Sunday, March 15, 2026
Google search engine
Home Blog Page 96

ತಮಿಳುನಾಡು ಸರ್ಕಾರದಿಂದ ಸಿದ್ದರಾಮಯ್ಯಗೆ ಆತ್ಮೀಯ ಸ್ವಾಗತ


Publicstory/Prajayoga

ತಮಿಳುನಾಡು: ಮಾಜಿ ಮುಖ್ಯಂಮತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು  ಚನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪ್ರೀತಿಯಿಂದ ಬರಮಾಡಿಕೊಂಡು ಗೌರವಿಸಿದರು ಹಾಗೂ ಅವರೊಂದಿಗೆ ಒಂದಷ್ಟು ಹೊತ್ತು ಆತ್ಮೀಯ ಮಾತುಕತೆ ನಡೆಸಿದರು.

ಸಿದ್ದರಾಮಯ್ಯ ಅವರನ್ನು ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಗೆ ತಮಿಳುನಾಡು ಸರ್ಕಾರ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಚನ್ನೈಗೆ ತೆರಳಿದ್ದಾರೆ.

ಸಚಿವರಾದ ದೊರೈ ಮುರುಗನ್, ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಳಗಿರಿ, ಸಂಸದರಾದ ತಿರುಮಾವಲವನ್ ಸೇರಿದಂತೆ ಮತ್ತಿತರ ಗಣ್ಯರು ಈ ವೇಳೆ ಹಾಜರಿದ್ದರು.

ಈ ಸಂದರ್ಭದಲ್ಲಿ ವಿಡುದಲೈ ಚಿರುದೈಗಳ್ ಪಕ್ಷದ ಸಂಸದ ತಿರುಮಾವಲವನ್ ಹಾಗೂ ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಳಗಿರಿ ಹಾಗೂ ಇತರ ನಾಯಕರು ಅತ್ಮೀಯತೆಯಿಂದ ಬರ ಮಾಡಿಕೊಂಡರು.

ಗುಬ್ಬಿ: ನೇಣು ಬಿಗಿದ ಸ್ಥಿತಿಯಲ್ಲಿ ಶವ‌ ಪತ್ತೆ

0

Public story/Prajayoga

ಗುಬ್ಬಿ: ತಾಲೂಕಿನ ಕೊಂಡ್ಲಿ ಕ್ರಾಸ್ ಬಳಿ ಬೆಣ್ಣೆ ಹಳ್ಳದ ಫಾರೆಸ್ಟ್ ನಲ್ಲಿ ಅಪರಿಚಿತ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತ ವ್ಯಕ್ತಿಯು ಸುಮಾರು 35 ವರ್ಷದ ವಯಸ್ಸಿನವರಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರವೀಣ್ ಶವಯಾತ್ರೆ ವೇಳೆ ಲಾಠಿ ಚಾರ್ಜ್ ; ಪೊಲೀಸರ ವರ್ಗಾವಣೆ

ಮಂಗಳೂರು: ಇತ್ತೀಚೆಗೆ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಶವಯಾತ್ರೆ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಪೊಲೀಸರತ್ತ ಕಲ್ಲು ತೂರಾಟ ನಡೆದಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಕಾಸರಗೋಡಿನ ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ ರಮೇಶ್ ಅವರ ಮೇಲೂ ಲಾಠಿ ಚಾರ್ಚ್ ಮಾಡಿದ್ದರು.

ಲಾಠಿ ಬೀಸಿದ ದ.ಕ ಜಿಲ್ಲೆಯ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ಸೈಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೈ ಆದೇಶ ಹೊರಡಿಸಿದ್ದಾರೆ.

ವರ್ಗಾವಣೆಯಾದ ಪಿಎಸ್ಸೈಗಳಿಗೆ ಮಂಗಳೂರು ಐಜಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಿಲಾಗಿದ್ದು, ಅವರಿಗೆ ಜಾಗ ತೋರಿಸಿಲ್ಲ ಎಂದು ವರದಿಯಾಗಿದೆ.

ಒಕ್ಕಲಿಗರೇ ಮುಖ್ಯಂಮತ್ರಿಯಾಗಲಿ: ನಂಜಾವಧೂತ ಸ್ವಾಮೀಜಿ ಹೇಳಿಕೆ


ನೆಲಮಂಗಲ: ಮುಂದಿನ ಬಾರಿ ಒಕ್ಕಲಿಗರು ಮುಖ್ಯಮಂತ್ರಿಯಾಗಬೇಕು ಎಂದು ಸ್ಪಟಿಕಪುರಿ ಮಠದ ಪೀಠಾಧ್ಯಕ್ಷ ನಂಜವಧೂತ ಸ್ವಾಮೀಜಿ ಎಂದು ಅಭಿಲಾಶೆ ವ್ಯಕ್ತಪಡಿಸಿದರು.
ನಗರದಲ್ಲಿ ಇಂದು ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ ವತಿಯಿಂದ ಏರ್ಪಡಿಸಿದ್ದ 8ನೇ ವಾರ್ಷಿಕೋತ್ಸವ ಹಾಗೂ ಶೇ.90ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು, ಸಮುದಾಯದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶ ಹಾಗೂ ರಾಜ್ಯದಲ್ಲಿ ಒಕ್ಕಲಿಗರು ಅಧಿಕಾರ ಪಡೆದಾಗ ಅಭಿವೃದ್ಧಿಯ ಇತಿಹಾಸವೇ ಸೃಷ್ಟಿಯಾಗುತ್ತದೆ. ಇದನ್ನು ಇತಿಹಾಸ ತಿಳಿಸುತ್ತದೆ. ಮುಂದಿನ ಬಾರಿ ಒಕ್ಕಲಿಗರು ಮುಖ್ಯಮಂತ್ರಿಯಾಗಲು ನಮ್ಮ ಬೆಂಬಲವಿದೆ ಎಂದರು.

ವಿಧಾನಸೌಧ ನಿರ್ಮಾಣ ಮಾಡಿದ ಕೆಂಗಲ್‌ ಹನುಮಂತಯ್ಯ, ಎಚ್‌.ಡಿ ಕುಮಾರಸ್ವಾಮಿ  ಡಿವಿ ಸದಾನಂದ ಗೌಡ, ಎಸ್‌.ಎಂ ಕೃಷ್ಣ ಸೇರಿದಂತೆ ರಾಜ್ಯವನ್ನಾಳಿದ ಒಕ್ಕಲಿಗ ಮುಖ್ಯಮಂತ್ರಿಗಳು ಅಭಿವೃದ್ಧಿಯ ಪರ್ವವವನ್ನೇ ಸೃಷ್ಠಿಸಿದ್ದಾರೆ. ಎಚ್‌.ಡಿ ದೇವೇಗೌಡರು ಪ್ರಧಾನಿಯಾದಾಗ ದೇಶದಲ್ಲಿ ಸಾಕಷ್ಟು ರೈತರ ಯೋಜನೆಗಳು ಜಾರಿಗೆ ಬಂದಿವೆ. ಡಿಕೆ ಶಿವಕುಮಾರ್ ವೇದಿಕೆಯಲ್ಲಿ ಒಕ್ಕಲಿಗರ ಬೆಂಬಲ ಕೇಳಿರುವುದರಲ್ಲಿ ತಪ್ಪೇನಿಲ್ಲಎಂದು ತಿಳಿಸಿದರು.

ಯುವಜನರು ರಾಜಕೀಯ ಕುತಂತ್ರಗಳಿಗೆ ಬಲಿಯಾಗಬೇಡಿ : ಸಿದ್ದರಾಮಯ್ಯ ಪತ್ರ

ರಾಜ್ಯದಲ್ಲಿ ನಡೆಯುತ್ತಿರುವ ಕೋಮುಗಲಭೆ, ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯುವ ಜನರಿಗೊಂದು ಬಹಿರಂಗ ಪತ್ರ ಬರೆದಿದ್ದಾರೆ.
ಬಡವರ ಮಕ್ಕಳು ಬೀದಿಯಲ್ಲಿ, ಪ್ರಚೋದಿಸುವವರ ಮಕ್ಕಳು ಹೊರದೇಶಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.. ದ್ವೇಷ ರಾಜಕಾರಣಕ್ಕೆ ಬಲಿಯಾಗಬೇಡಿ. ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದೆಯಾ? ಎಂಬ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಾತನ್ನು ಉಲ್ಲೇಖಿಸಿ ಬರೆದಿದ್ದಾರೆ.

ಪ್ರೀತಿಯ ಯುವ ಬಂಧುಗಳೆ,


ರಾಜ್ಯದಲ್ಲಿ, ಮುಖ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನನ್ನನ್ನು ಆತಂಕಿತಗೊಳಿಸಿವೆ, ನೋವಿನಲ್ಲಿ ಮುಳುಗಿಸಿವೆ. ಬಾಳಿ ಬದುಕಬೇಕಾದ ಯುವಕರು ಕ್ಷುಲ್ಲಕ ಕಾರಣಗಳಿಗಾಗಿ, ಕೆಲವೊಮ್ಮೆ ಕಾರಣಗಳೆ ಇಲ್ಲದೆ ಹತ್ಯೆಗೀಡಾಗುತ್ತಿರುವುದನ್ನು ಕನ್ನಡ ನಾಡಿನ ಆತ್ಮಸಾಕ್ಷಿ ಸಹಿಸಬಾರದು. ದುಡಿಯುವ ಜಾತಿ, ಪಂಗಡ, ಧರ್ಮಗಳಿಗೆ ಸೇರಿದ ಮಕ್ಕಳು ವಿನಾ ಕಾರಣ ಹತ್ಯೆಯಾಗುತ್ತಿರುವುದನ್ನು ಯಾವ ನಾಗರಿಕ ಸಮಾಜವೂ ಸಹಿಸಲಾಗದು. ಸಹಿಸಬಾರದು. ಶಾಂತಿ, ಸೌಹಾರ್ದತೆಗೆ ಹೆಸರಾದ ಕರ್ನಾಟಕವನ್ನು ವಿನಾ ಕಾರಣ ಅಶಾಂತಿಯ ಕಡಲಲ್ಲಿ ಮುಳುಗಿಸಲಾಗುತ್ತಿದೆ.

ನಾಡಿನ ಆತ್ಮಸಾಕ್ಷಿಯಂತಿದ್ದ ಪೂರ್ಣಚಂದ್ರ ತೇಜಸ್ವಿಯವರು ಒಮ್ಮೆ ‘ಕೊಂದು ಉಳಿಸಿಕೊಳ್ಳುವ ಧರ್ಮವಿದ್ದರೆ ಅದನ್ನು ಧರ್ಮವೆನ್ನಲಾಗುತ್ತದೆಯೇ’ ಎಂದು ಪ್ರಶ್ನಿಸಿದ್ದರು. ಬಸವಣ್ಣನವರು ‘ಕೊಂದವರುಳಿದರೆ ಕೂಡಲ ಸಂಗಮದೇವಾ’ ಎಂದು ಆರ್ತವಾಗಿ ಕೇಳಿದ್ದರು. ಧರ್ಮಕ್ಕಾಗಿ ಕೊಲೆ ಮಾಡಿದ್ದೇವೆ ಎನ್ನುವವರನ್ನು ಯಾವ ದೇವರೂ ಕ್ಷಮಿಸುವುದಿಲ್ಲ ಎಂಬ ಮಾತುಗಳನ್ನು ಗುರು ಹಿರಿಯರು ಹೇಳುತ್ತಲೇ ಬಂದಿದ್ದಾರೆ.
ಧರ್ಮವನ್ನು ನೀನು ರಕ್ಷಿಸಿದರೆ ಅದೆ ಧರ್ಮವು ನಿನ್ನನ್ನು ರಕ್ಷಿಸುತ್ತದೆ ಎಂಬ ಮಹಾಭಾರತದ ಮಾತುಗಳನ್ನು  ಕೆಲವು ಮತಾಂಧರು ಹಾಗೂ ನಿರ್ಧಿಷ್ಟ ಹಿತಾಸಕ್ತಿಯುಳ್ಳ ಜನರು ಅದರ ಅರ್ಥವನ್ನೆ ಕುಗ್ಗಿಸಿದ್ದಾರೆ. ದಯೆ, ಕರುಣೆ, ಅಸಹಾಯಕರ ರಕ್ಷಣೆ ಮುಂತಾದ ಉದಾತ್ತವಾದ ವಿಶ್ವ ಆದರ್ಶದ ಮಾತುಗಳನ್ನು ತಿರುಚಿ ಧರ್ಮಕ್ಕಾಗಿ ಕೊಲ್ಲು ಎಂಬ ದುಷ್ಟ ವ್ಯಾಖ್ಯಾನ ಮಾಡಿ ಶೂದ್ರ, ದಲಿತ ಮಕ್ಕಳನ್ನು ಹಾದಿ ತಪ್ಪಿಸಲಾಗುತ್ತಿದೆ.
ಇಸ್ಲಾಮಿನ ಉದಾತ್ತ ತತ್ವಗಳನ್ನು ಮತ್ತು ಶಾಂತಿ, ಸತ್ಯಗಳನ್ನು  ಮುಂದು ಮಾಡುವ ಬದಲು  ಅಪವ್ಯಾಖ್ಯಾನ ಮಾಡುವ ದುಷ್ಟರಿಂದಾಗಿ ಮುಸ್ಲಿಂ ಬಡ ಯುವಕರ ಮೆದುಳೂ ಹಾಳಾಗುತ್ತಿದೆ. ಹಿಂದುವಿನ ಕೊಲೆಗೆ ಪ್ರತೀಕಾರವಾಗಿ ಕೈಗೆ ಸಿಕ್ಕ ಯಾರಾದರೂ ಮುಸ್ಲಿಮನನ್ನು ಕೊಲ್ಲು, ಮುಸ್ಲಿಮನ ಕೊಲೆಗೆ ಪ್ರತೀಕಾರವಾಗಿ ಕೈಗೆ ಸಿಕ್ಕ ಯಾರಾದರೂ ಹಿಂದುವನ್ನು ಕೊಲ್ಲು ಎಂಬ ಕ್ರೌರ್ಯವನ್ನು ಈ ಮಕ್ಕಳ ತಲೆಗೆ ತುಂಬಿದವರು ಯಾರು? ಅಂಥ ಕ್ರೌರ್ಯವನ್ನು ವ್ಯವಸ್ಥಿತವಾಗಿ ತುಂಬಿದವರನ್ನು ಅಪರಾಧಿಗಳನ್ನಾಗಿ ಮಾಡುವ ಕಾನೂನಿನ ಅವಶ್ಯಕತೆ ಎಲ್ಲಕ್ಕಿಂತ ಹೆಚ್ಚಾಗಿದೆ.

ದುಷ್ಟರ ತಾಳಕ್ಕೆ ತಕ್ಕಂತೆ ಈ ಬೇಜವಾಬ್ಧಾರಿ ಸರ್ಕಾರವೂ ಕುಣಿಯುತ್ತಿದೆ ಅಥವಾ ಸರ್ಕಾರದ ಕ್ರೂರವಾದ, ಪಕ್ಷಪಾತಿಯಾದ ಕ್ರೂರ ದೊರೆ ಹಮ್ಮುರಾಬಿ ಕಾಲದ ನಿಲುವುಗಳೆ ಅಮಾಯಕ ಮಕ್ಕಳ ಕೊಲೆಗಳಿಗೆ ಕಾರಣವಾಗುತ್ತಿವೆ ಎಂಬ ಅನುಮಾನ ಕೂಡ ಬರುತ್ತಿದೆ. ಬ್ಯಾಬಿಲೋನಿಯಾದಲ್ಲಿ ಸುಮಾರು 3800 ವರ್ಷಗಳ ಹಿಂದೆ ಹಮ್ಮುರಾಬಿ ಎಂಬ ರಾಜನಿದ್ದ, ಆತ  ಕಾನೂನೊಂದನ್ನು ಜಾರಿಗೆ ತಂದಿದ್ದ. ಯಾರಾದರೂ ಇನ್ನೊಬ್ಬರ ಕಣ್ಣಿಗೆ ಹಾನಿ ಮಾಡಿದರೆ ಹಾನಿ ಮಾಡಿದವನ ಕಣ್ಣುಗಳನ್ನು ಕಿತ್ತು ಹಾಕುವ, ಕೊಲೆ ಮಾಡಿದರೆ ಕೊಲೆ ಮಾಡುವ, ಕೈ ಕಾಲು ಊನವಾದರೆ, ಊನ ಮಾಡಿದವನ ಅಂಗಾಂಗಗಳನ್ನು ಊನ ಮಾಡುವ ಬರ್ಬರ ಕಾನೂನುಗಳನ್ನು ಜಾರಿಗೆ ತಂದಿದ್ದ. ಹಮ್ಮುರಾಬಿಯನ್ನು ಜಗತ್ತಿನ ಕ್ರೂರ ದೊರೆ ಎನ್ನಲಾಗುತ್ತದೆ. ನಮ್ಮ ರಾಜ್ಯದ  ಬೇಜವಾಬ್ಧಾರಿಯುತ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಕರಾವಳಿಯಲ್ಲಿ ಹೇಳಿದ “ಕ್ರಿಯೆಗೆ ಪ್ರತಿಕ್ರಿಯೆ” ಎಂಬ ಮಾತುಗಳು ಥೇಟ್ ಹಮ್ಮುರಾಬಿಯ  ಬರ್ಬರವಾದ, ಅನಾಗರಿಕವಾದ ಕಾನೂನನ್ನೆ ನೆನಪಿಸುತ್ತದೆ. ಕರ್ನಾಟಕದ ಇತಿಹಾಸದಲ್ಲಿ ಬೊಮ್ಮಾಯಿಯವರು 21ನೆ ಶತಮಾನದ ಹಮ್ಮುರಾಬಿ ಎಂದು ಕುಖ್ಯಾತವಾಗುತ್ತಾರೆ.

ನಮ್ಮ ಮಹಾಕಾವ್ಯವಾದ ಮಹಾಭಾರತದಲ್ಲಿ ಕೊಲೆಯನ್ನು ಖಂಡಿಸುವ ಮಾತುಗಳು ಅನೇಕ ಕಡೆ ಬರುತ್ತವೆ. ಮಹಾ ಭಾರತದ ಮೂಲ ಆಶಯವು ಭಗವದ್ಗೀತೆ ಹೇಳುವುದಕ್ಕೆ ಸಂಪೂರ್ಣ ಭಿನ್ನವಾದ ಹಾಗೆ ಕಾಣುತ್ತದೆ. ಈ ಮಹಾಕಾವ್ಯದಲ್ಲಿ ಪಾಂಡವರಿಗೆ ಅಧಿಕಾರ ತಪ್ಪಿಸಿದ ಕೌರವರ ಬಗ್ಗೆ ಅಲ್ಲಿನ ಜನರು ಶಾಪ ಹಾಕುತ್ತಾರೆ. ಆದರೆ ಯುದ್ಧ ಮುಗಿಯುತ್ತದೆ. ಎರಡೂ ಕಡೆಯ ಅಸಂಖ್ಯಾತ ಜನ ಮರಣ ಹೊಂದುತ್ತಾರೆ. ನಾಡಿನ ತುಂಬೆಲ್ಲ ವಿಧವೆಯರು, ತಬ್ಬಲಿಗಳಾದ ಮಕ್ಕಳು, ತಬ್ಬಲಿಗಳಾದ ತಂದೆ ತಾಯಿಗಳ ಕಣ್ಣೀರು ಒರೆಸುವುದಕ್ಕೂ ಜನ  ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಧರ್ಮರಾಯನ ನೇತೃತ್ವದಲ್ಲಿ ಪಾಂಡವರು ಊರೊಳಗೆ ಪ್ರವೇಶಿಸುತ್ತಾರೆ. ಆಗ ಊರ ಜನ ಪಾಂಡವರನ್ನು ಅತ್ಯಂತ ಕಠಿಣ ಭಾಷೆಯಲ್ಲಿ ನಿಂದಿಸುತ್ತಾರೆ. ಅಧಿಕಾರಕ್ಕಾಗಿ ತಂದೆ ಸಮಾನರನ್ನು, ಗುರುಗಳನ್ನು, ಸೋದರರನ್ನು, ಬಂಧುಗಳನ್ನು, ಅಮಾಯಕರನ್ನು ಕೊಂದ ಕ್ರೂರ ಪಾಂಡವರೆ, ನಿಮ್ಮ ಅಧಿಕಾರ ಜನರ ಸಮಾಧಿಗಳ ಮೇಲಷ್ಟೆ ಎಂದು ಶಾಪ ಹಾಕುತ್ತಾರೆ. ಮಹಾಕವಿ ವ್ಯಾಸಮುನಿಗಳು ಕೊಲೆಗೆ ಕೊಲೆ ಎಂಬ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬ ಅನಾಗರಿಕವಾದ, ಬರ್ಬರವಾದ ತತ್ವವನ್ನು ಹೇಸಿಗೆಯೆಂಬಂತೆ ವ್ಯಾಖ್ಯಾನಿಸುತ್ತಾರೆ.  ಹಾಗಾಗಿ ಮಹಾಭಾರತ ಕಾವ್ಯ ಜನರ ಕಾವ್ಯವಾಗಿದೆ.

ಕರಾವಳಿಯಲ್ಲಿ ಅಮಾಯಕ ಯುವಕರು ವಿನಾಕಾರಣ ದುರಂತ ಸಾವನ್ನಪ್ಪುತ್ತಿದ್ದಾರೆ. ಕರಾವಳಿ ಜಿಲ್ಲೆಗಳ ದುಡಿಯುವ ಸಮುದಾಯಗಳು ಅತಿ ಜರೂರಾಗಿ ಜಾಗೃತಗೊಳ್ಳಬೇಕು. ಕರಾವಳಿಯ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶೇ.99 ರಷ್ಟು ಅತ್ಯಂತ ಬಡ ಹುಡುಗರು ಹಾಗೂ ಎರಡೆ ಸಮುದಾಯಗಳವರು. ಕೊಲೆಯಾಗುತ್ತಿರುವ ಎರಡೂ ಕಡೆಯ ಹುಡುಗರು ದುಡಿದು, ಕೂಲಿ ಮಾಡಿ ಬದುಕುತ್ತಿರುವವರು. ಈ ಎರಡೂ ಕಡೆಯ ಹುಡುಗರ ಮೆದುಳಿಗೆ ವಿಷ ಹಾಕುತ್ತಿರುವವರು ಮಕ್ಕಳು ಮಾತ್ರ ಬೆಂಗಳೂರು, ಮುಂಬೈ ನಗರಗಳಲ್ಲಿ ಹಾಗೂ ಕೊಲ್ಲಿ ಯುರೋಪು, ಅಮೆರಿಕ ಮುಂತಾದ ದೇಶಗಳಲ್ಲಿ ಲಕ್ಷ, ಕೋಟಿಗಳ ಹೆಸರಲ್ಲಿ ಸಂಬಳ ದುಡಿಯುತ್ತಾ ವಾರದ ಕೊನೆಯಲ್ಲಿ ಲಕ್ಷಾಂತರ ಖರ್ಚು ಮಾಡಿ ಪಾರ್ಟಿ ಮಾಡುತ್ತಾ  ಮೋಜು ಮಾಡುತ್ತಿದ್ದಾರೆ. ಜೊತೆಗೆ ಬಹುಪಾಲು ಜನ ಸೋಷಿಯಲ್ ಮೀಡಿಯಾಗಳಲ್ಲಿ ಉಚಿತವಾಗಿ ಧರ್ಮ ಉಳಿಸುವ ಕುರಿತು ಸಲಹೆಗಳನ್ನು ನೀಡುವ ಕ್ರೌರ್ಯವನ್ನು ಮೆರೆಯುತ್ತಿದ್ದಾರೆ. ಬಡವರ ಮಕ್ಕಳನ್ನು ಬೆಂಕಿಗೆ, ಜೈಲಿಗೆ ತಳ್ಳಿ ತಮ್ಮ ಮಕ್ಕಳ ಏಳಿಗೆಗೆ ಸ್ಪರ್ಧೆ ಬರದ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಈ ಕುತಂತ್ರವನ್ನು ದುಡಿದು ಬದುಕುವ ಎಲ್ಲ ಸಮುದಾಯಗಳ ಯುವಕರು ಅರ್ಥ ಮಾಡಿಕೊಳ್ಳಬೇಕು. ಒಳ್ಳೆಯ ಶಿಕ್ಷಣ, ಒಳ್ಳೆಯ ಉದ್ಯೋಗ, ಉದಾತ್ತವಾದ ಆಲೋಚನೆ, ಶಾಂತಿ, ಸಹಬಾಳ್ವೆಗಳು ಮಾತ್ರ ಯುವಜನರನ್ನು ಏಳಿಗೆಯತ್ತ ಕೊಂಡೊಯ್ಯಲು ಸಾಧ್ಯ. ಕರಾವಳಿಯ ಯುವಜನತೆಗೆ ಇದೆಲ್ಲವನ್ನೂ ವ್ಯವಸ್ಥಿತವಾಗಿ ತಪ್ಪಿಸಲಾಗುತ್ತಿದೆ.

ಕರಾವಳಿಯ ಯುವಜನತೆಯಲ್ಲಿ ಕೈ ಮುಗಿದು ವಿನಂತಿಸುತ್ತೇನೆ. ದಯಮಾಡಿ ಸಾಕು ಮಾಡಿ. ಧರ್ಮ, ಕೋಮು ದ್ವೇಷವನ್ನು ದೂರ ಮಾಡಿ. 30 ವರ್ಷಗಳ ಹಿಂದಿದ್ದ ಕರಾವಳಿಯನ್ನು ಮತ್ತೆ ನಿರ್ಮಾಣ ಮಾಡಿ. ವೃದ್ಧಾಪ್ಯದಲ್ಲಿ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗಳನ್ನು, ಎಳೆ ವಯಸ್ಸಿನಲ್ಲಿ ಅಣ್ಣ ತಮ್ಮಂದಿರನ್ನು, ಗಂಡಂದಿರನ್ನು ಕಳೆದುಕೊಂಡವರ ಹೃದಯದ ಬೆಂಕಿಯನ್ನೊಮ್ಮೆ ಅರ್ಥ ಮಾಡಿಕೊಳ್ಳಿ. ಅನಾಥರಾದ ಎಳೆಯ ಮಕ್ಕಳಿಗೆ ಎಷ್ಟು ಹಣ ಕೊಟ್ಟರೆ ತಾನೆ ಅಪ್ಪಂದಿರನ್ನು ತಂದುಕೊಡಲು ಸಾಧ್ಯವೆ?  ಬದುಕಿದ್ದು ಶಾಶ್ವತ ಜೈಲಿಗೆ ಹೋದವರ ಕುಟುಂಬಗಳ ಕಷ್ಟ ದುಃಖಗಳನ್ನು ಒಮ್ಮೆ ನೆನೆಯಿರಿ, ವಕೀಲರುಗಳಿಗೆ ಫೀಸು ಕೊಡಲು ಮನೆ ಮಠ ಮಾರಿ ಬೀದಿಗೆ ಬಿದ್ದವರ ಸಂಕಷ್ಟಗಳು ನಿಮ್ಮ ಕಣ್ಮುಂದೆ ಬರಲಿ. ನಿಮ್ಮದೆ ಸ್ಕೂಲಿನಲ್ಲಿ, ನಿಮ್ಮ ಜೊತೆಯೆ ಕಲಿತ ಗೆಳೆಯ ಗೆಳತಿಯರು ಉತ್ತಮ ಉದ್ಯೋಗ ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿರುವಾಗ, ನಿಮ್ಮ ಬದುಕನ್ನು ಯಾರು ಕಿತ್ತುಕೊಂಡರು ಎಂದು ಯೋಚಿಸಿ. ದೇವರಂತೂ ಖಂಡಿತ ನಿಮ್ಮ ಬದುಕನ್ನು ಹಾಳು ಮಾಡುವುದಿಲ್ಲ. ನೀವೆ, ನೀವೆ ಕೈಯಾರೆ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ.

ಕರಾವಳಿಯಲ್ಲಿ ಮಾದಕದ್ರವ್ಯಗಳ ಮಾಫಿಯಾ ಅಟ್ಟ ಹಾಸ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೋದಿ ಸರ್ಕಾರ ಅದಾನಿಗಳಿಗೆ ಎಲ್ಲ ಬಂದರುಗಳನ್ನು ಬಿಟ್ಟುಕೊಡುತ್ತಿದೆ. ಗುಜರಾತಿನ ಮುಂದ್ರಾ ಬಂದರಿನಲ್ಲಿ ಒಂದೆ ದಿನ 21000 ಕೋಟಿ ಮೌಲ್ಯದ ಡ್ರಗ್ಸ್ ಸೀಝ್ ಆಯಿತು. ಆದರೆ ದೇಶದ ಒಳಗೆ ಲಕ್ಷಾಂತರ ಕೋಟಿ ಮೌಲ್ಯದ ಮಾದಕ ಪದಾರ್ಥಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಈ ಮಾದಕ ಪದಾರ್ಥಗಳು ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿವೆ. ಈ ಕೆಟ್ಟ ಸರ್ಕಾರದಿಂದ ಯವ ನ್ಯಾಯವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸರ್ಕಾರದ ವರ್ತನೆ ಇನ್ನಷ್ಟು ಹಿಂಸೆ ಸೃಷ್ಟಿಸುವಂತೆ ಇದೆಯೆ ಹೊರತು, ಶಾಂತಿ ಸ್ಥಾಪಿಸುವ ಕಡೆಗೆ ಇಲ್ಲ. ಇನ್ನಷ್ಟು ಅಮಾಯಕರ ಹೆಣ ಬಿದ್ದರೆ ಮಾತ್ರ ತಮ್ಮ ರಾಜಕೀಯ ನಡೆಯುತ್ತದೆ ಎಂದು ಈ ದುಷ್ಟರು ಭಾವಿಸಿದ್ದಾರೆ. 2018 ರ ಬಿಜೆಪಿಯ ಪ್ರಣಾಳಿಕೆಯಲ್ಲಿ ಎನ್ ಐ ಎ ಸ್ಥಾಪಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದರು. ಈಗ ಅದನ್ನು ಮರೆತವರಂತೆ ವರ್ತಿಸುತ್ತಿದ್ದಾರೆ. ಇಷ್ಟೊಂದು ದುರ್ಬಲವಾದ ಹಾಗೂ ಕ್ರೂರ ಮನಸ್ಥಿತಿಯ ಮುಖ್ಯಮಂತ್ರಿ, ಬೇಜವಾಬ್ಧಾರಿ ನಡವಳಿಕೆಯ ಗೃಹಮಂತ್ರಿಯನ್ನು ರಾಜ್ಯ ಕಂಡಿರಲಿಲ್ಲ.

ಆದ್ದರಿಂದ ಮತ್ತೊಮ್ಮೆ ತಮ್ಮನ್ನು ವಿನಂತಿಸುತ್ತೇನೆ. ಕೆಟ್ಟ ಕಾರಣಕ್ಕಾಗಿ ಕರಾವಳಿಯು ರಾಜ್ಯಕ್ಕೆ ಮಾದರಿಯಾಗುವುದು ಬೇಡ. 30 ವರ್ಷಗಳ ಹಿಂದೆ ಕರಾವಳಿಯನ್ನು ರಾಜ್ಯ- ದೇಶಗಳ ಜನರು ಪ್ರೀತಿ, ಗೌರವ ಮತ್ತು ಹೆಮ್ಮೆಯ ಭಾವನೆಗಳಿಂದ ನೋಡುತ್ತಿದ್ದರಲ್ಲ, ಅಂಥ ಕರಾವಳಿಯನ್ನು ದಯಮಾಡಿ ನಿರ್ಮಾಣ ಮಾಡಿ. ದ್ವೇಷ ಹುಟ್ಟಿಸುವ, ಕೊಲೆಗೆ, ಹಿಂಸೆಗೆ ಪ್ರೇರೇಪಿಸುವ ಎಲ್ಲ ರಾಕ್ಷಸರನ್ನು ದೂರ ಮಾಡಿ ಇದರ ವಿರುದ್ಧ ಧೈರ್ಯವಾಗಿ ನಿಲ್ಲಿ, ಸೌಹಾರ್ದ ಸಭೆಗಳನ್ನು ಪ್ರಾರಂಭಿಸಿ, ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದ ಸದಸ್ಯರುಗಳೆಲ್ಲರೂ ಧರ್ಮಾತೀತವಾಗಿ ಒಂದಾಗಿ ವೇದಿಕೆ ರಚಿಸಿಕೊಂಡು ಶಾಂತಿ ಸೌಹಾರ್ದದ ಕರಾವಳಿ ನಿರ್ಮಿಸಲು ಮುಂದಾಗಿ, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಮುಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ಸಭೆಗಳನ್ನು ಅಧಿಕೃತಗೊಳಿಸುತ್ತೇವೆ ಎಂದು ತಿಳಿಸಬಯಸುತ್ತೇನೆ. ಈಗ ನಾಡಿನಲ್ಲಿ ಅತ್ಯಂತ ತುರ್ತಾಗಿ  ಶಾಂತಿಯುತವಾದ ವಾತಾವರಣ ನಿರ್ಮಾಣವಾಗಬೇಕಾಗಿದೆ ಅದನ್ನು ಸರ್ವರೂ ಸೇರಿ ಈಡೇರಿಸಬೇಕೆಂದು  ತಮ್ಮನ್ನು ಕೈ ಮುಗಿದು ವಿನಂತಿಸುತ್ತೇನೆ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಜನನ ಮತ್ತು ಮರಣ ಪ್ರಮಾಣಪತ್ರ ತಿದ್ದುಪಡಿ; ವಕೀಲರ ಸಂಘದಿಂದ ತೀವ್ರ ವಿರೋಧ

ತುಮಕೂರು: ಕರ್ನಾಟಕ ಸರ್ಕಾರವು ಜನನ ಮತ್ತು ಮರಣ ಸಮರ್ಥನಾ ಪತ್ರಗಳನ್ನು ಪಡೆಯಲು ಸಿವಿಲ್ ನ್ಯಾಯಾಲಯದ ಕಾರ್ಯವ್ಯಾಪ್ತಿಯಿಂದ ಕಂದಾಯ ಇಲಾಖೆ ಉಪವಿಭಾಗಾಧಿಕಾರಿಗೆ ಅಧಿಕಾರ ವಹಿಸಿರುವುದು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ ಎಂದು ಆರೋಪಿಸಿ ವಕೀಲರ ಸಂಘದಿಂದ ಪ್ರತಿಭಟನಾ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.

ಜತೆಗೆ ಮಧ್ಯವರ್ತಿಗಳ ಹಾವಳಿಗೆ ಸಾರ್ವಜನಿಕರು ತುತ್ತಾಗುವ ಸಾಧ್ಯತೆ ಇದ್ದು, ವಕೀಲರಿಗೂ ಈ ಕಾಯ್ದೆ ಮಾರಕವಾಗಲಿದೆ.  ಕಾಯ್ದೆಯ ತಿದ್ದಪಡಿ ಅಧಿಸೂಚನೆಯನ್ನು ಸರ್ಕಾರ ಹಿಂಪಡೆಯುವಂತೆ ಜಿಲ್ಲಾ ವಕೀಲರ ಸಂಘ ತೀವ್ರವಾಗಿ ಒತ್ತಾಯಿಸಿದೆ.

ಈಗಾಗಲೇ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಕಂದಾಯ ಪ್ರಕರಣಗಳು ಸಾಕಷ್ಟು ಪ್ರಮಾಣದಲ್ಲಿ ಬಾಕಿ ಇದ್ದು, ಅವುಗಳನ್ನು ಇತ್ಯರ್ಥಗೊಳಿಸಲು ವಿಳಂಬವಾಗುತ್ತಿದೆ.  ಆದ್ದರಿಂದ ಸರ್ಕಾರವು ಹಸ್ತಕ್ಷೇಪ ಮಾಡದೆ ಜನನ ಮತ್ತು ಮರಣ ಸಮರ್ಥನಾ ಪತ್ರವನ್ನು ಪಡೆಯಲು ಕಾಯ್ದೆಯ ವ್ಯಾಪ್ತಿಯನ್ನು ಹಿಂದಿನಂತೆಯೇ ಸಿವಿಲ್ ನ್ಯಾಯಾಲಯದ ವ್ಯಾಪ್ತಿಯಲ್ಲಿ ಉಳಿಸಿಕೊಳ್ಳಬೇಕೆಂದು ಜಿಲ್ಲಾ ವಕೀಲರ ಸಘ ಆಗ್ರಹಿಸಿದೆ.

ಪ್ರತಿಭಟನೆ ನೇತೃತ್ವವನ್ನು ಸಂಘದ ಅಧ್ಯಕ್ಷರಾದ ದೊಡ್ಮನೆ ಗೋಪಾಲಗೌಡ, ಪ್ರಧಾನ ಕಾರ್ಯದರ್ಶಿಯಾದ ಡಿ.ಸಿ.ಹಿಮಾನಂದ, ಉಪಾಧ್ಯಕ್ಷರಾದ ವೆಂಕಟೇಶ್, ಜಂಟಿ ಕಾರ್ಯದರ್ಶಿ ಕೆ.ಎಲ್.ಭಾರತಿ, ಖಚಾಂಚಿ ಎಸ್.ಸುರೇಶ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಆರ್.ಮಮತಾ, ಡಿ.ಎಚ್.ಮಾರುತಿ, ರಾಮಕೃಷ್ಣಯ್ಯ, ರಾಮಾಂಜನೇಯ, ಲಕ್ಷ್ಮೀಶ್, ಷಣ್ಮುಖ, ಎಸ್. ಮಂಜುನಾಥ್, ಇತರರು ಇದ್ದರು.

ಭೋರ್ಗರೆದು ಹರಿಯುತ್ತಿರುವ ಮರಳೂರು ಕೆರೆ ; ವೀಕ್ಷಿಸಲು ಬಂದ ಜನ

0

ತುಮಕೂರು: ನಗರದ ವಿವಿಧೆಡೆ  ರಾತ್ರಿ ಸುರಿದ ಮಳೆಯಿಂದಾಗಿ ಮರಳೂರು ಕೆರೆ ತುಂಬಿ ಕೋಡಿ ಹರಿಯುತ್ತಿದೆ.

ದಶಕದ ಹಿಂದೆ ತುಂಬಿದ್ದ ಕೆರೆ ಈ ವರ್ಷ ತುಂಬಿರುವುದು ಸುತ್ತಮುತ್ತಲ ಕೃಷಿಕರಿಗೆ ಸಂತಸ ತಂದಿದ್ದರೆ, ಜಮೀನು ಒತ್ತುವರಿ ಮಾಡಿಕೊಂಡಿರುವ  ರೈತರಿಗೆ ಜಲಾವೃತ್ತಗೊಂಡು ತಲೆ ನೋವಾಗಿ ಪರಿಣಮಿಸಿದೆ.
ಅಕಾಲಿಕ ಮಳೆ, ಕಾಲುವೆಗಳ ಒತ್ತುವರಿ ಯಂತಹ ಕಾರಣಗಳಿಂದ ಮರಳೂರು ಕೆರೆಗೆ ನೀರು ಹರಿದು ಬರುತ್ತಿರಲಿಲ್ಲ. ಆದ್ದರಿಂದ ಇಷ್ಟು ವರ್ಷ ಕೆರೆ ತುಂಬಿರಲಿಲ್ಲ.
ಈಗ ಸುರಿಯುತ್ತಿರುವ ಭಾರೀ ಮಳೆಯಿಂದ ನೀರು ತನ್ನ ವ್ಯಾಪ್ತಿಯನ್ನು ಗುರುತಿಸಿಕೊಂಡಿದೆ.

ಕೋಡಿ ಭೋರ್ಗರೆದು ಹರಿಯುತ್ತಿರುವುದರಿಂದ ಜನರು ಕುತೂಹಲದಿಂದ ಗುಂಪು ಗುಂಪಾಗಿ ಬಂದು ವೀಕ್ಷಿಸುತ್ತಿದ್ದಾರೆ. ಮೀನುಗಾರರು ಏರಿ ದಡದ ಸಮೀಪದಲ್ಲೆಲ್ಲ ಮೀನುಗಾರಿಕೆಗೆ ಅನುಕೂಲವಾಗಲು ಕಳೆ ಗಿಡಗಳನ್ನು ತೆಗೆಯುತ್ತಿರುವ ದೃಶ್ಯ ಕಂಡು ಬಂತು.

ಅಪಘಾತ ; ಹಿಂಬದಿ ಸವಾರ ಸಾವು

0

ತುಮಕೂರು: ನಗರದ ಹನುಮಂತಪುರ ಬ್ರಿಡ್ಜ್ ನ ಸಮೀಪ ದ್ವಿಚಕ್ರ ವಾಹನ  ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಮೃತ ದುರ್ದೈವಿಗಳು ಸಚಿನ್ ಎಂದು ತಿಳಿದು ಬಂದಿದೆ. ಬೈಕ್ ಚಾಲಕ ಮಲ್ಲಿಕಾರ್ಜಯನ್ ಗೆ ಗಂಭಿರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಈ ಇಬ್ಬರು ಯುವಕರು ಕೆಲಸಕ್ಕಾಗಿ ಬೆಂಗಳೂರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕ್ಷಣ ಸಚಿವರ ನಾಡಲ್ಲಿ  ಬಂದ್ ಬಿಸಿ ; ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದೂರದ ಊರುಗಳಿಂದ ಬಂದ ವಿದ್ಯಾರ್ಥಿಗಳು ನಡಿಗೆಯಲ್ಲೇ ವಾಪಾಸ್

ತಿಪಟೂರು: ದಕ್ಷಿಣ ಕನ್ನಡದ ಸುಳ್ಯದಲ್ಲಿ ಮಂಗಳೂರು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಹಾಗೂ ರಾಜ್ಯದಲ್ಲಿ ನಿರಂತರ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಇಂದು ಬಜರಂಗದಳ ಹಾಗೂ ಹಿಂದೂ ಹಿತರಕ್ಷಣಾ ಸಮಿತಿ ಕರೆ ನೀಡಿರುವ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಅಂಗಡಿ ಮುಂಗಟ್ಟುಗಳು ಮುಚ್ಚಿವೆ.

ಆದರೆ ಈ ಬಗ್ಗೆ ಸೂಕ್ತ ಮಾಹಿತಿ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಆಗಮಿಸಿ ಮತ್ತೆ ಹಿಂದಿರುಗುತ್ತಿರುವುದು ಕಂಡುಬರುತ್ತಿದೆ.

ಮಂಗಳೂರಿನಲ್ಲಿ ಮತ್ತೊಂದು ಹತ್ಯೆ; ಸರಣಿ ಕೊಲೆಗಳಿಗೆ ಬೆಚ್ಚಿದ ಕರ್ನಾಟಕ

0

ಮಂಗಳೂರು: ಜಿಲ್ಲೆಯ ಸೂರತ್ಕಲ್ಲಿನಲ್ಲಿ ಮೊಹಮ್ಮದ್ ಫಾಝಿಲ್ (23) ಎಂಬ ಯುವಕನನ್ನು ದುಷ್ಕರ್ಮಿಗಳು ನಿನ್ನೆ ತಡರಾತ್ರಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಈಗ ಮತ್ತೊಂದು ಕೊಲೆಯಾಗಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.

ರಾತ್ರಿ 8ರ ಸುಮಾರಿಗೆ ಸುರತ್ಕಲ್ ಸಮೀಪದ ಮಾರುಕಟ್ಟೆ ಬಳಿ ಫಾಝಿಲ್ ಬಟ್ಟೆ ಅಂಗಡಿಗೆ ಹೋಗುತ್ತಿರುವಾಗ ಕಾರಿನಲ್ಲಿ ಬಂದಿಳಿದ ತಂಡ  ಮಾರಕಾಸ್ತ್ರಗಳಿಂದ   ಕೊಚ್ಚಿ ಪರಾರಿಯಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಮೊಹಮದ್  ಅವರ ಕೊಲೆ ನಡೆದಿರುವುದಾಗಿ ಮಂಗಳೂರಿನ ಮಾಜಿ ಶಾಸಕರೊಬ್ಬರು ಆರೋಪಿಸಿರುವುದು ವರದಿಯಾಗಿದೆ.