ತಲೆಗೆ ಬ್ಯಾಂಡಿಜ್ ಹಾಕಿಕೊಂಡು ಮತ್ತೆ ಪ್ರಚಾರಕ್ಕಿಳಿದ ಡಾ.ಜಿ.ಪರಮೇಶ್ವರ್ ಕೊರಟಗೆರೆಯಲ್ಲಿ ನಾಳೆ ಸಿದ್ದರಾಮಯ್ಯ ಚುನಾವಣಾ ಪ್ರಚಾರ:
ತುಮಕೂರು: ಶುಕ್ರವಾರದಂದು ಪ್ರಚಾರದ ವೇಳೆ ತಲೆಗೆ ಕಲ್ಲೇಟು ಬಿದ್ದು ಗಾಯಗೊಂಡಿದ್ದ ಶಾಸಕರು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಅವರು ಚಿಕಿತ್ಸೆ ಬಳಿಕ ಮತ್ತೆ ಕೊರಟಗೆರೆ ಇಂದಿನಿಂದ(ಭಾನುವಾರದಿಂದ) ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದರು.
ತಲೆಗೆ ಬ್ಯಾಂಡಿಜ್ ಹಾಕಿದ್ದು, ಟೋಪಿ ಧರಿಸಿಕೊಂಡು ಪ್ರಚಾರಕ್ಕೆ ಧುಮಕಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆ೧ರಂದು ಭಾಗವಹಿಸಲಿರುವ ಕೊರಟಗೆರೆ ರಾಜೀವ್ ಭವನದ ಸಮಾವೇಶದ ವೇದಿಕೆ ಪರಿಶೀಲನೆ ಮಾಡಿದರು.
ಇಲ್ಲಿ ಸೋಮವಾರ ಮಧ್ಯಾಹ್ನ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರು ಆದ ಸಿದ್ಧರಾಮಯ್ಯ ನವರು ಪ್ರಚಾರ ಸಭೆಯಲ್ಲಿ ನಡೆಸಲಿದ್ದಾರೆ.
ಹಳ್ಳಿಗಳಲ್ಲಿ ಮತ ಪ್ರಚಾರ: ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹೊಳವನಹಳ್ಳಿ ಹೋಬಳಿಯ ಬೈರನಹಳ್ಳಿ ಕ್ರಾಸ್ನಿಂದಲೇ ಇಂದು ಮತ್ತೆ ಮತ ಪ್ರಚಾರ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ, ಕಲ್ಲೆಸತದ ಘಟನೆಯ ಬಗ್ಗೆ ಬೇಸರ ವ್ಯಕ್ಪಡಿಸಿ, ಜನತೆ ಆರ್ಶೀವಾದದ ರಕ್ಷಣೆ ಇರುವ ತನಕ ಯಾವುದಕ್ಕೂ ಅಂಜುವುದಿಲ್ಲ. ನನ್ನ ಬಗ್ಗೆ ಕ್ಷೇತ್ರದ ಜನರಲ್ಲಿ ನಂಬಿಕೆ ಇದೆ. ಯಾರೂ ಸಹ ಆತಂಕಕ್ಕೆ ಒಳಗಾಗಬಾರದು. ಇದು ಚುನಾವಣಾ ಸಮಯ. ಶಾಂತಿಯಿಂದ ವರ್ತಿಸಿ. ಯಾವುದೇ ಅಹಿತಕರ ಘಟನೆಗಲಿಗೆ ಅವಕಾಶ ನೀಡಬೇಡಿ. ಹೆಚ್ಚಿನ ಮತ ನೀಡುವ ಮೂಲಕ ವಿರೋಧಿಗಳಿಗೆ ಉತ್ತರ ನೀಡಿ ಎಂದು ಕರೆ ನೀಡಿದರು.
ನನಗೆ ಡ್ರಾಮಾ ಮಾಡಿ ಅಭ್ಯಾಸ ಇಲ್ಲಾ. ಅದರ ಅವಶ್ಯಕತೆ ನನಗೆ ಇಲ್ಲಾ. ೩೫ ವರ್ಷದ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆಯಿಲ್ಲದೆ ರಾಜಕಾರಣ ಮಾಡಿದ್ದೇನೆ. ನಾನು ತೆರೆದ ಪುಸ್ತಕ. ಬೇಕಾದರೆ ಓದಿಕೊಳ್ಳಿ ಎಂದು ವಿರೋಧ ಪಕ್ಷಗಳ ಕೆಲವು ನಾಯಕರ ಹೇಳಿಕೆಗೆ ಪರಮೇಶ್ವರ್ ತಿರುಗೆಟು ನೀಡಿದರು.
ನಂತರ ರಾಯವಾರ- ಕಳ್ಳಿಪಾಳ್ಯ, ರೆಡ್ಡಿಹಳ್ಳಿ ಗ್ರಾಮದಲ್ಲಿ ಅತ್ಯಂತ ನಿರೀಕ್ಷಿತ ಜನಬೆಂಬಲ ವ್ಯಕ್ತವಾದರೆ, ಬೈಚಾಪುರ ಗ್ರಾಮ ಪಂಚಾಯ್ತಿಯ ಬಸವನಹಳ್ಳಿ ಗ್ರಾಮದಲ್ಲಿ ಭಾರೀ ಜನಬೆಂಬಲದೊಂದಿಗೆ ಪರಮೇಶ್ವರ ಅವರು ಮತಯಾಚನೆ ಮಾಡಿದರು.
ಬೈರನಹಳ್ಳಿಯಂದ ಚಿಕ್ಕೇನಹಳ್ಳಿ ತನಕ ೧೦ ಗ್ರಾಮಗಳಲ್ಲಿ ಮತಯಾಚನೆ ಮಾಡಿದ ಪರಮೇಶ್ವರ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲಿದೆ ಎಂದರು.
ಪಕ್ಷಕ್ಕೆ ಸೇರ್ಪಡೆ: ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಳ್ಳಿಪಾಳ್ಯ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆಯಲ್ಲಿ ವಿಪಕ್ಷಗಳನ್ನು ತೊರೆದು ಕಾಂಗ್ರೆಸ್ಗೆ ಮುಖಂಡರು ಸೇರ್ಪಡೆಯಾದರು. ಬೈಚಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದ ಮುಖಂಡ ಹಾಗೂ ನಿವೃತ್ತ ಶಿಕ್ಷಕರಾದ ರಾಮಕೃಷ್ಣಯ್ಯ ನವರು ಜೆಡಿಎಸ್ ಪಕ್ಷ ತೊರೆದು ಡಾ ಜಿ ಪರಮೇಶ್ವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ವೇಳೆ ಆರ್ ವೆಂಕಟಾಪುರದ ಗ್ರಾಮದ ಬಿಜೆಪಿ ಮುಖಂಡ ಹನುಮಂತರಾಯಪ್ಪ ಅವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರಿದರೆ,ಸಿ.ಎನ್.ದುರ್ಗ ಹೋಬಳಿ ಗಟ್ಲಹಳ್ಳಿ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕರಿಯಣ್ಣ ಅವರನ್ನೂ ಕಾಂಗ್ರೆಸ್ಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.
ಶಕ್ತಿಸೌಧದಲ್ಲಿ ನಡೆದ ಕುರುಬರ ಬೃಹತ್ ಸಮಾವೇಶ: ಹೆಬ್ಬೂರಿನಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ: ಸಿದ್ದರಾಮಯ್ಯಗೆ ಆಹ್ವಾನ ನೀಡುವೆ ಎಂದ ಸುರೇಶಗೌಡರು: ಸುರೇಶಗೌಡರ ಕೊಡುಗೆ ನೆನೆದು ಭಾವುಕರರಾದ ಕುರುಬ ಮುಖಂಡರು
ತುಮಕೂರು: ಹೆಬ್ಬೂರಿನಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಗೂ ಕುರುಬರ ಭವನ ನಿರ್ಮಿಸುವುದಾಗಿ ಮಾಜಿ ಶಾಸಕ ಬಿ.ಸುರೇಶಗೌಡರು ಭರವಸೆ ನೀಡಿದರು. ನಾಗವಲ್ಲಿ ಸಮೀಪದ ಶಕ್ತಿ ಸೌಧದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಕುರುಬರ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾನು ಶಾಸಕನಾಗಿ ಅಯ್ಕೆಯಾದ ಕೂಡಲೇ ರಾಯಣ್ಣ ಪ್ರತಿಮೆ ಮಾಡುವೆ. ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಆಹ್ವಾನಿಸುತ್ತೇನೆ. ಈ ಇಬ್ಬರೂ ಕುರುಬ ಸಮುದಾಯದ ಕಣ್ಮಣಿಗಳು ಎಂದು ಬಣ್ಣಿಸಿದರು.
ಕ್ಷೇತ್ರದಲ್ಲಿ ಕುರುಬರು ಮೊದಲಿನಿಂದಲೂ ನನ್ನ ಬೆಂಬಲಿಸಿದ್ದೀರಿ. ಕುರುಬರಿಗೆ ರಾಜಕೀಯ ಪ್ರಾತಿನಿಧ್ಯವನ್ನು ನೀಡಿದ್ದೇನೆ. ಕುರುಬರನ್ನು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಸ್ಥಾನ, ಎಪಿಎಂ ಸಿ ಅಧ್ಯಕ್ಷ ಸ್ಥಾನ, ನಿರ್ದೇಶಕ ಸ್ಥಾನ, ಪಿ ಎಲ್ ಡಿ ಬ್ಯಾಂಕ್ ಸದಸ್ಯ, ಲ್ಯಾಂಡ್ ಟ್ರಿಬ್ಯೂನ್ ಸದಸ್ಯ ಹಾಗೂ ಮೂವರನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮಾಡಿರುವೆ. ಕುರುಬ ಸಮುದಾಯದ ಅಭಿವೃದ್ಧಿ ಹಾಗೂ ರಾಜಕೀಯ ಸಮಾನ ಸ್ಥಾನಮಾನ ನೀಡಿದ್ದೇನೆ ಎಂದು ಹೇಳಿದರು. ಕುರುಬ ಸಮುದಾಯ ಇರುವ ಕಡೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇನೆ. ಶಾಲೆಗಳನ್ನು ತೆರೆದು ಈ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವೆ ಎಂದು ಭರವಸೆ ನೀಡಿದರು.
ಸ್ಥಾನಮಾನಕೊಟ್ಟ ನಾಯಕ
ನಿಡುವಳಲು ಗ್ರಾ.ಪಂ. ಮಾಜಿ ಅಧ್ಯಕ್ಷ ಸಿದ್ದಗಂಗಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಕುರುಬ ಸಮುದಾಯವನ್ನು ಗುರುತಿಸಿದ ಮೊದಲ ಶಾಸಕರು ಸುರೇಶ್ ಗೌಡರು. ಸಮಾಜಕ್ಕೆ ರಾಜಕೀಯ ಸ್ಥಾನಮಾನ ಗಳಿಸಿಕೊಟ್ಟರು. ಸಮುದಾಯದ ಕಷ್ಟ ಸುಖ ಆಲಿಸಿದರು. ಕುರುಬ ಸಮುದಾಯ ಹೆಚ್ಚಿರುವ ಕಡೆ ರಸ್ತೆ, ನೀರು, ಮೂಲ ಸೌಕರ್ಯ ಒದಗಿಸಿಕೊಟ್ಟರು. ಸುರೇಶಗೌಡರು ಗೆಲ್ಲುವಲ್ಲಿ ಸಮುದಾಯದ ಯುವಕರು ಕೆಲಸ ಮಾಡಬೇಕು. ಎಲ್ಲ ಕಡೆ ತೆರಳಿ ಪ್ರಚಾರ ನಡೆಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಸುರೇಶಗೌಡರನ್ನು ಸಮುದಾಯ ಬೆಂಬಲಿಸಬೇಕು. ಸುರೇಶಗೌಡರು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಗ್ರಾಮಾಂತರದ ಸರ್ವೋತ್ತೋಮುಖ ಅಭಿವೃದ್ಧಿಗೆ ಸುರೇಶಗೌಡರ ಗೆಲುವು ಅತಿಮುಖ್ಯವಾಗಿದೆ. ಸಮುದಾಯ ಅವರ ಪರ ನಿಲ್ಲಬೇಕು ಎಂದರು.
ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗ ತೊಡಗಿದೆ.
ಕಾಂಗ್ರೆಸ್ ನಿಂದ ಷಣ್ಮುಖಪ್ಪ ಅವರಿಗೆ ಟಿಕೆಟ್ ನೀಡಿದ ಬಳಿಕ ಆ ಪಕ್ಷದಲ್ಲಿ ಅಳಿದುಳಿದ ನಾಯಕರು, ಕಾರ್ಯಕರ್ತರು ಸಹ ಅಲುಗಾಡ ತೊಡಗಿದ್ದಾರೆ.
ಗ್ರಾಮಾಂತರ ಶಾಸಕ ಗೌರಿಶಂಕರ್ ಅವರೊಂದಿಗೆ ಮುನಿಸಿಕೊಂಡು ಜೆಡಿಎಸ್ ಪಕ್ಷದಿಂದ ದೂರವೇ ಉಳಿದಿದ್ದ ಎಚ್.ನಿಂಗಪ್ಪ ಅವರು ಏಕಾಏಕಿ ಕಾಂಗ್ರೆಸ್ ಸೇರಿದ್ದರು. ಗ್ರಾಮಾಂತರದಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವ ಗ್ಯಾರಂಟಿ ಅವರಿಗೆ ಇತ್ತು. ಟಿಕೆಟ್ ನೀಡದ ಕಾರಣ ಅವರಿಗೆ ನಿರಾಶೆಯಾಗಿದೆ.
ಕಾಂಗ್ರೆಸ್ ನ ಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ. ತಮ್ಮ ಹಿಂಬಾಲಕರು, ಅಭಿಮಾನಿಗಳು, ಸಂಬಂಧಿಕರ ಜತೆ ಸಂಪರ್ಕ ಇಟ್ಟುಕೊಂಡಿರುವ ಅವರು ಚುನಾವಣೆಯಲ್ಲಿ ಯಾವ ದಾಳ ಉರುಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ನಿಂಗಪ್ಪ ಅವರಿಗೆ ಟಿಕೆಟ್ ಕೊಡದ ಕಾರಣ ಕಲ್ಲಹಳ್ಳಿ ದೇವರಾಜ್ ಸಹಿತ ಕಾಂಗ್ರೆಸ್ ನ ಹಲವು ಮೂಲ ಮುಖಂಡರು ಅಸಮಾಧಾನದಿಂದ ಕುದಿಯುತ್ತಿದ್ದಾರೆ.
ಈ ಸಲ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸ್ಥಿತಿಯ ಬಗ್ಗೆ ಆ ಪಕ್ಷದ ಕಾರ್ಯಕರ್ತರೇ ನಗಾಡುವಂತೆ ಆಗಿದೆ.
ಕಾಂಗ್ರೆಸ್ ನ ಈ ಪರಿಸ್ಥಿತಿಯ ಲಾಭ ಬಿಜೆಪಿಗೆ ಆಗತೊಡಗಿದೆ. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರ ಬಹುತೇಕ ಬೆಂಬಲಿಗರು ಬಿಜೆಪಿಯನ್ನು ಬೆಂಬಲಿಸುವ ಮಾತುಗಳನ್ನಾಡುತ್ತಿರು ವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ.
ಮಾಜಿ ಶಾಸಕ ಎಚ್.ನಿಂಗಪ್ಪ ಅವರು ಶಾಸಕ ಗೌರಿಶಂಕರ್ ಅವರನ್ನು ಸೋಲಿಸುವಂತೆ ತಮ್ಮ ಆಪ್ತರಿಗೆ ಕರೆ ಮಾಡಿ ಹೇಳುತ್ತಿರುವುದು ಗುಟ್ಟಾಗಿ ಏನು ಉಳಿದಿಲ್ಲ. ಇದು ಬಿಜೆಪಿಗೆ ನೆರವಾಗಲಿದೆ ಎಂಬುದು ಯಾರೂ ಬಿಡಿಸಿ ಹೇಳಬೇಕಾಗಿಲ್ಲ.
ಕಾಂಗ್ರೆಸ್ ನ ಗೂಳೂರು ವಿಜಯಕುಮಾರ್ ಸಹ ಈಗಾಗಲೇ ಬಿಜೆಪಿ ಸೇರಿದ್ದಾರೆ.
ಕಾಂಗ್ರೆಸ್ ಉರುಳಿಸಿದ ರಾಜಕೀಯ ದಾಳ ಆ ಪಕ್ಷದ ಮೂಲ ಬೇರುಗಳನ್ನೇ ಕತ್ತರಿಸಿದೆ. ಅದರ ಲಾಭ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
JDS ನ ಪ್ರಮುಖ ಮುಖಂಡರಾದ ಬೆಳ್ಳಿ ಲೋಕೇಶ್, ವೈ.ಟಿ.ನಾಗರಾಜ್, ಎಚ್.ಟಿ.ಕೃಷ್ಣಪ್ಪ ಅವರು ಸಹ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನ ಇನ್ನೂ ಕೆಲ ಮುಖಂಡರು ಬಿಜೆಪಿ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್, ಜೆಡಿಎಸ್ ನವರ ಮನೆ ಖಾಲಿ ಮಾಡುವವರ ಸಂಖ್ಯೆ ಹೆಚ್ಚತೊಡಗಿದ್ದು, ಬಿಜೆಪಿ ಜೋಳಿಗೆ ತುಂಬುವಂತೆ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹುಬ್ಬಳ್ಳಿ: ಮೈತ್ರಿಗೆ ರಾಷ್ಟ್ರೀಯ ಪಕ್ಷಗಳ ಮುಖಂಡರು ಬಂದಿದ್ದರು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈತ್ರಿಗೆ ಬಂದವರ ಹೆಸರನ್ನು ಬಹಿರಂಗಪಡಿಸಲಿ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮುಂದಿನ ಮುಖ್ಯಮಂತ್ರಿ ನಾನೇ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿರುವುದು ನನ್ನ ಅದೃಷ್ಟ. ನನ್ನ ಮೇಲೆ ನಂಬಿಕೆ ಇಟ್ಟು ಆ ಮಾತುಗಳನ್ನಾಡಿದ್ದಾರೆ. ಎಲ್ಲರನ್ನು ಸರಿದೂಗಿಸಿಕೊಂಡು ಹೋಗುವಂತೆ ಅಮಿತ್ ಶಾ ಸಹ ತಿಳಿಸಿದ್ದರು. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ ಎಂದರು.
ಚಾಮರಾಜನಗರ: ಇಲ್ಲಿನ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ವಸತಿ ಸಚಿವ ವಿ.ಸೋಮಣ್ಣ ಅವರ ಉಮೇದುವಾರಿಕೆ ರದ್ದು ಆಗುವ ಸಂಭವವಿದೆ.
ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ( ಆಲೂರು ಮಲ್ಲು) ಅವರಿಗೆ ಕರೆ ಮಾಡಿ ಸ್ಪರ್ಧೆಯಿಂದ ಹಿಂತೆಗೆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಗೂಟದ ಕಾರು ಕೊಡುವುದಾಗಿ ಆಮಿಷ ಒಡ್ಡಿದ್ದರು. ಈ ವಿಡಿಯೊ ವ್ಯಾಪಕವಾಗಿ ಹರಿದಾಡಿತ್ತು.
ಇದರ ಆಧಾರದಲ್ಲಿ ಕೇಂದ್ರ ಚುನಾವಣಾ ಆಯೋಗ ದ ಸೂಚನೆ ಮೇರೆಗೆ ಸೋಮಣ್ಣ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 123 ರ ಅಡಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿತ್ತು. ಈ ಆಧಾರದಲ್ಲಿ ಸೋಮಣ್ಣ ಉಮೇದುವಾರಿಕೆ ರದ್ದುಪಡಿಸುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಈ ಆರೋಪ ಸಾಬೀತಾದರೆ ಒಂದು ವರ್ಷ ಜೈಲು ಅಥವಾ ದಂಡದ ಶಿಕ್ಷೆ ಇದೆ.
ಯಾರೋ ದುಷ್ಕರ್ಮಿಗಳು ನನ್ನ ಮೇಲೆ ಕಲ್ಲು ಎಸೆದು ಗಾಯಗೊಳ್ಳುವಂತೆ ಮಾಡಿದ್ದಾರೆ. ಇದು ಸೇರಿದಂತೆ ಮೂರು ಬಾರಿ ನನ್ನ ಮೇಲೆ ಈ ರೀತಿಯ ಘಟನೆಗಳು ನಡೆದಿವೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೇಳಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.
ತುಮಕೂರಿನ ಸಿದ್ಧಾರ್ಥನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಲು ಹೂವಿನಲ್ಲಿ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಅದು ತುಂಬಾ ದಪ್ಪ ಕಲ್ಲು. ನನ್ನ ತಲೆಯ ಮೇಲೆ ಬಿದ್ದವೇಗವೇ ಯಾರೋ ದುಷ್ಕರ್ಮಿಗಳು ಎಸೆದಿರಬಹುದು ಎಂದು ಗೊತ್ತಾಗುತ್ತದೆ ಎಂದರು.
ಏಪ್ರಿಲ್ 28ರಂದು ಸಂಜೆ 4.30 ರ ಸುಮಾರಿಗೆ ಭೈರೇನಹಳ್ಳಿಗೆ ಪ್ರಚಾರಕ್ಕೆ ಬಂದೆ. ಅಲ್ಲಿ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ನನ್ನ ಎತ್ತುಕೋಬೇಡಿ ಅಂತಾ ಹೇಳುತ್ತಿದ್ದೆ. ಅಷ್ಟರಲ್ಲಿ ಜೆಸಿಬಿಯಲ್ಲಿ ಹೂವು, ಕ್ರೇನ್ ನ ಹಾರ ಹಾಕೋಕೆ ಪ್ರಾರಂಭಿಸಿದರು. ಇದೇ ವೇಳೆ ಸಡನ್ ಆಗಿ ನನ್ನ ತಲೆಗೆ ಏನೋ ಬಿದ್ದಂತಾಯಿತು. ನೋಡಿದರೆ ಕಲ್ಲು. ಕಲ್ಲು ಬಿದ್ದ ರಭಸಕ್ಕೆ ರಕ್ತವೂ ಬರೋಕೆ ಶುರುವಾಯಿತು. ನಾನು ಕೂಗಿಕೊಂಡೆ. ಆಗ ನನ್ನ ರಕ್ತವನ್ನ ಗಮನಿಸಿ ಕೆಳಗೆ ಇಳಿಸಿದರು ಎಂದು ಘಟನೆಯ ವಿವರಗಳನ್ನು ಮಾಧ್ಯಮಗಳ ಮುಂದಿಟ್ಟರು.
ತಲೆಯಲ್ಲಿ ಒಂದೂವರೆ ಇಂಚು ಗಾಯವಾಗಿದೆ, ಸರ್ಜಿಕಲ್ ಗಮ್ ಹಾಕಿದ್ದಾರೆ. ಸ್ವಲ್ಪ ನೋವಿದೆ, ವೈದ್ಯರು ತಿಳಿಸಿದರೆ ನಾಳೆಯೇ ಪ್ರಚಾರಕ್ಕೆ ಹೋಗುತ್ತೇನೆ. ಪರಮೇಶ್ವರ್ ಗೆ ಕಲ್ಲೆಸೆತ ಡ್ರಾಮ ಅನ್ನೋ ಕುಮಾರಸ್ವಾಮಿ ಹೇಳಿಕೆ ಅವರಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು, ನನಗೆ ಅತ್ತು ಕರೆದು ಡ್ರಾಮಾ ಮಾಡಿ ಅಭ್ಯಾಸ ಇಲ್ಲಾ. ಏಕೆಂದರೆ ಏಟು ತಿಂದವನು ನಾನು ಅಲ್ವಾ, ಅವರಲ್ಲಾ ಎಂದು ತಿರುಗೇಟ್ಪ್ರ ನೀಡಿದರು.
ನಾನು 35 ವರ್ಷದಿಂದಲೂ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ನನಗೆ ಶತ್ರುಗಳು ಕಡಿಮೆ ಅಂದುಕೊಂಡಿದ್ದೇನೆ. ನಿನ್ನೆಯ ಘಟನೆ ನನಗೆ ಆತಂಕ ತರಿಸಿದೆ. ಈ ವಿಷಯದ ಕುರಿತು ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದೇನೆ. ತನಿಖೆ ಮಾಡುವಂತೆ ಹೇಳಿದ್ದೇನೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ನನ್ನ ಆರೋಗ್ಯ ವಿಚಾರಿಸಿದ್ದಾರೆ. ನನಗೆ ಭದ್ರತೆ ಅವಶ್ಯಕತೆ ಇಲ್ಲ ಅಂದುಕೊಂಡಿದ್ದೆ. ಆದರೆ ಈ ಘಟನೆ ನಡೆದ ಮೇಲೆ ಭದ್ರತೆ ಬೇಕು ಅನಿಸುತ್ತಿದೆ ಎಂದು ಹೇಳಿದರು.
ತುಮಕೂರು: ಮತದಾರರಲ್ಲಿ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮವನ್ನು ಏಪ್ರಿಲ್ ೩೦ರಂದು ಬೆಳಿಗ್ಗೆ ೮ ಗಂಟೆಗೆ ಜಿಲ್ಲೆಯಾದ್ಯಂತ ಆಯೋಜಿಸಲಾಗುವುದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಪ್ರಸ್ತುತ ಚುನಾವಣೆಯ ಮತದಾನ ಮೇ 10 ರಂದು ನಡೆಯಲಿದ್ದು, ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮವನ್ನು ಏಪ್ರಿಲ್ 3೦ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು. ಪ್ರಾಥಮಿಕವಾಗಿ ಮತಗಟ್ಟೆ ಹಂತದಲ್ಲಿ ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಓ ನೇತೃತ್ವದಲ್ಲಿ, ತಾಲ್ಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಒಂದೇ ರೀತಿಯ ’ಪ್ರಜಾಪ್ರಭುತ್ವದ ಹಬ್ಬ ’ಮೇ 10 ಮತದಾನ’ ಎಂಬ ಧ್ಯೇಯ ಒಳಗೊಂಡಿರುವ ಬಾವುಟವನ್ನು ಸಿದ್ಧಪಡಿಸಿ ಪ್ರತಿ ಮತಗಟ್ಟೆಗಳಿರುವ ಪ್ರದೇಶಾವಾರು ಧ್ವಜಾರೋಹಣವನ್ನು ನೆರವೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಮತದಾರರನ್ನು ಸೆಳೆಯಲು ಸ್ಥಳೀಯ ಜನಪದ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕಾಲ್ನಡಿಗೆ ಜಾಥಾ ಸೇರಿದಂತೆ ಚುನಾವಣಾ ವಿಷಯಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಪ್ರೇರಿತ ಅಥವಾ ಸಂಬಂಧಿತ ವ್ಯಕ್ತಿಗಳು ಭಾಗವಹಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ. ಒಂದು ಗಂಟೆಗೆ ಕಡಿಮೆ ಇಲ್ಲದಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಒಟ್ಟಾರೆ ಪ್ರತಿ ಮತಗಟ್ಟೆಯನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯವಾಗಿ ಭಾರತ ಚುನಾವಣಾ ಆಯೋಗ ಈ ವರ್ಷ ಬಿಡುಗಡೆ ಮಾಡಿರುವ ಚುನಾವಣಾ ಗೀತೆಯನ್ನು ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ 2018 ರಲ್ಲಿ ಬಿಡುಗಡೆ ಮಾಡಿರುವ ಚುನಾವಣಾ ಗೀತೆಗಳನ್ನು ಬಳಸಬಹುದಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಸ್ತುವಾರಿ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ನೈತಿಕ ಚುನಾವಣೆಯ ಕುರಿತು ಮತದಾರರಿಗೆ ಬಿತ್ತಿಪತ್ರಗಳ ವಿತರಣೆ, ಎಲ್ಇಡಿ ವಾಹನಗಳ ಮೂಲಕ ಜಾಗೃತಿ, ಮತದಾನದ ಮಹತ್ವ ಕುರಿತು ಬೀದಿ ನಾಟಕ, ಜಾನಪದ ಕಲೆಗಳ ಮೂಲಕ ಮತದಾರರ ಜಾಗೃತಿ, ಸೈಕಲ್, ದ್ವಿಚಕ್ರ ವಾಹನ ಮತ್ತು ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳುವುದು, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುವ ಕುರಿತು ಮಾಹಿತಿ, ಭಾರತ ಚುನಾವಣಾ ಆಯೋಗ ನೈತಿಕ ಚುನಾವಣೆ ನಡೆಸಲು ಮತದಾರರಿಗಾಗಿ ಹೊರ ತಂದಿರುವ ಸಿವಿಜಿಲ್, ಕೆವೈಸಿ, ಚುನಾವಣಾ ಸಕ್ಷಮ್ ಆಪ್ಗಳು ಸೇರಿದಂತೆ ಸಹಾಯವಾಣಿ 1950 ರ ಬಗ್ಗೆ ಪ್ರಚುರಪಡಿಸಬೇಕು. ನಿಮ್ಮ ಮತಗಟ್ಟೆ ಎಲ್ಲಿದೇ ಎಂದು ತಿಳಿದುಕೊಳ್ಳಿ ಮತ್ತು ಮೇ 10 ರಂದು ತಪ್ಪದೇ ಮತದಾನ ಮಾಡಿ ಎನ್ನುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.