Saturday, May 9, 2026
Google search engine
Home Blog Page 155

ಆರಂಭದಲ್ಲೇ ಜನರ ಮೆಚ್ಚುಗೆ ಪಡೆಯುತ್ತಿರುವ ಜಿಲ್ಲಾಧಿಕಾರಿ

0

Publicstory


ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆರಂಭದಲ್ಲೇ ಜನರ ಮೆಚ್ಚುಗೆ ಗಳಿಸುತ್ತಿದ್ದಾರೆ.

ವಿಜಯಪುರದ ಜಿಲ್ಲಾಧಿಕಾರಿಯಾಗಿದ್ದಾಗ ನೆರೆ ಬಂದಿತ್ತು. ಆಗ ಅವರ ತಾತನ ಅಂತ್ಯಕ್ರಿಯೆಗೂ ತೆರಳದೇ ಕೆಲಸ ನಿರ್ವಹಿಸಿದ್ದರು. ಅದಕ್ಕೆ ಅವರು ನೀಡಿದ ಉತ್ತರದಿಂದ ಕೆಲವರ ಕಣ್ಣಾಲಿಗಳು ಒದ್ದೆಯಾಗಿದ್ದವು.

ಜನರ ನಡುವೆ ಆತ್ಮೀಯವಾಗಿ ಮಾತನಾಡುವ ಅವರ ಪರಿ ಈ ಹಿಂದೆ ಇಲ್ಲಿ ಕೆಲಸ ನಿರ್ವಹಿಸಿದ್ದ ಮೋಹನ್ ರಾಜ್ ಅವರೊಂದಿಗೆ ಸಮೀಕರಣ ಮಾಡುತ್ತಿದ್ದಾರೆ.

ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಅವರ ಕೊರ್ಟ್ ಕಲಾಪದ ಬಗ್ಗೆ ವಕೀಲರು ಸಹ ಮೆಚ್ಚುಗೆ ಸೂಚಿಸುತ್ತಿದ್ದರು.

ಜನರ ಜೊತೆ ಬೆರೆಯುವ, ಕಷ್ಟಸುಖ ಕೇಳುವ ಜಿಲ್ಲಾಧಿಕಾರಿಗಳು ಬೇಕಿತ್ತು. ಪಾಟೀಲರು ಈ ನಿಟ್ಟಿನಲ್ಲಿ ಕೆಲಸ ಮಾಡುವವರು ಎಂದು ಅನ್ನಿಸತೊಡಗಿದೆ. ನಿಜವಾದ ಜಿಲ್ಲಾಧಿಕಾರಿ ಎಂದರೆ ಶಾಸಕರು, ಸಂಸದರಿಗೂ ಮಿಗಿಲು. ಜನರ ಕಷ್ಟಗಳನ್ನು ಹಂಚಿಕೊಳ್ಳಬೇಕು ಎಂದು ರೈತ ಸಂಘದ ಮುಖಂಡ ದೇವರಾಜ್ https://publicstory.in ಗೆ ತಿಳಿಸಿದರು.

ಗ್ರಾಮ ವಾಸ್ತವ್ಯ


ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಲಕ್ಷ್ಮಿಪುರದಲ್ಲಿ ವೈ.ಎಸ್.ಪಾಟೀಲ ಅವರ ಗ್ರಾಮ ವಾಸ್ತವ್ಯ ಮಾಡಿ ಗಮನ ಸೆಳೆರು.

ಎಸ್ಪಿ ಡಾ.ಕೆ ವಂಶಿಕೃಷ್ಣ, ಸಿಇಒ ಗಂಗಾಧರಸ್ವಾಮಿ, ಎಡಿಸಿ ಚನ್ನಬಸಪ್ಪ, ಎಸಿ ಸೋಮಪ್ಪ, ತಹಶೀಲ್ದಾರ್ ಡಾ.ವಿಶ್ವನಾಥ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮದಲ್ಲಿ ವಾಸ್ತವ್ಯ ಮಾಡಲು ಆಗಮಿಸಿದ್ದ. ಜಿಲ್ಲಾಧಿಕಾರಿಗಳನ್ನು ಶಾಸಕರಾದ ವೀರಭದ್ರಯ್ಯ ಅವರು ಸ್ವಾಗತಿಸಿದರು.

ಗ್ರಾಮಸ್ಥರಿಗೆ ಉಚಿತ ಅರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿತ್ತು.
ಕೃಷಿ , ತೋಟಗಾರಿಕೆ, ಆರೋಗ್ಯ, ಆಹಾರ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಯೋಜನೆ/ ಕಾರ್ಯಕ್ರಮಗಳ ಬಗ್ಗೆ ಗ್ರಾಮಸ್ಥರಿಗೆ ಅಧಿಕಾರಿಗಳು ಅರಿವು ಮೂಡಿಸಿದರು.
ಗ್ರಾಮದ 6 ಮಂದಿಗೆ ಪಿಂಚಣಿ ಆದೇಶ ಪತ್ರ, ಆರೋಗ್ಯ ಕಾರ್ಡು, ಕೃಷಿ ಸಲಕರಣೆ ವಿತರಿಸಿದರು.

ತುರುವೇಕೆರೆ: ಅಂರ್ತಜಲಮಟ್ಟ ಸುಧಾರಣೆ

Publicstory


ತುರುವೇಕೆರೆ: ಬೇಸಿಗೆ ಸಮೀಪಿಸುತ್ತಿದ್ದು ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಶಾಸಕ ಮಸಾಲಯರಾಂ ಹೇಳಿದರು.

ತಾಲ್ಲೂಕು ದಬ್ಬೇಘಟ್ಟ ಹೋಬಳಿಯ ಮಾವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಮಲ್ಲೇನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಎಸ್ ಟಿಪಿ ಟಿಎಸ್ಪಿ ಯೋಜನೆಯಡಿಯಲ್ಲಿ ಕಡೇಹಳ್ಳಿ-ಮದ್ದನಹಳ್ಳಿ ಮಾರ್ಗದ ಮಾವಿನಕೆರೆಗೆ ರಸ್ತೆ ಸರಪಳಿ 1.90 ಯಿಂದ 2.20 ಹಾಗೂ 3.10 ರಿಂದ 3.50 ಕಿ.ಮೀ.ವರೆಗೆ ರಸ್ತೆ ದುರಸ್ತಿಗೆ ಸುಮಾರು 75 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕಳೆದ 15 ವರ್ಷಗಳಿಂದ ತಾಲ್ಲೂಕಿನಲ್ಲಿ ಕೆರೆಕಟ್ಟೆಗಳಿಗೆ ಹೇಮಾವತಿ ನಾಲಾ ನೀರು ಹರಿಯದೆ ಅಂರ್ತಜಲದ ಸಮಸ್ಯೆ ಜನರನ್ನು ಬಾಧಿಸುತ್ಥಾ ಜನಜಾನುವಾರಗಳಿಗೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಬಿಗಡಾಯಿಸಿತ್ತು.

ನಾನು ಶಾಸಕನಾದ ನಂತರ ಶೇ.90ರಷ್ಟು ತಾಲ್ಲೂಕಿನ ಎಲ್ಲ ಕೆರೆ, ಕಟ್ಟೆಗಳಿಗೆ ಹೇಮಾವತಿ ನಾಲಾ ನೀರನ್ನು ಹಂತ ಹಂತವಾಗಿ ತುಂಬಿಸಲಾಗಿದ್ದು ಇದರಿಂದ ಅಂರ್ತಜಲದ ಮಟ್ಟ ಸುಧಾರಣೆಯಾಗಿ ರೈತರ ಕೊಳವೆಬಾವಿಗಳಲ್ಲಿ ಉತ್ತಮ ನೀರು ಲಭ್ಯವಾಗಿದೆ. ತೆಂಗು, ಅಡಿಕೆ, ಬಾಳೆ ಸೇರಿದಂತೆ ಇನ್ನಿತರ ವಾಣಿಜ್ಯ ಬೆಳೆಗಳಿಗೆ ಅನುಕೂಲವಾಗಲಿದೆ ಮತ್ತು ಜಾನುವಾರಗಳ ಕುಡಿಯುವ ನೀರಿನ ಕೊರತೆಯ ಪ್ರಮಾಣವೂ ತಗ್ಗುವ ವಿಶ್ವಾಸವಿದೆ ಎಂದರು.

ಪಕ್ಷಾತೀತವಾಗಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಈ ಸಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್, ಎಪಿಎಂಸಿ ವಿ.ಟಿ.ವೆಂಕಟರಾಮು, ಚಂದ್ರಯ್ಯ, ತಾತಯ್ಯ, ಗಣೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಲಕ್ಷ್ಮೀ ಇಲಿ ಪಾಷಾಣ ಕುಡಿದಿದ್ದು…

0

ಮಹೇಂದ್ರ ಕೃಷ್ಣಮೂರ್ತಿ


ಆಗಷ್ಟೇ ಮದುವೆಯಾಗಿದ್ದ ಲಕ್ಷ್ಮೀ ಇಲಿ ಪಾಷಾಣ ಕುಡಿದುಬಿಟ್ಟಳು.

ಮದುವೆಯಾಗಿ ಆರು ತಿಂಗಳಲ್ಲೇ ಗಂಡನ ಎಲ್ಲ ಮುಖ ಪರಿಚಯವಾಗಿತ್ತು. ಅವನಿಗೆ ಬೇರಾವುದೊ ಸಂಬಂಧ. ಗಂಡನ ಸರಿದಾರಿಗೆ ತರಬಹುದೆಂಬ ನಂಬಿಕೆಯಲ್ಲಿ ಲಕ್ಷ್ಮೀ ಪ್ರಾಣ ಕಳೆದುಕೊಳ್ಳಲು ರೆಡಿಯಾಗಿದ್ದಳು….

ಹಾಗಾದರೆ ಇಲಿ ಪಾಷಾಣ ಕುಡಿದ ಲಕ್ಷ್ಮೀ ಉಳಿಸಿಕೊಳ್ಳುವುದೆಂತು?

ಇಲಿ ಪಾಷಾಣ ಅಷ್ಟೆ ಅಲ್ಲ, ಫಾಲಿಡಾರ್, ಸೀಮೆ ಎಣ್ಣೆ, ಡಿಡಿಟಿ, ಹೀಗೆ ಬೇರೆ ಬೇರೆ ವಿಷ ಸೇವಿಸಿದವರ ಕತೆ ಈ ಫಾಲಿಡಾರ್ ಪುಸ್ತಕದಲ್ಲಿದೆ.

ಖ್ಯಾತ ವೈದ್ಯೆ ಡಾ.ರಜನಿ ಎಂ. ಅವರ ಪುಸ್ತಕವಿದು.‌ ಆರೋಗ್ಯದ ಕುರಿತು ಜನರನ್ನು ಸಾಕ್ಷರನ್ನಾಗಿ ಮಾಡುವ ಉದ್ದೇಶದಿಂದ ಈ ಪುಸ್ತಕ ಹೊರ ತರಲಾಗಿದೆ.

ಬಹಳ ಹಳೆಯ ಪುಸ್ತಕವಾದರೂ ಈಗ ಅನಿವಾರ್ಯತೆ ಹೆಚ್ಚಿದೆ. ಆಗಿಗಿಂತಲು ಈಗ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತಿದೆಯಲ್ಲವೇ ?.

ಏನೇ, ಎಂಥದೇ ವಿಷ ಕುಡಿದರೂ ವಾಂತಿ ಮಾಡಿಸಬೇಕು ಎಂಬುದೇ ಬಹುತೇಕರ ನಂಬಿಕೆ.

ಮನುಷ್ಯರನ್ನು ಉಳಿಸಿಕೊಳ್ಳಲು ಪ್ರಾಥಮಿಕ ಚಿಕಿತ್ಸೆಯೇ ಪ್ರಮುಖ. ಎಲ್ಲ ಥರದ ವಿಷ ಕುಡಿದವರಿಗೆ ವಾಂತಿ ಮಾಡಿಸುವುದೇ ಪ್ರಥಮ ಚಿಕಿತ್ಸೆ ಅಲ್ಲ..

ಸೀಮೆ ಎಣ್ಣೆ ಕುಡಿದವರಿಗೆ ವಾಂತಿ ಮಾಡಿಸುವಂತಿಲ್ಲ.‌ ತಪ್ಪು ಪ್ರಥಮ ಚಿಕಿತ್ಸೆಯೂ ಪ್ರಾಣಕ್ಕೆ ಕುತ್ತು ತರಬಹುದು.

ಹಳ್ಳಿ ನಾವೀನ್ಯತೆಯ ಬೆಚ್ಚಗಿನ ಸರಳ ಭಾಷೆಯಲ್ಲಿ ಎಂ. ರಜನಿ ಕತೆಗಳ ಮೂಲಕ ಬದುಕಿಸುವ ಪಾಠವನ್ನು ಹೇಳಿದ್ದಾರೆ.

ಹೆಸರಾಂತ ಕಥೆಗಾರ, ವೈದ್ಯ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಗರಡಿಯಲ್ಲಿ ಪಳಗಿರುವ ಡಾ.ರಜನಿ ಅವರ ಪುಸ್ತಕ ಎಲ್ಲರ ಮನೆಯ ಕಪಾಟಿನಲ್ಲಿದ್ದರೆ ಒಳಿತು. ಹಳೆಯ ಪುಸ್ತಕದ ಮರು ಮುದ್ರಣದ ಅಗತ್ಯ ಸಕಾಲಿಕವಾಗಿದೆ.

ಒಂದು ಪುರಾತನ ಖಾಸಗೀ ವೃತ್ತಾಂತ

0

ನಾಗೇಶ್ ಹೆಗಡೆ


ದಿಲ್ಲಿಯ ಜೆಎನ್‌ಯು ತನ್ನ 50ನೇ ವರ್ಷಕ್ಕೆ ಕಾಲಿಟ್ಟಿದೆ. ಅಲ್ಲಿನ ಹಿಂದಿನ ದಿನಗಳ ಬಗ್ಗೆ ಏನಾದರೂ ಬರೆದುಕೊಡಿರೆಂದು ನನಗೂ ಕಳೆದ ವರ್ಷ ಕೇಳಿದ್ದರು.
ನೆನಪುಗಳ ಮೆರವಣಿಗೆಯ ಆ ಭರ್ಜರಿ ಪುಸ್ತಕ ಇದೀಗ ನನ್ನ ಕೈಸೇರಿದೆ.

ಅನೇಕ ವಿಶ್ವಮಾನ್ಯ ಘಟಾನುಘಟಿ ದಿಗ್ಗಜರ ಲೇಖನಗಳು ಅದರಲ್ಲಿವೆ. (ಅಕಾರಾದಿ ಪಟ್ಟಿಯಲ್ಲಿ ಮೊದಲ ಹೆಸರೇ ನೊಬೆಲ್‌ ವಿಜೇತ ಅಭಿಜಿತ್‌ ಬ್ಯಾನರ್ಜಿ ಅವರದ್ದು). ಅವರೆಲ್ಲರ JNU ಯುವದಿನಗಳ ನೆನಪುಗಳ ಮಧ್ಯೆ ನನ್ನ ಲೇಖನವೂ ಪ್ರಕಟವಾಗಿದೆ.

ನನ್ನ ಕತೆ ಏನೆಂದರೆ- ಒಂದು ಕಪ್‌ನಿಂದಾಗಿ ನಾನು ಹೇಗೆ ಪಿಎಚ್‌ಡಿ ಪದವಿಯಿಂದ ವಂಚಿತನಾದೆ ಅನ್ನೋದು.

ಅದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ-
ಇಂದಿಗೆ 48 ವರ್ಷಗಳ ಹಿಂದೆ ನನಗೆ JNUದಲ್ಲಿ ʼಸೈನ್ಸ್‌ ಪಾಲಿಸಿʼ ಅಧ್ಯಯನ ವಿಭಾಗದಲ್ಲಿ (ಇಂಟರ್‌ವ್ಯೂ ಇಲ್ಲದೆ) ನೇರ ಪ್ರವೇಶ ಸಿಕ್ಕಿತು. ಆ ವಿಭಾಗಕ್ಕೆ ನಾನು ಒಬ್ಬನೇ ಒಬ್ಬ ವಿದ್ಯಾರ್ಥಿ, ಒಂದೇ ಪ್ರೊಫೆಸರು, ಒಬ್ಬ ಕ್ಲರ್ಕ್‌, ಒಬ್ಬ ಅಟೆಂಡರ್‌ ಇಷ್ಟೆ.

ಆಗ ಅದೇ ತಾನೆ ಬಾಂಗ್ಲಾದೇಶ್‌ ಸೃಷ್ಟಿಯಾಗಿ ಪಾಕಿಸ್ತಾನ ಅನ್ನೋದು ಬರೀ ʼಬಾಕಿಸ್ತಾನʼವಾಗಿ, ಅದು ಹತಾಶೆಯಿಂದ ಆಗ್ರಾ, ಅಮೃತಸರ್‌ ಮೇಲೆ ಬಾಂಬ್‌ ದಾಳಿ ಮಾಡುತ್ತಿತ್ತು. ದಿಲ್ಲಿಯ ಅಂಚಿನಲ್ಲೂ ದಾಳಿ ಆದೀತೆಂದು ಸಂಜೆಯಾಗುತ್ತಲೆ ನಾವೆಲ್ಲ ಬ್ಲಾಕೌಟ್‌ ಕಗ್ಗತ್ತಲಲ್ಲಿ ಪಾಳಿಯ ಮೇಲೆ ಗಸ್ತು ತಿರುಗುತ್ತಿದ್ದೆವು.

ಹಗಲು ವೇಳೆ ಮಾಡಲು ವಿಶೇಷ ಕೆಲಸ ಇಲ್ಲದೆ ನಾನೊಬ್ಬನೇ ಆಚೀಚೆ ಸುತ್ತಾಡಲು ಹೋದಾಗ ಅಲ್ಲೇ ಪಕ್ಕದ ಐಐಟಿಯಲ್ಲಿ Inter collegiate ಚಿತ್ರರಚನಾ ಸ್ಪರ್ಧೆ ಇತ್ತು. ನಾನೂ ಕೂತು ಚಿತ್ರ ಬರೆದೆ. ನನಗೇ ಮೊದಲ ಬಹುಮಾನ, ರೋಲಿಂಗ್‌ ಕಪ್‌ ಎಲ್ಲ ಬಂತು.

ಅದನ್ನು ಹೊತ್ತು ಒಬ್ಬಂಟಿಯಾಗಿ ಬರುತ್ತಿದ್ದಾಗ ಸಂಜೆಗತ್ತಲಲ್ಲಿ JNU ಕ್ಯಾಂಪಸ್ಸಿನಲ್ಲಿ ವಾಕ್‌ ಮಾಡುತ್ತಿದ್ದ ಯಾರೋ ಒಬ್ಬರು ನನ್ನನ್ನು ತಡೆದು ನಿಲ್ಲಿಸಿ ಮಾತಿಗೆಳೆದರು.

ಅವರು ಅಮೆರಿಕದಲ್ಲಿ ಪತ್ರಿಕೋದ್ಯಮ ಪದವಿ ಪಡೆದು, Films Division ನಲ್ಲಿ ಉತ್ಕೃಷ್ಟ ಕೆಲಸ ಮಾಡಿ JNU ರೆಜಿಸ್ಟ್ರಾರ್‌ ಆಗಿ ನೇಮಕಗೊಂಡ ಕನ್ನಡಿಗ NVK ಮೂರ್ತಿಯವರು.

ಮರುದಿನ ಅವರು ನನ್ನನ್ನು Vice Chancellor ಜಿ. ಪಾರ್ಥಸಾರಥಿಯವರ ಬಳಿ ಕಪ್ ಸಮೇತ ಒಯ್ದರು.
ಈ ಕುಲಪತಿ ಮಹಾನುಭಾವ ಅಂತರರಾಷ್ಟ್ರೀಯ ಖ್ಯಾತಿಯ ಡಿಪ್ಲೊಮಾಟ್‌. ತುಂಬ ಹಿಂದೆ ʼದಿ ಹಿಂದೂʼದಲ್ಲಿ ಪತ್ರಕರ್ತರಾಗಿ, ನಂತರ ವಿದೇಶಾಂಗ ಇಲಾಖೆ ಸೇರಿ ವಿಶ್ವಸಂಸ್ಥೆಯ ಶಾಶ್ವತ ರಾಯಭಾರಿಯಾಗಿ ಈಗ JNU Vice Chancellor ಎಂದು ನೇಮಕಗೊಂಡವರು.

ಇವರಿಬ್ಬರೂ ನನ್ನೊಂದಿಗೆ ಲೋಕಾಭಿರಾಮ ಮಾತಾಡುತ್ತ ನನ್ನನ್ನು ಒಂಥರಾ ಇಂಟರ್‌ವ್ಯೂ ಮಾಡಿದರು.

ನನಗೆ ಚಿತ್ರಕಲೆ, ಬರೆವಣಿಗೆ, ಫೊಟೊಗ್ರಫಿ, ಈಜು, ಓಟ ಎಲ್ಲದರಲ್ಲೂ ಆಸಕ್ತಿ ಇದೆ ಎಂದು ಗೊತ್ತಾಗಿ ಅವರಿಬ್ಬರು ಒಂದು ವ್ಯೂಹ ರಚಿಸಿದರು. ಕ್ಯಾಂಪಸ್‌ನಲ್ಲಿ ಬರೀ ರಾಜಕೀಯ ಇದ್ದರೆ ಸಾಲದು, ಸಾಂಸ್ಕೃತಿಕ ಪರಿಸರವೂ ಇರಬೇಕೆಂದು ನನ್ನೆದುರೇ ಮಾತಾಡಿಕೊಂಡರು. ಅದಕ್ಕೆ ನನ್ನನ್ನೇ ಆರಂಭಿಕ ರಾಯಭಾರಿಯನ್ನಾಗಿ ಮಾಡಿದರು.

ಕೇಳುವುದೇನು, ಹೊಸ ವಿವಿಯಲ್ಲಿ ಹೊಸ ಗೆಳೆಯರ ತಂಡ ಕಟ್ಟಿಕೊಂಡು ನಾನು ಫೋಟೊಗ್ರಫಿ, ಚಿತ್ರಕಲೆ, ಸಂಗೀತ, ಸ್ಕೇಟಿಂಗ್‌, ನಾಟಕ, ನೃತ್ಯ ಇತ್ಯಾದಿ ಕ್ಲಬ್‌ಗಳನ್ನು ಆರಂಭಿಸಿದೆ. (ಸಫ್ದರ್‌ ಹಾಶ್ಮಿಯ ತಮ್ಮ ಸೊಹೇಲ್‌ ಹಾಶ್ಮಿ ಕೂಡ ನನ್ನೊಂದಿಗಿದ್ದ). ಹಣಕ್ಕೇನೂ ಕೊರತೆ ಇಲ್ಲವಾದ್ದರಿಂದ ಅವುಗಳಿಗೆ ಸಂಬಂಧಿಸಿದ ಪರಿಕರ ಖರೀದಿಗೆ ದಿಲ್ಲಿಯಲ್ಲೆಲ್ಲ ಸುತ್ತಾಡಿದೆ.

ನಮ್ಮ ಸಾಂಸ್ಕೃತಿಕ ಸಂಘ ದಿಲ್ಲಿಯ ಇತರ ಕಾಲೇಜುಗಳಲ್ಲಿ ಜಯಭೇರಿ ಬಾರಿಸಿ, ದೂರದ ಜಯಪುರ, ಅಮೃತಸರ, ಭೋಪಾಲ್‌ಗಳಿಗೆಲ್ಲ ಹೋಗಿ ಫಲಕ, ಪ್ರಶಸ್ತಿ ಗೆದ್ದು ಬಂತು.
(ಜಯಪುರದಲ್ಲಿ ನಾನು ಪ್ರೇತನೃತ್ಯ ಮಾಡಿ ವಿಶೇಷ ಬಹುಮಾನ ಗಿಟ್ಟಿಸಿದೆ ಬೇರೆ ಯಾವ ನೃತ್ಯವೂ ನನಗೆ ಗೊತ್ತಿರಲಿಲ್ಲ; ಅಲ್ಲಿನವರಿಗೆ ಈ ಎಡಬಿಡಂಗಿ ಕತ್ತಲ ಕುಣಿತ ಗೊತ್ತಿರಲಿಲ್ಲ. ಕುಣಿತ ನೋಡಿ ಭಾರೀ ಚಪ್ಪಾಳೆ ʼವನ್ಸ್‌ ಮೋರ್‌ʼ ಎಲ್ಲ ಬಂತು.

ಆದರೆ ಪ್ರೇತನೃತ್ಯದ ರೀ ಪ್ಲೇ ಸಾಧ್ಯವಿರಲಿಲ್ಲ. ಏಕೆಂದರೆ ಮೈಗೆಲ್ಲ ಕರೀ ಬಣ್ಣ ಬಳಿದುಕೊಂಡು ಅಸ್ಥಿಪಂಜರದಂತೆ ಬಿಳಿಬಿಳೀ ರಟ್ಟುಗಳನ್ನು ಕಟ್ಟಿಕೊಂಡು ಕುಣಿಯುವಾಗ ಅವೆಲ್ಲ ಒಂದೊಂದಾಗಿ ಕಳಚಿ ಬೀಳುವಂತೆ ವ್ಯವಸ್ಥೆ ಮಾಡಿಕೊಂಡಿದ್ದೆ. ಕತ್ತಲ ರಂಗಸ್ಥಳದಲ್ಲಿ
ಅದು ತುಂಬ ಡ್ರಮಾಟಿಕ್‌ ಎಫೆಕ್ಟ್‌ ಕೊಟ್ಟಿತ್ತಾದರೂ ಮತ್ತೊಮ್ಮೆ ಕೆಳಕ್ಕೆ ಬಿದ್ದು ಚೂರಾದ ಮೂಳೆಗಳನ್ನೆಲ್ಲ ಹೆಕ್ಕಿ ಜೋಡಿಸಲು ಸಾಧ್ಯವೆಲ್ಲಿ?)

JNUದ ಎಡಪಂಥೀಯ ಬೆಂಕಿ ನವಾಬರುಗಳಿಗೆ ಇಂಥ ಸಾಂಸ್ಕೃತಿಕ ವಿಷಯಗಳೆಲ್ಲ ಇಷ್ಟ ಆಗ್ತಾ ಇರಲಿಲ್ಲ. ಇವೆಲ್ಲ ಬರೀ ಬೂಸಾ (ಬೂರ್ಶ್ವಾ) ಚಟುವಟಿಕೆ ಎಂದು ನಮ್ಮನ್ನು ಹಂಗಿಸುತ್ತಿದ್ದರು.
ನಾವು ಎಡಪಂಥೀಯರ ವಿರುದ್ಧ “ಫ್ರೀ ಥಿಂಕರ್ಸ್”‌ ಎಂಬ ಬೇರೆ ಗುಂಪು ಕಟ್ಟಿದೆವು. ಎರಡು ಗುಂಪುಗಳ ಮಧ್ಯೆ ಭಾರೀ ಚುನಾವನಾ ಹಣಾಹಣಿ ನಡೆಯುತ್ತಿತ್ತು. ನಾನು ನಮ್ಮ ಗುಂಪಿಗೆ ಭಿತ್ತಿಚಿತ್ರ, ವ್ಯಂಗ್ಯಚಿತ್ರ ಬರೆಯುತ್ತಿದ್ದೆ.
ಎರಡು ಬಾರಿ ಎಡಪಂಥೀಯರನ್ನು ಸೋಲಿಸಿ, ಎಲ್ಲ ಪತ್ರಿಕೆಗಳಲ್ಲೂ ರಾರಾಜಿಸಿ ನಮ್ಮ ಫ್ರೀ ಥಿಂಕರ್ಸ್‌ ತಂಡ ಭಾರೀ ಕೀರ್ತಿ ಗಳಿಸಿಬಿಟ್ಟಿತು.
ಈ ಎಲ್ಲ ಅವಾಂತರಗಳಲ್ಲಿ ನನ್ನ ಪಿಎಚ್‌ಡಿ ಎಕ್ಕುಟ್ಟಿ ಹೋಯಿತು.

ಈ ಮೂರು ವರ್ಷಗಳಲ್ಲಿ ನಾನು ಬರೆದಿದ್ದು ಒಂದೇ ಒಂದು ಸಂಶೋಧನ ಪ್ರಬಂಧ . ಆದರೆ ಮೂರು ಜನ್ಮಕ್ಕಾಗುವಷ್ಟು ವೈವಿಧ್ಯಮಯ ಅನುಭವ ನನ್ನದಾಯಿತು. ನಾನು ಕೊನೆಗೆ ಪತ್ರಕರ್ತನಾಗಿ ಬೆಂಗಳೂರು ಸೇರಿದೆ.

ಈಗ ಹಿಂದಿರುಗಿ ನೋಡಿ, ನನ್ನ ಹಣೆಯಲ್ಲಿ ಇದನ್ನೆಲ್ಲ ಬರೆದಿದ್ದು ಯಾರು ಎಂದು ನೋಡಿದರೆ – ಅದೇ ಆ ರೆಜಿಸ್ಟ್ರಾರು, ಆ ವೈಸ್‌ಚಾನ್ಸಲರು.

ಇಬ್ಬರೂ ಜರ್ನಲಿಸಂ ಮೂಲಕವೇ ಮೇಲೆ ಬಂದವರಾಗಿದ್ದರು. ಆದಿನ ನನ್ನ ಕೈಗೆ ಆ ಕಪ್‌ ಬಂದಿರದಿದ್ದರೆ, ನಾನವರ ಕಣ್ಣಿಗೆ ಬೀಳದಿರುತ್ತಿದ್ದರೆ… ಜರ್ನಸಲಿಸ್ಟ್‌ ಆಗುವ ಬದಲು ಬೇರೇನೋ ಆಗುತ್ತಿದ್ದೆ.

*
ಇವಿಷ್ಟು ಈ ಗ್ರಂಥದಲ್ಲಿದೆ. ಅದರಲ್ಲಿ ಬಿಟ್ಟುಹೋದ ಚೂರು ಮಾಹಿತಿ ಇಲ್ಲಿದೆ:
ನನ್ನ ರೀಸರ್ಚ್‌ ಪೇಪರ್‌ ಅಂದು ಸಂಸತ್ತಿನಲ್ಲಿ ಚರ್ಚೆಯಾದ ಮಾರನೆ ತಿಂಗಳಲ್ಲೇ ಎಮರ್ಜನ್ಸಿ ಘೋಷಣೆ ಬಂತು. ಪೊಲೀಸರು ವಿದ್ಯಾರ್ಥಿ ನಾಯಕರನ್ನು ಅಟ್ಟಾಡಿಸಿ ಅರೆಸ್ಟ್‌ ಮಾಡಲು ಬಂದಿದ್ದರು. ನಾನು ನಾಯಕನೇನೂ ಆಗಿರಲಿಲ್ಲ. ಆದರೆ ಹೇಗೋ ನನ್ನ ಹೆಸರೂ ಪಟ್ಟಿಯಲ್ಲಿತ್ತು.

ಅವರು ದಾಳಿಗೆ ಬಂದು ನನ್ನ ಹಾಸ್ಟೆಲ್‌ ರೂಮಿನ ಬಾಗಿಲು ಒದೆದಾಗ ನಾನು ಅಲ್ಲೇ ಸಮೀಪ ಹಾಸ್ಟೆಲಿನ ಬಚ್ಚಲೊಲೆಗೆ ಬೆಂಕಿ ಹಚ್ಚಿ ಗಾಳಿ ಊದುತ್ತ ಕೂತಿದ್ದೆ.
ಪೊಲೀಸರು ಧಾಡ್‌ಧೂಡ್‌ ಬಂದು “ಆ ಹುಡುಗ ಎಲ್ಲಿ ಹೋದ?” ಎಂದು ನನ್ನನ್ನೇ ಕೇಳಿದರು. ನಾನು ಭಯದಿಂದ ಬೆಬ್ಬೆಬ್ಬೆ ಅನ್ನುತ್ತಿದ್ದಾಗ ಅವರು ಬೈದುಕೊಳ್ಳುತ್ತ ಹೊರಟು ಹೋದರು.

ಬಚಾವಾದ ಈ ಬಡಜೀವವನ್ನು ಆರೆಸ್ಸೆಸ್‌ ಗೆಳೆಯರು (ಅವರು ಎಡಪಂಥೀಯರನ್ನು ಸೋಲಿಸಲೆಂದೇ ಫ್ರೀ ಥಿಂಕರ್ಸ್‌ ಗುಂಪಿಗೆ ಸೇರಿದ್ದರು) ಎಲ್ಲೆಲ್ಲೋ ಹಿಮಾಲಯದಲ್ಲಿ ಸುತ್ತಾಡಿಸಿ ಕೊನೆಗೆ ವಾರ್ಧಾದ ಗಾಂಧೀಜಿ ಆಶ್ರಮಕ್ಕೆ ಕರೆತಂದು ಬಿಟ್ಟರು. ಅಲ್ಲಿ ಗ್ರಾಮೋದ್ಧಾರದ ಕೆಲಸಕ್ಕೆ ಸಹಾಯವಾಗಲೆಂದು ʼಸೈನ್ಸ್‌ ಫಾರ್‌ ವಿಲೇಜಿಸ್‌ʼ ಎಂಬ ಪತ್ರಿಕೆಯನ್ನು ಆರಂಭಿಸಲು ನಿರ್ಧರಿಸಲಾಯಿತು.

ನಾನು ಅದರ ಆರಂಭಿಕ ಸಂಪಾದಕನಾಗಿ ನೇಮಕಗೊಂಡೆ.. ತುರ್ತುಸ್ಥಿತಿ ಮುಗಿದ ಬಳಿಕ ಮತ್ತೆ ಜೆಎನ್‌ಯುಕ್ಕೆ ಹೋದೆ. ನನ್ನ ಪಿಎಚ್‌ಡಿ ರೆಜಿಸ್ಟ್ರೇಶನ್‌ ರದ್ದಾಗಿತ್ತು. ಆದರೆ ಅಧ್ಯಾಪಕರೆಲ್ಲ ಪರಿಚಿತರೇ ಆಗಿದ್ದರಿಂದ ಹೊಸದಾಗಿ ಆರಂಭವಾದ ಪರಿಸರ ವಿಭಾಗದಲ್ಲಿ ನನಗೊಂದು ನೌಕರಿ ಮತ್ತು ಪಿಎಚ್‌ಡಿಗೆ ಅವಕಾಶ ಸಿಕ್ಕಿತು….


[ನನ್ನ ಭವಿಷ್ಯವನ್ನು ಬದಲಿಸಿದ ಆ ಕಪ್‌ ಈಗಲೂ ನನ್ನ ಬಳಿ ಇದೆ. ನೆಲ್ಲಿಕಾಯಿ ಒಣಗಿಸಲೆಂದು ಬಳಸುತ್ತಿದ್ದ ಅದನ್ನು ಹಿಡಿದು ಈಚೆಗೆ ಟೆರೇಸ್‌ ಮೇಲೆ ಏರುತ್ತಿದ್ದಾಗ ನನ್ನ ಪತ್ನಿ ತೆಗೆದ ಫೋಟೊ ಇದು]

ಪ್ರೇಮ‌ ನಿವೇದನೆ ಹೇಳಲು ಆತುರದ ಭಯ, ಒಳಗೊಳಗೇ ಸಂಕಟ..

0

ಈರಪ್ಪ ನಾಯ್ಕರ್


ವ್ಯಾಲೆಂಟೈನ್ ಡೇ ಹತ್ತಿರ ಬಂದಿದೆ ಎಂದರೆ ಈ ದಿನದಂದೇ ತಮ್ಮ ತಮ್ಮ ಪ್ರೇಮ ನಿವೇದನೆಗಳನ್ನು ಹೇಳಲು ಆತುರ ಭಯ ಒಳಗೊಳಗೇ ಸಂಕಟ ಆದರೂ ಎಲ್ಲಿಲ್ಲದ ಧೈರ್ಯವನ್ನು ತೆಗೆದುಕೊಂಡು ಕೈಲೊಂದು ಉಡುಗೊರೆ ಹಿಡಿದು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವರು ಅನೇಕರು.

ಆದರೆ ನಮ್ಮ ಜೋಡಿಗಳು ಹಾಗಿಲ್ಲ ಕಣ್ರಿ, ಇವುಗಳು ಎಲ್ಲರಿಗಿಂತ ವಿಭಿನ್ನ ವಿಶಿಷ್ಟ ದಿನ. ಯಾಕೆಂದರೆ ಇವುಗಳಿಗೆ ನಿತ್ಯವೂ ಪ್ರೇಮ ದಿನ, ಪ್ರೇಮ ಮಯ ಎಂದರೆ ತಪ್ಪಾಗಲಾರದು.

ನಾನು ಇಂದು ಹೇಳ ಹೊರಟಿರುವುದು ಅಂತಹ ಜೀವನ ಸಂಗಾತಿಗಳ ಬಗ್ಗೆ ಅವುಗಳನ್ನು ನನ್ನ ಮೂರನೇ ಕಣ್ಣಿನಿಂದ ಸೆರೆ ಹಿಡಿದು ನಿಮ್ಮ ಮುಂದೆ ಈ ಲೇಖನದ ಮೂಲಕ ನೋಡಲು ಜೋಡಿ ಹಕ್ಕಿಗಳ ಚಿತ್ರಗಳು ಇಟ್ಟಿರುವೆ…

ಅಂದ ಹಾಗೆ ಇವುಗಳ ಛಾಯಾಚಿತ್ರಗಳೆಲ್ಲವನ್ನು ತೆಗೆದಿರುವುದು ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ. ಒಂದು ಚಿತ್ರಗಳು ಒಂದೊಂದು ಜಾತಿಯ ಜೋಡಿ ಪಕ್ಷಿಗಳಾಗಿವೆ.

ಅದರಲ್ಲಿ ಪ್ರಮುಖವಾಗಿ ಬುಲ್ ಬುಲ್ ಹಕ್ಕಿ ಹೆಸರು ನೋಡಿ ಎಷ್ಟೊಂದು ಚೆನ್ನಾಗಿದೆ ಅಲ್ವಾ… ನಾಗರಹಾವು ಸಿನಿಮಾದ ಡೈಲಾಗ್ ನೆನಪಾಗುತ್ತದೆ. ಗಿಳಿ ಜೋಡಿ, ನವಿಲು ಜೋಡಿ, ಕಂದು ಬೆಳವ ಹಕ್ಕಿಗಳ ಜೋಡಿ, ಕೆಂಪು ಮೀಸೆಯ ಪಿಕಳಾರ ಹಕ್ಕಿ, ಗೊರವಂಕ, ಕಾಡು ಗೊರವಂಕ, ಮುನಿಯಾ ಹಕ್ಕಿ, ಹದ್ದಿನ ಜೋಡಿ ಹಾಗೂ ಮಿಂಚುಳ್ಳಿ ಜೋಡಿಗಳು.

ಕಡಿಮೆ ಖರ್ಚಿನಲ್ಲಿ ಮೊಲದ ಬಿಸಿನೆಸ್

0

ಚಿತ್ರ, ಬರಹ : ಈರಪ್ಪ ನಾಯ್ಕರ್


ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ಆದಾಯ ಗಳಿಸುವುದು ಹೊಸ ಟ್ರೆಂಡ್. ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ ಸುರಕ್ಷಿತ ಆದಾಯಕ್ಕಾಗಿ ಜನರು ಯೋಜಿಸುತ್ತಾ ದಿನದಿಂದ ದಿನಕ್ಕೆ ಅಪ್ಡೇಟ್ ಆಗುತ್ತಿರುತ್ತಾರೆ.

ನೀವು ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಬಿಸಿನೆಸ್ ಬಗ್ಗೆ ಆಲೋಚಿಸುತ್ತಿದ್ದರೆ ಈ ಐಡಿಯಾ ಬೆಸ್ಟ್. ಕಡಿಮೆ ಬಂಡವಾಳ ಮತ್ತು ಕೈ ತುಂಬಾ ಅಲ್ಲದಿದ್ದರೂ ಒಂದು ಮಟ್ಟಿಗೆ ಹಣ ಗಳಿಸಲು ಸೂಕ್ತ ಆದಾಯ ತರುವ ಒಳ್ಳೆಯ ಉದ್ಯೋಗ ಎಂದರೆ ಮೊಲ ಸಾಕಾಣಿಕೆ.

ಬೇರೆ ಉದ್ಯೋಗದೊಂದಿಗೆ ಈ ಬಿಸಿನೆಸ್ ಮಾಡಬಹುದು. ಎಂದು ತಿಳಿಸಿಕೊಟ್ಟ ಅದೆಷ್ಟು ಉದಾಹರಣೆಗಳಿವೆ, ಅಂತಹದೆ ಉದಾಹರಣೆ ಕೂಡಾ ಇಲ್ಲಿನ ಹುಬ್ಬಳ್ಳಿಯ ಯುವಕರ ತಂಡವು ಸಾಬೀತು ಪಡಿಸಿದೆ, “ಓಜ್ಯಾ ರ‍್ಯಾಬಿಟ್ ಫಾರ್ಮ್” ಎಂಬ ಹೆಸರಿನಿಂದ ಕೇವಲ ಮೂವತ್ತು ಮೂಲಗಳಿಂದ ಉದ್ಯಮ ಪ್ರಾರಂಭಿಸಿದ ಈ ತಂಡ ಇಂದು ಸಾಕಷ್ಟು ಪ್ರಮಾಣದಲ್ಲಿ ಇಳುವರಿ ಪಡೆದು ಉತ್ತಮ ಗುಣಮಟ್ಟದಲ್ಲಿ ಆದಾಯ ಪಡೆಯುತ್ತಿದ್ದಾರೆ.

ಫಾರ್ಮ್ ಎಲ್ಲಿರುವುದು?


ಅಂದ ಹಾಗೆ ಈ ಫಾರ್ಮ್ ಇರುವುದು ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ಹೊರವಲಯದಲ್ಲಿ. ಓಜ್ಯಾ ರ‍್ಯಾಬಿಟ್ ಫಾರ್ಮ್ನ ಆರು ಜನ ಸದಸ್ಯರು ವಿರೇಶ ಚಂದರಗಿ, ಶಿವಪ್ರಸಾದ, ಮಹೇಶ, ಸುಲೆಮನ್, ಚೇತನ ಹಾಗೂ ಶ್ರೀನಿವಾಸ. ಸೇರಿ ಈ ಸೂಕ್ತ ಪ್ರದೇಶ ಆಯ್ಕೆ ಮಾಡಿಕೊಂಡು ಇಲ್ಲಿ ಫಾರ್ಮ್ ನಿರ್ಮಿಸಿಕೊಂಡಿದ್ದಾರೆ.

ಈ ಉದ್ಯಮ ನಷ್ಟ :


ಅರೇ! ಮೇಲೆ ನೋಡಿದರೆ ಲಾಭ ಎಂದು ಹೇಳಿ ಇಲ್ಲಿ ನಷ್ಟ ಅಂತ ಬರಿತಾರಲ್ಲ ಎಂದುಕೊಳ್ಳಬೇಡಿ, ಕೆಲವು ಫಾರ್ಮ್ ಗಳು ಮೊಲ ಸಾಕಾಣಿಕೆ ಮಾಡುವವರು ತಪ್ಪು ಮಾರ್ಗದರ್ಶನ ನೀಡಿ ಲಾಭದಾಯಕವಲ್ಲದ ವ್ಯಾಪಾರ ಎಂದು ಮೊಳಕೆಯಲ್ಲಿ ಚಿವುಟಿ ಹಾಕುವ ಸಂಚು ಹೂಡುತ್ತಾರೆ. ಆ ಮೋಸಕ್ಕೆ ಬಲಿಯಾದವರಲ್ಲಿ ನಾವು ಕೂಡಾ ಒಬ್ಬರು ಎಂದು ವಿರೇಶ ಚಂದರಗಿಯವರು ಬೇಸರ ವ್ಯಕ್ತ ಪಡಿಸಿದರು. ಅದಕ್ಕೆ ತಲೆ ಕೆಡಸಿಕೊಳ್ಳದ ಈ ತಂಡದ ಸದಸ್ಯರು ಹುಮ್ಮಸಿನಿಂದ ಮರು ಪ್ರಯತ್ನ ನಡೆಯಿಸಿ ಉದ್ಯಮ ಆರಂಭಿಸಿದರು.

ಇದು ಕಡಿಮೆ ಖರ್ಚಿನ ಉದ್ಯಮ :


ಹೌದು ಇದಕ್ಕೆ ಹೆಚ್ಚು ಖರ್ಚು ಮಾಡುವ ಅವಶ್ಯಕತೆಯಿಲ್ಲ, ಕೆವಲ ೧೦ ಮೊಲಗಳಿಂದ ಉದ್ಯಮ ಪ್ರಾರಂಭಿಸಬಹುದಾಗಿದೆ. ೭ ಹೆಣ್ಣು (ಡೋ) ಮೊಲಗಳು, ೩ ಗಂಡು (ಬಕ್) ಮೊಲಗಳು, ಅಂದರೆ ಯುನಿಟ್ ಪ್ರಕಾರ ಸಾಕಬಹುದಾಗಿದೆ. ದಿನಕ್ಕೆರಡು ಬಾರಿ ಆಹಾರ ಒದಗಿಸಬೇಕು.

ಸ್ವಚ್ಚತೆಗಾಗಿ ಒಬ್ಬ ವ್ಯಕ್ತಿ ಇದ್ದರೆ ಇವುಗಳ ಆರೈಕೆ ಮಾಡಬಹುದಾಗಿದೆ. ಓಜ್ಯಾ ರ‍್ಯಾಬಿಟ್ ಫಾರ್ಮ್ ಕೆವಲ ಮೂರು ಯುನಿಟ್‌ನಿಂದ ಪ್ರಾರಂಭಿಸಿ ಸದ್ಯ ೨೦೦ಕ್ಕೂ ಹೆಚ್ಚು ಮೊಲಗಳಿವೆ. ಇವುಗಳಲ್ಲಿ ಮಾರಟಕ್ಕೆಂದು ಸಿದ್ದವಾಗಿರುವ ೩ಕೆ.ಜಿ ತೂಕ ಹೊಂದಿರುವ ಮೊಲಗಳ ಸಂಖ್ಯೆ ೧೦೦ರಷ್ಟಿವೆ.

ಔಷಧೋಪಚಾರ ಮತ್ತು ಆಹಾರ :


ಮೊಲಗಳಿಗೆ ಕಜ್ಜಿ, ಜ್ವರ ಇತರೆ ಸಮಸ್ಯೆಗಳು ಬಂದರೆ ಕೆಲವೊಂದಿಷ್ಟು ಒಳ್ಳೆಯ ಗುಣಮಟ್ಟದ ಔಷಧಿಯನ್ನು ವೈದ್ಯರ ಸಲಹೆಯ ಮೇರೆಗೆ ನೀಡಲಾಗುತ್ತದೆ. ಕೆಲವೊಮ್ಮೆ ನಾವೇ ಕೊಡುತ್ತವೆ ಎಂದು ಉದ್ಯಮಿ ತಿಳಿಸುತ್ತಾರೆ.

ಆಹಾರ ಎಂದರೆ ಫೀಡ್, ಗರಿಕೆ, ಕುದುರೆ ಮೆಂತೆ ಹಾಗೂ ಕೈ ತಿಂಡಿ ನೀಡಲಾಗುತ್ತದೆ. ಒಂದು ಮೊಲಕ್ಕೆ ೮೦ ರಿಂದ ೧೦೦ಗ್ರಾಂ. ಆಹಾರ ಹಾಗೂ ೨೫೦ಎಂ.ಎಲ್ ನೀರು ನೀಡಲಾಗುತ್ತದೆ. ಒಳ್ಳೆಯ ಇಳುವರಿಗಾಗಿ ಫೀಡ್ ನೀಡುವುದು ಒಳಿತು.

ತಾಯಿ ಮೊಲ ಮತ್ತು ಮರಿಗಳ ಆರೈಕೆ :


ಇವುಗಳ ಆರೈಕೆಗಾಗಿ ಬಹಳಷ್ಟು ಸಮಯ ನೀಡಬೇಕೆಂಬ ನಿಯಮವಿಲ್ಲ. ತಾಯಿ ಮೊಲ ಮರಿ ನೀಡಿದ ತರುವಾಯ ಮರಿಗಳನ್ನು ತಾಯಿ ಮೊಲಗಳು ತುಳಿಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಒಂದು ತಾಯಿ ಮೊಲ ೬ ರಿಂದ ೧೨ ಮರಿಗಳಿಗೆ ಜನ್ಮ ನೀಡುತ್ತವೆ. ಮರಿಗಳನ್ನು ಒಂದು ರಟ್ಟಿನ ಬಾಕ್ಸ್ನಲ್ಲಿ ಇಟ್ಟು ತಾಯಿ ಮೊಲವನ್ನು ೬ ರಿಂದ ೧೦ ನಿಮಿಷಗಳಷ್ಟು ಬಿಟ್ಟು ಹಾಲು ಕುಡಿದ ನಂತರ ಮತ್ತೆ ಪಂಜರದಲ್ಲಿ ತಾಯಿ ಮೊಲವನ್ನು ಬಿಡಲಾಗುತ್ತದೆ. ಹೀಗೆ ಮರಿಗಳ ೨೧ ದಿನಗಳವರೆಗೆ ಮರಿಗಳ ಆರೈಕೆ ಮಾಡುತ್ತಿರಬೇಕು. ಮರಿಗಳು ೧೫ ರಿಂದ ೨೦ ದಿನಗಳಲ್ಲಿ ಗರಿಕೆ ಹುಲ್ಲು ತಿನ್ನಲು ಮರಿಗಳು ಪ್ರಾರಂಭಿಸುತ್ತವೆ.

ಇವರಲ್ಲಿ ಸಿಗುವ ತಳಿಗಳು :


ಇವರಲ್ಲಿ ಒಟ್ಟು ೫ ತಳಿಗಳಿದ್ದು, ಯು.ಎಸ್ ವೈಟ್, ಸೋವಿತ್ ಚಿಂಚಿಲಾ, ಪ್ಲೆಮಿಶ್ ಜೈಂಟ್, ಅಲಸ್ಕಾ ಹಾಗೂ ನ್ಯೂಜಿಲೆಂಡ್ ವೈಟ್ ಇವೆ. ಹೆಚ್ಚು ಮಾನ್ಯತೆಯನ್ನು “ನ್ಯೂಜಿಲೆಂಡ್ ವೈಟ್” ಎಂಬ ಮೊಲದ ತಳಿಗೆ ನೀಡಿದ್ದಾರೆ. ಇವುಗಳು ಸಾಮಾನ್ಯವಾಗಿ ನಮ್ಮ ಪ್ರದೇಶ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಾಣಿಗಳಾಗಿವೆ.

ಮತ್ತು ಇವುಗಳ ಇಳುವರಿ ಕೂಡ ತುಂಬಾ ಹೆಚ್ಚಾಗಿದ್ದು ಲಾಭದಾಯಕವಾಗಿದೆ. ಇವುಗಳನ್ನು ಕೆಲವರು ಆಹಾರ(ಮಾಂಸ)ಕ್ಕಾಗಿ ಬಳಸಿದರೆ, ಮತ್ತೆ ಕೆಲವರು ಸಾಕುಪ್ರಾಣಿಗಳಾಗಿ ಪ್ರಾಣಿ ಪ್ರೀಯರು ಸಾಕುತ್ತಾರೆ ಹಾಗೂ ಲ್ಯಾಬರೋಟರಿಗಾಗಿ ಹೆಚ್ಚು ಬೆಡಿಕೆಯಲ್ಲಿದೆ. ಎಂದು ಉದ್ಯಮಿ ವಿರೇಶ ತಿಳಿಸಿದರು.

ಸಾಕುವವರಿಗೆ ತರಬೇತಿ :


ಇಲ್ಲಿ ಮೊಲಗಳನ್ನು ಕೊಂಡು ತೆಗೆದುಕೊಳ್ಳುವವರಿಗೆ ತರಬೇತಿಯನ್ನು ಕೂಡಾ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಓಜ್ಯಾ ರ್ಯಾಬಿಟ್ ಫಾರ್ಮ್ ವಿರೇಶ ಚಂದರಗಿ ಸಂಪರ್ಕಿಸಬಹುದು. ಫೋನ್ ನಂಬರ ೭೬೨೪೯೩೦೮೦೩, ೮೧೦೫೪೫೦೧೮೩

ಪದಗಾತಿ ಕರಿಯಮ್ಮ ಅವರ ಮೇಲೆ‌ ಕೋತಿಗಳ ದಾಳಿ

ತುಮಕೂರು : ಜಿಲ್ಲೆಯ ಜಾನಪದ ಪದಗಾತಿ ದೊಡ್ಡ ಬಾಲದೇವರಹಟ್ಟಿ ಕರಿಯಮ್ಮ ನವರಿಗೆ ಇಂದು ಬೆಳಿಗ್ಗೆ ವನ್ಯಜೀವಿಗಳಾದ ಕೋತಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿವೆ. ಗಾಯಾಳು ಕರಿಯಮ್ಮ ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪದಗಾತಿ ಕರಿಯಮ್ಮ ಬುಡಕಟ್ಟು ಜನಾಂಗದ ಹಲವಾರು ಜಾನಪದ ಹಾಡುಗಳನ್ನು ಹಾಡುವರು. ವಿಶೇಷವಾಗಿ ಹುಲಿ ಕಡಿದ ಚನ್ನಯ್ಯ, ಈರಬೊಮ್ಮಕ್ಕ, ಜಡೆಗೊಂಡ, ಹಾರುವರ ಮಾಳಮ್ಮ, ಮೇಣುಕುಂಟೆರಂಗ, ಇವೇ ಮೊದಲಾದ ಕನ್ನಡ ಜಾನಪದ ಕಾವ್ಯಗಳನ್ನು ಸೋಭಾನೆ ಪದಗಳ ದಾಟಿ ಅನುಸರಿಸಿ ಹಾಡುತ್ತಾರೆ.

ಕಾಡು ಜಾಲಿಕಾಯಿ ತಿಂದು 40 ಕುರಿಗಳು ಸಾವು

0

ತುರುವೇಕೆರೆ : ಮೇಯಲು ಬಿಟ್ಟಿದ್ದ ಸುಮಾರು 40 ಕುರಿಗಳು ಹಠಾತ್ತನೆ ಸಾವನ್ನಪ್ಪಿರುವ ಹೃದಯ ಕಲಕುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿ ವಡವನಘಟ್ಟ ಸಮೀಪ ದೊಡ್ಡ ಮಲ್ಲಿಗೆರೆ ಗೇಟ್ ಬಳಿ ನಡೆದಿದೆ.

ಶಿರಾ ಕಡೆಯ 6ಜನ ಅಲೆಮಾರಿ ಕುರಿಗಾಹಿಗಳು ಸುಮಾರು 800 ಕುರಿಗಳನ್ನು ಮಲ್ಲಿಗೆರೆ ಗೇಟ್ ಬಳಿಯ ಗಿಡಗೆಂಟೆಗಳ ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದರು. ಮೇಯುತ್ತಿದ್ದ ಕುರಿಗಳು ಇದ್ದಕ್ಕಿದ್ದಂತೆ ಒಂದೊಂದೇ ಎಚ್ಚರತಪ್ಪಿ ಬೀಳಲಾರಂಭಿಸಿದವು. ಕಂಗಾಲಾದ ಕುರಿಗಾಹಿಗಳು ಅಕ್ಕ ಪಕ್ಕದ ಗ್ರಾಮಸ್ಥರೊಂದಿಗೆ ತಮಗೆ ಗೊತ್ತಿದ್ದ ನಾಟಿ ಚಿಕಿತ್ಸೆ ಮಾಡಿದರೂ ಫಲಕಾರಿಯಾಗದೆ ಸುಮಾರು 40 ಕುರಿಗಳು ಸಾವನ್ನಪ್ಪಿದವು ಎಂದು ಅಕ್ಕಪಕ್ಕದ ಗ್ರಾಮಸ್ಥರಾದ ನಂಜೇಗೌಡ, ಗ್ರಾ.ಪಂ.ಸದಸ್ಯ ಪ್ರಕಾಶ್ ತಿಳಿಸಿದ್ದಾರೆ.ಬಿಳಿ ಅಥವಾ ಕಾಡುಜಾಲಿ ಮರದ ಕಾಯಿ ತಿಂದಿರುವುದೇ ಕುರಿಗಳ ಹಠಾತ್ ಸಾವಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಬಿಳಿಜಾಲಕ್ಕೆ ನಾಯಿಬೇಲ,ಸಾರಾಯಿ ಬೇಲ, ತೋಫಾಲೆ,ಟಪಾಲುಕಾಯಿ ಎಂಬ ಹೆಸರುಗಳೂ ಇವೆ. ಕುರಿಗಳು ಸಹಜವಾಗಿಯೇ ವಿಷಕಾರಿ ಸಸ್ಯವನ್ನು ಗುರುತಿಸಿ ತಿನ್ನದಿರುವ ಸ್ವಭಾವ ಬೆಳೆಸಿಕೊಂಡಿರುತ್ತವೆ. ಬಿಳಿ ಜಾಲದ ಎಲೆಗಳನ್ನು ಕುರಿಗಳು, ಮೇಕೆಗಳು ತಿನ್ನುವುತ್ತವೆ. ಅದು ಪ್ರಾಣ ತೆಗೆಯುವಷ್ಟು ವಿಷಕಾರಿಯಲ್ಲ, ಆದರೆ ಕಾಯಿಗಳಲ್ಲಿ ನೀರಿನಂಶ ಕಡಿಮೆಯಾಗಿ ಒಣಗುತ್ತಾ ಬಂದಂತೆಲ್ಲಾ ವಿಷದ ಸಾಂದ್ರತೆ ಹೆಚ್ಚುತ್ತಾ ಹೋಗುತ್ತದೆ, ಇಂತಹ 3-4 ಕಾಯಿಗಳನ್ನು ಕುರಿಗಳು ತಿಂದರೆ ಸಾಯುವುದು ಖಚಿತ ಎಂದು ಗ್ರಾಮಸ್ಥರು ಅನುಭವದಿಂದ ಹೇಳುತ್ತಾರೆ. ಬಿಳಿಜಾಲಿ ಕಾಯಿಗಳನ್ನು(ಅಕೇಶಿಯಾ ಪಾಡ್ಸ್) ತಿಂದಾಗ ಕುರಿಗಳ ಹೊಟ್ಟೆಯಲ್ಲಿ ಹೈಡ್ರೋಜನ್ ಸಯನೈಡ್ ವಿಷ ಉತ್ಪತ್ತಿಯಾಗುತ್ತದೆ. ಜೀವಕೋಶಕಗಳಿಗೆ ಆಮ್ಲಜನಕದ ಕೊರತೆ ಉಂಟಾಗಿ ಮೆದುವು ನಿಷ್ಕ್ರಿಯಗೊಂಡು ಕುರಿಗಳು ಸಾಯುತ್ತವೆ ಎಂದು ಪಶುವೈದ್ಯರಾದ ಡಾ. ರೇವಣಸಿದ್ಧಪ್ಪ ಮತ್ತು ಡಾ. ನೀಲಕಂಠಸ್ವಾಮಿ ತಿಳಿಸಿದ್ದಾರೆ.

ತಂದೆ ಗಂಡು ಮಕ್ಕಳಿಗೆ ವಿಲ್ ಮಾಡಬಹುದೇ? ಹೆಣ್ಣು ಮಕ್ಕಳಿಗೆ ಆಸ್ತಿ ಬರುವುದಿಲ್ಲವೇ?

0

ಮಹೇಂದ್ರ ಕೃಷ್ಣಮೂರ್ತಿ, ವಕೀಲರು


* ನನ್ನ ತಂದೆಗೆ ಮೂವರು ಗಂಡು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು ಇದ್ದೇವೆ.‌ ಮನೆ ಹಾಗೂ ಹತ್ತು ಎಕರೆ ಪಿತ್ರಾರ್ಜಿತ ಆಸ್ತಿ ಇದೆ.‌ ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ನಮ್ಮ ತಂದೆಯವರು ಆಸ್ತಿ, ಮನೆಯನ್ನು ಸಮನಾಗಿ ಭಾಗ ಮಾಡಿ ಗಂಡು ಮಕ್ಕಳಿಗೆ ವಿಲ್ ಮಾಡಿದ್ದಾರೆ. ಅವರ ತೀರಿಕೊಂಡ ಬಳಿಕ ಈ ವಿಚಾರ ತಿಳಿಯಿತು. ಹಾಗಾದರೆ ನಾವು ಹೆಣ್ಣು ಮಕ್ಕಳು ಈಗ ಭಾಗ ಕೇಳಲು ಬರುವುದಿಲ್ಲವೇ?

ಉತ್ತರ: ನಿಮ್ಮ ತಂದೆಯವರು ಆಸ್ತಿಯನ್ನು ಗಂಡು ಮಕ್ಕಳಿಗೆ ವಿಲ್ ಮಾಡಿದ್ದರೆ ಅದು ಊರ್ಜಿತವಾಗುವುದಿಲ್ಲ. ಪಿತ್ರಾರ್ಜಿತ ಆಸ್ತಿಯ ಮೇಲೆ ಗಂಡು ಮಕ್ಕಳಷ್ಟೇ ಸಮಾನಾದ ಅಧಿಕಾರ ಹೆಣ್ಣು ಮಕ್ಕಳಿಗೂ ಇದೆ. ಎಲ್ಲರಿಗು ಸಮಾಭಾಗ ಉಂಟು. ನಿಮಗೆ ತಿಳಿಯದೇ ನಿಮ್ಮ‌ ತಂದೆ ಮಾಡಿರುವ ವಿಲ್ ಗೆ ನೀವು ಬಾಧಸ್ತ್ಯರಲ್ಲ. ನಿಮ್ಮ  ಹಕ್ಕುಗಳು ಇದರಿಂದ ಮೊಟಕುಗೊಳ್ಳುವುದಿಲ್ಲ. ಆಸ್ತಿಯ ಮೇಲಿನ ನಿಮ್ಮ ಹಕ್ಕು ಕೊನೆಗೊಳ್ಳುವುದಿಲ್ಲ.


ಕಾನೂನು ಸಲಹೆಗಳಿಗಾಗಿ ವಾಟ್ಸಾಪ್ ನಂ  9844817737 ಇಲ್ಲಿಗೆ ಪ್ರಶ್ನೆಗಳನ್ನು ಕಳುಹಿಸಿಬಹುದು.

ಕ್ರೌರ್ಯ, ಕ್ರೂರತೆಯನ್ನು ಪ್ರತ್ಯಕ್ಷವಾಗಿ ಜನಗಳ ಮೇಲೆ ತೋರಿಸಿದ ಬಜೆಟ್

Publicstory


Tumkuru: ಭಾರತದ ಇತಿಹಾಸದಲ್ಲಿ ಕ್ರೌರ್ಯ & ಕ್ರೂರತೆಯನ್ನು ಪ್ರತ್ಯಕ್ಷವಾಗಿ ಜನಗಳ ಮೇಲೆ ತೋರಿಸಿದ ಬಜೆಟ್ ಎಂದರೇ ಕಳೆದ 7 ವರ್ಷಗಳ ಬಿಜೆಪಿ ಆಡಳಿತ ಸರ್ಕಾರದ ಬಜೆಟ್. ಜನಸಾಮಾನ್ಯರ, ನಿರ್ಗತಿಕರ, ದೀನದಲಿತರ ವರ್ಗವನ್ನು ಸಬಲೀಕರಣಗೊಳಿಸಲು ಬಾಬಾ ಸಾಹೇಬ ಡಾ. ಬಿ.ಆರ್ ಅಂಬೇಡ್ಕರರವರು ತಮ್ಮ ಜ್ಞಾನ, ಜೀವ, ಜೀವನವನ್ನು ಸವೆಸಿ ಭವ್ಯ ಭಾರತದ ನಿರ್ಮಾಣಕ್ಕಾಗಿ ಸಂವಿಧಾನ ನೀಡಿ ಈ ದೇಶದ ಕಟ್ಚಕಡೆಯ ವ್ಯಕ್ತಿಯ ಘನತೆಯ ಜೀವನ ನೀಡುವ ಆಶಯಗಳನ್ನು ಸಂವಿಧಾನದಲ್ಲಿಟ್ಟಿದ್ದರು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸಿ.ಗೌರಿಶಂಕರ್ ಹೇಳಿದ್ದಾರೆ.

ಆದರೆ ಈ ಸರ್ಕಾರ ಸಾಮಾನ್ಯ ಜನಗಳ ಕಲ್ಯಾಣವನ್ನ ವಿರೋಧಿಸುತ್ತಾ, ಸಂವಿಧಾನ ವಿರೋಧಿಯಾಗಿ, ಬಾಬಾ ಸಾಹೇಬರ ಚಿಂತನೆಗಳ ವಿರೋಧದ ನೀತಿ ಜಾರಿ ಮಾಡುತ್ತಿದೆ. ಈ ಬಜೆಟ್ ಸಂಪೂರ್ಣ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಕನಿಷ್ಟ ಕನಿಕರವಿಲ್ಲದ, ಸಂವಿಧಾನದ ಆಶಯಗಳ ವಿರೋಧಿ ಬಜೆಟ್ ಆಗಿದೆ. ಕೃಷಿ ಈ ದೇಶದ ಮೂಲ ಕಸುಬು ಕೃಷಿಗೆ ಪ್ರಧಾನ್ಯತೆ ನೀಡದ ಈ ಸರ್ಕಾರ ರೈತ ವಿರೋಧಿ ಸರ್ಕಾರವೂ ಕೂಡಾ ಆಗಿದೆ. ಸಂಪೂರ್ಣವಾಗಿ ಹೇಳುವುದಾದರೇ ಅಂಬಾನಿ, ಅದಾನಿ ಮನೆಯ ನಿರ್ವಹಣಾ ಬಜೆಟ್ ಎಂದರೇ ತಪ್ಪಾಗದು ಎಂದಿದ್ದಾರೆ.