ಉಜ್ಜಜ್ಜಿ ರಾಜಣ್ಣ
ಒಮ್ಮೊಮ್ಮೆ ಕಾಲಸ್ಥತಿ ಒಂದೇ ಸಮನಿರಲ್ಲ ಹೊಂದಿಕೊಂಡೋಗುತ್ತರಬೇಕು. ಉದ್ದಾಕುದ್ದ ಮೊಣಕಾಲುದ್ದ ಎಂದುಕೊಂಡು ಹೋಗೋದು. ಎಲ್ಲಾ ಕಾಲೂ ಇಂಗೆ ಇರಲ್ಲ ಒಳ್ಳೆ ಕಾಲ ಬಂದೇ ಬರುತ್ತವೆ. ಇದ್ದುದ್ದು ಇದ್ದಂಗೇ ಇರಲ್ಲ. ನಡೆಯೇದೆ ಎಡವೋದು.
ಅರಿಗಡುಕ ಮತ್ತು ಮೆದೆಕಡುಕ ಹಾಗು ಅದಿಗಡುಕ ಮೂಲದ ಮಳೆಗಳಿದ್ದಾವಲ್ಲ… ಅವು ಹೀಗೆ. ದಶಕದಲ್ಲಿ ಒಂದೆರಡು ಬಾರಿ ಮಾತ್ರ ಸುರಿಯುತ್ತವೆ. ಜನವರಿಯಲ್ಲೂ ಈ ವರ್ಷ ಮಳೆಗಾಲ ಮಾಡುತ್ತಿರುವ ಮಳೆಗಳಿವು.
ಇವು ಸುರಿಯದೆ ಹೋದರೆ ಹೋಗೇ ಬಿಡುತ್ತವೆ ಕಾಲದೊಳಗೇ ಅವಿತು ಬಿಡುತ್ತವೆ.
ಕಾಲಮಾನವನ್ನೇ ಮರೆತು ಅನೇಕ ವರ್ಷ ಮಲಗಿದಂತಿರುವ ಇವು ಒಮ್ಮೊಮ್ಮೆ ರಪಡಿಸಿ ಸುರಿದು ಕಣಗಾಲ ಮತ್ತು ಕೊಯ್ಲೋತ್ತರ ಕಾಲವನ್ನು ನೀರುಪಾಲು ಮಾಡುತ್ತವೆ. ಫಸಲು ಅದ್ವಾನ ಅಡವಿಪಾಲಾಗುತ್ತದೆ.
ಇರುವೆ ಗೂಡು ಸೇರುಬೇಕಾದುದೂ ಹಾಳಾಗಿ ಅವೂ ಉಪವಾಸ ಬೀಳುವಂತಾಗುವುದು. ವಾಡೆ ಮೂಡೆ ಸೇರಬೇಕಾದ ದಿನಸಿ ಅರಿ ಒಳಗೆ, ಮೆದೆಯೊಳಗೆ, ಕಣದೊಳಗೆ, ಹೊಲದೊಳಗೆ ಮೊಳಕೆ ಹೊಡೆಯತೊಡಗುವುದು.
ಕೊಯ್ಲೋತ್ತರ ಕೆಲಸಗಳು ಮುಗಿದಾಗ ಅಥವಾ ಕೊಯ್ಲು ನಡೆಯುತ್ತಿರುವಾಗ ಅಥವಾ ಇನ್ನೇನು ಕೊಯ್ಲು ಕೈಗೊಳ್ಳಬೇಕೆನ್ನುವಾಗ ಅಂಡುಮರ ಸವರಿ ಕಣ ಮಾಡುವಾಗ ಅರಿಗಡುಕ ಮತ್ತು ಮೆದೆಗಡುಕ ಹಾಗು ಅದಿಗಡುಕ ಮಳೆಗಳು ಕಣ್ಣು ಮುಚ್ಚಿಕೊಂಡು ಸುರಿದುಬಿಡುತ್ತವೆ. ಸಾಮಾನ್ಯವಾಗಿ ಫಸಲು ಜಾಸ್ತಿಯಾದ ವರ್ಷವೇ ಹೆಚ್ಚಾಗಿ ಈ ಮಳೆಗಳು ಸುರಿಯುವುದು ಕಂಡುಬರುತ್ತದೆ.
ಅಕಾಲಿಕವಾಗಿ ಪ್ರಾರಂಭವಾಗಿ ಅಕಾಲಿಕವಾಗಿ ಅಂತ್ಯಗೊಂಡು ಕೊಯ್ಲು ಅಖೈರು ಕೊನೆಯ ಭಾಗದಲ್ಲಿ ರೈತರಿಗೆ ಇನ್ನಿಲ್ಲದ ತೊಂದರೆ ತಂದೊಡ್ಡುವ ಮಳೆಗಳಿವು.
ಇವೇನು ಹವಾಮಾನ ಬದಲಾವಣೆಯ ವೈಪರೀತ್ಯಗಳಿಂದ ಉಂಟಾಗುವ ಸಾಧ್ಯತೆಗಳೇನಲ್ಲ. ಪುತ್ರಪೂವತ್ತುಅಜ್ಜಮುತ್ರ ಕಾಲದಿಂದಲೂವೆ ಸುರಿಯುವ ಮೂಲದ ಮಳೆಗಳು ತಾತ ಮುತ್ತಾತರ ಕಾಲದಿಂದಲೂವೆ ಪೂವ್ರುದಿಂದಲೂ ಬರುತ್ತಿವೆ. ಸಿಕ್ಕುಮುತ್ತಿ, ದೊಡ್ಡಮುತ್ತಿ, ಚಿತ್ತಯ್ಯ, ಕಾಟಯ್ಯ ಸಣ್ಣಸಿತ್ತೇಗೌಡ, ದೊಡ್ಡ ಸಿತ್ತೇಗೌಡ ದ್ಯಾವ್ರುದೈಮಾರ, ಮಗ ಮಲಿಗೊಂಡ ಅವುನ ಮಗ ಜುಂಜಪ್ಪುನು ಕಾಲುದಿಂದುಲೂ ಸಿರೇವುದು ದೊರೆ ರಂಗಪ್ಪ, ಚೇಳೂರುದೊರಿಗಳು, ಅಳುನೋರು ದೊಡ್ಡಕ್ಕ ವಿಶೇಷವಾಗಿ ಕಾಯವುರೆ ಬಳಿಯೋ ಕಾಲುಕ್ಕೂವೆ ಆಗಾಗ ಬಂದು ಕೆಡಸಣ್ಣನು ಕತೆ ಮಾಡುತ್ತಲೇ ಇವೆ.
ಇವು ಅದಿಗಡುಕ ಮೆದೆಗಡುಕ ಅರಿಗಡುಕ. ಅದಕಿಂತಲೂ ಮುಂಚೆ ಅಬೆರಾಯ, ತುಂಬೆರಾಯ ಕಂಚಿರಾಯ ಕಾಳೆರಾಯ ಒನಿಕೆರಾಯ ಒಡೆರಾಯ ಕಾಲದಿಂದಲೂ ಅರಿ ಮೇಲೆ ಮೆದೆ ಮೇಲೆ ಅದಿ ಹುಲ್ಲಿನು ಮೇಲೆ ಹುಲ್ಲೀಡಿನು ಮೇಲೆ, ಅರೆಬಣವೆ ಮೇಲೆ, ತೆನೆ ಹುಲ್ಲು ನೆನಿಯಂಗೆ, ಜೀವಹುಲ್ಲು ಮಳಿಕೊಡಿಯಂಗೆ ಅರಿಗಡುಕ ಮೆದೆಗಡುಕ ಅದಿಗಡುಕ ಮಳೆ ಬಂದಿವೆ. ಜೀವ್ದುಲ್ಲು ನಿಲುವಿನು ಮೇಲಿದ್ದಾಗ ಇವು ಸುರುದುರೆ ತೆನೆ ನೆನೆದು ಕುಬುಸ ಬಿಟ್ಟು ರಾಗಿ ಬಳಬಳನೆ ಸುರಿಯುವುದು.
ಹೊಸದಾಗಿ ವಟ್ಲು ಬಿತ್ತಿದಂತಾಗುವುದು. ಸ್ವಾಭಾವಿಕವಾಗಿ ವಾಡಿಕೆಯಂತೆ ಬರುವಂತಹ ಮೂಲದ ಮಳೆಗಳಾಗಿರುತ್ತವೆ. ಬಂದರೆ ಬಂದೇ ಬಿಡುತ್ತವೆ ಹೋದರೆ ಹೋಗೇ ಬಿಡುತ್ತವೆ.
ಹೋದರೇನೋ ಯಾಸಟ್ಟಿಗೆ ಅದ್ಕಂದು ಬಿಡಬಹುದು ನಿಧಾನವಾಗಿ ಕಣ ಬದುಕು ನಡೆಯುತ್ತದೆ. ಇವು ಸುರುದರಂತೂ ಹೊಲಕೋಟು ಮನಿಗೋಟು ಎಲ್ಲಾ ನೀರುಪಾಲು ಅಲಾಕು ಮೂರು ಪಾಲು. ತೀರಾ ಹಿಂಗಾಡಿ ಮಳೆಗಳಿವು. ತೀರಾ ಹಿಂಗಾಡಿ ಮಳೆಗಳಾದರೂವೆಯೂ ಕೈ ಬಾಯಿಗೆ ತೊಂದರೆ ನೀಡಿಯೂ ಕೆರೆಕಟ್ಟೆಗೆ ನೀರು ಮಡುತ್ತವೆ. ಕೃಷಿಯ ಕೈಸಲುಗಳಿರುವಂತಹ ಕೆರೆ ಕಟ್ಟೆಗಳಿಗೆ ನೀರಾದರೆ ಮೂಗುಜನುಮುಕ್ಕೆ ವರ್ಷಾರುತಿಗಳಿಗೆ ನೀರಿನ ಆಸರೆ ಆಗುತ್ತದೆ. ಕಣ್ಣಮುಂದುಲು ಬದುಕು ಮೂರಾಬಟ್ಟೆಯಾಗಿ ಕೊಚ್ಚಿ ಹೋಗುತ್ತಿರುತ್ತದೆ.
ಮಾವು ಮರುಗಿ ಬೇವು ಫಲವಾದರೆ ದೇವು ಲೋಕದ ಫಲ ಎಂಬುದು ಜನರ ನಂಬಿಕೆ. ಮಾವು ಮರುಗಿ ಬೇವು ಫಲವಾದ ವರ್ಷ ಸಾಮಾನ್ಯವಾಗಿ ಮಾವು ಬಹುಬೇಗ ಚಿಗುರಿ ಮೈಯ್ಯೆಲ್ಲಾ ಹೂವಾಡಿದರೂ ಫಸಲು ಕಟ್ಟುವುದು ಕಡಿಮೆ.
ಸಾಮಾನ್ಯವಾಗಿ ಮಾವಿಗೆ ಜೇಡ ನೂಲಾಡಿ ಸೀಡೆ ಹತ್ತಿ ಫಲ ಕಮ್ಮಿಯಾಗುವುದು. ನಿಧಾನವಾಗಿ ಹೂವು ಮರುಗಿದಂತೆ ಬೇವು ಹೂವಾಡಲು ಶುರುವಿಡುತ್ತದೆ. ಕಣದೊಳಗೆ ಶಂಖ ಭವುನಾಸಿ ಬಂದು ದಾಸಯ್ಯನ ಇಕ್ಕೋ ಹಿತ್ತಿಗೆ ಮಾವು ಹೂವಾಗಿ ಬಂದು ಬಿಡುತ್ತದೆ. ಆದರೆ ಈ ವರ್ಷ ಮಾವು ಕಾಲಕ್ಕೆ ಮುಂದಾಗಿ ಹೂವಾಡಿದೆ.
ಕೊಯ್ಲು ಮುಗಿದು ಸಂಕ್ರಾಂತಿ ಬಂದು ಬಣವೆಗೆ ಮುಳ್ಳಾಕಿ ಸಂಕ್ರಾಂತಿ ಹಬ್ಬವಾದ ನಂತುರುಕೇ ಕಣಬದುಕು. ಸಿವುರಾತ್ರಿಗೆಲ್ಲಾ ಕಣಗಾಲ ಮುಗಿಯೋದು.
ಸಂಕ್ರಾಂತಿ ಹೊತ್ತಿಗೆ ಸೊಗುಡವರೆ ಕಾಲ ಇನ್ನೂ ಮುಗಿದಿರುವುದಿಲ್ಲ. ಸೊಗಡವುರೆ ಬಾರೆಗಳು ಬೆಚ್ಚಬೆಚ್ಚಿ ಕಾಯುವ ಬಿಸಿಲಿಗೆ ಅವರೆ ಸೊಗಡಿನ ವಾಸನೆ ಬಾರೆಬಂಕದೊಳಗೆಲ್ಲಾ ಹಾಗೆಯೇ ಇಡ್ರಿಸುತ್ತಿರುತ್ತದೆ.
ರಾಶಿ ಪೂಜೆಗೆ ಒದಗಲು ಮಾವು ಹೂವಾಗುತ್ತಿರುತ್ತದೆ. ಬ್ರಹ್ಮದಂಡೆ ಹೂವೂ ಮೊಗ್ಗಾಗುವ ಕಾಲಮಾನ. ತುಂಬೆ ಪೊಪ್ಪಾಗಲು ಗಿಡ ಬನಿಯಾಗುತ್ತಿರುತ್ತದೆ. ಕಣಗಲು ಗಿಡಕ್ಕೆ ಸಂಕ್ರಾಂತಿಯು ಹೊಸ ಮೊಗ್ಗಿನ ಕಾಲ.
ರಾಶಿ ಪೂಜೆ ಎಡೆಗೆ ಆಗಲೇ ದೊಡ್ಡಿ ಬತ್ತ ಕೊಯ್ಲಲಾಗಿ ಸರುಗಂತೆ ಹೊಡೆಯುವುದು ಮುಗಿದು ಭತ್ತ ಮನೆ ಸೇರುವ ಹೊಸ ಫಲವಾಗಿ ಒಣಗಲೊಳಗೇ ಮಾಗುತ್ತಿರುತ್ತದೆ. ಹೊಲ್ದಬಾರೆಯ ದೇಶವಾಳದ ಒಳಗೆ ಧೂಪಕಣಗಲ ಹೂವು ಹೊಸ ಬಾನಕ್ಕೆ ಮೊರದೊಳಗೇ ಮೊಗ್ಗಾಡಿ ಎಸಳು ಬಿಚ್ಚಿ ಅರಳುವ ಕಣಕಾಲಕ್ಕೆ ಸರಿಯಾಗಿ ಸುತ್ತಿಕ್ಕಿ ಎಸಳರಳುವ ಸುತ್ತಕಣಗಲು ಹೂವಿಗೂ ಕೊಯ್ಲೋತ್ತರ ಸಮಯದಲ್ಲಿ ಹೊಸಕಾಲ. ಅರಿಗಡುಕ ಮರೆಗಡುಕ ಅದಿಗಡುಕ ತಡದು ಮಳೆ ಬಿಡುವಿಲ್ಲದ ಹಾಗೆ ಬಂದರೆ ಇವೆಲ್ಲವೂ ಹಾನಿಗೊಳಗಾಗುವವು. ಒಂದು ಸಿಕ್ಕರೆ ಇನ್ನೊಂದಕ್ಕೆ ಭಂಗಪಡುವಂತಾಗುವುದು. ಕೃಷಿ ಕೆಲಸಗಳು ಹಿಂದುಮುಂದಾಗುವವು. ಕಣಗಾಲ ತಡವಾಗುತ್ತದೆ.
ಅರಿಗಡುಕ ಮತ್ತು ಮೆದಿಗಡುಕ ಮಳೆಯನ್ನು ಅದಿಗಡುಕ ಎಂತಲೂ ಕರೆಯಲಾಗುತ್ತದೆ. ಆಗತಾನೆ ಕೊಯ್ಲು ಮಾಡುವ ಸಮಯ ಮುಗಿದು ಜೀವದ ಹುಲ್ಲು ಬಣವೆ ಮಾಡಲು ರೈತರು ಅದಿ ಮಾಡುವ ಕಾರ್ಯದಲ್ಲಿ ತೊಡಗುತ್ತಿರುವಾಗ ಅರಿಕಡುಕ ಮೆದೆ ಕಡುಕ ಶುರುವಾಗಿ ಬಣವೆಯ ಅದಿ ಮಾಡಿದ ಜೀವದ ಹುಲ್ಲು ಮೇಲೂ ಸುರಿದು ತೊಂದರೆ ಕೊಡುವ ಮೂಲಕ ತನ್ನ ಅಟ್ಟಹಾಸ ಮೆರೆಯುವವು.
ಕಣದ ಮೇಲೆ ಬರುವ ಮಳೆಗಳೂ ಆಗಿರುತ್ತವೆ ಇವು. ಅಡ್ಡೆ ಮೇಲೆ ನೀರಿತ್ತು ಒಯ್ದು ರೈತರು ಕಣಮಾಡಿರುತ್ತಾರೆ. ಆಗಿನ್ನೂ ಕಣಗಾಲ ಪ್ರಾರಂಭವಾಗಿರುತ್ತದೆ. ಹುಳ್ಳಿಕಂಕಿ, ಹುಚ್ಚೆಳ್ಳು ಗಡ್ಡಿ, ತೊಗರಿ ಸೇರಿದಂತೆ ಅಕ್ಕಡಿ ಸಾಲುಗಳ ಕೃಷಿಯ ಉಪ ಉತ್ಪಾದನ್ನಗಳು ಅವುರೆ ಕಡ್ಡಿಯಾದಿಯಾಗಿ ಕಣಕ್ಕೆ ಬರುತ್ತಿರುವಾಗ ಮಳೆ ಸುರಿಯುತ್ತದೆ.
ರೈತರಿಗೆ ಬೇಜಾರು ಇದೇನು ಮಳೆ ಕಣ್ಣುಮುಚ್ಚಿಕೊಂಡು ಸುರಿಯುತ್ತಲ್ಲ ಕಣ್ಣಿಗೆ ಕಾಣದಂಗೆ ಹೋಗುಬಾರದೆ. ಕಾಲಕ್ಕೆ ಸರಿಯಾಗಿ ಬರದೆ ಕಾಲವಿಲ್ದ ಕಾಲದಲ್ಲಿ ಮಳೆ ಸುರಿಯುತ್ತದೆ ಎಂದು ಜನ ಮನಿಗೂ, ಕಣಕೂ, ಹೊಲಕೂ ಇನ್ನಿಲ್ಲದ ಸಿಟ್ಟಿನಿಂದ ರಾಪಾಡುವರು.
ಅರಿಕಡುಕ ಮತ್ತು ಮೆದೆಕಡುಕ ಮಳೆ ಈ ವರ್ಷ ಬಹಳ ಯೋಗವಾಗಿರುವಂತಿವೆ. ಬಿದ್ದ ಮಳೆಗೆ ಅರಿ ನೆನೆದು ತೊಪ್ಪೆಯಾಗಿದೆ. ಮೆದೆ ಮಾಡಿದ ಜೀವದ ಹುಲ್ಲು ಮಳೆಗೆ ಸಿಕ್ಕಿತು. ರಾಗಿ ಮೆದೆಯೊಳಗೇ ಮೊಳಕೆಯಾಗತೊಡಗಿರುವುದು. ರೈತಾಪಿಯನ್ನು ಬಹುಭಾದೆಗೆ ಒಳಪಡಿಸಿರುವ ಮಳೆ ಕೈಯ್ಯಿಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿರುವುದು.
ಖೂಳೆ ಹುಲ್ಲಿನ ಮೇಲೆ ಮಣ್ಣು ಸಿಡಿದು ತ್ಯಾವಿಸ್ಕಂದು ಕಮ್ಮನೆಯ ಕಡ್ಡಿ ಹಸಿಯಿಂದ ಒದ್ದೆ ಮುದ್ದೆಯಾಗಿ ಬಿಸಿಲತ್ತಿ ಬಿಸಿಲತ್ತಿ ಮೆಳೆ ಸುರಿದು ಗೆದ್ದಲು ಹಿಡಿದು ಒಂತರಾ ವಾಸನೆ ಬಂದು ಖೂಳೆ ಹುಲ್ಲು ಮೇಯಲು ದನಕುರಿ ಆಡುಗಳು ಬಾಯಾಡಲು ಮೆಲುಕಾಡಿ ಮೇಯಲು ನೆಲಕೆ ಮುಸುಡಿ ಹಿಡದಂತಾಗಿರುವುದು. ಹುಲ್ಲು ಗೆಂಟೆ ಮೂಸುನೋಡಿಕೊಂಡು ತಟ್ಬಡಿಯುತ್ತವೆ. ಆಡು ಕುರಿಗಳ ಪಾಡೂ ಹೀಗೇ ಆಗಿದೆ.