ಬಿಸಿಲಿನ ನಂತರದ ಮಳೆ
ಆಹಾ ಮನುಜನೇ ..
ನೀನು ಈ ರೀತಿ
ಭೂಮಿ ತಣ್ಣಗಾಗುವಂತೆ ಮಳೆ
ಸುರಿಸಬಲ್ಲೆಯಾ?
ಫಿಲಂ ಶೂಟಿಂಗ್ ಗೆ
ಒಂದರಿಯಲ್ಲಿ ಮಳೆ
ಸುರಿಸಿದಂತಲ್ಲ….
ಮೋಡಕ್ಕೆ ಬೀಜ
ಬಿತ್ತಿದಂತಲ್ಲ…
ತಾನೇ ತಾನಾಗಿ
ಅದ್ಯಾವಾಗ ಆವಿಯಾಗಿ
ಮಡುಗಟ್ಟಿ …
ಒಟ್ಟಿಗೆ ಮಾತಾಡಿಕೊಂಡು
ಮಿಂಚಿನ ಫ್ಲ್ಯಾಶ್ ಅನ್ಯೂ
ಗುಡುಗಿನ ಕ್ಲಾಪ್ ಮಾನ್ ಅನ್ನೂ
ಕಾಮನ ಬಿಲ್ಲಿನ ಬಣ್ಣಗಳ ಓಕುಳಿಯನ್ನೂ
ಟಿಪ್ ಟಿಪ್ …
ಭೂಮಿಗೇ
ಏರ್ ಕೂಲರ್ ಹಾಕಿದ ಹಾಗೆ
ಮಲಗಿದ್ದವರಿಗೆ
ಗುಡುಗು ಮಿಂಚು ನೋಡಿ
ಮತ್ತೆ ಪ್ರಕೃತಿಯ ಚಕ್ರಕ್ಕೆ ಬೆರಗಾಗುವ ಹಾಗೆ.
ಮಕ್ಕಳು ಬಾಗಿಲಿಗೆ
ಬಂದು ನೋಡಿ
ಅಂಗಳದಲ್ಲಿ ನೆನೆದ ಹಾಗೆ..
ನಾಯಿ ನಾಲಿಗೆ ಒಳಕ್ಕೆ ಹಾಕಿ
ಎತ್ತು ಮಲಗಿ ಮೂಗಿನ ಹೊಳ್ಳೆ
ಚಿಕ್ಕ ಮಾಡಿದ ಹಾಗೆ
ಕೋಗಿಲೆ ಕುಹೂ ಕುಹೂ
ಕೂಗಿದ ಹಾಗೆ
ಭರಣಿ ಮಳೆ
ಧರಣಿ ಬೆಳೆ ಎಂದು
ಮಾತಾಡಿದ ರೈತನ ಹಾಗೆ
ಬಟ್ಟೆ, ಸಂಡಿಗೆ
ಹಪ್ಪಳ ಒಳಗೆ
ತರಲು ಓಡಿದ ಒಡತಿಯ ಹಾಗೆ
ಚಿಗುರೆಲೆಯ
ಮನೆ ಮಾಡಿನ ಧೂಳು
ತೊಳೆದ ಹಾಗೆ..
ಉದುರಿದ ಹೊಂಗೆ ಹೊವಿನ
ಕಾದ ಮಣ್ಣಿನ ವಾಸನೆ
ಅಡರಿದ ಹಾಗೆ
ವರ್ಷ ಜಾಸ್ತಿ
ಆಯಿತು ಎನ್ನದೆ
ಮುಗುಳ್ನಕ್ಕು ..
ತಬ್ಬಿದ ಹೆಂಡತಿಯ ಹಾಗೆ…
ಬೇಸಿಗೆ ಮಾಯವಾಗುವ
ಮೊದಲ ಮಳೆಯತ್ತ
ಬೆರಗಾಗದೆ…
ಡಾ. ರಜನಿ