ಶಕ್ತಿಸೌಧದಲ್ಲಿ ನಡೆದ ಕುರುಬರ ಬೃಹತ್ ಸಮಾವೇಶ: ಹೆಬ್ಬೂರಿನಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ: ಸಿದ್ದರಾಮಯ್ಯಗೆ ಆಹ್ವಾನ ನೀಡುವೆ ಎಂದ ಸುರೇಶಗೌಡರು: ಸುರೇಶಗೌಡರ ಕೊಡುಗೆ ನೆನೆದು ಭಾವುಕರರಾದ ಕುರುಬ ಮುಖಂಡರು
ತುಮಕೂರು: ಹೆಬ್ಬೂರಿನಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಗೂ ಕುರುಬರ ಭವನ ನಿರ್ಮಿಸುವುದಾಗಿ ಮಾಜಿ ಶಾಸಕ ಬಿ.ಸುರೇಶಗೌಡರು ಭರವಸೆ ನೀಡಿದರು.
ನಾಗವಲ್ಲಿ ಸಮೀಪದ ಶಕ್ತಿ ಸೌಧದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಕುರುಬರ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾನು ಶಾಸಕನಾಗಿ ಅಯ್ಕೆಯಾದ ಕೂಡಲೇ ರಾಯಣ್ಣ ಪ್ರತಿಮೆ ಮಾಡುವೆ. ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಆಹ್ವಾನಿಸುತ್ತೇನೆ. ಈ ಇಬ್ಬರೂ ಕುರುಬ ಸಮುದಾಯದ ಕಣ್ಮಣಿಗಳು ಎಂದು ಬಣ್ಣಿಸಿದರು.
ಕ್ಷೇತ್ರದಲ್ಲಿ ಕುರುಬರು ಮೊದಲಿನಿಂದಲೂ ನನ್ನ ಬೆಂಬಲಿಸಿದ್ದೀರಿ. ಕುರುಬರಿಗೆ ರಾಜಕೀಯ ಪ್ರಾತಿನಿಧ್ಯವನ್ನು ನೀಡಿದ್ದೇನೆ. ಕುರುಬರನ್ನು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಸ್ಥಾನ, ಎಪಿಎಂ ಸಿ ಅಧ್ಯಕ್ಷ ಸ್ಥಾನ, ನಿರ್ದೇಶಕ ಸ್ಥಾನ, ಪಿ ಎಲ್ ಡಿ ಬ್ಯಾಂಕ್ ಸದಸ್ಯ, ಲ್ಯಾಂಡ್ ಟ್ರಿಬ್ಯೂನ್ ಸದಸ್ಯ ಹಾಗೂ ಮೂವರನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮಾಡಿರುವೆ. ಕುರುಬ ಸಮುದಾಯದ ಅಭಿವೃದ್ಧಿ ಹಾಗೂ ರಾಜಕೀಯ ಸಮಾನ ಸ್ಥಾನಮಾನ ನೀಡಿದ್ದೇನೆ ಎಂದು ಹೇಳಿದರು.
ಕುರುಬ ಸಮುದಾಯ ಇರುವ ಕಡೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇನೆ. ಶಾಲೆಗಳನ್ನು ತೆರೆದು ಈ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವೆ ಎಂದು ಭರವಸೆ ನೀಡಿದರು.
ಸ್ಥಾನಮಾನಕೊಟ್ಟ ನಾಯಕ
ನಿಡುವಳಲು ಗ್ರಾ.ಪಂ. ಮಾಜಿ ಅಧ್ಯಕ್ಷ ಸಿದ್ದಗಂಗಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಕುರುಬ ಸಮುದಾಯವನ್ನು ಗುರುತಿಸಿದ ಮೊದಲ ಶಾಸಕರು ಸುರೇಶ್ ಗೌಡರು. ಸಮಾಜಕ್ಕೆ ರಾಜಕೀಯ ಸ್ಥಾನಮಾನ ಗಳಿಸಿಕೊಟ್ಟರು. ಸಮುದಾಯದ ಕಷ್ಟ ಸುಖ ಆಲಿಸಿದರು. ಕುರುಬ ಸಮುದಾಯ ಹೆಚ್ಚಿರುವ ಕಡೆ ರಸ್ತೆ, ನೀರು, ಮೂಲ ಸೌಕರ್ಯ ಒದಗಿಸಿಕೊಟ್ಟರು. ಸುರೇಶಗೌಡರು ಗೆಲ್ಲುವಲ್ಲಿ ಸಮುದಾಯದ ಯುವಕರು ಕೆಲಸ ಮಾಡಬೇಕು. ಎಲ್ಲ ಕಡೆ ತೆರಳಿ ಪ್ರಚಾರ ನಡೆಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಸುರೇಶಗೌಡರನ್ನು ಸಮುದಾಯ ಬೆಂಬಲಿಸಬೇಕು. ಸುರೇಶಗೌಡರು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಗ್ರಾಮಾಂತರದ ಸರ್ವೋತ್ತೋಮುಖ ಅಭಿವೃದ್ಧಿಗೆ ಸುರೇಶಗೌಡರ ಗೆಲುವು ಅತಿಮುಖ್ಯವಾಗಿದೆ. ಸಮುದಾಯ ಅವರ ಪರ ನಿಲ್ಲಬೇಕು ಎಂದರು.