Sunday, July 21, 2024
Google search engine
Homeಜಸ್ಟ್ ನ್ಯೂಸ್ನಾಡೋಜ ಪುರಸ್ಕೃತರಾದ ಸಾರ ಅಬೂಬಕ್ಕರ್ ನಿಧನ

ನಾಡೋಜ ಪುರಸ್ಕೃತರಾದ ಸಾರ ಅಬೂಬಕ್ಕರ್ ನಿಧನ

ಶ್ರೀಮತಿ ಸಾರಾ ಅಬೂಬಕ್ಕರ…

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ ಜನಾಂಗದ ಮಹಿಳೆಯರಿಗೆ ಶಿಕ್ಷಣವನ್ನು ನಿರ್ಬಂಧಿಸಿದ್ದ ಕಾಲವದು. ಸಂಪ್ರಾದಯದ ಸಂಕೋಲೆಯಲ್ಲಿ ತಮ್ಮ ಜನಾಂಗದ ಮಹಿಳೆಯರನ್ನು ಬಂಧಿಸಿ ,ಅವರನ್ನು ಸಮಾಜದ ಅನೇಕ ಚಟುವಟಿಕೆಗಳಿಂದ ದೂರವಿಟ್ಟು, ಪುರುಷರು ಮಹಿಳೆಯರನ್ನು ತಮ್ಮ ಭೋಗದ ವಸ್ತುವಾಗಿಸಿಕೊಂಡು ನಿರಂತರವಾಗಿ ಶೋಷಣೆ ನಡೆಸುತ್ತಿದದ್ದನ್ನು ವಿರೋಧಿಸಿ, ತಮ್ಮದೇ ಸಮುದಾಯದ ವಿರುದ್ಧ,ಲೇಖನಗಳನ್ನು ಬರೆಯುವುದರ ಮೂಲಕ ಹಾಗು ಮಹಿಳೆಯರಿಗೆ ಶಿಕ್ಷಣದ ಮಹತ್ವವನ್ನು ಕುರಿತು ಜಾಗೃತಿ ಮೂಡಿಸುವುದರ ಮೂಲಕ ತಮ್ಮ ಮುಸ್ಲಿಂ ಜನಾಂಗದ ಪ್ರಗತಿಗಾಗಿ ಶ್ರಮಿಸಿದ, ಎಷ್ಟೇ ವಿರೋಧವಿದ್ದರೂ ʼಪ್ರವಾಹದ ವಿರುದ್ಧ ಈಜುವುದೇ ತನ್ನ ಬದುಕುʼ ಎಂದು ದಿಟ್ಟ ಹೆಜ್ಜೆ ಇಟ್ಟ ಮಹಿಳೆ ಶ್ರೀಮತಿ ಸಾರಾ ಅಬೂಬಕ್ಕರ್ವ‌ರು.

ಖ್ಯಾತ ವಕೀಲರಾದ ಪಿ. ಅಹಮ್ಮದ್ ಹಾಗು ತಾಯಿ ಜೈನಾಬಿಯವರ 4ನೇ ಮಗುವಾಗಿ ದಿನಾಂಕ 30/06/1936 ರಂದು ಈಗಿನ ಕೇರಳ ರಾಜ್ಯಕ್ಕೆ ಸೇರಿದ ಕಾಸರಗೂಡಿನಲ್ಲಿ ಜನಿಸಿದರು. ಮೊದಲು 3 ಗಂಡು ಮಕ್ಕಳ ನಂತರ ಜನಿಸಿದ ಮಗುವೆಂಬ ಕಾರಣಕ್ಕೆ ಎಲ್ಲರೂ ತುಂಬಾ ಮುದ್ದಿನಿಂದ ಬೆಳೆಸಿದರು. ಮುಸ್ಲಿಂ ಜನಾಂಗದ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರವಿಡಬೇಕೆಂಬ ಎಲ್ಲಾ ಕಟ್ಟುಪಾಡುಗಳನ್ನು ಮುರಿದು ಸಾರಾಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶವನ್ನು ಕಲ್ಪಿಸಿ ಓದಿನ ಮಹತ್ವವನ್ನು ಸಾರಿ ಸಾರಿ ಹೇಳಿದ ಕುಟುಂಬ ಸಾರಾ ಅವರದು. ಎಸ್.ಎಸ್.ಎಲ್.ಸಿ ನಂತರ ಇನ್ನು ಓದುವ ಆಸೆ ಇದ್ದರೂ ತಾಯಿಯ ಓತ್ತಾಯಕ್ಕೆ ಮಣಿದು ಮದುವೆಗೆ ತಲೆಯೊಡ್ಡಬೇಕಾಯಿತು. ಆಗಲೂ ಮಗಳ ಆಸೆಯಂತೆ ವಿದ್ಯಾವಂತರಾದ ಸರ್ಕಾರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ಎಂ. ಅಬೂಬಕ್ಕರ್ ಜೊತೆ ಸಾರಾರವರ ವಿವಾಹ ನೆರವೇರಿಸಲಾಯಿತು.

ಆದರೆ ಗಂಡನ ಮನೆಯವಾತಾವರಣ ಇವರಿಗೆ ಉಸಿರುಗಟ್ಟಿಸುವಂತಿತ್ತು. ಹೆಣ್ಣು ಮಕ್ಕಳಿಗೆ ಓದು ನಿಷಿದ್ದ ವೆಂಬ ಹಾಗು ಯಾವಾಗಲು ಘೋಷಾ ಧರಿಸಿ ಓಡಾಡುವುದು ಇದೆಲ್ಲಾ ಸಂಗತಿಗಳು ಇವರನ್ನು ಮುಜುಗರಕ್ಕೆ ಈಡುಮಾಡುತಿತ್ತು. ದಿನ ಪತ್ರಿಕೆಯನ್ನು ಓದುವ ಸ್ವಾತಂತ್ರ್ಯ ಕೂಡಾ ಸಾರಾ ಅವರಿಗೆ ಇರಲಿಲ್ಲ. ಆದರೆ ಧೃತಿಗೆಡದ ಸಾರಾ ಮನೆಯವರ ಮನಸ್ಥಿತಿಯನ್ನು ಕ್ರಮೇಣ ಬದಲಾಯಿಸಿ ಎಲ್ಲಾ ಮಹಿಳೆಯರಿಗೂ ವಿದ್ಯೆಯ ಮಹತ್ವವನ್ನು ತಿಳಿಸುವುದರ ಜೊತೆಗೆ ನಿಟ್ಟಿಂಗ್, ನೀಡಲ್ ವರ್ಕ್, ಕಸೂತಿಯಂತಹ ಕಲೆಗಳಲ್ಲಿ ಆ ಹೆಣ್ಣು ಮಕ್ಕಳು ಪರಿಣಿತಿ ಹೊಂದುವಂತೆ ಮಾಡಿದರು. ಹೆಣ್ಣಿನ ಸಹನಾ ಶಕ್ತಿ ಎಂತಹ ಪರಿಸ್ಥಿತಿಯನ್ನು ಸುಧಾರಿಸಬಲ್ಲದ್ದಾಗಿರುತ್ತದೆ ಎನ್ನುವುದಕ್ಕೆ ಇವರ ಅತ್ತೆಯ ಮನೆಯ ಮಕ್ಕಳು ಒಬ್ಬರೂ ಒಂದೂಂದು ಉನ್ನತ ಹುದ್ದೆಯಲ್ಲಿರುವುದೇ ಸಾಕ್ಷಿಯಾಗಿದೆ.

ಈ ನಡುವೆ ತನ್ನ ಪತಿ ಅಬೂಬಕ್ಕರ್ ರವರಿಗೆ ಮಂಗಳೂರಿನಿಂದ ಬೆಂಗಳೂರಿಗೆ ವರ್ಗವಾದಾಗ ತಮ್ಮ 4 ಮಕ್ಕಳೊಂದಿಗೆ ಕುಟುಂಬ ಸಮೇತ ಬೆಂಗಳೂರಿನಲ್ಲಿ ಬಂದು ನೆಲೆಸಿದರು. ಇಲ್ಲಿ ಇವರ ಕನಸು ಮೊಳಕೆಯೊಡೆಯಲು ಪ್ರಾರಂಭಿಸಿದವು. ಓದುವ ಅತಿಯಾದ ಹಂಬಲವಿದ್ದ ಸಾರಾರವರು ದಿನಪತ್ರಿಕೆಗಳನ್ನು, ಗ್ರಂಥಾಲಯದಿಂದ ಪುಸ್ತಕಗಳನ್ನು ತಂದು ಓದಲು ಆರಂಭಿಸಿದರು. ಓದಿನ ಮೇಲಿದ್ದ ಆಸಕ್ತಿ ಅವರನ್ನು ಬರೆಯಲು ಪ್ರೇರೇಪಿಸಿತು. ಒಂದೆರಡು ಕಥೆಗಳನ್ನು ಬರೆದು ಪತ್ರಿಕೆಗಳಿಗೂ ಕಳುಹಿಸಿದರು. ಆದರೆ ಅವು ಪ್ರಕಟವಾಗಲಿಲ್ಲ. ಆದರೆ ದಿನ ಪತ್ರಿಕೆಗಳನ್ನು ಓದುವುದು ನಿರಂತರವಾಗಿದ್ದರಿಂದ ರಾಜಕೀಯ ಹಾಗು ಸಾಮಾಜಿಕ ಪ್ರಜ್ಞೆ ಇವರಲ್ಲಿ ಯಾವಾಗಲೂ ಜಾಗೃತವಾಗಿದ್ದವು. ಮಹಿಳೆಯರ ಹಾಗು ದುರ್ಬಲ ವರ್ಗದ ಪರವಾಗಿದ್ದ ಲಂಕೇಶ್ ಪತ್ರಿಕೆಯ ಅಭಿಮಾನಿಯಾಗಿದ್ದ ಸಾರಾ ತಮ್ಮ 40ನೇ ವಯಸ್ಸಿನಲ್ಲಿ “ನನ್ನ ಜನ ಒಂದಾಗಬೇಕು” ಎಂಬ ಲೇಖನವನ್ನು ಬರೆದು ಕಳುಹಿಸಿದ್ದರು. ಈ ಲೇಖನ ಪತ್ರಿಕೆಯಲ್ಲಿ ಪ್ರಕಟವಗುವುದರ ಮೂಲಕ ಲಂಕೇಶ್ ರವರು ಇವರ ಬರವಣಿಯನ್ನು ಪೋಷಿಸಿದರು.

ನಂತರದ ದಿನಗಳಲ್ಲಿ ವಾಸ್ತವದಲ್ಲಿ ತಮ್ಮ ಸಮುದಾಯದ ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದ ಸಾರಾರವರು, ಬುರ್ಖಾ, ವರದಕ್ಷಿಣೆ, ತಲಾಕ್, ಬಹು ಪತ್ನಿತ್ವ, ಮಧ್ಯಮ ವರ್ಗ, ಕೆಳವರ್ಗ, ಬಡಮುಸ್ಲಿಂ ಈ ರೀತಿಯಾದ ವಿಷಯಗಳನ್ನು ಕೇಂದ್ರವಾಗಿಸಿಕೊಂಡು ಕೃತಿಗಳನ್ನು ರಚಿಸಲು ಪ್ರಾರಂಭಿಸಿದರು. ಇವರ ಮೊದಲ ಕಾದಂಬರಿ ʼಚಂದ್ರ ಗಿರಿʼ ಪ್ರಕಟವಾದ ನಂತರ ಇವರ ಅನೇಕ ಲೇಖನಗಳಿಗೆ, ಕೃತಿಗಳಿಗೆ ಬೇಡಿಕೆ ಹೆಚ್ಚಾದವು. ಹಿಂದು-ಮುಸ್ಲಿಂ ನಡುವೆ ಗೋಡೆ ಕೆಡವಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಇವರು ನಂಬಿದ್ದರು. ಸಂಪ್ರದಾಯದ ಹೆಸರಿನಲ್ಲಿ ಅನೇಕ ಮೂಢನಂಬಿಕೆಗಳನ್ನು ಪಾಲಿಸುತ್ತಿರುವ ಜನ ಸುಶಿಕ್ಷಿತರಾದರೆ ಮಾತ್ರ ಮನುಷ್ಯರಾಗಿ ಬಾಳಲು ಸಾಧ್ಯವಾಗುವುದು ಎಂಬ ವಾದ ಇವರದು. ಇವರ ಕಥೆಗಳು ಹೆಸರಾಂತ ಮಾಸಪತ್ರಿಕೆಗಳಾದ ಸುಧಾ, ತರಂಗಗಳಲ್ಲಿ ಪ್ರಕಟವಾಗುತ್ತಿದ್ದಾಗ, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು.

ಇವರ ಸಾಹಿತ್ಯ ಕೃಷಿಗೆ ʼ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿʼ, ʼಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿʼ, ʼಅತ್ತಿಮಬ್ಬೆ ಪ್ರಶಸ್ತಿʼ, ಬಾಬಾ ಸಾಹೇ ಬ್ ಅಂಬೇಡ್ಕರ್ ಪ್ರಶಸ್ತಿʼ, ನಾಡೋಜ ಪ್ರಶಸ್ತಿʼ ಇನ್ನು ಅನೇಕ ಪ್ರಶಸ್ತಿಗಳು ಹಾಗು ಗೌರವಗಳು ಇವರನ್ನು ಅರಸಿ ಬಂದಿದೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ ಜನಾಂಗದ ಮಹಿಳೆಯರ ಜೀವನವನ್ನು ಬೆಳಕಿಗೊಡ್ಡಿ ಮಿಂಚಿದ ನಕ್ಷತ್ರ ʼಸಾರಾ ಅಬೂಬಕ್ಕರ್ʼ. ತಮ್ಮ ಸಮುದಾಯದ ವಿರುದ್ದ ಧ್ವನಿಯೆತ್ತಿ, ಮಹಿಳೆಯರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಮನೋಭಾವವುಳ್ಳ ,ಆಧುನಿಕ ವಿಚಾರಧಾರೆಗಳಿಗೆ ಸದಾ ತೆರೆದ ಮನಸ್ಸಿನವರಾದ, ಅನ್ಯಾಯ ಕಂಡರೆ ಸಿಡಿದೇಳುವ ಸ್ವಭಾವ ಇವರದು. ಸರಳ ಸ್ನೇಹಮಯ ವ್ಯಕ್ತಿತ್ವದ ಸಾರಾ “ಹೆಣ್ಣೂಬ್ಬಳು ಕಲಿತರೆ ಶಾಲೆ ತೆರೆದಂತೆ” ಎಂಬ ನಾಣ್ಣುಡಿಯನ್ನು ಜೀವಂತವಾಗಿರಿಸಿ, ಮಹಿಳೆಯರು ನೂರಕ್ಕೆ ನೂರು ಶಿಕ್ಷಣ ಪಡೆದರೆನೇ ಈ ಸಮಾದ ಪ್ರಗತಿ ಸಾಧ್ಯ ಎಂದು ಸಾರಿ ಸಾರಿ ಹೇಳಿದವರು “ಶ್ರೀಮತಿ ಸಾರಾ ಅಬೂಬಕ್ಕರ್”.

  • ಶಿಲ್ಪಾ ಗಿರೀಶ್
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?