Sunday, March 15, 2026
Google search engine
Home Blog Page 84

ಆದರ್ಶಗಳನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯ: ತಹಶಿಲ್ದಾರ್ ಮಮತಾ

Publicstory/prajayoga

ಶಿರಾ: ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ, ಧ್ಯೇಯಗಳು ಅವರ ಆದರ್ಶಗಳನ್ನು ಭಾರತೀಯರೆಲ್ಲರೂ ಉಳಿಸಿ ಬೆಳೆಸಿಕೊಂಡು ಹೋಗುವ ಕರ್ತವ್ಯ ನಮ್ಮದು. ಭಾರತದ ಏಕತೆಯನ್ನು ಸಾರುವ ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಭಾರತೀಯರು ನಾವೆಲ್ಲಾ ಭಾರತಾಂಬೆಯ ಮಕ್ಕಳಾಗಿ ಸಾಮರಸ್ಯದಿಂದ ಬದುಕೋಣ ಎಂದು ತಹಶೀಲ್ದಾರ್ ಮಮತ ಹೇಳಿದರು.

ಅವರು ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳು ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ  76ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಅಖಂಡ ಭಾರತದ ಪ್ರಜೆಗಳು ಸಾಮರಸ್ಯದಿಂದ ಬದುಕಲು ಭಾರತೀಯತೆಯನ್ನು ಎತ್ತಿ ಹಿಡಿಯಲು ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದಡಿಯಲ್ಲಿ ಕಾನೂನು ನಿಯಮಗಳಿಗೆ ಗೌರವ ನೀಡಬೇಕು. ಅವುಗಳನ್ನು ಪಾಲಿಸುತ್ತ ನಮ್ಮ ಹಕ್ಕುಗಳನ್ನು ಅನುಭವಿಸುವ ಜೊತೆಗೆ ಕರ್ತವ್ಯವನ್ನು ಅರಿಯುವ ಅಗತ್ಯವಿದೆ. ನನ್ನ ದೇಶ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವೈವಿದ್ಯತೆಯಿಂದ ಕೂಡಿದ್ದರೂ ತ್ರಿವರ್ಣ ಧ್ವಜದಡಿಯಲ್ಲಿ ಏಕತೆಯಿಂದ ಸಾಮರಸ್ಯವನ್ನು ಮೆರೆಯುವಂತಹ ಹಿರಿಮೆ ನಮ್ಮದು. ಅಮೃತ ಮಹೋತ್ಸವ ಸ್ವಾತಂತ್ರ್ಯ ಸಂಭ್ರಮದ ದಿನದಂದು ಈ ನಾಡಿನ ಪ್ರತಿ ಪ್ರಜೆಯು ಸಾಮರಸ್ಯದಿಂದ ಸಮಾನತೆ, ಭ್ರಾತೃತ್ವದಿಂದ, ಬದುಕುವಂತಹ ವಾತಾವರಣವನ್ನು ಪ್ರತಿಯೊಬ್ಬರಿಗೂ ಕಲ್ಪಿಸಿಕೊಡಬೇಕಿದೆ. ಸಹಬಾಳ್ವೆ, ಸಹಜೀವನವೆಂಬ ಮೇರು ಮನಸಿನ ವ್ಯಕ್ತಿತ್ವ ನಮ್ಮೆಲ್ಲರದ್ದಾಗಲಿ ಎಂದು ಆಶಿಸಿದರು.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ, ಸಾವಿರಾರೂ ದೇಶಪ್ರೇಮಿಗಳ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಮಹಿಳೆಯರು ವಿಧವೆಯಾಗಿದ್ದಾರೆ. ಎಲ್ಲರ ತ್ಯಾಗ ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಈ ದೇಶಕ್ಕೋಸ್ಕರ ತ್ಯಾಗ ಬಲಿದಾನ ಮಾಡಿದ ಕ್ರಾಂತಿಕಾರಿ ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಕೇವಲ ಈ ಒಂದು ದಿನ ಸ್ಮರಿಸುವ ಈ ದಿನವಾಗಬಾರದು. ಅವರ ಸ್ಮರಣೆ ನಿತ್ಯೋತ್ಸವವಾಗಬೇಕು ಎಂದರು.

ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನದ ಶಕ್ತಿಯಿಂದ ಇಂದು ಸಾಮಾನ್ಯ ಪ್ರಜೆಗೂ ಸೂಕ್ತ ಸ್ಥಾನಮಾನಗಳು ದೊರೆಯುತ್ತಿವೆ. ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು. ಅವರ ತ್ಯಾಗ ಬಲಿದಾನದಿಂದ ಇಂದು ನಾವುಗಳು ಸ್ವತಂತ್ರರಾಗಿದ್ದೇವೆ. ಮನೆ ಮನೆಗೂ ತ್ರಿವರ್ಣ ಧ್ವಜ ಅಭಿಯಾನದಡಿ ಇಂದು ರಾಷ್ಟ್ರದ  ಪ್ರತಿಯೊಂದು ಮನೆಯ ಮೇಲೂ ರಾಷ್ಟ್ರ ಧ್ವಜ ಹಾರಾಡುತ್ತಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಮನೋಭಾವದಿಂದ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು. 

ಅದ್ಧೂರಿಯಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ: 76ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸುಮಾರು 2500 ವಿದ್ಯಾರ್ಥಿಗಳಿಂದ ಸಾಮೂಹಿಕ ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ಉಪಾಧ್ಯಕ್ಷ ಅಂಬುಜಾಕ್ಷಿ ನಟರಾಜ್, ಕಾಡುಗೊಲ್ಲ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಡಿವೈಎಸ್ಪಿ ನವೀನ್‌ಕುಮಾರ್, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಮಾರುತೀಶ್, ನಗರಸಭಾ ಸದಸ್ಯ ಎಸ್.ಎಲ್.ರಂಗನಾಥ್, ಆರ್.ರಾಮು, ಗ್ರೇಡ್-2 ತಹಶಿಲ್ದಾರ್ ಮಂಜುನಾಥ್, ತಾ.ಪಂ. ಇ.ಓ. ಅನಂತರಾಜು, ಬಿಇಓ ಶಂಕರಯ್ಯ, ಪೌರಾಯುಕ್ತ ಶ್ರೀನಿವಾಸ್, ದೈಹಿಕ ಶಿಕ್ಷಣ ಪರಿವೀಕ್ಷಕ ಕುಮಾರ್, ಸಹಾಯಕ ಕೃಷಿ ನಿರ್ದೇಶಕ ರಂಗನಾಥ್, ಕಸಬಾ ಕಂದಾಯ ನಿರೀಕ್ಷಕ ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.

ಸ್ವಾವಲಂಬಿ ಬದುಕು ರೂಢಿಸಿಕೊಳ್ಳುವ ಅಗತ್ಯವಿದೆ : ಎಸ್.ಆರ್.ಶ್ರೀನಿವಾಸ್

Publicstory/prajayoga

ಗುಬ್ಬಿ: ಸ್ವಾತಂತ್ರ‍್ಯ ಬಂದು 75ವರ್ಷ ಕಳೆದರೂ ಆರ್ಥಿಕ ಸ್ವಾವಲಂಬಿ ಬದುಕು ರೂಡಿಸಿಕೊಳ್ಳುವ ಅಗತ್ಯವಿದ್ದು, ಉದ್ಯೋಗ ಸೃಷ್ಟಿಯ ಜೊತೆ ತಲಾ ಆದಾಯ ಹೆಚ್ಚಿಸಿಕೊಳ್ಳಬೇಕಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ನಡೆದ 75ನೇ ವರ್ಷದ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಆಚರಣೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ‍್ಯ ಬಂದ ಸಮಯದಲ್ಲಿ ಶೇಕಡಾ 12 ರಷ್ಟು ಸಾಕ್ಷರತೆ ಇತ್ತು. ಅಭಿವೃದ್ಧಿಯತ್ತ ಹೆಜ್ಜೆ ಹಾಕುವ ನಂತರದಲ್ಲಿ ಸಾಕ್ಷರತಾ ಅಂಕಿ ಅಂಶ ಶೇಕಡಾ 77 ರಷ್ಟಿದೆ. ಬಾಕಿ ಇರುವ 23 ರಷ್ಟು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ. ಆದರೆ ಉದ್ಯೋಗ ಹುಡುಕಿ ವಿದೇಶದತ್ತ ಸಾಗುವ ಯುವ ಜನತೆಯನ್ನು ಹಿಡಿದು ಇಟ್ಟುಕೊಳ್ಳುವ ಕೆಲಸ ಮಾಡಲು ಸ್ವಾವಲಂಬಿತನಕ್ಕೆ ಆದ್ಯತೆ ನೀಡಬೇಕು.  ಭೂ ಹಗರಣ ಕಳಂಕ ತಾಲೂಕಿಗೆ ತಾಕುವ ಮುನ್ನ ಹಗರಣ ತೀವ್ರ ತನಿಖೆಗೆ ಒಳಪಡಿಸಲು ಸೂಚಿಸಿದ್ದೆ. ಆದರೆ ಸುಖಾಸುಮ್ಮನೆ ನನ್ನ ಮೇಲೆಯೇ ಆರೋಪ ಮಾಡಿ ಕೆಲವರು ಮಾತನಾಡುತ್ತಾರೆ. ಯಾವುದೇ ತಪ್ಪು ನನ್ನಿಂದ ಆಗಿಲ್ಲ. ನನ್ನ ಹೆಸರಿನಲ್ಲಿ ಅಥವಾ ಕುಟುಂಬದ ಹೆಸರಿನಲ್ಲಿ ಬಗರ್ ಹುಕುಂ ಮೂಲಕ ಆಗಿದ್ದಲ್ಲಿ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.

ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಬಿ.ಆರತಿ ಮಾತನಾಡಿ, ಸ್ವಾತಂತ್ರ‍್ಯ ತರಲು ಶ್ರಮಿಸಿದ ವೀರ ಸೇನಾನಿಗಳ ಸ್ಮರಿಸುವುದು ಎಲ್ಲರ ಕರ್ತವ್ಯ. ಮಹಾತ್ಮ ಗಾಂಧೀಜಿ ಅವರ ನೇತೃತ್ವದ ಚಳವಳಿ ಬ್ರಿಟೀಷರಿಂದ ಮುಕ್ತಿ ಕಂಡಿತು. ಸ್ವತಂತ್ರ ಭಾರತವನ್ನು ಗತ ವೈಭವಕ್ಕೆ ಮರಳಿಸುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಇಡೀ ದೇಶವನ್ನೇ ವಿಶ್ವ ವಿಖ್ಯಾತಗೊಳಿಸಿತು. 75ವರ್ಷದ ನಂತರದ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಿ ದೇಶ ಭಕ್ತಿ ಪ್ರದರ್ಶಿಸಬೇಕಿದೆ ಎಂದು ಕರೆ ನೀಡಿದರು.

ಇತಿಹಾಸ ಪ್ರಾದ್ಯಾಪಕ ಡಾ.ಎಸ್.ಎ.ಮಲ್ಲಿಕಾರ್ಜುನ್ ಅವರು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಪೊಲೀಸ್, ಗೃಹ ರಕ್ಷಕ ದಳ, ಎನ್ ಸಿಸಿ, ಸ್ಕೌಟ್ ಅಂಡ್ ಗೈಡ್ ಹಾಗೂ ಶಾಲಾ ಮಕ್ಕಳಿಂದ ಆಕರ್ಷಕ ಕವಾಯತು ನಡೆಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರತಿಭಾವಂತ ಮಕ್ಕಳು ಹಾಗೂ ಸ್ವಾತಂತ್ರ‍್ಯ ಹೋರಾಟಗಾರ ಜಿ.ಕೆ.ಪರಮೇಶ್ವರಯ್ಯ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷ್ಮೀ, ತಾಪಂ ಇಓ ಪರಮೇಶ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಬಿಇಓ ಸೋಮಶೇಖರ್ ಸೇರಿದಂತೆ ಎಲ್ಲಾ ಪಪಂ ಸದಸ್ಯರು, ಎಲ್ಲಾ ಇಲಾಖಾಧಿಕಾರಿಗಳು ಹಾಜರಿದ್ದರು.

ದೇಶಪ್ರೇಮದ ಕಿಚ್ಚು ಹಚ್ಚುವುದು ಅಮೃತ ಮಹೋತ್ಸವದ ಸಂಕಲ್ಪ

0

Publicstory/prajayoga

ವರದಿ, ಮಿಥುನ್ ತಿಪಟೂರು

ತಿಪಟೂರು: ಹರ್ ಘರ್ ತಿರಂಗಾ ಎಂಬ ಮಾನ್ಯ ಪ್ರಧಾನ ಮಂತ್ರಿಗಳ ಕರೆಯ ಮೇರೆಗೆ ದೇಶದ ಪ್ರತಿ ಗ್ರಾಮಗಳಲ್ಲಿ ಜನತೆ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ತಿಳಿಸಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 76ನೇ ಸ್ವಾತಂತ್ರೋತ್ಸವ ಸಮಾರಂಭವನ್ನು ತಾಲ್ಲೂಕು ಉಪ ವಿಭಾಗಾಧಿಕಾರಿ ಕಲ್ಪಶ್ರೀ ಧ್ವಜಾರೋಹಣ ಮಾಡಿ ನಂತರ ಮಾತನಾಡಿದರು.

ಪ್ರತಿಯೊಬ್ಬ ಭಾರತೀಯನಲ್ಲೂ ದೇಶಪ್ರೇಮದ ಕಿಚ್ಚು ಹಚ್ಚುವುದೇ ಈ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಕಲ್ಪವಾಗಿದೆ ಎಂದು ಹೇಳಿದರು.

ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಚಂದ್ರಶೇಖರ್ ಉಪ ತಹಶಿಲ್ದಾರ್ ಜಗನ್ನಾಥ್, ನಗರಸಭಾ ಅಧ್ಯಕ್ಷ ರಾಮೋಹನ್, ಪೌರಾಯುಕ್ತ ಉಮಾಕಾಂತ್ ನಗರಸಭಾ ಸದಸ್ಯರು ಮತ್ತಿತರರು ಭಾಗಿಯಾಗಿದ್ದರು .

ವಿಶ್ವದ ಬಲಾಢ್ಯ ರಾಷ್ಟ್ರಗಳ ಸಾಲಿಗೆ ಭಾರತ : ಸಚಿವ ಅರಗ ಜ್ಞಾನೇಂದ್ರ

Publicstory/prajayoga

ಭಾರತ ಇಬ್ಭಾಗವಾದಾಗ ಗಾಂಧೀಜಿಯವರ “ನಮ್ಮ ದೇಹವನ್ನು ತುಂಡು ಮಾಡಿ ದೇಶವನ್ನಲ್ಲ” ಎನ್ನುವ ಮಾತನ್ನು ಸಚಿವರು ಸ್ಮರಿಸಿದರು.

ತುಮಕೂರು: ವಿಶ್ವದ ಬಲಾಢ್ಯ ರಾಷ್ಟ್ರಗಳ ಪೈಕಿ ಭಾರತವು ಸಹ ಒಂದಾಗಿದ್ದು, ಜಿ-20 ರಾಷ್ಟ್ರಗಳ ಗುಂಪಿನಲ್ಲಿ ‘ಭಾರತ ನಾಯಕ ರಾಷ್ಟ್ರವೆನಿಸಿದೆ. ಇಂದು ಇಡೀ ಜಗತ್ತೇ ನಮ್ಮ ದೇಶವನ್ನು ಗೌರವಿಸುವಂತಾಗಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಷಯವಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 76ನೇ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಜಿಲ್ಲೆಯ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ಬಾಹ್ಯಕಾಶ ತಂತ್ರಜ್ಞಾನದಲ್ಲಿ ನಾವು ಸ್ವಾವಲಂಭನೆಯನ್ನು ಸಾಧಿಸಿದ್ದು, ಮಾಹಿತಿ ತಂತ್ರಜ್ಞಾನದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿದೆ. ಅತ್ಯಾಧುನಿಕ ಸಬ್ಮೆರಿನ್ಗಳು ಮತ್ತು ಶಸ್ತ್ರಾಸ್ತ್ರಳನ್ನು ಹೊಂದಿದ್ದೇವೆ. ಅಂತೆಯೇ ವಿಶ್ವದಲ್ಲಿಯೇ ನಾಲ್ಕನೇ ಅತಿದೊಡ್ಡ ಸೈನ್ಯ ನಮ್ಮದಾಗಿದ್ದು, ಇದು ಸಹ ನಾವೆಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದರು.

ಕಣ್ಣಿಗೆ ಕಾಣದ ವೈರಾಣು ಕೋವಿಡ್-19ನಿಂದ ಇಡೀ ಜಗತ್ತೇ ತತ್ತರಿಸಿದ್ದು, ಈ ಸಂದರ್ಭ ಭಾರತದ ಎರಡು ಕಂಪನಿಗಳು ಕೋವಿಡ್ ವೈರಾಣು ವಿರುದ್ಧ ಲಸಿಕೆಯನ್ನು ಕಂಡುಹಿಡಿದು ನಮ್ಮ ದೇಶದ ಜನರನ್ನು ಕೋವಿಡ್ನಿಂದ ರಕ್ಷಿಸಿದ್ದಲ್ಲದೆ, ಲಸಿಕೆಯನ್ನು ವಿದೇಶಗಳಿಗೂ ಕಳುಹಿಸಿಕೊಡಲಾದ ವಿಷಯ ನಾವು ಗರ್ವ ಪಡುವಂತಹ ವಿಷಯವಾಗಿದೆ. ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ವೈದ್ಯರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸಿ ಜನರನ್ನು ಕೋವಿಡ್ನಿಂದ ರಕ್ಷಿಸಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ದೇಶದ ಜನತೆಗೆ ಉಚಿತ ಆಹಾರ ಪಡಿತರಗಳನ್ನು ನಮ್ಮ ಸರ್ಕಾರ ನೀಡಿದೆ ಎಂದರು.

ಸ್ವಾತಂತ್ರ್ಯ ಗಳಿಸುವಲ್ಲಿ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ ಬ್ರಿಟಿಷರಲ್ಲಿ ನಡುಕವನ್ನುಂಟು ಮಾಡಿತ್ತು. ಮಹಾನ್ ವೀರ ಸೇನಾನಿಗಳು/ ಹೋರಾಟಗಾರರ ತ್ಯಾಗ-ಬಲಿದಾನಗಳ  ಪ್ರತೀಕವೇ ಸ್ವಾತಂತ್ರ‍್ಯ. ನಮಗೆ ಸ್ವಾತಂತ್ರ‍್ಯ ಸಿಗಲು ಹೋರಾಡಿದ ಆತ್ಮಗಳು ಕಣ್ಣೀರಾಗಬಾರದು. ಅಂತಹ ವ್ಯಕ್ತಿತ್ವವನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕಿದೆ. ಸ್ವಾತಂತ್ರ‍್ಯಕ್ಕಾಗಿ ಮಡಿದವರ ಕನಸಿನ ಭಾರತಕ್ಕೆ ನಮ್ಮ ಕೊಡುಗೆಯೇನು ಎಂಬುದನ್ನು ನಾವಿಂದು ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದು ಅವರು ಕರೆ ನೀಡಿದರು.

ಬ್ರಿಟಿಷರು ಭಾರತ ಬಿಟ್ಟು ತೊಲಗಿದಾಗ 540ಕ್ಕೂ ಅಧಿಕ ಸಂಸ್ಥಾನಗಳು ಭಾರತದಲ್ಲಿದ್ದವು. ಒಕ್ಕೂಟ ವ್ಯವಸ್ಥೆಗೆ ಸೇರಲೊಪ್ಪದ ಹೈದರಾಬಾದ್ ನಿಜಾಮನ ಸಂಸ್ಥಾನಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸೈನ್ಯವನ್ನು ಕಳುಹಿಸಿ ಭಾರತದ ಒಕ್ಕೂಟಕ್ಕೆ ಸೇರಿಸುವಲ್ಲಿ ಸಫಲರಾದರು. ಈ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಾಂಸ್ಕೃತಿಕವಾಗಿ ಏಕತೆಯನ್ನು ಹೊಂದಿರುವ ದೇಶವಾಗಿದೆಯೆಂದರು.

ಹಸಿರು ಕ್ರಾಂತಿಯ ಮೂಲಕ ಆಹಾರ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿ ಮುಂದಿನ ಹತ್ತು ವರ್ಷಗಳಿಗಾಗುವಷ್ಟು ಆಹಾರ ಸಂಗ್ರಹಣಾ ಸಾಮರ್ಥ್ಯವನ್ನು ನಮ್ಮ ದೇಶ ಹೊಂದಿದೆ. ದೇಶದಾದ್ಯಂತ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಕೃಷಿಗೆ ಆದ್ಯತೆಯನ್ನು ನೀಡಲಾಗಿದೆ. 1947ರ ಸುಮಾರಿಗೆ 549 ಇದ್ದ ತಲಾ ಆದಾಯ ಇಂದು 1.50 ಲಕ್ಷದಷ್ಟಾಗಿದೆ. ರಾಷ್ಟ್ರೀಯ ಹೆದ್ದಾರಿ ಕೇವಲ 21 ಸಾವಿರ ಕಿ.ಮೀ ಇತ್ತು. ಇಂದು 1.40 ಲಕ್ಷ ಸಾವಿರ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಈ ರಾಷ್ಟ್ರ ಹೊಂದಿದೆ ಎಂದರು.

ರಾಷ್ಟ್ರಕ್ಕೆ ನಾವೇನು ಕೊಡುಗೆ ನೀಡಬಹುದು ಎಂಬುದಕ್ಕೆ ಸಿದ್ಧಗಂಗಾ ಮಠ ಉದಾಹರಣೆಯಾಗಿದೆ. ಪೂಜ್ಯ ಶಿವಕುಮಾರ ಸ್ವಾಮೀಜಿಯವರು ಸಿದ್ಧಗಂಗಾ ಮಠದಲ್ಲಿ ಸಾವಿರಾರು ಮಂದಿಗೆ ಅನ್ನ, ಅಕ್ಷರ, ಜ್ಞಾನ ನೀಡಿದರು. ಈ ಮಾದರಿಯಲ್ಲಿ ಅನೇಕರು ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದ ಪರಿಣಾಮ ಸ್ವಾತಂತ್ರ್ಯ ಪೂರ್ವದಲ್ಲಿ ಶೇ. 27ರಷ್ಟು ಇದ್ದ ಸಾಕ್ಷರತೆ ಇಂದು ಶೇ. 84ರಷ್ಟು ಸಾಕ್ಷರತೆಯನ್ನು ಸಾಧಿಸಿದೆ ಎಂದರು.

     75ನೇ ಸ್ವಾತಂತ್ರ್ಯ ಸಂಭ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಮೃತ ಸರೋವರ ಕಾರ್ಯಕ್ರಮದಡಿ 15ಕ್ಕೂ ಹೆಚ್ಚಿನ ಕೆರೆಗಳನ್ನು ಪುನಶ್ಚೇತನ/ನಿರ್ಮಾಣಗೊಳಿಸಲಾಗಿದ್ದು, ಆಗಸ್ಟ್ 15ರಂದು ಅಂದರೆ ಇಂದು ಕೆರೆಗಳ ಅಂಗಳದಲ್ಲಿ ಅನೇಕ ಸ್ವಾತಂತ್ರ್ಯ ಯೋಧರನ್ನು ಕರೆದು ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಇತ್ತೀಚೆಗೆ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದ್ದು, ಹೆಚ್ಚು ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿರುತ್ತದೆ.  ಈ ಮಳೆಯಿಂದಾಗಿ ಹಲವಾರು ಮಂದಿ  ಪ್ರಾಣ ಕಳೆದುಕೊಂಡಿದ್ದು, ಬಹುತೇಕರು ಮನೆಗಳನ್ನು ಹಾಗೂ ಜಾನುವಾರುಗಳನ್ನೂ ಸಹ ಕಳೆದುಕೊಂಡಿರುತ್ತಾರೆ. ಈ ಕಠಿಣ ಪರಿಸ್ಥಿತಿಯನ್ನು ಜಿಲ್ಲಾಡಳಿತ ಯಶಸ್ವಿಯಾಗಿ ನಿಭಾಯಿಸಿದ್ದು, ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗುವ ಮೂಲಕ ಸಕಾಲದಲ್ಲಿ ಅರ್ಹರಿಗೆ ಪರಿಹಾರ ನೀಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿರುತ್ತಾರೆ. ಇದಕ್ಕಾಗಿ ಜಿಲ್ಲಾಡಳಿತವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ ಎಂದರು.

ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಸೇರಿದಂತೆ ಹಲವರು ಇದ್ದರು.

ಅಸ್ಪೃಶ್ಯತೆ ರಹಿತ ಸೌಹಾರ್ಧ ಭಾರತವನ್ನು ಕಟ್ಟಬೇಕಿದೆ : ಮೇಜರ್ ನಾರಾಯಣಪ್ಪ

Publicstory/prajayoga

ತುಮಕೂರು: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದ ಐಕ್ಯತೆ ಮತ್ತು ಸಮಗ್ರತೆ ಉಳಿಯುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಅಸಮಾನತೆ, ಅಸ್ಪೃಷ್ಯತೆ ರಹಿತ, ಸೌಹಾರ್ಧ ಭಾರತವನ್ನು ಕಟ್ಟಬೇಕಿದೆ ಎಂದು ಸರ್ವೋದಯ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮೇಜರ್ ಎಚ್.ನಾರಾಯಣಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ವಿಜಯನಗರ ಸರ್ವೋದರ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆವತಿಯಿಂದ ಆಯೋಜಿಸಿದ್ದ 75ನೇ ಸ್ವಾತಂತ್ರ ದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವವಂದನೆ ಸ್ವೀಕರಿಸಿ ಮಾತನಾಡಿದ ಅವರು, ಹಲವಾರು, ಭಾಷೆ,ಜಾತಿ, ಧರ್ಮಗಳ ಸಮ್ಮಿಲನವಾಗಿರುವ ಭಾರತ ಮತ್ತಷ್ಟು ಉಜ್ವಲ ಭವಿಷ್ಯ ಕಾಣಬೇಕಾದರೆ, ಭಾರತೀಯರೆಲ್ಲರೂ ಒಂದೇ ಎಂಬ ಭಾವನೆ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಮೂಡುವಂತೆ ಮಾಡಬೇಕಿದೆ ಎಂದರು.
ಇಂದು ಇಡೀ ದೇಶವೇ ಭಾರತದ ಸ್ವಾತಂತ್ರ ದಿನದ ಅಮೃತ ಮಹೋತ್ಸವದ ಆಚರಣೆಯಲ್ಲಿ ತೊಡಗಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಸುದೈವ ಎಂದು ನಾನು ಭಾವಿಸಿದ್ದೇನೆ. ದೇಶದ ಸ್ವಾತಂತ್ರಕ್ಕಾಗಿ ಒಟ್ಟಾರೆ ದೇಶದ ಶೇ5ರಷ್ಟು ಜನ ಮಾತ್ರ ಹೋರಾಟ ನಡೆಸಿದ್ದಾರೆ. ಉಳಿದ ಶೇ95ರಷ್ಟು ಜನ ಅದರ ಫಲವನ್ನು ಅನುಭವಿಸುತ್ತಿದ್ದೇವೆ. ಹಾಗಾಗಿ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಹಿಂಸೆಯನ್ನು ತ್ಯಜಿಸಿ, ಪರಿವರ್ತನೆಯ ಕಡೆಗೆ ನಾವೆಲ್ಲರೂ ಹೆಜ್ಜೆ ಇಡಬೇಕಾಗಿದೆ ಎಂದು ಮೇಜರ್ ನಾರಾಯಣಪ್ಪ ತಿಳಿದರು.

ಸರ್ವೋದಯ ಕಾಲೇಜಿನ ನನ್ನ 35 ವರ್ಷಗಳ ಸೇವೆ ಎಂದಿಗೂ ಮರೆಯಲಾರೆ, ಜನರಲ್ ಕಾರ್ಯಪ್ಪ ನಮ್ಮ ಸಂಸ್ಥೆಯ ಎನ್.ಸಿ.ಸಿ.ತಂಡ ಕಟ್ಟಲು ಚಾಲನೆ ನೀಡಿದರು. ಅಂದಿನಿಂದ ಹಂತ ಹಂತವಾಗಿ ಉತ್ತಮ ಕಾಲೇಜಾಗಿ ಬೆಳೆದು ಬಂದಿದೆ. ಹಿರಿಯ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಆದ ಸೀತಾರಾಮ್ ಅವರು ತಾವು ಬೋಧನೆ ಮಾಡುವ ವಿಷಯದ ಜೊತೆಗೆ, ಮಕ್ಕಳಲ್ಲಿ ದೇಶ ಪ್ರೇಮ, ಪರಿಸರ ಪ್ರೇಮ ಬೆಳೆಸಲು ಹಗಲಿರುಳು ಶ್ರಮಿಸಿದ್ದಾರೆ. ಸರ್ವೋದಯ ಸಂಸ್ಥೆಯ ಸದಸ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಮೇಜರ್ ನಾರಾಯಣಪ್ಪ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಜಗದೀಶ್ ಮಾತನಾಡಿ, ನಾವೆಲ್ಲರೂ 75ನೇ ವರ್ಷದ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಆಚರಿಸುತಿದ್ದೇವೆ.ಆದರೆ ಇದುವರೆಗಿನ ಭಾರತದ ಸಾಧನೆ ಸಾಲದು, ದುಡಿಯುವ ಕೈಗಳಿಗೆ, ಅದರಲ್ಲಿಯೂ ಯುವಜನರಿಗೆ ಉದ್ಯೋಗ ದೊರಕಿಸುವಂತಹ ಗುರುತರ ಜವಾಬ್ದಾರಿಯನ್ನು ಸರ್ಕಾರಗಳು ಕೈಗೊಳ್ಳಬೇಕಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಯುವ ಅಮೇರಿಕಾ ತನ್ನ ಈ ಸಾಧನೆಗೆ 150ವರ್ಷ ತೆಗೆದುಕೊಂಡಿದೆ. ಆದರೆ ಭಾರತ 75ನೇ ವರ್ಷದಲ್ಲಿಯೇ ವಿಶ್ವದ 5ನೇ ಅರ್ಥಿಕ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಇದಕ್ಕೆ ಈ ಹಿಂದೆ ಆಳ್ವಿಕೆ ನಡೆಸಿದ ಎಲ್ಲ ಮಹನೀಯರು ಕಾರಣ. ಅವರೆಲ್ಲರನ್ನು ನಾವು ಸ್ಮರಿಸಬೇಕಿದೆ. ವಿಶ್ವದ ನಂಬರ್ 1 ಅರ್ಥಿಕ ಶಕ್ತಿಯಾಗಿ ಭಾರತವನ್ನು ಬೆಳೆಸಲು ನಾವೆಲ್ಲರೂ ಕಾಯಾ, ವಾಚಾ, ಮನಸ್ಸಾ ಶ್ರಮಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಸೇನಾ ಮೆಡಲ್ ಪುರಸ್ಕೃತರಾದ ಹವಾಲ್ದಾರ್ ಎಂ.ಸಾಧಿಕ್ ಅವರನ್ನು ಸಂಸ್ಥೆಯ ವತಿಯಿಂದ ಹೃಪೂರ್ವಕವಾಗಿ ಅಭಿನಂದಿಸಲಾಯಿತು.75ನೇ ಸ್ವಾತಂತ್ರದ ಅಮೃತಮಹೋತ್ಸವ ಕಾರ್ಯಕ್ರಮದ ಪಥಸಂಚಲನ ಪೇರೆಡ್‌ನಲ್ಲಿ ಪಾಲ್ಗೊಂಡಿದ್ದ ಸರ್ವೊದಯ ವಿದ್ಯಾಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ 18ತಂಡಗಳಿಗೆ  ಬಹುಮಾನ ವಿತರಿಸಲಾಯಿತು. ಪಥಸಂಚಲನದ ನೇತೃತ್ವವನ್ನು ಎನ್.ಸಿ.ಸಿ.ಜೂನಿಯರ್ ಅಂಡರ್ ಅಫೀಸರ್ ಸೂರ್ಯ ವಹಿಸಿದ್ದರು.

ವೇದಿಕೆಯಲ್ಲಿ ಸರ್ವೋದಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಸೀತಾರಾಮ್, ಜಂಟಿ ಕಾರ್ಯದರ್ಶಿ ಕೆ.ವಿ.ಸುಬ್ಬರಾವ್, ಸಂಸ್ಥೆಯ ನಿರ್ದೇಶಕರಾದ ಕೆ.ಎಸ್.ಚಂದ್ರಶೇಖರ್, ಸಿ.ವಿ.ಕೇಶವಮೂರ್ತಿ, ವರದರಾಜ ಪೈ, ಶಿಕ್ಷಕರಾದ ನಾಗರಾಜರಾವ್, ಶಂಕರಿ ಕಾಮತ್, ಜಿ.ಶ್ರೀನಿವಾಸಮೂರ್ತಿ, ವಿ.ಎಸ್.ಕಾಮಾಕ್ಷಿ,ನಾಗೇಶ್, ಗಾಯಿತ್ರಿ, ಸವಿತ, ಶ್ರೀಹರ್ಷ ಹಾಗೂ ಎನ್.ಸಿ.ಸಿ.ಅಧಿಕಾರಿ ಪ್ರದೀಪ್ ಉಪಸ್ಥಿತರಿದ್ದರು.

ಸ್ವಾತಂತ್ರ್ಯ ಹೋರಾಟದ ಆಶಯಗಳಿಗನುಗುಣವಾಗಿ ನಡೆದುಕೊಳ್ಳೋಣ

Publicstory/prajayoga

ತುಮಕೂರು: ಇಂದು ಇಡೀ ವಿಶ್ವದಲ್ಲಿಯೇ ಭಾರತದ 75 ನೇ ಸ್ವಾತಂತ್ರ ದಿನದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ಉತ್ಸಾಹ ಮತ್ತಷ್ಟು ಇಮ್ಮಡಿಗೊಳ್ಳಬೇಕಾದರೆ ನಾವೆಲ್ಲರೂ ಸ್ವಾತಂತ್ರ ಹೋರಾಟಗಾರರ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದೆ ಎಂದು  ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ತಿಳಿಸಿದರು.

ನಗರದ ಬಟವಾಡಿಯಲ್ಲಿರುವ ಸ್ಪಂದನ ಬುದ್ಧಿಮಾಂಧ್ಯ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಸಿಹಿ ಹಂಚುವ ಮೂಲಕ ವಿಭಿನ್ನವಾಗಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿ ಮಾತನಾಡಿದರು.

ಭಾರತದ ಸಂವಿಧಾನದಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಘೋಷ ವಾಕ್ಯವಿದೆ. ಆದರೆ ದೇಶದ ನೈಸರ್ಗಿಕ ಸಂಪತ್ತಾಗಲಿ, ಅರ್ಥಿಕ ಸಂಪತ್ತಿನಲ್ಲಾಗಲಿ ತಳ ಸಮುದಾಯಗಳು ಪಾಲು ಪಡೆಯಲು ಇಂದಿಗೂ ಸಾಧ್ಯವಾಗಿಲ್ಲ. ಮೀಸಲಾತಿಯನ್ನು ಭೀಕ್ಷೆ ಎಂಬಂತೆ ಕೆಲವರು ಭಾವಿಸಿ, ಅದರಲ್ಲಿ ಪಾಲು ಪಡೆಯಲು ನಾ ಮುಂದು, ತಾ ಮುಂದು ಎಂದು ಮುಗಿ ಬೀಳುತ್ತಿದ್ದಾರೆ. ಮೀಸಲಾತಿ ಎಂಬುದು ಬಡತನ ನಿರ್ಮೂಲನಾ ಯೋಜನೆಯಲ್ಲ. ಅದು ತಲತಲಾಂತರದಿಂದ ಶೋಷಿತ ಸಮುದಾಯಗಳು ಅನುಭವಿಸಿಕೊಂಡಿದ್ದ ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಸಾಮಾಜಿಕ ಸಮಾನತೆಗಾಗಿ ತಂದ ಆಸ್ತç. ಇದನ್ನು ಯುವಜನತೆ ಅರ್ಥ ಮಾಡಿಕೊಂಡು ಮುನ್ನೆಡೆಯಬೇಕಾಗಿದೆ.ದಲಿತ ಯುವಕನೊಬ್ಬ ಕುಡಿಯುವ ನೀರಿನ ಪಾತ್ರೆ ಮುಟ್ಟಿದನೆಂಬ ಕಾರಣಕ್ಕೆ ಶಿಕ್ಷಕರೇ ಹೊಡೆದು ಕೊಂದಿರುವ ಘಟನೆ ನಮ್ಮ ಮುಂದಿದೆ.ಇAತಹ ಘಟನೆಗಳು ಮರುಕಳಿಸಬಾರದೆಂದರೆ ನಾವೆಲ್ಲರೂ ಒಗ್ಗೂಡಿ, ಜಾತಿಯ ವಿಷ ಬೀಜ ಬಿತ್ತುವ ವ್ಯಕ್ತಿಗಳ ವಿರುದ್ದ ಹೋರಾಡಬೇಕಿದೆ ಎಂದರು.

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಮಧುಸೂಧನ್ ಮಾತನಾಡಿ, ಹಲವಾರು ಗಣ್ಯರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ನಮಗೆ ಲಭಿಸಿದೆ. ವ್ಯಾಪಾರಕ್ಕಾಗಿ ಬಂದ ವಿದೇಶಿ ಕಂಪನಿಗಳು ನಮ್ಮಲ್ಲಿರುವ ಒಡಕನ್ನೇ ಬಂಡವಾಳ ಮಾಡಿಕೊಂಡು, ದೇಶವನ್ನು ಇಂಚಿಂಚು ಕಬಳಿಸಿ, ದೇಶದ ಪ್ರಾಕೃತಿಕ ಸಂಪತ್ತನ್ನು ನಾಶ ಮಾಡಿದ್ದಲ್ಲದೆ, ಇಡೀ ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಾಗ ಮಾಡಿ, ನೆಮ್ಮದಿ ಇಲ್ಲದಂತೆ ಮಾಡಿದರು. ಆದರೆ ಭಾರತ ಇಂದು ವಿಶ್ವದ ಐದನೇ ಅತಿ ದೊಡ್ಡ ಅರ್ಥಿಕ ಶಕ್ತಿಯಾಗಿದೆ. ಇದರ ಲಾಭ ಸಾಮಾನ್ಯ ಜನತೆಗೆ ತಲುಪಿದಾಗ ಮಾತ್ರ ನಿಜವಾದ ಸ್ವಾತಂತ್ರದ ಕನಸು ನನಸಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ನಗರ ಅಧ್ಯಕ್ಷ ಮನೋಜ್ ಟಿ.,ದಲಿತ ಕ್ರಿಯಾಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್.ಸುರೇಶ್, ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಶಾರು, ನಗರ ಗೌರವಾಧ್ಯಕ್ಷ ಗಂಗಾಧರ್ ಜಿ.ಆರ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಎನ್.ಶ್ರೀನಿವಾಸ್,ಗುರುಪ್ರಸಾದ್.ಟಿ.ಆರ್,ದಿವಾಕರ್,ಸ್ಪಂದನ ಬುದ್ದಿ ಮಾಂಧ್ಯ ಮಕ್ಕಳ ಸನಿವಾಸ ಶಾಲೆಯ ಶಿಕ್ಷಕರಾದ ಸುಜಾತ ಜಿ.ಆರ್, ಮಹಾಂತೇಶ್ ಎಂ, ನಟರಾಜ್.ಟಿ, ತೇಜಾನಂದ.ಎನ್., ನರಸಿಂಹರಾಜು ಟಿ.ಎನ್, ಪವಿತ್ರ ಎಸ್, ನಳಿನ ಕೆ.ಎಸ್, ಲಕ್ಷ್ಮಮ್ಮ ಜಿ.ಎಚ್ ಮತ್ತಿತರರು ಉಪಸ್ಥಿತರಿದ್ದರು.

ಸ್ಮಾರಕವಾಗಬೇಕಿದ್ದ ಗಾಂಧೀಜಿ ಉಳಿದ ಮನೆ ಈಗ ಪಾಳು!

Publicstory/prajayoga

ವರದಿ, ಮಿಥುನ್ ತಿಪಟೂರು

ತಿಪಟೂರು : ಗಾಂಧೀಜಿ ಎಂದರೆ ಸ್ವಚ್ಚತೆ, ಸತ್ಯ ಅಹಿಂಸೆಗೆ ಹೆಸರುವಾಸಿ. ಈಗಿನ ಕೇಂದ್ರ ಸರ್ಕಾರದ ಸ್ವಚ್ಛಭಾರತ ಅಭಿಯಾನಕ್ಕೂ ಕೂಡ ಗಾಂಧೀಜಿಯ ಕನ್ನಡಕವೇ ಮುಖ್ಯವಾಗಿದೆ. ಆದರೆ ತಿಪಟೂರಿನಲ್ಲಿ ಗಾಂಧೀಜಿ ಉಳಿದಿದ್ದ ಮನೆಮಾತ್ರ ಈಗ ಶೌಚಾಲಯಕ್ಕಿಂತ ಕೊಳಕಾಗಿದ್ದು, ಪಾಳು ಬಿದ್ದಿದೆ.

ನಗರದ ಹಳೆಯ ಬಿ.ಡಿ.ಓ ಕಚೇರಿ ಈಗಿನ ತಾಲೂಕು ಪಂಚಾಯ್ತಿಯ ಹಿಂಭಾಗದಲ್ಲಿರುವ ಹಾಳದ ಮನೆಯೇಲ್ಲಿಯೇ ಗಾಂಧೀಜಿ ತಂಗಿದ್ದರು. ತಿಪಟೂರಿಗೆ 1927 ಆಗಸ್ಟ್ 21ರಂದು ಗಾಂಧೀಜಿ ಈಗ ಇರುವ ಮನೆಯಲ್ಲೆ ಉಳಿದುಕೊಂಡು ಬೆಳಿಗ್ಗೆ ಇಲ್ಲಿಯೇ ಇದ್ದ ಸೇದುವ ಬಾವಿಯಲ್ಲಿ ನೀರನ್ನು ಸೇದಿ ಸ್ನಾನವನ್ನು ಮಾಡಿದ್ದ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದೆ.  ಮಹಾತ್ಮ ಗಾಂಧೀಜಿ ಸ್ವತಂತ್ರ್ಯ ಸಂಗ್ರಾಮದಲ್ಲಿ ಭಾಗಹಿಸುವಂತೆ ಸ್ಥಳೀಯರಿಗೆ ಕರೆನೀಡುವುದು, ದೇಶದ ಬಗ್ಗೆ ಅಭಿಮಾನ ಮೂಡಿಸುವ ಸಲುವಾಗಿ ನಗರಕ್ಕೆ ಬಂದಿದ್ದ ಗಾಂಧಿಜಿ ಈಗಿರುವ ಜಯದೇವ ಹಾಸೆಟಲ್‌ನ ಆವರಣದಲ್ಲಿ ಭಾಷಣಮಾಡಿದ್ದು ಇತಿಹಾಸದಲ್ಲಿದೆ.

ಸ್ವಚ್ಛಭಾರತದ ರಾಯಭಾರಿ ಮನೆ ಮುಂದೆಯೇ ಕಸ ಸಂಗ್ರಹ :

ಗಾಂಧೀಜಿ ತಂಗಿದ್ದ ಮನೆ ಮುಂದಿನ ಪೀಳಿಗೆಗೆ ಇದೊಂದು ಇತಿಹಾಸವನ್ನು ತಿಳಿಸುವ ಸ್ಮಾರಕವಾಗುತ್ತದೆ ಎಂದು ತಿಳಿಯದ ಅಧಿಕಾರಿಗಳು ಆ ಮನೆಯ ಮುಂದಯೇ ಕಸ ಸಂಗ್ರಹಣೆಯ ತೊಟ್ಟಿಯನ್ನು ನಿರ್ಮಿಸಿ ಅಲ್ಲಿಯೇ ಕಸವನ್ನು ವಿಂಗಡಿಸುವ ಕಾರ್ಯವನ್ನು ಮಾಡುತ್ತಿರುವುದು ವಿಪರ್ಯಾಸ. ಕೆಲವು ದಿನಗಳ ಹಿಂದೆ ಇದೇ ಸ್ಮಾರಕದ ಮುಂದೆಯೇ ಜನರು ಶೌಚಾಲಯವನ್ನಾಗಿ ಉಪಯೋಗಿಸುವ ಸ್ಥಿತಿಗೆ ಹೋಗಿದ್ದರು. ಆದರೆ ಕೆಲ ದಿನಗಳ ಹಿಂದಿನಿಂದ ಇಲ್ಲಿನ ಆವರಣದ ಗೇಟಿಗೆ ಬೀಗ ಹಾಕಿರುವುದರಿಂದ ಜನರು ಈ ಕಡೆ ಬರುತ್ತಿಲ್ಲ.

ಸ್ವಾತಂತ್ರ್ಯ ಹೋರಾಟಗಾರರ ವೃತ್ತವೀಗ ಬಾರ್ ವೃತ್ತ :

ನಗರದ ಸಿಂಗ್ರಿ ನಂಜಪ್ಪ ವೃತ್ತದಿಂದ ಹೊರಟ ರಸ್ತೆ ರೈಲ್ವೆ ನಿಲ್ದಾಣವನ್ನು ಸೇರುವ ಸ್ಥಳದಲ್ಲಿ ಸ್ವತಂತ್ರ ಹೋರಾಟಗಾರರ ವೃತ್ತವೆಂದು ಫಲಕವಿದೆ. ಆದರೆ ಇದೇ ಸ್ಥಳವೀಗ ಯಾವಾಗಲು ಮದ್ಯಪಾನ ಪ್ರಿಯರ ವೃತ್ತವಾಗಿ ಮಾರ್ಪಟ್ಟಿದ್ದು, ಸ್ಥಳವು ಗಲೀಜಿನಿಂದ ಕೂಡಿದ್ದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನವಲ್ಲದೇ ಮತ್ತಿನ್ನೇನು ಅಲ್ಲ. ವೃತ್ತದ ಹೆಸರನ್ನಾದರು ಮಾರ್ಪಡಿಸಿ ಇಲ್ಲ ಸ್ವತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಿಸಲು ಸ್ಥಳವನ್ನಾದರು ಸ್ವಚ್ಚಗೊಳಿಸಬೇಕಿದೆ.

ಸ್ಮಾರಕ ಮಾಡಿ ಗಾಂಧೀಜಿ ಕಲ್ಪನೆ ತಿಳಿಸಿ :

ಗಾಂಧೀಜಿ ಇದ್ದರು ಎಂದು ಪೋಟೋ ನೋಡಿ ತಿಳಿದುಕೊಳ್ಳುವ ಈ ಸಮಯದಲ್ಲಿ ಗಾಂಧೀಜಿ ಉಳಿದಿದ್ರು. ಅವರ ಇತಿಹಾಸ, ಸಾಧನೆ ಹಾಗೂ ಚಳವಳಿ ಪೋಟೋ, ಅವರಿಗೆ ಸಂಭಂದಿಸಿದ ಗ್ರಂಥಗಳನ್ನು ಇಟ್ಟು ಒಂದು ಸುಂದರ ಗ್ರಂಥಾಲಯ ಅಥವಾ ವಸ್ತು ಸಂಗ್ರಹಾಲಯವನ್ನಾಗಿ ಮಾಡಿ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಸ್ಮಾರಕವನ್ನಾಗಿ ಮಾಡಬೇಕಾದ ಒತ್ತಾಸೆ ನಮ್ಮ ಜನಪ್ರತಿನಿಧಿಗಳ ಮೇಲೆ ಇದೆ. ಅದನ್ನು ನಮ್ಮ ಅಧಿಕಾರಿಗಳು ಎತ್ತ ಸಾಗಿಸುತ್ತಾರೆ ಎನ್ನುವುದನ್ನು ಕಾಯ್ದು ನೋಡಬೇಕಾಗಿದೆ.

ಗಾಂಧಿ ಮನೆಯನ್ನು ಸ್ಮರಣಾರ್ಥ ಮಾಡುವ ಕನಸು

ತಿಪಟೂರಿನಲ್ಲಿ 1927 ಆ. 21ರಂದು ಈ ಮನೆಯಲ್ಲಿ ಉಳಿದುಕೊಂಡಿದ್ದರು.  ಈಗ ಮನೆಯ ಮುಂದೆ ಕಸದ ತೊಟ್ಟಿಯಿರುವದನ್ನು ಕಂಡು ಬೇಸರವಾಯಿತು. ಗಾಂಧೀಜಿ ಸ್ವಚ್ಚತೆಗೆ ಆದ್ಯತೆ ಕೊಟ್ಟವರು. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ಲಾಂಛನ ಕೂಡ ಗಾಂಧೀಜಿಯ ಕನ್ನಡಕವೇ ಆಗಿದೆ. ಆದರೆ ತಿಪಟೂರು ನಗರದಲ್ಲಿ ಗಾಂಧೀಜಿ ಉಳಿದಿದ್ದ ಮನೆ ಮಾತ್ರ ಹಾಳಾಗಿದ್ದು,  ಮನೆಯ ಮುಂದೆ ಕಸದ ತೊಟ್ಟಿಯನ್ನು ನಿರ್ಮಿಸಲಾಗಿದೆ. ಗಾಂಧೀಜಿಯವರು ಉಳಿದಿದ್ದ ಈ ಮನೆಯನ್ನು  ಸ್ಮರಣಾರ್ಥವನ್ನಾಗಿ ನಿರ್ಮಾಣ ಮಾಡುವ  ಆಸೆಯಿದೆ.

ಕೆ.ಷಡಕ್ಷರಿ, ಮಾಜಿ ಶಾಸಕ, ತಿಪಟೂರು

_______________________________________

ಗಾಂಧಿಗೆ ತಿಜೋರಿಯಾಗಿ ಮನೆ ಕಾಣಿಕೆ

ಗಾಂಧೀಜಿಗೆ ತಿಜೋರಿ ಕೊಟ್ಟಿದ್ದರೂ
ತಿಪಟೂರಿಗೆ ಗಾಂಧೀಜಿ ಬಂದಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಸಂಘಟನೆಗಾಗಿ ಅವರು ಕೈನಲ್ಲಿ ನಗದನ್ನು ಹಿಡಿದು ಓಡಾಡುವುದು ಕಷ್ಟವೆಂದು ಸ್ಥಳೀಯ ವರ್ತಕರೊಬ್ಬರು ದೇಣಿಗೆಯಾಗಿ ಈ ಮನೆಯನ್ನು ತಿಜೋರಿಯಾಗಿ ನೀಡದ್ದರಂತೆ, ಆ ತಿಜೋರಿಯನ್ನು ಇಲ್ಲಿಯೇ ಹರಾಜು ಹಾಕಲಾಗಿ ಮತ್ತೊಬ್ಬ ವರ್ತಕರು ಅದನ್ನು 90ರೂ ನೀಡಿ ತೆಗೆದುಕೊಂಡರಂತೆ ಎಂದು ಸ್ಥಳೀಯವಾಗಿ ಒಂದು ಕಥೆಯು ಇದೆ.

ಇತಿಹಾಸ ಪ್ರಸಿದ್ಧ ಆಂಜನೇಯ ದೇವಸ್ಥಾನದಲ್ಲಿ ಹುಂಡಿ ಕಳವು

0

Public story/prajayoga
ತುಮಕೂರು ಗ್ರಾಮಾಂತರದ ಸ್ವಾಂದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಅಜ್ಜಪ್ಪನಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಭಾನುವಾರ ರಾತ್ರಿ ಕಳ್ಳರು ಬೀಗ ಹೊಡೆದು ಹುಂಡಿ ಕಳವು ಮಾಡಿದ್ದಾರೆ.

ದೇಗುಲದಲ್ಲಿದ್ದ ಹುಂಡಿ‌ ಕದ್ದ ಕಳ್ಳರು, ದೇಗುಲದ ಹೊರಗೆ ತೆಗೆದುಕೊಂಡು ಹೋಗಿ,ಹುಂಡಿಯಲ್ಲಿದ್ದ ರೂ. 2-3 ಲಕ್ಷ ಹಣ ಕದ್ದು,ಖಾಲಿ ಹುಂಡಿಯನ್ನು ಪೊದೆಯಲ್ಲಿ ಬಿಸಾಕಿ ಹೋಗಿದ್ದಾರೆ.

ಈ ಹಿಂದೆ ಮೂರು ಭಾರಿ ಇದೇ ದೇಗುಲದಲ್ಲಿ ಹುಂಡಿ ಕಳವು ಮಾಡಲಾಗಿತ್ತು,ನಾಲ್ಕನೇ ಭಾರಿ ಹುಂಡಿ ಕಳವು ಮಾಡಲಾಗಿದೆ.

ತಾಲೂಕು ಆಡಳಿತದ ನಿರ್ಲಕ್ಷ್ಯದಿಂದಾಗಿ ದೇಗುಲದಲ್ಲಿ ಪದೇ,ಪದೇ ಹುಂಡಿ ಕಳವು ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೂಡಲೇ ತಹಸೀಲ್ದಾರ್ ಗಮನವಹಿಸಿ ದೇಗುಲದಲ್ಲಿ ನಿರಂತರವಾಗಿ ಹುಂಡಿ ಕಳ್ಳತನವಾಗುತ್ತಿರುವುದನ್ನು ತಪ್ಪಿಸಲು ಕ್ರಮ ಜರುಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತುಮಕೂರು ಸ್ವಾತಂತ್ರ್ಯ ಚಳುವಳಿಯಲ್ಲಿ ಕಣ್ಮಣಿಗಳ ಗುರುತು


Publicstory/prajayoga

ಸಿದ್ದು ಬಿ.ಎಸ್.ಸೂರನಹಳ್ಳಿ, ತಿಪಟೂರು

ಸ್ವಾತಂತ್ರ್ಯ ಹೋರಾಟದಲ್ಲಿ ತುಮಕೂರು ಜಿಲ್ಲೆಯು ತನ್ನ ಅಮೂಲ್ಯವಾದ ಕೊಡುಗೆ ಸಲ್ಲಿಸಿ, ತನ್ನದೇ ಆದ ಹೆಸರನ್ನು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯುವಂತೆ ಮಾಡಿದೆ.
ಮಹಾತ್ಮಗಾಂಧಿ ಹರಿಜನೋದ್ದಾರ ನಿಧಿಸಂಗ್ರಹಕ್ಕಾಗಿ ತುಮಕೂರಿಗೆ ಬಂದಿದ್ದ ವೇಳೆ,  ಅವರ ದಿವ್ಯ ಸ್ಪೂರ್ತಿ ಅನೇಕ ಉದಯೋನ್ಮುಖ ವೀರರ ಸೃಷ್ಟಿಗೆ ಬುನಾದಿಯಾಯಿತು. ಖಾದಿ ಪ್ರಚಾರ, ಹರಿಜನೋದ್ದಾರ, ಪಾನನಿರೋಧಗಳಿಗಾಗಿ ಜಿಲ್ಲೆಯ ಜನತೆ ಕಂಕಣ ತೊಟ್ಟರು. ಈ ಹಿನ್ನಲೆಯಲ್ಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ತ್ಯಾಗ ಬಲಿದಾನಗೈದ  ತಿಪಟೂರು, ಮಧುಗಿರಿ, ಕೊರಟಗೆರೆ, ಪಾವಗಡ, ತುರುವೇಕೆರೆ, ಗುಬ್ಬಿ, ಶಿರಾ ,ಕುಣಿಗಲ್, ಚಿ. ನಾ ಹಳ್ಳಿ ತಾಲೂಕಿನ ಕೆಚ್ಚೆದೆಯ ದೇಶಾಭಿಮಾನಿಗಳು ಮತ್ತು ದೇಶ ಪ್ರೇಮಿಗಳ ದಂಡು ಜಿಲ್ಲೆಯ ನವ ಪೀಳಿಗೆಗೆ ಪುರಾವೆಯಾಗಿ ದಕ್ಕಿರುವುದು ನಮ್ಮ ಹೆಮ್ಮೆ.

ಸ್ವಾತಂತ್ರ್ಯ ಚಳುವಳಿಯಲ್ಲಿ ತಿಪಟೂರು ತಾಲೂಕಿನಿಂದ ಮೊದಲು ಕೇಳಿಬರುವ ಹೆಸರೇ ಅನಿವಾಳದ ನಂಜಪ್ಪ  ಮತ್ತು ಎಸ್.ಆರ್.ಮಲ್ಲಪ್ಪ.

ಅನಿವಾಳದ ನಂಜಪ್ಪನವರು ಕೃಷಿ ಮತ್ತು ವ್ಯಾಪಾರದ ಉದ್ಯಮಿಳಾಗಿದ್ದು, ತಮ್ಮ 54ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಚಳುವಳಿಯ ಅಂಗವಾಗಿ ಪಿಕೇಟಿಂಗ್ ಸತ್ಯಾಗ್ರಹ ನಡೆಸಿದ್ದರು ಹಾಗೂ ಸತ್ಯಾಗ್ರಹ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ್ದರಿಂದ ದಸ್ತಗಿರಿ ಮಾಡಲ್ಪಟ್ಟು ಬೆಂಗಳೂರು ಜೈಲಿನಲ್ಲಿ 7ತಿಂಗಳು 2ದಿನ ಕಠಿಣ ಶಿಕ್ಷೆ ಅನುಭವಿಸಿದ್ದರು. ಎಸ್.ಆರ್.ಮಲ್ಲಪ್ಪನವರು ಅರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಮತ್ತು ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿದ್ದ ಮುಂಚೂಣಿ ಹೆಸರು ಇವರದ್ದು. ಮೈಸೂರು, ಹಾಸನ, ತುಮಕೂರು ಮತ್ತು ತಿಪಟೂರು ಜೈಲುಗಳಲ್ಲಿ ಒಟ್ಟು 9ತಿಂಗಳು ಶಿಕ್ಷೆ ಅನುಭವಿಸಿದ್ದಲ್ಲದೆ 70 ರೂ. ದಂಡಕೊಡಲಾಗಾದೆ ಮತ್ತೆ 4 ತಿಂಗಳು 17 ದಿನ ತುರಂಗವಾಸ ಅನುಭವಿಸಿದರು.

ಮಧುಗಿರಿಯ ಮಾಲಿ ಮರಿಯಪ್ಪ ಮತ್ತು ಚಿಕ್ಕದಾಳವಟ್ಟದ ದಾಳಪ್ಪನವರ ಮಕ್ಕಳಾದ ಖಾದ್ರಪ್ಪ, ಟಿ.ಆರ್.ಚನ್ನಪ್ಪ

ಮಧುಗಿರಿಯ ಪ್ರಸಿದ್ಧ ವಕೀಲರಾದ ಮಾಲಿ ಮರಿಯಪ್ಪ ತುಮಕೂರು ಜಿಲ್ಲೆಯ ಸ್ವಾತಂತ್ರ್ಯ ಚಳುವಳಿಗೆ ಜೀವದುಸಿರು, ಹೋರಾಟದ ಮುಂದಾಳು. ಅರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ, ಮೈಸೂರು ಚಲೋ ಚಳುವಳಿಗಳಲ್ಲಿ ಭಾಗವಹಿಸಿದ್ದವರು. 3 ಬಾರಿ ತುರಂಗವಾಸ ಅನುಭವಿಸಿದರು. ತುಮಕೂರು ಹಾಸನ ಮತ್ತು ಬೆಂಗಳೂರು ಸೆಂಟ್ರಲ್ ಜೈಲ್ಗಳಲ್ಲಿ 20 ತಿಂಗಳ ಶಿಕ್ಷೆ ಅನುಭವಿಸಿದ್ದರು. ಇವರು 1947ರಲ್ಲಿ ಮೈಸೂರು ರಾಜ್ಯಾಂಗ ರಚನಾ ಸಭೆಗೆ ಚುನಾವಣೆಗಳು ನಡೆದಾಗ ಅದ್ಭುತ ವಿಜಯಗಳಿಸಿ ಅದರ ಸದಸ್ಯರಾದರು. 1958ರಲ್ಲಿ ಬಿ ಡಿ. ಜತ್ತಿಯವರ ಮಂತ್ರಿಮಂಡಳ ರಚಿತವಾದಾಗ ಮಾಲಿ ಮರಿಯಪ್ಪನವರು ರಾಜ್ಯದ ಸಹಕಾರ ಸಣ್ಣಕೈಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದರು. 1958ರಲ್ಲಿ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದರು.

ಚಿಕ್ಕದಾಳವಟ್ಟದ ದಾಳಪ್ಪನವರ ಮಕ್ಕಳಾದ ಖಾದ್ರಪ್ಪನವರು 1939ರ ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿ, 4 ತಿಂಗಳ ಕಾಲ ಬೆಂಗಳೂರು, ಹಾಸನಗಳಲ್ಲಿ ಸೆರೆಮನೆ ವಾಸ ಅನುಭವಿಸಿದರು. ಇವರು ತಮ್ಮ ಮೇಲೆ ಹೇರಲ್ಪಟ್ಟ 75ರೂ.ಗಳ ದಂಡವನ್ನು ಕೊಡಲು ಒಪ್ಪದೆ ಮತ್ತೆ ಒಂದು ತಿಂಗಳ ಕಠಿಣ ಸಜಾ ಅನುಭವಿಸಿದರು. ಕೊರಟಗೆರೆ ತಾಲೂಕು ಹೊಸಹಳ್ಳಿ ಬಸವಾರಾಧ್ಯರು 62ನೇ ವಯಸ್ಸಿನಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಒಂದು ವರ್ಷ, ಒಂದು ತಿಂಗಳು ಕಠಿಣ ಶಿಕ್ಷೆ ಅನುಭವಿಸಿದ್ದರು.

ಟಿ.ಆರ್.ಚನ್ನಪ್ಪ ಇವರು ತೀತ ಗ್ರಾಮದವರು. ಧ್ವಜಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ದೆಹಲಿ ಚಲೋ, ಮೈಸೂರು ಚಲೋ ಚಳುವಳಿಗಳಲ್ಲಿ ಭಾಗವಹಿಸಿ, ಆಗಿನ ಸತ್ಯಾಗ್ರಹ ಯುಗದಲ್ಲಿ ಇವರು ಪ್ರಸಿದ್ಧ ಕ್ರಾಂತಿಕಾರರೆನಿಸಿದರು. ಮಧುಗಿರಿ, ತುಮಕೂರು, ಕೊರಟಗೆರೆ ಜೈಲುಗಳಲ್ಲಿ 3 ತಿಂಗಳು 19 ದಿನಗಳ ಶಿಕ್ಷೆ ಅನುಭವಿಸಿದರು. ಮಂತ್ರಿ ಚನ್ನಿಗರಾಮಯ್ಯ  ಕೊರಟಗೆರೆಯಲ್ಲಿ 1911ಲ್ಲಿ ಜನಿಸಿದ್ದು, ಕೃಷಿಕ ಮನೆತನದವರಾಗಿದ್ದರು.  1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ 1947ರ ಮೈಸೂರು ಜವಾಬ್ದಾರಿ ಸರ್ಕಾರಕ್ಕಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. ತುಮಕೂರು, ಬೆಂಗಳೂರು ಜೈಲುಗಳಲ್ಲಿ ಒಂದೂವರೆ ತಿಂಗಳ ಜೈಲು ಶಿಕ್ಷೆ ಅನುಭವಿಸಿದರು. 1938ರಲ್ಲಿ ಚುನಾವಣಾ ಸುಧಾರಣಾ ಆಯೋಗದ ಸದಸ್ಯರಾಗಿದ್ದರು. ಮೈಸೂರು ಲೆಜಿಸ್ಲೇಟಿವ್ ಸುಧಾರಣಾ ಕಮೀಷನ್ನಲ್ಲಿ ಸೇವೆ ಸಲ್ಲಿಸಿದ್ದರು. ತುರುವೇಕೆರೆಯ ಎಸ್.ಅನಂತರಾಮ ಅಯ್ಯಂಗಾರ್ ತಾಲೂಕು ಸಂಪಿಗೆ ಸ್ಥಳದವರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಬೆಂಗಳೂರು ಜೈಲಿನಲ್ಲಿ 3ತಿಂಗಳ ಕಾಲ ತುರಂಗವಾಸ ಅನುಭವಿಸಿದ್ದರು.

ಟಿ.ಸುಬ್ರಹ್ಮಣ್ಯಂ ತುರುವೇಕರೆಯ ತಾಳೇಕೆರೆಯ ಪ್ರಸಿದ್ಧ ವಕೀಲರಾಗಿದ್ದರು. 1922ರಿಂದಲೂ ನಡೆದ ಸ್ವಾತಂತ್ರ್ಯದ ಎಲ್ಲಾ ಹೋರಾಟದ ಸತ್ಯಾಗ್ರಹಗಳಲ್ಲೂ ಭಾಗವಹಿಸಿದ್ದಲ್ಲದೆ ಮುಖಂಡತ್ವವನ್ನೂ ವಹಿಸಿದ್ದರು. 1947ರಲ್ಲಿ ನಡೆದ ಜವಾಬ್ದಾರಿ ಸರ್ಕಾರದ ಹೋರಾಟವು ಫಲಕಾರಿಯಾಗುವವರೆಗೆ ಇವರ ಚಳುವಳಿ ನಿಲ್ಲಲಿಲ್ಲ. ಇವರು ಒಟ್ಟು 9 ಬಾರಿ ದಸ್ತಗಿರಿ ಮಾಡಲ್ಪಟ್ಟು 6 ವರ್ಷಗಳಿಗೂ ಮೇಲ್ಪಟ್ಟು ತುರಂಗವಾಸ ಅನುಭವಿಸಿದರು. ಬಿ.ಡಿ.ಜತ್ತಿ ಅವರ ಮಂತ್ರಿಮಂಡಳದಲ್ಲಿ ನ್ಯಾಯಾಂಗ, ಕಾರ್ಮಿಕ, ಸ್ಥಳೀಯ ಸರ್ಕಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಜಿ.ಎಚ್.ಆರ್. ದೇವರು ಗುಬ್ಬಿ ಸ್ಥಳದವರು. ಬಾಣದ ಚೆನ್ನಯ್ಯನವರ ಮಕ್ಕಳು. ಮೈಸೂರು ಚಲೋ ಚಳುವಳಿಯಲ್ಲಿ ಪಾಲ್ಗೊಂಡು ತುಮಕೂರು ಜೈಲಿನಲ್ಲಿ ಒಂದು ತಿಂಗಳು ತುರಂಗವಾಸ ಅನುಭವಿಸಿದರು. ಗಂಗಾಧರಪ್ಪನವರು ಗುಬ್ಬಿ ಕಲ್ಲೂರಿನ ರೈತರು. ಕ್ವಿಟ್ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಒಂದೂವರೆ ವರ್ಷ ಶಿಕ್ಷೆಯಾಗಿ ಮತ್ತೆ 2 ತಿಂಗಳ ಕಾಲ ಜೈಲು ಅನುಭವಿಸಿದರು. ಜಿ.ಹೆಚ್.ಗೋಪಾಲಯ್ಯ, ಪಾವಗಡದ ಗೂಲಪ್ಪ, ಪಿ.ರಾಮರಾವ್, ಶಿರಾ ತಾಲೂಕಿನ ಹುಣಸೇಹಳ್ಳಿಯ ಗೋವಿಂದಪ್ಪ ಹಳ್ಳಿಯ ಎಂ.ಎಸ್.ಹನುಮಂತರಾವ್, ಸಿ.ಆರ್.ಆದಿನಾರಾಯಣರಾವ್  ಹಾಗೂ ಕುಣಿಗಲ್ ತಾಲೂಕು ಹೋರಾಟಗಾರ ಕರಿಯಪ್ಪ, ಎಡೆಯೂರಿನ ಜಿ.ತಮ್ಮಣ್ಣ, ತುಮಕೂರು ತಾಲೂಕಿನವರಾದ ಎ.ಸಿ.ಪುಟ್ಟಣ್ಣ, ಕೆ.ಆರ್.ನರಸಿಂಹಯ್ಯಂಗಾರ್, ಬಿ.ಸಿ. ನಂಜುಂಡಯ್ಯನವರು ಹಾಗೂ ಟಿ.ಎಂ. ಮಹಂತಯ್ಯನವರದು ಸಾಮಾನ್ಯ ವರ್ಗದ ಕುಟುಂಬ ತುಮಕೂರು ನಗರದ ಮಂಡಿಪೇಟೆಯಲ್ಲಿ ಅವರ ತಂದೆಯವರು ಅಂಗಡಿ ವ್ಯಾಪಾರ ಮಾಡುತ್ತಿದ್ದರು. 8 ಜನ ಮಕ್ಕಳಲ್ಲಿ ಟಿ.ಎಂ.ಮಹಂತಯ್ಯನವರೇ ಹಿರಿಯ ಮಗ. ಎಸ್ಎಸ್ಎಲ್ಸಿ ವರಗೆ ಓದಿ ವ್ಯಾಪಾರದ ಜೊತೆಗೆ ಕಾಂಗ್ರೆಸ್, ಗಾಂಧೀಜಿ ಯವರ ವಿಚಾರಗಳ ಗುಂಗು 1938 ರಿಂದ ಹತ್ತಿಸಿಕೊಂಡರು . ಕೊನೆಗೆ 1942 ರಲ್ಲಿ ಚಳುವಳಿಯಲ್ಲಿ ತಂದೆ ತಾಯಿಗಳ ಅಸಮ್ಮತಿಯೊಂದಿಗೆ ಧುಮುಕಿದರು . ಇದರಿಂದಾಗಿ ತಂದೆಯವರ ವ್ಯಾಪಾರ ಕುಸಿದು , ಕಷ್ಟನಷ್ಟಗಳಿಗೆ ಗುರಿಯಾಯಿತು. ಆದರೂ ಶ್ರೀಯುತರು ಸ್ವಾತಂತ್ರ್ಯ ಕಾರ್ಯಚಟುವಟಿಕೆಯಿಂದ ಹಿಂದೆಗೆಯಲಿಲ್ಲ . ಮಧುಗಿರಿ ತಾಲೂಕಿನಲ್ಲಿ ದಸ್ತಗಿರಿಯಾಗಿ ನಾಲ್ಕೂವರೆ ತಿಂಗಳು ತುಮಕೂರು ಸಬ್ ಜೈಲು ಮತ್ತು ಬೆಂಗಳೂರು ಸೆಂಟ್ರಲ್ ಜೈಲಿನ ಕ್ವಾರಂಟೈನ್ನಲ್ಲಿ ವಾಸಮಾಡುವಾಗ ಅವರ ತಂದೆಯವರು ಕ್ಷಮಾಪಣೆ ಪತ್ರ ನೀಡಿ ಜೈಲಿನಿಂದ ಹೊರಬರುವಂತೆ ಸೂಚಿಸಿದರೂ ಸಮ್ಮತಿಸದೆ ಪೂರ್ಣ ಜೈಲುವಾಸ ಅನುಭವಿಸಿದ ದೇಶಭಕ್ತರು.

ಇನ್ನು ಮೊದಲಾದ ಟಿ.ಆರ್ ರೇವಣ್ಣ, ಎಸ್.ವಿ ಆಚಾರ್ಯ, ಎಂ ನೀಲಕಂಠರಾಯ, ಕೆ.ಎಲ್ ನರಸಿಂಹಯ್ಯ, ಗಂಗಾಧರಯ್ಯ, ಜಿ.ಆರ್ ಚಂಗಲಯ್ಯ, ಕೆ.ವಿ ಪರಮಶಿವ, ಎಂ.ವಿ ರಾಮರಾವ್, ಕೆ.ಸಿ ಬಸವರಾಜು, ಬಿ ರಾಜಪ್ಪ, ಎ. ಎಸ್ ನಂದೀಶ್, ಸುಬ್ರಹ್ಮಣ್ಯ, ನಂಜುಂಡರಾವ್, ಟಿ.ಎಸ್ ಚೆನ್ನಪ್ಪ, ಪುಟ್ಟಯ್ಯ, ವಜ್ರಂಶೆಟ್ಟಿರವರು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿ ಸ್ವತಂತ್ರ ಹೋರಾಟಕ್ಕೆ ತುಮಕೂರಿಂದ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

(ಕೃತಿಸ್ವಾಮ್ಯ ಲೇಖಕರದು)

(ಬರಹ ಲೇಖಕರ ಅಭಿಪ್ರಾಯ ಹೊರತು
ಜಾಲತಾಣದ ಅಭಿಪ್ರಾಯವಲ್ಲ)

ಸ್ವಾತಂತ್ರ್ಯ ಮಹೋತ್ಸವ ಕುರಿತು ಚಿಂತಕರು ಏನು ಹೇಳುತ್ತಾರೆ?

Publicstory/prajayoga

ಕೆ. ದೊರೆರಾಜು
ಹಿರಿಯ ಹೋರಾಟಗಾರ, ಸಂಸ್ಕೃತಿ ಚಿಂತಕರು

ತ್ಯಾಗ ಬಲಿದಾನಗಳ ಸಂಗ್ರಾಮದಿಂದ ಸ್ವಾತಂತ್ರ್ಯ ದೊರಕಿದೆ. ಜಾತಿ ಧರ್ಮದ ಎಲ್ಲೆಗಳನ್ನು ಮೀರಿ ಜನರು ಭಾಗವಹಿಸಿದ್ದಾರೆ. ಈ ನೆಲದ ಮೂಲ ಆಶಯ, ಆದರ್ಶಗಳಾದ ಶಾಂತಿ, ಸಹಬಾಳ್ವೆಯ ಮತ್ತು ಸೌಹಾರ್ಧಯುತ ಹೋರಾಟ ಮಾದರಿಯಾಗಿತ್ತು. ಈಗ ಅಮೃತಮಹೋತ್ಸವದ ಸಂಭ್ರಮ ಒಂದೆಡೆಯಾದರೆ, ಸ್ವಾತಂತ್ಯದ ಆದರ್ಶಗಳನ್ನು ಪಾಲನೆ ಮಾಡದಿರುವ ಸಂಕಟ ಮತ್ತೊಂದೆಡೆಯಿದೆ. ನಾವು ಬುದ್ಧ, ಸೂಫಿ ಸಂತರ ಆಧ್ಯಾತ್ಮಿಕ ನೆಲೆಯಲ್ಲಿ ಸಾಗಬೇಕು.
 
__________________________________________

ಸಿ.ಯತಿರಾಜು
ಚಿಂತಕರು ಹಾಗೂ ಪರಿಸರವಾದಿ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಟಿ.ಆರ್ ರೇವಣ್ಣ, ಕೆ.ಟಿ. ಗೋವಿಂದರಾಜು, ಭಗೀರಥಮ್ಮ ಅವರಂಥ ಮಹಾನೀಯರು ತುಮಕೂರಿನವರು. ಅರಣ್ಯ ಸತ್ಯಾಗ್ರಹದಲ್ಲಿ ಮುಂಚೂಣಿಯಲ್ಲಿದ್ದು, ಸೆರೆವಾಸ ಅನುಭವಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿನ ಆಶಯಗಳು ಇನ್ನೂ ನನಸಾಗಿಲ್ಲ. ಇಂದಿನ ರಾಜಕಾರಣದಲ್ಲಿ ಆದರ್ಶ, ಸ್ವಚ್ಛ ಪ್ರಾಮಾಣಿಕತೆಯ ಅನಿವಾರ್ಯವಿದೆ. ದೇಶದ ಕಟ್ಟ ಕಡೆಯ ಪ್ರಜೆಗೂ ಭೂಮಿ, ಆರೋಗ್ಯ, ಶಿಕ್ಷಣ, ಆಹಾರ ದೊರೆಯುವಂತಾಗಬೇಕು ಆಗ ನಿಜಕ್ಕೂ ಈ ದೇಶಕ್ಕೆ ಸ್ವಾತಂತ್ರ್ಯ ದೊರೆಯುತ್ತದೆ.

___________________________________________

ಕೆ.ಎಸ್.ಸಿದ್ದಲಿಂಗಪ್ಪ
ಕಸಾಪ ಜಿಲ್ಲಾಧ್ಯಕ್ಷ, ತುಮಕೂರು

ಎಲ್ಲರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಬಂದಿದೆ. ಜನಸಾಮಾನ್ಯರೂ ಕೂಡ ಹೋರಾಟಗಳನ್ನು ಮಾಡಿದ್ದು, ಬ್ರಿಟೀಷರನ್ನು ತೊಲಗಿಸುವಲ್ಲಿ ಅವರ ಪಾತ್ರವೂ ಮಹತ್ವ ಪಡೆದಿದೆ.  ಭಾರತ ಅನೇಕ ಆರ್ಥಿಕ ಯೋಜನೆಗಳೊಂದಿಗೆ ಬಲಿಷ್ಠವಾಗಿ ರೂಪುಗೊಂಡಿದೆ. ಆದರೆ, ಸ್ವರಾಜ್ಯವಾಗಿ ರೂಪುಗೊಂಡಿಲ್ಲ. ಯುವಜನರು ದೇಶ ಪ್ರೇಮ ಬೆಳಸಿಕೊಳ್ಳಬೇಕು ಹಾಗೂ ಸಂವಿಧಾನ, ಕಾನೂನಿನ ಮೇಲೆ ಗೌರವ ಬೆಳಸಿಕೊಂಡಾಗ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗುತ್ತದೆ.

___________________________________________

ಶಿವಾನಂದ್ ಎ.ಆರ್
ಪ್ರಾಂಶುಪಾಲರು
ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಚಿ.ನಾ.ಹಳ್ಳಿ

ಭಾರತ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಹಿಂದುಳಿದಿದ್ದು ಮತ್ತಷ್ಟು ಪ್ರಗತಿ ಕಾಣಬೇಕಿದೆ. ಶಿಕ್ಷಣ ಕ್ರೀಡೆ ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ರಚನಾತ್ಮಕ ಸುಧಾರಣೆಯ ಜೊತೆ ರಾಷ್ಟ್ರಾಭಿಮಾನ ಎಲ್ಲರಲ್ಲೂ ಗಟ್ಟಿಯಾಗಲಿ.
___________________________________________

ಎನ್.ಎಸ್.ಪಂಡಿತ್ ಜವಾಹರ್
ಜನ ಸಂಗ್ರಾಮ ಪರಿಷತ್

ಸ್ವಾತಂತ್ರ್ಯದ ಫಲವನ್ನು ದೇಶದ ಕಟ್ಟಕಡೆಯ ವ್ಯಕ್ತಿಯೂ ಅನುಭವಿಸುವಂತಾಗಬೇಕು ಹಾಗೂ ಜನತೆ ಸಮಾಜಿಕ, ಆರ್ಥಿಕತೆಯೊಂದಿಗೆ ದೇಶದ ದೃಢತೆ ಹೊಂದಿದಾಗ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ.

__________________________________________

ಕಾವ್ಯಶ್ರೀ ಬೆಟ್ಟದ ಬಯಲು
ಯುವ ಚಿಂತಕಿ

ಖಾದಿ ಭಾರತದ ನೇಕಾರ ಜೀವಿಗಳ ಜೀವಾಳ. ರಾಷ್ಟ್ರ ಧ್ವಜವೂ ಸ್ವದೇಶಿ ಬಟ್ಟೆಯಿಂದಲೇ ನೇಯಲ್ಪಟ್ಟರೆ ಅದಕ್ಕೆ ಗೌರವವೂ ಹೆಚ್ಚು. ಖಾದಿ ಧ್ವಜ ಸ್ವದೇಶಿಯನ್ನು ಎತ್ತಿಹಿಡಿಯುತ್ತದೆ. ನಾವು ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸೋಣ.

__________________________________________