Thursday, May 7, 2026
Google search engine
Home Blog Page 154

ಕೃಷಿ ರಂಗದ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಅಗತ್ಯ’

ಬೆಂಗಳೂರು: ಕೃಷಿ ರಂಗ ಎದುರಿಸುತ್ತಿರುವ ನಾನಾ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು ಹೆಸರಾಂತ ಚಿತ್ರ ನಿರ್ದೇಶಕ ಕೇಸರಿ ಹರವೂ ಪ್ರತಿಪಾದಿಸಿದ್ದಾರೆ.

ಅವರು ನಗರದ ಬಹುರೂಪಿ ಬುಕ್ ಹಬ್ ನಲ್ಲಿಂದು ಶ್ರೀ ಪಡ್ರೆ ಅವರ ‘ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ’ ಹಾಗೂ ಆನಂದತೀರ್ಥ ಪ್ಯಾಟಿ ಅವರ ‘ಥಾಯ್ಲೆಂಡ್ ಕೃಷಿ ಪ್ರವಾಸ’ ಪುಸ್ತಕಗಳನ್ನು ಬಿಡುಗಡೆಮಾಡಿ ಮಾತನಾಡಿ, ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಮುಷ್ಕರದ ಆಚೆಗೂ ಗಮನಿಸಬೇಕಿದೆ ಎಂದರು. ‘ಒಂದೊಮ್ಮೆ ಕೇಂದ್ರ ಸರಕಾರ ನೂತನ ಮಸೂದೆಗಳನ್ನು ಹಿಂಪಡೆದುಕೊಂಡರೂ ಕೃಷಿ ರಂಗದ ಸಮಸ್ಯೆಗಳು ಬಗೆಹರಿಯುವುದಿಲ್ಲ; ರೈತರು ವಿವಿಧ ಒಳಸುರಿಗಳಿಗಾಗಿ ಬಹುರಾಷ್ಟ್ರೀಯ ಕಂಪೆನಿಗಳನ್ನು ನೆಚ್ಚಿಕೊಳ್ಳುವುದು ಮುಂದುವರಿಯುತ್ತದೆ. ಹೀಗಾಗಿ ರೈತರ ಪ್ರತಿಭಟನೆ ಕೊನೆಗೊಂಡರೂ ಅವರ ಸಂಕಷ್ಟಗಳಿಗೆ ಪರಿಹಾರ ಯಾವುದು ಎಂಬ ಬಗ್ಗೆ ಆಲೋಚಿಸಬೇಕಿದೆ ಎಂದರು.

ಹೇರಳ ಪ್ರಮಾಣದಲ್ಲಿ ರಸಗೊಬ್ಬರ ಮತ್ತು ಪೀಡೆನಾಶಕಗಳನ್ನು ಆಮದುಮಾಡಿಕೊಳ್ಳುತ್ತಿರುವ ಥಾಯ್ಲೆಂಡಿನಲ್ಲಿ ತುಂಬ ಸಣ್ಣ ಮಟ್ಟದಲ್ಲಿ ಸಾವಯವ ಕೃಷಿ ಕೈಗೊಂಡಿದ್ದು, ಈ ವಲಯದಲ್ಲಿ ಹಲವಾರು ನಾವಿನ್ಯಪೂರ್ಣ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರಿಂದ ನಾವು ಕಲಿಯುವುದು ಬಹಳಷ್ಟಿದೆ; ಪ್ಯಾಟಿ ಅವರ ಕೃತಿ ಈ ಬಗ್ಗೆ ಬೆಳಕುಚೆಲ್ಲುತ್ತದೆ ಎಂದರು.

ಹಿರಿಯ ಬರಹಗಾರ ನಾಗೇಶ ಹೆಗಡೆ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರೇರಣಾದಾಯಕ ಪುಸ್ತಕಗಳು ಗ್ರಾಮೀಣ ಯುವಜನತೆಗೆ ಹೆಚ್ಚುಹೆಚ್ಚಾಗಿ ತಲುಪಬೇಕಿದೆ; ಈ ಮೂಲಕ ಅವರು ನಗರಗಳತ್ತ ಮುಖಮಾಡುವ ಬದಲು ಗ್ರಾಮೀಣ ಭಾಗದಲ್ಲೇ ಉಳಿಯುವಂತೆ ಪ್ರೋತ್ಸಾಹಿಸಬೇಕು ಎಂದರು.

ಹಾಸನ ಕೃಷಿ ಕಾಲೇಜಿನ ಡೀನ್ ಡಾ. ಎನ್. ದೇವಕುಮಾರ್ ಮಾತನಾಡಿ, ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಇಂತಹ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು; ಇದರಿಂದ ಕೃಷಿ ರಂಗದ ಹೊಸ ವಿದ್ಯಮಾನಗಳ ಬಗ್ಗೆ ಅರಿವಿನ ಜತೆಗೆ ಪರಿಣಾಮಕಾರಿಯಾಗಿ ಬರೆಯುವ ಕ್ರಮದ ಕುರಿತು ಕೂಡ ಮಾರ್ಗದರ್ಶನ ದೊರೆಯುತ್ತದೆ ಎಂದರು.

‘ಸಹಜ ಸಮೃದ್ಧ’ ನಿರ್ದೇಶಕ ಜಿ. ಕೃಷ್ಣಪ್ರಸಾದ್ ‘ಮೌಲ್ಯವರ್ಧನೆ ಹಾಗೂ ನೇರ ಮಾರುಕಟ್ಟೆ’ ಬಗ್ಗೆ ಸಂವಾದ ನಡೆಸಿಕೊಟ್ಟರು. ಕೋವಿಡ್ ಸಂದರ್ಭದಲ್ಲಿ ರೈತ ಸಮುದಾಯ ಹೆಚ್ಚಿನ ಸಂಕಟ ಅನುಭವಿಸಿತು. ಆದರೂ ಮೌಲ್ಯವರ್ಧನೆ, ಬೀಜೋತ್ಪಾದನೆ, ಗೃಹೋದ್ಯಮದಂತಹ ಚಟುವಟಿಕೆಗಳು ಅಲ್ಲಲ್ಲಿ ತುಸು ನೆಮ್ಮದಿಯನ್ನು ತಂದುಕೊಟ್ಟವು ಎಂದರು.

ಪತ್ರಕರ್ತ ಗಾಣಧಾಳು ಶ್ರೀಕಂಠ ಪುಸ್ತಕ ಪರಿಚಯ ಮಾಡಿದರು. ಬಹುರೂಪಿ ಬುಕ್ ಹಬ್ ನಿರ್ದೇಶಕ ಜಿ.ಎನ್. ಮೋಹನ್, ಪುಸ್ತಕ ಸಂಸ್ಕೃತಿಯನ್ನು ಹೆಚ್ಚು ವ್ಯವಸ್ಥಿತ ಮತ್ತು ವೈವಿಧ್ಯಮಯವಾಗಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ಲೇಖಕ ಆನಂದತೀರ್ಥ ಪ್ಯಾಟಿ, ಡಾ.ಜಿ. ಕರುಣಾಕರನ್, ವಿಶಾಲಾಕ್ಷಿ ಶರ್ಮ, ಸಾವಯವ ಕೃಷಿಕರಾದ ಶಿವನಾಪುರ ರಮೇಶ್, ನಂದೀಶ್ ಚುರ್ಚಿಗುಂಡಿ, ಶಿವಪುತ್ರ ಚೌಧರಿ, ಶ್ರೀಪಾದ ರಾಜ ಮುರಡಿ ಮತ್ತಿತರರು ಉಪಸ್ಥಿತರಿದ್ದರು.
***

ಥಾಮ್ಸನ್ ರಾಯಿಟರ್ಸ್ ವರದಿಯೂ ಭಾರತದಲ್ಲಿ ಹೆಣ್ಣಿನ ಸ್ಥಾನ‌

2

ನಾಗಶ್ರೀ. ಪಿ. ಎಸ್


ಸ್ತ್ರೀ ಅಥವಾ ಮಹಿಳೆ ಎಂಬ ಪದವು ಸಂಸ್ಕೃತ ಪದವಾಗಿದೆ, ಈ ಪದಕ್ಕೆ ಕನ್ನಡದಲ್ಲಿ ಹೆಣ್ಣು ಎಂಬ ಅರ್ಥವಿದೆ.

ಇದು ನಾಗರಿಕ ಗೌರವದ ಮತ್ತು ಪುರುಷ ಪದದ ಸಮಾನ ಪದ ವಾಗಿದ್ದು ವಯಸ್ಕ ಹೆಣ್ಣನ್ನು ಸೂಚಿಸಲು ಬಳಸುತ್ತಾರೆ.

ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದ್ದಾಳೆ. ಭಾರತ ಸಂಸ್ಕೃತಿಯಲ್ಲಿ ಹೆಣ್ಣಿಗೆ ಅವಳದೇ ಆದ ಗೌರವ, ಸ್ಥಾನಮಾನ ಗಳಿರುವುದನ್ನು ಗುರುತಿಸಬಹುದಾಗಿದೆ.
ಸ್ತ್ರಿ ಅವಿನಾಶಿ ಸಂಜೀವಿನಿ ಹೆಣ್ಣು, ವಿಶಿಷ್ಟ ಶಕ್ತಿಗಳ ಸಂಗಮ.

ಮಮತೆ, ಕರುಣೆ,ವಾತ್ಸಲ್ಯ, ಅಕ್ಕರೆ, ಮತ್ತು ಭೂಮಿ ತೂಕದ ತಾಳ್ಮೆ ಉಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎಂಬುದರಲ್ಲಿ ಎರಡನೆಯ ಮಾತಿಲ್ಲ.

ಇಂದು ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣು ತನ್ನದೇ ಆದ ಛಾಪನ್ನು ಮೂಡಿಸಿದ್ದಾಳೆ.
ಯಾವ ಕೆಲಸವೂ ನನ್ನಿಂದ ಆಗದು ಎಂದು ಕೂರುವ ಮಾತೇ ಸ್ತ್ರಿಯ ಬಳಿ ಇಲ್ಲ.

ಯಾವ ಕೆಲಸವನ್ನಾದರೂ ಸರಿಯೇ ತನ್ನದೇ ಆದ ಶೈಲಿಯಲ್ಲಿ ನಿಭಾಯಿಸಿ ಎಲ್ಲಾ ಕೆಲಸಗಳಲ್ಲೂ ಜಯವನ್ನು ಸಾಧಿಸುವುದು ಹೆಣ್ಣಿನ ಮತ್ತೊಂದು ಶಕ್ತಿ.

ಆದರೆ ಭಾರತದಲ್ಲಿ ಇತ್ತೀಚಿಗೆ ಮಹಿಳೆಯರು ವಾಸಿಸಲು ಅಪಾಯಕಾರಿ ವಾತಾವರಣ ನಿರ್ಮಾಣವಾಗುತಿರುವ ಕಾರಣ ಹೆಚ್ಚು ಗಮನಾರ್ಹವಾದ ವಿಷಯವಾಗಿದೆ.

2011ರ ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ಒಂದು ಸಮೀಕ್ಷೆಯನ್ನು ಮಾಡಿತ್ತು, ಆ ಸಮೀಕ್ಷೆಯಲ್ಲಿ ತಿಳಿದುಬಂದದ್ದು ಏನೆಂದರೆ
ಸ್ತ್ರೀಯರಿಗೆ ಸುರಕ್ಷಿತವಲ್ಲದ ಸ್ಥಳಗಳಲ್ಲಿ ಭಾರತವು ನಾಲ್ಕನೆಯ ಸ್ಥಾನದಲ್ಲಿದೆ ಎಂಬ ವಿಷಯವು ನೋವಿನ ಸಂಗತಿಯಾಗಿದೆ.

ಇನ್ನುಮುಂದಾದರೂ ಹೆಣ್ಣನ್ನು ಅಬಲೆ ಎಂದು ಅಲ್ಲಗಳೆಯದೆ ಪುರುಷರಿಗೆ ಸಮಾನವಾಗಿ ಕಾಣುತ್ತಾ ಸಮಾಜದಲ್ಲಿ ಹೆಣ್ಣಿಗೆ ಒಳ್ಳೆಯ ಗೌರವ, ಸ್ಥಾನಮಾನವನ್ನು ನೀಡುವುದರ ಮೂಲಕ ಪ್ರತಿಯೊಂದು ಹೆಣ್ಣನ್ನು ಗೌರವಿಸಬೇಕು….


ನಾಗಶ್ರೀ. ಪಿ. ಎಸ್ ಅವರು ತುಮಕೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿದ್ಯಾರ್ಥಿ.

ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಸುರೇಶಬಾಬು ಅಧಿಕಾರ ಸ್ವೀಕಾರ

ತುಮಕೂರು; ತುಮಕೂರು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಡಾ. ಸುರೇಶಬಾಬು ಅಧಿಕಾರ ಸ್ವೀಕರಿಸಿದ್ದಾರೆ.

ಸುರೇಶಬಾಬು ಅವರು ಡಾ.ವೀರಭದ್ರಯ್ಯ ಅವರಿಂದ ಅಧಿಕಾರ ಪಡೆದುಕೊಂಡರು.

ಜಿಲ್ಲಾಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದ ಸುರೇಶಬಾಬು ಹಿರಿಯ ವೈದ್ಯರು.ಈ ಹಿಂದೆ ಅವರು ಜಿಲ್ಲಾ ಶಸ್ತ್ರಚಿಕಿತ್ಸರಾಗಿ ಅಧಿಕಾರ ಸ್ವೀಕರಿಸಿದ್ದ ಕೆಲವೇ ತಿಂಗಳಲ್ಲಿ ಅವರನ್ನು ಅಧಿಕಾರದಿಂದ ಇಳಿಸಿ ಡಾ. ವೀರಭದ್ರಯ್ಯ ಅವರನ್ನು ಸರ್ಕಾರ ಜಿಲ್ಲಾ ಶಸ್ತ್ರಚಿಕಿತ್ಸರಾಗಿ ನೇಮಕ ಮಾಡಿತ್ತು.

ಸರ್ಕಾರದ ಈ ಕ್ರಮದ ವಿರುದ್ಧ ಸುರೇಶಬಾಬು ಅವರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರು ಅಧಿಕಾರ ಸ್ವೀಕರಿಸಿದರು.

ಅವರ ಸೇವಾವಧಿ ಇನ್ನು ನಾಲ್ಕು ತಿಂಗಳಷ್ಟೆ ಉಳಿದಿದೆ. ಅಲ್ಲಿಯವರೆಗೂ ಅವರು ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ ಸೇವಾ ನಿಯಮಗಳನ್ನು ಸರಿಯಾಗಿ ರೂಪಿಸಿಲ್ಲದ ಕಾರಣ ಕಿರಿಯ ವೈದ್ಯರು ಸಹ ಉನ್ನತ ಹುದ್ದೆ ಅಲಂಕರಿಸುತ್ತಾರೆ. ರಾಜಕೀಯ ಪ್ರಭಾವ ಇಲ್ಲದ ಹಿರಿಯ ವೈದ್ಯರು ಹುದ್ದೆಗಳಿಗೆ ನೇಮಕವಾಗಲು ಸಾಧ್ಯವಾಗದೇ ಕಿರಿಯರ ಕೆಳಗೆ ಕೆಲಸ ನಿರ್ವಹಿಸಬೇಕಾಗಿದೆ ಎಂಬುದು ಹಿರಿಯ ವೈದ್ಯರುಗಳ ಆರೋಪವಾಗಿದೆ.

ಇತರೆ ಇಲಾಖೆಗಳಲ್ಲಿ ಸೇವಾ ಹಿರಿತನದ ಮೇಲೆ ಹುದ್ದೆ ಸಿಕ್ಕರೆ ಇಲ್ಲಿ ತದ್ವಿರುದ್ಧ.‌ರಾಜ್ಯ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಸಂಘದ ನೂತ‌ನ ಅಧ್ಯಕ್ಷರಾದ ಡಾ.‌ದೇಸಾಯಿ ಈ ಬಗ್ಗೆ ಈಗಾಗಲೇ ದನಿ ತೆಗೆದಿದ್ದಾರೆ.

ಸರ್ಕಾರದ ಇತರೆ ಇಲಾಖೆಗಳಂತೆ ಆರೋಗ್ಯ ಇಲಾಖೆಯಲ್ಲು ಸೇವಾ ಹಿರಿತನ ನಿಯಮಗಳನ್ನು ರೂಪಿಸಬೇಕಾಗಿದೆ ಎಂಬ ಬೇಡಿಕೆಯನ್ನು ಅವರು ಈಗಾಗಲೇ ಮುಂದಿಟ್ಟಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.


ಶಾಸಕ ಗೌರಿಶಂಕರ್ ಕೆಲಸಕ್ಕೆ ಫಿದಾ ಆದ ಜನರು…

0

ಹೆತ್ತೇನಹಳ್ಳಿ ಮಂಜುನಾಥ್


ತುಮಕೂರು: ರಾಜ-ಮಹಾರಾಜರಾಗಲಿ, ಮಂತ್ರಿ-ಮಹೋದಯರಾಗಲಿ, ಕಡೆಗೆ ಸಾಮಾನ್ಯನಾಗಿರಲಿ ಒಬ್ಬ ಮನುಷ್ಯ ತನ್ನ ಸಹ ಮನುಷ್ಯರಿಗೆ ಪ್ರೀತಿ-ಗೌರವ, ಕಷ್ಟ-ಸುಖಕ್ಕೆ ಸ್ಪಂದಿಸುವುದೇ ಮನುಷ್ಯನ ಆದ್ಯ ಕರ್ತವ್ಯ, ಅದೇ ಶ್ರೇಷ್ಠ ಕೆಲಸ, ಅದೇ ಮನುಷ್ಯತ್ವ ಹಾಗೂ ಅದೇ #ಶ್ರೇಷ್ಠ_ಧರ್ಮ.

ವ್ಯಾಖ್ಯಾನವನ್ನು ಪ್ರಾರಂಭಿಸಿರುವ ಉದ್ದೇಶವೇನೆಂದರೆ ಇಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಅಂತಹ ಹತ್ತು ಹಲವಾರು ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದು ತುಮಕೂರು ತಾಲ್ಲೂಕು ತಹಸೀಲ್ದಾರರ ಕಚೇರಿ & ಸಾಕ್ಷಿಯಾದವರು #ತುಮಕೂರು_ಗ್ರಾಮಾಂತರ_ಶಾಸಕರಾದ_ಡಿ_ಸಿ_ಗೌರಿಶಂಕರ್ ಅವರು.

ದಿನಾಂಕ 01-03-2021 ರಂದು ಸಮಸ್ಯೆಗಳನ್ನೊತ್ತು ಬರುವ ಜನಗಳಿಗೆ ಊಟದ ವ್ಯವಸ್ಥೆ ಮಾಡಿಸಿ, ಜನಗಳ ಕಷ್ಟ-ಸುಖಗಳನ್ನು ನೇರವಾಗಿ ಆಲಿಸಿ ಪರಿಹಾರ ನೀಡುವ #ಜನತಾದರ್ಶನ ಎಂಬ ವಿಶೇಷ ಕಾರ್ಯಕ್ರಮವನ್ನು ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ ಗೌರಿಶಂಕರ್ ರವರು ಆಯೋಜಿಸಿದ್ದರು.

ಈ ಕಾರ್ಯಕ್ರಮ ವಿಶೇಷವೆಂದು ಹೇಳುತ್ತಿದೇನೆಂದರೆ, ಈ ಕಾರ್ಯಕ್ರಮದಲ್ಲಿ ಕಂಡ ಕೆಲವೊಂದು #ಸೂಕ್ಷ್ಮ_ಸಂವೇದಿ, #ಕರುಳು_ಹಿಂಡುವಂತಹ ವಿಚಾರವನ್ನು ಹಾಗೆ ಆ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕರ ಕಾರ್ಯವೈಖರಿಯನ್ನು ಎಳೆ-ಎಳೆಯಾಗಿ ಹೇಳುತ್ತೇನೆ.

#ಶಾಸಕರ_ಇಂದಿನ_ನಡೆ_ನಿಜಕ್ಕೂ_ಜನಸಾಮಾನ್ಯರನ್ನು #ಮೂಕವಿಸ್ಮಿತರನ್ನಾಗಿ_ಮಾಡಿದ್ದರಲ್ಲಿ_ಸಂಶಯವೇ_ಇಲ್ಲಾ.

ಘಟನೆ -೧ :-

#ಒಬ್ಬರು_ಹಿರಿಯರು, ಅಂಗವಿಕಲರು ಆ ಮನುಷ್ಯ ತನಗಾಗಿಯೋ, ತಮ್ಮ ಕುಟುಂಬದ ಕೆಲಸಕ್ಕಾಗಿಯೋ ಶಾಸಕರ ಬಳಿ ಬಂದಿರಲಿಲ್ಲಾ, ಬದಲಾಗಿ #ತನ್ನೂರಲ್ಲಿ_ಜನಗಳು_ಸಾವನ್ನಪ್ಪಿದರೆ_ಹೂಳಲು_ಸ್ಮಶಾನ ಇಲ್ಲಾ, ನಮ್ಮೂರಿಗೊಂದು #ಸ್ಮಶಾನ ಮುಂಜೂರು ಮಾಡಿಕೊಡಿ ಎಂದು ಕೇಳಲು ಬಂದಿದ್ದರು. ನಿಲ್ಲಲು ಆಗದ ಪರಿಸ್ಥಿತಿಯಲ್ಲಿದ್ದ ಆ ಮನುಷ್ಯ ಶಾಸಕರಿಗೆ ತನ್ನ ಅಹವಾಲು ಸಲ್ಲಿಸಿದರು. ಆ ಮನುಷ್ಯನನ್ನು ಕಂಡು ಮಮ್ಮಲೆ ಮರುಗಿದ ಶಾಸಕರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ, ಸ್ಥಳದಲ್ಲಿ ತಹಸೀಲ್ದಾರರಿಗೆ ಸರ್ಕಾರಿ ಜಾಗ ಗುರುತಿಸಿ ಸ್ಮಶಾನ ಮಂಜೂರು ಮಾಡುವಂತೆ ತಾಕೀತು ಮಾಡಿದರು.

ಘಟನೆ-2 #ಸುಮಾರು_ಎಂಭತ್ತರ_ಆಸುಪಾಸಿನ_ಒಂದು_ಅಜ್ಜಿ ತನ್ನ ಗಂಡನ ನೆನಪಿಗಾಗಿ, ತನ್ನ ಅಂಗೈಯಗಲ ಜಮೀನಿಗಾಗಿ, ಈ #ಜಮೀನನ್ನು_ನಮಗೆ_ಕಾನೂನುಬದ್ಧವಾಗಿ ಮಾಡಿಕೊಡು ಮಗನೆ ಎಂದು ಅಂಗಲಾಚಿ ಗೋಗರೆದ ಹೃದಯವಿದ್ರಾವಕ ಸನ್ನಿವೇಶ. ಮಕ್ಕಳು ಮೊಮ್ಮಕ್ಕಳು ಯಾರು ಬರೋದಿಲ್ಲಾ ನಾ ಸಾಯುವುದರೊಳಗಾಗಿ ನನ್ನ ಗಂಡನಿಗೋಸ್ಕರ ಆದರೂ ಈ ಜಮೀನು ಉಳಿಸಿಕೊಳ್ಳಬೇಕು ಎಂದು ಕೇಳಿಕೊಂಡು ಗೊಳೋ ಎಂದು ಅಜ್ಜಿ ಅತ್ತಳು. ಕ್ಷಣದಲ್ಲೇ ಆ ಅಜ್ಜಿಯ ಕನಸನ್ನು ಸಾಕಾರಗೊಳಿಸಿದ ಶಾಸಕರು ಯಾರಿಗೂ ಈ ದುಸ್ಥಿತಿ ಬರಬಾರದು ಎಂದು ಮರುಗುತ್ತಾ ಅಜ್ಜಿಯ ಕೆಲಸವನ್ನು ತಹಸಿಲ್ದಾರರ ಸಮಕ್ಷಮದಲ್ಲಿ ಮುಗಿಸಿ ಅಜ್ಜಿಗೆ ಧೈರ್ಯ ಹೇಳಿ #ನಾನು_ನಿನ್ನ_ಮಗನೇ_ಏನೇ_ತೊಂದರೆಯಾದರು_ನನಗೇಳವ್ವ ಎಂದು ತಮ್ಮ ಮೊಬೈಲ್ ನಂಬರ್ ನೀಡುತ್ತಾರೆ.

ಘಟನೆ -3 :- #ಒಬ್ಬ_ಮಾಜಿ_ಸೈನಿಕ, ಸೈನಿಕರಿಗೆ 5 ಎಕರೆ ಜಾಗವನ್ನು ಮಂಜೂರು ಮಾಡಿಸಿಕೊಳ್ಳುವ ಕಾನೂನು ವ್ಯವಸ್ಥೆ ಇದೆ. ಆ ಸೈನಿಕ ಸತತ 8 ವರ್ಷಗಳ ಕಾಲ ತಹಸಿಲ್ದಾರ ಕಛೇರಿಗೆ ಅಲೆದು ಅಲೆದು ಸಾಕಾಗಿ ಕೊನೆಗಿಂದು ಶಾಸಕರ ಗಮನಕ್ಕೆ ತಂದರು. ಮಾಜಿ ಸೈನಿಕ ಎನ್ನುತ್ತಿದ ಹಾಗೇ ಎದ್ದು ನಿಂತು ಮಾಜಿ ಸೈನಿಕರಿಗೆ ಗೌರವ ಸಲ್ಲಿಸಿ ಅವರ ಕೆಲಸವನ್ನು ಆದಷ್ಟೂ ಶೀಘ್ರವೇ ಮುಗಿಸಿವುಂತೆ ತಹಸಿಲ್ದಾರರಿಗೆ ಸೂಚನೆ ನೀಡಿ #ದೇಶಪ್ರೇಮ_ಮೆರೆದರು.

ಘಟನೆ -4 :-

ಸಮಸ್ಯೆಯಿಂದಲೇ ನರಳಾಡಿಕೊಂಡು ಅತ್ಯಲ್ಪ ಸಂಬಳಕ್ಕೆ ತಮ್ಮ ಜೀವನವನ್ನೇ ತೆಯ್ಯುವ, ಅಂಗನವಾಡಿಯಲ್ಲಿ ಮಕ್ಕಳ ಜೀವನ ಕಟ್ಟಲು ಭಧ್ರ ಬುನಾದಿ ಹಾಕಿ ಅದರ ನಡುವೆ ಬದುಕುವಂತಹ #ಅಂಗನವಾಡಿ_ಕಾರ್ಯಕರ್ತೆಯರ ಹಿಂಡೆ ಬಂತು. ಅವರ ಕಷ್ಟಗಳನ್ನಾಲಿಸಿದ ಶಾಸಕರು ಅಂಗನವಾಡಿ ಕಾರ್ಯಕರ್ತೆಯರ ಕಷ್ಟಗಳನ್ನು ಅಧಿವೇಶನದಲ್ಲಿ ಮಾತನಾಡುತ್ತೇನೆ. ನಿಮ್ಮ ಕಷ್ಟಗಳ ಶಾಶ್ವತ ಪರಿಹಾರಕ್ಕಾಗಿ ನಾ ಹೋರಾಟ ಮಾಡುತ್ತೇನೆ ಸದಾ ನಾನು ನಿಮ್ಮೊಡನೆನಿರುತ್ತೇನೆ ಎಂಬ ಸಂದೇಶವನ್ನು ನೀಡಿ, ಆ ನೊಂದ ತಾಯಂದಿರಿಗೆ ಸಾಂತ್ವನ ಹೇಳಿ ಅವರಿಗೆ ನಮಸ್ಕರಿಸಿದರು.

ಘಟನೆ -5 :

– ಕಡೆಯದಾಗಿ ಇದೊಂದನ್ನು ಹೇಳಲೇ ಬೇಕು #ಸುಮಾರು_90_ವರ್ಷದ_ಮುದುಕ ನಿಲ್ಲಲು ಕೂರಲು ಇನ್ನೊಬ್ಬರ ಸಹಾಯ ಬೇಕು. ತನ್ನ ವಂಶಪಾರಂಪರ್ಯದ ಜಮೀನಿಗೆ ಕಾನೂನುಬದ್ದವಾಗಿ ದಾಖಲಾತಿ ಮಾಡಿಸಲು 2 ವರ್ಷದಿಂದೆ ತನ್ನ ಹೆಂಡತಿಯ ಒಡವೆಯನ್ನೆಲ್ಲಾ ಅಡವಿಟ್ಟು ತಾಳಿಯೊಂದನ್ನು ಬಿಟ್ಟು ತಾಲ್ಲೂಕು ಕಛೇರಿಯಲ್ಲಿ 50,000 ರೂಪಾಯಿ ಲಂಚವನ್ನು ನೀಡಿದ್ದರು ಕೆಲಸವೂ ಆಗದೇ ಹಣವನ್ನು ನೀಡದೇ ನನಗೆ ಅಯ್ಯೋ ಎನ್ನಿಸುತ್ತಿದ್ದಾರೆ ಎಂದು ದೂರು ನೀಡಿದರು.
ತಾತನ ಕಷ್ಟ ಕೇಳಿದ ಶಾಸಕರ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂತು. ಕೋಪಗೊಂಡ ಶಾಸಕರು ಆ ಅಧಿಕಾರಿಯನ್ನು ಕರೆದು ಬೈದು ತಾತನಿಗೆ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ ಹೇಳಿ 15 ದಿನದೊಳಗೆ ಜಮೀನಿನ ದಾಖಲಾತಿ ಕಾನೂನುಬದ್ಧವಾಗಿ ಮಾಡಿಕೊಡುವಂತೆ ತಹಸಿಲ್ದಾರಿಗೆ ಸೂಚಿಸಿದರು. ಇದನ್ನು ಕಂಡು ಸಂತಸಗೊಂಡ ತಾತ, ಶಾಸಕರಿಗೆ ನೀನು ನೂರ್ಕಾಲ ಬಾಳಪ್ಪ ಎಂದು ಆಶಿರ್ವದಿಸಿ ಅಳುತ್ತಾ ಅಲ್ಲಿಂದ ಹೊರಟರು.

ಇಂದು ತಹಸಿಲ್ದಾರ್ ಕಛೇರಿಯ ಮುಂದೆ ಎಲ್ಲವೂ ಕಣ್ಣೀರು ತರಿಸುವ ಘಟನೆಗಳೇ. ಹತ್ತು ಹಲವಾರು ಜನಗಳ ಕಷ್ಟಗಳಿಗೆ, ಕೆಲಸಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಿಸಿ #ಜನಮಾನಸದಲ್ಲಿ_ಶಾಶ್ವತವಾಗಿ_ಉಳಿಯುವಂತಹ_ಶಾಸಕರ_ಕೆಲಸಕ್ಕೆ_ಜನ_ಮೆಚ್ಚುಗೆ_ವ್ಯಕ್ತಪಡಿಸಿದರು.

ಮೊದಲ ದಿನದ ಜನತಾದರ್ಶನಕ್ಕೆ ಬಂದಂತಹ 1246 ಅರ್ಜಿಗಳಲ್ಲಿ ಸ್ಥಳದಲ್ಲೇ 500 ಜನಕ್ಕೆ ಶಾಶ್ವತವಾದಂತಹ ಪರಿಹಾರವನ್ನು ನೀಡಿದರು. ಹತ್ತಾರು ವರ್ಷ ಅಲೆದರೂ ಜೊತೆಗೆ ಅಧಿಕಾರಿಗಳಿಗೆ ಲಂಚ ನೀಡಿದರೂ ಆಗದ ಕೆಲಸವನ್ನು ಶಾಸಕರು ಕುಳಿತಲ್ಲೆ ಮಾಡಿ ಜನರ ಮುಖದಲ್ಲಿ ನಗು & ಭರವಸೆ ಮೂಡಿಸಿದ್ದಾರೆ.
ಶಾಸಕರ ಇಂದಿನ ಕಾರ್ಯವೈಖರಿ ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳಿಗೆ ಮಾದರಿಯಾಗುವಂತದ್ದು. ಪ್ರೀತಿಯಿಂದ ಮತ ಹಾಕಿದ್ದಕ್ಕೆ ಸಾಕಲ್ಲವೇ ಇಷ್ಟು ?
#ಅಲ್ಲಿದ್ದ_ಜನ_ಶಾಸಕರನ್ನು_ನೋಡಿ_ಈ_ಕಾಲದಲ್ಲೂ_ಇಂತಹ_ಸರಳ_ಶಾಸಕರು_ಇದ್ದಾರಾ_ಎಂದು_ಆಶ್ಚರ್ಯ_ಪಟ್ಟರು_ಜೊತೆಗೆ_ಈ_ಶಾಸಕರು #ಬರೀ_ಸರಳರಲ್ಲಾ, #ಸರಳತೆಯಲ್ಲೇ_ಸಾಹುಕಾರರು ಎಂದು ಹರ್ಷ ವ್ಯಕ್ತ ಪಡಿಸಿದರು. ಇಂದು ಶಾಸಕರು ಮಾಡಿದಂತಹ ಕೆಲಸ, ತೋರಿದಂತಹ ಪ್ರೀತಿ ನಿಜವಾಗಲೂ ಅಕ್ಷರಸಹಃ #ಸರಳತೆಯ_ಸಾಹುಕಾರ ಎಂದು ನಿರೂಪಿಸಿತು.

ಜನತಾದರ್ಶನಾ ಕಾರ್ಯಕ್ರಮದ ನಂತರ ಮಾತನಾಡಿದ ಶಾಸಕರೂ ಭ್ರಷ್ಟಾಚಾರಮುಕ್ತ ಸಮಾಜದ ನಿರ್ಮಾಣವೇ ನನ್ನ ಮುಖ್ಯ ಗುರಿ ಎಂದು ಹೇಳಿದರು.

ಇವರೇ ನೋಡಿ ನಮ್ಮ ಹಳ್ಳಿ ವೈದ್ಯ ಡಾ.ಚಿಕ್ಕಸ್ವಾಮಯ್ಯ

0

Publicstory


ತುರುವೇಕೆರೆ: ಸಮಾಜ ಮುಖಿಯಾಗಿ ದುಡಿಯುವ ಮಕ್ಕಳಿಗೆ ಜ್ಞಾನ ಕೌಶಲ್ಯ ತುಂಬುವ ಕೆಲಸ ಶಿಕ್ಷಕನಾದರೆ ಅದೇ ಮಕ್ಕಳ ಸದೃಢ ಆರೋಗ್ಯ ಕಾಪಾಡುವ ಮಹತ್ತರವಾದ ಜವಬ್ದಾರಿ ವೈದ್ಯರದು. ಹಾಗಾಗಿ ಇರ್ವರ ಸೇವೆ ದೇಶಕ್ಕೆ ಅತ್ಯಮೂಲ್ಯವೆಂದು ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಎನ್.ಮಹಾದೇವಯ್ಯ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದಂಡಿನಶಿವರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ವೈದ್ಯ ಡಾ.ಚಿಕ್ಕಸ್ವಾಮಯ್ಯ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ವೈದ್ಯರು ಬಡವರು, ನಿರ್ಗತಿಕರು, ಅಸಹಾಕರ, ಕಾರ್ಮಿಕರ, ಅಶಕ್ತ ಮಹಿಳೆಯರ ಸೇವೆಗೆ ತಮ್ಮ ಬದುಕನ್ನು ಸವೆಸಬೇಕೆ ವಿನಹ ವ್ಯಾಪಾರಿ ಮನೋದರ್ಮ ತಾಳದೆ ವೃತ್ತಿ ಧರ್ಮ ಕಾಪಾಡಿಕೊಳ್ಳಬೇಕು. ನಮ್ಮ ಸಂಸ್ಥೆಯಲ್ಲಿ ಓದಿದ ಸಾಕಷ್ಟು ವಿದ್ಯಾರ್ಥಿಗಳು ವೈದ್ಯರಾಗಿ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ ಆ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ ಎಂದರು.

ಜಾನಪದ ಕಲಾವಿದ ದಂಡಿನಶಿವರ ಗಂಗಾಧರ್ ಗೌಡ ಮಾತನಾಡಿ, ಕಳೆದ 70 ವರ್ಷಗಳ ಹಿಂದೆ ಪ್ರಾಥಮಿಕ ಚಿಕಿತ್ಸೆಗಾಗಿಯೇ ಪರದಾಡುತ್ತಿದ್ದ ದಂಡಿನಶಿವರ ಭಾಗದ ಜನರಿಗೆ ಶಾಶ್ವತ ಸರ್ಕಾರಿ ಆಸ್ಪತ್ರೆ ಕಟ್ಟಡ ಕಟ್ಟಲು ಹಳ್ಳಿಹಳ್ಳಿ ತಿರುಗಿ, ಚಂದ ಸಂಗ್ರಹಿಸಿ ನೂತನ ಆರೋಗ್ಯ ಕೇಂದ್ರ ನಿರ್ಮಿಸಿದ ಶ್ರೇಯಸ್ಸು ಅಂದಿನ ವೈದ್ಯ ಡಾ.ಚಿಕ್ಕಸ್ವಾಮಿಗೆ ಸಲ್ಲುತ್ತದೆ. ಅವರು ತಮ್ಮ ಇಳಿ ವಯಸ್ಸಿನಲ್ಲೂ ನಿಸ್ವಾರ್ಥ ಮನೋಭಾವನೆಯಿಂದ ಜನರಿಗೆ ಸೇವೆ ಮಾಡುವ ಗುಣ ಇಂದಿನ ಯುವ ವೈದ್ಯರುಗಳಿಗೆ ಮಾದರಿಯಾಗಿದೆ ಎಂದರು.
ಇದೇ ವೇಳೆ ವೈದ್ಯ ಡಾ.ಚಿಕ್ಕಸ್ವಾಮಿ ಹಾಗು ಅವರ ಪುತ್ರಿ ಮಂಜುಳ ಅವರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯರಾಜ್ಕುಮಾರ್, ಗುಡಿಗೌಡ ಸಿದ್ದೇಗೌಡ, ರಂಗೇಗೌಡ, ತಿಮ್ಮೇಗೌಡ, ವೆಂಕಟೇಶ್, ಶಿವಣ್ಣ, ನಾಗರಾಜು, ವಕೀಲ ಶೇಖರಪ್ಪ, ನಟರಾಜು, ಸುರೇಶ್, ಡಿ.ಸಿ.ಕುಮಾರ್, ನಂಜುಂಡೇಗೌಡ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಜಯಮಂಗಲಿ ಕೃಷ್ಣ ಮೃಗ ಧಾಮದಲ್ಲಿ ಭಾರೀ ಅಗ್ನಿ ಅನಾಹುತ

Publicstory


ಮಧುಗಿರಿ: ತಾಲ್ಲೂಕಿನ ಜಯಮಂಗಲಿ ಕೃಷ್ಣ ಮೃಗ ಧಾಮದಲ್ಲಿ ಭಾರೀ ಅಗ್ನಿ ಅನಾಹುತ ಉಂಟಾಗಿದೆ.

ಹುಲ್ಲುಗಾವಲಿಗೆ ಬೆಂಕಿ ತಗುಲಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕರ ದೌಡಾಯಿಸಿದ್ದಾರೆ.

ಬೆಂಕಿ ಆರಿಸಲು ಹರಸಾಹಸ ಪಡುತ್ತಿದ್ದಾರೆ.

ಬೆಂಕಿಯು ವನ್ಯಧಾಮದ ಖಾಸಗಿಯವರ ಜಮೀನಿನಲ್ಲಿ ಹತ್ತಿಕೊಂಡಿದ್ದು, ವನ್ಯಧಾಮಕ್ಕೂ ಹರಡುವ ಸಾಧ್ಯತೆ ಇದೆ.

ದೊಡ್ಡಣ್ಣೇಗೆರೆ ಪಿಡಿಓ ಅವರ ಕರ್ತವ್ಯಕ್ಕೆ ಅಡ್ಡಿ, ಜಾತಿನಿಂದನೆ: ಹಂದನಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Publicstory


ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ
ದೊಡ್ಡಣ್ಣೆಗರೆ ಗ್ರಾಮಪಂಚಾಯತಿ ಪ್ರಭಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಡವೀಶ್ ಕುಮಾರ್ ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ, ಜಾತಿ ನಿಂದನೆ ಮಾಡುವವ ಮೂಲಕ ಮಾನ ಹಾನಿ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಚಿಕ್ಕನಾಯಕನಹಳ್ಳಿ ತಾಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಹಸಿಲ್ದಾರ್ ತೇಜಸ್ವಿನಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ವಿವರ:ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿ ದೊಡ್ಡಣ್ಣೆಗರೆ ಗ್ರಾಮಪಂಚಾಯತಿಯಲ್ಲಿ (ಪ್ರಭಾರ) ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಅಡವೀಶ್ ಕುಮಾರ್ ರವರ ಮೇಲೆ ದಿನಾಂಕ:24/02/2021 ರಂದು ಸದರಿ ಪಂಚಾಯತಿ ಅಧ್ಯಕ್ಷರಾದ ಎ.ವೈ ರಮ್ಯ ರವರ ಪತಿಯಾದ ಮಂಜುನಾಥ್ ಹಾಗೂ ಗ್ರಾಮಪಂಚಾಯತಿ ಸದಸ್ಯರಾದ ಪ್ರಶಾಂತ ಡಿ.ಎಸ್ ಹಾಗೂ ಶಿವಕುಮಾರ್‌ ಡಿ.ಎಂ ರವರು ಗ್ರಾಮಪಂಚಾಯತಿ ಕಛೇರಿಗೆ ಬಂದು ಕರ್ತವ್ಯದ ಅವಧಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರನ್ನು ಕೊಠಡಿಯಿಂದ ಹೊರಹಾಕಿ ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿ ಉಂಟು ಮಾಡಿರುತ್ತಾರೆ.ಆ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಇವರ ಮೇಲೆ ಜಾತಿ ನಿಂದನೆ ಮಾಡುವ ಮೂಲಕ ಮಾನಹಾನಿ ಮಾಡಿರುತ್ತಾರೆ. ಈ ಬಗ್ಗೆ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿರುತ್ತದೆ.

ಈ ಘಟನೆಯಿಂದಾಗಿ ತಾಲ್ಲೂಕಿನ ಗ್ರಾಮಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು /ಕಾರ್ಯದರ್ಶಿ ಹಾಗೂ ಗ್ರಾಮಪಂಚಾಯತಿ ಸಿಬ್ಬಂದಿಗಳು ಮಾನಸಿಕವಾಗಿ ಕುಗ್ಗಿದ್ದು, ಕಾನೂನು ರೀತಿಯಿಂದ ಕರ್ತವ್ಯ ನಿರ್ವಹಿಸಲು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಗ್ರಾಮಪಂಚಾಯತಿ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ನೈತಿಕ ಬೆಂಬಲ ನೀಡಬೇಕಾಗಿ ತಾಲ್ಲೂಕಿನ ಎಲ್ಲಾ ಗ್ರಾಮಪಂಚಾಯತಿ ಸಿಬ್ಬಂದಿ ಪರವಾಗಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ಸಿ.ಆರ್, ಗೌರವಾಧ್ಯಕ್ಷರು ನಾಗೇಶ್, ಸಂಘಟನಾ ಕಾರ್ಯದರ್ಶಿ ರಮೇಶ್ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಓಗಳು ಒತ್ತಾಯಿಸಿದ್ದಾರೆ.

11.86 ಲಕ್ಷ ರೂ ಮೌಲ್ಯದ ಸಲಕರಣೆ ವಿತರಣೆ

ಪಾವಗಡ: ಅಧುನಿಕ ಉಪಕರಣಗಳನ್ನು ಬಳಸುವುದರ ಮೂಲಕ ಮಕ್ಕಳಲ್ಲಿ ತಾಂತ್ರಿಕ ಕೌಶಲ್ಯವನ್ನು ಉತ್ತಮಪಡಿಸಲು ನೆರವಾಗುತ್ತದೆ ಎಂದು ಆದಾನಿ ಸೋಲಾರ್ ಕಂಪೆನಿಯ ಮುಖ್ಯಸ್ಥ ಷಣ್ಮುಗಂ ತಿಳಿಸಿದರು


ತಿರುಮಣಿ ಕ್ಲಸ್ಟರ್ ವ್ಯಾಪ್ತಿಯ ರಾಯಚೆರ್ಲು, ಅಚ್ಚಮ್ಮನಹಳ್ಳಿ, ಬಳಸಮುದ್ರ, ನಾಗೇನಹಳ್ಳಿ ಸರ್ಕಾರಿ ಶಾಲೆಗಳಿಗೆ 11 ಲಕ್ಷದ 86 ಸಾವಿರ ರೂಪಾಯಿ ಮೌಲ್ಯದ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು ಅಧುನಿಕತೆಗೆ ಅನುಗುಣವಾಗಿ ಶಿಕ್ಷಕರು ವಿದ್ಯುನ್ಮಾನ ಸಾಧನ ಸಲಕರಣೆಗಳ ಮೂಲಕ ಮಕ್ಕಳಿಗೆ ಬೋಧನೆ ಮಾಡುವುದರ ಮೂಲಕ ಉತ್ತಮ ಶಿಕ್ಷಣ ನೀಡಬೇಕು.  ಆ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರ ಕಲ್ಪಿಸಬೇಕು ಎಂದು ತಿಳಿಸಿದರು

ಶಾಲೆಗಳಿಗೆ ಕಂಪ್ಯೂಟರ್, ನಲಿಕಲಿ ಟೇಬಲ್ಸ್, ಛೇರ್ಸ್, ವಿಜ್ಞಾನ ಕಿಟ್, ಎಲ್.ಇ.ಡಿ. ಟಿ.ವಿ.   ಮುಂತಾದ ಸಲಕರಣೆಗಳನ್ನು ಆದಾನಿ ಸೋಲಾರ್ ಕಂಪೆನಿಯವರು ನೀಡಿದರು.

ಕಾರ್ಯಕ್ರಮದಲ್ಲಿ ಷಣ್ಮುಗಂ, ನರೇಂದ್ರ, ಗಣೇಶ್, ಸತ್ಯೇಂದ್ರ, ಪ್ರಭು, ವಿನಯ್, ಅಜಿತ್, ಜಗದೀಶ್, ರಾಮಮೂರ್ತಿ, ಮುರುಳಿ, ಮಾರುತಿ, ಸಂಜಯ್, ಇತರ ಮುಖಂಡರು ಉಪಸ್ಥಿತರಿದ್ದರು

ಗುಸು ಗುಸು ಪಿಸು ಪಿಸು

1

ಡಾ.ರಜನಿ ಎಂ


ಕೂದಲ ಬಣ್ಣ ಅಲರ್ಜಿ
ಹಾಗಂತ ಬಿಡಲು ಆಗುವುದಿಲ್ಲ
ಇನ್ನೂ ಮೊಮ್ಮಕ್ಕಳು ಬಂದಿಲ್ಲ😉
ಅರೆದ ಮೆಹಂದಿ ಎಲೆ?
ಕಾಣ ಬಹುದೆ ನಾನು ಪರಂಗಿಯವರಂತೆ?

ನಿನ್ನ ಸೊಂಟದ ಮಡಿಕೆಗಳು
ಎರಡಿಂದ ಈಗ ಮೂರಾಗಿವೆ ಎಂದು ಮುಟ್ಟಿ ಎಣಸುವವಳನ್ನು

ಹೆ ಹೇ ನೀನು ತಗೊಳಲ್ಲವೇನೆ
ರೆಡ್ ವೈನ್ ಅನ್ನು
ಹಾರ್ಟ್ ಗೆ ಒಳ್ಳೆದಂತ ಲ್ಲೇ?
ಎಂದು ನಗುವವಳನ್ನು

ನೀನು ಬಿಡಮ್ಮ ಲಕ್ಕಿ
ನಿನ್ನ ಗಂಡ ಈಗಲೂ ಮಲ್ಲಿಗೆ ತರುತ್ತಾನೆ ಎಂದು ಚೇಡಿ ಸುವವಳನ್ನು

ಬೆಟ್ಟ ಹತ್ತಿ ಬಂದೆನಲ್ಲ
ತೊಡೆಗಳು ಉಜ್ಜಿ ಉರಿ
ತಡೆಯುವುದು ಹೇಗೆ ಎಂದು
ತಂಟೆ ಮಾಡುವ ವಳನ್ನು

ಮೂರು ತಿಂಗಳು ಆಯಿತು
ನಿಂತೆ ಹೋಯಿತೇ ಅಂಥ ಕಾಣುತ್ತದೆ ಕಣೇ..
ಎಲ್ಲ ಕಿತ್ತು ಎಸೆಯಬೇಕು
ಅನಿಸುತ್ತದೆ ..ಬೆವೆತು.. ಏನೇ ಇದು ಮೆನೋಪಾಸ್ ಎಂದು ಅಲವತ್ತು ಕೊಳ್ಳುವವಳನ್ನು

ಸೋಫಾ ಕವರ್ ಚೆನ್ನಾಗಿದೆ ಆದರೂ ದುಡ್ಡು ಹೆಚ್ಚಾಯಿತು,
ಕಲಾ ಮೇಳದಲ್ಲಿ ಕಾಟನ್ ಸೀರೆ
ತಂದರೂ ಉಡುವು ದು ಎಲ್ಲಿಗೆ? ಎಂದು ಪ್ರಶ್ನಿಸುವ ಳನ್ನು

ಯಾರೋ ಮಾಡಿದರೋ
ಈ ಸಂಸಾರ ಎಂದು
ಸುಯ್ ಗುಡು ವವಳನ್ನು

ಎದೆ ಗಳು ಕಲ್ಲಾಗಿ ..ಹೊರ ಗಾದಾಗ ಮೆ ತ್ತ ಗಾಗುತ್ತವೆ ಎಂದು ಹೇಳಿಕೊಡುವವಳನ್ನು
ಪ್ಯಾಡ್ ಹಳೇದು ಕಣೇ
ಕಪ್ ಕಪ್ ಎಂದು ನಗು ವಾಕೆಯನ್ನು

ಪಬ್ಲಿಕ್ ಟಾಯ್ಲೆಟ್ ಅಲ್ಲಿ
ನಾವೂ ನಿಂತು ಹುಚ್ಚೇ
ಹು ಯುಬಹುದು ಗೊತ್ತಾ pee ಬಳಸಿ ..ಎಂದು ಪೀಪಿ ಊದು ವವಳನ್ನು

ನಿಮ್ಮದು ಈಗಲೂ ಬಿಟ್ಟಿಲ್ ವೆನೆ?
ಎಂದು ಕಿಚಾಯಿಸುವಳನ್ನು

ಈಗಲೂ ಅದೇ ಕೇಡು ಬುದ್ಧಿ ನಾ ಎಂದು ಬೇಜಾರು ಮಾಡಿಕೊಳ್ಳುವವಳನ್ನು

ತಕ್ಷಣವೇ ರಾತ್ರಿ ಬೇಗ ಊಟ ಮಾಡಿದರೆ ಬೊಜ್ಜು ಕಡಿಮೆ ಎಂದು ಮಾತು ಹಾರಿಸುವವ
ಳನ್ನು

ನೀನೂ ಹಾಕೆ me-too
ಎಂದು ಅಂಡು ಗಿಂಟು ವವಳನ್ನು

ಜಾಲಿಸಿ , ತೇಲಿಸಿ
ಮತ್ತೆ ಬಂಡಿ ನೂಕಲು ಹೋಗುವ
ಗೆಳತಿಯರನ್ನು

ಕೂದಲು ಉದುರಿದರೇನು
ಮುಡಿಯ ಬಾರದೆ
ಕೆಂಪು ಗುಲಾಬಿಯನ್ನು

ಮೂಸಿ ಮತ್ತಾಗ ಬಾರದೇ
ಜಾಲಾರದ ಹೂವನ್ನು…


ಡಾ.ರಜನಿ ಎಂ ಅವರು ವೃತ್ತಿಯಲ್ಲಿ ವೈದ್ಯರು. ನಮ್ಮ ನಡುವಿನ ಅತ್ಯುತ್ತಮ ಬರಹಗಾರರಾಗುವ ಎಲ್ಲ ಸಾಧ್ಯತೆಗಳಿರುವ ರಜನಿ ಅವರು ವೃತ್ತಿಯ ಒತ್ತಡದ ಕಾರಣದಿಂದ ಬರೆಯವುದು ಕಡಿಮೆ. ಕನ್ನಡದ ಮಹತ್ವದ ಬರಹಗಾರ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಒಡನಾಟದಲ್ಲಿದ್ದ ರಜನಿ ಅವರು, ತಮ್ಮ ಬರಹ, ವೈದ್ಯಕೀಯ ಸೇವೆಯ ಕಾರಣದಿಂದಾಗಿ ಅವರಿಂದ ಮೆಚ್ಚುಗೆ ಪಡೆದವರು.

ಮಹಿಳಾ ದನಿ ಇನ್ನೇನು ಕಡಿಮೆಯಾಗುತ್ತಿದೆಯಲ್ಲ ಎಂಬ ಮಾತುಗಳ ನಡುವೆಯೇ ರಜನಿ ದುತ್ತೆಂದು ಬಂದು ನಿಂತಿದ್ದಾರೆ.

ಗುಸು ಗುಸು ಪಿಸು ಪಿಸು… ಅದರ ಶಕ್ತಿಯ ಬಗ್ಗೆ, ಅವರ ಕವಿತಾಶಕ್ತಿ ಬೆಂಕಿಯಾಗುಬಹುದೆಂಬ ಬಗ್ಗೆ ಇಲ್ಲಿ ಬೇರೇನು ಹೇಳಬೇಕಾಗಿಲ್ಲ. ಕವಿತೆಗಳ ಕಡೆಗೆ ಡಾಕ್ಟರರ ಮನಸು ಅರಳಲಿ ಎಂದು ಪಬ್ಲಿಕ್ ಸ್ಟೋರಿ ಹಾರೈಸುತ್ತದೆ.

ಅಬ್ಬಾ! ಹ್ಯಾಟ್ಸಾಪ್ ಲೇಖಕಿಯರೇ…

0

Publicstory


ತುಮಕೂರು: ಲೇಖಕಿ ಮಲ್ಲಿಕಾ ಬಸವರಾಜ್ ಅವರ ಲೇಖನ ಓದುವರೆಗೂ ನನಗೇ ಗೊತ್ತೇ ಇರಲಿಲ್ಲ. ತುಮಕೂರಿನ ಲೇಖಕಿಯರು ಎಷ್ಟೆಲ್ಲ ಕೆಲಸ ಮಾಡಿದ್ದಾರೆ.

ಒಂದು ಕಸಾಪ ಮಾಡುವಷ್ಟು ಕೆಲಸ. ಆದರೂ ಯಾಕೆ ಇದು ಜನರ ನಡುವಿನ ಜಾನಪದವಾಗಲಿಲ್ಲ…

ಪ್ರಸಿದ್ಧ ಸಾಹಿತಿಗಳನೇಕರು ಬಟ್ಟೆ ಮುದುರಿಕೊಂಡು ಬಾಯಿಯೇ ಇಲ್ಲವೆಂಬಂತೆ ಬಾಯಿ ಹೊಲೆದುಕೊಂಡು ಕುಳಿತಿರುವಾಗ ನಮ್ಮ ತುಮಕೂರಿನ ಲೇಖಕಿಯರ ಸಂಘ ಸಮಾಜಕ್ಕೆ ಎಷ್ಟೆಲ್ಲ ಮುಖಾಮುಖಿಯಾಗಿದೆ ಎನ್ನುವುದೇ ಅಚ್ಚರಿ ಎನ್ನಿಸುತ್ತದೆ.

ತಮ್ಮದೇ ಜಾಲಾರ http://jaalaarablogspot.com ಮೂಲಕ ಮತ್ತೊಂದು ಮಗ್ಗಲಿಗೆ ಜಾರಿರುವ ಲೇಖಕಿಯರ ಸಂಘ ನಡೆದುಬಂದ ಬಗ್ಗೆ ಮಲ್ಲಿಕಾಬಸವರಾಜ್ ಬರೆದಿರುವ ಲೇಖನದ ಯಥಾವತ್ ಇಲ್ಲಿದೆ.


1985 ರಲ್ಲಿ ,ಕರ್ನಾಟಕ ಲೇಖಕಿಯರ ಸಂಘದ ಕೇಂದ್ರ ಶಾಖೆಯ ಅಧ್ಯಕ್ಷರಾಗಿದ್ದಂತಹ H.S.ಪಾರ್ವತಿ ರವರು ,ಸಂಘದ ಮೊದಲನೆ ಜಿಲ್ಲಾ ಶಾಖೆಯಾಗಿ ,ತುಮಕೂರು ಜಿಲ್ಲಾ ಶಾಖೆಯನ್ನು ದಿ:22-12-1985 ರಂದು ಉದ್ಘಾಟಿಸಿದರು.ಆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿ.ನಾರಾಯಣ ರವರು ವಹಿಸಿದ್ದರು.

ಹೀಗೆ ಹಿರಿಯರಿಂದ ಉದ್ಘಾಟನೆಯಾದ ರಾಜ್ಯದಲ್ಲೇ ಮೊಟ್ಟಮೊದಲ ಜಿಲ್ಲಾಶಾಖೆಯಾದ ತುಮಕೂರು ಜಿಲ್ಲಾ ಶಾಖೆ ಯ ಮೊದಲ ಅಧ್ಯಕ್ಷರು ಬಾ.ಹ .ರಮಾಕುಮಾರಿ.
ಜಿಲ್ಲೆಗೆ ಕಲೇಸಂ ತರಬೇಕೆನ್ನುವ ಅವರ ಉತ್ಸಾಹದಿಂದಾಗಿ ಮೊದಲ ಜಿಲ್ಲಾಶಾಖೆಯಾಗಿ ಕಲೇಸಂ ತುಮಕೂರು ಜಿಲ್ಲಾ ಶಾಖೆ ಪ್ರಾರಂಭವಾಯಿತು.

ಅಂದಿನಿಂದ ಹತ್ತು ವರ್ಷಗಳ ಕಾಲ ಜಿಲ್ಲಾ ಶಾಖೆಯ ಅಧ್ಯಕ್ಷ ರಾಗಿದ್ದ ಅವರು,ಸಾಹಿತ್ಯಾಸಕ್ತ ಮಹಿಳೆಯರನ್ನು ಸದಸ್ಯರನ್ನಾಗಿ ಮಾಡಿ ,ಹಲವಾರು ಕಾರ್ಯಕ್ರಮ ಗಳನ್ನು ರೂಪಿಸಿದರು .ಸಂಘವನ್ನು ಕಟ್ಟಿ ಬೆಳೆಸಿದರು.
ಇವರ ಅವಧಿಯಲ್ಲಿ ಹಲವಾರು ಸಾಹಿತ್ಯ ಶಿಬಿರಗಳು ವಿಚಾರ ಸಂಕಿರಣ ಗಳು ,ಕವಿಗೋಷ್ಠಿಗಳು ,ಉಪನ್ಯಾಸ ಗಳು ನಡೆದವು.

1989 ರಲ್ಲಿ ವಿವಾದಾಸ್ಪದ ಕೃತಿಗಳಾಗಿದ್ದ ಕೆ ಎಸ್ ಭಗವಾನ್ ರವರ ಬದಲಾವಣೆ ಮತ್ತು ಎಂ.ಎಂ.ಕಲ್ಬುರ್ಗಿ ಯವರ ಮಾರ್ಗ-೧ ಕೃತಿಗಳ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸಿದರು . 1991 ರಲ್ಲಿ ಪ್ರಥಮ ಬಾರಿಗೆ ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಲೇಖಕಿಯರ ಸಮ್ಮೇಳನ ನಡೆಸಿದರು. ಆನಂತರ ಗುಬ್ಬಿಯಲ್ಲಿ 2ನೇ ಜಿಲ್ಲಾ ಲೇಖಕಿಯರ ಸಮ್ಮೇಳನ ನಡೆಸಿದರು .

ಆನಂತರ ಸಂಘದ ಅಧ್ಯಕ್ಷರಾದವರು ಬಿ.ಸಿ.ಶೈಲಾ ನಾಗರಾಜ್ .ಇವರೂಸಹ 10 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮ ಗಳನ್ನು ಏರ್ಪಡಿಸಿದರು. ಅವುಗಳಲ್ಲಿ ಮುಖ್ಯ ವಾದವು
ತುಮಕೂರು ಜಿಲ್ಲಾ ಶತಮಾನದ ಸಾಹಿತ್ಯ ವಿಚಾರ ಸಂಕಿರಣ
ಗುಬ್ಬಿಯಲ್ಲಿ ಏರ್ಪಡಿಸಿದ್ದ ಲೇಖಕಿಯರಿಗಾಗಿ ಕಾವ್ಯಕಮ್ಮಟ
ಇವರ ಅವಧಿಯಲ್ಲಿ ಲೇಖಕಿಯರಿಗಾಗಿ ಹಲವಾರು ಕಾರ್ಯಾಗಾರ ಗಳನ್ನು ,ವಿಚಾರ ಸಂಕಿರಣಗಳನ್ನು ,ಕವಿಗೋಷ್ಠಿ ಗಳು ಸಮ್ಮೇಳನಗಳನ್ನು ನಡೆಸಿದರು.

ಇವರ ನಂತರ ಸಂಘದ ಅಧ್ಯಕ್ಷರಾದವರು ಅನ್ನಪೂರ್ಣ ವೆಂಕಟನಂಜಪ್ಪ ರವರು .ಇವರು ನಾಲ್ಕು ವರ್ಷಗಳವರೆಗೆ ಅಧ್ಯಕ್ಷರಾಗಿದ್ದರು .ಇವರು ಅಧ್ಯಕ್ಷರಾಗಿಆಯ್ಕೆಯಾದ ವರ್ಷ ಆದಿಕವಿ ಪಂಪನ 1200 ನೇ ವರ್ಷವಾಗಿತ್ತು ಹಾಗಾಗಿ ಪಂಪನ ಕಾವ್ಯವಲೋಕನ , ಕವಿಗೋಷ್ಠಿ ,ಕವನ ಸ್ಪರ್ಧೆ ಏರ್ಪಡಿಸಿದ್ದರು.
ಪಂಪನಿಂದ ಕುವೆಂಪುವರೆಗೆ ಕನ್ನಡ ಸಾಹಿತ್ಯ ರಸವಾಹಿನಿ ಎಂಬ ಸರಣಿ ಉಪನ್ಯಾಸವನ್ನು ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಹಮ್ಮಿಕೊಂಡು 30 ಕವಿಗಳ ಪರಿಚಯವನ್ನು ಮಾಡಿಕೊಟ್ಟರು .

ಕುವೆಂಪುರವರ ಜನ್ಮಶತಾಬ್ದಿ ವರ್ಷದಲ್ಲಿ ಕುವೆಂಪುರವರ ಸಾಹಿತ್ಯ ಮತ್ತು ವಿಚಾರಗಳಿಗೆ ಸಂಬಂಧಿಸಿದ ಕುವೆಂಪು ಚಿತ್ರಯಾತ್ರೆ ಎಂಬ ಕಲಾ ಪ್ರದರ್ಶನವನ್ನು ಜಿಲ್ಲೆಯ ಸುಮಾರು 70 ಕ್ಕಿಂತ ಹೆಚ್ಚು ಶಾಲೆಗಳಲ್ಲಿ ಪ್ರದರ್ಶಿಸಿದರು .
ಈ ಯಾತ್ರೆಯನ್ನು ದೇಜಗೌ ರವರು ಉದ್ಘಾಟಿಸಿದ್ದರು .

ನೆನೆವುದೆನ್ನ ಮನಂ ಎಂಬ ಪಂಪನನ್ನೆ ಕುರಿತ ಕವನ ಸಂಕಲನವನ್ನು ಸಂಪಾದಿಸಿ ಬಿಡುಗಡೆಗೊಳಿಸಿದರು .

ಇವರ ನಂತರ ಸಂಘಕ್ಕೆ ಅಧ್ಯಕ್ಷರಾದ ವರು ಎಂ.ಸಿ.ಲಲಿತಾ ರವರು .2006 ರಿಂದ 2012 ರವರೆಗೆ ಆರು ವರ್ಷಗಳ ಕಾಲ ಇವರು ಅಧ್ಯಕ್ಷರಾಗಿದ್ದರು .ಇವರ ಅವಧಿಯಲ್ಲಿ
ಮರೆಯಲಾಗದ ಲೇಖಕಿಯರು ಸರಣಿ ಉಪನ್ಯಾಸವನ್ನು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದರು.

ಲೇಖಕಿಯರಿಗಾಗಿ ರಾಜ್ಯಮಟ್ಟದ ಪತ್ರಿಕೋದ್ಯಮ ಕಮ್ಮಟ ಏರ್ಪಡಿಸಿದ್ದರು .
ಲೇಖಕಿಯರಿಗಾಗಿ ರಾಜ್ಯಮಟ್ಟದ ಕಥಾಕಮ್ಮಟ ಏರ್ಪಡಿಸಿದ್ದರು.
ಜನವರಿ 2013 ರಿಂದ ಜೂನ್ 2019 ರವರೆಗೆ ಸಿ.ಎನ್.ಸುಗುಣಾದೇವಿ ರವರು ಅಧ್ಯಕ್ಷ ರಾಗಿದ್ದರು .

ಇವರ ಅವಧಿಯಲ್ಲಿ
ಮೌಡ್ಯಾಚಾರಗಳ ನಿಷೇಧ ಕುರಿತಂತೆ ಮತ್ತು ವೈಜ್ಞಾನಿಕ ಮನೋವೃತ್ತಿ ಮೂಡಿಸಲು 2 ದಿನಗಳ ಕಾರ್ಯಾಗಾರ ಏರ್ಪಡಿಸಿದ್ದರು.
ನಿರ್ಭಯಳ ಘಟನೆ ಹಿನ್ನೆಲೆಯಲ್ಲಿ ಮಹಿಳಾದೌರ್ಜನ್ಯದ ವಿರುದ್ಧ ಪ್ರಗತಿಪರ ಸಂಘಟನೆಗಳೊಂದಿಗೆ ದಿ: 27-7-2014ರಲ್ಲಿ ಬೃಹತ್ ಜಾಥಾ ನಡೆಸಿದ್ದರು .

ಸಾರ್ವಜನಿಕರಲ್ಲಿ ತಮ್ಮ ಆಪ್ತರ ನೆನಪಿನಲ್ಲಿ ಸಂಘದಲ್ಲಿ ದತ್ತಿ ಇಡಲು ಮತ್ತುಉಪನ್ಯಾಸಗಳನ್ನು ಹಮ್ಮಿಕೊಳ್ಳಲು ಸಹಕರಿಸುವಂತೆ ಕೋರಿದರು , ಇವರ ಮನವಿ ಮೇರೆಗೆ ಬಂದ ಕೋರಿಕೆಗಳ ಪರಿಗಣಿಸಿ ಶ್ರೀನಿವಾಸ್ ಕುಮಾರ್ ನೆನಪಿನ ಕವನ ಸ್ಪರ್ಧೆ ಮತ್ತು ಹೇಮಲತಾ ನೆನಪಿನ ಕಥಾಸ್ಪರ್ಥೆಗಳನ್ನು ಮಾಡಿ ಬಹುಮಾನಗಳನ್ನು ನೀಡಿದ್ದರು.

ಪ್ರಬಂಧ ಕಮ್ಮಟ ಮಾಡಿದ್ದರು
ಕಾವ್ಯ ಸ್ಪಂದನ ಕಾರ್ಯಕ್ರಮಗಳನ್ನು ಕವಿಗೋಷ್ಠಿಗಳನ್ನು ಮಾಡಿದ್ದರು.ಮಾಸ್ತಿ ,ಸಾವಿತ್ರಿ ಬಾಯಿ ಫುಲೆ , ಕೆ.ಎಸ್.ನರಸಿಂಹ ಸ್ವಾಮಿ ,ಎಂ.ಕೆ.ಇಂದಿರಾ.ಗೋಪಾಲಕೃಷ್ಣ ಅಡಿಗರು ,ಕಯ್ಯಾರ ಕಿಞ್ಞಣ್ಣ ರೈರವರ ನೆನಪಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು .
ಸಂಜ್ಯೋತಿರವರ ನಿರ್ದೇಶನದ ಅನಲ ಕಿರು ಚಿತ್ರ ಪ್ರದರ್ಶನ ಮತ್ತು ಸಂವಾದವನ್ನು ತುಮಕೂರು ವಿ.ವಿ.ಸಹಯೋಗದೊಂದಿಗೆ ಹಮ್ಮಿಕೊಂಡಿದ್ದರು.

3 ನೇ ಜಿಲ್ಲಾ ಲೇಖಕಿಯರ ಸಮ್ಮೇಳನವನ್ನು ಹಮ್ಮಿಕೊಂಡಿದ್ದರು .

ಸುಗುಣಾದೇವಿ ರವರ ನಂತರ , ಜೂನ್ 2019 ರಲ್ಲಿ ಸಂಘದ ಅಧ್ಯಕ್ಷ ರಾಗಿ ಬಂದಿರುವುದು ಜಿ.ಮಲ್ಲಿಕಾ ಬಸವರಾಜು ಆದ ನಾನು .
ದಿ:23-06-2019 ರಂದು ನಮ್ಮ ನೂತನ ಸಮಿತಿ ಅಸ್ತಿತ್ವಕ್ಕೆ ಬಂತು .ಅಂದಿನ ಕಾರ್ಯಕಮವನ್ನು ಕೇಂದ್ರ ಸಂಘದ ಅಧ್ಯಕ್ಷರಾದ ಉದ್ಘಾಟಿಸಿದರು.

ಲೇಖಕಿ ಆಶಾದೇವಿ ಎಂ.ಎಸ್. ರವರು “ಲೇಖಕಿಯರ ಸವಾಲುಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು .ಅಂದಿನಿಂದ ಈ ವರೆವಿಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ಮತ್ತುನಮ್ಮ ಕಾರ್ಯಕಾರಿ ಸಮಿತಿ ಸಹಕಾರದೊಂದಿಗೆ ಸುಮಾರು ಕಾರ್ಯಕ್ರಮಗಳನ್ನು ಮಾಡಿದ್ದು . ಕೆಲವು ಕಾರ್ಯಕ್ರಮ ಗಳನ್ನು ಇಲ್ಲಿ ನೆನಪಿಸಿಕೊಳ್ಳುವೆ .

ದಿ:07-07-2019 ರಂದು ಕಲೇಸಂ ತುಮಕೂರು
ಅಬೇತೋಸಂ ಮತ್ತು
ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಕೊರಟಗೆರೆ ತಾಲ್ಲೋಕು ಹೊಲತಾಳ್ ನಲ್ಲಿ ಮಹಿಳೆಯರಲ್ಲಿ ಓದುವ ಹವ್ಯಾಸ ಕಾರ್ಯಕ್ರಮ ಏರ್ಪಡಿಸಿದ್ದಾಗ , ಮಹಿಳೆಯರಲ್ಲಿನ ಓದುವ ಹವ್ಯಾಸದ ಬಗ್ಗೆ ನಟರಾಜು ಬೂದಾಳ್ ರವರುಉಪನ್ಯಾಸ ನೀಡಿದ್ದರು . ನನ್ನ ಮೆಚ್ಚಿನ ಪುಸ್ತಕ ಕುರಿತು ಲೇಖಕಿಯರು/ ವಿದ್ಯಾರ್ಥಿನಿಯರು ಮಾತನಾಡಿದ್ದರು .

ವಸುಂಧರಾ ಭೂಪತಿ ,ಲಲಿತಾ ನಾಯಕ್ ಉಪಸ್ಥಿತರಿದ್ದರು. ಒಂದು ನೂರಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು .
ದಿ:29-08-2019 ರಂದು
ತುಮಕೂರಿನ ಮಾರುತಿ ಶಾಲೆಯ ಮಕ್ಕಳಿಗಾಗಿ,ಜಿಲ್ಲೆಯ ಲೇಖಕಿಯರೊಂದಿಗೆ ಸಂವಾದ ಕಾರ್ಯಕ್ರಮ ಉಪನ್ಯಾಸ ಏರ್ಪಡಿಸಲಾಗಿತ್ತು.

ದಿ:02-10-2019 ರಂದು
ಜಿಕಸಾಪ ,ಇನ್ನರ್ ವ್ಹೀಲ್ ಸಹಯೋಗ ಪಡೆದು ಗಾಂದಿ ಜಯಂತಿ ಆಚರಣೆ ,ಉಪನ್ಯಾಸ ,ಕವಿಗೋಷ್ಠಿ ಮತ್ತು ವಾರಕ್ಕೊಮ್ಮೆ ಖಾದಿ ತೊಡುವ ಪ್ರತಿಜ್ಞೆ ಸ್ವೀಕರಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ನವಂಬರ್ 2019 ರಲ್ಲಿ ಕೇಳು ಮಗುವೆ ಕಥೆಯಾ ಎಂಬ ಸರಣಿ ಕಾರ್ಯಕ್ರಮ ವನ್ನು ರೂಪಿಸಿದ್ದು ,
ಪ್ರತಿ ಶನಿವಾರ ,ಆಯ್ದ ಕನ್ನಡ ಶಾಲೆಗೆ ಸಂಘದ ಪದಾಧಿಕಾರಿಗಳು , ಸದಸ್ಯರೊಂದಿಗೆ ಹೋಗಿ ಮಕ್ಕಳಿಗೆ ಕಥೆ ಹೇಳಿ ಬರುವ ಕಾರ್ಯಕ್ರಮ ಇದಾಗಿದ್ದು , ಜನವರಿ 2020 ರವರೆಗೂ ಈಗಾಗಲೇ 14 ಕಥೆಹೇಳುವ ಕಾರ್ಯಕ್ರಮ ಗಳಾಗಿದ್ದು ,ಕೊರೋನಾ ದೆಸೆಯಿಂದ ಲಾಕ್ ಡೌನ್ ಆದ ಕಾರಣ ಸಧ್ಯಕ್ಕೆ ನಿಲ್ಲಿಸಲಾಗಿದೆ .ಮತ್ತೆ ಶುರು ಮಾಡುವ ಹಾದಿಯಲ್ಲಿದ್ದೇವೆ .

ದಿ:16-03-2020 ರಂದು ,ಶಿವಮೊಗ್ಗ ಜಿಲ್ಲೆ ಉಡುತಡಿಯಲ್ಲಿ ಕೇಂದ್ರ ಸಂಘದವರು ಹಮ್ಮಿಕೊಂಡಿದ್ದ ಚಿಂಥನ ಮಂಥನ ಕಾರ್ಯಕ್ರಮಕ್ಕೆ ,ನಮ್ಮ ಜಿಲ್ಲಾ ಶಾಖೆಯಿಂದಾ ಪಾಲ್ಗೊಂಡು ಬನವಾಸಿ ಪ್ರವಾಸ ಮಾಡಿ ಬಂದೆವು.
ದಿ:29-03-2020 ರಂದು ದೇವರಾಯನ ದುರ್ಗದ ಜಾಲಾರದ ತೋಪಿನಲ್ಲಿ ,ಜಾಲಾರ ಹೂ ವೀಕ್ಷಿಸಿ ಹೂಕವಿತೆಗಳ ವಾಚನ ಮಾಡಿದೆವು
ದಿ:18-02-2020 ರಂದು ಜಿಲ್ಲಾ ಶಾಖೆ ಹಾಗೂ ಜಾಲಾರ ಪ್ರಕಾಶನದಿಂದ ಡಿ.ಎಸ್.ನಾಗಭೂಷಣ ರವರ ಗಾಂಧಿ ಕಥನ ಕೃತಿಯ ಮೂರನೇ ಅವೃತ್ತಿ ಬಿಡುಗಡೆ ಕಾರ್ಯಕ್ರಮ ಮಾಡಿದೆವು

ದಿ:30 ನವಂಬರ್ 2020 ರಲ್ಲಿ ಜೂಮ್ ನಲ್ಲಿ
ಕನ್ನಡಭಾಷೆ ಪ್ರಾಚೀನತೆ ಮತ್ತು ಇತಿಹಾಸ ಉಪನ್ಯಾಸದ ವೆಬಿನಾರ್ ಅನ್ನು ಮಾಡಲಾಯ್ತು. ಮರಿಯಮ್ ರವರು ಉಪನ್ಯಾಸ ಕೊಟ್ಟರು
ದಿ16-12-2029 ರಂದು ಜೂಮ್ ನಲ್ಲಿ
ರೈತ ಚಳುವಳಿ ಗೆ ಸಂಬಂಧಿಸಿದಂತೆ ಉಪನ್ಯಾಸ .ರೈತಪರ ಗೀತೆಗಳ ಗಾಯನ ಕವಿತಾಗಳ ವಾಚನ ದ ವೆಬಿನಾರ್ ಮಾಡಲಾಯ್ತು.

ಎನ್. ಇಂದಿರಮ್ಮ ರವರು ರೈತ ಚಳುವಳಿ ಮತ್ತುಹೊಸದಾಗಿ ಜಾರಿಗೆ ತಂದಿರುವ ರೈತ ಕಾಯ್ದೆಗಳು ಹೇಗೆ ರೈತರಿಗೆ ಮಾರಕವಾಗಿ ಎಂದು ವಿವರವಾಗಿ ತಿಳಿಸಿದರು.

ದಿ 29-12-2029 ರಂದು ,ಕಸಾಪ ,ಇನ್ನರ್ ವ್ಹೀಲ್ ಮರಳೂರು ಮತ್ತು ಕಲೇಸಂ ತುಮಕೂರು ಸಹಯೋಗದಲ್ಲಿ
ವಿಶ್ವಮಾನವ ದಿನಾಚರಣೆ ಮಾಡಲಾಯ್ತು .

ಈ ಮೊದಲೇ ಕಲೇಸಂ ತುಮಕೂರಿನಿಂದ
ಕುವೆಂಪುರವರ ಕಾದಂಬರಿಗಳಲ್ಲಿ ಸ್ತ್ರೀ ಸಂವೇದನೆ ವಿಷಯದ ಬಗ್ಗೆ ಹಮ್ಮಿಕೊಂಡಿದ್ದ
ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನುವಿತರಿಸಲಾಯ್ತು.

ಜನವರಿ – 2021ರಿಂದ ಪ್ರತಿ ಮಾಹೆ ಮೂರನೇ ಶನಿವಾರ ಮಧ್ಯಾಹ್ನ ಅರಿವಿನ ಪಯಣ ಎಂಬ ಸರಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದು , ಇದರ ಮೊದಲ ಹೆಜ್ಜೆಯಾಗಿ
ದಿ: 16-01-2021 ರಂದು ಎಂ.ಕೆ.ಇಂದಿರಾ ನೆನಪಿನ ಉಪನ್ಯಾಸ ವನ್ನ ಏರ್ಪಡಿಸಲಾಗಿತ್ತು

ಮೇಲ್ಕಂಡಂತೆ ಆಯಾ ಕಾಲದ

ಒತ್ತಡಗಳಿಗೆ ,ಸಂದರ್ಭಗಳಿಗೆ ,ಜೀವಪರ ಹೋರಾಟಗಳಿಗೆ ಸ್ಪಂದಿಸುತ್ತಲೇ ಸಾಹಿತ್ಯವನ್ನು ಜನರಿಗೆ
ತಲುಪಿಸಿದ ಹೆಗ್ಗಳಿಕೆ ಕಲೇಸಂ ತುಮಕೂರುಜಿಲ್ಲಾ ಶಾಖೆಯದು .ಸಂಘದ ಎಲ್ಲಾ ಕೆಲಸ ಕಾರ್ಯಗಳಿಗೆ
ನಿಮ್ಮೆಲ್ಲರ ಸಹಕಾರ ಶುಭಹಾರೈಕೆ ಕೋರುವೆ .ಲೇಖಕಿಯರ ಸಂಘ ನಿಮ್ಮದು .ಬನ್ನಿ ಕೈಜೋಡಿಸಿ .