publicstory.in
ತುಮಕೂರು: ಜಿಲ್ಲೆಯಲ್ಲಿ ಮುಂದಿನ ವಾರದಿಂದ ಪ್ರತಿ ದಿನ ಮೂರು ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ತಗುಲಬಹುದು ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಂದಾಜಿಸಿದೆ.ಈಗಾಗಲೇ ಪ್ರತಿದಿನ ಸೋಂಕಿತರ ಸಂಖ್ಯೆ ಸಾವಿರ ಮೀರಿದೆ. ಸಾವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಷ್ಟಾದರೂ ಜಿಲ್ಲೆಯಲ್ಲಿ ಇನ್ನೂ ಏಕೆ ಕೊರೊನಾ ಕೇರ್ ಸೆಂಟರ್ ಗಳನ್ನು ತೆರೆದಿಲ್ಲ ?
ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಜಿಲ್ಲೆಯಲ್ಲಿ ಪ್ರತಿ ಕಡೆ ತೆರೆದಿದ್ದ ಕೊರೊನಾ ಕೇರ್ ಸೆಂಟರ್ ಗಳು ಏನಾದವು ಎಂಬ ಬಗ್ಗೆ ಜಿಲ್ಲಾಡಳಿತ ಬಹಿರಂಗವಾಗಿ ಲೆಕ್ಕ ಒಪ್ಪಿಸಿಲ್ಲ. ಈಗ ಸಾವಿರಾರು ಲೆಕ್ಕದಲ್ಲಿ ಕೊರೊನಾ ರೋಗಿಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇವರ ಆರೈಕೆಗಾಗಿ ಕೊರೊನಾ ಕೇರ್ ಸೆಂಟರ್ ಗಳ ಸ್ಥಾಪನೆಯ ಕಡೆ ಜಿಲ್ಲಾಡಳಿತ ಮೊದಲ ಹೆಜ್ಜೆಯನ್ನು ತುರ್ತಾಗಿ ಇಡಬೇಕಾದ ಅಗತ್ಯತೆ ಎದ್ದು ಕಾಣುತ್ತಿದೆ.
-
2016 ರಲ್ಲಿ ತುಮಕೂರು ಜಿಲ್ಲಾ ಪಂಚಾಯಿತಿ ಸಿದ್ಧಪಡಿಸಿರುವ ಜಿಲ್ಲಾ ಮಾನವ ಅಭಿವೃದ್ಧಿ ಸೂಚಿಯ ಕಡೆ ಗಮನ ಹರಿಸಿದರೆ ಜಿಲ್ಲೆಯ ಜನರ ಆರ್ಥಿಕ ಪರಿಸ್ಥಿತಿ, ಕುಟುಂಬಗಳ ಪರಿಸ್ಥಿತಿ ಕಳಪೆಯಾಗಿರುವುದು ಗೊತ್ತಾಗುತ್ತದೆ. ಸಾವಿರಾರು ಜನರಿಗೆ ಮನೆಗಳಿಲ್ಲ. ಸಾವಿರಾರು ಕುಟುಂಬಗಳು ಕೇವಲ ಒಂದು ಕೋಣೆಯಲ್ಲಿರುವ ಮನೆಗಳಲ್ಲಿ ವಾಸವಿದ್ದಾರೆ. ಇನ್ನೂ ಶೌಚಾಲಯ, ಬಚ್ಚಲು ಮನೆ ಇಲ್ಲದ ಕುಟುಂಬಗಳ ಸಂಖ್ಯೆಯೂ ನಾವು ನಾಚಿಕೆ ಪಡುವಂತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಮನೆ ಆರೈಕೆ ಜಿಲ್ಲೆಯ ಮಟ್ಟಿಗೆ ಉತ್ತಮ ನಿರ್ಧಾರವಲ್ಲ. ಇದರಿಂದ ಸೋಂಕು ಹೆಚ್ಚುವ ಅಪಾಯವೇ ಹೆಚ್ಚಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಜಿಲ್ಲಾ ಮಾನವ ಅಭಿವೃದ್ಧಿ ಸೂಚಿಯಯನ್ನು ತರಿಸಿಕೊಂಡು ಅದರ ವರದಿ ಗಮನಿಸಬೇಕು. ಬೇರೆ ಜಿಲ್ಲೆಗಳಿಗಿಂತಲೂ ತುಮಕೂರು ಜಿಲ್ಲೆಯಲ್ಲಿ ಏಕೆ ಕೊರೊನಾ ಕೇರ್ ಸೆಂಟರ್ ತೆರೆಯುವುದು ಅಗತ್ಯ ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟು ಕೂಡಲೇ ಈ ಕೇರ್ ಸೆಂಟರ್ ಗಳನ್ನು ತೆರೆಯಲು ಮುಂದಾಗಬೇಕು.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಗೂ, ಆಸ್ಪತ್ರೆಗಳ ಸೌಲಭ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದನ್ನು ಗಮನಿಸಿ ಕೂಡಲೇ ತುರ್ತಾಗಿ ಹೆಚ್ಚು ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಬೇಕು, ಆಕ್ಸಿಜನ್, ಐಸಿಯು ಸೆಂಟರ್ ಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸುವತ್ತ ಗಮನ ಹರಿಸುವುದು ಒಳಿತು.
ಜಿಲ್ಲೆಯ ಎಲ್ಲ ಆರೋಗ್ಯ ಕಾರ್ಯಕರ್ತರು, ಖಾಸಗಿ, ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಆಡಳಿತ ಮಂಡಳಿಗಳ ಸಭೆ ಕರೆದು ಜಿಲ್ಲೆಯಲ್ಲಿ ಏನು ಏರುಪೇರಾಗದಂತೆ ನೋಡಿಕೊಳ್ಳುವ ಕುರಿತು, ಅವರಲ್ಲಿನ ಭಯ, ಆತಂಕಗಳನ್ನು ಹೋಗಲಾಡಿಸಿ ಅವರನ್ನು ಹುರಿದುಂಬಿಸಬೇಕಾಗಿದೆ.
ಜಿಲ್ಲೆಯಲ್ಲಿ. ವೈದ್ಯರುಗಳ ಬಗ್ಗೆ ನಂಬಿಕೆ ಹೆಚ್ಚಿದೆ. ಈ ನಂಬಿಕೆ ಕುಸಿಯದಂತೆ ತಡೆಯುವ ಕೆಲಸ ಈಗ ಇನ್ನೂ ಹೆಚ್ಚಾಗಿದೆ.
ಜಿಲ್ಲಾಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ
ತುರ್ತು ಸಂದರ್ಭಗಳಲ್ಲಿ ತಮ್ಮ ಕುಟುಂಬದ ನೋವುಗಳನ್ನು ಲೆಕ್ಕಿಸದೇ ಜನರಿಗಾಗಿ ಮುಂದೆ ನಿಂತು ಕೆಲಸ ಮಾಡುವ ವಿಷಯದಲ್ಲಿ ಇಡೀ ರಾಜ್ಯದಲ್ಲೇ ಗಮನ ಸೆಳೆದಿರುವ ಜಿಲ್ಲಾಧಿಕಾರಿಗಳಾದ ಡಾ.ವೈ.ಎಸ್.ಪಾಟೀಲ ಅವರು ಸೋಂಕಿನ ವಿರುದ್ಧ ಜನ ಜಾಗೃತಿ ಮೂಡಿಸುವ ಕೆಲಸಕ್ಕೆ ಜನರಿಂದ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ.
-
ಜನರು ಸಂಕಷ್ಟಕ್ಕೆ ಮಿಡಿಯುವ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇರುವ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕು ಮಣಿಸುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಇಡೀ ತಂಡವಾಗಿ ಕೆಲಸ ಮಾಡುವುದೇ ಅವರ ಶಕ್ತಿ. ಜಿಲ್ಲೆಯಲ್ಲೂ ಅವರ ‘ವಿಜಯಪುರ ಮಾದರಿ’ ಕೆಲಸ ಮಾಡಲಿದೆ ಎಂಬುದರಲ್ಲಿ ಅನುಮಾನವಿಲ್ಲ.
ಅವರು ಊರೂರು ತಿರುಗುತ್ತಿದ್ದಾರೆ. ಸಭೆಯ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ,. ಮೊದಲಿಗೆ ಹೋಲಿಸಿಕೊಂಡರೆ ಈಗ ಜಿಲ್ಲೆಯಲ್ಲಿ ಮಾಸ್ಕ್ ಧರಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ರಸ್ತೆ ಬದಿಯ ತರಕಾರಿ, ಹಣ್ಣಿನ ಅಂಗಡಿಗಳು, ಸಂತೆಗಳಲ್ಲಿ ಜನಸಂದಣಿ ನಿಯಂತ್ರಿಸುವ ಬಗ್ಗೆ ಹೊಸ ಆಲೋಚನೆಗಳನ್ನು ಜಾರಿಗೆ ತಂದರೆ ಒಳಿತು.
ಹಾಪ್ ಕಾಮ್ಸ್, ರೈತ ಬೆಳೆಗಾರರ ಸಂಘಟನೆಗಳ ಜತೆ ಸಭೆ ನಡೆಸಿ ಇವರುಗಳ ಮೂಲಕ ಬೀದಿ ಬೀದಿಗೆ ತರಕಾರಿ,.ಹಣ್ಣಿನ ವ್ಯವಸ್ಥೆ ಮಾಡಿದರೆ ಈ ದಟ್ಟಣೆ ತಪ್ಪಿಸಬಹುದೇನೋ? ಇದಕ್ಕಾಗಿ ಅವರಿಗೆ ವಿಶೇಷ ಪ್ರೋತ್ಸಾಹ ನೀಡುವ ಅಗತ್ಯ ಹೆಚ್ಚಿದೆ.
ಹೋಟೆಲ್ ಗಳನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಮಾಡಿ ದುಂದು ವೆಚ್ಚ ಮಾಡುವ ಸಲಹೆ ಬಿಟ್ಟು, ಶಾಲೆಗಳು, ಹಾಸ್ಟೆಲ್ ಗಳು, ಸರ್ಕಾರಿ ಕಟ್ಟಡಗಳಲ್ಲಿ ಕೇರ್ ಸೆಂಟರ್ ಗಳನ್ನು ತೆರೆದರೆ ಹಣ ಉಳಿಯಲಿದೆ. ಹೀಗೆ ಉಳಿದ ಹಣವನ್ನು ಆಕ್ಸಿಜನ್, ತಾತ್ಕಾಲಿಕ ವೆಂಟಿಲೇಟರ್ ಕೊಳ್ಳಲು ಬಳಸಿದರೆ ರೋಗಿಗಳಿಗೆ ಹೆಚ್ಚು ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಹೆಸರು ಹೇಳಲಿಚ್ಚಿಸ ವೈದ್ಯ ಅಧಿಕಾರಿಯೊಬ್ಬರು ತಿಳಿಸಿದರು.
ಲಸಿಕೆ ಕೊರತೆ
ಜಿಲ್ಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಲಸಿಕೆ ಕೊರತೆ ಕಾಣಿಸಿಕೊಂಡಿದೆ. ಎರಡನೇ ಡೋಸ್ ಲಸಿಕೆ ನೀಡಲು ವಿಳಂಬ ಮಾಡಲಾಗುತ್ತಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಈ ಕೊರತೆಯನ್ನು ನೀಗಿಸಲು ಜಿಲ್ಲಾಡಳಿತ ಕೂಡಲೇ ಮುಂದಾಗಬೇಕು.
ಸೋಂಕು ತೀವ್ರಗತಿಯಲ್ಲಿ ಹೆಚ್ಚಿದ ಕಾರಣ ಲಸಿಕೆ ಪಡೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಎಲ್ಲಾ ಕಡೆ ಲಸಿಕೆ ದೊರೆಯುವಂತೆ ಮಾಡಬೇಕಾಗಿದೆ. ಈ ಬಗ್ಗೆಯೂ ಹೆಚ್ಚು ಗಮನ ಹರಿಸಿದರೆ ಒಳಿತು.
ಜನರು ಸಹ ಜಿಲ್ಲಾಡಳಿತದ ಮಾತುಗಳನ್ನು ಕೇಳಬೇಕು. ಹಿರೋಹಿಯಿಸಂ ತೋರಿಸಬಾರದು. ಮಾಸ್ಕ್ ಧರಿಸಿದರೆ ಉಸಿರಾಡಲು ಕಷ್ಟವಾಗುತ್ತದೆ ಎಂಬ ತಪ್ಪು ನೆಪ ಹೇಳಿ ಸೋಂಕಿಗೆ ಗುರಿಯಾಗಬಾರದು.
- ಇನ್ನೂ. ಜ್ವರ, ಕೆಮ್ಮು, ನೆಗಡಿ ಇರುವವರು ಸಹ ಸುಖಾಸುಮ್ಮನೇ ಜನರೊಂದಿಗೆ ಸಂಪರ್ಕ ಬೆಳೆಸುತ್ತಿದ್ದಾರೆ. ನಿನ್ನೆ ಮಳೆಯಲ್ಲಿ ನೆನೆದಿದೆ ಅದಕ್ಕಾಗಿ ನೆಗಡಿಯಾಗಿದೆ. ಬೇರೆ ಊರಿಗೆ ಹೋಗಿ ಬಂದೆ, ಬಿಸಿಲಿಗೆ ಜ್ವರ ಬಂದಿದೆ, ಏನು ಹೆದರಬೇಡಿ ಎಂದು ಹೇಳುತ್ತಾ ಸ್ನೇಹಿತರನ್ನು, ನೆಂಟರನ್ನು ಭೇಟಯಾಗುವವರೇ ಹೆಚ್ಚಿದ್ದಾರೆ. ಇದಾಗಬಾರದು.
ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದೇ ಹೋದರೂ ಸಹ ಇಂಥವರು ಮನೆಯಲ್ಲೇ ಇರಬೇಕು. ಯಾರಾದರೂ ಭೇಟಿಯಾಗಲು ಬಂದರೆ ಜ್ವರ, ನೆಗಡಿ ಇರುವ ವಿಷಯ ತಿಳಿಸಬೇಕು. ಅನಿವಾರ್ಯವಾದಲ್ಲಿ, ಫೋನ್ ಮೂಲಕವೇ ವಿಷಯ ತಿಳಿದುಕೊಳ್ಳಬೇಕು. ಇದನ್ನು ಸರ್ಕಾರ ಮುಂದೆ ನಿಂತು ಮಾಡಿಸಲು ಸಾಧ್ಯವೇ ಎಂಬುದನ್ನು ಪ್ರಜ್ಞಾವಂತರೇ ಅರಿಯಬೇಕು.