ವಿದ್ಯೆಯನ್ನು ಎಟುಕಿಸಿಕೊಳ್ಳಲಾಗದವರಿಗೆ ಶಿಕ್ಷಣದ ಕನಸನ್ನು ವಾಸ್ತವ ಮಾಡಿದ ಹೆಮ್ಮೆ ನನಗಿದೆ ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ ತೇಜಸ್ವಿ ಕಟ್ಟೀಮನಿ ಅವರು ಮನದುಂಬಿ ನುಡಿದರು.
‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಆನ್ಲೈನ್ ಕಾರ್ಯಕ್ರಮದಲ್ಲಿ ಪ್ರೊ ತೇಜಸ್ವಿ ಕಟ್ಟೀಮನಿ ಅವರ ಆತ್ಮಕಥನ ‘ಜಂಗ್ಲೀ ಕುಲಪತಿಯ ಜಂಗೀ ಕಥೆ’ಯನ್ನು ಬಿಡುಗಡೆ ಮಾಡಲಾಯಿತು. ಮಧ್ಯಪ್ರದೇಶದ ಅಮರಕಂಟಕದಲ್ಲಿ ಈ ಮೊದಲು ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಎರಡನೆಯ ಕುಲಪತಿಯಾಗಿ ವಿಶ್ವವಿದ್ಯಾಲಯವನ್ನು ಕಟ್ಟಿದ ಕಥನ ಇದು.
ದೇಶದಲ್ಲಿರುವ ೧೦ ಕೋಟಿ ಆದಿವಾಸಿಗಳಿಗೆ ಈ ವಿಶ್ವವಿದ್ಯಾಲಯ ಬೆಳಕಿನ ಕಿಂಡಿಯಾಗುವಂತೆ ಮಾಡಿದೆ. ಇದಕ್ಕೆ ನಾನು ಬೆಳೆದು ಬಂದಿದ್ದ ದಾರಿಯೇ ಸ್ಫೂರ್ತಿಯಾಗಿತ್ತು. ಈ,ಎಮ್ಮೆ ಕಾಯುತ್ತಿದ್ದ, ಒಂದೇ ಶರ್ಟ್ ನಲ್ಲಿ ಕಾಲೇಜಿನ ವಿದ್ಯಾಭ್ಯಾಸ ಮಾಡಿದ ಈ ಹಳ್ಳಿಯ ಹುಡುಗನ ಮನಸ್ಸಿನ ತಲ್ಲಣವೇ ದೇಶದಲ್ಲಿ ಎಲ್ಲೆಡೆ ಹಂಚಿಹೋಗಿರುವ ಬುಡಕಟ್ಟು ಮಕ್ಕಳಿಗೆ ಈ ವಿಶ್ವವಿದ್ಯಾಲಯ ಆಸರೆಯಾಗುವಂತೆ ಮಾಡಲು ಕುಮ್ಮಕ್ಕು ಕೊಟ್ಟಿತು ಎಂದರು.
ಆದಿವಾಸಿಗಳು ಸಂಗ್ರಹ ಪ್ರವೃತ್ತಿಯನ್ನು ಹೊಂದಿಲ್ಲ. ಅವರು ಪ್ರಕೃತಿಯ ಆರಾಧಕರು ಅಂತಹ ಶುದ್ಧ ಮನಸ್ಸುಳ್ಳವರನ್ನು ಇಂದು ನಗರವಾಸಿಗಳನ್ನಾಗಿ ಮಾಡಿ ಸಮಸ್ಯೆಯ ಸಂಕಟಕ್ಕೆ ದೂಡುತ್ತಿದ್ದೇವೆ. ಇಂತಹ ಸಮಯದಲ್ಲಿ ಅವರ ಕುಶಲತೆಯನ್ನು ದೇಶ ವಿದೇಶಕ್ಕೆ ಪರಿಚಯಿಸುವ ಅವಕಾಶ ನನಗೆ ಒದಗಿತು ಎಂದು ಸಂತಸ ವ್ಯಕ್ತಪಡಿಸಿದರು.
ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜೋಗಿ ಮಾತನಾಡಿ ಒಂದು ವಿಶ್ವವಿದ್ಯಾಲಯಕ್ಕೂ ಆತ್ಮಕತೆ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟವರಿ ತೇಜಸ್ವಿ ಕಟ್ಟೀಮನಿಯವರು. ಇದು ಸ್ಫೂರ್ತಿ ಉಕ್ಕಿಸುವ ಕಥನ. ಇಂದಿನ ಜಗತ್ತಿಗೆ ಗೊತ್ತಿಲ್ಲದ, ಆದರೆ ಗೊತ್ತಿರಲೇಬೇಕಾದ ಅನೇಕ ಸಂಗತಿಗಳನ್ನು ಈ ಕಥನ ಬಿಚ್ಚಿಡುತ್ತದೆ. ಒಬ್ಬ ವ್ಯಕ್ತಿಯ ಬಾಲ್ಯ ಆತನನ್ನು ರೂಪಿಸುತ್ತದೆ. ಅವನು ನಂತರ ಸಮಾಜವನ್ನು ರೂಪಿಸುತ್ತಾನೆ. ತಾನು ಬಾಲ್ಯದಲ್ಲಿ ಅನುಭವಿಸಿದ್ದನ್ನು ಮರೆಯದೆ ನೆನಪಲ್ಲಿಟ್ಟುಕೊಂಡು ತೇಜಸ್ವಿಯವರು ಸಮಾಜಕ್ಕೆ ಒಂದು ಒಳ್ಳೆಯ ಶಿಕ್ಷಣ ಹಾದಿ ರೂಪಿಸಿದ್ದಾರೆ ಎಂದರು.
ಕೃತಿ ಕುರಿತು ಮಾತನಾಡಿದ ಹಿರಿಯ ಕವಯಿತ್ರಿ ಎಚ್ ಎಲ್ ಪುಷ್ಪ ಅವರು ಒಂದು ವಿಶ್ವವಿದ್ಯಾಲಯವನ್ನು ಒಂದು ಹೊಸ ಮನೆ ಕಟ್ಟಿದ ರೀತಿಯಲ್ಲಿಯೇ ಸವಾಲುಗಳನ್ನು ಎದುರಿಸಿ ಕಟ್ಟಿದ್ದಾರೆ. ಬುಡಕಟ್ಟು ಜನಾಂಗದವರನ್ನು ಒಳಗೊಂಡು ಕಟ್ಟಿದ ತೇಜಸ್ವಿ ಕಟ್ಟೀಮನಿ ಅವರಿಗೆ ದೂರದೃಷ್ಟಿ ಇದೆ. ನಾಳಿನ ಜನಾಂಗ ಕಟ್ಟುವ ಕೆಲಸದಲ್ಲಿ ತೊಡಗಿದರೆ ಹೇಗೆ ಉತ್ತಮವಾದುದನ್ನು ರೂಪಿಸಬಹುದು ಎನ್ನುವುದಕ್ಕೆ ಸಾಕ್ಷಿ ಎಂದರು.
‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ಮಾತನಾಡಿ ಇದು ಸಾಮಾಜಿಕ ಸಂಕಥನ ಎಂದು ಬಣ್ಣಿಸಿದರು.