Saturday, May 9, 2026
Google search engine
Home Blog Page 156

ತುರುವೇಕೆರೆ ಸಾ.ಶಿ.ದೇವರಾಜ್ ಜಿಲ್ಲಾ ಕಸಾಪ ಚುನಾವಣೆಗೆ ಸ್ಪರ್ಧೆ

0

Publicstory


ತುರುವೇಕೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಸೇವೆ ಸಲ್ಲಿಸಲು ಸಾಹಿತಿಗಳೇತರರಿಗೂ ಅವಕಾಶ ಕಲ್ಪಿಸುವಂತಾಗ ಬೇಕು; ಆ ನಿಟ್ಟಿನಲ್ಲಿ ತಾಲ್ಲೂಕಿನ ಸಾ.ಶಿ.ದೇವರಾಜ್ ಅವರು ಕೂಡ ಜಿಲ್ಲಾ ಕಸಾಪ ಸ್ಥಾನಕ್ಕೆ ಸ್ಪರ್ಧಿಯಾಗಿದ್ದಾರೆಂದು ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವಾನಾಥ್ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ಸ್ಪರ್ಧಿ ಸಾ.ಶಿ.ದೇವರಾಜ್ ಅವರ ಪ್ರಣಾಳಿಕೆ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಕಳೆದ 25 ವರ್ಷಗಳಿಂದ ನಾಡು, ನುಡಿ ಸೇವೆಯಲ್ಲಿ ಸದಾ ಸಕ್ರಿಯರಾಗಿರುವ ಇವರು ಸಾಹಿತ್ಯ ಕ್ಷೇತ್ರದ ಗಣ್ಯರೊಂದಿಗೆ ನಿಕಟ ಸಂಪರ್ಕ ಹೊಂದಿ ತುರುವೇಕೆರೆ ತಾಲ್ಲೂಕಿನಲ್ಲಿ ಅದ್ದೂರಿಯಾಗಿ 10 ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.

ಜಿಲ್ಲಾ ಕಸಾಪ ಚುನಾವಣಾ ಸ್ಪರ್ಧಿ ಸಾ.ಶಿ.ದೇವರಾಜ್ ಮಾತನಾಡಿ, ನಾನು ಲಯನ್ಸ್ ಕ್ಲಬ್ ಅಧ್ಯಕ್ಷನಾಗಿ ಸಾವಿರಾರು ನೇತ್ರ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರಗಳನ್ನು ಏರ್ಪಡಿಸದ್ದಲ್ಲದೆ ಸ್ವಯಂ ಸುಮಾರು 20 ಬಾರಿ ರಕ್ತದಾನ ಮಾಡಿದ್ದೇನೆ ಎಂದರು.

ತುರುವೇಕೆರೆಯಲ್ಲಿ ಮೂರು ಬಾರಿ ರಾಜ್ಯ ಮಟ್ಟದ ನಾಟಕೋತ್ಸವನ್ನು ಆಯೋಜಿಸಿ ಯಶಸ್ವಿಯಾಗಿ ನಾಟಕೋತ್ಸವ ಮಾಡಿದ್ದೇನೆ. ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ಆಳ್ವಾಸ್ ನುಡಿಸಿರಿಯನ್ನು 2 ಬಾರಿ ಯಶಸ್ವಿಯಾಗಿ ನಡೆಸಿದ್ದೆ ಎಂದರು.

ತುರುವೇಕೆರೆಯಲ್ಲಿ ನಿರ್ಮಾಣವಾಗಿರುವ ಕನ್ನಡ ಭವನಕ್ಕೆ 2 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದು. ನಾನು ಕಸಾಪ ಅಧ್ಯಕ್ಷನಾಗಿದ್ದಾಗ ಹಲವಾರು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನೂರಾರು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದಾನೆ.
ಈಗಾಗಲೇ ನನಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಉತ್ತಮ ಸಿ.ಆರ್.ಪಿ ಪ್ರಶಸ್ತಿ, ರೋಟರಿ ಸಂಸ್ಥೆಯಿಂದ ಸಮಾಜ ಸೇವಾ ಪ್ರಶಸ್ತಿ ಪಡೆದಿದ್ದು. ತಾಲ್ಲೂಕಿನ ಎಲ್ಲಾ ಜಾತಿ, ಜನಾಂಗ ಮತ್ತು ಕನ್ನಡ ಸಾಹಿತ್ಯ ಪ್ರೇಮಿಗಳ ವಿಶ್ವಾಸ ಮತ್ತು ಎಲ್ಲಾ ರಾಜಕೀಯ ಪಕ್ಷದವರ ಬೆಂಬಲದಿಂದ ಜಿಲ್ಲಾ ಕಸಬಾ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು ಒಂದು ವೇಳೆ ನಾನು ಗೆದ್ದರೆ.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಮ್ಮೇಳನಗಳ ಸ್ವರೂಪ ಬದಲಾಯಿಸುತ್ತೇನೆ ಎಂದು ಹೇಳಿದರು.

ತುಮಕೂರಿನಲ್ಲಿ ರಾಜ್ಯ ಮಟ್ಟದ 69 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದು ಹಲವಾರು ವರ್ಷ ಕಳೆದರೂ ಸಹ ಇದುವೆರೆಗೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಜರುಗಿಲ್ಲಆದ್ದರಿಂದ ಎಲ್ಲಾ ಹಿರಿಯ ಸಾಹಿತಿಗಳು ಮತ್ತು ಜನಪ್ರತಿನಿಧಿಗಳ ಮಾರ್ಗದರ್ಶನ ಪಡೆದು ಸಾಹಿತ್ಯ ಮ್ಮೇಳನ ಆಯೋಜಿಸುವುದು. ತುಮಕೂರಿನ ಕಸಾಪ ಭವನವನ್ನು ಮೇಲ್ದರ್ಜೆಗೆ ಏರಿಸುತ್ತೇನೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿಅಜೀವ ಸದಸ್ಯರ ಸಂಖ್ಯೆ ಹೆಚ್ಚಿಸುವುದು. ಇವುಗಳನ್ನು ಕಾರ್ಯರೂಪಕ್ಕೆ ತರಲು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕಸಾಪ ಮತದಾರರು ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಂಕರೇಗೌಡ, ಕಂಚೀರಾಯಪ್ಪ, ರಾಮಚಂದ್ರು, ನಂರಾಜುಮುನಿಯೂರು ಇದ್ದರು.

ಸಣ್ಣ ಸೂಜಿ

0

ಡಾ// ರಜನಿ ಎಂ

ಆಗಿಹಳು
ತಣ್ಣಗೆ

ತುಂಟ ನಗುವಿಲ್ಲ
ಛೇಡಿಕೆ ಇಲ್ಲ

ಬೇಗ ಹೋದಳೇನೋ
ಮುನಿಸಿ ಕೊಂಡು…

ಉಹೂ …..
ಹುಸಿಮುನಿಸು
ಇರಬೇಕು

ಹೊಲಿದದ್ದು ಸಾಕು
ಅನಿಸಿರಬೇಕು

ಕತ್ತರಿಸಿಕೊಂಡು
ಬಂಧನಗಳ

ಮಡಚಬೇಡ ಬಟ್ಟೆ
ಹಾಗೆ …ಹೀಗೆ…

ಕಾದಿಹಳು ಅಲ್ಲಿಂದಲೇ
ತನ್ನ ಸೂಜಿಗಣ್ಣಿಂದ…

ಅಗೋ
ಮುಡಿದು
ಸೂಜಿಮಲ್ಲಿಗೆ

ಕವಯತ್ರಿ ಲತಾ ಕುಲಕರ್ಣಿಯವರಿಗೆ ನಮನಗಳು. ವಿದಾಯ ಹೇಳುತ್ತಾ…. ಅವರ ಸ್ಮರಣೆಗಾಗಿ ಸಹೋದ್ಯೋಗಿ ರಜನಿ ಅವರ ಲೇಖನಿಯಿಂದ ಹೊರಹೊಮ್ಮಿದ ಕವಿತೆ.

ಬಹುರೂಪಿ ಪುಸ್ತಕ ಮಳಿಗೆ ಉದ್ಘಾಟನೆಗೆ ಕ್ಷಣಗಣನೆ

Publicstory


ಬೆಂಗಳೂರು: ಅತ್ಯಂತ ಕ್ಲುಪ್ತಕಾಲದಲ್ಲೇ ನಾಡಿನ‌ ಜನಮನ ಸೂರೆಗೊಂಡಿರುವ ಬಹುರೂಪಿ ಪ್ರಕಾಶನದ ಪುಸ್ತಕ ಮಳಿಗೆ ಉದ್ಘಾಟನೆಗೆ ಕ್ಷಣಗಣೆ ಆರಂಭಗೊಂಡಿದೆ.

ನಾದ ಗಾರುಡಿಗ, ನಾಕುತಂತಿಯ ದ.ರಾ.ಬೇಂದ್ರೆ ಅವರ ಜನ್ಮದಿನದ ಸಂಭ್ರಮವಾದ (ಜ.31 )ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಹುರೂಪಿ ಪುಸ್ತಕ ಹಬ್ ಉದ್ಘಾಟನೆಗೊಳ್ಳಲಿದೆ. ಅವಧಿಯಲ್ಲೂ ಸಹ ಇದರ ವರದಿ, ಚಿತ್ರಗಳು ಪ್ರಸಾರಗೊಳ್ಳಲಿವೆ.

ಬೆಂಗಳೂರಿನ ಸಂಜಯನಗರದ ಬಸಪ್ಪ ಲೇಔಟ್ ನ ಕಾಂತಿ ಸ್ವೀಟ್ಸ್ ಪಕ್ಕದ ನಾಕುತಂತಿ ಕಟ್ಟಡದಲ್ಲಿ ಮಳಿಗೆ ಆರಂಭವಾಗುತ್ತಿದೆ.

ಹೊಸ ತಲೆಮಾರು, ಹಳೆ ತಲೆಮಾರಿನ ಸಾವಿರಾರು ಪುಸ್ತಕಗಳು ಗಮನ ಸೆಳೆಯುತ್ತಿವೆ. ಬಹುರೂಪಿಯ ಪ್ರಕಟಣೆಗಳಲ್ಲದೇ ಹಲವು ಪ್ರಕಟಣೆಗಳ ಖ್ಯಾತ ನಾಮರ ಪುಸ್ತಕಗಳು ದೊರೆಯಲಿವೆ.

ನಾಡಿನ ಅನೇಕ ಲೇಖಕರು, ಸಾಹಿತಿಗಳು, ಪತ್ರಕರ್ತರು, ಹೋರಾಗಾರರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ರೈತರು, ದಕ್ಷಿಣ ಭಾರತವೇ ಅಲ್ಪಸಂಖ್ಯಾತ – ನಟರಾಜ್ ಬೂದಾಳ್

Publicstory


Tumkuru: ‘ಎರಡು ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ರೈತರ ನೆರವಿಗೆ ಶಕ್ತಿ ಬರುತ್ತಿಲ್ಲ. ಹೀಗಾಗಿ ರೈತರು, ಅಲೆಮಾರಿಗಳು, ಬುಡಕಟ್ಟುಗಳು, ಮಹಿಳೆಯರು ಮತ್ತು ಇಡೀ ದಕ್ಷಿಣ ಭಾರತವೇ ಅಲ್ಪಸಂಖ್ಯಾತವಾಗಿದ್ದು ಇವರ ನೆರವಿಗೆ ಯಾರೂ ಬರುತ್ತಿಲ್ಲ’ ಎಂದು ಹಿರಿಯ ವಿಮರ್ಶಕ ಡಾ. ನಟರಾಜ್ ಬೂದಾಳ್ ವಿಷಾದ ವ್ಯಕ್ತಪಡಿಸಿದರು.

ಬುಡಕಟ್ಟು ಜನರ ದನಿಗೆ ದನಿಗೂಡುತ್ತಿಲ್ಲ. ಮಹಿಳೆಯರು ಅಲ್ಪಸಂಖ್ಯಾತರಾಗಿಯೇ ಉಳಿದಿದ್ದಾರೆ. ಹಾಗೆಯೇ ಅವರು ಮಾತನಾಡುವ ಭಾಷೆ, ಅಭಿವ್ಯಕ್ತಿ ಲೆಕ್ಕಕ್ಕೇ ಇಲ್ಲದಂತಹ ಪರಿಸ್ಥಿತಿ ಇದೆ. ಲೆಕ್ಕಕ್ಕೆ ಸಿಗದಂತೆ ನೋಡಿ ಕೊಳ್ಳುವ ಜಾಣ್ಮೆಯೂ ಮುಂದುವರಿದಿದೆ. ಅಲ್ಪಸಂಖ್ಯಾತ ದಕ್ಷಿಣ ಭಾರತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಯಾರ ಗಮನವೂ ಇತ್ತ ಕಡೆ ಇಲ್ಲವಾಗಿದೆ ಎಂದು ಹೇಳಿದರು.

ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ರವಿಕುಮಾರ್ ನೀಹ ಅವರು ಬರೆದಿರುವ ಕೆ.ಬಿ. ಕಾವ್ಯ: ಕಣ್ಣು ಧರಿಸಿ ಕಾಣಿರೋ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ನಾವು ಓದುವ ಓದು ನಮ್ಮ ದಾಗಿಲ್ಲ. ನಾವು ಓದುತ್ತಿರುವುದು ನಮ್ಮದಲ್ಲದ ಬೇರೆ ಪಠ್ಯ.ಹಾಗಾಗಿ ಕಣ್ಣು ಧರಿಸಿಕೊಂಡು ಓದಬೇಕಾದ ಅನಿವಾರ್ಯತೆ ಇದೆ. ಮಂಟೇಸ್ವಾಮಿ, ಮಲೆ ಮಹಾದೇಶ್ವರ, ಜುಂಜಪ್ಪ ಕಾವ್ಯ ನಮ್ಮದಾದರೂ ಇವುಗಳನ್ನು ಓದುವ ಕ್ರಮ ನಮ್ಮದಾಗಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮದೇ ಕ್ರಮದಲ್ಲಿ ಓದಬೇಕು ಎಂದು ಸಲಹೆ ನೀಡಿದರು.

ಇಲ್ಲಿ ನಮ್ಮದೇ ಅಕ್ಷರ, ನಮ್ಮದೇ ಪಠ್ಯವನ್ನು ನಮ್ಮದೇ ರೀತಿಯಲ್ಲಿ ಓದುತ್ತಿಲ್ಲ. ಅಕ್ಷರ ಮತ್ತು ಪಠ್ಯ ಮತ್ತು ಓದನ್ನು ನಿಯಂತ್ರಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಹಾಗಾಗಿ ಓದು ನಮ್ಮದಾಗಬೇಕು. ಆಗ ಪಠ್ಯ ಮತ್ತು ಅಕ್ಷರ ನಮ್ಮದಾಗುತ್ತದೆ. ಮಂಟೇಸ್ವಾಮಿ, ಕಾವ್ಯದಲ್ಲಿ ಬರುವ ನಾಯಕ ತನ್ನದೇ ಲೋಕ ನಿರ್ಮಿಸಿ ದೇವರನ್ನು ಸೃಷ್ಟಿಸುತ್ತಾರೆ. ಅವರಿಗೆ ವಿವಾಹವನ್ನು ಮಾಡುತ್ತಾರೆ. ತಾನೇ ಧರಗೆ ದೊಡ್ಡವನಾಗಿ ಮೆರೆಯುತ್ತಾನೆ. ಇಂತಹ ಕ್ರಿಯೆಗಳು ನಡೆಯಬೇಕು. ಆಗ ಲೋಕ ನಮ್ಮದಾಗುತ್ತದೆ ಎಂದು ಹೇಳಿದರು.

ತುಮಕೂರು ಜಿಲ್ಲೆ ಅತ್ಯಂತ ಪ್ರಮುಖ ಲೇಖಕರು ಮತ್ತು ಗಟ್ಟಿ ಸಾಹಿತ್ಯವನ್ನು ನೀಡಿದೆ ಎಂದು ಬೇರೆ ಕಡೆ ಹೇಳುವುದು ರೂಢಿಯಲ್ಲಿದೆ. ಹಾಗೆಯೇ ಇಲ್ಲಿ ಅಷ್ಟೇ ಭಿನ್ನಧ್ವನಿಯೂ ಇದೆ. ಕೆ.ಬಿ.ಸಿದ್ದಯ್ಯ ಕಾವ್ಯ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಅದು ಕನ್ನಡ ಸಾಹಿತ್ಯ ಲೋಕದಲ್ಲಿ ಬಹುಮುಖ್ಯ ಕಾವ್ಯವಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಹಿರಿಯ ಜನಪರ ಚಿಂತಕ ಕೆ.ದೊರೈರಾಜ್, ಲೇಖಕ ಡಾ.ರಾಜಪ್ಪ ದಳವಾಯಿ, ಲೇಖಕಿ ಮಲ್ಲಿಕಾ ಬಸವರಾಜು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ, ಯುವ ಮುಖಂಡ ಡ್ಯಾಗೇರಹಳ್ಳಿ ವಿರೂಪಾಕ್ಷ, ಉಪನ್ಯಾಸಕ ಕೊಟ್ಟಶಂಕರ್, ಗುಬ್ಬಚ್ಚಿ ಸತೀಶ್, ಕೃತಿಕಾರ ಡಾ. ರವಿಕುಮಾರ್ ನೀಹ ಇದ್ದರು.

ಬದಲಾವಣೆ ಏಕೆ ಸಾಧ್ಯವಿಲ್ಲ ಎಂದ ಪ್ರೊ.ಪರಶುರಾಮ್

Publicstory


ತುಮಕೂರು: ಯುವಜನತೆ ಸ್ವಯಂ ಜಾಗೃತರಾದಾಗ ಮಾತ್ರ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಡಾ. ಕೆ.ಜಿ. ಪರಶುರಾಮ್
ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಕೇಂದ್ರ ಯುವ ಕಾರ್ಯ ಹಾಗೂ ಕ್ರೀಡಾ
ಸಚಿವಾಲಯ ನೆಹರು ಯುವ ಕೇಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಹಾತ್ಮ
ಗಾಂಧಿ ಯುವ ಸಂಘ, ಪ್ರಬುದ್ಧ ಭಾರತ ಏಕತಾ ಟ್ರಸ್ಟ್, ಸ್ನಾತ್ತಕೋತ್ತರ ಸಮಾಜ
ಕಾರ್ಯ ಅಧ್ಯನ ಮತ್ತು ಸಂಶೋಧನಾ ವಿಭಾಗ ತುಮಕೂರು ವಿಶ್ವವಿದ್ಯಾನಿಲಯ
ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಯುವ
ಮುಂದಾಳತ್ವ ಸಮುದಾಯ ಅಭಿವೃದ್ಧಿ ಹಾಗೂ ಯುವ ಸಂಘಗಳ ಅಭಿವೃದ್ಧಿ
ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದರು.

ಯುವಜನತೆ ವಿದ್ಯಾರ್ಥಿ
ದಿಸೆಯಲ್ಲೇ ಅಭಿವೃದ್ಧಿಪರ ಆಲೋಚನೆಯನ್ನು ರೂಢಿಸಿಕೊಳ್ಳಬೇಕು ಎಂದರು.

ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲಿ
ಸಂಘಟನಾತ್ಮಕವಾಗಿ ಯುವಜನತೆ ಗ್ರಾಮೀಣ ಅಭಿವೃದ್ಧಿಗೆ ಮುಂದಾಗಬೇಕು.
ಸಂಶೋಧನ್ಮಾಕ ಮತ್ತು ವಿಮರ್ಶತ್ಮಾಕ ಅಧ್ಯಯನ ಮಾಡುವ ಕಡೆ ಹೆಚ್ಚಿನ
ಒತ್ತು ನೀಡಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಯುವ ಸಂಘಗಳ ಮೂಲಕ ಸಂಘಟನಾತ್ಮಕವಾಗಿ ಜನರಿಗೆ ಶಿಕ್ಷಣ,ಆರೋಗ್ಯ, ಕಾನೂನು ಸೇರಿಂದತೆ ಹಲವು ಸರಕಾರದ ಯೋಜನೆಗಳ ಮಾಹಿತಿಯನ್ನು ತಲುಪಿಸಬಹುದಾಗಿದೆ. ಆಗಾಗಿ ಆವಕಾಶ ವಂಚಿತರಿಗೆ ಆವಕಾಶ ಸೃಷ್ಟಿಯಾಗುತ್ತದೆ. ಮಾಹಿತಿ ಕೊರತೆಯಿಂದ ಎಷ್ಟೊ ಮಂದಿ
ಆವಕಾಶವಂಚಿತರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರತಿಯೊಬ್ಬರು ನಿಸ್ವಾರ್ಥ
ಸೇವಾಮನೋಬಾವ ರೂಢಿಸಿಕೊಳ್ಳಬೇಕು ಎಂದರು.

ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಸಹಾಯಕ ನಿರ್ದೇಶಕ ಡಾ. ಕೆ. ನಾಗಣ್ಣ
ಮಾತನಾಡಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅರ್ಥಿಕವಾಗಿ
ಸಬಲರಾಗುವ ಜತೆಗೆ ಗ್ರಾಮೀಣ ಅರ್ಥಿಕತೆಗೆ ಚೈತನ್ಯ ತುಂಬಬಹುದಾಗಿದೆ. ಹೈನುಗಾರಿಕೆ
ಲಾಭದಾಯಕವಾಗಿದೆ. ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ನಾವು
ರೂಪಿಸಿಕೊಂಡಿರುವ ಯೋಜನೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಬಾ.ಹ ರಮಾಕುಮಾರಿ ಮಾತನಾಡಿ
ಯುವಜನತೆ ಯುವ ಸಂಘಗಳ ಮೂಲಕ ಸಾಹಿತ್ಯತ್ಮಾಕ ಚಟುವಟಿಕೆಯಲ್ಲಿ
ತೊಡಗಿಸಿಕೊಳ್ಳುವ ಜತೆಗೆ ಪ್ರಶ್ನಿಸುವ ಮನೋಬಾವ ರೂಡಿಕೊಳ್ಳಬೇಕು ಎಂದು ಕರೆ ನೀಡಿದರು.

ಅಂತರಾಷ್ಟ್ರೀಯ ಕಬಡ್ಡಿ ತರಬೇತುದಾರ ಮೊಹಮ್ಮದ್ ಇಸ್ಮಾಯಿಲ್, ಜನಸಂಗ್ರಾಮ
ಪರಿಷತ್ತು ಅಧ್ಯಕ್ಷ ಎನ್.ಎಸ್. ಪಂಡಿತ್ ಜವಾಹರ್, ವಿದ್ಯೋದಯ ಕಾನೂನು ಕಾಲೇಜಿನ
ಸಹಾಯಕ ಪ್ರಾದ್ಯಾಪಕಿ ಕೆ.ಎಸ್. ಪುಷ್ಪ ವಿಶೇಷ ಉಪಾನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನೆಹರು ಯುವಕೇಂದ್ರದ ಎನ್‍ವೈವಿಗಳಾದ ವಿಜಯ್‍ಕುಮಾರ್,
ಅನಿತಾ, ರಶ್ಮಿ ಇನ್ನಿತರರು ಹಾಜರಿದ್ದರು.

ಇಂದು ತುಮಕೂರಿನಲ್ಲಿ ಉಪವಾಸ ಸತ್ಯಾಗ್ರಹ

Publicstory


Tumkuru: ಸಂಯುಕ್ತ ಕಿಸಾನ್ ಮೋರ್ಚಾದ ಕರೆಯಂತೆ ರಾಜ್ಯದಲ್ಲೂ ಗಾಂಧೀಜಿ ಹುತಾತ್ಮರಾದ ದಿನವಾದ ಜನವರಿ 30ರಂದು ಶನಿವಾರ ಉಪವಾಸ ಸತ್ಯಾಗ್ರಹವನ್ನು ನಗರದ ಕೇಂದ್ರದ ಟೌನ್ ಹಾಲ್ ವೃತ್ತದಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ, ಉಪವಾಸ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.

ಕನಾ೯ಟಕ ರಾಜ್ಯ ರೈತ ಸಂಘದ ಎರಡು ಬಣಗಳು, ಕೆ.ಪಿ.ಆರ್. ಎಸ್, ಆರ್.ಕೆ.ಎಸ್., ಎ.ಐ.ಕೆ.ಎಸ್., ಜೆಸಿಟಿಯು, ವಿದ್ಯಾರ್ಥಿ-ಯುವಜನ ಸಂಘಟನೆ,ದಲಿತ ಸಂಘಟನೆಗಳು, ಕೊಳಗೇರಿ ಹಿತ ರಕ್ಷಣಾ ಸಮಿತಿ, ಮಹಿಳಾ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ನೇತೃತ್ವನೀಡಲಿವೆ.

ಆದ್ದರಿಂದ ಮುಖಂಡರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆಗಳ ಪರವಾಗಿ ದೊರೈರಾಜು, ಸಿ. ಯತಿರಾಜು, ಬಿ. ಉಮೇಶ್,
ಎ. ಗೋವಿಂದರಾಜು, ಶಂಕರಪ್ಪ,
ಕೆ.ಎಸ್. ಧನಂಜಯಾರಾಧ್ಯ, ಆಜ್ಜಪ್ಪ, ಎಸ್.ಎನ್. ಸ್ವಾಮಿ, ಕಂಬೇಗೌಡ,
ಎ. ನರಸಿಂಹಮೂತಿ೯, ಡಾ. ಆರುಂಧತಿ, ಡಾ.ಬಸವರಾಜು,
ಪಿ.ಎನ್.ರಾಮಯ್ಯ, ಸೈಯದ್ ಮುಜೀಬ್, ಗಿರೀಶ, ಮಂಜುಳ,
ಈ.ಶಿವಣ್ಣ, ಜಿ. ದಶ೯ನ್, ಆಶ್ವಿನಿ ಮುಂತಾದವರು ವಿನಂತಿಸಿದ್ದಾರೆ.

ಅಮ್ಮ, ಮಗ ತಡರಾತ್ರಿ ಧರಣಿ

Publicstory


ತುರುವೇಕೆರೆ: ವಾಸದ ಮನೆಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆಂದು ಆರೋಪಿಸಿ ತಾಲ್ಲೂಕಿನ ಕಸಬಾ ವ್ಯಾಪ್ತಿಯ ನಾಯಕನಘಟ್ಟದ ತಾಯಿ ದ್ರಾಕ್ಷಣಮ್ಮ ಮಗ ಕಿರಣ್ ಇಬ್ಬರೇ ಪಟ್ಟಣದ ಬೆಸ್ಕಾಂ ಕಚೇರಿ ಎದುರು ಶುಕ್ರವಾರ ತಡ ರಾತ್ರಿವರೆಗೂ ಧರಣಿ ನಡೆಸುತ್ತಿದ್ದಾರೆ.

ತಾಲ್ಲೂಕಿನ ನಾಯಕನಘಟ್ಟದ ಕಾಲೋನಿಯಿಂದ ಪೂರ್ವಕ್ಕೆ ನಾಲ್ಕು ಕಂಬದ ಹಂತಕ್ಕ ನಮ್ಮ ಮನೆಯಿದೆ. ಈ ಮನೆಗೆ ಎಕೆಎಲ್-275 ವಿದ್ಯುತ್ ಮೀಟರ್ ನಂಬರ್ ಸಹ ಇದೆ. ನಮ್ಮ ಮನೆ ಬಿಟ್ಟು ಗ್ರಾಮದ ಎಲ್ಲ ಮನೆಗಳಿಗೂ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಇದೇ ರೀತಿ ನಮ್ಮ ಮನೆಗೂ ಸಂಪರ್ಕ ಕಲ್ಪಿಸುವಂತೆ 2019ರಿಂದ ಬೆಸ್ಕಾಂ ಅಧಿಕಾರಿಗಳಿಗೆ ಅರ್ಜಿ ಕೊಟ್ಟರೂ ಸಂಬಂಧಪಟ್ಟವರು ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹಾಗಾಗಿ ನಮ್ಮ ಮನೆಗೂ ನಿರಂತರ ಜ್ಯೋತಿ ಕಲ್ಪಿಸುವವರೆಗೂ ನಾವು ರಾತ್ರಿ ಇಡೀ ಕಚೇರಿ ಎದುರು ಧರಣಿ ಮಾಡುವುದಾಗಿ ಧರಣಿ ನಿರತ ಮಹಿಳೆ ದ್ರಾಕ್ಷಣಮ್ಮ ಸಹಾಯಕತೆ ವ್ಯಕ್ತಪಡಿಸಿದರು.

ದಲಿತ ಕುಂದುಕೊರತೆ ಸಭೆ ಬಹಿಷ್ಕಾರ

Publicstory


ತುರುವೇಕೆರೆ : ದಲಿತರ ಸಮಸ್ಯೆಗಳನ್ನು ಆಲಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ದಲಿತರ ಬಗ್ಗೆ ತಾತ್ಸಾರ ಧೋರಣೆ ಹೊಂದಿದ್ದಾರೆಂದು ತಾಲ್ಲೂಕು ದಲಿತ ಮುಖಂಡರು ಆರೋಪಿಸಿ ತಾಲ್ಲ್ಲೂಕು ಸಮಾಜ ಕಲ್ಯಾಣ ಇಲಾಖೆಯು ಗುರುವಾರ ಹಮ್ಮಿಕೊಂಡಿದ್ದ ದಲಿತರ ಕುಂದುಕೊರತೆ ಸಭೆಯನ್ನು ಬಹಿಷ್ಕರಿಸಿದರು.

ನಿಗಧಿತ ಸಮಯಕ್ಕೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯಲ್ಲಿ ದಲಿತರ ಕುಂದುಕೊರತೆ ಸಭೆ ಆರಂಭಗೊಂಡಿತ್ತು.
ದಲಿತರ ಕುಂದು ಕೊರತೆ ಸಭೆ ನಡೆಸಿ ಒಂದು ವರ್ಷವಾಗಿದೆ. 2017ರಲ್ಲಿ ನಡೆದಿದ್ದು ಸಭೆಯ ನಡಾವಳಿಗಳನ್ನೇ ಸದರಿ ಸಭೆಗೆ ನೀಡಿದಾಗ ಸಭೆಯಲ್ಲಿ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

ಕಳೆದ ವರ್ಷ ಸಭೆಯಲ್ಲಿ ಮಾಡಲಾದ ನಡಾವಳಿಗಳು ಏನಾದವು. ಸಭೆಯಲ್ಲಿ ಚರ್ಚಿತವಾದ ಯಾವ ಕೆಲಸಗಳೂ ಚಾಲನೆಯಾಗಿಲ್ಲ.

ಹಳೆಯ ನಡಾವಳಿಗಳನ್ನು ಈ ಸಭೆಯಲ್ಲಿ ಕೊಟ್ಟು ದಲಿತರನ್ನು ದಿಕ್ಕು ತಪ್ಪಿಸಲು ತಾಲ್ಲೂಕು ಆಡಳಿತ ಮುಂದಾಗಿದೆ. ಕಾಟಾಚಾರದ ಸಭೆ ನಡೆಸುವುದು ಬೇಡ. ಜಿಲ್ಲಾಧಿಕಾರಿ ಮತ್ತು ಎಸಿಯವರು ಬಂದಾಗ ಸಭೆಗೆ ಭಾಗವಹಿಸುತ್ತೇವೆ ಅಲ್ಲಿಯವರೆವಿಗೂ ಸಭೆಗೆ ಪಾಲ್ಗೊಳ್ಳುವುದಿಲ್ಲವೆಂದು ಎಲ್ಲ ದಲಿತ ಮುಖಂಡರು ಸಭೆ ಬಹಿಷ್ಕರಿಸಿ ಹೊರ ನಡೆದರು.

ಎಪಿಎಂಸಿ ಸದಸ್ಯ ವಿ.ಟಿ.ವೆಂಕಟರಾಂ ಮಾತನಾಡಿ, ಪ್ರತಿ ಸಭೆಯಲ್ಲಿ ಮಾಡುವ ಠರಾವು, ಕ್ರಮಗಳು ಕಡತಗಳಲ್ಲೇ ದೂಳು ಹಿಡಿಯುತ್ತವೆ. ಇದು ಅಧಿಕಾರಿಗಳು ದಲಿತರಿಗೆ ಮಾಡುವ ದ್ರೋಹವಾಗಿದೆ. ನಿಮ್ಮ ಮೇಲೆ ವಿಶ್ವಾಸ, ನಂಬಿಕೆಯಿಲ್ಲ.

ತಾಲ್ಲೂಕಿನಲ್ಲಿ ಅಂಬೇಡ್ಕರ್ ಭವನಗಳು ಮಂಜೂರಾಗಿ ಹಲವು ವರ್ಷಗಳೇ ಕಳೆದರೂ ಅದರ ಬಗ್ಗೆ ದಾಖಲೆಯಿಲ್ಲ. ಹೆಣ್ಣು ಮಕ್ಕಳ ಹಾಸ್ಟೆಲ್ಗೆ ಸುವ್ಯವಸ್ಥಿತ ಕಟ್ಟಡ ಹಾಗು ಮೂಲಸೌಕರ್ಯಗಳಿಲ್ಲ. ಇಲ್ಲಿನ ಅಕ್ರಮಗಳ ಬಗ್ಗೆ ದ್ವನಿ ಎತ್ತಿದರೆ ಕಟ್ಟಡ ಕಾಮಗಾರಿಯ ಕಡತಗಳೆ ಕಾಣೆಯಾಗುತ್ತವೆ‌ ಎಂದರು.

ದಲಿತರು ಹಾಗು ದಲಿತ ನೌಕರರ ಬಗ್ಗೆ ಅನ್ಯಾಯ ಮಾಡಿದವರ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಇಲ್ಲಿನ ಅಧಿಕಾರಿಗಳ ಬಗ್ಗೆ ದಲಿತರಲ್ಲಿ ವಿಶ್ವಾಸವಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಕಮಿಷನ್ ಅಥವಾ ಜಂಟಿಕಮಿಷನ್ ಬರಲಿ ಸಭೆಗೆ ಭಾಗವಹಿಸುವೆವು. ಇಲ್ಲವಾದರೆ ಇಂತಹ ಅವ್ಯವಸ್ಥೆಯ ಖಂಡಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು‌ ಎಂದರು.

ತಾಲ್ಲೂಕಿನ ಯಾವುದೇ ಇಲಾಖೆಯ ಅಧಿಕಾರಿಗಳು ದಲಿತರ ಸಮಸ್ಯೆಗಳಿಗೆ ಸ್ಪಂದಿಸದೆ ಶ್ರೀಮಂತರ, ಪ್ರಭಾವಿಗಳ ಪರ ಕೆಲಸ ಮಾಡುತ್ತಾರೆ. ಈ ಬಗ್ಗೆ ತಾಲ್ಲೂಕು ದಸಂಸ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡು ಅಧಿಕಾರಿಗಳ ಅಕ್ರಮ ಹಾಗು ದಲಿತ ವಿರೋಧಿ ಧರಣೆಯನ್ನು ಬಯಲಿಗೆಳೆಯಲಾಗುವುದು ಎಂದು ಎಚ್ಚರಿಸಿದರು.

ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಎದುರು ದಲಿತ ವಿರೋಧಿ ಅಧಿಕಾರಿಗಳಿಗೆ ದಿಕ್ಕಾರ ಕೂಗಿ, ಅಂಬೇಡ್ಕರ್ ಪರ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಎಪಿಎಂಸಿ ಸದಸ್ಯರುಗಳಾದ, ನರಸಿಂಹಣ್ಣ, ವಿ.ಟಿ.ವೆಂಕಟರಾಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮಂತಯ್ಯ, ಮುಖಂಡರುಗಳಾದ ದಂಡಿನಶಿವರಕುಮಾರ್, ಬಾಬುಕೊಂಡಜ್ಜಿ, ಡಾ.ಚಂದ್ರಣ್ಣ, ತಿಮ್ಮೇಶ್, ಮಧುಸಿದ್ದಾಪುರ, ಜಗದೀಶ್ ಉಪಸ್ಥಿತರಿದ್ದರು.

ತುರುವೇಕೆರೆ ಮೀನುಗಾರರಿಗೆ ಶಾಸಕ ಮಸಾಲ ಜಯರಾಂ ಹೇಳಿದ್ದೇನು…

Publicstory


ತುರುವೇಕೆರೆ: ಮೀನುಗಾರರು ಮತ್ತು ಅವರ ಕುಟುಂಬದ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗ ಬೇಕೆಂದು ಶಾಸಕ ಮಸಾಲಜಯರಾಂ ಹೇಳಿದರು.

ಪಟ್ಟಣದಲ್ಲಿ ನಡೆದ ರಾಜ್ಯ ವಲಯ ಯೋಜನೆಯಡಿ ಆಯ್ಕೆಯಾದ ತಾಲ್ಲೂಕಿನ ಫಲಾನುಭವಿಗಳಿಗೆ ಮೀನು ಹಿಡಿಯುವ ದೋಣಿ, ಹುಟ್ಟು ಸೇರಿದಂತೆ ಇತರೆ ಸಲಕರಣೆಗಳನ್ನು ವಿತರಿಸುವ ಸಮಾರಂಭದಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ಹೇಮಾವತಿ ನಾಲಾ ನೀರು ಸಂಮೃದ್ಧವಾಗಿ ಹರಿಯುತ್ತಿರುವುದರಿಂದ ಮಲ್ಲಾಘಟ್ಟ, ವಡವಘಟ್ಟ, ಕೊಳಾಲ, ತಂಡಗ, ಸಂಪಿಗೆ, ಸೂಳೇಕೆರೆ, ತುರುವೇಕೆರೆ, ಮಾಯಸಂದ್ರ, ಸಾರಿಗೇಹಳ್ಳಿ ಸೇರಿದಂತೆ ಅನೇಕ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು ಇದರಿಂದ ತಾಲ್ಲೂಕಿನಲ್ಲಿ ಸು.50ರಿಂದ 100 ಟನ್ ತನಕ ಮೀನುಗಾರರಿಗೆ ಮೀನು ಕೃಷಿ ಮಾಡಲು ಅನುಕೂಲಗಳಿವೆ ಎಂದರು.

ಎಲ್ಲ ಸಮುದಾಯದ ಸು.200 ಮೀನು ವೃತ್ತಿ ಕೆಲಸ ಮಾಡುವ ಕುಟುಂಬಗಳು ತಾಲ್ಲೂಕಿನಲ್ಲಿ ಸಕ್ರಿಯವಾಗಿವೆ. ಇಂತಹ ಕುಟುಂಬಗಳಿಗೆ ನಮ್ಮ ಸರ್ಕಾರ ಮನೆ ನೀಡುವುದು, ಕಿಟ್, ದೋಣಿ, ಬಲೆ ಮೊದಲಾದ ಸೌಲಭ್ಯಗಳನ್ನು ನೀಡುತ್ತಾ ಹೆಚ್ಚು ಹೆಚ್ಚು ಮೀನು ಕೃಷಿಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ತಿಳಿಸಿದರು.

ಇತ್ತೀಚಿ ದಿನಗಳಲ್ಲಿ ಕೆಲ ರೈತರು ತಮ್ಮ ಜಮೀನುಗಳ ಹೊಂಡಗಳಲ್ಲಿ ಮೀನುಮರಿ ಪಾಲನ ಕೇಂದ್ರಗಳನ್ನು ತೆರೆದುಕೊಂಡು ಉತ್ಪಾದನೆಯಾದ ಮರಿಗಳನ್ನು ಕೆರೆಗಳಲ್ಲಿ ಮೀನು ಸಾಕುವವರಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಎಸ್ಸಿಪಿಟಿಎಸ್ಪಿ ಯೋಜನೆಯಡಿ ಜಿಲ್ಲಾ ಪಂಚಾಯಿತಿಯಿಂದ ತಾಲ್ಲೂಕಿನ ಮೀನುಗಾರರಿಗೆ ಮೀನಿನ ಬಲೆ ಕಿಟ್ ಸಹ ನೀಡಲಾಗುತ್ತದೆ ಎಂದರು.

ಇದೇ ವೇಳೆ ಜಗದೀಶ್, ಕಾಳಯ್ಯ, ಕುಮಾರ್, ಬಸವರಾಜು, ನಾಗರಾಜು. ಕೃಷ್ಣ, ಶಿವರಾಂ, ಅಭಿಲಾಷ್, ಸವಿತಾ ಮತ್ತು ಗಂಗಾಧರ್ ಫಲಾನುಭವಿ ಮೀನುಗಾರರಿಗೆ ದೋಣಿ, ಹುಟ್ಟು , ಇನ್ನಿತರ ಪರಿಕರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ಭೈರಪ್ಪ, ಮೀನುಗಾರಿಕೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಮತ್ತು ಮೀನುಗಾರರು ಉಪಸ್ಥಿತರಿದ್ದರು.

ರೈತರಿಗೆ ಹೂವು, ಹಣ್ಣು ನೀಡಿ ಕಳುಹಿಸಿಕೊಟ್ಟ ವೈದ್ಯರು, ಲೇಖಕಿಯರು

ತುಮಕೂರು: ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ರೈತರ ಹೋರಾಟ ಬೆಂಬಲಿಸಿ ನಡೆದ ಟ್ರ್ಯಾಕ್ಟರ್ ಹೋರಾಟಕ್ಕೆ ತುಮಕೂರಿನ ವೈದ್ಯರು, ಲೇಖಕಿಯರು ಹೂವು, ಹಣ್ಣು ನೀಡುವ ಮೂಲಕ ಬೆಂಬಲ ನೀಡಿದ್ದು ಗಮನ ಸೆಳೆಯಿತು.

ನಗರದ ಹೊರವಲಯದ ಕ್ಯಾತ್ಸಂದ್ರ ಟೊಲ್ ನಲ್ಲಿ ರೈತರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದರು. ಬೆಂಗಳೂರು ಗಡಿಯವರೆಗೂ ಕಾರಿನಲ್ಲಿ ತೆರಳಿ ಬೆಂಬಲ ಸೂಚಿಸಿದರು.

ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು, ಪ್ರಾಂತ ರೈತ ಸಂಘದ ಬಿ.ಉಮೇಶ್ ಸೇರಿದಂತೆ ಹಲವರು ಇದ್ದರು.

ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ವೈದ್ಯ ಅರುಂಧತಿ, ಉಪನ್ಯಾಸಕಿ ಪಲ್ಲವಿ ಸೇರಿದಂತೆ ಹಲವರು ಇದ್ದರು.

ನೂರಾರು ಟ್ರ್ಯಾಕ್ಟರ್ ಹೊರಟರೂ ಪೊಲೀಸರು, ಆರ್ ಟಿಒ ಅಧಿಕಾರಿಗಳು ಸಬೂಬುಗಳನ್ನು ನೀಡಿ ಟ್ರ್ಯಾಕ್ಟರ್ ತಡೆದರು ಎಂದು ಹೋರಾಟಗಾರರು ದೂರಿದರು.