Saturday, July 27, 2024
Google search engine
Homeತುಮಕೂರು ಲೈವ್ತುಮಕೂರು ಸ್ವಾತಂತ್ರ್ಯ ಚಳುವಳಿಯಲ್ಲಿ ಕಣ್ಮಣಿಗಳ ಗುರುತು

ತುಮಕೂರು ಸ್ವಾತಂತ್ರ್ಯ ಚಳುವಳಿಯಲ್ಲಿ ಕಣ್ಮಣಿಗಳ ಗುರುತು


Publicstory/prajayoga

ಸಿದ್ದು ಬಿ.ಎಸ್.ಸೂರನಹಳ್ಳಿ, ತಿಪಟೂರು

ಸ್ವಾತಂತ್ರ್ಯ ಹೋರಾಟದಲ್ಲಿ ತುಮಕೂರು ಜಿಲ್ಲೆಯು ತನ್ನ ಅಮೂಲ್ಯವಾದ ಕೊಡುಗೆ ಸಲ್ಲಿಸಿ, ತನ್ನದೇ ಆದ ಹೆಸರನ್ನು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯುವಂತೆ ಮಾಡಿದೆ.
ಮಹಾತ್ಮಗಾಂಧಿ ಹರಿಜನೋದ್ದಾರ ನಿಧಿಸಂಗ್ರಹಕ್ಕಾಗಿ ತುಮಕೂರಿಗೆ ಬಂದಿದ್ದ ವೇಳೆ,  ಅವರ ದಿವ್ಯ ಸ್ಪೂರ್ತಿ ಅನೇಕ ಉದಯೋನ್ಮುಖ ವೀರರ ಸೃಷ್ಟಿಗೆ ಬುನಾದಿಯಾಯಿತು. ಖಾದಿ ಪ್ರಚಾರ, ಹರಿಜನೋದ್ದಾರ, ಪಾನನಿರೋಧಗಳಿಗಾಗಿ ಜಿಲ್ಲೆಯ ಜನತೆ ಕಂಕಣ ತೊಟ್ಟರು. ಈ ಹಿನ್ನಲೆಯಲ್ಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ತ್ಯಾಗ ಬಲಿದಾನಗೈದ  ತಿಪಟೂರು, ಮಧುಗಿರಿ, ಕೊರಟಗೆರೆ, ಪಾವಗಡ, ತುರುವೇಕೆರೆ, ಗುಬ್ಬಿ, ಶಿರಾ ,ಕುಣಿಗಲ್, ಚಿ. ನಾ ಹಳ್ಳಿ ತಾಲೂಕಿನ ಕೆಚ್ಚೆದೆಯ ದೇಶಾಭಿಮಾನಿಗಳು ಮತ್ತು ದೇಶ ಪ್ರೇಮಿಗಳ ದಂಡು ಜಿಲ್ಲೆಯ ನವ ಪೀಳಿಗೆಗೆ ಪುರಾವೆಯಾಗಿ ದಕ್ಕಿರುವುದು ನಮ್ಮ ಹೆಮ್ಮೆ.

ಸ್ವಾತಂತ್ರ್ಯ ಚಳುವಳಿಯಲ್ಲಿ ತಿಪಟೂರು ತಾಲೂಕಿನಿಂದ ಮೊದಲು ಕೇಳಿಬರುವ ಹೆಸರೇ ಅನಿವಾಳದ ನಂಜಪ್ಪ  ಮತ್ತು ಎಸ್.ಆರ್.ಮಲ್ಲಪ್ಪ.

ಅನಿವಾಳದ ನಂಜಪ್ಪನವರು ಕೃಷಿ ಮತ್ತು ವ್ಯಾಪಾರದ ಉದ್ಯಮಿಳಾಗಿದ್ದು, ತಮ್ಮ 54ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಚಳುವಳಿಯ ಅಂಗವಾಗಿ ಪಿಕೇಟಿಂಗ್ ಸತ್ಯಾಗ್ರಹ ನಡೆಸಿದ್ದರು ಹಾಗೂ ಸತ್ಯಾಗ್ರಹ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ್ದರಿಂದ ದಸ್ತಗಿರಿ ಮಾಡಲ್ಪಟ್ಟು ಬೆಂಗಳೂರು ಜೈಲಿನಲ್ಲಿ 7ತಿಂಗಳು 2ದಿನ ಕಠಿಣ ಶಿಕ್ಷೆ ಅನುಭವಿಸಿದ್ದರು. ಎಸ್.ಆರ್.ಮಲ್ಲಪ್ಪನವರು ಅರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಮತ್ತು ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿದ್ದ ಮುಂಚೂಣಿ ಹೆಸರು ಇವರದ್ದು. ಮೈಸೂರು, ಹಾಸನ, ತುಮಕೂರು ಮತ್ತು ತಿಪಟೂರು ಜೈಲುಗಳಲ್ಲಿ ಒಟ್ಟು 9ತಿಂಗಳು ಶಿಕ್ಷೆ ಅನುಭವಿಸಿದ್ದಲ್ಲದೆ 70 ರೂ. ದಂಡಕೊಡಲಾಗಾದೆ ಮತ್ತೆ 4 ತಿಂಗಳು 17 ದಿನ ತುರಂಗವಾಸ ಅನುಭವಿಸಿದರು.

ಮಧುಗಿರಿಯ ಮಾಲಿ ಮರಿಯಪ್ಪ ಮತ್ತು ಚಿಕ್ಕದಾಳವಟ್ಟದ ದಾಳಪ್ಪನವರ ಮಕ್ಕಳಾದ ಖಾದ್ರಪ್ಪ, ಟಿ.ಆರ್.ಚನ್ನಪ್ಪ

ಮಧುಗಿರಿಯ ಪ್ರಸಿದ್ಧ ವಕೀಲರಾದ ಮಾಲಿ ಮರಿಯಪ್ಪ ತುಮಕೂರು ಜಿಲ್ಲೆಯ ಸ್ವಾತಂತ್ರ್ಯ ಚಳುವಳಿಗೆ ಜೀವದುಸಿರು, ಹೋರಾಟದ ಮುಂದಾಳು. ಅರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ, ಮೈಸೂರು ಚಲೋ ಚಳುವಳಿಗಳಲ್ಲಿ ಭಾಗವಹಿಸಿದ್ದವರು. 3 ಬಾರಿ ತುರಂಗವಾಸ ಅನುಭವಿಸಿದರು. ತುಮಕೂರು ಹಾಸನ ಮತ್ತು ಬೆಂಗಳೂರು ಸೆಂಟ್ರಲ್ ಜೈಲ್ಗಳಲ್ಲಿ 20 ತಿಂಗಳ ಶಿಕ್ಷೆ ಅನುಭವಿಸಿದ್ದರು. ಇವರು 1947ರಲ್ಲಿ ಮೈಸೂರು ರಾಜ್ಯಾಂಗ ರಚನಾ ಸಭೆಗೆ ಚುನಾವಣೆಗಳು ನಡೆದಾಗ ಅದ್ಭುತ ವಿಜಯಗಳಿಸಿ ಅದರ ಸದಸ್ಯರಾದರು. 1958ರಲ್ಲಿ ಬಿ ಡಿ. ಜತ್ತಿಯವರ ಮಂತ್ರಿಮಂಡಳ ರಚಿತವಾದಾಗ ಮಾಲಿ ಮರಿಯಪ್ಪನವರು ರಾಜ್ಯದ ಸಹಕಾರ ಸಣ್ಣಕೈಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದರು. 1958ರಲ್ಲಿ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದರು.

ಚಿಕ್ಕದಾಳವಟ್ಟದ ದಾಳಪ್ಪನವರ ಮಕ್ಕಳಾದ ಖಾದ್ರಪ್ಪನವರು 1939ರ ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿ, 4 ತಿಂಗಳ ಕಾಲ ಬೆಂಗಳೂರು, ಹಾಸನಗಳಲ್ಲಿ ಸೆರೆಮನೆ ವಾಸ ಅನುಭವಿಸಿದರು. ಇವರು ತಮ್ಮ ಮೇಲೆ ಹೇರಲ್ಪಟ್ಟ 75ರೂ.ಗಳ ದಂಡವನ್ನು ಕೊಡಲು ಒಪ್ಪದೆ ಮತ್ತೆ ಒಂದು ತಿಂಗಳ ಕಠಿಣ ಸಜಾ ಅನುಭವಿಸಿದರು. ಕೊರಟಗೆರೆ ತಾಲೂಕು ಹೊಸಹಳ್ಳಿ ಬಸವಾರಾಧ್ಯರು 62ನೇ ವಯಸ್ಸಿನಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಒಂದು ವರ್ಷ, ಒಂದು ತಿಂಗಳು ಕಠಿಣ ಶಿಕ್ಷೆ ಅನುಭವಿಸಿದ್ದರು.

ಟಿ.ಆರ್.ಚನ್ನಪ್ಪ ಇವರು ತೀತ ಗ್ರಾಮದವರು. ಧ್ವಜಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ದೆಹಲಿ ಚಲೋ, ಮೈಸೂರು ಚಲೋ ಚಳುವಳಿಗಳಲ್ಲಿ ಭಾಗವಹಿಸಿ, ಆಗಿನ ಸತ್ಯಾಗ್ರಹ ಯುಗದಲ್ಲಿ ಇವರು ಪ್ರಸಿದ್ಧ ಕ್ರಾಂತಿಕಾರರೆನಿಸಿದರು. ಮಧುಗಿರಿ, ತುಮಕೂರು, ಕೊರಟಗೆರೆ ಜೈಲುಗಳಲ್ಲಿ 3 ತಿಂಗಳು 19 ದಿನಗಳ ಶಿಕ್ಷೆ ಅನುಭವಿಸಿದರು. ಮಂತ್ರಿ ಚನ್ನಿಗರಾಮಯ್ಯ  ಕೊರಟಗೆರೆಯಲ್ಲಿ 1911ಲ್ಲಿ ಜನಿಸಿದ್ದು, ಕೃಷಿಕ ಮನೆತನದವರಾಗಿದ್ದರು.  1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ 1947ರ ಮೈಸೂರು ಜವಾಬ್ದಾರಿ ಸರ್ಕಾರಕ್ಕಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. ತುಮಕೂರು, ಬೆಂಗಳೂರು ಜೈಲುಗಳಲ್ಲಿ ಒಂದೂವರೆ ತಿಂಗಳ ಜೈಲು ಶಿಕ್ಷೆ ಅನುಭವಿಸಿದರು. 1938ರಲ್ಲಿ ಚುನಾವಣಾ ಸುಧಾರಣಾ ಆಯೋಗದ ಸದಸ್ಯರಾಗಿದ್ದರು. ಮೈಸೂರು ಲೆಜಿಸ್ಲೇಟಿವ್ ಸುಧಾರಣಾ ಕಮೀಷನ್ನಲ್ಲಿ ಸೇವೆ ಸಲ್ಲಿಸಿದ್ದರು. ತುರುವೇಕೆರೆಯ ಎಸ್.ಅನಂತರಾಮ ಅಯ್ಯಂಗಾರ್ ತಾಲೂಕು ಸಂಪಿಗೆ ಸ್ಥಳದವರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಬೆಂಗಳೂರು ಜೈಲಿನಲ್ಲಿ 3ತಿಂಗಳ ಕಾಲ ತುರಂಗವಾಸ ಅನುಭವಿಸಿದ್ದರು.

ಟಿ.ಸುಬ್ರಹ್ಮಣ್ಯಂ ತುರುವೇಕರೆಯ ತಾಳೇಕೆರೆಯ ಪ್ರಸಿದ್ಧ ವಕೀಲರಾಗಿದ್ದರು. 1922ರಿಂದಲೂ ನಡೆದ ಸ್ವಾತಂತ್ರ್ಯದ ಎಲ್ಲಾ ಹೋರಾಟದ ಸತ್ಯಾಗ್ರಹಗಳಲ್ಲೂ ಭಾಗವಹಿಸಿದ್ದಲ್ಲದೆ ಮುಖಂಡತ್ವವನ್ನೂ ವಹಿಸಿದ್ದರು. 1947ರಲ್ಲಿ ನಡೆದ ಜವಾಬ್ದಾರಿ ಸರ್ಕಾರದ ಹೋರಾಟವು ಫಲಕಾರಿಯಾಗುವವರೆಗೆ ಇವರ ಚಳುವಳಿ ನಿಲ್ಲಲಿಲ್ಲ. ಇವರು ಒಟ್ಟು 9 ಬಾರಿ ದಸ್ತಗಿರಿ ಮಾಡಲ್ಪಟ್ಟು 6 ವರ್ಷಗಳಿಗೂ ಮೇಲ್ಪಟ್ಟು ತುರಂಗವಾಸ ಅನುಭವಿಸಿದರು. ಬಿ.ಡಿ.ಜತ್ತಿ ಅವರ ಮಂತ್ರಿಮಂಡಳದಲ್ಲಿ ನ್ಯಾಯಾಂಗ, ಕಾರ್ಮಿಕ, ಸ್ಥಳೀಯ ಸರ್ಕಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಜಿ.ಎಚ್.ಆರ್. ದೇವರು ಗುಬ್ಬಿ ಸ್ಥಳದವರು. ಬಾಣದ ಚೆನ್ನಯ್ಯನವರ ಮಕ್ಕಳು. ಮೈಸೂರು ಚಲೋ ಚಳುವಳಿಯಲ್ಲಿ ಪಾಲ್ಗೊಂಡು ತುಮಕೂರು ಜೈಲಿನಲ್ಲಿ ಒಂದು ತಿಂಗಳು ತುರಂಗವಾಸ ಅನುಭವಿಸಿದರು. ಗಂಗಾಧರಪ್ಪನವರು ಗುಬ್ಬಿ ಕಲ್ಲೂರಿನ ರೈತರು. ಕ್ವಿಟ್ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಒಂದೂವರೆ ವರ್ಷ ಶಿಕ್ಷೆಯಾಗಿ ಮತ್ತೆ 2 ತಿಂಗಳ ಕಾಲ ಜೈಲು ಅನುಭವಿಸಿದರು. ಜಿ.ಹೆಚ್.ಗೋಪಾಲಯ್ಯ, ಪಾವಗಡದ ಗೂಲಪ್ಪ, ಪಿ.ರಾಮರಾವ್, ಶಿರಾ ತಾಲೂಕಿನ ಹುಣಸೇಹಳ್ಳಿಯ ಗೋವಿಂದಪ್ಪ ಹಳ್ಳಿಯ ಎಂ.ಎಸ್.ಹನುಮಂತರಾವ್, ಸಿ.ಆರ್.ಆದಿನಾರಾಯಣರಾವ್  ಹಾಗೂ ಕುಣಿಗಲ್ ತಾಲೂಕು ಹೋರಾಟಗಾರ ಕರಿಯಪ್ಪ, ಎಡೆಯೂರಿನ ಜಿ.ತಮ್ಮಣ್ಣ, ತುಮಕೂರು ತಾಲೂಕಿನವರಾದ ಎ.ಸಿ.ಪುಟ್ಟಣ್ಣ, ಕೆ.ಆರ್.ನರಸಿಂಹಯ್ಯಂಗಾರ್, ಬಿ.ಸಿ. ನಂಜುಂಡಯ್ಯನವರು ಹಾಗೂ ಟಿ.ಎಂ. ಮಹಂತಯ್ಯನವರದು ಸಾಮಾನ್ಯ ವರ್ಗದ ಕುಟುಂಬ ತುಮಕೂರು ನಗರದ ಮಂಡಿಪೇಟೆಯಲ್ಲಿ ಅವರ ತಂದೆಯವರು ಅಂಗಡಿ ವ್ಯಾಪಾರ ಮಾಡುತ್ತಿದ್ದರು. 8 ಜನ ಮಕ್ಕಳಲ್ಲಿ ಟಿ.ಎಂ.ಮಹಂತಯ್ಯನವರೇ ಹಿರಿಯ ಮಗ. ಎಸ್ಎಸ್ಎಲ್ಸಿ ವರಗೆ ಓದಿ ವ್ಯಾಪಾರದ ಜೊತೆಗೆ ಕಾಂಗ್ರೆಸ್, ಗಾಂಧೀಜಿ ಯವರ ವಿಚಾರಗಳ ಗುಂಗು 1938 ರಿಂದ ಹತ್ತಿಸಿಕೊಂಡರು . ಕೊನೆಗೆ 1942 ರಲ್ಲಿ ಚಳುವಳಿಯಲ್ಲಿ ತಂದೆ ತಾಯಿಗಳ ಅಸಮ್ಮತಿಯೊಂದಿಗೆ ಧುಮುಕಿದರು . ಇದರಿಂದಾಗಿ ತಂದೆಯವರ ವ್ಯಾಪಾರ ಕುಸಿದು , ಕಷ್ಟನಷ್ಟಗಳಿಗೆ ಗುರಿಯಾಯಿತು. ಆದರೂ ಶ್ರೀಯುತರು ಸ್ವಾತಂತ್ರ್ಯ ಕಾರ್ಯಚಟುವಟಿಕೆಯಿಂದ ಹಿಂದೆಗೆಯಲಿಲ್ಲ . ಮಧುಗಿರಿ ತಾಲೂಕಿನಲ್ಲಿ ದಸ್ತಗಿರಿಯಾಗಿ ನಾಲ್ಕೂವರೆ ತಿಂಗಳು ತುಮಕೂರು ಸಬ್ ಜೈಲು ಮತ್ತು ಬೆಂಗಳೂರು ಸೆಂಟ್ರಲ್ ಜೈಲಿನ ಕ್ವಾರಂಟೈನ್ನಲ್ಲಿ ವಾಸಮಾಡುವಾಗ ಅವರ ತಂದೆಯವರು ಕ್ಷಮಾಪಣೆ ಪತ್ರ ನೀಡಿ ಜೈಲಿನಿಂದ ಹೊರಬರುವಂತೆ ಸೂಚಿಸಿದರೂ ಸಮ್ಮತಿಸದೆ ಪೂರ್ಣ ಜೈಲುವಾಸ ಅನುಭವಿಸಿದ ದೇಶಭಕ್ತರು.

ಇನ್ನು ಮೊದಲಾದ ಟಿ.ಆರ್ ರೇವಣ್ಣ, ಎಸ್.ವಿ ಆಚಾರ್ಯ, ಎಂ ನೀಲಕಂಠರಾಯ, ಕೆ.ಎಲ್ ನರಸಿಂಹಯ್ಯ, ಗಂಗಾಧರಯ್ಯ, ಜಿ.ಆರ್ ಚಂಗಲಯ್ಯ, ಕೆ.ವಿ ಪರಮಶಿವ, ಎಂ.ವಿ ರಾಮರಾವ್, ಕೆ.ಸಿ ಬಸವರಾಜು, ಬಿ ರಾಜಪ್ಪ, ಎ. ಎಸ್ ನಂದೀಶ್, ಸುಬ್ರಹ್ಮಣ್ಯ, ನಂಜುಂಡರಾವ್, ಟಿ.ಎಸ್ ಚೆನ್ನಪ್ಪ, ಪುಟ್ಟಯ್ಯ, ವಜ್ರಂಶೆಟ್ಟಿರವರು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿ ಸ್ವತಂತ್ರ ಹೋರಾಟಕ್ಕೆ ತುಮಕೂರಿಂದ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

(ಕೃತಿಸ್ವಾಮ್ಯ ಲೇಖಕರದು)

(ಬರಹ ಲೇಖಕರ ಅಭಿಪ್ರಾಯ ಹೊರತು
ಜಾಲತಾಣದ ಅಭಿಪ್ರಾಯವಲ್ಲ)

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?