ತುಮಕೂರು: ನಗರದ ವಿವಿಧೆಡೆ ರಾತ್ರಿ ಸುರಿದ ಮಳೆಯಿಂದಾಗಿ ಮರಳೂರು ಕೆರೆ ತುಂಬಿ ಕೋಡಿ ಹರಿಯುತ್ತಿದೆ.
ದಶಕದ ಹಿಂದೆ ತುಂಬಿದ್ದ ಕೆರೆ ಈ ವರ್ಷ ತುಂಬಿರುವುದು ಸುತ್ತಮುತ್ತಲ ಕೃಷಿಕರಿಗೆ ಸಂತಸ ತಂದಿದ್ದರೆ, ಜಮೀನು ಒತ್ತುವರಿ ಮಾಡಿಕೊಂಡಿರುವ ರೈತರಿಗೆ ಜಲಾವೃತ್ತಗೊಂಡು ತಲೆ ನೋವಾಗಿ ಪರಿಣಮಿಸಿದೆ.
ಅಕಾಲಿಕ ಮಳೆ, ಕಾಲುವೆಗಳ ಒತ್ತುವರಿ ಯಂತಹ ಕಾರಣಗಳಿಂದ ಮರಳೂರು ಕೆರೆಗೆ ನೀರು ಹರಿದು ಬರುತ್ತಿರಲಿಲ್ಲ. ಆದ್ದರಿಂದ ಇಷ್ಟು ವರ್ಷ ಕೆರೆ ತುಂಬಿರಲಿಲ್ಲ.
ಈಗ ಸುರಿಯುತ್ತಿರುವ ಭಾರೀ ಮಳೆಯಿಂದ ನೀರು ತನ್ನ ವ್ಯಾಪ್ತಿಯನ್ನು ಗುರುತಿಸಿಕೊಂಡಿದೆ.
ಕೋಡಿ ಭೋರ್ಗರೆದು ಹರಿಯುತ್ತಿರುವುದರಿಂದ ಜನರು ಕುತೂಹಲದಿಂದ ಗುಂಪು ಗುಂಪಾಗಿ ಬಂದು ವೀಕ್ಷಿಸುತ್ತಿದ್ದಾರೆ. ಮೀನುಗಾರರು ಏರಿ ದಡದ ಸಮೀಪದಲ್ಲೆಲ್ಲ ಮೀನುಗಾರಿಕೆಗೆ ಅನುಕೂಲವಾಗಲು ಕಳೆ ಗಿಡಗಳನ್ನು ತೆಗೆಯುತ್ತಿರುವ ದೃಶ್ಯ ಕಂಡು ಬಂತು.