Monday, May 11, 2026
Google search engine
Home Blog Page 159

ತುಮಕೂರಿನಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ 8‌ ಸ್ಥಾನ: MLA ಗೌರಿಶಂಕರ್

Publicstory


ತುರುವೇಕೆರೆ: 2023ರ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 8 ಜೆಡಿಎಸ್ ಸ್ಥಾನಗಳು ಗೆಲ್ಲುವ ವಿಶ್ವಾಸವಿದ್ದು ಆ ಮೂಲಕ ಎಚ್.ಡಿ.ಕುಮಾರ್ ಸ್ವಾಮಿಯವರು ಮುಖ್ಯ ಮಂತ್ರಿಯಾಗಲಿದ್ದಾರೆಂದು ತುಮಕೂರು ತಾಲ್ಲೂಕು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಭರವಸೆ ವ್ಯಕ್ತಪಡಿಸಿದರು.
ತಾಲ್ಲೂಕು ಜೆಡಿಎಸ್ ವತಿಯಿಂದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಜೆಡಿಎಸ್ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಸದಸ್ಯರು ಹಾಗು ಪರಾಜಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ತುರುವೇಕೆರೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಜೆಡಿಎಸ್ ಪಾಳಯದಲ್ಲಿ ಯಾವುದೇ ಗೊಂದಲವಿಲ್ಲ. ಮುಂದಿನ ಚುನಾವಣೆಯಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಒಳಗೊಂಡಂತೆ ಎಲ್ಲರೂ ಜಾತ್ಯಾತೀತ ಜನತಾದಳದಿಂದ ಸ್ಪರ್ಧಿಸಲಿದ್ದೇವೆ. ನಮ್ಮಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಾಗುವುದು ಎನ್ನುವ ಮೂಲಕ ಗುಬ್ಬಿ ಶಾಸಕರ ಮೇಲಿದ್ದ ಆರೋಪಗಳಿಗೆ ತೆರೆ ಎಳೆದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯ ಅಭಿವೃದ್ದಿಗೆ ಕೇವಲ 3 ಕೋಟಿ ಮಾತ್ರ ಅನುದಾನ ನೀಡಿದೆ. ಕ್ಷೇತ್ರದ ಅಭಿವೃದ್ದಿಗೆ ಹಣವಿಲ್ಲದೆ ಸರ್ಕಾರ ದಿವಾಳಿಯಾಗಿದೆ. ಬಿಜೆಪಿ ಹಣದಿಂದ ರಾಜಕೀಯ ಮಾಡಿದರೆ ಜೆಡಿಎಸ್ ರೈತರ, ಜನರ ಪ್ರೀತಿ ವಿಶ್ವಾಸ ಮತ್ತು ಸ್ವಾಭಿಮಾನದಿಂದ ಅಧಿಕಾರಕ್ಕೆ ಬರುತ್ತದೆ.
ಬಿಜೆಪಿಯೊಂದಿಗೆ ಮೈತ್ರಿ ಇಲ್ಲ: ದೇಶದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಒಂದು ಚಾರಿತ್ರಿಕವಾದ ಹಿನ್ನೆಲೆ ಹಾಗು ಜನಾಭಿಮಾನವಿದೆ. ಹೀಗಿರುವಾಗ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಹಾಗು ವಿಲೀನ ಮಾಡಿಕೊಳ್ಳುವ ವಿಚಾರ ಸತ್ಯಕ್ಕೆ ದೂರವಾದದು.
ಗ್ರಾ.ಪಂ ಅಧ್ಯಕ್ಷ- ಉಪಾಧ್ಯ ಸ್ಥಾನಗಳ ಮೀಸಲಾತಿಗಾಗಿ ಜಿಲ್ಲೆಯಾದ್ಯಂತ ತೆರೆಮರೆಯ ರಾಜಕೀಯ ದಂಧೆಗಳು ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಹಾಗು ಸಚಿವರು ಹೇಳಿದಂತೆಯೇ ಅಥವಾ ಚುನಾವಣಾ ಆಯೋಗದಂತೆ ಮೀಸಲಾತಿ ಮಾಡಲಾಗುತ್ತಿದೆಯೇ ಎಂದು ಜಿಲ್ಲಾಧಿಕಾರಿಗಳಿಗೆ ದೂರವಾಣಿಗಳ ಮೂಲಕ ಮಾರ್ಮಿಕವಾಗಿ ಪ್ರಶ್ನಿಸಿರುವುದಾಗಿ ಹೇಳಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪಿ 309 ಜೆಡಿಎಸ್ ಬೆಂಬಲಿತ ಗ್ರಾ.ಪಂ ಸದಸ್ಯರುಗಳ ಆಯ್ಕೆಯಾಗಿದ್ದು ನಮ್ಮಲ್ಲಿನ ಕೆಲವರನ್ನು ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಮಾಡುವುದಾಗಿ ಶಾಸಕ ಮಸಾಲಜಯರಾಂ ಆಮಿಷ ಒಡ್ಡುತ್ತಿರುವುದು ನಾಚಿಕೆಗೇಡಿನ ಸಂಗತಿ. ನಿಮ್ಮೊಂದಿಗೆ ನಾನಿದ್ದೇನೆ ಯಾರ ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡ ಬೇಡಿ ಎಂದು ಕಾರ್ಯಕರ್ತರು, ಮುಖಂಡರು ಮತ್ತು ನೂತನ ಗ್ರಾ.ಪಂ ಸದಸ್ಯರುಗಳಿಗೆ ಧೈರ್ಯ ತುಂಬಿದರು.
ರಾಜ್ಯ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರೇಶ್ ಮಾತನಾಡಿ, ಮಾಜಿ ಪ್ರಧಾನ ದೇವೇಗೌಡರು ಹಾಗು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವಧಿಯಲ್ಲಿ ರೈತರಿಗೆ, ಹಿಂದುಳಿದವರು, ದೀನದಲಿತರ ಆಶಾಕಿರಣವಾಗಿ ಕೆಲಸ ಮಾಡಿರುವುದನ್ನು ನೆನಪಿಸಿದರು. ರಾಜ್ಯದಲ್ಲಿ ಬಿಜೆಪಿ ಹಣ ಬಲದಿಂದ ಅಧಿಕಾರ ಹಿಡಿಯಲು ಹವಣಿಸಿದರೆ ನಮ್ಮ ಪಕ್ಷ ಜೆಡಿಎಸ್ಗೆ ರೈತರೇ ಸಂಪತ್ತು ಮತ್ತು ಆಸ್ತಿಯಾಗಿದ್ದಾರೆ. ಎಂ.ಟಿ.ಕೃಷ್ಣಪ್ಪ ಅವರ ತಾಲ್ಲೂಕಿನ ಕೋಟ್ಯಂತರ ರೂಪಾಯಿಗಳ ಅಭಿವೃದ್ದಿ ಕಾರ್ಯಗಳ ಬಗ್ಗೆ ಜನರು ಇಂದಿಗೂ ಸ್ಮರಿಸುತ್ತಾರೆ ಎಂದರು.
ಇದೇ ವೇಳೆ ಬಿಜೆಪಿ ತೊರೆದು ಜೆಡಿಎಸ್ ಸೇರಿದ ಕಾರ್ಯಕರ್ತರುಗಳನ್ನು ಪಕ್ಷಕ್ಕೆ ಶಾಸಕರು ಸೇರಿಸಿಕೊಂಡರು. ಹಾಗು ನೂತನ ಗ್ರಾಮ ಪಂಚಾಯಿತಿ ಸದಸ್ಯರು ಹಾಗು ಪರಾಜಿತ ಅಭ್ಯರ್ಥಿಗಳಿಗೆ ಶಾಲು ಹಾಕಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸ್ವಾಮಿ, ಮುಖಂಡರುಗಳಾದ ಮಧುಸೂಧನ್, ವಿಜಯೇಂದ್ರ, ವೆಂಕಟಾಪುರ ಯೋಗೀಶ್ ಇನ್ನಿತರರು ಪಾಲ್ಗೊಂಡಿದ್ದರು.

ಮೆದೆಕಡುಕ ಅಂದ್ರೆ ಯಾರು ಗೊತ್ತಾ ನಿಮಗೆ?

0

ಉಜ್ಜಜ್ಜಿ ರಾಜಣ್ಣ


ಒಮ್ಮೊಮ್ಮೆ ಕಾಲಸ್ಥತಿ ಒಂದೇ ಸಮನಿರಲ್ಲ ಹೊಂದಿಕೊಂಡೋಗುತ್ತರಬೇಕು. ಉದ್ದಾಕುದ್ದ ಮೊಣಕಾಲುದ್ದ ಎಂದುಕೊಂಡು ಹೋಗೋದು. ಎಲ್ಲಾ ಕಾಲೂ ಇಂಗೆ ಇರಲ್ಲ ಒಳ್ಳೆ ಕಾಲ ಬಂದೇ ಬರುತ್ತವೆ. ಇದ್ದುದ್ದು ಇದ್ದಂಗೇ ಇರಲ್ಲ. ನಡೆಯೇದೆ ಎಡವೋದು.

ಅರಿಗಡುಕ ಮತ್ತು ಮೆದೆಕಡುಕ ಹಾಗು ಅದಿಗಡುಕ ಮೂಲದ ಮಳೆಗಳಿದ್ದಾವಲ್ಲ… ಅವು ಹೀಗೆ. ದಶಕದಲ್ಲಿ ಒಂದೆರಡು ಬಾರಿ ಮಾತ್ರ ಸುರಿಯುತ್ತವೆ. ಜನವರಿಯಲ್ಲೂ ಈ ವರ್ಷ ಮಳೆಗಾಲ ಮಾಡುತ್ತಿರುವ ಮಳೆಗಳಿವು.

ಇವು ಸುರಿಯದೆ ಹೋದರೆ ಹೋಗೇ ಬಿಡುತ್ತವೆ ಕಾಲದೊಳಗೇ ಅವಿತು ಬಿಡುತ್ತವೆ.

ಕಾಲಮಾನವನ್ನೇ ಮರೆತು ಅನೇಕ ವರ್ಷ ಮಲಗಿದಂತಿರುವ ಇವು ಒಮ್ಮೊಮ್ಮೆ ರಪಡಿಸಿ ಸುರಿದು ಕಣಗಾಲ ಮತ್ತು ಕೊಯ್ಲೋತ್ತರ ಕಾಲವನ್ನು ನೀರುಪಾಲು ಮಾಡುತ್ತವೆ. ಫಸಲು ಅದ್ವಾನ ಅಡವಿಪಾಲಾಗುತ್ತದೆ.

ಇರುವೆ ಗೂಡು ಸೇರುಬೇಕಾದುದೂ ಹಾಳಾಗಿ ಅವೂ ಉಪವಾಸ ಬೀಳುವಂತಾಗುವುದು. ವಾಡೆ ಮೂಡೆ ಸೇರಬೇಕಾದ ದಿನಸಿ ಅರಿ ಒಳಗೆ, ಮೆದೆಯೊಳಗೆ, ಕಣದೊಳಗೆ, ಹೊಲದೊಳಗೆ ಮೊಳಕೆ ಹೊಡೆಯತೊಡಗುವುದು.

ಕೊಯ್ಲೋತ್ತರ ಕೆಲಸಗಳು ಮುಗಿದಾಗ ಅಥವಾ ಕೊಯ್ಲು ನಡೆಯುತ್ತಿರುವಾಗ ಅಥವಾ ಇನ್ನೇನು ಕೊಯ್ಲು ಕೈಗೊಳ್ಳಬೇಕೆನ್ನುವಾಗ ಅಂಡುಮರ ಸವರಿ ಕಣ ಮಾಡುವಾಗ ಅರಿಗಡುಕ ಮತ್ತು ಮೆದೆಗಡುಕ ಹಾಗು ಅದಿಗಡುಕ ಮಳೆಗಳು ಕಣ್ಣು ಮುಚ್ಚಿಕೊಂಡು ಸುರಿದುಬಿಡುತ್ತವೆ. ಸಾಮಾನ್ಯವಾಗಿ ಫಸಲು ಜಾಸ್ತಿಯಾದ ವರ್ಷವೇ ಹೆಚ್ಚಾಗಿ ಈ ಮಳೆಗಳು ಸುರಿಯುವುದು ಕಂಡುಬರುತ್ತದೆ.

ಅಕಾಲಿಕವಾಗಿ ಪ್ರಾರಂಭವಾಗಿ ಅಕಾಲಿಕವಾಗಿ ಅಂತ್ಯಗೊಂಡು ಕೊಯ್ಲು ಅಖೈರು ಕೊನೆಯ ಭಾಗದಲ್ಲಿ ರೈತರಿಗೆ ಇನ್ನಿಲ್ಲದ ತೊಂದರೆ ತಂದೊಡ್ಡುವ ಮಳೆಗಳಿವು.

ಇವೇನು ಹವಾಮಾನ ಬದಲಾವಣೆಯ ವೈಪರೀತ್ಯಗಳಿಂದ ಉಂಟಾಗುವ ಸಾಧ್ಯತೆಗಳೇನಲ್ಲ. ಪುತ್ರಪೂವತ್ತುಅಜ್ಜಮುತ್ರ ಕಾಲದಿಂದಲೂವೆ ಸುರಿಯುವ ಮೂಲದ ಮಳೆಗಳು‌ ತಾತ ಮುತ್ತಾತರ ಕಾಲದಿಂದಲೂವೆ ಪೂವ್ರುದಿಂದಲೂ ಬರುತ್ತಿವೆ. ಸಿಕ್ಕುಮುತ್ತಿ, ದೊಡ್ಡಮುತ್ತಿ, ಚಿತ್ತಯ್ಯ, ಕಾಟಯ್ಯ ಸಣ್ಣಸಿತ್ತೇಗೌಡ, ದೊಡ್ಡ ಸಿತ್ತೇಗೌಡ ದ್ಯಾವ್ರುದೈಮಾರ, ಮಗ ಮಲಿಗೊಂಡ ಅವುನ ಮಗ ಜುಂಜಪ್ಪುನು ಕಾಲುದಿಂದುಲೂ ಸಿರೇವುದು ದೊರೆ ರಂಗಪ್ಪ, ಚೇಳೂರುದೊರಿಗಳು, ಅಳುನೋರು ದೊಡ್ಡಕ್ಕ ವಿಶೇಷವಾಗಿ ಕಾಯವುರೆ ಬಳಿಯೋ ಕಾಲುಕ್ಕೂವೆ ಆಗಾಗ ಬಂದು ಕೆಡಸಣ್ಣನು ಕತೆ ಮಾಡುತ್ತಲೇ ಇವೆ.

ಇವು ಅದಿಗಡುಕ ಮೆದೆಗಡುಕ ಅರಿಗಡುಕ. ಅದಕಿಂತಲೂ ಮುಂಚೆ ಅಬೆರಾಯ, ತುಂಬೆರಾಯ ಕಂಚಿರಾಯ ಕಾಳೆರಾಯ ಒನಿಕೆರಾಯ ಒಡೆರಾಯ ಕಾಲದಿಂದಲೂ ಅರಿ ಮೇಲೆ ಮೆದೆ ಮೇಲೆ ಅದಿ ಹುಲ್ಲಿನು ಮೇಲೆ ಹುಲ್ಲೀಡಿನು ಮೇಲೆ, ಅರೆಬಣವೆ ಮೇಲೆ, ತೆನೆ ಹುಲ್ಲು ನೆನಿಯಂಗೆ, ಜೀವಹುಲ್ಲು ಮಳಿಕೊಡಿಯಂಗೆ ಅರಿಗಡುಕ ಮೆದೆಗಡುಕ ಅದಿಗಡುಕ ಮಳೆ ಬಂದಿವೆ. ಜೀವ್ದುಲ್ಲು ನಿಲುವಿನು ಮೇಲಿದ್ದಾಗ ಇವು ಸುರುದುರೆ ತೆನೆ ನೆನೆದು ಕುಬುಸ ಬಿಟ್ಟು ರಾಗಿ ಬಳಬಳನೆ ಸುರಿಯುವುದು.

ಹೊಸದಾಗಿ ವಟ್ಲು ಬಿತ್ತಿದಂತಾಗುವುದು. ಸ್ವಾಭಾವಿಕವಾಗಿ ವಾಡಿಕೆಯಂತೆ ಬರುವಂತಹ ಮೂಲದ ಮಳೆಗಳಾಗಿರುತ್ತವೆ. ಬಂದರೆ ಬಂದೇ ಬಿಡುತ್ತವೆ ಹೋದರೆ ಹೋಗೇ ಬಿಡುತ್ತವೆ.

ಹೋದರೇನೋ ಯಾಸಟ್ಟಿಗೆ ಅದ್ಕಂದು ಬಿಡಬಹುದು ನಿಧಾನವಾಗಿ ಕಣ ಬದುಕು ನಡೆಯುತ್ತದೆ. ಇವು ಸುರುದರಂತೂ ಹೊಲಕೋಟು ಮನಿಗೋಟು ಎಲ್ಲಾ ನೀರುಪಾಲು ಅಲಾಕು ಮೂರು ಪಾಲು. ತೀರಾ ಹಿಂಗಾಡಿ ಮಳೆಗಳಿವು. ತೀರಾ ಹಿಂಗಾಡಿ ಮಳೆಗಳಾದರೂವೆಯೂ ಕೈ ಬಾಯಿಗೆ ತೊಂದರೆ ನೀಡಿಯೂ ಕೆರೆಕಟ್ಟೆಗೆ ನೀರು ಮಡುತ್ತವೆ. ಕೃಷಿಯ ಕೈಸಲುಗಳಿರುವಂತಹ ಕೆರೆ ಕಟ್ಟೆಗಳಿಗೆ ನೀರಾದರೆ ಮೂಗುಜನುಮುಕ್ಕೆ ವರ್ಷಾರುತಿಗಳಿಗೆ ನೀರಿನ ಆಸರೆ ಆಗುತ್ತದೆ. ಕಣ್ಣಮುಂದುಲು ಬದುಕು ಮೂರಾಬಟ್ಟೆಯಾಗಿ ಕೊಚ್ಚಿ ಹೋಗುತ್ತಿರುತ್ತದೆ.

ಮಾವು ಮರುಗಿ ಬೇವು ಫಲವಾದರೆ ದೇವು ಲೋಕದ ಫಲ ಎಂಬುದು ಜನರ ನಂಬಿಕೆ. ಮಾವು ಮರುಗಿ ಬೇವು ಫಲವಾದ ವರ್ಷ ಸಾಮಾನ್ಯವಾಗಿ ಮಾವು ಬಹುಬೇಗ ಚಿಗುರಿ ಮೈಯ್ಯೆಲ್ಲಾ ಹೂವಾಡಿದರೂ ಫಸಲು ಕಟ್ಟುವುದು ಕಡಿಮೆ.

ಸಾಮಾನ್ಯವಾಗಿ ಮಾವಿಗೆ ಜೇಡ ನೂಲಾಡಿ ಸೀಡೆ ಹತ್ತಿ ಫಲ ಕಮ್ಮಿಯಾಗುವುದು. ನಿಧಾನವಾಗಿ ಹೂವು ಮರುಗಿದಂತೆ ಬೇವು ಹೂವಾಡಲು ಶುರುವಿಡುತ್ತದೆ. ಕಣದೊಳಗೆ ಶಂಖ ಭವುನಾಸಿ ಬಂದು ದಾಸಯ್ಯನ ಇಕ್ಕೋ ಹಿತ್ತಿಗೆ ಮಾವು ಹೂವಾಗಿ ಬಂದು ಬಿಡುತ್ತದೆ. ಆದರೆ ಈ ವರ್ಷ ಮಾವು ಕಾಲಕ್ಕೆ ಮುಂದಾಗಿ ಹೂವಾಡಿದೆ.

ಕೊಯ್ಲು ಮುಗಿದು ಸಂಕ್ರಾಂತಿ ಬಂದು ಬಣವೆಗೆ ಮುಳ್ಳಾಕಿ ಸಂಕ್ರಾಂತಿ ಹಬ್ಬವಾದ ನಂತುರುಕೇ ಕಣಬದುಕು. ಸಿವುರಾತ್ರಿಗೆಲ್ಲಾ ಕಣಗಾಲ ಮುಗಿಯೋದು.

ಸಂಕ್ರಾಂತಿ ಹೊತ್ತಿಗೆ ಸೊಗುಡವರೆ ಕಾಲ ಇನ್ನೂ ಮುಗಿದಿರುವುದಿಲ್ಲ. ಸೊಗಡವುರೆ ಬಾರೆಗಳು ಬೆಚ್ಚಬೆಚ್ಚಿ ಕಾಯುವ ಬಿಸಿಲಿಗೆ ಅವರೆ ಸೊಗಡಿನ ವಾಸನೆ ಬಾರೆಬಂಕದೊಳಗೆಲ್ಲಾ ಹಾಗೆಯೇ ಇಡ್ರಿಸುತ್ತಿರುತ್ತದೆ.

ರಾಶಿ ಪೂಜೆಗೆ ಒದಗಲು ಮಾವು ಹೂವಾಗುತ್ತಿರುತ್ತದೆ. ಬ್ರಹ್ಮದಂಡೆ ಹೂವೂ ಮೊಗ್ಗಾಗುವ ಕಾಲಮಾನ. ತುಂಬೆ ಪೊಪ್ಪಾಗಲು ಗಿಡ ಬನಿಯಾಗುತ್ತಿರುತ್ತದೆ. ಕಣಗಲು ಗಿಡಕ್ಕೆ ಸಂಕ್ರಾಂತಿಯು ಹೊಸ ಮೊಗ್ಗಿನ ಕಾಲ.

ರಾಶಿ ಪೂಜೆ ಎಡೆಗೆ ಆಗಲೇ ದೊಡ್ಡಿ ಬತ್ತ ಕೊಯ್ಲಲಾಗಿ‌ ಸರುಗಂತೆ ಹೊಡೆಯುವುದು ಮುಗಿದು ಭತ್ತ ಮನೆ ಸೇರುವ ಹೊಸ ಫಲವಾಗಿ ಒಣಗಲೊಳಗೇ ಮಾಗುತ್ತಿರುತ್ತದೆ. ಹೊಲ್ದಬಾರೆಯ ದೇಶವಾಳದ ಒಳಗೆ ಧೂಪಕಣಗಲ ಹೂವು ಹೊಸ ಬಾನಕ್ಕೆ ಮೊರದೊಳಗೇ ಮೊಗ್ಗಾಡಿ ಎಸಳು ಬಿಚ್ಚಿ ಅರಳುವ ಕಣಕಾಲಕ್ಕೆ ಸರಿಯಾಗಿ ಸುತ್ತಿಕ್ಕಿ ಎಸಳರಳುವ ಸುತ್ತಕಣಗಲು ಹೂವಿಗೂ ಕೊಯ್ಲೋತ್ತರ ಸಮಯದಲ್ಲಿ ಹೊಸಕಾಲ. ಅರಿಗಡುಕ ಮರೆಗಡುಕ ಅದಿಗಡುಕ ತಡದು ಮಳೆ ಬಿಡುವಿಲ್ಲದ ಹಾಗೆ ಬಂದರೆ ಇವೆಲ್ಲವೂ ಹಾನಿಗೊಳಗಾಗುವವು. ಒಂದು ಸಿಕ್ಕರೆ ಇನ್ನೊಂದಕ್ಕೆ ಭಂಗಪಡುವಂತಾಗುವುದು. ಕೃಷಿ ಕೆಲಸಗಳು ಹಿಂದುಮುಂದಾಗುವವು. ಕಣಗಾಲ ತಡವಾಗುತ್ತದೆ.

ಅರಿಗಡುಕ ಮತ್ತು ಮೆದಿಗಡುಕ ಮಳೆಯನ್ನು ಅದಿಗಡುಕ ಎಂತಲೂ ಕರೆಯಲಾಗುತ್ತದೆ. ಆಗತಾನೆ ಕೊಯ್ಲು ಮಾಡುವ ಸಮಯ ಮುಗಿದು ಜೀವದ ಹುಲ್ಲು ಬಣವೆ ಮಾಡಲು ‌ರೈತರು ಅದಿ ಮಾಡುವ ಕಾರ್ಯದಲ್ಲಿ ತೊಡಗುತ್ತಿರುವಾಗ ಅರಿಕಡುಕ ಮೆದೆ ಕಡುಕ ಶುರುವಾಗಿ ಬಣವೆಯ ಅದಿ ಮಾಡಿದ ಜೀವದ ಹುಲ್ಲು ಮೇಲೂ ಸುರಿದು ತೊಂದರೆ ಕೊಡುವ ಮೂಲಕ ತನ್ನ ಅಟ್ಟಹಾಸ ಮೆರೆಯುವವು.

ಕಣದ ಮೇಲೆ ಬರುವ ಮಳೆಗಳೂ ಆಗಿರುತ್ತವೆ ಇವು. ಅಡ್ಡೆ ಮೇಲೆ ನೀರಿತ್ತು ಒಯ್ದು ರೈತರು ಕಣಮಾಡಿರುತ್ತಾರೆ. ಆಗಿನ್ನೂ ಕಣಗಾಲ ಪ್ರಾರಂಭವಾಗಿರುತ್ತದೆ. ಹುಳ್ಳಿಕಂಕಿ, ಹುಚ್ಚೆಳ್ಳು ಗಡ್ಡಿ, ತೊಗರಿ ಸೇರಿದಂತೆ ಅಕ್ಕಡಿ ಸಾಲುಗಳ ಕೃಷಿಯ ಉಪ ಉತ್ಪಾದನ್ನಗಳು ಅವುರೆ ಕಡ್ಡಿಯಾದಿಯಾಗಿ ಕಣಕ್ಕೆ ಬರುತ್ತಿರುವಾಗ ಮಳೆ ಸುರಿಯುತ್ತದೆ.

ರೈತರಿಗೆ ಬೇಜಾರು ಇದೇನು ಮಳೆ ಕಣ್ಣುಮುಚ್ಚಿಕೊಂಡು ಸುರಿಯುತ್ತಲ್ಲ ಕಣ್ಣಿಗೆ ಕಾಣದಂಗೆ ಹೋಗುಬಾರದೆ. ಕಾಲಕ್ಕೆ ಸರಿಯಾಗಿ ಬರದೆ ಕಾಲವಿಲ್ದ ಕಾಲದಲ್ಲಿ ಮಳೆ ಸುರಿಯುತ್ತದೆ ಎಂದು ಜನ ಮನಿಗೂ, ಕಣಕೂ, ಹೊಲಕೂ ಇನ್ನಿಲ್ಲದ ಸಿಟ್ಟಿನಿಂದ ರಾಪಾಡುವರು.

ಅರಿಕಡುಕ ಮತ್ತು ಮೆದೆಕಡುಕ ಮಳೆ ಈ ವರ್ಷ ಬಹಳ ಯೋಗವಾಗಿರುವಂತಿವೆ. ಬಿದ್ದ ಮಳೆಗೆ ಅರಿ ನೆನೆದು ತೊಪ್ಪೆಯಾಗಿದೆ. ಮೆದೆ ಮಾಡಿದ ಜೀವದ ಹುಲ್ಲು ಮಳೆಗೆ ಸಿಕ್ಕಿತು. ರಾಗಿ ಮೆದೆಯೊಳಗೇ ಮೊಳಕೆಯಾಗತೊಡಗಿರುವುದು. ರೈತಾಪಿಯನ್ನು ಬಹುಭಾದೆಗೆ ಒಳಪಡಿಸಿರುವ ಮಳೆ ಕೈಯ್ಯಿಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿರುವುದು.

ಖೂಳೆ ಹುಲ್ಲಿನ ಮೇಲೆ ಮಣ್ಣು ಸಿಡಿದು ತ್ಯಾವಿಸ್ಕಂದು ಕಮ್ಮನೆಯ ಕಡ್ಡಿ ಹಸಿಯಿಂದ ಒದ್ದೆ ಮುದ್ದೆಯಾಗಿ ಬಿಸಿಲತ್ತಿ ಬಿಸಿಲತ್ತಿ ಮೆಳೆ ಸುರಿದು ಗೆದ್ದಲು ಹಿಡಿದು ಒಂತರಾ ವಾಸನೆ ಬಂದು ಖೂಳೆ ಹುಲ್ಲು ಮೇಯಲು ದನಕುರಿ ಆಡುಗಳು ಬಾಯಾಡಲು ಮೆಲುಕಾಡಿ ಮೇಯಲು ನೆಲಕೆ ಮುಸುಡಿ ಹಿಡದಂತಾಗಿರುವುದು. ಹುಲ್ಲು ಗೆಂಟೆ ಮೂಸುನೋಡಿಕೊಂಡು ತಟ್ಬಡಿಯುತ್ತವೆ. ಆಡು ಕುರಿಗಳ ಪಾಡೂ ಹೀಗೇ ಆಗಿದೆ.

ಏಕಾಏಕಿ ಬಂದ ಜೆಸಿಬಿ ಮಾಡಿದ ಅವಾಂತರಕ್ಕೆ ಜನ ಹೈರಾಣು…

Publicstory


ತುಮಕೂರು: ನಗರದ ವಿದ್ಯಾನಗರದ ನಾಲ್ಕನೇ ಕ್ರಾಸ್ ಬಂದ ಜೆಸಿಬಿ ಮಾಡಿದ ಅವಾಂತರಕ್ಕೆ ಜನರು ಹೈರಾಣಾದರು.

ಜನರ ದೂರು ಕೇಳಿ ಸ್ಥಳಕ್ಕೆ ಬಂದ ಪಾಲಿಕೆ ಎಂಜಿನಿಯರ್ ಹಾಗೇ ಬಂದು ಹೀಗೆ ಹೋದರು. ಎಂಜಿನಿಯರ್ ಬಂದೋದ ಮೇಲೆ ಎಲ್ಲ ಮನೆಗಳಲ್ಲಿ ನಲ್ಲಿ ಸರಿಯಾಗಲಿದೆ ಎಂದ ಕಾದ ಜನರಿಗೆ ಮಾತ್ರ ನಿರಾಶೆಯಾಯಿತು.

ಕೊನೆಗೂ ಒಬ್ಬೊಬ್ಬರು ಒಂದೊಂದು ಸಾವಿರದವರೆಗೂ ಖರ್ಚು ಮಾಡಿ ಮನೆಯ ನೀರಿನ ಸಂಪರ್ಕ ಸರಿಪಡಿಸಿಕೊಂಡರು.

ಹಾಗಾದರೆ ಆಗಿದ್ದೇನು


4 ನೆ ಕ್ರಾಸ್ ವಿದ್ಯಾನಗರ ದಲ್ಲಿ ಹಳೆಯ ಮೋರಿಯನ್ನು ಕಿತ್ತು ಹಾಕಿ ಹೊಸ ಮೋರಿ ಮಾಡುವ ಕೆಲಸಕ್ಕಾಗಿ ಹೀಗೆ ಈ ಬೀದಿಯವರ ಮನೆಯವರ ನೀರು, ಯುಜಿಸಿ ಪೈಪ್ ಕಿತ್ತು ಹಾಕಲಾಯಿತು! ಜೆಸಿಬಿಯಲ್ಲಿ ಕೆಲಸ ಮಾಡಿಸಿದ ಕಾರಣ‌ ಯಂತ್ರಕ್ಕೆ ಸಿಲುಕಿದ ಪೈಪ್ ಗಳೆಲ್ಲ ಪುಡಿಪುಡಿಯಾದವು.

ಇದರಿಂದ ನಾಗರಿಕರು ಪಡ ಬಾರದ ಕಷ್ಟ ಪಟ್ಟರು.aee ಭೇಟಿ ಇತ್ತರಾದರೂ contractor ಬರಲಿಲ್ಲ.. ಅರೆ ಬರೆ ರಿಪೇರಿ ಮಾಡಿ ನಾಪತ್ತೆಯಾದರು ಎಂದು ಇಲ್ಲಿನ ಜನರು ಹಿಡಿಶಾಪ ಹಾಕಿದರು.

ನಾವೇ ರಿಪೇರಿ ಮಾಡಿಕೊಳ್ಳಬೇಕಾಯಿತು.ಇದರ ಬದಲು ಅಗೆಸಿ ಕೊಡಿ ಎಂದು ಹೇಳಿದ್ದರೆ ನಾವೇ ಕಾರ್ಮಿಕರನ್ನು ಬಳಸಿಕೊಂಡು ಅಗೆಸಿಕೊಡುತ್ತಿದ್ದವು ಎಂಬುದು ನಾಗರಿಕರ ಅಳಲಾಗಿತ್ತು.

ಕಲ್ಲು ಚಪ್ಪಡಿ ಎತ್ತಿ manual labour ಮೂಲಕ ಮಾಡ ಬೇಕಾದ ಕೆಲಸಕ್ಕೆ ಬೇಕಾ ಬಿಟ್ಟಿಯಾಗಿ ಜೆಸಿಬಿ ಎಳೆದು ಮನೆ ಮಾಲೀಕರ ಜೇಬಿಗೆ ಕತ್ತರಿ ಬಿತ್ತು..ಇದಕ್ಕೆ ಉತ್ತರಿಸುವವರು ಯಾರು?

ಕೊರೋನಾ ಪಾಸ್ ಬೇಡ- ಸಚಿವ ಸುರೇಶ್ ಕುಮಾರ್

ಪಾವಗಡ: ಕೊರೋನಾ ಪಾಸ್ ಎಂಬ ಕೆಟ್ಟ ಹೆಸರು ಬಾರದಿರಲಿ ಎಂಬ ದೃಷ್ಟಿಯಿಂದ ಪರೀಕ್ಷೆ ನಡೆಸಲಾಯಿತು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ವಳ್ಳೂರು ಗ್ರಾಮದಲ್ಲಿ ಶನಿವಾರ ಸಂಜೆ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಟ್ಯಾಬ್ ವಿತರಿಸಿ, ಪರೀಕ್ಷೆ ಇಲ್ಲದೆ ಎಲ್ಲರನ್ನೂ ಪಾಸ್ ಮಾಡಿದ್ದರೆ  ಮಕ್ಕಳು  ಪರೀಕ್ಷೆ ಬರೆಯದೆ ಉತ್ತೀರ್ಣರಾಗಿದ್ದಾರೆ ಎಂಬ ಕಪ್ಪು ಮಚ್ಚೆ ಜೀವನವಿಡಿ ಇರುತ್ತಿತ್ತು. ಜೂನ್ ಮಾಹೆಯಲ್ಲಿ ಪರೀಕ್ಷೆ ನಡೆಸಲಾಗುವುದು. ಮಕ್ಕಳು ಕೋವಿಟ್ 19 ಸುರಕ್ಷತಾ ಕ್ರಮ ಅನುಸರಿಸಿ ಹೊರಗಡೆ ತಿಂಡಿ, ಆಹಾರ ಸೇವಿಸದೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

 

 

 

 

 

 

ಜನವರಿ 11 ರಿಂದ 1 ರಿಂದ 4 ನೇ ತರಗತಿ ಮಕ್ಕಳಿಗೆ ನಲಿಯುತ್ತಾ ಕಲಿಯೋಣ ಆಕಾಶವಾಣಿ ಕಾರ್ಯಕ್ರಮ ಆರಂಭಿಸಲಾಗುವುದು. ಪೋಷಕರು ಕಾರ್ಯಕ್ರಮವನ್ನು ಮಕ್ಕಳಿಗೆ ಕೇಳಿಸಬೇಕು. ಮಕ್ಕಳ ಹಾಡು, ಇತರೆ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ಕಳುಹಿಸುವ ಅವಕಾಶವೂ ಇದೆ ಎಂದರು.

ಕೋವಿಡ್ ನಿಂದಾಗಿ ಕೆಲವೆಡೆ ಬಾಲಕಾರ್ಮಿಕರಾಗಿ ಮಕ್ಕಳು ದುಡಿಯುತ್ತಿದ್ದಾರೆ. ಮತ್ತೆ ಕೆಲ ತಾಲ್ಲೂಕುಗಳಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡಿ ಬಾಲ್ಯ ವಿವಾಹಗಳು ಹೆಚ್ಚಿವೆ. ಇವೆಲ್ಲ ಗಮನದಲ್ಲಿಟ್ಟುಕೊಂಡು ಜನವರಿ-1 ರಿಂದ 10, 12 ನೇ ತರಗತಿಗಳನ್ನು ಆರಂಭಿಸಲಾಗಿದೆ ಎಂದರು.

ಪುರುಷೋತ್ತಮರೆಡ್ಡಿ ತನ್ನ ತಾಯಿಯ ತವರೂರಿನ ಮಕ್ಕಳಿಗಾಗಿ ಟ್ಯಾಬ್ ಕೊಡಿಸುತ್ತಿರುವುದು ಮಾಧರಿ ಕಾರ್ಯ ಎಂದರು. ಗಡಿ ಗ್ರಾಮಗಳಲ್ಲಿ ಮಕ್ಕಳಿಗಾಗಿ ಶ್ರಮಿಸುತ್ತಿರುವ  ಶಿಕ್ಷಕರ ಕಾರ್ಯ ಅಭಿನಂದನೀಯ ಎಂದರು.

ವೈದ್ಯ ಡಾ. ಪ್ರಭಾಕರರೆಡ್ಡಿ, ಬಿಇಒ ಪವನ ಕುಮಾರ್ ರೆಡ್ಡಿ, ಶಿರಸ್ತೇದಾರ್ ನರಸಿಂಹಮೂರ್ತಿ, ಕಟ್ಟಾ ನರಸಿಂಹಮೂರ್ತಿ, ಪುರುಷೋತ್ತಮರೆಡ್ಡಿ, ಬಾಲಾಜಿ ಶ್ರೀನಿವಾಸ್ ಇತರರು ಇದ್ದರು.

 

ಕೈಗೆಟುಕದ ಸರ್ಕಾರಿ ಆಸ್ಪತ್ರೆ ವೈದ್ಯರು; ಪ್ರತಿಭಟನೆ

ಪಾವಗಡ: ಸರ್ಕಾರಿ ಆಸ್ಪತ್ರೆಗೆ ಬರುವ ಗರ್ಭಿಣಿಯರನ್ನು ಗಂಟೆಗಟ್ಟಲೆ ಕಾಯಿಸಲಾಗುತ್ತದೆ. ಖಾಸಗಿ ಪ್ರಯೋಗಾಲಯ, ಆಸ್ಪತ್ರೆಗಳೊಂದಿಗೆ ಇಲ್ಲಿನ ಸಿಬ್ಬಂದಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಸ್ಪತ್ರೆ ಮುಂಭಾಗ ಧರಣಿ ನಡೆಸಿದರು.

ಹೆರಿಗೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ರಾತ್ರಿ ವೇಳೆ ವೈದ್ಯರು ಸಿಗುವುದಿಲ್ಲ. ಿದರಿಂದಾಗಿ  ಬಡ ಜನತೆ ಖಾಸಗಿ ಆಸ್ಪತ್ರೆಗಳಿಗೆ ಹೋಗುಬೇಕು.  ರಕ್ತ ಕಡಿಮೆ ಇರುವ ಮಹಿಳೆಯರಿಗೆ   ಖಾಸಗಿ ಪ್ರಯೋಗಾಲಯಗಳಿಗೆ ಪರೀಕ್ಷೆ ಮಾಡಿಸಿಕೊಂಡು ಬರಲು ಕಳುಹಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ತೆತ್ತು ಚಿಕಿತ್ಸೆ ಪಡೆಯುವ ದುಸ್ಥಿತಿ ಇದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್,  ಅನಿಲ್ ಕುಮಾರ್, ಬೀದಿಬದಿ ಮಹಿಳಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷೆ ಶಶಿಕಲಾ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್,  ಮಾನವ ಹಕ್ಕು ಪರಿಷತ್ ಅಧ್ಯಕ್ಷ ಮಂಜುನಾಥ,  ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ಅಶೋಕ, ಸಾಗರ್, ದೇವರಾಜ್, ಗೌತಮ್, ರಾಜು, ಭರತ ಉಪಸ್ಥಿತರಿದ್ದರು.

ಬಸ್ ನಿಲ್ಲಿಸದ ಕೆಎಸ್ಸಾರ್ಟಿಸಿ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಸುರೇಶ್ ಕುಮಾರ್

ಕೊರಟಗೆರೆ: ತಾಲ್ಲೂಕಿನ ಐಕೆ ಕಾಲೋನಿ ಬಳಿ ಶಾಲಾ ವಿಧ್ಯಾರ್ಥಿಗಳು ಕೈ ನೀಡಿ ಸ್ಟಾಪ್ ಕೇಳಿದರೂ ನಿಲ್ಲಿಸದ KSRTC ಬಸ್ ಚಾಲಕನಿಗೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಶಿಕ್ಷಣ ಸಚಿವರು ಚಾಲಕನನ್ನ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು.

ಇದೇ ಮಾರ್ಗವಾಗಿ ಮಧುಗಿರಿಗೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಸಚಿವರು ದಾರಿಯಲ್ಲಿ ಹುಡುಗರು ಬಸ್ ಗೆ ಕೈ ಹಾಕಿ ನಿಲ್ಲಿಸುವಂತೆ ನೋಡುವುದನ್ನು ಕಂಡಿದ್ದಾರೆ. ಆದರೆ‌ ನಿಲ್ಲಿಸಲಿಲ್ಲ.

ನಂತರ ಬಸ್ ಅನ್ನು ತಡೆಯುವಂತೆ ಹೇಳಿದ ಅವರು ಬಸ್ ಚಾಲಕನ್ನು ಕೆಳಗಿಳಿಯುವಂತೆ ಹೇಳಿ ತರಾಟೆಗೆ ತೆಗೆದುಕೊಂಡರು.

ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ಬಸ್ ಸ್ಟಾಪ್ ನೀಡಲು ಸೂಚಿಸಿದರು.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಸಚಿವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಚಿನ್ನ ಕದ್ದವರಿಗೆ 10 ವರ್ಷ ಜೈಲು ಶಿಕ್ಷೆ

ಪಾವಗಡ:  ಪಟ್ಟಣದ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಶಾಖೆಯಲ್ಲಿ  ಚಿನ್ನ ದೋಚಿದ್ದ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಲಾಗಿದೆ.

ಮಣಪ್ಪುರಂ ಫೈನಾನ್ಸ್ ಲಿ. ಪಟ್ಟಣ ಶಾಖೆಗೆ 25, ಜೂನ್, 2011 ರಂದು ಹಾಸನ ಜಿಲ್ಲೆ ಅರಕಲಗೂಡಿನ ಮುಕ್ತೇಶ್, ಹರೀಶ್, ಪುನೀತ್ ರಾಜ್, ಕೃತಿಕ್ ಎಂಬುವರು ಭದ್ರತೆ ಪರಿಶೀಲನೆ ನೆಪ ಒಡ್ಡಿ ಒಳ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ಕಟ್ಟಿ ಹಾಕಿ ಸುಮಾರು 16 ಕೆ.ಜಿ. ಚಿನ್ನವನ್ನು ದೋಚಿದ್ದರು.

ತನಿಖಾಧಿಕಾರಿ ಸರ್ಕಲ್ ಇನ್ ಸ್ಪೆಕ್ಟರ್ ಎಂ.ವಿ.ಶೇಷಾದ್ರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲ ಮಂಜುನಾಥ್ ವಾದ ಮಂಡಿಸಿದ್ದರು, ಪ್ರಧಾನ ಸಿವಿಲ್ ನ್ಯಾಯಾದೀಶ ಜಗದೀಶ್ ಬಿಸೆರೊಟ್ಟಿ  ತೀರ್ಪು ನೀಡಿದ್ದಾರೆ.

ಪಾವಗಡ: ಅಂಗಡಿ ಮಳಿಗೆಗಳಲ್ಲಿ ಕಳವು

ಪಾವಗಡ: ಪಟ್ಟಣದ ಬಳ್ಳಾರಿ ರಸ್ತೆಯ ಟೈಲ್ಸ್ ಅಂಗಡಿಯ ಶೀಟ್ ಕತ್ತರಿಸಿ  8 ಸಾವಿರ ರೂ ನಗದು, ಸಿ.ಸಿ. ಟಿ.ವಿ. ಸಾಮಗ್ರಿಗಳನ್ನು ಕಳವು ಮಾಡಲಾಗಿದೆ.

ಇಕ್ಬಾಲ್ ಬಾಷ  ಎಂಬುವರಿಗೆ ಸೇರಿದ ಮೆಟ್ರೊ ಟೈಲ್ಸ್ ಮಳಿಗೆಯ ಶೀಟ್ ಕತ್ತರಿಸಿ ಗಲ್ಲಾ ಪೆಟ್ಟಿಗೆಯಲ್ಲಿದ್ದ ಸುಮಾರು 8 ಸಾವಿರ ನಗದು, ಡಿವಿಆರ್, ವೈ ಫೈ ರೌಟರ್ ಇತ್ಯಾದಿ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. ಇದೇ ರಸ್ತೆಯ ಯುವ ರಾಜ  ಇರಿಗೇಷನ್ ಸಿಸ್ಟಂ ಮಳಿಗೆಯ ಹಿಂಬದಿ ಬಾಗಿಲು ಮುರಿಯಲಾಗಿದೆ. ಕಳೆದ ವಾರ ಭವಾನಿ ಸ್ಟೀಲ್ಸ್ ಮಳಿಗೆಯಲ್ಲಿಯೂ ಕಳವಿಗೆ ಯತ್ನಿಸಲಾಗಿತ್ತು.

ಇತ್ತೀಚೆಗೆ ಪಟ್ಟಣದಲ್ಲಿ ದ್ವಿಚಕ್ರ ವಾಹನಗಳ ಕಳವು ಹೆಚ್ಚುತ್ತಿದೆ. ಪ್ರಮುಖ ರಸ್ತೆ ಬದಿಯ ಅಂಗಡಿ ಮಳಿಗೆಗಳಲ್ಲಿ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸರು ಅಗತ್ಯ ಕ್ರಮ ತೆಗೆದುಕೊಂಡು ಗಸ್ತು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಮ್ಮ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

ಪಾವಗಡ: ಪಟ್ಟಣದ ಕಮ್ಮ ಬಾಲಕ, ಬಾಲಕಿಯರ ಉಚಿತ ವಸತಿ ನಿಲಕ್ಕೆ ಎಸ್.ಎಸ್.ಎಲ್.ಸಿ. ದ್ವಿತೀಯ ಪಿಯುಸಿ, ಅಂತಿಮ ಪದವಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತಾಲ್ಲೂಕಿನ ಕಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಪ್ರವೇಶ ನೀಡಲಾಗುವುದು. ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ಇತರೆ ಹಿಂದುಳಿದ ವರ್ಗಗಳ ಬಾಲಕ, ಬಾಲಕಿಯರಿಗೂ ಕಮ್ಮ ವಸತಿ ನಿಲಯಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಕಮ್ಮ ಚಾರೀಟಬಲ್ ಟ್ರಸ್ಟ್ನ ಕಾರ್ಯದರ್ಶಿ ಡಾ.ಜಿ.ವೆಂಕಟರಾಮಯ್ಯ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಜನವರಿ-16 ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗಾಗಿ ನಿಲಯ ಪಾಲಕ ಚಂದ್ರಶೇಖರ್ ಅವರನ್ನು 9449738630 ಸಂಪರ್ಕಿಸಬಹುದು.

ಪ್ರೀತಿ ಮಾಡುವಂತೆ ಕಾಟ: 6 ವರ್ಷ ಜೈಲು ಶಿಕ್ಷೆ

Publicstory


ತುರುವೇಕೆರೆ: ತಾಲ್ಲೂಕಿನ ಕಸಬಾದ ತೊರೆಮಾವಿನಹಳ್ಳಿ ಗ್ರಾಮದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿ ಮಾಡುವಂತೆ ಒತ್ತಾಯಿಸಿ, ಬಲತ್ಕಾರಕ್ಕೆ ಯತ್ನಿಸಿದ ಆರೋಪದಡಿ ಜಿಲ್ಲಾ ಸೆಷನ್ ನ್ಯಾಯಾಲಯ ಆರೋಪಿಗೆ ಪೋಸ್ಕೋ ಕಾಯಿದೆಯಡಿ 6 ವರ್ಷ ಜೈಲುವಾಸ ವಿಧಿಸಿದೆ.

ಆರೋಪಿ ತೊರೆಮಾವಿನಹಳ್ಳಿ ಗ್ರಾಮದ ಭೈರೇಶ್(24). ಅದೇ ಗ್ರಾಮದ ಬಾಲಕಿಯನ್ನು ಪ್ರೀತಿ ಮಾಡುವಂತೆ ಪೀಡಿಸಿದ್ದರಿಂದ ಸಂತ್ರಸ್ತೆಯ ಪೋಷಕರು ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿ ಭೈರೇಶ್ ನನ್ನು 2018ರಲ್ಲಿ ಪಟ್ಟಣದ ಪೊಲೀಸರು ಕಲಂ 12ರ ಪೋಸ್ಕೋ ಕಾಯಿದೆಯಡಿ ಹಾಗು 114, 506 ಮತ್ತು 34 ಐಪಿಸಿ ಸೆಕ್ಷನ್ ಕಾಯಿದೆಯಡಿ ಬಂಧಿಸಿದ್ದರು.

ತ್ವರಿತ ಜಿಲ್ಲಾ ನ್ಯಾಯಾಲಯ ಸದರಿ ಆರೋಪಿಯ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಆರೋಪಿಗೆ 6 ವರ್ಷ ಜೈಲು ಮತ್ತು 25 ಸಾವಿರ ದಂಡವನ್ನು ವಿಧಿಸಿದೆ.

ಈ ಪ್ರಕರಣದ ಬಗ್ಗೆ ವಾದಿಸಿದ ಗಾಯಿತ್ರಿರಾಜು ಮತ್ತು ಪಟ್ಟಣದ ಪಿಎಸ್ಐ ಪ್ರೀತಂ ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಟರು ಶ್ಲಾಘಿಸಿದ್ದಾರೆಂದು ಪಟ್ಟಣದ ಪೊಲೀಸರು ತಿಳಿಸಿದ್ದಾರೆ.