Thursday, March 12, 2026
Google search engine
Home Blog Page 37

ಪುಸ್ತಕೋದ್ಯಮವನ್ನು ಸರ್ಕಾರ ಬೆಂಬಲಿಸಬೇಕು

ಬಹುರೂಪಿ’ ಸಂವಾದದಲ್ಲಿ ಹೊಮ್ಮಿದ ಅಭಿಪ್ರಾಯ

ಬೆಂಗಳೂರು- ಪುಸ್ತಕೋದ್ಯಮಕ್ಕೆ ತಮಿಳುನಾಡು ಸರಕಾರ ನೀಡುತ್ತಿರುವ ಪ್ರೋತ್ಸಾಹ ಮಾದರಿಯುತವಾಗಿದ್ದು ಕರ್ನಾಟಕದಲ್ಲಿಯೂ ಪುಸ್ತಕೋದ್ಯಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಮಿಳಿನ ಹೆಸರಾಂತ ಸಾಹಿತಿ, ಪ್ರಕಾಶಕರಾದ ಪೊನ್ ವಾಸುದೇವನ್ ಅವರು ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪುಸ್ತಕೋದ್ಯಮ ಇಂದು ಆತಂಕವನ್ನು ಎದುರಿಸುತ್ತಿದೆ. ನಾಳಿನ ಪೀಳಿಗೆಗೆ ಓದುವ ಸಂಸ್ಕೃತಿಯನ್ನು ಉಳಿಸಬೇಕಾದರೆ ಸರ್ಕಾರ ಪ್ರಕಾಶನ ರಂಗಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದರು.

ಡಿಎಂಕೆ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲಾ ಮಟ್ಟದಲ್ಲಿ ನಡೆಸುತ್ತಿರುವ ಪುಸ್ತಕ ಮೇಳಗಳು ಹಾಗೂ ಕೈಗೆತ್ತಿಕೊಂಡಿರುವ ಹಲವು ರೀತಿಯ ಸಗಟು ಖರೀದಿ ಯೋಜನೆಗಳು ಪುಸ್ತಕೋದ್ಯಮ ಉಸಿರಾಡುವಂತೆ ಮಾಡಿದೆ.

ಓದುವ ಸಂಸ್ಕೃತಿಯನ್ನು ಯಾವೆಲ್ಲಾ ರಾಜ್ಯಗಳು ರಕ್ಷಿಸಿವೆಯೋ ಅಲ್ಲೆಲ್ಲ ಪುಸ್ತಕ ಉದ್ಯಮ ಸಂಪನ್ನವಾಗಿದೆ. ಹಾಗಾಗಿ ಓದುವ ಸಂಸ್ಕೃತಿಯನ್ನು ರಕ್ಷಿಸುವ ಕಡೆಗೆ ಗಮನ ಕೊಡಬೇಕಾದ ಹೊಣೆ ಎಲ್ಲರದ್ದು ಎಂದು ವಾಸುದೇವನ್ ತಿಳಿಸಿದರು.

ಈ ಸಂದರ್ಭದಲ್ಲಿ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಕೆ ನಲ್ಲತಂಬಿ ಅವರನ್ನು ‘ಬಹುರೂಪಿ’ ಸನ್ಮಾನಿಸಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಪುಸ್ತಕ ಎನ್ನುವುದು ಅರಿವಿನ ಭಾಗ. ನಮ್ಮ ಜ್ಞಾನ ವೃದ್ಧಿಗೆ ಪುಸ್ತಕ ಓದುವ ಹವ್ಯಾಸ ಎಲ್ಲೆಡೆಯೂ ಪ್ರಸರಿಸಬೇಕಿದೆ. ಸಾಹಿತ್ಯದ ಸಹವಾಸ ನನ್ನ ವ್ಯಕ್ತಿತ್ವವನ್ನು ರೂಪಿಸಿದೆ ಎಂದು ತಿಳಿಸಿದರು.

ಬಹುರೂಪಿಯ ಸಂಸ್ಥಾಪಕರಾದ ಜಿ ಎನ್ ಮೋಹನ್, ಶ್ರೀಜಾ ವಿ ಎನ್, ಕಲಾವಿದರಾದ ಗುಜ್ಜಾರ್, ಆರ್ ಸೂರಿ, ಸಾಹಿತಿ ರಂಜನಿ ಪ್ರಭು, ಸಂಸ್ಕೃತಿ ಚಿಂತಕ ಜಿ ಎನ್ ನಾಗರಾಜ್ ಅವರು ಸಂವಾದ ನಡೆಸಿದರು.


PHOTO CAPTION

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಕೆ ನಲ್ಲತಂಬಿ ಅವರನ್ನು ‘ಬಹುರೂಪಿ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ತಮಿಳಿನ ಖ್ಯಾತ ಪ್ರಕಾಶಕರಾದ ಪೊನ್ ವಾಸುದೇವನ್, ಬಹುರೂಪಿಯ ಸಂಸ್ಥಾಪಕರಾದ ಜಿ ಎನ್ ಮೋಹನ್, ಶ್ರೀಜಾ ವಿ ಎನ್, ಕಲಾವಿದ ಗುಜ್ಜಾರ್ ಅವರು ಚಿತ್ರದಲ್ಲಿದ್ದಾರೆ.

ಪರಮೇಶ್ವರ್ ಗೆ ಗೃಹ, ರಾಜಣ್ಣಗೆ ಸಹಕಾರ, ಉಳಿದವರಿಗೆ ಯಾವ ಖಾತೆ

ತುಮಕೂರು : ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.ತುಮಕೂರು ಜಿಲ್ಲೆಯ ಡಾ.ಜಿ.ಪರಮೇಶ್ವರ್‍ಗೆ ಗೃಹ ಖಾತೆ, ಕೆ.ಎನ್.ರಾಜಣ್ಣನವರಿಗೆ ಸಹಕಾರಿ ಸಚಿವರನ್ನಾಗಿ ಖಾತೆ ಹಂಚಲಾಗಿದೆ.

ಆರ್.ಬಿ.ತಿಮ್ಮಾಪುರ- ಅಬಕಾರಿ ಮತ್ತು ಮುಜರಾಯಿ

ಎಸ್.ಎಸ್.ಮಲ್ಲಿಕಾರ್ಜುನ- ಗಣಿ, ಭೂವಿಜ್ಞಾನ

ಶಿವರಾಜ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಶರಣ ಪ್ರಕಾಶ ಪಾಟೀಲ- ಉನ್ನತ ಶಿಕ್ಷಣ ಸಚಿವ

ಮಂಕಾಳ ಸುಬ್ಬ ವೈದ್ಯ- ಮೀನುಗಾರಿಗೆ , ಬಂದರು ಮತ್ತುಒಳನಾಡು ಸಚಿವ

ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,

ರಹೀಂ ಖಾನ್- ಪೌರಾಡಳಿತ, ಹಜ್

ಡಿ.ಸುಧಾಕರ್- ಮೂಲಸೌಕರ್ಯ ಅಭಿವೃದ್ದಿ, ಯೋಜನೆ ಮತ್ತು ಸಾಂಖ್ಯಿಕ

ಸಂತೋಷ್ ಎಸ್.ಲಾಡ್- ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ದಿ ಸಚಿವ

ಜನ್ರು ಮೊದ್ಲು, ನಂತ್ರ ಎಲ್ರೂ: ಹೀಗೇಕೆಂದರು ಶಾಸಕ ಸುರೇಶಗೌಡರು

ಜನಪರ ಸಮಸ್ಯೆಗಳಿಗೆ ಮಿಡಿಯುವಲ್ಲಿ ಹೆಸರಾಗಿರುವ ಗ್ರಾಮಾಂತರ ಶಾಸಕ ಬಿ.ಸುರೇಶಗೌಡರು ತಮ್ಮ ಮೊದಲ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಕುರಿತು ಕ್ಲಾಸ್ ತೆಗೆದುಕೊಂಡರು.

ಜನರು ಮೊದಲು, ನಂತರ ಎಲ್ಲರೂ ಎಂದ ಅವರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಗ್ರಾಮದ ಪ್ರತಿ ಮನೆಗೂ ನಲ್ಲಿ ನೀರು ಹೋಗುವಂತಾಗಬೇಕು. ಕೆಟ್ಟು ನಿಂತಿರುವ ಪೈಪ್ ಲೈನ್ ಕೂಡಲೇ ಸರಿಪಡಿಸಬೇಕು ಎಂದರು.

ಸುದ್ದಿ ಪೂರಾ ಓದಿ

ತುಮಕೂರು:ಮುಂದಿನ ಒಂದು ತಿಂಗಳಲ್ಲಿ ನೆನೆಗುದಿಗೆ ಬಿದ್ದಿರುವ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಾದ ಬಹುಗ್ರಾಮ ಕುಡಿಯುವ ನೀರು ಯೋಜನೆ,ಜೆ.ಜೆ.ಎಂ ಮತ್ತು ಶುದ್ದ ಕುಡಿಯುವ ನೀರಿನ ಘಟಕಗಳು ಸಶಕ್ತವಾಗಿ ಕೆಲಸ ಮಾಡುವಂತೆ ಅಗತ್ಯ ಕ್ರಮವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳದೆ ಹೋದರೆ ಅವರ ವಿರುದ್ದ ಸರಕಾರಕ್ಕೆ ಪತ್ರ ಬರೆಯುವುದಾಗಿ ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಎಚ್ಚರಿಕೆ ನೀಡಿದ್ದಾರೆ.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಸಭೆ ನಡೆಸಿದ ಅವರು,ನೂರಾರು ಕೋಟಿ ರೂಗಳ ಅನುದಾನದಲ್ಲಿ ನಿರ್ಮಾಣವಾದ ಎಂ.ವಿ.ಎಸ್. ಆರ್.ಓ ಪ್ಲಾಂಟ್ ಮತ್ತು ಜೆಜೆಎಂ ಯೋಜನೆಗಳು ಜನರ ಉಪಯೋಗಕ್ಕೆ ಬರುತ್ತಿಲ್ಲ.ಕಳೆದ ಐದು ವರ್ಷದಲ್ಲಿ ಇಡೀ ಯೋಜನೆಯನ್ನೇ ಸಾಯಿಸಲಾಗಿದೆ ಎಂದು ಸಿಡಿಮಿಡಿಗೊಂಡರು.

ಅಧಿಕಾರಿಗಳು ಒಂದು ತಿಂಗಳಲ್ಲಿ ಇದನ್ನು ಸರಿದಾರಿಗೆ ತರದಿದ್ದರೆ ಅವರ ವಿರುದ್ದ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರುಗಳಿಗೆ ಪತ್ರ ಬರೆಯಲಾಗುವುದು.ಅಲ್ಲದೆ ತಾಲೂಕು ಕೆ.ಡಿ.ಪಿ,ಜಿಲ್ಲಾ ಕೆಡಿಪಿಸಭೆಗಳಲ್ಲದೆ, ವಿಧಾನಸಭೆ ಯಲ್ಲಿಯೂ ಇದರ ಬಗ್ಗೆ ದ್ವನಿ ಎತ್ತಲಾಗುವುದು ಎಂದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 11 ಬಹುಗ್ರಾಮ ಕುಡಿಯುವ ನೀರಿನ ಯೋಜನೆ,119 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಮಾಡಲಾಗಿದೆ. ಇದರಲ್ಲಿ ಶೇ50 ರಷ್ಟು ಕೆಲಸ ಮಾಡುತ್ತಿಲ್ಲ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕೆರೆಗಳಿಗೆ ತುಂಬಿಸಿರುವ ನದಿ ನೀರನ್ನು ಶುದ್ದೀಕರಣ ಮಾಡಿ, ಮನೆಗಳಿಗೆ ಒದಗಿಸಲು ಆಗುತ್ತಿಲ್ಲ ವೆಂದರೆ ಈ ಯೋಜನೆ ಇದ್ದೂ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು,ಎಂವಿಎಸ್ ಸ್ಕೀಂಗಳ ನಿರ್ವಹಣೆಗೆ ವಾರ್ಷಿಕ 40 ಲಕ್ಷ ದಿಂದ 60 ಲಕ್ಷ ರೂಗಳವರೆಗೆ ನಿರ್ವಾಹಣಾ ವೆಚ್ಚ ನೀಡಲಾಗುತ್ತಿದೆ.

ನಿರ್ವಹಣೆಯ ಗುತ್ತಿಗೆ ಪಡೆದವರು ಸರಿಯಾಗಿ ಕಾರ್ಯನಿರ್ವ ಹಿಸುತ್ತಿಲ್ಲವೆಂದರೆ ಅವರಿಗೆ ನೊಟೀಷ್ ನೀಡಿ,ಸ್ಪಂದಿಸದಿದ್ದರೆ ಬ್ಲಾಕ್ ಲೀಸ್ಟ್ಗೆ ಸೇರಿಸಿ,ಅದನ್ನು ಬಿಟ್ಟು,ಗುತ್ತಿಗೆದಾರರ ಮೇಲೆ ಅಧಿಕಾರಿಗಳು,ಗ್ರಾಮಪಂಚಾಯಿತಿಗಳ ಮೇಲೆ ಗುತ್ತಿಗೆದಾರರು ನೆಪ ಹೇಳಿ ಯೋಜನೆಯನ್ನು ಹಾಳುಗೆಡವಬಾರದು ಎಂದು ಶಾಸಕ ಸುರೇಶಗೌಡ ಎಚ್ಚರಿಕೆ ನೀಡಿದರು.


ಕ್ಷೇತ್ರದಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಾಗೂ ಶುದ್ದ ಕುಡಿಯುವ ನೀರಿನ ಯೋಜನೆಗಳ ಸ್ಥಿತಿಗತಿ ಅರಿಯಲು ಮೇ.28 ರ ಭಾನುವಾರ ಇಡೀ ಕ್ಷೇತ್ರದಾದ್ಯಂತ ಪ್ರವಾಸ ಮಾಡಲಿದ್ದೇನೆ.ಅಂದು ಅಧಿಕಾರಿಗಳು, ಸಂಬಂಧಪಟ್ಟ ಗ್ರಾಮಪಂಚಾಯಿತಿಗಳ ಅಧ್ಯಕ್ಷರು,ಕಾರ್ಯದರ್ಶಿಗಳು ಇದ್ದು ಸಮಸ್ಯೆಗಳ ಪಟ್ಟಿ ನೀಡಿದರೆ,ಪರಿಹಾರ ರೂಪಿಸಲು ಸಾಧ್ಯವಾಗುತ್ತದೆ. ಹಾಗಾಗಿ ಮೇ.28 ರ ಭಾನುವಾರ ಎಲ್ಲಾ ಆರ್. ಡಬ್ಲ್ಯೂ.ಎಸ್‌ ನ ಎಲ್ಲಾ ಅಧಿಕಾರಿಗಳು ಮತ್ತು ಆಯಾಯ ಗ್ರಾಮಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಆಗಮಿಸುವಂತೆ ಸಲಹೆ ನೀಡಿದರು.


ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಜೆ.ಜೆ.ಎಂ(ಜಲಜೀವನ್ ಮೀಷನ್) ಅಡಿಯಲ್ಲಿ ಸುಮಾರು 200 ಕೋಟಿ ರೂಗಳಿಗೂ ಹೆಚ್ಚಿನ ಅನುದಾನ ಬಂದಿದೆ. ಅಧಿಕಾರಿಗಳೇ ತಿಳಿಸಿರುವಂತೆ ಸುಮಾರು 384 ಕಾಮಗಾರಿಗಳ ಅಂದಾಜು ಮಾಡಿದ್ದು,ಇವುಗಳಲ್ಲಿ ಮೊದಲ ಹಂತದಲ್ಲಿ 43,ಎರಡನೇ ಹಂತದಲ್ಲಿ 44 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇವುಗಳಲ್ಲಿ ಬಹುತೇಕ ಪೂರ್ಣಗೊಂಡಿವೆ.ಮೂರನೇ ಹಂತದಲ್ಲಿ 149 ಕಾಮಗಾರಿಗಳಿದ್ದು,ಅವುಗಳನ್ನು ಶೀಘ್ರವೇ ಟೆಂಡರ್ ಕರೆದು,ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಗತ್ಯ ಕ್ರಮ ವಹಿಸುತ್ತೇನೆ.ಜೆಜೆಎಂ ಒಂದು ಅದ್ಬುತ ಯೋಜನೆಯಾಗಿದ್ದು, ಗ್ರಾಮಪಂಚಾಯಿತಿ ಸದಸ್ಯರು,ಅಧ್ಯಕ್ಷರುಗಳು ನಿರ್ಲಕ್ಷ ಮಾಡದೆ,ನಿಮ್ಮ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಬಿ.ಸುರೇಶಗೌಡ ತಿಳಿಸಿದರು.
ಕ್ಷೇತ್ರದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡುತ್ತಿರುವ ಕೆ.ಆರ್.ಐ.ಡಿ.ಎಲ್.,ಶ್ರೀಸಾಯಿ ಸಿರಿ ಮತ್ತು ಜಲಸಿರಿ ಏಜೆನ್ಸಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು.ಸಮರ್ಪಕವಾಗಿ ನಿರ್ವಹಣೆ ಮಾಡದ ಏಜೆನ್ಸಿ ಟೆಂಡರ್ ರದ್ದು ಪಡಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಅವರಿಗೆ ಸೂಚಿಸಿದರು.
ಜೆಜೆಎಂ ಯೋಜನೆಯಲ್ಲಿ ವೇಗವಾಗಿ ನೀರು ಬರುವುದಿಲ್ಲ ಎಂಬ ದೂರು ಇದೆ. ಇದಕ್ಕೆ ಪರಿಹಾರವೆಂಬಂತೆ ಮೈದಾಳ ಗ್ರಾಮದಲ್ಲಿ ಪ್ರಯೋಗಿಕವಾಗಿ ಎಲ್ಲಾ ಮನೆಗಳಿಗೂ ತಲಾ ಒಂದು ಟ್ಯಾಂಕ್ ವಿತರಿಸಿ, ನೀರು ಬಂದಾಗ ಅದರಲ್ಲಿ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ.ಇದೇ ರೀತಿಯಲ್ಲಿಯೇ ಎಲ್ಲಾ ಗ್ರಾಮಗಳಿಗೂ ಮಾಡಿದರೆ ಹೆಚ್ಚು ಅನುಕೂಲವಾಗಬಹುದು ಎಂದು ಶಾಸಕ ಬಿ.ಸುರೇಶಗೌಡ ಸಲಹೆ ನೀಡಿದರು.


ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ರವೀಶ್,ಎಇಇ ಅಶೋಕ, ಬಿ.ಇ.ಓ ಡಾ.ಹನುಮಾನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

ದಬ್ಬೇಘಟ್ಟಕ್ಕೆ ಶಾಸಕ ಕೃಷ್ಣಪ್ಪ ಏನಂದರು ಗೊತ್ತ

0

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಜನತೆ ಏಳು ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡುವ ಮೂಲಕ ನನ್ನ ಗೆಲುವಿಗೆ ಬಹು ಮುಖ್ಯ ಕಾರಣ ಕರ್ತರಾಗಿದ್ದಾರೆಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ತಾಲ್ಲೂಕಿನ ಮೆಲಿನವಳಗೇರಹಳ್ಳಿ ಗ್ರಾಮಸ್ಥರು ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಶಾಸಕರಿಗೆ ಅಭಿನಂಧನೆ ಹಾಗು ವಿವಿಧ ಬೇಡಿಕೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಳೆದ ಚುನಾವಣೆಗಿಂತ ಈ ಬಾರಿ ನನಗೆ ಕಸಬಾ, ದಂಡಿನಶಿವರ ಮತ್ತು ಮಾಯಸಂದ್ರ ಹೋಬಳಿಯಲ್ಲಿ ಉತ್ತಮ ವೋಟ್ ನೀಡಿದ್ದಾರೆ. ಮಾಜಿ ಶಾಸಕ ಜಯರಾಮ್ ಎ.ಎಸ್ ಚುನಾವಣೆ ವೇಳೆ ಹೇಳುತ್ತಿದ್ದರು ಸಿ.ಎಸ್.ಪುರ ಹೋಬಳಿಯಲ್ಲಿ ನನಗೆ ಹೆಚ್ಚು ಮತ ನೀಡುತ್ತದೆ ಅಂತ.ಆದರೆ ಫಲಿತಾಂಶದ ದಿನ ಗೊತ್ತಾಗಿದ್ದು ಅಲ್ಲಿಯೂ ಪ್ರಜ್ಞಾವಂತ ಜನರಿದ್ದಾರೆ. ಹೆಚ್ಚಿನ ಮತಗಳನ್ನು ನನಗೇ ನೀಡಿದ್ದಾರೆ ಅವರೆಲ್ಲರಿಗೂ ಕೃತಜ್ಞತೆಗಳು ಎಂದರು.

ಕಡಬಾ ಹೋಬಳಿಯ ಕಲ್ಲೂರ್ ಪಂಚಾಯಿತಿ ಪೈಕಿ ಉಳಿದೆಲ್ಲವೂ ಜೆಡಿಎಸ್ಗೆ ಹೆಚ್ಚಿನ ಮತಗಳನ್ನು ನೀಡಿರುವುದು ಅತ್ಯಂತ ಸಂತಸ ತಂದಿದೆ ಎಲ್ಲೊ ಒಂದು ಕಡೆ ನಾನು ಕ್ಷೇತ್ರದಲ್ಲಿ 15 ವರ್ಷ ಉತ್ತಮ ಆಡಳಿತ ಮಾಡಿ, ಜನಪರ ಸೇವೆ ಮಾಡಿದ್ದ ಜನರ ಮನದಲ್ಲಿ ಉಳಿದು ಬಿಟ್ಟಿದೆ.

ಬಂಧುಗಳೆ ಈ ಚುನಾವಣೆ ನನ್ನದಲ್ಲ. ಚುನಾವಣೆ ವೇಳೆ ನನ್ನಲ್ಲಿದ್ದ ಆರ್ಥಿಕ ಸಂಪತ್ತು ಆಕಸ್ಮಿಕವಾಗಿ ಕೈತಪ್ಪಿ ಹೋಗಿ ಸಂಕಷ್ಟದಲ್ಲಿದ್ದಾಗ ಕ್ಷೇತ್ರದ ಕಾರ್ಯಕರ್ತರು ನೀವು ದುಡ್ಡೇ ಕೊಡಬೇಡಿ ನಾವೆ ಎಲ್ಲ ಖರ್ಚು ಮಾಡಿ ಚುನಾವಣೆ ಮಾಡುತ್ತೇವೆ ಮತ್ತು ಗೆಲ್ಲಿಸುತ್ತೇವೆ ಎಂದು ನನಗೆ ಭರವಸೆ ಕೊಟ್ಟಿದ್ದರು. ಅದರಂತೆ ನಾನು ಗೆದ್ದಿದ್ದೇನೆ.ಇದು ಜೆಡಿಎಸ್ ಕಾರ್ಯಕರ್ತರ ಗೆಲುವು ನನ್ನದಲ್ಲ ನಾನು ನೆಪ ಮಾತ್ರ ಎಂದು ಭಾವುಕರಾದರು.

ಮೆಲಿನವಳಗೇರಹಳ್ಳಿಗೆ ಸುವರ್ಣ ಗ್ರಾಮ ಯೋಜನೆ ನೀಡಿದ್ದೇನೆ, ಹೇಮಾವತಿ ನಾಲಾ ಪಿಕಪ್ ಡ್ಯಾಮ್, ಸೇತುವೆ ಸೇರಿದಂತೆ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದೆಯೂ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವುದಾಗಿ ಭರವಸೆ ನೀಡಿದರು.

ರಾಜ್ಯದಲ್ಲಿ ಎಚ್.ಡಿ.ಕುಮಾರ ಸ್ವಾಮಿ ಸರ್ಕಾರ ಬಂದಿದ್ದರೆ ಕ್ಷೇತಕ್ಕೆ ಅನುದಾನದ ಮಹಾಪೂರವೇ ಹರಿದು ಬರುತ್ತಿತ್ತು. ಆದರೂ ತಾಲ್ಲೂಕಿನ ಅಭಿವೃದ್ದಿಗೆ ನಾನು ಶ್ರಮವಹಿಸುತ್ತೇನೆ ಎಂದರು.

ಇದೇ ವೇಳೆ ಶಾಸಕರಿಗೆ ಗ್ರಾಮಸ್ಥರು ಮೆಲಿನವಳಗೇರಹಳ್ಳಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಗ್ರಾಮದ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಗ್ರಾಮಸ್ಥರ ಸಮಸ್ಯೆ ಆಲಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ವಿಜಯಣ್ಣ ಮಾವಿನಕೆರೆ, ಶರತ್ ಕುಮಾರ್, ಬಿ.ಎಸ್.ದೇವರಾಜ್, ರಾಘು, ಎಂ.ಬಿ.ಹರೀಶ್, ಮಾವಿನಕೆರೆ ಪ್ರಸನ್ನ, ತ್ಯಾಗರಾಜ್, ಬಲರಾಮೇಗೌಡ, ಪಟೇಲ್ ಗೋಪಾಲ, ನಾಗರಾಜ, ಮೋಹನ, ಜಗದೀಶ್, ನಟರಾಜ್ ಹಾಗು ಗ್ರಾಮಸ್ಥರು ಪಾಲೊಂಡಿದ್ದರು.

ಹುಬ್ಬಳ್ಳಿಯಲ್ಲಿ ಹಲಸು ಮೇಳ

0

ಹುಬ್ಬಳ್ಳಿ: ಈಗ ಹಲಸು ಘಮ್ಮೆನ್ನುತ್ತಿರುವ ಕಾಲ! ದಾರಿಯಲ್ಲಿ ಹೋಗುವಾಗ, ಪಕ್ಕದ ಮನೆಯಲ್ಲಿ ಹಲಸು ಬಿಡಿಸಿದಾಗ, ಆ ಹಣ್ಣಿನ ಘಮಲು ಮೂಗಿಗೆ ತಾಗಿ, ಕೂಗಿ ಕರೆಯುವ ಹಲಸು ಈ ನೆಲದ ಎಲ್ಲರ ಹಣ್ಣು. ಈ ಹಣ್ಣಿನ ಮೇಳಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಸಿಂಗರಿಸಿಕೊಂಡು ನಿಂತಿದೆ.

ನಗರದ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಮೇ ೨೭ ಮತ್ತು ೨೮ರಂದು ನಡೆಯಲಿರುವ ‘ಹಲಸಿನ ಹಬ್ಬ’ವು, ಹಲಸು ಸವಿಯುವ ಮತ್ತು ಹಲಸಿನ ಬಗ್ಗೆ ಅರಿಯುವ ಅವಕಾಶ ಒದಗಿಸಲಿದೆ.

ಬಾಯಿಗಿಟ್ಟರೆ ಜೇನು ಸವಿದಂತೆನಿಸುವ ಹಲಸಿನದು ವಿಸ್ಮಯ ಲೋಕ! ಹಣ್ಣು ಮತ್ತು ಬೀಜದಲ್ಲಿರುವ ಅಪಾರವಾದ ಪೈಟೋ ಕೆಮಿಕಲ್ಸ್, ಪೋಷಕ ನಾರು, ಪ್ರೋಟೀನ್, ವಿಟಮಿನ್, ಖನಿಜಗಳು ಸೇರಿದಂತೆ ಅನೇಕ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಸಂಜೀವಿನಿಯೇ ಸೈ. ದೇಹದ ಆರೋಗ್ಯಕ್ಕೆ ಹಲಸು ಅನೇಕ ರೀತಿಯಲ್ಲಿ ಮಹತ್ವದ್ದಾಗಿದೆ.

ವಿಶೇಷ ಕೆಂಪು ಹಲಸು:
ತುಮಕೂರಿನ ವಿಶಿಷ್ಟ ಕೆಂಪು ಹಲಸು ಈ ಮೇಳಕ್ಕೆ ಬರಲಿದೆ. ರಾಷ್ಟ್ರೀಯ ಮನ್ನಣೆ ಗಳಿಸಿರುವ ಗಾಢ ಕೆಂಪು ವರ್ಣದ ‘ಸಿದ್ದು ಹಲಸು’ ಗಿಡಗಳು ಆಸಕ್ತರಿಗೆ ಲಭ್ಯವಾಗಲಿವೆ. ಮೇಳದಲ್ಲಿ ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಚಿಪ್ಸ್, ಚಾಕೊಲೇಟ್, ಹಪ್ಪಳ, ಹಲ್ವ, ಹಲಸಿನ ಬೀಜದ ಪುಡಿ, ಹಣ್ಣಿನ ಪುಡಿ ಮಾರಾಟಕ್ಕೆ ಬರಲಿವೆ. ಹಲಸಿನ ಬೀಜದ ಪೇಯ ‘ಜಾಫಿ’ ಗ್ರಾಹಕರ ಮನತಣಿಸಲಿದೆ. ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತ ಪುಸ್ತಕಗಳು ಸಹ ಲಭ್ಯವಾಗಲಿವೆ.


ಅಡುಗೆ, ಹಲಸು ತಿನ್ನುವ ಸ್ಪರ್ಧೆ:
ಹಲಸಿನ ಅಡುಗೆ ಸ್ಪರ್ಧೆ ಶನಿವಾರ ಮಧ್ಯಾಹ್ನ ೩.೩೦ಕ್ಕೆ ಏರ್ಪಡಾಗಿದೆ. ನಿಗದಿತ ಅವಧಿಯಲ್ಲಿ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಭಾನುವಾರ ಮಧ್ಯಾಹ್ನ ೧೨.೩೦ಕ್ಕೆ ನಡೆಯಲಿದೆ. ಸಾವಯವ ಮೇಳ ಮತ್ತು ಹಲಸಿನ ಹಬ್ಬ ಕುರಿತ ಹೆಚ್ಚಿನ ಮಾಹಿತಿಗೆ ಸಂಯೋಜಕ ಶಾಂತಕುಮಾರ್ ಸಿ. ಅವರನ್ನು ೯೪೪೮೭೭೪೮೭೧ ಸಂಪರ್ಕಿಸಲು ಕೋರಲಾಗಿದೆ.

ಬಿರುಸು ಪಡೆದ ವಕೀಲರ ಸಂಘದ ಚುನಾವಣೆ

0

ತುಮಕೂರು: ತುಮಕೂರು ವಕೀಲರ ಸಂಘದ ಚುನಾವಣೆಯ ಕಾವು ಜೋರಾಗಿದೆ.

ಜೂನ್ 9ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಪತ್ರ ಸ್ವೀಕಾರ ಆರಂಭಗೊಂಡಿದ್ದು, ಈ ಸಲ ತುರುಸಿನ ಸ್ಪರ್ಧೆ ಕಂಡು ಬಂದಿದೆ.

ಶುಕ್ರವಾರ ಕೇಂದ್ರೀಯ ಸಮಿತಿ ಸದಸ್ಯ ಸ್ಥಾನಕ್ಕಾಗಿ ಹಿರಿಯ ವಕೀಲ ಎಂ.ಬಿ.ನವೀನ್ ಕುಮಾರ್ ನಾಮಪತ್ರ ಸಲ್ಲಿಸಿದರು. ಈ ವೇಳೆ ವಕೀಲರಾದ ವಿರೂಪಾಕ್ಷ, ಅನಿತಾ, ರಮ್ಯಾ, ನೇತ್ರ, ಸಿದ್ದಣ್ಣ ಇತರರು ಇದ್ದರು. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮರು ಆಯ್ಕೆ ಬಯಸಿ ಹಿಮಾನಂದ್ ಅವರು ಪ್ರಚಾರ ನಡೆಸುತ್ತಿದ್ದಾರೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ತಮ್ಮದೇ ಸಿಂಡಿಕೇಟ್ ರಚಿಸಿಕೊಂಡು ಸ್ಪರ್ಧೆ ಮಾಡುವ ಬಗ್ಗೆಯೂ ವಕೀಲರ ನಡುವೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ತಮ್ಮದೇ ಬಣದ ನಾಯಕರನ್ನು ಕಣಕ್ಕಿಳಿಸುವ ಯತ್ನವನ್ನು ಕೆಲವು ವಕೀಲರ ತಂಡ ಮಾಡುತ್ತಿದೆ.

ಕೆಎನ್ನಾರ್ ಗೆ ಸಚಿವ ಸ್ಥಾನಕ್ಕೆ ಗ್ರೀನ್ ಸಿಗ್ನಲ್

ನವದೆಹಲಿ: ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಶಾಸಕ ನಾಗೇಂದ್ರ ಮತ್ತು ಕೆ.ಎನ್.ರಾಜಣ್ಣ ಅವರ ನಡುವೆ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ಇತ್ತು. ಆದರೆ ಕಡೇ ಗಳಿಗೆಯಲ್ಲಿ ರಾಜಣ್ಣ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರೂ ಸಹಮತ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಸಚಿವರ ಹೆಸರನ್ನು ಹೇಳಲಿದ್ದಾರೆ ಎನ್ನಲಾಗಿದೆ.

ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ಮಾತು ಕೊಟ್ಟಿದ್ದರು.

ಮಧುಗಿರಿಯನ್ನು ಜಿಲ್ಲೆಯಾಗಿಸುವ ಸವಾಲು ರಾಜಣ್ಣ ಅವರ ಮುಂದಿದೆ. ಅವರ ಇಷ್ಟದ ಕ್ಷೇತ್ರವಾದ ಸಹಕಾರ ಖಾತೆ ಅವರಿಗೆ ಸಿಗಲಿದೆ.

Dy CM ಗೆ ಹಾರಹಾಕಿದ ಶಾಸಕ M.T.ಕೃಷ್ಣಪ್ಪ

ತುರುವೇಕೆರೆ: ತಿಪಟೂರು ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ‍್ವರ ಮಠಕ್ಕೆ ತುರುವೇಕೆರೆ ಮೂಲಕ ಹೋಗುತ್ತಿರುವಾಗ ಭಾನುವಾರ ತಾಲ್ಲೂಕಿನ ಶಾಸಕ ಎಂ.ಟಿ.ಕೃಷ್ಣಪ್ಪ ನೂತನ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೂಗುಚ್ಚ ನೀಡಿ, ಸ್ವಾಗತಿಸಿದರು.

ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಬಂದ ಡಿಕೆ.ಶಿಕುಮಾರ್ ಅವರು ಜಿಜೆಸಿ ಕ್ರೀಡಾಂಗಣದಲ್ಲಿ ಇಳಿಯುತ್ತಿದ್ದಂತೆ ಶಾಸಕರು ಹೂ ಮಾಲೆ ಹಾಕಿ ಅಭಿನಂಧಿಸಿದರು. ತಕ್ಷಣ ಅದೇ ಹೂ ಮಾಲೆಯನ್ನು ತೆಗೆದು ಡಿ.ಕೆ ಶಿ ಅವರು ಶಾಸಕ ಎಂ.ಟಿ.ಕೃಷ್ಣಪ್ಪರಿಗೆ ಹಾಕಿದರು.

ನಂತರ ಅಲ್ಲಿಂದ ವಾಹನದಲ್ಲಿ ನೊಣವಿನಕೆರೆ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಡಿ.ಕೆ.ಶಿವಕುಮಾರ್ ಜೊತೆಯಲ್ಲಿ ನಾಗಮಂಗಲ ಶಾಸಕ ಚೆಲುವರಾಯ ಸ್ವಾಮಿ, ಕುಣಿಗಲ್ ಶಾಸಕ ಡಾ. ರಂಗನಾಥ ಜೊತೆಯಲ್ಲಿದ್ದರು.

ಈ ಸಂದರ್ಭದಲ್ಲಿ ಜೆಡಿಎಸ್‍ ಮುಖಂಡರಾದ ಭೂವನಹಳ್ಳಿ ದೇವರಾಜ್ ಬಿ.ಎಸ್‍, ಜಕ್ಕನಹಳ್ಳಿ ಬಾಬು, ಮಂಗಿಕುಪ್ಪೆ ಬಸವರಾಜು, ಕೊಂಡಜ್ಜಿ ಕಿರಣ, ಉಪನ್ಯಾಸಕ ರಾಘು ಉಪಸ್ಥಿತರಿದ್ದರು.

ತುಮಕೂರಿಗೆ ಒಲಿದ ಸಚಿವ ಸ್ಥಾನ

0

Bengaluru: ಸಿದ್ದರಾಮಯ್ಯ ಅವರ ಹೊಸ ಸರ್ಕಾರದ ಲ್ಲಿ ಡಾ.ಜಿ.ಪರಮೇಶ್ವರ್ ಅವರಿಗೆ ಸಚಿವ ಸ್ಥಾನ ಒಲಿದಿದೆ. ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭದಲ್ಲೇ ಜಿ.ಪರಮೇಶ್ವರ್ ಅವರೂ ಸಚಿವರಾಗಿ ಪ್ರಮಾಣವಚನವನ್ನು ಇಂದು ಸ್ವೀಕರಿಸುವರು.

ಖಾತೆ ಇನ್ನೂ ಅಂತಿಮವಾಗಿಲ್ಲ. ಗೃಹಖಾತೆಯನ್ನು ನೀಡಬೇಕು ಎಂಬುದು ಜಿಲ್ಲೆ ಹಾಗೂ ರಾಜ್ಯದ ಜನರ ಒತ್ತಾಯವಾಗಿದೆ.

ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಇಡೀ ರಾಜ್ಯ ಸುತ್ತಾಡಿ ಪಕ್ಷ ಅಧಿಕಾರಕ್ಕೆ ತಂದಿದ್ದರು. ಮುಖ್ಯಮಂತ್ರಿಯಾಗುವ ಅವಕಾಶ ಇದ್ದರೂ ಕೈ ತಪ್ಪಿತ್ತು.

ಅತ್ತಿಕುಳ್ಳೆಪಾಳ್ಯ ಶನೈಶ್ಚರ ಜಯಂತಿ ಸಂಭ್ರಮ

0

ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಅತ್ತಿಕುಳ್ಳೆಪಾಳ್ಯದ ಶನಿದೇವರ ದೇವಾಲಯದ ಶನೈಶ್ಚರ ರಿಲಿಜಿಯಸ್ ಟ್ರಸ್ಟ್ ಹಾಗು ಗ್ರಾಮಸ್ಥರ ವತಿಯಿಂದ ಶನೈಶ್ಚರ ಜಯಂತಿ ಮಹೋತ್ಸವವು ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಜರುಗಿತು.

ಶನೈಶ್ಚರ ಜಯಂತಿ ಮಹೋತ್ಸವದ ಅಂಗವಾಗಿ ಮಹಾಗಣಪತಿ, ಶನೈಶ್ಚರ ಸ್ವಾಮಿ ಹಾಗೂ ಎಲ್ಲ ನವಗ್ರಹ ದೇವತೆಗಳಿಗೂ ಫಲ ಪಂಚಾಮೃತ ಸಹಿತ ಮಹಾಭಿಷೇಕ, ವಿಶೇಷ ಪೂಜೆ ಹಾಗು ಅಲಂಕಾರ ಮಾಡಲಾಗಿತ್ತು.

ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಪೂಜೆಜರುಗಿತು. ನಂತರ 1 ಗಂಟೆಯ ಸಮಯದಲ್ಲಿ ಗೋಪೂಜೆ, ಗೋಗ್ರಾಸ ಪೂಜೆ ಮಾಡಿ ಗೋವಿಗೆ ಪ್ರಸಾದ ನೀಡಲಾಯಿತು. ಅತ್ತಿಕುಳ್ಳೆ ಪಾಳ್ಯ, ಗೊಟ್ಟಿಕೆರೆ, ಗೊಟ್ಟಿಕೆರೆ ಪಾಳ್ಯ, ಆನಂದನ ಪಾಳ್ಯ, ಮುನಿಯೂರು, ವಿವೇಕಾನಂದ ನಗರ, ತಾವರೆಕೆರೆ, ತುರುವೇಕೆರೆ ಪಟ್ಟಣಿಗರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಹಣ್ಣು ಕಾಯಿ ಪೂಜೆ ಸಲ್ಲಿಸಿ ಪುನೀತರಾದರು.


ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದು ಕಂಡು ಬಂದಿತು. ಬಂದಂತ ಸಾರ್ವಜನಿಕರು ಮತ್ತು ಭಕ್ತಾಧಿಗಳಿಗೆ ಅನ್ನದಾನ ಏರ್ಪಡಿಸಿದ್ದರು. ಸಂಜೆ 4 ಗಂಟೆಗೆ ಶನೈಶ್ಚರ ಸ್ವಾಮಿಯನ್ನು ರಾಜಮರ್ಯಾದೆಯೊಂದಿಗೆ ಅತ್ತಿಕುಳ್ಳೆ ಪಾಳ್ಯದಲ್ಲಿ ಉತ್ಸವ ಮಾಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ನ ಗೌರವಾಧ್ಯಕ್ಷ ಎನ್.ಆರ್.ಜಯರಾ, ಅಧ್ಯಕ್ಷ ಅಮಾನಿಕೆರೆ ಮಂಜಣ್ಣ, ಕಾರ್ಯದಶರ್ಿ ಕುಮಾರ್, ಖಜಾಂಚಿ ಬಿ.ಕೃಷ್ಣಮೂರ್ತಿ, ಗಂಗಾಧರಯ್ಯ, ಟ್ರಸ್ಟಿಗಳಾದ ನಂಜೇಗೌಡ, ಕರೇಗೌಡ, ಗೋಪಾಲಕೃಷ್ಣೇಗೌಡ, ಎಚ್.ತಿಮ್ಮಪ್ಪ, ಅರ್ಚಕ ತಿಮ್ಮಣ್ಣ, ದೊಡ್ಡಮನೆ ಶಂಕರಣ್ಣ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.