Monday, May 11, 2026
Google search engine
Home Blog Page 160

ಇವರೇ‌ ನೋಡಿ‌ ನಮ್ಮ‌ ರಾಮಸ್ವಾಮಿ ಮೇಷ್ಟ್ರು…

Publicstory


ತುರುವೇಕೆರೆ: ಹುಟ್ಟೂರಾದ ಕಣತೂರಿನ ಪ್ರಾಥಮಿಕ ಶಾಲೆಯಲ್ಲಿ ಓದಿ ಅದೇ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ 11 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಅಲ್ಲಿನ ಅಪಾರ ಜನಮನ್ನಣೆ ಗಳಿಸಿ ನಿವೃತ್ತರಾಗುತ್ತಿರುವ ಕೆ.ಬಿ.ರಾಮಸ್ವಾಮಿ ಅವರ ಸೇವೆ ಸ್ಮರಣೀಯ ಎಂದು ಬಿಇಒ.ರಂಗಧಾಮಯ್ಯ ತಿಳಿಸಿದರು.

ತಾಲ್ಲೂಕಿನ ಕಣತೂರು ಕ್ಲ್ಲಸ್ಟ್ರ್ ವತಿಯಿಂದ ಹಮ್ಮಿಕೊಂಡಿದ್ದ ನಿವೃತ್ತ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಣತೂರಿನ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ಆಂಗ್ಲಮಾದ್ಯಮ ಶಾಲೆ ತೆರೆಯಲು ಸೇರಿದಂತೆ ಹಲವು ಶಾಲಾಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಲು ಶ್ರಮಿಸಿದ್ದಾರೆ.

ಶಿಕ್ಷಕರು ಪಠ್ಯದ ಮೂಲಕ ಮಕ್ಕಳಿಗೆ ಜ್ಞಾನ ಸಂಪತ್ತನ್ನು ಉಣಬಡಿಸುವ ಜೊತೆಗೆ ಮಕ್ಕಳು ಸಮಾಜದಲ್ಲಿ ಸಾಮರಸ್ಯದಿಂದ ಬದಕುವ ಕಲೆಯನ್ನು ಕಲಿಸಿ ಕೊಡ ಬೇಕಿದೆ.

ನೀವು ಕಲಿಸುವ ಶಿಕ್ಷಣ ಆತನ ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ ನೊಂದವರ, ಅಶಕ್ತರ, ಶೋಷಿತರ, ದೀನದಲಿತರ, ಬಡವರ ಸಂಕಷ್ಟಗಳಿಗೆ ಸ್ಪಂದಿಸುವ, ಮರುಕಪಡುವ ಆಶಾಕಿರಣವಾಗಿ ಬೆಳೆಯುವಂತರಾಗ ಬೇಕು.

ಶಿಕ್ಷಕರ ವೃತ್ತ ಪವಿತ್ರವಾದದು ಮತ್ತು ಅಷ್ಟೇ ಜವಬ್ದಾರಿಯುತ ಕೆಲಸವೂ ಕೂಡ ಆಗಿದ್ದು ಇಡೀ ಸಮಾಜ ಶಿಕ್ಷಕರ ಕ್ರಿಯೆ ಮತ್ತು ಪ್ರಕ್ರಿಯೆಗಳನ್ನು ಕೂಲಂಕಷವಾಗಿ ಗಮನಿಸುತ್ತದೆ. ಹಾಗಾಗಿ ನಮ್ಮ ಕೆಲಸ ಯಾವಾಗಲೂ ಮತ್ತೊಬ್ಬರಿಗೆ ಮಾರ್ಗದರ್ಶಕವಾಗಿರ ಬೇಕು. ಹಾಗು ನಮ್ಮ ನಿವೃತ್ತಿಯ ನಂತರವೂ ಗೌರವಕ್ಕೆ ಭಾಜನವಾಗುವಂತಿರಬೇಕು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಲಜಾಕ್ಷಿ, ಸಿಆರ್ಪಿ ಸೋಮಶೇಖರ್, ತಾತಯ್ಯ, ನಂಜುಂಡಪ್ಪ, ಶಾರದ, ಶಿಕ್ಷಕರು, ಮಕ್ಕಳು ಹಾಗು ಗ್ರಾಮಸ್ಥರು ಪಾಲಗೊಂಡಿದ್ದರು.

ಲೋಕೇಶ್ ‘ಐ ಲವ್ ಯು’ ಅಂತ ಹೇಳಲೇ ಇಲ್ಲ: ಗಿರಿಜಾ

ಲೋಕೇಶ್ ಅವರಿಂದ ‘ಐ ಲವ್ ಯು’ ಎಂದು ಹೇಳಿಸಿಕೊಳ್ಳಲು ತುಂಬಾ ಆಸೆಯಿತ್ತು. ಆದರೆ ಅವರು ಇಡೀ ಜೀವನದಲ್ಲಿ ಹಾಗೆ ಹೇಳಲೇ ಇಲ್ಲ ಎಂದು ಖ್ಯಾತ ಕಲಾವಿದೆ ಗಿರಿಜಾ ಲೋಕೇಶ್ ಅವರು ನಗು ನಗುತ್ತಾ ಹೇಳಿದರು.

‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ‘ಚಾಕ್ ಸರ್ಕಲ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ತಮ್ಮ ನೆನಪಿನ ಓಣಿಯಲ್ಲಿ ಹೆಜ್ಜೆ ಹಾಕಿದರು.

ಲೋಕೇಶ್ ಅವರಿಂದ ನನ್ನ ನಟನೆಗೆ ಮೆಚ್ಚುಗೆ ಪಡೆಯಬೇಕು ಎನ್ನುವ ಆಸೆ ನನಗೆ ಇತ್ತು. ಅವರು ಅದನ್ನು ಬಾಯಿಬಿಟ್ಟು ಹೇಳದಿದ್ದರೂ ಮೌನದಲ್ಲಿಯೇ ಎಲ್ಲ ವ್ಯಕ್ತಪಡಿಸಿಬಿಡುತ್ತಿದ್ದರು ಎಂದರು.

ನನ್ನ ಬದುಕಿನಲ್ಲಿ ಸಾಕಷ್ಟು ಏರಿಳಿತಗಳಿದ್ದವು. ಆದರೆ ನಾನು ಕಷ್ಟ ಬಂದಾಗ ಕುಗ್ಗಲೂ ಇಲ್ಲ. ಬೇರೆ ಸಮಯದಲ್ಲಿ ಹಿಗ್ಗಲೂ ಇಲ್ಲ. ನಾನು ಬದುಕಿನ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದೆ. ಬಹುಷಃ ಆ ಕಾರಣದಿಂದಾಗಿಯೇ ಇರಬೇಕು ನಾನು ಸದಾ ನಗು ನಗುತ್ತಲೇ ಜೀವನ ಯಾತ್ರೆ ನಡೆಸಿದ್ದೇನೆ ಎಂದರು.

ತಮ್ಮ ಹಾಡಿಗೆ ಕಲ್ಲೇಟು ತಿಂದದ್ದು, ಫಿಲಂ ಹಾಡಿಗೆ ನೃತ್ಯ ಮಾಡಲು ಒಲ್ಲೆ ಎಂದದ್ದರಿಂದ ಹಿಡಿದು ರಂಗಭೂಮಿಯಲ್ಲಿ ಅತಿರಥ ಮಹಾರಥರಿಂದ ಪ್ರಶಂಸೆ ಗಳಿಸಿದ್ದು, ಸಿನೆಮಾ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದು ಎಲ್ಲವೂ ನನ್ನ ಬದುಕಿನ ಮುಖ್ಯ ಭಾಗಗಳೇ ಎಂದರು.

ಲೋಕೇಶ್ ಅವರು ಮೌನಿ ನಾನು ವಾಚಾಳಿ ಆದರೂ ನಾವು ಎಷ್ಟು ಚಂದ ಬದುಕು ನಡೆಸಿದೆವು. ನನ್ನ ಹಾಗೂ ಲೋಕೇಶ್ ಅವರ ಮದುವೆಯ ದಿನವೇ ನಾವು ಕಾಕನ ಕೋಟೆಯಲ್ಲಿ ಅಪ್ಪ ಮಗಳಾಗಿ ಅಭಿನಯಿಸಿದ್ದೆವು. ನಾಟಕದ ಕೊನೆಯಲ್ಲಿ ನಮ್ಮ ಮದುವೆಯ ವಿಷಯವನ್ನು ಘೋಷಿಸಿದಾಗ ಎಲ್ಲಾ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಇದಕ್ಕಿಂತ ಮಿಗಿಲಾದ ಆಶೀರ್ವಾದ ಮತ್ತಾವುದಿದೆ. ಆ ಕಾರಣಕ್ಕಾಗಿಯೇ ನಾವು ಸಂಭ್ರಮದ ಸಂಸಾರ ನಡೆಸಿದೆವು ಎಂದರು.

ಲೋಕೇಶ್ ಅವರ ಖಡಕ್ ವ್ಯಕ್ತಿತ್ವ, ಸ್ನೇಹಕ್ಕೆ ಸೋಲುವ ಗುಣ, ಅಭಿನಯದಲ್ಲಿನ ತಾದ್ಯಾತ್ಮತೆ, ಊಟದಲ್ಲಿನ ಅಭಿರುಚಿ ಎಲ್ಲವನ್ನೂ ಗಿರಿಜಾ ಲೋಕೇಶ್ ಮಾತುಕತೆಯಲ್ಲಿ ಕಟ್ಟಿಕೊಟ್ಟರು.

‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಸಂವಾದ ನಡೆಸಿದರು.

ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿ‌ ಕಳಪೆ ಎಂದ ನಗರಾಭಿವೃದ್ಧಿ ಸಚಿವರು!

Publicstory


Tumkuru: ನಗರದಾದ್ಯಂತ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಬುಧವಾರ ವೀಕ್ಷಿಸಿದರು.

ಕಾಮಗಾರಿಗಳ ಅವೈಜ್ಞಾನಿಕತೆ ಹಾಗೂ ವಿಳಂಬವಾಗಿರುವುದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕಾಮಗಾರಿಗಳು ಅವೈಜ್ಞಾನಿಕತೆಯಿಂದ ಕೂಡಿವೆ. ಕಾಮಗಾರಿಗಳು ಮುಗಿಯುವ ಹಂತಕ್ಕೆ ಬರಬೇಕಾಗಿತ್ತು. ವಿಳಂಬವಾಗಲು ಕಾರಣವೇನು ಎಂದರು.

ರಿಂಗ್ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ರಾಧಾಕೃಷ್ಣ ರಸ್ತೆ, ಅಪೆಕ್ಸ್ ಬ್ಯಾಂಕ್ ಸಮೀಪ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿಗಳು, ಮಹಾತ್ಮಗಾಂಧಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಸೇರಿದಂತೆ ನಗರದ ವಿವಿಧೆಡೆ ಕಾಮಗಾರಿಗಳನ್ನು ವೀಕ್ಷಿಸಿದರು.

ಕಾಮಗಾರಿಗಳು ಕಳಪೆಯಿಂದ ಕೂಡಿವೆ.
ಫೆ. 6 ರೊಳಗೆ ಬಿ.ಹೆಚ್. ರಸ್ತೆ ಅಕ್ಕಪಕ್ಕದ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳಿಸಬೇಕು.‌ ಕಾಮಗಾರಿಗಳು ಗುಣಮಟ್ಟ ಹಾಗೂ ವೈಜ್ಞಾನಿಕತೆಯಿಂದ ಕೂಡಿರದಿದ್ದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿಲ್ ಕೇಸು ಹಾಕಲು ಹಿಂದು ಮುಂದು ನೋಡುವುದಿಲ್ಲ ಎಂದು ಎಚ್ಚರಿಸಿದರು.

ನಾನು ಮತ್ತೆ ತುಮಕೂರಿಗೆ ಭೇಟಿ ನೀಡುವಷ್ಟರಲ್ಲಿ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿರಬೇಕು ಎಂದರು.

ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ರಂಗಸ್ವಾಮಿ, ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ, ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಟೂಡಾ ಆಯುಕ್ತ ಯೋಗಾನಂದ್, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ಮತ್ತಿತರರು ಇದ್ದರು.

ನೀನು ಓದು ಬರಹ ಕಲಿತಿದ್ದರೆ ಇವರಿಗೆ ಋಣಿಯಾಗಿರಲೇ ಬೇಕು…

3

ರಾಧಾ ರಮೇಶ್


ನೀನು ಓದು ಬರಹ ಕಲಿತಿದ್ದರೆ ,ನೀನು ಶಿಕ್ಷಿತ ಭಾರತೀಯ ಮಹಿಳೆಯಾಗಿದ್ದಾರೆ , ನೀನುಶಾಲಾ ಬಾಲಕಿ ಆಗಿದ್ದರೆ ,ನೀನು ಇಂಗ್ಲಿಷಿನಲ್ಲಿ ಓದುತ್ತಿದ್ದರೆ ಆಕೆಗೆ ಋಣಿಯಾಗಿರಲೇಬೇಕು ಎಂದು ತಾಮ್ ವು ಲ್ಸ್ ಮತ್ತು ಸುಜನ್ ಆ್ಯಂಡ್ರ್ಯೂ ಬರೆಯುತ್ತಾರೆ .

ಈ ಮಾತುಗಳು ಮೊಟ್ಟಮೊದಲ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆಯವರನ್ನು ಕುರಿತು ಬರೆದಿರುವುದು. ಭಾರತೀಯ ಮೊಟ್ಟಮೊದಲ ಶಿಕ್ಷಕಿ, ಕವಿಯಿತ್ರಿ, ಚಿಂತಕಿ savitri bai ಇವರನ್ನು ಕೃತಜ್ಞತೆಯಿಂದ ನೆನೆಸಿಕೊಳ್ಳುವ ಹೊತ್ತು. ಹಾಗೂ ಪ್ರಸ್ತುತ ಸಮಸ್ಯೆಗಳಿಗೆ ಎಳೆ ಏನಾದರೂ ಸಿಕ್ಕಿತೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯವಿದಾಗಿದೆ.

ಒಂಭತ್ತನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಾವಿತ್ರಿಬಾಯಿ ಪುಲೆ ಇವರ ಕನಸಿನ ವಿಸ್ತಾರ ಸಾಮಾಜಿಕ ಹೊಣೆ ಮತ್ತು ಬದ್ಧತೆ ಯಾಗಿದ್ದವು.ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮಹಿಳೆಯರಿಗೆ, ಶಿಕ್ಷಣವನ್ನು ಮತ್ತು ಸಾರ್ವತ್ರಿಕ ಜೀವನವನ್ನು ನಿರಾಕರಿಸಲಾಗಿತ್ತು.

ಶಿಕ್ಷಣದ ಬಗ್ಗೆ ಮಹಿಳೆಯರು ,ತಳ ಸಮುದಾಯದವರು ಶಿಕ್ಷಣದ ಕುರಿತು ಯೋಚಿಸಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದ್ದಾಗ, ಶೈಕ್ಷಣಿಕ ದೀವಟಿಗೆ ಹಿಡಿದು ಬಂದವರು ಸಾವಿತ್ರಿಬಾಯಿ ಪುಲೆ.ನಮ್ಮಂತಹ ಲಕ್ಷಾಂತರ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ ಹಕ್ಕನ್ನು ನೈಜವಾಗಿ, ನಿಸರ್ಗ ಸಹಜವಾಗಿಸಿದ ಸಾವಿತ್ರಿಬಾಯಿ ಪುಲೆಯವರ ಶ್ರಮ ಮತ್ತು ಚಿಂತನೆ ಅವಿಸ್ಮರಣೀಯ.ಇವರು ಮೊದಲ ಬಾಲಕಿಯರ ಶಾಲೆ ಪ್ರಾರಂಭಿಸಿದ್ದು ಹದಿನೆಂಟು ನೂರ ನಲವತ್ತ ಎಂಟರಲ್ಲಿ.

ಇದು ಸಾವಿತ್ರಿಬಾಯಿಯವರ ಅತ್ಯುನ್ನತ ಕೊಡುಗೆಯಾಗಿತ್ತು. ಮಹಿಳೆಯರಿಗಾಗಿ, ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ,ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿ ಚಳವಳಿ ಮಾಡಿದರು.

ವಿದ್ಯಾಭ್ಯಾಸ ನಿರಂತರವಾಗಿ ಅಡೆತಡೆಯಿಲ್ಲದೆ ನಡೆಯಲು ಆಗಿನ ಕಾಲಕ್ಕೆ ಸ್ಟೈಫೆಂಡ್ ವ್ಯವಸ್ಥೆ ಮಾಡಿದರು.ಶಿಕ್ಷಣದಲ್ಲಿ ವೈವಿಧ್ಯತೆ ತರಲು ಪಠ್ಯೇತರ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು.

ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು, ಜಾಗತಿಕವಾಗಿ ಲಭ್ಯವಿರುವ ಆಧುನಿಕ ಶಿಕ್ಷಣವನ್ನು ಪಠ್ಯವನ್ನು ಅಳವಡಿಸಿಕೊಳ್ಳುವುದು .

ಮಕ್ಕಳ ಸೂಕ್ಷ್ಮತೆ ಯನ್ನು ಆಧರಿಸಿ ಬೋಧನಾಕ್ರಮ ರೂಪಿಸುವುದು. ಬೌದ್ಧಿಕವಾಗಿ ವಿಮರ್ಶಾತ್ಮಕವಾದ ವಸ್ತುನಿಷ್ಠವಾದ ಕಲಿಕೆಯನ್ನು ಬೆಂಬಲಿಸುವುದು. ಸಾಮಾಜಿಕ ಸುಧಾರಣೆಗಳನ್ನು ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಆದ್ಯತೆ ಮೇರೆಗೆ ಶಿಕ್ಷಣದಲ್ಲಿ ಪಠ್ಯದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಶಿಕ್ಷಣ ನೀತಿಯನ್ನು ಹೊಸ ಚಿಂತನೆಯ ಪ್ರತಿಮೆಯಾಗಿಸಿದರು.

ದಲಿತರಿಗೆ ಹಾಗೂ ಮಹಿಳೆಯರಿಗಾಗಿ ಶಾಲೆ ತೆರೆದಾಗ, ಸಮಾಜ ಅವರಿಗೆ ಬಹಿಷ್ಕಾರ ಹಾಕಿತು. ಪ್ರತಿದಿನ ಶಾಲೆಗೆ ಹೋಗುವಾಗ ಸಾವಿತ್ರಿಬಾಯಿಯವರು ಅವಮಾನಕ್ಕೆ, ನಿಂದನೆಗೆ ಒಳಗಾಗುತ್ತಿದರು. ಅವರ ಮೇಲೆ ಹೊಲಸು ,ಕೆಸರು, ಕಲ್ಲುಗಳನ್ನು ಎಸೆಯಲಾಗುತ್ತಿತ್ತು. ಇಷ್ಟೆಲ್ಲಾ ಆದರೂ ಅವರು ಎದೆಗುಂದಲಿಲ್ಲ .

ಸಂಬಳವನ್ನು ಪಡೆಯದೆ, ಬಾಲಕಿಯರ ಶಿಕ್ಷಣಕ್ಕಾಗಿ ದುಡಿದರು. ಇವರ ಮಾನವೀಯ ಮೌಲ್ಯಗಳು, ಒಳಗೊಳ್ಳುವಿಕೆಯು, ಇಷ್ಟಕ್ಕೆ ಸೀಮಿತವಾಗದೆ, ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿಯನ್ನು ಸಂಘಟಿಸಿದರು.

ವರದಕ್ಷಿಣೆ ಪಿಡುಗಿಗೆ ಸಾಮೂಹಿಕ ಮದುವೆಗಳ ಏರ್ಪಾಡು ಮಾಡುವ ಮೂಲಕ ಉತ್ತರಿಸಿದರು. ಮಾನವ ಹಕ್ಕುಗಳು, ಜಾತಿ ಆಧಾರದ ಮೇಲೆ ನಿರ್ಧರಿಸಲ್ಪಡುತ್ತವೆ ಎಂಬುದನ್ನು ಮನಗಂಡಿದ್ದ ಅವರು ವಿವಾಹ ಬಾಹಿರವಾಗಿ ಗರ್ಭಿಣಿಯಾದ ಮಹಿಳೆಯರಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಿದರು ಹಾಗೂ ವಿವಾಹ ಬಾಹಿರವಾಗಿ ಜನಿಸಿದ ಮಕ್ಕಳಿಗೆ ಶಿಶು ಕೇಂದ್ರಗಳನ್ನು ಸ್ಥಾಪಿಸಿದರು..

ಕ್ಷೌರಿಕರ ಪ್ರತಿಭಟನೆಯನ್ನು ಸಂಘಟಿಸುವುದರ ಮೂಲಕ ,ವಿಧವೆಯರ ಕೇಶ ಮಂಡನೆಯನ್ನು ವಿರೋಧಿಸಿದ್ದರು. ಇದಕ್ಕಾಗಿ ಅನೇಕ ಆಪಾದನೆಗಳಿಗೆ, ಅವಮಾನಗಳಿಗೆ, ಗುರಿಯಾದರು.ತಮ್ಮ ಮನೆಯ ತೊಟ್ಟಿಯ ನೀರನ್ನು ಸಾರ್ವತ್ರಿಕವಾಗಿ, ದಮನಿತರಿಗೆ ಉಪಯೋಗಿಸಲು ಬಿಟ್ಟಿದ್ದರು.

ಬರಗಾಲ ಸಂತ್ರಸ್ತರಿಗೆ ನೆರವು ನೀಡುವುದು ಇವರ ಸಾಮಾಜಿಕ ಬದ್ಧತೆಗೆ ಮತ್ತೊಂದು ಉದಾಹರಣೆ. ಹದಿನೆಂಟು ನೂರ ಐವತ್ತ ರಲ್ಲಿ ಪುಣೆಯಲ್ಲಿ ಮಹಿಳಾ ಮಂಡಳಿಯನ್ನು ಸ್ಥಾಪಿಸಿದರು .

ಇಲ್ಲಿ ಎಲ್ಲ ಜಾತಿಯ ಮಹಿಳೆಯರು ಸೇರುತ್ತಿದ್ದರು. ಇಲ್ಲಿ ಸ್ತ್ರೀಯರ ಸ್ಥಿತಿಗತಿ ಹಾಗೂ ಸ್ತ್ರೀ ವಿಮೋಚನೆಯ ಕುರಿತಾಗಿ ಚರ್ಚೆ ನಡೆಯುತ್ತಿತ್ತು.ಬರಗಾಲದ ಸಂದರ್ಭದಲ್ಲಿ ಪ್ಲೇಗ್ ಮಾರಿಗೆ ತುತ್ತಾಗಿದ್ದ ಮಕ್ಕಳಿಗೆ ಆರೈಕೆ ಮಾಡುತ್ತಾ ಸ್ವತಃ ಕಾಯಿಲೆ ಸೋಂಕು ತಗುಲಿ ನಿಧನರಾದರು.

ಎಲ್ಲಾ ಬಗೆಯ ಒತ್ತಡ ವಿರೋಧ ಅಪಮಾನಗಳನ್ನು ಎದುರಿಸಿ ಸಮುದಾಯ ಶಿಕ್ಷಣ ಒಂದೇ ವಿಮೋಚನೆಗೆ ದಾರಿ ಎಂದರಿತು ಅದಕ್ಕಾಗಿ ಜೀವನ ಮುಡಿಪಿಟ್ಟ ಅವರ ಆದರ್ಶ ನಮ್ಮಲ್ಲಿ ಎಚ್ಚರಿಕೆಯನ್ನು ಉಂಟು ಮಾಡಲಿ ಎಂದು ಆಶಿಸುತ್ತಾ ಅವರ ಹೋರಾಟದ ಬದುಕು, ತೆಗೆದುಕೊಂಡ ನಿರ್ಧಾರಗಳು, ಎದುರಿಸಿದ ಸವಾಲುಗಳು, ದೃಢನಿಶ್ಚಯ, ಮೌಲ್ಯಗಳು, ಸ್ತ್ರೀ ವಿಮೋಚನಾ ಹೋರಾಟಗಾರ್ತಿಯಾಗಿ ,ಕವಿಯಿತ್ರಿಯಾಗಿ, ಸಮಾಜ ಸುಧಾರಕಿಯಾಗಿ , ಲೇಖಕಿಯಾಗಿ, ಶಿಕ್ಷಕಿಯಾಗಿ, ಚಿಂತಕಿಯಾಗಿ, ನಮ್ಮೆಲ್ಲರಲ್ಲೂ ನಿರಂತರ ಜ್ಯೋತಿಯಾಗಿ ಬೆಳಗಲಿ . (ಕ್ರಾಂತಿ ಮಾಡಲು ಅತೃಪ್ತಿ ತಳಮಳಗಳು ಸಾಲದು ನ್ಯಾಯಪರ ಹೋರಾಟಕ್ಕಾಗಿ ಅಗಾಧ ಪ್ರಜ್ಞೆ ಗಾಢ ಚಿಂತನೆ ಒಳಗೊಂಡಂಥ ಬದ್ಧತೆ ಜೊತೆಗೆ ರಾಜಕೀಯ ಸಾಮಾಜಿಕ ಹಕ್ಕುಗಳ ಮಹತ್ವ ಹಾಗೂ ಅವಶ್ಯಕತೆಯ ಅಷ್ಟೇ ಮುಖ್ಯ ಅಂಬೇಡ್ಕರ್).


‐ತುಮಕೂರಿನಲ್ಲಿ ನೆಲೆಸಿರುವ ರಾಧ ರಮೇಶ್ ಅವರು ಕವಿಯತ್ರಿ ಹಾಗೂ ಲೇಖಕಿ. ಹಲವು ಪತ್ರಿಕೆಗಳಲ್ಲಿ ಅವರ ಮಹತ್ವ, ಅಧ್ಯಯನ ಪೂರ್ಣ ಲೇಖನಗಳು ಪ್ರಕಟಗೊಂಡಿವೆ.ಎಲ್ಲ ಸಮಾಜದ ದಮನಿತರನ್ನು ಬರಹಗಳಲ್ಲಿ ಪ್ರತಿನಿಧಿಸುವ ಮೂಲಕ ಈ ಕಾಲದ ಒಂದು ಗಟ್ಟಿ ಮಹಿಳಾ ದನಿಯಾಗಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಸೋಲು ರಸ್ತೆಗೆ ಬಿತ್ತು ಬೇಲಿ

Publicstory. in


ತುರುವೇಕೆರೆ: ತಾಲ್ಲೂಕಿನ ಕಸಬಾದ ತಾವರೆಕೆರೆ ಬಡಾವಣೆಯಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತ ಕಾರಣ ರಸ್ತೆಗೆ ಬಿದ್ದಿದೆ ಬೇಲಿ.

ಜನರ ಸಂಚಾರಕ್ಕೆ ರಸ್ತೆ ಬಿಡಿಸಿಕೊಡುವಂತೆ ತಾಲ್ಲೂಕು ಆಡಳಿತವನ್ನು ಬಡಾವಣೆಯ ಗ್ರಾಮಸ್ಥರು ಸೋಮವಾರ ಒತ್ತಾಯಿಸಿದರು.

ಕಳೆದ 50 ವರ್ಷಗಳ ಹಿಂದೆ ಸರ್ಕಾರದಿಂದ ಮನೆಕಟ್ಟಿಕೊಳ್ಳಲು ಇಲ್ಲಿ ಸೈಟ್ ಸಹ ನೀಡಿತ್ತು. ಹಾಗಾಗಿ 45 ಕುಟುಂಬಗಳು ಇಂದಿಗೂ ವಾಸಮಾಡುತ್ತಿದ್ದಾರೆ.

ಜನ ಸಂಚಾರಕ್ಕೆಂದು ರಸ್ತೆ ಕರಾಬನ್ನು ಸಹ ಬಿಟ್ಟಿದ್ದು ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ಹಾಗು ಸರ್ಕಾದರಿಂದ ರಸ್ತೆ ಮಾಡಲು ಅನುದಾನವೂ ಸಹ ನಿಗದಿಯಾಗಿತ್ತು.

ಆದರೆ ಈಚಿನ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಸೋತ ವ್ಯಕ್ತಿಯೊಬ್ಬರು ಈ ಜಾಗ ನಮ್ಮ ಕಂದಾಯ ಜಮೀನಾಗಿದೆಂದು ರಸ್ತೆಗೆ ಬೇಲಿ ಹಾಕಿಕೊಂಡಿದ್ದರು. ಇದರಿಂದ ಬಡಾವಣೆಯ ಜನರ ಓಡಾಟಕ್ಕೆ ಇದೊಂದೇ ದಾರಿ ಇದ್ದುದರಿಂದ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಶಾಶ್ವತ ರಸ್ತೆ ಮಾಡಿಕೊಡುವಂತೆ ತಾವರೆಕೆರೆ ಬಡಾವಣೆಯ ಗ್ರಾಮಸ್ಥರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ನೇತೃತ್ವದಲ್ಲಿ ತಹಶೀಲ್ದಾರ್ ಆರ್.ನಯಿಂಉನ್ನೀಸಾ ಹಾಗು ಲೋಕಮ್ಮನಹಳ್ಳಿ ಪಿಡಿಒ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಕೆಂಪೇಗೌಡ, ವೆಂಕಟೇಶ್, ಗುತ್ತಿಗೆದಾರ ಮಂಜಣ್ಣ, ಬಸವರಾಜು ಮತ್ತು ಗ್ರಾಮಸ್ಥರುಗಳು ಇದ್ದರು.

ಶವ ಸಾಗಿಸುವ ಅಶ್ವತ್ಥ್, ಖಲೀಲ್ ಕೆಲಸಕ್ಕೆ ಮೆಚ್ಚುಗೆ

ತುರುವೇಕೆರೆ; ನಮ್ಮ ಸಂಸ್ಕೃತಿ, ಪರಂಪರೆಯಲ್ಲಿ ಅಂತ್ಯಸಂಸ್ಕಾರವನ್ನೂ ಒಂದು ಪವಿತ್ರ ಕಾರ್ಯ ಎಂದೇ ಪರಿಗಣಿಸಲಾಗಿದೆ. ಮನುಷ್ಯನಿಗೆ ಬದುಕಿದ್ದಾಗ ಸಿಗುವ ಘನತೆ ಅವನ ಸಾವಿನ ನಂತರವೂ ಸಿಗಬೇಕು. ಆ ನಿಟ್ಟಿನಲ್ಲಿ ರಾತ್ರಿ, ಹಗಲೆನ್ನದೆ 18 ವರ್ಷಗಳಿಂದ ಶವಗಳನ್ನು ಸಾಗಿಸುವ ಮೂಲಕ ಮನುಕುಲದ ಸೇವೆಯಲ್ಲಿ ನಿರತರಾಗಿರುವ ಆಟೋಚಾಲಕರಾದ ಅಶ್ವತ್ಥ್ ಮತ್ತು ಖಲೀಲ್ ಅವರ ಮಾನವೀಯ ಸ್ಪಂದನೆ ಅನುಕರಣೀಯ ಮಾದರಿ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು.

ಪಟ್ಟಣದ ಚಿದಂಬರೇಶ್ವರ ಉಚಿತ ಗ್ರಂಥಾಲಯದಲ್ಲಿ ಶವಸಾಗಣೆ ಮಾಡುವ ಆಟೋಚಾಲಕರಾದ ಅಶ್ವತ್ಥ್ ಮತ್ತು ಖಲೀಲ್ ಅವರ ಉದಾತ್ತ ಕಾರ್ಯವನ್ನು ಅಭಿನಂದಿಸಿ ಮಾತನಾಡಿದರು.

ಗ್ರಂಥಾಲಯದ ವತಿಯಿಂದ ಅಶ್ವತ್ಥ್ ಮತ್ತು ಖಲೀಲ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶ್ವತ್ಥ್ “ಕಳೆದ 18 ವರ್ಷಗಳಿಂದ ಅಂಜಿಕೆ,ಅಳುಕಿಲ್ಲದೆ, ಅಸಹ್ಯ ಪಡದೆ ಶವ ಸಾಗಣೆ ಮಾಡಿರುವೆ. ಅನಾಥ ಶವಗಳು, ಅಪಘಾತಕ್ಕೀಡಾದ, ಆತ್ಮಹತ್ಯೆ ಮಾಡಿಕೊಂಡ ಶವಗಳನ್ನೂ ಯಾವ ಪ್ರತೀಫಲಾಪೇಕ್ಷೆ ಇಲ್ಲದೆ ಸಾಗಿಸಿರುವೆ. ಈ ಕಾರ್ಯದಿಂದ ಬದುಕಿನಲ್ಲಿ ಧನ್ಯತೆ ಸಿಕ್ಕಿದೆ”ಎಂದರು.

ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕರಾದ ಲಲಿತಾ, ರಾಮಚಂದ್ರ ದಂಪತಿ, ಉಪನ್ಯಾಸಕರಾದ ಕೃಷ್ಣಚೈತನ್ಯ, ರೂಪಶ್ರೀ, ಎಸ್. ಯೋಗಾನಂದ್,ಟಿ.ಆರ್.ಶ್ರೀನಿವಾಸ್, ವಿಠ್ಠಲ್ ದೀಕ್ಷಿತ್, ಬೋರಲಿಂಗಯ್ಯ ಇತರರು ಉಪಸ್ಥಿತರಿದ್ದರು.

ತುರುವೇಕೆರೆಯಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ: ಮಾಜಿ ಶಾಸಕರಿಗೆ ಸವಾಲು ಹಾಕಿದ ಶಾಸಕ ಮಸಾಲ ಜಯರಾಂ

Publicstory. in


ತುರುವೇಕೆರೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಬಿಜೆಪಿ ತಾಲ್ಲೂಕಿನಲ್ಲಿ ಇತಿಹಾಸ ಸೃಷ್ಠಿಸಿದ್ದು ಇದರೊಂದಿಗೆ 30ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ನಮ್ಮ ಅಭ್ಯರ್ಥಿಗಳು ಅಧಿಕಾರ ಹಿಡಿಯಲಿದ್ದಾರೆಂದು ಶಾಸಕ ಮಸಾಲಜಯರಾಂ ತಿಳಿಸಿದರು.

ತಾಲ್ಲೂಕಿನ ಚಿಕ್ಕೋನಹಳ್ಳಿ ಬಳಿಯಿರುವ ಶಾಸಕರ ಫಾರಂ ಹೌಸ್ನಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿಯ ನೂತನ ಸದಸ್ಯರುಗಳಿಗೆ ಅಭಿನಂದನೆ ಹಾಗು ಶಾಲು ಹಾಕುವ ಮೂಲಕ ಸ್ವಾಗತಿಸಿ ಸನ್ಮಾನಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡಬೇಕಿದೆ. ತಮ್ಮ ಗ್ರಾಮಗಳಿಗೆ ನೀವೇ ಶಾಸಕರು ನಿಮ್ಮ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕಿದೆ. ನಾನು ಸಹ ಹೆಚ್ಚಿನ ಸಹಕಾರ ನಿಮಗೆ ನೀಡಲಿದ್ದು ಹಳ್ಳಿಯಿಂದ ದಿಲ್ಲಿವರೆಗೂ ಬಿಜೆಪಿ ಅಧಿಕಾರದಲ್ಲಿದ್ದು ನಮ್ಮ ಅಧಿಕಾರವನ್ನು ಚಲಾಯಿಸಿ ತಮ್ಮ ಕೆಲಸಗಳನ್ನು ತಾವೇ ಮಾಡಬೇಕು. ನನ್ನ ಅವಧಿಯಲ್ಲಿ ಎಲ್ಲಾ ಸದಸ್ಯರಿಗೂ ಸಮನಾದ ಅಧಿಕಾರ ನೀಡಲಿದ್ದೇನೆ. ಎಲ್ಲರೂ ಗ್ರಾಮದ ಅಭಿವೃದ್ದಿಗೆ ಶ್ರಮಿಸಿ ಎಂದು ಸಲಹೆ ನೀಡಿದರು.

ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಆಮೂಲಾಗ್ರ ಅಭಿವೃದ್ದಿಗಾಗಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಚ್ಚಿನ ಸಹಕಾರ ನೀಡಲಾಗುವುದು. ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ನಮ್ಮ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತೇವೆ. ಮಾಜಿ ಶಾಸಕರು ಗ್ರಾಮ ಪಂಚಾಯಿತಿಯಲ್ಲಿ ನಾವೇ ಹೆಚ್ಚು ಸ್ಥಾನ ಗೆಲವು ಪಡೆದಿರುವುದಾಗಿ ಸುಳ್ಳು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ‌ ಎಂದು ಗೇಲಿ ಮಾಡಿದರು.

ನಮ್ಮ ಬೆಂಬಲಿತ ಸದಸ್ಯರುಗಳನ್ನು ಪೆರೇಡ್ ಮಾಡಲಾಗುವುದು. ಅದರಂತೆ ನೀವು ಸಹ ಪೆರೇಡ್ ಮಾಡಿ ತೋರಿಸಿ. ಒಂದು ಸ್ಥಾನ ನಿಮ್ಮ ಪಕ್ಷದಲ್ಲಿ ಹೆಚ್ಚು ಬಂದಿದ್ದೇ ಆದಲ್ಲಿ ನಾನು ರಾಜಕೀಯ ನಿವೃತ್ತಿಯಾಗಲಿದ್ದೇನೆ ಎಂದು ಮಾಜಿ ಶಾಸಕರಿಗೆ ಸವಾಲು ಹಾಕಿದರು.

ಈ ಸಂದರ್ಭದಲ್ಲಿ ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ ನೂತನ ಸದಸ್ಯರುಗಳಿಗೆ ಕೇಸರಿ ಶಾಲು ಹಾರ ಹಾಕಿ ಸನ್ಮಾನಿಸಿ ಅಭಿನಂದಿಸಿ ಸಿಹಿ ನೀಡಿ ಶುಭಕೋರಿದರು.
ತಾಲ್ಲೂಕಿನ ಲೋಕಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನೀರಗುಂದ ಸಾಮಾನ್ಯ ಕ್ಷೇತ್ರದಿಂದ ಕಣಕ್ಕಿಳಿದಿದ್ದ ದಲಿತ ಸಮುದಾಯಕ್ಕೆ ಸೇರಿದ ನಿವೃತ್ತ ಅಪರ ಜಿಲ್ಲಾಧಿಕಾರಿ ಆರ್.ಅಲ್ಲಪ್ಪ ಹಾಗೂ ಜೆ.ನಳಿನ ಇವರುಗಳು ಶಾಸಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸಿ.ಎಸ್.ಪುರ ನಾಗರಾಜು, ತಿಮ್ಮರಾಯಪ್ಪ, ಮಲ್ಲೇಶ್, ವಿ.ಟಿ.ವೆಂಕಟರಾಮು, ಕಾಳಂಜೀಹಳ್ಳಿ ಸೋಮಶೇಖರ್ ಇದ್ದರು.

ಬಿಜೆಪಿ ಮಣಿಸಿದ ಜೆಡಿಎಸ್: ಮಾಜಿ ಶಾಸಕ ಕೃಷ್ಣಪ್ಪ

Publicstory. in


ತುರುವೇಕೆರೆ: ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲ್ಲೂಕಿನ ಮತದಾರರು ಶೇ.61 ರಷ್ಟು ಜೆಡಿಎಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ 27 ಗ್ರಾಮ ಪಂಚಾಯಿತಿಯ 400 ಅಭ್ಯರ್ಥಿಗಳಲ್ಲಿ ಸುಮಾರು 245 ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಹಡವನಹಳ್ಳಿ 8, ಅಮ್ಮಸಂದ್ರ 7, ದಂಡಿನಶಿವರ9, ಹುಲ್ಲೆಕೆರೆ5, ಕೊಂಡಜ್ಜಿ 9, ಸಂಪಿಗೆ 6, ಸಂಪಿಗೆಹೊಸಳ್ಳಿ 10, ಬಾಣಸಂದ್ರ 10,

ಲೋಕಮ್ಮನಹಳ್ಳಿ 8, ಮುನಿಯೂರು 5, ಆನೆಕೆರೆ 14, ಕೊಡಗಿಹಳ್ಳಿ 8, ಮಾದಿಹಳ್ಳಿ 10, ತಾಳಕೆರೆ 9, ದೆಬ್ಬೇಘಟ್ಟ 6, ಅರೇಮಲ್ಲೇನಹಳ್ಳಿ 7, ತಮಡಗ 11, ಮಾವಿನಕೆರೆ 6, ಗೋಣಿತುಮಕೂರು 10, ಮುತ್ತಗದಹಳ್ಳಿ 12, ಮಾಯಸಂದ್ರ 13, ಸೊರವನಹಳ್ಳಿ 11, ವಡವನಘಟ್ಟ 9, ಮಣೆಚಂಡೂರು 9, ಶಟ್ಟಗೊಂಡನಹಳ್ಳಿ 5 ಸ್ಥಾನಗಳನ್ನು ಪಡೆದಿದೆ.

ಸಿ.ಎಸ್ ಪುರ ಹೋಳಿಯ 7 ಪಂಚಾಯಿತಿ ಜೆಡಿಎಸ್ ಅಧಿಕಾರ ಹಿಡಿಯಲಿದೆ. ಚಂಗಾವಿ 8, ಮಾವನಹಳ್ಳಿ, 8, ಇಡಗೂರು 9, ಸಿಎಸ್ ಪುರ 9, ಹಿಂಡಿಸ್ಕೆರೆ 10, ಕಲ್ಲೂರು 9 ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದೇವೆ ಕ್ಷೇತ್ರದ ಎಲ್ಲ ಮತದಾರಿಗೂ ಕೃತಜ್ಙತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸ್ವಾಮಿ, ರವಿ ಎಪಿಎಂಸಿ ಅಧ್ಯಕ್ಷ ಮಧು, ಸದಸ್ಯರಾದ ನಾಗರಾಜು, ಮುಖಂಡರಾದ ವೆಂಕಟಾಪುರದ ಯೋಗೀಶ್, ಡಾ.ಚೇತನ್, ರಂಗನಾಥ್, ನರಸೇಗೌಡ, ನರಸಿಂಹಮೂರ್ತಿ, ನಂಜೇಗೌಡ, ಗಂಗಣ್ಣ, ಬಸವರಾಜು ಇತರರು ಇದ್ದರು.

ದೇಶದಲ್ಲಿ‌ ಕೊರೊನಾ ಲಸಿಕೆ‌ ಕೋವಿಶೀಲ್ಡ್ ಗೆ ತುರ್ತು ಅನುಮತಿ

ಚಿತ್ರಕೃಪೆ; ಟ್ವಿಟ್ಟರ್

Publicstory. in


New Delhi: ದೇಶದಲ್ಲಿ ಕೋವಿಡ್‌–19 ಲಸಿಕೆಯ ತುರ್ತು ಬಳಕೆಗೆ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ತಜ್ಞರ ಸಮಿತಿಯು ಶುಕ್ರವಾರ ಅನುಮೋದನೆ ನೀಡಿದೆ.

ಬ್ರಿಟನ್‌ ಮತ್ತು ಅರ್ಜೆಂಟಿನಾ ದೇಶಗಳಲ್ಲಿ ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್‌ನ ‘ಕೋವಿಶೀಲ್ಡ್‌’ ಲಸಿಕೆಯ ತುರ್ತು ಬಳಕೆಯನ್ನು‌ ಈಗಾಗಲೇ ಮಾಡುತ್ತಿವೆ. ಅಲ್ಲಿಯ ಜನರಿಗೆ ಲಸಿಕೆ ನೀಡಲಾಗುತ್ತಿದೆ.

ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ವಿಷಯ ತಜ್ಞರ ಸಮಿತಿಯು (ಎಸ್‌ಇಸಿ) ಕೋವಿಶೀಲ್ಡ್‌ ಲಸಿಕೆ ತುರ್ತು ಬಳಕೆಗೆ ಅವಕಾಶ ಮಾಡಿಕೊಟ್ಟಿದೆ.

ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಆಸ್ಟ್ರಾಜೆನಿಕಾದೊಂದಿಗೆ ಸೇರಿ ಭಾರತದಲ್ಲಿ ಲಸಿಕೆ ತಯಾರಿಸುತ್ತಿದೆ.

ಭಾರತೀಯ ಔಷಧ ಮಹಾನಿಯಂತ್ರಕರಿಂದ (ಡಿಜಿಸಿಐ) ಕೋವಿಶೀಲ್ಡ್‌ ಬಳಕೆಗೆ ದೇಶದಲ್ಲಿ ಅನುಮತಿ ಪಡೆದ ಮೊದಲ ಲಸಿಕೆ ಇದು ಆಗಲಿದೆ. ಮೊದಲಿಗೆ 30 ಕೋಟಿ ಜನರಿಗೆ ಲಸಿಕೆ ಹಾಕಿಸಲು ಸರ್ಕಾರವು ಸಿದ್ಧತೆ ಮಾಡುತ್ತಿದೆ.

ವೈದ್ಯಕೀಯ ಕೋರ್ಸ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

Publicstory. in


ತುಮಕೂರು: ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ವೈದ್ಯಕೀಯ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಜಂಟಿ ಕಾರ್ಯದರ್ಶಿಗಳಾದ ಎಸ್ ಶೇಷನಾರಾಯಣ ಅವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.

ಮಕ್ಕಳು ಮಾನವೀಯತೆಯನ್ನು ಅಳವಡಿಸಿಕೊಂಡು ಸಮಾಜದ ಉನ್ನತಿಗೆ ಸಹಕಾರಿಯಾಗಿ ಕೆಲಸ ಮಾಡಬೇಕೆಂದರು. ವೈದ್ಯಕೀಯ ವೃತ್ತಿ ಪವಿತ್ರವಾದದ್ದು ತಮ್ಮ ವೃತ್ತಿ ಬದುಕಿನಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು‌ ಎಂದರು.

ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಈ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ಯಾಗಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಧರ್ಮದರ್ಶಿಗಳಾದ ಡಬ್ಲೂ ಡಿ ಅಶೋಕ್ ಅವರು ಮಾತನಾಡಿ ನಮ್ಮ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಇಂತಹ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ.

ಇಂತಹ ಪ್ರತಿಭಾವಂತ ಮಕ್ಕಳಿಗೆ ಸಹಕಾರ ಮತ್ತು‌ ಬೆಂಬಲವನ್ನು ನೀಡುತ್ತಾ ಬಂದಿದೆ. ನಂತರ ವಿದ್ಯಾರ್ಥಿಗಳಾದ ವಿನಂತಿ ಎಸ್ ಪೂಜಾರ್, ಹರ್ಷಿತಾ, ಮನೋಜ್ ಬಿ ಹೆಚ್ ಹಾಗೂ ಕೀರ್ತನ್ ಎಸ್. ಇವರುಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜು ಬಿ ವಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ಜಿ ಟಿ. ಶೇಷಾದ್ರಿಪುರಂ ಶಾಲೆಯ ಪ್ರಾಂಶುಪಾಲರಾದ ನಂದಾರಾಜ್ ಹಾಗೂ ಪೋಷಕರು, ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.