Thursday, March 12, 2026
Google search engine
Home Blog Page 38

ಶಾಸಕರನ್ನು ಸನ್ಮಾನಿಸಿದ ಸರ್ಕಾರಿ ನೌಕರರು

ತುರುವೇಕೆರೆ: ಸರ್ಕಾರ ರಾಜ್ಯದ ನೌಕರರನ್ನು ಸತಾಯಿಸದೇ 7ನೇ ವೇತನ ಆಯೋಗವನ್ನು ಶೀಘ್ರವೇ ಜಾರಿ ಮಾಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘವು ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೆ ಅಭಿನಂಧನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು,
ಯಾವುದೇ ಸರ್ಕಾರ ಜಾರಿಗೆ ತರುವ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ವಪೂರ್ಣವಾದ ಕೆಲಸವನ್ನು ನೌಕರರು, ಅಧಿಕಾರಿಗಳು ಮಾಡುತ್ತಾರೆ ಎಂದರು.

ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದರೆ ಆಯಾ ಸರ್ಕಾರಗಳಿಗೆ ಒಳ್ಳೆಯ ಜನಾಭಿಪ್ರಾಯ ಬರುತ್ತದೆ.
ಕ್ಷೇತ್ರದಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಸಬ್ ಇನ್ಸ್ಪೆಕ್ಟರ್ ಈ ಮೂವರು ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದರೆ ಅಲ್ಲಿನ ಶಾಸಕರಿಗೆ ಒಳ್ಳೆಯ ಹೆಸರು ಬರುತ್ತದೆ. ಅಧಿಕಾರಗಳು, ನೌಕರರನ್ನು ಬೈಯುವುದರಲ್ಲಿ ಅರ್ಥವಿಲ್ಲ ನಿಮ್ಮ ಏನೇ ಸಮಸ್ಯೆಗಳಿಲ್ಲದರೂ ನನ್ನ ಬಳಿ ಬನ್ನಿ ಕೂತು ಚರ್ಚಿಸೋಣ ಎಂದರು.


ನಾನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿದ್ದಾಗ ಇಲ್ಲಿನ ಕಟ್ಟಡಕ್ಕೆ ತಳಪಾಯ ಹಾಕಲಾಗಿತ್ತು. ನಾನು ಅಧ್ಯಕ್ಷನಾಗಿದ್ದಾಗ ಕೇಂದ್ರದ ಮಾದರಿಯ ಡಿ.ಎ ಮತ್ತು ಸ್ಟ್ಯಾಗ್ನೆಂಟ್ ಅನ್ನು ರಾಜ್ಯದ ನೌಕರರಿಗೆ ಕೊಡಿಸಲು ಸಾಕಷ್ಟು ಹೋರಾಟ ಮಾಡಿದ್ದೇನೆಂದು ಹಳೆ ನೆನಪುಗಳನ್ನು ಬಿಚ್ಚಿಟ್ಟರು.


ರಾಜಕಾರಣ ಬರುತ್ತದೆ ಹೋಗುತ್ತದೆ ಆದರೆ ನೌಕರರ ಸಂಘಟನೆಯನ್ನು ಕೈ ಬಿಡದೆ ಒಗ್ಗಟ್ಟಿನಿಂದ ಇದ್ದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ ಹಿಂದೆ ಏನು ನಡೀತು ಅನ್ನೋದು ಬೇಡ. ಮುಂದೆ ತಾಲ್ಲೂಕಿನ ಜನತೆಗೆ ಏನೇನು ಮಾಡಬೇಕು ಅನ್ನುವುದನ್ನು ಮಾತ್ರ ಚಿಂತಿಸೋಣ.
ನಾನು ನೌಕರರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ತೊಂದರೆ ಕೊಡುವ ಸನ್ನಿವೇಶವನ್ನು ನಿರ್ಮಾಣ ಮಾಡಿಕೊಳ್ಳಬೇಡಿ. ಎಲ್ಲ ನೌಕರರೂ ಚನ್ನಾಗಿ ಕೆಲಸ ಮಾಡಿ ಕ್ಷೇತ್ರದ ಅಭವೃದ್ದಿ ಮಾಡೋಣ ಎಂದು ನೌಕರರಿಗೆ ಕಿವಿ ಮಾತು ಹೇಳಿದರು.


ಈ ಸಂದರ್ಭದಲ್ಲಿ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜುಮುನಿಯೂರು, ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ದೊಡ್ಡಾಘಟ್ಟ ಚಂದ್ರೇಶ್, ಗ್ರೇಟ್-2 ತಹಶೀಲ್ದಾರ್ ಡಿ.ಆರ್.ಸುನಿಲ್ ಕುಮಾರ್, ಸರ್ವೇ ಇಲಾಖೆ ನಟೇಶ್, ಬಿಸಿಎಂ ಇಲಾಖೆಯ ಭಾನುಮತಿ, ಕೃಷಿ ಇಲಾಖೆ ಗಿರೀಶ್, ಆಹಾರ ಇಲಾಖೆಯ ಕೃಷ್ಣೇಗೌಡ, ತೋಟಗಾರಿಕೆ ಶಿವಪ್ರಸಾದ್, ಜಗದೀಶ್, ನಂಜಪ್ಪ, ಗ್ರಾಮಲೆಕ್ಕಾಧಿಕಾರಿ ರಮೇಶ್ ಇನ್ನಿತರರು ಇದ್ದರು.

ಸಹಾಯಹಸ್ತ ನೀಡಿದ ಆದಿಚುಂಚನಗಿರಿ ಶ್ರೀ

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಎಸ್.ಬಿ.ಜಿ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಅಂತರರಾಷ್ಟ್ರೀಯ ಡಾಡ್ಜ್ ಬಾಲ್ ಸ್ಪರ್ಧೆಗಾಗಿ ಭಾರತ ತಂಡವನ್ನು ಪ್ರತಿನಿಧಿಸುವ ಸಲುವಾಗಿ ಮೇ.23ರಂದು ಮಲೇಷಿಯಾಗೆ ತೆರಳುತ್ತಿರುವವರಿಗೆ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ನೆರವು ನೀಡಿದರು.

ಕ್ರೀಡಾಪಟುಗಳಾದ ಮಾನಸ.ಜಿ ಮತ್ತು ವೇದಾವತಿಯವರನ್ನು ಪ್ರಸನ್ನನಾಥ ಸ್ವಾಮೀಜಿಯವರು ಆಶೀರ್ವದಿಸಿ ಧನಸಹಾಯ ನೀಡಿದರು. ದೇಶ ಹಾಗೂ ತಾವು ಓದಿದ ಕಾಲೇಜಿಗೆ ಕೀರ್ತಿ ತರಬೇಕೆಂದು ಕಿವಿ ಮಾತು ಹೇಳಿ ಕಳುಹಿಸಿಕೊಟ್ಟರು.

ತುರುವೇಕೆರೆ ತಾಲ್ಲೂಕು ಒಕ್ಕಲಿಗರ ಸಂಘದಿಂದ ಹತ್ತು ಸಾವಿರ ರೂಪಾಯಿ ನೀಡಿದರೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕ್ರೀಡಾಪಟು ಜಿ.ಮಾನಸಳಿಗೆ ತುರುವೇಕೆರೆಯ ಲಯನ್ಸ್ ಚಾರಿಟಬಲ್ ಟ್ರಸ್ಟ್ ಹತ್ತು ಸಾವಿರ ರೂಪಾಯಿ ಹಾಗೂ ಸಂಶೋಧನಾ ಬರಹಗಾರ ಪ್ರೊ.ಕೆ.ಪುಟ್ಟರಂಗಪ್ಪನವರ ಸ್ನೇಹಿತರು ಮತ್ತು ಹಿತೈಷಿಗಳು ಮೂವತ್ತೈದು ಸಾವಿರ ರೂಪಾಯಿ ನೀಡಿದರು.


ಈ ಸಂದರ್ಭದಲ್ಲಿ ತರಬೇತುದಾರ ಉದಯ್ ಕುಮಾರ್, ಸಂಶೋಧನಾ ಬರಹಗಾರ ಪ್ರೊ.ಕೆ.ಪುಟ್ಟರಂಗಪ್ಪ ಉಪಸ್ಥಿತರಿದ್ದರು.

ಷಡಕ್ಷರಿಗೆ ಸಚಿವ ಸ್ಥಾನ: ಲಿಂಗಾಯತರ ಒತ್ತಾಯ

ತುರುವೇಕೆರೆ: ಜಿಲ್ಲೆಯ ಏಕೈಕ ವೀರಶೈವ ಲಿಂಗಾಯಿತ, ತಿಪಟೂರಿನ ಶಾಸಕ ಕೆ.ಷಡಕ್ಷರಿ ಅವರನ್ನು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕುಮಾರ್ ಸ್ವಾಮಿ ಒತ್ತಾಯಿಸಿದರು.


ಪಟ್ಟಣದ ಕೆರೆಕೋಡಿಯಲ್ಲಿರುವ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ತಾಲ್ಲೂಕು ಸಮಾಜ ಬುಧವಾರ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,
ನಮ್ಮ ಸಮುದಾಂದು ಶಾಸಕ ಕೆ.ಷಡಕ್ಷರಿಯವರು ಮೂರು ಬಾರಿ ಶಾಸಕರಾಗಿ ತಿಪಟೂರುಕ್ಷೇತ್ರವನ್ನು ಪ್ರತಿನಿಧಿಸಿ ಪಕ್ಷದ ನಿಷ್ಠಾವಂತ ನಾಯಕರಾಗಿ ದುಡಿದವರು ಇವರು ಎರಡು ಬಾರಿ ಭೂ ಅಭಿವೃದ್ಧಿ ಬ್ಯಾಂಕ್ ಹಾಗು ರಾಜ್ಯ ಸಹಕಾರಿ ಇಲಾಖೆಯಲ್ಲಿ ಕೆಲಸ ಮಾಡಿರುವ ಅನುಭವಿದ್ದು ಇವರನ್ನು ಸಹಕಾರಿ ಮಂತ್ರಿಯನ್ನಾಗಿ ಮಾಡಬೇಕು ಎಂಬುದು ಸಮುದಾಯದ ಒಕ್ಕೊರಲಿನ ಒತ್ತಾಯವಾಗಿದೆ.


ವಿರೇಂದ್ರ ಪಾಟೀಲ್ ಅವರು 1989ರಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದರು, ಆದರೆ ನಂತರದ ರಾಜಕೀಯ ಬೆಳವಣಿಗೆಯಿಂದ ಅವರನ್ನು ಮೂಲೆಗುಂಪು ಮಾಡಿದ್ದರಿಂದ ಕಾಂಗ್ರೆಸ್ ಮೇಲೆ ವೀರಶೈವ ಲಿಂಗಾಯಿತರು ಅಸಮಧಾನ ಹೊಂದಿದ್ದರು.
ಈಗ ಕಾಂಗ್ರೆಸ್ನಿಂದ 39 ವೀರಶೈವ ಲಿಂಗಾಯಿತ ನಾಯಕರು ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಹೆಚ್ಚು ಬಹುಮತ ನೀಡಿದ ಸಮುದಾಯವಾಗಿದೆ. ಈಗ ನಮ್ಮ ಸಮುದಾಯದ ಶಕ್ತಿ ಕಾಂಗ್ರೆಸ್ ನಾಯಕರಿಗೆ ಅರಿವಾಗಿದೆ ಎಂದರು.


ಶ್ಯಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್ ನಂತಹ ಹಲವು ವೀರಶೈವ ನಾಯಕರಿದ್ದು ಅವರಲ್ಲಿ ಪ್ರಮುಖರನ್ನು ಸಿ.ಎಂ ಮಾಡಿ ಅಥವಾ ಒಳ್ಳೆಯ ಸಚಿವ ಸ್ಥಾನ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶೇ50 ರಷ್ಟು ಸಮುದಾಯ ಕಾಂಗ್ರೆಸ್ ಕೈ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಸುದ್ದಿ ಗೋಷ್ಠಿಯಲ್ಲಿ ಶಿವಾನಂದಯ್ಯ ಕಳ್ಳನಕೆರೆ, ಡಿ.ಎಂ.ಸುರೇಶ್ದುಂಡಾ, ಆರ್.ಎಂ ತ್ರೈಲೋಕ್ಯನಾಥ್, ಯಜಮಾನ್ ಮಹೇಶ್, ಯಡಗಿಹಳ್ಳಿ ವಿಶ್ವನಾಥ್, ಅರಳೀಕೆರೆ ಲೋಕೇಶ್, ರುದ್ರೇಶ್, ಎಂ.ಪಿ.ಸುರೇಶ್, ಸುನಿಲ್ ಬಾಬು, ಶಂಕರ್, ಕಾಂತರಾಜು, ಮಂಜುನಾಥ್ ಇನ್ನಿತರರು ಪಾಲ್ಗೊಂಡಿದ್ದರು.

ದೇವೇಗೌಡರು ನಮ್ಮ ಶಕ್ತಿ: ಎಚ್ ಡಿ ಕೆ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ 91 ವರ್ಷದ ಹುಟ್ಟುಹಬ್ಬಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಶುಭಾಷಯ ಕೋರಿದ್ದಾರೆ.

ದೇವೇಗೌಡರು ಇನ್ನೂ ದೀರ್ಘಾಯಷಿಯಾಗಿ ನಮ್ಮೆಲ್ಲರಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಹೇಳಿದ್ದಾರೆ.

ದೇಶದ 11ನೇ ಪ್ರಧಾನಮಂತ್ರಿಗಳು, ನನ್ನ ತಂದೆಯವರೂ ಆದ ಎಚ್.ಡಿ.ದೇವೇಗೌಡರಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಸಿಎಂ, ಡಿಕೆಶಿ ಒಪ್ಪಿಗೆ

0

ನವದೆಹಲಿ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಹೈ ಕಮಾಂಡ್ ನಿರ್ಧರಿಸಿದ್ದು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಒಪ್ಪಿಗೆ ಸೂಚಿಸಿದ್ದಾರೆ.

ನಿನ್ನೆ ತಡರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಡಿಕೆಶಿ ಅವರೊಂದಿಗೆ ಸಭೆ ನಡೆಸಿ ಸಂಧಾನ ಯಶಸ್ವಿಗೊಳಿಸಿದರು.

ಮೊದಲ ಅವಧಿಗೆ ಸಿದ್ದರಾಮಯ್ಯ, ನಂತರ ಎರಡೂವರೆ ವರ್ಷದ ಅವಧಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಇಬ್ಬರೂ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಪ್ರಾಯ ಪಡೆಯಲಾಗಿದೆ ಎನ್ನಲಾಗಿದೆ.

ಶನಿವಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಅಲ್ಲಿಯೇ ಎರಡನೇ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡುವ ವಾಗ್ದಾನವನ್ನು ಸಿದ್ದರಾಮಯ್ಯ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನನಗೆ ಮಾಟ ಮಂತ್ರ ಮಾಡಿಸಿದ ಶಾಸಕರು!

ತುರುವೇಕೆರೆ: ಕೊಬ್ಬರಿಗೆ ಬೆಂಬಲ ಬೆಲೆ ಕೊಡುವಲ್ಲಿ ನಮ್ಮ ಸರ್ಕಾರದ ನಿರ್ಲಿಪ್ತ ಧೋರಣೆ, ಕ್ಷೇತ್ರದ ಜನರ ಮನಮುಟ್ಟವಲ್ಲಿ ಎಲ್ಲೊ ಒಂದು ಕಡೆ ಎಡವಿದ್ದು ನನ್ನ ಸೋಲಿಗೆ ಕಾರಣವಾಗಿರಬಹುದು. ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಕ್ಷೇತ್ರ ಪ್ರವಾಸ ಮಾಡಿ ಜನರ ಭರವಸೆ ಗಳಿಸುವೆ ಎಂದು ಮಾಜಿ ಶಾಸಕ ಜಯರಾಮ್ ಎ.ಎಸ್ ಹೇಳಿದರು.


ಪಟ್ಟಣದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ, ಮುಖಂಡ ಆತ್ಮಾವಲೋಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
‘ಶಾಸಕ ಎಂ.ಟಿ.ಕೃಷ್ಣಪ್ಪ ತನ್ನ ಪಕ್ಷದ ಮುಖಂಡ ಬಾಣಸಂದ್ರ ರಮೇಶ್ನ ಬಳಿ ಚುನಾವಣಾ ಖರ್ಚಿಗೆ ಆರ್ಥಿಕ ಸಂಪನ್ಮೂಲವಿದ್ದು ಆತನನ್ನು ಬಿಜೆಪಿ ಶಾಸಕ ಜಯರಾಮ್ ಅಪಹರಣ ಮಾಡಿಸಿದ್ದಾನೆಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟು ಕುತಂತ್ರದ ರಾಜಕಾರಣ ಮಾಡಿ ಗೆಲುವು ಪಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು’.


ಚುನಾವಣಾ ಸಮಯದಲ್ಲಿ ನನಗೆ ಕೇಡಾಗುವಂತೆ ಎಂ.ಟಿ.ಕೃಷ್ಣಪ್ಪ ನನ್ನ ತೋಟದ ಮನೆಯ ಜಮೀನಿನಲ್ಲಿ ಮಾಟ ಮಂತ್ರದ ವಾಮಾಚಾರ ಮಾಡಿ ಆಮೂಲಕ ರಾಜಕೀಯ ಹಿಡಿತ ಸಾಧಿಸುವ ದುಸ್ಕೃತ್ಯ ಎಸಗಿದ್ದಾರೆ ಆರೋಪಿಸಿದ ಅವರು ನನಗೆ ಇಂತಹ ಆಟ ಆಡೋದಿಕ್ಕೆ ಬರೋದಿಲ್ಲ ಎಂದು ಆರೋಪಿಸಿದರು.


ನಾನು ಕಷ್ಟಪಟ್ಟು ಉದ್ಯಮದಲ್ಲಿ ದುಡಿದು, ಗ್ರಾಮ ಪಂಚಾಯಿಂದ ಗೆದ್ದು ಶಾಸಕನಾದವನು. ನಾನು ಇನ್ನೂ 20 ಚುನಾವಣೆ ಮಾಡುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ನಾನು ಮಾನಸಿಕವಾಗಿ ಸೋತಿಲ್ಲ, ಧೈರ್ಯಗೆಡುವುದೂ ಇಲ್ಲ.
ನನ್ನ ಕಾರ್ಯಕರ್ತರಿಗೆ ಜೆಡಿಎಸ್ ಕಾರ್ಯಕರ್ತರಿಂದ ಹಲ್ಲೆ, ದೌರ್ಜನ್ಯವಾದರೆ ನನ್ನ ಇನ್ನೊಂದು ಮುಖವನ್ನು ಎಂ.ಟಿ.ಕೃಷ್ಣಪ್ಪ ನೋಡಿಲ್ಲ ನಾನು ಜೈಲಿಗೆ ಹೋದರೂ ಪರವಾಗಿಲ್ಲ ಅದಕ್ಕೆ ತಕ್ಕ ಪ್ರತೀಕಾರ ತೀರಿಸುವೆ ಎಂದು ಗುಡುಗಿದರು.

ಜೆಡಿಎಸ್ ಕಾರ್ಯಕರ್ತರು ಬಾಲ ಬಿಚ್ಚಿದರೆ ಅಥವಾ ಅವರು ಬಿಜೆಪಿ ಕಾರ್ಯಕರ್ತರಿಗೆ ಒಂದು ಒಡೆದರೆ ನೀವು ಎರಡೇಟಾಕಿ ಮುಂದಿನದು ನಾನು ನೋಡಿಕೊಳ್ಳುತ್ತೇನೆಂದು ಕಾರ್ಯಕರ್ತರಿಗೆ ಅಭಯ ನೀಡಿದರು.


ನನ್ನ ಅವಧಿಯಲ್ಲಿ ಮಂಜೂರಾದ ಕೋಟ್ಯಂತರ ರೂಪಾಯಿಗಳ ಕಾಮಗಾರಿಗಳು ಚುನಾವಣಾ ನೀತಿ ಸಂಹಿತೆಯಿಂದ ಸ್ಥಗಿತಗೊಂಡಿದ್ದು ಅವುಗಳ ಬಗ್ಗೆ ಕರ ಪತ್ರ ಹೊರಡಿಸಿ ಪ್ರತಿ ಮನೆಮನೆಗ ತಲುಪಿಸುವೆ.
ಅತ್ತಾ ಜೆಡಿಎಸ್ ರಾಜ್ಯದಲ್ಲಿ ಠೇವಣಿ ಕಳೆದುಕೊಂಡಿದೆ. ಇತ್ತಾ ಕಾಂಗ್ರೆಸ್ ಕೈಯಲ್ಲಿ ರಾಜ್ಯದ ಅಧಿಕಾರ ಇದೆ. ಹಾಲಿ ಶಾಸಕರು ಕೇವಲ 20 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತರಲು ನೋಡೋಣ ಎಂದು ಸವಾಲೆಸೆದರು.


ನಮ್ಮ ಸರ್ಕಾರದ ವೈಫಲ್ಯ, ನಾನು ಸೇರಿದಂತೆ ಕಾರ್ಯಕರ್ತರು ಜನರ ವಿಶ್ವಾಸ ತೆಗೆದುಕೊಳ್ಳುವಲ್ಲಿ ಪ್ರಮಾದವಾಗಿರುವುದು, ಕಾಂಗ್ರೆಸ್ ನ ಅವಿವೇಕಿತನದ ಗ್ಯಾರಂಟಿ ಕಾರ್ಡ್ನ ಭರವಸೆಗಳು ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಗೆ ಸೋಲಾಗುವಂತೆ ಮಾಡಿದೆ.
ಜೆ.ಸಿ.ಮಾಧುಸ್ವಾಮಿಯವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ತುಮಕೂರು ಜಿಲ್ಲೆಗೆ ಗೌರವ ಬರುತ್ತದೆಂದು ಮಾಜಿ ಮುಖ್ಯ ಮಂತ್ರಿ ಬಸವರಾಜು ಬೊಮ್ಮಾಯಿಯವರಲ್ಲಿ ಮನವಿ ಮಾಡಿದ್ದೇನೆ ಎಂದರು.


ನಾನು ಸೋತೆನೆಂದು ಎಲ್ಲೂ ಹೋಗುವುದಿಲ್ಲ ನಿಮ್ಮ ಸೇವೆಗೆ ನಾನು ಕ್ಷೇತ್ರದಲ್ಲಿ ಯಾವಾಗಲೂ ಸಿದ್ದನಿದ್ದೇನೆ ಎಂದರು.


ಇದೇ ವೇಳೆ ಅನೇಕ ಬಿಜೆಪಿ ಮುಖಂಡರು ಪಕ್ಷದ ಸೋಲಿಗೆ ಮತ್ತು ಮುಂದಿನ ದಾರಿಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಮೃತ್ಯುಂಜಯ, ಅಂಜನ್ ಕುಮಾರ್, ಪ್ರಭಾಕರ್, ವಿ.ಟಿ.ವೆಂಕಟರಾಮಯ್ಯ, ಚಿದಾನಂದ್, ಗಿರೀಶ್ , ಸಿ.ಎನ್. ಪಾಳ್ಯದ ರಾಮಕೃಷ್ಣ ಇತರರು ಇದ್ದರು.

ಪರಮೇಶ್ವರ್ ಗೆ ಸಿಎಂ ಸ್ಥಾನ: ಜಿಲ್ಲೆಯಲ್ಲಿ ಹೆಚ್ಚಿದ ಒತ್ತಡ

ತುಮಕೂರು:ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಜಿಲ್ಲೆಯ ಜನರು ಹಕ್ಕೋತ್ತಾಯ ಮಂಡಿಸಿದ್ದಾರೆ.

ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ, ಛಲವಾದಿ ಮಹಾಸಭಾ,ಡಾ.ಜಿ.ಪರಮೇಶ್ವರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರುಗಳು ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಒತ್ತಾಯಿಸಿದರು.

ನಗರದಬಿ.ಜಿ.ಎಸ್.ವೃತ್ತ(ಟೌನ್‍ಹಾಲ್)ದಲ್ಲಿ ಸಮಾವೇಶಗೊಂಡಿದ್ದ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ, ಛಲವಾದಿ ಮಹಾಸಭಾ(ರಿ) ಹಾಗೂ ಡಾ.ಜಿ.ಪರಮೇಶ್ವರ್ ಅಭಿಮಾನಿಗಳು, ನಗರಪಾಲಿಕೆಯ ಮೇಯರ್, ಸದಸ್ಯರುಗಳು, ವಿದ್ಯಾವಂತ, ದಕ್ಷ, ಪ್ರಾಮಾಣಿಕ ಮತ್ತು ಸಜ್ಜನ ರಾಜಕಾರಣಿ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಆರ್ಹತೆಗಳಿದ್ದು,ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ಬಾರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ,ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯವಿದೆ ಎಂಬುದನ್ನು ಸಾಭೀತು ಪಡಿಸುವಂತೆ ಆಗ್ರಹಿಸಿದರು.

ಪಾಲಿಕೆಯ ವಿರೋಧಪಕ್ಷದ ಮಾಜಿ ನಾಯಕ ಜೆ.ಕುಮಾರ್,ಇಂದು ಕಾಂಗ್ರೆಸ್ ಪಕ್ಷ ಅತ್ಯಂತ ಬಹುಮತಗಳಿಸಿ,ಅಧಿಕಾರದ ಚುಕ್ಕಾಣಿ ಹಿಡಿಯುವ ಹಂತಕ್ಕೆ ಬಂದಿದೆ ಎಂದರೆ,ಅದರ ಹಿಂದೆ ಡಾ.ಜಿ.ಪರಮೇಶ್ವರ್ ಅವರ ಶ್ರಮವಿದೆ.ಮಧುಗಿರಿ ಮತ್ತು ಕೊರಟಗೆರೆ ಮೀಸಲು ಕ್ಷೇತ್ರಗಳಲ್ಲಿ ತಲಾ ಮೂರು ಬಾರಿ ಸೇರಿದಂತೆ 6ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಡಾ.ಜಿ.ಪರಮೇಶ್ವರ್ ರೇಷ್ಮೆ ಸಚಿವರಾಗಿ,ಉನ್ನತ ಶಿಕ್ಷಣ,ವೈದ್ಯಕೀಯ ಶಿಕ್ಷಣ ಸಚಿವರಾಗಿ,ಗೃಹ ಸಚಿವರಾಗಿ,ಉಪಮುಖ್ಯಮಂತ್ರಿಯಾಗಿ ಸಣ್ಣ ಲೋಪದೋಷವೂ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ.ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿ ಅತ್ಯಂತ ಉತ್ಕøಷ್ಟ ಪ್ರಣಾಳಿಕೆ ನೀಡಿ,ಅದು ರಾಜ್ಯದ ಮತದಾರರ ಮನೆ ಮತ್ತು ಮನಗಳನ್ನು ತಲುಪುವಂತೆ ಮಾಡಿದ್ದಾರೆ.ಹಾಗಾಗಿ ಈ ಬಾರಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಯಾಗಿ ನೇಮಿಸುವ ಮೂಲಕ ಪಕ್ಷಕ್ಕಾಗಿ ದುಡಿದಿದ್ದಾರೆ. ಪರಮೇಶ್ವರ್ ಅವರಿಗೇನೆ ಸಿಎಂ ಸ್ಥಾನ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ತುಮಕೂರು ಮಹಾನಗರಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್,ಪಾಲಿಕೆ ಸದಸ್ಯರಾದ ನಯಾಜ್ ಅಹಮದ್,ಛಲವಾದಿ ಮಹಾಸಭಾದ ರಾಜ್ಯ ನಿರ್ದೇಶಕ ನಾಗೇಶ್,ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಚಂದ್ರಪ್ಪ,ದೊಡ್ಡಸಿದ್ದಯ್ಯ,ಪಿ.ಶಿವಪ್ರಸಾದ್,ಇರಕಸಂದ್ರ ಜಗನ್ನಾಥ್,ನರಸಿಂಹಮೂರ್ತಿ,ಕೊರಟಗೆರೆ ಕುಮಾರ್, ಎನ್.ಕೆ.ನಿಧಿ ಕುಮಾರ್,ಸಿದ್ದಲಿಂಗಯ್ಯ,ರಘು,ಮಾದಿಗ ದಂಡೋರ ಜಿಲ್ಲಾಧ್ಯಕ್ಷ ರಾಜೇಶ್, ನಿವೃತ್ತ ಅಧಿಕಾರಿ ಶಿವಣ್ಣ, ಕೆಪಿಸಿಸಿ ವೀಕ್ಷಕರಾದ ವಿಜಯಲಕ್ಷ್ಮಿ, ನಾಗಮ್ಮ,ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯದ ವಸುಂಧರ,ಶ್ರೀಧರ್, ಓಂಕಾರ್ ಕೊಪ್ಪಕಲ್ಲು, ಮಂಜೇಶ್, ಸೈದಪ್ಪ ಡಾಂಗೆ ಮತ್ತಿತರರು ಭಾಗವಹಿಸಿದ್ದರು.

ಹಳ್ಳಿ‌ಮಕ್ಕಳ ಅತಿ ದೊಡ್ಡ ಸಾಧನೆ

Thuruvekere: ಗ್ರಾಮೀಣ ಪ್ರದೇಶದ ಮಕ್ಕಳು ಐ.ಸಿ.ಎಸ್‍.ಇ ಪರೀಕ್ಷೆಯಲ್ಲಿ ಸತತ ಆರನೇ ಬಾರಿಗೆ ಶೇಕಡ ನೂರರಷ್ಟು ಫಲಿತಾಂಶವನ್ನು ನಮ್ಮ ಶಾಲೆಗೆ ತಂದುಕೊಟ್ಟಿದ್ದಾರೆ ಎಂದು ಇಂಡಿಯನ್‍ ಪಬ್ಲಿಕ್ ಸ್ಕೂಲ್ ನ (INDIAN PUBLIC SCHOOL) ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ್‍ ತಿಳಿಸಿದರು.

ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ಇಂಡಿಯನ್‍ ಪಬ್ಲಿಕ್ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂಧಿಸಿ ಮಾತನಾಡಿದ ಅವರು ಪ್ರತಿ ವರ್ಷ ತಮ್ಮ ಶಾಲೆಯಲ್ಲಿ ಪ್ರತಿಭಾವಂತ ಮಕ್ಕಳು ಹೊರಹೊಮ್ಮುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ಒಳ್ಳೆಯ ಹೆಸರುಗಳನ್ನು ಸಂಪಾದಿಸಿದ್ದಾರೆ. ಇಂತಹ ಕಾರ್ಯಗಳಿಗೆ ಕರಿವೃಷಭ ದೇಶಿ ಕೇಂದ್ರ ಮಹಾ ಸ್ವಾಮೀಜಿಗಳ ಸಹಕಾರ ಅತ್ಯಮೂಲ್ಯವಾಗಿದೆ ಎಂದು ಹೇಳಿದರು.

ಈ ಬಾರಿ ಪರೀಕ್ಷೆಗೆ ಕುಳಿತ 32 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಚಿತ್ರಶ್ರೀ ಜಿ ಶೇ.94 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ, ಸುಭಾಶ್‍ ಪಾಲ್ಗುಣಿ ಶೇ.92, ಅಂಕ ಪಡೆದು ಎರಡನೇ ಸ್ಥಾನ, ಪ್ರೀತು ಟಿ.ಎಸ್‍ ಶೇ .90 ಅಂಕ ಪಡೆದು ತೃತೀಯ ಸ್ಥಾನ ಹಾಗು ತನುಶಾ ಮತ್ತು ಸಿಂಚನಾ ಎಸ್‍.ಎ ತಲಾ ಶೇ.89 ಅಂಕ ಪಡೆದಿದ್ದಾಳೆ. ಶಾಲಾ ಫಲಿತಾಂಶ ಉತ್ತಮವಾಗಿ ಬರಲು ಶ್ರಮಿಸಿದ ಪ್ರಾಂಶುಪಾಲರಾದ ಪುಷ್ಪಾ ಎಸ್‍ ಪಾಟೀಲ್ , ಶಿಕ್ಷಕ ವೃಂದ ಹಾಗು ಪೋಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪುಷ್ಪಾ ಎಸ್‍.ಪಾಟೀಲ್, ಮುಖ್ಯ ಶಿಕ್ಷಕಿ ಶಶಿಕಲಾ ಹಿರೇಮಠ್, ಗುಂಡೇಗೌಡ, ಸರೋಜ ಮತ್ತು ಪೋಷಕರು ಉಪಸ್ಥಿತರಿದ್ದರು.

ಶಾಸಕ MTK ಗೆ ಹೂಮಳೆಯ ಸ್ವಾಗತ

ನೂತನ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಅದ್ದೂರಿ ಹೂ ಮಳೆಗರೆದ ಜೆಡಿಎಸ್ ಕಾರ್ಯಕರ್ತರು

ತುರುವೇಕೆರೆ: ಈ ಬಾರಿ ತಾಲ್ಲೂಕಿನ ಜೆಡಿಎಸ್ಕಾರ್ಯಕರ್ತರ ಪರಿಶ್ರಮದಿಂದ ನಾನು ಶಾಸಕನಾಗಿದ್ದೇನೆ ನನ್ನ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.


ಪಟ್ಟಣದಲ್ಲಿ ತಾಲ್ಲೂಕು ಎಂ.ಟಿ.ಕೃಷ್ಣಪ್ಪ ಅಭಿಮಾನಿ ಬಳಗ ಹಾಗು ಜೆಡಿಎಸ್ ಕಾರ್ಯಕರ್ತರ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನೂತನ ಶಾಸಕರ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು
ಕ್ಷೇತ್ರದ ಜನರು ನನ್ನ ಮೇಲೆ ಹೆಚ್ಚಿನ ಭರವಸೆ ಇಟ್ಟು ಗೆಲ್ಲಿಸಿದ್ದು ಈ ಕ್ಷೇತ್ರವನ್ನು ಹೆಚ್ಚಿನ ಅಭಿವೃದ್ದಿ ಮಾಡುತ್ತೇನೆ. ಕ್ಷೇತ್ರದ ಜನತೆ ಹಣ, ಆಮಿಷಗಳಿಗೆ ಬೆಲೆ ಕೊಡದೆ ಯಾರು ಕೆಲಸ ಮಾಡುತ್ತಾರೆ ಅಂತಹವರಿಗೆ ಗೆಲುವು ನೀಡುತ್ತಾರೆ ಎಂಬುದು ನನ್ನ ಗೆಲುವಿನಿಂದ ಸಾಭೀತಾಗಿದೆ ಎಂದರು.


2018ರ ಚುನಾವಣೆಯಲ್ಲಿ 1 ಸಾವಿರ ಅಂತರದಲ್ಲಿ ಸೋಲಿಸಿದ್ದ ಕ್ಷೇತ್ರದ ಜನರು 2023ರ ಚುನಾವಣೆಯಲ್ಲಿ 10 ಸಾವಿರ ಅಂತರದಲ್ಲಿ ಗೆಲ್ಲಿಸಿದ್ದೀರಾ. ಮತದಾರ ಪ್ರಭುವಿನ ತೀರ್ಪಿಗೆ ತಲೆಬಾಗಲೇಬೇಕು. ಈ ಚುನಾವಣೆಯಲ್ಲಿ ಹಣ ಉಳ್ಳವರು ನನ್ನ ಸಹಕಾರಕ್ಕೆ ನಿಲ್ಲದೆ ಕದ್ದು ಹೋದರು, ಬಡವರು, ಮುಖಂಡರು, ನಿಷ್ಟವಂತಾ ಕಾರ್ಯಕರ್ತರು ನನ್ನ ಪರವಾಗಿ ನಿಂತು ಚುನಾವಣೆ ನಡೆಸಿ ಹೋರಾಟ ಮಾಡಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಾನು ನಿಮ್ಮ ಸಹಕಾರಕ್ಕೆ ಸದಾ ಚಿರಋಣಿಯಾಗಿದ್ದು ರೈತರ, ಬಡ ಜನರ ಕೆಲಸವನ್ನು ಮಾಡುವುದರ ಜೊತೆಗೆ ಸಂಪೂರ್ಣ ಅಭಿವೃದ್ದಿ ಮಾಡುತ್ತೇನೆ ಎಂದರು.


ಇದಕ್ಕೂ ಮುನ್ನಾ ಪಟ್ಟಣದ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಶಾಸಕ ಎಂ.ಟಿ,ಕೃಷ್ಣಪ್ಪ ಅವರು ಮೆರವಣಿಗೆಯ ಮೂಲಕ ಉಡಸಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮುಸ್ಲಿಂ ದರ್ಗಾ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಪಟ್ಟಣದಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಾಣಸಂದ್ರ ವೃತ್ತದಲ್ಲಿ ಜೆಸಿಬಿಗಳ ಮೂಲಕ ಹೂ ಮಳೆಗೈದರು.


ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮುಖಂಡರು ಹಾಗೂ ಕಾರ್ಯಕರ್ತರು ಹಾರ, ಶಾಲು ಹಾಕಿ ಸನ್ಮಾನಿಸಿದರು. ಅಪಾರ ಕಾರ್ಯಕರ್ತರು ವಿಜಯೋತ್ಸವ ಮೆರವಣಿಗೆಯಲ್ಲಿ ಡಿ.ಜೆ.ಸೌಂಡಿಗೆ ಕುಣಿದು ಕುಪ್ಪಳಿಸಿ ಜೆಡಿಎಸ್ ನಾಯಕರಿಗೆ ಹಾಗೂ ನೂತನ ಶಾಸಕರಿಗೆ ಜಯ ಘೋಷ ಹಾಕಿದರು. ಪಟಾಕಿ ಸಿಡಿಸಿ ಎಲ್ಲರಿಗೂ ಸಹಿ ಹಂಚಿ ಸಂಭ್ರಮಿಸಿದರು.


ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾವಾಳರಾಮೇಗೌಡ, ಪಟ್ಟಣ ಪಂಚಾಯಿತಿ ಸದಸ್ಯ ಎನ್.ಆರ್.ಸುರೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ್ ಗೌಡ, ಮುಖಂಡರಾದ ಯಡಿಗಿಹಳ್ಳಿವಿಶ್ವನಾಥ್, ದಿವಾಕರ್, ರೇಣುಕೇಶ್, ರಾಘು ಸೇರಿದಂತೆ ಅಪಾರ ಮುಖಂಡರು ಕಾರ್ಯಕರ್ತರು ಇದ್ದರು.

ಗ್ರಾ.ಪಂ.ಗೊಂದು ಮಾದರಿ ಶಾಲೆ: ಸುರೇಶಗೌಡ

0

ತುಮಕೂರು : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಇಂದಿಗೂ ಬಿಜೆಪಿ ಪ್ರಬಲವಾಗಿದೆ. ಕರ್ನಾಟಕದ ವಿಚಾರದಲ್ಲಿ ಪಕ್ಷ ಸದೃಢವಾಗಿದ್ದರೂ ಕೆಲ ವಿಷಯಗಳಲ್ಲಿ ಆದ ಹೊಂದಾಣಿಕೆ ಕೊರೆತೆಯಿಂದ ಕಡಿಮೆ ಸ್ಥಾನಗಳು ಬಂದಿವೆ. ಮುಂದಿನ ಬಾರಿ ಸರಿ ಹೋಗಲಿದೆ ಎಂದು ಶಾಸಕ ಬಿ.ಸುರೇಶಗೌಡ ಅವರು (B sureshgowda) ಹೇಳಿದರು.

ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್‍ನವರು ನಮ್ಮ ಪಕ್ಷದ ಬಗ್ಗೆ ಮಾಡಿದ ಅಪಪ್ರಚಾರದಿಂದ ಕಡಿಮೆ ಸೀಟು ಬಂದಿವೆ. ಗ್ಯಾಸ್ ಬೆಲೆ ಹೆಚ್ಚಳ, ಪಡಿತರ ಅಕ್ಕಿ ಇನ್ನಿತರ ವಿಚಾರಗಳ ಬಗ್ಗೆ ಹೆಚ್ಚು ಅಪಪ್ರಚಾರ ನಡೆಯಿತು. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡು ಹೋಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಸರ್ಕಾರ ಯಾವುದಿದ್ದರೇನು, ಅನುದಾನ ತರುವ ತಾಕತ್ತು ನನಗಿದೆ. ಸರ್ಕಾರ ಒಂದು ರೀತಿಯಲ್ಲಿ ಬಾವಿಯಿದ್ದಂತೆ. ಯಾರಿಗೆ ಶಕ್ತಿ ಇದೆಯೋ ಅವರು ಹೆಚ್ಚು ನೀರು ಸೇದಿಕೊಳ್ಳುತ್ತಾರೆ. ಈ ಹಿಂದೆ 2013ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗಲೂ ಕೇತ್ರದ ಅಭಿವೃದ್ದಿಗೆ 800 ಕೋಟಿ ಅನುದಾನ ತಂದಿದ್ದೆ. ಈ ಬಾರಿಯೂ ಪ್ರಬಲ ವಿರೋಧ ಪಕ್ಷವಾಗಿ ಕ್ಷೇತ್ರದ ಅಭಿವೃದ್ದಿಗೆ ಬೇಕಾದ ಅನುದಾನ ತರಲಿದ್ದೇನೆ. ನಾನು ಅನುದಾನವನ್ನು ನನ್ನ ಮನೆಗೆ ಕೇಳೋದಿಲ್ಲ. ಬಡವರಿಗೆ ಮನೆ, ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಸೇರಿದಂತೆ ಎಲ್ಲವನ್ನು ಅದ್ಯತೆಯ ಮೇರೆಗೆ ಮಾಡಲಿದ್ದೇನೆ ಎಂದರು.

ಕ್ಷೇತ್ರವನ್ನು ಹಾಗೂ ಶಾಲೆಗಳನ್ನು ಸಿ.ಎಸ್.ಆರ್.ನಿಧಿಯಿಂದ ಅಭಿವೃದ್ದಿ ಪಡಿಸುವ ಯೋಚನೆ ಇದೆ. ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಒಂದೊಂದು ಶಾಲೆಯನ್ನು ಮಾದರಿ ಶಾಲೆ ಮಾಡಬೇಕೆಂಬ ಮಹದಾಸೆ ಇದೆ. ಈಗಾಗಲೇ ಆಕ್ಷನ್ ಪ್ಲಾನ್ ಇದೆ. ಮಾಜಿ ಶಾಸಕರ ಕಾಲದಲ್ಲಿ ಹಾಳಾಗಿರುವ, ನೆನೆಗುದಿಗೆ ಬಿದ್ದಿರುವ ಎಲ್ಲಾ ಯೋಜನೆಗಳನ್ನು ಒಂದು ತಿಂಗಳ ಒಳಗೆ ಸರಿದಾರಿಗೆ ತಂದು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ದಿ ಪಡಿಸುವತ್ತ ಗಮನ ಹರಿಸುತ್ತೇನೆ ಎಂದು ಅವರು ಹೇಳಿದರು.

ಸುರೇಶ್‍ಗೌಡ ಅವರು ಹಳೇ ಮಠಕ್ಕೆ ತೆರಳಿ ನೂತನ ಉತ್ತರಾಧಿಕಾರಿ ಶ್ರೀ ಶಿವ ಸಿದ್ದೇಶ್ವರ ಸ್ವಾಮಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮುಖಂಡರಾದ ಮೈದಾಳ ಗ್ರಾ.ಪಂ.ಅಧ್ಯಕ್ಷ ಮಾಲಾ ಮಂಜುನಾಥ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಂಕರಣ್ಣ, ಉಮಾಶಂಕರ್, ಗೂಳೂರು ಶಿವಕುಮಾರ್, ಅರಕೆರೆ ರವೀಶ್, ನಾರಾಯಣಪ್ಪ, ಗೂಳೂರು ವಿಜಯಕುಮಾರ್, ಗಂಗಾಂಜನೇಯ, ಪಂಚೆ ರಾಮಚಂದ್ರಪ್ಪ, ವಿಜಯಕುಮಾರ್, ಹೊನ್ನೇಶಕುಮಾರ್, ಹೆತ್ತೇನಹಳ್ಳಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.