ಮಹೇಂದ್ರಕೃಷ್ಣಮೂರ್ತಿ
ತುಮಕೂರು: ಅಬ್ಬಬ್ಬಾ! ನೋಡೋ, ನೋಡೋ ಅಲ್ನೋಡು ಮನುಷ್ಯ ಕರಡಿ. ಓಡ್ತವೆ, ಓಡ್ತವೆ ನೋಡು ಕೋತಿಗಳು, ಹೆಂಗ್ ಓಡ್ತವೆ ಮನುಷ್ಯ ಕರಡಿ ಕಂಡು.
ಕಾರಿನ ಬಾಗಿಲು ತೆಗೆದು ಇಳಿಯುತ್ತಿದ್ದವನು ಒಮ್ಮೆಗೆ ಹೆದರಿಹೋದೆ. ಇದು ಬೇರೆ ಬೆಟ್ಟ ಸಾಲಿನ ಕೊರಟಗೆರೆ. ಇಲ್ಲಿ ಕರಡಿಗಳೇನು ಬರ ಎಂದಿತು ಮನಸ್ಸು. ಆದರೆ ಇದ್ಯಾವುದು ಮನುಷ್ಯ ಕರಡಿ. ನಾನು ಕೇಳದೇ ಇರುವ ಹೆಸರು. ಇದ್ದರೂ ಇರಬಹುದು ಎಂದು ಅಲ್ಲಿಂದ ಓಡುವ ಮನಸ್ಸಾಯಿತು.
ಅಷ್ಟರಲ್ಲಿ ಜತೆಯಲ್ಲಿದ್ದ ಎಸ್ ಐಟಿ ಕಾಲೇಜಿನ ಪ್ರೊ.ಮೋಹನ್ ಕೈ ಹಿಡಿದು ಜಗ್ಗಿದರು. ಏನಂಥ ಅವರ ಕಡೆ ತಿರುಗಿದರೆ ಎದುರಿಗೇನೆ ಬರುತ್ತಿದೆ ಮನುಷ್ಯ ಕರಡಿ, ಮನುಷ್ಯನಿಗೆ ಇರುವಂತೆ ಥೇಟ್ ಎರಡೇ ಕಾಲು, ಎರಡೇ ಕೈ. ಆದರೆ ತಲೆ ಮಾತ್ರ ಕರಡಿ ಮುಖ. ಇದುವೇ ಮನುಷ್ಯ ಕರಡಿ.
ಹೌದು; ಹಿರಿಯ ಪತ್ರಕರ್ತರೂ ಆಗಿರುವ ಗರುಗದೊಡ್ಡಿ ನಟರಾಜ್ ಅವರು ತಾವು ಹಾಕಿಕೊಂಡಿದ್ದ ಕರಡಿ ಮುಖ ತೆಗೆಯುತ್ತಾ ನಕ್ಕರು. ಅರೇ! ಇವರೇ ಮನುಷ್ಯ ಕರಡಿ ಎಂದು ನಗಾಡುವ ಸರದಿ ನನ್ನದು.
ಏನೆಂದರೆ, ಕೋತಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಕೊರಟಗೆರೆ ತಾಲ್ಲೂಕಿನ ಜನರು ಪ್ರತಿ ಮನೆಗೂ ತಂದಿಟ್ಟುಕೊಂಡಿದ್ದಾರೆ ಮನುಷ್ಯ ಕರಡಿಗಳನ್ನು!
- “ಏನ್ ಮಾಡಿದ್ರು ಕೋತಿಗಳನ್ನು ಓಡಿಸಲು ಸಾಧ್ಯವಾಗುತ್ತಿರಲಿಲ್ಲ. ಹುಣುಸೆ ಮರದಲ್ಲಿ ಒಂದು ಪೀಚನ್ನು ಬಿಡುವುದಿಲ್ಲ. ಕ್ಷಣ ಮಾತ್ರದಲ್ಲಿ ತರಿದು ಬಿಸಾಕುತ್ತವೆ. ತರಕಾರಿ ಬೆಳೆಯನ್ನು ಬಿಡುವುದಿಲ್ಲ. ಇನ್ನೂ, ಮನೆಯೊಳಗೂ ನುಗ್ಗಿ ಕಾಟ ಕೊಡುತ್ತವೆ. ಹೀಗಾಗಿ ಈ ಪ್ರಯೋಗ’ ಎಂದು ಗರುಗದೊಡ್ಡಿ ನಟರಾಜ್ ನಕ್ಕರು.
ಹಳ್ಳಿ ಜನರ ಪ್ರಯೋಗಶೀಲತೆ ಎಷ್ಟು ಚೆನ್ನಾಗಿದೆ ಅಲ್ಲವೇ? ನಾಲ್ಕು ನೂರು ರೂಪಾಯಿಗೆ ಸಂತೆಯಲ್ಲಿ ಈ ಮುಖವಾಡ ಸಿಗುತ್ತದೆ. ಕೋತಿಗಳು ಬಂದಾಗ ಮುಖವಾಡ ಧರಿಸಿ ಮರಗಳ ಎದುರಿಗೆ ನಿಂತರೆ ಕೋತಿಗಳು ದಿಕ್ಕಾಪಾಲಾಗಿ ಓಡುತ್ತವೆ.
“ಒಬ್ಬರಿಂದ ಒಬ್ಬರಿಗೆ ಈ ಪ್ರಯೋಗ ಹೆಚ್ಚುತ್ತಲೇ ಹೋಗುತ್ತಿದೆ. ಆದರೆ, ಮೊದಲಿಗೆ ಈ ಐಡಿಯಾ ಮಾಡಿದವರು ಯಾರೆಂದು ಗೊತ್ತಿಲ್ಲ’ ಎಂದ ನಟರಾಜ್ ಕರಡಿ ಮುಖವನ್ನು ತನ್ನೊಳಗೆ ಸೇರಿಸಿಕೊಂಡು ಕುಣಿಯತೊಡಗಿದರು!