Friday, March 13, 2026
Google search engine
Home Blog Page 60

ಹುಣುಸೆ, ಅಡಿಕೆ,‌ಹಲಸು ಪರಿಣಿತರ ಮಾಹಿತಿಗೆ ಮನವಿ

ತುಮಕೂರು ಜಿಲ್ಲೆ ತೋವಿನಕೆರೆ ಯಲ್ಲಿ ಅಡಕ ಹುಣಸೆ ಹಣ್ಣು ಮತ್ತು ಹಲಸಿನ ಹಣ್ಣಿನ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.

ಹುಣಸೆ ಹಣ್ಣನ್ನು ಮರದಿಂದ ಕೀಳಲು, ಹಣ್ಣನ್ನು ಶುಚಿ ಮಾಡುವುದು ಮತ್ತು ಕುಟ್ಟಿ ಬೀಜ ತೆಗೆಯುವುದು, ತಿರುವಿ ಹಾಕುವುದು, ಮೌಲ್ಯವರ್ಧನೆ, ಮಾರುಕಟ್ಟೆ ಬಗ್ಗೆ ಮಾತನಾಡುವ ಸಂಪನ್ಮೂಲ ವ್ಯಕ್ತಿಗಳು ಬೇಕು

ಅಡಕೆ ಕೀಳಲು ದೋಟಿ ಬಳಕೆ, ಕಾಯಿ ಸುಲಿಯುವುದು, ಬೇಯುಸುವುದು ಭವಿಷ್ಯದ ಮಾರುಕಟ್ಟೆ ಬಗ್ಗೆ ಮಾತನಾಡಲು ಸಂಪನ್ಮೂಲ ವ್ಯಕ್ತಿಗಳ ಬೇಕು

ಹಲಸಿನ ಕಾಯಿ ಹಣ್ಣುಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ವಿಷಯದ ಮಾತನಾಡು ಸಂಪನ್ಮೂಲ ವ್ಯಕ್ತಿಗಳು ಬೇಕು

ತಮ್ಮಗಳಿಗೆ ಯಾರಾದರೂ ಗೊತ್ತಿದ್ದರೆ ಹೆಸರು, ನಂ, ಪರಿಣಿತರ ಬಗ್ಗೆ ಮಾಹಿತಿ ನೀಡಿ ಎಂದು ತೋವಿನಕೆರೆ ಪ್ರಜಾವಾಣಿ ವರದಿಗಾರರಾದ ಪದ್ಮರಾಜ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೊ:+91 99453 23787

50 ಮಕ್ಕಳ ಬದುಕಿಗೆ ಬಂತು ಬೆಳಕು!

ತುಮಕೂರು: ಅಬ್ದುಲ್ ಕಲಾಂ, ಸರ್ .ಎಂ. ವಿಶ್ವೇಶ್ವರಯ್ಯ ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದರು.


ನಗರದ ಎಸ್ ಎಸ್ ಐ ಟಿ ಕಾಲೇಜಿನ ಸಭಾಂಗಣದಲ್ಲಿ ಇನಿಶಿಯೇಟಿವ್ ಫಾರ್ ಡೆವಲಪ್ಮೆಂಟ್ ಫೌಂಡೇಶನ್ ಬೆಂಗಳೂರು ಹಾಗೂ ಗ್ರಾಮ್ ಸರ್ವ್ ಪ್ರೈ ಲಿಮಿಟೆಡ್ ಇವರ ಆಶ್ರಯದಲ್ಲಿ ಐಡಿಎಫ್ ವಿದ್ಯಾವೇತನ ಚಾಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತಿಚೆಗೆ ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವು ಯೋಜನೆಗಳನ್ನು ತಂದಿದೆ. ಪ್ರತಿಯೊಬ್ಬರಿಗೂ ಒಂದರಿಂದ ಹತ್ತನೆ ತರಗತಿಯವರೆಗೆ ಉಚಿತ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದರೆ ಉನ್ನತ ವ್ಯಾಸಂಗಕ್ಕೆ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ನೆರವು ನೀಡುತ್ತವೆ. VATTIKUTI ಫೌಂಡೇಶನ್ ಮತ್ತು ಐಡಿಎಫ್ ಸಂಸ್ಥೆಗಳು ಬಡತನದಲ್ಲಿ ಇರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಉನ್ನತ ವ್ಯಾಸಂಗಕ್ಕೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು

.
ಐಡಿಎಫ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕಾನಂದ ಎನ್. ಸಾಲಿಮಠ ಮಾತನಾಡಿ, ಐಡಿಎಫ್ ಸಂಸ್ಥೆಯು ವಟ್ಟಿಕುಟಿ ಪ್ರತಿಷ್ಠಾನದ ಆರ್ಥಿಕ ಸಹಾಯದೊಂದಿಗೆ ವಿದ್ಯಾವೇತನ ಯೋಜನೆಯನ್ನು ಜಾರಿಗೊಳಿಸಿತು.
ಇದರಡಿ 10ನೇ ತರಗತಿಯಲ್ಲಿ ಉತ್ತೀರ್ಣರಾದ ಬಡ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಗುರುತಿಸಿ, ಪ್ರತಿ ವರ್ಷ 5 ರಿಂದ 10 ವಿದ್ಯಾರ್ಥಿಗಳಿಗೆ ವಿದ್ಯಾವೇತನವನ್ನು ನೀಡಲಾಗಿದೆ.ವಿದ್ಯಾವೇತನ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಸಂಪೂರ್ಣ (ಕಾಲೇಜು ಶುಲ್ಕ, ಹಾಸ್ಟೆಲ್ ಶುಲ್ಕ, ಪುಸ್ತಕಗಳ ವೆಚ್ಚ ಇತರೆ) ವೆಚ್ಚವನ್ನು ಭರಿಸಲಾಗಿದೆ. ಪಿಯುಸಿಯಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಯವರೆಗೆ ಎಲ್ಲಾ ರೀತಿಯ ಕೋರ್ಸುಗಳಿಗೆ ನೆರವು ನೀಡಲಾಗಿದೆ.

ಒಟ್ಟಾರೆಯಾಗಿ ಇದುವರೆಗೆ 50 ಜನರಿಗೆ ಒಟ್ಟು 41,53,780 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗಿದೆ.ಇವರಲ್ಲಿ 8 ವಿದ್ಯಾರ್ಥಿಗಳು ಬಿಇ, 2 ಮಂದಿ ಸ್ನಾತಕೋತ್ತರ ಪದವಿ, 8 ಮಂದಿ ಪದವಿ ಹಾಗೂ ಒಬ್ಬರು ಐಟಿಐ ವ್ಯಾಸಂಗ ಮಾಡಿರುವುದು ಸಂತಸ ತಂದಿದೆ. ಇವರಲ್ಲಿ ಹೆಚ್ಚಿನವರು ವೃತ್ತಿಗೆ ಸೇರಿ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಮದುವೆ, ತಾತ್ಕಾಲಿಕ ವಿರಾಮ ಅಥವಾ ಶೈಕ್ಷಣಿಕ ವೈಫಲ್ಯ ಇತ್ಯಾದಿ ಕಾರಣಗಳಿ0ದ ಸುಮಾರು 27 ಮಂದಿ ವ್ಯಾಸಂಗ ಸ್ಥಗಿತಗೊಳಿಸಿ ವಿದ್ಯಾವೇತನಕ್ಕೆ ಅನರ್ಹರಾದರೂ, 13 ಮಂದಿ ನಂತರದಲ್ಲಿ ವ್ಯಾಸಂಗ ಮುಂದುವರೆಸಿದ್ದಾರೆ.ಪ್ರಸ್ತುತ ನಾಲ್ವರು ಪದವಿ ಮತ್ತು 3 ಮಂದಿ ಸ್ನಾತಕೋತ್ತರ ಅಧ್ಯಯನ ಮುಂದುವರಿಸುತ್ತಿದ್ದಾರೆ ಎಂದು ತಿಳಿಸಿದರು.


ಕೆನರಾ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ಬಿ.ರವಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಹಲವು ಎಡರು ತೊಡರು ಬರುತ್ತವೆ. ಅವುಗಳನ್ನು ಲೆಕ್ಕಿಸದೆ ಛಲದಿಂದ ನಿರಂತರ ಅಭ್ಯಾಸದಲ್ಲಿ ತೊಡಗಿ ದಾಗ ಉನ್ನತ ಹುದ್ದೆಗಳು ತಾನಾಗಿಯೇ ಒಲಿದು ಬರುತ್ತವೆ ಎಂದರು.


ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ಪಡೆದುಕೊಂಡ ಫಲಾನುಭವಿಗಳು ಮಾತನಾಡಿ, ತಮ್ಮ ಮನೆಯ ಪರಿಸ್ಥಿತಿಯಲ್ಲಿ ಕಾಲೇಜಿಗೆ ಹೋಗುವುದು ಅಸಾಧ್ಯವಾಗಿತ್ತು ಎಂದು ತಮಗಾದ ಸಹಾಯವನ್ನು ಸ್ಮರಿಸಿಕೊಂಡರು. ಮುಂದಿನ ದಿನದಲ್ಲಿ ನಾವು ಸಹಾಯ ಮಾಡಲು ಮುಂದಾಗುತ್ತೇವೆ ಎಂದು ಅಭಿಪ್ರಾಯ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸ್ವಾವಲಂಬನ ಟ್ರಸ್ಟ್ ಅಧ್ಯಕ್ಷ ಎಲ್.ವಿ. ಸತ್ಯಮಾದವ, ಗ್ರಾಮ್ ಸರ್ವ್ ಕಂಪನಿಯ ಸಿಇಒ ಬಸವರಾಜ ಆರ್ ಹಿರೇಮಠ, ಯೋಜನಾಧಿಕಾರಿ ಮು.ಲ.ಕೆಂಪೇಗೌಡ, ಗುರುದತ್, ಕರುಣಾಕರ್, ಎನ್.ಎಂ.ಕುಂಬಯ್ಯ ಇತರರು ಭಾಗವಹಿಸಿದ್ದರು.

ಸುರೇಶಗೌಡ ಗೆಲುವಿಗೆ ವಿಜಯೇಂದ್ರ ಬ್ಯಾಟಿಂಗ್

ಬೆಳ್ಳಾವಿ: ಸುರೇಶ್‌ ಗೌಡರ ಮಾತು ಕಠಿಣ ವಾದರೂ ಹೃದಯ ಶ್ರೀಮಂತ ಸುರೇಶ್‌ ಗೌಡರ ಮಾತು ಕಠೋರವಾಗಿ ದ್ದರೂ ಹೃದಯ ಶ್ರೀಮಂತಿಕೆಯ ವ್ಯಕ್ತಿ ಯಾಗಿದ್ದು ಯಾವಾಗಲೂ ಜನಪರ ಕಾಳಜಿ ಯನ್ನು ಹೊಂದಿದವರಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ತಿಳಿಸಿದರು.


ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆಳ್ಳಾವಿ ಗ್ರಾಮದಲ್ಲಿ ಆಯೋಜಿಸಿದ್ದ ʻವಿಜಯ ಸಂಕಲ್ಪʼ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಕ್ರಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ದೇಶದ ಪರಿಸ್ಥತಿ ಶೋಚನೀಯವಾಗಿತ್ತು, ಆದನ್ನು ಸರಿ ಪಡಿಸಲು ಮೋದಿಯವರು ಬರಬೇಕಾಯಿತು.ಪ್ರಸ್ತುತ ಕಾಂಗ್ರೆಸ್‌ ಪರಿಸ್ಥತಿ ʻತಾನು ಕಳ್ಳ ಪರರನ್ನು ನಂಬʼ ಎಂಬಂತಾಗಿದೆ.


ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 1000 ಕೋಟಿಗೂ ಹೆಚ್ಚು ಅನುಧಾನ ತಂದು ರಸ್ತೆ , ಮೂಲಸೌಕರ್ಯ, ರೈತರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರು ಎಂದು ತಿಳಿಸಿದರು.


ಯಡಿಯೂರಪ್ಪನವರಿಗೆ ಕ್ಷೇತ್ರದ ಬಗ್ಗೆ ವಿಶೇಷ ಅಭಿಮಾನವಿದ್ದು, ಪ್ರತಿ ಕಾರ್ಯಕರ್ತರೂ ತಮ್ಮ ಬೂತ್‌ಗಳಲ್ಲಿ ಸುರೇಶ್‌ಗೌಡರಿಗೆ ಬಹುಮತ ತರಿಸುವತ್ತ ಗಮನಹರಿಸಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಸುರೇಶ್‌ ಗೌಡ ವಿಧಾನ ಸೌಧದಲ್ಲಿ ವಿಜೇಂದ್ರ ಅವರ ಜೊತೆಗೆ ಕೆಲಸ ಮಾಡಲು ಕಾರ್ಯಕರ್ತರು ಶ್ರಮವಹಿಸಬೇಕು , ಪ್ರತಿ ಚುನಾವಣೆಯಲ್ಲೂ ಬೆಳ್ಳಾವಿಯಲ್ಲಿ ನನಗೆ ಹೆಚ್ಚು ಮತ ಲಭಿಸುತ್ತಿದ್ದು ಈ ಬಾರಿಯೂ ಅದನ್ನೇ ಪುನರಾವರ್ತಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಹುಲಿನಾಯ್ಕರ್‌, ಮಾಜಿ ಐ.ಎ.ಎಸ್‌ ಅಧಿಕಾರಿ ಅನಿಲ್‌ ಕುಮಾರ್‌, ತುಮಕೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶಂಕರಣ್ಣ ಹಾಗು ಹಲವಾರು ಮುಖಂಡರು ಭಾಗವಹಿಸಿದ್ದರು.


ಕಾರ್ಯಕ್ರಮಕ್ಕೂ ಮೊದಲು ಬಿ.ವೈ ವಿಜಯೇಂದ್ರ ಅವರನ್ನು ಬೈಕ್‌ ರಾಲಿ ಮುಖಾಂತರ ವೇದಿಕೆಗೆ ಕರೆತರಲಾಯಿತು.

ಸುರೇಶಗೌಡರು ಗೆದ್ದರೆ ತುಮಕೂರು ಗ್ರಾಮಾಂತರಕ್ಕೆ ರಫ್ತೋದ್ಯಮ ಕೇಂದ್ರ: ಸಚಿವೆ ಶೋಭಾ ಕರಂದ್ಲಾಜೆ

0

ಶಕ್ತಿ ಸೌಧದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಚಿವೆ ಶೋಭಾ.

ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರು ಗೆದ್ದರೆ ಅಂತರಾಷ್ಟ್ರೀಯ ಕೃಷಿ ರಫ್ತೋದ್ಯಮ ಕೇಂದ್ರ ಸ್ಥಾಪಿಸುವುದಾಗಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು.

ನಾಗವಲ್ಲಿ ಸಮೀಪದ ಶಕ್ತಿ ಸೌಧದಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅವರು, ಇಲ್ಲಿನ ಅಧಿಕಾರಿಗಳಿಗೆ, ರೈತರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು‌. ಪ್ರತಿ ಕುಟುಂಬವು ರಫ್ತು ಉದ್ಯಮ ಆರಂಭಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.

ಹಣ್ಣು, ತರಕಾರಿ, ಹೂವಿನ ಬೆಳೆಗಳನ್ನು ಸಮೀಪದ ಮಾರುಕಟ್ಟೆ ಗೆ ಹಾಕುವುದರಿಂದ ರೈತರಿಗೆ ಹೆಚ್ಚು ಲಾಭ ಸಿಗುವುದಿಲ್ಲ. ರಫ್ತು ಮಾಡಿದರೆ ಕೈ ತುಂಬಾ ಹಣ ಗಳಿಸಬಹುದು ಎಂದರು.

ಗ್ರಾಮಾಂತರ ಕ್ಷೇತ್ರಕ್ಕೆ ರೈತರಿಗೆ ಉಚಿತವಾಗಿ ಟ್ರಾನ್ಸ್ ಫಾರ್ಮರ್ ಅನ್ನು ನಾನು ಸಚಿವೆಯಾಗಿದ್ದಾಗ ನೀಡಿದ್ದೆ. ಸುರೇಶಗೌಡರು ಜಗಳ ಮಾಡಿ ಯೋಜನೆಯನ್ನು ಇಲ್ಲಿಗೆ ತಂದರು. ಅವರು ಬೇರೆಯವರ ಥರ ಅಲ್ಲ. ಜನರಿಗೆ ಕೊಡಬೇಕು ಎಂಬುದನ್ನು ಜಗಳ ಮಾಡಿ ತರುತ್ತಾರೆ ಎಂದರು.

ತೆಂಗು ಉದ್ಯಮಕ್ಕೂ ನೆರವಾಗಬೇಕು. ತೆಂಗು, ಕೊಬ್ಬರಿ ರಫ್ತು ಕೇಂದ್ರವನ್ನೂ ಸ್ಥಾಪಿಸಬೇಕು ಎಂದು ಸುರೇಶಗೌಡರು ಮನವಿ ಮಾಡಿದರು.

ಬಿಜೆಪಿಯ ಅನೇಕ ಮುಖಂಡರು, ರೈತರು ಇದ್ದರು.

ಶೇಷಾದ್ರಿಪುರಂ ಕಾಲೇಜಿನಲ್ಲಿ ‘ಅಭಿಜ್ಞಾ 2023’ ವಾರ್ಷಿಕೋತ್ಸವ ಕಾರ್ಯಕ್ರಮ

ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಆರನೆಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣದತ್ತಿಯ ಗೌರವ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ ಕೃಷ್ಣ  ಇವರು ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ನಿಮ್ಮಲ್ಲಿರುವ ಶಕ್ತಿಯನ್ನು ನೀವು ಗುರುತಿಸಿಕೊಳ್ಳಿ. ನಿಮ್ಮ ತಂದೆತಾಯಿಗಳ ಕನಸು ಸಾಕಾರಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ನೀವು ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು ಇಲ್ಲಿಯೇ ನಿರ್ಧರಿಸಿಕೊಳ್ಳಬೇಕು. ಉತ್ತಮ ಮಾರ್ಗದಲ್ಲಿ ನಡೆದು ನಾಡಿನ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು. ತಂತ್ರಜ್ಞಾನವನ್ನು ಅಗತ್ಯ ಮೀರಿ ಬಳಸಬೇಡಿ. ಮೊಬೈಲ್ ಅತಿಯಾದ ಬಳಕೆ ನಿಮಗೆ ಮಾರಕ ಎಂಬ ಕಿವಿಮಾತನ್ನು ಹೇಳಿದರು.

 ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜನಕಥಾದಾಸರಾದ ಡಾ. ಲಕ್ಷಣ್ ದಾಸ್ ಅವರು ಆಗಮಿಸಿದ್ದರು. ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. “ಜನನಿ ಜನಕರ ಸೇವೆಯ ಪ್ರಾಮುಖ್ಯತೆಯನ್ನು ಪ್ರಸ್ತುತಪಡಿಸಿದರು. ತಂದೆ, ತಾಯಿ, ಶಿಕ್ಷಕರು ಈ ಮೂವರು ನಿಮ್ಮ ಜೀವನ ರೂಪಿಸುವ ದೇವರು ಅವರಿಗೆ ಗೌರವ ಕೊಡಬೇಕು, ಜೀವನವನ್ನು ಬದಲಾಯಿಸುವ ಮಹತ್ತರವಾದ ಘಟ್ಟವಾದ ಪದವಿಪೂರ್ವ ಹಂತ, ಇಲ್ಲಿ ಜಾಗೃತಿಯಿಂದ ನಿಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ನನ್ನ ಮೊಮ್ಮಗಳು ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಈಗ ಹಾಸನ ಮೇಡಿಕಲ್ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದಾಳೆ ಎಂಬುದು ಹೆಮ್ಮೆಯ ಸಂಗತಿ ಎಂದರು.

 ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಶ್ರೀ ಹೆಂಜಾರಪ್ಪ ಟಿ. ಎಸ್, ಶಿಕ್ಷಣದತ್ತಿಯ ಟ್ರಸ್ಟಿಗಳಾದ  , ಶ್ರೀ ಡಬ್ಲೂ ಡಿ ಅಶೋಕ್,  ಶ್ರೀ ಕೆ. ಕೃಷ್ಣಸ್ವಾಮಿ,  ಶ್ರೀ ಎನ್.ಪಿ ಕಾರ್ತಿಕ್ ಅವರು ಹಾಜರಿದ್ದರು.  ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸದಸ್ಯರಾದ ಶಾಂತ ಕುಮಾರಿ ಪಿ, ಶೀ ರಾಕೇಶ್ ಎನ್ ವಿ, ಭಾನುಪ್ರಕಾಶ್ ಎಸ್ ಡಿ, ಅವರು‌ ಹಾಜರಿದ್ದರು. ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜು ಬಿ ವಿ, ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗದೀಶ ಜಿ ಟಿ, ಶೇಷಾದ್ರಿಪುರಂ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ನಂದರಾಜ್ ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.

 

ಗ್ರಾಮಾಂತರ ಕ್ಷೇತ್ರದ ನನ್ನ ಕನಸಿಗೆ ನೀರೆರೆದ ಶ್ರೀಗಳನ್ನು ನೆನೆ ನೆನೆದು…

0

  • ಚುಂಚನಗಿರಿ ಶ್ರೀಗಳಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಭಾರತದ ನಾಥ ಪಂಥದ ಮೇರುಗಲ್ಲು, ಜಾತಿ, ಮತಗಳನ್ನು ಮೀರಿ ಬೆಳೆದ ಶ್ರೀಗಳ ಸಾಧನೆ ಅಗಾಧ, ಯಾವುದೇ ಜಾತಿಯ ರೈತಾಪಿ ಜನರ ಚುಂಬಕ ಶಕ್ತಿಯಾಗಿದ್ದವರು. ರೈತಾಪಿಗಳ ಅಸ್ಮಿತೆಯೇ ಆಗಿದ್ದ ಅವರ ಹತ್ತನೇ ಪುಣ್ಯಸ್ಮರಣೆ ಇಂದು. ಶ್ರೀಗಳನ್ನು ಕುರಿತ ಮಾಜಿ ಶಾಸಕ ಸುರೇಶಗೌಡರ ವಿಶೇಷ ಲೇಖನ ಇದು.

ಆಗಷ್ಟೇ ಅನೇಕ ಕನಸುಗಳ ಮೂಟೆಕಟ್ಟಿಕೊಂಡು ರಾಜಕಾರಣದ ಅಡಿ ಹೆಜ್ಜೆ ಇಟ್ಟಿದೆ, ಕೃಷಿ ಕುಟುಂಬದ ಹಿನ್ನೆಲೆಯ ನನಗೆ ಕೃಷಿಕರ ನೋವು ಗಳ ಅಗಾಧ ಅನುಭವ, ಬೇಕು-ಬೇಡಗಳ ಎರಡೂ ನೋಡಿ ದವ ನಾಗಿದ್ದೆ. ಹೀಗಾಗಿಯೇ ಗ್ರಾಮಾಂತರ ಕ್ಷೇತ್ರವನ್ನು ದೇಶದ ಮೊದಲ ನಂ -1 ಅಭಿವೃಧ್ಧಿಯ ಕ್ಷೇತ್ರ ಹಾಗೂ ಅಭಿವೃದ್ಧಿಯಲ್ಲಿ ‘ಗ್ರಾಮಾಂತ ರದ ಮಾದರಿ’ಯ ಹೊಸ ಪರಿಕಲ್ಪನೆ ಹುಟ್ಟು ಹಾಕಬೇಕೆಂಬ ನನ್ನ ತುಡಿತಕ್ಕೆ ನೀರೆರೆದವರು ಇಬ್ಬರು ಸಂತರು. ಸಿದ್ದಗಂಗಾ ಮಠಾಧೀಶರಾದ ಶ್ರೀಶ್ರೀ ಶಿವಕುಮಾರ ಸ್ವಾಮೀಜಿಗಳು, ಆದಿ ಚುಂಚನಗಿರಿ ಮಠಾದೀಶರಾದ ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು.

  • ಇಂದು ಚುಂಚನಗಿರಿ ಶ್ರೀಗಳ ಹತ್ತನೇ ವರ್ಷದ ಸ್ಮರಣೆ, ಅವರ ನೆನಪು ನಮಗೆ ಸದಾ ಹಸಿರೇ. ವೈರಾಗ್ಯದ ಮೂರ್ತಿಯಾಗಿದ್ದ ಅವರು ಅತ್ಯಂತ ಕರುಣಾಮಯಿಗಳಾಗಿದ್ದರು. ಬಡವರನ್ನು ಕಂಡರೇ ಇನ್ನಿಲ್ಲದ ಪ್ರೀತಿ ಅವರಿಗೆ. ಬಡವರ ಸೇವೆ ಎನ್ನುವುದು ತಮಾಷೆಯ ಸಂಗತಿ ಅಲ್ಲ, ಅದು ಈಶ್ವರನ ಸೇವೆ ಮಾಡಿದಂತೆಯೇ ಸರಿ. ಜನಸೇವೆ ಮಾಡುವಾಗ ಯಾವುದೇ ಲೋಪಗಳಿಲ್ಲದಂತೆ ಮಾಡಬೇಕು. ಅದು ಈಶ್ವರನಿಗೆ ಮಾಡುವ ಸೇವೆ ಇದ್ದಂತೆ ಎಂದು ಅವರು ನಮಗೆಲ್ಲ ತಿಳಿ ಹೇಳುತ್ತಿದ್ದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ನೀರಾವರಿಯ ಯೋಜನೆಗಳ ನನ್ನ ಶ್ರಮದ ಹಿಂದೆ ಈ ಇಬ್ಬರು ಸಂತರ ಆರ್ಶೀವಾದವೇ ಕಾರಣವಾಗಿತ್ತು. ಹೆಬ್ಬೂರು-ಗೂಳೂರು ಭಾಗದ ತಲೆಮಾರುಗಳ ಕನಸೇ ಹೇಮಾವತಿ ಯ ನೀರನ್ನು ಕಾಣುವುದಾಗಿತ್ತು, ಬರಗಾಲದಲ್ಲಿ ಬೆಂದು ಹೋಗಿದ್ದ ಇಲ್ಲಿಗೆ ಗೂಳೂರು-ಹೆಬ್ಬೂರು ಏತ ನೀರಾವರಿಯ ಯೋಜನೆಯ ಜಾರಿ ಸುಲಭದ್ದಾಗಿರಲಿಲ್ಲ. ರಾಜ್ಯದಲ್ಲಿ ಆಗಿನ್ನು ಏತ ನೀರಾವರಿ ಯೋಜನೆ ಗಳೇ ಇರಲಿಲ್ಲ.

ಈಗಿನ ಎತ್ತಿನ ಹೊಳೆ ಯೋಜನೆಯೂ ಸಹ ಏತ ನೀರಾವರಿಯೇ ಪರಿಕಲ್ಪನೆ ಯೇ ಆಗಿದೆ. ಇಂಥದ್ದೇ ಪರಿಕಲ್ಪನೆ ಯನ್ನು ಒಳಗೊಂಡಿರುವ ಗೂಳೂರು-ಹೆಬ್ಬೂರು ಏತ ನೀರಾವರಿ ಯೋಜನೆ ರಾಜ್ಯದಲ್ಲಿ ಜಾರಿಯಾದ ರಾಜ್ಯದ ಮೊಟ್ಟಮೊದಲ ಯೋಜನೆಯಾಗಿತ್ತು.

  • ಈ ಯೋಜನೆಯ ಜಾರಿಗಾಗಿ ಕಡತಗಳನ್ನು ಕಂಕುಲಲ್ಲಿ ಇಟ್ಟುಕೊಂಡು ನಾನು ವಿಧಾನಸೌಧ ತಿರುಗುವಾಗ ವ್ಯಂಗ್ಯವಾಡಿದವರೇ ಹೆಚ್ಚು. ಯೋಜನೆಯ ಜಾರಿ ಕೇವಲ ರಾಜಕೀಯ ಭರವಸೆಯಷ್ಟೇ ಎಂದೇ ಹಲವರು ನಂಬಿದ್ದರು. ಆದರೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಾತುಗಳು ಯಾವಾಗಲೂ ಧೈರ್ಯ ತುಂಬುತ್ತಿದ್ದವು.
  • ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ದಗಂಗೆಯ ಸಂತ ಶ್ರೀಶ್ರೀ ಶಿವಕುಮಾರಸ್ವಾಮೀಜಿ ಗಳು ನನ್ನ ಬೆನ್ನ ಹಿಂದೆ ನಿಂತಿದ್ದರು. ಈ ಇಬ್ಬರ ಸಂತರು ಬಡ ಜನರ ಸಂಕಷ್ಟಗಳ ನಿವಾರಣೆ ಗಾಗಿ ತಮ್ಮೆಲ್ಲ ತಪೋ ಶಕ್ತಿಯನ್ನು ನನಗೆ ಧಾರೆ ಎರೆಯದಿದ್ದರೆ ಗ್ರಾಮಾಂತರ ಕ್ಷೇತ್ರದ ನೀರಾವರಿ ಯೋಜನೆಗಳು ಸಾಕಾರ ವಾಗುತ್ತಿರಲಿಲ್ಲ ಎಂದು ನನಗೆ ಅನೇಕ ಸಲ ಅನ್ನಿಸಿದೆ.

ಶಿಕ್ಷಣ, ಅನ್ನ ದಾಸೋಹದ ಹೆಸರಾದ ಶ್ರೀಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ ಯವರಿಗೆ ಒಂದೊಮ್ಮೆ ಗ್ರಾಮಾಂತರ ಕ್ಷೇತ್ರದಲ್ಲಿ ಶಿಕ್ಷಣದ ಕುರಿತ ನನ್ನ ದೂರದೃಷ್ಟಿ, ಕನಸು ಗಳನ್ನು ಹಂಚಿ ಕೊಂಡಿದ್ದೆನು. ಗಟ್ಟಿಯಾದ ಸರಕಾರಿ ಶಾಲೆಗಳಿಗೆ ಅಡಿಪಾಯ, ದೇಶದಲ್ಲಿ ನಂಬರ್ ಒನ್ ಸರಕಾರಿ ಶಾಲೆಗಳು, ವಿಶ್ವ ವಿದ್ಯಾನಿಲಯ ಹೀಗೆ ಅವರೊಂದಿಗಿನ ನನ್ನ ಮಾತುಗಳು ಹೀಗಲೂ ನನ್ನೊಂದಿಗೆ ಅನುರಣಿಸುತ್ತವೆ.

ಇಂದು ಅವರ ಹತ್ತನೇ ವರ್ಷದ ಪುಣ್ಯ ಸ್ಮರಣೆ. ಅವರ ಆಶೀರ್ವಾದ, ಕೃಪೆ ನನ್ನ ಗ್ರಾಮಾಂತರ ಜನರ ಎಲ್ಲರ ಮೇಲೆ ಆಗಲಿ ಎಂದು ಸ್ಮರಿಸುತ್ತೇನೆ. ಮತ್ತೊಮ್ಮೆ ಗ್ರಾಮಾಂತರದ ಅಭಿ ವೃದ್ಧಿಯ ಶಕೆ ಆರಂಭಿಸಲು ಶ್ರೀಗಳು ನನಗೆ ಆಶೀರ್ವಾದ, ಕೃಪೆ ತೋರಲಿ ಎಂದು ಅವರಲ್ಲಿ ಸ್ಮರಿಸುತ್ತೇನೆ.

ಸಾರಾ ನಿಧನಕ್ಕೆ: ಕಲೇಸಂ ಜಿಲ್ಲಾ ಶಾಖೆ ತುಮಕೂರು ಸಂತಾಪ

ನಾಡೋಜ ಪುರಸ್ಕೃತರಾದ ಸಾರಾ ಅಬೂಬಕ್ಕರ್ ಅವರು ಇಂದು ಅನಾರೋಗ್ಯದಿಂದ ತಮ್ಮ 87 ನೆಯ ವಯಸ್ಸಿನಲ್ಲಿ ನಮ್ಮನ್ನಗಲಿದ್ದಾರೆ.
ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯವಾದ ಕೃತಿಗಳನ್ನು ಕೊಟ್ಟಿರುವರು.ಲಂಕೇಶ್ ಪತ್ರಿಕೆಗೆ ಬರೆಯುವ ಮೂಲಕ
ತಡವಾಗಿ ಬರವಣಿಗೆ ಶುರು ಮಾಡಿದ ಇವರು
ಮುಸ್ಲಿಂ ಹೆಣ್ಣುಮಕ್ಕಳ ತವಕ ತಲ್ಲಣಗಳನ್ನು ತಮ್ಮ ಬರಹಗಳಲ್ಲಿ ಅಭಿವ್ಯಕ್ತಿಸಿದ್ದಾರೆ ,ಇದಕ್ಕಾಗಿ ಹಲವರ ಕೆಂಗಣ್ಣಿಗೂ ಗುರಿಯಾದ ಸಾರಾರವರು ,ಯಾವ ಬೆದರಿಕೆಗಳಿಗೂ ಜಗ್ಗದೆ ,ತಮಗೆ ಅನಿಸಿದ್ದನ್ನು ನೇರವಾಗಿ ,ಧೈರ್ಯ ದಿಂದ ಹೇಳುತ್ತಿದ್ದ ಹೆಣ್ಣುಮಗಳು .

ಸಾರಾರವರ ನಿಧನಕ್ಕೆ ,ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು
ಸಂತಾಪಗಳನ್ನು ವ್ಯಕ್ತಪಡಿಸಿರುತ್ತಾರೆ.

ಸಾರಾ ನಿಧನಕ್ಕೆ: ಸಂತಾಪ

ದಲಿತ ಬಂಡಾಯದ ಸಂದರ್ಭದಲ್ಲಿ ಬರೆಯಲಾರಂಭಿಸಿದ ಸಾರಾ ಅಬೂಬಕರ್ ಇಸ್ಲಾಂಧರ್ಮ ಹಾಗೂ ಮಲೆಯಾಳಂ ಭಾಷೆಯ ಸತ್ವವನ್ನು ತಮ್ಮಲ್ಲಿ ರೂಢಿಸಿಕೊಂಡು ಬರೆದವರು. ಧರ್ಮದ ಹೆಸರಿನಲ್ಲಿ ಹೆಣ್ಣಿನ ಮೇಲೆ ನಡೆಯುವ ಶೋಷಣೆ ದಬ್ಬಾಳಿಕೆಗಳನ್ನು ತಮ್ಮ ಕೃತಿಗಳ ಮೂಲಕ ಪ್ರಶ್ನಿಸುತ್ತಾ ಬಂದವರು. ಚಂದ್ರಗಿರಿಯ ತೀರದಲ್ಲಿ, ಸಹನಾ, ವಜ್ರಗಳು – ಈ ಮುಂತಾದ ಕಾದಂಬರಿಗಳಲ್ಲಿ ಸಾರಾ ಪ್ರಶ್ನಿಸ ಹೊರಡುವುದು ಧರ್ಮದ ಹೆಸರನ್ನು ತಮಗೆ ಬೇಕಾದಂತೆ ಬಳಸಿ ಅಮಾಯಕರನ್ನು, ಮುಗ್ಧ ಸ್ರೀಯರನ್ನು‌ ಶೋಷಿಸ ಹೊರಟ‌ ಭ್ರಷ್ಟ ವ್ಯವಸ್ಥೆಯನ್ನು. ಅವರ ಕೆಲ ಕಾದಂಬರಿಗಳು ಚಲನಚಿತ್ರವಾಗಿಯೂ ಜಾಗೃತಿ ಮೂಡಿಸಿ ಜನರ ಮೆಚ್ಚುಗೆಗೆ ಒಳಗಾಗಿವೆ.

ವ್ಯವಸ್ಥೆಯ ಅರಾಜಕತೆಯನ್ನು ಮುಗ್ಧವಾಗಿ ಅನುಭವಿಸುತ್ತಾ ಬಂದವರೇ ಪ್ರತಿಭಟಿಸತೊಡಗುವುದು ನಿಜವಾದ ಅರ್ಥದಲ್ಲಿ ಬಂಡಾಯವೇ ಆಗಿದೆ. ಗಂಡ ಹಾಗೂ ತಂದೆಯ ಪ್ರತಿಷ್ಠೆಗೆ ಬಲಿಪಶುವಾಗುವ ‘ಚಂದ್ರಗಿರಿಯ ತೀರ’ದಲ್ಲಿನ ಅಸಹಾಯಕ ನಾದಿರಾ, ಬದುಕಿನ ಕಹಿಯಲ್ಲಿ ನೊಂದು ಅರಳಿ ಕ್ಷಮಯಾಧರಿತ್ರಿ ಎನಿಸಿಕೊಂಡು ಕ್ರಮೇಣ ಕಲ್ಲಾಗುತ್ತಾ ಹೋಗುವ ‘ಸಹನಾ’ ಕಾದಂಬರಿಯ ನಸೀಮಾ ಸಾರಾ ಕಟ್ಟಿಕೊಡುವ ವಾಸ್ತವ ಪಾತ್ರಗಳು. ಎಲ್ಲಾ ಕಾದಂಬರಿಗಳು ಕೊನೆಗೊಳ್ಳುವುದು ಪ್ರತಿಭಟನೆ ಹಾಗೂ ದಿಟ್ಟತನದ ನಿರ್ಧಾರಗಳಿಂದ.

ಹಿರಿಯ ಲೇಖಕಿಯಾದ ಸಾರಾ ಇತ್ತೀಚೆಗೆ ಅನಾರೋಗ್ಯಪೀಡಿತರಾಗಿ ಜನಸಂಪರ್ಕದಿಂದ ದೂರವೇ ಉಳಿದಿದ್ದರು. ಲಂಕೇಶ್ ಪತ್ರಿಕೆಯ ಮೂಲಕ ತಮ್ಮ ಬರಹದ ದಾರಿಯನ್ನು ಕಂಡುಕೊಂಡ ಸಾರಾ ಅವರು ಮುಸ್ಲಿಂ ಸಮುದಾಯದ ಬರಹಗಾರರಿಗೆ ಹಿರಿಯಕ್ಕನಂತೆ ಅಭಿವ್ಯಕ್ತಿಯಲ್ಲಿ ವಾಸ್ತವತೆಯ, ಪ್ರತಿಭಟನೆಯ ದಾರಿ ನಿರ್ಮಿಸಿದವರು. ಆ ನಂತರದ ಮುಸ್ಲಿಂ ಸಮುದಾಯದ ಬರಹಗಾರರು ಭಿನ್ನ,ಭಿನ್ನ ನೆಲೆಗಳಲ್ಲಿ ತಮ್ಮದೇ ಆದ ದಾರಿಗಳನ್ನು ಕಂಡುಕೊಂಡರು. ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಒಳಗೊಂಡಂತೆ ಅತ್ತಿಮಬ್ಬೆ, ನಾಡೋಜ ಮುಂತಾದ ಶ್ರೇಷ್ಠ ಪುರಸ್ಕಾರಗಳನ್ನು ಅವರು ಪಡೆದಿದ್ದರು. ಸಾರಾ ಅಬೂಬಕರ್ ಅವರ ಸಾವು ಕನ್ನಡದ ಪಾಲಿಗೆ ಕಳಚಿದ ಒಂದು ಮುಖ್ಯವಾದ ಕೊಂಡಿಯೆಂದೇ ಹೇಳಬಹುದು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಹೆಚ್ ಎಲ್ ಪುಷ್ಪಾ ಅವರು ಸಂತಾಪ ಸೂಚಿಸಿದ್ದಾರೆ

ನಾಡೋಜ ಪುರಸ್ಕೃತರಾದ ಸಾರ ಅಬೂಬಕ್ಕರ್ ನಿಧನ

ಶ್ರೀಮತಿ ಸಾರಾ ಅಬೂಬಕ್ಕರ…

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ ಜನಾಂಗದ ಮಹಿಳೆಯರಿಗೆ ಶಿಕ್ಷಣವನ್ನು ನಿರ್ಬಂಧಿಸಿದ್ದ ಕಾಲವದು. ಸಂಪ್ರಾದಯದ ಸಂಕೋಲೆಯಲ್ಲಿ ತಮ್ಮ ಜನಾಂಗದ ಮಹಿಳೆಯರನ್ನು ಬಂಧಿಸಿ ,ಅವರನ್ನು ಸಮಾಜದ ಅನೇಕ ಚಟುವಟಿಕೆಗಳಿಂದ ದೂರವಿಟ್ಟು, ಪುರುಷರು ಮಹಿಳೆಯರನ್ನು ತಮ್ಮ ಭೋಗದ ವಸ್ತುವಾಗಿಸಿಕೊಂಡು ನಿರಂತರವಾಗಿ ಶೋಷಣೆ ನಡೆಸುತ್ತಿದದ್ದನ್ನು ವಿರೋಧಿಸಿ, ತಮ್ಮದೇ ಸಮುದಾಯದ ವಿರುದ್ಧ,ಲೇಖನಗಳನ್ನು ಬರೆಯುವುದರ ಮೂಲಕ ಹಾಗು ಮಹಿಳೆಯರಿಗೆ ಶಿಕ್ಷಣದ ಮಹತ್ವವನ್ನು ಕುರಿತು ಜಾಗೃತಿ ಮೂಡಿಸುವುದರ ಮೂಲಕ ತಮ್ಮ ಮುಸ್ಲಿಂ ಜನಾಂಗದ ಪ್ರಗತಿಗಾಗಿ ಶ್ರಮಿಸಿದ, ಎಷ್ಟೇ ವಿರೋಧವಿದ್ದರೂ ʼಪ್ರವಾಹದ ವಿರುದ್ಧ ಈಜುವುದೇ ತನ್ನ ಬದುಕುʼ ಎಂದು ದಿಟ್ಟ ಹೆಜ್ಜೆ ಇಟ್ಟ ಮಹಿಳೆ ಶ್ರೀಮತಿ ಸಾರಾ ಅಬೂಬಕ್ಕರ್ವ‌ರು.

ಖ್ಯಾತ ವಕೀಲರಾದ ಪಿ. ಅಹಮ್ಮದ್ ಹಾಗು ತಾಯಿ ಜೈನಾಬಿಯವರ 4ನೇ ಮಗುವಾಗಿ ದಿನಾಂಕ 30/06/1936 ರಂದು ಈಗಿನ ಕೇರಳ ರಾಜ್ಯಕ್ಕೆ ಸೇರಿದ ಕಾಸರಗೂಡಿನಲ್ಲಿ ಜನಿಸಿದರು. ಮೊದಲು 3 ಗಂಡು ಮಕ್ಕಳ ನಂತರ ಜನಿಸಿದ ಮಗುವೆಂಬ ಕಾರಣಕ್ಕೆ ಎಲ್ಲರೂ ತುಂಬಾ ಮುದ್ದಿನಿಂದ ಬೆಳೆಸಿದರು. ಮುಸ್ಲಿಂ ಜನಾಂಗದ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರವಿಡಬೇಕೆಂಬ ಎಲ್ಲಾ ಕಟ್ಟುಪಾಡುಗಳನ್ನು ಮುರಿದು ಸಾರಾಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶವನ್ನು ಕಲ್ಪಿಸಿ ಓದಿನ ಮಹತ್ವವನ್ನು ಸಾರಿ ಸಾರಿ ಹೇಳಿದ ಕುಟುಂಬ ಸಾರಾ ಅವರದು. ಎಸ್.ಎಸ್.ಎಲ್.ಸಿ ನಂತರ ಇನ್ನು ಓದುವ ಆಸೆ ಇದ್ದರೂ ತಾಯಿಯ ಓತ್ತಾಯಕ್ಕೆ ಮಣಿದು ಮದುವೆಗೆ ತಲೆಯೊಡ್ಡಬೇಕಾಯಿತು. ಆಗಲೂ ಮಗಳ ಆಸೆಯಂತೆ ವಿದ್ಯಾವಂತರಾದ ಸರ್ಕಾರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ಎಂ. ಅಬೂಬಕ್ಕರ್ ಜೊತೆ ಸಾರಾರವರ ವಿವಾಹ ನೆರವೇರಿಸಲಾಯಿತು.

ಆದರೆ ಗಂಡನ ಮನೆಯವಾತಾವರಣ ಇವರಿಗೆ ಉಸಿರುಗಟ್ಟಿಸುವಂತಿತ್ತು. ಹೆಣ್ಣು ಮಕ್ಕಳಿಗೆ ಓದು ನಿಷಿದ್ದ ವೆಂಬ ಹಾಗು ಯಾವಾಗಲು ಘೋಷಾ ಧರಿಸಿ ಓಡಾಡುವುದು ಇದೆಲ್ಲಾ ಸಂಗತಿಗಳು ಇವರನ್ನು ಮುಜುಗರಕ್ಕೆ ಈಡುಮಾಡುತಿತ್ತು. ದಿನ ಪತ್ರಿಕೆಯನ್ನು ಓದುವ ಸ್ವಾತಂತ್ರ್ಯ ಕೂಡಾ ಸಾರಾ ಅವರಿಗೆ ಇರಲಿಲ್ಲ. ಆದರೆ ಧೃತಿಗೆಡದ ಸಾರಾ ಮನೆಯವರ ಮನಸ್ಥಿತಿಯನ್ನು ಕ್ರಮೇಣ ಬದಲಾಯಿಸಿ ಎಲ್ಲಾ ಮಹಿಳೆಯರಿಗೂ ವಿದ್ಯೆಯ ಮಹತ್ವವನ್ನು ತಿಳಿಸುವುದರ ಜೊತೆಗೆ ನಿಟ್ಟಿಂಗ್, ನೀಡಲ್ ವರ್ಕ್, ಕಸೂತಿಯಂತಹ ಕಲೆಗಳಲ್ಲಿ ಆ ಹೆಣ್ಣು ಮಕ್ಕಳು ಪರಿಣಿತಿ ಹೊಂದುವಂತೆ ಮಾಡಿದರು. ಹೆಣ್ಣಿನ ಸಹನಾ ಶಕ್ತಿ ಎಂತಹ ಪರಿಸ್ಥಿತಿಯನ್ನು ಸುಧಾರಿಸಬಲ್ಲದ್ದಾಗಿರುತ್ತದೆ ಎನ್ನುವುದಕ್ಕೆ ಇವರ ಅತ್ತೆಯ ಮನೆಯ ಮಕ್ಕಳು ಒಬ್ಬರೂ ಒಂದೂಂದು ಉನ್ನತ ಹುದ್ದೆಯಲ್ಲಿರುವುದೇ ಸಾಕ್ಷಿಯಾಗಿದೆ.

ಈ ನಡುವೆ ತನ್ನ ಪತಿ ಅಬೂಬಕ್ಕರ್ ರವರಿಗೆ ಮಂಗಳೂರಿನಿಂದ ಬೆಂಗಳೂರಿಗೆ ವರ್ಗವಾದಾಗ ತಮ್ಮ 4 ಮಕ್ಕಳೊಂದಿಗೆ ಕುಟುಂಬ ಸಮೇತ ಬೆಂಗಳೂರಿನಲ್ಲಿ ಬಂದು ನೆಲೆಸಿದರು. ಇಲ್ಲಿ ಇವರ ಕನಸು ಮೊಳಕೆಯೊಡೆಯಲು ಪ್ರಾರಂಭಿಸಿದವು. ಓದುವ ಅತಿಯಾದ ಹಂಬಲವಿದ್ದ ಸಾರಾರವರು ದಿನಪತ್ರಿಕೆಗಳನ್ನು, ಗ್ರಂಥಾಲಯದಿಂದ ಪುಸ್ತಕಗಳನ್ನು ತಂದು ಓದಲು ಆರಂಭಿಸಿದರು. ಓದಿನ ಮೇಲಿದ್ದ ಆಸಕ್ತಿ ಅವರನ್ನು ಬರೆಯಲು ಪ್ರೇರೇಪಿಸಿತು. ಒಂದೆರಡು ಕಥೆಗಳನ್ನು ಬರೆದು ಪತ್ರಿಕೆಗಳಿಗೂ ಕಳುಹಿಸಿದರು. ಆದರೆ ಅವು ಪ್ರಕಟವಾಗಲಿಲ್ಲ. ಆದರೆ ದಿನ ಪತ್ರಿಕೆಗಳನ್ನು ಓದುವುದು ನಿರಂತರವಾಗಿದ್ದರಿಂದ ರಾಜಕೀಯ ಹಾಗು ಸಾಮಾಜಿಕ ಪ್ರಜ್ಞೆ ಇವರಲ್ಲಿ ಯಾವಾಗಲೂ ಜಾಗೃತವಾಗಿದ್ದವು. ಮಹಿಳೆಯರ ಹಾಗು ದುರ್ಬಲ ವರ್ಗದ ಪರವಾಗಿದ್ದ ಲಂಕೇಶ್ ಪತ್ರಿಕೆಯ ಅಭಿಮಾನಿಯಾಗಿದ್ದ ಸಾರಾ ತಮ್ಮ 40ನೇ ವಯಸ್ಸಿನಲ್ಲಿ “ನನ್ನ ಜನ ಒಂದಾಗಬೇಕು” ಎಂಬ ಲೇಖನವನ್ನು ಬರೆದು ಕಳುಹಿಸಿದ್ದರು. ಈ ಲೇಖನ ಪತ್ರಿಕೆಯಲ್ಲಿ ಪ್ರಕಟವಗುವುದರ ಮೂಲಕ ಲಂಕೇಶ್ ರವರು ಇವರ ಬರವಣಿಯನ್ನು ಪೋಷಿಸಿದರು.

ನಂತರದ ದಿನಗಳಲ್ಲಿ ವಾಸ್ತವದಲ್ಲಿ ತಮ್ಮ ಸಮುದಾಯದ ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದ ಸಾರಾರವರು, ಬುರ್ಖಾ, ವರದಕ್ಷಿಣೆ, ತಲಾಕ್, ಬಹು ಪತ್ನಿತ್ವ, ಮಧ್ಯಮ ವರ್ಗ, ಕೆಳವರ್ಗ, ಬಡಮುಸ್ಲಿಂ ಈ ರೀತಿಯಾದ ವಿಷಯಗಳನ್ನು ಕೇಂದ್ರವಾಗಿಸಿಕೊಂಡು ಕೃತಿಗಳನ್ನು ರಚಿಸಲು ಪ್ರಾರಂಭಿಸಿದರು. ಇವರ ಮೊದಲ ಕಾದಂಬರಿ ʼಚಂದ್ರ ಗಿರಿʼ ಪ್ರಕಟವಾದ ನಂತರ ಇವರ ಅನೇಕ ಲೇಖನಗಳಿಗೆ, ಕೃತಿಗಳಿಗೆ ಬೇಡಿಕೆ ಹೆಚ್ಚಾದವು. ಹಿಂದು-ಮುಸ್ಲಿಂ ನಡುವೆ ಗೋಡೆ ಕೆಡವಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಇವರು ನಂಬಿದ್ದರು. ಸಂಪ್ರದಾಯದ ಹೆಸರಿನಲ್ಲಿ ಅನೇಕ ಮೂಢನಂಬಿಕೆಗಳನ್ನು ಪಾಲಿಸುತ್ತಿರುವ ಜನ ಸುಶಿಕ್ಷಿತರಾದರೆ ಮಾತ್ರ ಮನುಷ್ಯರಾಗಿ ಬಾಳಲು ಸಾಧ್ಯವಾಗುವುದು ಎಂಬ ವಾದ ಇವರದು. ಇವರ ಕಥೆಗಳು ಹೆಸರಾಂತ ಮಾಸಪತ್ರಿಕೆಗಳಾದ ಸುಧಾ, ತರಂಗಗಳಲ್ಲಿ ಪ್ರಕಟವಾಗುತ್ತಿದ್ದಾಗ, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು.

ಇವರ ಸಾಹಿತ್ಯ ಕೃಷಿಗೆ ʼ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿʼ, ʼಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿʼ, ʼಅತ್ತಿಮಬ್ಬೆ ಪ್ರಶಸ್ತಿʼ, ಬಾಬಾ ಸಾಹೇ ಬ್ ಅಂಬೇಡ್ಕರ್ ಪ್ರಶಸ್ತಿʼ, ನಾಡೋಜ ಪ್ರಶಸ್ತಿʼ ಇನ್ನು ಅನೇಕ ಪ್ರಶಸ್ತಿಗಳು ಹಾಗು ಗೌರವಗಳು ಇವರನ್ನು ಅರಸಿ ಬಂದಿದೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ ಜನಾಂಗದ ಮಹಿಳೆಯರ ಜೀವನವನ್ನು ಬೆಳಕಿಗೊಡ್ಡಿ ಮಿಂಚಿದ ನಕ್ಷತ್ರ ʼಸಾರಾ ಅಬೂಬಕ್ಕರ್ʼ. ತಮ್ಮ ಸಮುದಾಯದ ವಿರುದ್ದ ಧ್ವನಿಯೆತ್ತಿ, ಮಹಿಳೆಯರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಮನೋಭಾವವುಳ್ಳ ,ಆಧುನಿಕ ವಿಚಾರಧಾರೆಗಳಿಗೆ ಸದಾ ತೆರೆದ ಮನಸ್ಸಿನವರಾದ, ಅನ್ಯಾಯ ಕಂಡರೆ ಸಿಡಿದೇಳುವ ಸ್ವಭಾವ ಇವರದು. ಸರಳ ಸ್ನೇಹಮಯ ವ್ಯಕ್ತಿತ್ವದ ಸಾರಾ “ಹೆಣ್ಣೂಬ್ಬಳು ಕಲಿತರೆ ಶಾಲೆ ತೆರೆದಂತೆ” ಎಂಬ ನಾಣ್ಣುಡಿಯನ್ನು ಜೀವಂತವಾಗಿರಿಸಿ, ಮಹಿಳೆಯರು ನೂರಕ್ಕೆ ನೂರು ಶಿಕ್ಷಣ ಪಡೆದರೆನೇ ಈ ಸಮಾದ ಪ್ರಗತಿ ಸಾಧ್ಯ ಎಂದು ಸಾರಿ ಸಾರಿ ಹೇಳಿದವರು “ಶ್ರೀಮತಿ ಸಾರಾ ಅಬೂಬಕ್ಕರ್”.

  • ಶಿಲ್ಪಾ ಗಿರೀಶ್

ಅಣ್ಣ ಬರೆಸಿದ ಆ ಪತ್ರ

ಆಗಿನ್ನು ನಾನು ನಾಲ್ಕನೇ ತರಗತಿ ಓದುತ್ತಿದ್ದೆ. ಅಷ್ಟರೊಳಗಾಗಲೇ ಅಣ್ಣ ಕ್ಲಾಸ್ ಒನ್ ಕಂತ್ರಾಟುದಾರನ ಕೆಲಸ ಬಿಟ್ಟು ಆ ಊರು, ಈ ಊರು ತಿರುಗುತ್ತಿದ್ದರು.

ಪ್ರೊ. ನಂಜುಂಡಸ್ವಾಮಿಯವರ ರೈತ ಸಂಘದ ಹುಚ್ಚು ಅವರನ್ನು ಹೀಗೆ ಮಾಡಿತ್ತು. ಅವರದೊಂದು ಪಡೆ. ಈಗ ಸಾಕಷ್ಟು ಜ‌ನರು ಅಕ್ಷರಶಃ ಬೀದಿಗೆ ಬಂದಿದ್ದಾರೆ.

ರೈತ ಸಂಘದ ಹೆಸರೇಳಿಕೊಂಡು ಶ್ರೀಮಂತರಾದವರು ಇದ್ದಾರೆ. ಬೀದಿಗೆ ಬಂದವರು ಇದ್ದಾರೆ. ಹಾಗೆ, ಬೀದಿಗೆ ಬಂದವರ ಕಥನಗಳು ಎಲ್ಲೂ ದಾಖಲಾಗುವುದಿಲ್ಲ.

ಹಣ ಮಾಡುವ ಗುತ್ತಿಗೆದಾರನ ಹುದ್ದೆ ಬಿಟ್ಟ ಅಣ್ಣ, ಹಣ ಕತ್ತೆ ತಿನ್ನುವ ಪೇಪರ್. ನಾಲ್ಕು ಜನಕ್ಕೆ ಸಹಾಯ ಮಾಡಬೇಕು ಎನ್ನುತ್ತಿದ್ದರು. ಇಂಥದೇ ಆದರ್ಶ ಹೇಳುತ್ತಿದ್ದರು. ಇದೇ ಕಾರಣಕ್ಕಾಗಿಯೇ ನಾನು ಸರ್ಕಾರಿ ಹುದ್ದೆಗಾಗಿ ಬದುಕುವುದು ಅವರಿಗೆ ಬೇಕಿರಲಿಲ್ಲ.

ರೈತ ಸಂಘದ ಸರ್ಕಾರ ಬರಬೇಕು. ರೈತರಿಗೆ ಪಿಂಚಣಿ ವ್ಯವಸ್ಥೆ ಬರಬೇಕೆಂಬುದು ಅವರ ಮಹದಾಸೆ ಆಗಿತ್ತು.

ಇವೆಲ್ಲ ಒತ್ತಟ್ಟಿಗಿರಲಿ, ಈಗ ಲೆಟರ್ ವಿಷಯಕ್ಕೆ ಬರುತ್ತೇನೆ.

ಇದೇ ಚಳಿಗಾಲದ ದಿ‌ನ ಅವು. ಎದ್ದವನು ಮುಂಜಾನೆ ಸಿಮೆಂಟ್ ಕಲ್ಲಿನ‌ ಮೇಲೆ ಕುಳಿತಿದ್ದೆ. ಯಾವುದೊ ಅಜ್ಜಿ ಸೀದಾ ಬಂತು.

ಅಂತಹ ಕೊರೆಯುವ ಚಳಿಯಲ್ಲೂ ಅಜ್ಜಿ ಅಳುತ್ತಿತ್ತು. ಮಗ, ಸೊಸೆ ಇಬ್ಬರೂ ಅಸು ನೀಗಿದ್ದರು. ಒಬ್ಬ, ಸಣ್ಣ ಮೊಮ್ಮಗನನ್ನು ಸಲುಹುವ ಬಾರ ಹೊತ್ತಿತ್ತು ಅಜ್ಜಿ.

ಅಜ್ಜಿಯ ಕತೆಯನ್ನು ನಮ್ಮಣ್ಣ ಕೇಳಿದರು. ಟೀ ಕೊಟ್ಟರು. ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡಿದ್ದ ಸರ್ಕಾರಿ ಜಮೀನನ್ನು ಅದೇ ಊರಿನ ಬಲಾಢ್ಯ ವ್ಯಕ್ತಿಯೊಬ್ಬ ಕಿತ್ತುಕೊಂಡಿದ್ದ.

ಅಲ್ಲಿ, ಇಲ್ಲಿ, ಅಧಿಕಾರಿಗಳು, ಪೊಲೀಸರು ಹೀಗೆಲ್ಲ ಅಲೆದಾಡುತ್ತಿದ್ದ ಅಜ್ಜಿ ಗೆ ಯಾರೋ ನಮ್ಮಣ್ಣನ ಬಗ್ಗೆ ಹೇಳಿ ಕಳುಹಿಸಿದ್ದರು.

ಈ ವಿಷಯದಲ್ಲಿ ಇಡೀ ಊರಿನಲ್ಲಿ ಅಜ್ಜಿಯನ್ನು ಬೆಂಬಲಿಸುವವರೇ ಇಲ್ಲ. ಮರು ದಿನ ನನ್ನನ್ನು ಕರೆದ ಅಣ್ಣ, ಅಜ್ಜಿಗೆ ಭೂಮಿ ಕೊಡಿಸುವ ಕೆಲಸವನ್ನು ನನಗೆ ಹಾಕಿದರು. ನಾನು ತಬ್ಬಿಬ್ಬು, ಅಳುವುದೊಂದೇ ಬಾಕಿ. ಏನೇನು ಗೊತ್ತೆ ಇಲ್ಲದ ಸಣ್ಣ ಹುಡುಗ ನಾನು.

ಅದೇ ದಿನ ರಾತ್ರಿ ಸಿ.ಎಸ್.ಪುರದಿಂದ ಬಂದವರು ಅಜ್ಜಿಯ ಕತೆಯನ್ನು ನನಗೆ ಹೇಳಿದರು. ದಾರಿಯನ್ನು ತೋರಿಸಿದರು.

ನಾಳೆ ಸಂಜೆ ನಮ್ಮ ಮನೆಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ರಾಷ್ಟ್ರ ಪತಿ, ರಾಜ್ಯಪಾಲರು, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳ ಕಚೇರಿಗೆ ‌ನಾನು ಬರೆದ ಅಜ್ಜಿ ಕಥೆಯ ದೂರು ಹತ್ತು ಪೈಸೆಯ ಪೋಸ್ಟಲ್ ಕಾರ್ಡ್ ನಲ್ಲಿ ರವಾ‌ನೆಯಾಯಿತು.

ಇದಾದ ಎರಡು ತಿಂಗಳ ಬಳಿಕ ಅಜ್ಜಿ ಮತ್ತೇ ಮನೆ ಮುಂದೆ ಕಾಣಿಸಿತು. ನನ್ನ ಪತ್ರಕ್ಕೆ ರಾಷ್ಟ್ರಪತಿ ಕಚೇರಿಯಿಂದ ಆದೇಶ ತಹಶೀಲ್ದಾರ್ ಕಚೇರಿಗೆ ತಲುಪಿತ್ತು. ಸ್ಥಳಕ್ಕೆ ಬಂದ ತಹಶೀಲ್ದಾರ್ ಅಜ್ಜಿಯ ಜಮೀನು ಬಿಡಿಸಿಕೊಟ್ಟಿದ್ದರು.

ಮೊಮ್ಮಗನನ್ನು ಕರೆದುಕೊಂಡು ಬಂದಿದ್ದ ಅಜ್ಜಿ ನಮ್ಮಣ್ಣನಿಗೆ ಬಾಯ್ತುಂಬಾ ಹರಸಿತು. ನಗುವಿನ ಮುಖದೊಂದಿಗೆ ವಾಪಸ್ ಆಯಿತು.


ಅಣ್ಣ ನಮ್ಮನ್ನು ಅಗಲಿ ಇಂದಿಗೆ ಹನ್ನೆರಡು ವರ್ಷ. ತೆಂಗಿನ ಮರ ಪ್ರತಿ ಗರಿ ಕಳಚಿದಾಗಲೂ ಅದರ ಗುರುತು ಬಿಡುವಂತೆ ಬದುಕಿನುದ್ದಕ್ಕೂ ಸಮಾಜಕ್ಕೆ ನಮ್ಮ‌ ಗುರುತುಗಳನ್ನು ಬಿಡಬೇಕು. ನಮ್ಮ ಕೈ ಯಾವಾಗಲೂ ಅಸಹಾಯಕರು, ಹಸಿದವರತ್ತ ಚಾಚಿರಬೇಕು. ಅವರಿಗಾಗಿ ಬದುಕು ಸವೆಸಬೇಕು ಎಂಬ ಅವರ ಮಾತುಗಳು ಎಂದೂ ಮರೆಯದ ಮಾತುಗಳಾಗಿ ನನ್ನಲ್ಲಿ ಉಳಿದಿವೆ.

.


ಸಿ.ಕೆ.ಮಹೇಂದ್ರ