರಂಭಿಸಿದ್ದ ಸೂರ್ಯನಾರಾಯಣರಾವ್ ನಂತರ ಪತ್ರಕರ್ತರಾಗಿ ಸುಮಾರು 5 ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಬಿಸಿಲು, ಮಳೆ, ಚಳಿಯೆನ್ನದೆ ತಮ್ಮ ವೃದ್ದಾಪ್ಯದಲ್ಲೂ ನಡೆದುಕೊಂಡೇ ಮನೆ ಮನೆಗೆ ಪತ್ರಿಕೆ ವಿತರಿಸುತ್ತಿದ್ದ ಅವರು ಹಲವು ಯುವ ಪತ್ರಕರ್ತರಿಗೆ ಮಾದರಿಯಾಗಿದ್ದರು.

ಸಹಕಾರಿ ಆಧಾರದ ಮೇಲೆ ಬಡವರಿಗೆ ಹಾಗೂ ನಾಗರಿಕರಿಗೆ ವಸತಿ ಯೋಜನೆ ಕಲ್ಪಿಸುವಲ್ಲೂ ಅವರು ಸಾಕಷ್ಟು ಶ್ರಮ ವಹಿಸಿದ್ದರು.

ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ, ಪರುಸ್ಕಾರಗಳಿಗೆ ಭಾಜನರಾಗಿದ್ದರು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪುತ್ರ, ಪತ್ರಕರ್ತ ಟಿ.ಎಸ್.ನಾಗಭೂಷಣ್, ಐವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರವು ಪಟ್ಟಣದ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ನೆರವೇರಿತು. ಮೃತರ ನಿಧನಕ್ಕೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬ್ರಾಹ್ಮಣ ಸೇವಾ ಸಮಾಜ ಹಾಗೂ ಇತರೆ ಹಲವಾರು ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.

ಅಬ್ಬಾ ! ಇಲ್ಲಿವೆ ‘ಮನುಷ್ಯ ಕರಡಿಗಳು’….

0

ಮಹೇಂದ್ರಕೃಷ್ಣಮೂರ್ತಿ


ತುಮಕೂರು: ಅಬ್ಬಬ್ಬಾ! ನೋಡೋ, ನೋಡೋ ಅಲ್ನೋಡು ಮನುಷ್ಯ ಕರಡಿ. ಓಡ್ತವೆ, ಓಡ್ತವೆ ನೋಡು ಕೋತಿಗಳು, ಹೆಂಗ್ ಓಡ್ತವೆ ಮನುಷ್ಯ ಕರಡಿ ಕಂಡು.

ಕಾರಿನ ಬಾಗಿಲು ತೆಗೆದು ಇಳಿಯುತ್ತಿದ್ದವನು ಒಮ್ಮೆಗೆ ಹೆದರಿಹೋದೆ. ಇದು ಬೇರೆ ಬೆಟ್ಟ ಸಾಲಿನ ಕೊರಟಗೆರೆ. ಇಲ್ಲಿ ಕರಡಿಗಳೇನು ಬರ ಎಂದಿತು ಮನಸ್ಸು. ಆದರೆ ಇದ್ಯಾವುದು ಮನುಷ್ಯ ಕರಡಿ. ನಾನು ಕೇಳದೇ ಇರುವ ಹೆಸರು. ಇದ್ದರೂ ಇರಬಹುದು ಎಂದು ಅಲ್ಲಿಂದ ಓಡುವ ಮನಸ್ಸಾಯಿತು.

ಅಷ್ಟರಲ್ಲಿ ಜತೆಯಲ್ಲಿದ್ದ ಎಸ್ ಐಟಿ ಕಾಲೇಜಿನ ಪ್ರೊ.ಮೋಹನ್ ಕೈ ಹಿಡಿದು ಜಗ್ಗಿದರು. ಏನಂಥ ಅವರ ಕಡೆ ತಿರುಗಿದರೆ ಎದುರಿಗೇನೆ ಬರುತ್ತಿದೆ ಮನುಷ್ಯ ಕರಡಿ, ಮನುಷ್ಯನಿಗೆ ಇರುವಂತೆ ಥೇಟ್ ಎರಡೇ ಕಾಲು, ಎರಡೇ ಕೈ. ಆದರೆ ತಲೆ ಮಾತ್ರ ಕರಡಿ ಮುಖ. ಇದುವೇ ಮನುಷ್ಯ ಕರಡಿ.

ಹೌದು; ಹಿರಿಯ ಪತ್ರಕರ್ತರೂ ಆಗಿರುವ ಗರುಗದೊಡ್ಡಿ ನಟರಾಜ್ ಅವರು ತಾವು ಹಾಕಿಕೊಂಡಿದ್ದ ಕರಡಿ ಮುಖ ತೆಗೆಯುತ್ತಾ ನಕ್ಕರು. ಅರೇ! ಇವರೇ ಮನುಷ್ಯ ಕರಡಿ ಎಂದು ನಗಾಡುವ ಸರದಿ ನನ್ನದು.

ಏನೆಂದರೆ, ಕೋತಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಕೊರಟಗೆರೆ ತಾಲ್ಲೂಕಿನ ಜನರು ಪ್ರತಿ ಮನೆಗೂ ತಂದಿಟ್ಟುಕೊಂಡಿದ್ದಾರೆ ಮನುಷ್ಯ ಕರಡಿಗಳನ್ನು!

  • ಏನ್ ಮಾಡಿದ್ರು ಕೋತಿಗಳನ್ನು ಓಡಿಸಲು ಸಾಧ್ಯವಾಗುತ್ತಿರಲಿಲ್ಲ. ಹುಣುಸೆ ಮರದಲ್ಲಿ ಒಂದು ಪೀಚನ್ನು ಬಿಡುವುದಿಲ್ಲ. ಕ್ಷಣ ಮಾತ್ರದಲ್ಲಿ ತರಿದು ಬಿಸಾಕುತ್ತವೆ. ತರಕಾರಿ ಬೆಳೆಯನ್ನು ಬಿಡುವುದಿಲ್ಲ. ಇನ್ನೂ, ಮನೆಯೊಳಗೂ ನುಗ್ಗಿ ಕಾಟ ಕೊಡುತ್ತವೆ. ಹೀಗಾಗಿ ಈ ಪ್ರಯೋಗ’ ಎಂದು ಗರುಗದೊಡ್ಡಿ ನಟರಾಜ್ ನಕ್ಕರು.

ಹಳ್ಳಿ ಜನರ ಪ್ರಯೋಗಶೀಲತೆ ಎಷ್ಟು ಚೆನ್ನಾಗಿದೆ ಅಲ್ಲವೇ? ನಾಲ್ಕು ನೂರು ರೂಪಾಯಿಗೆ ಸಂತೆಯಲ್ಲಿ ಈ ಮುಖವಾಡ ಸಿಗುತ್ತದೆ. ಕೋತಿಗಳು ಬಂದಾಗ ಮುಖವಾಡ ಧರಿಸಿ ಮರಗಳ ಎದುರಿಗೆ ನಿಂತರೆ ಕೋತಿಗಳು ದಿಕ್ಕಾಪಾಲಾಗಿ ಓಡುತ್ತವೆ.

“ಒಬ್ಬರಿಂದ ಒಬ್ಬರಿಗೆ ಈ ಪ್ರಯೋಗ ಹೆಚ್ಚುತ್ತಲೇ ಹೋಗುತ್ತಿದೆ. ಆದರೆ, ಮೊದಲಿಗೆ ಈ ಐಡಿಯಾ ಮಾಡಿದವರು ಯಾರೆಂದು ಗೊತ್ತಿಲ್ಲ’ ಎಂದ ನಟರಾಜ್ ಕರಡಿ ಮುಖವನ್ನು ತನ್ನೊಳಗೆ ಸೇರಿಸಿಕೊಂಡು ಕುಣಿಯತೊಡಗಿದರು!

ನಮ್ಮ ಹುಡುಗ, ನಮ್ಮ ಹೆಮ್ಮೆ ಈ ತರಕಾರಿ ಪ್ರಕಾಶ್

0

ಉಜ್ಜಜ್ಜಿ ರಾಜಣ್ಣ

ತಿಪಟೂರು: ಆಪ್ ತೋಳಿನ ಅಂಗಿ, ಮಾಸಲುಬಣ್ಣದ ಪ್ಯಾಟು, ಕಪ್ಪುಬಿಳುಪಾದ ಗಡ್ಡ. ಮುಖ ನೀರು ಕಂಡಿತ್ತೋ ಕಂಡಿಲ್ಲವೋ ಎಂಬಂತಹ ಹೊರನೋಟಕ್ಕೆ ಮುಖ ಭಾವ. ಆಗ ತಾನೆ ಎದ್ದು ತರಕಾರಿ ಮಾರಿ ಸೀದ ನಗರಸಭಾ ವಾರ್ಷಿಕ ಬಡ್ಜೆಟ್ ಮೀಟಿಂಗ್ ಗೆ ಬಂದಂತೆ ಕಂಡ ಸಾಮಾನ್ಯವಾದ ನಡವಳಿಕೆ‌.

ತಂಬು ಮೈಕಟ್ಟಿನ ದೇಹ. ಆಡುಭಾಷೆಯೋ ಹೌದಾ ಸಾ ಅಲ್ವಾ ಸಾ ಅಂಗ ಸಾ. ಎದೆ ಸವರಿಕೊಂಡು ನಕ್ಕರಂತೂ ಎಲ್ಲಿಲ್ಲದ ಪ್ರೀತಿ ಸರಳತೆ ಸಹನೆ ಅವಸರವಿಲ್ಲದ ಸಾಹುದಾನ ಸಮಾದಾನಿ.

ಮಾತು ಬಂದಾಗ ಪಕಾರನೆ ನಕ್ಕು ಗೆಳೆಯರನ್ನು ಎದುರುಬದುರಾಗುವ ಗುಣ. ಹುಡುಗ ಅಪ್ಪನ ಜೊತೆಯಲ್ಲಿ ಅಪಾರ ವರ್ಷಗಳ ಕಾಲ ತರಕಾರಿ ಮಾರಿಕೊಂಡಿದ್ದ ನಾನು ಕಂಡ ಹಾಗೆ.  ಬೆರಳೆಣಿಕೆಯಷ್ಟೂ ಸ್ವಜಾತಿಯ ಮತ ಹೊಂದಿರದ ಯುವಕ ಟಿ ಎನ್ ಪ್ರಕಾಶ್ ಅರ್ಥಾತ್ ತರಕಾರಿ ಪ್ರಕಾಶ್ ಅರ್ಥಾತ್ ಗೂರ್ಕಾ: ತಿಪಟೂರು ನಗರ ಸಭಾ ಸದಸ್ಯನಾಗಿ ಗೆದ್ದದ್ದು ಇದೂ ಸೇರಿ ಮೂರು ಸಲವಿರಬಹುದು.

ಎರಡು ಬಾರಿ ನಗರ ಸಭಾ ಪ್ರಭಾರ ಅಧ್ಯಕ್ಷ. ಒಂದು ಸಲ ಪೂರ್ಣಾವಧಿಯ ಅಧ್ಯಕ್ಷ.  ಅಬ್ಬಬ್ಬಾ ಈತ ನಿನ್ನೆ ದಿನ ತಿಪಟೂರು ನಗರ ಸಭಾ ವಾರ್ಷಿಕ ಬಡ್ಜೆಟ್ ಮೇಲೆ ಮಾಡಿದ ಭಾಷಣ ಅಂತಹ ಅಪರೂಪವಾದದ್ದು. ವಿಸ್ತಾರವಾಗಿ ಹಾಗು ವಾಣಿಜ್ಯ ನಗರವಾಗಿ ಮತ್ತು ಆದುನಿಕ ನಗರಿಯಾಗಿ ಬೆಳೆಯುತ್ತಿರುವ ಹೆದ್ದಾರಿ ನಗರ ತಿಪಟೂರನ್ನು ಮಾದರಿ ನಗರವನ್ನಾಗಿ ಮಾಡಲು ಟಿ ಎನ್ ಪ್ರಕಾಶ್ ಆಡಿದ ಮಾತುಗಳು ನೀಡಿದ ಸಲಹೆಗಳು ತಿಪಟೂರು ನಗರ ಸಭಾ ಆಡಳಿತ ಸಾರ್ವಕಾಲಿಕವಾಗಿ ಅನುಪಾಲನೆ ಮಾಡುವಂತಹುಗಳಾಗಿದ್ದವು.

ಕರ್ನಾಟಕ ಪೌರಾಡಳಿತ ನಿರ್ದೇಶನಾಲಯದ ಅದಿಸೂಚನೆಗಳು ಮಾರ್ಗ ಸೂಚಿಗಳು ಕಾಲಕಾಲಕ್ಕೆ ಸರ್ಕಾರ ಹೊರಡಿಸುವ ಸುತ್ತೋಲೆಗಳು ನಗರಸಭಾ ಆ್ಯಕ್ಟ ಬುಕ್ಕನ್ನು ಪದಶಃ ಓದಿ ಬಂದು ನಗರಸಭೆಯ 2021- 22 ನೇ ಸಾಲಿನ ವಾರ್ಷಿಕ ಬಡ್ಜೆಟ್ ಮೇಲೆ ಸ್ವ ಪಕ್ಷೀಯ ಯಾವುದೇ ಪೂರ್ವಗ್ರಹವಿಲ್ಲದೆ ತಿಪಟೂರು ನಗರಾಡಳಿತದ ಗಮನ ಸೆಳೆದರು ಪ್ರಕಾಶ್.

ಕೈತುಂಬಾ ಸಂಬಳ, ಅಪಾರವಾಗಿ ಆದಾಯ, ಕಾಲಕಾಲಕ್ಕೆ ಆಗಬೇಕಾಗಿರುವ ತರಬೇತಿ, ದಿನವಹಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾದ ಸರ್ಕಾರದ ನಡಾವಳಿಗಳು ನಗರಾಭಿವೃದ್ಧಿ, ಪೌರಾಡಳಿತ ಇವೆಲ್ಲವನ್ನೂ ಪರಮಾರ್ಶಿಸಿದ ಹಾಗೆ ನೋಡಿದರೆ ನಗರಸಭಾ ಆಡಳಿತ ಅಕ್ಷರಶಃ ವಾರ್ಷಿಕ ಬಡ್ಜೆಟ್ ತಯಾರಿಸಲು ಅತ್ಯಂತ ಬೇಜವಾದ್ದಾರಿ ತೋರಿದೆ.

ಕಾಟಾಚಾರಕ್ಕೆ ಬಡ್ಜೆಟ್ ಪ್ರತಿಯನ್ನು ಸಿದ್ದಪಡಿಸಿದೆ. ನಮ್ಮ ಕೈ ಸೇರಿರುವ ನಗರಸಭಾ ಬಡ್ಜೆಟ್ ಪ್ರತಿಗಳು ತಳಬುಡವಿಲ್ಲದ ಪ್ರತಿಗಳು ಎಂಬುದರ ಅರಿವಾದದ್ದು ನಗರಸಭಾ ಮಾಜಿ ಅಧ್ಯಕ್ಷ ಟಿ ಎನ್ ಪ್ರಕಾಶ್ ಬಡ್ಜೆಟ್ ಕುರಿತು ಮಾತನಾಡಿದಾಗ. ಸುಳ್ಳು ಸುಳ್ಳೇ ಆದಾಯದ ನಿರೀಕ್ಷೆ ಸುಳ್ಳುಸುಳ್ಳೇ ಖರ್ಚಿಗೆ ಅವಕಾಶ. ನಗರ ಸಭೆಗೆ ಬರುವ ಆದಾಯ ವಾರ್ಷಿಕ ವ್ಯಯಗಳಿಗೆ ತುಲನೆ ಮಾಡಿದರೆ ಎತ್ತು ಏರಿ ಕಡೆ ಕೋಣ ನೀರಿನ ಕಡೆ ಎಳೆದಂತಿತ್ತು. ಮಾಜಿ ಅಧ್ಯಕ್ಷ ಟಿ ಎನ್ ಪ್ರಕಾಶ್ ತಿಪಟೂರು ನಗರ ಸಭಾ 2021- 22 ನೇ ವಾರ್ಷಿಕ ಬಡ್ಜೆಟ್ ಮೇಲೆ ಎತ್ತಿದ ಪ್ರಶ್ನೆಗಳು ಆಡಳಿತವನ್ನು ನಿರುತ್ತರಗೊಳಿಸಿದವು.

ಒಬ್ಬ ಅಧಿಕಾರಿಯೂ ಮಾಜಿ ಅಧ್ಯಕ್ಷರ ಭಾಷಣಕ್ಕೆ ಉತ್ತರಿಸಲಾಗದೆ ತಬ್ಬಿಬ್ಬಾದರು ಬೆವರಿದರು ಮುಖವರಸಿಕೊಂಡರು ಸಾವರಿಸಿಜೊಂಡು ಉಸಿರಾಡಿದರು ಒಮ್ಮೊಮ್ಮೆ ಏದುಸಿರಿಕ್ಕಿದರು. ಬೆಚ್ಚಿಬಿದ್ದರು ಎದೆ ಡವಗುಟ್ಟಿಸಿಕೊಂಡು ಮಾಜಿ ಅಧ್ಯಕ್ಷರ ಭಾಷಣಕ್ಕೆ ಕಿವಿ ಆನಿಸಿದರು.

ತಿಪಟೂರು ನಗರ ಸಭೆಯ ನಿಜವಾದ ಸಂಸದೀಯ ಪಟು ತರಕಾರಿ ಪ್ರಕಾಶ್ ಸದನ ಶೂರ. ಧನ್ಯವಾದಗಳು ಅಭಿನಂದನೆಗಳು ಪ್ರಕಾಶ. ನಮ್ಮ ಹುಡುಗ ನಮ್ಮ ಹೆಮ್ಮೆ.

ತುಮಕೂರಿನಲ್ಲಿ ಕೊರೊನಾ ಕೇರ್ ಸೆಂಟರ್ ಆರಂಭಕ್ಕೆ ಇನ್ನೂ ಏಕೆ ಮೀನಮೇಷ?

0

publicstory.in


ತುಮಕೂರು: ಜಿಲ್ಲೆಯಲ್ಲಿ ಮುಂದಿನ ವಾರದಿಂದ ಪ್ರತಿ ದಿನ ಮೂರು ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ತಗುಲಬಹುದು ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಂದಾಜಿಸಿದೆ.ಈಗಾಗಲೇ ಪ್ರತಿದಿನ ಸೋಂಕಿತರ ಸಂಖ್ಯೆ ಸಾವಿರ ಮೀರಿದೆ. ಸಾವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಷ್ಟಾದರೂ ಜಿಲ್ಲೆಯಲ್ಲಿ ಇನ್ನೂ ಏಕೆ ಕೊರೊನಾ ಕೇರ್ ಸೆಂಟರ್ ಗಳನ್ನು ತೆರೆದಿಲ್ಲ ?

ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಜಿಲ್ಲೆಯಲ್ಲಿ ಪ್ರತಿ ಕಡೆ ತೆರೆದಿದ್ದ ಕೊರೊನಾ ಕೇರ್ ಸೆಂಟರ್ ಗಳು ಏನಾದವು ಎಂಬ ಬಗ್ಗೆ  ಜಿಲ್ಲಾಡಳಿತ ಬಹಿರಂಗವಾಗಿ ಲೆಕ್ಕ ಒಪ್ಪಿಸಿಲ್ಲ. ಈಗ ಸಾವಿರಾರು ಲೆಕ್ಕದಲ್ಲಿ ಕೊರೊನಾ ರೋಗಿಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇವರ ಆರೈಕೆಗಾಗಿ ಕೊರೊನಾ ಕೇರ್ ಸೆಂಟರ್ ಗಳ ಸ್ಥಾಪನೆಯ ಕಡೆ ಜಿಲ್ಲಾಡಳಿತ ಮೊದಲ ಹೆಜ್ಜೆಯನ್ನು ತುರ್ತಾಗಿ ಇಡಬೇಕಾದ ಅಗತ್ಯತೆ ಎದ್ದು ಕಾಣುತ್ತಿದೆ.

  • 2016 ರಲ್ಲಿ ತುಮಕೂರು ಜಿಲ್ಲಾ ಪಂಚಾಯಿತಿ ಸಿದ್ಧಪಡಿಸಿರುವ ಜಿಲ್ಲಾ ಮಾನವ ಅಭಿವೃದ್ಧಿ ಸೂಚಿಯ ಕಡೆ ಗಮನ ಹರಿಸಿದರೆ ಜಿಲ್ಲೆಯ ಜನರ ಆರ್ಥಿಕ ಪರಿಸ್ಥಿತಿ, ಕುಟುಂಬಗಳ ಪರಿಸ್ಥಿತಿ ಕಳಪೆಯಾಗಿರುವುದು ಗೊತ್ತಾಗುತ್ತದೆ. ಸಾವಿರಾರು ಜನರಿಗೆ ಮನೆಗಳಿಲ್ಲ. ಸಾವಿರಾರು ಕುಟುಂಬಗಳು ಕೇವಲ ಒಂದು ಕೋಣೆಯಲ್ಲಿರುವ ಮನೆಗಳಲ್ಲಿ ವಾಸವಿದ್ದಾರೆ. ಇನ್ನೂ ಶೌಚಾಲಯ, ಬಚ್ಚಲು ಮನೆ ಇಲ್ಲದ ಕುಟುಂಬಗಳ ಸಂಖ್ಯೆಯೂ ನಾವು ನಾಚಿಕೆ ಪಡುವಂತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಮನೆ ಆರೈಕೆ ಜಿಲ್ಲೆಯ ಮಟ್ಟಿಗೆ ಉತ್ತಮ ನಿರ್ಧಾರವಲ್ಲ. ಇದರಿಂದ ಸೋಂಕು ಹೆಚ್ಚುವ ಅಪಾಯವೇ ಹೆಚ್ಚಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಜಿಲ್ಲಾ ಮಾನವ ಅಭಿವೃದ್ಧಿ ಸೂಚಿಯಯನ್ನು ತರಿಸಿಕೊಂಡು ಅದರ ವರದಿ ಗಮನಿಸಬೇಕು. ಬೇರೆ ಜಿಲ್ಲೆಗಳಿಗಿಂತಲೂ ತುಮಕೂರು ಜಿಲ್ಲೆಯಲ್ಲಿ ಏಕೆ ಕೊರೊನಾ ಕೇರ್ ಸೆಂಟರ್ ತೆರೆಯುವುದು ಅಗತ್ಯ ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟು ಕೂಡಲೇ ಈ ಕೇರ್ ಸೆಂಟರ್ ಗಳನ್ನು ತೆರೆಯಲು ಮುಂದಾಗಬೇಕು.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಗೂ, ಆಸ್ಪತ್ರೆಗಳ ಸೌಲಭ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದನ್ನು ಗಮನಿಸಿ ಕೂಡಲೇ ತುರ್ತಾಗಿ ಹೆಚ್ಚು ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಬೇಕು, ಆಕ್ಸಿಜನ್, ಐಸಿಯು ಸೆಂಟರ್ ಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸುವತ್ತ ಗಮನ ಹರಿಸುವುದು ಒಳಿತು.

ಜಿಲ್ಲೆಯ ಎಲ್ಲ ಆರೋಗ್ಯ ಕಾರ್ಯಕರ್ತರು, ಖಾಸಗಿ, ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಆಡಳಿತ ಮಂಡಳಿಗಳ ಸಭೆ ಕರೆದು ಜಿಲ್ಲೆಯಲ್ಲಿ ಏನು ಏರುಪೇರಾಗದಂತೆ ನೋಡಿಕೊಳ್ಳುವ ಕುರಿತು, ಅವರಲ್ಲಿನ ಭಯ, ಆತಂಕಗಳನ್ನು ಹೋಗಲಾಡಿಸಿ ಅವರನ್ನು ಹುರಿದುಂಬಿಸಬೇಕಾಗಿದೆ.

ಜಿಲ್ಲೆಯಲ್ಲಿ. ವೈದ್ಯರುಗಳ ಬಗ್ಗೆ ನಂಬಿಕೆ ಹೆಚ್ಚಿದೆ. ಈ ನಂಬಿಕೆ ಕುಸಿಯದಂತೆ ತಡೆಯುವ ಕೆಲಸ ಈಗ ಇನ್ನೂ ಹೆಚ್ಚಾಗಿದೆ.

ಜಿಲ್ಲಾಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ 


Y S PATIL

ತುರ್ತು ಸಂದರ್ಭಗಳಲ್ಲಿ ತಮ್ಮ ಕುಟುಂಬದ ನೋವುಗಳನ್ನು ಲೆಕ್ಕಿಸದೇ ಜನರಿಗಾಗಿ ಮುಂದೆ ನಿಂತು ಕೆಲಸ ಮಾಡುವ ವಿಷಯದಲ್ಲಿ ಇಡೀ ರಾಜ್ಯದಲ್ಲೇ ಗಮನ ಸೆಳೆದಿರುವ ಜಿಲ್ಲಾಧಿಕಾರಿಗಳಾದ ಡಾ.ವೈ.ಎಸ್.ಪಾಟೀಲ ಅವರು ಸೋಂಕಿನ ವಿರುದ್ಧ ಜನ ಜಾಗೃತಿ ಮೂಡಿಸುವ ಕೆಲಸಕ್ಕೆ ಜನರಿಂದ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ.

  • ಜನರು ಸಂಕಷ್ಟಕ್ಕೆ ಮಿಡಿಯುವ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇರುವ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕು ಮಣಿಸುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಇಡೀ ತಂಡವಾಗಿ ಕೆಲಸ ಮಾಡುವುದೇ ಅವರ ಶಕ್ತಿ. ಜಿಲ್ಲೆಯಲ್ಲೂ ಅವರ ‘ವಿಜಯಪುರ ಮಾದರಿ’ ಕೆಲಸ ಮಾಡಲಿದೆ ಎಂಬುದರಲ್ಲಿ ಅನುಮಾನವಿಲ್ಲ.

ಅವರು ಊರೂರು ತಿರುಗುತ್ತಿದ್ದಾರೆ. ಸಭೆಯ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ,. ಮೊದಲಿಗೆ ಹೋಲಿಸಿಕೊಂಡರೆ ಈಗ ಜಿಲ್ಲೆಯಲ್ಲಿ ಮಾಸ್ಕ್ ಧರಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ರಸ್ತೆ ಬದಿಯ ತರಕಾರಿ, ಹಣ್ಣಿನ ಅಂಗಡಿಗಳು, ಸಂತೆಗಳಲ್ಲಿ ಜನಸಂದಣಿ ನಿಯಂತ್ರಿಸುವ ಬಗ್ಗೆ ಹೊಸ ಆಲೋಚನೆಗಳನ್ನು ಜಾರಿಗೆ ತಂದರೆ ಒಳಿತು.

ಹಾಪ್ ಕಾಮ್ಸ್, ರೈತ ಬೆಳೆಗಾರರ ಸಂಘಟನೆಗಳ ಜತೆ ಸಭೆ ನಡೆಸಿ ಇವರುಗಳ ಮೂಲಕ  ಬೀದಿ ಬೀದಿಗೆ ತರಕಾರಿ,.ಹಣ್ಣಿನ ವ್ಯವಸ್ಥೆ ಮಾಡಿದರೆ ಈ ದಟ್ಟಣೆ ತಪ್ಪಿಸಬಹುದೇನೋ?  ಇದಕ್ಕಾಗಿ ಅವರಿಗೆ ವಿಶೇಷ ಪ್ರೋತ್ಸಾಹ ನೀಡುವ ಅಗತ್ಯ ಹೆಚ್ಚಿದೆ.

ಹೋಟೆಲ್ ಗಳನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಮಾಡಿ ದುಂದು ವೆಚ್ಚ ಮಾಡುವ ಸಲಹೆ ಬಿಟ್ಟು, ಶಾಲೆಗಳು, ಹಾಸ್ಟೆಲ್ ಗಳು, ಸರ್ಕಾರಿ ಕಟ್ಟಡಗಳಲ್ಲಿ ಕೇರ್ ಸೆಂಟರ್ ಗಳನ್ನು ತೆರೆದರೆ ಹಣ ಉಳಿಯಲಿದೆ. ಹೀಗೆ ಉಳಿದ ಹಣವನ್ನು ಆಕ್ಸಿಜನ್, ತಾತ್ಕಾಲಿಕ ವೆಂಟಿಲೇಟರ್ ಕೊಳ್ಳಲು ಬಳಸಿದರೆ ರೋಗಿಗಳಿಗೆ ಹೆಚ್ಚು ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಹೆಸರು ಹೇಳಲಿಚ್ಚಿಸ ವೈದ್ಯ ಅಧಿಕಾರಿಯೊಬ್ಬರು ತಿಳಿಸಿದರು.

ಲಸಿಕೆ ಕೊರತೆ


ಜಿಲ್ಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಲಸಿಕೆ ಕೊರತೆ ಕಾಣಿಸಿಕೊಂಡಿದೆ. ಎರಡನೇ ಡೋಸ್ ಲಸಿಕೆ ನೀಡಲು ವಿಳಂಬ ಮಾಡಲಾಗುತ್ತಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಈ ಕೊರತೆಯನ್ನು  ನೀಗಿಸಲು ಜಿಲ್ಲಾಡಳಿತ ಕೂಡಲೇ ಮುಂದಾಗಬೇಕು.

ಸೋಂಕು ತೀವ್ರಗತಿಯಲ್ಲಿ ಹೆಚ್ಚಿದ ಕಾರಣ ಲಸಿಕೆ ಪಡೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಎಲ್ಲಾ ಕಡೆ ಲಸಿಕೆ ದೊರೆಯುವಂತೆ ಮಾಡಬೇಕಾಗಿದೆ. ಈ ಬಗ್ಗೆಯೂ ಹೆಚ್ಚು ಗಮನ ಹರಿಸಿದರೆ ಒಳಿತು.

ಜನರು ಸಹ ಜಿಲ್ಲಾಡಳಿತದ ಮಾತುಗಳನ್ನು ಕೇಳಬೇಕು. ಹಿರೋಹಿಯಿಸಂ ತೋರಿಸಬಾರದು. ಮಾಸ್ಕ್ ಧರಿಸಿದರೆ ಉಸಿರಾಡಲು ಕಷ್ಟವಾಗುತ್ತದೆ ಎಂಬ ತಪ್ಪು ನೆಪ ಹೇಳಿ ಸೋಂಕಿಗೆ ಗುರಿಯಾಗಬಾರದು.

  • ಇನ್ನೂ. ಜ್ವರ, ಕೆಮ್ಮು, ನೆಗಡಿ ಇರುವವರು ಸಹ ಸುಖಾಸುಮ್ಮನೇ ಜನರೊಂದಿಗೆ ಸಂಪರ್ಕ ಬೆಳೆಸುತ್ತಿದ್ದಾರೆ. ನಿನ್ನೆ ಮಳೆಯಲ್ಲಿ ನೆನೆದಿದೆ ಅದಕ್ಕಾಗಿ ನೆಗಡಿಯಾಗಿದೆ. ಬೇರೆ ಊರಿಗೆ ಹೋಗಿ ಬಂದೆ, ಬಿಸಿಲಿಗೆ ಜ್ವರ ಬಂದಿದೆ, ಏನು ಹೆದರಬೇಡಿ ಎಂದು ಹೇಳುತ್ತಾ ಸ್ನೇಹಿತರನ್ನು, ನೆಂಟರನ್ನು ಭೇಟಯಾಗುವವರೇ ಹೆಚ್ಚಿದ್ದಾರೆ. ಇದಾಗಬಾರದು.

ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದೇ ಹೋದರೂ ಸಹ ಇಂಥವರು ಮನೆಯಲ್ಲೇ ಇರಬೇಕು. ಯಾರಾದರೂ ಭೇಟಿಯಾಗಲು ಬಂದರೆ ಜ್ವರ, ನೆಗಡಿ ಇರುವ ವಿಷಯ ತಿಳಿಸಬೇಕು. ಅನಿವಾರ್ಯವಾದಲ್ಲಿ, ಫೋನ್ ಮೂಲಕವೇ ವಿಷಯ ತಿಳಿದುಕೊಳ್ಳಬೇಕು. ಇದನ್ನು ಸರ್ಕಾರ ಮುಂದೆ ನಿಂತು ಮಾಡಿಸಲು ಸಾಧ್ಯವೇ ಎಂಬುದನ್ನು ಪ್ರಜ್ಞಾವಂತರೇ ಅರಿಯಬೇಕು.

ಬೆಳೆಯುವುದೆಂದರೆ…

0

ಕವನಗಳ ರಚನೆಯಲ್ಲಿ II ರಜನಿ ಎಂ.  ಸಿದ್ಧಹಸ್ತರು. ವೃತ್ತಿಯಲ್ಲಿ ವೈದ್ಯರಾದರೂ ಅವರು ಅನುಭಾವಿಕ ನೆಲೆಯಲ್ಲಿ ಬದುಕನ್ನು ಕಾಣುವ ರೀತಿಯೇ ಅದ್ಬುತ. ಪ್ರಖ್ಯಾತ ಕವಿ ರೂಮಿ ಅವರಿಂದ ಪ್ರೇರಿತ ಕವನ.  ಬದುಕಿಗೂ ಹತ್ತಿರುವಾಗವ ಈ ಕವನ ನೂರಾರು ದ್ವನಿತಗಳನ್ನು ಒಳಗೊಂಡಿದೆ. https://publicstory.in ಓದುಗರಿಗಾಗಿ ಈ ಕವನ.

dr rajani

ಹಾಲು ಬಿಡಿಸಿದ  ಮಗುವು ಮೊಲೆ…
ಮರೆತ ಹಾಗೆ

ರೆಕ್ಕೆ ಬಲಿತ ಪಕ್ಷಿಯು
ಗೂಡಿಂದ ಹಾರಿ…
ಹೋದ ಹಾಗೆ

ಮೊಳಕೆ ಒಡೆದ
ಬೀಜ ಸೂರ್ಯನಿಗೆ..
ಹಾತೊರೆದ ಹಾಗೆ

ದಣಿದ ಜೀವ…
ಸೃಷ್ಟಿಯ ವೈಚಿತ್ರ್ಯವನ್ನು
ಕಣ್ತುಂಬಿಕೊಂಡ ಹಾಗೆ

ಅನೂಹ್ಯಕ್ಕೆ
ದೇವರ
ಹೊಣೆ ಮಾಡಿದ
ಹಾಗೆ

ಎಳವೆಯಾಗಿದ್ದ ನಿನ್ನನ್ನು
ನೀನು
ಅರಿತು ಕೊಂಡ
ಹಾಗೆ

(ರೂಮಿ ಕವನ ಪ್ರೇರಿತ )

ಕೊರೊನಾ: ಖಾಸಗಿ ಆಸ್ಪತ್ರೆಗಳ ಮನೆ ಆರೈಕೆ ಪ್ಯಾಕೇಜ್ ಗೆ ಕಡಿವಾಣ ಹಾಕುವವರೇ ಸಚಿವರು?

0

ಮಹೇಂದ್ರ ಕೃಷ್ಣಮೂರ್ತಿ


ಬೆಂಗಳೂರು: ಕೊರೊನಾ ರೋಗಿಗಳಿಗೆ ಬೆಡ್, ಐಸಿಯು ಮೀಸಲಿಡುವ ವಿಷಯದಲ್ಲಿ ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಾ ಸೆಡ್ಡುಹೊಡೆಯುತ್ತಿರುವ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಏಕಾಏಕಿ ಮನೆ ಆರೈಕೆ ಪ್ಯಾಕೇಜ್ ಘೋಷಣೆ  ಮಾಡಿರುವುದು ಮಾತ್ರ ಹುಬ್ಬೇರುವಂತೆ ಮಾಡಿದೆ.

ಖಾಸಗಿ ಆಸ್ಪತ್ರೆಗಳು ಈ ರೀತಿ ಮನೆ ಆರೈಕೆ ಪ್ಯಾಕೇಜ್ ಗೆ ನಿಗದಿ ಮಾಡಿರುವ ದರಕ್ಕೆ ಕಡಿವಾಣ ಹಾಕದಿದ್ದರೆ ನಾಯಿಕೊಡೆಗಳಂತೆ ಮನೆ ಆರೈಕೆ ಪ್ಯಾಕೇಜ್ ನೀಡುವ ಆಸ್ಪತ್ರೆಗಳು ಹುಟ್ಟಿಕೊಳ್ಳಲಿವೆ.  ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ -23017ರ ಅಡಿ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸಾ ವೆಚ್ಚವನ್ನು  ನಿಗದಿ ಮಾಡುವ  ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಈ ಅಧಿಕಾರವನ್ನಾದರೂ ಆರೋಗ್ಯ ಸಚಿವರು ಬಳಸಿಕೊಂಡು ಬಡ ರೋಗಿಗಳ ನೆರವಿಗೆ ಬರಬೇಕಾಗಿದೆ. 

ಜಾಹಿ

ಕೊಲಂಬಿಯಾ ಏಷ್ಯಾ, ಮಣಿಪಾಲ್  ಅಪೋಲೊ, ಸಾಕ್ರಾ, ಅಸ್ಟರ್, ನಾರಾಯಣ ಹೆಲ್ತ್, ವಿಕ್ರಂ ಸೇರಿದಂತೆ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳು ಈ ಮನೆ ಆರೈಕೆ ಪ್ಯಾಕೇಜ್ ಅನ್ನು ಪ್ರಕಟಿಸಿವೆ. ಇದಕ್ಕೆ ಈ ಆಸ್ಪತ್ರೆಗಳ ಸರ್ಕಾರದ ಜತೆ ಮಾತನಾಡಿ, ಚರ್ಚಿಸಿ ಈ ನಿರ್ಧಾರ ಕೈಗೊಂಡಿವೆಯೋ? ಇಲ್ಲವೇ ಈ ಆಸ್ಪತ್ರೆಗಳೇ ಸೇರಿಕೊಂಡು ಈ ನಿರ್ಣಯಕ್ಕೆ ಬಂದವೇ ಎಂಬ ಬಗ್ಗೆ  ಈ ಆಸ್ಪತ್ರೆಗಳಾಗಲೀ, ಕೋವಿಡ್ ನಿರ್ವಹಣೆಯ ಹೊಣೆಹೊತ್ತುಕೊಂಡಿರುವ ವೈದ್ಯರು ಆಗಿರುವ ಆರೋಗ್ಯ ಸಚಿವ ಡಾ,ಸುಧಾಕರ್ ಅವರಾಗಲೀ ಇನ್ನೂ ಏನನ್ನು ಹೇಳಿಲ್ಲ.

ಈ ಆಸ್ಪತ್ರೆಗಳ ಪ್ಯಾಕೇಜ್ ದರಗಳಲ್ಲೂ ವ್ಯತ್ಯಾಸಗಳಿವೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳನ್ನು ಹಿಂಬಾಲಿಸಿ ರಾಜ್ಯದ ಬೇರೆಬೇರೆ ನಗರ, ಪಟ್ಟಣಗಳ ಸಣ್ಣ,ಪುಟ್ಟ ಖಾಸಗಿ ನರ್ಸಿಂಗ್ ಹೋಂಗಳು ಇದೇ ರೀತಿಯ ಪ್ಯಾಕೇಜ್ ಗಳನ್ನು ಘೋಷಿಸಬಹುದು. ಇದಕ್ಕೆ ಈಗಾಗಲೇ ತಯಾರಿ ಮಾಡಿಕೊಂಡಿರಲೂ ಬಹುದೇನೋ?

ಈಗ, ಬೆಂಗಳೂರಿನ ಈ ಖಾಸಗಿ ಆಸ್ಪತ್ರೆಗಳು ಘೋಷಿಸಿರುವ ಪ್ಯಾಕೇಜ್ 4 ಸಾವಿರದಿಂದ 20 ಸಾವಿರ ರೂಪಾಯಿವರೆಗೂ ಇದೆ. ಇದರಲ್ಲಿ ನ್ಯೂಟ್ರಿಷಿಯನ್, ನರ್ಸ್ ಗಳ ಸೇವೆ, ಪಿಜಿಷಿಯನ್ ಸೇವೆ, ಮಾಸ್ಕ, ಕಿಟ್ ಗಳನ್ನು ಒಳಗೊಂಡಿದೆ. ಆಸ್ಪತ್ರೆಗಳ ಪ್ರಕಟಣೆಯಂತೆ, ರೋಗಿಗಳಿಗೆ ನೇರವಾಗಿ ವಿಡಿಯೊ ಸಂವಾದದ ಮೂಲಕ ಸಲಹೆ ನೀಡಲಾಗುವುದು ಎಂದು ಹೇಳಿವೆ.

ಖಖ

ಈ ಪ್ಯಾಕೇಜ್ ಅನ್ನು ಯಾವ ಆಧಾರದಲ್ಲಿ ಘೋಷಿಸಲಾಗಿದೆ ಎಂದು ಖಾಸಗಿ ಆಸ್ಪತ್ರೆಗಳು ಹೇಳಿಲ್ಲ.  ಹೆದರಿ ಕಂಗಾಲಾಗಿರುವ ರೋಗಿಗಳಿಂದ ಹಣ ಮಾಡುವ ದಂಧೆ ಅದರೂ ಆಶ್ಚರ್ಯಪಡಬೇಕಾಗಿದೆ. ಈ ಹಿಂದೆ ಡೆಂಗಿ ಜ್ವರ ಹೆಚ್ಚಾದಾಗ,  ಕೊರೊನಾ ಆರಂಭದಲ್ಲಿ ಆರ್ಟಿಪಿಸಿಆರ್ ಪರೀಕ್ಷೆಗೆ ದರ ನಿಗದಿ ಮಾಡಿ ಸರ್ಕಾರ ಖಾಸಗಿ ಆಸ್ಪತ್ರೆಗಳ ಹಣ ಪೀಕುವಿಕೆ ಕಡಿವಾಣ ಹಾಕಿತ್ತು.  ಅದೇ ಮಾದರಿ ಈಗಲೂ ಅನುಸರಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಹೆತ್ತೇನಹಳ್ಳಿ ಮಂಜುನಾಥ್.

ಅಪ್ಪ ಮಗ ಅದೇನೋ ಚೀಲದಲ್ಲಿ ಇಟ್ಕಂಡು…

0

ಉಜ್ಜಜ್ಜಿರಾಜಣ್ಣ


ಅಪ್ಪ ಮಗ ಅದೇನೋ ಚೀಲದಲ್ಲಿ ಇಟ್ಕಂಡು ಪಡು ಮಕನಾಗಿ ಹೋಗುವಾಗ ಬರ್ರಯ್ಯ ಅಂಗೆಯಾ ಟೀ ಕುಡ್ದು ಹೋಗಿ ಎಂದೆ.

ಅತ್ತಲಿಂದ ಬರುವಾಗ ಬತ್ತೀವಿ ಅಂತಾ ಹೋದ ಅಲ್ಲಬಕಾಶ್ ಹಾಗೂ ಅವರ ಮಗ, ಆ ತಹಶಿಲ್ದಾರ್ ಮನೆ ಯಕಡಿ ಬೀದಿ ಅಂತಲೇ ಹೋದವರು ಅವರು ಮನೆಗೆ ಒಂದು ಕೆಜಿ ಕಾಟ್ಲಾ ಇನ್ನೊಂದು ಕೆಜಿ ರಘು ಆಮೇಲೊಂದು ಕೆಜಿ ಕುಚ್ಚು ಮೀನು ಕೊಟ್ಟು ಬಂದು ಕುತ್ಕಂಡಿದ್ದು ಟೀ ಕುಡುದು ಹೋದ್ರು.

ಅವರ ಮೀನು ಯಾಪಾರ ಚನಾಗಿರಂಗೈತೆ. ನನ್ನ ಮಖದ ಮೇಲೆ ಹರಿದ ಗೆರೆಗಳ ನರಿಗೆ ಸುಕ್ಕ ಇಮ್ಮಡಿಯಾಗಿರುವುದ ನೋಡಿ ಅಲ್ಲಾಬಕಾಶ್ರಿಗೆ ಏನೋ ಒಂತರನಂತಾಗಿ, ಅದೆಂತದೋ ಶತಾಯು ಆರ್ಯವೇದ ಕುಡಿ ಮಖುದು ಮ್ಯಾಗುಲು ಸಕ್ಕು ಸರಿಯಾಗಿ Immunity bust up ಆಗುತ್ತೆ ನಿನ್ನ ಮುಖ್ದ ಮೇಲಿನ ಸುಕ್ಕು ಮಾಯವಾಗುತ್ತದೆ ಅದು ಆರ್ಯವೇದ No side effects, first class result, use ಮಾಡು ಸುಕ್ಕಿರಲ್ಲ. ಮಖೆಲ್ಲ ನರಿಗೆನರಿಗೆ ಆಗಿದೆ ಅಂತ ಬ್ಯಾರೆ ಹೇಳಿರು. ಕಾಟ್ಲಾ ರಘು ಮೀನು Fresh ಆಗಿ ಬಂದಿದೆ ಅಂದ್ರು.

ಇಲ್ಲಾ ಕಣಯ್ಯ ಮೃತ್ಯುಂಜಯ ಹೋಮ ಆಗಿದೆ Fifty eight days ಮೀನು ಮಾಂಸ ಮದ್ದು ಮುಟ್ಟಂಗಿಲ್ಲ ಅಂದೆ. ಥೂ ನಿಮ್ಮ ನಿನ್ನ Progressive sensibility ಹಾಳಗಿದೆ Progressive ಗಳೆಲ್ಲಾ ಹಾಳಾಗಿದಿರಾ ಎಂತಲೇ ಸಿಟ್ಟತ್ತಿ ಅಂಗೆಯಾ ಅಪ್ಪಾ ಮಗ ಗಾಡಿ ಹತ್ತೀರು.

ಜೊತೆಯಲ್ಲಿ ಸೇರಿಕೊಂಡು ಪಕ್ಕದಲ್ಲೇ ಕುಳಿತಿದ್ದ ವಾರ್ತಾಭಾರತಿ ದಿನಪತ್ರಿಕೆಯ ವರದಿಗಾರ ಮಂಜುನಾಥ್ ನಗರದ ಕುಮಾರ್ ಹೊನ್ನವಳ್ಳಿ ನಮ್ಮ ತೀಟ್ಗೆ ನೋಡಿ ನಕ್ಕ‌‌ . ಚಿಕನ್ ಕಬಾಬು, ಬಿರಿಯಾನಿ door delivery ಕೊಟ್ಟು ನಗರದಲ್ಲಿ ಒಳ್ಳೆಯದು ರುಚಿ ಹತ್ತಿಸಿದ್ದರು. ಅದು ಈಗ ನಡಿತಾ ಇಲ್ಲ.

ಕಾಮರೇಡ್ ಅಲ್ಲಾಬಕಾಶ್ ಒಳ್ಳೆಯ ಚಳುವಳಿಗಾರ. ಸಂಘಟಕ. CITU ನಲ್ಲಿ ಕೆಲಸ ಮಾಡಿದಾರೆ. ಭಂಗ ಬಡತನ ಏಗುತ್ತಲೇ ಚಳುವಳಿಗಳ ಸಂಗಾತಿಗಳ ಸಾರ್ವಜನಿಕರ ಜೊತೆಯಲ್ಲಿಯೂ ಏಗುತ್ತಿರುವ ಗೆಳೆಯ.

ಕಳೆದ ನಗರಸಭಾ ಚುನಾವಣೆಯಲ್ಲಿ ನಾವಿಬ್ಬರೂ ಸ್ಪರ್ಧೆಯಲ್ಲಿದ್ದೆವು. ಗಾಂಧಿ ನಗರದ ಬಡವರಿಗೆ ಅಲ್ಲಾಬಕಾಶ್ ಹೆಚ್ಚು ಕೆಲಸ ಮಾಡಿದವರು. ‌ದಮನಿತ ಸಮುದಾಯಗಳನ್ನು ಒಗ್ಗೂಡಿಸಿ ಚಳವಳಿ ಕಟ್ಟುತ್ತಲೇ ಮುಂದುವರಿದವರು.

ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಬದುಕಿನ ಜೊತೆಯಲ್ಲಿ ಏಗುವುದೆಂದರೆ ದಾರಿ ಸಾಗದ ಮಾತು‌. ಮಗ ಮಗಳು ಒಳ್ಳೆಯವು, ಚನ್ನಾಗಿ ಓದುತ್ತಿದ್ದಾರೆ. ಅಪ್ಪನ ಚಳುವಳಿಯ ಕಷ್ಟದ ಜೊತೆಯಲ್ಲಿ ಅವರೂ ಒಗ್ಗಿಕೊಂಡಿದ್ದಾರೆ.

ಇಬ್ಬರೂ ಮಕ್ಕಳು ಕನ್ನಡದ ಹಾಡುಗಳನ್ನು ಅತಿ ಅಕ್ಕರೆಯಿಂದ ಹಾಡುವ ಸ್ಫೂರ್ತಿ ಮೈಗೂಡಿಸಿಕೊಂಡವರು. ಅಲ್ಲಾಬಕಾಶ್ ಮಗ ಅಮ್ಜದ್ ಬೇಂದ್ರೆಯವರ ಕವಿತೆಗಳನ್ನು ಅಪರೂಪವಾಗಿ ಹಾಡುವನು. ಇಲ್ಲೇ ಕಲ್ಪತರು ಕಾಲೇಜ್ ಬಿಬಿಎಂ ವಿದ್ಯಾರ್ಥಿ. ಅವನ ಹಾಡುಗಳು ಗಮನವಿಟ್ಟು ಕೇಳುವಂತಿರುತ್ತವೆ. ಕವಿ ಎಲ್ ಎನ್ ಮುಕುಂದರಾಜ್ ರಚನೆಯ ನನ್ನ ಪ್ರಿಯವಾದ ಹಾಡು ” ಎಷ್ಟೊಂದು ತಳಮಳವು ಎದೆಯೊಳಗೆ ಗೆಳತಿ ” ಹಾಡಿದ್ದನ್ನು ಕೇಳಿದ್ದ ಅಮ್ಜದ್ ಅದನ್ನು ಬರೆದುಕೊಡುವಂತೆ ಕೇಳಿದ್ದ. ಕನ್ನಡ ಕವಿಗಳ ಇಷ್ಟದ ಹಾಡುಗಳನ್ನು ಕಲಿಯುವ ಅವ್ಯಾಸ ಬೆಳೆಸಿಕೊಂಡಿರುವ ಯುವಕ ಅಮ್ಜದ್, ಹಾಡೊಂದನ್ನು ಕೇಳಿದರೆ ಕೂಡಲೇ ಹಾಡುವನು ತುಸುವೇ ನಕ್ಕು ಕೇಳುಗರ Opinion ಗೆ ತಡವರಿಸುವನು.

ಹಿರಿಯ ಕತೆಗಾರಾದ ಎಸ್ ಗಂಗಾದರಯ್ಯ, ಶ್ರೀಕಾಂತ್, ಮನೋಹರ್ ಪಾಟೇಲ್ ನಾವೆಲ್ಲಾ ಗೆಳೆಯರು ಆಗಾಗ್ಗೆ ಅಲ್ಲಾಬಕಾಶ್ ಮನೆಗೆ ಹೋದಾಗ ಅಮ್ಜದ್ ಬಾಯಲ್ಲಿ ಬೇಂದ್ರೆಯವರ ಹಾಗು ಕನ್ನಡದ ಇತರೆ ಹಾಡುಗಳನ್ನು ಹಾಡಿಸಿ ಕೇಳಂಗಾಗುತ್ತದೆ.


ಭಾನುವಾರದ ಕವಿತೆ “ತೊಟ್ಟು ತೊಟ್ಟು”

0

ಡಾಕ್ಟರ್ ರಜನಿ.

ಮಾವಿನ ಮಿಡಿಯ
ಹಸಿರು ತೊಟ್ಟು

ತೊಟ್ಟಿನ ಬುಡ ಸಿಹಿ

ತಾಯಿ ಜ್ವರ…ಮಗು
ಬಾಯಿಗೆ ಎದೆ ತೊಟ್ಟು

ಎಣ್ಣೆ ಬದನೆಕಾಯಿ.. ಇರಲಿ ತೊಟ್ಟು

ಸೀಬೆ ಹಣ್ಣು ಎರಡು ಎಲೆ ತೊಟ್ಟು ..ಸುಂದರ

ನಿಲ್ಲುವ ನೀರು …ಸಿಗಲಿಲ್ಲ ಎರಡು ತೊಟ್ಟು

ಮಲ್ಲಿಗೆ ದಂಡೆ ತೊಟ್ಟು ಕಟ್ಟು .. ಎಂಥಾ
ದಂಡೆ …

ಒಂದು ತೊಟ್ಟು ಕಾಫಿ ಕೊಡು …ಸೇರುತ್ತೂ ಇಲ್ಲವೋ

ಒಂದು ತೊಟ್ಟು ಎಸರು ಬಿಡು … ಉಣ್ ಲಾರೆ…

ಸಾರು ಮಾಡಲಾರೆ…ಒಂದು ತೊಟ್ಟು ಸಾರು ಈಸ್ಕೊ ಪಕ್ಕದ ಮನೇಲಿ…

ಈ ಮಳೆಗೇ ಇಂಗೆ ತೊಟ್ಟಿಕುದ್ರೆ ..ಮುಂದೆ…

ಆ ಮೂದೇವಿ ಗೆ ..ಹೆಂಡ್ತಿ ಅಂತ ಒಂದು ತೊಟ್ಟು ಪ್ರೀತಿ ಬೇಡ?

ಮಗಿಗೇ ತೊಟ್ಟು ತೊಟ್ಟೆ ಹಾಕು ಔಷಧಿ… ದಕ್ತದೆ…

ಒಂದು ತೊಟ್ಟು ಹರಳೆಣ್ಣೆ ಹಾಕು ನೆತ್ತಿಗೆ .. ತಂಪಾಗುತ್ತದೆ…

ಒಂದು ತೊಟ್ಟು ತುಪ್ಪ ..ಹಾಕು ..ಸೇರುತ್ತ ನೋಡಣ…

ಕಾಲೇ ಬರಲಿಲ್ಲ ನಡಿಯಕ್ಕೆ…ತೊಟ್ಟು ಕಿತ್ತ ಹಣ್ಣು ಬಿದ್ದಂಗೆ ಆಯ್ತು…

ಒಂದು ತೊಟ್ಟು ಗಂಗಾಜಲ ಬಿಡು ಬಾಯಿಗೆ ನೋಡಣ..
ಮಣ್ಣು ..ಚಿನ್ನ ತೇದು ..ಒಂದು ತೊಟ್ಟು ಹನುಕ್ಸು

ಜೀವ ಎಲ್ಲೊ ಒಂದು ತೊಟ್ಟು ಹಿಡ್ಕಂಡ್ ಅದೇ…ಸಂಜೀ ತನಕ ನೋಡ್ಬೇಕು…

ಒಂದು ತೊಟ್ಟು ರಕ್ತ ಇಲ್ಲ…ಇಷ್ಟು ಲೇಟ್ ಆಗಿ ಬಂದ್ರೆ….

ಸಿಸ್ಟರ್ ಸಿಸ್ಟರ್..ಡ್ರಿಪ್ ತೊಟ್ಟು ಬೀಳ್ತಾ ಇಲ್ಲ…….

ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ ಸೋಂಕು ತಗುಲಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೊನಾ ಪಾಸಿಟಿವ್ ಬಂದಿರುವುದಾಗಿ ಹೇಳಿದ್ದಾರೆ. ಅವರ ತಂದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪತ್ನಿ ಚೆನ್ನಮ್ಮ ಅವರಿಗೂ ಸೋಂಕು ತಗುಲಿತ್ತು. ಇಬ್ಬರೂ ಗುಣಮುಖರಾಗಿದ್ದಾರೆ.

ಸೋಂಕಿನ ನಡುವೆಯೂ, ಬಸ್ ಮುಷ್ಕರದ ಬಗ್ಗೆ ಟ್ವೀಟ್ ಮಾಡಿರುವ ಅವರು, ಮುಷ್ಕರ ಹಿಂಸಾತ್ಮಕ ರೂಪ ತಾಳಲು ಸರ್ಕಾರ ಬಿಡಬಾರದು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಿನ್ನೆಯಷ್ಟೇ ಕೊರೊನಾ ಸೋಂಕು ದೃಢಪಟದಟಿತ್ತು.

ಕೋರೋಣ

1

ಡಾ. ರಜನಿ ಎಂ

ಕರೋನಾ ಎಲ್ಲೆಡೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ. ಜನರು ಎಚ್ಚರಿಕೆಯಿಂದ ಇರಬೇಕು. ಎಷ್ಟೇ ಜಾಗೃತಿ ವಹಿಸಿದರೂ ಕರೋನಾಕೆ ತುತ್ತಾಗುತ್ತಿದ್ದಾರೆ. ಕರೋನಾ ಬಂದರೂ ಹೆಣ್ಣು ತನ್ನ ಗಂಡ , ಮನೆ ಜವಾಬ್ದಾರಿಗಳಿಂದ ಕಳಚಿಕೊಳ್ಳಲು ಸಾಧ್ಯವಾಗುವುದಿಲ್ಲ.. ಇಂತಹ ದುರಿತ ಸಂದರ್ಭದಲ್ಲಿ ಹೆಣ್ಣು ತನಗಾಗಿ ತಾನು ಬದುಕುವುದಿಲ್ಲ. ವಾರ್ಡ್ ನಿಂದ ಕಂಡ ನೇರ ಅನುಭವವನ್ನು ಇಲ್ಲಿ ಕವಯತ್ರಿ ರಜನಿ ಅವರು ದಾಖಲಿಸಿದ್ದಾರೆ.

ಕೋರೋಣ
—————-

ಗಂಡನಿಗೂ ಕರೋನ
ಹೆಂಡತಿಗೂ ಕರೋನ
ಮಕ್ಕಳಿಗೂ ಕರೋನ

ಹೆಂಡತಿಗೆ ಬರೇ ಗಂಡನ ಚಿಂತೆ
ಮಾಸ್ಕ್ ಕಿತ್ಕೋತಾರೇ

ಆಕ್ಸಿ ಜಿನ್ ಕಡಿಮೆ ಆಗಿದೆ..
ಹೋಗಿ ಹೋಗಿ ನೋಡ್ಕಂಬತ್ತಾರೆ

ಆಕೆಗೇ ಜ್ವರ ಸುಸ್ತು
ಆದರೂ ಗಂಡ ಮಕ್ಕಳದೇ
ಚಿಂತೆ

ಮನೆಯ ಬೆಳೆದ ಮಕ್ಕಳಿಗೆ
ನಾಲಿಗೆ ಹೊಡೆದು ಹೋಗುವಷ್ಟು
ಸಲಹೆ

ಚಿನ್ನದ ಬಳೆ …ಸೂಜಿ ಹಾಕಲು ಅಡ್ಡ
ಆದರೂ ಕತ್ತರಿಸಲಿಲ್ಲ…
ಗಂಡ ಮಾಡಿಸಿಕೊಟ್ಟ ಸೆಂಟಿಮೆಂಟ್

ಮೊಮ್ಮಗನಿಗೆ
ತಾಚಿ ಮಾಡಪ್ಪ

ಎಂದು ವಿಡಿಯೋ ಕಾಲ್
ಮಾಡುವ ಆಜ್ಜಿ

ನಾಯಿಗೆ ಪಿಡಿಗ್ರಿ
ಜೊತೆಗೆ ಮೊಟ್ಟೆ ಹಾಕಲು
ಸೂಚನೆ

ಈ ಹೆಂಗಸರಿಗೆ ಬಂದರೂ
ಕರೋನ ಕೆಮ್ಮು

ಮನೆ, ಮಕ್ಕಳು ಮೊಮ್ಮಕ್ಕಳು.. ಗಂಡ…
ನಾಯಿದೇ ಚಿಂತೆ

ಯಾವಾಗ ಬದುಕುವರೋ
ತಮಗಾಗಿ

ಗಂಡಸರ ವಾರ್ಡು
ನಿಶ್ಯಬ್ಧ..
ಕರೋನಾ ಬುದ್ಧರು

ಈಗಲಾದರೂ
ಹೆಂಗಸರಿಗೆ

ಆಗಲಿ
ಜ್ಞಾನದೋಯ

ಎಂದು ದೇವರಲ್ಲಿ
ಕೋರೋಣ